ಕಂ || ಶ್ರೀಗಂ ಸಮಗ್ರವಿಜಯ
ಶ್ರೀಗಮಿಳಾಸ್ತುತ್ಯಸರಸಸಾಹಿತ್ಯವಚಃ
ಶ್ರೀಗಂ ವಿಧುವಿಶದಯಶಃ
ಶ್ರೀಗಂ ನೆಲೆಯೆನಿಸಿ ನೆಗೞ್ದ ಕವಿಕುಳತಿಳಕಂ ೧

ಗುರುರಾಜ್ಯಭರಕೆ ನೆಱೆದಿರೆ
ವರಾಹಕಂಧರನೆನಿಪ್ಪ ತನಯಂ ಪಿತೃವಾ
ದರದಿಂ ಪಟುಪಟಹರವಂ
ಪರೆಯುತ್ತಿರೆ ಕೂರ್ತು ರಾಜ್ಯಭಾರಮನಿತ್ತಂ ೨

ವಿತತಕಳಾವಿಳಸಿತನ
ಪ್ರತಿಮ ಮಹಾಮಂಡಳೇಶ್ವರತ್ವಮನಾಂತು
ನ್ನತಿಗೆಡೆಯಾದಂ ಕುವಳಯ
ಹಿತಕರನಾನಂದರಾಜನೂರ್ಜಿತತೇಜಂ ೩

ವ || ಅಂತು ನಿಜಗುರುವಿನಿರೂಪಿತಮಹಾಮಂಡಳಾಧಿಪತ್ಯಮನೇಕಾಯತ್ತಂ ಮಾಡಿ

ಕಂ || ಸಂತಂ ವಸಂತಮೆನಿಸಿ ನಿ
ತಾಂತಂ ತನ್ನಾಳ್ವ ಧರಣಿ ಸೊಗಯಿಸಿ ವಸುಧಾ
ಕಾಂತಂ ಪಾಳಿಸೆ ಮಿಸುಪ ವ
ಸಂತಂ ಬಂದಿತ್ತುದವನಿಗತ್ಯುತ್ಸವಮಂ ೪

ವ || ಅಂತುಮಲ್ಲದೆ

ಮ || ಪರಿಪಕ್ವಂ ಫಳರಾಜಿ ಸೌರಭನಿದಾನೋಜ್ಜೃಂಭಿತಂ ಪುಷ್ಪಮಂ
ಜರಿ ನಾನಾಲತಿಕಾವಳೀವಿಪುಳಶಾಖಾಹಸ್ತದೊಳ್‌ಶೋಭಿಸು
ತ್ತಿರೆ ನಂದೀಶ್ವರಪೂಜೆಯಂ ಪಡೆದು ಮಾೞ್ಕುಂ ರಾಜನಾನುಂ ಮನೋ
ಹರಮಂ ಮಾಡುವೆನೆಂದು ಬಂದ ತೆಱದಿಂ ಚೆಲ್ವಾಯ್ತು ಚೈತ್ರಾಗಮಂ ೫

ವ || ಅಂತು ಜಗದಾಶ್ಚರ್ಯಮೆನಿಸಿ ತನ್ನೆಸಗುವ ನಂದೀಶ್ವರಸಪರ್ಯೆಗೆ ಸಹಾಯಮಾಗಿ ಬಂದ ಮಧುಮಾಸದೊಳ್‌

ಕಂ || ನಿರುಪಮಪುಣ್ಯಪಯೋಧಿಯ
ತೆರೆಯೆನೆ ಚಮರರುಹಮಿಂದುವೆನೆ ಬೆಳ್ಗೊಡೆಯೊ
ಪ್ಪಿರೆ ಕಳ್ಪಭೊಜಮೆನೆ ಸುರು
ಚಿರಮಣಿಮಯಪಾಳಿಕೇತನಂ ಕರಿಶಿರದೊಳ್‌೬

ಚಂದಂಬಿಡಿದಿರೆ ದೇವ
ಚ್ಛಂದಂ ಮಣಿತೋರಣಂಗಳೆಡೆಯೆಡೆಯೊಳ್‌ಪೂ
ರ್ಣೇಂದುನಿಭಚಂದ್ರಮಣಿಮುಕು
ರುಂದ ಕಳಶಧಾರಿ ವಾರನಾರೀನಿಕರಂ ೭

ನಡೆವ ಮುಗಿಲೆನಿಸೆ ಕರಿ ಚೆ
ಲ್ವಡರ್ದ ವಿಮಾನಮನೆ ಪೋಲೆ ಮಂಡವಿಗೆ ಬೆಡಂ
ಗಿಡಿದಿರೆ ಖೇಚಾರಿಯನಂ
ದೊಡರಿಪ ನರ್ತಕಿಯೆ ಖಚರಿಯೆನೆ ಕರಮೆಸೆದಳ್‌೮

ಘಂಟಾರವಮುಂ ಘನಜಯ
ಘಂಟಾರವಮುಂ ದಿಶಾಗಜಂಗಳ ವಿಳಸ
ದ್ಘಂಟಾರವಮಂ ಕೊರ್ವಿಸು
ತೆಂಟುಂ ದೆಸೆಗಳುಮನೆಯ್ದೆ ತೀವಿದುವಾಗಳ್‌೯

ವ || ಅಂತು ಯಾನನಾಗಶಿರೋಭಾಗದೊಳ್‌ಪರಭಾಗಂಬಡೆದ ಚಮರೀಜಸಮಾಜಮುಂ ಪಲ್ಲವೋಲ್ಲಸಿತಸಿತಾತಪತ್ರವ್ರಾತಮುಂ ಪಾೞಿಕೇತನ ಪಾೞಿಯುಂ ವಿತಾನ ವಿನಾನಮುಂ ಮಂಡವಿಗೆಯ ಮಂಡಲಿಯುಂ ವಾರನಾರೀವಾರಮುಂ ಬಿತ್ತರಂಬೆತ್ತಿರೆ ಭುವನೇಶ್ವರ ವಂದಿತನಂದೀಶ್ವರ ಮಹಾಮಹಿಮೆಯ ನಮೇಯಹೃದಯಾನಂದದಿ ನಿಂದ್ರಂ ಮುಂದೆ ತನಗೆ ಮಾೞ್ಪ ಶ್ರೀವಿಹಾರವಿಸ್ತಾರಮೀ ತೆಱನಾದಪುದೆಂದಭಿನಯಿಸುವಂದದಿನಾನಂದ ನರೇಂದ್ರಂ ವಿಶಿಷ್ಟಾಷ್ಟಶೋಭೆಯಿಂ ಶೋಭಿಸುವ ನಿಜರಾಜಧಾನಿಯ ರಾಜವೀಥಿಯೊಳಗನೇಕ ರಾಜಚಿಹ್ನೆಂ ಮೆಱೆಯೆ ಮೆಱೆಯಿಸುತ್ತುಂ ವಿನೇಯನಿಕಾಯಂಬೆರಸು ಬರುತ್ತುಮಿರ್ಪುದುಮಾ ಪ್ರಸ್ತಾವದೊಳ್‌

ಕಂ || ವಿಪುಳಮತಿಗಳ್‌ವಿವೇಕಾ
ಧಿಪಮತಿಗಳ್‌ಪುಣ್ಯಸಿದ್ಧಿ ನೋೞ್ಪವರ್ಗಂ ಸಿ
ದ್ಧಿಪ ಜೈನಪೂಜೆಯಂ ನೋ
ೞ್ಪ ಪರಿಮಿತಾತ್ಮೀಯಭಕ್ತಿಭಾವಾಯತ್ತರ್‌೧೦

ಬರೆ ಪುಣ್ಯಸಮುದಯಮನಾ
ದರದರೆಱಗುವರ್ಗೀವ ಸಮುದಯಂಬೆರಸು ನರೇ
ಶ್ವರನವರನಧಿಕಭಕ್ತಿಯ
ಭರದಿಂ ಗುರುಭಕ್ತಿಪೂರ್ವಕಂ ಬಂದಿಸಿದಂ ೧೧

ವ || ಅಂತಾ ಮುನೀಂದ್ರರಂ ಬಂದಿಸಿ ನರೇಂದ್ರನಿಂತೆಂದಂ

ಕಂ || ಜಿನಬಿಂಬಮಚೇತನಮೆ
ತು ನಿಗ್ರಹಾನುಗ್ರಹಕ್ಕೆ ನಾಯಕಮಕ್ಕುಂ
ಮುನಿವಾರಾಧಿಸುವ ಜನ
ಕ್ಕೆನಗಿದು ವಿಸ್ಮಯಮದಂ ತಿಳಿಪು ಮುನಿತಿಳಕಾ ೧೨

ವ || ಎಂದು ವಿನಯವಿನಮಿತೋತ್ತಮಾಂಗನಾಗಿ ಬಿನ್ನವಿಸಿ ನರಪತಿಗಪ್ರತಿಹತ ಪ್ರತಿಭರಪ್ಪ ಯತಿಪತಿಗಳಿಂತೆಂದು ಬೆಸಸಿದರ್‌

ಕಂ || ಅವಿಚಕ್ಷಣರಂ ತಿಳಿಪ
ಲ್ಕವನಿಪ ಬೆಸಗೊಂಡೆ ನಿನಗೆ ತತ್ತ್ವವಿದಂಗಿ
ಲ್ಲಿ ವಿಮೋಹಮುಂಟೆ ಜೈನ
ಸ್ಯ ವಿಸ್ಮಯೋ ನಾಸ್ತಿಯೆಂಬ ನುಡಿಯುಳ್ಳುದಱೆಂ ೧೩

ವ || ಎಂದರಸನ ದರ್ಶನಶುದ್ಧಿಯಂ ಪ್ರಭಾವಿಸಿ ಬೞಿಯಮಿಂತೆಂದರ್‌

ಮ || ನಿಯತಾಷ್ಟಾದಶದುಷ್ಟದೋಷರಹಿತಶ್ರೀಜೈನಬಿಂಬಂ ವಿಶು
ದ್ಧಿಯನುತ್ಪಾದಿಕುಮಾ ವಿಶುದ್ಧಿಯೆ ವಿನೇಯರ್ಗೈಹಿಕಾಮುತ್ರಿಕಾ
ಕ್ಷಯಸೌಖ್ಯಾಮೃತಮಕ್ಕುಮೆಂತೆನೆಯಭವ್ಯಂಗಾದೊಡಂ ಜೈನಮು
ದ್ರೆಯೆ ಮಾೞ್ಕುಂ ಮಹಿತಾಹಮಿಂದ್ರತೆಯನೆಂಬೀ ಸ್ತುತ್ಯಸಾಮರ್ಥ್ಯದಿಂ ೧೪

ಉ || ಶಾಂತರಸಾಂಬುರಾಶಿ ಜಿನಬಿಂಬಮದಂ ಪರಿಭಾವಿಪಾತನೊಳ್‌
ಶಾಂತಿ ಪೊದೞ್ದು ನಿಲ್ಕುಮದೆ ಮಾೞ್ಕುಮಭೀಷ್ಟಸುಖಂಗಳಂ ಜಗ
ಕ್ಕಂತದಱೆಂ ಸುಖಾರ್ಥಿಯೆನಿಸಿರ್ಪ ವಿನೇಯನಿಕಾಯಮಾವಗಂ
ಸಂತಸದಿಂದೆ ಭಾವಿಸುಗೆ ಬಣ್ಣಿಸುಗರ್ಚಿಸುಗಿಂದ್ರವಂದ್ಯನಂ ೧೫

ವ || ಎಂದು ತನಗೆ ತತ್ತ್ವಸ್ವರೂಪಮಂ ನಿರೂಪಿಸೆ

ಕಂ || ಆಸನ್ನಭವ್ಯನರ್ಹ
ಚ್ಛಾಸನದೀಪಕರವಚನರುಚಿನಿಚಯಂ ಶಂ
ಕಾಸಂತಮಸಮನಲೆವಿನ
ಮಾ ಸಮ್ಯಗ್ಬೋಧರತ್ನ ರತ್ನಾಕರರಂ ೧೬

ವನಭವನಜ್ಯೋತಿಷ್ಕ
ಳ್ಪನಿಳಯನಂದೀಶ್ವರಾದಿಭೂತಳದೊಳ್ ಭೂ
ವಿನುತಮಕೃತ್ತ್ರಿಮಜಿನಗೃಹ
ಮೆನಿತೊಳವೆನಗವಱ ಸಂಖ್ಯೆಯಂ ಮುನಿ ಬೆಸಸಿಂ ೧೭

ವ || ಎಂದು ಬಿನ್ನವಿಸೆ ಪರಮಾಗಮ ಪಾರಾವಾರಪಾರಂಗಮರಿಂತೆಂದು ಬೆಸಸಿದರ್‌

ಕಂ || ಧನರಕ್ಷಕನುಮಕೃತ್ತ್ರಿಮ
ಜಿನಗೃಹಮಂ ನೋಡಿ ಸಮವಸೃತಿಯಂ ಪದೆದಿಂ
ಬಿನೆ ಮಾೞ್ಕುಮೆಂದೊಡಿನ್ನವ
ಱನುಪಮಶೋಭಾವಿಳಾಸಮಂ ಪವಣಿಪರಾರ್‌೧೮

ಪ್ರವಿಪುಳವಾನವ್ಯಂತರ
ಭವನದ್ವೀಪಾರ್ಣವಾಚಳಕ್ಕಂ ಪವಣಿ
ಲ್ಲವರ ಜಿನಾಗಾರಕ್ಕಂ
ಪವಣಿಲ್ಲದಱಿಂದಮವಱ ಚೆಲ್ವಿನ ತೆಱದಿಂ ೧೯

ಭಾಸಉರಮಣಿಮಯ ಭವನಾ
ವಾಸದೊಳರುಣಾತ್ಮಕಳಶತೋರಣರುಚಿರಂ
ದ್ವಾಸಪ್ತತಿಲಕ್ಷಯುತ
ಶ್ರೀಸಂಭೃತಸಪ್ತಕೋಟಿಜಿನಗೃಹಮೆಸೆಗುಂ ೨೦

ಜ್ಯೋತಿರ್ಲೋಕದೊಳಮಸಂ
ಖ್ಯಾತಮಕೃತ್ತ್ರಿಮಜಿನಾಲಯಂ ನವರತ್ನ
ದ್ಯೋತಿನಿರಸ್ತಜ್ಯೋತಿ
ಶ್ಚೇತೋಧ್ವಾಂತಂ ನಿತಾಂತಮೆಸೆಗುಂ ಕಾಂತಂ ೨೧

ಸುತ್ರಾಮಪ್ರಣುತಂ ಪ್ರಥ
ಮತ್ರಿದಿವದೊಳೀಕ್ಷಣಪ್ರಿಯಂ ಮಣಿರೋಚಿ
ಶ್ಚಿತ್ರಿತಭಿತ್ತಿವ್ರಾತಂ
ದ್ವಾತ್ರಿಂಶಲ್ಲಕ್ಷಜಿನಗೃಹಂ ಸೊಗಯಿಸುಗುಂ ೨೨

ಎರಡನೆಯ ಕಲ್ಪದೊಳ್‌ಮಣಿ
ಕಿರಣಪತಾಕಾಂಚಳಧ್ವಜಾಂಚಿತ ಜಿನಮಂ
ದಿರಮೆಸೆಗುಂ ಮಣಿತೋರಣ
ಪರಿವಾರವಿಶಿಷ್ಟಮಷ್ಟವಿಂಶತಿಲಕ್ಷಂ ೨೩

ಪ್ರಕಟಿತಸನತ್ಕುಮಾರಾ
ಖ್ಯಕಲ್ಪದೊಳ್‌ಕಲ್ಪಭೂಜಪುಷ್ಪಸುಗಂಧಂ
ಸುಕೃತಪ್ರದಜಿನಸದನ
ಪ್ರಕರಂ ಪನ್ನೆರಡುಲಕ್ಕೆಯೆಸೆಯುತ್ತಿರ್ಕುಂ ೨೪

ತ್ರಿದಶಪತಿವಿನುತಮರ್ಹ
ತ್ಸದನಂ ಮಾಹೇಂದ್ರಕಲ್ಪದೊಳ್‌ಪುಣ್ಯಫಳ
ಪ್ರದಮಷ್ಟಲಕ್ಷಮಮರೀ
ಮೃದುಗೀತವಿನೂತಮುಚಿತನೃತ್ಯಸ್ತುತ್ಯಂ ೨೫

ಅತ್ತಸುಖಬ್ರಹ್ಮ ಬ್ರ
ಹ್ಮೋತ್ತರಕಲ್ಪಂಗಳಲ್ಲಿ ಶಶಿಮಣಿವಿಳಸ
ದ್ಭಿತ್ತಿಯರುಣಮಣಿಕಳಶಮ
ನುತ್ತಮಜಿನವಸತಿ ನಾಲ್ಕುಲಕ್ಕೆಯೆನಿಕ್ಕುಂ ೨೬

ಲಾಂತವಕಾಪಿಷ್ಠಂಗಳೊ
ಳೇಂ ತೊದಳಯ್ವತ್ತುಸಾಸಿರಂ ಜಿನಗೇಹಂ
ಸಂತತಮತಿಕಾಂತಾಮರ
ಕಾಂತಾಸಂಗೀತಕೇಳಿಯಿಂ ಕಣ್ಗೊಳಿಕುಂ ೨೭

ಸುಮನೋಮನೋಹರಂ ಶು
ಕ್ರ ಮಹಾಶುಕ್ರಂಗಳಲ್ಲಿ ಪಲ್ಲವಿತಸುರ
ದ್ರುಮವನವೃತಮೆಸೆಗುಂ ನತ
ಸುಮನಂ ನಾಲ್ವತ್ತುಸಾಸಿರಂ ಜಿನಗೇಹಂ ೨೮

ವಿದಿತ ಶತಾರ ಸಹಸ್ರಾ
ರದೊಳಮರೀನಯನಕಾಂತಿ ಸಾರಸುಧಾಸಾ
ರದೊಳೊಪ್ಪಿ ತೋಱುಗುಂ ತ
ಪ್ಪದೆ ಜಿನಗೃಹವಿತತಿ ಷಟ್ಸಹಸ್ರಪ್ರಮಿತಂ ೨೯

ನಾನಾ ವಿಮಾನ ಮಾನಿತ
ಮಾನತಮಾ ಪ್ರಾಣತಾರಣಾಚ್ಯುತಮೆನಿಸಿ
ರ್ಪೀ ನಾಲ್ಕುಂ ಕಲ್ಪಂಗಳೊ
ಳಾನತಸುರಸಮಿತಿ ಜಿನವಸತಿ ಸಪ್ತಶತಂ ೩೦

ಮೊದಲಲ್ಲಿ ನೂಱಹನ್ನೊಂ
ದದಱಿಂ ನೂಱೇೞು ಬೞಿಕೆ ತೊಂಬತ್ತಾಱೆ
ನ್ನದಱೆಂ ಬೞೆಕ್ಕೆ ಜಿನಪತಿ
ಸದನಂ ಗ್ರೈವೇಯಕತ್ರಯಂಗಳೊಳೆಸೆಗುಂ ೩೧

ಎಸೆವಾ ನವಾನುದಿಶೆಯೊಳ್‌
ವಸತಿಗಳೊಂಬತ್ತೆ ಕಳಶದರ್ಪಣಘಂಟಾ
ಪ್ರಸರಾದ್ಯುಪಕರಣಂ ರಂ
ಜಿಸುಗುಂ ನೂಱೆಂಟು ಬೇಱೆವೇಱೆನ್ನವಱೊಳ್‌೩೨

ನಿರುಪಮಸುಖಪಂಚಾನು
ತ್ತರೆಗಳೊಳಹಮಿಂದ್ರಬೃಂದವಂದ್ಯಂಗಳ್‌ಮಂ
ದರದಂತಿರೆಯ್ದೆ ಜಿನಮಂ
ದಿರಮೆಸೆಗುಂ ನಂದನಾಳಿಸುಂದರವಿಭವಂ ೩೩

ನಿರುಪಮನಂದೀಶ್ವರದೊ
ಳ್ವುರುರತಿಕರದಧಿಮುಖಾಂಜನಾದ್ರಿಯೊಳಯ್ವ
ತ್ತೆರಡು ಜಿನಮಂದಿರಂ ಸುರ
ಪರಿವೃಢಪೆರಿಪೂಜಿತಂ ಸುಪರಿವಾರಯುತಂ ೩೪

ಮಂದರಮಯ್ದಱ ನಾಲ್ಕುಂ
ನಂದನದೊಳ್‌ನಾಲ್ಕುನಾಲ್ಕುಜಿನಮಂದಿರಮೋ
ೞೊಂದಱೊಳೆಸೆಗುಮವನಿತುಮ
ನೊಂದಿಸಿದೊಡಶೀತಿ ಜಿನಗೃಹಂಗಳೆನಿಕ್ಕುಂ ೩೫

ಕುಳಶೈಳಂಗಳೊಳರ್ಹ
ನ್ನಿಳಯಂ ಮೂವತ್ತುನೂಱು ವಕ್ಷಾರನಗಂ
ಗಳೊಳಿಷುಪರ್ವತದೊಳ್‌ನಾ
ಲ್ಕೆಳಸಿರ್ಕುಂ ನಾಲ್ಕು ಮಾನುಷೋತ್ತರಗಿರಿಯೊಳ್‌೩೬

ವಿಜಯಾರ್ಧಂ ನೂಱೆೞ್ಪ
ತ್ತು ಜಿನಾಲಯಮವಱೊಳನಿತೆಯಕ್ಕುಂ ಜಂಬೂ
ಕುಜದಲ್ಲಿಯಯ್ದು ಶಾಲ್ಮಲಿ
ಕುಜದೊಳ್‌ಸೊಗಯಿಸುಗುಮಯ್ದೆ ಜಿನಭವನಂಗಳ್‌೩೭

ಕುಂಡಳದೊಳ್‌ವಾಣೀಮಣಿ
ಮಂಡಳ ಜಿನಗೃಹಚತುಷ್ಟಯಂ ಸಕಳಮಹೀ
ಮಂಡನ ರುಚಕಾದ್ರಿಯೊಳಾ
ಖಂಡಳವಿನುತಂ ಜಿನಾಲಯಂ ನಾಲ್ಕೆಸೆಗುಂ ೩೮

ಇನಿತು ಜಿನಗೃಹಸಮಾಖ್ಯೆ ಪ
ಠನಮಾತ್ರದೆ ಸಿದ್ಧಮಂತ್ರದಂತಭಿಮತಮಂ
ನಿನಗೆ ಜನಿಯಿಸುಗುಮವನಿಪ
ನೆನೆವುದು ಪೊಗೞ್ವುದು ಕೃತಾರ್ಥನಪ್ಪೆಯಮೋಘಂ ೩೯

ಬೆಸಗೊಂಡ ನಿನಗಮಭಿವ
ರ್ಣಿಸಿದೆಮಗಂ ಸಕಳ ಕರ್ಮನಿರ್ಜರೆ ಪುಣ್ಯ
ಪ್ರಸರಂ ಸಂಭವಿಸಿದುದಂ
ತೆ ಸುಜನಸಂಸರ್ಗಮಾರ್ಗೆ ಮಾಡದೊ ಸುಖಮಂ ೪೦

ಎಂದು ಬೆಸಸಿದ ಮುನೀಶ್ವರ
ರಂ ದೃಢತರಭಕ್ತಿಯಿಂದೆ ಬಂದಿಸಿ ಧರ್ಮಾ
ನಂದಮನೆ ತಳೆದು ತನ್ನಯ
ಮಂದಿರಕೆೞ್ತಂದಗಣ್ಯ ಪುಣ್ಯೋದ್ಯುಕ್ತಂ ೪೧

ಪುರುಷಾರ್ಥನಿಧಿ ಶಲಾಕಾ
ಪುರುಷತೆಯಂ ಮಾೞ್ಪ ಪುಣ್ಯರಾಶಿಗಳೆಂಬಂ
ತಿರೆ ಸೊದೆವಳಿದ ಶಲಾಕೆಯ
ಪರಮಜಿನಾಲಯಮನೞ್ತಿಯಿಂದೆತ್ತಿಸಿದಂ ೪೨

ಮ || ವಿಳಸತ್ಪುಣ್ಯನಮೇರುವಿಂದೆಸೆವ ಪೆಂಪಿಂ ಮೇರುವಂ ಕೀರ್ತಿನಿ
ರ್ಮಳಗಂಗೋದ್ಭವಸಂಗದಿಂದೆ ಹಿಮವತ್ತುಂಗಾದ್ರಿಯಂ ಪೋಲ್ತು ಕ
ಣ್ಗೊಳಿಸುತ್ತಿರ್ದುವು ನೂತ್ನ ರತ್ನಮಯಭಿತ್ತಿವ್ರಾತಚೈತ್ಯಾಲಯಂ
ಗಳುದಂಚದ್ರುಚಿ ಕಾಂಚನೋರು ಕಳಶಪ್ರೋತ್ತುಂಗಶೃಂಗಂಗಳಿಂ ೪೩

ಮ.ಸ್ರ || ಪ್ರಗುಣ ಸ್ವರ್ಗಾಪವರ್ಗಕ್ಕಮಳಿನಮಣಿಚೈತ್ಯಾಲಯಶ್ರೇಣಿ ನಿಶ್ರೇ
ಣಿಗಳೆಂಬಂತಾದಮುತ್ತುಂಗತೆಯಿನೆಸೆದು ಮಿಥ್ಯಾತಮಸ್ತೋಮಮಂ ತೂ
ಳ್ದಿ ಗಡಾ ಸನ್ಮಾರ್ಗಮಂ ತೋಱುವ ಮಣಿಕಳಶಾರ್ಕಾಂಶುವಿಂದೊಪ್ಪೆ ಭವ್ಯಾ
ಳಿಗಲಂಪಂ ಪುಟ್ಟಿಸುತ್ತಿರ್ದುವು ಧರಣಿಪನೊಲ್ದೆತ್ತಿಸಲ್ಕತ್ಯುದಾತ್ತಂ ೪೪

ಚಂ || ಜಡಮತಿ ಭೇದಿಸಲ್‌ನೆಱೆಯದಂತಿರೆ ರೀತಿ ಬೆಡಂಗನೆಯ್ದೆ ನೂ
ರ್ಮಡಿಸೆ ವಿಚಿತ್ರಭಿತ್ತಿಯಳವಟ್ಟಿರೆ ಜಾತಿ ನಿಸರ್ಗಶೋಭೆಯಂ
ಗೆಡೆಗೊಳೆ ಪಾರ್ಶ್ವಪಂಡಿತವಿನಿರ್ಮಿತಕಾವ್ಯದವೋಲ್‌ಜಿನಾಲಯಂ
ಪಡೆದು ವಿನೇಯಸಂಪದಮನೇಂ ಪೆಸರ್ವೆತ್ತುದೊ ವಿಶ್ವಧಾತ್ರಿಯೊಳ್‌೪೫

ವ || ಅಂತಕೃತ್ತ್ರಿಮಭಕ್ತಿಯಿನಕೃತ್ತ್ರಿಮಚೈತ್ಯಾಲಯದಂತೆ ನಿಜಕೀರ್ತಿತ್ರೈಲೋಕ್ಯ ವರ್ತಿಯಾಗೆ ಚೈತ್ಯಭಕ್ತಿಯಿಂದುತ್ತುಂಗಚೈತ್ಯಾಲಯಂಗಳನೆತ್ತಿಸಿ

ಮ. ಸ್ರ || ಜಿನಪೂಜಾನಂದದಿಂದಂ ಜಿನಚರಿತಕಥಾಕರ್ಣನಾನಂದದಿಂದಂ
ಜಿನರಾಜಸ್ನಾಗಂಧೋದಕಸವನ ಸಮುಜ್ಜೃಂಭಿತಾನಂದದಿಂದಂ
ಜಿನಪಾದಾಂಭೋಜಶೇಷಾಕ್ಷತಕುಸುಮಶಿರೋಭೂಷಣಾನಂದದಿಂದಂ
ವಿನುತಾನಂದಾವನೀಪಾಳಕನೆನೆ ನೆಗೞ್ದಂ ಸ್ತುತ್ಯಸಮ್ಯಕ್ತ್ವಯುಕ್ತಂ ೪೬

ಕಂ || ಧರ್ಮಸುರದ್ರುಮದ ಫಳಂ
ಶರ್ಮಪ್ರದ ರಾಜ್ಯವಿಭವಮೆಂದಱೆದು ನೃಪಂ
ಧರ್ಮಾನುಕೂಲಮೆನಿಸಿಯೆ
ನಿರ್ಮಳಮತಿಯರ್ಥಕಾಮದೊಳ್‌ವರ್ತಿಸಿದಂ ೪೭

ವ || ಅಂತು ಧರ್ಮಾರ್ಥಕಾಮಫಳಾಯ ರಾಜ್ಯಾಯ ನಮಯೆಂಬ ವಾಕ್ಯಾರ್ಥ ಮನನ್ವರ್ಥಂ ಮಾಡುತ್ತುಮನೇಕ ಭೋಗೋಪಭೋಗಮನನುಭವಿಸುತ್ತು ಮಿರ್ದೊಂದುದೆವಸಂ ಮಣಿಮಯ ಶೃಂಗಾರಾಗಾರದೊಳ್‌ಶೃಂಗಾರಯೋನಿಯಂ ಭಂಗಿಸುವಂತೇಕಭಂಗಿಯಿಂ ಶೃಂಗಾರಮಂ ಮಾಡಿ ಮಾಣಿದರ್ಪಣಮಂ ನೋಡಿ

ಕಂ || ಕೆನ್ನೆಯ ನರೆಯಂ ನರಪತಿ
ಕನ್ನಡಿಯೊಳ್‌ಕಾಣೆ ಪುಟ್ಟಿದುದು ವೈರಾಗ್ಯಂ
ನಿನ್ನಿರ್ಮಳತೆಯನೆಮ್ಮವೊ
ಲಿನ್ನಿಯತಂ ತಾಳ್ದೆನುತ್ತುಮಱಿಪಿದ ತೆಱದಿಂ ೪೮

ದರ್ಪಣವನಭೀಕ್ಷಿಸೆಯು
ತ್ಸರ್ಪಣಮಭಿರೂಪರೂಪಲಾವಣ್ಯಕ್ಕಂ
ತೋರ್ಪುದುಮುಂ ಮುಪ್ಪಿನೊಳವ
ಸರ್ಪಣಮಾಯ್ತಿನ್ನದೇಕೆ ಭೋಗೋದ್ಯೋಗಂ ೪೯

ತನ್ನಯ ಮೊಗಮಂ ನೋಡಲ್‌
ತನ್ನಯ ಕಣ್‌ಪೇಸಿದಪ್ಪುದೆಂದೊಡೆ ಪೆಱತೇ
ನಿನ್ನಬಲೆಯರುಂ ಪೇಸುಗು
ಮೆನ್ನದೆ ಗತವಯಸನಬಲೆಯರ್ಗೆಳಸುವುದೇ ೫೦

ಮ || ತನುವಿಂದಂ ಧನದಾರ್ತಮಾರ್ತದಿನನೇಕಾರಂಭಮಾರಂಭದಿಂ
ಘನಜೀವಂಗಳ ಬಾಧೆ ಬಾಧೆಗಳಿನೇನೋ ಬಂಧಮಾ ಕರ್ಮಬಂ
ಧನದಿಂ ದುರ್ಗತಿ ದುರ್ಗತಿಭ್ರಮಣದಿಂದಂ ದುಃಖಮೆಂದಾರ್ಯರೀ
ತನ ಮೋಹಕ್ಕೆಡೆಯಾಗದಾಂಪುದು ತಪಃಶ್ರೀಯಂ ಕೃತಶ್ರೇಯಮಂ ೫೧

ಕಂ || ಬಾಲೆಯರ ಮನದೊಳೊದವಿದ
ನೀಲೀರಾಗತೆಯುಮೞಿಗುಮೞಿದೊಡೆ ಕೇಶಂ
ನೀಳತೆಯನೆಂದವಂದಿರ
ಲೋಲತೆಯಂ ಬಿಡದೊಡಪ್ರಬುದ್ಧಂ ವೃದ್ಧಂ ೫೨

ಇರದೆ ತಗವಯಸರನುಕೂ
ಲರಸಾಭಾರ್ಯಾಯೆನಿಪ್ಪಿದಂ ಬಗೆಯದೆ ಚಿಃ
ತರುಣಿಯರೊಲ್ಲದೊಡಂ ಕಾ
ತರಿಸಿಯೆ ಬೆಂಬತ್ತುವವರೆ ಗರ್ದಭಚರಿತರ್‌೫೩

ಪಳಿತಂ ಬರೆ ಪೞಿ ತನ್ನಂ
ಬಳಸುಗುಮೆಳಸಿದೊಡೆ ವಿಷಯತತಿಗದಱೆಂ ಶಂ
ಫಳಿತನ್ಮುಕ್ತಿಗೆನಿಪ ಮತಿ
ಫಳಿತಂ ತಳೆದಂದು ತಪಮನುೞಿ ದಂತಫಳಂ ೫೪

ವ || ಎಂದು ವಿಷಯವಲ್ಲಭಂ ವಿಷಯವಿರಕ್ತನಾಗಿ

ಕಂ || ಪ್ರಾಜ್ಯಗುಣವಜ್ರಬಾಹುಗೆ
ರಾಜ್ಯಮನಿತ್ತಾತ್ಮಜಂಗೆ ಜಗತೀತ್ರಯಸಂ
ಪೂಜ್ಯಮೆನಿಸಿರ್ದ ಸುತಪೋ
ರಾಜ್ಯಮನೂರ್ಜಿತ ಸಮಗ್ರವೈರಾಗ್ಯಧನಂ ೫೫

ಸಮಧಿಕ ದಯಾರಸಾಮೃತ
ಸಮುದ್ರಸಿತರುಚಿ ಸಮುದ್ರಗುಪ್ತಯತೀಂದ್ರ
ಕ್ರಮಕಮಳಸನ್ನಿಧಾನದೊ
ಳಮಳ ಗುಣಾನಂದಹೃದಯನಾನಂದನೃಪಂ ೫೬

ದುರ್ವಾರ ವೀರಮಾರನ
ದೋರ್ವಳಮಂ ನಿಜಸಹಾಯದಿಂ ಭೇದಿಸಲ
ಯ್ನೂರ್ವರ್‌ತಪಮಂ ತನ್ನೊಡ
ನುರ್ವೀಶರ್‌ತಳೆಯೆ ತಳೆದನನುಪಮತಪಮಂ ೫೭

ವ || ಅಂತು ನಿರಂತರ ದೃಢತರ ವೈರಾಗ್ಯವಿಶಾಲಮೂಲದಿಂದಗಾಧಬೋಧಾಲವಾಲಜಲ ದಿಂದುಪಶಮಸಮ್ಯಕ್ತ್ವಸ್ಕಂಧದಿಂ ಪಂಚಮಹಾವ್ರತಶಾಖಾಪ್ರಪಂಚದಿಂ ವಿಚಿತ್ರ ಚರಿತ್ರಪತ್ರದಿಂದನೂನಧ್ಯಾನಪ್ರಸೂನದಿಂದೈಹಿಕಾಮುಷ್ಮಿಕಪೂಜ್ಯತಾತುಳಪಳದಿಂದೆಸೆವ ದಿಗಂಬರದೀಕ್ಷಾನಲ್ಪ ಕಲ್ಪವಕ್ಷಮಂ ಧೈರ್ಯಮಂದರಾಚಳಂ ತಳೆದು

ಮ. ಸ್ರ || ಒಲವಿಂದಂ ಮಾಡುವತ್ಯೂರ್ಜಿತ ಜಿನಗುಣಸಂಪತ್ತಿ ನಾನಾನಿಳಿಂಪಾ
ತುಳಭಕ್ತ್ಯುತ್ಕರ್ಷಸಂಪೂಜಿತ ಜಿನಗುಣಸಂಪತ್ತಿಯಂ ಮಾಡೆ ಚೇತೋ
ಬಳಯುಕ್ತಂ ಸಿಂಹನಿಷ್ಕ್ರೀಡಿತಮಖಿಳಹೃಷೀಕೇಭಮಂ ತೂಳ್ದೆ ಮುಕ್ತಾ
ವಳಿ ಮುಕ್ತಿಶ್ರೀವಧೂಸಂಗಮಮೆನಿಸೆ ಮುನೀಂದ್ರೋತ್ತಮಂ ಮೈಮೆವೆತ್ತಂ ೫೮

ವ || ಎಂದಿವು ಮೊದಲಾದನಶನದೊಳಂ ಸಿಕ್ಥಚಾಂದ್ರಾಯಣಂ ಮೊದಲಾದವ ಮೋದರ್ಯದೊಳಂ ಗೃಹಸ್ಥಭೂಷಾವೇಷವ್ಯವಸ್ಥಾಪನಂ ಮೊದಲಾದ ವೃತ್ತಿಪರಿಸಂಖ್ಯಾನದೊಳಂ ಮೋಚಿತಸ್ಥಾನಂ ಮೊದಲಾದ ವಿವಿಕ್ತ ಶಯ್ಯಾಸನದೊಳಮಾಚಾಮ್ಲವರ್ಧನಂ ಮೊದಲಾದ ರಸಪರಿತ್ಯಾಗದೊಳಂ ನೆಗೞ್ದು ಕಾಯಕ್ಲೇಶಮೆಂಬಾಱನೆಯ ತಪೋನುಷ್ಠಾನಮನೆತ್ತಿಕೊಂಡು

ಕಂ || ಉಳ್ಳಲರೆ ಮನಂ ಕೈರವ
ದೊಳ್ಳಲರಲರ್ವಂತೆ ತನ್ನ ಜಸದಂತೆ ಹಿಮಂ
ಬೆಳ್ಳಂಗೆಡೆದಿರೆ ಮನದೊಳ
ಗಳ್ಳಾಡದೆ ಯೋಗಿ ಬೆಳ್ಳವಾಸದೊಳಿರ್ದಂ ೫೯

ತಪನಂ ಪರಿತಾಪಮನಿ
ತ್ತಪನಂಶುಗಳಿಂದಮೆಂದು ಪಥಿಕರ್ಕಳ್‌ಪಾ
ದಪರಾಜಿಯ ನೆೞಲೊಳ್‌ನಿಂ
ದಪರಾರ್‌ಮಿಡುಕಲರಿದೆನಿಪ ಬಿಸಿಲುಗ್ಗಡದೊಳ್‌೬೦