ಎತ್ತಮುರಿಗೆದಱುವಿನನಂ
ಸತ್ತಿಗೆಗೆತ್ತೊಗೆವ ಬಿಸಿಲನಾ ಸತ್ತಿಗೆಯೊಳ್‌
ತೆತ್ತಿಸಿದ ಮಾಣಿಕದ ರುಚಿ
ಗೆತ್ತದಿರದೆ ದಿವ್ಯಯೋಗಿ ಕಲ್ನೆಲೆನಿಂದಂ ೬೧

ಪೊಡೆವ ಸಿಡಿಲ್‌ಬಿಡೆ ಬೀಸುವ
ಕಡುಗಾಳಿ ಪೊದೞ್ದು ನೀಳ್ದು ಮಿಂಚುವ ಕುಡುಮಿಂ
ಚೆಡೆವಱಿಯದೆ ಪೊಸಕಾರೊಳ್‌
ಕೊಡದಿಂ ಸುರಿವಂತೆ ಸುರಿವ ಮೞೆ ನೆಗೞೆ ಕರಂ ೬೨

ನಿರುಪಮನಿಜನಿರ್ಮಳಿನ
ಸ್ವರೂಪಸಂಭೂತ ಭಾವನೋಚಿತ ಕಾಷ್ಠಾ
ಭರದೆ ಬಹಿರ್ವಿಷಯದೊಳಿಂ
ಮರವಾನಸನೆನಿಸಿ ಯೋಗಿ ಮರಮೊದಲಿರ್ದಂ ೬೩

ವ || ಅಂತುಗ್ರೋಗ್ರತಪದೊಳವ್ಯಗ್ರನೇಕಾಗ್ರದಿಂ ನೆಗೞುತ್ತುಮಿರೆ

ಕಂ || ಪುತ್ತಡರ್ದ ಮೆಯ್ಯ ಮಲಮೇ
ನಿತ್ತುದೊ ಘನಶಾಂತರಸನೆಱೆಯಲ್‌ಮೆಯ್ಯಂ
ಮೆತ್ತಿದ ಮೂಸೆಯ ಮೃತ್ತಿಕೆ
ಮತ್ತೆನಿಸಿದುದಪ್ಪುದೆಂಬಿನಂ ಯತಿಪತಿಯಾ ೬೪

ಚಂ || ತನು ಬಡವಾದುದೆಂಬಿನಿತೆ ಸದ್ಗುಣಘಾತಿಕಷಾಯಜಾತಿ ನೆ
ಟ್ಟನೆ ಬಡವಾದುದಾಶೆಯನನುತ್ತರನಿಸ್ಪೃಹವೃತ್ತಿ ಗೆಲ್ದುದೆಂ
ಬಿನಿತೆ ವಿಶುದ್ಧಕೀರ್ತಿಲತೆಯುಂ ಮಿಗೆ ಗೆಲ್ದುದೆನಿಪ್ಪ ಭಾ
ವನೆಯೊಳೆ ನಿಂದು ದರ್ಪಕನ ದೋರ್ಯುಗದರ್ಪಮನಾರ್ದದಿರ್ಪಿದಂ ೬೫

ವ || ಮತ್ತಮಮೇಯ ಪ್ರಾಯಶ್ಚಿತ್ತ ವಿನಯ ವೈಯಾಪೃತ್ಯ ಸ್ವಾಧ್ಯಾಯದೊಳಧ್ಯವಸಾಯಂ ಮಾಡುತ್ತುಮೇಕಾದಶಾಂಗಧಾರಿಯುಮೇಕವಿಹಾರಿಯುಮಾಗಿಯು ನೇಕದೇಶದೊಳ್‌ದಶಧರ್ಮಧಾರಿ ಧರ್ಮಪ್ರವರ್ತನೆಯಂ ಮಾಡುತ್ತುಂ ಸ್ವರ್ಗಾಪವರ್ಗ ಫಳಪ್ರದಾಯಿ ವ್ಯುತ್ಸರ್ಗಸಮಗ್ರ(ಚಿಂತಾನಿರೋಧ)ಧ್ಯಾನಮೆಂಬ ಪನ್ನೆರಡನೆಯ ತಪಮನುಪ ಶಮಚಿತ್ತಂ ಸ್ವಾಯತ್ತಂ ಮಾಡಲ್ವೇಡಿ ವಿಶೋಧಿವಿಶುದ್ಧಾಶಯಂ ದರ್ಶನವಿಶುದ್ಧ್ಯಾದಿರೂಢಷೋಡಶ ಭಾವನೆಯಂ ಭಾವಿಸುತ್ತುಂ

ಕಂ || ಜಾಱೇಂ ಮುನಿ ಮನಮಂ ಪದಿ
ನಾಱೆಡೆಗೆ ಪಸುತ್ತುಮಿರ್ದೊಡಂ ಚಿತ್ರಂ ಮೆ
ಯ್ದೋಱುತ್ತು ಭುವನದೊಳ್‌ಸರಿ
ದೋರದ ತೀರ್ಥಂಕರ ವಿದಿತಪುಣ್ಯಮಗಣ್ಯಂ ೬೬

ವ || ಅಂತು ಜಗತೀತ್ರಯಕ್ಷೋಭಸಮರ್ಥತೀರ್ಥಕರಪುಣ್ಯಮಂ ವಿನೇಯಜನ ಶರಣ್ಯಮಂ ನೆರಪಿ

ಕಂ || ಕ್ಷೀರವನಮೆಂಬ ವನದೊಳ್‌
ಕ್ಷೀರಾಬ್ಧಿ ತರಂಗವಿಶದವಿವಿಧಗುಣಂ ಗಂ
ಭೀರಂ ಪ್ರತಿಮಾಯೋಗದೊ
ಳಾರಧಿತ ತತ್ತ್ವನಿರ್ದನೂರ್ಜಿತಸತ್ವಂ ೬೭

ಇಪ್ಪತ್ತೆರಡು ಪರೀಷಹ
ಮಾರ್ಪುವೆ ಯತಿಪತಿಯನೞ್ಕಿಸಲ್‌ನಿಜತನುವಂ
ಬೇರ್ಪಡಿಸಿ ಪರಮಯೋಗದೊ
ಳಿರ್ಪನನಘವನವಿತಾನದಾವಾನಳನಂ ೬೮

ವ || ಅಂತವಿಶ್ರಾಂತ ತ್ರಿಗುಪ್ತಿಗುಪ್ತನುಂ ಶಾಂತರಸಸಂತೃಪ್ತನುಮಾಗಿ ಪ್ರತಿಮಾಯೋಗದೊಳಪ್ರತಿಮ ಸಮಾಧಿನಿಷ್ಠನಿರ್ಪುದುಮತ್ತಲ್‌

ಕಂ || ಎನಿತೊಳವಪಾಯಹೇತುಗ
ಳನಿತುಂ ನಿರಯದೊಳೆ ರೋಗಮೆನಿತೊಳವುದಯ
ಕ್ಕನಿತುಂ ಬರ್ಪುವು ನಾರಕ
ರ್ಗನೆ ನೆಱಪಿದ ಪಾಪಪಾಕಮಂ ಪವಣಿಪರಾರ್‌೬೯

ಕಿವಿಗೆ ಕಠೋರಧ್ವನಿ ಕ
ಣ್ಗೆ ವಿಭೀಕರಮೂರ್ತಿ ಜಿಹ್ವೆಗತಿ ವಿರಸರಸಂ
ಅವಗಂಧಂ ಮೂಗಿಂಗೆ
ಯ್ದುವುದೊರ್ಮೆಯುಮಧಿಕಕರ್ಮದಿಂ ನಾರಕರಂ ೭೦

ದಿವದೊಳ್‌ಸುಖಜನಕಂ ವ
ಸ್ತುವೆಲ್ಲಮೀ ಮರ್ತ್ಯಲೋಕದೊಳ್‌ಸುಖದುಃಖೋ
ದ್ಭವಕಾರಿ ನರಕದೊಳ್‌ದುಃ
ಖವರ್ಧನಂ ನಿರಯಭವರ್ಗದಲ್ಲಿತೊ ಸೌಖ್ಯಂ ೭೧

ವಾರಿಧಿಯನೀಂಟೆ ತೀರದ
ನೀರೞ್ಕೆ ಜಗಕ್ಕೆ ನೆಱಪಿದಶನಮನುಣೆ ಕೇಳ್‌
ತೀರದ ಪಸಿವುಳ್ಳೊಡಮೇಂ
ನಾರಕರ್ಗಿಲ್ಲಂಬುಕಣಮುಮಶನದ ಲವಮುಂ ೭೨

ನಾರಕರನನ್ಯಜನ್ಮದ
ವೈರಮನೆೞ್ಚಱಸಿದ ಹಟ್ಟಿಕಾಳಗಮಂ ಕ
ಣ್ಣಾರೆ ನಿರೀಕ್ಷಿಪ ತೆಱದಿಂ
ದಾರುತ್ತಿಱಿಯಿಸುತುಮೀಕ್ಷಿಪರ್‌ದನುಜರ್ಕಳ್‌೭೩

ನಿರಯಜರ ದುಷ್ಪರಿದುತಮೆ
ಶರೀರಮಂ ತಳೆದು ಪಲವುಭೇದದ ದುಃಖೋ
ತ್ಕರಮನೊದವಿಸುವ ತೆಱದಿಂ
ಪರಸ್ಪರಂ ನಾರಕರ್ಕಳೊದವಿಸುತಿಕ್ಕುಂ ೭೪

ವಿಷಸಮ ವಿಷಯಮನೊದವಿಸೆ
ವಿಷಧಿಗಳತಿರೋಷದಿಂ ಪರಸ್ಪರಮದಱಿಂ
ವಿಷಧಿಯನೀಂಟುವವೋಲ್‌ಸ್ಥಿತಿ
ವಿಷಧಿಗಳಂ ನಾರಕರ್ಕಳೀಂಟುವರಲ್ತೇ ೭೫

ವ || ಅಂತತಿ ದುರ್ವಾರಘೋರದುಃಖಸಸ್ಯಪಾತ್ರಮಾದ ನರಕಕ್ಷೇತ್ರಂಗಳೊಳ್‌

ಕಂ || ಶುಭಯೋಗಭಾಗಿ ಯೋಗಿ
ಪ್ರಭುವಧೆಯಿಂದಾದ ಪಾಪದಿಂ ದುಃಖದವ
ಪ್ರಭವಾಟವಿಯೆನಿಪ ತಮಃ
ಪ್ರಭೆಯೊಳ್‌ಜನಿಯಿಸಿ ಕುರಂಗನತಿಮಳಿನಾಂಗಂ ೭೬

ಘಾತಿಸಿದುವು ರೋಗಜಮಭಿ
ಘಾತಂ ಮಾನಸಸಮುದ್ಭವಂ ಕ್ಷುತ್ತ್ಕೃಟ್ಸಂ
ಜಾತಂ ತೀವ್ರಕ್ಷೇತ್ರೋ
ದ್ಭೂತಮಸಾತಂ ಪ್ರಭೂತಮಾ ಪಾತಕನಂ ೭೭

ವ || ಅಂತು ನಿರಂತರಂ ಪಂಚಪ್ರಕಾರಘೋರಕ್ಲೇಮಂ ದ್ವಾವಿಂಶತಿ ಪಾರಾವಾರ ಪರ್ಯಂತಂ ನಿಷ್ಠುರಹೃದಯಂ ಷಷ್ಠನರಕದೊಳನುಭವಿಸುತಿರ್ದು ಬಂದು

ಕಂ || ಆ ಕ್ಷೀರವನದೊಳತಿರೌ
ದ್ರಾಕ್ಷಂ ಗಜಪತಿ ಗಜಾಸುರೋನ್ಮದವಿಳದ
ತ್ರ್ಯಕ್ಷಂ ಜನಿಯಿಸಿದುದು ಹ
ರ್ಯಕ್ಷಂ ಘನವನಮೃಗಾಳಿಸಂಹೃತಿದಕ್ಷಂ ೭೮

ಚಂ || ವಿತತನಿತಂಬದಿಂ ವಿವಿಧ ಪಾದದಿನುಚ್ಚಶಿರಃಪ್ರಕೂಟದಿಂ
ದತಿಸಿತದಂತಮೌಕ್ತಿಕದಿನಾನನವಿದ್ರುಮದಿಂ ಸ್ಫುರನ್ನಖ
ಪ್ರತತಿ ಸುವಜ್ರದಿಂ ನಯನನೀಳದೆ ಕೇಸರಶೋಣರತ್ನದಿಂ
ದ್ಯುತಿ ಶಶಿಕಾಂತನಿರ್ಝರದಿನಿರ್ದುದು ಕೇಸರಿ ರೋಹಣಾದ್ರಿವೋಲ್‌೭೯

ಕಂ || ಆರಯ್ವೊಡೆ ಚಿತ್ರಂ ಕಂ
ಠೀರವದ ನೆಗೞ್ತೆ ದಾನಲೀನಾಳಿ ಲಸ
ದ್ವಾರಣಕುಂಭವಿದಾರಣ
ಕಾರಣಲಂಘನದೆ ತನಗೆ ಪಾರಣೆಯಕ್ಕುಂ ೮೦

ಮುತ್ತೊಗೆವ ತಾರೆಗಳ್‌ಬಿಸು
ನೆತ್ತರ್‌ಕಿಸುಸಂಜೆಯೆನಿಸೆ ಶಶಿವೋಲ್‌ದಶನಂ
ಬಿತ್ತರಿಸಿರೆ ಹರಿಯುದಯ ನ
ಗೋತ್ತುಂಗಕರೀಂದ್ರಶಿರಮನುಗಿಬಗಿ ಮಾೞ್ಕುಂ ೮೧

ವ || ಅಂತನೇಕಾನೇಕಪಮಸ್ತಮಸ್ತಿಷ್ಕಲುಬ್ಧಂ ಲುಬ್ಧಕನಂತೆ ನಖಮುಖನಿಶಿ ತಾಸ್ತ್ರಾಘಾತಂ ಮಾತಂಗಸಂಘಾತಮಂ ಘಾತಿಸುತ್ತುಮಿರ್ದೊಂದುದೆವಸಂ ನಿಜಭೈರವರವ ವಿಭೀತಚೇತಸಂಗಳಪ್ಪ ಗಜಯೂಥಂಗಳುಮಾಡುಂಬೊಲದೊಳಿರದೋಡಿಪೋಗೆ ತೀವ್ರ ಕ್ಷುಧಾಪೀಡಿತನಾಗಿ ನೀಡುಂ ಕಾಡಾನೆಗಳನಱಸಿ ಕಾಣದೆ ತೊಳಲುತ್ತುಮಾ ಕ್ಷೀರಕಾಂತಾರ ಮಧ್ಯಮಹೀಧರದತಿಕಾಂತ ಶಶಿಕಾಂತಶಿಳಾತಳದೊಳನೂನ ಧ್ಯಾನಾಧೀನಮಾನಸನಾಗಿರ್ದ ಮುನಿನಾಗನಂ ಕಂಡು

ಕಂ || ಮುನಿಸಿಂ ಹರಿ ಮೇಲ್ವಾಯ್ದೊಡೆ
ಮುನಿಸಿಂಹನದರ್ಕೆ ಚಳಿಯಿಸದೆ ತತ್ತ್ವಾರಾ
ಧನದೊಳ್‌ಸಮಗ್ರ ಸುಖಸಾ
ಧನದೊಳ್‌ನಿಂದಂ ವಿವೇಕಿಗದು ತಕ್ಕುದೆ ದಲ್‌೮೨

ಭೇದಿಸೆ ತನುವಂ ಸಿಂಹಂ
ವೇದನೆ ಮುನಿಗಾದುದಿಲ್ಲ ತನ್ನಿಂ ತನುವಂ
ಭೇದಿಸಿ ತನ್ನೊಳ್‌ನಿಂದನ
ನಾದ ಪರೀಷಹಸಹಸ್ರಮುಂ ಬೇದಿಕುಮೇ ೮೩

ಸಂಚಿಸಿದಘಮಂಬರಿಸಿ ಪ
ಳಂಚಲೆವೆಡೆಗಾದುದಿದು ಸಹಾಯನೆನುತ್ತುಂ
ಪಂಚಪದಮನೋದುತ್ತುಂ
ಪಂಚಾಸ್ಯಕೃತೋಪರ್ಗಮಂ ಸೈರಿಸಿದಂ ೮೪

ಪಂಚೇಂದ್ರಿಯಪಂಚಾಸ್ಯಂ
ಮುಂ ಚಳಿಯಿಸಲಾಱದಳಱುತೊಡನಿರ್ದುಮದಿ
ನ್ನೇಂ ಚಳಿಯಿಸಲಾರ್ಕುಮೆ ಪೇೞ್‌
ಪಂಚಾಸ್ಯಂ ಕ್ಷಣಮೆ ಪೊರ್ದಿದುದು ಯತಿಪತಿಯಂ ೮೫

ವ || ಆ ಸಮಯದೊಳ್‌

ಕಂ || ಪಂಚಾನನೋಪಸರ್ಗಜ
ಯಂ ಚಿತ್ತಕ್ಕತಿವಿಚಿತ್ರಮಂ ಕುಡೆ ದಿವಿಜರ್‌
ಪಂಚಾಮರಮಹಿಜಕುಸುಮ
ಸಂಯವೃಷ್ಟಿಯೊಳೆ ಮುನಿಯ ತನುವಂ ಪುದಿದರ್‌೮೬

ವ || ಅಂತನನ್ಯ ಸಾಮಾನ್ಯಸನ್ಯಸನವಿಧಿಯಿಂ ಮುಡುಪಿಯನಲ್ಪಸೌಖ್ಯಾನತಕಲ್ಪದೊಳ್‌ಪುಟ್ಟಿ

ಕಂ || ಉಲಿಯೆ ಪಟಹಾಳಿ ಜವನಿಕೆ
ತೊಲಗುವವೋಲ್‌ತೆಱೆಯೆ ನೆಱೆ ವಿಮಾನದ ಪಡಿತ
ಳ್ತಲರ ಮೞೆ ಕಱೆಯೆ ಪುಷ್ಪಾಂ
ಜಳಿಯಂತಮರಿಯರ ನೃತ್ಯಮೆಸೆದಿರೆ ನಿಸದಂ ೮೭

ಸುರಪತಿಯೊಪ್ಪುವ ಸಿರ್ಪಿನ
ಪೊರೆಯಿಂ ಪೊಱಮಡುವ ವಿಮಳಮೌಕ್ತಿಕಮೆನೆ ಬಿ
ತ್ತರಿಸಿದುಪಪಾದತಳ್ಪದ
ಪೊರೆಯಿಂ ದೇದೀಪ್ಯಮಾನತನು ಪೊಱಮಟ್ಟಂ ೮೮

ಚಂ || ನನೆಗಣೆಯಂತೆ ಕಂಪೊಗೆವ ರೂಪೊಡವುಟ್ಟಿದುದೇೞ್ಗೆವೆತ್ತ ಯೌ
ವನವೊಡವುಟ್ಟಿದತ್ತು ಮಣಿಭೂಷಣವಸ್ತ್ರಲತಾಂತಶೇಖರಂ
ತನಗೊಡವುಟ್ಟಿದತ್ತು ಶುಭಲಕ್ಷಣನಿರ್ಮಳವೃತ್ತಿ ತತ್ವಭಾ
ವನೆಯೊಡವುಟ್ಟಿದತ್ತೊಲವು ತಾನೊಡವುಟ್ಟಿದುದಾ ನರೇಂದ್ರನಾ ೮೯

ವ || ಅಂತನಂತಸುಖನಿದಾನಾನತಕಲ್ಪಾಧೀಶ್ವರನುಂ ವಿಂಶತಿಪಾರಾವಾರ ಪ್ರಮಾಣಾಯುಷ್ಯನುಂ ಶುಕ್ಲಲೇಶ್ಯಾಪರಿಣತನುಂ ವಿಂಶತಿಸಹಸ್ರಸಂವತ್ಸರ ಸಂಕಲ್ಪಿತಾಮೃತಾ ಹಾರನುಂ ತ್ರಿರತ್ನಿ ಪ್ರಮಾಣಧಾತುಮಳರಹಿತಶರೀರನುಂ ದಶಮಾಸನಿರ್ಯತ್ಸುರಭಿನಿಶ್ವಾಸನುಂ ಚತುಃಶತವಿಮಾನಾಧೀಶನುಂ ತ್ರಯಸ್ತ್ರಿಂಶಸ್ತ್ರಿದಶಪರಿವೇಷ್ಪಿತನುಂ ಅಯುತ ಶತಸಮಸಾಮಾನಿಕ ಸಮನ್ವಿತನುಂ ಚತುರಯುತಪ್ರಮಿತಾತ್ಮರಕ್ಷಕರಕ್ಷಿತನುಂ ಲೋಕಪಾಳಕೆ ಚುತಷ್ಟಯವಿಶಿಷ್ಟನುಂ ಅಂತರ್ಮಧ್ಯಬಾಹ್ಯಪರಿಷತ್ಪರೀತನುಂ ಚತುಸ್ತ್ರಿಂಶತ್ಪ್ರಮಾಣ ಮಹಾದೇವೀಮನೋಹರ ಮನೋಜಾತನುಂ ಭಯಲೋಭದುರ್ಲಭನುಮನಿಸಿ

ಕಂ || ಮನಮೆ ತನುವಾಗೆ ಸುರಕಾ
ಮಿನೀಜನಂಗಳೊಳನಂಗಸುಖಸಂಪದಮಂ
ನೆನೆಯಲೊಡಂ ಪಡೆವುದಂಱೆಂ
ಮನಃಪ್ರವೀಚಾರನೆನಿಸಿದಂ ಸುರರಾಜಂ ೯೦

ದೇವನನೆ ಪಲವು ಮೆಯ್ಯಿಂ
ದೇವಿಯರೋಲಗಿಸಲೆಂದು ವಿಕ್ರಿಯೆಯಿಂದಂ
ದೇವಿಯರಂ ಪಡೆಯೆ ತರಂ
ಗಾವಳಿ ಶೃಂಗಾರನದಿಯಿನೊಗೆವಂತೊಗೆದರ್‌೯೧

ಮ || ಪುದಿದಂಗದ್ಯುತಿವಾರಿಯಿಂ ದಶನಮುಕ್ತಾನೀಕದಿಂ ಸುತ್ತಿಮು
ತ್ತಿದತಿಸ್ಥೂಳಪಯೋಧರಪ್ರಕರದಿಂ ವಕ್ತ್ರೇಂದುಸಂಭೂತಿಗಾ
ಸ್ಪದಮಾಗಿರ್ಪುದಱೆಂದೆ ತೋಳ್ದೆರಗಳಿಂ ದೃಙ್ಮೇನದಿಂ ಮೇರೆದ
ಪ್ಪಿದ ಶೃಂಗಾರಸಮುದ್ರದಂತೆ ಸೊಗಯಿಕ್ಕುಂ ವಿಕ್ರಿಯದೇವಿಯರ್‌೯೨

ಉ || ಜಾಱದ ಜವ್ವನಂ ತವದ ಮೆಯ್ಸಿರಿ ತೀರದ ಸೌರಭಂ ಬೆಡಂ
ಗಾಱದ ಗಾಡಿ ಕುಂದದ ವಿಳಾಸಮಡಂಗದ ವಿಭ್ರಮಂ ಕಿಲುಂ
ಬೇಱದ ವಕ್ತ್ರದರ್ಪಣಮನಂಗನನೂವಿಧಾನ ಶೋಭೆಯಂ
ಬೀಱಿ ಸುರೇಶ್ವರಂಗೆ ಪದೆಪಂ ಪಡೆಗುಂ ದಿವಿಜಾಂಗನಾಜನಂ ೯೩

ಭೂಮಿಗಭಿಷ್ಪಮಂ ಕುಡುವ ಕಳ್ಪಕುಜಂ ನಿಧಿ ಕಾಮಧೇನು ಚಿಂ
ತಾಮಣಿಯೆಂಬಿವೋಲಗಿಪುವಾ ದಿವಿಜೇಶನನಾ ಸುರೇಶನುಂ
ಪ್ರೇಮದಿನರ್ಹದಂಘ್ರಿಗಳ ನೋಲಗಿಪಂ ಸಕಳಾರ್ಥಸಿದ್ಧಿಗಿಂ
ತೀ ಮಹಿಮಾಂಬುರಾಶಿ ಜಿನಸೇವೆಯೆ ಕಾರಣಮೆಂದೆ ಪೇೞ್ವವೋಲ್‌೯೪

ಮ || ಸ್ತನಭಾರಾನತದೇವವಾರವನಿತಾಶ್ರೀ ಯೌವನಾನಂದಿನಂ
ದನದೊಳ್‌ಸತ್ಫಳಸಂಕುಳಾನತ ಸುರೋರ್ವೀಜಾತ ದೇವಾದ್ರಿನಂ
ದನದೊಳ್‌ಪಾದಪಯೋರುಹಾನತ ಸಭಾನೀಕಂಗಳೊಳ್‌ಭಾಗ್ಯಭಾ
ಜನನಪ್ಪಾನತನಾಥನೊಲ್ದು ನಲಿದಂ ಜೈನಕ್ರಮಾಬ್ಜಾನತಂ ೯೫

ವ || ಅಂತು ನಿರಂತರಸುಖಾಕ್ರಾಂತಾಂತರಂಗನಾಗಿಯುಂ ಭೋಗೈಕರತನಾಗಿ ಜಿನರಾಜಪೂಜಾವಳೋಕನಾನಂದಾಶ್ರುಮಿಶ್ರಿತ ನಿರೀಕ್ಷಣನುಂ ಜಿನಚರಣಸ್ಮರಣ ಪರಿಣತಾಂತಃಕರಣನುಮಾಗರ್ದನನ್ನೆಗಮಿತ್ತಲ್

ಕಂ || ಶ್ರೀಪರಿಚುಂಬಿತಜಂಬೂ
ದ್ವೀಪದ ಭರತಾವನೀವಿಳಾಸವತೀವೇ
ಣೀಪದದಂತಿರೆ ಸಮನಃ
ಶ್ರೀಪರಿಮಳರಾಶಿ ಕಾಶಿಯೆಸೆಗುಂ ದೇಶಂ ೯೬

ಚಂ || ಬೆಳೆಯದಧಾನ್ಯಮುಳ್ಳಲರೊಳೊಂದದ ಪೂಗಿಡು ಕಂಪನಾಂತು ಬಂ
ದೆಳಸದ ತಣ್ಣೆಲರ್‌ಫಲಭರಂಗಳನಾನದ ಸಾರಭೂರುಹಂ
ಜಳರುಹಮಿಲ್ಲದಿರ್ಪ ಕೆಱೆನೋಡೆ ಮನೋಹರಮಲ್ಲದೂರ್‌ಗುಣಾ
ವಳಿಗಳಿನೊಪ್ಪದಿರ್ಪ ಜನಸಂಕುಳಮೆಲ್ಲಿಯುಮಿಲ್ಲ ದೇಶದೊಳ್‌೯೭

ಕಂ || ಕೊಳರ್ವಕ್ಕಿಯ ಕಳರವದಿಂ
ಮಿಳಿರ್ವೆಳಲತೆಯಿಂ ತಳಿರ್ತಶೋಕೆಯಿನೆತ್ತಂ
ಕುಳಿರ್ವೇಳಾವನದಿಂ ಬಗೆ
ಗೊಳಿಪಲ್ಲಿಗೆ ಕಾಶಿದೇಶಮಾಯ್ತವಕಾಶಂ ೯೮

ಹರಿಯಾಕಳ್ಗಳವಿರ್ಕುಂ
ಹರಿಯಾಕಳ್ಗಳವೊಲೆಲ್ಲಿಯುಂ ಮಿಗೆ ಮೊಲೆಯಿಂ
ಸುರಿತರ್ಪ ಪಾಲ ಪೊನಲೊಳ
ಗಿರೆ ಗೋಪರ್‌ಗೋಪನಂತಿರೋಲಾಡುತ್ತುಂ ೯೯

ಪರಿಶೋಭೆವೆತ್ತ ನಾಗೋ
ತ್ಕರದಿಂದನವರತಮಲ್ಲಿ ಮಿಸುಗುವ ಸಸಿಯಿಂ
ದೊರೆವೆತ್ತ ಗಂಗೆಯಿಂದೀ
ಶ್ವೆರನ ಜಟಾಜೂಟದಂತೆ ಜನಪದಮೆಸೆಗುಂ ೧೦೦