ಕಂ || ಪುಟ್ಟಿಸಿದನಿದೇಕೆಯೊ ಬಿದಿ
ನಿಟ್ಟುರದಿಂ ಲೋಕದೊಳಗೆ ದುರ್ಜನನನಿದಂ
ನಿಟ್ಟಿಸಿ ತಿಳಿದೆಂ ಸುಜನರೊ
ಳಿಟ್ಟಣಿಸಿದ ಗುಣಮನಱೆಪಲದು ಸಂದೆಯಮೇ            ೫೧

ಖಳನಂ ಗುಣಗಣದಾವಾ
ನಳನಂ ಸುಜನಾಂತರಂಗ ಸಂತೋಷವ್ಯಾ
ಕುಳನಂ ಸಮಗ್ರದೋಷಾ
ವಿಳನಂ ಪೆಸರ್ಗೊಂಡು ಬರ್ದುಕುವನ್ನನದಾವಂ ೫೨

ವಿಷದಿಂ ಕೊಲ್ವಹಿಯುಂ ನಿ
ಟ್ಟುಸಿರಿಂ ಕೊಲ್ವಹಿಯುಮಳುರ್ವ ದಿಟ್ಟಿಯ ನೋಟಂ
ಮಸಗಿ ಕೊಳಲ್ ಕೊಲ್ವಹಿಯುಂ
ಪೆಸರ್ಗೊಳೆ ಕೊಲಲಾರ್ಪ ಖಳನೊಳೆಣೆವಂದಪುವೇ          ೫೩

ಅಕ್ಕಟ ಖಳನಂ ಜವನೇ
ಕಿಕ್ಕನೊ ತುತ್ತಾಗಿ ಬಾಯೊಳಿದನಱೆದೆನವಂ
ಪೊಕ್ಕೊಡೆ ತನ್ನೊಡಲಂ ಪೋ
ೞ್ದೆಕ್ಕುಗುಮೆಂದಂಜಿದಂದಮಾಗಲೆವೇೞ್ಕುಂ    ೫೪

ಕೊಂದೊಡೆ ಬಿಡದವಗುಣಮಿನಿ
ಸೆಂದೊಡೆ ಬಿಟ್ಟಪುದೆ ಖಳರೊಳೆಮಗದನೆನಲೇ
ವಂದಪುದವರ್ಗಳ ಭಯಮಂ
ಮಾಂದಿಸುವೊಡೆ ಸುಜನಸಂಸ್ತವಂ ಕರಣೀಯಂ ೫೫

ಇಲ್ಲದ ಗುಣಮಂ ಪೆಱರೊಳ್
ಸೊಲ್ಲಿಸುವಂ ತನ್ನೊಳುಳ್ಳ ಗುಣಮಂತದು ತಾ
ನಿಲ್ಲೆಂದಾಡುವ ಪುಸಿಕಂ
ಗೆಲ್ಲಿಂದಂ ಬಂದುದಮಮ ಸುಜನತೆ ಚಿತ್ರಂ      ೫೬

ರಸಮಯಮಂ ಕೃತಿಯಂ ಸೇ
ವಿಸಿ ವಿರಸಮನೆಯ್ದೆ ಜೋಡು ಮಾಡುವ ವಿಬುಧ
ಪ್ರಸರಂ ಪೊಸಮಾವಂ ಸೇ
ವಿಸಿ ಬಿದಿರಂ ಪೊಸೆವ ತುಂಬಿಯೊಡನಾಡಿದರೇಂ ೫೭

ಕೊಂಡಾಡದರಂ ತಮ್ಮಂ
ಕೊಂಡಾಡುವರೆಂದು ಪೊಗೞ್ವುದೀ ಧರೆಯಿದನಾಂ
ಕೊಂಡೆಸಗುವೆನೀನುಡಿ ಬೆಂ
ಗೊಂಡುದು ಸಜ್ಜನರನೊಂದುಮಾತಿನ ಮಱೆಯಿಂ        ೫೮

ವ || ಅದೆಂತೆನೆ
ಕಂ || ಭಾವಿಸೆ ಚಿತ್ರಮೆನಲ್ ವಿಬು
ಧಾವಳಿ ಗುಣವರ್ಮಬುಧನನಕೃಪೆಯಿಂ ಕೂ
ರ್ತೋವಿ ಮುನಿಚಂದ್ರಪಂಡಿತ
ದೇವರ್ ಗುರುವಾಗೆ ಕವಿತೆ ಬಂದುದು ಚಿತ್ರಂ    ೫೯

ತಣಿವಂತಿರೆ ರಸದಿಂ ಬುಧ
ರಣಿಯರಮೆಸಗುವುದು ಸುಕವಿ ಸತ್ಕೃತಿಯನಣಂ
ಗುಣವರ್ಮನಾಗಿ ಶಿತಮಾ
ರ್ಗಣದಂತುಚ್ಚಳಿಪದಿರ್ಪಿನಂ ಖಳವಚನಂ        ೬೦

ಪ್ರಕಟಂ ಸುಕವಿಮಧುವ್ರತ
ನಿಕರಮನೆಱಗಿಸುವ ಚೂತಮಂಜರಿ ಕುಕವಿ
ಪ್ರಕರಮಧುಪಕ್ಕೆ ಕೃತಿ ಚಂ
ಪಕಜಮಂಜರಿಯೆನಿಸೆ ಪೇೞ್ದಪಂ ಗುಣವರ್ಮಂ ೬೧

ಪದಮೆ ಪದಮರ್ಥಮರ್ಥಂ
ಪುದಿದ ರಸಂ ತೃಪ್ತಿಕರರಸಂ ಭಾವಂ ಪೊ
ಣ್ಮಿದ ಸದ್ಭಾವಂ ದನಿಯಿಂ
ಪೊದವಿದ ದನಿಯೆನಿಪೆ ಪೇೞ್ದಪಂ ಕವಿತಿಲಕಂ   ೬೨

ಸ್ವೀಕೃತ ಜಿನಧರ್ಮನನಂ
ಗೀಕೃತ ಖಳವರ್ಮನಮಳವಾಣೀಕರುಣಾಂ
ಗೀಕೃತ ಕವಿತಾವರ್ಮನ
ಪಾಕೃತದುಷ್ಕರ್ಮನಮನು ಕವಿ ಗುಣವರ್ಮಂ  ೬೩

ಕವಿ ಗಮಕಿ ವಾದಿ ವಾಗ್ಮಿ
ಪ್ರವರನ್ ಗುಣವರ್ಮನೊಳ್ ಸಮಂ ಬರ್ಪವರಾರ್
ಕವಿತೆಯೊಳಂ ಗಮಕದೊಳಂ
ಕುವಾದಿವಿಜಯದೊಳಮಮೃತ ವಾಗ್ವೃತ್ತಿಯೊಳಂ        ೬೪

ವಿವಿಧ ಕಳಾಭಿಜ್ಞಂ ಭಾ
ವವಿದಂ ರಸರಸಿಕನುಚಿತಕವಿತಾಚತುರಂ
ಸುವಿವೇಕನಿಧಾನಂ ವಿಬು
ಧವತ್ಸಳಂ ಮಾನಮೇರು ನೃಪತತಿಮಹಿತಂ     ೬೫

ಚಂ || ರತಿ ಪದೆದಂತೆ ಚಂದ್ರಕಿರಣಂಗಳೆ ಪಾಲ್ಗುಡಿದಂತೆ ಮಂದಮಾ
ರುತನೊಡಗೂಡಿ ಬಂದ ಸಹಕಾರಪರಾಗದೊಳಾಡಿದಂತೆ ರಾ
ಜಿತ ಮಧುಮಾಸದೊಳ್ ಪರೆಯದಿಂ ಪೊರೆದಂತಬಲಾಕಟಾಕ್ಷಶಿ
ಕ್ಷಿತಮೆನಿಪಂತೆ ಮೋಹಿಸದೆ ಪೇೞ್ ಗುಣವರ್ಮನ ಸೂಕ್ತಿಸಂಚಯಂ            ೬೬

ಶಾ || ಎಂದೋರಂತಿರೆ ವಜ್ರದೇವನರನಾಥಾಸ್ಥಾನದೊಳ್ ಕೂರ್ತ ನ
ಣ್ಪಿಂದಂ ಕೋವಿದರೆಯ್ದೆ ಕೊಂಡುಕೊನೆಯಲ್ ಕೇಳ್ದೞ್ದಱೆಂ ಶಾಂತಿವ
ರ್ಮಂ ದೀನಾನತವರ್ಮನಾದರಿಸಿ ನೀಂ ಪೇೞೆಂದೊಡೀಗಳ್ ಮನಂ
ದಂದೆಂ ಪಾಲ್‌ಗಡ ಮರ್ದೆನಲ್ ಜಿನಕಥಾವಿಸ್ತಾರಮಂ ಸಾರಮಂ    ೬೭

ಕಂ || ಕೃತ ಗಡ ಕೊಳ್ವಂ ಕುಡುವಂ
ಕೃತಿ ಗಡ ಭಾವಿಸುವೊಡಾಪತಿಂವರೆಯುಂ ತಾಂ
ಕೃತಿ ಗಡೆನಲ್ ಕೊಳ್ಕೊಡೆಯೇ
ನತಿಶಯಮಾದುದೊ ಕೃತಾರ್ಥಮೆನೆ ಭುವನಜನಂ         ೬೮

ಕುಡುವವನಂ ಕೊಳ್ವವನೆಂ
ದೆಡೆಯುಡುಗದೆ ಕೊಳ್ವನಂ ಕರಂ ಕುಡುವವನೆಂ
ದಡಿಗಡಿಗೆ ವಿಬುಧವೃಂದಂ
ನುಡಿದುದು ಸಾಶ್ಚರ್ಯಮಲ್ತೆ ಕೊಳ್ಕೊಡೆ ಕೃತಿಯಾ      ೬೯

ಅಳಿಯಂ ಮೊಱೆಯಿಂ ಭಾಗ್ಯದಿ
ನಳಿಯಂ ಸೌಭಾಗ್ಯದಿಂದಮಳಿಯಂ ಗುಣದಿಂ
ದಳಿಯಂ ವಿತರಣಗುಣದಿಂ
ದಳಿಯನೆನಿಪ್ಪಂಗೆ ಕುಡುಗೆ ಕೃತಿಕನ್ಯಕೆಯಂ       ೭೦

ಕೃತಿ ಬೆಲೆಯಿಂ ಬರ್ಕುಮೆ ಪಂ
ಡಿತರಾರ್ ಬೆಲೆಯಿಲ್ಲದಿಟ್ಟೊಡಂ ಕೃತಿಗೊಳ್ವಂ
ಕೃತಿಗೆ ಬೆಲೆಯಂ ಬಱೆದು ಮನ
ಕತಮಾದೊಡೆ ಕೇಳ ವಿಬುಧವಿದ್ವತ್ಸಭೆಯೊಳ್ ೭೧

ಮ.ಸ್ರ || ಕ್ಷಿತಿಯೊಳ್ ಮುನ್ನಬ್ಜನೇತ್ರಂ ಮನೆಯಳಿಯನೆನಲ್ ಕ್ಷೀರವಾರಾಶಿಯಿಂ ವಿ
ಶ್ರುತಲಕ್ಷ್ಮೀದೇವಿಯಂ ಕೌಸ್ತುಭಮಣಿಸಹಿತಂ ಕೊಂಡನೆಂತಂತೆ ತನ್ನಂ
ಸತತಂ ಕೂರ್ತಿತ್ತು ಕೊಂಡಂ ಗುಣನಿಧಿ ಗುಣವರ್ಮಂಗೆ ಕೀರ್ತ್ಯನ್ವಿತಂ ಸ
ತ್ಕೃತಿಲಕ್ಷ್ಮೀಕಾಂತೆಯಂ ರಂಜಿತವಿಬುಧಜನಸ್ವಾಂತೆಯಂ ಶಾಂತಿವರ್ಮಂ      ೭೨

ಕಂ || ಆತನ ನಿಖಿಳಮಹೀವಿ
ಖ್ಯಾತನ ಸನ್ಮಾನದಾನಸಂಚಿತಸುಕೃತ
ವ್ರಾತನ ಗುಣವೆಣಿಕೆಗೆ ಘನ
ವೇತಱೊಳಂ ಕಿಱೆದಱೆಂದಮಱೆಪುವೆನಿನಿಸಂ  ೭೩

ವ || ಅದೆಂತೆಂದೊಡೆ

ಚಂ || ಸಕಳಜನೈಕಮಿತ್ರನನವದ್ಯಕಳಾಧರನಿಷ್ಟಶಿಷ್ಟಕ
ಲ್ಪಕುಜನುಪಾಶ್ರಿತಾಖಿಳಬುಧಂ ನಯವಾಕ್ಪತಿ ಸತ್ಕವಿತ್ವರಂ
ಜಕನಹಿತಾದ್ರಿಸಂಗತಮಹಾಶನಿ ಸಂತತ ಭೋಗಿರೂಪ ಕೌ
ತುಕಜಿತಮೀನಕೇತುವೆನೆ ಶಾಂತಿ ನವಗ್ರಹಭಾಸಿ ಲೋಕದೊಳ್       ೭೪

ಗುರುಜನಕಂ ಕವೀಂದ್ರಜನಕಂ ಗುಣವಜ್ಜನಕಂ ಸಮಸ್ತಸಾ
ಕ್ಷರಜನಕಂ ಜಗಜ್ಜನಕನೊಲ್ದುದನಿತ್ತಭಿರಕ್ಷಿಪೞ್ತಿಯಿಂ
ಗುರುಜನಕಂ ಕವೀಂದ್ರಜನಕಂ ಗುಣವಜ್ಜನಕಂ ಸಮಸ್ತ ಸಾ
ಕ್ಷರಜನಕಂ ಜಗಜ್ಜನಕನೆಂಬುದು ಮೇದಿನಿ ಶಾಂತಿವರ್ಮನಂ           ೭೫

ಮ || ಜಗದೊಳ್ ನಾೞ್ಪ್ರಭು ಶಾಂತಿವರ್ಮನೆಸೆವಂ ಪ್ರೋದ್ದಾಮಲಕ್ಷ್ಮೀಗೃಹಂ
ಜಗತೀಮಂಗಳರತ್ನಭೂಷಣಗೃಹಂ ಸಾಹಿತ್ಯಲೀಲಾಗೃಹಂ
ಭಗವಜ್ಜೈನಮತೋಕ್ತಿನರ್ತನಗೃಹಂ ದಿಕ್ಕಾಮಿನೀವರ್ತಿಕೀ
ರ್ತಿಗೃಹಂ ಕೀರ್ತಿತಸತ್ಯಸಂಪದಗೃಹಂ ಸನ್ನೀತಿ ವಿದ್ಯಾಗೃಹಂ        ೭೬

ಚಂ || ವಸುಧೆಯೊಳೊಳ್ಪುವೆತ್ತ ನರರೇಮಱಿವನ್ನರೆ ಶಾಂತಿ ನೀಂಬರಂ
ರಸಿಕರೆ ನೀಂಬರಂ ವಿನಯವೃತ್ತರೆ ನೀಂಬರವಾತ್ಮ ಸತ್ಕಳಾ
ಪ್ರಸರರೆ ನೀಂಬರಂ ಬುಧಜನಸ್ತುತಮಾರ್ಗರೆ ನೀಂಬರಂ ಗುಣ
ವ್ಯಸನರೆ ನೀಂಬರಂ ಶ್ರುತವಿಳಾಸರೆ ನೀಂಬರವೇನುದಾತ್ತರೇ          ೭೭

ಉ || ಶ್ರೀಯುತ ಶಾಂತಿವರ್ಮ ಪೆಱರಾರ್ಪು ವಿಚಾರಿಪೊಡಂಧವರ್ತಕ
ನ್ಯಾಯಮೆ ಬೀರದೇೞ್ಗೆ ಪರಿಭಾವಿಪೊಡಂತದು ತಾನಜಾಕೃಪಾ
ಣೀಯಮೆ ನಿಕ್ಕುವಂ ನುಡಿವ ಪೆಂಪು ವಿಚಾರಿಪೊಡುಂತೆ ಕಾಕತಾ
ಳೀಯಮೆ ಭಾಪ್ಪು ನಿನ್ನವೊಲುದಾರರೆ ಬೀರರೆ ಸತ್ಯವಾಕ್ಯರೇ        ೭೮

ಚಂ || ಎನಗೆನಗೀವನಾವ ತೆಱದಿಂ ವರವಸ್ತ್ರಸುವರ್ಣಮಂ ಸಮಂ
ತೆನಗೆನಗೞ್ಕಱೆಂ ಪದೆದು ಮನ್ನಿಪನಿನ್ನದಾವನೆಂದಣಂ
ತನತನಗೞ್ತಿಯಿಂದೆ ಸಕಳಾರ್ಥಿಜನೋತ್ಕರಮಾರ್ತು ಕೀರ್ತಿಸು
ತ್ತನುದಿನಮಿರ್ಪುದೆಂದೊಡಖಿಳಸ್ತುತನೋ ಪ್ರಭು ಶಾಂತಿಯುರ್ವಿಯೊಳ್      ೭೯

ಪರಹಿತದೊಳ್ ನಯಕ್ರಮದೊಳಾಯತಿಯೊಳ್ ಸುಚರಿತ್ರದೊಳ್ ದಯಾ
ಪರಿಣತಿಯೊಳ್ ಕಳಾವಿಭವದೊಳ್ ಗಭೀರದೊಳ್
ಗರಿಮೆಯೊಳೂರ್ಜಿತಪ್ರಭುತೆಯೊಳ್ ಸುಜನಾಗ್ರಣಿ ಶಾಂತಿವರ್ಮ ಸಾ
ಕ್ಷರಸಮಯಾಲಂಬಿ ನಿನಗಾರ್ ದೊರೆ ಮಾನವರೀಧರಿತ್ರಿಯೊಳ್     ೮೦

ಮ.ಸ್ರ || ಸ್ಫುರಿತೋದ್ಯತ್ತಾರ ತಾರಾಚಳ ಹರಹಸನಾದಭ್ರಶುಭ್ರಾಭ್ರಹಂಸೀ
ಹರಿದಿಙ್ಮಾತಂಗ ಗಂಗಾಸರಳತರಳ ಕಲ್ಹಾರ ಕರ್ಪೂರ ಪೂರಾ
ಮರರಾಜೋರ್ವೀಜಾ ರಾಜತ್ಕುಸುಮವಿಸರ ನೀಹಾರ ನೀರೇಜ ನೀರಾ
ಕರ ನೀರೇಜಾರಿ ಗೌರೀದ್ಯುತಿ ವಿತತಯಶಃಕಾಂತನೀ ಶಾಂತಿವರ್ಮಂ  ೮೧

ನಿರವದ್ಯಶ್ರೀನಿಔನ್ನತ್ಯದಿನಮೃತನಿಧಿಸ್ಫೂರ್ತಿಯಂ ಸತ್ಯಭಾಮಾ
ಪರಿಭಾಸ್ವತ್ಸಂಗದಿಂ ಶಾರ್ಙ್ಗೆಯನುಮೆಯಿನುಮಾಧೀಶನಂ ಮಾರ್ಗಣಾಡಂ
ಬರದಿಂ ನೈಷಂಗಮಂ ಸತ್ಕವಿಕಳಿತಕಳಾರಂಭದಿಂ ಶುಂಭದಬ್ಜಾ
ಕರಮಂ ಪೋಲ್ವಂ ಮಹೀಭಾಸುರಗುಣನಿಳಯಂ ಶಾಂತನುತ್ಕೀರ್ತಿ ಕಾಂತಂ   ೮೨

ವ || ಎಂದಿಂತು ಸಮಸ್ತ ಭುವನಜನಂ ಪೊಗೞೆ ನೆಗೞ್ತೆವಡೆದನಪ್ಪುದಱಿಂ ಕೀರ್ತಿಪತಾಕನುಂ ಅಗಣ್ಯಪುಣ್ಯಲಕ್ಷ್ಮೀಸದನವಕ್ಷಸ್ಥಳನಪ್ಪದಱಿಂ ಪುರುಷೋತ್ತಮನುಂ ಆತ್ಮೀಯಾನ್ವಯಮಂ ಗುಣರತ್ನದಿನಲಂಕರಿಸುವದಱಿಂ ಗುಣರತ್ನಭೂಷಣನುಂ ಚಾತುರ್ಯಚಾರಾಯಣನಪ್ಪುದಱಿಂ ಸರಸ್ವತೀಕರ್ಣಪೂರನುಂ ಮಱೆದಪ್ಪೊಡಂ ತೊದಳನುಡಿದಱೆಯನಪ್ಪುದಱೆಂ ಸತ್ಯರಾಧೇಯನುಂ ಘನಗಭೀರತೆಯಿನಾರ್ಗಮಧಿಕನಪ್ಪುದಱಿಂ ಗಂಭೀರನೀರಾಕರನುಂ ವಿರೋಧಿಸಾಧನ ಭಯಂಕರನಪ್ಪುದಱಿಂ ಕದನಕಂಠೀರವನುಂ ಅಪ್ರತಿಮಪ್ರಭಾವಾಭಿನು ತನಪ್ಪುದಱಿಂ ಪ್ರಭುಕುಲೈಕರೋಧೋಮಣಿಯುಂ ಕವಿತ್ವತತ್ವನಿಕಷಣಪ್ರತಿಭಾನನಪ್ಪುದಱಿಂ ವಿವೇಕ ಚತುರಾನನುಂ ನಿಸರ್ಗಸುರಭಿಪರಿಮಳಪರಿಮಿಳಿತನಪ್ಪುದಱಿಂ ಮಲ್ಲಿಕಾವಲ್ಲಭನುಂ ಸುಕವಿಕದಂಬಾವಲಂಬನನಪ್ಪುದಱಿಂ ಸಕಳಸುಕವಿಪಿಕಮಾಕಂದನುಂ ಜಿನಧರ್ಮಹರ್ಮ್ಯ ಮಾಣಿಕ್ಯಕಳಶನಪ್ಪುದಱಿಂ ಭವ್ಯಜಿನಾರ್ಣವಪೂರ್ಣಚಂದ್ರನುಂ ವಿದ್ವಜ್ಜನಹೃದಯನಪ್ಪುದಱಿಂ ಸಕಳಜನಮನೋಹರನುಂ ಕರ್ಣಾಟಕೀಕರ್ಣಾವತಂಸನುಂ ಮಳಯಮಾನಿನೀಮನೋಮಾನ ಸಹಂಸನುಂ ಕೇರಳೀಕುಚಕಲಶತಾರಹಾರನುಂ ಸಿಂಹಣ ಸೀಮಂತಿನೀಸೀಮಂತ ಸಿಂಧೂರನುಮೆನಿಸಿ ನೆಗೞ್ವ ನಾೞ್ಪ್ರಭು ನಭೋಮಣಿ ಶಾಂತಿವರ್ಮನ ಯಶೋಲತೆಗಾಲಂಬನಮಾಗಿ ಮನೋಹರಮಾದ ಕಥಾವನಿತೆಗುದ್ಭವಸ್ಥಾನಮೆಂತೆಂದೊಡೆ

ಮ || ನಿರುತಂ ನಾಲ್ಕುನುಯೋಗಮೆಂಬ ದೆಸೆಯೊಳ್ ನಾಲ್ಕುಂ ಶ್ರುತಸ್ಕಂಧಬಂ
ಧುರ ಭೂಚಕ್ರದೊಳೊಪ್ಪುತಿರ್ಪುದದಱೊಳ್ ಪೂರ್ವಾನುಯೋಗಸ್ಥಿತಂ
ಸುರರಾಜದ್ವಿಪದಂತೆ ಪೆಂಪೆಸೆವುದೀ ಶುಂಭತ್ಕಥಾಂಗಂ ನಿರಂ
ತರದಾನಪ್ರವಿಭಾಸಿ ಭದ್ರಗುಣಸಂಪೂರ್ಣಂ ಬುಧಾಧಿಷ್ಠಿತಂ          ೮೩

ಕಂ || ಪುರುಜಿನವೀರಜಿನೋಕ್ತಿ
ಸ್ವರೂಪಮಂ ವೃಷಭಸೇನಗೌತಮಗಣಿಗಳ್
ಭರತನೃಪಮಗಧರಾಜ
ರ್ಗೆ ರೂಪ್ಯಗಿರಿ ವಿಪುಳಗಿರಿಗಳೊಳ್ ಬೆಸಸಿದುದಂ            ೮೪

ಮ || ಹರಿಯಂತಂತಿರನೇಕ ಪಾಪಹರಣೈಕಪ್ರೌಢಮಂ ಕಿನ್ನರೇ
ಶ್ವರನಂತಂತಿರಗಣ್ಯಪುಣ್ಯಜನಸೇವ್ಯೈಶ್ವರ್ಯಮಂ ಮೇರುಭೂ
ಧರಮೆಂತಂತಿರೆ ಪುಷ್ಪದಂತಪರಿವೃತ್ತೋದಾತ್ತಮಂ ಭವ್ಯರಾ
ದರಿಸಲ್ ಭಕ್ತಿಯಿನಾಂ ವಿನಿರ್ಮಿಸುವೆನೀ ಶ್ರೀಮತ್ಕಥಾಬಂಧಮಂ   ೮೫

ಸುಕೃತಂ ಶಾಂತದಿನಕ್ಕುಮೀ ಕಥೆಗೆ ಶೃಂಗಾರಾದಿ ನಾನಾರಸಾ
ಷ್ಟಕವೇಬಾೞ್ತೆಯೊ ರಾಗಕಾರಣಮೆನಲ್ವೇಡೆಯ್ದುಗುಂ ವೀತರಾ
ಗಕಥಾಂತರ್ಗತಮಾದೊಡಾವ ರಸಮುಂ ಶಾಂತತ್ವಮಂ ನೀರದ
ಪ್ರಕರಾಂತರ್ಗತ ವಾರ್ಧಿವಾರಿ ಪಡೆವಂತತ್ಯಂತ ಮಾಧುರ್ಯಮಂ    ೮೬

ವ || ಆ ಕಥಾವತಾರಮೆಂತೆಂದೊಡೆ

ಮ.ಸ್ರ || ನಿರುತಂ ಷಡ್ದ್ರವ್ಯ ಗರ್ಭೋದರವಿತರವಿತರ್ಕಾತಿರಿಕ್ತಸ್ವರೂಪಂ
ಪರಮೇಷ್ಠಿಜ್ಞಾನದದೃಷ್ಟಿಪ್ರಸರವಿಷಯಮಾದ್ಯಂತಶೂನ್ಯಂ ವಿಯತ್ಪಂ
ಜರಮಧ್ಯಸ್ಥಾಯಿ ಲೋಕಂ ಕ್ರಮಗತಿಯಿನಧಸ್ತಿರ್ಯಗೂರ್ಧ್ವ ತ್ರಿಭೇದಂ
ಬೆರಸೊಪ್ಪುತ್ತಿರ್ಪ್ಪುದಾತ್ಮೋಚ್ಛ್ರಯಮದು ಪದಿನಾಲ್ಕಾಗೆ ರಜ್ಜು ಪ್ರಮಾಣಂ        ೮೭

ಕಂ || ಏತೊದಳೊ ಘನೋದಧಿ ಘನ
ವಾತಂ ತನುವಾತಮೆಂಬ ವಳಯಂಗಳನು
ಸ್ಯೂತಂಗಳ್ ಬಳಸಿರೆ ಸಮು
ಪೇತ ತ್ರಸನಾಳಗರ್ಭಮದು ಸೊಗಯಿಸುಗುಂ    ೮೮

ಚಂ || ಪರಿವೃತ ತೋಯ ವಾಯುಗಳನಂಬರಮಂ ಪೊಱಗಿಕ್ಕಿತೆಂಬುದೇ
ವಿರಿದದು ಮಾೞ್ಪ ಸಂಹರಿಪ ದಂದುಗಮಂ ಪೊಱಗಿಕ್ಕಿತೆಂಬ ಮೆ
ಯ್ಸಿರಿ ಸಹಜಾತಮಾಗೆ ತಲೆದಿರ್ಪುದನುಕ್ರಮದಿಂದೆ ವೇತ್ರವಿ
ಷ್ಟರನಿಭ ಝಲ್ಲರೀನಿಭ ಮೃದಂಗನಿಭಾಕೃತಿಯಿಂ ಜಗತ್ರಯಂ      ೮೯

ವ || ಆ ಲೋಕತ್ರಿತಯಮಧ್ಯದೊಳೊಂದುರಜ್ಜುಪ್ರಮಾಣಮುಂ ಸ್ವಯಂಭೂರಮಣ ಸಮುದ್ರಪರ್ಯಂತಮುಂ ಸಕಳ ತಿರ್ಯಕ್ಪರಿಭ್ರಮಣ ಪರಿಗತಮುಂ ಮಧ್ಯಸ್ಥಿತಮಂದರ ಮಹೀಧರಮುಮೆನಿಸಿ

ಕಂ || ನಿಸದಮಸಂಖ್ಯಾತದ್ವೀ
ಪ ಸಮುದ್ರದ ಬಳಿವಳ್ಳಿ ವಳಯಾಕೃತಿಯಿಂ
ದೆಸೆದೊಂದನೊಂದು ಪರಿವೇ
ಷ್ಟಿಸಿರಲ್ ಕಣ್ಗೊಳಿಪುದದುವೆ ಮಧ್ಯಮಲೋಕಂ          ೯೦

ಮ.ಸ್ರ || ಇರೆ ಜಂಬೂದ್ವೀಪಮಲ್ಲಿಂ ಪೊಱಗಿರೆ ಲವಣಾಂಬೋಧಿ ತದ್ವಾರ್ಧಿಯಂ ಬಂ
ಧುರಲೋಕಾಕಾರದಿಂದಂ ಬಳಸಿರೆ ವಿಲಸದ್ಧಾತಕೀಷಂಡಮೋರಂ
ತಿರದಂ ಸುತ್ತಿರ್ದು ಕಾಳೋದಕಜಲಧಿ ಬೆಡಂಗಾಗೆ ತದ್ಬಾಹ್ಯದೊಳ್ ಪು
ಷ್ಕರನಾಮದ್ವೀಪಮಿರ್ಕುಂ ವಿವಿಧಗಿರಿಸರಿದ್ದೇಶ ಸಂಪತ್ಕಳಾಪಂ   ೯೧

ವ || ಆ ದ್ವೀಪದ ಬಾಹ್ಯಾರ್ಧಮನಳಂಕರಿಸಿ

ಕಂ || ನವರತ್ನರಾಜಿ ಫಣಮಣಿ
ಕವಿದ ಮುಗಿಲ್ ತೆರೆ ಕರಾಳಪವನಂ ಫೂತ್ಕಾ
ರವೆನಲ್ ಮಂಡಳಿತಮಹಾ
ಹಿವೊಲಿರ್ಪುದು ಸುತ್ತಿ ಮಾನುಷೋತ್ತರಶೈಲಂ ೯೨

ಉ || ಆ ಪೃಥಿವೀಧರೇಂದ್ರಫಣಿಪಂ ಪರಿವೇಷ್ಟಿಸಿ ಕಾವ ಪುಷ್ಕರ
ದ್ವೀಪ ಮಹಾನಿವಾಸದ ಸಮುನ್ನತ ಕಾಂಚನರಾಶಿಯಂತಿರು
ದ್ದೀಪತ ರಶ್ಮಿ ರಂಜಿಪುದು ಮೂಡಣಮಂದರಮರ್ಹದಂಘ್ರಿಪೂ
ಜೋಪನ ತತ್ಪುರಂದರವಿಳಾತಳ ಸೌಂದರಮುದ್ಘಕಂದರಂ          ೯೩

ಚಂ || ಅಡಿಮೊದಲಿಂಗಧೋಭುವನಮೋಲಗಿಸುತ್ತಿರೆ ಮಧ್ಯಲೋಕಮೋ
ಗಡಿಸದೆ ಸುತ್ತಲುಂ ಬಳಸಿ ಜೀವಿಸೆ ಚೂಳಿಕೆ ನಾಕಲೋಕಮಂ
ಸೆಡೆಯದೆ ಪೊತ್ತು ನಿತ್ತರಿಸೆ ಮೈಮೆಯನಿಂತು ಜಗತ್ತ್ರಯಕ್ಕೆ ಮೂ
ವಡಿಪುದು ಲಕ್ಷಯೋಜನಮಿತೋಚ್ಛ್ರಯಮಾ ಕನಕಾವನೀಧರಂ     ೯೪

ವ || ಅಂತುಮಲ್ಲದೆಯುಂ

ನೆನೆಯಿಪುದೆಯ್ದೆ ಮೇರುಗಿರಿ ವಿಶ್ವಜಗನ್ನುತ ದಿವ್ಯಪಾದದಿಂ
ಜಿನಪತಿಯಂ ಮಹಾಕಟಕದಿಂ ನೃಪನಂ ವಿಧೃತಕ್ಷಮತ್ವದಿಂ
ಮುನಿಜನಮಂ ನಿತಂಬಗತಕಾಂಚನಮೇಖಳೆಯಿಂ ಲತಾಂಗಿಯಂ
ವಿನುತಪವಿತ್ರಪುಣ್ಯಗುಣದಿಂ ಗುಣಿ ನಾೞ್ಪ್ರಭು ಶಾಂತಿವರ್ಮನಂ    ೯೫

ಗದ್ಯ

ಇದು ಸಮಸ್ತ ಭುವನಜಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯ ಮಾಣಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರ ಪಂಡಿತದೇವ ಸುವ್ಯಕ್ತಸೂಕ್ತಿ ಚಂದ್ರಿಕಾಪಾನ ಪರಿಪುಷ್ಟಮಾನಮರಾಳ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಪೀಠಿಕಾವರ್ಣನಂ ಪ್ರಥಮಾಶ್ವಾಸಂ