ಚಂ || ಇದು ವಿಷಯಾಂಗನೋಚಿತ ದುಕೂಲದ ಮೇಲುದಿದಾ ಲತಾಂಗಿಯಿ
ಕ್ಕಿದ ಪೊಸಮುತ್ತಿನಾರಮಿದು ಭಾಸ್ಕರ ಭೀರುತೆಯಿಂದೆ ಬಂದು ತಾ
ಳ್ದಿದ ಪೆಱೆಯೊಂದುರೂಪಮಿದು ತೋಱುವ ಪುಣ್ಯನದೀಪ್ರವಾಹಮೆಂ
ಬಿದನೊದವಿಪ್ಪ ಬಾಂದೊಱೆಗದೇಂ ದೊರೆಯುಂಟೆ ನದೀನದಂಗಳೊಳ್‌೧೦೧

ಕಂ || ಸುರನದಿಯಿಂದಂ ಸಮನಃ
ಪರಿಶೋಭಿತ ಸತ್ಫಳಪ್ರಭಾಸುರತರುವಿಂ
ಸುರಲೋಕದಂತೆ ತದ್ಧರೆ
ಕರಮೆಸೆಗುಂ ಸುಖಸುಧಾನಿವಾಸವಿಳಾಸಂ ೧೦೨

ಶ್ರೀಕಾಶಿ ಸುಕವಿನಿಧಿ ಕಮ
ಳಾಕರದೊಳ್ ಕಮಳದಂತೆ ಕಣ್ಗೊಳಿಕುಂ ಲ
ಕ್ಷ್ಮೀಕಳಿತ ವಾರಣಾಸಿ ವಿ
ವೇಕಲಸದ್ರಾಜಹಂಸಮೂರ್ಜಿತಕೋಶಂ ೧೦೩

ಚಂ || ಕನಕವಿಶಾಲಶಾಲಕರದಿಂದೆ ಸಹಸ್ರಕರಾಭಿಧಾನಮಂ
ದಿನಕರನೊಳ್‌ಸಮರ್ಥಿಸಿದುದಿಂದ್ರಕುಬೇರಪುರಪ್ರಶೋಭೆಯಂ
ತನಗನುರಾಗದಿಂ ತೆಗೆದುದೆಂಬಿನಮೇೞ್ಗೆಯಿನೊಳ್ಪನಾಂತ ನೂ
ತನಪುರಲಕ್ಷ್ಮಿ ಪಕ್ಷ್ಮಚಳನತ್ವಮನೀಕ್ಷಿಪರ್ಗಾಗಲೀಗುಮೇ ೧೦೪

ಕಂ || ಅಮೃತಕರಂ ಕರದಿಂದಮೃ
ತಮನೆಱೆದವನೋವುತಿರ್ಪನತನುವ ಚಾಪ
ಕ್ಕಮರ್ದೆನೆ ಧವಳೇಕ್ಷುಗಳೊ
ಪ್ಪಮನಾಳ್ದು ಪೊರೞ್ದು ಪೊಂಗಿದುವು ಪೊಱವೊೞಲೊಳ್‌೧೦೫

ನಾರಂಗಂ ವನವನಿತೆಯ
ಹಾರದ ಪೊಸಮುತ್ತು ಪೊರೆದುವಾಕೆಯ ಕುಚಕಾ
ಶ್ಮೀರದಿನೆನೆ ಸೊಗಯಿಸುತುಂ
ನೇರಿದುವೆನಿಸಿರ್ಪುವಲ್ಲಿ ಕಂಪಿಂ ಕೆಂಪಿಂ ೧೦೬

ಜಳಕೇಳಿಗೆಳಸಿ ವನವಧು
ಪೊಳೆವರಿಸಿನದೆಱೆವ ಘುಸೃಣದುರುಳಿಯೆನೆ ಮನಂ
ಗೊಳೆ ತಳೆದವೊಲೊಪ್ಪಿರ್ಪುವು
ಫಳಭರನತಳಮಾತುಳುಂಗ ಜಂಬೀರಂಗಳ್ ೧೦೭

ಚಂ || ಫಳರಸದಿಂದೆ ಮುಂಬೆಳೆದೆವೆಂಬಿದಱಿಂ ನವಪುಷ್ಪವಾಟಸಂ
ಕುಳಕುಸುಮಾಸವಂ ಪೊರೆಯೆ ತತ್ಫಳಮಂ ಮಧುಪಾಳಿ ಮುತ್ತೆ ಬ
ಲ್ಗಿಳಿಗಳುಮಂತವಂ ಕುಸುಮವಾಟಮೆ ಗೆತ್ತಿೞಿಕೆಯ್ದು ಪಾಯ್ದುವಾ
ಕಳಮವನಾಳಿಗಳ್ಗೆಸೆವ ಪಾಮರಿಯರ್‌ಸಲೆ ಸೋಯಲೆತ್ತಲುಂ ೧೦೮

ಉ || ಸೋಂಕಿ ತದಂಗರಾಮಮರ್ದಂತೆ ಪರಾಗಮನೊಂದಿ ಘರ್ಮತೋ
ಯಂ ಕವಿದಂತೆ ವಾರಿಗಳನಿಂಬಿನೆ ಚುಂಬಿಸಿ ಸುಯ್ಯ ಕಂಪು ಚೆ
ಲ್ವಂ ಕುಡೆ ಪತ್ತಿದಂತೆ ನವಸೌರಭಮಂ ತಳೆದಾ ಪುರಕ್ಕೆ ತ
ಣ್ಪಂ ಕಡುಗಂಪನೀಯುತನಿಲಂ ವನಲಕ್ಷ್ಮಿಯೊಳಾಡಿ ತೀಡುಗುಂ ೧೦೯

ಕಂ || ಅಭಿಮತಮನಿತ್ತು ಧರೆಗೆ ದಿ
ಗಿಭಕುಳಮಂ ಕುಂದಕುಮುದಶಶಿವಿಶದಯಶೋ
ವಿಭವಮಭಿವ್ಯಾಪಿಸೆ ತ
ಮ್ಮಿಭಕುಲತೆಯಲ್ಲಿ ನನ್ನಿ ಮಾೞ್ಪರ್‌ಪರದರ್‌೧೧೦

ಎತ್ತಿದ ಪೞಯಿಗೆ ಲೋಭ
ಕ್ಕೆತ್ತಿದ ಪೞಯಿಗೆಯದೀಯದೆಂದೆನುತಿಳೆಗೊ
ಲ್ದಿತ್ತುರು ಕೀರ್ತಿಧ್ವಜದೊಡ
ನೆತ್ತಿಸುವರ್‌ಪರದರಲ್ಲಿ ಮಿಗೆ ಪೞಯಿಗೆಯಂ ೧೧೧

ಇಟ್ಟಳಮೆನಿಸುವ ಕಂಪಿನ
ಘಟ್ಟಿಯನನುಕರಿಸೆ ಕುಸುಮಶರಚಕ್ರಿಗೆ ಕೈ
ಘಟ್ಟಿಯನಿತ್ತವರಂತಿರೆ
ಘಟಟಿಮಗುೞ್ಚುವರುದಾರ ವಾರಂಗನೆಯರ್‌೧೧೨

ಉ || ತೋಳ ಮೊದಲ್ಗೆ ಪೆರ್ಮೊಲೆಗದೊರ್ಮೆಯುಮುಣ್ಮುವ ಸೌರಭಕ್ಕೆ ಭೃಂ
ಗಾಳಿ ವಿಟೌಘನೇತ್ರದೊಡನೋತೆಱಗುತ್ತಿರೆ ಪಾರ್ವ ಮೇಲುದಂ
ಬಾಲೆಯರ್ಗಲ್ಲಿ ಸಂವರಿಸಲಲ್ಲದೆ ಘಟ್ಟಿಮಗುೞ್ಚಲಿಲ್ಲ ಪೊ
ೞ್ತೀ ಲಲಿತಾಂಗಿಯರ್ಗೆನುತುಮಿರ್ಪುದು ಪೌರಜನಂ ನಿರಂತರಂ ೧೧೩

ಕಂ || ಪುರದ ರಮಣಿಯರ ಮಣಿನೂ
ಪುರದ ರವಕ್ಕೆಳಸಿ ಹಂಸೆ ಪಱೆಮಱಿಯಾಡು
ತ್ತಿರೆ ಮಧುಕರನಿಕರಂ ಮುಖ
ಪರಿಮಳಕೆ ವಿನೋದದಿಂದೆ ಸುೞಿವರ್‌ಪೊೞಲೊಳ್‌೧೧೪

ನಡೆವೆಡೆಯೊಳ್‌ಹಂಸೆಗಳು
ಗ್ಘಡಿಸುತ್ತುಂ ನೆಲನನೊಡನೆ ನಡೆವುವು ನಯದಿಂ
ನುಡಿವೆಡೆಯೊಳ್‌ತುಂಬಿಗಳಾ
ಮಡದಿಯರೆಂದಂತೆ ನುಡಿವುವೆನೆ ಪೊಗೞದರಾರ್‌೧೧೫

ಚಂ || ಬರೆದ ವಿಳಾಸಿನೀಗೃಹದ ಭಿತ್ತಿಯ ಶಕ್ರಕುಬೇರವಾರಿಧೀ
ಶ್ವರರ ವಿಶಿಷ್ಟವಿದ್ದಮೆಸೆಗುಂ ಪುರಲಕ್ಷಿಯರೊಪ್ಪಮಂ ಸ್ಫುರ
ನ್ನಿರುಪಮರತ್ನರಾಶಿಗಳನೀಕ್ಷಿಸಿ ವಾಸವನುಂ ಧನೇಶನುಂ
ವರುಣನುಮಲ್ಲಿ ಮೆಚ್ಚಿ ಮಿಗೆ ವಿಸ್ಮಿತಚೇತಸರಾಗಿ ನಿಂದವೋಲ್‌೧೧೬

ಚಂ || ರಜತಗಿರೀಂದ್ರಮಂ ಬಳಸಿ ನಿಂದುಪಶೈಳಶತಂಬೊಲಾ ಮಹೀ
ಭುಜನ ನಿವಾಸಮಂ ಮಣಿಮರೀಚಿವಿಚಿತ್ರಿತಭಿತ್ತಿಭಾಗಮಂ
ರಜತಮಯಾತಿ ವಿಸ್ತೃತ ಮಹೋನ್ನತ ಸಪ್ತತಳ ಪ್ರಶಸ್ತಮಂ
ಗಜಗತಿಸಿದ್ಧಶುದ್ಧಸುದತೀಗೃಹಸಂತತಿ ಸುತ್ತಿ ಶೋಭಿಕುಂ ೧೧೭

ಮೃಗಮದಸಾಂದ್ರಗಂಧಯುತಮಜ್ಜನಶಾಲೆಯಿನಿಂದುಕುಂದದಲೀ
ಲೆಗಳನದಿರ್ಪಲಾರ್ಪಮಳ ಭೋಜನಶಾಲೆಯಿನಂಗಜಾತಕೇ
ಳಿಗೆ ನೆಲೆಯಾದ ಸಚ್ಛಯನಶಾಲೆಯನಿಷ್ಟವಿನೋದಶಾಲೆಯಿಂ
ಮೃಗಪತಿಪೀಠರತ್ನರುಚಿಯಿಂ ಪುದಿದೋಲಗದೊಂದು ಶಾಲೆಯಿಂ ೧೧೮

ಮ || ವಿಗಳಾದ್ದಾನ ಸುಪೀನ ದೀರ್ಘಕರನಾಗಾಂಗಪ್ರಭಾನೀಳಶಾ
ಲೆಗಳಿಂ ರಾಜಿತರಾಜವಾಹನಗುಣಶ್ರೀವಾಜಿವಿಭ್ರಾಜಿಶಾ
ಲೆಗಳಿಂ ಯಂತ್ರಕರ ಪ್ರಮುಕ್ತಕರ ಮುಕ್ತಾಮುಕ್ತಸಚ್ಛಸ್ತ್ರಶಾ
ಲೆಗಳಿಂ ಶೋಭೆಯನಾಂತುದಿಂತು ಪಿರಿದುಂ ಭೂಪಾಳನಿರ್ಪಾಳಯಂ ೧೧೯

ಮ || ಸೂಸಿದ ಮಳಯಜಕುಂಕುಮ
ಕೌಸುಮಪರಿಮಳಕೆ ಬಳಸಿದಳಿವಿತತಿಗಳಿಂ
ದೇಸೆವಡೆದಿರ್ದ ರಾಜನಿ
ವಾಸಾಂಗಣಮಿಂದ್ರನೀಳಖಚಿತಮೆನಿಕ್ಕುಂ ೧೨೦

ಆ ಪುರದಧಿಪತಿ ಸಕಳಕ
ಳಾಪರಿಣತನಶ್ವಸೇನನುಪಮಶೌರ್ಯಾ
ಟೋಪವಿಲೋಪಿತವೈರಿಮ
ಹೀಪ ಚತುರಸೇನನುಚಿತಸೂಕ್ತಿನಿಧಾನಂ ೧೨೧

ಪ್ರತಿಪಕ್ಷಮನನಿತುಮನ
ಪ್ರತಿಮನಯೋಧ್ಯಮಪರಾಕ್ರಮಂ ಮರ್ದಿಸಿ ತ
ತ್ಕ್ಷಿತಿನಾಥಂ ಸರ್ವಂ ಸ
ಪ್ರತಿಪಕ್ಷಂ ವಸ್ತುವೆಂಬಿದಂ ಮಾಣಿಸಿದಂ ೧೨೨

ಮ || ಕಳೆಯಂ ಕಲ್ವವರುರ್ವರಾಪತಿನಿಮಿತ್ತಂ ಕಲ್ವರಾ ಭೂಪನುಂ
ಗಳ ಮೂರ್ಖಂ ವಿಮುಖಂ ಸುಖಕ್ಕೆನಿಪೊಡಾರ್ಗಿಂಬಾೞ್ತೆಯಾ ವಿದ್ಯೆನಿಃ
ಫಳಮೆಂದಾ ನೃಪನಾವನಾವಕಳೆಯೊಳ್‌ನಿಷ್ಣಾತನಾತಂಗನಾ
ಕುಳಮಾ ವಿದ್ಯೆಯಿನೊಳ್ಪು ಪೊರ್ದೆ ಪೊರೆವಂ ತಾನೆಂದೊಡೇಂ ಪ್ರೌಢನೋ ೧೨೩

ಕಂ || ಜಳಜಕ್ಕೆ ಮುದ್ದು ಶಶಿಮಂ
ಡಳಕ್ಕೆ ಪರಿಮಳಮದೆಳಸಿ ನಿಂದೊಡೆ ತದ್ಭೂ
ತಳಪತಿಯ ಸೌಮ್ಯಮುಖಮಂ
ಡಳಕ್ಕೆ ದೊರೆಯಕ್ಕುಮಲ್ಲದಂದವು ದೊರೆಯೇ ೧೨೪

ಸುದತಿಕಳಾಲಾವಣ್ಯಾ
ಸ್ಪದರೂಪಾದ್ಯುದಿತವಿಭವಮಂ ಮುದದಿಂದಂ
ಮೊದಲೊಳ್‌ಬ್ರಹ್ಮಂ ತನಗಿ
ತ್ತುದಱಿಂದಂ ಬ್ರಹ್ಮದತ್ತೆವೆಸರಿಂದೆಸೆದಳ್‌೧೨೫

ಆ ದಂಪತಿಗಳ ಘನಪು
ಣ್ಯೋದಯದಿಂದಾನತೇಂದ್ರನುದಯಿಸಲಿರೆ ಶು
ದ್ಧೋದರದೊಳವಧಿಯಿಂದ
ಱಿದಾದರದಿಂ ಬೆಸಸೆ ಧನದನಂ ದಿವಿಜೇಂದ್ರಂ ೧೨೬

ಮ || ನಿಜಪುಣ್ಯೋದಯದಿಂದಮಿಲ್ಲಿಗೊಗೆತರ್ಪಂ ಸ್ವರ್ಗದಿಂ ದೇವನಿಂ
ತ್ರಿಜಗತ್ಪೂಜ್ಯನೆನುತ್ತುಮತ್ಯವಿರಳಂ ಕೊರ್ವಿರ್ದ ಭವ್ಯೋತ್ಸವ
ಧ್ವಜದಂಡಂಗಳ ಪಾಂಗು ತೋಱೆ ಕಱೆದಂ ರಾಜಾಂಗಣಂ ರಂಜಿಪಂ
ತಜರೇಂದ್ರಂ ಬೆಸವೇೞೆ ಯಕ್ಷಪತಿ ರತ್ನಾಸಾರಮಂ ಸಾರಮಂ ೧೨೭

ವ || ಅಂತಾನತೇಂದ್ರನಾನತಕಳ್ವದಿಂದಾ ದಂಪತಿಗಳ ಗರ್ಭಕ್ಕವತರಿಸುವ ಮುನ್ನಂ ಅಱುದಿಂಗಳ್ವರಮಶ್ವಸೇನಮಹಾರಾಜನ ರಾಜಾಂಗಣದೊಳ್‌ಪ್ರತಿದಿನಂ ಮೂಱುಕೋಟಿ ಯುಮರೆಯಂ ವಸುಧಾರೆಯಂ ಸುರಿಯುತ್ತುಂ ತನ್ನ ಧನದತ್ವಮಂ ನನ್ನಿಮಾಡುತ್ತುಮಿರೆ

ಕಂ || ಆಹ್ರಾಸಗುಣಗಣೇಂದ್ರಂ
ಶ್ರೀ ಹ್ರೀ ಧೃತಿಕೀರ್ತಿ ಬುದ್ಧಿಲಕ್ಷ್ಮಿಗಳಂ ದುಃ
ಖಹ್ರಸ್ವಕಾರಿಸುಖಗಾಂ
ಗಹ್ರದಕರಿ ಬೆಸಸಿದಂ ನಿಜಪ್ರಮದೆಯರಂ ೧೨೮

ವ || ಅಂತು ಪದ್ಮಾದಿ ಪದ್ಮಾಕರಂಗಳೊಳ್‌ಮನಂಗೊಳಿಸಿರ್ಪ ದೇವಿಯರುಮಂರುಚಕಾಚಳಂಗಳ ನಾನಾ ನೂತ್ನರತ್ನರಚಿತ ರುಚಿರ ಪ್ರಾಸಾದಂಗಳೊಳಿರ್ಪನೇಕ ನಾಮಾಂಕಿತದಿಗಂಗನೆಯರುಮಂ ಬ್ರಹ್ಮದತ್ತಾಮಹಾದೇವಿಯ ಗರ್ಭಸಂಶೋಧನಮಂದಿವ್ಯಾಷಧಾನ್ನಪಾನಾದಿ ದ್ರವ್ಯಂಗಳಿಂ ಮಾಡಲುಂ ವಿವಿಧ ವಿನೋದಂಗಳಂ ತೋಱಿ ಯಲಸುಗೆಯನಾಗಲೀಯದಂತು ಮನಮಱಿದೋಲಗಿಸಲುಂ ಸೌಧರ್ಮೇಂದ್ರಂ ಧರ್ಮಾನುರಾಗದಿಂ ನಿಯಮಿಸಿ ಕಳಿಪೆ

ಕಂ || ಅಮರ್ದುಣ್ಬನ್ನಂ ಮುಡಿವುದು
ನಮೇರು ಮಂದಾರ ಪಾರಿಜಾತಂ ಪದಪಿಂ
ದಮರ್ದುಡುವುದು ದೇವಾಂಗಂ
ರಮಣಿಗೆ ದೇವಿಯರೆ ನಡೆವ ಪರಿಚಾರಕಿಯರ್‌೧೨೯

ಅಳವಡೆ ಸೋಗೆಯ ಕೆಯ್ಯೊಳ್‌
ವಿಳಾಸಲಾಸ್ಯಮನೆ ಕಲ್ತ ಹಂಸೆಗಳೆನೆ ಕ
ಣ್ಗೊಳಿಸಿರ್ದುವು ಶಿಖಿನಿಭಕುಂ
ತಳಭರೆಗಮರ್ದಮರಿಯಿಕ್ಕೆ ಚಮರೀರುಹಮಂ ೧೩೦

ವೃತ್ತಕುಚೆಗಮರಿ ಮುತ್ತಿನ
ಸತ್ತಿಗೆಯಂ ತಳೆಯೆ ರಾಹುಚಂದ್ರನ ಕೆಳೆಯಂ
ಬಿತ್ತರಿಸುತ್ತೊಡನಿರ್ದಪ
ನುತ್ತಮಜಿನಮಹಿಮೆಯಿಂದಮೆನೆ ಮುಡಿ ಮೆಱೆಗುಂ ೧೩೧

ತಾಮರೆಯ ದಳಮನಿೞಿಸುವ
ಕೋಮಳೆಯಲರ್ಗಣ್ಣೊಳೆಚ್ಚಿದಳ್‌ಕಾಡಿಗೆಯಂ
ಕಾಮಾಂಧಕಾರಮಂ ಕುಡು
ವಾ ಮದನನ ಬಾಣಮೆನಿಸೆ ಸುರವಧುವೊರ್ವಳ್ ೧೩೨

ಕುರುಳಂ ತಿರ್ದಿದೊಡಲ್ಲಿಯ
ಪರಿಮಳಕಳೆ ಮುತ್ತೆ ಮತ್ತೆ ಕುರುಳೆಂದಳಿಯಂ
ಸುರವಧು ಕೆಲಕ್ಕೆ ತೊಲಗಿಸೆ
ಮೊರೆದಳಿ ಬಿಡೆ ಬೆದಱೆ ನಗಿಸಿದಳ್‌ಕೆಳದಿಯರಂ ೧೩೩

ತೋರ್ಪೊಡೆ ನಿಜಮುಖಕೀ ಮಣಿ
ದರ್ಪಣಮೆಣೆಯೆಂದು ಪೇೞ್ವಿ ತೆಱದಿಂದೊರ್ವಳ್‌
ದರ್ಪಣಮಂ ಪಿಡಿದೆಸೆದಳ್‌
ದರ್ಪಕವಧುವೆನಿಪ ವಧುಗೆ ಸುರವಧು ಮುದದಿಂ ೧೩೪

ಅಳವಡುವಂತಿರೆ ಕಪ್ಪುರ
ವಳಿಕಿನ ತಗಡಿಂದೆ ಮಾಡಿದಂತಿರೆ ಕಂಪಂ
ತಳೆದ ಬಿಳಿಯೆಲೆಯನಂಬುಜ
ದಳದಿಂ ಪುದಿವಂತೆ ಪಿಡಿದು ಸುರಸತಿಯೆಸೆದಳ್‌೧೩೫

ಉರದೊಳ್‌ಕುಚಮಂಡಳದವೊ
ಲಿರೆ ಹರಿಗೆಯನಮರೆ ಪಿಡಿದು ತೀಕ್ಷ್ಣತೆಯಂ ಕೇ
ಕರದಂತೆ ತಳೆದ ಬಾಳಂ
ಧರಿಯಿಸಿ ದೇವಿಯರೆ ಸತಿಗೆ ಮೆಯ್ಗಾಪಾದರ್‌೧೩೬

ಎಡೆಗಿಱಿದಿರ್ಪುದುಮುಂದಂ
ಗಡಮೆಂಬೀ ನುಡಿಯುಮಲ್ಲಿ ಮೊಲೆಯೊಳೆ ಪೆಱತಾ
ವೆಡೆಯೊಳಮಿಲ್ಲೆನೆ ನಿಯಮಿಸೆ
ಪಡಿಯಱೆಕೆಯನಾಂತರಮರಿಯರ್‌ತತ್ಸಭೆಯೊಳ್‌೧೩೭

ಅಮೃತಾತ್ಮಿಕೆಯರ್‌ತಾಮೆನಿ
ಪಮರಿಯರೆ ಕರಾಸ್ಯರೂಪಸಂಭವಸುಲಯಾ
ಶ್ರಮವಾದ್ಯಗೀತನೃತ್ಯಮು
ಮಮರ್ದಂ ಕುಡೆ ಸತಿಯ ಮನಮನೊಸೆಯಿಸುತಿರ್ದರ್‌೧೩೮

ಮನಮೊಸೆದು ಗರ್ಭಸಂಶೋ
ಧನಮಂ ದಿವ್ಯಾನ್ನಪಾನಭೂಷಣಶಯ್ಯಾ
ಸನ ವಸನ ವಿಲೇಪನಮಾ
ಲ್ಯನಿಚಯದಿಂ ಸತಿಗೆ ಮಾಡಿದರ್ ಸುರಸತಿಯರ್‌೧೩೯

ಮ || ಪ್ರಿಯದಿಂ ದಿವ್ಯಸುಸೇವ್ಯವಸುತತಿಯಿಂದಂ ಗರ್ಭಸಂಶೋಧನ
ಕ್ರಿಯೆಯಿಂ ದೇವಿಯರಿಂಗೆ ಚಂದ್ರಕಳೆಯಂ ನುಣ್ಪಿಟ್ಟರೆಂಬಂತೆ ಕಾಂ
ತಿಯನೋರಂತೆಸೆವಂತು ತಾಳ್ದಿ ವಿಶದಶ್ರೀಬ್ರಹ್ಮದತ್ತಾಲತಾಂ
ಗಿಯದೇಂ ಲೀಲೆಯಿನಶ್ವಸೇನನೃಪನಂ ತಾಂ ಸೋಲಿಸಲ್‌ಸಾಲ್ತಳೋ ೧೪೦

ವ || ಅಂತು ದೇವಕಾಂತೆಯರಾ ಕಾಂತೆಗೆ ಪೊವುದೆವಸಂ ಪಲತೆಱದ ಪರಿಚರ್ಯೆಯನಾಶ್ಚರ್ಯಮಾಗೆ ಮಾಡುತ್ತುಮಿರ್ಪುದು [ಮೊಂದು]ದೆವಸಮಬ್ಜಿನಿಯಂತೆ ರಜಸ್ವತಿ[ಲೆ]ಯುಂ, ಕಾಮೋದ್ದಾಮಪ್ರಮೋದಸಂಪಾದಿಲಕ್ಷ್ಮೀಮತಿಯುಂ ಮಹಾಸುತಸಸ್ಯೋತ್ಪತ್ತಿ ನಿಮಿತ್ತಧಾರಿಣಿಯುಮಖಿಳಬಂಧುಜನಸುಖಕಾರಿಣಿಯು ಮಾಗಿರ್ದು

ಕಂ || ತೀರ್ಥಜಳಂಗಳಿನೆಸಗೆ ಚ
ತುರ್ಥಸ್ನಾನಮನಗಣ್ಯಲಾವಣ್ಯಮದ
ಪ್ರಾರ್ಥಿತಮೆಸೆದಿರೆ ಜಂಗಮ
ತೀರ್ಥಂ ತಾನೆನಿಸಿ ಜಿನಜನನಿ ಸೊಗಯಿಸಿದಳ್‌೧೪೧

ವ || ತದನಂತರಂ

ಕಂ || ಲಾವಣ್ಯಾಂಬುಧಿಯ ತರಂ
ಗಾವಳಿಯೆನೆ ದುಗುಲಮಮಳಮುಕ್ತಾವಳಿ ಮು
ಕ್ತಾವಳಿಯೆನೆ ಜಳನಿಧಿಯಧಿ
ದೇವತೆಯೆನೆ ದೇವಿ ಕರಮೆ ಕಣ್ಗೆಸೆದಿರ್ದಳ್‌೧೪೨

ಚೇತಃಪ್ರಸಾದಸಂಪಾ
ದಾತಿಶಯವಿಚಿತ್ರಶೋಭೆಯಿಂ ಪ್ರಸಾದ
ಖ್ಯಾತಿವಡೆದ ಶಶಿಕಾಂತಕೃ
ತಾತುಳಶಯ್ಯಾನಿವಾಸದೊಳ್‌ಸವಿಳಾಸಂ ೧೪೩

ಮ || ಇರೆ ಹಂಸಾತುಳತೂಳತಳ್ಪದೊಳ್‌ಶ್ರೀರಾಜಹಂಸಂ ಕಳಾ
ಧರನುದ್ಯದ್ರುಚಿರಾಂಬರಂ ಕುಮುದಕಾಂತಾಪಾಂಗೆ ಹೇಮಾಂಬುಜಾ
ಸ್ಯೆ ರತೀಪ್ರಿಯಚಂದ್ರಿಕಾಧವಳಹಾರೋದಾರೆ ಕೋಕಸ್ತನೋ
ದ್ಧುರಭಾರಾನತೆ ಸೂೞ್ಗೆವಂದಳಧಿಕಾನಂದಂ ಪ್ರಿಯಂಗಪ್ಪಿನಂ ೧೪೪

ವ || ಅಂತಾ ಕಾಮಿನಿ ಕಾಮನದೇವನ ಕೋಲ ಸೂೞುಂ ತನ್ನ ಸೂೞುಮೊಂದೆಯೆಂಬಂದದಿಂ ಬಗೆಯನುಗಿಬಗಿಮಾಡುತ್ತುಂ ಸೂೞ್ಗೆವಂದ ನಲ್ಲಳಂ ಸುಖಮಂ ತಳ್ಕಯ್ಸುವಂತೆ ತೆಗೆದು ತಳ್ಕಯಿಸಿ ಸಕಂಟಕತನುಗಳಾಗಿಯುಮತನುರಾಗರಾಜ್ಯಸಂಪತ್ತಿಗೆ ನಿಷ್ಕಂಟಕ ವೃತ್ತಿಯನೀಯುತ್ತುಂ ಸಂಭೋಗಸಾಗರವೇಳೆಯುಂ ವೇಳೆಯಱೆಯದ ಲೀಲೆಗಳಿಗನುಕೂಲಮಾಗೆ ಸುಖಸುಪ್ತರಾಗಿರೆ

ಕಂ || ಉನ್ನತನತಿಶಯಭದ್ರಗು
ಣಂ ನಿನಗುದಯಿಸುವ ತನಯನೆಂದಱಿಪುವುದಂ
ಪುನ್ನಾಗಮನೈರಾವತ
ಸನ್ನಿಭಮಂ ಸ್ವಪ್ನದಲ್ಲಿ ಗಜಗತಿ ಕಂಡಳ್‌೧೪೫

ಪಣೆಯೊಳ್‌ಪತ್ತಿದ ಪಂಕಂ
ಪೊಣರ್ಕೆಗಿಲ್ಲಿತರವೃಷಭಮೆನಿಸುವ ವೃಷಭಾ
ಗ್ರಣಿಯಂ ಸಮಗ್ರ ಕಾಂತಾ
ಗ್ರಣಿ ಕಂಡಳ್‌ರಾಗಮಾಗೆ ಬೆಳಗಪ್ಪಾಗಳ್‌೧೪೬

ಕರಿಶಿರದ ಮುತ್ತು ಪತ್ತಿರೆ
ಚರಣನಖಂಗಳೊಳೆ ವಜ್ರದಿಂ ವೆಜ್ಜಮನೊ
ಪ್ಪಿರೆ ಮಾಡುವವರನಿೞಿಸುವ
ಹರಿಯಂ ಹರಿಸದೊಳೆ ಹರಿಕಟೀತಟಿ ಕಂಡಳ್‌೧೪೭

ಕನಕಾಬ್ಜಂ ಕನಕಾಚಳ
ಮೆನೆ ಮಿಸಿಸುವ ಕರಿಗಳಿಂದ್ರರೆನೆ ತನ್ನಯ ಮ
ಜ್ಜನಮೆ ಜಿನಜನನಸವನಮಿ
ದೆನೆ ಸೊಗಯಿಪ ಸಿರಿಯ ನಯನಮಂ ಶ್ರೀ ಕಂಡಳ್‌೧೪೮

ಗುಣಯುತನಖಿಳಶಿರೋಭೂ
ಷಣನುದಯಿಪ ತನುಜನೆಂದು ಸೂಚಿಸುವುದನೀ
ಕ್ಷಣ ಮಧುಪಸುಖದ ಪರಿಮಳ
ಗುಣದಾಮೋದ್ಧಾಮಧಾಮಮಂ ವಧು ಕಂಡಳ್‌೧೪೯

ನಿಜಮುಖಚಂದ್ರದ್ಯುತಿಯಿಂ
ದೆ ಜಲಕ್ಕೆನೆ ತೊಳಗಿ ಬೆಳಗುವಂಗಜ ಭೂಭೈ
ದ್ವಿಜಯಮನೊದವಿಸುತುದಯಿಪ
ರಜನೀಕರನಂ ಚಕೋರಲೋಚನೆ ಕಂಡಳ್‌೧೫೦

ಪರಮಜಿನಹಂಸಜನನಾ
ಕರೋದಯಾದ್ರೀಂದ್ರಲಕ್ಷ್ಮಿಯೆನಿಸಿದ ತನ್ನಂ
ಪರಿಪೂಜಿಸಲ್ಕೆ ದಶಶತ
ಕರಮಂ ತಳೆದಂತಿರೆಸೆವ ರವಿಯಂ ಕಂಡಳ್‌೧೫೧

ಸಂಭವಿಸಿದೊಡೀಯಂದದ
ಕುಂಭಾಮೃತದಿಂದೆ ನಿಜಸುತಂಗಭಿಷವಮಂ
ಜಂಭಾರಿ ಮಾೞ್ಕುಮೆನಿಸುವ
ಕುಂಭಯುಗಮನಮಳಕುಂಭನಿಭಕುಚೆ ಕಂಡಳ್‌೧೫೨

ಅನಿಮಿಷಪತಿಪೂಜ್ಯನೆನಿ
ಪ್ಪ ನಂದನಂ ಕಣ್ಗೆ ಸುಖಮನೀ ತೆಱದಿಂದಂ
ಜನಿಯಿಸುಗುಮೆನಿಸಿ ಸೊಗಯಿಸು
ವನಿಮಿಷಯುಗಮಂ ಝಷೋಪಮೇಕ್ಷಣೆ ಕಂಡಳ್‌೧೫೩

ಜಿನರಾಜಹಂಸನೊಪ್ಪಿ
ರ್ಪ ನಿಜೋದರಮಾನಸಕ್ಕೆ ಸಮನೆನಿಸುವುದಂ
ವನಜಾಕರಮಂ ಕಂಡಳ್‌
ವನಜಾನನೆ ರಾಜಹಂಸಸಂಶೋಭಿತಮಂ ೧೫೪

ಶುಂಭದ್ಗುಣಮಣಿನಿಳಯಂ
ಗಂಭೀರಂ ವಿಪುಳವಿಮಳಹೃದಯನೆನಿಪ್ಪಂ
ಸಂಭವಿಪನೆಂದು ಸೂಚಿಸು
ವಂಭೋಧಿಯನೆಸೆವ ಕಂಬುಕಂಧರೆ ಕಂಡಳ್‌೧೫೫

ಭಾಸುರಮಣಿಕೃತ ಶಕ್ರಶ
ರಾಸನಂ ಮೇರುಶೈಳಶೋಭಾವಹ ಸಿಂ
ಹಾಸನಮಂ ಜಿನವಿಭವವಿ
ಭಾಸನಮಂ ಜಿತಸರೋರುಹಾನನೆ ಕಂಡಳ್‌೧೫೬

ಮಾನಸಮೇತಂ ಸತ್ಪಥ
ಯಾನಯುತಂ ಸಾಶ್ರಿತೋನ್ನತಿಪ್ರದನಪ್ಪಂ
ಮಾನಿನಿ ನಿನಗೆಂದಱಿಪುವ
ಮಾನಿತಮಂ ಸುರವಿಮಾನಮಂ ಸತಿ ಕಂಡಳ್‌೧೫೭

ಭೋಗೀಶಫಣಾಮಣಿಗೃಹ
ಮಾಗಿರ್ಪ ತನೂಜನಪ್ಪನೆಂದಱಿಪುವುದಂ
ಭೋಗೀಂದ್ರರುಂದ್ರಗೃಹಮಂ
ಭೋಗಿನಿಭಪ್ರಚುರಕಬರಿ ಕಂಡಳ್‌ಮುದದಿಂ ೧೫೮

ಜ್ಞಾನಪ್ರದೀಪಜನ್ಮ
ಸ್ಥಾನಂ ದುರಿತೇಂಧನಪ್ರಣಾಶಕರಂ ತೇ
ಜೋನಿಧಿ ಜಿನನೆಂದಱಿಪುವ
ತಾನಿತನಿರ್ಧೂಮ ದಹನನಂ ವಧು ಕಂಡಳ್‌೧೫೯

ವೃತ್ತಾತಿಶಯ ಗುಣಂ ಭುವ
ನೋತ್ತಂಸಂ ಸುಪ್ರಸನ್ನಮುಖನುದಯಿಸುಗುಂ
ಮತ್ತೆನಿಸದೆಂದು ಸೂಚಿಸು
ವುತ್ತಮ ಮಣಿಗಣಮನಮಳ ಗುಣಮಣಿ ಕಂಡಳ್‌೧೬೦

ವ || ಮತ್ತಮಮಳಕಮಳಧವಳವೃಷಭಂ ನಿಜಮುಖಕಮಳಮಂ ಪುಗುವುದುಮಂ ಕಾಣ್ಬುದುಮಾ ಕಾಂತೆಗೆ ತನ್ನಗಣ್ಯಪುಣ್ಯದೇವತೆಯ ತೊಟ್ಟ ಷೋಡಶಾಭರಣದಂತೆ ಮನಂಗೊಳಿಸಿ ದೃಶ್ಯಮಾದ ಷೋಡಶಸ್ವಪ್ನಂಗಳನಿತುಂ ಸತ್ಯಸ್ವಪ್ನಂಗಳೆಂದು ಕನ್ನಡಿಸಲ್‌ಕನಸಿನೊಳ್‌ತೋರಿದ ದಿನಕರನೆ ನೆನಸಿನೊಳ್‌ತೋರ್ಪಂತುದಯಶಿಖರಿಶೇಖರನಾಗಿಯಾ ಜಿನಜನನಿಗಿಂದ್ರಾಣಿ ಪಿಡಿದ ರನ್ನದ ಕನ್ನಡಿಯಂತೆ ತೊಳಗಿ ಬೆಳಗುತಿರ್ಪುದುಮಾ ಪ್ರಸ್ತಾವದೊಳ್‌ಪ್ರಶಸ್ತಗುಣವಿಸ್ತಾರಕನೆನಿಸಿರ್ದ ಪುಣ್ಯಪಾಠಕಂ ಬಂದು

ಶಾ || ದಾನೇಭಂ ವೃಷಭಂ ಗಜಾರಿ ಸಿರಿಧಾಮಂ ಚಂದ್ರಮಂ ಭಾಸ್ಕರಂ
ಮೀನಂ ಪೂರ್ಣಘಟಂ ಕೊಳಂ ಜಳಧಿ ನಾನಾರತ್ನಸಿಂಹಾಸನಂ
ಶ್ರೀನಾಕೇಂದ್ರವಿಮಾನಮುದ್ಘಫಣಿವಾಸಂ ಮಣಿವ್ರಾತಮ
ನ್ಯೂನಜ್ವಾಳಿಯೆನಿಪ್ಪಿವಂ ಕನಸಿನೊಳ್‌ಕಂಡರ್ಗೆ ಸನ್ಮಂಗಳಂ ೧೬೧

ವ || ಎಂದು ತನ್ನ ಕಂಡಕನಸುಗಳಂ ಪರಿವಿಡಿಯಿಂದೋದೆ ತತ್ಫಳಮಂ ಮಂಗಳ ಪಾಠಕಂ ಸಾಧಾರಣೋಕ್ತಿಯಿಂ ವ್ಯಕ್ತಂಮಾೞ್ಪದುಮದಂ ಕೇಳ್ದು ಮೆಚ್ಚುತ್ತುಂ ಪುಳಕದೊಡನೆೞ್ಚತ್ತು ವಿಶೇಷೋಕ್ತಿಯಿಂ ಕೇಳಲೆಂದು ಸಮುತ್ಸುಕಚಿತ್ತೆ ನಿರ್ವರ್ತಿತ ನಿತ್ಯಮಂಗಳಕ್ರಿಯೆಯುಂ ಕೃತಾಳಂಕಾರಕ್ರಿಯೆಯುಮಾಗಿ ಮನೋರಾಗದಿಂ ಮನೋವಲ್ಲಭನಲ್ಲಿಗೆ ವಂದು ಮನಕ್ಕೆ ವಂದಿರ್ದ ಕನಸುಗಳನನುಕ್ರಮದಿಂ ಸೂಕ್ತಿಕರ್ಣಾವತಂಸಂಗವತಂಸಂ ಮಾೞ್ಪುದುಮನಲ್ಪ ಹರ್ಷಮಂ ಸ್ವಪ್ನಾಧ್ಯಾಯ ಪ್ರಗಲ್ಭಂ ತಳೆದು ತದನಂತರಂ

ಕಂ || ಷೋಡಶ ಭಾವನೆಯಿಂದಂ
ಕೂಡಿಯೆ ತೀರ್ಥಕರ ಪುಣ್ಯಮಂ ನೆರಪಿದಳಾ
ಚೂಡಾಮಣಿ ನಿನಗನಘಂ
ಕ್ರೋಡೀಕೃತಸೌಖ್ಯನುದಯಿಕುಂ ತೀರ್ಥಕರಂ ೧೬೨

ಎಂದು ಶುಭಸ್ವಪ್ನಫಳಮ
ನಿಂದೀವರವದನೆಗಱಿಪೆ ಪುಳಕಾಂಕುರಮಾ
ನಂದಾಶ್ರುತೋಯದಿಂ ಬಳೆ
ದಂದದೆ ಬಳೆಯಿತ್ತು ಸತಿಯ ತನುವಲ್ಲರಿಯೊಳ್‌೧೬೩

ಸುತಮಾತ್ರಂ ಜನಿಯಿಕುಮೆನೆ
ಸತಿಯರ್ಗನುರಾಗಮುದಯಿಕುಂ ತ್ರೈಭುವನಾ
ರ್ಚಿತನುದಯಿಕುಮೆನೆ ಹರ್ಷಮ
ನತರ್ಕ್ಯಮಂ ತಳೆವುದೆಂಬುದೇನಚ್ಚರಿಯೇ ೧೬೪

ವ || ಅಂತು ಸಂತೋಷಪೀಯೂಷರಸತರಂಗಿತಾಂತರಂಗೆಯಾಗಿ ಮಗನ ಬರವಿಂಗೆ ಮನದೊಳೆ ಗುಡಿಗಟ್ಟಿ ನಿಜನಿವಾಸಕ್ಕೆವಂದು ಸುಖದಿಂದಿರ್ಪಿನಮತ್ತಲಾನ ತೇಂದ್ರನಾನತಕಲ್ಪದೊಳನಲ್ಪಸುಖಾಮೃತಮನನುಭವಿಸಿ ಬಂದು ವೈಶಾಖದ ಕೃಷ್ಣಪಕ್ಷದ ತದಿಗೆಯುಂ ವಿಶಾಖಾನಕ್ಷತ್ರಮುಂ ಪ್ರವರ್ತಿಸಿ

ಕಂ || ನಿರುಪಮಬೋಧಂ ಮತಿಯೊಳ್‌
ಪರಿಮಳಮಂಬುರುಹಗರ್ಭದೊಳ್‌ನೆಲಸುವವೋ
ಲರಸಿಯ ಗರ್ಭದೊಳರ್ಹ
ತ್ಪರಮೇಶಂ ನೆಲಸಿ ಮಹಿಮೆಯಂ ಬಳೆಯಿಸಿದಂ ೧೬೫

ವ || ಅದನಿಂದ್ರನವಧಿಬೋಧದಿಂದ ಮಱೆದು ಬಂದು

ಕಂ || ಶ್ರೀಜಿನರಾಜಂ ನೆಲಸೆ ಸ
ರೋಜಾಸ್ಯೆಯ ಗರ್ಭದಲ್ಲಿ ಚೈತ್ಯಾಲಯಮಂ
ಪೂಜಿಸುವಂತೆ ಶಚೀಪತಿ
ಪೂಜಿಸಿದನಗಣ್ಯಪುಣ್ಯೆಯಂ ಮಣಿಗಣದಿಂ ೧೬೬

ವ || ಅಂತಮರೇಂದ್ರನಾನಂದದಿಂ ಬಲವಂದು ಬೞಿಯಂ ಬ್ರಹ್ಮದತ್ತಾಮಹಾದೇವಿಯುಮನಶ್ವಸೇನಮಹಾರಾಜನುಮಂ ವಿಚಿತ್ರ ವಸ್ತ್ರಾಭರಣಸಮಾಜದಿಂ ಪೂಜಿಸಿ ಪೊಡೆವಟ್ಟು ಪೋದನನ್ನೆಗಮಿತ್ತಲ್‌

ಮ.ಸ್ರ || ಪ್ರಣುತ ಪ್ರದ್ಯೋತನದ್ಯೋತಿತ ಪೃಥುಗಗನಶ್ರೀಗಿಳಾಸ್ತುತ್ಯ ಚಿಂತಾ
ಮಣಿಭಾಸ್ವತ್ಕ್ಷೋಣಿಗುರ್ವಿಮತಸುರಕುಜಸಂಶೋಭಿತೇಂದ್ರಾಚಳಶ್ರೀ
ಗೆಣೆಯೆಂಬಂತೊಪ್ಪೆ ತನ್ನಂ ತಳೆದು ಜನನಿ ತೇಜೋಮಯಂ ಲೋಕಸಂರ
ಕ್ಷಣಪುಣ್ಯಂ ಮೈಮೆವೆತ್ತಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೧೬೭

ಗದ್ಯ

ಇದು ವಿದಿತ ವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾ ಸಾದಿತ ನಿರ್ಮಳಧರ್ಮವಿನುತ ವಿನೇಯಜನವನ ಜವನವಿಳಸಿತ ಕವಿಕುಳತಿಳಕ ಪ್ರಣೂತ ಪಾರ್ಶ್ವನಾಥ ಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್‌ಜಿನಾರ್ಭಕಗರ್ಭಾವತರಣ ಕಲ್ಯಾಣವರ್ಣನಂ ತ್ರಯೋದಶಾಶ್ವಾಸಂ