ಕಂ || ಶ್ರೀನವರತ್ನಾಸಾರಮ
ನೂನಂ ನವಮಾಸಮಪ್ಪಿನಂ ಕಱೆಯೆ ವಿನೇ
ಯಾನಂದಂ ತಾಯುದರದೊ
ಳಾನತಸುರನಿರ್ದನೆಸೆದು ಕವಿಕುಳತಿಳಕಂ ೧

ಬೇರೂಱೆತು ನಿಜರುಚಿಯೆನೆ
ಬೇರೂಱುವ ವಕ್ರಶಕ್ರಧನುವೆನೆ ರತ್ನಾ
ಸಾರಮನೆ ಕೂರ್ತು ಕಱೆಯೆ ಕು
ಬೇರಂ ದಿವಸಕ್ಕೆ ಮೂಱುಕೋಟಿಯುಮರೆಯುಂ ೨

ಮುನ್ನಮೆಯಱುದಿಂಗಳ್ವರೆ
ಗನ್ನಾಕಸ್ತ್ರೀಯರಿಸುವೆಸಮನೆಸಪರ್ ದೇ
ವನ್ನೆಲಸೆ ಗರ್ಭದೊಳ್ ತಾ
ಯ್ಗಿನ್ನವರೆಸಗುವ ಸಪರ್ಯೆಯಂ ಪವಣಿಪರಾರ್‌೩

ವ || ಅಂತು ನಿಮಿಷಮಪ್ಪೊಡಂ ಜಿನಾಂಬಿಕೆಗಳಸುಗೆಯನಾಗಲೀಯದನೇಕೆ ವಿನೋದಂಗಳಿಂ ಪ್ರಮೋದಮನಾಪಾದಿಸುತ್ತುಂ ಗರ್ಭಪೋಷಕಾರಿಯುಂ ಮನಸ್ತೋಷಕಾರಿ ಯುಮಪ್ಪ ಕಲ್ಪಕುಜಸಂಜನಿತ ಸಮಸ್ತ ವಸ್ತುವಿನೋಲಗಿಸುತ್ತುಂ ಬೆಸಕೆಯ್ಯುತ್ತುಮಿರೆ

ಕಂ || ಆ ವನಿತೆಗೆ ಮಣ್ಣಂ ಮೆ
ಲ್ವೀ ವಾಂಛೆ ಪುಟ್ಟಿತಿಲ್ಲ ಗರ್ಭದೊಳಿರ್ಪಾ
ದೇವಂಗವನೀರಾಜ್ಯದ
ಸೇವನೆಯೊಳ್ ವಾಂಛೆಯಿಲ್ಲದುದನಱಿಪುವವೋಲ್‌೪

ಅಯನಿಳಯಂ ತ್ರೈಳೋಕ್ಯದ
ಬಯಕೆಯನವಯವದೆ ತೀರ್ಚಲಾರ್ಪಂ ತಾಯ್ಗಾ
ಬಯಕೆಯನಿರಲೀವನೆಯೆನೆ
ಬಯಕೆಗಳಾ ಗರ್ಭವತಿಗೆ ಪುಟ್ಟವೆ ಪಿರಿದುಂ ೫

ಮಳಿನತೆಯಂ ತಳೆದೊಡೆ ನಿ
ರ್ಮಳಚರಿತಂ ತಮ್ಮನೊಲ್ದು ಸೇವಿಸನೆಂದು
ತ್ಪಳನೇತ್ರೆಯ ಕುಚಕಳಶಂ
ಗಳಱಿದ ತೆಱದಿಂದೆ ತಳೆಯದೆಸೆದುವು ಕರ್ಪಂ ೬

ಆ ರಮಣಿಯ ನಾಭಿಯ ಗಂ
ಭೀರತ್ವಂ ಕೆಟ್ಟುದಿಲ್ಲದಂತೆ ದಲತಿಗಂ
ಭೀರಗುಣರಿರ್ದೆಡೆಗೆ ಗಂ
ಭೀರತೆ ಪಿರಿದಪ್ಪುದಲ್ಲದೆ ಕೆಟ್ಟಪುದೇ ೭

ಆ ತ್ರಿಭುವನನಾಥಂ ಬೋಧ
ತ್ರೈತಯ ಸುಸಮಗ್ರನೆಂದು ಸೂಚಿಪ ತೆಱದಿಂ
ನೇತ್ರರಮಣೀಯಮೆನಿಸಿ ವ
ಳಿತ್ರಯಮೆಸೆದಿರ್ದುವೞಿಯದಾ ಕೋಮಳೆಯಾ ೮

ನಿರ್ದೋಷಂ ತಾಯುದರದೊ
ಳಿರ್ದುಮುಪದ್ರವಮನೇನುಮಂ ಮಾಡನೆ ತಾ
ನಿರ್ದವನಿಗುಪದ್ರವಮಂ
ಪೊರ್ದಿಸದ ಪರೋಪಕಾರಿಗದು ಪಿರಿದಾಯ್ತೇ ೯

ಬೆಳ್ಳೊಗಮ್ಮಂ ಮಿಗೆ ಚಂದ್ರಮ
ನೊಳ್ ಮೂಡುವ ಚೆಲ್ವನಾಂತು ಕಾಂತನು ಮನಮಂ
ಬೆಳ್ಮಾಡಿ ಮನಸಿಜನ ಕೂ
ರ್ಬಾಳ್ಮೊದಲೆನಿಸಿರ್ದುದಿಂದುವೆದನೆಯ ವದನಂ ೧೦

ವಿಧುವದನೆಯ ನಿಜಕಾಮಿನಿ
ಯುಧರಾಮೃತಸೇವೆಯಿಂದ ತಣಿದು ಗುಣಾಂಭೋ
ನಿಧಿಯಶ್ವಸೇನನುರ್ವರೆ
ಗಧಿನಾಯಕನೊಪ್ಪಿದಂ ಚಕೋರದ ತೆಱದಿಂ ೧೧

ವ || ಅಂತು ಮನೋನಯನವಲ್ಲಭನ ಹರ್ಷಗರ್ಭನರ್ಮವಚನಸಂದರ್ಭದೊಡನೆ ಗರ್ಭಂ ಬಳೆದು

ಕಂ || ನಿರುತಂ ಗ್ರಹಮುಚಿತಗೃಹದೊ
ಳಿರೆ ಪುಷ್ಯದ ಕೃಷ್ಣಪಕ್ಷದೇಕಾದಶಿಯೊಳ್
ಬೆರಸಿರೆ ಶುಭವಾರಂ ಶುಭ
ಕರಣಂ ಶುಭಯೋಗಮೆಸೆವ ಶುಭನಕ್ಷತ್ರಂ ೧೨

ಆ ಸುದತಿಗೆ ಸುಖದಿಂ ನವ
ಮಾಸಂ ನೆಱೆದೆಸೆಯೆ ಪುಣ್ಯಸಂಚಯಜನ್ಮಾ
ವಾಸಂ ಪದಪಂಕಜನತ
ವಾಸವಮಣಿಮಕುಟದೇಶ ನಯಮಣಿಕೋಶಂ

ಚಂ || ಸುರಿಯೆ ಸುರತ್ನವೃಷ್ಟಿ ಸುರವಾರವಧೂಜನಮತ್ತಲಿತ್ತಲುಂ
ಪರಿಯೆ ನೆಗೞ್ತೆವೆತ್ತ ಪುರದುರ್ವರೆ ಪೂಮೞೆಯೊಂದುಕಂಪಿನಿಂ
ಪೊರೆಯೆ ಮದಾಳಿಗಳ್ ಮೊರೆಯೆ ಮಂಗಳತೂರ್ಯರವಂ ದಿಶಾಳಿಯೊಳ್
ಪರೆಯೆ ಬುಧವ್ರಜಂ ನೆರೆಯ ಸಂತಸದಿಂ ಪರಮೇಷ್ಠಿ ಪುಟ್ಟಿದಂ ೧೪

ಕಂ || ಕುಸುಮಾಸಾರದೊಳೊಂದಿದ
ವಸುಧಾರೆ ತದೀಯಗಂಧದಿಂದಂ ಪುದಿದೇಂ
ಪೊಸಯಿಸಿತೊ ಪೊನ್ಗೆ ಕಂಪುಂ
ಪಸರಿಸಿತೆಂಬಿದೆನೆ ಜಿನನ ಜನನೋತ್ಸವದೊಳ್ ೧೫

ವ || ಆ ಶುಭಮುಹೂರ್ತದೊಳ್

ಕಂ || ನಿಮಿರ್ದಮರ್ದು ದಕ್ಷಿಣಾವ
ರ್ತಮನಾಂತೆಸೆದತ್ತು ವಹ್ನಿ ತೇಜೋಮಯರೀ
ಕ್ರಮದಿಂ ಪ್ರದಕ್ಷಿಣಂಗೊ
ಳ್ಗುಮರ್ಹನಂ ಭುವನಪತಿಗಳೆಂದಱಿಪುವವೋಲ್ ೧೬

ಕಂ || ಧಾರಿಣಿ ಗಗನಂ ನೀರಂ
ನೀರಜಮೆನಿಸಿತ್ತು ಸಾರಸೌರಭಕಳಿತಂ
ಮಾರುತನೆಸಗಿತ್ತು ಜಿನಂ
ನೀರಜನುರ್ವರೆಗೆ ಸುಖದನೆಂದಱೆಪುವವೋಲ್ ೧೭

ಮ || ಕರುಮಾಡಂಗಳುಮೊಳ್ಪುವೆತ್ತ ಪರಿಯಂ ಪ್ರಾಸಾದಮುಂ ಚಿತ್ರಿತಾಂ
ಬರ ನೇತ್ರೋಚಿತ ಚಿನ್ನದೊಳ್ಗುಡಿಗಳಿಂ ರತ್ನಸ್ಫುರತ್ತೋರಣೋ
ತ್ಕರದಿಂ ಕುಂಕುಮಚಂದನದ್ರವ ಘನಾರ್ದ್ರೀಭೂತಗೇಹಾಂಗಣಂ
ತರದಿಂ ತಳ್ತಿರೆ ರತ್ನದೊಂದು ಕಡೆಯಿಂದೊಪ್ಪಿತ್ತು ತತ್ಪತ್ತನಂ ೧೮

ಕಂ || ಬಿಡುಮುತ್ತಿನ ಕಡೆಯಿಂದಂ
ಬಿಡೆ ಬೆಳಗುವ ರತ್ನದೀಪರುಚಿಯಿಂದಂ ಪಾ
ಲ್ಗಡಲ ತಡಿಯಂದದಿಂ ಚೆ
ಲ್ವಿಡಿದ ಸುಧಾವಹಗೃಹಾಂಗಣಂ ಕಣ್ಗೊಳಿಕುಂ ೧೯

ಮ || ಸುಮನೋರತ್ನಸುವರ್ಣವೃಷ್ಟಿಯೊದವಿಂ ರಾಜಾಂಗಣಂ ಸಾರಗಂ
ಧಮಯ ರತ್ನಮಯಂ ಸುವರ್ಣಮಯಮಾಯ್ತಿಂದ್ರಾಂಗನಾನೀಕದು
ತ್ಕ್ರಮವಿನ್ಯಾಸದೊಳೊಂದಿ ಪಲ್ಲವಮಯಂ ಭಾಸ್ವನ್ನಖದ್ಯೋತಿಸಂ
ಗಮದಿಂ ಪುಷ್ಪಮಯಂ ಮುಖೇಂದುರುಚಿಯಿಂ
ಪೂರ್ಣೇಂದುರೋಚಿರ್ಮಯಂ ೨೦

ವ || ಅಂತು ಪುರಭವನಮುಂ ರಾಜಭವನಮುಮುತ್ಸವೋದ್ಭವ ನವೀನ ಶೋಭಾ ಸುಭಗಮಾಗೀರ್ಪುದುಮತ್ತಲಾ ಪ್ರಸ್ತಾವದೊಳ್

ಕಂ || ಎಱಗದೊಡಂ ಮಕುಟದ ತನಿ
ಎಱಕಂ ತನಿಯರಲಮೞೆ ಸುರೋರ್ವೀರುಹದೊಳ್
ನೆಱೆ ತನಿಯಾಸನಕಂಪಂ
ಪೊಱಮಟ್ಟಱಿಪಿದವು ಸುರರ್ಗೆ ಜಿನನುದ್ಭವಮಂ ೨೧

ಹರಿಘಂಟಾಭೇರೀಶಂ
ಖರವಂ ಜ್ಯೋತಿಷ್ಕಕಲ್ಪಭವಭವನ ವ್ಯಂ
ತರಭವನದಲ್ಲಿ ಭೋಂಕೆನೆ
ಪರಿವಿಡಿಯಿಂ ನೆಗೆದುವಮರಲೋಕಾಶ್ಚರ್ಯಂ ೨೨

ವ || ಅಂತು ತಂತಮ್ಮ ಲೋಕದೊಳಾಕಸ್ಮಿಕಂ ನೆಗೞ್ದನೇಕಶುಭಚಿಹ್ನಂಗಳಿಂ ಶುಭಚಿಹ್ನನುದಯಮಂ ತ್ರಿಸಧಪತಿಗಳಱಿದುಮವಧಿಯಂ ಪ್ರಯೋಗಿಸಿ ನಿಶ್ಚಿಯಿಸಿ ನಿಜಾಸನಂಗಳಿನಿೞಿದಾ ತ್ರಿಳೋಕಪತಿಗೆ ಮೂಱುಸೂೞ್ ಮನದೆಱಕದಿನೆಱಗಿ ಪೊಡೆವಟ್ಟು

ಉ || ಭಾವನರುತ್ಸಾವಾಕಳಿತಭಾವಯುತರ್‌ಸುಖಭೂಮಿಭೌಮರು
ಜ್ಜೀವಿತಹರ್ಷರಪ್ರಮಿತ ಕಳ್ಪಜರುತ್ಪಳನಾಥ ಮುಖ್ಯದೇ
ವಾವಳಿಯಿಂತು ಕಾಯರುಚಿ ತೀವಿರೆ ಬಂದುದದೊಂದು ಲೀಲೇಯಿಂ ೨೩

ಕಂ || ಆರ್ಮಹಿಮೆವೆತ್ತೊಡಂ ಸೌ
ಧರ್ಮನೆ ಜಿನರಾಜಪೂಜೆಯೊಳ್ ಮೊದಲಿಗನಂ
ತರ್ಮೂಖತೆ ಭಕ್ತಿಭವ್ಯತೆ
ನೂರ್ಮಡಿಯುೞೆ ದಿಂದ್ರರಿಂದೆ ತನಗೆನಿಪ್ಪೊಳ್ಪಿಂ ೨೪

ವ || ತನ್ನನೆ ಮುಖ್ಯನೆಂ ಮಾಡಿ ಬರಲ್ವೇಡಿರ್ದ ಸುರರೆಲ್ಲರುಮಂ ಕೂಡಿಕೊಂಡು

ಮ || ಜಿನಜನ್ಮಾಭಿಷವೋತ್ಸವಕ್ಕೆ ನೆಗೆದಾನಂದಾಶ್ರುವಿಂ ಮಾಡಿ ಮ
ಜ್ಜನಮಂ ಸತ್ಪುಳಕಂಗಳಿಂ ಪಸದನಂಗೊಂಡಿಂದ್ರನಿಂದ್ರಾಣಿ ದೇ
ವನಿಕಾಯಂ ಬೆರಸಂಬರಂ ಮಣಿಮರೀಚಿವ್ರಾತದಿಂ ಬಣ್ಣವಿ
ಟ್ಟ ನವೀನಾಂಬರದಂದದಿಂದೆಸೆಯೆ ಬಂದಂ ಪೊಣ್ಮೆ ದೇವಾನಕಂ ೨೫

ವ || ಅಂತು ದೇವಾವಳಿ ನಭೋವಳಯ ದಿಶಾವಳಯಮಂ ವಳಯಾದಿ ಭೂಷಣ ಮಣಿಮರೀಚಿಗಳಿನಳಂಕರಿಸುತ್ತುಂ ಬಂದು

ಮ || ಬಹಿರುದ್ಯಾನದ ಬಳ್ಳಿಮಾವಲರ್ದ ಮಲ್ಲೀ ಮಾಳತೀವಲ್ಲಿ ಚಿ
ತ್ತಹರಂ ಶೋಭಿಸೆ ಗಂಗೆ ಸಂಗತ ಸುಮೀನಾಪಾಂಗೆ ಕಣ್ಗೊಪ್ಪೆ ನೂ
ತ್ನಹಟದ್ರತ್ನಗೃಹಾಳಿಯೊಪ್ಪಿರೆ ಸುರೇಶರ್‌ಬಣ್ಣಿಸುತ್ತಿರ್ದರಾ
ಗ್ರಹದಿಂ ವಿಶ್ರುತ ವಾರಣಾಸಿಯನುದಂಚದ್ರತ್ನವಾರಾಶಿಯಂ ೨೬

ವ || ಅಂತತಿ ಮನೋಹರಮಪ್ಪ ಬಹಿಃಪುರಾಂತಃಪುರಶ್ರೀಯಂ ಸಹಸ್ರಾಕ್ಷತ್ವಂ ಸಫಳಮಾದತ್ತೆನುತ್ತಮೞಿವಟ್ಟು ನಿರೀಕ್ಷಿಸುತ್ತುಮಶ್ವಸೇನಮಹಾರಾಜರಾಜಾಂಗಣದೊಳಿರ್ಪುದುಂ ಪುಳೋಮಸುತೆ ತಿರೋಹಿತದೇಹಿಯಾಗಿ

ಮ || ಮಿಗೆ ರಾಗಕ್ಕಡೆಯಾಗಿ ತನ್ನ ಬಗೆಯಂ ಶ್ರೀಬ್ರಹ್ಮದತ್ತಾಪ್ರಸೂ
ತಿಗೃಹಂ ಶೋಣಮಣಿಪ್ರಭಾಪರಿವೃತಂ ಪೋಲ್ತೊಪ್ಪೆ ಪೊಕ್ಕಿಂದ್ರಾಕಾಂ
ತೆ ಗಡಂ ಮುಂ ಪೊಡೆವಟ್ಟು ಮೂಮೆ ಬಲವಂದಾಯಿರ್ವರಂ ನೋಡಿದಳ್ ೨೭

ವ || ಅಂತು ನಿಜಕುವಳಯದಳಧವಳ ವಿಳೋಕನಕಾಂತಿ ಕ್ಷೀರಧಾರಾಸಹಸ್ರದಿಂದಭಿಷವಣಮಂ ತ್ರಿಭುವನಚೂಡಾಮಣಿಗೆ ಮಾಡಿ ತಣಿಯದೆ ಜಿನನಿಮಂ ಜಿನಜನನಿಯುಮಂ ಪೊಗೞ್ದು ಬೞಿಯಂ ಭುವನಾಂಬಿಕೆಗೆ ಮಾಯಾನಿದ್ರೆಯನಿತ್ತು

ಕಂ || ಶ್ರೀಯುತ ಜಿನಮತಕಿತರಂ
ಮಾಯಾಮತಮೆಂದು ಸುರರ್ಗೆ ಸೂಚಿಪ ತೆಱದಿಂ
ಮಾಯಾಶಿಶುವಂ ಶಚಿ ತರ
ಳಾಯತಲೋಚನೆಯ ಮುಂದೆ ತಂದಿಟ್ಟೊಂದಂ ೨೮

ಬಾಳಾರ್ಕನನೈಂದ್ರೀದಿ
ಗ್ಬಾಲೆವೊಲಿಂದ್ರಾಣಿ ಮುಗಿದ ಕರಸರಸಿಜಮು
ನ್ಮೀಳಿಸೆ ತಳೆದಳ್ ತನ್ನ ಸ
ಲೀವವದನಹೃದಯವನದಂತನುರಕ್ತಂ ೨೯

ಕಲ್ಪಲತೆ ಪುಣ್ಯಫಲಮನ
ನಲ್ಪಮನತಿವಿಪುಳಪುಳಕಕಳಿಕಾತತಿಗಳ್
ತಳ್ಪೊಯ್ಯೆ ತಳೆದ ತೆಱದೊಂ
ದೊಳ್ಪಂ ಪಡೆಯುತ್ತುಮಮರಿಯರ್ಕಳ್ ಬಗೆಯೊಳ್ ೩೦

ಕಳಮಂಗಳ ಗೀತಂಗಳ
ನಳವಡೆ ಪಾಡುತ್ತುಮಾಡುತುಂ ಮುದದಿಂ ಮಂ
ಗಳವಸ್ತುವನಾಂತು ದಿಶಾ
ಲಲನೆಯರೊಡವರೆ ವಿಳಾಸದಿಂ ನಡೆತಂದಳ್ ೩೧

ನಡೆತಂದು ಜಿನಾರ್ಭಕನಂ
ಕುಡೆ ನೀಡಿದ ತೋಳ್ಗೆ ಚಂದನದ್ರವದಿಂ ಕಂ
ಪಡರೆ ನಿಜಾಂಕಾಸನದೊಳ್
ಬಿಡೌಜನಿರಿಸಿಟ್ಟು ಭಕ್ತಿಯಿಂ ಪೊಡೆವಟ್ಟಂ ೩೨

ನೀಲೀರಾಗತೆಯಂ ಹರಿ
ನೀಲಚ್ಛವಿ ಪಡೆಯ ಹರಿಗಮೈರಾವತಶುಂ
ಡಾಳಕ್ಕಂ ಬಳಸಿದ ವಿಬು
ಧಾಳಿಗಮಿಂದ್ರಾಣಿಗಂ ಜಿನಾರ್ಭಕನೆಸೆದಂ ೩೩

ಜಿನನಾಥನ ತನುರುಚಿಯಂ
ಜನಲೇಖಾಶ್ರೀಯನಾಂತು ನೋೞ್ಪಮರೀಲೋ
ಚನಕನನುಭೂತಸುಖಮಂ
ಜನಿಯಿಸಿದುದು ಭಂಜಿತಾಂಜನಂ ಜನವಿನುತಂ ೩೪

ವ || ಅಂತು ಪೂರ್ವಾದ್ರಿಯಂತಿರ್ದ ದಿವಿಜದಂತಿಯ ಪೂರ್ವಾಸನದೊಳಿರ್ದು ನಾಕಿ ನಾಯಕಂ ಜಿನನಾಯಕನಂ ನಿಜಾಂಕಮನೇಱಸಿಕೊಂಡು

ಕಂ || ಸುರಗಿರಿಗೆ ಸುರವ್ರಜಮಂ
ಸುರಪತಿ ಪೋಗೆಂದು ಸನ್ನೆಗೆಯ್ದೆತ್ತಿದ ದೋಃ
ಪರಿಘಂ ಕೈವಂದೊಪ್ಪುವ
ಸುರತರುಶಾಖಾವಿಳಾಸಮಂ ಪಾಳಿಸುಗುಂ ೩೫

ಸ್ರ || ಬಾಳಾರ್ಕಂರ್ಗ್ಯಮಂ ನಿರ್ಮಳನಿಜಮಕುಟಾನರ್ಘ್ಯಮಾಣಿಕ್ಯರೋಚಿ
ರ್ಮಾಳಾಕಾಶ್ಮೀರರಾಗೋಚ್ಚಳಿತಬಹಳಬಾಷ್ಪಾಂಬುವಿಂದಿತ್ತು ಮುನ್ನಂ
ತ್ರೈಳೋಕ್ಯಸ್ವಾಮಿಯಂ ಪ್ರೇಮದೆ ಜಯನಿನದಂ ನಂದ ವರ್ಧಸ್ವನಾದಂ
ಮೂಲೋಕಕ್ಕೆಯ್ದೆ ಧೀಂಕಿಟ್ಟೊದವಿರೆ ವಿಬುಧರ್‌ಬಣ್ಣಿಸುತ್ತಿರ್ದರಾಗಳ್‌೩೬

ವ || ಆಗಳೈರಾವತವಾರಣಕ್ಕೆ ನಿಜವಾರಣಮಂ ಪಕ್ಕುಮಾಡಿ

ಕಂ || ತಾರಾಚಳಶಿಖರದೊಳಂ
ತಾರಾಪತಿಯುದಯಿಸಿರ್ದನೆನೆ ಬೆಳ್ಗೊಡೆಯಂ
ರಾರಾಜಿಸೆ ಸುರಕರಿಚೂ
ಡಾರತ್ನಜಿನಂಗೆ ಪಿಡಿದನೀಶಾನೇಂದ್ರಂ ೩೭

ವಿಮಳಿನ ದುಗ್ಧಚ್ಛಟಿಯಿ
ಕ್ರಮದಿಂದಂ ಸವನಸಮಯದೊಳ್ ಪುದಿದಪುದೆಂ
ದಮರ್ದಿರೆ ಪೇೞ್ವಂತೆ ಸನ
ತ್ಕುಮಾರಮಾಹೇಂದ್ರರಿಕ್ಕಿದರ್‌ಚಮರಜಮಂ ೩೮

ಇತರೇಂದ್ರರುಮಿತರನಿಜೋ
ಚಿತಪರಿಚಾರಕತೆಯೊಳ್‌ಪ್ರವರ್ತಿಸುತಿರೆ ಸಂ
ಗತ ಗೀತ ವಾದ್ಯ ನೃತ್ಯ
ತ್ರಿತಯಂ ಬಗೆಗೊಳಿಸೆ ಭರತಮತಪರಿಣತರಿಂ ೩೯

ಮ. ಸ್ರ || ದಿವಿಜೇಭಕ್ಕಾಯ್ತು ಮೂವತ್ತೆರಡುಮೊಗೆಮವೊಂದೊಂದಱೊಳ್‌ದಂತಮೆಂಟೆಂ
ಟವಱೊಳ್‌ನೀರೇಜಷಂಡಂ ಸೊಗಯಿಸುಗುಮವೊಂದೊಂದಱೊಳ್‌ಸಂ
ಭವಿಕುಂ ಮೂವತ್ತೆರೞ್ಪೂವವಱೆಸಳವು ಮೂವತ್ತೆರೞ್‌ನರ್ತಿಪರ್‌ಮ
ತ್ತವಱೊಳ್‌ದ್ವಾತ್ರಿಂಶದಿಂದ್ರಾಂಗನೆಯರೆಸಳೊಳೋರೊಂದಱೊಳ್‌ಲೀಲೆಯಿಂದಂ ೪೦

ಕಂ || ನಿಟ್ಟಯಿಪೊಡೆ ಮೆಲ್ಲಡಿಗಿವು
ಬೆಟ್ಟಿದುವಂಬುರುಹಮೆನುತುಮಿೞಿಕೆಯ್ದವನಿಂ
ಮುಟ್ಟೆವಣಮೆಂಬ ತೆಱದಿಂ
ಮೆಟ್ಟದೆ ಸುರಸತಿಯರಾಡಿದರ್‌ಸರಸಿಜದೊಳ್‌೪೧

ಭವಜಲಧಿಗೆ ಕಟ್ಟಿದ ಸೇ
ತುವೆನಿಸೆ ಮಣಿಕುಟ್ಟಿಮಂ ಸುರಾಚಳಮಂ ಮ
ಟ್ಟುವಿನಂ ನೀಳ್ದಿರೆ ಪರಮೋ
ತ್ಸವದಿಂ ನಡೆದುದು ನಭೋಂಗಣದೊಳಮರಗಣಂ ೪೨

ಉ || ಅಚ್ಚರಿ ಪುಟ್ಟೆಯಚ್ಚರಸಿಯರ್ಕಳೆ ನರ್ತಿಸೆ ದೇವಕಾಂತೆಯರ್‌
ನಚ್ಚಿನ ವೀಣೆಯಂ ಮಿಡಿದು ತಮ್ಮ ಕೊರಲ್ಗಿದಱೆಂಚರಂ ಕರಂ
ತುಚ್ಚಮೆನಿಪ್ಪುದಂ ಪ್ರಕಟಿಪಂತಿರೆ ಪಾಡೆ ನಿಳಿಂಪವಾದಕರ್
ಮೆಚ್ಚಿಸುವಂತು ಬಾಜಿಸೆ ಸುರಾಗಮನಾಗಿಸಿತಾ ಸುರಾಗಮಂ ೪೩

ವ || ಅಂತು ಸುರಾಗಮಂ ಸುರಾಗಮನೆಯ್ದುತ್ತುಂ ಸುರಾಗಮನೆಯ್ದುವುದುಂ

ಮ.ಸ್ರ || ಜಿನಚೈತ್ಯಾವಾಸದುದ್ಯತ್ಕಳಶಮೆ ಕಳಶಂ ದರ್ಪಣಂ ದರ್ಪಣಂ ಕಾಂ
ಚನಚಂಚತ್ತೋರಣಂ ತೋರಣಮೆನೆ ಜಿನನಂ ಸ್ಮೇರಮಂದಾರ ಭಾಸ್ವ
ದ್ಭನವೇಣೀಭಾರಭೃಂಗೀಕುಳಕಳನಿನದಂ ಗೇಯಮೆಂದೆಂಬಿನಂ ಮೇ
ರುನಗಂ ಶ್ರೀಲೋಕಚೂಡಾಮಣಿಯನಿದಿರ್ಗೊಳಲ್ಕಿರ್ಪವೋಲೊಪ್ಪಿತಾಗಳ್‌೪೪

ಕಂ || ತರು ಸುರತರು ಪಾಷಾಣಂ
ಸುರುಚಿರ ನವರತ್ನಮಿರ್ಪ ಮೃಗನಿಕರಂ ಭಾ
ಸುರಸುರರೆಂದೊಡೆ ಮಂದರ
ಗಿರೀಂದ್ರದೊಳ್‌ದೊರೆಯೆನಿಪ್ಪ ಕುಳಗಿರಿಯೊಳವೇ ೪೫

ಮಂದರಮಂ ಬಲವರ್ಪುದ
ನಿಂದಱಿದೆಂ ಚಂದ್ರಸೂರ್ಯ ತಾರಾಳಿ ಜಗ
ದ್ವಂದಿತ ಜಿನಮಜ್ಜನಪೀ
ಠಂ ದಿಟಮೆನಿಪೊಂದುಮಹಿಮೆಗೆಡೆಯಾದುದಱಿಂ ೪೬

ಮಂದರಮನ್ಯಕುಳಾದ್ರಿಗ
ಳಿಂದುನ್ನತಮಾದುದಾಗಿ ಮಜ್ಜನಪೀಠಂ
ಸಂದ ಗುಣಾಂಭೋನಿಧಿಗೆ ಜಿ
ನೇಂದುಗೆ ಬೆಸಕೆಯ್ವವಂಗೆ ತುಂಗತೆಯರಿದೇ ೪೭

ಒರ್ಮೆಯುಮವನತರಭಿಮತ
ಶರ್ಮಪ್ರದ ಪುಣ್ಯಹರ್ಮ್ಯಮೆನಿಸಿರೆ ಬೊಮ್ಮಂ
ನಿರ್ಮಿಸಿದ ನಾಲ್ಕುನೆಲೆಯ ಚ
ಚತುರ್ಮುಖ ಜಿನಭವನಮೆನಿಸಿ ಸುರಗಿರಿಯೆಸೆಗುಂ ೪೮

ಸಮುಚಿತನಂದನ ಜಿನಭವ
ನಮನಮನೀಕ್ಷಿಸಿ ಸಮಸ್ತ ಸುರಲೋಕದೊಳಂ
ಕಮನೀಯತರ ವಿಮಾನಂ
ವಿಮಾನಮೆನಿಸಿರ್ಕುಮೆಂದೊಡಿನ್ನೇವೊಗೞ್ವೆಂ ೪೯

ಉ || ಶ್ರೀನುತಭದ್ರಶಾಳವನನಂದನ ಸೌಮನಸೋರುಪಾಂಡುಕೋ
ದ್ಯಾನವನಪ್ರಸೂನಫಳಸಂತತಿ ಸಾನುಮಣಿಪ್ರತಾನಮಂ
ತಾ ನಗರಾಜನಂ ದಿವಿಜರಾಜನೆ ಪೂಜಿಸಿದಂತೆ ಚಂದ್ರತಾ
ರಾನಿವಹಂ ನಿವಾಳಿಸುವ ದೀಪಮದಾಗೆಸೆದತ್ತದೆತ್ತಲುಂ ೫೦