ಮ || ಜಿನಪೂಜಾಷ್ಪವಿಧಾರ್ಚನಾ ವಿವಿಧ ದಿವ್ಯಾಮೋದದೊಳ್‌ಸೌಖ್ಯಭಾ
ಜನದೇವೀಜನಗೀತದೊಳ್‌ವನಲತಾಂತಾಮೋದಮಂ ಮತ್ತಭೃಂ
ಗನಿನಾದಂಗಳನೊಯ್ದು ಕೂಡಿ ಸುರರೊಳ್‌ಸಂಪ್ರೀತಿಯಂ ನೀಡಿ ಮೆ
ಲ್ಲನೆ ತೀಡಿತ್ತಘಮೇಘಚಾಳನಸುಶೀಳಂ ಶಕ್ರಶೈಳಾನಿಳಂ ೫೧

ವ || ಅಂತು ಬಂದ ಮಂದಾನಿಳನ ಸೋಂಕು ಪುಳಕಾಂಕುರಮಂ ಕೊನರಿಸೆ

ಕಂ || ನಂದನದೀ ನಾಲ್ಕಱ ನಾ
ಲ್ಕುಂದೆಸೆಗಳ ನಾಲ್ಕುನಾಲ್ಕುಜಿನಮಂದಿರದಿಂ
ವಂದನೆಗೆ ಯೋಗ್ಯಮೆನುತುಂ
ಮಂದರಮಂ ಮೂಮೆ ಬಲಹರಂ ಬಲವಂದರಂ ೫೨

ಮುಡಿ ಮುಗಿಲೆನೆ ಕಡೆಗಳ್ಗಳ್‌
ಕುಡುಮಿಂಚೆನೆ ಭೂಷಣಾಂಶು ಸುರಧನುವೆನೆ ಚೆ
ಲ್ವಿಡಿದ ಘನಾಗಮಲಕ್ಷ್ಮಿವೊ
ಲಡರ್ದರ್‌ಸುರನಗನಿತಂಬಮಂ ಸುರಸತಿಯರ್‌೫೩

ಮುಡಿಯಿಂ ತಮಾಳಲತೆ ಕೇ
ಸಡಿಯಿಂದಮಶೋಕಲತೆ ಸುಕೋಮಳತನುವಿಂ
ನಡೆಗೊಂಡ ಕಲ್ಪಲತೆಯೆನೆ
ನಡೆದರ್‌ವನವೀಥಿಯಲ್ಲಿ ಸುರಕಾಮಿನಿಯರ್‌೫೪

ಲತೆಯೊಳ್ ತನುಲತೆ ಶಾಖೆಯೊ
ಳತಿಶಯ ಭುಜಶಾಖೆ ಫಳದೊಳಧರಂ ಪುಷ್ಪ
ಪ್ರತತಿಯೊಳಮರಿಯರಧರ
ಸ್ಮಿತಮೊಂದಿರೆ ಪಿಕಶುಕಾಳಿಯಱಿಯವೆ ಬನದೊಳ್‌೫೫

ಅಮರದ್ರುಮಸಂತಾನಕ
ನಮೇರು ಮಂದಾರ ಪಾರಿಜಾತದ ಮುಗುಳಿಂ
ದಮೆ ಸಮೆದಕ್ಕಟ ಕಟಿಸೂ
ತ್ರ ಮಕುಟ ಕೇಯೂರ ಹಾರದಮರಿಯರೆಸೆದರ್‌೫೬

ಅಮರ್ದಿರೆ ಪೊಸಮಲ್ಲಿಗೆ ಮುಗು
ಳ ಮಕುಟ ಕೇಯೂರ ಮುದ್ರಿಕಾಕಂಕಣ ಹಾ
ರಮನೊಸೆದು ಸಮೆದು ತಳೆದೇಂ
ಸುಮನಃಪ್ರಿಯರಾದರಿಂತು ಸುರಕಾಮಿನಿಯರ್‌೫೭

ಮುಗುಳುಂ ಕುಸುಮರಜಮುಮಮ
ರಗಜದ ಮಸ್ತಕದೊಳಮರವಲ್ಲರಿಯಿಂದ
ಲ್ಲುಗೆ ವನವಧುವಕ್ಷತಮಂ
ಮಿಗೆ ಪಿಷ್ಟಾತಕಮನಮರೆ ತಳಿದವೊಲೆಸೆಗುಂ ೫೮

ಭರದಿಂ ಜ್ಯೋತಿಷ್ಕರ್‌ಬಲ
ವರೆ ಸೊಗಯಿಪ್ಪುದೊಂದೆ ಮೆಯ್ಯೊಳೆಲ್ಲಾ ಮೆಯ್ಯುಂ
ಸುರಗಿರಿ ಸೊಗಯಿಸಿದುದು ಬಲ
ವರೆ ಭಾವನ ಭೌಮಕಳ್ಪಜಾಮರರೊಲವಿಂ ೫೯

ವ || ಅಂತು ಚತುರ್ನಿಕಾಯಾಮರರಮರಗಿರಿಯಂ ಬಲವರೆ

ಮ || ಶೋಭಾಧಾಮಾಮರೇಂದ್ರಸ್ತುತಜಿನನಿರೆ ಕುಂಭಾಗ್ರದೊಳ್‌ಭದ್ರಲಕ್ಷ್ಮಂ
ಶ್ರೀಭದ್ರಾಶಾಳಮಂ ನಂದನಮನಮರದೃಙ್ನಂದನಂ ರುಂದ್ರಕೈಳಾ
ಸಾಭ ಶ್ರೀಮಂದಿರಂ ಸೌಮನಸಮನೆನಸುಂ ಪಾಂಡುಕೋದ್ಯಾನಮಂ ದೇ
ವೇಭಂ ಶ್ರೀಪಾಂಡುರಂ ಮುನ್ನಡರ್ದಮರಕುಭೃತ್ಕಂದರಕ್ಕೆಯ್ದಿತಾಗಳ್‌೬೦

ವ || ಅಂತು ಬಂದು ಪಾಂಡುಕವನದ ಪೂರ್ವೋತ್ತರ ದಿಶಾಭಾಗದೊಳ್‌ಪರಭಾಗಂಬಡೆದು

ಕಂ || ಶತಯೋಜನವಿಷ್ಕಂಭಂ
ವಿತಾನಪರಿಶೋಭಿ ಪಂಚಶತಯೋಜನವಿ
ಸ್ತ್‌ಋತಮಷ್ಟಯೋಜನೋಚ್ಛ್ರಯ
ಮತುಳವಿಶಿಷ್ಟಾಷ್ಟಮಂಗಳೋನ್ನತನಿಳಯಂ ೬೧

ಕಳಧೌತದ ಕಣಿ ಬೆಳ್ದಿಂ
ಗಳ ಬೆಳಗೆಯ್ಯೆನಿಸಿ ಬೆಳ್ಪನೊಳಕೊಂಡು ಮನಂ
ಗೊಳಿಸಿರ್ದುದರ್ಧಚಂದ್ರನ
ವಿಳಾಸಮಂ ತಳೆದು ಪಾಂಡುಕಂ ಶಶಿವಿಶದಂ ೬೨

ರುಚಿರಮಣಿರುಚಿಗಳಿಂ
ರ್ಧಚಂದ್ರಮಂಡಳಕಮಾಯ್ತು ಚಿರಪರಿವೇಷಂ
ಪ್ರಚುರತರಮೆಂಬಿನಂ ಕ
ಣ್ಗೆ ಚಿತ್ರಮಂ ಪಡೆದು ಪಾಂಡುಕಂ ಸೊಗಯಿಸುಗುಂ ೬೩

ತೊಳಗುತ್ತಿರ್ದುದು ಗಂಗಾ
ಜಳ ಹೃದಯದ ನಡುವೆ ವಿಕಚಕನಕಾಂಭೋಜಂ
ತೊಳಗುವ ತೆಱದಿಂ ಪಾಂಡುಕ
ಶಿಳಾತಳದ ಮಧ್ಯದಲ್ಲಿ ಮೃಗಪತಿಪೀಠಂ ೬೪

ಅದಱೆಂದಂ ನೇರ್ಗಿಱೆಯೆನಿ
ಸಿದುವೆರಡುಂ ದೆಸೆಯೊಳಭವಸವನೋತ್ಸವಮಂ
ತ್ರಿದಶಾಧಿಪರಿರ್ದೆಸಗುವ
ಸದಮಳಮಣಿವಿಷ್ಟರಂಗಳೆರಡೆಸೆದಿರ್ಕುಂ ೬೫

ದಿಟ್ಟಿಗೆ ದೇವಾಂಗದ ಮೇ
ಲ್ಕಟ್ಟುಂ ಕಂಭೆಯದ ಕಂಬೆಗಟ್ಟುಂ ಚೆಲ್ವಂ
ನೆಟ್ಟನೆ ಕುಡೆ ಮಂಡಪಮಳ
ವಟ್ಟುದು ಲಕ್ಷ್ಮಿಯ ವಿವಾಹಗೇಹದ ತೆಱದಿಂ ೬೬

ವ || ಅಂತು ಮನಂಗೊಂಡೆಸೆವ ಪಾಂಡುಕಶಿಲಾತಳದ ಮೇಲೆ ಲೀಲಾವಾಸಮಾಗೆ ವಾಸವಂ ಮಂಡಪಮಂ ವಿರಚಿಸಿ ತನ್ಮಧ್ಯನಿವಿಷ್ಟವಿಶಿಷ್ಟಸಿಂಹವಿಷ್ಟರದೊಳ್‌ಜಿನಾರ್ಭಕನಂ ಪೂರ್ವಾಭಿಮುಖಮಾಗಿರಿಸಿ

ಕಂ || ಶ್ರೀವರ್ಣಂ ಪದನಖತಾ
ರಾಪತಿರುಚಿಯಿಂದೆ ತೀವೆ ಹರಿ ಮಂತ್ರಮುಖಂ
ದೇವಾಧಿಪನಂ ಸ್ಥಾಪಿಸಿ
ಸೇವಾರತನನುಪಮಾರ್ಚನೆಯಿನರ್ಚಿಸಿದಂ ೬೭

ಧರಣೀರಮಣಿಯ ಮಕುಟದ
ಪರಿಶೋಭೆಯನಾಳ್ದ ಕನಕಗಿರಿಶಿಖರದೊಳೊ
ಯ್ದಿರಿಸಲೊಡಂ ಕೇವಣಿಸಿದ
ಹರಿನೀಳಾನರ್ಘ್ಯರತ್ನಮೆನಿಸಿದನನಘಂ ೬೮

ಮ || ಸುರತೂರ್ಯಂ ಮೊೞಗಾಗೆ ಮಂದರದರೀದೇಶಪ್ರದೇಶಸ್ಥಿತಂ
ಪರಮೇಶಂ ಹರಿನೀಳರತ್ನರುಚಿಮತ್ಕಾಯಂ ಘನಶ್ರೀಯಿನೊ
ಪ್ಪಿರೆ ತಾಳ್ದಿರ್ದು ಸಹಸ್ರಲೋಚನಮಯೂರೋತ್ಸಾಹಸಂಪಾದಕಂ
ಸುರಕಾಂತಾಸುಖಸಸ್ಯಮಂ ನೆಗಪಿದಂ ಸಾರಪ್ರಭಾಸಾರದಿಂ ೬೯

ವ || ಆಗಳ್‌ಧರ್ಮನಾಯಕರಪ್ಪ ಸೌಧರ್ಮೇಂದ್ರನು ಮೀಶಾನೇಂದ್ರನುಂ ಪರಿವಾರ ವಾಹನಾಯುಧವಧೂವಿಳಸಿತಾಶಾಪತಿಗಳನವರವರ ದಿಗ್ವಿಭಾಗದೊಳುಚಿತಪರತಿಪತ್ತಿ ಪುರಸ್ಸರಮಿರಿಸಿ ಯುೞಿದ ನಿಖಿಳನಿಳಿಂಪನಾಯಕವಿತಾನಮನುಚಿತಸ್ಥಾನಂಗಳೊಳಿರಿಸಿ ಜಿನಸಿಂಹ ಸಿಂಹಾಸನದಿರ್ಕೆಲದಲ್ಲಿ ದಕ್ಷಿಣೋತ್ತರದಿಗ್ಭಾಗದೊಳ್‌ಪರಭಾಗಂಬಡೆದಿರ್ದ ಭದ್ರಾಸನಂಗಳೊಳ್‌ಪಾಕಶಾಸನರಿರ್ವರುಮಿರ್ದೆಸೆಯೊಳಿರ್ದು ಜಿನಸವನೋದ್ಯುಕ್ತಚಿತ್ತರಾಗಿ

ಕಂ || ಕಳಕಂಠನಿನದದೊಡನಳಿ
ಗಳ ನಿನದಂ ನೆಗೆವ ತೆಱದೆ ಸುರಕರಹತಮಂ
ಗಳತೂರ್ಯರವದೊಡನೆ ಮಂ
ಗಳಗೀತರವಂಗಳೊಗೆದುವಮರೀಮುಖದಿಂ ೭೦

ಸುರಿವ ಸುಧಾವರ್ಷದ ಜಳ
ಧರಮೊಗೆವಂತೊಗೆದು ಗಗನತಳಮಂ ಕಾಳಾ
ಗುರುಧೂಪಧೂಮಮೇನಾ
ವರಿಸಿತೊ ನವಗಂಧಮಗ್ನಮಧುಕರನಿಕರಂ ೭೧

ಅಮಳಕಳಮಾಕ್ಷತಂಗಳ
ನಮೇರುವಿನ ಚಾರುಚಂದನಾಂಬುವ ಪೊಳೆಪಿಂ
ದಮೆ ನಿಜಮತಿವೋಲ್‌ಸನ್ಮಾ
ರ್ಗಮನೆಯ್ದಿದುದಿಂದ್ರನೆತ್ತಿದರ್ಘ್ಯೋದ್ಧರಣಂ ೭೨

ವ || ಅಲ್ಲಿಂ ಬೞಿಯಂ ಚೂತಪಲ್ಲವೋಲ್ಲಸಿತ ಚಂದನಚರ್ಚಾಚರ್ಚಿತ ವಿಕಚವಿಚಕಿಳಮಾಳತೀ ಮಾಲಾಲಂಕೃತ ಮಂಗಳಮಣಿದರ್ಪಣಪರಿಶೋಭಿತ ಸುರಸರಿದರ್ಣಃ ಪೂರ್ಣಮೆನಿಸಿರ್ದ

ಕಂ || ಪ್ರಣವೋಚಿತಕಳಶೋದ್ಧಾ
ರಣಮಂತ್ರದಿನಿಂದ್ರರಿರ್ವರುಂ ಕಳಶೋದ್ಧಾ
ರಣಮಂ ಸ್ವಚಿತ್ತವಸತಿಗೆ
ಮಣಿಕಳಶಮನಿಡುವ ತೆಱದೆ ಮಾಡಿದರೊಲವಿಂ ೭೩

ಮ || ಪುರುಹೂತರ್‌ಪರಿಚಾರಕಕ್ರಿಯೆಗೆ ಮಿಕ್ಕರ್‌ಪೂಣೆ ದೇವೀಪುರ
ಸ್ಸರಮಿಂದ್ರಾಂಗನೆ ಮಾಲೆ ಕನ್ನಡಿ ಸೊಡರ್‌ಭೃಂಗಾರಮಾರ್ದ್ರಾಕ್ಷತೋ
ತ್ಕರಮೆಂಬೂರ್ಜಿತಮಂಗಳೋಪಕರಣದ್ರವ್ಯಂಗಳಂ ನೀಡೆ ಭಾ
ಸ್ವರಭಾಗ್ಯಂಗೆ ಜಿನಾರ್ಭಕಂಗೆಸೆದುದಾ ಜನ್ಮಾಭಿಷೇಕೋತ್ಸವಂ ೭೪

ವ || ಅಂತು ಸೌಧರ್ಮೇಶಾನೇಶರಿರ್ವರುಂ ಭರ್ಮನಿರ್ಮಿತ ನಿರ್ಮಳಕಳಶಂಗಳ ನೆತ್ತಿಕೊಂಡು

ಶಾ || ನಾನಾತೀರ್ಥಜಳಕ್ಕೆ ಪಾವನತೆಯಂ ಮಾೞ್ಪಂತೆ ತೀಥೇಶ್ವರಂ
ಗಾ ನೈರ್ಮಲ್ಯಜಲಂಗಳಿಂ ಸವನಮಂ ಮುಂ ಮಾಡಿ ಪುಂಡ್ರೇಕ್ಷುದ
ಣ್ಡಾನೂನಾಮ್ರಸಂಗಳಿಂ ನಿರುಪಮಶ್ರೀನಾಳಿಕೇರಾಂಬುವಿಂ
ದಾನಂದಂ ಮಿಗೆ ಮಾಡಿದರ್‌ಸವನಮಂ ದೇವಂಗೆ ದೇವಾಧಿಪರ್‌೭೫

ಮ || ಎನಸುಂ ಕಬ್ಬಿನ ಬಿಲ್‌ಮನೋಭವನ ಬಹಾಖರ್ವಗರ್ವಂ ಮನೋ
ಜನ ಸಾಮ್ರಾಜ್ಯಫಳಂ ಘನಾಮ್ರಫಳಮೆಂದೇಂ ಸಾರಸರ್ವಸ್ವಮಂ
ಮುನಿಸಿಂದಿೞ್ಕುಳಿಗೊಂಡು ತಂದ ತೆಱದಿಂ ಕೆಯ್ಕೊಂಡ ಪುಂಡ್ರೇಕ್ಷುನೂ
ತನಚೂತೋರುರಸಂಗಳಿಂ ಸವನಮಂ ದೇವಂಗವರ್‌ಮಾಡಿದರ್ ೭೬

ಕಂ || ಗವ್ಯಂ ಕವಿಕುಳತಿಳಕನ
ಕಾವ್ಯದವೋಲ್‌ನವ್ಯಮನುಪಮಂ ಬುಧಜನಸಂ
ಸೇವ್ಯಮೆನಿಸಿರ್ದ ಘೃತದಿಂ
ಭವ್ಯೇಂದ್ರರ ವಿಭುಗೆ ಮಾಡಿದರ್‌ಮಜ್ಜನಮಂ ೭೭

ವ || ಅನಂತರಂ

ಕಂ || ಅಮೃತಶ್ರೀಪ್ರಿಯನಪ್ಪಂ
ಗಮೃತಾಂಬುಧಿಸಾರವಾರಿಯಿಂದಭಿಷವಮಂ
ಸಮೆವುದು ಕರಮುಚಿತಮನು
ತ್ತಮೃತಾಂಬುಧಿಗೋಳಿಗಟ್ಟಿ ನಿಂದು ನಿಳಿಂಪರ್‌೭೮

ತಳಮಷ್ಟಯೋಜನಂ ಮುಖ
ದಳವಿ ಸಮಂತೇಕಯೋಜನಕ್ರಮಮೆನಿಪು
ಜ್ವಳಶಾತಕುಂಭಕುಂಭಂ
ಗಳನುತ್ಸವದಿಂದೆ ತಳೆದು ತಮತಮಗಮರರ್‌೭೯

ಬಿಳಿಯಮುಗಿಲೆನಿಸೆ ಶಶಿಮಣಿ
ಕಳಶಂ ಸುರಗಿರಿಯಿನಮೃತಜಳಧಿವರಂ ನಿ
ರ್ಮಳರೋಳಿಗಟ್ಟಿ ನಿಂದೇಂ
ತೊಳಪ ಶರತ್ಕಾಲಲೀಲೆಯಂ ತಾಳ್ದಿದರೋ ೮೦

ಚಂ || ಮಣಿಮಕುಟಂಗಳುಂ ಮಣಿವಿನಿರ್ಮಿತನೂತ್ನಘಟಂಗಳುಂ ನಭೋಂ
ಗಣಮನೆ ತೀವಿತಂದಭಿಷವೋತ್ಸವದೊಳ್‌ಜಿನದೇಹದೀಪ್ತಿಯೀ
ಕ್ಷಣಸುಖಕಾರಿ ಬಾಳರವಿಕೋಟಿಯನೇೞಿಪುದೆಂದದಂ ಮರು
ದ್ಗಣಕೆ ನಿವೇದಿಪಂತು ದಿವಿಜಪ್ರವರಂ ಪಡೆದಂತವೆತ್ತಲುಂ ೮೧

ವ || ಅಂತು ಸೌಧರ್ಮಸುರಾಧಿಪನೀಶಾನಶಕ್ರನೆರಡುಂ ಪಕ್ಕದೊಳ್‌ಅಮರ್ಕೆವೆತ್ತ ಮರರಾಳಿಗಟ್ಟಿ ನಿಂದು

ಚಂ || ಪರಿದು ಪಯಃಪಯೋಧಿಗಮರಾವಳಿ ರತ್ನಘಟಂಗಳಿಂದಮಾ
ತುರದೊಳೆ ತೀವಿ ತಂದು ಕುಡೆ ತಾಳ್ದಿ ಪೊದೞ್ದ ಭುಜವ್ರಜಂಗಳಿಂ
ಸುರಗಿರಿಕಾಂತಕಳ್ಪತರುವಿಂಗೆಱೆವಂತು ಸುಧಾಂಬುವಂ ಸುರೇ
ಶ್ವರನನುರಾಗದಿಂ ಸುರಿಯೆ ರಂಜಿಸಿದತ್ತು ಜಿನೇಂದ್ರಮಜ್ಜನಂ ೮೨

ಕಂ || ನೀಳನಗಮೆನಿಸಿ ಕಾಂಚನ
ಶೈಳಂ ಮೊದಲಲ್ಲಿ ಜಿನತನುಪ್ರಭೆಯಿಂದಂ
ಕೈಳಾಸಮೆನಿಸಿತೊದವಿದ
ಪಾಲಿಂ ಜಿನಜನನಸವನಮೇನಚ್ಚರಿಯೋ ೮೩

ತಮತಮಗಾಗಳ್‌ತಂದೀ
ವಮೃತದಿನಮರೇಂದ್ರರೆಸಗೆ ಸವನಮನೆಸೆವ
ತ್ತಮರಾಪಗೆ ಪೊಱಪೊಣ್ಮುವ
ಹಿಮವದ್ಗಿರಿಯೆನಿಸಿ ಹೇಮಗಿರಿ ತತ್ಕ್ಷಣದೊಳ್‌೮೪

ಚೆಂಬೊನ್ನಘಟಂಗಳಿನಮೃ
ತಾಂಬುಧಿಯಂಬುಗಳನಾಂತು ಪವನಜವದಿನಾ
ದಂ ಬಿಡೆ ತಂದು ಮರುತ್ತುಗ
ಳೆಂಬಭಿದಾನಮನೆ ನನ್ನಿಮಾಡಿದರಮರರ್‌೮೫

ಘನಪಾಂಡುಕಮದೆ ಪಾಂಡುರ
ಮೆನಿಸಿದುದಿಲ್ಲುೞಿದ ಸೌಮನಸನಂದನಭೂ
ವಿನುತಶ್ರೀಭದ್ರಾಶಾ
ಸುನಂದನಮುಮೆನಿಸಿತಭವ ಸವನಾಮೃತದಿಂ ೮೬

ಕರಮೆಸೆದುದು ಜಿನಸೇವಾ
ಪರಿಣತ ಪುರುಹೂತಪುಣ್ಯವಾರಾಶಿಯೆ ಬಿ
ತ್ತರಿಪನ್ನಮೊಗೆವ ಸವನಾಂ
ಬುರಾಶಿಯೊಳ್‌ಯಾನಪಾತ್ರದಂತೆ ವಿಮಾನಂ ೮೭

ಚಂ || ಅನಿಮಿಷಕೋಟಿಯೀವಮೃತಪೂರ್ಣಸುವರ್ಣಘಟಪ್ರಕೋಟಿಯಂ
ಘನಭುಜಕೋಟಿಯಿಂ ತಳೆದು ಮಜ್ಜನಮಂ ಶಿಶುಗೀಯೆ ಶಕ್ರನಾ
ವನೊ ಶಿಶುಗಿಂತು ಮಾಡಿದವನೆಂಬರ ಮೌಢ್ಯಮನೋಡಿಸಿತ್ತು ಬಾ
ಳನ ನಱುಸುಯ್ಯ ಗಾಳಿಯೊಳೆ ಪಾಱುವ ದೇವವಿಮಾನಸಂಕುಳಂ ೮೮

ಕಂ || ಅಮೃತಾಂಬುಪೂರ್ಣಮಣಿಕಳ
ಶಮನನಿಮಿಷರೆನಿತನೀವರನಿತೆ ಭುಜಾದಂ
ಡಮನೆ ಪಡೆದಾಂತವಂ ಸ್ನಾ
ನಮನೆಸಗಿದರೇಕಚಿತ್ತದಿಂ ವಿಭುಗಿಂದ್ರರ್‌೮೯

ಚಂ || ತನು ಸವನಾಮೃತಾಂಭದೊಳೆ ತೇಂಕಿರೆ ನಿರ್ಜರನಾಮಮಂತದಂ
ಮನದೊಳೆ ಭಾವಿಸುತ್ತಿರೆ ಸುರವ್ರಜದೊಳ್‌ಸುಮನೋಭಿಧಾನಮಂ
ತನುಗತಮಾದುದೆಂದೆನಿಸಿದಾ ಜಿನಮಜ್ಜನವೀಕ್ಷಣೀಯಮಾ
ಜಿನತನು ಮಾಡಿದತ್ತನಿಮಿಷತ್ವದೊಳೞ್ತಿಯನೀಕ್ಷಿಪೇಂದ್ರರೊಳ್‌೯೦

ಉ || ಕ್ಷೀರಪಯೋಧಿ ರತ್ನಘಟಕೋಟಿಗಳಂ ಸುರಕೋಟಿ ತೀವೆ ನಿ
ರ್ನೀರಮದಾಗೆ ತಂದೊಡಮನಿಂದ್ಯ ಜಿನಾಭಿಷವೈಕಯೋಗ್ಯವಿ
ಸ್ತಾರಮನಾಂತೆನೆಂಬತುಳರಾಗರಸಾಮೃತದಿಂದೆ ಮತ್ತೆ ತಾಂ
ಪೂರಿಪುದಲ್ಲದಂದು ಜಲಮೆಲ್ಲಿಯಂದೆಂದೆನಿಸಿತ್ತು ಮಜ್ಜನಂ ೯೧

ಕಂ || ಅಮೃತದಿನರ್ಹನ್ನಾಗನ
ನಮರೇಂದ್ರಂ ಮುದದೆ ಮಜ್ಜನಂಬುಗಿಸಿ ದಿಶಾ
ಸಮುದಯನಾಗಂಗಳನೆ
ಯ್ದೆ ಮಜ್ಜನಂಬುಗಿಸಿದಂ ಯಶಸ್ಸುಧೆಯಿಂದಂ ೯೨

ವ || ಅಂತು ನಿರಂತರಪ್ರವರ್ಧಮಾನಾನೂನಸುಧಾಪ್ರಚುರಪ್ರವಾಹಂಗಳಿಂ ಜಿನಗೇಹಗಳಂ ಸುಧಾಧವಳಿತಂಗಳಂ ಮಾಡೆಯುಂ ಮೇರುವಂ ಪುಷ್ಟಿತನಮೇರುವೆನಿಸಿಯುಂ ಧಾತ್ರಿಯಂ ಪುಣ್ಯಸಸ್ಯಕ್ಷೇತ್ರಮಪ್ಪಂತಾವರಿಸೆಯುಂ ಮೇಗಣ್ಗೆ ನೆಗೆದ ಸುಧಾಬಿಂದು ಸಂದೋಹಂ ಬೇಱೊಂದುಲೋಕನೀಯ ಜ್ಯೋತಿರ್ಲೋಕಮನಾಕರ್ಷಿಸೆಯುಂ ದೆಸೆದೆಸೆಗೆ ಸಿಡಿಲ್ದ ಸುಧಾಶೀಕರಂಗಳ್‌ದಿಶಾಕರಿಗಳ ಕೊರಲ್ಗೆ ನಕ್ಷತ್ರಮಾಲೆಯನೋಲಗಿಸೆಯುಂ ಕ್ಷೀರವಾರಿಧಿವಾರಿಯಿಂದನಂತವೀರ್ಯಂಗೆ ಲೋಕಾಶ್ಚರ್ಯಮಪ್ಪಂತು ವಿಕ್ರಿಯಾವಿಚಕ್ಷಣರಪ್ಪ ಸಹಸ್ರೇಕ್ಷಣರ್‌ಮಜ್ಜನಮಂ ನಿಮಿರ್ಚಿ ಜಗನ್ಮಂಗಳಮುಖ್ಯಂಗೆ ಘನೀಭೂತ ಚಂದ್ರಾತಪದಂತೆಯುಂ ಪಿಂಡೀಭೂತಶಶಿಮಣಿ ಪ್ರಭೂತಸಲಿಲಂಗಳಂತೆಯುಂ ಪಾಂಡುರತೆಯನೊಳಕೊಂಡು

ಚಂ || ಬೆಳಲ ಪೊದೞ್ದ ಪಣ್ಣ ತನಿಗಂಪುಮನಿಂಪುಮನಾಳ್ದು ಬೆಳ್ಮುಗಿ
ಲ್ಗಳನಿೞೆ ಕೆಯ್ದು ಸಾಂದ್ರ ಘನಚಂದ್ರಿಕೆಯಂ ನೆಱೆ ಚುನ್ನವಾಡಿ ಪ
ಜ್ಜಳಿಸುವ ಪುಣ್ಯಪುಂಜದವೊಲೊಪ್ಪುವ ಮಾಹಿಷಮಪ್ಪ ಸರ್ವಮಂ
ಗಳವಿಧಿಗಾದ್ಯಮಾದ ದಧಿಯಿಂ ಜಿನಮಜ್ಜನಮಂ ನಿಮಿರ್ಚಿದರ್ ೯೩

ವ || ಅಂತುಮಲ್ಲದೆ

ಮ || ಮಿಗೆ ಪಂಚೇಷುಗೆ ಬಾಣಮಾಗೆ ತನುವಂ ಮುಂ ಪೊರ್ದಲಂಜಿರ್ದ ಮ
ಲ್ಲಿಗೆ ಸೇವಂತಿಗೆ ಜಾದಿ ಕುಂದಮಿವು ದಧ್ಯಾಕಾರದಿಂ ಕಂಪು ಕೆ
ಯ್ಮಿಗುವನ್ನಂ ಪುದಿವಂತೆ ತೋರ್ಪ ದಧಿಯಿಂದಂ ಸ್ನಾನಮಂ ಜ್ಞಾನವಾ
ರ್ಧಿಗೆ ನಿರ್ಧೂತತಮಸ್ತಮಂಗೆ ಜಿನಪಂಗುತ್ಸಾಹದಿಂ ಮಾಡಿದರ್‌೯೪

ವ || ಅಂತು ಶಶಿಕಾಂತದಧಿಯಿಂ ಗುಣಮಣಿಭಾಸ್ವದುದಧಿಗೆ ವಿಬುಧ ವಿಭುಗಳಭಿಷವಣಮನೊಡರ್ಚಿ ಸಮನಂತರಂ ಕಳಧೌತಕಳಶಂಗಳನೆತ್ತಿಕೊಂಡು

ಮ || ಕುಮುದಾಂಭೋಜ ಲವಂಗಜಾತಿಫಳವಲ್ಲೀಪತ್ರ ತಕ್ಕೋಲ ಕುಂ
ಕುಮ ಕಾಳಾಗರುಕುಂದುರುಷ್ಕ ಮಳಯಪ್ರೋದ್ಭೂತಕರ್ಪೂರ ಶ
ಕ್ರಮಹೋದ್ಯಾನ ಸುಗಂಧವಸ್ತುವಿಳಸತ್ತೀರ್ಥಾಂಬುವಿಂದಿಂದ್ರರು
ತ್ತಮತೀರ್ಥಪ್ರಭುಗೞ್ತೆಯಿಂದೆಸಗಿದರ್‌ಗಂಧೋದಕಸ್ನಾನಮಂ ೯೫

ಪರಿಲಿಪ್ತಂ ಹರಿಚಂದನಂ ಹರಿಯ ಚಿತ್ತಾಹ್ಲಾದಮಂ ಮಾಡಿ ತಾ
ಳ್ದಿರೆ ತನ್ನಾಮಮನೆಯ್ದೆ ಕಾರ್ಷ್ಣ್ಯಲಘುತಾ ಸಂಪತ್ತಿಯಂ ಪೋಲ್ತು ತಾ
ಳ್ದಿರೆ ಕಾಳಾಗುರುವರ್ಹದಂಗರುಚಿಗಾ ತೀರ್ಥೇಶ್ವರಂಗೊಲ್ದು ಬಂ
ಧುರ ಗಂಧಂಗಮರೇಂದ್ರರಂದೆಸಗಿದರ್‌ಗಂಧಾಂಬುವಿಂ ಸ್ನಾನಮಂ ೯೬

ಕಂ || ಪರಮಾನುರಾಗರಸದವೊ
ಲಿರೆ ಕುಂಕುಮಕಳಿತ ಗಂಧಜಳಮದರೊಳ್‌ನಿ
ರ್ಭರಭಕ್ತಿಯೊಳೋಲಾಡು
ತ್ತಿರೆ ಸಮನಿಸಿತಮರಸಮಿತಿಗವಭೃಥಸವನಂ ೯೭

ಸುರಶೈಳಶಿಳಾಸ್ಫಾಳನ
ಭರದಿಂ ದೆಸೆದೆಸೆಗೆ ಪಾಯ್ವ ಘುಸೃಣಾರುಣ ಬಂ
ಧುರಗಂಧೋದಕದಿಂ ದಿ
ಕ್ಪರಿಪಾಳಕತತಿಗಮಾದುದವಭೃತಸವನಂ ೯೮

ವ || ಅಂತು ಸುರಭಿಗಂಧಬಂಧುರಗಂಧಜಳಂಗಳಿಂದಬಿಷವಣಮಂ ನುತಿಪ್ರವಣರ್ ಮಾಡಿ

ಕಂ || ಕುಳಿಶಪತಿ ಸುರಭಿತರ ಜಳ
ಮಳಯಜಕಳಮಾಕ್ಷತಪ್ರಸುಧಾನ್ನೋ
ಜ್ವಳದೀಪಧೂಪಫಳಸಂ
ಕುಳದಿಂ ಜಿನಪದಪಯೋಜಮಂ ಪೂಜಿಸಿದಂ ೯೯

ವ || ಅಂತು ವಿಶಿಷ್ಟಾಷ್ಟವಿಧಾರ್ಚನೆಗಳಿನರ್ಚಿಸಿ

ಕಂ || ಅಮೃತದೊಳೞ್ದವೊಲರೆಬರ್‌
ಸಮನಿಸೆ ಸುಖಮನ್ಯವಸ್ತುವಿಂ ಜಿನಪತಿ ನಿ
ನ್ನಮಳ ಸವನಾಮೃತದೊಳ
ೞ್ದಮರರ ನಿರತಿಶಯಸುಖಮನದನೇವೊಗೞ್ವೆಂ ೧೦೦