ಭಾವಿಸೆ ನಿನಗಭಿಷವಮಂ
ದೇವೇಂದ್ರರ್ ಮಾಡಿ ಕೂಡೆ ಮೂಲೋಕಮುಮಂ
ಪಾವನಮೆನಿಸಿದರಱೆಂ
ಪಾವನತೆ ವಿಚಿತ್ರಮಲ್ತೆ ಜಿನಪತಿ ನಿನ್ನಾ ೧೦೧

ವ || ಎಂದಿಂತು ನಿಳಿಂಪನಾಯಕಂ ನಿಳಿಂಪಸಂಪಾದಿತಸವನಾರ್ಚನಸ್ತವನಪರಿ ಸಮಾಪ್ತಿ ಸಮಯಾನಂತರಂ

ಕಂ || ದೇವಾಂಗಾಮೃತಕಣಮಂ
ದೇವಾಂಗದಿನೊತ್ತಿ ಶಚಿ ವಿಭೂಷಿಸಿದಳ್‌ತಾ
ರಾವಳಿಯಂ ನೂಂಕಿ ರವಿ
ಶ್ರೀ ವಿಶದಾಂಬರಮನಂಶುವಿಂ ಭೂಷಿಪವೋಲ್‌೧೦೨

ತೊಳಗುವ ಭಾಳದೊಳಿಂದ್ರನ
ಕುಲವಧುವೀ ತ್ರಿಭುವನಾಧಿಪತ್ಯಕ್ಕೀ ಜಗ
ತ್ತಿಳಕಾಂಘ್ರಿನಖಾಂಶುಗೆ ಮುದ
ದೊಳೆ ಪಟ್ಟಂಗಟಟ್‌ಉವಂತೆ ತಿಳಕಮನಿಟ್ಟಳ್‌೧೦೩

ಹಾರಂ ಚೂಡಾಮಣಿ ಕೇ
ಯೂರಂ ಕಂಠಿಕೆ ಸುರತ್ನಮುದ್ರಿಕೆ ಲಲಿತಾ
ಕಾರಕ್ಕೆ ಮುದ್ರೆಯೆನೆ ಶೃಂ
ಗಾರಸಮುದ್ರಂಗೆ ತುಡಿಸಿದಳ್‌ಶಚಿ ಮುದದಿಂ ೧೦೪

ವರಸಹಜವಿದ್ಧಕರ್ಣಂ
ನಿರವಿಸೆ ನಿಜಮಪ್ಪ ಬೋಧಮಂ ತುಡಿಸಿದಳಾ
ದರದೊಳೆ ಮಣಿಕುಂಡಳಮಂ
ಸರಸ್ವತೀಕರ್ಣಕುಂಡಳಂಗೊಲವಿಂದಂ ೧೦೫

ಜಿನಘನಜಘನಕ್ಕಿಂದ್ರಾಂ
ಗನೆ ನಯನಮಯೂರ ಹರ್ಷವರ್ಷೋತ್ಕರ್ಷ
ಕ್ಕೆನಸುಂ ಸೊಗಯಿಪ ಸೌದಾ
ಮಿನಿಯೆನೆ ಕಟಿಸೂತ್ರಮಂ ತೊಡರ್ಚಿದಳಾಗಳ್‌೧೦೬

ಹರಿವಧು ನೂಪುರಮಂ ಜಿನ
ಚರಣದೊಳಳವಡಿಸಿ ತಳೆಯೆ ಶಿರದೊಳ್‌ಮಣಿಶೇ
ಖರಮೆನಿಸಿತಂತೆ ಪೂಜ್ಯಪ
ದರನಾರಾಧಿಪ ಜನಕ್ಕೆ ಪೂಜ್ಯತೆಯರಿದೇ ೧೦೭

ಮ || ಪುರುಹೂತಪ್ರಿಯೆ ಪುಣ್ಯಮೂರ್ತಿಗೊಲವಿಂದಂ ಷೋಡಶಸ್ವರ್ಗದೊಳ್‌
ದೊರೆಯಿಲ್ಲೀಕ್ಷಿಪೊಡೆಂಬುವಂ ತುಡಿಸೆ ಚೆಲ್ವಂ ನೀಡುತುಂ ಷೋಡಶಾ
ಭರಣಂ ಷೋಡಶಭಾವನಾನಿರತನಾದಂ ತೀರ್ಥನಾಥಂ ಗುಣಾ
ಭರಣಂ ಮುನ್ನಮೆನುತ್ತೆ ಪೇೞ್ವ ತೆಱದಿಂ ಚೆಲ್ವಾದುವತ್ಯುಜ್ವಳಂ ೧೦೮

ವ || ಅಂತು ನಿರ್ಭರಭಕ್ತಿಯಿಂ ಸರ್ವಜ್ಞನಂ ಸರ್ವಾಭರಣಭೂಷಿತನಂ ಮಾಡಿ ಇಂದ್ರಾಣಿಯೈರಾವಣಾರೂಢನಪ್ಪ ನಿಜಪ್ರಿಯೋತ್ಸಂಗಸಂಗತನಂ ಮಾಡಿದಾಗಳ್‌

ಕಮ || ಸುರಭಿ ಶುಚಿ ಸುಭಗತೇಜಃ
ಪರಮಾಣುಗಳೆಲ್ಲಮಲ್ಲಿ ನೆಲಸಿದುವೆನೆಯ
ಚ್ಚರಿವಟ್ಟು ಸಹಸ್ರಾಕ್ಷಂ
ನಿರೀಕ್ಷಿಸುವುದಚಿತಮೆನೆ ಜಿನನನೀಕ್ಷಿಸಿದಂ ೧೦೯

ವ || ಅಂತಪ್ರತಿಮ ರೂಪಸೌಂದರ್ಯಮಂ ಸಂಕ್ರಂದನಂ ನೋಡಿ ಪರಮಾನಂದ ಪುಳಕಮಂ ತಳೆಯುತ್ತುಂ

ಕಂ || ಸಾರ್ವರ್ತುಕವನಶೋಭಿತ
ಗೀರ್ವಾಣಾಚಳದೊಳಿಂದ್ರನಮರಸಮೇತಂ
ನಿರ್ವರ್ತಿತ ಜಿನಸವನಂ
ನೇರ್ವಡಿಪಡೆ ವಾರಣಾಸಿಗಭಿಮುಖನಾದಂ ೧೧೦

ವ || ಅಂತನೇಕ ನಾಕಲೋಕಾನೀಕಘನಧ್ವನಿಗಳ್‌ನೆಗೞೆ ನೆಗೞ್ತೆವೆತ್ತ ವಾರಣಾಸಿ ಗಭಿಮುಖನಾದಾಗಳ್‌

ಕಂ || ಸುರಪತಿಕೃತಾಭಿಷವದು
ಗ್ಧರವಂ ಸುರಪಟಹರವಮರರಮಣೀಗೇ
ಯರವಂ ಸುರಜನರವಮುೞಿ
ದಿರೆ ಸುರಗಿರಿ ಜಾನಿಪಂತಿರಿರ್ದುದು ಜಿನನಂ ೧೧೧

ವ || ಅಂತು ಚತುರ್ನಿಕಾಯ ದೇವನಿಕಾಯಂ ಕಾಯಕಾಂತಿಸಂತತಿಯಿಂದಾಕಾಶ ಪ್ರದೇಶಮಂ ನವರತ್ನಮರೀಚಿಮೇಚಕಿತವಾರಾಶಿಯನನುಕರಿಸುವಂತಳಂಕರಿಸುತ್ತುಂ ವಾರಣಾಸಿಗವತರಿಸಿ

ಮ || ಅಸಿತಾಭ್ರಂ ಗಜರಾಜಿ ಶಾರದಪಯೋದಂ ಚಂದ್ರಕಾಂತೇಂದ್ರಯಾ
ನಸಮೂಹಂ ಪವನಾಳಿ ಚಾಮರಸಮೀರೌಘಂ ಹಿಮಂ ಚಂದನಂ
ಕುಸುಮಶ್ರೀಲತೆ ಬಾಳಿಕಾವಳಿ ಬಿಸಿಲ್‌ಭೂಷಾಂಶುವಾಗೊಪ್ಪೆ ಬ
ರ್ಪ ಸುರವ್ರಾತಮನೀಕ್ಷಿಸಿತ್ತು ಋತುಗೆತ್ತಾ ಪೌರನಾರೀಜನಂ ೧೧೨

ವ || ಅಂತವತರಿಸಿ ಸುರಸಮಿತಿಪರಿವಾರಂಬೆರಸು ಪುರುಹೂತಂ ಪುರಮಂ ಪುಗುವಾಗಳ್‌

ಚಂ || ಕೆದಱಿದ ರಾಜವೀಥಿಗಳ ಪೂವಲಿ ರತ್ನದ ತೋರಣಾಳಿ ಚೀ
ನದ ಗುಡಿ ಮಂದಿರಾಂಗಣದ ರತ್ನರಜಂಗಳ ರಂಗವಲ್ಲಿ ಸೂ
ಸಿದ ಪಟವಾಸಚೂರ್ಣಮನುರಾರಸಾವಿಳಕಾಮಿನೀಜನಂ
ಪುದಿದಿರೆ ವಾರಣಾಸಿ ತಳೆದತ್ತು ಸುರೇಶಪುರೀವಿಳಾಸಮಂ ೧೧೩

ವ || ಅಂತು ವಿರಾಜಿಸುವ ಪುರವಿಳಾಸಮನವಳೋಕಿಸುತ್ತುಂ ಬಂದು ವಂದನ ಮಾಳಾಳಂಕೃತ ರಾಜಮಂದಿರಮಂ ಪೊಕ್ಕು

ಮ || ಜನತಾನೇತ್ರವಿಚಿತ್ರಹರ್ಷಜನಕ್ರೀಗೇಹದಿಂ ಮುಂದೆ ಕಾಂ
ಚನಚಂಚನ್ಮಣಿಸಂಚಯಾಂಚಿತ ಮಹೇಂದ್ರಸ್ತೋತ್ರಪಾತ್ರಂ ಮರು
ಜ್ಜನಸಂಪಾದಿತಮಪ್ಪ ಮಂಡಪದ ಭಾಸ್ವನ್ಮಧ್ಯಪೀಠಾಗ್ರದೊಳ್‌
ಜಿನನಂ ಸ್ಥಾಪಿಸಿ ಸಂತಸಕ್ಕೆ ನೆಲೆಯಾದಂ ನಾಕಲೋಕಾಧಿಪಂ ೧೧೪

ವ || ಆಗಳಾತ್ಮಜಾತ ಮುಖಾಂಬುಜಾತಜಾತಲೀಲಾಮಂದಮಕರಂದಸೇವಾ ಲೋಲಲೋಚನ ಚಂಚರೀಕನಪ್ಪಶ್ವಸೇನವಿಶ್ವಂಭರಾವಲ್ಲಭನುಂ ಶಚೀಮುಖದಿವಸ ಮುಖಾವಳೋಕನ ಮಾತ್ರೋನ್ನಿದ್ರಿತನೇತ್ರ ಶತಪತ್ರಜಗತ್ತ್ರಯನಾಥಾಂಬಿಕೆಯುಂ ನಯನೀಯ ಬಾಳಾರ್ಕನ ಮುಖಕಮಳಮಂ ನೀಡುಮಱ್ಕರ್ತು ನೋಡಿ

ಕಂ || ಆನಂದಾಶ್ರುಗಳಿಂ ಪಿತೃ
ಪೀನಸ್ತನೆಮಾತೃಕುಚಘಟಾಮೃತಜಳಧಾ
ರಾನಿವಹದಿನಭಿಷೇಕಮ
ನೇನಿತ್ತರೊ ಮಗುೞೆ ಜಿನಶಿಶುಗೆ ಮುದದೊವಿಂ ೧೧೫

ವ || ಆ ಸಮಯದೊಳ್‌

ಮ || ಗುರುವಿಂತೀ ತ್ರಿಜಗಕ್ಕೆನಿಪ್ಪ ಸುಚರಿತ್ರಂ ಪುತ್ರನೆಂದದಂದು ಧ
ನ್ಯರುಮಿಂ ಮಾನ್ಯರುಮಲ್ತೆ ನೀಮೆಯನುತುಂ ಶ್ರೀಬ್ರಹ್ಮದತ್ತಾಮನೋ
ಹರಿಯೆಂ ವಿಶ್ರುತನಶ್ವಸೇನವಿಭುವಂ ದಿವ್ಯಾನುಳೇಪಾಮಳಾಂ
ಬರಭಷಾದಿಗಳಿಂದಮರ್ಚಿಸಿದನಿಂದ್ರಂ ಲೋಕಸಂಪೂಜ್ಯನಂ ೧೧೬

ವ || ಅಂತು ಪೂಜಿಸಿ ಜಿನರಾಜಜನನಾಭಿಷವಣವೃತ್ತಾಂತಮಂ ಶ್ರವಣ ರಮಣೀಯಮಾಗೆ ಪಾಕಶಾಸನಂ ಪೇೞಿ ಕೇಳ್ದು

ಉ || ಪುಟ್ಟದ ಮುನ್ನ ಮುಂ ನೆಗೞ್ದವಲ್ತೆ ಸುವರ್ಣಸುರತ್ನವೃಷ್ಟಿ ಪೊಂಬೆಟ್ಟಮೆ ಮೆಟ್ಟಿ ಮೀವ ಮಣಿಶಕ್ರರೆ ಮಜ್ಜನಮಂ ನಿಮಿರ್ಚುವರ್‌
ನೆಟ್ಟನೆ ವಾರಿ ಪಾಲ್ಗಡಲ ನೀರೆನೆ ಮಜ್ಜನಮಾಯ್ತು ಸೂನುಗಿಂ
ಪುಟ್ಟಿದೊಡೆಂಬ ಸಂತಸಮನೇವೊಗೞ್ದಪ್ಪುದೊ ಮಾತೃತಾತರಾ ೧೧೭

ವ || ಅನಂತರಂ ಜಗದ್ಗುರುವಿನ ಜನನೀಜನಕರುಂ ಪುರೋಹಿತಪ್ರಧಾನರುಮವರಿವರೆನ್ನದೆ ಪರಿಜನಮುಂ ಪುರಜನಮುಂ ಜಾತ ವಿಪುಳಪುಳಕರ್‌ಜಾತಕರ್ಮೋತ್ಸವ ಪರಂಪರಾ ಪರವಶರಾದಾಗಳ್‌

ಮ || ಪುರಕಾಂತಾತತಿನೂಪುರಂಗಳ ಕಟೀಸೂತ್ರಂಗಳಾರಾವಮಾ
ಗಿರೆ ತೂರ್ಯಧ್ವನಿಪಾರಿಹಾರ್ಯಮಣಿಕಾಂತಿಶ್ರೇಣಿ ಕಾಶ್ಮೀರಸಾ
ರರಸಂ ತನ್ನಯ ಚಿತ್ತರಾಗಮನೆ ಕೆಯ್ಯೊಳ್‌ತೋರ್ಪವೋಲೆತ್ತಲುಂ
ಭರದಿಂದೋಕುಳಿಯಾಡುತುಂ ಸುೞಿಯೆ ಜನ್ಮೋತ್ಸಾಹಮೇನೊಪ್ಪಿತೋ ೧೧೮

ಉ || ಮಂಗಳಗಾಯಿಕಾಮುಖಸರೋರುಹಗೀತಮಧುಪರಸೇವನಾ
ಸಂಗತರಾಜಭೃಂಗಕುಳದಿಂದಬಳಾಕಳಹಂಸಯಾನದಿಂ
ಮಂಗಳತೂರ್ಯನಾದವಿಹಗಧ್ವನಿಯಿಂ ಮಣಿಭೂಷಣಾಂಶುತೋ
ಯಂಗಳಿನೊಪ್ಪುತಿರ್ದುದು ಸರೋವರದಂತೆ ಗೃಹಂ ಮಹೀಶನಾ ೧೧೯

ವ || ಅಂತು ಪಾರ್ಶ್ವತೀರ್ಥೇಶ್ವರನ ಜನನೋತ್ಸವದೊಳ್‌ವಿಶ್ವಜನಮುಂ ವಿಶ್ವಜಗತ್ಪೂಜ್ಯ ಸಾಮ್ರಾಜ್ಯಂ ತನತನಗೆ ಕೈಸಾರ್ದುದೆಂಬ ಸಂತೋಷಮಂ ತಾಳ್ದಿರೆ ತನ್ನತಿಶಯ ಭಕ್ತಿಯಂ ವ್ಯಕ್ತಂ ಮಾೞ್ಪಂತಮರೇಂದ್ರನಾನಂದನಾಟಕಮನಾಡಲ್ವೇಡಿ ಶುದ್ಧಂ ಚಿತ್ರಮೆಂಬ ಪೂರ್ವರಂಗಪ್ರಸಂಗದೊಳಂಗೀಕೃತಮಂಗಳಾಳಂಕಾರನುಮೂರೀಕೃತ ಮಂಗಳ ಪದೋಚ್ಚಾರಣನುಂ ವಿಸ್ತಾರಿತ ಪ್ರಸ್ತಾವನಾವಿಶೇಷನುಮೆನಿಸಿ ಸಂಭಾಂತರಂಗತರಂಗಿಣೀ ಕೌತುಕರಸೋತ್ತರಂಗಸಂಗತಮಾಗೆ ರಂಗಂಬೊಕ್ಕು

ಕಂ || ಶುಭಗುಣಜಿನಪದದೊಳ್‌ತ
ನ್ನಭಿಮುಖತೆಯನಱೆಪುವಂದದಿಂದಂ ದಿಇಜ
ಪ್ರಭುವೇಂ ಸಮಪದದೊಳ್‌ನಿಂ
ದು ಭಾವಶುದ್ಧಿಯೊಳೆ ಮಾಡೆ ಪುಷ್ಪಾಂಜಳಿಯಂ ೧೨೦

ಅಲರ್ದ ಕರಪುಟಮೆ ಸಿಪ್ಪುಗ
ಳಲರ್ದವೊಲಿರೆ ಭಕ್ತಿಸಸುಧಾರ್ಣವಮುಕ್ತಾ
ಫಳದಂತೆ ಪೊಳೆವ ಪುಷ್ಪಾಂ
ಜಳಿಯಂ ಜಿನಪದದೊಳಾಗಳೆಸಗೆ ಸುರೇಂದ್ರಂ ೧೨೧

ಕರಮೆಸೆದುದು ಜಿನಪದಪಂ
ಕರುಹಾಶ್ರೀತಲಕ್ಷ್ಮಿಯೊಂದು ದರಹಾಸಮೊ ಮೇಣ್‌
ಪರಮಜಿನಾಂಘ್ರೀಸುರಾಂಘ್ರಿಪ
ಪರಿಶೋಭಿತಕುಸುಮತತಿಯೊ ಮೇಣೆಂಬಿನೆಗಂ ೧೨೨

ಜವನಿಕೆ ತೊಲಗಿರೆ ದುಗುಲದ
ಜವನಿಕೆಯಂ ಮಗುೞೆ ಪಿಡಿದರೆಂಬಂದದಿನೇ
ನವಿರಳತರವಿಳೋಕನ
ಕುವಳಯರುಚಿ ಪಸರಿಸಿತ್ತೊ ದಿವಿಜೋತ್ತಮನಾ ೧೨೩

ನೆಯ್ದಿಲ ಪೂವಂ ರಂಗದೊ
ಳೆಯ್ದುವಿನಂ ಪರಪುವಂತೆ ಚಂದನರಸದೊಳ್‌
ತೊಯ್ದಪನೆನೆ ಸಭೆಯಂ ತ
ಳ್ಪೊಯ್ದುವು ಪರಕಲಿಸಿ ಹರಿಯ ನಯನದ್ಯುತಿಗಳ್‌೧೨೪

ವ || ಅಂತುಮಲ್ಲದೆ

ಕಂ || ಪೂವಲಿಯಂ ನಯನದ ಬೆ
ಳ್ಪಾವಗಮಿರ್ಮಡಿಸೆ ಕರ್ಪು ಬೞಿ ಸಲ್ವಂ ಸುಭೃಂ
ಗಾವಳಿಯವೊಲೆಸೆದಿರೆ ರಸ
ಭಾವಾಲಸದೃಷ್ಟಿಪಾತಮೇಂ ಪಸರಿಸಿತೋ ೧೨೫

ವ || ಆ ಸಮಯದೊಳ್‌ಸಮಯಂಬಡೆದು

ಕಂ || ದೊರೆವೆತ್ತ ಕಿನ್ನರೀಗೇ
ಯರಸಾಮೃತವರ್ಷದೊಡನೆ ನೆಗೆವಮೃತಪಯೋ
ಧರರವದವೊಲುಪವಾದಕ
ಪರಿವಾದಕವಾದ್ಯನಿನದಮೊಗೆದುವು ಪಲವುಂ ೧೨೬

ವ || ಆ ಸುಖಾಲಯ ಸುಲಯಕ್ಕೆ ಪಯಂ ಸುರಭಿಪಯನಾದಂತಮೃತಪಯ ಮನೆ ಮನಂ ತಣಿವಿನಂ ಕಱೆಯೆ ನೆಱೆಯ ಮೆಱೆದು

ಕಂ || ಪ್ರಕಟಿಸಿದಂ ಶತಮುಖನಾಂ
ಗಿಕ ವಾಚಿಕ ಭೂಷಣೋತ್ಥಿತಾಹಾರ್ಯಕ ಸಾ
ತ್ವಿಕ ನಾಮಮನಾಂತ ಚತುಃ
ಪ್ರಕಾರದಭಿನಯಮನಭಿನವಂ ನೆಗೞ್ವಿನೆಗಂ ೧೨೭

ರಸಭಾವಾಭಿನಯಾದಿ
ಪ್ರಸಿದ್ಧ ನಾಟ್ಯಾಂಗದಲ್ಲಿ ಪನ್ನೊಂದಱೊಳೀ
ಕ್ಷಿಸೆ ಸುರಪತಿ ನೆಱೆ ಮೆಱೆದುಂ
ಪೊಸಯಿಸಿದಂ ನಾಟಕಾದಿದಶರೂಪಕಮಂ ೧೨೮

ಮ || ದಿವಿಜೇಂದ್ರಾವಳಿಯೀಕ್ಷಣಕ್ಕೆ ಪೊಸತಂ ಢಾಳಂ ಬೆಡಂಗಾಗೆ ಭೀ
ಱುವ ಬಾಹೂರುಶಿರಃಕಟೀಹೃದಯಪಾದಾಂಭೋಜಮೆಂಬೀ ಷಡಂ
ಗ ವಿಶಿಷ್ಟಾಭಿನಯಂ ನಯಂಬಡೆಯ ಶುಕ್ರಂ ನಾಟ್ಯವೇದಾವತಾ
ರವಿಳಾಸಂ ತಳೆದತ್ತು ಮೂರ್ತಿಯನೆನಿಪ್ಪಾರೂಢಿಯಿಂದಾಡಿದಂ ೧೨೯

ವ || ಅಂತು ಬಿಡೌಜಂ ನಾಟ್ಯವಿದ್ಯೆಗೋಜನೆಂಬುದನಶ್ವಸೇನಾದಿರಾಜಸಭೆಗಂ ಸುರಸಮಾಜಕ್ಕಮಱೆಪಿ ಸಾಮಾಜಿಕಜನಂ ಪೊಗೞೆ ನೆಗೞೆ ತನ್ನ ಬಗೆಯೊಳೊಗೆದಾ ನಂದಮಂನಿಜ ನಿಯತ ತನುವಿನೊಳಳವಡಿಸಿ ತಳೆಯಲ್‌ನೆಱೆಯದೆ ದೃಶ್ಯಶ್ರವ್ಯದೃಢಸೂತ್ರಾದಿ ಪ್ರಯೋಗಂ ಗಳೊಂಬಬಹುಪ್ರಕಾರನಾಟ್ಯಂಗಳೊಳಮಾಂಗಿಕಾದಿ ಚತುರ್ವಿಧಾಭಿನಯಂಗಳೊಳಂ ದುರಿತ ಪರಿಹಾರಾರ್ಥಮಾರಭಟೀವೃತ್ತಿ ಪ್ರವರ್ತಿಸುವ ತಾಂಡವಮನಾಖಂಡಳನಾಡಲುದ್ಯೋಗಿಸಿ

ಕಂ || ವಿದಿತಂ ವೈಶಾಖಸ್ಥಾ
ನದೊಳಿರೆಯುಂ ಶಕ್ರನೆಸೆವ ರಸಭಾವಂ ತೋ
ಱೆದುದು ರುಚಿವೃಷ್ಟಿ ದೃಷ್ಟಿಯೊ
ಳೊದವಿದ ರಸಭಾವಮೊಪ್ಪಿ ತೋರ್ಪುದು ಪಿರಿದೇ ೧೩೦

ವ || ಅಂತು ವೈಶಾಖಸ್ಥಾನದೊಳಮಾಸ್ಥಾನಜನಮಾನಸದೊಳಂ ನಿಂದು

ಮ || ಚಳನಾಘಾತದಿನಬ್ದಿಯುಚ್ಚಳಿಸೆ ಮುಕ್ತಾಜಾಳಕಂಗಳ್‌ನಭ
ಸ್ಥಳದೊಳ್‌ತಾರಗೆಯಂತೆ ತೋಱೆದುವು ತೋಳಳ್ಳೇಱಿ ನಿಂ ತಾರಕಾ
ವಳಿಯಲ್ಲಿಂದುದಿರ್ದಬ್ಧಿಯಲ್ಲಿ ಪೊಸಮುತ್ತೆಂಬಂತಿರೊಪ್ಪಿರ್ದುವಾ
ರಳವಾಖಂಡಳತಾಂಡವಂ ಬಗೆವೊಡತ್ಯಾಶ್ಚರ್ಯಸಂಪಾದಕಂ ೧೩೧

ಕಂ || ಕರಣಂ ಸುಮನೋವಿಸ್ಮಯ
ಕರಣಂ ರೇಚಕಮನೂನಸುಖಸೂಚಕಮ
ಚ್ಚರಿಯನುಗುೞ್ವಂಗಹಾರಂ
ಸರಸ್ವತೀಹಾರಮೆನಿಸಿದಂ ಸುರರಾಜಂ ೧೩೨

ಸಕಳಜ್ಞಂ ಮಾೞ್ಕುಂ ದಂ
ಡಕವಾಟಪ್ರತರಲೋಕಪೂರಣಮಂ ಪೂ
ಣ್ದಕಳಂಕನೆಂದು ಪೇೞ್ವಂ
ತೆ ಕಳಾಢ್ಯಂ ಕ್ರಮದೆ ಲೋಕಮಂ ವ್ಯಾಪಿಸಿದಂ ೧೩೩

ಇಳೆಯೊಳ್‌ತೋಱಿದ ರೂಪನೆ
ಗಳ ಗಗನದೊಳಾಗಳಂತೆ ತೋರ್ಪಂ ವೃಷನಾ
ಗಳೆ ಗಡ ದಿಗ್ವ್ಯಾಪಕನಾ
ರಳವಿಂದ್ರನ ವಿಕ್ರಿಯಾಬಳಂ ಚಿತ್ರತರಂ ೧೩೪

ಎಱಗಿದೊಡುನ್ನತಿಯೆಂಬುದ
ನಱಿಪುವವೋಲ್‌ಬಳೆವನಾಗಳರ್ಹಚ್ಛಿಶುಗಂ
ಕಿಱಿಯೆನಿಸಿರ್ದು ಮುದದಿಂ
ನೆಱೆ ಕೊರ್ವುವ ತೆಱದೆ ದೆಸೆಗಳಂ ವ್ಯಾಪಿಸುವಂ ೧೩೫

ವ || ಅಂತಿಂದ್ರನಿಂದ್ರಜಾಲಿಗನ ಲೀಲೆಯಂ ಢಾಳಿಸುತ್ತುಮಮಾನುಷಮಪ್ಪನೇಕ ನಾಟ್ಯಕಳಾ ಪರಿಣತಿಯಿಂ ಸುರನರಪರಿಷಜ್ಜನಚಿತ್ತಭಿತ್ತಿನೊಳ್‌ವೈಚಿತ್ರ್ಯಮನಾಪಾದಿಸುತ್ತುಂ ವರ್ತಿಸುತ್ತುಮಿರೆ

ಮ || ದಿವಿಜಸ್ತ್ರೀತತಿ ತಳ್ತು ತೋಳ್ದುಱುಗಲೊಳ್‌ಸಲ್ಲೀಲೆಯಿಂದಾಡೆ ನಾ
ಡೆ ವಿಳಾಸಂಬಡೆದತ್ತು ಕಳ್ಪತರು ಶಾಖಾನೀಕದೊಳ್‌ನಾಟ್ಯವೈ
ಭವಲಕ್ಷ್ಮೀತತಿ ತತ್ಸಭಾಸದರ ದೃಷ್ಟಿವ್ರಾತದಿಂ ಪುಟ್ಟಿತೆಂ
ಬವೊಲುತ್ಸಾಹರಸಪ್ರವಾಹಭರಶೃಂಗಾರಾಬ್ಧಿ ದೇವೇಂದ್ರನಾ ೧೩೬

ಕಳಕಾಂಚೀಧ್ವನಿ ನಾದಮಾಗೆ ಪದವಿನ್ಯಾಸಂ ಪದನ್ಯಾಸಮಾ
ಗೆ ಲಸತ್ಕಾಂತಿಜಲಂಗಳಿಂ ಭುಜಮೃಣಾಳಶ್ರೇಣಿಯಿಂದಾವಗಂ
ಕೊಳನಂ ಪೋಲ್ವ ಸಹಸ್ರನೇತ್ರನ ತನುಶ್ರೀಯಲ್ಲಿ ನೇತ್ರಾಬ್ಜಸಂ
ಕುಳಮಂ ಹಂಸಿಗಳಂತೆ ಭಂಗಿಸಿ ಬೆಡಂಗಿಂದಾಡಿದರ್‌ದೇವಿಯರ್‌೧೩೬

ಕಂ || ಪದವಿನ್ಯಾಸಂ ಹಂಸೀ
ಪದವಿನ್ಯಾಸಮನೆ ಪೋಲ್ತು ಪೂವಲಿಯಂ ಮೆಟ್ಟಿದೊಡಂ ಕೊರಗಿಸದಱೆವಱ
ಹೃದಯಾಂಬುರುಹಮನಲರ್ಚಿತಮರೀಜನದಾ ೧೩೮

ಆಮರ್ದ ಪದನ್ಯಾಸಲಘು
ತ್ವಮನೇವರ್ಣಿಸುವುದಾ ಸಹಸ್ರಾಕ್ಷನ ಕ
ಣ್ಣೆಮೆಗಳ ಮೇಲೆ ಕರಣಮಂ
ನಿಮಿರ್ಚಿದರ್‌ಶತಸಹಸ್ರಮಂ ಸುರಸತಿಯರ್‌೧೩೯

ಭೂಚಾರಿಗಳೊಳಮೊಪ್ಪುವ
ಖೇಚಾರಿಗಳೊಳಮಮರ್ಕೆವಡೆದಿರ್ಪಿನೆಗಂ
ರೇಚಿಸಿಯುಂ ಪೂರಿಸೆ ಲೀ
ಲೋಚಿತಲಾವಣ್ಯರಸಮದೇಂ ಪಸರಿಸಿತೋ ೧೪೦

ಚಂ || ಪಯದ ಬೆಡಂಗು ಚಾಳೆಯದ ಚೆಲ್ವುರಚಲ್ಲಿಯ ಲೀಲೆ ಹಸ್ತಶಾ
ಖೆಯ ಲಲಿತತ್ವಮೀಕ್ಪಣದ ಕಾಂತತೆ ಪುರ್ವಿನೊಳಾದ ಜರ್ವಿದೆ
ಲ್ಲಿಯುಮತಿದುರ್ಲಭಂ ಬಗೆವೊಡಿಲ್ಲಿಯೆ ಕಾಣಲೆ ಬಂದುವೆಂದು ವಿ
ಸ್ಮಯದೊಳೆ ಕೂಡಿ ನೋಡೆ ಸಭೆ ನರ್ತಿಸಿದತ್ತಮರಾಂಗನಾಜನಂ ೧೪೧

ಕಂ || ಕಡೆಗಣ್ಗಳ ಬೆಳ್ಪಿಂ ಕೇ
ಸಡಿಗಳ ಕೆಂಪಿಂದಮಳಕನೀಳಚ್ಛವಿಯಿಂ
ತುಡುಗೆಯ ಮಣಿಗಣಮಂ ನು
ಣ್ಪಿಡುತುಂ ಸುರಸತಿಯರಾಡಿದರ್‌ನರ್ತನಮಂ ೧೪೨

ಶಾ || ತಾಳಂ ಮೇಳಿಸುವಂತು ಗೇಯದೊಳೊಡಂಬಟ್ಟಿತ್ತು ವಾದ್ಯಕ್ಕೆ ಸೌ
ಖ್ಯಾಲಂಬಂ ಸಮನಾಯ್ತು ಶಕ್ರನ ಮನಂ ತಾನೆಂಬಿನಂ ತಾಂಡವ
ಕ್ಕೀ ಲಾಸ್ಯಂ ದೊರೆಯಾದುದೆಂದು ವಿಬುಧರ್‌ಕೊಂಡಾಡೆ ಸವಾಂಗದೊಳ್‌
ಢಾಳಂ ನೆಟ್ಟನೆ ಪುಟ್ಟೆ ನಾಟ್ಯರಸದೊಳ್‌ತೇಂಕಾಡುವಂತಾಡಿದರ್‌೧೪೩

ಉ || ಚಾರಿಗೆ ಚಾರಿ ಚಾಳೆಯಕೆ ಚಾಳೆಯಮೀಕ್ಷಣಕೀಕ್ಷಣಂ ಮನೋ
ಹಾರಿ ಪಯಂ ಪಯಕ್ಕೆ ಕರಣಂ ಕರಣಕ್ಕೆ ರಸಂ ರಸಕ್ಕೆ ವಿ
ಸ್ತಾರಿಪ ಭಾವಸಂಗತಿಗೆ ಭಾವಮೊಡಂಬಡೆ ಸೌಕುಮಾರ್ಯಮಂ
ನಾರಿಯರುದ್ಧತತ್ವಮನೆ ತಾಂ ತಳೆದಿಂತು ವಿಚಿತ್ರವೃತ್ತಿಯಿಂ ೧೪೪

ಮ || ಅಮರೇಂದ್ರಂ ನಿಜಪಾದಹಸ್ತಕಮಳಪ್ರಾಂತಂಗಳೊಳ್‌ದೇವಿಂದರ್‌
ಭ್ರಮರೀವಿಭ್ರಮಮಂ ನಿಮಿರ್ಚುವುದದೆಂತುಂ ಯುಕ್ತಮೆಂಬರದಿಂ
ಭ್ರಮರೀವಿಭ್ರಮಮಂ ನಿಮಿರ್ಚುವುದುಮತ್ಯಾನಂದದಾನಂದನೃ
ತ್ಯಮನೊಲ್ದಾಡಿದನಲ್ಲಿ ತಳ್ತೆಸೆದು ಲಾಸ್ಯಂ ತಾಂಡವಂ ತೋರ್ಪಿನಂ ೧೪೫

ಕಂ || ಸ್ವರ್ಗಾಧಿನಾಯಕಂ ಸ
ನ್ಮಾರ್ಗೋಚಿತಭಾವಶುದ್ಧಿಯಿಂದೆಸಗಲ್ಕಂ
ತಾರ್ಗಮತಿಗಹನಮೆನಿಪಪ
ವರ್ಗಂ ಸಮನಿಪ ವಿಶುದ್ಧಿ ಸಮನಿಪುದುಚಿತಂ ೧೪೬

ಆನಂದನಾಟಕಂ ಪರ
ಮಾನಂದಮನಖಿಳದಕ್ಷಿಣೇಂದ್ರಶಚೀಶ
ಕ್ರಾನೇಕಪಕ್ಕಮೊದವಿಪು
ದೇನೀವುದು ಪಿರಿದೆ ಸುರವರಂಗಾಯತಿಯೊಳ್‌೧೪೭

ವ || ಅಂತಗಣ್ಯಪುಣ್ಯಮಂ ನೆರೆಯೆ ಸ್ವಸಾಧ್ಯಪ್ರಸಾದ್ಯನೃತ್ಯತೋಪ್ಯದೋಷಾಯೆಂಬ ನ್ಯಾಯಮಂ ಸ್ವಾಯತ್ತಂ ಮಾಡಿಯನಂತರಂ

ಕಂ || ವಿನುತಜ್ಞಾನಾದಿಗುಣಂ
ಜನನಾಂಬುಧಿತರಣಹೇತು ತೀರ್ಥವ್ರಾತಂ
ಜಿನ ನಿನ್ನ ಪಾರ್ಶ್ವದೊಳ್‌ನೆ
ಟ್ಟನಿರ್ಪ ಕಾರಣದೆ ಪಾರ್ಶ್ವತೀರ್ಥೇಶ್ವರನೈ ೧೪೮

ವ || ಎಂದು ತೀರ್ಥನಾಥಂಗನ್ವರ್ಥನಾಮಮನಿಟ್ಟೊಡನಾಡುವಂತೋರನ್ನರೆನಿಪ ಸುರಕುಮಾರಕರನಿರವೇೞ್ದು ಪರುಠವಿಸಿ

ಕಂ || ಮೊಲೆಯೂಡಲ್‌ಮಣಿಮಂಡನ
ಕುಳಮಂ ತುಡಿಸಲ್ಕೆ ಮಜ್ಜನಂಬುಗಿಸಲ್ಕೆಂ
ದೊಲವಿಂದಂ ನಿಯಮಿಸಿ ಸುರ
ಲಲನೆಯರಂ ಶಕರನಮರಲೋಕಕ್ಕೊಗೆದಂ

ಸ್ರ || ಇತ್ತಲ್‌ತೀರ್ಥಾಧಿನಾಥಂ ನಿಜಪಿತೃಯುಗಳಕ್ಕಾವಗಂ ಹರ್ಷಮಂ ಮಾ
ಡುತ್ತುಂ ಕೂಸಾಟದಿಂದಂ ನಯನಕುವಳಯಕ್ಕಾಸ್ಯಚಂದ್ರಾಂಶುವಂ ಬೀ
ಱುತ್ತುಂ ವಿದ್ಯಾಪ್ರಭಾವಂ ಬಳೆಯೆ ಬಳೆಯುತುಂ ತನ್ನ ಸತ್ಪುಣ್ಯಮಂ ತೋಱುತ್ತುಂ ಕಣ್ಗೊಪ್ಪುತಿರ್ದಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೧೫೦

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯ ಜಿನಮುನಿಪ್ರಸಾದಾ ಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನ ವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತ ಪುರಾಣದೊಳ್‌ಅಮರೇಂದ್ರಾನಂದನೃತ್ಯವರ್ಣನಂ ಚತುರ್ದಶಾಶ್ವಾಸಂ