ಕಂ || ಶ್ರೀ ಸುಚರಿತ್ರಂ ಸೂಕ್ತಿವಿ
ಳಾಸಂವೃತಹಂಸರಾಜಹಯನವೋಲೆಸೆದಂ
ತಾಸುರದಾರಕರೊಡನಿರೆ
ಭಾಸಿಸಿದಂ ಪುಣ್ಯಮೂರ್ತಿ ಕವಿಕುಳತಿಳಕಂ ೧

ಪಿತೃಯುಗದ ಕಿವಿಗೆ ವೀಣಾ
ರುತಿಯಿರೆಯುಂ ಸೊಗೆಯಿಸಲ್‌ತೊದಳ್ನುಡಿ ನುಡಿದಂ
ನುತನೃತ್ಯಮಿರೆಯುಮಿಕ್ಷಣ
ಕತಿಹರ್ಷಮನೀಯೆ ಶಿಶು ತಳರ್ನಡೆ ನಡೆದಂ ೨

ವ || ಅಂತು

ಕಂ || ಶೈಶವಮಂ ಸ್ಮಿತಬಂಧು ಕು
ಶೇಶಯನಿನನಂತಿರಂತು ಕಳೆದುರುತೇಜೋ
ರಾಶಿ ವಿರಾಜಿಸಿದಂ ಜಗ
ದಾಶಯಮಿಥ್ಯಾತಮೋಹರಂ ತೀರ್ಥಕರಂ ೩

ಕಳೆಗಳೊಡನೊಡನೆ ವೃತ್ತಂ
ವಿಳಾಸಮತ್ಯುನ್ನತಿ ಪ್ರಸನ್ನತೆ ತೇಜಂ
ಬಳೆಯ ಕುವಳಯದ ಮುದಮಂ
ಬಳೆಯಿಸುತುಂ ಚಂದ್ರನಂದದಿಂದಂ ಬಳೆದಂ ೪

ವ || ಮತ್ತಂ ಮುಕ್ತಿವನಿತಾಸಕ್ತಸಾತ್ವಿಕಭಾವನಾಗಿಯುಂ ನಿಃಸ್ವೇದನು ಮುಪಾಧಿಗ್ರಾಹಿ ಯಾಗಿಯುಮಮಳನುಂ ಪ್ರವ್ಯಕ್ತಗುಣಾನುರಕ್ತನಾಗಿಯುಂ ಕ್ಷೀರಗೌರಕ್ಷರಜನುಂ ಸದ್ವೃತ್ತನಾಗಿಯುಂ ಸಮಚತುರಸ್ರ ಸಂಸ್ಥಾನನುಂ ತ್ರಯೋವಿಂಶತಿ ತೀರ್ಥೇಶನಾಗಿಯುಮಷ್ಟಸಹಸ್ರಲಕ್ಷಣ ಲಕ್ಷಿತನುಂ ಸುಸ್ವರನಾಗಿಯುಂ ರಂಜಿತವ್ಯಂಜನನುಂ ಉಚಿತಕಾರ್ಯಾಸಕ್ತನಾಗಿಯುಮನಂತವೀರ್ಯನುಂ ಸುದರ್ಶನಧರನಾಗಿಯುಂ ಸೂಕ್ತಿಸುಧಾವಿಸ್ತೀರ್ಣಕರ್ಣಸುಖನುಂ ಕಲ್ಯಾಣಕಾಯಕನಾಗಿಯುಂ ಮರಕತವರ್ಣನುಂ ಸುಗ್ರೀವನಾಗಿಯುಮಭಿಮರಾಮನುಂ ಲೋಕೋನ್ನತನಾಗಿಯುಂ ನವರತ್ನಿ ಸುಮುತ್ಸೇಧನುಂ ಸಕಳಕಳತ್ರತ್ಯಕ್ತನಾಗಿಯುಂ ನಿರ್ಜಿತಕುಸುಕಚಾಪರೂಪನುಂ ಮಧುಪ ಸೇವಾವಿರಹಿತನಾಗಿಯುಂ ಸುರಭಿಸೌರಭನುಂ ಉಗ್ರವಂಶಾಗ್ರಣಿಯಾಗಿಯುಮತ್ಯಂತಶಾಂತನುಂ ಸಕಳ ಕಳಾಧರನಾಗಿಯುಂ ಸಮುದಿತ ಸಹಸ್ರಕರತೇಜನುಮಾಗಿರೆ

ಮ || ವಿಳಸತ್ಸೂಕ್ತಿವಧೂಕಟಾಕ್ಷರುಚಿ ತಳ್ತಿರ್ಪಂತು ವಕ್ತ್ರಾಂಬುಜಂ
ತಳೆದತ್ತುಜ್ಜಳವೃತ್ತಿಯಂ ನಿರುಪಮಂ ಸಿಂಹಾಸನಶ್ರೀ ವಿನಿ
ಶ್ಚಳಮಿರ್ಪಂತು ಕಟೀತಟಂ ಘನತೆಯಂ ತಾಳ್ದತ್ತು ವಿಸ್ತಾರಿಯಾ
ಯ್ತಲಘುತ್ರೈಭುವನಾರ್ಚ್ಯಲಕ್ಷ್ಮಿಯೊದವಿಂದಿರ್ಪಂತು ವಕ್ಷಸ್ಸ್ಥಳಂ ೫

ಕಂ || ಲಲಿತಮುಖಕಮಳದೊಳ್ ಶ್ಮ
ಶ್ರುಲೇಖೆಯುಂ ದಂತಪಂಕ್ತಿಯುಂ ಮುಖಲಕ್ಷ್ಮೀ
ಲಲನೆಯ ನೀಳದ ಮುಕ್ತಾ
ಫಳದೇಕಾವಳಿವೊಲೇಂ ಮನಂಗೊಳಿಸಿದುವೋ ೬

ಶ್ರೀವಧುವಕ್ಷಮನಪ್ಪೆ ವ
ಚೋವನಿತೆ ಮುಖಾಬ್ಜಮಂ ಜಯಶ್ರೀ ಭುಜಮಂ
ಯೌವನಲಕ್ಷ್ಮಿ ಜಿನನ ಸಕ
ಳಾವಯವಮನಪ್ಪಿ ಚೆಲ್ವಿನೇನೊಪ್ಪಿದಳೋ ೭

ಚತುರತೆಯಂ ಕೀರ್ತಿಸುವೊಡೆ
ಮತಿಶ್ರುತಾವಧಿವಿಬೋಧವೊಡವುಟ್ಟಿದುವು
ನ್ನತಿಯಂ ಪೇೞ್ವೊಡೆ ಭುವನ
ತ್ರಿತಯಂ ಜಿನಪತಿಯ ಪದಮನಾರಾಧಿಸುಗುಂ ೮

ಅಮರ್ದಮರದಾರಕರ್ ಮ
ಲ್ಲ ಮೇಷ ಖಗ ವೃಷಭ ಮಹಿಷಯುಗಳಂಗಳ ರೂ
ಪುಮನಾಳ್ದು ಯುದ್ಧಮಂ ಜಿನ
ಕುಮಾರಕನ ಮುಂದೊಡರ್ಚಿ ಪಡೆದರ್‌ಮುದಮಂ ೯

ಮುಜರ ಪಣವ ಕಳವೀಣಾ
ಪರಿವಾದನದಿಂದೆ ಶಬ್ದಷಟ್‌ತರ್ಕಾಳಂ
ಕರಣನಯ ಕಾವ್ಯ ನಾಟಕ
ಭರತಾದಿಯನೋದಿ ವಿಬುಧರಾದರ್‌ವಿಬುಧರ್‌೧೦

ವ || ಇಂತಿವು ಮೊದಲಾದನೇಕೆ ಭೇದವಿನೋದಂಗಳಂ ನೆಱೆಯೆ ಮೆಱೆದು ಮನಮಱಿದೋಲಗಿಸುತ್ತುಮಿರ್ದೊಂದುದೆವಸಂ ಪೊಱವೊೞಲ ಸಿರಿಯಂ ನಿರೀಕ್ಷಿಸಲ್ವೇೞ್ಕು ಮೆಂದು ಬಿನ್ನವಿಸೆ ಸೇವಕಜನದ ಮನದಿಚ್ಛೆಯಂ ಸಲಿಸುವುದೆ ತನಗೆ ಬಿನದಮಪ್ಪುಸಱಂ ಮನದೆಗೊಂಡು

ಕಂ || ಸುರನಾಯಕನಟ್ಟಿದ ಸುರ
ತರುಕುಸುಮಸುಗಂಧಮಣಿವಿಭೂಷಣವಸನೋ
ತ್ಕರದಿಂದಮಳಂಕೃತನಾ
ಗಿರೆ ಕರಮಸೆದತ್ತು ಮೂರ್ತಿ ಜಿನಮನ್ಮಥನಾ ೧೧

ಎತ್ತಿದ ಬೆಳ್ಗೊಡೆಯೆಸೆದಿರೆ
ಮುತ್ತಿ ಲಂಬಣದಿನವಱ ರುಚಿ ಪಸರಿಸಿ ಪ
ರ್ವಿತ್ತೆನೆ ಪೆರ್ವಿಡಿಯೇಱೆ ಬ
ರುತ್ತುಂ ಚಮರಜಮನಿಕ್ಕೆ ಕಮಳಾನನೆಯರ್ ೧೨

ಏಱಿ ದಿವಿಜೇಂದ್ರಗಜಮಂ
ಮಿಱುವ ಮದಗಜಮನಣೆದು ನೂಂಕಿಯುಮಧಿಪಂ
ಮಿಱಲಣಮಿಯದೇಱೆಯೆ
ಮಿಱಿದನೋಜೆಯೊಳೆ ನೆಗೞ್ದ ಭಗದತ್ತನುಮಂ ೧೩

ವ || ಅಂತಖಿಳವಿಳಾಸಕ್ಕಾವಾಸಮಾಗಿ ಪೌರನಾರೀಜನದ ಮನಮಂ ಮಾನಸಿಜಶಿಳೀಮುಖಕ್ಕೆ ಪಕ್ಕುಮಾಡುತ್ತುಂ ಪೋದಾಗಳ್

ಉ || ತೆಂಗಿನಕಾಯ ತೋಯದೊಳೆ ಚಂದನಗಂಧದೆ ಕುಂದಕುಟ್ಮಳೌ
ಘಂಗಳ ನಿರ್ಮಳಾಕ್ಷತದೆ ಜಾದಿಯಪ್ಪುಷ್ಪದೆ ಗಂಧಶಾಳಿಯು
ತ್ತುಂಗನಿವೇದ್ಯದುಜ್ಜಳಿಪ ಚಂಪಕದೀಪದ ಗುಗ್ಗಳಪ್ರಧೂ
ಪಂಗಳಿನಾಮ್ರಕಮ್ರಫಳದರ್ಚಿಪವೋಲಿರೆ ತದ್ಬಹಿಃಪುರಂ ೧೪

ವ || ಅಂತು ಚಿಲ್ವನೊಳಕೆಯ್ದ ಪೊಱವೊೞಲ ವಿಳಾಸಮಂ ಜಿನಕುಮಾರಕಂ ಸುರದಾರಕ ಸಮನ್ವಿತಂ ವಿಳೋಕಿಸುತ್ತುಮಿರ್ಪುದುಮಾ ಪ್ರಸ್ತಾಪದೊಳ್

ಕಂ || ನಡುವಗಲ ಸೂರ್ಯರಶ್ಮಿಯೆ
ಸುಡೆ ಸುಗಿಯದರಿಲ್ಲ ಮತ್ತಮದಱೊಡಗೂಡಿ
ರ್ದೆಡೆಯುಡುಗದೆ ನಾಳ್ದೆಸೆಯಿಂ
ಸುಡುವನಳಜ್ವಾಳೆಗೞ್ಕದಿರ್ದಪನೊರ್ವಂ ೧೫

ವ || ಎಂದೊರ್ವಂ ತಪಃಸಾರಾಸಾರತೆಯನಱಿಯದ ನಿರ್ಬುದ್ಧಿಯಿರ್ಪುದಂ ಬಿನ್ನವಿಸಿಯಲ್ಲಿವರಂ ಬಿಜಯಂಗೆಯ್ದು ದೇವರ್ ಚೋದ್ಯಾವಹಮಂ ನೋೞ್ಪುದೆಂದಾಗ್ರಹಮಂ ಮಾಡೆ

ಕಂ || ಅಂತಸ್ತತ್ತ್ವ ಮನಱಿಯದ
ವಂ ತಳೆಗುಂ ತೋಷಮಂ ಬಹಿರ್ವಿಷಯದೊಳ
ಭ್ಯಂತರದೊಳೆ ತೋಷಮನಾ
ಳ್ಗುಂ ತತ್ತ್ವವಿವೇಕಿ ವಿಗತಬಹಿರಾಶ್ಚರ್ಯಂ ೧೬

ವ || ಎಂದಿಂತಗಾಧಬೋಧತರಂಗಿಣೀನಾಥಂ ಸಮುತ್ತರಂಗತರಂಗ ಸಂಗತಮಪ್ಪಂ ತರಂಗದೊಳ್ ಭಾವಿಸಿ ಮುಗುಳ್ನಗೆ ನಗುತ್ತುಮಿಂತೆಂದಂ

ಕಂ || ದುರಿತೇಂಧನಮಂ ಸುಡುಗುಂ
ಪರಮ ಧ್ಯಾನಾಗ್ನಿಯುೞಿದ ಪಂಚಾಗ್ನಿ ವಪುಃ
ಪರಿಪೀಡೆಯನೀಗುಮಿದಂ
ಪರಿಭಾವಿಸನಿಂತು ತಾಪಸಂ ಬಹಿರಾತ್ಮಂ ೧೭

ಎನಸುಮುವಿಗುಟ್ಟಿ ಕೆಯ್‌ಪುಗು
ೞನಾಂತುದೆಂಬಂತೆ ತತ್ತ್ವ ವಿದರಲ್ಲಸರೊಂ
ದು ನೆಗೞ್ತೆ ದುರಿತಕರಮಯ
ವಿನಾಶಕಂ ದಯೆಯನುೞಿದು ನೆಗೆೞ್ವುದೞಿಂದಂ ೧೮

ಸಸಿಯಂ ಬಿಸುಟ್ಟು ಬೆಳೆಯಿಸಿ
ಕಸಮಂ ಸತ್ಫಳಮನಱಸುವವನೆಸಕಂ ತಾ
ಪಸನೆಸಕಮಕಟ ಗುಣಮಂ
ಬಿಸುಟ್ಟು ಪಾಪಮನನಾರತಂ ಪೊರೆವುದಱಿಂ ೧೯

ಅರಿದಾದೊಡಮೇಂ ಕೊಲ್ಲಟಿ
ಗರಾಟದಂತಪರಿಮಿತ ತಪಂ ಬಾರದು ಬ
ಲ್ಲರ ಬಗೆಗುಚಿತಕಳಾಗಮ
ವಿರಹಿತಮಪ್ಪುದಱೆನೆಂದು ನುಡಿಯೆ ಕುಮಾರಂ ೨೦

ವ || ಅಂತು ತನ್ನ ತಪಮಂ ಪ್ರಶಂಸೆಮಾೞ್ಪನನಜ್ಞನೆಂದವಜ್ಞೆಗೆಯ್ವುದುಮನತಿ ದೂರಮಾಗಿರ್ದಾ ತಾಪಸಪಾಶನಾಲಿಸಿ

ಕಂ || ಬಿಸುಟು ಪರಲೋಕಚಿಂತೆಯ
ನಸಾರಮಂ ಖ್ಯಾತಿಲಾಭಪೂಜಾದಿಯನ
ರ್ಥಿಸಿ ನೆಗೞ್ವ ಕುಲಿಂಗಿಯದೇ
ಕೆ ಸೈರಿಕುಂ ಶಿಖಿವೊಲುದ್ದಮುರಿಯುತ್ತೆೞ್ದಂ ೨೧

ವ || ಅಂತನಳನಾರಾಧನೆಯಿಂ ತನಗಮಳತೆಯಾದುದೆಂಬಂತೆ ಕಿಡಿಕಿಡಿವೋಗುತ್ತ ಮುತ್ತಮ ದಯಾಮೂಲ ಧರ್ಮಕುಜಕುಠಾರಮನಾವಠರಂ ಭವಾಟವಿಯೊಳ್ ತಾಂ ತಿರಿವು ದನಭಿನಯಿಸುವಂತೆ ತಿರಿಪುತ್ತುಂ ಜಗದಾರಾಧ್ಯಂ ತನಗಸಾಧ್ಯನೆಂಬುದಂ ಕಂಡು ನಿರಪರಾಧನಪ್ಪ ತಪೋಧನನಂ ವಧಿಯಿಸಿದನೆಂಬಪವಾದಮನಾದೊಡಮವಂಗೆ ಪೊರ್ದಿಸಿ ಯಶೋವಧಮಂ ಮಾಡುವೆನೆಂದುದ್ದಂಡ ಮದವೇದಂಡಕ್ಕಡ್ಡಂ ಬಂದು ನಿಂದು

ಕಂ || ಅರಸರೆಮೆಂದಧಿಕರನಾ
ದರಿಸದೊಡಂ ಪೆಱರುಮೆಱಗುತಿರ್ದೊಡಮದುವಂ
ಪರಿಕಿಸದೆ ನುಡಿದು ಕಿಡಿಪುದು
ಪುರುಷಾರ್ಥಮೆ ತಪದೊಳಱಿಪೆಯುಳ್ಳೊಡೆ ದೋಷಂ ೨೨

ಎನೆ ದರಹಸಿತಮುಖಾಬ್ಜಂ
ಜಿನನಾಥಂ ತೋಱಿದಪ್ಪೆನೀಗಳೆ ನಿನ್ನೊಂ
ದನುಪಮತಪದದುನ್ನತಿಯಂ
ನಿನಗೆಂದವನಾಶ್ರಮಕ್ಕೆ ತಡೆಯದೆ ನಡೆದಂ ೨೩

ವ || ಅಂತು ಕರುಣಾಕ್ರಾಂತಸ್ವಾಂತಂ ನಡೆತಂದು ದಳ್ಳೆಂದುರಿವ ಪೊೞಲ ಪುಳ್ಳಿಯಂ ಬಾಳತಪಸ್ವಿಯಂ ತಿಳಿಪುವ ಬಗೆಯಿಂದಾಗಲೆ ತೆಗೆಸಿ ಸೀೞೆಂದು ಸೀೞಿಸೆ

ಕಂ || ಎರಡುಂ ದೆಸೆಯುರಿವಿಂಧನ
ದುರುಕೋಟದೊಳಗೆ ಸಿಲ್ಕಿ ಬೇವುರಗನುಮಾ
ವುರಗಿಯುಮಾ ತಪಸಿಗಿಹಃ
ಪರದೊಳಮೊಗೆತಪ್ಪ ಪಾಪಮಂ ಪ್ರಕಟಿಸುತುಂ ೨೪

ಇರೆ ಕಂಡು ತಪಸಿಯುಂ ದು
ರ್ಧರತರಮೆಂದಿರದೆ ಪೊಗೞ್ವ ಜನಮುಂ ಬೆಱಗಾ
ಗಿರೆ ತೋಱಿ ತನ್ನ ಹೃದಯದ
ಕರುಣಾರಸಮಂ ಸಮಂತು ತೋಱುವ ತೆಱದಿಂ ೨೫

ವ || ಆಗಳ್‌ಜಿನಾಗಮನಿಪುಣನಾ ಭೋಗಿ ಮಿಥುನಂಗಳಂ ಪುಣ್ಯ ಭಾಗಿಗಳಂ ಮಾಡಲೆಂದು ಜಿನನಾಗಂ ನಾಗದಿಂದಮಿೞದು ಕಾರುಣ್ಯಾಮೃತಮಂ ನಯನೆಕುವಳಯ ದಳಂಗಳಿಂ ತಳಿದು

ಕಂ || ಪಂಚಪದಮಂ ದುರಿತಕರಿ
ಪಂಚಾನನಪದಮನಖಿಳಸುಖನಿಕರ ಸುಧಾ
ಪಂಚಮಸಮುದ್ರಮಂ ಗುಣ
ಸಂಚಯಮಣಿನಿವಹಜನನರೋಹಣನಗಮಂ ೨೬

ಸಂಗತಭುವನತ್ರಯರಾ
ಜ್ಯಾಂಗನೆಯಂ ನಿಮಿಷದಿಂ ವಶಂಮಾಡುವ ಮಂ
ತ್ರಂಗಳನತಿಶಯಂಪಚ
ದಂಗಳನಹಿಗಳ್ಗೆ ಸಹಜಶುಭಮತಿ ಪೇೞ್ದಂ ೨೭

ವ || ಅಂತು ಪಂಚನಮಸ್ಕಾರಸುಧಾರಸಮಂ ಶ್ರವಣಾಂಜಳಿಗಳಿಂದೀಂಟಿಸಿದುದೆ ತಮಗಮೃತಾಶನತ್ವಮಂ ಸಮರ್ಥಿಸಿತೆಂಬಂತೆ

ಕಂ || ವರಭವನಾಮರಲೋಕದೊ
ಳುರಗಂ ಧರಣೇಂದ್ರನಾಯ್ತು ಪದ್ಮಾವತಿಯಾ
ಯ್ತುರಗಿ ಮಿಗೆ ಪಂಚಪದಮಂ
ಪರಿಭಾವಿಸಿ ಕೇಳ್ದು ಪಡೆದ ಪುಣ್ಯೋದಯದಿಂ ೨೮

ನಿಮಿಷದೊಳನಿಮಿಷಪದಮಂ
ಸಮರ್ಥಿಸಿತ್ತಹಿಗಮಱಿವು ನಂಬುಗೆ ಶುಭವೃ
ತ್ತಮಿವಿಲ್ಲದಿರೆಯುಮಂತನಿ
ತುಮನಾಂತರ್‌ನೆನೆಯೆ ಪಂಚಪಮೀಯದುದೇಂ ೨೯

ಭವನಾಮರಪದಮಂ ಸುಖ
ಭವನಮನಹಿಮಿಥುನಮಂ ಸಮಂತೆಯ್ದಿಸಿ ಪೊ
ಕ್ಕು ವಿಳಾಸದಿಂದೆ ಪುರಮಂ
ಭವನಮುಮಂ ಜಿನಕುಮಾರನಿರೆ ಸೊಗಯಿಸುತುಂ ೩೦

ನವಯೌವನನಾದ ತನೂ
ಭವನಂ ಕಂಡಶ್ವಸೇನನರಪತಿಪರಮೋ
ತ್ಸವದಿಂ ವಿವಾಹಮಂ ಮಾ
ಡುವೆನೆಂದು ನಿರೀಕ್ಷಿಸಲ್ಕೆ ನೃಪಕನ್ನೆಯರಂ ೩೧

ವ || ಅಂತು ಕನ್ಯಾರತ್ನಲಕ್ಷಣಪರೀಕ್ಷಣಪ್ರಯತ್ನಚಿತ್ತರಪ್ಪ ಮಹತ್ತರರಂ ರತ್ನೋಪಾಯನಪುರಸ್ಸರಂ ಕಳಿಪುವುದುಮವರ್‌ಕತಿಪಯಪ್ರಯಾಣಂಗಳಿಂ ಕಷೋಣೀಪತಿಗಳ ಪುರಂಗಳನೆಯ್ದಿಯವರ ರಾಜಭವನಮಂ ನಿವೇದಿತನಿಗಜಾಗಮನವೃತ್ತಾಂತರಾಗಿ ಪೋಗಿ ಪಾಗುಡಮಂ ಕೊಟ್ಟು ನೆಟ್ಟನವರ್ಗೆ ತಮ್ಮ ಬರವಿಂತೆಂಬುದಂ ಪೇೞೆ ಕೇಳ್ದವನೀಕಾಂತರೆಲ್ಲರು ಮತ್ಯಂತ ಸಂತೋಷಮನಾಂತಿಂತೆಂದರ್‌

ಮ || ಒಡೆಯಂ ತ್ರೈಭುವಕ್ಕೆನಿಪ್ಪನುಪಮಂ ಶ್ರೀಪಾರ್ಶ್ವನಾಥಂ ವರಂ
ಗಡ ವಿಶ್ವಸ್ತುತನಶ್ವಸೇನನೃಪನುಂ ಶ್ರೀಬ್ರಹ್ಮದತ್ತಾಖ್ಯೆಯುಂ
ಪಡೆಮಾತೇಂ ನಮಗಪ್ಪ ನಂಟರೆನೆ ಮಾನ್ಯರ್‌ನಾಮೆ ದಲ್ ಧನ್ಯರೀ
ಯೆಡೆಯಿಂ ಕೊಳ್ಕೊಡೆಗುಂಟೆ ಮತ್ತಮುಚಿತಸ್ಥಾನಂ ಧರಿತ್ರೀನುತಂ ೩೨

ವ || ಎಂದು ನಿಶ್ಚಯಿಸಿ

ಕಂ || ಕೆಲರಾಚಾರಕ್ಕೆ ಕೆಲರ್‌
ಕಳಾವಿಳಾಸಕ್ಕೆ ಕೆಲರುದಾರಕ್ಕೆ ಕೆಲರ್‌
ಲಲಿತಾಕಾರಕ್ಕೆ ಕೆಲರ್‌
ಕುಲಕ್ರಮಕ್ಕೆಳಸಿ ನಿಖಿಳನರಪತಿಸುತೆಯರ್‌೩೩

ಕಿವಿ ಬೇಟಂಗೊಂಡೊಡಮೇಂ
ಯುವತಿಯರ ವಿಳೋಕನಂ ಮನಂ ಹಸ್ತಮುದಮೊ
ಪ್ಪುವ ಜಿನನ ರೂಪನೀಕ್ಷಿಸ
ಲವಿಚಳಿತಂ ನೆನೆಯಲೆಸೆಯೆ ಬರೆಯಲ್‌ಪರಿಗುಂ ೩೪

ಕೆಂದಾವರೆಯಲರ್ಗಳ ರಜ
ದಿಂದಂ ಪೊರೆದಿರ್ದ ಪೂಗೊಳನನೀಕ್ಷಿಸಿ ದ
ಳ್ಳೆಂದುರಿವ ಮನ್ಮಥಾನಳ
ನಿಂದಗಿದರ್‌ವಿರಹ ವಿಧುರ ವನಜಾನನೆಯರ್‌೩೫

ವ || ಅಂತು ಮುನ್ನಮೆ ಸಮುನ್ನತಪಾರ್ಶ್ವಜಿನಗುಣವರ್ಣನಾಕರ್ಣನದಿಂ ಕಂತುಶರಾ ಕ್ರಾಂತಸ್ವಾಂತೆಯರಾಗಿರ್ದುದನವರವರ ಪರಿಚಾರಕಿಯರಿಂ ಕೇಳ್ದು ನಾಮೆ ಮುನ್ನಂ ಕನ್ನೆಯರನೊಯ್ದು ಕುಡುವಮೆಂಬಧ್ಯವಸಾದಿಂದಮಿರ್ದೆವನಿತರ್ಕೆ ನಮ್ಮ ಪುಣ್ಯ ಪ್ರೇರಣೆಯಿಂ ನೀಮೆ ಬೇಡೆ ಬಂದಿರೆಂದಾನಂದಮನೊಳಕೊಂಡು ಮಂಡಳಾಧಿಪತಿಗಳ್‌ಬೞಿವೞಿಗೆ ತಂತಮ್ಮ ಸರ್ವಸ್ವಮಂ ಸಮಕಟ್ಟಿ

ಉ || ಕೊಟ್ಟು ಕೃತಾರ್ಥರಪ್ಪೆವೆನುತುಂ ಘನಮಂಗಳತೂರ್ಯನಿಸ್ವನಂ
ಮುಟ್ಟೆ ದಿಗಂತಮಂ ನಿಜಕುಮಾರಿಯರಂ ಮದನಂಗೆ ಪಟ್ಟಮಂ
ಕಟ್ಟುವ ರೂಪಿನಿಂ ಸೊಬಗಿನಿಂ ಸೊಗಸಿಪ್ಪವರಂ ಸಮಂತು ಮುಂ
ದಿಟ್ಟು ಪುರಕ್ಕೆ ವಂದರೊಲವಿಂದವನೀಶ್ವರರಶ್ವಸೇನನಾ ೩೬

ಕಂ || ಬರೆ ಪೋಗಿ ನೃಪಾಳಕರಂ
ಕೊರಲಪ್ಪಿ ಪುರಕ್ಕೆ ತಂದು ವಿವಿಧೋಚಿತದಿಂ
ಪರಿತೋಷಮನೆಯ್ದಿಸಿದಂ
ಪುರುಷಾರ್ಥನಿಧಾನನಶ್ವಸೇನನೃಪಾಳಂ ೩೭

ವ || ಅಂತಾ ಮಹೀಕಾಂತರಂ ದಾನಸನ್ಮಾನಾದಿಗಳಂ ಬೀಱೆಯುಂ ವಿವಿಧ ವಿನೋದಂಗಳಂ ತೋರಷೆಯುಂ ಸಂತಸಂಬಡಿಸಿ ಪರಿಣಯನಪರಿಕರಮಂ ಪರಮೋತ್ಸವದಿಂ ಗೃಹಮಹತ್ತರಂಗಳವಡಿಸುವಂತು ನಿಯಮಮನಿತ್ತು

ಚಂ || ನವಯುವನಾದನೀ ಸಮಯದೊಳ್‌ಜಿನನಂ ವಶವರ್ತಿಯಾಗಿ ಮಾ
ಡುವೆನುೞಿದಂದು ತಾಳ್ದಿ ತಪಮಂ ನಿಜಯೋಗದಿನೆನ್ನನಾವಗಂ
ತವಿಸುಗುಮೆಂದು ಮನ್ಮಥನೃಪಂ ನಿಜಮೋಹನಮಂತ್ರದೇವತಾ
ನಿವಹಮನಟ್ಟಿದಂದದೊಳೆ ಕಣ್ಗೆಸೆದರ್‌ನರಪಾಳಪುತ್ರಿಯರ್‌೩೮

ವ || ಅಂತು ವಿರಾಜಿಸುವ ರಾಜತನೂಜೆಯರಂ ಸೌಭಾಗ್ಯಸಂಪನ್ನೆಯರಂ ಚೆನ್ನೆಯರಂ ನೋಡಿ ನಿಜತನಯನ ಮನಮನಿವರವಯದಿನೆಱಗಿಸಲ್‌ನೆಱೆವರೆಂದಶ್ವಸೇನಮಹೀನಾಥನುಂ ಬ್ರಹ್ಮದತ್ತಾಮಹಾದೇವಿಯುಂ ರೋಮಾಂಚಕಂಚುಕಿತಗಾತ್ರರಾಗಿ ರಾಜಪುತ್ರಿಯರ ವೃತ್ತಾಂತಮನಱಿಪಲ್‌ನೆಱೆವ ಚತುರವಚನಸಂಚಯಕಂಚುಕಿಯಂ ಕಳಿಪುವುದು ಮಾ ಸೌವಿದಲ್ಲಂ ವಿಜಿತಾಂಗಜಾಕಾರ ಸುಕುಮಾರ ಕುಮಾರನಿರ್ದತಿ ಪ್ರಮೋದ ಸಂಪಾದಿಯಪ್ಪ ವಿನೋದಶಾಲೆಗೆ ಬಾಲೆಯರಂ ಮುಂದಿಟ್ಟೊಡಗೊಂಡು ಬಂದು ವಿನಯದಿಂದವರೆಱಗುವುದನಱಿಪುವಂದದಿಂ ತಾನೆಱಗಿ ಕುಮಾರಂಗೆ ಬೞಿಕ್ಕಿಂತೆಂದು ಬಿನ್ನವಿಸಿದನೀ ಕಂಕೆಲ್ಲೀಪಲ್ಲವೋಪಮಪದಪಲ್ಲವೆ ಪಲ್ಲವಮಹೀವಲ್ಲಭ ತನುಪ್ರಭವೆ ಈ ಸ್ಮರಶರಶರಧಿ ಸಮಾನ ಜಾನುಪರದೇಶೇ ಕೋಸಲದೇಶಾಧೀಶತನೂ ಸಂಭವೆ ಈ ರಂಭಾಸ್ತಂಭ ವಿಸ್ತಾರೋರುಸ್ತಂಭೆ ಕಾಶ್ಮೀರಕುಂಭಿನೀಪತಿಸುವೆ ಈ ಕಾಂಚನಕಾಂಚೀಸಮಂಚಿತಘನಜಘನೆ ಪಾಂಚಾಳರಾಜತನೂಜೆ ಈ ಗಂಭೀರಶೋಭಾನಾಭಿಮಂಡಳೆ ಪಾಂಡ್ಯಧಾತ್ರೀಪಾಳಪುತ್ರಿ, ಈ ಲಾವಣ್ಯರಸರುಚಿರಕುಚಕಳಶೆ ಕಳಿಂಗನೃಪಾಂಗಜೆ ಮೃಣಾಳನಾಳ ಲೀಲಾಲಂಕೃತ ಜಯ ಈ ಶಿರೀಷದಾಮಸುಕುಮಾರ ಶೋಭಾವಹಬಾಹುಶಾಖೆ ಶಾಕಂಭರೀಶಾತ್ಮಜೆ ಈ ನಿಕಾಮಕೋಮಳಕಂಬುಕಂಧರೆಯಿಂದ್ರನರೇಂದ್ರನಂದನೆ ಈ ಪ್ರವಾಳಲೀಲಾಧರೆ ಚೋಳಧರಾರಮಣಸಮುತ್ಪನ್ನೆ ಈ ಕೈರವದಳಧವಳಲೋಚನೆ ಕೇರಳಮಹೀತಳಸಂರಕ್ಷಕ ಸಂಜಾತೆ ಈ ಮೃಣಾಳನಾಳ ಲೀಲಾಳಂಕೃತಕರ್ಣಪಾಳಿಕೆ ನೇಪಾಳಭೂಪಾಳಕುಮಾರಿ ಈಯಷ್ಟಮೀವಿಶಿಷ್ಟೇಂದು ಲಲಿತಲಲಾಟೆ ಲಾಟದೇಶಪ್ರಭುಪ್ರಭೂತೆ ಈ ಮಧುಕರಮಾಳಾ ನೀಳಕುಂತಳೆ ಕುಂತಳ ಮಹೀಕಾಂತಕನ್ಯಕೆ ಈ ಮರಾಳಲೀಲಾಲಸಯಾನೆ ವರಾಳನರಪಾಳ ಶರೀರೋದ್ಭವೆ ಈ ಮಾಳತೀಮಾಳಾಕೋಮಳೆ ಮಾಳವಮಹೀನಾಥಪ್ರಸೂತೆಯೆಂದು ಕನ್ನೆಯರಂ ಬೇಱೆವೇಱೆಬಿನ್ನಮಿಸುತುಮಿರ್ಪುದುಮಾ ಪ್ರಸ್ತಾವದೊಳ್‌

ಕಂ || ಬಾಲೆಯರಪಾಂಗರೋಚಿ
ರ್ಮಾಲಾಮಾಳತಿಯನಿಕ್ಕಿ ಬೞಿಯಂ ಕೊರಲೊಳ್‌
ಮಾಲೆಯನಿಕ್ಕುವ ಮನದಿಂ
ಮೇಳಿಸೆ ಮನಮೊಲ್ದುದಿಲ್ಲ ಜಿತಮನ್ಮಥನಾ ೩೯

ಚಂ || ಕುಸುಮಶರಕ್ಕೆ ಚಂದ್ರನನನೂನಕಳಾಪರಿಪೂರ್ಣಂ ನಿರೀ
ಕ್ಷಿಸಿ ಗುಱೆಯಪ್ಪವೋಲಬಲೆಯರ್ಕಳವಂದಿರನೇನೊ ಚಂದ್ರನೀ
ಕ್ಷಿಸಿ ಗುಱೆಯಕ್ಕುಮೇ ಜಿನನಮೂರ್ತಿಯುಮಂತೆ ಲತಾಂಗಿಯರ್ಕಳಂ
ಮಿಸುಗಿ ಮರುಳ್ಚಿತಲ್ಲದವರ್ಗೇನೆಱಗಿತ್ತೆ ವಿಳಾಸಭಾಸುರಂ ೪೦

ಕಂ || ನೆರಪಿ ರುಚಿರಾರ್ಥತತಿಯಂ
ನಿರವಿಸೆ ಬಾಣಸಿಗನ ರುಚಿ ಪುಟ್ಟಿದವಂಗಾ
ದರಮಾಗದಂತು ಕಂಚುಕಿ
ನಿರವಿಸೆ ರುಚಿ ಪುಟ್ಟಿತಿಲ್ಲ ವಿಭುಗಬಲೆಯರೊಳ್‌೪೧

ವ || ಆಗಳ್‌ತಮ್ಮುದ್ಯೋಗಿಸಿದುದ್ಯೋಗಂ ಸಫಳಮಾಗದಿರದೆಂದು ಮನೋನುರಾಗದಿಂ ಕಂಚುಕಿಯ ಬೞಿಯನೆ ಬಂದು ವಿವಾಹಸಂಬಂಧಮನನುಬಂಧಿಸಲೆಂದಶ್ವಸೇನ ನೃಪೋತ್ತಮನುಂ ಬ್ರಹ್ಮದತ್ತಾಮಹಾದೇವಿಯುಂ ದೇವದೇವೋತ್ತಮಗಿಂತೆಂದು ಬಿನ್ನಪಂಗೆಯ್ದರ್‌

ಕಂ || ನಯನಚಕೋರಂ ಲಲಿತಾಂ
ಗಿಯರ ಸರಸಹೃದಯಕುವಳಯಂ ಸಕಳ ಕಳೋ
ದಯನಿಧಿ ನಿಜಪ್ರಸಾದ
ಪ್ರಿಯಂಗಳವನಿತ್ತಲರ್ಚುವುದು ಕುಳತಿಳಕಾ ೪೨

ವ || ಅಂತುಮಲ್ಲದೆ

ಮ || ಜನನಾಥರ್‌ನಿನಗೀವೆವೆಂಬ ಭರದಿಂದಂ ತಂದರೀ ಕನ್ನೆಯರ್‌
ನಿನಗಿಷ್ಟಾಂಗನೆಯರ್ಕಳಪ್ಪೆವುರೞಿದಂದೇಮಾತೊ ತಾಮುಂ ತಪೋ
ವನಮಂ ಪೊರ್ದುವೆವೆಂದು ಪೂಣ್ದರದಱೆಂ ಕಾರುಣ್ಯವಾರಾಶಿ ನೆ
ಟ್ಟನೊಡಂಬಟ್ಟು ವಿವಾಹಮಂ ಪಡೆವುದೆಮ್ಮೆಲ್ಲರ್ಗಮುತ್ಸಾಹಮಂ ೪೩

ವ || ಎಂದವರಭಿಪ್ರಾಯಮನಱೆಪುವಂತುಕ್ತಿಪ್ರಿಯಂಗೆ ಅರ್ಥಿ ದೋಷಂ ನ ಪಶ್ಯತಿಯೆಂಬ ಮಾತಂ ಮಾತಾಪಿತೃಗಳ್‌ನನ್ನಿಮಾಡುತ್ತುಮತ್ಯಾಗ್ರಹಮಂ ಮಾಡುತ್ತುಮಿರೆ ಕುಮಾರಂ ತನ್ನಂತರಂಗದೊಳಿಂತೆಂದಂ

ಕಂ || ಮೃಗಲೋಚನೆಯರ್ಕಳಿವರ್‌
ಮೃಗದಂತೆವೊಲೆಳಸಿ ಬಿಳಸುತಿರ್ದಪರಾನುಂ
ಮೃಗದಂತೆ ಗೋರಿಗೊಳಗಾ
ಗೆ ಗಡತನುವ್ಯಾಧಬಾಣಬಾಧೆಯದಕ್ಕುಂ ೪೪

ಮ || ನೆಗೞ್ದೀ ರಾಜತನೂಜೆಯರ್ಕಳಿವರ್ಗಂ ನಾಂ ತಾತನೆಂದುಕ್ತಿಗಂ
ಬಗೆಗೆಟ್ಟೈಹಿಕಸೇವೆಯೊಳ್‌ತೊಡರ್ದೋಡೀ ಕೆಯ್ನೀರೆ ಸಂಸಾರವ
ಲ್ಲಿಗೆ ಪೊಯ್ನೀರೆನಿಸಿರ್ಕುಮೀ ಮದುವೆಗಾನೇಗೊಂಡೊಡೇಮಾತೊ ನೆ
ಟ್ಟಗೆ ದುಷ್ಕರ್ಮಫಳಪ್ರಸೇವನೆಗಮಾನೇಗೊಂಡೆನೇನಾಗೆನೇ ೪೫

ಕಂ || ಜನಕನತಿಮುಗ್ಧವಚನಂ
ಜನನಾಬ್ಧಿಯೊಳೞ್ದುಗುಂ ದೃಷದ್ದೋಣಿವೊಲೆಂ
ತನುಚಿತಮನೊಡಂಬಟ್ಟಪೆ
ನೆನುತ್ತುಮವಕರ್ಣಿಸಲ್ಕೆ ಬಗೆದಘದೂರಂ ೪೬

ವ || ಅಂತು ಬಗೆದು ನಿಜಪಿತೃಯುಗದ ಮನದಾಗ್ರಹಮಂ ಮಾಣಿಸಲೆಂದಿಂತೆಂದಂ

ಕಂ || ಆಯತಿಗಹಿತಕರಾನ್ಯ
ಸ್ತ್ರೀಯರ ಮದುವೆಯೊಳವೇನೋ ನಿಶ್ಚಳಿತತಪಃ
ಶ್ರೀಯೆ ಸುಖಮೂರ್ತಿ ಮುಕ್ತಿ
ಶ್ರೀಯ ವಿವಾಹಮೆ ವಿದಗ್ಧರಿಂ ಕರಣೀಯಂ ೪೭

ಏನಿದು ಕರಣಮೆ ಮುಕ್ತಿ
ಸ್ಥಾನಮನೆಯ್ದುವರ್ಗೆ ವೃತ್ತಮೋ ದರ್ಶನಮೋ
ಜ್ಞಾನಮೊ ಮದುವೆಯಿದರ್ಕ
ಜ್ಞಾನಿಗಳವೊಲೇಕೆ ಮಾೞ್ಪಿರತ್ಯಾಗ್ರಹಮಂ ೪೮

ವ || ಎಂದು ತನ್ನ ನಿಸರ್ಗವೈರಾಗ್ಯಮಂ ಪ್ರಕಟಿಸಿಯವರ ದುರಾಗ್ರಹವೃತ್ತಿಯಂ ವಿಘಟಿಸುವುದುಮಾ ಮಹೀವಲ್ಲಭರ ತನೂಭವೆಯರೆಲ್ಲರುಂ ತನ್ನಾದುದನಪ್ಪೆಮೆಂದು ಪರಿಚ್ಛೇದ ಮನಪ್ಪುಕೆಯ್ದಿರ್ದರ್‌ಜಿಜಕುಮಾರನುಂ ಕುಮಾರಕಾಲಂ ಮೂವತ್ತುಬರಿಸಂ ಪೋಗೆ ವಿಷಯವಿರಾಗತಾಸಂಪನ್ನನಾಗಿರ್ಪುದುಂ ಮತ್ತೊಂದು ದೆವಸಂ

ಕಂ || ಜಾತಿತುರಂಗಮುಮಂ ಸಾ
ಕೇತದ ಜಯಸೇನಭೂಮಿಪತಿ ಪಾಗುಡಮಂ
ಪ್ರೀತಿಯೊಳೆ ಕಳಿಪೆ ತಂದಭಿ
ಜಾತಮಹತ್ತರನನುಚಿತ ವಾಗ್ವಿಸ್ತರನಂ ೪೯

ವ || ಸಮುಚಿತ ಸಮಯದೊಳ್‌ಕಾಣಿಸಿಕೊಂಡನನಾಕ್ಷೋಣೀಪಾಳಕ್ಷೇಮಕುಶಲ ವಾರ್ತಾಪ್ರಶ್ನಾನಂತರಂ ನಿಜನಾಥಪುರಂ ಪುರುದೇವಜನನಪಾವನಗುಣಧಾಮಮುಂ ನಾಮತ್ರಯಾಭಿರಾಮಮುಮಾಗಿರ್ಪುದದನೆಮಗೆ ಕೇಳಲೞ್ತಿಯಾದಪುದು ಪೇೞೆನೆ ಮಹಾ ಪ್ರಸಾದಮೆಂದು ಹಸ್ತಕಮಳಮಂ ಮುಗಿದು ಮಹತ್ತರಂ ಸವಿಸ್ತರಮಿಂತೆಂದು ಬಿನ್ನವಿಸಿದಂ

ಮ || ಗುರುದೇವಾಂಘ್ರಿವಿನೀತಸಜ್ಜನರ ಚೆಲ್ವಿಂದಂ ವಿನೀತಾಖ್ಯೆಯಂ
ಪರರಿಂದೆಂತುಮಯೋಧ್ಯಮಾದ ಗುಣದಿಂ ಸಂದಿರ್ದಯೋಧ್ಯಾಖ್ಯೆಯಂ
ಸ್ಫುರಿತೋದ್ಯನ್ಮಣಿಕೇತನಪ್ರಕರದಿಂ ಸಾಕೇತಮೆಂಬಾಖ್ಯೆಯಂ
ನಿರುತಂ ತಾಳ್ದಿ ವಿರಾಜಿಕುಂ ಪುರುಜಿನಶ್ರೀಜನ್ಮಗೇಹಂ ಪುರಂ ೫೦