ಕಂ || ದೇವ ನಿಜೋದಯದಿಂದಂ
ಪಾವನಮೀ ವಾರಣಾಸಿಯಾದವೊಲಾದಂ
ಪಾವನಮಾದತ್ತದು ಪುರು
ದೇವೋದಯದಿಂದಯೋಧ್ಯೆ ಜಗದಾರಾಧ್ಯಾ ೫೧

ದೇವಪತಿ ಪೇೞೆ ಧನದಂ
ರೈವೃಷ್ಟಿಯನೆಸಗೆ ಮಾಡೆ ಪದ್ಮಾದಿ ಸರೋ
ದೇವಿಯರುಂ ರುಚಕಾಚಳ
ದೇವಿಯರುಂ ತಾಯ್ಗೆ ಗರ್ಭಸಂಶೋಧನಮಂ ೫೨

ಮ || ಜಯವರ್ಮೇಶಮಹಾಬಳಾಖ್ಯಲಲಿತಾಂಗಂ ವಜ್ರಜಂಘಾರ್ಯತುಂ
ಗ ಯಶಶ್ರೀಧರನಾಕಜಂ ಸುವಿಧಿಭೂಪಾಳಾಚ್ಯುತಂ ವಜ್ರನಾ
ಭಿಯಸೇಷಕ್ಷಿತಿಪಾಳಭಾಳತಿಳಕಂ ಸರ್ವಾರ್ಥಸಿದ್ಧೀಶನಾ
ಗಿ ಯುಗಾದ್ಯಂ ಮರುದೇವಿಗಂ ಪುರುಜಿನಂ ಶ್ರೀನಾಭಿಗಂ ಪುಟ್ಟಿದಂ ೫೩

ಕಂ || ಪ್ರಿಯರತ್ನಮಯಂ ಜಗದಾ
ಶಯಮಾದುದು ಮುನ್ನಮುದಯಿಸುತ್ತಿರೆ ರತ್ನ
ತ್ರಯಮಯಮಾದುದು ಬೞಿಕಿಂ
ತಯನಯಸಂಪತ್ತಿ ವಿಸ್ಮಯಂ ವೃಷಪತಿಯಾ ೫೪

ವ || ಅಂತುದಯಿಸುವುದುಂ ದೇವರಾಜಂ ದೇವರ್ಗೆಂತು ನಿಸರ್ಗಭಕ್ತಿಯಿಂ ಮಂದರ ಮಹೀಧರಮಸ್ತಕದೊಳ್‌ಸಮಸ್ತ ದೇವನಿಕಾಯಂಬೆರಸತಿ ಪ್ರಶಸ್ತ ಕ್ಷೀರನೀರಾಕರ ನೀರುಗಳಿಂ ಜನ್ಮಾಭಿಷೇಕಮನೊಡರ್ಚಿದನಂತೆ ವೃಷಭಂಗಂ ಜನ್ಮಾಭಿಷೇಕಮನನಂತರಂ ರಾಜ್ಯಾಭಿಷೇಕಮುಮಂ ಮಾಡೆ ಪಲವು ದೆವಸಂ ಪರೋಪಕಾರಶೀಲಂ ವರ್ಣಾಶ್ರಮಗುರುವಸಿ ಮಸಿ ಕೃಷಿ ವಾಣಿಜ್ಯಾದಿ ಷಟ್ಕರ್ಮಮುಮಂ ನಿರ್ಮಳಧರ್ಮಮುಮನೈಹಿಕಾಮುಷ್ಮಿಕಸುಖ ಸಂಪಾದಕಂಗಳಂ ಸಕಳಾಶ್ರಮಕ್ಕಂ ನಿವೇದಿಸಿ ಪರಮಾಹ್ಲಾದಮನಾಪಾದಿಸುತ್ತುಂ ಸಮಸ್ತ ಧಾತ್ರಿಯಂ ಪ್ರತಿಪಾಲಿಸುತ್ತುಮಿರ್ದು ಸುಕವಿಜನಮನೋರಂಜನ ಲೀಲಾಂಜನಾ ನೃತ್ಯನಿರೀಕ್ಷಣ ವ್ಯತಿಕರ ಪ್ರಭೂತಭೋಗವೈರಾಗ್ಯಪರಂ ಪರಮಪುರುಷಾರ್ಥದತ್ತಚಿತ್ತನುತ್ತಮ ದೀಕ್ಷೆಯಂ ಕೈಕೊಂಡಖಂಡಿತ ಯೋಗನಿಯೋಗದಿಂ ಘಾತಿಗಳಂ ವಿಘಾತಿಸಿ ಸಮುದ್ಭೂತಕೇವಳಾವಳೋಕನಂ ತ್ರಿಳೋಕಪತಿ ಸಮರ್ಚಿತ ಸಮವಸರಣಸಂಪತ್ತಿಯಂ ಪಡೆದು ಕಡೆಯೊಳ್‌ಕರ್ಮನಿರ್ಮೂಳನಂ ಮಾಡಿ ಮೋಕ್ಷಲಕ್ಷ್ಮೀಕುಚಕುಂಭಸಮುಲ್ಲಸಿತಪಲ್ಲವನಾದನೆಂದೆಲ್ಲ ಮಂ ಪರಿಮಿತವಚನಂಗಳಿಂ ತಿಳಿಪಿದ ಮಹತ್ತರನನುಚಿತಪ್ರತಿಪತ್ತಿಗಳಿಂ ಸಂತಸಂಬಡಿಸಿ ಕಳಿಪಿ ಪುರುಪರಮೇಶ್ವರಚರಮಾಚರಣಸ್ಮರಣಂ ಭವಸ್ಮರಣಕಾರಣಮುಂ ಸಂಸಾರ ಪಾರಾವಾರ ಸಮುತ್ತರಣ ವಿಶಿಷ್ಟವೈರಾಗ್ಯಕಾರಣಮುಮಾಗೆ

ಕಂ || ಪಂಚೇಂದ್ರಿಯವಶಗತನಘ
ಸಂಚಯಮಂ ಮಾಡಿ ಮಿಗೆ ಚತುರ್ಗತಿಗಳೊಳಂ
ಪಂಚಪರಾವರ್ತನಮಂ
ಪಂಚಮಗತಿವಡೆಯದಿಂತು ತಿರಿಗುಂ ಜೀವಂ ೫೫

ಮ || ಪುದಿದಜ್ಞಾನತೆಯಿಂ ಗೃಹೀತಮಗೃಹೀತಂ ಮಿಶ್ರಮೆಂಬೀ ವಿಭೇ
ದದ ನಾನಾಪರಮಾಣುವಂ ಪಲವುಸೂರೞ್‌ನೋಕರ್ಮಕರ್ಮಸ್ವರೂ
ಪದವಂ ಸ್ವೀಕರಿಸುತ್ತನೇಕವಿಧದುಃಖಾನೀಕಮಂ ದ್ರವ್ಯನಾ
ಮದ ಸಂಸಾರಸಮುದ್ರದೊಳ್‌ಮುೞುಗುತುಂ ತಾಂ ಸೇವಿಕುಂ ಜೀವಕಂ ೫೬

ನರಕಾದ್ಯುದ್ಭವರಾಯುವಂ ಸಮಯಮಂದೇಕೋತ್ತರಂ ವೃದ್ಧಿಯಾ
ಗಿರೆ ಮುನ್ನುಂಡವರಾಯುವಂ ಕ್ರಮದೆ ಮೂವತ್ತೊಂದುವಾರಾಶಿಯಂ
ನಿರುತಂ ಸೇವಿಸುಗುಂ ಜಿನೇಂದ್ರಪದಸೇವಾಭಾವಜೀವಂ ನಿರಂ
ತರ ದುಃಖಾನಳದಗ್ಧಮೂರ್ತಿ ಭವಸಂಸಾರಾಟವೀ ಮಧ್ಯದೊಳ್‌೫೭

ಮ || ಭುವನಾಕಾಶದ ಮಧ್ಯದೇಶಮದೆ ಮಧ್ಯಂ ತನ್ನ ಜನ್ಮಕ್ಕೆ ನಿ
ಕ್ಕುವಮಾಗಾಂತವರಾವಗಾಹನೆಯನಾದಂ ತತ್ಪ್ರದೇಶಂಗಳ
ಪ್ಪುವರಱೊಳ್‌ತಪ್ಪದೆ ಪುಟ್ಟುಗುಂ ವಿವಿಧವಾರಂ ಕ್ಷೇತ್ರಸಂಸಾರಭೈ
ರವ ದುಃಖಾರ್ಣವದಲ್ಲಿ ಕೂಡೆ ಪರಿಗುಂ ಮೂಢಾತ್ಮನಪ್ರೌಡಿಯಿಂ ೫೮

ಕಂ || ಎರಡುಂ ಕಲ್ಪದ ಸಮಯೋ
ತ್ಕರದೊಳನುಕ್ರಮದೆ ಸಂಕ್ರಮಿಸುಗುಂ ಮಡಿಗುಂ
ಪರವಶತೆಯಿನಾತ್ಮಂ ಬಹು
ತರವಾರಮಪಾರ ಕಾಲ ಸಂಸಾರಸ್ಥಂ ೫೯

ಯೋಗವಿಶೇಷಸ್ಥಿತ್ಯನು
ಭಾಗ್ಯಾನೋಬಂಧನ ಸ್ಥಿತಿಶ್ರೇಣಿಗಳೊಳ್‌
ರಾಗಾದಿ ಭಾವ ಪರಿವ
ರ್ತಾಗರ್ತದೊಳಾತ್ಮನಜ್ಞನಕ್ಕಟ ತಿರಿಗುಂ ೬೦

ನರಕಗತಿ ಸಮಮೆ ತಿರ್ಯ
ಗ್ನರಸುರಗತಿಗಳುಮವಂತೆದಲ್ಕಾ ನರಸುರರ್‌
ಪರವಶತಾಯೆಂಬಿದು ಬಿ
ತ್ತರಿಸೆ ಪರಾಧೀನಸುಖಮವಱೊಳುಳ್ಳುದಱೆಂ ೬೧

ಮ || ಸುಕೃತಾರಂಭದೆ ಪಾಪದಿಂ ಸುಕೃತ ಪಾಪಾರಂಭದಿಂ ದೇವ ನಾ
ರಕ ತಿರ್ಯಗ್ನರಜನ್ಮಜಾಳದೊಳೆ ಸಿಲ್ಕಿರ್ದಿನ್ನೆಗಂ ಮುಕ್ತಿಸಾ
ಧಕತತ್ತ್ವಾಮೃತಸೇವೆಯಂ ಪಡೆಯದಿರ್ದೆಂ ಮುಕ್ತಿ ಕೆಯ್ಸಾರ್ವೊಡೈ
ಹಿಕದೀಯಲ್ಪಸುಖಕ್ಕೆ ನಿಂದೊಡಳಿಪಿಂದೆನ್ನಿಂದಮಿಂ ಗಾಂಪರಾರ್‌೬೨

ಅತಿದುಃಖಾತ್ಮಕಮಪ್ಪ ನಾರಕಭವಂ ತಾನಿರ್ಕೆ ತಿರ್ಯಗ್ಗತಿ
ಸ್ಥಿತಿ ವಿಜ್ಞಾನವಿಹೀನಮೀ ಮನುಜಜನ್ಮಂ ಸೌಖ್ಯಲೇಶಂ ಸಮೂ
ರ್ಜಿತದುಃಖಂ ಸುರಜನ್ಮಮಂತ್ಯದೊಳದೆಂತುಂ ದುಃಖಯುಕ್ತಂ ಚತು
ರ್ಗತಿಯೊಳ್‌ಭಾವಿಪೊಡಿಲ್ಲ ಸೌಖ್ಯಮದಱೆಂ ಸಂಸಾರಮೇಂ ಸಾರಮೇ ೬೩

ಕಂ || ಇಲ್ಲಧಿಕಸುಖಫಳಂ ಭವ
ವಲ್ಲಿಯೊಳಱಸುವೊಡದೆಲ್ಲಿಯುಂ ನಿರ್ವೃತಿ ದೋ
ರ್ವಲ್ಲಿಯೊಳುಂಟದನೆಯ್ದಿಸು
ವಲ್ಲಿಗೆ ಜಿನದೀಕ್ಷೆ ದೂತಿ ಪೇೞ್‌ತೊದಳುಂಟೇ ೬೪

ವ || ಎಂದಿಂತು ಚತುರ್ಗತಿಗಳುಮಂ ದುರ್ಗತಿಗಳೆಂದು ಭೋಗಂಗಳುಮಂ ದುಃಖ ಭೋಗಂಗಳೆಂದು ಭಾವಿಸುತ್ತುಮಿರೆ

ಕಂ || ಲೋಕಾಂತಿಕದೇವರ್‌ಪರ
ಲೋಕಪ್ರಿಯರಲ್ಲದಂದು ಮುಂ ಬಾರದರೊ
ಲ್ದೇಕೆ ಜಿನಂ ಪರಹಿತಮಂ
ಸ್ವೀಕರಿಪುದುಮದನೆ ನುಡಿದು ದೃಢಮೆನಿಸಿದಪರ್‌೬೫

ವಿಷಯವಿರತರ್ಗೆ ನಿರುಪಮ
ವಿಷಯಂ ವಿಷಯದಂತಸೇವ್ಯಮಪ್ಪುದಱಂದಂ
ಋಷಿಗಳೆನೆ ದಿವದೊಳಿರ್ಪರ್‌
ತೃಷೆಯಿಲ್ಲದರುದಕಮೊಳ್ಳಿತೆನೆ ಕುಡಿದಪರೇ ೬೬

ವ || ಅಂತು ಮಹಿಮೆವೆತ್ತ ಸಾರಸ್ವತಾದಿಗಳಪ್ಪೆಣ್ಬರು ಲೋಕಾಕದೇವರ್‌ಪರಮ ರಮಣಿ ಕಳಿಪಿದ ವಿವಾಹವಿಧಿ ವಿಹಿತಮಹತ್ತರರಂತೆ ಬಂದು ಪರಮನ ಚರಣಸರಸಿರುಹಕ್ಕೆ ನಿಜಮೌಳಿಕೀಳಿತ ಪದ್ಮರಾಗದಿಂ ಪರಮನನಾಗಳೋಲಗಿಸಿ ಸುರತರುಸಂಜನಿತ ಕುಸುಮ ಮಂಜರಿಯಿಂ ಜಿನರಾಜನಂ ಪೂಜಿಸಿ

ಕಂ || ಲೋಲತೆ ವಿಷಯದೊಳಕ್ಕುಮ
ನಾಳೋಚಿಮತಿಗೆ ನಿನ್ನೊಳಾಗದದರ್ಕೀ
ಕಾಲಮನೆ ಪಾರುತಿರ್ದೆವು
ಕಾಲಂ ಪರಿಣಯನವಿಧಿಗೆ ಸುತಪಃಶ್ರೀಯಂ ೬೭

ಎಮಗಿದು ನಿಯೋಗಮೆಂದು ಪ
ರಮ ಬಿನ್ನವಿಸಿದೆಮಗಲ್ಲದೊಡೆ ನಿಜವೈರಾ
ಗ್ಯಮನಾರೊ ಪವಣಿಪರ್‌ಮು
ಕ್ತಿಮನೋಹರತಾರಹಾರಮೆನೆ ಸೊಗಯಿಪುದಂ ೬೮

ವ || ಎಂದಿಂತು ಲೋಕಾಂತಿಕದೇವರ್‌ದೈವಜ್ಞರಂತೆ ತಪೋಲಕ್ಷ್ಮಿಯ ವಿವಾಹೋತ್ಸಾಹಕ್ಕುತ್ಸುಕನಾಗಿರ್ದ ಶೀಲವತ್ಸಳನ ಮನಮಂ ಪ್ರೋತ್ಸಾಹಿಸಿ ಪೊಡವಟ್ಟು ಪೋದರಿತ್ತಲ್‌

ಚಂ || ಸುರಪತಿ ದೇವದೇವನ ವಿರಾಜಗತೆಯಂ ತಿಳಿದಾತ್ಮಬೋಧದಿಂ
ಪರಮ ತಪೋವಧೂಟಿಯ ವಿವಾಹದೊಳಾಗಲೆವೇೞ್ಕುಮೆಂದು ಬಿ
ತ್ತರಿಸಿರೆ ಮಜ್ಜನಂಬುಗಿಪವೋಲ್‌ಪರಿನಿಷ್ಕ್ರಮಣಾಭಿಷೇಕಮಂ
ಸುರಪಟಹಂಗಳುಣ್ಮೆ ಸುರಸಿಂಧುಜಲಂಗಳಿನಂದು ಮಾಡಿದಂ ೬೯

ವ || ಅಂತು ಚತುರ್ನಿಕಾಯನಾಕಿನಿಕಾಯಂಬೆರಸು ಪರಿನಿಷ್ಕ್ರಮಾಭಿಷವಣಾ ರ್ಚನೆಯಂ ನಿಮಿರ್ಚಿ ಸಮನಂತರಂ

ಕಂ || ತ್ರಿದಶಪತಿ ಜಿನಪತಿಯನಿಂ
ತಿದೆ ಶೃಂಗಾರಕ್ಕೆ ಸೀಮೆಯೆನೆ ಸುರತರುಗು
ಣ್ಮಿದ ಕುಸುಮವಸನದಿಂದಂ
ಸದಮಳಮಣಿಭೂಷಣಂಗಳಿಂ ಭೂಷಿಸಿದಂ ೭೦

ವ || ಅಂತಳಂಕರಿಸುವುದುಂ ಕಂತುಮಹೀಕಾಂತವಿಳಾಸವಿಜಯಮನಭಿನಯಿಸು ವಂದದಿಂದಭಿನವ ಸೌಂದರ್ಯದೊಳೊಂದಿ

ಕಂ || ಇಂಧನಮಂ ಬಿಸುಡುವವೋ
ಲಿಂಧನಮಂ ಬಿಸುಟು ಸುಜನಸಖನಖಿಳೈನೋ
ಬಂಧನಮಂ ಬಿಡಿಪಂತಿರೆ
ಬಂಧುಗಳಂ ಬಿಡಿಸಿ ತಪಕೆ ತಱಿಸಂದಿರ್ದಂ ೭೧

ವ || ಅಂತು ಕಷಾಯಸಹಾಯ ಸಮಗ್ರ ಪರಿಗ್ರಹಮಂ ತೊಱೆದು ಗುಣಶ್ರೇಣಿಯ ನೇಱುವಂತೆ

ಚಂ || ಬಿಡೆ ಮಣಿಶೋಭಿಯಂ ಸಿವಿಗೆಯಂ ಪರಮೇಶ್ವರನೇಱೆ ಚೆಲ್ವುಂ ನೆ
ರ್ಪಡೆ ನೃಪರೊಯ್ದರೇೞಡಿವರಂ ಖಚರಾಧಿಪರೊಯ್ದರತ್ತಲೇ
ೞಡಿವರಮತ್ತಲೊಯ್ದರಮರೇಂದ್ರರನಿಂದಿತಭಕ್ತಿಯುಕ್ತರೆಂ
ದೊಡೆ ಜಿನಪಂಗೆ ಪೂಣ್ದು ಬೆಸಕೆಯ್ಯದರಾರ್‌ವಸುಧಾವಿಭಾಗದೊಳ್‌೭೨

ಕಂ || ಆ ತ್ರಿಭುವನಪತಿ ವರರ
ತ್ನತ್ರಯಮಂ ತಳೆದ ಮಾೞ್ಕೆಯಿಂ ತಳೆದಖಿಳ
ಕ್ಷತ್ರಿಯರುಂ ಖೇಚರರುಂ
ಸುತ್ರಾಮರುಮತಿಪವಿತ್ರರಾದರುದಾತ್ತರ್‌೭೩

ವ || ಅಂತು ಸಕಳ ಮಂಗಳಾನಕಂಗಳನಂಗವಿಜಯ ಪಟುಪಟಹ ರವದಂತೆ ದಿಕ್ತಟಮಂ ತೀವೆ ದೇವೇಂದ್ರರೊಯ್ದು ದೇವಾಂಗವಸ್ತ್ರವಿಸ್ತೃತವಿತಾನವಿಳಸಿತನಭೋವಿಭಾಗದೊಳ್‌ದೇವಾಂಗನಾಂಗುಳೀಸಂಚಯರಿತ ಪಂಚರತ್ನಚೂರ್ಣರಂಗವಲ್ಲೀಂಕಾಂತಪ್ರಾಂತ ಪ್ರದೇಶದೊಳಿಂದೀವರ ಗಂಧಬಂಧುರ ದೇವಸಿಂಧು ಸಲಿಲಸೇಚನ ಪಾವನ ದೇವಧಾಮೋದ್ಯಾನ ಮಧ್ಯಾಮಳಕ ವಿಶಾಳಶಿಳಾಪಟ್ಟದೊಳ್ ಮುಕ್ತಿಲಕ್ಷ್ಮೀಲಲಾಟಪಟ್ಟ ಮಳಯಜತಿಳಕನೆನಿಸಿದ ದೇವದೇವೋತ್ತಮನಂ ಚಿತ್ತವೃತ್ತಿಯನಱೆದು ತಂದಿೞಿಪಿ ಬೞಿಯಮುಪಶಮಿತ ದಿವಿಜದನುಜ ಮನುಜ ಬಹಳ ಕೋಳಾಹಳರ್‌ಪ್ರತೀಹಾರಪ್ರತಿಪತ್ತಿಯೊಳ್‌ಸುತ್ರಾಮರ್‌ಪ್ರವರ್ತಿ ಸುತ್ತುಮಿರೆ

ಕಂ || ಜಿನಪಂ ವಸನಾಭರಣಂ
ತನುಭೂಷಣಮೇವುವೆಂದವಂ ತೊಲಗಿಸೆ ನೆ
ಟ್ಟನೆ ನಿಜಮೆನಿಸಿದ ಗುಣಮಣಿ
ವಿನೂತ ದಿಗ್ವಾಸದಿಂದಳಂಕೃತನಾದಂ ೭೪

ವ || ಅಂತು ಬಾಹ್ಯಾಭ್ಯಂತರಪರಿಗ್ರಹನಿವೃತ್ತಿಗೆಯ್ದುತ್ತರಾಭಿಮುಖನುಮಂತರ್ಮಖನುಂ ನಿಬಿಡನಿಬದ್ಧಪಲ್ಯಂಕಾಸನನುಂ ಪ್ರಕಟಿತಜಿನಶಾಸನನುಮಾಗಿರ್ದು

ಕಂ || ಸದ್ಧರ್ಮೋದ್ಧಾರಿ ನಮಃ
ಸಿದ್ಧೇಭ್ಯಯೆನುತ್ತೆ ಕೇಶಪಾಶಮನಘಸಂ
ಪದ್ಧಾತ್ರೀರುಹಮೂಳಮ
ನುದ್ಧರಿಸುವ ತೆಱದೆ ಪಱಿದನಘವನದಹನಂ ೭೫

ವಿಪುಳೈನೋಬಳಮನಸಿಜ
ನೃಪನೂರ್ಜಿತರಾಜ್ಯಚಿಹ್ನಚಮರಜಮೆನೆ ಶೋ
ಭಿಪ ಕೇಶಪಾಶಮಂ ಮೋ
ಹಪಾಶಮಂ ಪಱಿವ ತೆಱದೆ ಪಱೆದಂ ಪರಮಂ ೭೬

ಪಱಿಯೆ ಕರಕಮಳಪರಿಮಳ
ಕೆಱಗಿದ ಮಱಿದುಂಬಿ ಬಿಡದೆ ಬಂದಪುವೆಂಬೀ
ತಱನನನುಕರಿಸಿ ಕರದೊಳ್‌
ಮಿಱುಗಿದುವಾ ನೀಳಕುಂತಳಂ ಜಿನಪತಿಯಾ ೭೭

ನಿರ್ವಾಣಕಾಮಿನೀಪ್ರಿಯ
ಸರ್ವಜ್ಞಶ್ರೀಯನೀವ ಜಿನದೀಕ್ಷೆಯನಂ
ದುರ್ವೀಶರ್‌ಸಾಸಿರದ
ಯ್ನೂರ್ವರ್‌ತನ್ನೊಡನೆ ತಳೆಯೆ ತಳೆದನುದಾತ್ತಂ ೭೮

ಏನಂ ಪೇೞ್ವೆನೊ ಪರಮ ತ
ಪೋನಿಧಿಯ ವಿಶೋಧಿಯಂ ಮನಃಪರ್ಯಯ ಸ
ದ್ಞಾನಂ ಸಪ್ತರ್ಧಿಸುದೀ
ಕ್ಷಾನಂತರಮೊಗೆದು ನೆಗೞ್ದುವೆನೆ ಜನವಿನುತಂ ೭೯

ವ || ಅಂತು ತಪೋಂಗನಾಪಾಣಿಗ್ರಹಣಮಂ ಪ್ರಶಸ್ಯಪೌಷ್ಯ ಬಹುಳೈಕಾದಶೀ ಪೂರ್ವಾಹ್ಣದೊಳ್ ಮಾಡಿ ವಿಶಿಷ್ಟಾಷ್ಟಾದಶಸಹಸ್ರಶೀಳಳಂಕೃತನುಂ ಚತುರಶೀತಿಲಕ್ಷ ಗುಣಮಣಿಲಕ್ಷ್ಮಿತನುಮಾಗೆ ಪರಮನನಮರಪರಿವೃಢನನೇಕನಾಕಲೋಕಾರ್ಚನೆಗಳಿನಮರ ಸಮಿತಿವೆರಸರ್ಚಿಸಿ ತ್ರಿಕರಣಶುದ್ಧಿಯಿಂ ತ್ರಿಃಪ್ರದಕ್ಷಿಣಂಗೆಯ್ದು

ಕಂ || ದಿವಿಜಪತಿ ಜಿನನ ಕುಂತಳ
ನಿವಹಮನಾಂತೊಯ್ದು ರತ್ನಪಟಳಕದೆ ಸುಧಾ
ರ್ಣವದೊಳ್‌ಬಿಡೆ ಮಿಸುಗಿದುವ
ರ್ಣವಲಕ್ಷ್ಮಿಯ ನೀಳರತ್ನದವತಂಸದವೋಲ್‌೮೦

ಜಿನನ ಪದರಜಮುಮಂ ತ್ರಿಭು
ವನಪತಿಗಳ್‌ತಳೆವರುತ್ತಮಾಂಗದೊಳೆಂದಾ
ವನಧಿ ಶಿರೋರುಹಮಂ ಶಿರ
ದಿನಾಂತವೋಲ್‌ತೇಂಕುತಿರ್ದುವಮೃತಾಂಬುಧಿಯೊಳ್‌೮೧

ವ || ಅಂತು ಸಹಸ್ರನೇತ್ರಂ ಜಿನಸಮುತ್ಪಾಟಿತಪವಿತ್ರಸಹಸ್ರಕುಂತಳಂಗಳಂ ಜಳನಿಧಿ ತರಂಗ ಸಂಗತಂ ಮಾಡಿ ನಾಕಲೋಕಕ್ಕೆ ಪೋಪುದುಮಿತ್ತ ತೀರ್ಥನಾಥಂ ದೀಕ್ಷೋಪವಾಸಮಂ ಮಾಡಿ ಮಱುದೆವಸಮಕ್ಷೂಣಶೋಭಾಸದ್ಮಪದ್ಮಖೇಟಪುರಕ್ಕಭಿಮುಖನಾಗಿ

ಶಾ || ಪಾದನ್ಯಾಸವಿಳಾಸಮುರ್ವರೆಯ ಮಿಥ್ಯಾಧ್ವಾಂತಮಂ ತೂಳ್ದೆಯಾ
ಹ್ಲಾದಂ ಭವ್ಯಚಕೋರದೊಳ್‌ನೆಲಸೆ ಸನ್ಮಾಗಪ್ರಕಾಶತ್ವದಿಂ
ದಾದಂ ಚಂದ್ರಗತಿತ್ವಮೊಪ್ಪೆ ನೆಗೞ್ದೀಯಾಶುದ್ಧಿಹೃಚ್ಛುದ್ಧಿಗಂ
ಪ್ರಾದುರ್ಭಾವಮನೀಯೆ ಬಾವರಿಗೆವಂದಂ ಪಾರ್ಶ್ವಯೋಗೀಶ್ವರಂ ೮೨

ಮ || ನಿಧಿಚಿಂತಾಮಣಿ ಕಾಮಧೇನು ದಿವಿಜೇಂದ್ರೋರ್ವೀಜಮೊಂದಾಗಿ ಸ
ನ್ನಿಧಿಗೆೞ್ತಂದುದಱೆಂದಮತ್ಯಧಿಕಮಾದತ್ತತ್ಸವಂ ಶ್ರೀತಪೋ
ನಿಧಿ ತನ್ನಿರ್ದ ಗೃಹಕ್ಕೆ ವಂದೊಡೆ ಸುಶರ್ಮಂಗಂತೆ ದೃಗ್ಬೋಧವೃ
ತ್ತಧರಿತ್ರೀನುತರತ್ನಮಂ ಮುನಿಪನೀವಂತೇನವೊಲ್ದೀಗುಮೇ ೮೩

ವ || ಅಂತು ಸಂಯಮಾನುವರ್ತಿಪುಣ್ಯಮೂರ್ತಿಯೆೞ್ತರುತ್ತಿರ್ಪುದಂ ಗುಣಮಣಿಮಂಡನನಪ್ಪಾ ಮಂಡಳೇಶ್ವರಂ ಕಂಡು

ಉ || ಸಂಜನಿತಾನುರಾಗನಿದಿರ್ವೋಗಿ ಲಲಾಟತಟಪ್ರಶಸ್ತಹ
ಸ್ತಾಂಜಳಿಯರ್ಘ್ಯಪಾದ್ಯಮನೊಡರ್ಚಿ ವಿವೇಕವಿಳಾಸಿನೀಮನೋ
ರಂಜನನಂ ಮನೋಜಮದಭಂಜನನಂ ಪ್ರವಿನಷ್ಟದುಷ್ಟಕ
ರ್ಮಾಂಜನನಂ ನೃಪಂ ನಿಱೆಸಿದಂ ನಿರವದ್ಯಚರಿತ್ರಪಾತ್ರನಂ ೮೪

ಕಂ || ಅಧನಂ ನಿಧಿಯಂ ವಿದ್ಯಾ
ನಿಧಿ ನಿಶಿತಪ್ರಜ್ಞನೆನಿಪ ಶಿಷ್ಯಾಗ್ರಣಿಯಂ
ಸಧನಂ ಸುತನಂ ಪಡೆದಂ
ತಧಿಕೋತ್ಸವಮಂ ಸುಶರ್ಮನಾಂತಂ ಶಾಂತಂ ೮೫

ವ || ಅಂತು ಹರ್ಷೋತ್ಕರ್ಷಕ್ಕೆ ಪಕ್ಕಾಗಿ ಪರಮಮುನೀಶ್ವರನಂ ನಿಱಿಸಿ

ಕಂ || ನವಕೇವಳಲಬ್ಧಿಪ್ರದ
ನವವಿಧಪುಣ್ಯಂ ಪ್ರಸಿದ್ಧಸಪ್ತರ್ಧಿಕರ
ಪ್ರವಿಮಳಸಪ್ತಗುಣಂ ತನ
ಗವಿಚಳಮೆನೆ ಯತಿಗೆ ಕುಡೆ ಸುಧಾನ್ನಮನೊಲವಿಂ ೮೬

ಏವೇೞ್ವೆನಾಗಳೊಗೆದುವು
ಪೂವಿನ ಮೞೆ ಸುರಭಿಗಂಧಬಂಧುರಪವನಂ
ರೈವೃಷ್ಟಿ ದೇವದುಂದುಭಿ
ದೇವರಹೋ ಧ್ವಾನಮೆಂಬ ಪಂಚಾಶ್ಚರ್ಯಂ ೮೭

ಉ || ಮುನ್ನಱುದಿಂಗಳಂಬಿಕೆಯ ಗರ್ಭದೊಳಂ ನವಮಾಸಮಿರ್ಪಿನಂ
ರನ್ನದ ಪೊನ್ನ ಕಳ್ಪತರುಪುಷ್ಪದ ಮೆರ್ಮೞೆ ಕೊಳ್ವುವೆಂದೊಡ
ತ್ಯುನ್ನತತೀರ್ಥನಾಥನಖಿಳರ್ಧಿಯುತಂ ನಿಲೆ ರಾಜಗೇಹದೊಳ್
ಸನ್ನುತಮಯ್ದುಮಚ್ಚರಿಯುಮಾದುದಿದಚ್ಚರಿಯೇ ಸುಶರ್ಮನಾ ೮೮

ವ || ಅಂತು ಸುಶರ್ಮನಂ ಸುಶರ್ಮಕರಪುಣ್ಯಕರ್ಮಕ್ಕಾರ್ಮನಂ ಮಾಡಿ ಪರಸಿ ಪೋಗಿ ನಿರ್ಮಳ ದಶಧರ್ಮಧರಂ ದುಷ್ಕರ್ಮರಿಪುಗಳಂ ನಿರ್ಮೂಳನಂ ಮಾಡಲ್ವೇಡಿ ಪರಮ ಸಂಯಮೋದ್ಯುಚಿತ್ತನಾಗಿ

ಕಂ || ಮನಮಂ ಪ್ರಾಯಶ್ಚಿತ್ತಾ
ದ್ಯನುಪಮ ತಪದಲ್ಲಿಯನಶನಾದಿಕತಪದೊಳ್
ತನುವಂ ನೆಟ್ಟನೆ ಯೋಜಿಸಿ
ಮುನಿಪತಿ ಪನ್ನೆರಡು ತೆಱದ ತಪದಿಂ ನೆಱೆದಂ ೮೯

ಮ || ನಿಯತಂ ಯೋಗನಿಯೋಗದಿಂದೆ ಯತಿಪಂ ಕಾಲತ್ರಯಜ್ಞಾನಿಯಾ
ಗಿಯುಮತ್ಯದ್ಭುತಮಾಗೆ ಮಾಗಿ ಮೞೆಗಾಲಂ ಗ್ರೀಷ್ಮಮೆಂಬೀ ಪ್ರಸಿದ್ಧಿಯ ಕಾಲತ್ರಯಮಂ ಸಮಂತಱೆಯದಂತಾ ಬೆಳ್ಳವಾಸಕ್ಕೆ ಶಾಖಿಯ ಮೂಲಕ್ಕರಿದಪ್ಪ ಕಲ್ನೆಲೆಗೆ ಮೆಯ್ಯಂ ಸಾರ್ಚಿದಂ ನಿಶ್ಚಳಂ ೯೦

ಕಂ || ಪರಮೋಪಶಾಂತರಸದೊಳ್‌
ನಿರಂತರಂ ತೇಂಕುತಿರ್ಪ ಮುನಿಪತಿಯ ಮುಖಾಂ
ಬುರುಹಮಲರ್ದಿರ್ಕೆ ತನುಲತೆ
ಕೊರಗದೆ ಖರಕರನ ಕರಹತಿಯಿನತಿಚಿತ್ರಂ ೯೧

ಯತಿಪಂ ಚತುರ್ವಿಧಾಹಾ
ರತತಿಯನನಶನದೊಳಾತ್ಮನಿಷ್ಠಂ ತೋಱೆಯು
ತ್ತತಿಶಯಮೆ ನೆಱೆಯೆ ತೊರೆದಂ
ಚತುರ್ವಿಧಾಸ್ರವದ ಕಾರ್ಮಣಾಹಾರಮುಮಂ ೯೨

ಇಂತಿದು ಚಿತ್ರಂ ಪೂರ್ಣತೆ
ಯಂ ತಳೆದತ್ತಂತರಂಗಬಹಿರಂಗದೊಳಂ
ಶಾಂತರಸಾಸ್ವಾದನಮಿರೆ
ಯುಂ ತನ್ಮುನಿಯಲ್ಲಿ ರಸಪರಿತ್ಯಾಗತಪಂ ೯೩

ಯಮಿ ನಡೆವ ನುಡಿವ ಸಂ
ಯಮಾರ್ಥಮುಣ್ಬುಚಿತ ವಸ್ತುವಂ ಕೊಳ್ವಿಡುವಂ
ದು ಮಳುಮನುಗುವೆಡೆಯೊಳ್‌ಜೀ
ವಮನೋವಿಯೆ ಪಂಚಸಮಿತಿಯಂ ಸಂಚಿಸಿದಂ ೯೪

ವ || ಅಂತು ಪರಮಸಂಯಮಧಾರಿಯುಮೇಕವಿಹಾರಿಯುಮಾಗಿ ಗಿರಿದರೀಸರಿತ್ಪುಳಿನ ಕಾಂತಾರಾದಿ ನಿರ್ಜಂತುಕಪ್ರದೇಶಂಗಳೊಳ್‌ನಿಂದಾತ್ಮಾಭ್ಯಾಸಮಂ ಮಾಡುತ್ತುಂ ವಿಹಾರಿಸುತ್ತುಂ ಬಂದು

ಕಂ || ಪ್ರಕಟಾಹಿಚ್ಛತ್ರಪುರೋ
ಪಕಂಠ ವಿಪುಳಾದ್ರಿ ಸಾನುಮಂಡನಶೋಭಾ
ದಿಕದೇವದಾರುವನರಂ
ಜಕ ಶಶಿಮಣಿ ಘನಶಿಳಾತಳದೊಳುನ್ನತದೊಳ್‌೯೫

ಎರಡುಂ ಮಡಂಗಳೆಡೆ ನಾ
ಲ್ವೆರಲೊರ್ಗೇಣೆರಡುಮುಂಗುಟಂಗಳ ತೆಱಪಾ
ಗಿರೆ ಋಜ್ವಾಗತದೊಳ್‌ಬೆರ
ಸಿರೆ ತನ್ನಯ ನಿಲವು ಯೋಗಿಸಂಸ್ತವಯೋಗ್ಯಂ ೯೬

ಮ || ಕರಣಂ ಕೂಡೆ ಕುನುಂಗಿಕೊಂಡಿರೆ ಮನಂ ಭಾಳಾಗ್ರದೊಳ್‌ನಿಟ್ಟೆವೆ
ತ್ತಿರೆ ನೇತ್ರದ್ವಯಮುಳ್ಳಲರ್ದಿರೆ ಭುಜಾಕಾಂಡಂಗಳಾ ಜಾನುಗ
ಳ್ವರೆಗಂ ನೀಳ್ದಿರೆ ದಂತಮೊಂದಿಯನಿತುಂ ತಮ್ಮೊಳ್‌ಸಮಾನಂಗಳಾ
ಗಿರೆ ಯೋಗಂ ಪರಭಾಗಮಂ ಪಡೆದುದಾ ನಿಷ್ಪಂದಯೋಗೀಂದ್ರನೊಳ್‌೯೭

ವ || ಅಂತಂತರಬಹಿರಂಗ ಸಾಮಗ್ರೀ ಸಮಗ್ರನಾಗಿ

ಕಂ || ದೃಪ್ತಮನಸಿಜನನಜನಿಪ
ದೀಪ್ತಮಹಾಘೋರತಪ್ತತಪಮೆಸೆಯೆ ಶಮ
ವ್ಯಾಪ್ತಂ ಪ್ರತಿಮಾಯೋಗದೆ
ಸಪ್ತದಿನಂ ಬರೆಗಮಿರೆ ಮುನೀಶ್ವರತಿಳಕಂ ೯೮

ಮುನಿಯೋರ್ವನ ಶಾಂತರಸಂ
ವನಮೃಗಸಂಕುಳದ ಮನದೊಳಂ ನೆಲಸಿದುದೊ
ರ್ವನ ಪುಣ್ಯದ ಫಳಮಂ ಪಲ
ರನುಭವಿಸುವರೆಂಬ ಮಾತು ಸಂಭವಿಸುವಿನಂ ೯೯

ಪುಲಿಗಳ್‌ಪುಲ್ಲೆಯ ಮಱೆಯಂ
ಮೊಲೆಯೂಡಿದುವಲ್ಲಿ ಸೊರ್ಕಿದಾನೆಯ ಕಟದೊಳ್‌
ನೆಲೆಸಿದ ತೀನಂ ತುಱಿಸಿಯೆ
ತೊಲಗಿಸಿದುವು ನಖಮುಖಂಗಳಿಂ ಸಿಂಹಂಗಳ್‌೧೦೦