ಸೋಗೆಯ ಸೋಗೆಯ ನೞಲೊಳ್‌
ನಾಗಂಗಳ್‌ನಲಿದುವವಱ ಪೆಡೆಗಳ ನೆೞದೊಳ್‌
ರಾಗದಿನಿರ್ದುವು ದರ್ದುರ
ಮಾ ಗುಣನಿಧಿಯಿರ್ದಗಣ್ಯಪುಣ್ಯಾಶ್ರಮದೊಳ್‌೧೦೧

ವ || ಅಂತು ಶಾಂತರಸಮೆಂಬ ಪಾದರಸಮಂ ನಿಜಪ್ರಯೋಗಪ್ರಾವಿಣ್ಯದಿಂ ಧ್ಯಾನಾನಳಮುಖಕ್ಕೆ ನಿಲ್ವಂತು ಶುದ್ಧಾತ್ಮಬದ್ಧಂ ಮಾಡಿಯಪ್ರತಿಮಂ ಪ್ರತಿಮಾಯೋಗದೊಳಿರ್ಪುದುಂ ಪೂರ್ವಸೂಚಿತಪಂಚಾಗ್ನಿತಪಸ್ತಪ್ತತಾಪಸಂ ಜೀವಿತಾವಸಾನದೊಳ್‌ಕ್ರೋಧಮನೆತ್ತಿಕೊಂಡ ಸುರಕುಲದೊಳ್‌ಭೂತಾನಂದನನೆಂಬನಾಗಿ ಪುಟ್ಟಿ ಭೌಮ ವಿಹಾರಾರ್ಥಮಾಗಿ

ಚಂ || ಕಮಠಚರಂ ಬರುತ್ತುಮಸುರಂ ವಿಪುಳಾದ್ರಿಯೊಳಾತ್ಮಯೋಗದು
ದ್ಯಮದೊಳಗಿರ್ದ ಪಾರ್ಶ್ವಮುನಿನಾಥನ ಮೇಲೆ ವಿಮಾನಮಾಗಳಾ
ದಮೆ ನಭದಲ್ಲಿ ಕೀಲಿಸಿದವೋಲ್‌ನಿಲೆ ಸತ್ಪಥದಿಂದಗಲ್ದೊಡ
ಕ್ಕುಮೆ ದಲವಶ್ಯದಿಂ ಕುಗತಿಯೆಂಬವೊಲುರ್ವಿಗೆ ಪಾಯ್ದನುದ್ಧತಂ ೧೦೨

ಉ || ಕ್ರೂರಮೃಗಂಗಳಾ ಮುನಿಪನಿರ್ದ ವನಾಂತರದೊಳ್‌ನಿರಂತರಂ
ವೈರಮನೊಕ್ಕುಶಾಂತರಸಮಂ ತಳೆದಿರ್ದುವು ದೈತ್ಯನಂತಪ
ಸ್ಮಾರಮನೂನವಾರಿಯನೆ ಕಂಡು ಕೆರಳ್ವವೊಲನ್ಯಜನ್ಮಸಂ
ಸ್ಕಾರದೆ ಕೋಪಮಂ ತಳೆದನೀಕ್ಷಿಸಿ ಶಾಂತರಸಾಂಬುರಾಶಿಯಂ ೧೦೩

ಚಂ || ಅಸುರಕುಲಕ್ಕೆ ಮುಖ್ಯನೆನಿಪುನ್ನತಿಯಂ ವಿಭವಪ್ರಭಾವದಿಂ
ಪಸರಿಪನಲ್ಲಿ ದುಷ್ಟಮತಿ ರೋಷವಿಶೇಷಮನಾಂತನೆಂಬಿನಂ
ಮಿಸುಗುವಜಾತಶತ್ರುವಿನ ಸನ್ನಿಧಿಯೊಳ್‌ಭವಬದ್ಧವೈರಮಂ
ಬಿಸುಟವು ಕೋೞ್ಮಿಗಂ ತಳೆದನುಗ್ರತೆಯಂ ಕಿಡಿ ಸೂಸೆ ಕಣ್ಗಳಿಂ ೧೦೪

ಕಂ || ಅವರಿವರೆನ್ನದೆ ಕೇಡಡ
ಸುವರ್ಗಕ್ಕುಂ ಪ್ರಕೃತಿವಿಕೃತಿಯೆಂಬಿದನುಸಿರ್ವಂ
ತೆವೊಲಾಗಿನ್ನವನೊಳ್‌ಪ್ರಕೃ
ತಿವಿಕೃತಿಯಾದತ್ತು ಕೋಪಲೋಪಿತಗುಣನೊಳ್‌೧೦೫

ಇಡುವಡಿಗಳವನಿತಳದೊಳ್‌
ನಿಡುದೋಳ್‌ದೆಸೆಯೊಳ್‌ಶಿರಂ ಮರುನ್ಮಾರ್ಗದೊಳಂ
ದೆಡೆಗಿಱಿದಿರೆ ಕೋಪಾನಳ
ನೊಡನೊಡಲುಂ ಬಿಡದೆ ಬಳೆದುದಾ ದಾನವನಾ ೧೦೬

ಮ || ಕಿಡಿಯಂ ಸೂಸುವ ಕಣ್ಗಳಿಂದೆ ಸಿಡಿಲಂ ದಂಷ್ಟ್ರಾಂಶುವಿಂ ಮಿಂಚನೆ
ಲ್ಲೆಡೆಯಿಂದರಂ ಬಿಡುತರ್ಪ ಫರ್ಮಜಳದಿಂದಂ ವೃಷ್ಟಿಯಂ ಕಾಳಿಮ
ಕ್ಕೆಡೆಯಾದಂಗದ ಕಾಂತಿಸಂತತಿಗಳಿಂ ನೀಳಾಭ್ರಜಾಳಂಗಳಂ
ಪಡೆಯುತ್ತುಂ ಪ್ರಳಯಾಂಬುದಾಗಮಮನಾಗಳ್‌ದೈತ್ಯನೇಂ ಪೋಲ್ತನೊ ೧೦೭

ಕಂ || ದನುಜಂ ಯಮಂಗಿವಂ ಸಂ
ದನುಜಂ ನಿರ್ದಯೆಯಿನೆಂಬಿನಂ ಪೀಡೆಯನಾ
ಮುನಿಸನುೞಿದಂಗೆ ಮಾಣದೆ
ಮುನಿಸಮಿತಿನುತಂಎ ಮಾಡಲೊಡರಿಸಿ ಕಡುಪಿಂ ೧೦೮

ಮ || ಹರಿಯುಂ ವ್ಯಾಘ್ರಮುಮಪ್ಪರುಗ್ರತರಕೋಪಾಟೋಪದಿಂ ಸತ್ತರು
ತ್ತರಜನ್ಮಂಗಳೊಳೆಂಬುದಚ್ಚರಿಯೆ ದೈತ್ಯಂ ಕ್ರೋಧದಿಂದಾಗಳಂ
ತಿರೆ ತದ್ರೂಪಮನಾಂತನೆಂದು ನುಡಿವನ್ನಂ ಕೊರ್ವೆ ವೈಕುರ್ವಣಂ
ಭರದಿಂ ಪಾಯ್ದೊಡಮರೞ್ಕದಿರ್ದನಚಳಂ ಶ್ರೀಪಾರ್ಶ್ವಯೋಗೀಶ್ವರಂ ೧೦೯

ಕಂ || ಕಹಕಹರಾವಂ ರೋಧಃ
ಕುಹರಮನಾವರಿಸೆ ಸಿಂಹನಿಸ್ವನಮಾಶಾ
ನಿಹಿತಗಜಮದಮನುಡುಗಿಸೆ
ಬಹುವಿಧದಾಯುಧದಿನೞ್ಕೆಸುತ್ತಾರುತ್ತುಂ ೧೧೦

ಆ ದೊರೆಯುಪಸರ್ಗಮನು
ತ್ಪಾದಿಸಿಯುಂ ಮುನಿಯ ಮನದ ಧೈರ್ಯಮನೆನಸುಂ
ಭೇದಿಸಲಾಱದೆ ನೆರಪಿದ
ನಾ ದನುಜಂ ಭೂತಮಂ ಪ್ರಭೂತಮನಾಗಳ್‌೧೧೧

ಉ || ಱೋಡಿಪುದೊಂದು ಬೊಬ್ಬಿರಿವುದೊಂದುರಿಗಣ್ಣನೆ ತೋರ್ಪುದೊಂದು ಕೂ
ರ್ದಾಡೆಯ ಕೂರ್ಪನೊಪ್ಪಿಸುವುದೊಂದಸಿಯಂ ತಿರಿಪುತ್ತೆ ಬರ್ಪುದೊಂ
ದೇಡಿಪುದೊಂದು ಪೆರ್ವಸಿಱೊಳಾನನಮಂ ಬಿಡೆ ತೋರ್ಪುದೊಂದು ಕೈ
ವಾಡಿನ ಕೀಡೆಗಾಡುವುದದೊಂದು ಮರುಳ್‌ನೆರೆದತ್ತು ದೈತ್ಯನಾ ೧೧೨

ಚಂ || ಮಸಗುವ ಮಾರಿ ಬೊಬ್ಬಿರಿವ ಬೆಂತೆಱೆಯಂ ಸಿಡಿಲೇೞ್ಗೆಯೇೞ್ವ ರಾ
ಕ್ಷಸಿ ಕುಡುದಾಡೆಯಂ ಮಸೆವ ಡಾಕಿನಿ ಕೂರಸಿಯಿಂದೆ ಕೂಂಕಿ ಝಂ
ಕಿಸುವ ಕುಮಾರಿ ಮಾಂಕರಿಪ ಪೂತಿನಿ ಹೂಂಕೃತಿಗೆಯ್ವ ಭೈರವಂ
ನೊಸಲುರಿಗಣ್ಣನಾಳ್ವ ಚವುಡೇಶ್ವರಿ ಕೂಕುಱೆದಾರ್ವ ಕಾಟೆಯಂ ೧೧೩

ಕಂ || ಬೆಟ್ಟಂ ತಿರಿಕಲ್ಲಾಡುವ
ಝಟ್ಟಿಂಗಂ ಶೈಳಯುಗಳಮಂ ಬಿಡೆ ತಾಳಂ
ಗುಟ್ಟುವ ಬೇತಾಳಂ ಬೊ
ಬ್ಬಿಟ್ಟಚಳಂಗಳನೆ ಚಳಿಯಿಸುವ ಭೂತಕುಳಂ ೧೧೪

ಒದವಿದುದರಾಗ್ನಿಯಂ ಬೇ
ಗದೆ ಬೆದಱಿಸುವಲ್ಲಿಗೆಯ್ದದೀ ಮುಖಮೆಂಬಂ
ದದಿನುದರದೊಳಂ ಮುಖಮಂ
ಮದಯುತಭೂತಂಗಳಲ್ಲಿ ತಳೆದುವು ಪಲವುಂ ೧೧೫

ಚಂಡತರಕೋಪಶಿಖಿಯಿಂ
ಖಂಡಂ ಕರಗಿದುದು ನೆತ್ತರಱುತತ್ತೆನೆ ಮಾ
ರ್ಕೊಂಡೇಂ ತ್ವಗಸ್ಥಿಮಾತ್ರಂ
ಚಂಡಿಕೆಯೊಡಲೇೞ್‌ಇಸಿತ್ತು ಬೇತಾಳನುಮಂ ೧೧೬

ಕುಡುದಾಡೆಯ ಕಡುಗೂರ್ಪಂ
ಪಿಡಿದ ಶುಭಂಕರಿಯ ಕೂರ್ಪಮುರಿಗಣ್ಣುರಿಯುಂ
ಕಿಡಿಯಂ ಸೂಸುವ ಕಣ್ಣುಂ
ಬಿಡದರ್ವಿಸೆ ಸುತ್ತಿ ಮುತ್ತಿ ಭೂತವ್ರಾತಂ ೧೧೭

ಮ || ಪುಲಿ ಪಾಯ್ವಂತು ಸಿಡಿಲ್‌ಕಡಂಗಿ ಪೊಡೆವಂತುಗ್ರಾಗ್ನಿ ಕೊಳ್ವಂತದೆ
ತ್ತಲುಮಂಭೋನಿಧಿ ಮೇರೆದಪ್ಪಿ ಕವಿವಂತುದ್ದಂಡಶುಂಡಾಳಮಂ
ಡಳಿಕೊಳ್ವಂತಹಿ ನುಂಗುವಂತೆ ಶರಭಂ ಸೀೞ್ವಂತೆ ಸಿಂಹಂ ನಖಾ
ವಳಿಯಿಂ ಖಂಡಿಸುವಂತೆ ಕೊರ್ವಿದುದಗುರ್ವಿಂ ದೈತ್ಯವೈಕುರ್ವಣಂ ೧೧೮

ಚಂ || ಮಿಸುಗುವ ದಾಡೆಯಿಂ ಪೆಣನಿರ್ವಗಿಯಾಗಿರೆ ಸೀೞ್ದು ಭಾಳದು
ರ್ವಿಸುವುರಿಗಣ್ಣ ಕಿಚ್ಚಿನೊಳೆ ಸುಟ್ಟಡಗಾಗಿರ ಲೊಕ್ಕಚಕ್ಕಣಂ
ಪಸಿಯಕಪಾಳದಾಂತು ರುಧಿರಾಸವಮಂ ಕುಡಿದಾರುತಿರ್ಪ ರಾ
ಕ್ಷಸಿಯರ ರೂಕ್ಷರಾಕ್ಷಸರ ತೀಕ್ಷ್ಣತೆಯೀಕ್ಷಣಕಾದುದದ್ಭುತಂ ೧೧೯

ಕಂ || ಲೋಕಹಿತಾಚರಣ ಕಳಾ
ನೀಕಪ್ರಯುತಂಗೆ ಯತಿಗೆ ದಾನವನಿರದು
ದ್ರೇಕಿಸೆ ಮಾಡುವ ಪೀಡೆ ಸು
ಧಾಕರನಂ ರಾಹು ಪೀಡಿಪುದನನುಕರಿಕುಂ ೧೨೦

ನೆರೆದುವು ಮರುಳ್ಗಳಾತಂ
ಮರುಳ್ಗೆ ಪತಿ ದೈತ್ಯನೆಂದೊಡಖಿಳರ್ಧಿಗುಣಾ
ಭರಣನಬಾಧ್ಯನಸಾಧ್ಯಂ
ನಿರುತಂ ತಮಗೆಂದು ಬಗೆಯದುದು ವಿಸ್ಮಯಮೇ ೧೨೧

ವ || ಅಂತಶಕ್ಯಾನುಷ್ಠಾನಮಂ ದಾನವಂ ನಿಜಸೇನೆವೆರಸೆತ್ತಿಕೊಂಡು ಮಹೋಪಸರ್ಗಮಂ ನೀಡುವಂ ಮಾಡುತ್ತುಮಿರೆ

ಕಂ || ವಿಗತಭಯನಿಂದ್ರಜಾಲಿಗ
ನೆಗೆತ್ತು ದಾನವನ ಮಾೞ್ಪ ವಿಕೃತಿಯನೇನುಂ
ಬಗೆಯದೆ ನಿಜಯೋಗದೊಳ
ತ್ಯಗಣಿತ ಗುಣನಿಳಯನಚಳಿತಂ ನಿಲೆ ಮುನಿಪಂ ೧೨೨

ಒಳಗೆ ನಿಜಧ್ಯಾನಾನಳ
ನಳುರೆ ಪೊಱಗೆ ದಾನವೋಪಸರ್ಗ ಮಹೋಗ್ರಾ
ನಳನಳುರೆ ಕರ್ಮಬಂಧಂ
ಗಳನಿತುಮವು ದಗ್ಧರಜ್ಜುವೆನಿಸಿದುವಾಗಳ್‌೧೨೩

ಮ || ದನುಜಂ ಮಾೞ್ಪುಪಸರ್ಗದುಗ್ರತೆಯೊಳಕ್ಷೋಭಂ ನಿಜಧ್ಯಾನದೊಳ್
ಮುನಿಪಂ ಕೂಡಿರೆ ತತ್ತಪಂ ತ್ರಿಭುವನಕ್ಷೋಭಪ್ರದಂ ನಾಗರಾ
ಜನ ಸಿಂಹಾಸನಕಂಪಮಂ ಪಡೆಯೆ ತತ್ಸಂಬಂಧಮಂ ಬೋಧದಿಂ
ದೆನಸುಂ ನಿಟ್ಟಿಸಿ ತನ್ನ ಕಾಂತೆಗುರಗೇಂದ್ರಂ ಪೇೞ್ದನೀಯಂದಮಂ ೧೨೪

ಕಂ || ಪರಹಿತಚರಿತಂಗೆ ಜಗ
ದ್ಗುರುಗೆ ಭವಾನಳವಿದಗ್ಧರಾಗಿಯುಮವಿದ
ಗ್ಧರೆನಿಪ್ಪ ನಮ್ಮನೀಸುಖ
ಪರಿಕರದೊಳ್‌ನಿಲಿಸಿದಂಗೆ ಮುಳಿದೆಯ್ದೆ ಖಳಂ ೧೨೫

ಚಂ || ದನುಜನೊಡರ್ಚುವಂ ಗಡುಪಸರ್ಗಮನಾತನ ಕೋಪವಹ್ನಿಯಾ
ತನನೆ ಕಱುತ್ತು ಸುಟ್ಟುದೆನೆ ದೃಷ್ಟಿ ವಿಷಪ್ರಭವಾಗ್ನಿಯಿಂದೆ ನೆ
ಟ್ಟನೆ ಸುಡುವೆಂ ಮನೋರಮಣಿಯಲ್ಲದೊಡೆಯ್ದೆ ಕೃತಘ್ನರಾಗೆಮೇ
ಯೆನೆ ಲಲಿತಾಂಗಿಯುಂ ಮನದೆಗೊಂಡಿರದೀಗಳೆ ಪೋಗಿ ಬೇಗದಿಂ ೧೨೬

ವ || ಮತ್ತ ಮತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮಶ್ನುತೇಯೆಂಬ ನೀತಿಯನಾ ಗುರುದ್ರೋಹಸಂಜಾತಪಾತಕಪ್ರಧಾನದಾನವನೊಳ್‌ದಿಟಂ ಮಾಡಿಯವನಂ ಭಂಗಿಸಿ ಪರಮಗುರುವಿನುಪಸರ್ಗಮಂ ಪಿಂಗಿಸಿ ಬರ್ಪುದೆ ನಮಗೆ ಕರಣೀಯಮುಂ ಶ್ರೇಯಮುಮೆಂದು ತನ್ನಭಿಪ್ರಾಯಮಂ ನಿಜಪ್ರೇಯಸಿಯುಮೊಡಂಬಡೆ ನಿಶ್ಚಿತಕಾರ್ಯನುಂ ಸಮೂರ್ಜಿತಶೌರ್ಯನುಮಾಗಿ

ಚಂ || ಧರೆ ಬಿರಿದತ್ತು ದೈತ್ಯಹೃದಯಂ ಬಿರಿವಂತು ಚತುಃಸಮುದ್ರಮಂ
ತಿರದೆ ಕಲಂಕಿದತ್ತು ದನುಜೇಂದ್ರನ ಸೇನೆ ಕಲಂಕುವಂತು ಕೇಳ್‌
ಗಿರಿ ತಳರ್ದತ್ತು ದಾನವನ ಪೆಂಪನಿತುಂ ತಳರ್ವಂತಹೀಶ್ವರಂ
ಬರೆ ರವಿದೀಪ್ತಿಯಂ ನಿಜಫಣಾಮಣಿದೀಪ್ತಿಯದಿರ್ಪುತಿರ್ಪಿನಂ ೧೨೭

ವ || ಅಂತು ಬಂದು ಮಂದರಾಚಳದಂತಚಳಿತಧೈರ್ಯನುಮಾಗಿ ಯೋಗಧ್ಯಾನಚಿತ್ತನಾಗಿರ್ದ ಪಾರ್ಶ್ವತೀರ್ಥೇಶ್ವರನಂ ನೋಡಿ

ಮ.ಸ್ರ || ಧೃತಶುದ್ಧಧ್ಯಾನದಿಂದಂ ಮತಿ ತೊಲಗಿದುದೇ ದೃಷ್ಟಿ ನಾಸಾಗ್ರದಿಂ ಸೂ
ಸಿತೆ ವಕ್ತ್ರಾಂಭೋರುಹಂ ಸ್ಮೇರದೆ ಬೆದಱೆದುದೇ ಕಾಯಮಾತ್ಮೀಯನಿರ್ವ್ಯಗ್ರತೆಯಿಂ ಬರ್ಚಿತ್ತೆ ಜಾನುಪ್ರಗತಭುಜಯುಗಂ ನಿಃಷ್ಪ್ರಕಂಪತ್ವದಿಂ ಪಿಂ
ಗಿತೆ ಪೇೞೆಂದಾ ಮುನೀಂದ್ರಸ್ಥಿರತೆಗೆ ತಲೆಯಂ ತೂಗಿದಂ ನಾಗರಾಜಂ ೧೨೮

ವ || ಅಂತು ನಾಗರಾಜಂ ಮುನಿರಾಜನ ಧೈರ್ಯಮನವಾರ್ಯಮಂ ಸಹಸ್ರಮುಖದಿಂ ತಾನುಂ ತನ್ನ ಮನೋನಯನವಲ್ಲಭೆಯುಂ ಮೆಚ್ಚಿ ಬಿಚ್ಚಳಿಸಿ ಬೞಿಯಂ ಮೂಱುಂ ಲೋಕದೊಡೆಯನಂ ಮೂಱುಸೂೞ್‌ಬಲವಂದು ನಿಜಕೋಟೀರಭಾರನಾನಾ ರತ್ನ ರೋಚಿಃಪೂರನೀರಂಗಳಿಂ ನೀರಜನ ಚಾರುಚರಣನೀರಜಂಗಳಂ ತೊಳೆದು ಮುನೀಂದ್ರನಂ ಬಂದಿಸಿ ತಮ್ಮೊಳಿಂತೆಂದರ್‌

ಕಂ || ದನುಜವಧೆಯಿಂದಮಘಬಂ
ಧನಮೆನಗಂ ಮುನಿಗಮಕ್ಕುಮೆಂದದನುೞಿದಾ
ದನುಜೇಂದ್ರನ ವಿದ್ಯಾಚ್ಛೇ
ದನಮಂ ಮಾೞ್ಪುದನೆ ಮನದೊಳವಳಂಬಿಸಿದಂ ೧೨೯

ಮ || ಘನವೈಕುರ್ವಣದಕ್ಷನಪ್ಪ ದನುಜಂಗಂ ಭೀತಿಯಪ್ಪಂತು ನೆ
ಟ್ಟನೆ ಲೋಕಾದ್ಭುತವಿಕ್ರಿಯಾಪರಿಣತಂ ನೀಚಂ ಭಯಕ್ಕಲ್ಲದಂ
ಜನೆನುತ್ತುಂ ಪಡೆದಂ ಸಹಸ್ರಫಣಸರ್ಪಾಕಾರಮಂ ನಾಗರಾ
ಜನದಂತಲ್ಲದೊಡೆಕ್ಷಿಸೌಖ್ಯಕರಸೌಮ್ಯಾಕಾರನೇನಲ್ಲನೇ ೧೩೦

ವ || ಅಂತಗುರ್ವುಮದ್ಭುತಮುಮಪ್ಪಂತು ವಿಗುರ್ವಿಸಿ

ಚಂ || ದನುಜಕೃತೋಪಸರ್ಗಮನಿತುಂ ಮುನಿರಾಜನೊಳೆಂತು ನಿಷ್ಫಳಂ
ಮುನಿಪತಿಗಾನುಮೆಯ್ದಿಪುಪಕಾರಮುಮಂತೆ ದಲಾದೊಡಂ ಸಮಂ
ತನುಮಿಕುಮೀ ಕೃತಜ್ಞತೆ ಕೃತಾರ್ಥತೆಯಂ ತನಗೀಯಲೆಂದಿದಂ
ನೆನೆದೊಸೆದೆತ್ತಿದಂ ನಿಜಫಣಾಮಣಿಮಂಡಪಮಂ ಫಣೀಶ್ವರಂ ೧೩೧

ಕಂ || ವಿಪುಳಫಣಾಮಂಡಳಮಂ
ಡಪಮಂ ಫಣಿರಾಜನೆತ್ತೆ ಬೋಧಶ್ರೀಯ
ತ್ಯಪಗತಕಲ್ಮಷಪಾರ್ಶ್ವಾ
ಧಿಪತಿಯ ಸುವಿವಾಹಗೇಯಮೆನಿಸಿದುದಾಗಳ್‌೧೩೨

ಪಿಡಿದಳ್‌ಪದ್ಮಾವತಿಯೊ
ಳ್ಪಿಡಿದ ಫಣಾಮಣಿಯ ಮೇಲೆ ಜಿನಪಂ ಭುವನ
ಕ್ಕೊಡೆಯಂ ದಲೆಂದು ವಜ್ರದ
ಕೊಡೆಯಂ ಪೋಲ್ವಂದದಿಂದೆ ಸೊಗಯಿಸುವಿನೆಗಂ ೧೩೩

ತನು ಕಾವಹಿಯ ಫಣಂ ತುಂ
ಬೆನೆ ವಜ್ರಚ್ಛತ್ರಮೆಸೆಯೆ ಜಿನಪನಹಿಚ್ಛ
ತ್ರನೆನಿಸಿ ನೆಗೞ್ದಿರೆ ತತ್ಪ
ತ್ತನದೊಳಹಿಚ್ಛತ್ರನಾಮಮಾಯ್ತನ್ವರ್ಥಂ ೧೩೪

ವ || ಅಂತು ಭೀಷಣಾಕೃತಿಯಂ ಫಣಿರಾಜಂ ಪಡೆದು ಪೆಡೆಮಣಿಯರುಣಕಿರಣದಿ ನುರಿಯನುಗುೞುತ್ತುಮಿರ್ಪ ದಿಟ್ಟಿಗಳಿಂದಟ್ಟಿ ನುಂಗುವಂತು ದೆಸೆದೆಸೆಗವ್ವಳಿಸುತ್ತುಮಿರೆ ಸುತ್ತುಲುಂ ಸುತ್ತಿ ಮುತ್ತಿ ಸಮಸ್ತ ವಸ್ತುವೇದಿಯಂ ವ್ಯಾಘ್ರಾದಿ ಕ್ರೂರಮೃಗಾಕಾರದಿಂ ಬಾಧಿಸುತ್ತುಮಿದರ್ದ

ಕಂ || ಭೂತಂಗಳ್‌ಫಣಿಪತಿಪರಿ
ಭೂತಂಗಳ್‌ಬೆದಱಿಪೋಗೆ ಪೋಗದೆ ಮತ್ತಂ
ಭೂತಾನಂದಂ ತಾನಂ
ದಾತತಕೋಪಂ ಮಹೋಪಸರ್ಗೋದ್ಯುಕ್ತಂ ೧೩೫

ಚಂ || ಒದವಿಸುವಶ್ಮವೃಷ್ಟಿ ನವಮೌಕ್ತಿಕವೃಷ್ಟಿ ಸಮಸ್ತ ಶಸ್ತ್ರಜಾ
ಳದ ಮೞೆ ಪುಷ್ಪವೃಷ್ಟಿ ವಿಷವೃಷ್ಟಿ ಸುಧಾರಸವೃಷ್ಟಿ ವಿಸ್ಫುಳಿಂ
ಗದ ಮೞೆ ರತ್ನವೃಷ್ಟಿ ಜಳವೃಷ್ಟಿ ಸುಚಂದನಾವಾರಿವೃಷ್ಟಿ ರ
ಕ್ತದ ಮೞೆ ಕುಂಕುಮಾಂಬುವಿನ ವೃಷ್ಟಿ ದಲಾಯ್ತು ತಪಃಪ್ರಭಾವದಿಂ ೧೩೬

ವ || ಅದಂ ಕಂಡು

ಮ || ಉರಿಯಂ ಕಾಱುವ ಕೆಂಡಮಂ ಕಱೆವ ವಕ್ತ್ರಂ ನೇತ್ರಮದ್ರೀಂದ್ರಮಂ
ಭರದಿಂದೆತುವ ದೂರದಿಂ ಸುರಿವ ನಾನಾಬಾಹುಕಾಂಡಂ ವಸುಂ
ಧರೆಗೊಂದಂಬರಕೊಂದು ದಾಡೆ ಬಳೆದೆತ್ತಂ ಭೀತಿಯಂ ಬೀಱೆ ಭೀ
ಕರರೂಪಂ ತಳೆದಂ ಪ್ರಕೋಪನಸದಾಳಾಪಂ ಯಮಾಟೋಪಮಂ ೧೩೭

ಕಂ || ನಗಮನಗೆಯೆತ್ತಿ ತಂದಿ
ಕ್ಕೆ ಗಡೆತ್ತಿದ ಕೊಡೆಯ ವಜ್ರಧಾರೆಗಳಿಂ ರೇ
ಣುಗಳಾದುವಾ ಮುನಿಯ ಧೃತಿ
ಗಗಧೃತಿ ತುಷಮಾತ್ರಮೆಂದು ಪೇೞ್ವಂತಾಗಳ್‌೧೩೮

ದಾನವಕೃತೋಪಸರ್ಗಮ
ದಾನತ ದೇವವ್ರತಪ್ರಭಾವದೆ ಕಿಡೆ ಸಂ
ತಾನಲತಾಂತಾಸಾರಂ
ತಾನಲಸದೆ ದೇವಬೃಂದದಿಂದಯ್ತೆತ್ತಂ ೧೩೯

ವ || ಆಗಳಾ ಯೋಗೀಶ್ವರಂ

ಕಂ || ಜ್ಞಾಯತನಾಗಖಿಳಾರ್ಥಂ
ಜ್ಞೇಯಂ ಪರಕೀಯಮುಂ ಸ್ವಕೀಯಮುಮಿಲ್ಲೆಂ
ಬೀಯಱಿವಿಂ ಕಿಡಿಸಿದನಾ
ತ್ಮಾಯತ್ತಂ ಯೋಗಿ ರಾಗಮಂ ದ್ವೇಷಮುಮಂ ೧೪೦

ವ || ಅಂತಾತ್ಮಾಯತ್ತ ಸಮಸ್ತ ವಸ್ತುಗತ ಮಧ್ಯಸ್ಥ ಚಿತ್ತನೈಕಾಗ್ರ್ಯ ಯೋಗ್ಯ ಬಾಹ್ಯಾಭ್ಯಂತರ ಸಾಮಗ್ರೀ ಸಮಗ್ರನವ್ಯಗ್ರಮನೋವಷ್ಟಂಭೀಭೂತ ವಿಶಿಷ್ಟಾಷ್ಟ ಗುಣಪ್ರಕೃಷ್ಟ ನಿರುಪಮನಿರುಪಧಿ ನಿರುಪಾದಿ ನಿರಾಲಂಬನೀರೋಗಮಯ ನಿರವಯವ ನಿರತಿಶಯ ನಿಶ್ಚಿತ ನಿಶ್ಚಳಿತ ನಿಶ್ಯಬ್ಧ ನಿರ್ದ್ವಂದ್ವ ನಿಷ್ಕ್ರಿರ್ಮ ನಿಷ್ಕಳಂಕ ನಿಷ್ಕಾರಣ ನಿರ್ಭಯ ನಿರ್ಭೇದ ನಿರ್ಭರ ನಿರ್ವಿಷಯ ನಿರ್ವಿಕಾರ ನಿರ್ವಿಕಲ್ಪಕ ನಿರ್ವಾದಬೋಧಮಯ ಪರಮಾನಂದ ಸ್ವಭಾವ ಸ್ವರೂಪವ್ಯಕ್ತಿ ಲಕ್ಷಣಸ್ವಸಾಧ್ಯ ಸಿದ್ಧಿಪ್ರಸಿದ್ಧಿ ಪ್ರತಿಚ್ಛಂದಸ್ಥಾನೀಯ ವಿಶುದ್ಧಸಿದ್ಧಿಪರ್ಯಾಯವರ್ಯನನವರತಾಧ್ರುವಾದಿ ದ್ವಾದಶಾನುಪ್ರೇಕ್ಷಾ ಭಾವನಾನು ಭಾವಸಂಭಾವಿತಾಶೇಷಭಾವಂ ದೂರ ನಿರಸ್ತಾಪಾರ ಸಂಸಾರ ಪಾರಾವಾರ ನಿವೃತ್ತ ವರ್ತನಸಮರ್ಥಾರ್ತ ರೌದ್ರ ಧ್ಯಾನನಾತ್ಮೀಯಕೃತ ನಿತ್ಯನಿರತಿಶಯ ನಿರ್ವಾದ ನಿರ್ವಾಣ ಸುಖಸುಧಾರ್ಣವನಿಮಜ್ಜನ ನಿರ್ಮಾಣ ಪ್ರವಣ ಚತುರ್ವಿಧಧರ್ಮಶುಕ್ಲಧ್ಯಾನವಿಧಾನಂ

ಕಂ || ಜಿನನೆಂದ ತೆಱನೆ ವಸ್ತುಗ
ಳೆನಿತನಿತಱ ತೆಱನನಱಿವನುಂ ನೆಱೆ ಮಧ್ಯ
ಸ್ಥನುಮಪ್ಪುದಱಿಂದವಿಚಳ
ಮೆನಿಸಿರ್ದಾಜ್ಞಾವಿಚಯಮನನ್ವಿತಜಯಮಂ ೧೪೧

ತೊಲಗದೆ ಮಿಥ್ಯಾತ್ವದಿನಘ
ಫಲದಿಂ ಸುಖಫಲದಿನಮಳ ರತ್ನತ್ರಯದಿಂ
ತೊಲಗಿದರೆಂತುದ್ಧತಭವ
ಜಲಧಿಯನುತ್ತರಿಕುಮೆಂಬಪಾಯವಿಚಯಮಂ ೧೪೨

ದುರಿತಯುತ ಸುಕೃತದಿಂದಂ
ದುರಿತದಿ ನಯದಿಂದೆ ದುರಿತದೆಯ್ದುಗುಮಾತ್ಮಂ
ನರ ನಾರಕ ಸುರ ತಿರ್ಯಕ್
ಸ್ವರೂಪತೆಯನೆನಿಸುವೀ ವಿಪಾಕವಿಚಯಮಂ ೧೪೩

ಪದಿನಾಲ್ಕೆ ರಜ್ಜುವೀ ಜಗ
ಮದಱೊಳಶುಭ ಶುಭದೆ ದುಃಖಸುಖಜೀವಂ ಶು
ದ್ಧದಿನಕ್ಷಯನೆನಿಸುಗುಮೆನಿ
ಸಿದುದಂ ಸಂಸ್ಥಾನವಿಚಯಮಂ ಯಮಿ ತಳೆದಂ ೧೪೪

ವ || ಅಂತತಿ ಪ್ರಶಸ್ಯಲೇಶ್ಯಾಪರಿಣತನುಂ ಚತುರ್ವಿಧ ದರ್ಮಧ್ಯಾನಾಧೀನ ಮಾನಸನುಮಾಗಿಯಧಃಪ್ರವೃತ್ತಾನುಪೂರ್ವಾನಿವೃತ್ಯಭಿಧೇಯಕರಣತ್ರಯಚರಮ ಸಮಯದೊಳನಂತಾನುಬಂಧಿ ಕ್ರೋಧಮಾನಮಾಯಾಲೋಭಂಗಳನೊರ್ಮೊದಲೊಳಿತರ ದ್ವಾದಶಕಷಾಯ ಸ್ವರೂಪದಿಂ ವಿಸಂಯೋಜಿಸಿ ಮತ್ತಮಂತರ್ಮುಹೂರ್ತಂ ವಿಶ್ರಮಿಸಿ ತತ್ಪರಿಣಾಮತ್ರಯ ಪವಿತ್ರಂ ಕ್ರಮದಿಂ ಮಿಥ್ಯಾತ್ವಸಮ್ಯಗ್ಮಿಥ್ಯಾತ್ವ ಸಮ್ಯಕ್ತ್ವಪ್ರಕೃತಿಗಳೆಂಬ ದರ್ಶನಮೋಹನೀಯಂಗಳಂ ನಿರವಶೇಷಂ ಕ್ಷಪಿಯಿಸಿದನದೆಂತೆನೆ

ಚಂ || ಮೊದಲ ಚತುಷ್ಕಷಾಯವೆಸರಗ್ಗದ ಗೋವಳಿಗರ್ಕಳಾಂತೊಡೊ
ರ್ಮೊದಲೊಳೆ ಬಂಧಮೋಕ್ಷವಿಧುರಂ ಕರಣತ್ರಯಮೆಂಬ ಗಾಯದಿಂ
ದದಿರದನಂತವೀರ್ಯನದಟಿಂ ಮುಱಿದಾಗಳೆ ಮೋಹಮಲ್ಲನೊ
ಡ್ಡಿದೊಡವರಂ ಕಱುತ್ತು ಮುಱಿದಂ ಜಗಜಟ್ಟಿವೊಲಾ ಮುನೀಶ್ವರಂ ೧೪೫

ವ || ಅಂತಾ ಮುನಿರಾಜಕುಂಜರಂ ಸಪ್ತಪ್ರಕೃತಿ ಸಪ್ತಚ್ಛದಪಾದಪಮೂಳಮನು ನ್ಮೂಳಿಸಿ ಮೋಕ್ಷಲಕ್ಷ್ಮೀಸಮಾಕೃಷ್ಟಿಕರಣದಕ್ಷಾಕೂಣನಿರ್ಮಳಕ್ಷಾಯಿಕ ಸಮ್ಯಗ್ದೃಷ್ಟಿ ವಿಶಿಷ್ಟನಾಗಿ ಸಮನಂತರಂ ಮಂದಮಂದತರಕಷಾಯೋದಯಸ್ಥಾನರಾಶಿರಂಜಿತಪ್ರಮತ್ತಾಪ್ರಮತ್ತ ಪರಾವರ್ತಸಹಸ್ರಗರ್ಭಿತಾಂತರ್ಮುಹೂರ್ತಕಾಲಂ ವಿಶ್ರಮಿಸಿ

ಕಂ || ಕ್ಷಪಕಶ್ರೇಣಿಯ ನಿರ್ವೃತಿ
ವಿಪುಳಪ್ರಾಸಾದಸುಖಸಮಾರೋಹಣಕಂ
ತುಪಯೋಗಿಯೆಂದು ಯೋಗಿ ತ
ದುಪಯೋಗದೊಳತುವಿದ್ಯನುದ್ಯತನಾದಂ ೧೪೬

ವ || ಅಂತು ಕ್ಷಪಕಶ್ರೇಣ್ಯಾರುರುಕ್ಷುವಪ್ಪ ಮುಮುಕ್ಷುಮುಖ್ಯಂ ನಿರ್ಮಳಧರ್ಮ ಧ್ಯಾನಮಕರಿಕಾರೂಢಪೌಢನಧಃಪ್ರವೃತ್ತ ಕರಣಪರಿಣತಾತಿಶಯಪ್ರಮತ್ತಗುಣಸ್ಥಾನ ನಿಷ್ಪಾದಿತ ಸ್ಥಿತಿಬಂದಾಪಸರಣಸಹಸ್ರಂ ತದನಂತರ ಸಮಯ ಸಂಪ್ರಾಪ್ತಾ ಪೂರ್ವಕರಣ ಕ್ಷಪಕಗುಣ ಸ್ಥಾನನವ್ಯಂಜನ ಯೋಗಸಂಕ್ರಮಣಕ್ರಮಸಂಭವದ್ವಾಚತ್ವಾರಿಂಶದ್ಭಾಗಸಂಗತಪೃಥಕ್ತ್ವ ವಿತರ್ಕವಿಚಾರನಾಮಭಿಧಾಮ ಪ್ರಥಮಶುಕ್ಲಧ್ಯಾನಾಧೀನಂ ಪ್ರತಿಸಮಯಾನಂತಗುಣ ವಿಶುದ್ಧಿಸ್ಥಿತಿಬಂಧಾ ಪಸರಣಸ್ಥಿತ್ಯನುಭಾಗಕಾಂಡಕಘಾತಗುಣಶ್ರೇಣಿಗಳಂ ನಿಗ್ರಹಿಸುತ್ತು ಮಂತಮುರ್ತಹೂರ್ತಮಾತ್ರ ನಿರ್ವರ್ತಿತಾಪೂರ್ವಕರಣನುಮನಂತರ ಸಮಯ ಸಮುದಿತ ಪ್ರತಿಕ್ಷಣಾನಂತಗುಣಪರಿಣಾಮ ಪರಿಣತಾನಿವೃತ್ತಿಕರಣಗುಣಸ್ಥಾನನುಮಾಗಿ ನಿಜಗುಣ ಸ್ಥಾನಪ್ರಥಮಾದಿ ನವಭಾಗೆಗಳೊಳತಿ ರೂಢಷೋಡಶಪ್ರಕೃತ್ಯಾದಿಗಳಂ ನಿರ್ಭೇದಿಸಿದನದೆಂತೆನೆ

ಕಂ || ನಿರಯಾದಿಷೋಡಶಪ್ರಕೃ
ತಿರಿಪುವನನಿವೃತ್ತಿಕರಣ ನಿಶಿತಾಸಿಯಿನಂ
ತುರವಣೆಯಿಂ ವಿಚ್ಛೇದಿಸಿ ಪರಾಕ್ರಮಶ್ರೀಗೆ ಯತಿವರಂ ವರನಾದಂ ೧೪೭

ಪ್ರತ್ಯರ್ಥಿಭಾವದಿರ್ದ
ಪ್ರತ್ಯಾಖ್ಯಾನಾಖ್ಯಮಂ ಕಷಾಯಮನದಟಿಂ
ಪ್ರತ್ಯಾಖ್ಯಾನಕಷಾಯಮ
ನತ್ಯೂರ್ಜಿತಸತ್ವನೆಂಟುಮಮ ವಿಘಟಿಸಿದಂ ೧೪೮

ಜಿನಮುನಿರಾಜಂ ಕ್ರಮದಿಂ
ದೆ ನಪುಂಸಕಯುವತಿವೇದಯುಗಮಂ ಧ್ಯಾನಾಂ
ಶುನಿಕಾಯದಿಂದೆ ನಿರ್ಮೂ
ಳನಮಂ ಮಾಡಿದನುದಾತ್ತನಿರ್ಮಳವೃತ್ತಂ ೧೪೯

ಹರಿಯಿಸಿದಂ ಪುಂವೇದದ
ಪುರಾಣಸತ್ಕರ್ಮದೊಡನೆ ನೋಕರ್ಮಮನ
ಕ್ಷರಪರಿಣಾಮಯುತಂ ಹಾ
ಸ್ಯರತ್ಯರತಿಶೋಕ ಭಯ ಜುಗುಪ್ಸಾಹ್ವಯಮಂ ೧೫೦

ಅಳಱಿಸಿ ಸಮಯೋನದ್ವ್ಯಾ
ವಳಿಮಾತ್ರದೆ ಪುರುವೇದ ನವಬಂಧಮನಂ
ತಳಱಿಸಿದಂ ಕ್ರಮದಿಂ ಸಂ
ಜ್ಜಳ ನಕ್ರೋಧಾದಿ ಸಾಂಪರಾಯತ್ರಯಮಂ ೧೫೧

ವ || ಅಂತು ನಿಷ್ಠಾಪಿತಸಾಮಯಿಕಚ್ಛೇದೋಪಸ್ಥಾಪನಾಸಂಯಮಾಧಿಷ್ಠಾನಾ ನಿವೃತ್ತಿಕರಣಸ್ಥಾನಂ ಸಮನಂತರ ಸಮುಪಗತ ಸೂಕ್ಷ್ಮಸಾಂಪರಾಯಗುಣಸ್ಥಾನ ಸಂಯುತನುಮಾಗಿ

ಕಂ || ಶ್ರವಣೋತ್ತಮನವನತವೈ
ಶ್ರವಣಂ ಸಲೆ ಸರ್ವಗುಣವಿಲೋಪನಮಂ ಮಾ
ಡುವ ಲೋಭಮಂ ವಿಭೇದಿಸೆ
ವಿವಿಧ ಗುಣಾಭರಣದಿಂ ವಿಭೂಷಿತನಾದಂ ೧೫೨

ವ || ಅಂತತಿಕ್ರಾಂತಸೂಕ್ಷ್ಮಸಾಂಪರಾಯಾಧ್ಯವಸಾಯನತಿಖ್ಯಾತ ಯಥಾಖ್ಯಾತ ಚರಿತ್ರೋಪಲಕ್ಷಿತಕ್ಷೀಣಕಷಾಯಂ ಛದ್ಮಸ್ಥವೀತರಾಗಸಂಯುತನುಮಾಗಿ ನಿಜಗುಣಸ್ಥಾನ ದ್ವಿಚರಮಸಸಮಯದೊಳ್

ಕಂ || ಸಲೆ ನಿದ್ರಾದ್ವಯಮಂ ದಾ
ನ ಲಾಭ ಭೋಗೋಪಭೋಗ ವೀರ್ಯಮೆನಿಪ್ಪ
ಸ್ಖಲಿತಾಂತರಾಯಮಯ್ದುಮ
ನಲೆದುರುಸುಖಸಂಪದಕ್ಕೆ ತಾಂ ಪತಿಯಾದಂ ೧೫೩

ನಿರುಪಮಮುನಿ ಚಕ್ಷುರ ಚ
ಕ್ಷುರವಧಿ ಕೇವಳಮೆನಿಪ್ಪ ದರ್ಶನ ಜನಿತಾ
ವರಣಚತುಷ್ಟಯಮಂ ಸಂ
ಹರಿಸಿದನಘವನದವಾನಳಂ ಮುನಿತಿಳಕಂ ೧೫೪

ತರದಿಂ ಮತಿಶ್ರುತಾವಧಿ
ಪರಮ ಮನಃಪರ್ಯಯೋದ್ಘಕೇವಳಬೋಧಾ
ವರಣಮನಯ್ದುಮನುಪಸಂ
ಹರಿಸಿದನತಿಶಯವಿಶುದ್ಧಭಾವಸಮೃದ್ಧಂ ೧೫೫

ಉ || ಚೈತ್ರದ ಕೃಷ್ಣಪಕ್ಷದ ಚತುರ್ದಶಿಯಾಗೆ ವಿಶಾಖೆಯಂದು ಬಂ
ದತ್ತ್ರಿವಿಳೋಕನಪ್ರಭವನೊಪ್ಪಿರೆ ಕೇವಳಬೋಧಮುಣ್ಮಿದ
ತ್ತು ತ್ತ್ರಿಜಗತ್ತ್ರಿಕಾಲ ವಿಷಯಾಖಿಳ ವಸ್ತುವಿಬೋದಕಂ ಸುಖ
ಕ್ಷೇತ್ರಮತೀಂದ್ರಯಾಕ್ಷಯಮನಂತಚತುಷ್ಟಯಮಿಂದ್ರವಂದ್ಯನೊಳ್ ೧೫೬

ಧ್ಯಾನಮಹಾನಳಂ ತವಿಸೆ ಘಾತಿಚತುಷ್ಟಯಕಿಟ್ಟಮಂ ನಿಜಾ
ಧೀನಮನಂತವೀರ್ಯ ಸುಖದರ್ಶನಭೋದಚತುಷ್ಟಯಂ ತ್ರಿಳೋ
ಕೀನುತಮಾತ್ಮಹೇಮದೊಳೆ ವರ್ಣವಿಶೇಷಮದಾಗೆ ಶೋಭಿಪಂ
ಮಾನಿತಶೀಳರತ್ನನಿಧಿ ಪಾರ್ಶ್ವಜಿನಂ ಭುವನೈಕಭೂಷಣಂ ೧೫೭

ವ || ಅಂತಿಮಲ್ಲದೆ

ಉ || ಧ್ಯಾನವಿಧಾನಮೆಂಬೆಸೆವ ದಬ್ಬುಕದಿಂದೊಡೆದೆಯ್ದೆ ಘಾತಿಸಂ
ತಾನ ಶಿಲಾಚತುಷ್ಟಯಮನುದ್ಘವಚಂ ಜಿನಯೋಗಿ ಕೇವಳ
ಜ್ಞಾನನಿಧಾನಮಂ ಪಡೆದು ವಿಶ್ವವಿವಕ್ಷೆ ವಿಶುದ್ಧಲಕ್ಷ್ಮಿಯಿಂ
ದೇನೆಸೆದಿರ್ದನೊ ತ್ರಿಭುವನಪ್ರಭು ಪಾರ್ಶ್ವಜಿನೇಶ್ವರಂ ವರಂ ೧೫೮

ವ || ಅದಲ್ಲದೆಯುಂ

ಮ.ಸ್ರ || ಪ್ರಿಯಭಾಷಾಸಿಂಧುಸಂಭೂತಿಯಿನುದಿತಗುಣಶ್ರೇಣಿಮಾಣಿಕ್ಯದಿಂ ನಿ
ಶ್ಚಯನಿತ್ಯೌನ್ನತ್ಯದಿಂ ಭೂನುತನಿಜಧೃತಿಯಿಂ ವ್ಯಕ್ತಸಮ್ಯಕ್ತ್ವ ಲೋಕ
ತ್ರಯಮಿಥ್ಯಾಧ್ವಾಂತಮಂ ತೂಳ್ದುವ ವಿಭವಲಸತ್ಕೇವಜ್ಞಾನಭಾನೂ
ದಯದಿಂ ಪೂರ್ವಾದ್ರಿಯೆಂಬಂತಸದಳಮೆಸೆದಂ ಶಾಶ್ವತಂ ಪಾರ್ಶ್ವನಾಥಂ ೧೫೯

ಗಗನೋದ್ಯದ್ಯಾನನಪ್ರಾಣಿವಧನಖಿಳವಿದ್ಯೇಶ್ವರಂ ವೀತಬಾಧಂ
ವಿಗತಚ್ಛಾಯಂ ವಿಪಕ್ಷ್ಮಪ್ರಚಳನನಪಹೃದ್ಭೋಜನೇಚ್ಛಂ ಸುಭಿಕ್ಷಂ
ಪ್ರಗುಣ ಶ್ರೀಸಿದ್ಧಕೇಶಪ್ರಣವತತಿ ಚತುರ್ವಕ್ತ್ರನೆಂಬೀ ವಿಳಾ
ಕ್ಕೆ ಗಡಂತಾವಾಸಮಾದಂ ವಿಭುಧಜನಮನಃಪದ್ಮಿನೀಪದ್ಮಮಿತ್ರಂ

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾಸಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥ ಚರಿತ ಪುರಾಣದೊಳ್ ಕೇವಳಜ್ಞಾನೋದಯವರ್ಣನಂ ಪಂಚದಶಾಶ್ವಸಂ