ಕಂ || ಶ್ರೀಪರಮೌದಾರಿಕತನು
ಪಾಪಹರಂ ಪುಣ್ಯರೂಪನೆಸೆದಿರೆ ಜಗತೀ
ದೀಪಂ ಸತ್ಪಥದಲ್ಲಿ ಕ
ಳಾಪತಿ ಜಿನರಾಜನೆನಿಪ ಕವಿಕುಳತಿಳಕಂ ೧

ಹರಿಶಂಖಪಟಹಘಂಟೋ
ದ್ಧುರರವದಿಂ ಜ್ಯೋತಿರಮರಭವನ ಭವ ವ್ಯಂ
ತರ ಕಳ್ಪವಾಸಿಗರ್ ಭಾ
ಸುರ ಬೋಧೋದಯಮನಱಿದು ಬರೆ ಮುದದೊದವಿಂ ೨

ಮ.ಸ್ರ || ನುತಪೌಳೋಮೀಕಟಾಕ್ಷದ್ಯುತಿವಿಸರಸುಧೋದ್ಭೂತರೋಮಾಂಚಸಸ್ಯ
ಕ್ಷಿತಿಗಾತ್ರಂ ಶೋಣರತ್ನಾಭರಣಕಿರಣಸಿಂಧೂರಸಂಶೋಭಿತೈರಾ
ವತ ನಾಗೇಂದ್ರಾಧಿರೂಡಂ ಸುರಸಮಿತಿಯುತಂ ನಾಕಲೋಕಾಂಗನಾಸಂ
ಗತಿ ಗೀತಾತೋದ್ಯನೃತ್ಯಪ್ರಣಯಿ ಶತಮುಖಂ ಬಂದನಾನಂದದಿಂದಂ ೩

ವಿನುತಾಪಾಂಗಪ್ರಭಾಸಂಜನಿತ ಸುರನದೀಪೂರದೊಳ್ ಚಾರುವಕ್ತ್ರಂ
ವನಜಾತಂ ಸ್ಮೇರನೇತ್ರಂ ಧವಳಕುವಳಯಂ ಬಾಹುಜಾಳಂ ಮೃಣಾಳಂ
ಸ್ತನಭಾರಂ ಚಕ್ರವಾಕಂ ಚಳದಳಕಚಯಂ ಚಂಚರೀಕಂ ಸಮಂತಾ
ಗೆ ನಿತಾಂತಂ ದೇವಕಾಂತಾಕುಳಮೆಸೆದು ನಬೋಭಾಗದೊಳ್ ಬಂದುದಾಗಳ್ ೪

ವ || ಅಂತುಮಲ್ಲದೆ

ಮ || ಮೊಗದಿಂ ನಿರ್ಮಳಚಂದ್ರಮಂಡಳಸಹಸ್ರಾನೀಕಮಂ ಕೇಕರಾಂ
ಶುಗಳಿಂ ಚಂದ್ರಿಕೆಯಂ ತಳತ್ತಳಿಪ ಮುಕ್ತಾಹಾರದಿಂ ತೋರುತಾ
ರಗೆಯಂ ನಿರ್ಮಿಸುತುಂ ಭ್ರಮದ್ಭ್ರಮರಮಾಳಾನಂದಿ ಮಂದಾರಮಾ
ಲೆಗಳಂ ಲೀಲೆಯಿನಾಂತು ಬಂದುದಮರೀಸಂದೋಹಮುತ್ಸಾಗದಿಂ ೫

ವ || ಆಗಳಖಿಳಜನ ಮನೋಮಯೂರೀಲೋಚನ ಚಾತಕನಿಕಾಯ ಹರ್ಷೋತ್ಕರ್ಷ ವರ್ಷಾಕಾಲಲೀಲಾಭ್ರವಿಭ್ರಮೈಕೇಂದ್ರನಿಳಮಣಿಮಯ ಸಮವಸರಣ ಭೂಮಂಡಳ ಮನನತಿದೂರದೊಳೆ ಕಂಡು ನಿಟಿಳತಘಟಿತ ಕರಕಮಳಯುಗಳರಾಗಿ

ಮ || ಇದು ದುಷ್ಕರ್ಮದವಾನಳಪ್ರಶನಮನಪ್ರದೋದ್ಭೂತ ನೀಳಾಭ್ರಮಿಂ
ತಿದು ಲೋಕತ್ರಯಜೈತ್ರಮೋಹಮಹಿಭೃದ್ದೋರ್ಗರ್ವ ಹೃದ್ದುರ್ಗಮಿಂ
ತಿದು ಜನ್ಮಾಬುಧಿಪಾರತಾರಣಕರಂಡಂ ನೋಡಿಮೆಂದೆಯ್ದೆ ಸ
ಮ್ಮುದದಿಂದಿಂತಭಿವರ್ಣಿಸುತ್ತಮರಸಂತಾನಂ ಜಿನಾಸ್ಥಾನಮಂ ೬

ವ || ಅಂತು ಪರಮಾನಂದದಿಂ ಪೊಗೞ್ವ ಶತಮುಖಶತಪರಿವೃತನುಂ ಚತುರ್ನಿಕಾಯ ಸುಮನಸ್ಸಮೂಹಸಮನ್ವಿತನುಮಾಗಿ ಧರ್ಮಾನುರಾಗಸಾಗರೋತ್ತರಂಗಪ್ರೇರಿ ತಾಂತರಂಗಂ ಬಂದು ಮುನ್ನಮೆ ತನ್ನ ನಿಯಮದಿಂ ಧನದಂ ನಿರ್ಮಿಸಿದ ಸಮವಸರಣದ ಸಿರಿಯಂ ಮೆಚ್ಚಿ ಬಿಚ್ಚಳಿಸಿ ಸಹಸ್ರಾಕ್ಷಂ ನಿರೀಕ್ಷಿಸಿದನದೆಂತಿರ್ದುದೆಂದೊಡೆ

ಕಂ || ರವಿ ಕಣ್ಗೆ ಸೊಗಯಿಸಂ ನೋ
ಡುವೊಡತಿ ಹೀನಾಧಿಕಸ್ವಭಾವಂ ಶಶಿಯೆಂ
ದವಱುಮನಿೞಿಯಿಪುದೆನೆ ಪೊಗ
ೞ್ವವನಾವಂ ಸಮವಸೃತಿ ಶೋಭಾಕೃತಿಯಂ ೭

ಭಾವುಕರೀಯೆಡೆಗಿದು ಶೋ
ಭಾವಹಮೆಂಬಿನೆಗಮಿಂಬು ಮೆಯ್ವೆತ್ತಿರೆ ನಾ
ನಾ ವಸ್ತುಗಳಂ ನೆಱಪಿ ಕ
ಳಾವಿದುರಂ ಧನದನೊಸೆದು ಸಮೆದಂ ಸಭೆಯಂ ೮

ಧರೆಗಯ್ಸಾಸಿರ ಬಿಲ್ಲಂ
ತರದಲ್ಲಿ ನಿರಂತರಪ್ರಶೋಭೆಗೆ ನೆಲೆಯಾ
ಯ್ತುರು ಸಮವಸರಣಮವನತ
ಶರಣಂ ಸುಖಕರಣಮವಹಿತಾಂತಃಕರಣಂ ೯

ಗುಣನಿಧಿಗೆಱಗೆ ಗುಣಾರೋ
ಹಣಮೀ ತೆಱದಿಂದೆ ಸುಗಮಮೆಂದಱಿಪುವ ವಾ
ಕ್ಪ್ರಣುತ ಪದೌಷಧನಿಧಿಗಳ್
ಮಣಿಮಯ ವಿಂಶತಿಸಹಸ್ರಸೋಪಾನಂಗಳ್ ೧೦

ವ || ಅಂತು ನಾಲ್ಕು ದೆಸೆಯೊಳುಮೆಸೆವ ಸಮೀಚೀನಸೋಪಾನಂಗಳಿಂ ಮನಂಗೊಳಿಸಿ ಜಾತಕರೂಪಗೋಪುರಚತುಷ್ಟಯ ಭುವನೈಕಮಲ್ಲಂ ಮೋಹಮಲ್ಲನೀನೆಕ್ಕ ತುಳದಿಂದಕ್ಕುಳಿಸದೆ ಡೊಕ್ಕರಿಗೊಂಡು ನೆಟ್ಟನೆ ಮುಱಿದಿಕ್ಕಿ ಗೆಲ್ದ ವಿದ್ಯಾಧೃಕಳಮಿದೆನಿಸಿದ ಸಮವಸರಣದ

ಕಂ || ಲೋಕಾಕಾಶದ ತೆಱದಿಂ
ದೇಕೇಂದ್ರಿಯ ನೀಳಕುಟ್ಟಿಮಂ ಕಣ್ಗೊಳಿಕುಂ
ವ್ಯಾಕೀರ್ಣನವಪದಾರ್ಥ
ನೀಕಮಖಂಡಿತ ವಿಳಾಸಮಂಡಿತಮೆಂತುಂ ೧೧

ಸಾಲಂ ವೇದಿದ್ವಿತಯಂ
ಸಾಲೋನ್ನತವೇದಿ ಸಾಲವೇದಿಕೆ ವಿಳಾಸ
ಚ್ಛಾಲಂ ವೇದಿಕೆಯವಱ ವಿ
ಶಾಲಾಂತರವರೆಗಳೆಂದು ಸೊಗಯಿಸುತಿರ್ಕುಂ ೧೨

ವ || ಮತ್ತಮವಱನ್ವರ್ಥಮಾನಾಭಿರಾಮತೆಯಂ ಪೇೞ್ವೊಡೆ

ಕಂ || ……………………..ಚೈತ್ಯ
ಪ್ರಕರದಿನುರೆ ಪುಷ್ಟವಾಟದಿಂ ವನಗಳಿನು
ಚ್ಚಕೃತಧ್ವಜದಿಂ ಸುರಕುಜ
ನಿಕರದೆ ಸಂಗೀತಗೃಹ ಗಡದಿಂದೆಸೆಗುಂ ೧೩

ಬಳಸಿರ್ದ ಸಾಲವೇದಿಕೆ
ಗಳೆ ನೆಗೞ್ದಾಧಾರವಳಯಮಾಗೆ ಸುವರ್ಣೋ
ಜ್ವಳಮ ಸಮಸಿದ್ಧಚಕ್ರಮ
ನಳವಡೆ ಬರೆದಂತೆ ಸಮವಸೃತಿ ಸೊಗಯಿಸುಗುಂ ೧೪

ವ || ಮತ್ತಮುತ್ತಮಪುರುಷನಂತೆ ಸದ್ವೃತ್ತತೆಗೊಳಗಾದ ಸಮವಸರಣಮಂಡಪದ

ಕಂ || ಕಡೆವಿಡಿದು ಪಂಚರತ್ನದ
ಪುಡಿಯಿಂದಂ ಪಡೆದ ಧೂಳಿಸಾಲಂ ಚೆಲ್ವಂ
ಪಡೆದಿಂದ್ರಚಾಪಮುಂ ಜಿನ
ನಡಿಗಳನೋಲಗಿಪ ಲೀಲೆಯಂ ಪಾಲಿಸುಗುಂ ೧೫

ಸುರಚಾಪದ ಸಿರಿವಡೆದುಂ
ಸ್ಥಿರವಿಭವಮನಾಳ್ದು ಬಗೆವೊಡಚ್ಚರಿ ಬಹಿರು
ದ್ಧುರಪರಿಧಿ ಕಣ್ಗೆವಂದುದು
ವರ ಧೂಳೀಸಾಲಮೆನಿಸಿಯುಂ ನೋಟಕರಾ ೧೬

ವ || ಅಂತು ಸೊಯಿಸುವ ಧೂಳೀಸಾಲಲಕ್ಷ್ಮೀಲಪನವಿಳಾಸಮನೊಳಕೊಂಡು

ಕಂ || ಘನಘಟಿತ ಪಂಚಾರತ್ನಾಂ
ಶು ನಿಕಾಯ ವಿಚಿತ್ರಿತಾಂಬರಪ್ರಸರಂ ನೆ
ಟ್ಟನೆ ಜಾತರೂಪಮಾಗಿಯು
ಮನುಪಮ ಗೋಪುರಚತುಷ್ಟಯಂ ಚಿತ್ರತರಂ ೧೭

ತ್ರಿದಶರಾಸನರುಚಿ ಮೊದ
ಲಲದು ಕನಕದವೆರಡು ರಕ್ತನಕದದೊಂದ
ಗ್ಗದ ಕನಕರಜತಕಳಧೌ
ತದದೊಂದೊಂೞಿದವೆರಡು ರವಿಕಾಂತಂಗಳ್‌೧೮

ಮೊದಲದು ಕನಕಜಮೆರಡನೆ
ಯದು ಮೊದಲಾದಾಱುಗೋಪುರಂ ರಜತಮಯಂ
ವಿದಿತ ಹರಿನ್ಮಣಿಮಯಮೆರ
ದೊಡವಿದ ಜಿಸಭೆಯ ಗೋಪುರಂಗಳ್‌ಕ್ರಮದಿಂ ೧೯

ದ್ವಾರತ್ರಿತಯದೊಳಂ ಪ್ರತಿ
ಹಾರರ್‌ಜ್ಯೋತಿಷ್ಕರೆರಡಱೊಳ್‌ಯಕ್ಷರ್‌ದೌ
ವಾರಿಕರುೞಿದೆರಡಱೊಳಂ
ತಾರಯೆ ಭವನಭವಕಲ್ಪಜರ್‌ಪ್ರತಿಹಾರರ್‌೨೦

ವಿಳಸಿತ ಗೋಪುರದಿರ್ಕೆಲ
ದೊಳಮೊಂದೊಂದತುಳ ನೃತ್ಯನಿಳಯಂ ಕನಕೋ
ಜ್ವಳ ಧೂಪಘಟಮುಮಾ ತೆಱ
ದೊಳೆ ಕಣ್ಗೊಳಿಸಿರ್ಕುಮವಱ ಮುಂತತಿಕಾಂತಂ ೨೧

ನಾಟಕಶಾಲೆಯೊಳಭಿನವ
ಹಾಟಕಮಣಿಘಟಿತದೂಪಘಟಧೂಮಚಯೋ
ದ್ಘಾಟಿತಘನಕೆ ನಲಿವ ನವಿ
ಲಾಟಮನನುಕರಿಸೆ ನರ್ತಿಪರ್‌ಸುರಸತಿಯರ್‌೨೨

ವ || ಅಂತು ಕಾಂತಿಯಂ ತಳೆದ ಗೋಪುರಂಗಳ ಬಹಿರಂತರ್ಜಗತಿಗಳೊಳ್ ತ್ರಿಜಗತ್ಪೂಜ್ಯರಾಭಿಷವಣ ಪ್ರವಣಂಗಳುಮತೀತೋತ್ತರ ಸಪ್ತಜನ್ಮಪ್ರದರ್ಶನಕಂಗಳುಂ ದುರಂತದುಃ ಖಾಗಮ ನಿದಾಘನಿವಾರಣಪ್ರವೀಣಂಗಳುಮನೂನ ಜ್ಞಾನಭಾನೂದಯಾಚ್ಛಾದಕ ಮಿಥ್ಯಾತ್ವಾಂಭೋದ ನಿರ್ಭೇದನ ಪ್ರಭಂಜನಜನಕಂಗಳುಂ ಸಂಸಾರಕಾಂತಾರಪರಿಭ್ರಮಣಶ್ರಮ ಹರಂಗಳುಂ ಪ್ರಗುಣಗುಣಸುಪ್ರತಿಷ್ಠಾಪ್ರದಂಗಳುಂ ಮೋಕ್ಷಲಕ್ಷ್ಮೀವಿವಾಹಗೇಹಾಳಂಕಾರಂಗಳುಂ ಮನಸಿಜವಿಜಯಜಾತಖ್ಯಾತಿವ್ಯಾಪಕಂಗಳುಮಪ್ಪ

ಕಂ || ಕಳಶಾದರ್ಶಚ್ಛತ್ರಾ
ಮಳ ಚಾಮರ ತಾಳ ಸುಪ್ರತಿಷ್ಠಕ ಭೃಂಗಾ
ರ ಲಸದ್ಧ್ವಜಮೆನಿಸಿದ ಮಂ
ಗಳಮಿವು ನೂಱೆಂಟು ಸೊಗಯಿಕುಂ ಪ್ರತ್ಯೇಕಂ ೨೩

ಸುರಗಿರಿವೋಲ್‌ಪಾಂಡುಕದಿಂ
ಶರನಿಧಿವೋಲ್‌ಶಂಖದಿಂದೆ ಬಲಿಬಂಧನ ತ
ತ್ಪರಹರಿವೋಲ್‌ಮಾಣವಕ
ಸ್ಫುರಿತಾಕೃತಿಯಿಂದೆ ಪದ್ಮದಿಂ ಸುರನದಿವೋಲ್‌೨೪

ಪರಿಭಾವಿಸುವೊಡೆ ರೋಹಣ
ಗಿರಿಯಂತಿರೆ ಸರ್ವರತ್ನದಿಂದುಜ್ಜೈನೀ
ಪುರದಂತೆ ಮಹಾಕಾಳಾದಿ
ನುರುದಕ್ಷಿಣಕ್ಕಿನಂತೆ ಕಾಲಸ್ಥಿತಿಯಿಂ ೨೫

ಸೊಗಯಿಪ್ಪ ಗೋಪುರಂಗಳ
ಜಗತೀತಳಮೊಪ್ಪುತಿರ್ಪ ಸಂವತ್ಸರಮಾ
ಲೆಗಳೆನೆ ಪಿಂಗಳದಿಂ ಕಾಂ
ತಿಗೆ ಸಖನೈತರ್ಪ ವಿಭವದಹಿಭವನದವೋಲ್‌೨೬

ಎನಿತೊಳವು ತೊಳಪ ಗೋಪುರ
ಮನಿತಱೊಳಂ ನೂಱುನೂಱು ಮಣಿತೋರಣಮಂ
ಶುನಿಕಾಯದಿಂ ನಭೋಮಂ
ಡನಮಂ ಚಿರಶಕ್ರಚಾಪಮಂ ಪಡೆದೆಸೆಗುಂ ೨೭

ಪಳಿಕಿನ ಭಿತ್ತಿಗಳಿರ್ಕೆಲ
ದೊಳಮಳಮಡೆ ಧೂಳಿಶಾಲದಿಂ ಜನಪೀಠ
ಸ್ಥಳಮಂ ಮುಟ್ಟುವಿನಂ ಕ
ಣ್ಗೊಳಿಸಿರ್ಪುಉ ನಾಲ್ಕುಬೀದಿ ನಾಲ್ಕುಂದೆಸೆಯೊಳ್‌೨೮

ಬೀದಿಗಳಮರನದೀಸಂ
ವಾದಿಗಳಮರೀಕೃತತೋಪಹಾರಲತಾಂತಾ
ಮೋದಿಗಳಘವಿಘಟನಸಂ
ಪಾದಿಗಳೆಯ್ದಿಪವು ಪರಮಪದಸಂಪದಮಂ ೨೯

ವ || ಮತ್ತಮಾ ಚತುರ್ಗತಿನಿವಾರಣಚತುರ್ವೀಥೀಮಧ್ಯದೊಳ್‌ದ್ವಾದಶಜಾತರೂಫ ಗೋಪುರಾಳಂಕೃತ ಸಾಲತ್ರಯದಿಂದೊಳಗೆ

ಕಂ || ಧನುವೆಂಟು ನಾಲ್ಕುನಾಲ್ಕಂ
ತನುಕ್ರಮದಿನುದಯಮೆನಿಪ ಮೂಱುಂ ಪೀಠಂ
ಘನವೈಢೂರ್ಯಮಯಂ ಭ
ರ್ಮ ನಿರ್ಮಿತಂ ಪಂಚರತ್ನಸಂಚಿತಮೆಸೆಗುಂ ೩೦

ನಂದಾಸರೋವಲಮಲ
ರ್ದಿಂದೀವರದಿಂದಮಮರಿಯರ ಗತಪಕ್ಷ್ಮ
ಸ್ಪಂದನಧವಳವಿಲೋಕನ
ಸಂದೋಹದೊಳೊಂದಿದಾಸ್ಯದಂದದಿನೆಸೆಗುಂ ೩೧

ವ || ಅಂತು ನೇತ್ರವಿಚಿತ್ರಂಗಳಾದ ಪೀಠತ್ರಯಂಗಳ ಮೇಲೆ

ಮ.ಸ್ರ || ದ್ವಿಸಹಸ್ರಾರಂಗಳಿಂದಂ ಕುಳಿಶಮಣಿ ಮೊದಲ್ ಸ್ಫಾಟಿಕಂ ವೃತ್ತಮಧ್ಯಂ
ನಿಸದಂ ವೈಢೂರ್ಯಪೀಠಂ ಧ್ವಜಚಮರರುಹಾಲಂಬಿ ಘಂಟಾಳಿಯಿಂ ನಾ
ಲ್ದೆಸೆಯೊಳ್‌ಶೋಭಿಪ್ಪ ನಾಲ್ಕುಂ ಮಣಿಮಯಜಿನಬಿಂಬಂಗಳಿಂದಗ್ರಿಮಂ ಶೋ
ಭಿಸೆ ಮಾನಸ್ತಂಭಮನೋಹರಮೆನಿಸಿ ಚತುರ್ದಿಕ್ಕಿನೊಳ್‌ನಾಲ್ಕುಮಿರ್ಕುಂ ೩೨

ಕಂ || ಪುದಿದಯ್ದಯ್ದು ಸುಧಾಹ
ರ್ಮ್ಯದ ನಡುವೊಂದೊಂದು ಜಿನಗೃಹಂ ಮಾನಸ್ತಂ
ಭದಿನಂತಾ ಮಾನಸ್ತಂ
ಭದ ಸೀಮೆವರಂ ವಿರಾಜಿಸಿರ್ಕುಂ ಕ್ರಮದಿಂ ೩೩

ಪ್ರಾಸಾದಚೈತ್ಯಭೂಮಿಸ
ಮಾಸಾದಿತನವಸುಧಾಂಶುವಿಸ್ತಾರದೆ ಪು
ಣ್ಯಾಸಾರಶಾರದಾಭ್ರವಿ
ಳಾಸಮನೊಳಕೆಯ್ದ ನಭದವೋಲ್‌ಕಣ್ಗೊಳಿಕುಂ ೩೪

ವ || ಪೂರ್ವವರ್ಣಿತವರ್ಣನಾಕೀರ್ಣರಜತರಚಿತಚತುಶ್ಚತುರ್ವಾರವಿಸ್ತಾರಕ್ಕಾಧಾರಮಾಗಿ

ಕಂ || ನಿರುಪಮ ಕನಕಾಬ್ಜರಜ
ಸ್ತರಂಗತತಿ ನೂಂಕೆಯೇಱಿಗಟ್ಟಿದುದೆಂಬಂ
ತಿರೆ ಪೊಸಪೊಂಗಳ ವೇದಿಕೆ
ಯೆರಡುಂ ಕಡೆಯಲ್ಲಿ ಕಣ್ಗೆ ಪಡೆದಿರೆ ಚೆಲ್ವಂ ೩೫

ಪಾವನತೆಗೆ ಬಯಸಿ ಜಗ
ತ್ಪಾವನನಂ ಗಂಗೆ ಪೊರ್ದಿ ಪೊಗೞ್ವಂದದಿನಿಂ
ದೀವರ ಪರಿಮಳತರ ಮಧು
ಪಾವಳಿರವದೆಸೆವುದಮಳ ಪರಿಖಾವಳಯಂ ೩೬

ಲಲನೆಯರ ವದನವನಜಂ
ವಿಲಸಿತಲಾವಣ್ಯನದಿಯೊಳೆಸೆವಂದದೆ ನಿ
ರ್ಮಳಜಳಖಾತಿಕೆಯೊಳಮು
ಳ್ಳಲರ್ದಂಬುಜಮೆಸೆದುವುೞಿದು ಪಂಕಜವೆಸರಂ ೩೭

ಕುಸುಮರಜಂ ಮಣಲಂಭಃ
ಪ್ರಸರ ಲಸತ್ಕೇಳಿಕಾಂತೆಯರ ಕುಚಲಿಪ್ತಂ
ಘುಸೃಣಮಲಯರುಹಮೃಗಮದ
ರಸಪಂಕಮೆ ಪಂಕಮಮಳಜಳ ಖಾತಿಕೆಯೊಳ್‌೩೮

ಜಳಕೇಳಿಗೆಳಸಿದಮರಿಯ
ರಲಘುಸ್ತನದಮಳ ಮಳಯಜದ ಕುಂಕುಮದಾ
ಗಳುಮೆಸೆವ ಪಂಕದಿಂ ಸಿತ
ಜಳಜಂ ಕೋಕನದಮೊಗೆದು ಸೊಯಿಕುಮದಱೊಳ್‌೩೯

ವ || ಅಂತಮೃತಕ್ಕೆ ಲೀಲಾಲಯಮಾಗಿ ಸುಧಾಲೇಖೆಯಂತೆಸೆವ ಖಾತಿಕಾಲೇಖೆಯಿಂದೊಳಗೆ

ಕಂ || ಅಂಕುರದಿಂ ಪಲ್ಲವದಿಂ
ದಂ ಕೋರಕದಿಂದೆ ಕುಸುಮದಿಂ ಫಲದಿಂ ಚೆ
ಲ್ವಂ ಕುಡುವ ಚಾರುಲತಿಕಾ
ಸಂಕುಳದಿಂದೊಂದಿ ವಲ್ಲರೀವನಮೆಸೆಗುಂ ೪೦

ವ || ಮತ್ತಂ ಫುಲ್ಲಶರವಲ್ಲಭಾಧರಪಲ್ಲವ ಸಮುಲ್ಲಸಿತ ಪಲ್ಲವಾಶೋಕಲತೆಯ ನವ್ಯ ಸೌರಭ್ಯಸಂಪನ್ನ ಪುನ್ನಾಗಲತೆಯ ಅಮಂದಮಕರಂದಮಂದಿರಮಾದ ಮಾಕಂದಲತೆಯ ನಿರುಪಮಾಮೇಯಪರಿಮಳಾದೇಯಘ್ರಾಣವಾಪೇಯಚಾಂಪೇಯಲತೆಯ ಮಧುವ್ರತ ಬಂಧುಗಂಧಬಂಧುರಬಂಧೂಕಲತೆಯ ಸಾರಸೌರಭಪೂರಕರ್ಪೂರಲತೆಯ ಮಧುಕರ ಪ್ರಮೋದಮಾಧವೀಲತೆಯ ಸುರಭಿಪರಿಮಳಮಿಳಿತಸುರಭಿಲತೆಯ ತಿಳೀಮುಖಮುಳ್ಳ ವಿಳಸನವಿಚಕ್ಷಣವಿಕಚವಿಕಿಳಲತೆಯ ಮದಾಳಿಮಾಳಾವೃತೋನ್ಮೀಳಿತಮಾಳತೀಲತೆಯ ನಿರುಪಮಪರಿಮಳಕಳಿತ ಕನಕ ಕೇತಕೀಲತೆಯ ಪುದುವಿಂ ಚೆಲ್ವಂ ಪುದುಂಗೊಳಿಸಿ ಗಂಧವಹಗಂಧ ಸಿಂಧುರದ ನೀರಾಟಕ್ಕೆ ವಸಂತರಾಜಂ ವಿರಚಿಸಿದ ಪರಿಮಳಪ್ರವಾಹ ಸುಮನೋಮನೋಹರವಾಹಿನಿಯನನುಕರಿಸುವ ಪುಷ್ಟಾವಾಟದಿಂ ನೋಟಕ್ಕಡರ್ಪಾಗಿರ್ಪ ವಲ್ಲೀವನದಿಂದೊಳಗೆ

ಕಂ || ರನ್ನದ ತೆನೆಗಳ್‌ಮಣಿಗಳ್‌
ಪೊನ್ನಟ್ಟಳೆ ರಜತಗೋಪುರಂ ನವಕೂಟಂ
ತನ್ನೊಳೆನೆ ನೆಗೞ್ದ ವಿಜಯಾ
ರ್ಧೋನ್ನತನಗದಂತೆ ಲೀಲೆವಡೆದುದು ಶಾಲಂ ೪೧

ವ || ಅಂತು ಕಾಂತಮಾದ ವಿಶಾಲಶಾಲದಿಂದೊಳಗೆ

ಕಂ || ಋತುವನಿತುಂ ನಿಜನಿಜಪರಿ
ಣತೆಯಂ ಬಿಸುಟೈಕಮತ್ಯಮಂ ತಳೆದಂತಾ
ವಿತತೋದ್ಯಾನಂಗಳೊಳುಪ
ಚಿತ ಪುಷ್ಪಫಲಂಗಳೆಸೆಗುಮಸದಳಮದಱೊಳ್‌೪೨

ಪುದಿದ ಪೊಸದಳಿರ್ಗಳಿಂ ಗಜ
ಮದಗಂಧದಿನಲರ ತುಱುಗಲಿಂ ಫಳದಿಂ ಮಾ
ಣದೆ ಮಿಸುಪಶೋಕ ಸಪ್ತ
ಚ್ಛದ ಚಂಪಕಚೂತವನಮವೆಸೆಗುಂ ನಾಲ್ಕುಂ ೪೩

ಕಳನಾದಂ ಸುರಸತಿಯ
ರ್ಕಳನಾದಂ ಸೋಲಿಸುತ್ತುಮಿರೆ ಚೂತಲಸ
ತ್ಕಳಿಕಾಸ್ವಾದನದಿಂ ಕಾ
ಕಳಿ ಕಾೞ್ಪುರಮಾಗೆ ಕರೆವ ಕೋಗಿಲೆಯೆಸೆಗುಂ ೪೪

ಪಗೆಯಂ ಬಗೆಯಿನುಱೆದು ಸಂ
ಪಗೆಯಂ ಬಂದೆಳಸೆ ನಿಜಸುವರ್ಣತೆಯಂ ಭೂ
ಮಿಗೆ ಪೊಸತೆನೆ ಕೊಟ್ಟಂತಿರೆ
ಮಿಗೆ ಪೊರೆದೆಸೆದತ್ತ ತುಂಬಿಯೊಳ್‌ಪೊಂಬಣ್ಣಂ ೪೫

ಚೈತ್ಯಕುಜದ ಮೊದಲೊಳ್‌ಜಿನ
ಚೈತ್ಯಂ ಮರಮೊದಲೊಳಿರ್ಪ ಜಿನಮುನಿವೋಲ
ತ್ಯಂತಂ ಸೊಗಯಿಸೆ ನೆಗೞ್ದಾ
ದಿತ್ಯರ್‌ಪೂಜಿಸುವರೊಸೆದು ವಿವಿಧಾರ್ಚನೆಯಿಂ ೪೬

ಲಂಬಣದ ಮುತ್ತು ತಾರಗೆ
ಯಂ ಬೆಳ್ಗೊಡೆ ಚಂದ್ರಬಿಂಬಮಂ ಚಮರಜಮಾ
ಬಿಂಬದ ರುಚಿಯಂ ಗೆಲೆ ಜಿನ
ಬಿಂಬಂ ಸೊಗಯಿಪುದು ಚೈತ್ಯವೃಕ್ಷದ ಮೊದಲೊಳ್‌೪೭

ಪುದಿದಿರ್ದಶೋಕವನಮ
ಧ್ಯದ ರಕ್ತಾಶೋಕವಿಪುಳವೃಕ್ಷದ ಮೊದಲೊಳ್‌
ಸದಮಳ ಜಿನಬಿಂಬಂ ಕನ
ಕದ ಪೀಠದ ಮೇಲೆ ಲೀಲವಡೆದೆಸೆದಿರ್ಕುಂ ೪೮

ಲಲಿತಾಶೋಕಂ ಭಾಮಂ
ಡಳಮಲರ್ವೞಿ ದಿವ್ಯಭಾಷೆ ಸುರಪಟಹಂ ಪೊಂ
ಗಳ ಹರಿಪೀಠಂ ಬೆಳ್ಗೊಡೆ
ಚಳಚಮರಜಮೆಸೆಯೆ ರಂಜಿಕುಂ ಜಿನಬಿಂಬಂ ೪೯

ಸ್ಮರನುರವಣೆಯಿಲ್ಲದುದಂ
ನಿರವಿಸಿದುವು ತರುಣಿಯರ ಮುಖಾಸವಕುಚಕೇ
ಕರ ಪದಹತಿಗೆಳಸದರ
ಲ್ವುರುವಕುಳಂ ಕುರವಕಾಮ್ರತಿಳಕಮಶೋಕಂ ೫೦