ಅಲರಂ ಮುಡಿವಲರ್ವಚ್ಚಮ
ನೊಲವಿಂ ಸಮೆವಮರಿಯರ್ಕಳಿಲ್ಲಲ್ಲಿ ಜಗ
ತ್ತಿಳಕನ ಪಾದಮನರ್ಚಿಸು
ವಲಂಪು ಪೊಱಗಾಗಿ ರಾಗಮುದಯಿಸದುದಱಿಂ ೫೧

ದಿವಿಜವಧೂಟಿಯರಧರ
ಚ್ಛವಿಕುಂಕುಮಪಂಕದಿಂದೆ ಕೇಕರರೋಚಿಃ
ಪ್ರವಿಮಳ ಮಳಯರುಹಸ್ಮಿತ
ಧವಳಾಕ್ಷತ ಕುಸುಮವಿಸರದಿಂದರ್ಚಿಸುವರ್ ೫೨

ತರುಗಳ್‌ನಿಜನಿಜಶಾಖಾ
ಕರದಿಂದಲ್ಲೊಕ್ಕಪುಷ್ಪಫಳಸಂಕುಳದಿಂ
ದರುಹನನಾರಾಧಿಪುವೆನೆ
ಸುರರೂರ್ಜಿತಬೋಧರೆಂತುಮಾರಾಧಿಸರೇ ೫೩

ವ || ಅಂತು ಹೃದ್ಯಮುಂ ನಿರವದ್ಯಮುಮಾದ್ಯಾನವನದಿಂದೊಳಗೆ ಪೂರ್ವಸೂಚಿತ ವರ್ಣನೋಚಿತ ಚತುರ್ದ್ವಾರವಿಸ್ತಾರಕ್ಕೊಳಗಾದ ವೇದಿಕೆಯಿಂದೊಳಗೆ

ಕಂ || ಪರಿವಾರಧ್ವಜಮಷ್ಟೋ
ತ್ತರಶತಮೊಂದೊಂದು ನಾಯಕಧ್ವಜದೊಳ್‌ತ
ಳ್ತಿರೆ ದಶಭೇದಧ್ವಜಮೊ
ಪ್ಪಿ ರತ್ನಮಯಮಿರ್ಪುವನುಪಮಧ್ವಜ ಧರೆಯೊಳ್‌೫೪

ಹರಿಹಂಸವೃಷಭಶಿಖಿಗಜ
ಗರುಡಾಂಬುಜಚಕ್ರವೇಳಮಾಳಾಧ್ವಜಮಂ
ತರುಹನ ಜಯಮಂ ಪೇೞ್ವಿಂ
ತಿರೆ ದಶವಿಧಮೆಸೆದುವಷ್ಪಶತಮೇಕ್ಕೈಕಂ ೫೫

ವ || ಅಂತು ರತ್ನರೋಚಿವ್ರಜದಿಂ ಕಳ್ಪಕುಜದಂತೆ ರಂಜಿಸುವ ವಿಜಯಧ್ವಜ ಧರೆಯಿಂದೊಳಗೆ ಪೂರ್ವರ್ಣನೋಪೇತ ಚತುರ್ಗೋಪುರ ವಿಶಾಲಸಾಲದಿಂ ಲೀಲೆವಡೆದು

ಕಂ || ಮಾಲ್ಯಾತೋದ್ಯಜ್ಯೋತಿರ
ಮೂಲ್ಯಾಭರಣ ಪ್ರದೀಪವಸನಾಶನಸ
ತ್ಕಲ್ಯಗೃಹಪಾತ್ರದಾತೃಗು
ಣಾಲ್ಯರ್ಚಿತ ದಶವಿಧಾನ ಕಲ್ಪಕುಜಂಗಳ್‌೫೬

ದೇವಕುರೂತ್ತರಕುರುಗಳ್‌
ದೇವಾರಣ್ಯಂ ಸಮಂತು ಭೂತಾರಣ್ಯಂ
ದೇವನನಾರಾಧಿಸಿ ಧರೆ
ಗೀವ ಗುಣಂ ಪಡೆಯಲೆಂದು ಬಂದವೊಲೆಸೆಗುಂ ೫೭

ಅಂಕುರಮುಂ ನವಪಲ್ಲವ
ಮುಂ ಕೋರಕಮುಂ ಪ್ರಸೂನಮುಂ ಫಲತತಿಯಂ
ತಾಂ ಕುಡುಗುಮೆನೆ ಸುರದ್ರುಮ
ಸಂಕುಳಮಭಿಲಷಿತಫಳಮನೀವುದು ಪಿರಿದೇ ೫೮

ಎನಿಪ ದಶವಿಧಸುರದ್ರುಮ
ವನಮನುಪಮ ಜಿನಪದಾಬ್ಜಪೂಜಾರತರ
ಪ್ಪನಿಮಿಷರ ವಾಂಛಿತಾರ್ಥಮ
ನನುದಿನಮೀಯುತ್ತುಮಾವಗಂ ಸೊಗಯಿಸುಗುಂ ೫೯

ವ || ಅಂತನಲ್ಪಪ್ರಭಾತಳ್ಪಮಾದ ಕಳ್ಪಕುಜಮಹೀತಳದಿಂದೊಳಗೆ ಮುನ್ನಮಭಿ ವರ್ಣಿಸಿದ ಚೆಲ್ವಂ ತಳ್ಕೈಸಿದ ನಾಲ್ಕುಂ ಗೋಪುರಂಗಳಿಂ ಮನಂಗೊಳಿಸುವ ವೇದಿಕೆ ತಮ್ಮ ಚೆಲ್ವಂ ನಿವೇದಿಸೆ

ಕಂ || ನೃತ್ಯಗೃಹಂಗಳ್‌ಕುಳನಗ
ಮತ್ಯುನ್ನತಿವಡೆಯಲೆಂದು ಭುವನೋನ್ನತನಂ
ಸ್ತುತ್ಯನನೋಲಗಿಸಿರ್ಪವೊ
ಲತ್ಯಾಯತಿವಡೆದು ಸುತ್ತಿ ಸೊಗಯಿಸುತಿರ್ಕುಂ ೬೦

ರಂಗಂ ಮೂವತ್ತೆರಡಾ
ರಂಗದೊಳೊಂದೊಂದಱಲ್ಲಿ ಮೂವತ್ತಿರ್ವರ್‌
ಪಿಂಗದೆ ದೇವಾಂಗನೆಯರ
ನಂಗಂ ನಲಿದಾಡೆ ನರ್ತಿಪರ್‌ಪಲತೆಱದಿಂ ೬೧

ಸವಗಾಣಂ ಗಾಯಕಿಯ
ರ್ಗೆ ವೀಣೆ ಸಮವಾದಕಂ ಸುವಾದಕರ್ಗೆ ಮನೋ
ಭವಚಾಪಜ್ಯಾರವಮೆನೆ
ವಿವೇಕಿಗಳ್‌ಗೀತವಾದ್ಯಮೊಗೆವುವು ಹೃದ್ಯಂ ೬೨

ದಿವಿಜಾಂಗನೆಯರ್‌ನರ್ತಿಪ
ರವೆರಡರೊಳಮವರ ನರ್ತನದ ಪದಗತಿಯಿಂ
ದವಿರಳಮಭಿನಯಿಸುತ್ತುಂ
ನವನಾಟ್ಯರಸಾಧಿದೇವತೆಯರೆಂಬಿನೆಗಂ ೬೩

ವ || ಮತ್ತಮಾ ನರ್ತನಧರಿತ್ರೀಪ್ರಣಿಧಿಪ್ರಣೂತ ಮಹಾವೀಥೀಮಧ್ಯಮನಳಂಕರಿಸಿ ಶತಶತನೂತ್ನ ರತ್ನ ತೋರಣಂಗಳಿಂ ನಯನೋತ್ಸವಕಾರಣಂಗಳಾಗಿ

ಕಂ || ಅಸ್ತಮಿತತಮಂಗಳ್‌ಭುವ
ನಸ್ತುತಮಹಿಮಾವಳಂಬಿಗಳ್‌ಪರಿವಿಡಿಯಿಂ
ವಿಸ್ತಾರಿಸಿ ನವನವರ
ತ್ನ ಸ್ತೂಪಮವೆಸೆಗುಮಭವ ನವಲಬ್ಧಿಯವೋಲ್‌೬೪

ಸ್ತೂಪವಿರಾಜಿತಜಿನಪ
ಶ್ರೀಪದಮಂ ಸುರಭಿಸಲಿಲಂಗಂಧಾಕ್ಷತೆ ನಾ
ನಾಪುಷ್ಪಸುಧಾಶನಮಣಿ
ದೀಪಾಗರುಧೂಪಫಳದಿನರ್ಚಿಪರಮರರ್‌೬೫

ವ || ಅಂತು ಮನಂಗೊಳಿಸುವ ಸಂಗೀತಶಾಲೆಯಿಂದೊಳಗೆ

ಕಂ || ಗಾರುಡಮಣಿರಚಿತ ಚತು
ರ್ದ್ವಾರಂ ಚತುರಾನನಂ ರವಿಸ್ಫಟಿಕಪ್ರಾ
ಕಾರಂ ಶ್ರೀಮಂಡಪಲ
ಕ್ಷ್ಮೀರಮೆ ತೆಗೆದುಟ್ಟ ದುಗುಲಮೆನೆ ಸೊಗಯಿಸುಗುಂ ೬೬

ಪಚ್ಚೆಯ ಮಣಿಗೋಪುರದಿಂ
ದುಚ್ಚಳಿಪಂಶುಗಳನಿಂದುಮಂಡಳದ ಮೃಗಂ
ಮೆಚ್ಚುವೆಳವುಲ್ಲೆನುತ್ತುಂ
ನಚ್ಚಿಯ ಬಂದೆಳಸಿ ಬಳಸಿ ಬೆಚ್ಚನೆ ಸುಯ್ಗುಂ ೭೭

ಮಂಗಳಕರ ಭುವನಾಧಿಕ
ಮಂಗಳನನನಂತಬೋಧನಿಧಿಯಂ ನಿಧಿಗಳ್‌
ಸಂಗಡದೋಲಗಿಸುವುದುಚಿ
ತಂ ಗಡಮೆನೆ ನೆಲಸಿ ಗೋಪುರದೊಳೋಲಗಿಕುಂ ೬೮

ವ || ಮತ್ತಮಪ್ರತಿಮಭಕ್ತಿಯುಕ್ತ ಕಳ್ಪಜಪ್ರತಿಹಾರಾಳಂಕೃತ ದ್ವಾರಚತುಷ್ಟಯ ವಿಶಿಷ್ಟ ಪ್ರಾಕಾರದಿಂದೊಳಗೆ

ಕಂ || ಗಗನಸ್ಫಟಿಕಘಟಿತ ಭಿ
ತ್ತಿಗಳೆಡೆಗೆಡೆಗೊಪ್ಪೆ ಪನ್ನೆರಡುಕೋಷ್ಠಂಗಳ್‌
ಸೊಗಯಿಸಿ ದಳದಂತಿರೆ ದಿ
ಟ್ಟಿಗೆ ಲಕ್ಷ್ಮೀಮಂಡಪಂ ಸ್ಮಿತಾಂಬುಜಮೆನಿಕುಂ ೬೯

ಶ್ರೀಮದ್ದ್ವಾದಶಕೋಷ್ಠ
ಸ್ತೋಮಂ ದಳಮಾಗೆ ವಿಷ್ಪರಂ ಕರ್ಣಿಕೆ ಪೊಂ
ದಾಮರೆಯೊಂದಂದೆ ಲ
ಕ್ಷ್ಮೀಮಂಡಪಮೆಸೆದುದಸಮಗುಣಗಂಧಾರ್ಹಂ ೭೦

ವ || ಅಂತು ವಿಶಿಷ್ಟಮಾದ ದ್ವಾದಶಕೋಷ್ಠಂಗಳೊಳ್‌

ಮ.ಸ್ರ || ಮುನಿಮುಖ್ಯರ್‌ಕಳ್ಪಜಸ್ತ್ರೀಜನತತಿ ಗಣಿನೀಸಂಕುಳಂ ಜ್ಯೋತಿರಬ್ಜಾ
ನನೆಯರ್‌ಭೌಮಾಂಗನಾಸಂತತಿ ಭವನವಧೂಸಂಚಯಂ ಭಾವನಾಖ್ಯರ್‌
ವನಜರ್‌ಜ್ಯೋತಿರ್ಗಣಂ ಕಳ್ಪಜವಿತತಿ ಮನುಷ್ಯಾದಿ ತಿರ್ಯಗ್ರ್ವಜಂ ನೆ
ಟ್ಟನೆ ಬಾಹ್ಯಂ ಪೂರ್ವಮಾಗೋಲಗಿಸೆ ಜಿನಪನೊಪ್ಪಿರ್ಪನಾಸ್ಥಾನದೀಪಂ ೭೧

ವ || ಅಂತು ಕಣ್ಗೊಳಿಸುವ ಲಕ್ಷ್ಮೀಮಂಡಪದ ಮಧ್ಯದಲ್ಲಿ

ಕಂ || ಅಷ್ಟಧನು ನಾಲ್ಕುಧನು ಮ
ತ್ತಷ್ಟಾರ್ಧಧನುಃಪ್ರಮಾಣದುದಯದ ಮೂಱುಂ
ವಿಷ್ಟರಮುರುಢೂರ್ಯನು
ತಾಷ್ಟಾಪದ ಸರ್ವರತ್ನಮವು ಸೊಗಯಿಸುಗುಂ ೭೨

ನಿರ್ಮಳಿನಾದ್ಯಾಸನದ ಚ
ತುರ್ಮುಖತಳದಲ್ಲಿ ನೆಲಸಿ ಯಕ್ಷಕುಮಾರರ್‌
ಕೂರ್ಮೆಯೊಳೆ ಧರ್ಮಚಕ್ರಮ
ನೊರ್ಮೆಯುಮಾತ್ಮೀಯಮೌಳಿಯೊಳ್‌ತಳೆದಿರ್ಪರ್‌೭೩

ಸರಸಿರುಹಚಕ್ರವೃಷಗಜ
ಗರುಡಾಂಬರಸಿಂಹಸುರಭಿಮಾಳಾಚಿಹ್ನ
ಸ್ಫುರಿತಾಷ್ಪಮಣಿಧ್ವಜಪರಿ
ಕರದಿಂ ಕರಮೆಸೆವುದೆರಡನೆಯ ಪೀಠತಳಂ ೭೪

ವ || ಮತ್ತಂ ಮೂಱನೆಯ ವಿಶಿಷ್ಟವಿಷ್ಟರಮಧಿಷ್ಠಾನಮಾಗೆ

ಕಂ || ವಾಸನೆಯಿಂದಮೆ ಸಮೆದ ವಿ
ಳಾಸಮನೊಳಕೊಂಡು ಗಂಧಕುಟಿ ಸೊಗಯಿಪುದಾ
ವಾಸನೆ ಸೋಂಕಿದಂ ಸುಖ
ವಾಸನೆವೆರಸಮೃತಪದಮನಿರದೆಯ್ದುಸುಗುಂ ೭೫

ಸಿಂಧುರವಿರೋಧಿಪೀಠಂ
ಗಂಧಕುಟೀಮಧ್ಯದಲ್ಲಿ ಸಿರಿಯಂ ಪಡೆಮಾ
ತೇಂ ಧರಿಯಿಸಿ ಕಮಳದ ತೆಱ
ದಿಂ ಧಾರ್ಮಿಕಮಧುಪಚಯಮನೇನೆಱಗಿಸಿತೋ ೭೬

ಪರಿಹೃತಸಂಗಂ ತ್ರಿಭುವನ
ಪರಿವೃಢನೆಂದಱಿಪುಗುಂ ತ್ರಿಪೀಠಾಗ್ರದ ಭಾ
ಸುರರತ್ನ ರುಚಿರಹರಿವಿ
ಷ್ಟರಮಂ ಮುಟ್ಟದೆ ವಿರಾಜಿಪಿರವಘಹರನಾ ೭೭

ನಿರುಪಮಪೀಠತ್ರಯಮಾ
ಗಿರೆ ಲೋಕತ್ರಿತಯಮಗ್ರಲೋಕಂ ಹರಿವಿ
ಷ್ಟರಮಾಗೆ ಮೇಗೆ ವಿಭು ನಾ
ಲ್ವೆರಲಂತರದಲ್ಲಿ ಸಿದ್ಧನಂತೆಸೆದಿರ್ಕುಂ ೭೮

ಉ || ಶ್ರೀಮದಗಾಧಬೋಧವಿಭವಾಂಬುಧಿಸಂಭವಚಂದ್ರನಂದದು
ದ್ದಾಮ ಸಿತಾತಪತ್ರಮದಱಪ್ರತಿಮೋಜ್ವಳವೀಚಿಯಂದದಿಂ
ಚಾಮರಮಿಂದ್ರಭೂಮಿರುಹದಂತಿರಶೋಕಮಹೀರುಹಂ ಸಮ
ಗ್ರಾಮಿತಘೋಷದಂತೆಸೆಯೆ ಭಾಷೆ ವಿರಾಜಿಸಿದಂ ಜಿನಾಧಿಪಂ ೭೯

ಕಂ || ಸುರತೂರ್ಯಂ ತೂರ್ಯಂ ಸುರ
ತರು ಕುಸುಮಾರಮರ್ಘ್ಯಮೆ ದಲೆನೆ ಹರಿವಿ
ಷ್ಪರದಿಂ ಭಾಮಂಡಳದಿನ
ಕರನಿಂದುದಯಾಚಳಕ್ಕೆ ಜಿನನೆಣೆಯಾದಂ ೮೦

ಹರಿಪೀಠದ ನೆವದಿಂದಂ
ಸುರಗಿರಿ ಬೆಳ್ಗೊಡೆಯ ನೆವದಿನಮೃತದ್ಯುತಿ ಚಾ
ಮರದ ನೆವದಿಂ ಸುಧಾಂಬುಧಿ
ತರಂಗಮಾಳಿಕೆಗಳೋಲಗಿಪ್ಪವೊಲೆಸೆಗುಂ ೮೧

ಅಲರ್ವೞೆಯ ನೆವದಿನಕ್ಷಯ
ಲಲನೆಯ ಕಡೆಗಣ್ಣಬೆಳಗಶೋಕೆಯ ನೆವದಿಂ
ಫಳಿತಾಮರದ್ರುಮಂ ಭಾ
ವಳಯದ ನೆವದಿಂ ದಿನೇಶಂಬಿಬಮಳುಂಬಂ ೮೨

ವರಭಾಷೆಯ ನೆವದಿಂದ
ಸರಸ್ವತೀದೇವಿ ಸರ್ವಭಾಷಾತ್ಮಿಕೆ ಕೂ
ರ್ತರುಹನ ವಕ್ತ್ರಾಬ್ಜಮನಾ
ದರದಿಂದೋಲಗಿಸುವಂದದಿಂ ಸೊಗಯಿಸುಗುಂ ೮೩

ಮೃತಿ ಜನನಂ ಕ್ಷುಧೆ ತೃಷೆ ರುಜೆ
ರತಿದೋಷಂ ನಿದ್ರೆ ಸಾಧ್ವಸಂ ಬಧಿರತೆಯಂ
ಧತೆ ಪಂಗುತೆಯಾಗದು ಜನ
ತತಿಗಾ ಜಿನಪತಿಯ ಮೈಮೆಯಿಂ ತತ್ಸಭೆಯೊಳ್‌೮೪

ಸಂಗಳಿಕುಂ ರತ್ನತ್ರಿಪ
ಯಂಗಳ್‌ಜಿನಸೇವೆಯಿಂದಮೆದಱೆಪುವವೋಲ್
ಪಿಂಗುವುದಂಧತೆ ಬಧಿರತೆ
ಪಂಗುತೆಯಂಧಾದಿಜನ್ಮಿಗಭವನ ಸಭೆಯೊಳ್‌೮೫

ದರ್ಪಣಮಂ ನೋಡಿದೊಡಂ
ತೋರ್ಪುದು ಭವವಿತತಿ ಜಿನಸಭೆಯೊಳಿದೆ ಚಿತ್ರಂ
ದರ್ಪಕಹತಜಿನಮುಖಮಣಿ
ದರ್ಪಣಮಂ ನೋಡೆ ತೋಱದೊಂದೊಂ ಭವಮುಂ ೮೬

ಸ್ರ || ನಾನಾ ಪ್ರಾಸಾದಚೈತ್ಯಾವನಿ ಪರಿಖೆ ಲಸತ್ಪುಷ್ಟವಾಟಂ ನವೀನೋ
ದ್ಯಾನಂ ತುಂಗಧ್ವಜಂ ರಂಜಿಸೆ ಸುರತರು ಸಂಶೋಭಿ ಸಂಗೀತರಂಗ
ಸ್ಥಾನಂ ಶ್ರೀಮಂಡಪಂ ದ್ವಾದಶಗಣವೃತಪೀಠತ್ರಯಾಗ್ರಸ್ಥಸಿಂಹಾ
ನೂನ ಶ್ರೀಪೀಠಪೂರ್ವಾಚಳದೊಳಘಹರಂ ಪಾರ್ಶ್ವನಾಥಾರ್ಕನಿರ್ದಂ ೮೭

ವ || ಅಂತನಂತಚತುಷ್ಟಯಪ್ರಕೃಷ್ಟನುಂ ಪ್ರಾತಿಹಾರ್ಯಾಷ್ಟಕವಿಶಿಷ್ಟನುಮಪ್ಪ ಪಾರ್ಶ್ವನಾಥಂ ಸನಾಥಮಾದ ಸಮವಸರಣದ ಸಕಳಜನಮನೋನಯನಪ್ರಸಾದಪ್ರದ ಪ್ರಾಸಾದ ಚೈತ್ಯವಿಚಿತ್ರ ಧಾತ್ರಿಯುಮಂ ನಿಖಿಳಲೇಖಾಲಂಬನ ಕದಂಬ ಕುವಳಯ ಸುಧಾಮಯೂಖಲೇಖೆಯೆನಿಸಿ ದಮಳಜಳ ವಿಳಸತ್ಖಾತಿಕಾಲೇಖೆಯುಮಂ ಸುರಸುಂದರೀಸಂದೋಹ ನಯನಷಡಯನ ಸಮುಲ್ಲಸಿತಮಂ ಪಲ್ಲವಿಸುವುತ್ಫುಲ್ಲ ಫುಲ್ಲಮಲ್ಲಿಕಾಂಕಂಕೆಲ್ಲಿಪ್ರಮುಖವಲ್ಲೀ ವನಮುಮಂಶುಕಪಿಕಪ್ರಕರಪರೀತಚೂತಾದ್ಯನೋಕಹಾನೀಕಾತಿ ಹೃದ್ಯಮೆನಿಸಿದುದ್ಯಾನಮುಮಂ ವಿಜಿತತ್ರಿಜಗದ್ವಿಜಯ ಮಕರಧ್ವಜ ವಿಜಯಧ್ವಜಮೆನಿಸಿದುತ್ತುಂಗಮಂಗಳಧ್ವಜಾವನಿಯುಮನನಲ್ಪಜನನೇತ್ರ ಪುತ್ರಿಕಾವಿಶ್ರಮಣದರುಣ ರಮಣೀಯತಳ್ಪತಳಮೆನಿಸಿದ ಸತ್ಫಳಾಕಳ್ಪಕಳ್ಪಾವನಿಜ ಸಮಾಜಮುಮಂ ಸರಸ ಸಾಮಾಜಿಕನಿಕರ ಹೃದ್ಯಾತೋದ್ಯ ಸಂಸ್ತುತ್ಯ ನೃಯ ಸಂಗೀತ ಗೀತ ಸಂಗತಮೆನಿಸಿದಖಿಳ ಸುಖಪ್ರಸಂಗಸಂಗೀತ ರಮ್ಯಹರ್ಮ್ಯಂಗಳುಮಂ ಸಕಳಕಳಾ ವಿಚಕ್ಷಣಾಪಕ್ಷ್ಮ ವಿಕ್ಷೇಪಣಾಪಾದಿರೂಪಲಕ್ಷ್ಮೀ ಲಕ್ಷಿತಮೆನಿಸಿದಕ್ಷೂಣ ಮೋಕ್ಷಲಕ್ಷ್ಮೀವಿವಾಹಮಂಡಪ ಲಕ್ಷ್ಮೀಮಂಡಪಮುಮನಮರಪರಿವೃಢಂ ಪರಿವಿಡಿಯಿಂ ವಿಸ್ಮಯಸ್ಮೇರಲೋಚನನಾಗಿ ನೀಡುಂ ನೋಡುತ್ತುಂ ಮಾನಸ್ತಂಭಸ್ತೂಪಪಾದ್ಯಚಿಂತ್ಯ ಮಹಿಮಾಸ್ಪದಾಭ್ಯರ್ಚ್ಯವಂದ್ಯಂಗಳಂ ಪಂಚಕಲ್ಯಾಣಪೂಜಾಪ್ರವೀಣೆಯೆನಿಸಿದಿಂದ್ರಾಣೀಸಂಯುಕ್ತಂ ನಿಖಿಳಜಿನಪೂಜಾಸಕ್ತಂ ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸುತ್ತುಂ ನವ್ಯದಿವ್ಯಾರ್ಚನಾದ್ರವ್ಯಂಗಳಿಂದರ್ಚಿಸುತ್ತುಂ ಪರಮಾನಂದಸಂದೋಹದಿಂದಭಿವಂದಿಸುತ್ತುಂ ಬಂದು ಜಗತ್ತಿಳಕ ಮುಖ ಕಮಳಾವ ಲೋಕಮಾತ್ರ ಸಂಜಾತಹರ್ಷೋತ್ಕರ್ಷಸರ್ವಾಂಗಪುಳಕಂ ನಿಜನಿಟಿಳತಟ ಘಟಿತಕರಕಮಳಯುಗಕನೊಳಗಂ ಪೊಕ್ಕು

ಕಂ || ಸರ್ವಜ್ಞ ಪದಾಂಬುರುಹಂ
ನಿರ್ವಾಣಶ್ರೀಯನೀವುದೆಂದುಚಿತ ಮನೋ
ನಿರ್ವಹಣಂ ಮೂಱೆಡೆಯೊಳ್‌
ಸರ್ವಾಂಗಪ್ರಣತನಾದನಂದಮರೇಂದ್ರಂ ೮೮

ಬಲವಪ್ಪ ತೆಱದೆ ತಾರಾ
ವಳಿಸಹಿತಂ ಚಂದ್ರನಮರಶೈಳಮನೀಂದ್ರಂ
ಲಲನಾಸಮೂಹಸಹಿತಂ
ಬಲವಂದಂ ಗಂಧಕುಟಿಯನಕುಟಿಳಚಿತ್ತಂ ೮೯

ಗಂಧಕುಟಿಯಂ ಸುಸೌರಭ
ಬಂಧುರವಂ ತ್ರಿಃಪ್ರದಕ್ಷಿಣಂ ಬರುತೆ ಜಗ
ದ್ಬಂಧುವನಶೇಷಗುಣಮಣಿ
ಸಿಂಧುವನಿಂತೆಂದು ಪೊಗೞ್ದನಮರವರೇಣ್ಯಂ ೯೦

ಚಂ || ಜಯಜಯ ದೇವದೇವ ನಿರವದ್ಯ ನಿರಾಮಯ ಶುದ್ಧ ಬುದ್ಧ ಚಿ
ನ್ಮಯ ಮದದೂರ ಧೀರ ಜಿನ ನಿತ್ಯ ನಿರಂಜನ ಪುಣ್ಯಪುಂಜ ನಿ
ರ್ಭಯ ಪರಮೇಶ ಪಾಪಹರರೂಪ ದಯಾಮೃತರೂಪ ನಿನ್ನ ಮೈ
ಮೆಯನದನಂತುಟಿಂತುಟೆನಲಾರ್‌ನೆಱೆವರ್‌ಭುವನೈಕಬಾಂಧವಾ ೯೧

ವ || ಅಂತಾ ತ್ರಿಳೋಕರಕ್ಷಾಮಣಿಯಂ ತ್ರಿಃಪ್ರದಕ್ಷಿಣಂ ಬಂದು ತ್ರಿಕರಣಶುದ್ಧಿಯಿಂ

ಮ || ನಿಧಿ ಚಿಂತಾಮಣಿ ಕಾಮಧೇನು ಸುರಭೂಜಂ ಸ್ಪರ್ಶಮೊಂದಾಗಿ ಬಂ
ದು ಧರಿತ್ರೀಸ್ತುತ ಸಾರವಸ್ತುಗಳನೀಯುತ್ತಿರ್ದುವೆಂಬಂತೆ ವಾ
ಙ್ನಿಧಿ ಪಾರ್ಶ್ವಾಧಿಪಪಾದಪೀಠಮನಲಂಪಿಂದಿಂದ್ರನಿಂದ್ರಾಣಿ ಪು
ಣ್ಯಧನರ್‌ಪೂಜಿಸಿದರ್‌ಶತೇಂದ್ರಸಹಿತಂ ದಿವ್ಯಾರ್ಚನಾದ್ರವ್ಯದಿಂ ೯೨

ಚಂ || ಎನಿತುಸುರತ್ನದರ್ಪಣಸಿತಾತಪವಾರಣಚಾಮರಂ ಧ್ವಜಾ
ದ್ಯನುಪಮಮಂಗಳಂಗಳೆನಿತುತ್ತುಮ ಪುಷ್ಪಫಳಪ್ರತಾನಮಂ
ತನಿತಱಿನಿಂದ್ರಸತಿಯಿಂದ್ರಶತಂ ದಿವಿಜಾಳಿ ದೇವಕಾ
ಮಿನಿಯರನಿಂದ್ಯರರ್ಚಿಸಿದರಂದು ಜಿನೇಂದ್ರಪದಾರವಿಂದಮಂ ೯೩

ಕಂ || ಸಹಜಾಕೃತಿಯಂ ಶಕ್ರಂ
ಮಹಮಂ ಜಿನನೊಳ್ಪನೀಕ್ಷಿಪೆಸಪುಸಿರ್ವೊಂದಾ
ಗ್ರಹದೆ ಸಹಸ್ರೇಕ್ಷಣನುಂ
ಸಹಸ್ರಭುಜನುಂ ಸಹಸ್ರಜಿಹ್ವನುಮಾದಂ ೯೪

ವ || ಮತ್ತಮನವರತ ಜಿನಪದಪಯೋಜಸೇವಾಸಕ್ತಚಿತ್ತಂ ಶುಭವೃತ್ತಮುನಿ ಕೋಷ್ಠಾದಿಷ್ಠಿತರುಂ ಸರ್ವಜ್ಞ ಸಾಮ್ರಾಜ್ಯಪದ ಯೌವರಾಜ್ಯಪದಪ್ರತಿಷ್ಠಿತರುಂ ಚತುರ್ಜ್ಞಾನ ನಿಧಾನರುಂ ಸಪ್ತರ್ಧಿವಾರ್ಧಿಗಳುಮಪ್ಪ ಸ್ವಯಂಭೂನಾಮಾದಿ ಗುಣಧರ ಗಣಧರ ಪ್ರಮುಖ ನಿಖಿಳ ಮುನಿಜನಚರಣಸರಸಿರುಹಂಗಳಂ ನಿಜಮಕುಟಮಣಿಕಿರಣವಾರಿ ಧಾರಾಸಹಿತಂ ಸುರತರುಪ್ರಸೂದನಾದಿ ದಿವ್ಯಾರ್ಚನಾಪ್ರತಾನದಿಂ ಪ್ರತ್ಯೇಕಮಾಗರ್ಚಿಸಿ ಪರಮಾನಂದದಿಂದಭಿವಂದಿಸಿ ಸಮನಂತರಂ ನಿರಂತರಶೋಭಾವಿಶಿಷ್ಟಾಶೇಷಕೋಷ್ಠ ನಿರೀಕ್ಷಣಸಂತುಷ್ಟನಮರ ಶ್ರೇಷ್ಠ ನಿಜಕೋಷ್ಠಮನಳಂಕರಿಸಿರೆ

ಕಂ || ಕೇ ವಳಬೋಧಂ ದೇವರ
ದೇವಂಗುದಿಯಿಸಿದ ವಾರ್ತೆಯಂ ನಿಜಚರರಿಂ
ಭೂವಿಶ್ರುತಾಶ್ವಸೇನಮ
ಹೀವರನುಂ ಬ್ರಹ್ಮದತ್ತೆಯುಂ ಕೇಳಲೊಡಂ ೯೫

ಹರಿವಿಷ್ಟರದಿಂದಿೞಿದಾ
ದರದಿಂದೇೞಡಿಯನಾ ದೆಸೆಗೆ ನಡೆದು ಜಗ
ದ್ಗುರುಚರಣಕ್ಕೆಱಗಿದುದಾ
ಗುರುಯುಗಳಂ ಗುಣದ ನೆಱವಿಯೆಱಗಿಸದಾರಂ ೯೬

ನೆಗೆದುವು ಪುಳಕಂ ಬಾಷ್ಪಾಂ
ಬುಗಳೊಗೆದುವು ವನನುಭೂತಹರ್ಷೋತ್ಕರ್ಷಂ
ಬಗೆಯೊಳ್‌ಬಳೆದತ್ತಾ ಪಿತೃ
ಯುಗಳಕ್ಕದು ತಕ್ಕುದಲ್ತೆ ಬಗೆವೊಡೆ ಜಗದೊಳ್‌೯೭

ಅಕ್ಕುಂ ತಾಯ್ತಂದೆಗೆ ನಾ
ಲ್ಕಕ್ಕರದಱಿವಾಯ್ತು ಸುತನೊಳೆನೆಯುಂ ಹರ್ಷಂ
ಮಿಕ್ಕಖಿಳ ಬೋಧಮಾಯ್ತೆನೆ
ಮೊಕ್ಕಳವರ್ಗಾಯ್ತು ಹರ್ಷಮೆನೆ ಕೌತುಕಮೇಂ ೯೮

ವ || ಅಂತು ಸಂತಸದಂತಮನೆಯ್ದಿ ತದನಂತರಂ

ಕಂ || ಇತ್ತಂಗಚಿತ್ತಮಂ ಭೂ
ಪೋತ್ತಮನಾ ವಾರ್ತೆವೇೞ್ದ ಮನುಜಂಗತ್ಯಾ
ಯತ್ತ ಪುಳಕಕ್ಕೆ ಭಕ್ತಿಗೆ
ಮತ್ತೊಸೆದಿತ್ತಂಗಚಿತ್ತಮಂ ಶುಭವೃತ್ತಂ ೯೯

ಮ.ಸ್ರ || ಪುಳಕಂಗಳ್‌ಪೊಣ್ಮೆ ಪುಣ್ಯಾಂಕುರನಿಕರದವೋಲ್‌ಕ್ಷೇತ್ರಸುಕ್ಷೇತ್ರದೊಳ್‌ಮಂ
ಗಳತೂರ್ಯಧ್ವಾನಮಷ್ಟಾಶೆಯೊಳೆಸೆಯೆ ಪೊೞಲ್ಗಷ್ಟಶೋಭಾವಿಳಾಸಂ
ಬಳೆವನ್ನಂ ಸ್ವರ್ಣರತ್ನೋಜ್ವಳವಸನಫಳಾಧ್ಯರ್ಚನಾ ದ್ರವ್ಯಮಂ ಕೊ
ಮಳೆಯರ್ಕಳ್‌ತಾಳ್ದಿ ಸುತ್ತುಂಬರೆ ವಿಭು ಪೊಱಮಟ್ಟಂ ಮಹೋತ್ಸಾಹಗೇಹಂ ೧೦೦