ವ || ಆ ಸಮಯದೊಳ್‌

ಕಂ || ಗುಡಿಗೃಹದೇವತೆಯರ್‌ನಿಱಿ
ವಿಡಿದುಟ್ಟವೊಲೊಪ್ಪೆ ರತ್ನ ತೋರಣತತಿಯೊ
ಳ್ವಿಡಿದಾ ದೇವತೆಯರ ತಲೆ
ದುಡುಗೆವೊಲಿರೆ ವಾರಣಾಸಿಯೇಂ ರಾಜಸಿತೋ ೧೦೧

ಮೃದುಪವನಹತಪತಾಕಾ
ಸ್ಪದಕೇತುಕರಂಗಳಿಂದೆ ಜಿನಪೂಜೆಗೆ ಬೇ
ಗದೆ ಪೋಗಿಮೆಂದು ಪೇೞ್ವಂ
ದದಿನೆಸೆದುದು ವಾರಣಾಸಿ ನಿಜಪುರಜನಮಂ ೧೦೨

ವ || ಅಂತು ವಿರಾಜಿಸುವ ವಾರಣಾಸಿಯಿಂದಶ್ವಸೇನಂ ವಿಶ್ವವಿನೇಯನಿ ಕಾಯಂಬೆರಸು ಪೊಱಮಟ್ಟು ದುರಿತಾರಿವಾರಣಾಸಿಯೆನಿಸಿದ ಜಿನೇಶನ ಸಭೆಗೆ ಬರೆವರೆ

ಮ || ವನಜಾಮೋದಮನಾಂತು ಕೈರವದ ಕಂಪಂ ಪೇಱಿ ಮಂದಾರಚಂ
ದನಸಂತಾನಕ ಪಾರಿಜಾತ ವಿಬುಧೋರ್ವೀಜಾತಸಂಜಾತ ನೂ
ತನ ಸೌಗಂಧ್ಯದೊಳೊಂದಿ ಬಂದೆಲರಮಂದಾನಂದದಿಂ ತನ್ನೃಪಾ
ಳನನಾಲಿಂಗಿಸುವಂದದಿಂ ಸಮವಸೃತ್ಯುಜ್ಜೀವನಂ ಪಾವನಂ ೧೦೩

ವ || ಅಂತಾ ಪಾವನಸ್ಪರ್ಶನದಿಂ ಪವಿತ್ರಗಾತ್ರನಾಗುತ್ತಂ ಬಂದು ತನ್ನಾಸನ್ನಭವ್ಯತೆಯಂ ಪ್ರಕಟಿಸುವಂತೆ ವಿನೇಯಜನಶರಣಸಮವಸರಣಾಸನ್ನ ಪ್ರದೇಶದೊಳ್ ನಿಜಗಜಸ್ಕಂಧದಿಂದಿೞಿದು ನಿಸರ್ಗಯೊಳೆ ಪಾದಮಾರ್ಗದಿಂ ನಡೆತಂದು

ಕಂ || ಉನ್ನತರ್ಗೆ ಮಾೞ್ವ ವಿನಯಮ
ದುನ್ನತಿಯನೆ ಮಾೞ್ಕುಮೆಂಬುದಂ ಸೂಚಿಪವೋಲ್
ಸನ್ನು ಸೋಪಾನಂಗಳಿ
ನುನ್ನತಮಂ ಸಮವಸರಣಮಂ ಪುಗುತಂದಂ ೧೦೪

ನಿರತಿಶಯ ಸಮವಸರಣದ
ಪರಿಶೋಭೆಯೊಳಿರದೆ ನೃಪನ ಕಣ್ಣುಂ ಮನಮುಂ
ಪರಿದುವು ಜಿನನಿರ್ದೆಡೆಗೆನೆ
ಪರಮೇಶನ ಮೂರ್ತಿವಿಭವಮೇನಚ್ಚರಿಯೋ ೧೦೫

ವ || ಅಂತು ಸಮುದ್ಭೂತಭಕ್ತಿಪ್ರೇರಿತ ಚಿತ್ರಂ ಬಂದು ಗಂಧಕುಟಿಯಂ ತ್ರಿಃಪ್ರದಕ್ಷಿಣಂ ಬಂದು

ಕಂ || ನೃಪನರ್ಚಿಸಿದಂ ಭಕ್ತಿಯಿ
ನುಪಾಂತ್ಯ ಜಿನಪತಿಪದಾಂತಿಕಮನಬ್ಜಸುಗಂ
ಧ ಪದಾಂಬುಸುಗಂಧಾಕ್ಷತ
ಸುಪುಷ್ಟ ಚರು ದೀಪ ಧೂಪಫಳಮಣಿಗಣದಿಂ ೧೦೬

ಮ || ಕಮಠಂಗುಗ್ರತೆ ನಿನ್ನೊಳತ್ಯುಪಶಮಂ ದುಶ್ಚಿಂತೆಯಿಂ ಕರ್ಮಬಂ
ಧಮವಂಗಸ್ಖಳಿತಾತ್ಮಚಿಂತೆಯೊಳೆ ನಿನ್ನೊಳ್ ಬಂಧವಿಚ್ಛಿತ್ತಿದು
ರ್ದಮಮಿಥ್ಯಾತ್ವಮಹತ್ವದಿಂದವನೊಳಜ್ಞಾನಂ ಸುದೃಷ್ಟಿತ್ವದು
ತ್ತಮಬೋಧಂ ನಿನಗಾಗೆ ಲೋಕಗುರುವಾದೈ ಪಾರ್ಶ್ವತೀರ್ಥೇಶ್ವರಾ ೧೦೭

ಕರಣಗ್ರಾಮನಿಯಾಮಕಾಚರಣಮುಷ್ಟಿಭ್ರಾಜಿಯಿಂ ಭೇದತ
ತ್ಪರ ವಿಜ್ಞಾನವಿಶೇಷಣಸ್ಖಳಿತಧಾರಾದೀಪ್ರಸಂಶೋಭಿತಯಿಂ
ವರ ವೈರಾಗ್ಯಗುಣಪ್ರತೇಜಿತನಿಜಧ್ಯಾನಾಸಿಯಿಂ ದುಷ್ಟದು
ರ್ಧರ ಕರ್ಮಾರಿಯನಾರ್ದು ಗೆಲ್ದಧಟನಾದೈ ಪಾರ್ಶ್ವತೀರ್ಥೇಶ್ವರಾ ೧೦೮

ಗಿರಿಗಳ್ ವಜ್ರಶರೀರನಂ ವಿವಿಧಭೂತಂ ಲೋಕರಕ್ಷಾಗುಣಾ
ಕರನಂ ಕ್ರೂರಮೃಗೋತ್ಕರಂ ದೃಢತೆಧ್ಯಾನಾಗ್ನಿಸಂಭೂತಿ ಭೂ
ಥರನಂ ಕೆಂಡದಖಂಡವೃಷ್ಟಿವಿಭವಂ ಶಾಂತಾಮೃತಾಭೋಧಿಯಂ
ಪಿರಿದು ಬಾಧಿಸವೆಂಬವೋಲದಿರದಿರ್ದೆ ಪಾರ್ಶ್ವತೀರ್ಥೇಶ್ವರಾ ೧೦೯

ನರನಾಥಂ ನಿರುತಂ ಸ್ವತಂತ್ರನೆನಿಪಂ ಸಾಪತ್ನರಂ ಮಿಕ್ಕ ಭೂ
ವರರಂ ಗೆಲ್ವವೊಲಂತರಂಗದಘಮಂ ಬಾಹ್ಯೋಪಸರ್ಗಂಗಳಂ
ಸ್ಥಿರಯೋಗೋನ್ನತಿಯಿಂ ಸ್ವತಂತ್ರನೆನಿಸಿರ್ದೆೞ್ಬಟ್ಟಿ ನಿರ್ಬಂಧದಿಂ
ಪರಮಾರ್ಹಂತ್ಯಪದಕ್ಕೆ ನೀನಧಿಪನಾದೈ ಪಾರ್ಶ್ವತೀರ್ಥೇಶ್ವರಾ ೧೧೦

ಉಪಸರ್ಗಂ ಕಿಡುಗುಂ ನಿಜಾಂಘ್ರಿಯುಗಮಂ ಸಂಪ್ರೀತಿಯಿಂ ಪೂಣ್ದು ಭಾ
ವಿಪ ಭವ್ಯರ್ಗೆನೆ ನೀನವಂ ನಿರವಶೇಷಂ ಘಾತಿಯೊಳ್ ಕಾಡಿ ಘಾ
ತಿಪುದೇನಚ್ಚರಿ ಬಲ್ಲಿದರ್ಗೆಡಱೆ ಮೂಲೋಚ್ಛಿತ್ತಿ ತದ್ವೈರಿಗೆಂ
ಬುಪದೇಶಂ ಪುಸಿಯಾಗದಂತೆಸಗಿದೈ ಶ್ರೀಪಾರ್ಶ್ವತೀರ್ಥೇಶ್ವರಾ ೧೧೧

ನೆಗೞ್ದಿರ್ದಾತ್ನನೊಳೊಲ್ದು ಯೋಚಿಸಿ ಮನೋವಾಕ್ಕಾಯಮಂ ಸೌಖ್ಯಘಾ
ತಿಗಳಂ ಸಂಯಮದಿಂ ವಿಘಾತಿಪಡೆಯೊಳ್ ತದ್ಭೃತ್ಯನೆಂಬಂತೆ ಮಾ
ಡೆ ಗಡೋರಂತುಪಸರ್ಗಮಂ ಕಮಠನಾರ್ಪಿಂದಾಳ್ದನಂ ಗೆಲ್ವ ಸಾ
ಸಿಗನಾಳ್ಗೞ್ಕನದೆಂಬವೋಲುಱದೆ ಗೆಲ್ದೈ ಪಾರ್ಶ್ವತೀರ್ಥೇಶ್ವರಾ ೧೧೨

ಶಾ || ಉಗ್ರಾಹೀಂದ್ರಮದಾಂಧಸಿಂಧುರತರಕ್ಷು ಕ್ರೂರಕಂಠೀರವೋ
ದಗ್ರವ್ಯಾಘ್ರದವಾಗ್ನಿವಜ್ರಪವನವ್ಯಾಮಿಶ್ರಿತಾಶ್ರಾಂತವೃ
ಷ್ಟಿಗ್ರಾಹಾದ್ಯಸುರಪ್ರಭೂತಭಯಕೃದ್ವೈ ಕುರ್ವಣಾವ್ಯಾಹತೈ
ಕಾಗ್ರಧ್ಯಾನನಿಧಾನದಿಂದೆ ಜಿನನಾದೈ ಪಾರ್ಶ್ವತೀರ್ಥೇಶ್ವರಾ ೧೧೩

ವ || ಎಂದಿಂತಷ್ಟಮಹಾಪ್ರಾತಿಹಾರ್ಯವರ್ಯನಂ ವಿಶಿಷ್ಟಾಷ್ಟಕದಿಂ ಸುತ್ತಿಯಿಸಿ ಸಾಷ್ಟಾಂಗಪ್ರಣತನಾಗಿ ಬೞಿಯಂ ಭವ್ಯಜಿನಶರಣ್ಯರಂ ಗಣಧರಾಗ್ರಗಣ್ಯರಂ ಗುರುಭಕ್ತಿ ಪೂರ್ವಕಮಭಿವಂದಿಸಿ ತದನಂತರಂ ನಿಜೋಚಿತಸ್ಥಾನದೊಳ್ ಕುಳ್ಳಿರ್ದು ಕರಮಳಯುಗಳಮಂ ಮುಗಿದು

ಕಂ || ಜೀವಾಜೀವನಸ್ಥಿತಿಯನ
ದಾವುದುಪಾದೇಯವವಱೊಳಾವುದು ಹೇಯಂ
ಭಾವಿಸೆ ಬೆಸಸುವುದು ಜಗ
ತ್ಪಾವನಮಿಳಾವಬೋಧ ನೀಂ ದಯೆಯಿಂದಂ ೧೧೪

ವ || ಎನಲೊಡೆಂ

ಕಂ || ಮಿಸಿಸಿದಪನಮೃತವರ್ಷದಿ
ನಸದಳಮವನಿಪನನೆಂಬವೋಲ್ ದಂತರುಚಿ
ಪ್ರಸರಂ ಪಸರಿಸೆ ಬೆಸಸಿದ
ನಸದೃಶಮಹಿಮಾವಳಂಬನೀ ತೆಱದಿಂದಂ ೧೧೫

ಪರಿಕಿಪೊಡುಪಯೊಗಮಯಂ
ಶರೀರಮಿತನತನು ಕರ್ತೃ ಭೋಕ್ತೃ ದಿಟಂ ಸಂ
ಸರಣಸ್ಥನೂರ್ಧ್ವಗಮನಂ
ವರ ಸಿದ್ಧಂ ಜೀವನೆನಿಕುಮರ್ಹನ್ಮತದೊಳ್ ೧೧೬

ಎರಡುಂ ತೆಱನಕ್ಕುಂ ಜೀ
ವರಾಶಿ ಮುಕ್ತರ್‌ಸಮಂತು ಸಂಸಾರಿಗಳೆಣ
ದಿರದೇಕವಿಧಂ ಮುಕ್ತರ್
ಪರಿಕಿಸೆ ಸಂಸಾರಿಜೀವಮದು ಪಲವುತೆಱಂ ೧೧೭

ನಿಸದಂ ಪದಿನಾಲ್ಕುಂ ಜೀ
ವಸಮಾಸೆಯೊಳನಿತೆ ಮಾರ್ಗಣಾಸ್ಥಾನದೊಳೀ
ಕ್ಷಿಸುವುದನಿತ್ತೆ ಗುಣಸ್ಥಾ
ನಸಮಿತಿಯೊಳ್ ಬೇಱೆವೇಱೆ ಸಂಸಾರಿಗಳಂ ೧೧೮

ವ || ಅವಲ್ಲದೆಯುಂ

ಕಂ || ನಿರುತಂ ಪುದ್ಗಲಮೆಂದುಂ
ವರಧರ್ಮಾಧರ್ಮಗಗನಕಾಲಂಗಳುಮೆಂ
ದಿರದಯ್ದುತೆಱದೆ ನೆಗೞ್ಗುಂ
ಪರಮಾಗಮದೊಳ್ ಸಮಂತಜೀವದ್ರವ್ಯಂ ೧೧೯

ಪರಿಕಿಸೆ ಜೀವದ್ರವ್ಯಂ
ಬರಸಿರೆ ಷಡ್ದ್ರವ್ಯಮೆನಿಕುಮವಱೊಳ್ ಕಾಲಂ
ಪರಿಹೀನಮಾಗೆ ಪಡೆಗುಂ
ನಿರುತಂ ಪಂಚಾಸ್ತಿಕಾಯಮೆಂಬೀ ಪೆಸರಂ ೧೨೦

ಪರಿಭಾವಿಸಿ ಪಡೆಗುಂ ಬಂ
ಧುರಜೀವಮಜೀವಮಾಸ್ರವಂ ಬಂಧಂ ಸಂ
ವರೆ ನಿರ್ಜರೆ ಮುಕ್ತಿಗಳಿವೆ
ಪರಮಾರ್ಥಂ ಸಪ್ತತತ್ತ್ವಮೆಂಬೀ ಪೆಸರಿಂ ೧೨೧

ಇವೆ ಪುಣ್ಯಪಾಪದೊಳ್ ಬೆರ
ಸಿ ವಿಕಳ್ವಿಸೆ ನವಪದಾರ್ಥಮೆನಿಸುಮೊಂದೊಂ
ದು ವಿಚಾರಿಪಂದು ಬಹುಭೇ
ದವಿಧಾಯಿಗಳೆನಿಸುಗುಂ ಜಿನಪ್ರವಚನದೊಳ್ ೧೨೨

ವ || ಅದಲ್ಲದೆಯುಂ

ಚಂ || ಜಿನ ಜಿನಸೂಕ್ತಿ ಸೂಕ್ತಿ ಕಥತಾರ್ಥಚರ್ಯಂಗಳೊಳಾದ ನಚ್ಚುದ
ರ್ಶನಮಱಿತಂ ವಿಬೋಧಮಮಳಾಚರಣಂ ಸುಚರಿತ್ರಮಕಕ್ಕುಮಿಂ
ತಿನಿತುಮನಾಕುಳಂ ನಿಜಪರಾತ್ಮನೊಳಿರ್ದೊಡೆ ಶುದ್ಧ ದೃಗ್ವಿಬೋ
ಧನುತಚರಿತ್ರಮೆಂದೆನಿಕುಮಿಂತಿವೆ ಮುಕ್ತಿಗೆ ಮುಖ್ಯಕಾರಣಂ ೧೨೩

ಕಂ || ವ್ಯವಹಾರನಯಾಶ್ರಿತಶು
ದ್ಧ ವಿನಿಶ್ಚಯ ನಯವಿಶಿಷ್ಟ ರತ್ನತ್ರಯಮೆಂ
ಬಿವು ಮುಕ್ತಿಗೆ ಕಾರಣಮ
ಪ್ಪುವು ವಿಮಳಧ್ಯಾನಮಂತವರ್ಕೆ ನಿಮಿತ್ತಂ ೧೨೪

ಉಪಶಾಂತಂದಾತಂ ಸಂ
ದುಪೇಕ್ಷಕಂ ಸಲೆ ತಿತಿಕ್ಷು ನಿಃಕಾಂಕ್ಷಮನಃ
ಕ್ಷಪಿತದುರಿತಾರಿಪಕ್ಷಂ
ವ್ಯಪೇತದೋಷಂ ನಿರಸ್ತ ರಾಗದ್ವೇಷಂ ೧೨೫

ನಿರುತಂ ಬಹಿರಾತ್ಮನುಮಂ
ತರಾತ್ಮನುಂ ಭಾವಿಪಂದು ಪರಮಾತ್ಮನುಮೆಂ
ದಿಎದಕ್ಕುಂ ಮೂಱತೆಱಂ
ಪರಿಕಿಪೊಡೆ ದಶಾವಿಭೇದದಿಂ ಜೀವಚಯಂ ೧೨೬

ಮಾನಿತ ಪರಮಾತ್ಮಶ್ರ
ದ್ಧಾನಾನುಷ್ಠಾನ ವಿಶ್ರುತಧ್ಯಾನ ಸಮಾ
ಧಾನನಿರದಂತರಾತ್ಮಂ
ತಾನಕ್ಕು ತದ್ಗುಣೇತರಂ ಬಹಿರಾತ್ಮಂ ೧೨೭

ಪರಮವಿಶುದ್ಧಜ್ಞಾನ
ಸ್ವರೂಪನತಿವಿಶದದರ್ಶನಂ ನಿರ್ಲೇಪಂ
ನಿರತಿಶಯಸೌಖ್ಯನಮಳಂ
ಪರಮಾತ್ಮನೆನಿಕ್ಕುಪಗತಾಘಪ್ರಕರಂ ೧೨೮

ವ || ಅಲ್ಲಿ

ಕಂ || ತೊಱೆವುದು ಬಹಿರಾತ್ಮನನೇ
ತೆಱದೊಳಮಾರಯ್ದೊಡಂತರಾತ್ಮನ ದೆಸೆಯಿಂ
ದಱಿವುದು ನೆಱೆ ಪರಮಾತ್ಮನ
ತೆಱನಂ ಮೋಕ್ಷಾರ್ಥಿಯೆನಿಪ ಭವ್ಯಂ ಮನದೊಳ್ ೧೨೯

ವ || ಎನಿಸಿದವ್ಯಗ್ರಚಿತ್ತನೇಕಾಂತ ಪರಮಪಾವನಪ್ರದೇಶದೊಳ್ ನಿಬಿಡನಿಬದ್ಧ ಪಲ್ಯಂಕಾಸನನುಂ ನಾಭೀತಟವಿನ್ಯಸ್ತೋತ್ಥಾನಹಸ್ತಸ್ವಸ್ತಿಕನುಂ ನಿಷ್ಟದಮಂದಿಭೂತಲೋಚನನುಂ ಪಂಚಗುರುಚರಣಸ್ಮರಣಪರಿಂತಾಂತಃಕರಣನುಮಾಗಿರ್ದ ಮುನಿವರಂಗೆ

ಮ || ಪರಮ ಸ್ವಾಶ್ರಿತ ದೃಗ್ವಿಬೋಧಚರಿತಂ ಸ್ವಾತ್ಮೈಕನಿಷ್ಠಂ ದಲಾ
ಗಿರೆ ಬಾಹ್ಯಕ್ರಿಯೆಯಾಂತರಕ್ರಿಯೆಗಳೆಲ್ಲಂ ಪಿಂಗೆ ತಚ್ಛುದ್ಧಬಾ
ಸ್ವರರತ್ನತ್ರಯಭಾವನಾಬಳದೆ ಸಾರ್ಗುಂ ಸ್ವಾತ್ಮಸಂಪತ್ತಿ ತ
ದ್ವರಸಂಪತ್ತಿಯಿನಕ್ಕುಮಕ್ಷಯಸುಖಂ ನಿರ್ವಾಣಲಕ್ಷ್ಮೀಸಖಂ ೧೩೦

ವ || ಎಂದು

ಕಂ || ಅದಱಿಂದೆಯ್ದುವ ಫಳಮಾ
ವುದೆಂದೊಡವ್ಯಗ್ರನಿರುಪಮಾನಂತಸುಖಾ
ಸ್ಪದಮಪ್ಪ ಮುಕ್ತಿಪದಮಿ
ರ್ಪುದದೀ ಭುವನತ್ರಯಾಗ್ರದೊಳ್ ಭುವನಪತೀ ೧೩೧

ಮ.ಸ್ರ || ವಿತತಶ್ರೀಪಾರ್ಶ್ವತೀರ್ಥೇಶ್ವರವಚನಸುಧಾವಾರ್ಧಿಕಲ್ಲೋಲಮಾಲಾ
ಪ್ರತಿಮೋದ್ಯದ್ವಾದಶಾಂಗಶ್ರುತಗದಿತ ಪದಾರ್ಥಂಗಳೊಳ್ ಜೀವಕರ್ಮ
ಸ್ಥಿತಿಯಂ ಸುವ್ಯಕ್ತಮಪ್ಪಂತಿರೆ ಗಣಧರಯೋಗೀಶ್ವರರ್ ಪೇೞೆ ಕೇಳ್ದು
ಜ್ಝಿತದೋಷಂ ನೂತ್ಮ ರತ್ನತ್ರಯಮಯ ವಿಳಸದ್ಭೂಷಣೋಪೇತನಾದಂ ೧೩೨

ಕಂ || ಕಿವಿಗುಡುತೆಗಳಿಂ ಜಿನದಿ
ವ್ಯವಚನಸುಧೆಯಂ ಸಮಂತು ಕಣ್ಗುಡುತೆಗಳಿಂ
ದವಿರಳಸೌಂದರ್ಯಸುಧಾ
ಪ್ರವಾಹಮಂ ತೆಗೆದುಂ ತುಂಬಿದಂ ಹೃತ್ಸರಮಂ ೧೩೩

ಎಂತಾನು ಬೀೞ್ಕೊಂಡನ
ನಂತರಮರ್ಹತ್ಪದಾಬ್ಜ ವಿಶ್ರಾಂತ ನಿಜ
ಸ್ವಾಂತಂ ಜಿನನಂ ಗಣಧರ
ರಂತರದಿಂದಫಲಮಕ್ಕುಮೇ ಸತ್ಸಂಗಂ ೧೩೪

ಚಂ || ನೆನೆಯಲೊಡೆಂ ಕೃತಾರ್ಥತೆಯನಾಗಿಪ ದೇವರ ದೇವನೆನ್ನ ನಂ
ದನನೆನಿಸಿರ್ದನೆಂದು ಭವಬಂಧನದಿಂದಮಗಲ್ದೆನೆಂದು ಸಂ
ದನುಪಮ ಪುಣ್ಯಸಂತತಿಗೆ ಭಾವಿಸೆ ಭಾಜನನಾದೆನೆಂದು ತ
ಣ್ಣನೆ ತಣಿದಂ ಸ್ವಚಿತ್ತದೊಳುದಾತ್ತಗುಣಪ್ರವರಂ ಮಹೀವರಂ ೧೩೫

ವ || ಅದಲ್ಲದೆತಯುಂ

ಮ || ಮನದೊಳ್ ತಜ್ಜಿನನಾಥಚಿಂತೆ ನುಡಿಯೊಳ್ ತದ್ಯದ್ಗುಣೌಘಪ್ರಶಂ
ಸನಮಾತ್ಮಕ್ರಿಯೆಯೊಳ್ ತದರ್ಚನಮಣಂ ಮತ್ತಲ್ಲದಿನ್ನೇನುಮ
ಮನದೊಳ್ ಮಾತಿನೊಳೊಲ್ದು ಮಾಡುವೆಡೆಯೊಳ್ ಭವ್ಯಾವತಂಸಂ ದಿಟಂ
ನೆನೆಯಂ ತಾಂ ನುಡಿಯಂ ಸಮಂತು ನೆಗೞ್ದಂ ಭೂಪಾಳನೇಂ ಧನ್ಯನೋ ೧೩೬

ಕಂ || ಪರಮಪುರುಷಾರ್ಥಲಕ್ಷ್ಮೀ
ವಿರಾಜಿತಂ ನೆಗೞ್ದ ವಾರಣಾಸೀಪುರಮಂ
………….ಪೊಕ್ಕು ನಿರಂ
ತರಸೌಖ್ಯಂ………..ನೃಪನೆಸೆದಿರ್ದಂ ೧೩೭

ವ || ಇತ್ತಲ್

ಕಂ || ಕಮಠನನಿಮಿತ್ತರೋಷಾ
ತ್ತಮನಂ ಪಲವುಂ ಭವಂಗಳೊಳ್ ಕೊಲುತುಂ ಸಂ
ದಮಳಗುಣನಿಳಯನಂ
ಶ್ವಮಹಿತಮಭೂತಿಯಂ ಜಗದ್ಧಿತಮತಿಯಂ ೧೩೮

ತಾನೆಯ್ದಿದ ನಾರಕದುಃ
ಖಾನೀಕದ ಪವಣನುಸಿರಲಾರೆತ್ತಱಿವರ್
ತಾನೆ ದಿಟಮಱವನೆನಿಸಿಯ
ನೂನಕ್ಲೇಶಾಗ್ನಿತಪ್ತನಾಗಿ ಬೞಿಕ್ಕಂ ೧೩೯

ಹತಮತಿ ಮನುಷ್ಯಗತಿವಡೆ
ದು ತಾಪಸತ್ವಕ್ಕೆ ಸಾರ್ದು ರಾಕ್ಷಸವಂಶೋ
ದ್ಗತನಾಗಿ ಭರದಿನುಪಸ
ರ್ಗತತಿಯನಾ ತೀರ್ಥವಿಭುಗೆ ಬಿಡದೊಡರಿಸಿದಂ ೧೪೦

ವ || ಅಂತು ತನ್ನನಂತಾನುಬಂಧಿಕ್ರೋಧಕ್ಕಿದುವೆ ಸೀಮೆಯೆಂಬಂತನೇಕ ಘೋರೋಪಸರ್ಗಂಗಳಂ ನಿರವಿಸಿ ನಿರುಪಸರ್ಗನಂಚಳಿಯಿಸಲಾಱದೆ ತ್ರಿಭುವನಕ್ಷೋಭ ಕಾರಿಯಾದ ತತ್ಪುಣ್ಯಾತಿಶಯಕ್ಕೆ ಭೂತಾನಂದಂ ಪರಮಾನಂದಮನೆಯ್ದಿ ಜಿನಚರಣಮಂ ಶರಣ್ಬೊಕ್ಕು ಮಿಥ್ಯಾತ್ವಮನೊಕ್ಕು ವಿಮಳರತ್ನತ್ರಯವಿಭೂಷಿತಂ ಸಮುಚಿತಕೋಷ್ಠದೊಳ್ ಕುಳ್ಳಿರ್ಪುದುಂ ಮತ್ತಂ

ಕಂ || ಪರಮನ ನಿಸರ್ಗಜನಿತೋ
ದ್ಧುರಘಾತಿಕ್ಷಯಸಮುತ್ಥಸುರಪತಿಕೃತ ಬಂ
ಧುರಮಹಿಮಾತಿಶಯೇಕ್ಷಣ
ರಿರದಾಂತರ ವಂದ್ಯಬುದ್ಧಿಯಂ ಸ್ವಾಶ್ರಮದೊಳ್ ೧೪೧

ಅಂತಯ್ನೂರ್ವರ್ ತಾಪಸ
ರಾಂತರ್‌ಜಿನದೀಕ್ಷೆಯಂ ಜಿನೇಶ್ವರಚರಣೋ
ಪಾಂತದೊಳಂತುಟೆ ವಿಧು ವಿಧು
ಕಾಂತದೊಳೊಂದಿಸನೆ ಸಾರ್ದ್ರ ಹೃದಯಸ್ಥಿಯಿಯಂ ೧೪೨

ವ || ತದನಂತರಂ

ಕಂ || ಸುರರಾಜನವಧಿಯಿಂ ದೇ
ವರ ದೇವನತದ್ವಿಹಾರಕಾಲಮನಱಿದಾ
ದರದಿಂ ಮುಕುಳಿತಕರಸರ
ಸಿರುಹಂ ನಿಜವಿಭುಗೆ ವಿನಯದಿಂದಿಂತೆಂದಂ ೧೪೩

ಉ || ದೇವರ ದೇವ ನಿನ್ನ ಚರಣಾಂಬುರುಹದ್ವಯಸೇವೆಯಿಂದೆ ಭ
ವ್ಯಾವಳಿ ತಾಳ್ದುನಿಂದು ಕೃತಕೃತ್ಯತೆಯಂ ನಿಖಿಳಾವನೀತಳಂ
ಪಾವನಮಕ್ಕೆ ಮಿಕ್ಕ ಕುಮತಪ್ರಕರಂ ಪೆಱಪಿಂಗಿ ಪೋಕೆ ಸೌ
ಖ್ಯಾವಹಮಕ್ಕೆ ಕೂಡೆ ಸಚರಾಚರಮೀಶ ಭವದ್ವಿಹಾರದಿಂ ೧೪೪

ಚಂ || ದೆಸೆದೆಸೆಯಂ ಪಳಂಚೆ ಜಯ ಜೀಯರವಂ ವಿವಿಧಾನಕಂ ಸಮ
ರ್ಥಿಸೆ ದುರಿತಾರಿಪಕ್ಷವಿಜಯೋತ್ಥಿತ ಮಂಗಳನಿಸ್ವನಂಗಳಂ
ಪಸರಿಸೆ ದೇವಭಾವನ ವಿಯಚ್ಚರ ಕಿನ್ನರ ಮರ್ತ್ಯಭೂಷಣ
ಪ್ರಸರಮಣಿಪ್ರಭಾವಿಸರಮನೇಸೆದತ್ತೊ ಸಭಾವಿಜೃಂಭಣಂ ೧೪೫

ಕಂ || ಸಲೆ ಪಿಂತೆ ಮುಂತೆ ಮತ್ತಿ
ಕ್ಕೆಲಂಗಳೊಳಮಂಬುಜಂಗಳೇೞೇೞಂ ತಂ
ದೊಲವಿಂ ನಿರವಿಸಿದಂ ಜಿನ
ಲಲಿತಪದನ್ಯಾಸದೆಡೆಯೊಳಮರಾಧೀಶಂ ೧೪೬

ಎನಿತನುರಾಗತೆಯಂ ತಾ
ಳ್ದಿ ನಿಜಶ್ರೀಚರಣಸೇವೆಗಳಸಿರೆಯುಂ ಮು
ಟ್ಟನೆ ವೀತರಾಗನಂಭೋ
ಜನಿಕರಮಂ ತೊಱೆದ ವಸ್ತುಗೆಳಸುಗುಮೆ ಬುಧಂ ೧೪೭

ಪರುಷಗ್ರಾವಚಯಂ ಶ
ರ್ಕರೋಪಳಂ ಕೀಟಕಂಟಕಪ್ರಕರಂ ತ
ದ್ಧರೆಯೊಳಗಿನಿತಿಲ್ಲವೋಲ್
ಮರುದಮರರ್ ಸಮಱಿ ಭಕ್ತಿಯಂ ನೆಱೆ ಮೆಱೆದರ್ ೧೪೮

ಸ್ತನಿತಕುಮಾರರ್ ಚೞೆಯಂ
ವಿನೂತಕರ್ಪೂರಕುಂಕುಮಾಗರಯ ಘನಚಂ
ದನ ಬಂಧುರಾಂಬುವರ್ಷಮ
ನನಿಶಂ ಸಮೆದರ್‌ಜಿನೇಂದ್ರಸೇವಾನಿರತರ್‌೧೪೯

ಕಾಲಹರಂ ಜಿನಂ ಬರುತುಮಿರ್ದಪನಿನ್ನೆಗಗುಂಟೆ ಪಾರಲಾ
ಕಾಲಮನೀ ತ್ರಿಕಾಲವಿಷಯಜ್ಞನ ಕಾಲನೆ ಬಲ್ಲಿತಾಗಿ ನಾ
ಮೋಲಗಿಪಂ ದಲೆಂದು ನಿಜಶಾಖೆಗಳೆಂಬ ಕರಂಗಳಿಂ ಪ್ರಸೂ
ನಾಳಿಫಳಂಗಳಂ ಪಿಡಿದು ಬಂದವೊಲಿರ್ದುವು ನಂದನೋತ್ಕರಂ ೧೫೦