ಕಂ || ಶ್ರೀನಿಧಿ ಮಹಿಮಧ್ಯಸ್ಥಂ
ಮಾನಿತಕಲ್ಯಾಣರೂಪಮೆಸೆವುದು ಸತ್ಸಂ
ತಾನಯುತಂ ದಿವಿಜಾದ್ರಿ ಸ
ಮಾನೀಕೃತ ಸಹಜಕವಿ ಸರೋವರಹಂಸಂ        ೧

ವ || ಆ ಮೇರುವಿನ ಪೂರ್ವಪಶ್ಚಮಪ್ರದೇಶದೊಳ್

ಕಂ || ಓರೊಂದಱೊಳಗೆ ನಾಡುಗ
ಳೀರೆಂಟುಗಳಾಗೆ ಕೂಡಿ ಮೂವತ್ತೆರಡುಂ
ರಾರಾಜಿಸೆ ಸೊಗಯಿಪ್ಪುದಿ
ಳಾರಮಣೀರಮೃಗೇಹಮುಭಯವಿದೇಹಂ      ೨

ಮ || ಅಮಳಶ್ರೀಜಿನವರ್ತನಂ ಕಿಡದು ಷಟ್ಖಂಡಾವನೀಮಂಡಳಾ
ಕ್ರಮಿಗಳ್ ಕುಂದರಭೀಷ್ಟವೃಷ್ಟಿ ಕಱೆಯುತ್ತಿರ್ಕ್ಕುಂ ಪದಂದಪ್ಪದ
ನ್ಯಮತಕ್ಕುದ್ಭವಮಿಲ್ಲ ಪಂಚಶತಚಾಪೋತ್ಸೇಧರುಂ ಪೂರ್ವಿತ
ಪ್ರಮಿತಾಯುಷ್ಯರುಮಪ್ಪರಲ್ಲಿ ಮನುಜರ್ ಭೂಪರ್ ಪ್ರಜಾಪಾಳಕರ್      ೩

ಕಂ || ನೆಗೞ್ದ ಮಹಾಲಯಮಲ್ಲದೆ
ನೆಗೞ್ದ ಮಹಾಲಯಮದಿಲ್ಲಯುತವರನಾರೀ
ಯುಗಪರಿವರ್ತನಮಲ್ಲದೆ
ಯುಗಪರಿವರ್ತನಮದಿಲ್ಲ ತದ್ಭೂತಳದೊಳ್  ೪

ಲಂಚಂ ಕವರ್ತೆ ಸೆಱೆ ಕೋ
ಳಿಂಚೆ ಬಱಂ ಪಸವು ಮಾರಿ ಬಂದೀಗ್ರಹಣಂ
ಮಂಚಲ್ ಕಳವಾರಡಿ ಭಯ
ಸಂಚಯಮೆಂಬಿವಱ ಪೆಸರುಮಿಲ್ಲಾ ನಾಡೊಳ್            ೫

ಚಂ || ಮೃಗಧರನೆಂತು ಷೋಡಶಕಳಾಪರಿಪೂರ್ಣತೆಯಿಂ ಪ್ರಮೋದಮಂ
ಬಗೆಗೆಡೆಮಾೞ್ಕುಮೆಂತು ನವಯೌವನೆ ಷೋಡಶವರ್ಷಲೀಲೆಯಿಂ
ಸೊಗಯಿಕುಮಂತೆ ಷೋಡಶಮಹಾವಿಷಯಂಗಳಿನೊಪ್ಪಿ ಬಾೞ್ಪುದು
ರ್ವಿಗೆ ಮುದಮಂ ಸುಖೈಕನಿಧಿ ಪೂರ್ವವಿದೇಹಮಖರ್ವಸಂಪದಂ   ೬

ಮ || ಇದು ಮೇಲ್ಕೊಂಡ ದುಕೂಲಚೇಲಮೆನೆ ತದ್ಭೂಮಧ್ಯಮಾಂತೊಪ್ಪುತಿ
ರ್ಪುದು ನೀಳಾಚಳಚೂಳಿಕಾವರಸರಃಸಂಜಾತೆಯಂ ಕಂಜಕೌ
ಮುದಸೌಗಂಧ್ಯಸಮೇತೆಯಂ ಚಳತರಂಗವ್ರಾತೆಯಂ ಪೂರ್ವವಾ
ರ್ಧಿದೃಢೋಪೇತೆಯನುನ್ಮದಾಂಬುವಿಹಗಪ್ರೋದ್ಭೂತೆಯಂ ಸೀತೆಯಂ       ೭

ವ || ಅಂತು ನಿಜಲಲಿತಲಹರಿಭುಜಾಲಿಂಗಿತಪ್ರಾಚೀನಜಳನಿಧಾನೆಯೆನಿಸಿ

ಮ || ಕುಲಭೂಭೃದ್ಭವೆ ಲಕ್ಷ್ಮಣಾಭಿನುತೆ ರಾಮೋತ್ಕಂಠೆ ವೈದೇಹಿ ಮಂ
ಜುಲವೇಣೀರಮಣೀಯೆ ಸತ್ಕುಶಲವವ್ಯಾಸಂಗೆ ಕಂದರ್ಪಜೋ
ತ್ಕಳಿಕಾಕ್ರಾಂತೆ ದಶಾನನಾತ್ಮೆ ವಿಮಲಶ್ರೀಮಜ್ಜನಸ್ಥಾನೆ ಕ
ಣ್ಗೊಳಿಕುಂ ವಾಹಿನಿ ಸೀತೆ ಪೋಲ್ತು ಭುವನಪ್ರಖ್ಯಾತೆಯಂ ಸೀತೆಯಂ         ೮

ವ || ಎನೆ ಮನಂಗೊಳಿಪ ಸೀತಾತರಂಗಿಣಿಯ ದಕ್ಷಿಣೋತ್ತರ ತಟಂಗಳೆರಡಱೊಳ ಮೆಂಟೆಂಟೆ ಷಟ್ಖಂಡಮಂಡಳಂಗಳಿರ್ಪುವಲ್ಲಿಯುಮೆಂಟನೆಯ ತಾಣದಲ್ಲಿ

ಮ || ವರವಕ್ಷಾರಮಹೀಧರಂ ಪ್ರವಿಳಸತ್ಪಂಕಾವತೀಸಿಂಧು ಬಂ
ಧುರ ಸೀತಾನದಿ ರಮ್ಯನೀಳನಗುಮೆಂಬೀ ನಾಲ್ಕುಮಾಘಾಟಮಾ
ಗಿರೆ ಪೂರ್ವಾಪರ ದಕ್ಷಿಣೋತ್ತರ ದಿಶಾದೇಶಕ್ಕೆ ದೇಶಂ ಮನೋ
ಹರಮಾಗಿರ್ಪುದು ಪುಷ್ಕಳಾವತಿ ಧರಾದೇವೀಶಿರೋಮಂಡನಂ       ೯

ವ || ಅಲ್ಲಿ

ಕಂ || ಗ್ರಾಮಸಮೂಹಂ ನಗರ
ಸ್ತೋಮಂ ಖರ್ವಡಕುಳಂ ಮಡಂಬಗಣಂ ದ್ರೋ
ಣಾಮುಖಸಂತತಿ ಖೇಟ
ಗ್ರಾಮಂ ಪತ್ತನಕದಂಬಮಳವಿಗಳುಂಬಂ          ೧೦

ಚಂ || ವಿದಳಿತಕಂಜವಿಲ್ಲದ ಕೊಳಂ ಗಜವಿಲ್ಲದ ಕಾಡು ಚೂತಮಿ
ಲ್ಲದ ಬನಮಂಚೆಯಿಲ್ಲದ ನದೀನಿಕಟಂ ಘನಗಂಧಶಾಲಿಯಿ
ಲ್ಲದ ಪೊಲ ನಚ್ಚರನ್ನಗಣೆಯಿಲ್ಲದ ಬೆಟ್ಟು ಜನಾನುರಾಗಮಿ
ಲ್ಲದ ಪೊೞಲತ್ಯುದಾತ್ತ ಗುಣಮಿಲ್ಲದ ಮಾನವರಿಲ್ಲದೆಲ್ಲಿಯುಂ          ೧೧

ಕಂ || ಆ ನಾಡೂರೂರ್ದಪ್ಪದ
ದೇನೆಸೆವುವೊ ಕೌದ್ರವೀಣದೌಮೀನದ ತೈ
ಳೀನದ ಮಾಷೀಣದ ಮೌ
ದ್ಗೀನದ ಬಹುಸಾರಸಸ್ಯ ಸಕಳ ಫಳಂಗಳ್        ೧೨

ಮಡಿಯಿಂ ಮಡಿವಳನೊಳ್ ಕಾ
ಲ್ವಿಡಿದಿರವಿಂ ಶಠನೊಳಮರ್ದ ವಾರಿಯಿನಿಭದೊಳ್
ನಿಡುದೆನೆಯಿಂ ಪ್ರಾಕಾರದೊ
ಳುಡುಗದ ಕಣೆಯಿಂದೆ ಡೊಣೆಯೊಳೆಣೆಯೆನಿಸಿದುವಂ      ೧೩

ಶಾಳಿಗಳಂ ಬಹುಪರಿಮಳ
ಶಾಳಿಗಳಂ ನಿಕಟಕುಮುದಸೌಗಂಧ್ಯಕೃತಾ
ಶಾಳಿಗಳಂ ರುಚಿನಿಚಿತದಿ
ಶಾಳಿಗಳಂ ಬೆಳೆವ ನೆಲನೆ ಪೊಲನಾ ನೆಲದೊಳ್   ೧೪

ವ || ಅದಲ್ಲದೆಯದೆ ನದೀಮಾತೃಕಮುಂ ದೇವಮಾತೃಕಮುಮೆಂಬ ಭೇದಮಂ ಬೇರ್ಪಡಿಸಿ

ಚಂ || ಗಿಳಿಗಳ ಚಂಚುವಿಂದೊಡೆದ ಮಾವಿನ ಪಣಣ ರಸಪ್ರವಾಹದಿಂ
ಬೆಳೆವುವು ಗಾಳಿಯಿಂದೊಡೆದ ಕರ್ವಿನ ಸೋರ್ವೆಳನೀರ ಸಾರದಿಂ
ಬೆಳೆವುವು ಪಾಮರೀಮುಖಶಶಿದ್ಯುತಿಯಿಂದೊಸರ್ವಿಂದುಕಾಂತ ನಿ
ರ್ಮಳ ಜಳಪೂರದಿಂ ಬೆಳೆವುವಲ್ಲಿಯ ಬಂಧುರಗಂಧಶಾಲಿಗಳ್      ೧೫

ಕಂ || ಕಳಮವನಂಗಳ ಮೇಲಾ
ಗಳುಮಾಡುವ ಗಿಳಿಗಳಿಂ ಪಸುರ್ತು ನಭಂ ಕ
ಣ್ಗೊಳಿಪುದು ತದ್ವನಪತ್ರಂ
ಗಳ ಪಸುರ್ವೆಳಗಡರ್ದು ಮುಸುಕಿದತ್ತೆಂಬಿನೆಗಂ  ೧೬

ಎಳನೀರ ಮಡಿಗಳೊಳ್ ಮಾ
ರ್ತೊಳಗುವ ಪಾಮರಿಯರಾನನಂಗಳುಮಲರ್ಗ
ಣ್ಗುಳುಮೆಸೆವುವಲರ್ದ ಕಮಳಂ
ಗಳ ಮೀನ್ಗಳ ಬಳಗಮೆಂಬ ಬಗೆ ಮಿಗುವಿನೆಗಂ  ೧೭

ಗಿಳಿಸೋವಂಗನೆಯರ ಕ
ಣ್ಗಳ ರುಚಿ ದೆಸೆದೆಸೆಗೆ ಪಸರಿಸಿರೆ ಪಾಸಿದ ನಿ
ರ್ಮಳ ಜಾಳಮೆಂದು ಪಾಲ್ದೆನೆ
ಗಳ ದೆಸೆಗಂ ಸಾರವಂಜಿ ಕೆಲವರಗಿಳಿಗಳ್          ೧೮

ಕಂ || ಲಲಿತಾಂಗದ ಬೆಮರ್ವನಿಗಳ
ನಲೆದಾಱಿಪ ಕೀರಕುಳದೆಱಂಕೆಯ ಕಡುದ
ಣ್ಣೆಲರ್ಗೆಳಸಿ ಪಕ್ಕಿ ಸೋಯದೆ
ಕೆಲಬರ್ ಪಾಮರಿಯರವಱ ಬರಮನೆ ಪಾರ್ವರ್            ೧೯

ವ || ಮತ್ತಮಲ್ಲಿ

ಚಂ || ಒದವಿದ ಶಾಲಿಗರ್ದೆಗಳ ಪಾಳಿ ಕುಕಿಲ್ವ ಪಿಕಾಳಿ ತಣ್ಪುವೇ
ಱಿದ ಸುೞಿಗಾಳಿ ಪಾಮರಿಯರೋಳಿ ವಿಟೀವಿಟಕೇಳಿ ಪೂಗಳಿಂ
ಕೆದಱುವ ಧೂಳಿ ಪಾಡುವ ಮದಾಳಿ ಪೊದೞ್ದಲರೋಳಿಯೆಂಬಿನಂ
ಮದನದ ದಾೞೆಗೆತ್ತು ಸುಗಿದಿರ್ಪುದು ಪಾಂಥಜನಂ ನಿರಂತರಂ       ೨೦

ವ || ಅದಲ್ಲದೆಯುಂ

ಉ || ರಾಗಿಮುಖೇಂದುಬಿಂಬದ ಲತಾಂಗದ ಕಣ್ಗಳ ಕಾಂತಿ ವಾರಿಧಾ
ರಾಗಣದೊಳ್ವೊನಲ್ ಕವಿದು ಪಾಂಥರ ಕಣ್ಗೆ ಮನಕ್ಕೆ ರೂಪುಗೊಂ
ಡಾಗಳೆ ತೃಪ್ತಿಯಿಂ ಕುಡೆ ಮನಂಗೊಳಿಸಿರ್ಪರನಂಗರಾಜಧಾ
ರಾಗೃಹಶಾಳಭಂಜಿಕೆಗಳಂತಱವಟ್ಟಿಗೆಯೊಳ್ ಲತಾಂಗಿಯರ್        ೨೧

ವ || ಅಂತುಮಲ್ಲದೆಯುಂ

ಮ || ನೆವದಿಂ ತೃಷ್ಣೆಯನಾಗಿಪಂದಮಿದು ತೃಷ್ಣಾಭೇದಮಂ ಮಾಡುವಂ
ದವಿದಲ್ಲಪ್ಪೊಡಿವಂದಿರೇಕೆ ಸುರಭಿಪ್ರಾಲೇಯತೋಯಂಗಳಂ
ಯುವಪಾಂಥರ್ಗೆಱಿವಲ್ಲಿ ತಮ್ಮ ಲಲಿತಾಂಗೋಪಾಂಗಶೃಂಗಾರಗೌ
ರವಮಂ ಬೀಱುವರೆಂಬ ದೂಱನೆಸಗುತ್ತಿರ್ಪರ್ ಪ್ರಪಾಕಾಂತೆಯರ್ ೨೨

ವ || ಆ ಪ್ರದೇಶಕ್ಕನತಿದೂರಮಾಗಿ

ಚಂ || ಸಲೆ ನಿಲೆ ಮಾವು ಪೂವು ವಕುಳಂ ಮುಕುಳಂ ಪೊಸತೆಂಗು ಕೌಂಗು ಕಾ
ದಲರೆಲರಂಚೆ ಬೆಂಚೆ ಪುಳಿನಂ ನಳಿನಂ ಗಿಳಿವಿಂಡು ಬಂಡು ಕೋ
ಗಿಲೆಗೊಲೆ ತುಂಬಿ ಬಿಂಬಿ ಸುೞಿಗೇದಗೆ ಚಾದಗೆ ಕಂಪು ಸೊಂಪಗುಂ
ದಲೆಯೆನೆ ರಮ್ಯಮಾ ವಿಷಯದೂರ್ಗಳ ನಂದನವೃಂದವೆತ್ತಲುಂ    ೨೩

ಮ.ಸ್ರ || ವನವಲ್ಲೀಲಾಸ್ಯದಿಂ ಜೀರ್ಕೋೞವಿಯನನುಬದ್ಧಾಳಿಯಿಂ ವಾರನಾರೀ
ಜನಮಂ ಧಾರಾಲಯೋದ್ಯದ್ಗತಿಚತುರತೆಯಿಂ ವಾಜಿಯಂ ಸೌರಭಲಂ
ಬನದಿಂ ಗೋಸರ್ಗಮಂ ಲಾಲಿತಕುಶಲವಸಾಂಗ್ಯತದಿಂ ರಾಮಸೀಮಂ
ತಿನಿಯಂ ಪೋಲ್ತಲ್ಲಿ ನಿಚ್ಚಂ ಸುೞೆವುದು ವನದೊಳ್ ಸ್ವೈರಚಾರಂ ಸಮೀರಂ          ೨೪

ವ || ಅಂತುಮಲ್ಲದೆಯುಂ

ಚಂ || ಕರಗಿಸುವಂತೆ ಗರ್ವಘನಜಾಳಮನುರ್ವಿಸುವಂತೆ ಕಾಮತೋ
ಮರಜನಿತಾಗ್ನಿಯಂ ನೆಱೆಯೆ ನಂದಿಸುವಂತೆ ವಿವೇಕದೀಪಮಂ
ಬಿರಯಿಗಳಂ ಪಳಂಚಲೆವ ತಣ್ಣೆಲರಾಱೆಸುತಿರ್ಪುದಲ್ಲಿ ನ
ಲ್ಲರ ವಿಳಸದ್ರತಾಂಗಪರಿಖೇದಮನೆಯ್ದೆ ಲತಾವನಂಗಳೊಳ್       ೨೫

ವ || ಅದಲ್ಲದೆಯುಂ

ಮ.ಸ್ರ || ನನೆಯಂಬಂ ಕಂತುವಿಂದಂ ಬಿಸುಡಿಸಿದಲರ್ಗಣ್ ಚಂದ್ರಬಿಂಬೋದಯಪ್ರಾ
ರ್ಥನೆಯಂ ಕನ್ನೆಯ್ದಿಲಿಂ ಪಿಂಗಿಸಿ ಕಳೆದ ಮೊಗಂ ಜನ್ಮಸಾಫಲ್ಯಮಂ ಭೂ
ಜನನೇತ್ರಾನೀಕದಿಂದೆಯ್ದಿಸಿದನುಪಮಸೌಂದರ್ಯಮೊಳ್ಗಂಡರಂ ಬ
ರ್ದಿನ ಬಲ್ಪಿಂ ಗಂಡುದೊೞ್ತಾಳ್ವೆಸಕದ ಸೊಬಗಾ ನಾಡ ಪೆಂಡಿರ್ಗೆ ಸಾಜಂ      ೨೭

ಚಂ || ಅರಲ ಸರಲ್ಗದಾರ ಮನಮಂ ಗುಱೆಮಾಡದೊ ನಾಡ ನೀಱೆವೆಂ
ಡಿರ ನಡೆವೊಪ್ಪುವಪ್ಪುವೊಡಗೂಡುವ ನೋಡುವ ಸುತ್ತುವೊತ್ತುವಾ
ದರಿಪೊಲಿಪೊಲ್ವ ಗೆಲ್ವ ಬಸದಾಗಿಪ ಭೋಗಿಪ ಕಾಯ್ವ ಬಯ್ವ ನಾ
ಣ್ಗರೆವೆರೆವಿಂಬುಕೆಯ್ಯುವೊಳಪೊಯ್ಯುವನೇಕ ವಿಚಿತ್ರಚೇಷ್ಟೆಗಳ್  ೨೭

ವ || ಮತ್ತಮಲ್ಲಿ

ಕಂ || ಬಾಲಾಶೋಕಂ ವಿಗ್ರಹ
ಲೀಲೆ ರಜೋವಿಕೃತಿ ಜಾತಿಸಂಕರಮನಿಲೋ
ಲ್ಲಾಲತರಶಿಖಿಶಿಖಾಕುಳ
ಕೋಳಾಹಳಮಿಲ್ಲ ಬನದೊಳಲ್ಲದೆ ಜನದೊಳ್           ೨೮

ಮ || ಧೃತಧರ್ಮಚ್ಯುತಿ ಬಾಣಸಂಹತಿಗೆ ಬದ್ಧಾವೈಕೃತಂ ವಾರಣ
ಕ್ಕೆ ತಮಃಸಂಗತಿ ರಾತ್ರಿಗಾಱಡಿ ಸುಗಂಧೋತ್ಫುಲ್ಲಪುಷ್ಪಕ್ಕುಪಾ
ತ್ತತಪೋಹೀನತೆ ಚೈತ್ರದೇೞ್ಗೆಗೆ ಮಹದ್ವಂದಿಗ್ರಹಂ ತ್ಯಾಗಿಗ
ವ್ರತಯೋಗಂ ಜಳಪಕ್ಷಿಗಲ್ಲದೆ ಜನಕ್ಕಿಲ್ಲಲ್ಲಿ ಬೇಱೆಲ್ಲಿಯುಂ     ೨೯

ಲತಿಕಾಪಲ್ಲವಮಲ್ಲದಿಲ್ಲಖಿಳ ಲೋಕಾಪಲ್ಲವಂ ಜೈನನಿ
ರ್ಮಿತ ಧರ್ಮೋದಯಮಲ್ಲದಿಲ್ಲರಿಚಮೂಧರ್ಮೋದಯಂ ಕೇತಕೀ
ಧೃತಸತ್ಕಂಟಕಮಲ್ಲದಿಲ್ಲ ವಸುಧಾಸತ್ಕಂಟಕಂ ಕಾಳಕ
ಲ್ಪಿತ ದೋಷೋದ್ಗಮಮಲ್ಲದಿಲ್ಲ ಪೆಱವುಂ ದೋಷೋದ್ಗಮಂ ದೇಶದೊಳ್        ೩೦

ಕಂ || ಗುಣಮಿಲ್ಲದ ಯತಿ ಮಹಿರ
ಕ್ಷಣಮಿಲ್ಲದ ನೃಪತಿ ಶೀಲಮಿಲ್ಲದ ಸತಿ ಲ
ಕ್ಷಣಮಿಲ್ಲದ ಕೃತಿ ಜಿನಗೃಹ
ಗಣಮಿಲ್ಲದ ನಗರತತಿಯುಮಿಲ್ಲಾ ನಾಡೊಳ್            ೩೧

ವ || ಎಂಬಿನಮನೇಕ ಗಿರಿ ನಗರಸರಿದರಣ್ಯ ಕೇದಾರನಂದನಜನಸ್ಥಾನಸಂಪತ್ತಿಗುತ್ಪತ್ತಿ ನಿಳಯಮಾದ ತನ್ಮಹೀವಳಯದೊಳಗೆ ಸಕಳಸೌಂದರ್ಯಯೋನಿಯುಂ ರಾಜಧಾನಿಯುಮೆನಿಸಿ

ಚಂ || ಅರಮನೆ ಮೂಗು ಕಂಪಿಡಿದೆಲರ್‌ನಱುಸುಯ್ ಸಿತಕೇತುಮಾಳೆ ಭಾ
ಸುರ ನಯನಾಂಶು ಪಂದಳಿರೆ ತೋರಣಮೊಳ್ನಿಡುವುರ್ವುಪಾಸಕಾ
ಧ್ವರಶಿಖಿಧೂಮಮಂಡಳಿ ಚಳಾಳಕಮಾಗಿರೆ ಪುಂಡರೀಕಿಣೀ
ಪುರಮೆಸೆದಿರ್ಪುದಾ ವಿಷಯಲಕ್ಷ್ಮಿಯ ಮುಗ್ಧಮುಖೇಂದುವೆಂಬಿನಂ            ೩೨

ಕಂ || ಅದು ಗುಹ್ಯಕೋಪಗತಸಂ
ಪದಮೆಂದಕುಲೀನಮೆಂದು ಬಹುವಿಷಧರಮೆಂ
ದೊದವಿದ ಮಹತ್ವದಿಂದಿೞೆ
ಪುದು ಧನಪತಿ ದಿವಿಜಪತಿ ಫಣಾಪತಿಪುರಮಂ   ೩೩

ಅದಱೊಡನೆ ಕೂಡಿ ತೊಲೆಯೊಳ್
ಬಿದಿ ತೂಗಿದೊಡೊಂದೆ ನೆಲೆಗೆ ನಿರುತಂ ಬರಲಾ
ಱದೆ ತನ್ನಲಘುತೆಯಿಂದೆಂ
ಬುದನೆರಡಱ ನಿಂದ ನಿಲವೆ ಸೂಚಿಪುದಿನ್ನುಂ     ೩೪

ಭುವನದ ರಮಣೀಯ ಪದಾ
ರ್ಥವೆಲ್ಲವಂ ಮಾಡಿಮಾಡಿ ನಿಜಕೌಶಳದೊ
ಳ್ಪು ವಿಶೇಷಮಾಗೆ ಬಿದಿ ಬೞೆ
ಕವೆ ಮಾಡಿದನೆನಿಪುದದಱ ಪೊಱವೊೞಲಂದಂ  ೩೫

ವ || ಅದೆಂತೆನೆ

ಮ.ಸ್ರ || ನರಾರೀಯೋಗದೀಕ್ಷಾಭವನಮಿದೆನಿಕುಂ ನಾಗವಲ್ಲೀಪಿನದ್ಧೋ
ದ್ಧುರಪೂಗಂ ಮಾಧವೀವೇಷ್ಟಿತ ಕುರವಕ ವೇಳಾಲತಾಬದ್ಧ ಕಾಳಾ
ಗರು ಮಲ್ಲೀನದ್ಧಚೂತಂ ಲವಲಿವೃತಲವಂಗಂ ತಮಾಳೀಪರೀತ
ಸ್ಫುರಿತಾಶೋಕಂ ಮೃಣಾಳೀಪರಿಚಿತಖರದಂಡಂ ಪುರೋದ್ಯಾನಷಂಡಂ       ೩೬

ಚಂ || ದಿನಪನ ಕೆಯ್ಯ ಕಂಜದೊಡವುಟ್ಟಿದ ತಾವರೆ ಕಾಮಚಾಪದಿಂ
ಜನಿಯಿಸಿದಿಕ್ಷು ಚಂದ್ರನಮರ್ದಿಂ ಮಡುಗೊಂಡ ಕೊಳಂ ದಿವಂ ತವ
ರ್ಮನೆ ತನಗೆಂಬ ಪುಷ್ಪಲತೆ ಕಲ್ಪಮಹೀಜದ ಬೀಜದಂಘ್ರಿಪಂ
ವನಜಜನಂಚೆಗಗ್ನಿಜನ ಸೋಗೆಗೆ ಪುಟ್ಟಿದ ಹಂಸಕೇಕಿಗಳ್ ೩೬

ಕಂ || ಕಳರುತಿಯಂ ರತಿಯೊಳ್ ಕ
ಲ್ತೆಳವುರುಳಿಗಳಗ್ನಿಶಾಪವೆಯ್ದದ ಗಿಳಿಗಳ್
ಕಳಗೀತಿಕೆಗಳ್ ನಾಕದ
ವಿಳಸನದಿಂದೊಪ್ಪಿ ತೋರ್ಪ ಪಿಕನಿಕರಂಗಳ್     ೩೮

ಮ || ಒಳಪೊಕ್ಕೆಯ್ದೆ ತೊೞಲ್ವುದಲ್ಲಿ ಪಥಿಕವ್ರಾತಂಗಳೊಳ್ ಪೋರುತುಂ
ತಳಿರ್ವೊಯ್ಲಿಂದೊಳಸೋರುತುಂ ಪುೞೆಲತಣ್ಪಂ ಸಾರುತುಂ ಪಿಂದೆ ನಿಂ
ದಳಿವೃಂದಂ ಬರೆ ಪಾರುತುಂ ಕುಳಿರ್ವನೀರಂ ಪೀರುತುಂ ಪ್ರೋಲ್ಲಸ
ತ್ಕಳಕಂಠೀರುತಮಾತ್ಮಸಾತ್ಮಸಾತ್ಕೃತವನಶ್ರೀಚಾರುತನ್ಮಾರುತಂ ೩೯

ವ || ಅಂತು ಸಂಚರಿಪ ಮಂದಗಂಧವಹನಿನಲ್ಲುಗುವ ತರುಶತದೊಳುದಿರ್ವ ಕುಸುಮರಜದ ಮಂದೈಸಿ ನೆಗೆದ ಕೆಂಧೂಳಿಯಿಂದೆ ಮುಂದುಗೆಟ್ಟು ಮೊರೆವ ಮಧುಕರಂಗಳುಂ ಮಧುಕರಧ್ವನಿಯಿನಲರ್ವಿಲ್ಲ ಜೇವೊಡೆಯ ರವವೆಂದು ಕಿವಿಯಿತ್ತು ಕೇಳಲುಮ್ಮಳಿಸಿ ತಮ್ಮೊಳ್ ಬಿಗುರ್ವ ಬಿರಯಿಗಳುಂ ಬಿರಯಿಗಳ ಮೆಯ್‌ಸುಯ್ಯ ಬೆಂಕೆ ಸೋಂಕೆ ಕಱೆಗಂದಿದಂತೆ ಕಪ್ಪುವಿಡಿದಂಗಮೆಸೆಯೆ ಕುಸುಮಶರಸಖನ ಪಡಿಯಱವೆಸಕೆ ಪಕ್ಕಾಗಿ ಪುಗಲ್‌ಪುಗಲೆಂದು ಬಂಡಳಿಸಿ ತೊಂಡುಗೆಡೆವ ಗಂಡುಗೋಗಿಲೆಗಳುಂ ಗಂಡುಗೋಗಿಲೆಗಳ ತುಂಡಖಂಡನದಿನೊಱೆತುಗುವ ಮಾಮರದ ಸೊನೆಯ ಸೋನೆಯಿಂ ನಾಂದು ಕೆಂದಳಿರೊಳೊಂದಿ ಮಂದಯಿಪಶೋಕವನಮನೆಳವಿಸಿಲ ಬಳಗಮೆಂದೆಳಸಿ ಬಳಸುವೆಳಗಿಳಿಗಳುಂ ಎಳಗಿಳಿಗಳ ಬಳಗದ ನುಡಿಯನನುದಿನಂ ಕಲ್ತು ನುಡಿವಂಗನಾರತಿರಹಸ್ಯ ನಿಶ್ವಸನಂಗಳಂ ಕೇಳ್ದು ನಗೆಯಿಂದ ಬಿರಿವಂತೆ ಬಿರಿವ ಬಿರಿಮುಗುಳ ತಗುಳದಿಂ ಸೊಗಯಿಸುವ ಮಲ್ಲಿಕಾಲತೆಯ ಜೊಂಪಂಗಳುಂ ಮಲ್ಲಿಕಾಲತೆಯ ಜೊಂಪಕ್ಕೆ ಪಕ್ಕಾಗಿ ಕುಳಿರ್ವ ತಿಳಿಗೊಳದ ತಡಿಯ ತಣ್ಪುೞೆಲ ನುಣ್ಮಣಲೊಳತನುಗುರುರತಿಯನೋದಿಸುವ ಶುದ್ಧಾಕ್ಷರಂಗಳೆನಿಪ ಶುಕ ಪಿಕ ಚಕೋರ ಚಕ್ರವಾಕ ಬಕ ಬಳಾಕ ಸಾರಸ ಮರಾಳ ಪಾರಾವತ ಮಯೂರ ಹಾರೀತ ಕಾರಂಡೆ ಕುರವಕ ಸಂಕುಳಚರಣಸಂಚರಣದಿಂ ಪಳಚ್ಚನೆಸೆವ ಪಜ್ಜೆಗಳುಮಳುಂಬಮೆನಿಸುಗು ಮತ್ತಮಲ್ಲಿ

ಚಂ || ಸೊನೆ ತನಿವಣ್ಣ ಸಾರ್ಪರಿವ ನೀರೆಳನೀರಲರ್ವಂಡು ಬೆಂಚೆ ಕ
ರ್ಬಿನರಸವೆೞ್ದ ಜಾಗದ ಪೊನಲ್ ಕೃತಕಾಚಳನಿರ್ಜರಾಂಬುವೆಂ
ಬಿನಿತಱೞಿನಾದ ಕೊೞ್ಗೆೞೆನಾಱೆಸಿ ಪಾಂಥರ ಕಂತುತಾಪಮಂ
ಘನತರಪುಷ್ಪರೇಣುಗಳೆ ಕೂರ್ತೊಡಗೂಡುವರ್ಗಿಂಬುಮಾಡುಗುಂ ೪೦

ಕಂ || ಎಳಲತೆವನೆಯೆನಿತನಿತುಂ
ತಳಿರ್ವೊದಱೆನಿತನಿತುಮಮರ್ದ ಪುೞೆಲೆನಿತನಿತುಂ
ಕೊಳನೆನಿತನಿತುಂ ಕೃತಕಾ
ಚಳಮೆನಿತನಿತುಂ ರತಾರ್ತರೆಳಸಿರೆ ರಯ್ಯಂ        ೪೧

ಚಂ || ವಿಹಗಕುಳಂಗಳಂ ನೆರಪಿ ಕೂಜನದೇೞ್ಗೆ ಮನೋಜರಾಜ್ಯಮಂ
ಬಹಳಿಕೆಯಿಂದೆ ಮೂವಡಿಸಿ ಕಾಮಮನಾರ ಮನಕ್ಕಮಾಳಿಪಾ
ಗ್ರಹಮನೊಡರ್ಚಲಲ್ತು ಮೊಱೆಯಂ ಮಱೆಸುತ್ತಿರಲಾತ್ಮಮನ್ಮಥ
ಗ್ರಹಮನದೇಂ ಕೞಲ್ಚುವರೊ ಯವ್ವನಮತ್ತೆಯರಲ್ಲಿ ನಲ್ಲರೊಳ್          ೪೨

ಹರಿಣೀ || ನಳಿನದಳದೊಳ್ ತೀವಿರ್ದಚ್ಛಾಂಬು ತಳ್ತಲರ್ವಾಸು ಕೆಂ
ದಳಿರ ತೆರೆ ತಾಂಬೂಲಂ ರಂಭಾದಳವ್ಯಜನಂ ಲತಾ
ನಿಳಯಮಳಿನೀಗೀತಂ ಪೂಗಂಪು ರಾಗದಲಂಪನ
ಗ್ಗಳಿಸೆ ಬನದೊಳ್ ನಿಚ್ಚಂ ಮೆಚ್ಚಿಪ್ಪರಿಚ್ಚೆಯಿನೋಪವರ್         ೪೩

ವ || ಅದಲ್ಲದೆಯುಂ

ರಗಳೆ || ಅಲ್ಲಿ ಬಹುಕುಸುಮಕುಜವೀಧಿಗಳೊಳೆಡೆಯಾಡಿ
ಸಲ್ಲಲಿತಲತೆಗಳಂ ಕಣ್ಣಾರೆ ನಡೆನೋಡಿ ||
ಮುಂಚಿ ತಿಱೆದಲರ್ಗಳಂ ಕೂರ್ಪ ಕೆಳದಿಗೆ ನೀಡಿ
ಲಂಚಮಂ ಪ್ರಿಯರಿತ್ತ ಪೂಮಾಲೆಯಂ ಸೂಡಿ ||
ನನೆಯ ಮುಗುಳಲರ ಮಿಡಿಯೊಳ್ದುಡಿಗೆಯಂ ಮಾಡಿ
ತನಿಗೊರ್ವಿದೆಲೆವಳ್ಳಿಯೊಳಡಂಗುಱುಚಾಡಿ ||
ತುಱುಗಿದ ತಮಾಲದೊಳಗವಿದು ಸಖಿಯಂ ಕಾಡಿ
ನಱುಸುಯ್ಗೆ ಸೂೞೆವಳಿಗೆ ಸುಗಿದು ಸಂಪಗೆಗೂಡಿ ||
ಬಂದೂಳ್ವ ಬೆರ್ಚಿಸುವ ಚಪಳಕಪಿಗಲ್ಲಾಡಿ
ಬಂದ ಮಾಮರದ ತಳಿರ್ಗೊಂಬನುಯ್ಯಲಾಡಿ ||
ತುಂಬಿಗಳುಮೊಡನೊಡನೆ ತೇರಯ್ಸುತಿರೆ ಪಾಡಿ
ತಿಂಬಿ ಗೞಪುವ ಗಿಳಿಗಳೊಡನೆಳಸಿ ಮಾತಾಡಿ ||
ನುಡಿಯ ನುಣ್ಪಿಂ ಪಿಕನಿನಾದಮಂ ಕೊಱಚಾಡಿ
ಬಿಡುಮುಡಿಯ ಬಿಂಕದಿಂ ಸೋಗೆಯಂ ಕೀೞ್ತಾಡಿ ||
ನಡೆಯ ನಯದಿಂದಂಚೆಯಳವನೆೞಕುಳಿಯಾಡಿ
ತೊಡೆಯ ಚೆಲ್ವಿಂ ಕನಕಕದಳಿಯಂ ಱೋಡಾಡಿ ||
ಕೃತಕಗಿರಿಗಳನೇಱೆದನಿತಱೊಳೆ ನಸುಬಾಡಿ
ಲತೆವನೆಗಳೆಸಳ ಪಸೆಯೊಳ್ ತನುವನೀಡಾಡಿ ||
ಬೆಳೆದಳಿಪಿನಿಂ ಪಿಡಿದು ನಲ್ಲರಂ ಮುಂಡಾಡಿ
ಮುಳಿವ ತಿಳಿಪುವ ವಿನೋದಂಗಳಂ ಕೊಂಡಾಡಿ ||
ಮಚ್ಚಱೆದು ಮನಮಿಚ್ಚೆವಟ್ಟ ಪುರುಳಂ ಬೇಡಿ
ಪೊಚ್ಚಮಿಲ್ಲದ ರಾಗರಸದಿಂ ಕುಳಿರ್ಕೋಡಿ ||
ತಣ್ಬುೞಿಲ ತಾಣದೊಳ್ ಬಗರಗೆಗಳಂ ತೋಡಿ
ಕಣ್ಬೊಲದ ತಾವರೆಗೊಳಂಗಳೊಳಗೋಲಾಡಿ ||
ವಿವಿಧ ಕೇಳೀಜಳದ್ರೋಣಿಯೊಳ್ ಮುೞ್ಕಾಡಿ
ನವನಾಳಿಕೇರ ರಸಪೂರಮಂ ತುಳ್ಕಾಡಿ ||
ನಿಖಿಳಕೃತ್ರಿಮನದಿಗಳಿರ್ತಡಿಯೊಳೀಸಾಡಿ
ಮುಖಶಶಿಯ ಪಗೆಯೆಂದು ಕಮಲಮಂ ಬೀಸಾಡಿ ||
ತನುಲತೆಯನಾಱೆಸೆ ಸುಗಂಧಪವನಂ ತೀಡಿ
ವನವಿಹರಣದೊಳಗೆ ಬೇಱೊಂದು ಕಡುಗಾಡಿ ||
ಪೊೞ್ತುಗಳೆವುದು ನೃಪನ ಪೆಂಡವಾಸಂ ಕೂಡಿ
ವರ್ತಿಸುತ್ತಿರೆ ತಮ್ಮ ಬಿಯದ ಚಾಗದ ರೂಢಿ || ೪೪

ಚಂ || ಅಳಿಗಲರ್ಗೊಂಚಲಂ ಗಿಳಿಗೆ ಮಾಮಿಡಿಯಂ ಕಳಹಂಸೆಗಬ್ಜಕೋ
ಮಳದಳಮಂ ಪಿಕಕ್ಕೆ ಕೊನರಂ ತಿಱಿದಿಕ್ಕಿ ಪುರಾಂಗನಾಜನಂ
ಬಳೆವ ವಿನೋದದಿಂ ತಣಿಪುತಿರ್ಪುದು ನಲ್ಲರಗಲ್ದಕಾಲದೊಳ್
ಮುಳಿಯದೆ ಸಂತಮಿರ್ಕುಮೆಮಗೆಂದವಱೊಳ್ ಕಳೆಗೊಳ್ವ ಮಾೞ್ಕೆಯಿಂ     ೪೫

ವ || ಮತ್ತಂ

ಚಂ || ಅಲರ್ವಸೆಯೊಳ್ ಬೞಲ್ದುಸಿರ್ದು ತಣ್ಬುೞೆಲೊಳ್ ತಳರ್ದಿಕ್ಕೆದಾಣದೊಳ್
ನಲಿದೆಳನೀರ್ಗಳಂ ಕುಡಿದು ತುಂಬಿಯ ಗೀತಮನೊಲ್ದು ಕೇಳ್ದು ನು
ಣ್ಬಲಸಿನ ಬಾೞೆಯೀಳೆಯರನೇಱೆಲ ಮಾವಿನ ಪಣ್ಗಳಂ ಮನಂ
ನಿಲೆ ಸವಿದಲ್ಲಿ ತೀರಮೆಯುಮಂ ಮಱೆದಿರ್ಪುದು ಪಾಂಥಂಕುಳಂ   ೪೬

ಕಂ || ವನಲಕ್ಷ್ಮಿಯ ನೇತ್ರಾಂಶುಕ
ವೆನೆ ನೇತ್ರಕ್ಕೆಸೆದು ಮಿಸುಗಿ ಪಸುರ್ವಡೆದುವು ನಂ
ದನದ ಕೆಲಂಬಿಡಿದಾರ್ದ್ರಕ
ವನ ಜೀರಕವನ ಹರಿದ್ರವನ ಸಂತತಿಗಳ್           ೪೭

ವ || ಅವಕ್ಕನತಿ ದೂರದೊಳ್

ಚಂ || ಎನಗಮರ್ದಿಂಪಿನೊಳ್ ಮಧುವಿನಿಂಪು ರಸಾಯನದಿಂಪು ಕೂರೆ ಕೂ
ರ್ತಿನಿಯರ ಕೂಟದಿಂಪಮರ್ದಿನಿಂ ಪೆಣೆಯಲ್ತು ದಿಟಕ್ಕೆ ಬೀಗುವಂ
ತನುಪಮಮಾಗಿ ಬೀಗಿ ಬೆಳೆದಿಂಪಿನ ಪರ್ವಮೆನಿಪ್ಪ ಪರ್ವದಿಂ
ತನಿರಸಮೆಚ್ಚು ಪಾಯೆ ಬಗೆಗೊಳ್ವುದು ಕರ್ವಿನ ಸುರ್ವು ತೋಂಟದೊಳ್      ೪೮

ವ || ಅಲ್ಲಿ

ಚಂ || ಸ್ಫುರಿಯಿಸುವೆಮ್ಮ ಪುರ್ವೆ ನೆಱೆಗುಂ ಜಗಮಂ ಗೆಲಲಿನ್ನದೇಕೆ ನೀಂ
ಪರಿಹರಿಸೆಂದು ಮತ್ಕುಲದ ಕರ್ವಿನ ಬಿಲ್ಲನನಂಗನಿಂದಗ
ಲ್ಚಿರಿಸಿದರೀ ಪುರಾಂಗನೆಯರೆಂಬ ಕನಲ್ಕೆಯಿನಿಕ್ಷು ಕೋಟಿ ಪ
ಲ್ಮೊರೆವವೊಲಿಕ್ಷುಯಂತ್ರನಿವಹಂ ಮೊರೆವಬ್ಬರಮೆಂದುಮುಬ್ಬರಂ           ೪೯

ಉ || ಓಲಗಶಾಲೆ ಪೂಗಿಡುಗಳೋಳಿಗೆ ಜೀವಣಶಾಲೆ ಮತ್ತಭೃಂ
ಗಾಳಿಗೆ ಜೇನಶಾಲೆ ಕುಸುಮೇಷುಗೆ ಸೌರಭಸತ್ರಶಾಲೆ ತ
ಣ್ಗಾಳಿಗೆ ನಾಟ್ಯಶಾಲೆ ಕುಸುಮಾಪಚಯಪ್ರಚಳತ್ಪುರಾಂಗನಾ
ಲೋಲಕಟಾಕ್ಷಲಕ್ಷ್ಮಿಗೆನಲೊಪ್ಪುವುವಲ್ಲಿಯ ಪುಷ್ಪವಾಟಿಗಳ್      ೫೦