|| ಓಂ ನಮಃ ಸಿದ್ಧೇಭ್ಯಃ ||

ಶ್ರೀಮತ್ಪರಗಂಭೀರಸ್ಯಾದ್ವಾದಾಮೋಘಲಾಂಛನಂ
ಜೀಯಾತ್ರೈಲೋಕನಾಥಸ್ಯ ಶಾಸನಂ ಜಿನಶಾಸನಂ ||

ಕಂ || ಶ್ರೀ ಜನ್ಮಭೂಮಿ ವರಸುರ
ಭೂಜಂ ಕ್ಷೀರಾಂಬುರಾಶಿಯಂತೆ ಗಭೀರಂ
ಶ್ರೀಜೈನ ಶಾಸನಂ ಸಲೆ
ರಾಜಿಸುತಿರ್ಕಮಳರಾಜಪೂಜಿತಮಹಿಮಂ ೧

ವಿಳಸಿತ ವಿಪುಳಾಮೃತಗೋ
ಕುಲದಿಂದಂ ಸಕಲಸಸ್ಯಸಂಪದದಿಂ
ರ್ಮಳವರ್ಣದಿಂದೆ ವಿಧುಮಂ
ಡಳದಂತಿರೆ ಕೂಂಡಿಮಂಡಳಂ ಕಣ್ಗೊಳಿಕುಂ ೨

ವ || ಅದನಾಳ್ವಂ –

ಶಾ || ಸೇನಂ ಸಾಹಸ ಭೀಮಸೇನನ ಸಕೃದ್ವಿದ್ಯಾವಿಲಾಸೇನನಾ
ಜ್ಞಾನಾರೀಪ್ರಿಯವಲ್ಲಭಂ ಪೃಥುಸಭಂ ತೀವ್ರಾಂಶುತೇಜಃಪ್ರಭಂ
ನಾನಾದಾನಿ ದೃಡಾಭಿಮಾನಿ ರಣಭೂಸೇನಾನಿ ರಟ್ಟಾನ್ವಯ
ಶ್ರೀನೇತ್ರಂ ಬುಧಮಿತ್ರನುಜ್ಜಳಯಶಃಪಾತ್ರಂ ನೃಪಂ ರಂಜಿಪಂ ೩

ಆ ಸೇನಾವನಿಪಂಗಮಪ್ರತಿಮ ಲಕ್ಷ್ಮೀದೇವಿಗಂ ಪುಟ್ಟಿದಂ
ಭೂಸಂರಕ್ಷಣದಕ್ಷದಕ್ಷಿಣಭುಜಂ ವಿಧ್ವಸ್ತ ಶತ್ರುವಜಂ
ತ್ರಾಸಾನಮ್ರನೃಪಾಳ ಪಾಳಿತ ಜಯಶ್ರೀಕೇಳಿ ಶಸ್ತ್ರಾನ್ವಿತಾ
ಭ್ಯಾಸಂ ಸೂನೃತ ವಾಗ್ವಿಳಾಸನವನೀನಾಥೋತ್ತಮಂ ಕತ್ತಮಂ ೪

ಕಂ || ಆ ವಿಭುವಿನವಧು ಪದ್ಮಲ
ದೇವಿ ಕಳಾರೂಪ ವಿಭವ ಜಿನಮತದೊಳ್ವಾ
ಗ್ದೇವಿ ರತಿದೇವಿ ಲಕ್ಷ್ಮೀ
ದೇವಿ ಶಚಿದೇವಿಯೆನಿಸಿ ಮಿಗೆ ಸೊಗೆಯಿಸುವಳ್ ೫

ಶ್ರೀಪತಿ ನಾ ವಿಷ್ಣುಃ ಪೃಥು
ವೀಪತಿಯೆನೆ ಲಕ್ಷ್ಮಿದೇವನೊಗೆದಂ ವಸುದೇ
ವೋಪಮಕುತ್ತಮವಿಭುಗಂ
ಶ್ರೀಪದ್ಮಲದೇವಿಯೆಂಬ ನುತದೇವಕಿಗಂ ೬

ಚಂ || ಪ್ರಕಟಿತ ತೇಜನನ್ವಯ ಸರೋಜಸಮೂಹವಿಕಾಸಿ ಸಜ್ಜನ
ಪ್ರಕರರಥಾಂಗ ಸಮ್ಮದಕಂ ನಿಯತಾಭ್ಯುದಯಪ್ರಶೋಭಿತಾ
ಧಿಕನಿಜಮಂಡಲಂ ಜಿತ ಕಳಂಕ ಪವಿತ್ರ ಚರಿತ್ರನಾಗಿ ಚಂ
ದ್ರಿಕೆಗಧಿನಾಥನಾದನಿದು ವಿಸ್ಮಯನಾ ಪ್ರಭು ಲಕ್ಷ್ಮಿಭೂಭುಜಂ ೭

ಉ || ಶ್ರೀಯುವತೀಶ ಹೇಮಗರುಡಧ್ವಜಮಂಡಿತಮಂಡಳೇಶನಾ
ರಾವಣ ಲಕ್ಷ್ಮದಂಗೆ ತನುಜರ್ಭುಜದಂತೆ ಧರೋರುಭಾರಧೌ
ರೇಯರನೂನದಾನಜಯ ಧರ್ಮಧರರ್ವಿಭು ಕಾರ್ತವೀರ್ಯಲ
ಕ್ಷ್ಮೀಯುತ ಮಲ್ಲಿಕಾರ್ಜುನ ಮಹೀಶ್ವರರಾದರತರ್ಕ್ಯವಿಕ್ರಮರ್ ೮

ಮ || ಪರಚಕ್ರಂ ನಿಜ ವಿಕ್ರಮಕ್ಕಗಿದು ತೇಜಃಚಕ್ರಮಂ ಬಿಟ್ಟು ಕೋ
ವರ ಚಕ್ರಕ್ಕೆಣೆಯಪ್ಪಿನಂತಿರಿವಿನಂ ದಿಕ್ಟಕ್ರಮಮ ವ್ಯಾಪಿಸು
ತ್ತಿರೆ ಕೀರ್ತ್ಯಂಗನೆ ಕಾರ್ತವೀರ್ಯನಖಿಳೋರ್ವೀ ಚಕ್ರಮಂ ಚಕ್ರಿಯಂ
ತಿರೆ ದೋರ್ದಂಡದೊಳಾಂತನಚ್ಯುತಗುಣಂ ಶ್ರೀರಟ್ಟನಾರಾಯಣಂ ೯

ಮೇರು ನಭಸ್ತಳಂ ಜಳಧಿ ಮತ್ಪತಿಯುನ್ನತಿಸಹ್ಮತ್ತ್ವಗಂ
ಭೀರಗುಣಕ್ಕೆ ಮಚ್ಚರಿಪುವೆಂದಮರಾದ್ರಿಯನಿಕ್ಕೆಮೆಟ್ಟಿಯಾ
ನೀರದ ಮಾರ್ಗಮಂ ಪುದಿದು ವಾರಿಧಿಯಂ ಮಿಗೆ ದಾಂಟಿ ಕೀರ್ತಿಯಾ
ಶಾರಮಣರ್ಗೆ ಬಣ್ಣಿಪುದು ಪೆಂಪಿನಲಂಪಿನ ಕಾರ್ತವೀರ್ಯನಾ ೧೦

ಊರ್ಜಿತತೇಜನಿರ್ಜಿತಯಶಂ ಪರಿತರ್ಜಿತ ರಾಷ್ಟ್ರಕಂಟಕಂ
ನಿರ್ಜಿತ ದುರ್ಜಯಾರಿನಿವಹಂ ಕಮಳಾಧಿಪನಂತೆ ದಾನಿನಾ
ಗಾರ್ಜುನನಂತೆ ರಾವಣವಿದಾರಣ ಕಾರಣಿ ರಾಮನಂತೆ ಮಿ
ಕ್ಕರ್ಜುನನಂತೆ ರಂಜಿಪನಿಳೇಶಶಿಖಾಮಣಿ ಮಲ್ಲಿಕಾರ್ಜುನಂ ೧೧

ಕಂ || ಶ್ರೀಚಕ್ರವರ್ತಿತನುಜೆ ಕ
ಳಾಚತುರೆ ವಿಶಾಳಲೋಕಲೋಚನೆಯೆನಿಸಿ
ರ್ದೇಚಲದೇವಿ ಸತೀತ್ವ ಸು
ಲೋಚನೆಯೆನೆ ಕಾರ್ತವೀರ್ಯವಧು ಪೆಸರ್ವಡೆದಳ್ ೧೨

ವ || ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಂಡಳೇಶ್ವರಂ ಲತ್ತನೂರ್ಪುರವ ರಾಧೀಶ್ವರಂ ತ್ರಿವಳೀ ತೂರ್ಯನಿರ್ಘೋಷಣಂ ಸಿಂಧೂರ ಲಾಂಛನಂ ಸಫಳೀಕೃತ ವಿದ್ವಜ್ಜನಾಭಿ ವಾಂಛನಂ ವೀರಕಥಾಕರ್ಣನಜಾತರೋಮಾಂಚಂ ಸಾಹಿತ್ಯವಿದ್ಯಾ ವಿರಿಂಚಂ ಸುವರ್ಣಗರುಡಧ್ವಜಂ ಸಹಕಮಕರಧ್ವಜಂ ಸಂಗ್ರಾಮ ಕೌತೂಹಳೀಕೃತ ಗದಾದಂಡಂ ಕದನಪ್ರಚಂಡಂ ಸಿಂಧುರಾರಾತಿ ಬಂಧುರ ಕಬಂಧ ನರ್ತನ ಸೂತ್ರಧಾರಂ ವೈರಿ ಮಂಡಳಿಕ ಗಂಡತಳ ಪ್ರಹಾರಂ ಪರವಧೂನಂದನಂ ವಿಭವಸಂಕ್ರದನಂ ಸಾಹಸೋತ್ತುಂಗಂ ಸಮಾರಾಧಿತ ಮಹಾಲಿಂಗನಿದು ಮೊದಲಾದನೇಕ ನಾಮಾವಳಿ ವಿರಾಜಿತಂ ಶ್ರೀಕಾರ್ತವೀರ್ಯದೇವಂ ನಿಜಾನುಜಯುವರಾಜ ವೀರಮಲ್ಲಿಕಾರ್ಜುನದೇವಂ ಬೆರಸು ವೇಣುಗ್ರಾಮಾಸ್ಕಂಧಾವಾರದೊಳ್ ಸುಖದಿಂ ಸಾಮ್ರಾಜ್ಯಲಕ್ಷ್ಮಿಯನನುಭವಿಸುತ್ತಮಿರೆ

ಕಂ || ಶ್ರೀಕವಿವಿಬುಧಸ್ತ್ರೀರ
ತ್ನಾಕಳಿತಂ ಜಳಧಿಯಂದದಿಂ ಯದುಕುಳಲ
ಕ್ಷೀಕಾಂತಂ ಶ್ರೀತಕಮಳಾ
ನೀಕಂ ಹಗರಟಿಗೆನಾಡು ಜಗದೊಳಗೆಸೆಗುಂ ೧೩

ವ || ಆ ನಾಡಳ್ವಂ

ಮ || ಯದುವಂಶಂ ಶ್ರಿತರಾಜಹಂಸಮೆಸೆದಿರ್ಕುಂ ವ್ಯೋಮದಂತಲ್ಲಿಯ
ಭ್ಯುದಯಂಬೆತ್ತನುದಾತ್ತವೃತ್ತನುರುತೇಜಂ ಕೀರ್ತಿಭಾಜಂ ಸಮು
ದ್ಯದಿಳೇಜ್ಯಂ ಸುಮನಃಪ್ರಪೂಜ್ಯನಮಳಸ್ವಾಂತಂ ಜಿತಧ್ವಾಂತನೋ
ಪ್ಪಿದನಾದಂ ಕಮಳಾಧಿಪ ಪ್ರಭುತೆಯಿಂ ಶ್ರೀರೆಬ್ಬನುರ್ವೀಶ್ವರಂ ೧೪

ಆ ರೆಬ್ಬಪ್ರಭುವಿಂಗಮಗ್ರವಧು ಹೋಲಾದೇವಿಗಂ ಸ್ವಾನ್ವಯೋ
ದ್ಧಾರಂ ಧೀರನುದಾರನುದ್ಘಗುಣಸಾರಂ ಶುಂಭದಂಭೋದಿಗಂ
ಭೀರಂ ವಾಗ್ವನಿತಾಸ್ತನಸ್ಥಗಿತಹಾರಂ ಸೌಖ್ಯಸಂಪಾದಕಾ
ಚಾರಂ ಬ್ರಹ್ಮನವೋಲತರ್ಕ್ಯಮಹಿಮಂ ಬ್ರಹ್ಮಾಹ್ವಯಂ ಪುಟ್ಟಿದಂ ೧೫

ಕಂ || ಜಳನಿಧಿಗಭೀರಭೃತ ಭೂ
ವಳಯಬ್ರಹ್ಮಂಗಮುಚಿತವೇಳೋಪಮ ಚಂ
ದಲದೇವಿಗಮೊಗೆದಂ ಮಂ
ಡಳನಾಥಂ ರಾಜನಂದದಿಂ ರಾಜರಸಂ ೧೬

ಚಂ || ಪುದಿದಿರೆ ರಾಗದಿಂ ಸಕಳ ಮಂಡಳಪ್ರತಿಮಪ್ರಸಾದ ಸಂ
ಪದಮಖಿಳಾಶೆಯಂ ನೆಱೆಯೆ ಪೂರಿಸಿ ಜೈನಮತಾಮೃತಾರ್ಣಮಂ
ಪದೆದಭಿವೃದ್ಧಿಯಂ ತಳೆಯೆ ತನ್ನ ಪೆಸರ್ಗನುರೂಪಮಾಗೆಯ
ಭ್ಯುದಯಮನೆಯದಿದಂ ವಿಮಳವೃತ್ತವಿರಾಜಿತರಾಜಭೂಭುಜಂ ೧೭

ಕ್ಷಿತಿಪತಿರಾಜರಾಜನ ಮನೋರಮೆ ಮೈಳಲದೇವಿತಾಂ ಯಶ
ಶ್ವತಿ ನುತಿಯೋಗ್ಯ ಭಾಗ್ಯವತಿ ದಾನದಯಾವತಿ ಸತ್ಕಳಾಸರ
ಸವತಿಯಭಿರೂಪರೂಪಮಳಯಾವತಿ ಜೈನಪದಾಂಬುಜಾರ್ಚನಾ
ವತಿ ಪುರುಪುಣ್ಯೆ ಪುತ್ರವತಿ ರಂಜಿಸುವಳ್ಳುವಿಶಾಳ ಶೀಳದಿಂ ೧೮

ಮ || ಕುಳವಿಸ್ತಾರಕ ರಾಜರಾಜ ವಿಭುಗಂ ಶ್ರೀ ರೋಹಿಣೀಮೂರ್ತಿಮೈ
ಳಲಮಾದೇವಿಗಮಾತ್ಮಜರ್ಪತಿಹಿತ ಶ್ರೀಚಂದ್ರಿಕಾದೇವಿನಿ
ರ್ಮಳರುಕ್ಚಂದ್ರಿಕೆಯಂತೆ ಸಿಂಹಮಹಿಪಂ ಸೌಮ್ಯಂಬೊಲಾದರ್ಮಹೀ
ತಳಪೂಜ್ಯರ್ವಿಭುಧೇಜ್ಯರುಜ್ವಳಗುಣ ಶ್ರೀಕಾಂತರಾತ್ಯಂತಿಕಂ ೧೧೯

ಚಂ || ಅನುಪಮ ಶೌರ್ಯಶಾಳಿ ಯದುವಂಶಶಿರೋಮಣಿ ರಾಜರಾಜನಂ
ದನೆ ವಿಬುಧಾಭಿನಂದನೆ ಘಟೋದರ ಸುಸ್ಥಿತ ಸರ್ಪದರ್ಪ ಭಂ
ಜನೆ ಪತಿಚಿತ್ತರಂಜನೆ ಜಗನ್ನುತ ಜೈನಮತಾಮೃತಾಬ್ಧಿ ವ
ರ್ಧನಕರಚಾರುಚಂದ್ರಿಕೆ ಮಹಾಸತಿಚಂದ್ರಿಕೆ ಧನ್ಯೆ ಧಾತ್ರಿಯೊಳ್‌೨೦

ಉ || ಶ್ರೀಪತಿ ಲಕ್ಷ್ಮೀದೇವಮಹಿವಲ್ಲಭವಲ್ಲಭೆ ಕಾರ್ತವೀರ್ಯಧಾ
ತ್ರೀಪತಿ ಮಲ್ಲಿಕಾರ್ಜುನ ಮಹೀಶರ ಮಾತೃ ಮಹಾಸತೀತ್ವಸೀ
ತೋಪಮೆ ಜೈನಪೂಜನಸುರೇಂದ್ರ ವಧೂಪಮೆ ರೂಪಕಂತುಕಾಂ
ತೋಪಮೆ ರಂಜಿಪಳ್ನೆಗೞ್ದ ಚಂದಲದೇವಿ ಸಮಸ್ತಧಾತ್ರಿಯೊಳ್‌೨೧

ಮ || ಸ್ಫುರಿತಾನರ್ಘ್ಯಮಣಿ ಪ್ರಣೂತ ಕಟಿತ ಪ್ರಖ್ಯಾತದಾನೇಂದ್ರ ಭೂ
ಮಿರುಹೋರ್ವಿತಳಧಾಂ ತುಂಗಶಿಖರ ಶ್ರೀಮದ್ಭುಜಾದಂಡಮಂ
ದರದಿಂ ವೈರಿಬಳಾಬ್ಧಿಯಂ ಮಥಿಯಿಸುತ್ತುದ್ಯಜ್ಜಯಶ್ರೀವಧೂ
ವರನಾದಂ ಯದುವಂಶಭಾಳತಿಳಕಂ ಸಿಂಹಾವನೀಪಾಳಕಂ ೨೨

ಸಬಳಂಗೊಂಡು ಸಮಗ್ರ ಸಿಂಹಮಹಿಪಂ ಮೇಲ್ಪಾಯಿಸಲ್ವಾಜಿಯಂ
ಸಬಳಂ ವೈರಿಬಲಂ ಜವಂಗೆ ಕಬಳಂ ಬೇತಾಳ ಜಾಳಕ್ಕೆ ಕೊ
ಟ್ಟ ಪಿರಿ ಶ್ರೋಣಿಬಳಾರಿಗಿತ್ತ ಬಡಿನಂ ಹಾರ್ದಿರ್ದ ಹರ್ದಂಗೆ ಬೇ
ರ್ದುವೃತಕ್ಕೆತ್ತಿದ ಬುತ್ತಿಯೆಂದೊಡಹಿರ್ಮ್ಮೆಯೊದೋಱಿ ಮಾಱೂಂಪರೇ ೨೩

ಚಂ || ಜನಪತಿಸಿಂಗಿದೇವನ ಮನಃಪ್ರಿಯೆ ಭಾಗಲದೇವಿ ಭಾಗ್ಯಮೇ
ದಿನಿ ಗುಣಯೂಥನಾಥ ಮುನಿದಾನವಿನೋದಿನಿ ಸಂಶ್ರಿತಾರ್ತ್ತಿಭೇ
ದಿನ ವಿಬುಧಪ್ರಮೋದಿನಿ ಕಳಾಗಮವೇದಿನಿ ನಿತ್ಯಸತ್ಯವಾ
ದಿನಿ ದುರಿತಾಪನೋದಿನಿ ಪತಿವ್ರತೆ ಪೂಜಿತರೂಪೆ ರಂಜಿಪಳ್‌೨೪

ಉ || ಭೋಗ ಪುರಂದರಪ್ರತಿಮ ಸಿಂಹಮಹೀಪತಿಗಂ ಜಿನಾರ್ಚನೋ
ದ್ಯೋಗಸಚೀಚರಿತ್ರವತಿ ಭಾಗಲದೇವೀಗಮಾದನಾತ್ಮಜಂ
ರಾಗಸಮಾಗಮಪ್ರದಸುಮೂರ್ತಿ ಜಯಂತನತಿಪ್ರಸಿದ್ಧ ಜೈ
ನಾಗಮವಾರ್ಧಿವರ್ಧನ ಕಳಾನಿಧಿ ರಾಜರಸಂ ಸಮಂಜಸಂ ೨೫

ಮ || ಜಿನಪೂಜಾವಿಬುಧಾಧಿಪಂ ವಿಪುಳತೇಜಂ ಪ್ರಾಪ್ತಧರ್ಮಪ್ರಭಾ
ವನಯಂ ಪುಣ್ಯಜನೋತ್ತಮಂ ಗುಣಗಣಾಂಭೋರಾಸಿ ವೈರಿಪ್ರಭಂ
ಜನನುರ್ವೀಧನದಂ ಮಹೀಶ್ವರನೆನಿಪ್ಪೀ ಪೆಂಪಿನಿಂ ಲೋಕಪಾ
ಳನಿವಂ ರಾಜರಸಂ ಜಗದ್ವಳಯಮಂ ಪಾಳಿಪ್ಪುದೇನೋಪ್ಪದೇ ೨೬

ಚಂ || ಕ್ಷಿತಿ ಸಲೆ ಕೂರ್ತು ಕೀರ್ತಿಪುದು ಮೂರ್ತಿ ಮನೋಭವರಾಜಂ ಸಮ
ರ್ಚಿತಜಿನರಾಜನಂ ಯದುಕುಳಾಮೃತವಾರಿಧಿ ರಾಜನಂ ಸಮು
ನ್ನತಿ ಗಿರಿರಾಜನಂ ಗುಣವಿರಾಜಿತರಾಜಿತನೂಜ ಸಿಂಹಭೂ
ಪತಿ ಸುತರಾಜನಂ ವಿಷಮವಾಜಿ ಸುಶಿಕ್ಷಣ ವತ್ಸರಾಜಂ ೨೭

ಉ || ಪಿಂಗದವಾರ್ಯಕಾರ್ಯಮಸುಹೃನ್ನರಲೋಕಜಗಳ್ದಳಂಗೆರಾ
ಜಂಗೆ ಜಗತ್ಪ್ರವೇಧ ಜನಕಾಭ್ಯುದಯಂ ಯದುವಂಶ ಸಂಭವೋ
ತ್ತುಂಗ ಗುಣಾಚ್ಯುತಂಗೆ ವಿಜಯಪ್ರಿಯವೃತ್ತಿ ನೃಪಾಳಸಿಂಹಜಾ
ತಂಗೆ ಪರಾಕ್ರಮಂ ಪೊಸತೆ ಬಣ್ಣಿಸುವಂದು ಸಮಸ್ತ ಧಾತ್ರಿಯೊಳ್‌೨೮

ಉ || ದ್ಯೂತಮೃಗಪ್ಪಿ ಮಾಂಸಗಣಿಕಾ ಪರದಾರ ಖಳಪ್ರಸಂಗಚೌ
ರ್ಯಾತುಳ ಮಲ್ಲಮೇಷಖಗಯುದ್ಧನಿಷಿದ್ಧ ವಿನೋದನೋದ್ಯತ
ರ್ಭೂತಳನಾಥರಪ್ಪರದು ಮಾಣ್ದು ಜಿನಸ್ತನಾರ್ಚನಾಮಹೀ
ಖ್ಯಾತಮುನೀಂದ್ರದಾನರತರಪ್ಪರೆ ರಾಜನೃಪಾಳ ನಿನ್ನವೋಲ್‌೨೯

ಕಂ || ಸತಿ ಚಂದಲದೇವಿ ಪತಿ
ವ್ರತೆ ಲಕ್ಷ್ಮೀದೇವಿಯೆಂಬರೀರ್ವರುಮವನೀ
ಪತಿರಾಜನ ನೃಪನ ರಾಣಿಯ
ರತಿಶಯ ಗುಣಯುತೆಯರೆನಿಸಿನೆಗೞ್ದರ್ಜಗದೊಳ್‌೩೦

ವ || ಸ್ವಸ್ತಿ ಸಮಸ್ತ ಪ್ರಶಸ್ತಿಸಹಿತ ಶ್ರೀಮನ್ಮಹಾಮಂಡಳೇಶ್ವರಂ ಪುಪಣಪುರ ವರಾಧೀಶ್ವರಂ ಯದುಕುಳಾಂಬರದ್ಯುಮಣಿ ಬುಧಜನಚಿಂತಾಮಣಿ ನಿಜಭುಜಾಸಿನಿರ್ದಳಿತ ರಿಪುನೃಪಕಂಟಕದಳಂ ನರಲೋಕ ಜಗದ್ದಳಂ ಅನವರತ ಜಿನಸವನಸುರಭಿ ಸಲಿಲಪವಿತ್ರೀ ಕೃತೋತ್ತಮಾಂಗಂ ಧರ್ಮಕಥಾಪ್ರಸಂಗಂ ಜಿನಸಮಯ ಸುಧಾರ್ಣವ ಸುಧಾಕರಂ ಸಮ್ಯಕ್ತತ್ವರತ್ನಾಕರನೆನಿಸಿ ನೆಗೞ್ದ –

ಉ || ಕ್ಷತ್ರಿಯಮಸ್ತಕಾಭರಣ ರಾಜನೃಪಂ ವಿಭುಸಿಂಹಸೂನು ರ |
ತ್ನತ್ರಯ ಮೂರ್ತಿ ನಿರ್ಮಳಿನ ಧರ್ಮಮೆನುತ್ತದನೊಲ್ದು ಪೇೞ್ವವೋ ||
ಲ್ಧಾತ್ರಿಗೆ ಮಿಕ್ಕ ಕಲ್ಪೊಳೆಯೊಳೆತ್ತಿಸಿದಂ ಜಿನಶಾಂತಿಗೇಹಮಂ |
ನೇತ್ರವಿಚಿತ್ರಮಂ ಮಹಿಕಿರೀಟಮನಪ್ರತಿಮತ್ರಿಕೂಟಮಂ || ೩೧ ||

ವ || ಅಂನಂತಸುಖಶ್ರೀಕಾಂತಂ ಶಾಂತಿನಾಥ ಸಮುತ್ತುಂಗ ಭೃತ್ಯನಿಧಾನಮಂ ಕನಕಕಳಶಮರಕತೋರಣಮಾನಸ್ತಂಭವಿರಾಜಮಾನಮಂ ರಾಜರಸಂ ಸಿಂದನ ಕಲ್ಪೊಳೆಯಲ್ಲಿ ಮಾಡಿಸಿ ತನ್ನ ಗುರುಗಳುಂ ಜಗದ್ಗುರುಗಳುಮೆನಿಸಿದ ಶುಭಚಂದ್ರ ಭಟ್ಟಾರಕ ದೇವರ್ಗೆ ಕೊಟ್ಟಿನವರ ಗುರುಕುಳಕ್ರಮಮೆಂತೆನೆ –

ಕಂ || ಜಯನಿಳಯ ಕುಂದಕುಂದಾ
ನ್ವಯ ವಿಶ್ರುತಮೂಲಸಂಘದೇಶಿಕ ಪೂರ್ಣೋ
ದಯ ಪುಸ್ತಕಗಚ್ಛದೊಳತಿ
ಶಯಮೆನೆ ಹನಸೋಗೆಯೆಂಬ ಬೞಿ ಬಗೆಗೊಳಿಕುಂ ೩೨

ಗುರುಕುಳತಿಳಕರ್ಪಾವನ
ಚರಿತರ್ಗುಣಭರಿತರಲ್ಲಿ ನೆಗೞ್ದರ್ವಿಜಿತ
ಸ್ಮರಮಲಧಾರಿಮುನೀಂದ್ರ
ರ್ಚರಣಾಂಬುಜನತನರೇಂದ್ರರಪಗತತಂದ್ರರ್‌೩೩

ಚ || ಪದನಖಸಂಖುಳಂ ವಿಷಮಬಾಣ ವಿಷಾಹಿಮಹಾವಿಷಾಪಹಾ|
ರದ ಮಣಿ ನಾಮದಕ್ಕರಮೆ ಮೋಹಪಟುಗ್ರಹಭೇದಿ ಮಂತ್ರಮಂ
ಗದಮಳಮಾಜವಂ ಜವರುಜಾಹರಣೌಷಧಮೆಂದೋಡೆನನೆಂ
ಬುದೊ ಮಲಧಾರಿದೇವಮುನಿಪೋತ್ತಮ ಭಾವತಪಃಪ್ರಭಾವಮಂ ೩೪

ಉ || ಶಾಂತರಸಾವತಾರ ಮಲಧಾರಿ ಮುನೀಶ್ವರರಗ್ರಶಿಷ್ಯ ಸೈ
ದ್ಧಾಂತಿಕ ನೇಮಿಚಂದ್ರನುರುಧರ್ಮರಥ ಶ್ರುತವಾರ್ಧಿ ನೇಮಿಚಂ
ದ್ರಂ ತಮಮಂ ನಿವಾರಿಪ ಕಳಾಗುಣಭದ್ರನಮಾನುಷಾಮೃತ
ಸ್ವಾಂತ ಸಮಂತಭದ್ರನೆನೆ ಬಣ್ಣಿಪರಾರಕಳಂಕವತ್ಸನಂ ೩೫

ಶಾ || ಆ ಸೈದ್ಧಾಂತಿಕ ನೇಮಿಚಂದ್ರಯತಿವರ್ಯಾಚಾರ್ಯ ಶಿಷ್ಯರ್ಗುಣಾ
ವಾಸ ಶ್ರೀಶುಭಚಂದ್ರಭಾಸುರಯಶೋಭಟ್ಟಾರಕರ್ವಿಶ್ವಧಾ
ತ್ರೀ ಸಂಪೂಜಿತ ಶೀಳಧಾರಕರುದಗ್ರಾನಂಗ ಸಂಹಾರಕ
ರ್ಶ್ರೀಸದ್ದರ್ಶನ ಬೋಧವೃತ್ತ ಪದವೀ ವಿಸ್ತಾರನಿಸ್ತಾರಕರ್‌೩೬

ಮ || ಶುಭಚಂದ್ರಂ ಸ್ವಗುಣೋಲ್ಲಸತ್ಕುವಳಯಂ ಶ್ರೀಚಂದ್ರಿಕಾ ಶುದ್ಧವೃ
ತ್ತಿಭವ ಪ್ರಾಭವವದಿಂ ದಿಗಂಬರಕುಳ ಶ್ರೀವೃದ್ಧಿಯಂ ಮಂಡಳ
ಪ್ರಭು ಸಂಪೂಜಿತ ಪಾದನುಜ್ವಳ ಗುಣಾಢ್ಯಂ ಶಾಂತರೂಪಂ ಕಳಾ
ವಿಭವಾತ್ಯುನ್ನತವೃತ್ತನಭ್ಯುದಯಯುಕ್ತಂ ಮಾೞ್ಪುದೇನೋಪ್ಪದೇ ೩೭

ಉ || ಮಾರಮದಾಪಹಾರಿ ಪರಮೋಗ್ರತಪಶ್ಯುಭಚಂದ್ರದೇವಭ
ಟ್ಟಾರಕಶಿಷ್ಯರೀ ಲಲಿತಕೀರ್ತಿ ಸಮುನ್ನತ ನಾಮಧೇಯಭ
ಟ್ಟಾರಕರಿಂದು ಸಲ್ಲಲಿತಕೀರ್ತಿಗಳನ್ವಿತಶಾಂತಮೂರ್ತಿಗಳ್‌
ಸಾರಚತುಷ್ಪಯಾರ್ಥಚಯವೇದಿಗಳುತ್ತಮ ಸತ್ಯವಾದಿಗಳ್‌೩೮

ವ || ಸ್ವಸ್ತಿ ಸಮಸ್ತಗುಣಸಂಪನ್ನರುಂ ಭವ್ಯಪ್ರಸನ್ನರುಂ ಚಂದಲದೇವಿವಂದಿತ ಪದಾರವಿಂದರುಂ ನಿಜಾತ್ಮಭಾವನಾಗೀಱ್ಪಂಡರುಂ ಶ್ರೀರಾಜನೃಪಾಳ ಸುಪ್ರತಿಷಿತ ಶಾಂತಿನಾಥದೇವರ ಬಸದಿಯಾಚಾರ್ಯರುಂ ಮಂಡಳಾಚಾರ್ಯರುಮಪ್ಪ ಶುಭಚಂದ್ರ ಭಟ್ಟಾರಕದೇವರ್ಗೆ ಶ್ರೀಕಾರ್ತವೀರ್ಯದೇವಂ ಆ ಶಾಂತಿನಾಥದೇವರಂಗಭೋಗಕ್ಕಂ ರಂಗಭೋಗಕ್ಕಮಾ ಬಸದಿಯ ಖಂಡಸ್ಫುಟಿತ ಜೀರ್ಣೋದ್ಧರಣಕ್ಕಮಲ್ಲಿರ್ಪ ಮುನಿಜನಂಗಳಾಹಾರಾಭಯಭೈಷಜ್ಯಶಾಸ್ತ್ರದಾನಕಂ ಶಕವರ್ಷಂ ೧೧೨೭ನೆಯ ರಕ್ತಾಕ್ಷಿ ಸಂವತ್ಸರದ ಪೌಷ್ಯ ಶುದ್ಧ ಬಿದಿಗೆ ಶನಿವಾರದಂದುತ್ತರಾಯಣ ಸಂಕ್ರಮಣದಲ್ಲಿ ಕೂಂಡಿ ಮೂಱುಸಾಸಿರದ ಬೞಿಯ ಕುಱುಂಬೆಟ್ಟ ಗಂಪಣದೊಳಗಣಸಿಂದನ ಕಲ್ಪೊಳೆಯಲ್ಲಿಯ ಕಳಗಡಿಯರ ಸಿಂದಗಾಂವುಂಡಂ ಮುಖ್ಯವಾಗಿ ಹನ್ನೀಬರ್ಗಾವುಂಡುಗಳಱೆಯೆ ಹನ್ನೆರಡು ತಪ್ಪಡಿಯ ಕುಱುಂಬೆಟ್ಟ ಗೋಲಿಂದೆರಡು ಸಹಸ್ರ ಕಂಬಕೆಯ್ಯಂ ಧಾರಾ ಪೂರ್ವಕಂ ಸರ್ವನಮಸ್ಯವಾಗಿ ಕೊಟ್ಟನಾಕೆಯ್ಯ ಸೀಮೆ [|] ಊರಿಂ ಬಡಗಲ್‌ಕಂಕಣನೂರ ಹೆದ್ದಾರಿಯಿಂ ಮೂಡಲವಿಲ್ಮಹಳ್ಳದ ಮುರುವಿನಲ್ಲಿ ನೈರುತ್ಯದ ಕೋಣೋಳ್ನಟ್ಟ ಕಲ್ಲಲ್ಲಿಂ ಬಡಗಮುಖಂ ಬಿಳಿಯ ಬಾವಿಯಿಂ ಮೂಡಲಾಗಿ ಪಡುವಣ ಸೀಮೆನಡಿಯಲ್ಕೆಂಮೊರಡಿಯಲ್ಲಿ ವಾಯವ್ಯದ ಕೋಣೋಳ್ನಟ್ಟ ಕಲ್ಲಲ್ಲಿಂ ತೆಂಕಮುಖಂ ಪಂಚವಸದಿಯ ಮಾನ್ಯದಿಂ ಪಡುವಲಾಗಿ ಮೂಡಣ ಸೀಮೆನಡಿಯಲ್‌ನವಿಲ ಹಳ್ಳದಲ್ಲಿ ಆಗ್ನೇಯ ಕೋಣೋಳ್ನಟ್ಟ ಕಲ್ಲಲ್ಲಿಂ ಪಡುಮುಖಂ ತೆಂಕಣಸೀಮೆ ನವಿಲ ಹಳ್ಳಂ [||] ಆ ಬಸದಿಯ ಸಂಬಂಧದ ಮನೆಯ ನಿವೇಶನವಿಂಮೋಲನುಂ ಗೇಣು [|] ಬಾಚೆಯ ವಿಢಿಯ ರಾಜಹಸ್ತದಲ್‌ಬಸದಿಯಿಂ ಬಡಗಲ್ ರಾಜವೀಥಿಯಿಂ ಮೂಡಲ್‌ಪಡುವೆಣೆಕ್ಕೆಯ ಹಸ್ತಂ ನಾಲ್ವತ್ತು ಸಿರಿವಾಗಿಲ ಕಲ್ಲಿಂ ಮೂಡಲ್‌ಪಂಚವಸದಿಯ ಕೇರಿಯಲ್ಲಿಗೆ ಬಡಗಣಕ್ಕೆಯ ಹಸ್ತವಿಪ್ಪತ್ತಾಱು ಆ ಕೇರಿಯಂ ಪಡುವಣಭಾಗಂ ಬಿಡಿದು ಮೂಡಣಕೈಯ ಹಸ್ತನಾಲ್ವತ್ತು ತೆಂಕಣೆಕೈಯ ಹಸ್ತ ಐವತ್ತೆರಡಾ ಮಾನ್ಯಡೊಳಗಣಂಗಡಿ ನಾಲ್ಕು ಗಾಣವೊಂದಾ ಬಸದಿಯ ಬಣಬೆಯ ನಿವೇಶನವಯ್ದು [|] ಊರಿಂ ಪಡುವಲ್‌ಹೂದೋಂಟದ ಕಂಬಂಮೂವತ್ತು [||] ಮತ್ತಮಾ ವೂರ ಸಂತೆಯಂ ಮಾಡಲ್‌ವೇಡಿ ಬೆಳಗಲೆ ಮುಖ್ಯವಾಗಿ ನಾಲ್ಕು ಪಟ್ಟಣದ ಸೆಟ್ಟಿಯರುಂ ಮಹಾನಡಾಗಿ ನೆರೆದಿರ್ದಲ್ಲಿ ಆ ಶಾಂತಿನಾಥದೇವರ ನಿತ್ಯಾಭಿಷೇಕಕ್ಕಮಷ್ಟ ವಿದಾರ್ಚನೆಗಂ ಸರ್ವಬಾಧಾಪರಿಹಾರವಾಗಿ ಬಿಟ್ಟ ಎತ್ತು ಕತ್ತೆ ಕೋಣಂ ಮೊದಲಾದಱುವತ್ತು ೬೦ || ಮತ್ತಮೇೞುವರೆ ಹಂನೊಂದುವರೆಯ ಸಮಸ್ತ ಮುಂಮರಿದಂಡಂ ಮುಖ್ಯವಾಗಿ ನಾಡುಗಳ್‌ಬಿಟ್ಟಾಯದ ಕ್ರಮಮೆಂತೆಂದೊಡೆ [|] ಸಕಳ ಧಾನ್ಯಮಾಡುವುದು ಬಂದಡಂ ಹೇಱೆಂ ಗೊಂನಂ [|] ಭಂಡಿಗೆ ಬಳ್ಳವೆರಡು [|] ಹಸರಕ್ಕಡಕೆ ಅಯ್ದು [|] ಹೇಱೆಂಗೆಲೆ ನೂಱು [|] ಹೊತ್ತಳ ಕಯ್ವತ್ತು [|] ಹಾಡರ್ಕೆಸೊಲ್ಲಿಗೆ ಎಂಣೆ [|] ಒಲೆಯ ಹೊಣೆ ಮಾಱಿತಕ್ಕೆ ಒಂದು ಕಟ್ವೊಲೆ [|] ಕಿರುಕುಳವೇನು ಮಾಱಿದಡಂ ಸುಟ್ಟುಗಾಯಂ ಹಿಡಿವತ್ತಿ [|] ಕಂಪೆಗೆ ಮಡಿಕೆ ಒಂದು ||

ಶಾ || ಶ್ರೀಜನ್ಮಾಯತ ಮೂರ್ತಿ ತೀರ್ಥಮಹಿಮಾವಿಸ್ತಾರಿ ಧಾತ್ರಿಸ್ಫುರ
ತ್ತೇಜಶ್ಚಕ್ರಧರಂ ಜಗಂನುತಯಶಂ ತಂನಂದದಿಂದೆಂದುರಾ
ರಾಜಿಪ್ಪೀ ಜಿನಶಾಂತಿನಾಥನವನೀನಾಥ ಪ್ರಣೂತೋದಯಂ
ರಾಜಕ್ಷ್ಮಾಪತಿಗೀಗೆ ಬೇಱ್ಪ ವರವಂ ಚಂದ್ರಾರ್ಕತಾರಂಬರಂ ೩೯

ಕಂ || ಲಲಿತ ಪದಾರ್ಥಾಳಂಕೃತಿ
ಗಳಿನೊಸರ್ವ ರಸಂಗಳಿಂದೆ ಬುಧರೊಳ್ಪುಳಕಾ
ವಳಿ ಸಸ್ಯಮೊಗೆಯೆ ಕವಿಕುಳ
ತಿಳಕಂ ಶಾಸನಮನೊಲ್ದು ಪೇೞ್ಹಂ ಪಾರ್ಶ್ವಂ ೪೦

ಬಹುಭಿರ್ವಸುಧಾದತ್ತಾ ರಾಜಭಿಸ್ಸಗರಾದಿಭಿ: [|] ಯಸ್ಯಯಸ್ಯ ಯದಾ ಭೂಮೀಃ ತಸ್ಯ ತಸ್ಯ ತದಾಫಲಂ || ಗಣ್ಯಂತೇ ಪಾಂಸವೋ ಭೂಮೆರ್ಗಣ್ಯಂತೇ ವೃಷ್ಟಿ ಬಿಂದವಃ [|] ನಗಣ್ಯತೇ ವಿಧಾತ್ರಾಪಿ ಧರ್ಮಸರಂಕ್ಷಣೇ ಫಲಂ || ಸ್ವದತ್ತಾಂ ಪರದತ್ತಾಂವಾ ಯೊಹರೇತವಸುಂಧರಾಂ [|] ಷರ್ಷ್ಟೀರ್ವರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿ: [|] ಸಾಮಾನ್ಯೋಯಂ ಧರ್ಮಸೇತುರ್ನೃಪಾಣಾಂ ಕಾಲೇಕಾಲೇ ಪಾಲನೀಯೋ ಭವದ್ಫಿಃ[|] ಸರ್ವಾನೇತಾನ್ಭಾವಿನಃ ಪಾರ್ಥಿವೇಂದ್ರಾ ನ್ಭೂಯೋ ಭೂಯೋ ಯಾಚತೇ ರಾಮಚಂದ್ರಃ || ಮದ್ವಂಶಜಾಃ ಪರಮಹೀಪತಿವಂಶಜಾ ವಾ ಪಾಪದಪ್ರೇತಮನಸಾ ಭುವಿ ಭೂಮಿಪಾಲಾಯೇ ಪಾಳಯನ್ತಿಮಮ ಧರ್ಮಮಿಮಂ ಸಮಗ್ರಂ ತೇಭ್ಯೋ ಮಯಾ ವಿರಚಿತಾಂ (ತೋಂ) ಜಳಿರೇಷಮೂರ್ದ್ಧ್ನಿ || ಮಂಗಳ ಮಹಾ ಶ್ರೀ ಶ್ರೀ [||] ಅರ್ಹತೇ ನಮಃ ||