ಅಘಾತಿ ಕರ್ಮ : ಆತ್ಮನ ಗುಣಗಳಿಗೆ ಘಾತಿಯುಂಟು ಮಾಡದ ಕರ್ಮ, ಇದು ನಾಲ್ಕು ವಿಧ – ಆಯುಃಕರ್ಮ, ನಾಮಕರ್ಮ, ಗೋತ್ರ ಕರ್ಮ, ವೇದನೀಯ ಕರ್ಮ.

ಅಣಿಮಾ : ತಪ್ಪಸ್ಸಿನಿಂದ ದೊರಕುವ ಎಂಟು ಸಿದ್ಧಿಗಳಲ್ಲಿ ಒಂದು. ಅತ್ಯಂತ ಸೂಕ್ಷ್ಮ ರೂಪವನ್ನು ಹೊಂದಬಲ್ಲ ಶಕ್ತಿ.

ಅನಂತ ಚತುಷ್ಟಯ : ತೀರ್ಥಂಕನಿಗೆ ಕರ್ಮ ಪರಿಣಾಮ ನಷ್ಟವಾದ ಬಳಿಕ ಲಭಿಸುವ ನಾಲ್ಕು ಗುಣಗಳು – ಅನಂತ ಜ್ಞಾನ, ಅನಂತ ಸುಖ, ಅನಂತವೀರ್ಯ.

ಅನಂತಾನುಬಂಧಿ : ಹುಟ್ಟು ಸಾವುಗಳ ಸಂಸಾರದಲ್ಲಿ ಜೀವನವನ್ನು ಅನಂತಕಾಲದ ವರೆಗೆ ಸುತ್ತಾಡಿಸುವ ಕ್ರೋಧ, ಮಾಯಾ, ಮಾನ, ಲೋಭ ಎಂಬ ನಾಲ್ಕು ಕಷಾಯಗಳು.

ಅನುಯೋಗ ಚತುಷ್ಟಯ : ಜೈನಾಗಮದ ಪ್ರಥಮಾನುಯೋಗ, ಕರಣಾನುಯೋಗ, ಚರಣಾನುಯೋಗ, ದ್ರವ್ಯಾನುಯೋಗ ಎಂಬ ನಾಲ್ಕು ವಿಭಾಗಗಳು.

ಅಭಿಯೋಗ್ಯ : ಇಂದ್ರನ ಪರಿವಾರ ದೇವತೆಗಳಿಗೆ ಸೇರಿದ ಒಂದು ವರ್ಗ. ಸೇವಕರಿಗೆ ಸಮಾನರಾದ ದೇವತೆಗಳು.

ಅವಧಿ ಜ್ಞಾನ : ಮುಂದೆ ವಾಸಮಾಡುವ ಭೂಮಿ, ಈಷತ್‌ಪ್ರಾಗ್ಭಾರವೆಂದೂ ಕರೆಯುತ್ತಾರೆ. ಇದು ಜನನ ನಾರಕರಿಗೆ ಸಹಜವಾಗಿರುತ್ತದೆ. ಇದರಲ್ಲಿ ದೇಶಾವಧಿ, ಪರಮಾವಧಿ, ಸರ್ವಾವಧಿ ಎಂದು ಮೂರು ವಿಧ.

ಅಷ್ಟಮಭೂಮಿ : ಸಿದ್ಧರು ವಾಸಮಾಡುವ ಭೂಮಿ, ಈಷತ್‌ಪ್ರಾಗ್ಭಾರವೆಂದೂ ಕರೆಯುತ್ತಾರೆ. ಇದು ಜನನ ಮರಣಾದಿ ವಿಕಾರಗಳಿಲ್ಲದ ಅತೀಂದ್ರಿಯ ಸುಖ ಮತ್ತು ಅನಂತಜ್ಞಾನಗಳಿರುವ ಭೂಮಿ.

ಅಷ್ಟವಿಧಾರ್ಚನೆ : ನೀರು, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲ ಎಂಬ ಎಂಟು ಬಗೆಯ ವಸ್ತುಗಳಿಂದ ಪೂಜಿಸುವುದು.

ಅಷ್ಟಾಹ್ನಿಕ ಪೂಜೆ : ಶ್ರಾವಕರು ಅಷ್ಟಮಿಯಿಂದ ಹುಣ್ಣಿಮೆಯ ವರೆಗೆ ಎಂಟು ದಿನಗಳ ಕಾಲ ಮಾಡುವ ಜಿನಪೂಜೆ.

ಆತ್ಮರಕ್ಷಕ : ಇಂದ್ರನ ವೈಭವ ಪ್ರದರ್ಶನಕ್ಕೆ ಆತನ ಸಮೀಪದಲ್ಲಿಯೇ ಇರುವ ಪರಿವಾರ ದೇವತೆಗಳ ಒಂದು ವರ್ಗ.

ಆರ್ತಧ್ಯಾನ : ಇಷ್ಟವಿಲ್ಲದ ವಸ್ತುಗಳನ್ನು ಬಿಡಬೇಕೆಂಬ ಮತ್ತು ಇಚ್ಛಿಸಿದ ವಸ್ತುಗಳು ಬೇಕೆಂಬ ಅಪೇಕ್ಷೆಯಿಂದ ಅವುಗಳನ್ನು ಚಿಂತಿಸುತ್ತಿರುವುದು.

ಆರು ಅವಶ್ಯಕಗಳು : ೧. ಸಾಮಾಜಿಕ – ಎಲ್ಲ ಜೀವಗಳಲ್ಲಿಯೂ ಸಮತ್ವ ಭಾವನೆ. ೨. ಚತುರ್ವಿಂಶತಿ ಸ್ತವನ – ಇಪ್ಪತ್ನಾಲ್ಕು ತೀರ್ಥಂಕರರನ್ನು ಸುತ್ತಿಸುವುದು. ೩. ವಂದನಾ – ಪಂಚಪರಮೇಷ್ಠಗಳಿಗೆ ವಂದಿಸುವುದು. ೪. ಪರಿಕ್ರಮಣ – ಹತ್ತಿದ ದೋಷಗಳಿಗಾಗಿ ಪಾಶ್ಚಾತ್ತಾಪ. ೫. ಪ್ರತ್ಯಾಖ್ಯಾನ – ಪಾಪಕರ್ಮಗಳನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು. ೬. ಕಾಯೋತ್ಸರ್ಗ – ದೇಹಾಭಿಮಾನ ತೊರೆದು ಆತ್ಮಧ್ಯಾನದಲ್ಲಿರುವುದು.

ಆಸನ ಕಂಪ :ತೀರ್ಥಂಕರನ ಜನನ ಮುಂತಾದ ವಿಶೇಷ ಸಂದರ್ಭಗಳಲ್ಲಿ ಪೂರ್ವ ಸೂಚನೆ ಎಂಬಂತೆ ದೇವೇಂದ್ರನಿಗೆ ಕುಳಿತ ಪೀಠ ಅಗಲುವುದು.

ಇಪ್ಪತ್ತೆಂಟು ಮೂಲ ಗುಣಗಳು : ಐದು ಪಂಚ ಮಹಾ ವ್ರತಗಳು, ಐದು ಪಂಚ ಸಮಿತಿಗಳು, ಐದು ಪಂಚೇಂದ್ರಿಯ ನಿಗ್ರಹ, ಆರು ಆವಶ್ಯಕಗಳು, ಸ್ನಾನಾಭಾವ , ಭೂಮಿ ಶಯನ, ನಗ್ನತ್ವ, ಕೇಶೋತ್ಪಾಟನ , ಏಕಾದಶನ, ದಂತಧಾವನಾಭಾವ, ಸ್ಥಿತಾಶನ.

ಈರ್ಯಾಪರಿಶುದ್ಧಿ : ನಡೆಯುವಾಗ ಜೀವ ಹಿಂಸೆ ಆಗದಿರಲೆಂದು ನೆಲವನ್ನು ನಾಲ್ಕು ಮೊಳೆಗಳಷ್ಟು ಮುಂದೆ ಸೂಕ್ಷ್ಮವಾಗಿ ನೋಡುತ್ತ ನಡೆಯುವುದು.

ಏಳು ಬೆಸನಗಳು : ಕೋಪದಿಂದ ಹುಟ್ಟುವ ವಾಕ್ಪಾರುಷ್ಯ, ಅರ್ಥದೂಷಣ, ದಂಡ ಪಾರುಷ್ಯ ಎಂಬ ಮೂರು ವೆಸನಗಳು ಮತ್ತು ಕಾಮದಿಂದ ಹುಟ್ಟುವ ಮೃಗಯಾ ವೆಸನ, ದ್ಯೂತ ವೆಸನ, ಪಾನ ವೆಸನ ಎಂಬ ನಾಲ್ಕು ವೆಸನಗಳು.

ಏಳು ರಾಜ ಪ್ರಕೃತಿಗಳು : ರಾಜ (ಸ್ವಾಮಿ), ಅಮಾತ್ಯ (ಮಂತ್ರಿ), ಜನಪದ (ಪ್ರಜೆ), ದುರ್ಗ (ರಾಜ್ಯ ರಕ್ಷಣೆ), ದಂಡ (ಸೈನ್ಯ), ಕೋಶ (ಅರ್ಥ ಸಂಪತ್ತು), ಮಿತ್ರ.

ಕರ್ಮನಿರ್ಜರೆ : ಕರ್ಮ ಹರಿದು ಬೀಳುವುದು.

ಕಷಾಯ : ಕರ್ಮಫಲವನ್ನು ಬೆಳೆಸುವ ಕ್ರೋಧ, ಮಾನ, ಮಾಯ, ಲೋಭ ಎಂಬ ದೋಷಗಳು.

ಕಾಯೋತ್ಸರ್ಗ : ಕೈ ಇಳಿಬಿಟ್ಟುಕೊಂಡು ದೇಹವನ್ನು ನೇರವಾಗಿ ಮತ್‌ಉ ನಿಶ್ಚಲವಾಗಿರಿಸಿಕೊಂಡು ನಿಲ್ಲುವುದು.

ಕ್ಷಪಣಕ : ಜೈನ ಸನ್ಯಾಸಿ .

ಕಾಲಲಬ್ಭಿ : ಸಮ್ಯಗ್ದೃಷ್ಟಿ ದೊರೆಯುವ ಕಾಲ ಹತ್ತಿರವಾಗುವುದು.

ಕೇವಲ ಜ್ಞಾನ : ಪರಿಶುದ್ಧವೂ ಪರಿಪೂರ್ಣವೂ ಸರ್ವವ್ಯಾಪಿಯೂ ಆದ ಅನಂತ ಜ್ಞಾನ.

ಕೇವಲಿ : ಕೇವಲಜ್ಞಾನ ಪಡೆದವ.

ಗಣಧರ : ಶ್ರೇಷ್ಠವಾದ ಜ್ಞಾನದರ್ಶನಗಳನ್ನು ಹೊಂದಿದ ತೀರ್ಥಂಕರನ ಮುಖ್ಯ ಶಿಷ್ಯ.

ಘಾತಿಕರ್ಮ : ಅನಂತಗುಣಗಳಿಗೆ ಕೇಡುಂಟುಮಾಡುವ ಕರ್ಮಗಳು. ಇವು ಜ್ಞಾನಾವರಣೀಯ, ದರ್ಶನಾವರಣೀಯ, ಮೋಹನೀಯ, ಅಂತರಾಯ ಎಂದು ನಾಲ್ಕು ವಿಧ.

ಚತುರ್ಗತಿ : ಕರ್ಮಫಲದಿಂದ ಜೀವಿಯು ಅಲೆದಾಡುವ ನಾಲ್ಕು ನೆಲೆಗಳು – ದೇವಗತಿ, ಮನುಷ್ಯಗತಿ, ತಿರ್ಯಗ್ಗತಿ, ನರಕಗತಿ.

ಚತುರ್ದಶಗುಣ : ವರ್ಣ, ಅಲಂಕಾರ, ಸ್ವರ, ಪದ, ಸಮೀಪ, ಉಚ್ವಾಸ, ಸಭಾ, ಆದೇಶ, ತಾಳ, ಲಯ, ಯತಿ, ಫಣಿಸ್ಥಾನ, ದೇಶ, ಕಾಲಜ್ಞತೆ.

ಚತುರ್ನಿಕಾಯ ದೇವತೆಗಳು : ಭವನವಾಸಿ, ಜ್ಯೋತಿಷ್ಯ, ವ್ಯಂತರ, ವೈಮಾನಿಕ ಎಂಬ ನಾಲ್ಕು ಬಗೆಯ ದೇವತೆಗಳ ಸಮೂಹ.

ಚರಮ ದೇಹ : ಮೋಕ್ಷಕ್ಕೆ ಮುನ್ನ ಪಡೆಯುವ ಕಡೆಯ ಸ್ಥೂಲ ದೇಹ.

ಚಾರಣ ಋದ್ಧಿ : ಆಕಾಶ, ನೀರು ಮೊದಲಾದವುಗಳಲ್ಲಿ ನಡೆಯುವ ಶಕ್ತಿ.

ಛದ್ಮಸ್ಥಕಾಲ :ಸರ್ವಜ್ಞನಾಗುವುದಕ್ಕೆ ಮುಂಚಿನ ಅವಸ್ಥೆ.

ಜ್ಯೋತಿಷ್ಕ : ದೇವತೆಗಳ ನಾಲ್ಕು ವರ್ಗಗಳಲ್ಲಿ ಒಂದು. ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳ್ಳಲ್ಲಿ ಇರುವವರು ಜ್ಯೋತಿಷ್ಕ ದೇವತೆಗಳು.

ತೈಜಸ ಶರೀರ : ಲಬ್ಧಿ ವಿಶೇಷದಿಂದ ಉಂಟಾಗುವ ಜನ್ಮ. ಇದು ಶುಭ ತೈಜಸ, ಅಶುಭ ತೈಜಸ ಎಂದು ಎರಡು ವಿಧ.

ತ್ರಸ ಜೀವ : ಎರಡು ಅಥವಾ ಹೆಚ್ಚು ಇಂದ್ರಿಗಳನ್ನುಳ್ಳ, ತಾವಾಗಿಯೇ ಚಲಿಸಬಲ್ಲ ಜೀವಿಗಳು. ಇವು ನಾಲ್ಕು ವಿಧ – ದ್ವೀಂದ್ರಿಯ ಜೀವ, ತ್ರೀಂದ್ರಿಯ ಜೀವ ಚತುರಿಂದ್ರಿಯ ಜೀವ ಪಂಚೇಂದ್ರಿಯ ಜೀವ.

ತ್ರಿಗುಪ್ತಿ : ಮನ ವಚನ ಕಾಯಗಳನ್ನು ನಿಗ್ರಹಿಸಿ ಅವು ಧರ್ಮಧ್ಯಾನದಲ್ಲಿ ನಿರತವಾಗುವಂತೆ ಮಾಡುವುದು.

ತ್ರೈವಿದ್ಯ : ಷಟ್ಖಂಡಾಗಮದ ಮೊದಲ ಮೂರು ಖಂಡಗಳನ್ನು ಆಳವಾಗಿ ಅಭ್ಯಾಸ ಮಾಡಿದವನು.

ದಶಧರ್ಮ : ರಾಗ ದ್ವೇಷಗಳಿಂದ ಕೂಡಿರುವಂಥ ಮನಸ್ಸಿನ ಉಪಶಮನಕ್ಕಾಗಿ ಬಳಸುವ ಹತ್ತು ಧರ್ಮಗಳು – ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚವ್ಯ, ಉತ್ತಮ ಬ್ರಹ್ಮಚರ್ಯ.

ದಿವ್ಯಧ್ವನಿ : ತೀರ್ಥಂಕರರು ಸಮವಸರಣದಲ್ಲಿ ಕುಳಿತ ಲೋಕ ವಿಹಾರ ಮಾಡುತ್ತ ಭೋಧಿಸುವ ಧಮಧಬೋಧೆ. ಇದು ಚತುರ್ಗತಿಯಲ್ಲಿರುವ ಪ್ರಾಣಿಗಳಿಗೆಲ್ಲ ಅವರವರ ಭಾಷೆಯಲ್ಲಿಯೇ ತಿಳಿಯುತ್ತದೆ. ಇದು ತೀರ್ಥಂಕರರ ಮುಖದಿಂದ ಹೊರಟ ದಿವ್ಯವಾಣಿ, ಸಮಸ್ತ ಜೀವಿಗಳ ಅಜ್ಞಾನವನ್ನು ನಿವಾರಿಸುವಂಥದ್ದು, ಸಂಧ್ಯಾತ್ರಯಗಳಲ್ಲಿ ನವಮಹೂರ್ತ ಕಾಲದಲ್ಲಿ ಮಾತ್ರ ಹೊರಟುವಂಥದ್ದು, ಒಂದು ಯೋಜನೆ ದೂರದ ವರೆಗೆ ಕೇಳುವಂಥದ್ದು.

ಧರ್ಮಧ್ಯಾನ : ಇಂದ್ರಿಯಗಳನ್ನು ರಾಗ ದ್ವೇಷಾದಿ ಭಾವನೆಗಳಿಂದ ಮುಕ್ತಮಾಡಿ ಧಾರ್ಮಿಕ ಚಿಂತನೆಯ ಕಡೆಗೆ ತಿರುಗಿಸುವುದು.

ನವವಿಧ ಪುಣ್ಯ : ಚರಿಗೆಗೆ ಬಂದ ಮುನಿಗಳನ್ನು ಸತ್ಕರಿಸುವ ಒಂಬತ್ತು ಕ್ರಮ –ಮೂರು ಪ್ರದಕ್ಷಿಣೆ, ಪಾದ ಪ್ರಕ್ಷಾಲನ, ಉನ್ನತ ಪೀಠ ಪ್ರದಾನ, ಅರ್ಚನ, ನಮಸ್ಕಾರ, ವಚನ ಶುದ್ಧಿ, ಕಾಯ ಶುದ್ಧಿ, ಮನಃ ಶುದ್ಧಿ ಮತ್ತು ಏಷಣಾ ಶುದ್ಧಿ.

ಪಂಚಮಹಾ ವ್ರತಗಳು : ಅಹಿಂಸೆ, ಸತ್ಯ, ಆಸ್ತೇಯ (ಕದಿಯದಿರುವುದು), ಬ್ರಹ್ಮಚರ್ಯ, ಅಪರಿಗ್ರಹ (ಪ್ರಾಪಂಚಿಕ ವಿಷಯಗಳಲ್ಲಿ ಮನಸ್ಸು ಕೊಡದಿರುವುದು).

ಪಂಚ ಸಮಿತಿ : ಈರ್ಯಾ ಸಮಿತಿ, ಭಾಷಾ ಸಮಿತಿ, ಏಷಣಾ ಸಮಿತಿ, ಆದಾನ ನಿಕ್ಷೇಪಣ ಸಮಿತಿ, ಉತ್ಸರ್ಗ ಸಮಿತಿ ಎಂಬ ಐದು ಬಗೆಯ ಧಾರ್ಮಿಕ ಪ್ರವೃತ್ತಿಗಳು.

ಪಂಚಾಶ್ಚರ್ಯ : ಉತ್ತಮ ಪಾತ್ರಕ್ಕೆ ಆಹಾರದಾನ ಮಾಡಿದಾಗ ಉಂಟಾಗುವ ಐದು ಬಗೆಯಾದ ಸೋಜಿಗಗಳು – ದೇವದುಂದುಭಿ ಮೊಳಗುವುದು, ಹೂವಿನ ಮಳೆ ಕರೆಯುವುದು, ಚಿನ್ನದ ಮಳೆ ಸುರಿಸುವುದು, ಕಮ್ಮನೆ ಮೆಲುಗಾಳಿ ಬೀಸುವುದು, ದೇವತೆಗಳು ಪ್ರಶಂಸೆ ಮಾಡುವುದು.

ಪರೀಷಹ : ತಪಸ್ಸಿಗೆ ಬಾಧಕವಾಗಿ ಬರುವ ೨೨ ಬಗೆಯ ಉಪದ್ರವಗಳು – ಹಸಿವು, ಬಾಯಾರಿಕೆ, ಚಳಿ, ಉಷ್ಣ, ಸೂಳ್ಳೆ ನೊಣ ಮೊದಲಾದವು ಕಚ್ಚುವುದು, ಬಟ್ಟೆ ಇಲ್ಲದಿರುವುದರಿಂದ ಆಗುವ ತೊಂದರೆ, ಅರತಿ ಸ್ತ್ರೀ ವಿರಹ, ಸಂಚಾರ ಬಾಧೆ, ಶಯ್ಯಾ ಬಾಧೆ, ಆಸನ ಬಾಧೆ, ಬೈಗುಳ, ಯಾಚನೆಯಲ್ಲಾಗುವ ತೊಂದರೆ, ಭಿಕ್ಷೆ ದೊರೆಯದಿದ್ದರೆ ಆಗುವ ಖೇದ, ರೋಗ ಬಾಧೆ, ಮುಳ್ಳು ಕಲ್ಲುಗಳು ತಾಕಿ ಆಗುವ ಬಾಧೆ, ಮೈ ತೊಳೆಯದಿರುವುದರಿಂದ ಆಗುವ ಬಾಧೆ, ಜನರಿಂದ ಪುರಸ್ಕಾರ ದೊರೆಯದೆ ಆಗುವ ಬಾಧೆ, ಮೈ ತೊಳೆಯದಿರುವುದರಿಂದ ಆಗುವ ಬಾದೆ, ಜನರಿಂದ ಪುರಸ್ಕಾರ ದೊರೆಯುವ ಆಗುವ ಬಾಧೆ, ಅಹಂಕಾರ, ಅಜ್ಞಾನ , ತಪ್ಪಿಸ್ಸಿಗೆ ತಕ್ಕ ಫಲ ಕಾಣಿಸಿಕೊಳ್ಳದೆ ಆಗುವ ಬಾಧೆ.

ಪಲ್ಯಂಕಾಸನ : ಬಲಪಾದವನ್ನು ಎಡತೊಡೆಯ ಮೇಲೂ ಎಡಪಾದವನ್ನು ಬಲತೊಡೆಯ ಮೇಲೂ ಇಟ್ಟು ಧ್ಯಾನಕ್ಕೆ ಕುಳಿತುಕೊಳ್ಳುವ ಆಸನ .

ಪಾರಿಷದ : ಇಂದ್ರನ ಸಭರಯಲ್ಲಿರುವ ದೇವತೆಗಳ ಒಂದು ವರ್ಗ.

ಪ್ರತಿಮಾನಿಯೋಗ : ವಿಗ್ರಹದಂತೆ ನಿಶ್ಚಲವಾಗಿ ನಿಂತು ತಪಸ್ಸು ಮಾಡುವ ಕ್ರಮ.

ಪ್ರಥಮಾನುಯೋಗ : ಅನುಯೋಗಗಳಲ್ಲಿ ಮೊದಲನೆಯದು. ತ್ರಿಷಷ್ಟಿ ಶಲಾಕಾಪುರುಷರ ಚರಿತ್ರೆಯನ್ನು ಒಳಗೊಂಡಿರುತ್ತದೆ.

ಭವನಾಮರ : ಭವನವಾಸಿ, ವ್ಯಂತರ , ಜ್ಯೋತಿಷ್ಕ, ಕಲ್ಪವಾಸಿ ಎಂಬ ದೇವತಾವರ್ಗಗಳಲ್ಲಿ ಒಂದು.

ಭೋಗಭೂಮಿ : ಕಲ್ಪವೃಕ್ಷಗಳಿಂದ ಭೋಗದ ಸಾಧನಗಳು ದೊರೆಯುವ ಭೂಮಿ. ಇದರಲ್ಲಿ ಉತ್ತಮ ಭೋಗಭೂಮಿ, ಮಧ್ಯಮ ಭೋಗಭೂಮಿ, ಜಘನ್ಯಭೋಗಭೂಮಿ ಎಂದು ಮೂರು ವಿಧ.

ಮಾನಕಷಾಯ : ಕಷಾಯಗಳಲ್ಲಿ ಒಂದು ಆತ್ಮನ ವಿನಯ ಗುಣವನ್ನು ನಾಶಮಾಡುವ ಅಹಂಕಾರ, ತೀವ್ರ ಮನೋವಿಕಾರ ರೂಪ ಕಷಾಯಗಳ ಯೋಗದಿಂದ ಜನಿಸುವುದು.

ಮೂವಿಟ್ಟಿ : ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಶೋಧನ ಕರ್ಮ, ವಹನ ಕರ್ಮ ಮತ್ತು ಅಪನಯನ ಕರ್ಮಗಳೆಂಬ ಮೂರು ಬಗೆಯ ಸೇವೆ.

ಮೋಹನೀಯ ಕರ್ಮ : ಜೀವವನ್ನು ಮೋಹಗೊಳಿಸಿ ಹಾಳು ಮಾಡುವಂಥದ್ದು. ಇದರಲ್ಲಿ ದರ್ಶನ ಮೋಹನೀಯ, ಚಾರಿತ್ರ ಮೋಹನೀಯ ಎಂದು ಎರಡು ವಿಧ.

ಲೋಚು : ತಲೆ ಮತ್ತು ಮುಖದ ಕೂದಲನ್ನು ಕೈಯಿಂದ ಕಿತ್ತು ತೆಗೆಯುವುದು. ಇದು ಮುನಿಗಳು ಮಾಡಬೇಕಾದ ಒಂದು ವಿಧಿ.

ಸಪ್ತ ತತ್ವಗಳು : ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರಾ, ಮೋಕ್ಷ.

ಸಮವಸರಣ : ತೀರ್ಥಂಕರನು ಧರ್ಮೋಪದೇಶ ಮಾಡುವುದಕ್ಕಿಂತ ಕುಬೇರನು ಇಂದ್ರನ ಅಪ್ಪಣೆಯ ಮೇರೆಗೆ ನಿರ್ಮಿಸಿದ ಮಂಟಪ.

ಸಲ್ಲೇಖನ : ಕಾಯ ಹಾಗೂ ಕಷಾಯಗಳನ್ನು ಕ್ಷೀಣಗೊಳಿಸಲು ಮರಣ ಕಾಲಕ್ಕೆ ಮುಂಚೆ ಆಹಾರಾದಿಗಳನ್ನು ಒಂದು ವಿಧಿಗನುಸಾರ ಕಡಿಮೆ ಮಾಡುತ್ತ, ಕಡೆಗೆ ಪೂರ್ಣ ಉಪವಾಸವಿದ್ದು ಶಾಂತಿಯಿಂದ ಶರೀರವನ್ನು ತ್ಯಜಿಸುವುದು.

ಸಾಮಾನಿಕ ದೇವರು : ವಿಮಾನವಾಸಿ ಮತ್ತು ಭವನವಾಸಿ ದೇವತೆಗಳಲ್ಲಿನ ಒಂದು ವರ್ಗ.

ಹತ್ತು ಮುನಿಧರ್ಮಗಳು : ಉತ್ತಮಕ್ಷಮಾ (ಕೋಪವನ್ನು ಪೂರ್ಣವಾಗಿ ತೊರೆದು ಬೇರೆಯುವರು ಕೇಡು ಮಾಡಿದರೂ ಸಹಿಸಿಕೊಳ್ಳುವುದು), ಮಾರ್ದವ (ಅಹಂಕಾರವನ್ನು ತ್ಯಜಿಸಿ ವಿನಯವನ್ನು ಬೆಳೆಸಿಕೊಳ್ಳುವುದು), ಅರ್ಜವ (ಮೋಸವನ್ನು ಬಿಟ್ಟು ಸರಳತೆಯಿಂದಿರುವುದು), ಸತ್ಯ (ನಿಜವನ್ನೇ ಹೇಳುವುದು), ಶೌಚ (ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಮಾಡದಿರುವುದು), ಸಂಯಮ (ಇಂದ್ರಿಯ ನಿಗ್ರಹಗೊಳಿಸುವುದು, ಪ್ರಾಣಿಗಳ ಬಗ್ಗೆ ದಯಾಪರನಾಗಿರುವುದು), ತಪಸ್ಸು (ಉತ್ತಮ ತಪಸ್ಸು ಮಾಡುವುದು), ತ್ಯಾಗ (ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿ ತೊರೆಯುವುದು), ಆಕಿಂಚನ್ಯ (ತನ್ನದಲ್ಲದ ಯಾವುದನ್ನೂ ತೆಗೆದುಕೊಳ್ಳದಿರುವುದು), ಬ್ರಹ್ಮಚರ್ಯ (ಮನ ವಚನ ಕಾಯಗಳಿಂದ ಸ್ತ್ರೀ ಮಾಯವನ್ನು ತ್ಯಜಿಸುವುದು).

 

ಸಹಾಯಕ ಸಾಹಿತ್ಯ
(ಪಾರ್ಶ್ವನಾಥ ಪುರಾಣಂ)

೧. ಪಾಶ್ವನಾಥಪುರಾಣಂ : ಪಾಶ್ವ ಪಂಡಿತ, (ಸಂ) ಎಂ ಮರಿಯಪ್ಪ ಭಟ್ಟ ಮತ್ತು ಎಂ. ಗೋವಿಂದ ರಾವ್, ಮದ್ರಾಸು ವಿಶ್ವವಿದ್ಯಾನಿಲಯ, ೧೯೫೪.

೨. ಪಾಶ್ವನಾಥಪುರಾಣಂ : ಪಾರ್ಶ್ವಪಂಡಿತ, (ಸಂ.) ಎಸ್‌. ಬೊಮ್ಮರಸ ಪಂಡಿತ, ೧೯೫೬.

೩. ಪಾರ್ಶ್ವನಾಥ ಪುರಾಣಂ : ಪಾರ್ಶ್ವಪಂಡಿತ, (ಸಂ). ಹೆಚ್‌. ಶೇಷಯ್ಯಂಗಾರ್, ಮದ್ರಾಸ್‌, ೧೯೬೦.

೪. ಪಾರ್ಶ್ವ ಪಂಡಿತ : ಡಾ. ಬಿ.ನಂ. ಚಂದ್ರಯ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೮೩.

೫. ರಟ್ಟರ ಕಾಲದ ಸಾಂಸ್ಕೃತಿಕ ಅಧ್ಯಯನ : ಡಾ. ಶಿ.ಬಾ. ಪಾಟೀಲ, ಬಸವ ಶ್ರೀ ಪ್ರಕಾಶನ, ಸಂಕೇಶ್ವರ, ೧೯೯೬.

೬. ಪಾರ್ಶ್ವ ಪಂಡಿತ, (ಲೇ). ತೀ.ನಂ.ಶಂಕತನಾರಾಯಣ, ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ, ನಾಲ್ಕನೆಯ ಸಂಪುಟ, ಡಾ. ಹಾಮಾ. ನಾಯಕ ಪ್ರಧಾನ ಸಂಪಾದಕ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಸಂಪಾದಕ, ೧೯೭೭.

೭. ಮಹಾಪುರಾಣ : ಅನು. ಜಿ. ಬ್ರಹ್ಮಪ್ಪ, ಜೈನ ಮಠ, ಹೊಂಬುಜ, ೧೯೮೫.

೮. ಪಾಶ್ವನಾಥಪುರಾಣ ಒಂದು ತೌಲನಿಕ ಅಧ್ಯಯನ : ಡಾ. ರಾಜಶೇಖರ ಈ ಇಚ್ಚಂಗಿ ಜೈನ ಅಧ್ಯಯನ ಸಂಸ್ಥೆ, ಶ್ರವಣ ಬೆಳಗೊಳ.

* * *