ಸ್ರ || ಶ್ರೀಪಾದಂ ಗೋಮಿನೀಭಂಗಿಗೆ ನವನಳಿನಶ್ರೀಮುಖಂ ಶ್ರವ್ಯದಿವ್ಯಾ
ಳಾಪಜ್ಯೋತ್ಸ್ನಾವಿಲಾಸಕ್ಕಮಲ ಹಿಮಕರಸ್ವಚ್ಛಬೋಧಂ ತ್ರಿಲೋಕೀ
ರೂ[ಪಾದರ್ಶಕ್ಕ]ವಾತ್ಮಾಕೃತಿ ಶಿವಸುಖವಲ್ಲೀವಿತಾನಕ್ಕಡರ್ಪಾ
ದಾಪೂರ್ಣೈಶ್ವರ್ಯಮಂ ಮಾಡೆಮಗೆ ಸುಖಾವಾಪ್ತಿಯಂ ಚಂದ್ರನಾಥಾ ೧

ಮ. ಸ್ರ || ನೆನೆವಂದಾನಂದದಿಂ ತಣ್ಣನೆ ತಣಿದು ಜಿಗಿಲ್ಕುಂ ಮನಂ ಬಂದು ಕಂಡಂ
ದೆನಸುಂ ತಣ್ಪಿಂ ಕುಳಿರ್ಕೋಡುಗುಮಮರ್ದಿನೊಳೞ್ದಂತೆ [ಕಣ್‌ಬಣ್ಣಿ]ಪಂದಿಂ
ಪಿನಲಂಪಂ ಸೇವಿಪಂತಗ್ಗಲಿ[ಸಿ] ನಲಿಗುಮಿ ಜಿಹ್ವೆಯೆಂದಂದು ನಿನ್ನಂ
ನೆನೆದುಂ ಕಂಡುಂ ಪೊಗೞ್ದುಂ ಸುಖಿಯೆನಿಸಿದವಂ ಧನ್ಯನೈ ಚಂದ್ರನಾಥಾ ೨

ನಿನಗಿಂದ್ರಂ ಪಂಚಕಲ್ಯಾಣಮನೆಸಗಿ ಮಹೈಶ್ವರ್ಯನಾದಂ ಕಡಲ್‌ಪಾ
ಲ್ವೊನಲಂ ಜನ್ಮಾಭಿಷೇಕಕ್ರಿಯೆಗೆ ಸಲಿಸಿ ಗಂಭೀರಮಾಯ್ತದ್ರಿಪಂ ಮ
ಜ್ಜನಲೀಲಾಪೀಠಮಾಗಿರ್ದವಿಚಳಮೆನಸಿತ್ತೆಂದೊಡೈಶೈರ್ಯ ಗಾಂಭೀ
ರ್ಯನುತಸ್ಥೈರ್ಯಕ್ಕೆ ಲೋಕತ್ರಯದೊಳೆಡೆಯದಾರ್‌ನಿನ್ನವೋಲ್‌ಚಂದ್ರನಾಥಾ ೩

ಸುದತೀಲೀಲಾಂಗಮಂ ಸೋಂಕದ ನವಯುವತೀಸ್ನಿಗ್ಧಮುಗ್ಧಾಸ್ಯಮಂ ನೋ
ಡದ ಕಾಂತಾಳಾಪಮಂ ಕೇಳದ ವನಜಮುಖಿವಕ್ತ್ರಸೌರಭ್ಯಮಂ ಕೊ
ಳ್ಳದ ರಾಮಾರಮ್ಯಬಿಂಬಾಧರರಸಮನಡುರ್ತ್ತೀಂಟದಕ್ಷೂಣ ಮೋಕ್ಷಾ
ಸ್ಪದ ಲಕ್ಷ್ಮೀಸಂಗಸೌಖ್ಯೋನ್ನತಿ ನಿನಗೆ ನಿಜಂ ದೇವರೊಳ್‌ಚಂದ್ರನಾಥಾ ೪

ಹರಿಪೀಠಂ ಮೋಹಮಾತಂಗಮನಳರಿಸಿತೋ ಚಾಮರಂ ಕಾಮದೀಪಾಂ
ಕುರಮಂ ಬೀಸಿತ್ತೊ ಭಾಮಂಡಲ[ವಘ]ತಮಮಂ ತೂಳ್ದಿತೊ ಪುಂಡರೀಕಂ
ಪುರಿದತ್ತೋ ಜನ್ಮಸಂತಾಪಮನಳಱೆಸಿತೋ ಶೋಕಮಂ ತಳ್ತಶೋಕಂ
ಭರದಿಂದೆಂಬಂತೆ ಮೆಯ್ದೋಱವು ನಿಜಸಭೆಯೊಳ್‌ತದ್ಭಯಂ ಚಂದ್ರನಾಥಾ ೫

ಮೃಗತೃಷ್ಣಾಭೋಗಮಂ ತಿರ್ದಿದ ನಿಡುಮಡುವೆಂದೆಯ್ದುವಾಭೀಳ ಕಾಳೋ
ರಗನಂ ನೇವಾ[ಳ]ವೆಂದೆತ್ತುವ ನಿಶಿತಕನತ್ಖಡ್ಗಮಂ ನೆಯ್ದಿಲೊಳ್ವಾ
ಸಿಗಮೆಂದಾಂಪಂತೆ ನೀನಲ್ಲದ ಕುಮತಶತಭ್ರಾಂತರಂ ದೇವರೆಂದೋ
ಲಗಿಪೆಗ್ಗರ್ಗಾದ ಬೋಧಂ ನಗಿಸುವುದಭವತ್ಪ್ರಾಪ್ತರಿಂ ಚಂದ್ರನಾಥಾ ೬

ಗಳಿತಂ[ಘಾ]ತಿವ್ರಜಂ ಪಿಂಗಿದ ಜವನಿಕೆ ಪುಷ್ಪೋಲ್ಲಸದ್ವೃಷ್ಟಿ ಪುಷ್ಟಾಂ
ಜಳಿ ದಿವ್ಯಶ್ರವ್ಯನಾದಂ ಸರಮಧುರಗೀತಸ್ವನಂ ದೇವಭೇರೀ
ಕುಳನಾದಂ ಮಿಕ್ಕ ಢಕ್ಕಾರವಮೆನೆ ಭವದಾಸ್ಥಾನದೊಳ್‌ರಂಜಿಕುಂ ಮ
ಜಳಮುಕ್ತಿ ಶ್ರೀವಧೂಸಂಗದೊಳಭಿನವಸಂಗೀತಕಂ ಚಂದ್ರನಾಥಾ ೭

ಸ್ಫುರಿತ ಶ್ರೀಪಾದಮುದ್ಯೋತಿಸೆ ಕಿಡೆ ತಮವಾಶಾಂಬರಶ್ರೀ ಪೊದೞ್ದೊ
ಪ್ಪಿರೆ ಸತ್ಸಂದೋಹವಾರಾಜಿಸೆ ಕುವಲಯವಾನಂದಮಂ ತಾಳ್ದೆ ಕಾಮಾ
ತುರಚಕ್ರಾಕ್ಕಾಗೆ ರಾಗಕ್ಷಯಮಮೃತನಿಧಿಸ್ಫೂರ್ತಿ ಕೆಯ್ಗಣ್ಮೆ ನಿಚ್ಚಂ
ಧರಣೀಲೋಕಕ್ಕೆ ನಿನ್ನಿಂ ದ್ವಿಗುಣಿಸುವುದು ಚಂದ್ರೋದಯಂ ಚಂದ್ರನಾಥಾ ೮

ಬಹುವಿದ್ಯಾಮಂಡನಂ ಪಂಡಿತಮುನಿಪತಿ ಚಂದ್ರವ್ರತಿಶ್ರೀಪದಾಂಭೋ
ರುಹಸೇವಾಸಂಗಭೃಂಗಂ ಕ್ಷಿತಿನುತಗುಣವರ್ಮಂ ವಚೋಮಾಲೆಯಿಂದ
ನ್ವಹಮಾದಂ ಪೂಜಿಸಲ್‌ರಾಜಿಪ [ಪದ]ನನಘಂ ಮಾೞ್ಕೆ ಭವ್ಯರ್ಗೆ ಸೌಖ್ಯಾ
ವಹಮಂ ಕೊಲ್ಲಾಪುರನ್ವಶ್ರೀ ತ್ರಿಭುವನತಿಳಕಾಲಂಕೃತಂ ಚಂದ್ರನಾಥಾ ೯