ಕಂ || ಕರಮೆಸೆದಿರ್ದುದು ತಮ್ಮೊಳ್
ಸುರರೊರ್ವರನೊರ್ವರಿರದೆ ಸಂಭ್ರಮದಿಂದಂ
ಕರೆದುರುವೆಸನಂ ಪೇೞ್ವು
ಚ್ಚರವಂ ಬಧಿರಿತ ದಿಗಂತರೋರ್ವೀವಳಯಂ ೧೫೧

ಧರಣಿ ರಜೋದೂಷಿತೆಯೆಂ
ದಿರದೆೞಸಿದೊ ಬಂದು ನೆಲೆಸಿದಂ ವಿಶ್ವಜಗ
ದ್ಗುರುವೆನ್ನೊಳೆಂಬ ಮುದದಂ
ಬರಂ ಪ್ರಸನ್ನತೆಯನಾಂತವೋಲ್ ಸೊಗಯಿಸುಗುಂ ೧೫೨

ಮ || ಅನುಕೂಲಂ ಪವನಂ ವಿನೂತಫಳಭಾರಾನಮ್ರವೃಕ್ಷಾಳಿ ಸ
ಸ್ಯನಿಕಾಯಂ ಮುಕುರಪ್ರಭಂ ವಿಮಳರತ್ನಭ್ರಾಜಿತಂ ವಿಶ್ರುತಾ
ವನಿಯಾಶಾವಳಯಂ ನಿರಸ್ತತಿಮಿರಂ ಸಾನಂದನಿರ್ಪಂದಮಾ
ಯ್ತೆನುತೋರ್ವೀಜನಮಾವಗಂ ಜಿನಲಸದ್ಯಾತ್ರೋತ್ಸವಪ್ರೀತಿಯಿಂ ೧೫೩

ತಲೆಯೊಳ್ ಪೊತ್ತು ಸುವರ್ಣರತ್ನಮಯಭಾಸ್ವಚ್ಚಕ್ರಮಂ ಯಕ್ಷಸಂ
ಕುಳಮಂದಗ್ರಿಮಭಾಗದೊಳ್ ನಡೆದುದಿಂದ್ರರ್ ಛತ್ರಮಂ ಚಾಂದ್ರನಿ
ರ್ಮಳಬಿಂಬತ್ರಯಮೊಳ್ಪಿನಿಂದಮಡಕಿಲ್ಗೊಂಡಂತೆ ಚೆಲ್ವಾದುದಂ
ನಲವಿಂದೆತ್ತಿದರಿಕ್ಕಿದರ್ ಚಮರಮಂ ಮಿಕ್ಕಂದ್ರರಾನಂದದಿಂ ೧೫೪

ಕಂ || ಎತ್ತಿದರಾರತಿಗಳನು
ದ್ವೃತ್ತಸ್ತನಭರ ವಿನಮ್ರಮರ್ತ್ಯಾಮರಿಯರ್
ಪತ್ತಿದುವು ಬೆನ್ನಿನಿರದು
ನ್ಮತ್ತಾಳಿಗಳಧಿಕಗಂಧಲುಬ್ಧತೆಯಿಂದಂ ೧೫೫

ನಡೆವೆಡೆ ಗಗನತಳಂ ಬಿಡೆ
ನಡೆವುದಸಂಖ್ಯಾತ ಮನುಜ ತಿರ್ಯಗ್ಗಣಮೆಂ
ದೊಡೆ ಚೋದ್ಯಮಲ್ತು ಮುನ್ನಡೆ
ಯುಡುಗದುಪಾರ್ಜಿಸಿದ ಜಿನನ ಪುಣ್ಯಂ ಕಿಱಿದೇ ೧೫೬

ವ || ಅಂತು ಚತುರ್ನಿಕಾಯಾಮರ ಪರಿಕಲ್ಪತಾತಿಶಯ ವಿರಾಜಮಾನ ಪದ್ಮಯಾನದಿಂ ನಡೆಯೆ

ಮ.ಸ್ರ || ನೆರೆತ್ತಂಭಾವನರ್ ವಂದಿರೆ ಮುದದಿನಧೋಲೋಕಮಾ ಕಲ್ಪಜರ್ ವಂ
ದಿರೆ ನೋೞ್ಪಂದೂರ್ಧ್ವಲೋಕಂ ಮೃಗಮನುಜಗಣಂ ಕೂಡಿ ಸದ್ಭಕ್ತಿಯಿಂ ಬಂ
ದಿರೆ ತಿರ್ಯಗ್ಲೋಕಮೆಂಬಂತೆಸೆದುದಸದಳಂ ಯಾತ್ರೆಯೇನಿಲ್ಲಿ ಚಿತ್ರಂ
ಗುರುನಾಥಂ ಮೂಱುಲೋಕಕ್ಕೆನಿಸಿದ ಜಿನನಿರ್ದಲ್ಲಿಗಾರ್ವಾರರೆನ್ನರ್ ೧೫೭

ಮ || ಭರತಕ್ಷೇತ್ರಶೇಷದಶೇಷದೇಶನಿವಸದ್ಭವ್ಯಾಶಯೋದ್ಯದ್ಗುಹಾಂ
ತರ ಸಂಸುಪ್ತ ವಿಬೋಧಸಿಂಹತತಿಯಿಂ ಸ್ವಾಯ್ಮೀಯಗಂಭೀರದಿ
ವ್ಯರವಂ ಬೋಧಿಸಿದತ್ತು ಸರ್ವಜನತಾಮಿತ್ರತ್ವಭಾವಂ ನಿರಂ
ತರಸಂಸಾರ ದುರಂತ ದುಃಖನಿಚಯಂ ತೂಳ್ದಿತ್ತು ಜೀವಂಗಳಾ ೧೫೮

ಮ.ಸ್ರ || ಜನಚೇತಕ್ಷೇತ್ರದೊಳ್ ಸಂದಣಿಸಿ ಬಳೆದ ಮಿಥ್ಯಾಕುಜವ್ರಾತಮಂ ದಿ
ವ್ಯನಿನಾದೋದ್ಯತ್ಕುಠಾರಂ ತವಿಸೆ ಪರಮಕಾರುಣ್ಯಪೀಯೂಷವಾಕ್ಸೇ
ಚನಮಂ ಮುಂ ಮಾಡಿ ಸದ್ಧರ್ಮಮನತಿಶಯದಿಂ ಬಿತ್ತಿ ನಿಃಶ್ರೇಯಸೇಂದ್ರಾ
ವನಿಜಾತಾರಾಮಮಂ ಬಿತ್ತರಿಸಿದಮಖಿಳಾರಂಭಮಂ ಬಿಟ್ಟುಮೀಶಂ ೧೫೯

ವ || ಅಂತು ಸ್ವಯಂಭೂಪ್ರಭೃತಿನವಗಣಧರರುಂ ಷಷ್ಟ್ಯತ್ತರ ಪಂಚಶತಪೂರ್ವ ಧರರುಂ ನವಶತೋತ್ತರಸಹಸ್ರಶಿಕ್ಷಕರುಂ ಚತುಃಶತೋತ್ತರಪಂಚಸಹಸ್ರಾವಧಿ ಜ್ಞಾನಿಗಳುಂ ಏಕಸಹಸ್ರಕೇವಳಿಗಳುಮನಿತೆ ವೈಕ್ರಿಯಿಕಋದ್ಧಿಪ್ರಾಪ್ತರುಂ ಪಂಚವಿಂಶಾದುತ್ತರ ಸಪ್ತಶತಮನಃಪರ್ಯಯಜ್ಞಾನಿಗಳುಂ ಷಷ್ಠಶತವಾದಿಗಳುಂ ಸುಲೋಚನಾಪ್ರಭೃತಿ ಪಂಚತ್ರಿಂಶತ್ಸಸ್ರಾರ್ಯಿಕೆಯರುಂ ಏಕಲಕ್ಷಸ್ರಾವಕರುಂ ತ್ರಿಲಕ್ಷಶಾವಕಿಯರುಂ ಅಸಂಖ್ಯಾತ ದೇವನಿಕಾಯಮುಮನಿತೆ ತಿರ್ಯಕ್ಸಮೂಹಮುಂ ಬೆರಸು ಚತುರ್ಮಾಸೋನ ಸಪ್ತತಿವರ್ಷ ಕೇವಳಿಕಾಲಂ ಮಾಸಾವಶೇಷಮಾದುದೆಂಬನ್ನೆವರಂ

ಮ || ಕರಹಾಟಾಂಧ್ರ ಕಳಿಂಗವಂಗಮಗಧಾಂಗಾಭೀರಸೌವೀರಗೂ
ರ್ಜರ ಕರ್ಣಾಟ ವರಾಟ ಮಾಳವ ಮಹಾರಾಷ್ಟ್ರಾದಿ ದೇಶಸ್ಥಸಿಂ
ಧುರ ಭವ್ಯೋತ್ತಮಪೂರ್ವಜನ್ಮಕೃತಪುಣ್ಯಪ್ರೇರ್ಯಮಾಣಂ ಜಿನೇ
ಶ್ವರನಾಸ್ಥಾನಮನಿಂದಿತಂ ವಿಹರಿಸುತ್ತುಂ ಬಂದು ಸಮ್ಮೇದಮಂ ೧೬೦

ವ || ಸಾರ್ದುದಾ ಮಹೀಧರದ ಮಹಿಮಾತಿಶಯಮಂ ಪೇೞ್ವೊಡೆ

ಮ || ಎನಗಿಂದ್ರಾದ್ರಿ ತದದ್ರಿಗಾಂ ಸರಿ ವಲಂ ನಿರ್ವಾಣಕಲ್ಯಾಣಮಿಂ
ದ್ರನುತರ್ಗೆನ್ನೊಳುದಾತ್ತಜನ್ಮಸವನಂ ತದ್ಭೂಧ್ರದೊಳ್‌ನೋೞ್ವೊಡೆಂ
ದೆನಿಪೀ ಪೆಂಪು ವೃಥೋನ್ನತಾದ್ರಿನಿಕರಕ್ಕೇನುಂಟೆ ಪೇೞೆಂದು ನೆ
ಟ್ಟನೆ ಸಮ್ಮೇದಮಹೀಧರಂ ನಗುವುದುದ್ಯತ್ಕೋಕಿಳಾರಾವದಿಂ ೧೬೧

ಪರಿನಿರ್ವಾಣಮನೆಯ್ದಿದರ್‌ಮುದದೆ ಪತ್ತೊಂಭತ್ತು ಮುಂ ತೀರ್ಥಕೃ
ದ್ವರರೆನ್ನೊಳ್‌ಕಡೆಯೆಯ್ದಿಸಲ್‌ಸಲುಗೆಯಿಂ ಪಾರ್ಶ್ವೇಶ್ವರಂ ಬಂದನೆಂ
ಬುರುರಾಗಂ ಗಿರಿಯಿಂ ಬಯಲ್ವರಿದವೋಲ್‌ಕಣ್ಗಂ ಮನಕ್ಕಂ ಮನೋ
ಹರಮಾಗಿರ್ದುದು ಧಾತುರಾಗಮಿಳಿತಂ ತನ್ನಿರ್ಝರಾಂಬುಪ್ಲವಂ ೧೬೨

ವ || ತದ್ಗಿರೀಂದ್ರಪಾವನೈಕದೇಶದೊಳ್‌
ಮುನಿಜನವೃತನುತ್ತರಾಭಿಮುಖನನಸುಂ ಯೋ
ಗನಿರೋಧದಿಂದಮಿರ್ದಂ
ವಿನೇಯಜನಬಂಧು ಮಾಸಮೊಂದಪ್ಪಿನೆಗಂ ೧೬೩

ವ || ಅನಂತರಂ ಸೂಕ್ಷ್ಮ ಕ್ರಿಯಾಪ್ರತಿಪತ್ತಿಯೆಂಬ ತೃತೀಯಶುಕ್ಲಧ್ಯಾನಮನೊಳಕೊಂಡಂತರ್ಮುಹೂರ್ತದಿಂ ಸ್ವಶರೀರತ್ರಿಗುಣಬಹುಳತೆಯಿನೊಂದು ಸಮಯದೊಳ್‌ಚರ್ತುದರ್ಶರಜ್ಜೂತ್ಸೇಧಜೀವಪ್ರದೇಶಪ್ರಸರ್ಪಣಮಪ್ಪ ದಂಡಸಮುದ್ಘಾತಮುಮನೆರಡನೆಯ ಸಮಯದೊಳ್‌ಪೂರ್ವೋಕ್ತಬಾಹಲ್ಯಾಯಾಮದಿಂದಿರ್ಕೆ ಲಂಗಳೊಳಮಮಳ್ವಡಿಯ ತೆಱದಿಂ ಬಳೆದ ಜೀವಪ್ರದೇಶ ಪ್ರಸರ್ಪಣಮಪ್ಪ ಕವಾಟಸಮುದ್ಘಾತಮುಮಂ ಮೂಱನೆಯ ಸಮಯದೊಳ್‌ವಾಯುತ್ರಯ ಮುೞಿಯೆ ಲೋಕಾಕಾಶ ಪ್ರದೇಶಪ್ರವರ್ತನಮಪ್ಪ ಪ್ರತರಣ ಸಮುದ್ಘೂತಮುಮಂ ನಾಲ್ಕನೆಯ ಸಮಯದೊಳ್‌ನಿಖಿಳಲೋಕವ್ಯಾಪಿ ಜೀವಪ್ರದೇಶ ಪ್ರಸರ್ಪಣಮಪ್ಪ ಲೋಕಪೂರಣ ಸಮುದ್ಘಾತಮುಮಂ ನಿರ್ವರ್ತಿಸಿ ಮತ್ತಂ ಪ್ರತಿಲೋಕಮಾರ್ಗದಿಂದೊಂದೊಂದುಸಮಯದೊಳ್‌ಪ್ರತರಕವಾಟದಂಡ ಸಮುದ್ಘಾತಂಗಳಂ ಮಾಡಿ… ಎಂಟನೆಯಸಮಯದೊಳ್‌ಮೂಲಶರೀರಪ್ರಮಾಣನಾಗಿಯಘಾತಿ ಘಾತಿತತಿಯ ಪಡೆದಾಯುಸ್ಥಿತಿಯೊಳುೞಿದ ಘಾತಿಸ್ಥಿತಿಯಂ ಸಮಾನಂ ಮಾಡಿ ಮತ್ತಮಂತರ್ಮುಹೂರ್ತದಿಂಬಾ ದರಕಾಯೋಗಸೂಕ್ಷ್ಮ ಮನೋವಚನೋಚ್ಛ್ವಾಸಂಗಳುಮಂ ನಿರೋಧಿಸಿ ಸೂಕ್ಷ್ಮಕಾಯಯೋಗನಾಗಿ ನಿರೋಧಂಗೆಯ್ದು

ಕಂ || ಎನಸುಂ ಪಂಚಪದಂಗಳು
ಮನುಚ್ಚರಿಸುವನಿತೆ ಪೊೞ್ತು ತನಗವಧಿ ಸಮಂ
ತೆನೆ ನೆಗೞ್ದ ಯೋಗಕೇವಳ
ವಿನುತಗುಣಸ್ಥಾನಸುಸ್ಥಿರಂ ತಾನಾದಂ ೧೬೪

ವ || ಅಲ್ಲಿಂ ಬೞಿಯಂ ಸಮುಚ್ಛಿನ್ನ ಪ್ರಾಣಾಪಾನಪ್ರಚಾರಸರ್ವಕಾಯವಾಙ್ಮನೋ ಯೋಗ ಪರಿಸ್ಪಂದಕ್ರಿಯಾವ್ಯಾಪಾರಮಪ್ಪ ಸಮುಚ್ಛಿನ್ನಕ್ರಿಯಾನಿವೃತ್ತಿಯೆಂಬ ಚತುರ್ಥ ಶುಕ್ಲ ಸಂರುದ್ಧಸಮಸ್ತಾಸ್ರವಂ ಪರಿಪೂರ್ಣ ನಿಖಿಳಶೀಲಗುಣಗಣಂ ನಿಜದ್ವಿಚರಮಸಮಯದೊಳನ್ಯತರವೇನೀಯಗತಿ ತತ್ಪ್ರಾಯೋಗ್ಯಾನುಪೂರ್ವ ಶರೀರಬಂಧನ ಸಂಘಾತ ವರ್ಣರಸ ಪ್ರತ್ಯೇಕಪಂಚಕ ಸಂಹನನ ಸಂಸ್ಥಾನಷಟ್ಕಾಂಗೋಪಾಂಗದ್ವಿಕಸುಗಂಧದ್ವಿಕ ವಿಹಾಯದ್ವಿಸ್ಪರ್ಶಾಷ್ಟಕ ಅಗುರುಲಘೂಪಘಾತೋಚ್ಛ್ವಾಸಪ್ರಶಸ್ತಾಪ್ರಶಸ್ತವಿಹಾಯೋಗತ್ಯ ಪರ್ಯಾಪ್ತಕ ಪ್ರತ್ಯೇಕಶರೀರ ಚತುಷ್ಕ ಸ್ಥಿರಾಸ್ಥಿರ ಶುಭಾಶುಭ ಸುಸ್ವರ ದುಸ್ಸ್ವರ ಸುಭಗ ದುರ್ಭಗ ಪ್ರತ್ಯೇಕ ಶರೀರ ಯಶಸ್ತಿತ್ಯನಾದೇಯಾ ಯಶಸ್ಕೀರ್ತಿನಿರ್ಯಾಣಪರ್ಯಾಪ್ತನೀಚೈರ್ಗೋತ್ರಂಗಳೆಂಬೆೞ್ಪತ್ತೆರಡು ಪ್ರಕೃತಿಗಳುಮಂ ನಿರ್ಮೂಲಂಗೆಯ್ದು ಕಡೆಯ ಸಮಯದೊಳವಶಿಷ್ಟಾನ್ಯತರವೇದನೀಯ ಮನುಷ್ಯಾಯುರ್ಗತಿ ಪಂಚೇಂದ್ರಿಯ ಜಾತಿ ತತ್ಪ್ರಾಯೋಗ್ಯಾನುಪೂರ್ವತ್ರಸ ಬಾದರ ಪರ್ಯಾಪ್ತಕ ಸುಭಗಾಧೇಯ ಯಶಸ್ಕೀರ್ತ್ಯುಚ್ಚೈರ್ಗೋತ್ರತೀರ್ಥಕರನಾಮಂಗಳೆಂಬ ಪದಿಮೂಱುಂ ಪ್ರಕೃತಿಗಳಂ ನಿರವಶೇಷಂ ಕಿಡಿಸಿ

ಮ.ಸ್ರ || ವರಸಮ್ಯಕ್ತ್ವಾವಬೋಧಪ್ರಥಿತ ವಿಮಳ ಸದ್ದರ್ಶನಾನಂತವೀರ್ಯೋ
ದ್ಧುರಸೂಕ್ಷ್ಮತ್ವಾವಗಾಹಾ ಗುರುಲಘುಕವಿಬಂಧಂಗಳೆಂಬಂತಿವೆಂಟುಂ
[ಪರಮೋತ್ಕೃಷ್ಟಂ ಗುಣಂಗಳ್‌ನೆಲಸಿರೆ] ನಿಜದಿಂದಷ್ಟಮೋರ್ವೀಶನಾದಂ
ಪರಮೇಶಂ ನಿರ್ಜಿತಾಶಂ ದಳಿತದುರಿತಯೂಥಂ ಲಸತ್ಪಾರ್ಶ್ವನಾಥಂ ೧೬೫

ಕಂ || ತನ್ನಂ ತಾಂ ತನ್ನಿಂದಂ
ತನ್ನತ್ತಣಿನಱಿದು ತನಗೆ ಸೌಖ್ಯೋನ್ನತಿಯಂ
ತನ್ನೊಳ್‌ನಿಜಮೆನಿಸಿರ್ದಾ
ತನ್ನ ಗುಣಂ ಪ್ರಕಟವಾಗಿ ಕುಡೆ ನುತಿವಡೆದಂ ೧೬೬

ಮ || ನಿರವದ್ಯಂ ನಿರುಪಾಧಿಕಂ ನಿರುಪಮಂ ನಿಶ್ಚಿಂತರೂಪಾತ್ಮಕಂ
ಪರಮಾನಂತಚತುಷ್ಟಯಪ್ರವಿನುತಂ ನಿರ್ಧೂತದೋಷಂ ನಿರಾ
ವರಣಂ ನಿರ್ಮಳಿನಂ ನಿರಸ್ತದುರಿತಂ ನಿರ್ವ್ಯಗ್ರನಿರ್ಬಾಧಬಂ
ಧುರಮಾಗಿರ್ದ ಸುಖಕ್ಕೆ ತಾಂ ನಿಳಯನಾದಂ ವಿಶ್ವಬೋಧಾಸ್ಪದಂ ೧೬೭

ವ || ಅಂತಾ ನಿರತಿಶಯಸುಖಾಶ್ರಯಮಾದ ನಿಶ್ರೇಯಸನಿಳಯಮೆಂತುಟೆಂದೊಡೆ

ಮ || ಇಳೆ ಚಂಚನ್ಮಣಿಕುಟ್ಟಿಮಂ ಕುಳನಗೌಘಂ ಸ್ತಂಭಮಾದಂ ದಿಶಾ
ವಳಯಂ ಕುಡ್ಯಚಯಂ ಸುರೋತ್ಕರವಿಮಾನಾನೀಕಮಾ ಭೂಮಿಕಾ
ವಳಿ ತಾಮಾಗಳವಟ್ಟ [ವಿಶ್ರುತಜಗಚ್ಚೈತ್ಯಕ್ಕೆ] ಚೆಲ್ವಾಗಿರಿ
ಟ್ಟ ಲಸನ್ಮೌಕ್ತಿಕರಾಜಮಾನಕಳಶಂ ತಾನಾಯ್ತು ಮುಕ್ತ್ಯಾಲಯಂ ೧೬೮

ಕಂ || ಸುಲಲಿತಮೀಷತ್ಪ್ರಾಗ್ಭಾ
ರಲಕ್ಷಣಾಖಂಡಚಂದ್ರಕಾಂತಮಯಂ ನಿ
ರ್ಮಳಸಮವೃತ್ತಂ ಪವಣಿಂ
ಸಲೆ ನಾಲ್ವತ್ತೈದುಲಕ್ಷಯೋಜನದಗಲಂ ೧೬೯

ನಿಲದೆಂಟುಯೋಜನಂ ವಿ
ಶ್ವಲೋಕಚೂಡಾವತಂಸಮವ್ಯಾಬಾಧಂ
ಮಳದೋಷ ದೂಷಣಾಕುಳ
ವಿಳಯವಿಹೀನಂ ಸಮಂತು ಸಿದ್ಧಕ್ಷೇತ್ರಂ ೧೭೦

ವ || ಅಲ್ಲಿ

ಉ || ಅಂತಪವರ್ಗಸೌಖ್ಯನಿಳಯೈಕ ಸಮಾಶ್ರಯನಾಗಿಯುಂ ಜನ
ಸ್ವಾಂತದೊಳೊರ್ಮೆಯುಂ ನೆಲಸಿ ತನ್ನ ಮಹತ್ವಗುಣಪ್ರಕರ್ಷಮಾ
ಶಾಂತರಮಂ ಸಮಂತು ಬೆಳಗುತ್ತಿರೆ ನಿತ್ಯನಿರಂಜನಾದನ
ತ್ಯಂತ ವಿಶುದ್ಧ ದರ್ಶನ ವಿಬೋಧಚರಿತ್ರ ವಿಚಿತ್ರಭೂಷಣಂ ೧೭೧

ವ || ಅನ್ನೆಗಮಿತ್ತಲ್‌

ಮ || ಪರಿನಿರ್ವಾಣಮಹಾಮಹಕ್ಕೆ ನೆರೆದೆತ್ತಂ ಬರ್ಪ ದಿವ್ಯಾಂಗನೋ
ತ್ಕರದಿಂ ವ್ಯಂತರಸುಂದರೀನಿಕರದಿಂ ಜ್ಯೋತಿಷ್ಕಕಾಂತಾಳಿಯಿಂ
ನಿರುತಂ ಭಾವನಭಾಮಿನೀಪ್ರಕರದಿಂ ಚೆಲ್ವಾಯ್ತು ತತ್ತನ್ಮನೋ
ಹರ ಕಾಂತಾಳಿ ಕಟಾಕ್ಷರೋಚಿರುಚಿಯಿಂ ಸಮ್ಮೇದಭೂಮೀತಳಂ ೧೭೨

ಕಂ || ಕಡುಗಿಱಿದು ಗಗನತಳಮಂ
ದೆಡೆಯುಡುಗದೆ ನಡೆವ ಸುರಸಮಾಜಕ್ಕೆನೆ ದಾಂ
ಗುಡಿವಿಡೆ ವಿಳಾಸದೆಸಕಂ
ಬಿಡೌಜನೆೞ್ತಂದನಾ ಶತೇಂದ್ರ ಸಮೇತಂ ೧೭೩

ವ || ಅಂತು ಬಂದು

ಕಂ || ಸಾಮಜದಿನಿೞಿದು ಸುರಚೂ
ಡಾಮಣಿಯಿಂದ್ರಾಣಿವೆರಸು ಸವಿನಯದಿಂದಂ
ಮೂಮೆ ಬಲಗೊಂಡನದ್ರಿಶಿ
ಖಾಮಣಿಯಂ ನಿರ್ವೃತಿಪ್ರಸಿದ್ಧಾವನಿಯಂ ೧೭೪

ವ || ಅಲ್ಲಿಂ ಬಱೆಕ್ಕಂ…….

ಮ || ಅತಿಪೂತಾಮಳವಾರಿಯಿಂ ಮಳಯಜಕ್ಷೋದಂಗಳಿಂ ಮೌಕ್ತಿಕಾ
ಕ್ಷತಪುಂಜಂಗಳಿನಿಂದ್ರಭೂಜ ಸುಮನೋದಾಮಂಗಳಿಂ ಸಂಗತಾ
ಮೃತಸನ್ನಾಹನಿಕಾಯದಿಂ ಮಣಿಲಸದ್ದೀಪಂಗಳಿಂ ಧೂಪಸಂ
ತತಯಿಂ ಸತ್ಫಳರಾಜಿಯಿಂದೆ ಸಮೆದಂ ಪೂಜಾವಿಶೇಷಂಗಳಂ ೧೭೫

ವ || ತದನಂತರಂ

ಕಂ || ಸುರವಾದಕರಿರ್ಕೆಲದೊಳ
ಗಿರೆಸುರಗಾಯಕೀಜನಂ ತಾಂ ಪಿಂತಿರೆ ತ
ತ್ಸುರನರ್ತಕಿಯರ್‌ಕೂಡಿರೆ
ಸುರಪತಿಯಾನಂದನಾಟಕೋದ್ಯತನಾದಂ ೧೭೬

ಮ || ಅನಿತಂ ತೋಱಿದನಿಂದ್ರನಾಡುವೆಡೆಯೊಳ್‌ತಜ್ಜನ್ಮವೃತ್ತಪ್ರಶಂ
ಸನದಿಂ ತತ್ಪದನಿರ್ಭರಪ್ರಣಯದಿಂ ತತ್ತದ್ರಸೋತ್ಕರ್ಷದ
ರ್ಶನದಿಂ ತತ್ಸಮಯೋಚಿತಪ್ರಚುರಭಾಷಾವೇಷಸಾದೃಶ್ಯದಿಂ
ದೆನಸುಂ ವಾಚಿಕಸಾತ್ವಿಕಾಂಗಿಕವಿನೂತಾಹಾರ್ಯಕಾಖ್ಯಂಗಳಿಂ ೧೭೭

ಮ.ಸ್ರ || ………………………………………………
……………………………………………………….
……………ನಿರ್ವಾಣಪೂಜೋತ್ಸವದೊಳೆ ನೆಗೆೞ್ದಿರ್ದೆನ್ನ ಪುಣ್ಯಕ್ಕೆ ಪೇೞಾರ್‌
ಸಮಮೆಂದಿಂದ್ರಂ ಶತೇಂದ್ರರ್ವೆರಸು ನಲಿದನಾನಂದದಿಂದೀ ಕೃತಾತ್ಮಂ ೧೭೮

ನಲವಿಂ ವಕ್ತ್ರಾಂಬುಜಕ್ಕೋಲಗಿಸೆ ವಿಕಸನಶ್ರೀಯನುತ್ಕರ್ಷಹರ್ಷಂ
ವಿಳಸತ್ಸೌಂದರ್ಯಮಂ ಕೊರ್ವಿಸೆ ಪುಳಕಚಯಂ ಹಾರಮಂ ಮತ್ತೆ ವಕ್ಷ
ಸ್ಸ್ಥಲದೊಳ್‌ಸಾನಂದಬಾಷ್ಪಪ್ರತತಿಪಡೆಯೆ ತನ್ನಾಟ್ಯಮಂತಾಲಯಕ್ಕಾ
ಕುಳಿಶಾಸ್ತ್ರಂ ಪೋದನಾಗಳ್‌ಸುಕವಿಜನಮನೋಹರ್ಷ ಸಸ್ಯಪ್ರವರ್ಷಂ ೧೭೯

ಮ || ಅರವಿಂದೋದ್ಭವಸೂನು ಭಾನು ಮನು ತತ್ಪುತ್ರಂ ತದೀಯೋದ್ಭವಂ
ಸ್ಥಿರಮಿಕ್ಷ್ವಾಕುಮಹೀಶನಾಕಷಿತಿಪನಿಕ್ಷುಗ್ರಾಮದೆಣ್ಬತ್ತುನಾ
ಲ್ವರನಾಚಾರಯುತಂ ಪ್ರತಿಷ್ಠಿಸಿದನೆಂದಂದಾದ್ಯರುಂ ಹೃದ್ಯವಿ
ದ್ಯರುಮಾಚಾರವಿಶುದ್ಧರುಂ ಪರರದಾರ್‌[ವಿಶ್ವಂಭರಾ ಭಾಗದೊ]ಳ್‌೧೮೦

ಕಂ || ಎನೆ ನೆಗೞ್ದ ವಿಪ್ರಕುಳಮಂ
ಡನಚರಣಾಂಭೋಜಭೃಂಗನಖಿಳದಿಶಾಮಂ
ಡನ ಕೀರ್ತಿಕಾಂತಪಂಡಿತ
ಜನವನರುಹಷಂಡ ಚಂಡಕರಮಾರ್ತಂಡಂ ೧೮೧

ಶಾ || ವೀರಶ್ರೀನಿಧಿಕಾರ್ತವೀರ್ಯತನಯಂ ಶ್ರೀಲಕ್ಷ್ಮಣಕ್ಷೋಣಿಪ
ಕ್ಷೀರಾಂಭೋನಿಧಿ [ಜಾತಚಂದ್ರನೆನಿಪಾಶ್ರೀ] ಕಾರ್ತವೀರ್ಯಂ ಕಳಾ
ಧಾರಂ ಸಜ್ಜನಸೌಖ್ಯಕಾರಿಸುಚರಿತ್ರಂ ಲೋಕನೇತ್ರಂ ಶುಭಾ
ಕಾರಂ…………….ಸೊಗಯಿಪಂ ಶ್ರೀಚಂದ್ರಿಕಾನಂದನಂ ೧೮೨

ಮ || ಪೊಗರಂಭೋರುಹಸಂಭವಂ ಬರೆದತಿಸ್ಪಷ್ಪಾಕ್ಷರಶ್ರೇಣಿ ಸಾ
ಕ್ಷಿಗಳಾಶಾಧಿಪರಾಜಿರಾಜಿಸುವುದಂ ವಾಚಾಳಭೂಪಾಳಕರ್‌
ಜಗದೊಳ್‌ಒರ್ಕುಡಿಮಾಡದಂತಸಿಲತೋದ್ಯತ್ಪತ್ರಮಂ ತೋಱೆ ನೆ
ಟ್ಟಗೆ ರಟ್ಟಾನ್ವಯಕಾರ್ತವೀರ್ಯನಖಿಳೋರ್ವಿಭಾಗಮಂ ಭೋಗಿಪಂ ೧೮೩

ಕಂ || ಶ್ರೀಕಾರ್ತವೀರ್ಯನೃಪಲ
ಕ್ಷ್ಮೀಕವಿ…. ವಿನೇಯಾ
ನೀಕಶಿರೋಮಣಿ ನೆಗೞ್ದಂ
ಲೋಕಪ್ರಿಯಜಾತಕೀರ್ತಿ ಕವಿಕುಳತಿಳಕಂ ೧೮೪

ಮ || ಶಕವರ್ಷಂ ಚತುರಬ್ಧಿಚಂದ್ರಶಶಿಸಂಖ್ಯಂ ಚಿತ್ರಭಾನೂತ್ಥಕಾ
ರ್ತಿಕಶುದ್ಧೋದಿತಪಂಚಮೀಧಿಷಣವಾರಂ ಪೂಣ್ಕೆ ಸಂಪೂರ್ಣಮಾ
ಯ್ತು ಕವಿಪ್ರಸ್ತುತಪಾರ್ಶ್ವನಾಥಚರಿತಂ ಪಾರ್ಶ್ವೋದಿತಂ ಕೂಡೆ ನ
ರ್ತಿಕೆ ತತ್ಕೀರ್ತಿವೊಲೂರ್ಜಿತಾರ್ಥ[ವಿಲಸತ್ಕಾವ್ಯಂ ಧರಾಭಾಗದೊ]ಳ್‌೧೮೫

ಕಂ || ಮಿಗೆ ಸಾರ್ದ್ರಹೃದಯರಂಗದೊ
ಳಗೆಯ್ದುತಿರೆ ಪುಳಕಸಸ್ಯತತಿ ಮತ್ಪ್ರಜ್ಞಾ
ನಗನಿಕಟಜನಿತಮಂ ತಿ
ರ್ದುಗೆ ಕಾವ್ಯರಸಪ್ರವಾಹಮಂ ಬುಧನಿವಹಂ ೧೮೬

ಮ || ಇದು ಸದ್ಧರ್ಮಸುಕಾಯಧರ್ಮವಿಭವಕ್ಕಾರ್ಘ್ಯಂದಲೆಂದೊರ್ಮೆಯುಂ
ಮುದದಿಂದಂ ಬರೆವಳ್ಕಱಿಂ ಬರೆಯಿಪತ್ಯಾನಂದದಿಂ ಪೇೞ್ವ ಸಂ
ಮುದದಿಂದೊಂದಿ ನಿರಂತರಂ ನೆನೆವಿನಂ ಸಂತೋಷದಿಂ ಭಾವಿಪ
ಗ್ಗದ ಕಾವ್ಯಪ್ರಿಯಭವ್ಯಕೋಟಿಗೆ ಜಯಂ ಭದ್ರಂ ಶುಭಂ ಮಂಗಳಂ ೧೮೭

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥ ಚರಿತ ಪುರಾಣದೊಳ್‌ಪರಿನಿರ್ವಾಣ ಕಲ್ಯಾಣ ಭಗವನ್ಮೋಕ್ಷ ಕಲ್ಯಾಣವರ್ಣನಂ ಷೋಡಶಾಶ್ವಾಸಂ ಶ್ರೀಪಾರ್ಶ್ವನಾಥಪುರಾಣಂ ಸಮಾಪ್ತಂ

ಮಂಗಳಮಹಾ ಶ್ರೀ ಶ್ರೀ ಶ್ರೀ