ಚಂ || ಅನುವಶವೃತ್ತಿಗಲ್ಲದ ಸಪತ್ನಿಯರಿಲ್ಲ ಮನಕ್ಕೆ ನಲ್ಮೆಯಂ
ಜನಿಯಿಸುವೞ್ತೆಗಲ್ಲದ ಸುವಸ್ತುಗಳಿಲ್ಲಿನಿಕೆಯ್ದು ರಾಗದಿಂ
ನನೆಕೊನೆವೋಗಲಿಲ್ಲದಪರಾಧಲವಂ ಪೆಱತೆನ್ನೊಳಿಲ್ಲ ಪೇೞ್
ನಿನಗಿನಿತೊಂದು ಚಿತ್ತದ ನಿಮಿತ್ತದ ಚಿಂತೆ ಲತಾಂಶ ಕೋಮಳೇ       ೭೧

ಉ || ಈ ತೆಱದಿಂ ನೃಪಂ ಪ್ರಿಯೆಯ ಚಿತ್ತದ ಖೇದಮನೆಯ್ದೆ ಕೇಳ್ದು ಸಂ
ಜಾತಕುತೂಹಳಂ ನುಡಿಯದಶ್ರುಗಳಂ ಸಿಡಿಯುತ್ತಿರಲ್ಕೆ ಮ
ಚ್ಚೇತದೊಳುಣ್ಮಿ ಪೊಣ್ಮುವ ತನೂಭವಲಾಭದ ಚಿಂತೆ ಪೋ ಸುನಿ
ರ್ಣೀತಮಿದೆಂದದೇಂ ನುಡಿದನೋ ಬಗೆಯಂ ನವಭಾವಕೋವಿದಂ   ೭೨

ವ || ಆಗಳ್

ಕಂ || ನುಡಿದಾ ಮಾತಿನ ಬೞೆಯನೆ
ಗುಡುಗುಡನುಗಲಶ್ರು ಹರ್ಷಬಾಷ್ಪಮೆನಲ್ ತ
ಳ್ತಿಡಿದು ಮೊಳೆಯಾಯ್ತೊ ಪುೞಕಂ
ಕಡೆಗಣ್ಣಿಂ ನೋಡಿದಳ್ ವಯಸ್ಯೆಯ ಮೊಗಮಂ           ೭೩

ವ || ಆಗಳಾ ಮಹಾದೇವಿಯ ಕಣ್ಣಱೆದು ಚತುರಿಕೆಯೆಂಬ ಕೆಳದಿಯಿಂತೆಂದಳ್

ಕಂ || ದೇವಿಯ ಬಗೆಯನಲರ್ಚಲ್
ದೇವರವೋಲ್ ಬಲ್ಲರಾರೊ ಸಖಿಯರ್ಕಳ್ ತಾ
ರಾವಳಿಯಲರ್ಚಲಾರ್ಕುಮೆ
ಭಾವಿಸೆ ಹಿಮಕಿರಣನಂತೆವೋಲ್ ಕುಮುದಿನಿಯಂ          ೭೪

ವ || ಎಂದಭಿಮುಖಂಬಡೆದು ಪೇೞಲ್ ತಗುಳ್ದಳ್ ಇಂದು ಪರ್ವದಿನಮಪ್ಪುದಱೆಂ ದೇವಿಯುದಯಸಮಯದೋಳ್ ಮಂಗಳಾಲಂಕಾರಾಲಂಕೃತೆಯಾಗಿ ಪರಿವಾರಾಂಗನಾ ಕರತಳ ಪರಿಕಳಿತ ವಿವಿಧಾರ್ಚನಾ ವಿಶೇಷಂ ಬೆರಸು

ಚಂ || ಪ್ರಮದವನಕ್ಕೆ ಪೋಗಿ ನವರತ್ನವಿನರ್ಮಿತ ನೂತ್ನಜೈನಗೇ
ಹಮನತಿಭಕ್ತಿಯಿಂದೆ ಬಲವಂದು ಶಚೀವಧುವೆಂದೆನಲ್ ಸಸಂ
ಭ್ರಮ ವಿವಿಧಾರ್ಚನಾವಳಿಯಿನರ್ಚಿಸಿ ದೇವನನೞ್ತೆಯಿಂ ಬರು
ತ್ತಮರ್ದಿನ ಸೋನೆಯಂ ಸುರಿದವೋಲ್ ನಡೆ ನೋಡಿದಳಾ ವನಾಂತಮಂ      ೭೫

ವ || ಅಲ್ಲಿ ಮನಂಗೊಳ್ವ ಮರಾಳ ಬಳಗಂಗಳ್ಗೆ ಮಂದಮಂದ ಪದನ್ಯಾಸಮನು ಪದೇಶಿಸುತ್ತುಂ ಬರುತ್ತುಮಿರೆ ತದ್ವನೈಕದೇಶದೊಳ್

ಮ.ಸ್ರ || ಪಸುರ್ಗರ್ಪಿಂ ಸುತ್ತಲುಂ ಕೞ್ತಲಿಪ ಪಸಲೆಯಾಕಾಶಮಂ ಮಧ್ಯದೊಳ್ ಶೋ
ಭಿಸಿ ತೆಳ್ಪಂ ತಾಳ್ದ ಚಂದ್ರೋಪಳಮಮಳ ಶರತ್ಪೂರ್ಣಶುಭ್ರಾಂಶುವಂ ಸಂ
ತಸದಿಂದಂತಲ್ಲಿ ಪಟ್ಟಿರ್ದೆರಲೆವಱೆ ಲಸಲ್ಲಕ್ಷ್ಮಮಂ ಪೋಲ್ತದೇಂ ಪು
ಟ್ಟಿಸಿದತ್ತೋ ದೃಕ್ಚಕೋರಂಗಳನೆ ತಣಿಪುವಾ ಶಕ್ತಿಯಂ ದೇವಿಗಾಗಳ್         ೭೬

ವ || ಅಂತು ಮನಂಗೊಳೆ ನೋೞ್ಪೆನಮದಱ ಕೆಲನೆಲದ ಪಸುರ್ವುಲ್ಲಂ ಮೇವುತಿರ್ದ ಪೊಸವಾಣಿತಿವುಲ್ಲೆ ಮುನ್ನ ತನ್ನ ನಡೆಪಿದುದಪ್ಪುದಱಿಂ ಪರಿಚಯಕ್ಕೆಳಸಿ ಪರಿತರಲುಜ್ಜುಗಂಗೆಯ್ದು ಪಟ್ಟಿರ್ದ ಕೊಣಸುಮಂ ಬಿಟ್ಟು ಬರಲಾಱದಂಗದೇಶಂಗಳನಲ್ಲಲ್ಲಿಗಾಘ್ರಾಣನಂ ಮಾಡಿಯುಂ ಮಗುೞ್ದುಮಾಲೇಹನಂಗೈದುಮೆೞ್ಚಱೆಸಿ ತೊರೆದ ಮೊಲೆಯಂ ಸಾರ್ಚಿ ತಣಿಯೂಡದೆ ನಡೆಗೊಳಿಸಿ ತವಕದಿಂ ಬರುತ್ತುಂ ಕೂಡೆವರಲುಮಿರಲುಮಱೆಯದೆ ತಡಂಗಾಲ್ಗೊಂಡು ತಡೆದು ತಡೆದಡವರ್ಪ ತರುಣ ಹರಿಣಂ ಕೂಡೆವರ್ಪಂತಡಿಗಡಿಗೆ ನಿಂದು ನೋಡುತ್ತುಂ ಕಡೆವಾಯ ಕಱುಂಕೆಯೆಸಳಂ ಬಾಯ್ವಾಯೊಳ್ ನೀಡುತ್ತುಂ ಮೋಹರಸದೊಳೋಲಾಡುತ್ತುಂ ಬಂದು ತುಡುಗೆಯ ಪಚ್ಚೆವರಲ ಮೊಗಮೊಗದಿಂ ನೂಂಕಿ ಮೊಲೆಯೂಡುವ ಹರಿಣಿಯಂ ನೀಡುಂ ಭಾವಿಸಿ ನೋಡಿ ವಿಸ್ಮಯಾಂಬುರಾಶಿಯೊಳ್ ಮುೞ್ಗಾಡಿ ಮತ್ತಮಾ ಕುರಂಗಿಯ ತನ್ನೊಳಾದ ನಿರತಿಶಯ ಸ್ನೇಹಮಂ ಮಱೆಯೊಳಾದಸಾಧಾರಣ ಮೋಹಮುಮನಾವುದಗ್ಗಳಂ ಪೇಱೆಂಬಂತೆನ್ನ ಕೂಂಕಿ ತೋಱಿತ್ತು ಮುತ್ತರಮಂ ತಾನೆ ನುಡಿವಂತೆನ್ನೊಳಿಂತೆಂದಳ್‌

ಕಂ || ಎನ್ನಯ ನಡೆಪಿದ ಪುಲ್ಲೆಯಿಂ
ದೆನ್ನಂ ಕಾಣುತ್ತೆ ಪರಿದು ಬರುತಿರ್ಪುದು ದಲ್
ಮುನ್ನೀಗಳ್ ಸಖಿ ಕೊಣಸಂ
ನಿಲ್ಲದು ತಾಂ ಬಿಟ್ಟು ಪುತ್ರಸುಖಮೇಂ ಪಿರಿದೋ          ೭೭

ವ || ಎಂದದನೆ ಪುನಃಪುನಃ ಕಥನಂ ಮಾಡಿ ಮುಹುರ್ಮುಹುಶ್ಶೀರ್ಷಾಂ ದೋಳನಂಗೆಯ್ವುತ್ತುಮಂತಃಪುರಕ್ಕೆ ವರ್ಪಾಗಳ್

ಕಂ || ಏನೆಂಬುದೊಂದು ಹರ್ಷದ
ಹಾನಿಯನೀ ಪರಮ ಕರ್ಷಮೋ ಪಲಕಾಲಂ
ತಾನಿರ್ದಂದವ ಚಿಂತಾ
ಗ್ಲಾನಿ ಮನಂಬೊಕ್ಕುದರಸಿಗಾತ್ಮಜವಿಷಯಂ  ೭೮

ವ || ಅಂತಚಿಂತ್ಯಚಿಂತಾಪರತಂತ್ರಾಂಶರಂಗೆಯಾಗಿ ಬಂದರಮನೆಯಂ ಪೊಕ್ಕೆಲ್ಲರುಮಂ ವಿಸರ್ಜಿಸಿ ಮೆಲ್ಲನೆನ್ನೊಳಿಂತೆಂದಳ್

ಚಂ || ನಡಪಿದ ಪುಲ್ಲೆ ನೋಡ ಕೊಣಸಂ ಪಡೆದಿಂತೆಸೆದಿರ್ದುದೀಗಳೀ
ನಡಪಿದ ಪಕ್ಕಿಗಳ್ ಮಱೆಗಳೊಳ್ ಗಱೆಸೋಂಕಿ ಸುಖಕ್ಕೆ ಸಂದುವಾ
ನಡಪಿದ ಬಳ್ಳಿಗಳ್ ಪಲವು ಸೂೞ್ ಸುಫಲಪ್ರಸವಕ್ಕೆವಂದುವಾಂ
ಪಡೆಯದೆ ಸರ್ವಲೋಕಹಿತನಂ ಸುತನಂ ತಡೆದಿರ್ದನೇಕೆಯೋ         ೭೯

ಕಂ || ನೋಡೆನ್ನೋರಗೆವೆಣ್ಗಳ್
ಕೂಡೆ ಮನಂಗೊಳ್ವ ಮಕ್ಕಳಂ ಮುದದಿಂ ಮು
ದ್ದಾಡಿಸುತಿದಿರ್ವರ್ಪರ್ ತಾ
ಮೇಡಿಸುವಂತೆನ್ನ ಸಿರಿಯುಮಂ ಪರೆಯಮುಮಂ          ೮೦

ಚಂ || ಕ್ಷಿತಿಪನ ಮಾಡಿದುನ್ನತಿ ಸಪತ್ನಿಯರೊಳ್ಪಿನ ಮಾೞ್ಪನೂನಸ
ತ್ಕೃತಿ ಜನಮೆಯ್ದೆ ಕೀರ್ತಿಸುವ ಸನ್ನುತಿ ಲೋಕದೊಳಾಣೆ ಸಲ್ವಹಂ
ಕೃತಿ ದೊರೆವೆತ್ತ ಭಾಗ್ಯದ ಚಮತ್ಕೃತಿ ಸಂದ ವಿವೇಕವೃದ್ಧಸ
ಮ್ಮತಿ ಸುತನಿಲ್ಲದಂದೆನಗೆ ನಿಷ್ಫಲಮೆನ್ನದದೇನನೆಂಬುದೋ       ೮೧

ಇಹಪರಲೋಕಸಂಭವಸುಖಂ ಸಮನಿಪ್ಪುದು ಪುತ್ರನಪ್ಪುದುಂ
ಗೃಹಿಗವನಿಲ್ಲದಿರ್ಪಧಿಕರಾಜ್ಯವಿಭೂತಿಯಿನಪ್ಪುದೇನೊ ನಿ
ರ್ವಹಿಸದರಣ್ಯದೊಳ್ ಚರಿಪೊಡಂ ತಪದಿಂ ಸತಿಯರ್ಗೆ ಮುಕ್ತಿಯಾ
ನಹಹ ನಿರರ್ಥಜನ್ಮೆಯೆನುತುಂ ಸುರಿದಳ್ ಬಿಸುಸುಯ್ದು ಬಾಷ್ಪಮಂ         ೮೨

ವ || ಅಂತಳವಿಗೞೆದೞಲನೊಳಕೊಳ್ವುದುಮಾತನಿಂತೆಂದಂ

ಉ || ಸರ್ವ ಕಳಾವಿಭಾಸಿ ಸುಮನಃಪರಿತೋಷಕರಂ ಸಲಕ್ಷಣಂ
ಪಾರ್ವಣಚಂದ್ರನಸ್ತಮಿತದುಸ್ತಮನಾತ್ತ ಸುವೃತ್ತನೊರ್ಮೆಯೇ
ಪೂರ್ವದಿಶಾಸಮುದ್ಭವನೆ ಪೇೞ್ ಪಲವುಂ ದಿನಮಿರ್ದೊಡಲ್ಲದಂ
ತೂರ್ವಿಗೆ ರಾಜನಪ್ಪ[ನು]ದಯಂ ನಿನಗಪ್ಪುದು ದೇವಿ ನಿಶ್ಚಯಂ    ೮೩

ಚಂ || ಪಡೆದೊಡದೇನೊ ಕಾಡಲತೆಗಳ್ ಪಲವಂ ಪಲವುಂ ಫಲಂ ದಿಟಂ
ತಡೆದೊಡಮೇನೊ ಕಲ್ಪಲತೆ ಲೋಕದ ದೃಷ್ಟದೆ ಸೇವ್ಯಸತ್ಫಲಂ
ಬಿಡಿಯದುದಲ್ತು ಮಿಕ್ಕ ವಧುಗಳ್ ಪಡೆದೇಂಗಳ ಮಕ್ಕಳಂ ಮಗಂ
ಬಡೆದಪೆ ನೀನೆ ದಲ್ ಜಗದ ಭಾಗ್ಯದ ಮುಂಬಿನೊಳಂಬುಜಾನನೇ   ೮೪

ವ || ಎಂದೆನೆ ತತ್ಕಾಲೋಚಿತ ವಚನತುಷಾರಸೇಚನದಿನೀಷದ್ವಿಶ್ರಾಂತ ಚಿಂತಾಸಮುದ್ಭೂತಾಂ ತಃಶೋಕಸಂತಾಪಶ್ರಮೆಯಾಗಿ ಮತ್ತಮಿನಿತುಂ ಪೊೞ್ತುಂ ಬಸಿಱೊಳಪ್ಪ ಬಯಕೆಗಳ್ಗಿವೆ ಕಾರಣಂಗಳೆನಿಸಲ್ ತಕ್ಕ ಬಯಕೆಗಳಿಂ ಬಯಸುತಿರ್ದಳದೆಂತೆಂದೊಡೆ

ಕಂ || ಈ ತನುವಲ್ಲಿ ಜಗತ್ಸಂ
ಪ್ರೀತಿಕರಪ್ರಸವಮೊಂಱೊಳಮೊಂದದೆ ತಾ
ನೇತಕ್ಕೆ ನಿಷ್ಫಲಂ ಪು
ಷ್ಪಾತಿಶಯಂಬಡೆದು ಬೇಸಱಂ ಬೀಱುವುದೋ೮೫

ಪೊಲೆ ಪಿಂಗದೆ ಪೊಂಗುವುದ
ಕ್ಕಲಸುವರಾಳಿಜನಂಗಳೆನ್ನಯ ಬಸಿಱೊಳ್
ಕುಲಪೂತನೆನಿಪ್ಪ ಮಗಂ
ನೆಲಸುತ್ತೀ ಪೊಲೆಯನೆಂದು ಪೇೞ್ ಪಿಂಗಿಪನೋ          ೮೬

ಅಂಗಭವನಂಗಭವನೆನೆ
ಪಿಂಗದೆ ಮನದೊಳಗೆ ಪುಟ್ಟಿ ರತಿಯುತ್ತಪಳಂ
ಸಂಗಳಿಸಲ್ ತೋರ್ಪವನೆಂ
ದಂಗದೊಳೊಗೆದೆನಗೆ ಸಿರಿಯ ಸೈಪಂ ಮಾೞ್ಪಂ೮೭

ಸುವಿದಿತಮಿನಿತು ದಿನಂ ಸ್ತ್ರೀ
ಸವನಂ ನಿನಗಿಂದು ಕಾಂತೆ ಪುಂಸವನಂ ಮಾ
ಡುವದೊಂದರ್ಥಾಂತರದಿಂ
ದವನೀಶಂ ಸರಸವಾಡಿ ಕಾಡುಗುಮೆಂದೋ       ೮೮

ಪೆರ್ಚಿಸಿದ ಪೊರ್ಕ್ಕುೞೊಳ್ ಮಿಗೆ
ಸಾರ್ಚಿ ಹರಿದ್ರಾಂಭಕಾಂಶಮಂ ತಳ್ತೆಮೆಗಳ್
ಬಿರ್ಚಿದ ಬಾಳಕನಂ ಮೆ
ಯ್ವೆರ್ಚುತ್ತೀಕ್ಷಿಸುವ ಸೈಪದೆಂದಾದಪುದೋ    ೮೯

ಕಂದಂಗೆ ರಾಜ್ಯಚಿಹ್ನಮ
ನೊಂದರಡುಮನುೞಿಸಿ ಮಂದಿಗೆರೆದರ್ಥಮನಾ
ಮಂದಾರಂ ಕೆಯ್ವಂದವೊ
ಲೆಂದಿತ್ತೆಸಗುವನೊ ನೃಪತಿ ಜನನೋತ್ಸವಮಂ೯೦

ಅಂಜನಮಕ್ಷಿದ್ವಯದೊಳ್
ರಂಜಿಸೆ ಸೊಡರ್ವಕ್ಕು ನೊಸಲೊಳೆಸೆದಿರೆ ಪದದಿಂ
ಮಂಜೀರಕರವ ಮೊಗೆಯೆ ಮ
ಗಂ ಜಗುೞುತ್ತೆಂದೊ ತೊಟ್ಟಿಲಂ ಪಟ್ಟೊದೆವಂ            ೯೧

ತನುಜನಖಿಳಾರ್ಥ ಕಲ್ಪಾ
ವನಿಜಂ ತಣಿಯುಂಡು ಬಳೆವೊಡೀ ಪೀನಘನ
ಸ್ತನಮೆ ಪಯೋಧರಮಾತ
ಕ್ಕಿನುರೋಜಭರಕ್ಕದೊಂದು ಪೆಸರೊಳ್ ಪೊರೆಯೇ        ೯೨

ಹಾರಕ್ಕದೊಂದೆ ನಾಯಕ
ವಾರಯಲೆಂದರಸನೀಕ್ಷಿಸುತ್ತುಂ ನಲಿಯಲ್
ದಾರಕನಂ ಘನತೇಜ
ಸ್ಸಾರನ ನಾನೆಂದು ನಲ್ಮೆಯಿಂದೆತ್ತುವೆನೋ     ೯೩

ಓಲಗದೊಳ್ ಮಗನವನೀ
ಪಾಳರ ಕೆಯ್ಗೆಯ್ಗೆವಂದು ಕೆಯ್ಗನ್ನಡಿಯಂ
ತಾಲೋಕಿಸಿ ಮೊಗಮಂ ಮಣಿ
ಮೌಳಿಯೊಳೆಂದಭಯಮೀವವೊಲ್ ಕೆಯ್ಯಿಡುವಂ          ೯೪

ಕೆಂದಾವರೆಗೆತ್ತಡಿಯೊಳ್
ಸಂಧಿಸಿ ಕಳಭಂಗಳೆಳಸೆ ಕೆಯ್ಯಂ ಮುರಿದಾ
ಸ್ಯೇಂದುವನೀಕ್ಷಿಸಿ ಸಿಂಗದ
ಚಂದದಿನೆಂದಂಬೆಗಾಲೊಳೆಸೆವನೊ ಕಂದಂ        ೯೫

ಅಂದುಗೆಯ ನೂಲ ಕಂಕಣ
ದಿಂ ದನಿ ಮಿಗೆ ದೇವದೇವದೇವೆಂದೆರೆದಾ
ನುಂ ದೇವನುಮೆನೆ ಕಂದಂ
ನಿಂದು ಬೆರಲ್ವಿಡಿದದೆಂದೊ ದಟ್ಟಡಿಯಿಡುವಂ೯೬

ಉ || ಬಾಳಮರಾಳಮಂ ಬಳಸಿ ಬೆಂಬೞೆಗೊಂಡೆಡೆಯಾಡುತುಂ ಮೃಗೀ
ಬಾಳಕಜಾಳದೊಳ್ ನಲಿವಿನಿಂ ನೆಗೆದಾಡುತುಮಂತೆ ಹಸ್ತಿನೀ
ಬಾಳಕಹಸ್ತಮಂ ಪಿಡಿದು ಪಿಂದಣ ಮೆಯ್ಗೊಲೆದಾಡುತುಂ ದರೋ
ನ್ಮೀಳಿತಮೆನ್ನ ದಿಟ್ಟಿಯೆನೆ ತನ್ನೊಡನಾಡಿಪನೆಂದೊ ಬಾಳಕಂ        ೯೭

ಚಂ || ಅರಮನೆವಾಗಿಲೊಳ್ ಚರಿಗೆಗೊಟ್ಟವರಂ ನಿಲಿಸಲ್ಕೆ ಪೋಪ ಭೂ
ಪರನೊಡವೋಗಿ ಮುಂಬರಿದು ಮೊೞ್ಗೆ ತದಂಘ್ರಿಯ ರೇಣುವಕ್ಕಜಂ
ದೊರೆಯದ ರಕ್ಕೆವೊಟ್ಟೆನಿಸಿರಲ್ಕೆ ಣಮೋದು ಣಮೋದು ನಿಲ್ಲಿಮೆಂ
ದೊರೆದು ಮುನೀಂದ್ರರಾನನದರಸ್ಮಿತಮಂ ಮಗನೆಂದು ಮಾೞ್ಪನೋ         ೯೮

ಕಂ || ಬಾಲಕನನಿರುಳ್ವಗಲುಪ
ಲಾಲಿಸುತುಂ ಮಜ್ಜನಾದಿಯಿಂದಲಸದ ಧಾ
ತ್ರೀಲಲಿತಕೃತ್ಯಮಂ ಕಂ
ಡೋಲಗಿಸುವೆನೆಂದೂ ವಸ್ತ್ರಭೂಷಾದಿಗಳಂ     ೯೯

ವ || ಎಂದಿವು ಮೊದಲಾಗೆ ಪಲವುಂ ಪುತ್ರದೌಹೃದಂಗಳಂ ಪಂಬಲಿಸುತ್ತುಮಿರ್ದಳಲ್ಲದೆಯುಂ

ಚಂ || ದಿವಸಕರೋದಯ ತಡೆದ ಪೂರ್ವದಿಶಾರಮೆ ಮರ್ವು ಕೊರ್ವಿ ತೋ
ಱುವ ತೆಱದಿಂದೆ ಮುನ್ನೆ ತನುಕಾಂತಿ ಕೞಲ್ದುದು ಮತ್ತೆ ಭಾನು ಮೂ
ಡುವ ಪದದೊಂದು ಮುಂಬಿನೊಳೆ ಬೆಳ್ಕರಿಪಂತಿರೆ ಕೂಡೆ ಪಾಂಡುರ
ಚ್ಛವಿಯೊಳಕೊಂಡುದೊಂದೆ ದಿನಮಿಂತುಟು ಚಿಂತೆ ನರೇಂದ್ರದೇವಿಯಾ       ೧೦೦

ವ || ಎಂದಾದ್ಯಂತಂಬರಂ ಚದುರಿಕೆ ಬಿನ್ನಪಂಗೆಯ್ವುದುಮರಸನದೆಲ್ಲಮಂ ಕೇಳ್ದು ನಸುನಗುತ್ತುಂ ಮಹಾದೇವಿಗಿಂತೆಂದಂ

ಮ.ಸ್ರ || ಇದು ದೈವಾಯತ್ತಮಾಗಿರ್ಪುದು ಬಗೆವೊಡೆ ಚಿಂತಾಸಮುತ್ಸೇಕದಿಂದ
ಪ್ಪುದೆ ಪುತ್ರೋತ್ಪತ್ತಿ ಮುನ್ನಂ ನೆರಪಿದ ಸುಕೃತಂ ಪಕ್ವಮಾದಲ್ಲದಂದಾ
ವುದುಮಿಷ್ಟಾವಾಪ್ತಿಯಿಲ್ಲಾನನುದಿನಮಿದೆ ದಲ್ ಚಿಂತೆಯಾಗಿರ್ದಪೆಂ ತೋ
ಱದೆ ಚೇತೋವೃತ್ತಿಯನ್ನೀಂ ಕೊರಗುವೆಯರುಣಾಂಭೋಜಪತ್ರಾಯತಾಕ್ಷೀ೧೦೧

ಕಂ || ಸುತರಿಲ್ಲದ ಬಾೞ್ ನ್ಯಾಯೋ
ಚಿತಮಿಲ್ಲದ ರಾಜ್ಯಸಂಪದಂ ಸದ್ದೈಷ್ಟಿ
ಸ್ಥಿತಿಯಿಲ್ಲದ ಚರಿತಮಿವಾ
ಯತಿಯೊಳತಿವ್ಯರ್ಥಮೆಂದು ನಿಶ್ಚಯಿಸಿರ್ಪೆಂ    ೧೦೨

ವ || ಅದಲ್ಲದಿಂದೆ ನಿನ್ನ ಚಿಂತಾಪರಿಹಾರಕಮಪ್ಪುದೊಂದುದಂತಮಂ ಕೇಳೆಂದಿಂತೆಂದಂ

ಉ || ಅಷ್ಟಮಿಯಿಂದೆನಲ್ ಪುರದ ತೀರ್ಥದ ಚೈತ್ಯಗೃಹಕ್ಕೆ ಪೋಗಿ ತ
ದ್ವಿಷ್ಟಕನಾಥನಂ ನಮಿಸಿ ಪೂಜಿಸಿ ವಂದಿಸಿ ದೇವ ಮಾೞ್ಪುದೆ
ನ್ನಿಷ್ಟಮನೆಂದು ಬೇೞ್ಪ ಪದದೊಳ್ ಪದಪೀಠದ ಮಾತುಳುಂಗಮೇಂ
ತುಷ್ಟಿಯನಿತ್ತದೋ ಜಗುೞೆವಂದಿದಿರ್ಗೊಂಡು ಮನಕ್ಕಪೂರ್ವಮಂ           ೧೦೩

ಕಂ || ಆಗಳ್ ಪುರೋಹಿತಂ ವಿವಿ
ಧಾಗಮವಿದನಿದುವೆ ಭಾವಿ ಪುತ್ರಾವಾಪ್ತಿ
ಶ್ರೀಗೆ ನಿಮಿತ್ತಂ ಪಿಡಿ ನೀಂ
ರಾಗದೊಳೆಂದೆನ್ನ ಕೆಯ್ಗೆ ಪರಸುತ್ತಿತ್ತಂ           ೧೦೪

ವ || ಎಂದು ಪೇೞ್ದು

ಕಂ || ಕೆಲದಡಪವಳ್ತಿಯಂನೋ
ಡಲವಳ್ ಗಂಧಾಕ್ಷತಪ್ರಸೂನ ಸುಧೂಪಂ
ಕಲಸೆ ಪೊಸಗಂಪುವೀಱುವ
ಫಲವಂ ತೆಗೆದೀಯೆ ಕೊಟ್ಟನರಸಿಯ ಕೆಯ್ಯೊಳ್೧೦೫

ವ || ಆ ಮಾತುಳುಂಗಫಲಮನಭೀಷ್ಟಫಲಮನಾಂಪಂತಂಜಳಿಪುಟದಿನಾಂತು ಮನಂಗೊಂಡು

ಮ || ಸುತಜನ್ಮೋತ್ಸವಮಾಗಳಾದ ತೆಱದಿಂ ರೋಮಾಂಚಮಂ ತಾಳ್ದಿ ಹ
ರ್ಷಿತೆ ಹರ್ಷಾಶ್ರುಜಲಾರ್ದ್ರನೇತ್ರೆ ಫಲಪೂರಂ ಜನ್ಮಸಾಫಲ್ಯಸಂ
ಸ್ಥಿತಿಯಂ ಮಾಡಿದುದೆಂದು ನೋಡಿದಳಲಂಪಿಂ ಸುತ್ತಿರಲ್ ಲೋಚನ
ದ್ಯುತಿ ಕೆಯ್ವೊಕ್ಕನಿಧಾನಮಂ ಬಡವನಂದಾಚ್ಛಾದನಂಗೆಯ್ವವೋಲ್          ೧೦೬

ವ || ಅಂತು ನೀಡುಂ ನೋಡಿ ಸಂತತ ಸಂತೋಷಾಮೃತಾಂಬುನಿಧಿಯೊಳೋಲಾಡಿ ಮೂಡಿ ಮುೞ್ಕಾಡಿ ತದನಂತರಂ

ಕಂ || ವಿಸ್ಮಯಮೆಂತೆಂತೆಂದು ದ
ರಸ್ಮಿತೆ ಬಗೆಗೊಂಡು ಬೆಸಗೊಳಲ್ ಶಾಸನದೇ
ವೀಸ್ಮೃತಿಯಿಂದಾಯ್ತವರ್ಗೇಂ
ವಿಸ್ಮೃತಿಯೇ ನಿನ್ನ ಮಾೞ್ಪ ಬಹುಸತ್ಕಾರಂ     ೧೦೭

ವ || ಎಂದರಸಂ ಯಥಾರ್ಥಪ್ರೇಮಚಾರುಚಾಟುವಚನಾಮೃತವರ್ಷದಿಂದರಸಿಯ ಗಾತ್ರಕ್ಷೇತ್ರದೊಳ್ ರೋಮಹರ್ಷಸಸ್ಯಸಮೃದ್ಧಿಯಂ ಮಾಡಿ ಮತ್ತಮಿಂತೆಂದಂ

ಕಂ || ಧರ್ಮಮೆ ದೇಹಿಗಳಿಹಪರ
ಶರ್ಮಕ್ಕೆ ನಿದಾನ ಮದನನೂನವಿಧಾನಂ
ನರ್ಮದಿನೆಸೆಗುತ್ಕಟಸ
ತ್ಕರ್ಮಂ ಪ್ರತ್ಯಕ್ಷಫಲಮನೀವುದು ಪುಸಿಯೇ     ೧೦೮

ವ || ಎಂದು ಪದ್ಮರಾಜಂ ಧರ್ಮೋದ್ಯೋಗದೊಳ್ ನಿಯಾಮಿಸುವುದುಮಾ ದಿನಂ ಮೊದಲ್ಗೊಂಡು ವನಮಾಲಾಮಹಾದೇವಿ ಪುತ್ರಕಾಮ್ಯದಿಂದಮೌಷಧಾನ್ನದಾನಾದಿ ಚತುರ್ವಿಧಧರ್ಮತತ್ಪರೆಯಾಗಿ

ಕಂ || ಸರುಭಿಯ ತೊರೆದ ಕುಚಂಗಳ
ಬೆರಗಂ ಬೆರಲಿೞಿಸೆ ಪರಮಹಸ್ತಪುಟಾಂ
ತರದೊಳಮೃತಮನೆ ಕಱೆದಾ
ವರವಧು ಪುತ್ರಾರ್ಥಿ ಪಾತ್ರಶೇಷಮನುಣ್ಬಳ್   ೧೦೯

ಚಂ || ನವವರರತ್ನ ಕಾಂಚನದೆ ನಿರ್ಮಿಸಿ ನಾೞ್ಪ್ರಭುವಂಶಮೇರು ಸಂ
ಭವಿಸುವನಕ್ಕೆ ಮಜ್ಜಠರಭೂಮಿಯೊಳೆಂದು ಸುಮೇರುವಂ ಮಹೋ
ತ್ಸವದೆ ಜಿನೇಂದ್ರಜನ್ಮಸವನೋತ್ಸವಮಂ ಮಿಗೆ ಮಾಡಿ ತತ್ಪಯಃ
ಪ್ಲವದೊಳೆ ಮಿಂದು ವಂದಿಗೆ ತದದ್ರಿಯನೀವಳಿದೇನುದಾತ್ತೆಯೋ೧೧೦

ಮಂದಾಕ್ರಾಂತ || ಸಂತಾನಶ್ರೀಪ್ರದಮಿದೆನಗಕ್ಕೆಂದು ರತ್ನಂಗಳಿಂದಂ
ಸಂತಾನೋರ್ವೀಜಮನೆಸಗಿ ತನ್ಮೂಲದೊಳ್ ಭವ್ಯವಿದ್ವ
ತ್ಸಂತಾನಂ ಜೇಂಕರಿಸಿ ಜಿನಪೂಜೋತ್ಸವಂ ಮಾಡೆ ದಿಗ್ವಾ
ಸಂ ತಾನಾಯ್ತೆಂದೆನೆ ಜಸಮೊಱಲ್ದರ್ಥಿಗೀಯುತ್ತುಮಿರ್ಪಳ್         ೧೧೧

ಕಂ || ವ್ರತಮೆನಿತೊಳವನಿತುಮನಾ
ಸತಿ ಸತತಂ ನಿರತಿಚಾರದಿಂ ನೆಗೞ್ವಳ್ ವಿ
ಶ್ರುತತೀರ್ಥಕೃತ್ಪುರಾಣಂ
ಶ್ರುತಿಪೂರಮೆನಲ್ ಕರಂ ಸುತಾರ್ಥಿನಿ ಕೇಳ್ವಳ್  ೧೧೨

ಪದೆದಷ್ಟಾಹ್ನಿಕದೊಳ್ ಪ
ರ್ವದಿನಂಗಳೊಳಖಿಳತೀರ್ಥಕೃತ್ಕಲ್ಯಾಣಾ
ಭ್ಯುದಯದಿವಸಂಗೊಳ್ ತ
ಪ್ಪದುಪೋಷಿತೆಯಾಗಿ ದರ್ಭಶಯನದೊಳಿರ್ಪಳ್          ೧೧೩

ಪದಿನಾಱನೆಯಗ್ಗದ ಸ
ಗ್ಗದ ಸಾಧನವೆನಿಪ ಪುಣ್ಯಮಂ ಪುತ್ರನಿಮಿ
ತ್ತದಿನಾಚರಿಸಿದಳಾ ಸ
ಗ್ಗದೊಳಾರ್ಗಳ ಪುತ್ರಸೌಖ್ಯಮಂ ಪೆತ್ತವರ್ಗಳ್  ೧೧೪

ವ || ಇಂತು ನೆಗೞ್ತೆಗಂ ಪೊಗೞ್ತೆಗಮಳುಂಬಮಪ್ಪ ಧರ್ಮತತ್ಪರತೆಯಿನಿನಿತು ಪೊೞ್ತಪ್ಪೊಡಂ ತಪ್ಪದೆ ಕಾಲಂ ಸಲುತ್ತುಮಿರಲೊಂದುದೆವಸಂ

ಕಂ || ಮೂಡಿದ ಮೊಡವಿ ಮುಗುಳ್ಮೊಗ
ವೀಡಿಱೆವುನ್ಮಂಜರೀಸ್ತನಂ ತೋಳ್ಮೊದಲೊಳ್
ತೀಡುವ ನಱುಗಂಪೇಂ ಪಿಸು
ಣಾಡಿದುದೋ ಸತಿಗೆ ಪುಷ್ಪಸಮಯೋದಯಮಂ          ೧೧೫

ವ || ಆಗಳ್

ಕಂ || ಕಳೆದುಂ ಮಣಿದೊಡವಂ ಪೊಂ
ಗಳ ತೊಡವಂ ತೊಟ್ಟು ತಳೆದು ಸೆಳೆಯಂ ಪೋಲ್ತಳ್
ಕಳೆದುಡುಗಣಮಂ ಕೆಮ್ಮುಗಿ
ಲೆಳಸಿದ ಪೆಱೆ ಪೊಳೆವ ಪೂರ್ವದಿಗ್ದೇವತೆಯಂ  ೧೧೬

ವ || ಆ ಚತುರ್ಥದಿನದ ದಿನಕರೋದಯದೊಳ್

ಚಂ || ಒದಗಿದ ಸೌಖ್ಯಮಂ ಧರೆಗೆ ಬೀಱುವಪೂರ್ವಫಲೋದಯಕ್ಕೆ ತಾ
ನಿದೆ ನೆಲೆಯೆಂದು ಕಲ್ಪಲತೆಗಚ್ಚರಿಯರ್ ಪೊರೆದೊಂದು ದೇಸೆಯಿಂ
ಮೊದಲೊಳಲಂಪಿನಿಂ ಸುರಭಿಗೋಮಯಮಂ ತಳಿವಂತೆ ಗಾಂಗತೋ
ಯದೆ ಸಖಿಯರ್ ನೃಪಾಂಗನೆಗೆ ಮಂಗಳಮಜ್ಜನಮಂ ನಿಮಿರ್ಚಿದರ್           ೧೧೭

ವ || ಅನಂತರಂ ಭಗವಜ್ಜಿನೇಂದ್ರಪೂಜಾವಿವಿಧಮಂಗಳಮನಾಚರಿಸಿ ಮಂಗಳಾ ಲಂಕಾರಾಲಂಕೃತೆಯಾಗಿ

ಚಂ || ಮಳಯಜದಣ್ಪು ಸೋರ್ಮುಡಿಯ ಮಲ್ಲಿಗೆಯುಟ್ಟ ದುಕೂಲಚೇಲಮು
ಜ್ವಳಿಸುವ ಮುತ್ತಿನಾಭರಣಮೊಪ್ಪುವ ಕಪ್ಪುರದೋಲೆ ಬಾಯ ಕೆಂ
ಬೆಳಗಿನೊಳಣ್ಕೆಗೊಂಡ ಸುಲಿಪಲ್ ಪೊಸದೇಸೆಯನೀಯೆ ಕೂಡೆ ಕಂ
ಗೊಳಿಸಿದುದಂದು ಬೆಳ್ವಸದನಂ ಕುಮುದಾಯತಲೋಲನೇತ್ರೆಯಾ೧೧೮

ವ || ಅಂತು ಕೆಯ್ಗೆಯ್ದಂದಿನಿರುಳ್ ಮನಃಪ್ರಿಯನ ಸೂೞ್ಗೆವಂದು

ಕಂ || ರತಿರಾಗಮೃತವಾರ್ಧಿಯೊ
ಳತನುಕ್ರೀಡಾನಿಮಗ್ನೇಯಾದಂತಾ ದಂ
ಪತಿಗೆ ಮಿಗೆ ಮೂಡುತೆ ಮುೞುಂ
ಗುತೆ ಬೆಂಡೇೞ್ವಂತಿರಾಗೆ ಕಣ್ಗೆಯ್ದಾಗಳ್        ೧೧೯

ಪರಿಪೂರ್ಣಚಂದ್ರನಂ ತಿ
ಗ್ಮರೋಚಿಯಂಕಲ್ಪವೃಕ್ಷಮಂ ಕ್ಷೀರಜಲಾ
ಕರ ಮಂದರ ವಿಕಸದ್ವಾ
ರಿರುಹಮನಾ ಕಾಂತೆ ನಿಶೆಯ ಕಡೆಯೊಳ್ ಕಂಡಳ್           ೧೨೦

ಉ || ಮಂಗಳಗಾಯಿಕಾಮಧುರಗಾನದಿನೆೞ್ಚಱನೆಯ್ದಿ ನಿತ್ಯಕೃ
ತ್ಯಂಗಳ ಮಂಗಳಾಚರಣಮಂ ನೆಗೞುತ್ತೆ ಜಿನೇಂದ್ರನಂ ಜಗ
ನ್ಮಂಗಳವಸ್ತುವಿಂದಧಿಕ ಭಕ್ತಿಯಿನರ್ಚಿಸಿ ಕಾಂತನಲ್ಲಿಗೊ
ಲ್ದಂಗನೆ ಬಂದಳಂಗಜನ ಮಂಗಳಲಕ್ಷ್ಮಿಯೆನಲ್ ವಿಲಾಸದಿಂ          ೧೨೧

ವ || ಬಂದು ಮನೋವಲ್ಲಭನ ಸಿಂಹಾಸನಾರ್ಧಕ್ಕಲಂಕಾರಮಾಗಿರ್ದು ತನ್ನ ಕಂಡ ಕನಸುಗಳನನುಕ್ರಮದಿಂ ಪೇೞ್ವುದುಮರಸನಪರಿಮಿತಪರಿತೋಷಪೀಯೂಷಪಾರಾವಾರದೊಳೋಲಾಡಿ ಕೆಲದೊಳಿರ್ದ ಪುರೋಹಿತನ ಮೊಗಮಂ ನೋೞ್ಪುದುಮಾತನಾ ಸ್ವಪ್ನವಿಶೇಷಫಲಂಗಳಂ ಜಲಕ್ಕನಾಗೆ ತಿಳಿದಿಂತೆಂದಂ

ಮ || ವಿಧುವಿಂದಂ ವಿಬುಧೋತ್ಕರಪ್ರಿಯಕರಂ ತೀವ್ರಾಂಶುವಿಂದಂ ಪ್ರತಾ
ಪಧನಂ ಕಲ್ಪಮಹೀಜದಿಂ ಧನವಧಿತ್ಯಾಗಪ್ರಭಾವಂ ಪಯೋ
ನಿಧಿಯಿಂದಂ ನಿಖಿಳಾವನೀಶ್ವರಭಯಸ್ಥಾನಂ ದಳತ್ಪದ್ಮದಿಂ
ದಧಿಕ ಶ್ರೀನಿಳಯಂ ಸುಪುತ್ರನೊಗೆತರ್ಕುಂ ನಿಮ್ಮೊಳುರ್ವೀಶ್ವರಾ     ೧೨೨

ವ || ಎಂದು ಪೇೞ್ವುದುಂ ಪುರೋಹಿತನನೂನಪ್ರೀತಿದಾನದಿಂ ಮನ್ನಿಸಿ

ಕಂ || ಮಂದಾನಿಳನಲೆಪದೆ ಮಾ
ಕಂದಂ ವಿಚಕಿಳಲತಾಸಮೇತ ಮರಲ್ವಂ
ತಂದು ಪುರೋಹಿತನಮೃತ
ಸ್ಯಂದಿವಚಸ್ತತಿಯಿನೊಸೆದುದಾ ನೃಪಚಿತ್ತಂ     ೧೨೩

ವ || ಅಂತು ಸುಖಸಂಕಥಾವಿನೋದದಿಂದಿರುತ್ತುಂ ಕೆಲವಾನುಂ ದಿವಸಂಗಳ್ಗೆ

ಕಂ || ಭವಭವದೊಳ್ ಕಟ್ಟದನೇ
ಕವಿಧದ ದುಷ್ಕರ್ಮಮಂ ಕೞಲ್ಚಲ್ ಪುಣ್ಯಾ
ಸ್ರವದೊಳ್ ನೆರೆಯಲ್ ಭವ್ಯ
ರ್ಗಿವೆ ದಿವಸಮೆನಲ್ಕೆ ಬಂದ ನಂದೀಶ್ವರದೊಳ್೧೨೪

ಮ.ಸ್ರ || ಪಿರಿದುಂ ದೇವೇಂದ್ರನೊಳ್ ಮಚ್ಚರಮಿದೆನೆ ಚೈತ್ಯಾಲಯಂ ಮಂ
ದರಚೈತ್ಯಾವಾಸಮಾಗಲ್ಕುಪವನ ಚತುರಾಶಾಸರೋಮಧ್ಯಕೇಳೀ
ಧರಣೀಭೃಚ್ಚೈತ್ಯಗೇಹಾವಳಿ ನಿರುಪಮನಂದೀಶ್ವರದ್ವೀಪಚೈತ್ಯೋ
ತ್ಕರಮಾಗಲ್ ಪೆಂಪಿನಷ್ಟಾಹ್ನಿಕದ ಮಹಿಮೆಯಂ ಮಾಡಿದಂ ಪದ್ಮರಾಜಂ   ೧೨೫

ವ || ಅಂತು ನಿರ್ವರ್ತಿತನಂದೀಶ್ವರಪರ್ವಾಪೂರ್ವ ಮಹಾಮಹನಾಗಿ ಬಹಿರುದ್ಯಾನದಿಂ ಪುರಾಭಿಮುಖನಾದ ಸಮಯದೊಳ್ ಒರ್ವ ದೂತನತಿತ್ವರಿತಗತಿಯಿಂ ಬಂದು ಸರ್ವಾಂಗಾಲಿಂಗಿತಮಹೀತಳನಾಗಿಂತೆಂದಂ

ಉ || ದೇವ ಭವದ್ವಿರೋಧಿನರಪಾಳರ ದೇಶದಶೇಷವಸ್ತುವಾ
ಹಾವಳಿಯೆಲ್ಲಮಂ ನೆಱೆಯೆ ಸೂಱೆಯನೀೞ್ಕುಳಿಗೊಂಡು ಚಂಪೆಯೊಳ್
ತೀವಿ ತದೀಶನಂ ಸೆಱೆಗೆದಂದಿಳೆಯೀಂದುದೆನಲ್ ಪುಳಿಂದರೆ
ಮ್ಮೀ ವಿಷಯಕ್ಕೆ ದಾೞಿಯಿಡಲುಜ್ಜುಗದಿಂದಿರೆ ಮಿಕ್ಕ ಸೊರ್ಕಿನಿಂ  ೧೨೬

ಕಂ || ಚರರಱೆಪೆ ಚತುರ್ಬಲಮಂ
ನೆರಪುತ್ತುಂ ಭರದೆ ಸಿಂಹವರ್ಮಧರಾದೇ
ವರ ಸೇನಾಪತಿ ಚಂಪಾ
ಪುರಮಂ ಪರಿಯಿಟ್ಟು ಮುತ್ತಿದಂ ಮೂವಳಸಿಂ೧೨೭

ವ || ಅಂತು ಗಾಳಿಗಂ ನುಸುಳಲ್ಬಾರದಂದದಿಂ ಸಂದಣಿಸಿ ಮುತ್ತಿ ಕೋಂಟೆಯಂ ಪತ್ತಲವ್ವಳಿಪಗುರ್ವಿನ ದೋರ್ವಲದ ಪೆರ್ವಲಮಂ ಕಂಡಡವಿಯೆಲ್ಲಮಂ ಸುಟ್ಟುರೆಯ ಮಸಕದಿಂ ಸುೞೆದು ಸುತ್ತಿ ಸುಡುವ ಬೆಟ್ಟವೇಸಗೆಯಬೇಗೆಗಿರ್ಚಿನ ಬಳಸಿಂಗೊಳಗಾದ ಸಿಂಗದ ಸಂಗಡದಂತೆಯುಂ ಕಾಡಾನೆಯ ಕಡುಪಿನಂತೆಯುಂ ಪೆರ್ವುಲಿಯ ಪಿಂಡಿನಂತೆಯುಂ ಕಾಡೆಮ್ಮೆವೋರಿಯ ಹಾರಿಯಂತೆಯುಂ ಪಂದಿಯ ಗೊಂದಳದಂತೆಯುಂ ಅಮ್ಮಾವಿನ ಶೋಮೆಯಂತೆಯುಂ ತೋಳದ ಗೂಳೆಯದಂತೆಯುಂ ಎತ್ತಲುಂ ಮಿಡುಂಕಲ್ಪಡೆಯದೆ ಸಿಡಿಮಿಡಿಗೊಂಡು ಸಿಡಿದು ಸಿಡಿಲೇೞ್ಗೆಯೆರ್ದು ಪಲ್ಗಡಿದು ಮಾಮಸಕಂ ಮಸಗಿ ಮುನ್ನಾರ್ಗಮೊಳಸೋರದಗ್ಗಲಿಸಿದ ಮದದಿಂ ಮೇಗುಂ ಮೆಯ್ಸರಿಯದೆ ತಮ್ಮೊಳ್ ಪರಿಚ್ಛೇದಿಸಿ

ಮ || ರಸೆಯಂ ಪೊಕ್ಕುಳಿದಿರ್ದ ದಾನವಚಯಂ ದೇವೇಂದ್ರನೊಳ್ ಕಾದುವೇ
ರ್ವೆಸದಿಂದರ್ವಿಸಿ ಬಂದುದೋ ರವಿಯ ಮೇಲೆೞ್ತಂದುದೋ ದುಸ್ತಮಃ
ಪ್ರಸರಂ ತಾರ್ಕ್ಷ್ಯನನಿಕ್ಕಲುರ್ಕಿದುದೊ ಕಾಳವ್ಯಾಳಜಾಳಂ ವಿಗು
ರ್ವಿಸಿತೆಂಬಂತೆ ಪುಳಿಂದಸೇನೆ ಪೊಱಮಟ್ಟಿತ್ತಾ ಪುರದ್ವಾರದಿಂ        ೧೨೮

ವ || ಅಂತು ಪೊಱಮಟ್ಟು ಅಗುರ್ವುಮದ್ಭುತಮುಮಾಗೆ ತಾಗಿ ತಳ್ತಿಱೆವಾಗಳ್

ಮ || ಅದನೇವೇೞ್ದಪೆನೀಗಳಾ ಸಮಯದೊಳ್ ಪತ್ತಿರ್ದ ಸೇನಾಸಮು
ದ್ರದದಂದೇಶಮಹೌರ್ವದುಗ್ರ ಸುಭಟಜ್ವಾಲಾಳಿಯಸ್ತ್ರ ಸ್ಫುಲಿಂ
ಗದ ಕೋಳ್ಗೆೞ್ದುದುದಿಲ್ಲ ತನ್ನಗರಕೋಟಾವೇದಿಕಾದ್ವಾರಮಾ
ರ್ಗದಿನುರ್ಬಿಂ ಪರಿದಾಂಪ ಲುಬ್ಧಕವಿಜೃಂಭದ್ವಾಹಿನೀಸಂಚಯಂ   ೧೨೯

ವ || ಅಂತು ಗಾಳಿಗಿದಿರ್ಚಿದ ಮೇಘಾಳಿಯಂತೆ ಬೇಡೆವಡೆಯೞ್ಕೂಡಿ ಪೋಗೆ ಚಂಪಾಪುರಮಂ ಪೊಕ್ಕು ತತ್ಪುರಾಧಿಪಂ ದೇವರ ದಿಗ್ವಿಜಯದಿಂ ತೊಟ್ಟು ಮೂವಿಡಿವಟ್ಟಿರ್ಪನ ಪ್ಪುದಱೆಂ ಸೆಱೆಯಂ ಬಿಟ್ಟಲ್ಲಿಯೆ ನಿಲಿಸಿ ಕಿರಾತಕರ್ ತಂದೊಟ್ಟಿ ಬೆಟ್ಟದಂತಿರ್ದ ಸಾರದ್ರವ್ಯಸಂಚಯಕ್ಕೆ ಭಂಡಿಯುಂ ಕೊಟ್ಟಿಗೆಯುಂ ವೊಟ್ಟೆಯುಂ ಪೊಱೆಯಾಳುಂ ನೆಱೆಯದೆ ಚಾತುರ್ಬಲದ ತಲೆವೊಱೆಯೊಳ್ ತಂದಿಂದೀಗಳ್ ನಿನ್ನ ಪಾದಪದ್ಮಮಂ ಕಾಣಲ್ ಬರುತಿರ್ದಪನೆಂದು ಮತ್ತಮಿಂತೆಂದಂ

ಶಾ || ದೇವರ್ ದಿಗ್ವಿಜಯಂಗೆಯುತ್ತಖಿಳ ಧಾತ್ರೀನಾಥರೊಳ್ ಕೊಂಡೆ ನಾ
ನಾವಸ್ತೂತ್ಕರದಿಂದನೇಕಗುಣಮಿಂತೀ ವಸ್ತುವಂತಾದೊಡೇ
ನೀವುತ್ತರ್ಥಿಜನಕ್ಕಣಂ ತಣಿಯದಿರ್ಪೀ ನಿನ್ನ ಕೆಯ್ವೊಕ್ಕೊಡಾ
ದೇವಾದ್ರೀಂದ್ರಮಣೂಪಮಾನಮೆನೆ ಮತ್ತಿನ್ನಾವುದುಂ ದೊಡ್ಡಿತೇ            ೧೩೦

ವ || ಎಂದು ಬಿನ್ನವಿಸಿ ಮಾಣ್ದ ದೂತನ ಮಾತಂ ಮನದೆಗೊಂಡು ತುಷ್ಟಿದಾನಂಗಳಿಂದವನಭೀಷ್ಟಮಂ ತೀರ್ಚಿ ತದುದ್ಯಾನಬಾಹಿರವಾಹಳೀಪ್ರದೇಶಕ್ಕೆ ವಂದು ಸಾಷ್ಟಾಂಗಪ್ರಣತಿಪೂರ್ವಕಂ ಕಾಣ್ಕೆಗೊಟ್ಟು ಪೊಡೆವಟ್ಟ ಸಿಂಹವರ್ಮನುತ್ತಮಾಂಗದೊಳ್ ಪದಮಿಟ್ಟು ತಂದು ಸಂದಳಿಸಿ ಗೊಂದಳಂಗೊಳಿಸಿದ ವಸ್ತುವಾಹನಾದಿಗಳಂ ಬೇಱೆವೇಱೆ ವಿವರಿಸಿ ನೋೞ್ಪಾಗಳ್ ಸಂತೋಷಗೊಂಡು

ಚಂ || ಎಣಿಸುವೊಡಂದೊಂದೆರಡುಮೂಱಱ ಲೆಕ್ಕಮೆ ಲಕ್ಷ ಕೋಟಿಯಿಂ
ಗಣಿಯಿಸುವಾನೆಯೊಟ್ಟೆಯ ತುರಂಗದ ವೇಸರಿಯೆಮ್ಮೆಯಾಕಳೊ
ಳ್ಗಣಿಕೆಯರಸ್ತ್ರವಸ್ತ್ರ ಮಣಿಕಾಂಚನಭೂಷಣಪೂರ್ಣಪೇಟಿಕಾ
ಗಣವರ ಕುಪ್ಯಸಾರಧನದೋಳಿಗಳೆಣ್ದೆಸೆಗೆಲ್ಲ ಕಣ್ಬೊಲಂ           ೧೩೧

ವ || ಅಂತು ತೋರ್ಕೆಗಳುಂಬಮುಮಾದನೇಕ ಧನ ಜೀವಧನಂಗಳುಮಂ ತಂದ ಸೇನಾನಿಯ ಸಾಹಸಮಂ ವೈಶ್ರವಣಾಮಾತ್ಯನುಂ ತಾನುಮೋರೊರ್ವರೊಳ್ ಮಗುೞೆಮಗುೞೆ ನುಡಿಯುತ್ತುಂ ಮಂಗಳಾನಕರವಂಗಳ್ ಮೊೞಗೆ ಪೊೞಲಂ ಪುಗುವಾಗಳ್

ಚಂ || ಅತನುಗೋನ್ನತಂ ವಿನತಶತ್ರುಕುಲಂ ಸುಕುಲಪ್ರಭೂತಿ ಸಂ
ಗತಮಹಿಮೋತ್ತರಂ ವಿತರಣಪ್ರಥಿತಂ ಕಥಿತಪ್ರಭಾವ ಸ
ನ್ನುತ ಜಿನಮಾರ್ಗಧರ್ಮಚರಣಂ ಕರಣತ್ರಯಶುದ್ಧನೆಂದದೇಂ
ಸ್ತುತಿಯಿಸಿದತ್ತೊ ಸಂತಸದೆ ಪೌರಜನಂ ಪ್ರಭುವಂಶಮೇರುವಂ      ೧೩೨

ಗದ್ಯ

ಇದು ಸಮಸ್ತಭುವನಸಂಸ್ತುತಜಿನಾಗಮಕುಮುದ್ವತೀ ಚಾರುಚಂದ್ರಾಯಮಾಣಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತಸೂಕ್ತಿಚಂದ್ರಿಕಾಪಾನ ಪರಿಪುಷ್ಟ ಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ನಾಯಿಕಾಭ್ಯುದಯವರ್ಣನಂ ತೃತೀಯಾಶ್ವಾಸಂ