ಕಂ || ಶ್ರೀ ಜಿನಪದನಖಮುಕುರಸ
ಮಾಜದೊಳೋರಂತೆ ನೋಡಿ ನಿಚ್ಚಂ ಕೆಯ್ಗೆ
ಯ್ದೀ ಜಗದೊಳ್ ಸದ್ದೃಷ್ಟಿಗೆ
ರಾಜಿಸುವಂ ಪ್ರಭುಗುಣಾಬ್ಜವನಕಳಹಂಸಂ     ೧

ವ || ಎಂದು ಪೊಗೞುತ್ತುಮಲ್ಲಲ್ಲಿ ನಿಂದು ನೋೞ್ಪ ಪುರಜನದ ಗೊಂದಣದಿ ನೊಂದಿ ಸೊಗಯಿಸುವ ವಿಪಣಿವೀಥಿಯೊಳಗನೇಕಮಣಿತೋರಣಂಗಳಂ ನುಸುಳುತ್ತರಮನೆಗೆ ವಂದು ಚಂಪಾಪುರದ ಸೂಱೆಯಿಂ ಬಂದ ಸಮಸ್ತ ವಸ್ತುವಾಹನವಧೂಸಮೂಹಮಂ ಗೃಹಮಹತ್ತರಂಗೆ ಕೆಯ್ಕೊಳಲ್ವೇೞ್ದನಂತರಂ ಸಿಂಹವರ್ಮನನನೂನಸನ್ಮಾನದಾನದಿಂ ಸಂತೋಷಂಬಡಿಸಿ ಬೀಡಿಂಗೆ ಕಳಿಪಿ ಸುಖದಿನಿರೆ

ಕಂ || ಪರಿಜನಕೆ ಹರ್ಷಗರ್ಭಮ
ಪರಭೂಮಿಗೆ ಭೀತಿಗರ್ಭವಡಿಪ ಜಯಶ್ರೀ
ಗರಿಚೈತ್ರಕೇಳಿಗರ್ಭಂ
ನಿರುತಂ ನೆಲಸಲ್ಕೆ ನೆಲಸಿತರಸಿಯ ಗರ್ಭಂ         ೨

ಕಿಡೆ ಮಧ್ಯದ ವಳಿರೇಖೆಗ
ಳೊಡರಿಸೆ ತೀರದ ಸಮೃದ್ಧಿ ಪುಟ್ಟೆ ಗುರುತ್ವಂ
ಜಡಗತಿಗೆ ಗಾಳಿಯಲಸಿಂ
ಗಡೆಯಾಗಿರೆ ಬರ್ಪ ತೊಱೆಯನಂಗನೆ ಪೋಲ್ತಳ್           ೩

ಚಂ || ಒಳಗೆ ಸಮಸ್ತಭೂಭೃದಧಿಕಂ ಪ್ರಬಳಂ ಮನುಜೇಂದ್ರಮಂದರಂ
ಬಳೆಯೆ ತಱುಂಬಿ ಸಂಚಳಿಸದಿರ್ದಪುದೀ ನಡುವೆಂಬ ಕೌತುಕಾ
ಕುಳಿತರ ದುಷ್ಟದೃಷ್ಟಿವಿಷರಕ್ಷೆಗಿದಂಜನಲೇಖೆಯೆಂಬ ಬ
ಳ್ವಳಕೆಯನಾಳ್ದು ತಾಳ್ದಿದುದು ಕಾಂತೆಯ ಕರ್ಗಿದ ಬಾಸೆ ದೇಸೆಯಂ            ೪

ವ || ಅದಲ್ಲದೆಯುಂ

ಮ || ಉದರೋದ್ದೇಶದೊಳಿರ್ಪ ಮಂಡಳಿಕಮಾರ್ತಂಡಂಗೆ ಮೆಯ್ದೋಱಲ
ಣ್ಮದೆ ಮಟ್ಟಂ ಪೊಱಮಟ್ಟುಂ ನೆಟ್ಟನೆಸೆದಿರ್ದೀ ನಾಭಿರಂಧ್ರಪ್ರದೇ
ಶದೆ ನೋಡುತ್ತಿದೆ ನೋಡೆ ಚಿತ್ತದ ತಮಂ ವಕ್ಷೋಜದೊತ್ತಿಂಗೆನಲ್
ಸುದತೀರಾಜಿತರೋಮರಾಜಿ ನಿಮಿರ್ದುತ್ತುತ್ಕೋಮಳಶ್ಯಾಮಳಂ  ೫

ಚಂ || ಒದವಿದ ಲೋಕಲೋಚನಸುಖಾಮೃತಮಂ ಕಱೆವೊಳ್ಮುಗಿಲ್ ಮುಸುಂ
ಕಿದ ಶಿಖರಂಗಳೊಪ್ಪುತಿವೆ ಕಾಮನ ಕಾಂಚನಭುಧರಪ್ರದೇ
ಶದೊಳೆನೆ ಕಂಬುಕಂಧರೆಯ ಕರ್ಬೋಗರೇಱೆದ ಚೂಚಕಂಗಳೊ
ಪ್ಪಿದುವು ಪೊದೞ್ದ ನುಣ್ಪಮರ್ದ ಕೊರ್ವಿದ ಪೀನಕುಚಪ್ರದೇಶದೊಳ್       ೬

ವ || ಮತ್ತಂ

ಉ || ಭಾವೆ ನಿಜಾತ್ಮಜಂ ತೊಳಪ ಕೀರ್ತಿಯಿನೆನ್ನನದಿರ್ಪದಂತೆವೋಲ್
ಕಾವುದು ದೇವಿ ನೀಂ ದಿಟಕೆನುತ್ತಮನಾಗತಭಾಧೆಗಳ್ಕಿ ಬಂ
ದಾ ವಿಧುವೀ ವಧೂಮುಖದೊಳಿರ್ದಪನೋಲಗಿಸುತ್ತುಮೆಂಬಿನಂ
ಭಾವಕರಂ ಮನಂಗೊಳಿಸಿದತ್ತು ಬೆಳರ್ತ ಮೊಗಂ ಮೃಗಾಕ್ಷಿಯಾ      ೭

ವ || ಆ ಸಮಯದೊಳ್

ಕಂ || ಸುರಕುಜದ ವನಮುಮಂ ಸಿ
ದ್ಧರಸದ ಪರಿಕಾಲನಿಂದ್ರಧೇನುವ ಪಯಮಂ
ಪರಿವಾರಜನಕೆ ಪದಪಿಂ
ವಿರಚಿಸುವೀ ಬಯಕೆ ದೇವಿಗಾಯ್ತೆಳವಸಿಱೊಳ್           ೮

ಧರಣಿಯ ಸೀಮೆಯ ನಾಲ್ಕುಂ
ಪರಿಧಿಯನವಲೋಕಿಸಲ್ ತ್ರಿಷಷ್ಟಿಶಲಾಕಾ
ಪುರುಷಪ್ರತತಿಯ ಕಥೆಯಂ
ಪರಿಭಾವಿಸಲಾಯ್ತು ದೌಹೃದಂ ನೃಪಸತಿಯೊಳ್          ೯

ವ || ಅಂತು

ಮ || ಪ್ರಣುತೋದಾತ್ತನ ಗರ್ಭದರ್ಭಕನ ಸರ್ವೌದಾರ್ಯ ಶೌರ್ಯಾದಿ ಸ
ದ್ಗುಣಮಂ ಸೂಚಿಸಲಾದುವಂದರಸಿಯೊಳ್ ಭೂಕಂಟಕಧ್ವಂಸಕಾ
ರಣಹಾಳಾಹಳಮುದ್ಗತಾರಿಭಯವತ್ಕೋಳಾಹಳಂ ಲೋಕರ
ಕ್ಷಣಕೇಳೀಜಯಕಾರಣೀಕೃತ ಮಹಾಕೌತೂಹಳಂ ದೌಹಳಂ           ೧೦

ವ || ಅದಲ್ಲದೆಯುಂ

ಕಂ || ತನಗೆ ಪತಿಯಪ್ಪ ಯತ್ನತೆ
ಗನುನಯದಿಂದವನಿವನಿತೆಯಟ್ಟಿದ ರಕ್ಷಾಂ
ಜನಗುೞೆಕೆಯನೊಳಪೊಯ್ದಪ
ಳೆನೆ ಮಾಡಿದಳರಸಿ ಸುರಭಿಮೃತ್ಸೇವನೆಯಂ    ೧೧

ವ || ಅಂತಾ ಕಾಂತೆಯ ಗರ್ಭಚಿಹ್ನೆಂಗಳಿನಿಸುಂ ಪ್ರಸನ್ನಂಗಳಾಗೆ

ಕಂ || ಪರಿವಾರದ ಕರ್ಣಪರಂ
ವರೆಯಿಂ ವಲ್ಲಭೆಯ ಗರ್ಭವೃತ್ತಮನಿಳೇ
ಶ್ವರನಱೆದು ಮಂತ್ರಿಮುಖ್ಯಂ
ಬೆರಸಂತಃಪುರಕೆ ಬಂದು ಸಂತಸದಿಂದಂ            ೧೨

ಮ.ಸ್ರ || ವಿವಿಧಾತೋದ್ಯ ಸ್ವನಂಗಳ್ ದೆಸೆಗೆಸೆವಿನೆಗಂ ಬಾಯಿನಂಗೊಟ್ಟು ನಾನಾ
ನವರತ್ನಸ್ವರ್ಣವಸ್ತ್ರಂಗಳನಖಿಳಜನಂ ಕೂಡೆ ಸಂಪನ್ನಮಪ್ಪ
ನ್ನವಿಳಾಚಕ್ರಂ ಮನಂಗೊಳ್ವಿನಮೆಸೆದು ಯಥಾಪ್ರಸ್ತುತೌಚಿತ್ಯದಿಂ ಪುಂ
ಸವನಾದ್ಯುತ್ಸಾಹಮಂ ಮಾಡಿದನಭಿನುತಮಂ ಪದ್ಮರಾಜಾಧಿರಾಜಂ         ೧೩

ವ || ಅಂತು ಮಾಡಿ

ಕಂ || ವನಿತೆಯ ತನುರಕ್ಷೆಗೆ ತ
ಕ್ಕನುಚರಜನ ಕುಶಲಜನ ಸುಹೃಜ್ಜದ ಧಾತ್ರೀ
ಜನ ಸೂತೀಜನ ಸಖಿಜನ
ಮೆನಿತನಿತುಮನವನಿಪತಿ ನಿಯೋಜಿಸಿ ತಳರ್ದಂ  ೧೪

ವ || ಅಂತನಂತರಂ

ಚಂ || ಅಲಸುವ ಮೆಯ್ಯುಮಾಗುಳಿಸುವಾನನಮುಂ ನಯದಿಂ ತೊೞಲ್ವ ಕ
ಣ್ಮಲರುಮನಾಕುಳಂ ತಳೆದ ತೆಳ್ವರಿಜುಂ ಚಿಗುರೇಱುತಿರ್ಪ ಮೇ
ಖಳೆಯ ತೊಡರ್ಪು ಕಣ್ಗೊಳಿಪ ಯಾನದ ಮೆಲ್ಪುಮಪೂರ್ವಭಾವಮಂ
ಲಲನೆಗೆ ತಂದವಂದನುದಿನಂ ಬಳೆಯುತ್ತಿರೆ ಗರ್ಭದರ್ಭಕಂ ೧೫

ಕಂ || ಕಿಡೆ ಕೃಶತೆ ಪೂರ್ಣಮಾಗಿಯು
ಮುಡುಪತಿಯಂತೆಱಗಿಸಿತ್ತು ಜಗಮಂ ದಿಟದಿಂ
ಬಡತನದೊಳುಂತೆ ಸೊಗಯಿಪ
ನಡು ತನಗಭಿವೃದ್ಧಿಯಾಗೆ ಸೊಗಯಿಪುದರಿದೇ            ೧೬

ವ || ತತ್ಸಮಯದೊಳ್

ಕಂ || ಸುದತಿ ಘನತೋದ್ಯದಳಿಗೀ
ತದ ವಾದ್ಯದ ಹೃದ್ಯದುಚಿತಪತ್ರದ ರಸಚಿ
ತ್ರದ ಮಾಳಾಕರ್ಮದ ನ
ರ್ಮದ ಸಖಿಯರ ಬಿನದದಿಂದವಲಸಿಕೆಗಳೆವಳ್  ೧೭

ವ || ಮತ್ತಂ

ಚಂ || ಅರಗಿಳಿವೆಣ್ಣನೊರ್ಮೆ ನಲಿದೋದಿಸಿ ಸೋಗೆಯನೊರ್ಮೆ ನೃತ್ಯದೊಳ್
ವಿರಚಿಸಿ ಹಂಸಗರ್ಭಿಣಿಯನೊರ್ಮೆ ಗತಿಶ್ರಮಮಾಱೆ ಬೀಸಿ ಪೆ
ಣ್ಬುರುಳಿಯನೊರ್ಮೆ ಮೆಲ್ನುಡಿಯಿನಾಱೆಸಿ ಕಾಂತ ವಿನೋದದಿಂ ಗೃಹಾಂ
ತರದೊಳಗಿಂತು ಪೊೞ್ತುಗಳೆವಳ್ ಗುರುಗರ್ಭಭರಾಲಸತ್ವದಿಂ       ೧೮

ಬಲಿಕುಸುಮಂಗಳೊಳ್ ನಲಿವ ಭೃಂಗಮನಂಗನೆ ನೋಯೆ ಮೆಟ್ಟುಗುಂ
ತೊಲತೊಲಗೆಂದು ಚಪ್ಪರಿಸಿದಪ್ಪಳೊ ಪಾದಪಯೋಜಲಕ್ಷ್ಮಿ ಮೇಣ್
ನೆಲನನನಂಗ ನುಗ್ಗಡಿಸಿದಪ್ಪನೊ ಪೇೞೆನೆ ನೂಪುರಂ ತಗು
ಳ್ದುಲಿಯೆ ಲತಾಂಗಿ ಗರ್ಭಭರದಿಂ ಸುೞಿವಳ್ ನವರತ್ನರಂಗದೊಳ್            ೧೯

ಗುರುತರಗರ್ಭದೊಳ್ ತನು ತನುತ್ವಮನಾಂತೊಡೆ ರತ್ನರಂಜಿತಾ
ಭರಣಭರಕ್ಕೆ ಮೆಯ್ದೆಗೆದುಪಾರ್ಜಿಸಿದಳ್ ಸುಮನೋಲಸದ್ಗುಣಾ
ಭರಣಮನಾತ್ಮಗರ್ಭದೊಳಗಿರ್ಪ ಸುತಂ ಸುಮನೋಲಸದ್ಗುಣಾ
ಭರಣನೆನಿಪ್ಪುದಂ ಕುಸುಮಕೋಮಳೆ ಭೂಮಿಗೆ ಸೂಚಿಪಂದದಿಂ    ೨೦

ಕಂ || ಅಮೃತೋದ್ಭವಮೆನಿಪಾಹಾ
ರಮಿರಲ್ ಸೇವಿಸುವರಾರೊ ಕನಕಮನೆನೆ ಹೇ
ಮಮಯಗ್ರೈವೇಯಕಭಾ
ರಮನೊಲ್ಲದೆ ತಳೆದಳರಸಿ ಮುತ್ತಿನ ಸರಮಂ   ೨೧

ವ || ಅಂತನೇಕವಿನೋದದೊಳಮಕೃತಪೂರ್ವರಸದೊಳಂ ನಿರ್ಭರಪ್ರಾದುರ್ಭಾವ ದಿವಸಂಗಳಂ ಕಳಿಪುತ್ತಿರ್ದ ಸಂಪ್ರಾಪ್ತಪ್ರಸವಸಮಯದೊಳ್ ನಿಖಿಳಶೋಭನವಾರಮಪ್ಪ ವಾರಮುಮಖಿಳ ಮಂಗಳಾಗ್ರೇಸರಮಪ್ಪ ವಾಸರಮುಮಶೇಷ ಕಲ್ಯಾಣಪಾತ್ರಮುಮಪ್ಪ ನಕ್ಷತ್ರಮುಂ ನಿಃಶೇಷಮಾಂಗಲ್ಯಕರಣಮುಮಪ್ಪ ಕರಣಮುಂ ಸಕಳಶ್ರೇಯೋನಿಧಿನಿಯೋಗಮಪ್ಪ ಯೋಗಮುಮೊಂದಿ ಬರ್ಪುದುಂ ಗಣಕಸಂಕುಳಂ ಸಂಕುವಂ ಪೂಜಿಸಿ ಸಮಾಹಿತಚ್ಛಾಯರಾಗಿ ಪಾರ್ದಿರೆ

ಮ.ಸ್ರ || ವಿಳಸನ್ನಿತ್ಯೋದಯಾಳಂಕೃತನಸಮಹಯಪ್ರೌಢನಕ್ಷೂಣಲಕ್ಷ್ಮೀ
ನಿಳಯಂ ಸನ್ಮಂಡಳಾಗ್ರಸ್ಫುರಿತಕರಹತೋದ್ವೃತ್ತರಾಜಂ ಮಹೀಭೃ
ತ್ಕುಳಮಸ್ತನ್ಯಸ್ತಪಾದಂ ಸಮುದಿತವಿನತಾನಂದನಂ ವೃತ್ತವೀತಾ
ಖಿಳದೋಷಂ ದ್ಯೋತಿತಾಶಾಂಬರಮುಖನೊಗೆದಂ ಭವ್ಯಲೋಕೈಕಮಿತ್ರಂ    ೨೨

ವ || ಆಗಳ್

ಕಂ || ಎಸಗಿದುದು ತೆಂಬೆಲರ್ ಘೂ
ರ್ಣಿಸಿದುದು ಪಲತೆಱದ ಮಂಗಳಾನಕನಿನದಂ
ವಸುಧಾಜನದಿಂದಾದಂ
ಪಸರಿಸಿತೆತ್ತಂ ಪೊದೞ್ದು ಜಯಜಯಘೋಷಂ ೨೩

ಮ || ನೆರವಾದಂ ನಮಗೊರ್ವನುರ್ವರೆಯನಾನಲ್ಕೀಗಳೆಂದಷ್ಟದಿ
ಕ್ಕರಿಗಳ್ ರಾಗಿಸಿ ತತ್ಕುಮಾರಕನ ಜನ್ಮೋತ್ಸಾಹತೂರ್ಯಸ್ವನೋ
ತ್ಕರಮಂ ಭಾವಿಸಿ ಕೇಳಲಾ ಸಮಯದೊಳ್ ನಿಷ್ಕಂಪಕರ್ಣಂಗಳಾ
ಗಿರೆ ಗಂಡಸ್ಥಳದಾನಲೀನಮಧುಪಂ ತಾಳ್ದಿತ್ತು ಸೌಸ್ಥಿತ್ಯಮಂ       ೨೪

ವ || ಮತ್ತಂ

ಚಂ || ಅವಿರಳವಾದುದಂತವುರದೊಳ್ ಕಡೆಯಿಕ್ಕುವ ತೋರಮುತ್ತು ಸೂ
ಸುವ ಪಟವಾಸಮಾವರಿಪ ಪೂವಲಿ ಪೊಣ್ಮುವ ಮಂಗಳೋಕ್ತಿ ಕ
ಟ್ಟುವ ಗುಡಿ ಪೊಯ್ವ ಬದ್ದವಣಮೆತ್ತುವ ಬೆಳ್ಗೊಡೆಯಾರ್ವ ವಂದಿ ಪು
ಟ್ಟುವ ಜನಸಂಭ್ರಮಂ ಕುಣಿವ ಗೊಂದಣವೆಕ್ಕಣವೀವ ಬಾಗಿನಂ     ೨೫

ವ || ಆಗಳೊರ್ವಳಂತಃಪುರವಿಲಾಸಿನಿ ತದುತ್ಸವಮನನೀಪತಿಗಱೆಪಲುತ್ಸಕೆಯಾಗಿ

ಮ || ವಸನಂ ಮೇಖಳೆಯೊಳ್ ಸಹರ್ಷವಚನಂ ವಕ್ತ್ರಾಬ್ಜದೊಳ್ ವೇಗವಿ
ನ್ಯಸನಂ ಪಾದದೊಳುತ್ತರೀಯವಸನಂ ಜೋಲ್ದುರ್ವಿಯೊಳ್ ಸಾರ್ದ್ರನಿ
ಶ್ವಸನಂ ನಾಸಿಕೆಯೊಳ್ ಮದೋಲ್ಲಸನಮಾ ಲೋಲಾಕ್ಷಿಯೊಳ್ ಕೂಡೆ ವ
ರ್ತಿಸುವನ್ನಂ ಪರಿತಂದು ನಿಂದೆಱಗಿದಳ್ ಭೂಪಾಂಘ್ರಿಗಾಸ್ಥಾನದೊಳ್         ೨೬

ವ || ಅಂತೆಱಗಿ

ಕಂ || ಬಿನ್ನಪಮವನೀವಲ್ಲಭ
ನಿನ್ನ ಮಹಾದೇವಿ ಸಕಳ ಭೂವಳಯದ ಭಾ
ಗ್ಯೋನ್ನತಿಯಿಂದಂ ಪಡೆದಳ್
ಸನ್ನುತ ಶುಭಲಕ್ಷಣಾಭಿನುತನಂ ಸುತನಂ         ೨೭

ವ || ಎಂದು ಬಿನ್ನವಿಸಿ

ಮ || ಒಸೆದೀ ವಾರ್ತೆಗೆ ಪೂರ್ಣಪಾತ್ರಮಿದು ದೇವರ್ ಮನ್ನಿಸಲ್‌ವೇೞ್ಕುಮೆಂ
ದು ಸಮಂತೀೞ್ಕುಳಿಗೊಂಡಳಾಕೆ ನೃಪಕಂಠೋದ್ದೇಶದಿಂ ಶ್ರೀವಧೂ
ಹಸನಸ್ಫಾರಮನುಲ್ಲಸತ್ತರಳರತ್ನಾಧಾರಮಂ ತಾರಕ
ಪ್ರಸರಾಕಾರಮನಂಶುಜಾಳಕ ಲಸನ್ನೀಹಾರಮಂ ಹಾರಮಂ          ೨೮

ಮಣಿವಿಭೂಷಣ || ಅಂದೆ ವಿಶ್ವಭುವನಂ ತನಗುಂಡಿಗೆಸಾಧ್ಯಮಾ
ದಂದದಿಂ ಮನಮೆೞಲ್ಚೆ ಮಹೀಪತಿ ತೀವಿದಂ
ತಂದು ತನ್ನ ವದನಕ್ಕೆ ವಿಕಾಸಮನಕ್ಷಿಗಾ
ನಂದಬಾಷ್ಪಮಮೊಡಲ್ಗೆ ಬೃಹತ್ಪುಳಕಂಗಳಂ  ೨೯

ವ || ಅಂತನಂತಸಂತೋಷಶಿಖರಿಶೇಖರಾರೂಢನಾಗಿ ಪದ್ಮರಾಜಂ ತನ್ನಿಂದಧಿಕ ಸಮ್ಮುದದ ಪರಮಸುಖಕೋಟೆಯನೆಯ್ದುತ್ತುಮಿರ್ದ ನಿಜಾಮಾತ್ಯವೈಶ್ರವಣನ ಕೆಯ್ಯಂ ಪಿಡಿದಾಸ್ಥಾನಮಂಟಪದಿಂ ತಳರ್ದು ಪುತ್ರಮುಖಾವಳೋಕನಕೂಹಳತೆಯಿಂ ಬರ್ಪಾಗಳ್

ಮ || ವಿಳಸದ್ಗೀತರವಂ ಮೃದಂಗನಿನದಂ ಶಂಖಸ್ವನಂ ಸೂತಮಂ
ಗಳಪಾಠಧ್ವನಿ ಕಾಹಳಾವಿರುತಿಯಾಶೀರ್ವಾದನಾದಂ ನಟ
ಲ್ಲಲನಾನೂಪುರನಾದಮೆಂಬಿವು ಪೊದೞ್ದು ಜೃಂಭಿಸಲ್ ಚಂದ್ರಮಂ
ಡಲ ಲೀಲೋದಯಾವಾರ್ಧಿಯಂತೆ ರಭಸಂಬೆತ್ತತ್ತು ರಾಜಾಲಯಂ ೩೦

ಕಂ || ನೆಗೆದುವು ಮನೆಮನೆದಪ್ಪದೆ
ದುಗುಲದ ಕೌಸುಂಭಪಟದ ನೀಲದ ಗುಡಿಗಳ್
ಸೊಗಯಿಸಿ ಬೆಳ್ಮುಗಿಲಂ ಕೆ
ಮ್ಮುಗಿಲಂ ಕಾರ್ಮುಗಿಲನೆಸಗಲಾರ್ತುವು ನಭದೊಳ್      ೩೧

ಕೆದಱೆದ ಪಿಷ್ಟಾತಕಚೂ
ರ್ಣದೊಳಂ ಪಟವಾಸಚೂರ್ಣದೊಳಮಷ್ಟದಿಶಾ
ವದನಮುಮಾ ನಭಮುಂ ಪಡೆ
ದುದು ನಾನಾವರ್ಣರುಚಿರರಚನಾಚ್ಛವಿಯಂ    ೩೨

ಮೃಗಮದದ ಯಕ್ಷಕರ್ದಮ
ದಗರುವ ಕುಂಕುಮದ ಕದಡುನೀರ್ದಳಿಪದಿನೋ
ಲಗಿಸಿದುವು ಸುೞೆವ ತಂಗಾ
ಳಿಗೆ ನೃಪಗೃಹವೀಥಿ ಬೆರಕೆಗಂಪಿನ ಸೊಂಪಂ     ೩೩

ತೊಳಗುವ ತಾರಾತತಿ ಮಾ
ರ್ಪೊಳೆಯೆ ಮನಂಗೊಳಿಪ ತಿಳಿಗೊಳಂಗಳ ತೆಱನಂ
ತಳೆದುವು ಬಲಿಗೆದಱೆದ ವಿಚ
ಕಿಳದಲರಿಂ ನೀಲಮಣಿಮಯಪ್ರಘಣಂಗಳ್      ೩೪

ಒಸಗೆ ಮರುಳ್ಗೊಂಡಾಡುವ
ವಿಸರುಹ ವದನೆಯರ ನೂಪುರಂಗಳ ದನಿಯಿಂ
ಕುಸುಮೋಪಹಾರದಳಿಗಳ
ಲಸಿತಂ ದ್ವಿಗುಣಿಸಿತು ನೃಪಗೃಹಪ್ರಾಂಗಣದೊಳ್         ೩೫

ಹೃದಯಪ್ರಮೋದ ಮದಿರಾ
ಮದದಿಂ ಮೆಯ್ಮಱೆದು ಮೇಲುದಂ ಮಱೆದಿರ್ದಾ
ಡಿದುದು ಪಱೆ ಮಾಣ್ದೊಡಂ ಮಾ
ಣದೆ ಮೆಚ್ಚಿದ ತೆಱದಿನಾಪ್ತವೃದ್ಧಕದಂಬಂ      ೩೬

ಮ || ಎಳಮಿಂಚಂ ಮಣಿತೋರಣಾಂಶು ಮೊೞಗಂ ವಾದ್ಯಸ್ವನಂ ನೀರದೋ
ಪಳಮಂ ಪೂವಲಿ ತಳ್ತ ಕಾರ್ಮುಗಿಲನುದ್ಯದ್ಧೂಪಧೂಮಂ ನಿರಾ
ಕುಳದಿಂ ಪೋಲ್ತು ಖರಾಂಶು ಪೂೞೆ ಪಟವಾಸಕ್ಷೋದದಿಂ ಕೇಕಿಸಂ
ಕುಳ ಮಾಡಿತ್ತು ನಟೀಕದಂಬದೊದವನಂದಭ್ರಾಗಮಭ್ರಾಂತಿಯಿಂ   ೩೭

ವ || ಅಂತು ನಿರ್ಭರಪ್ರಮೋದಪರವಶೀಭೂತ ಪೌರಜನಕ್ಷೋಭಶೋಭಾವ ಳಂಬಿಯಾದ ನಿಜಗೃಹಮಹೋತ್ಸವಮನೀಕ್ಷಿಸುತ್ತುಮೆೞ್ತಂದು ನೈಮಿತ್ತಿಕನಿರೂಪಿತ ಶುಭಮುಹೂರ್ತದೊಳನೇಕ ರಕ್ಷಾಪರಿಗ್ರಹಪರೀತಮುಂ ಸಕಳಮಂಗಳಪರಂಪರಾಭಿ ಜಾತಮುಮಪ್ಪಭಿನೂತ ಪ್ರಸೂತಿಕಾನಿಕೇತನಮಂ ವೈಶ್ರವಣದ್ವಿತೀಯನಾಗಿ ಪೊಕ್ಕು

ಚಂ || ಎಳವೆಱೆಯಂತೆ ಮಾಣಿಕದ ತಣ್ಜೊಡರಂತುದಯಾದ್ರಿಯಿಂದಮಾ
ಗಳೆ ಪೊಱಮಟ್ಟ ಪದ್ಮಸಖನಂತೆ ತಳತ್ತಳಿಪಂಗಕಾಂತಿಯಂ
ತಳೆದೆಸೆದಿರ್ಪ ಬಾಲಕನ ಮುಗ್ಧಮುಖೇಂದುವನಂದು ನೋಡಿ ಭೂ
ತಳಪತಿ ಮಾಡಿದಂ ಸ್ನಪನಮಂಗಳಮಂ ನಿಜಹರ್ಷಬಾಷ್ಪದಿಂ       ೩೮

ವ || ಅಂತು ಕಣ್ಣಾರೆ ನೋಡಿನೋಡಿ ತದಂಗಸಂಗತಶುಭಲಕ್ಷಣಂಗಳುಂ ದುಂದುಭಿಗಭೀರಘೋಷಮುಂ ತನ್ನುಮನಮಾತ್ಯನಂ ಮನಂಗೊಳಿಸೆ ತಮ್ಮೊಳೋರೋರ್ವರ್ಗೆ ತೋಱಿ ನಿಧಿಗಂಡ ಬಡವನಂತೆ ಕಡೆಯಿಲ್ಲದುತ್ಸವಕ್ಕೆ ಪಕ್ಕಾಗಿ ತದನಂತರಂ

ಉ || ಎನ್ನಯ ವಂಶಮೀ ರಮಣಿಯಿಂ ಕುಳಸಿಂಧುವಿನಂತಿರವ್ಯವ
ಚ್ಛಿನ್ನಮುಮುಗ್ಘಗೋತ್ರಕುಭೃದಾಶ್ರಯಮುಂ ಸುಪವಿತ್ರಜೀವನೋ
ತ್ಪನ್ನವಿಲಾಸಮುಂ ಸಕಲಸತ್ಕವಿಸೇವ್ಯಮುಮಾದುದೆಂದುಮು
ಯ್ವನ್ನಡೆನೋಡಿದಂ ಪ್ರಸವಪಾಂಡುರತನ್ವಿಯನೊಲ್ದು ನೋಡುತುಂ       ೩೯

ವ || ಆಗಳರಸಿ ಲಜ್ಜಾರಸಮನಪ್ಪುಕೆಯ್ದಿರ್ಪುದುಂ ಸಚಿವವಚನೋಪರೋಧದಿಂ ಪೊಱಮಟ್ಟನೂನ ದಾನ ಸನ್ಮಾನದಿಂ ಪ್ರಸೂತಿಕಾಗೃಹನಿಹಿತನಿಖಿಳಜನಮುಮಂ ದೈವಜ್ಞ ಜನಮುಮಂ ಮನಮೊಸೆದು ಮನ್ನಿಸಿ

ಉ || ಕ್ಷೋಣಿಯೊಳಿನ್ನರಾರೆನೆ ಜನಂ ಪರಿವಾರಜನಕ್ಕೆ ಬಾಂಧವ
ಶ್ರೇಣಿಗೆ ವಂದಿಸಂತತಿಗೆ ವಸ್ತುಗಳಂ ತಣಿವನ್ನಮಿತ್ತು ಗೀ
ರ್ವಾಣಕುಜಕ್ಕೆಲಕ್ಕೆ ಮಿಗಿಲಾಗಿ ಮಹೀಪತಿಜಾತಕರ್ಮಕ
ಲ್ಯಾಣವಿಭೂತಿಯಂ ಮೆಱೆದನುಣ್ಮೆ ಮಹೋತ್ಸವತೂರ್ಯನಿಸ್ವನಂ         ೪೦

ವ || ಅಂತು ಮೆಱೆದು

ಮ || ಚಿರಸಂಬದ್ಧಚಮೂರುಸಿಂಹಚಯಮಂ ಕಾಂತಾರಚಕ್ರಕ್ಕೆ ಪಂ
ಜರಪಾರಾವತಕೀರಸಾರಿಕೆಗಳಂ ಕೇಳೀವನಾಂತಕ್ಕೆ ಭೀ
ಕರಕಾರಾಗೃಹನಿಷ್ಠಿತಾರಿನೃಪರಂ ಮುನ್ನಾಳ್ವ ದೇಶಕ್ಕೆ ಬಿ
ಟ್ಟರಸಂ ರಾಗರಸಂ ಮಿಗಲ್ ಕೞೆಪಿದಂ ಪುತ್ರೋದಯೋತ್ಸಾಹದೊಳ್       ೪೧

ವ || ತದನಂತರಂ ದೈವಜ್ಞ ವಿಜ್ಞಾಪಿತದಶಮದಿನದ ಶೋಭನಮುಹೂರ್ತ ದೊಳೊಸಗೆಯನಸದಳಂ ಮಾಡಿ

ಮ || ನಿರುತಂ ಶ್ರೀಗೆ ನಿವಾಸನಪ್ಪ ನಿಧಿರೂಪಂ ತಾನೆ ದೀನಾರ್ಥಿಗ
ಪ್ಪ ರಿಪುಪ್ರಾಣಸಮೀರಸಂಹರಣಕೇಳೀಶೀಳನಪ್ಪೀತನೊಳ್
ಕರಮನ್ವರ್ಥಮಿದಾದುದೆಂದು ವಿಬುಧರ್ ಮೆಚ್ಚಲ್ ಮಹಾಪದ್ಮನೆಂ
ದರಸಂ ಸೂನುಗೆ ನಾಮಕರ್ಮವನತಿಪ್ರಾಗಲ್ಭ್ಯಮಂ ಮಾಡಿದಂ      ೪೨

ವ || ಆ ಸಮಯದೊಳ್

ಉ || ಅರ್ಥಿಗೆ ಮುನ್ನಮೇಂ ತಣಿಸಿದೇನುಮನಿತ್ತರೆ ಪೇೞ್ ಪರೋಪಕಾ
ರಾರ್ಥಮಿದಂ ಶರೀರಮೆನಿಪುನ್ನತಿಯಂ ನೆಗೞ್ದಾದ್ಯರಾರೊ ಮ
ತ್ಪ್ರಾರ್ಥಿತಮೆಂದು ಕೌತುಕದಿನೀ ಧರೆ ಬಣ್ಣಿಸೆ ಸೂಱೆವಿಟ್ಟನ
ರ್ಥಾರ್ಥಿಗೆ ಪೊನ್ನ ಪುಟ್ಟಿಗೆಯ ರನ್ನದ ರಾಶಿಗಳಂ ಮಹೀಭುಜಂ    ೪೩

ವ || ಅಂತು ಮಂಗಳೋಚಿತಕ್ರಿಯಾನಿವಹಮಂ ನಿರ್ವರ್ತಿಸಿ ಸುಖದಿನಿರೆ

ಮ || ಜನನೀಲೋಚನಕೈರವಕ್ಕತಿವಿಕಾಸಶ್ರೀಯನೀಯಲ್ ಸುಹೃ
ಜ್ಜನರಾಗಾಮೃತವಾರ್ಧಿಯಂ ಬಳಯಿಸಲ್ ವಿದ್ವಿಣ್ಮುಖಾಬ್ಚಕ್ಕೆ ಕುಂ
ದನೊಡರ್ಚಲ್ ನೆಲದೇೞ್ಗೆವಾಡಿವದ ಕಾಂತಿಸ್ನಿಗ್ಧಮುಗ್ಧೇಂದುವೆಂ
ಬಿನವಾಳ್ದಂ ಪ್ರತಿವಾಸರೋಪಚಯಮಂ ಲಂಬಾಳಕಂ ಬಾಲಕಂ     ೪೪

ಕಂ || ಪರಕಲಿಸಿದ ಕಾಡಿಗೆಯಂ
ತರುಣನ ನಗೆಮೊಗಮುಮಳಿಗಳೆಱಗಿದ ಹೇಮಾಂ
ಬುರುಹದಲರಂತೆ ಸೊಗಯಿಸೆ
ಪರಿಭವಿಸಿದನಂದು ಪೂರ್ಣಶಶಿಮಂಡಲಮಂ    ೪೫

ಕನಕಾಂಬುಜಕುಟ್ಮಲಮಧು
ವನಲಂಪಿಂ ನಲಿದು ಪೀರ್ವ ನವಮಧುಕರನಂ
ನೆನೆಯಿಸಿದನಂದು ಜನನೀ
ಸ್ತನರಸಸುಖಪಾನಲೀನಲಂಪಟರಸನಂ            ೪೬

ಅವಿದೊಳಗೆ ಜಿನುಗುವಳಿಗಳ
ರವಮಂ ಗೆಡೆಗೊಂಡು ಗರ್ಭರಜಮಂ ಪೊಱಸೂ
ಸುವ ಕಮಳಮೆನಿಸೆ ಮೊಗಮು
ತ್ಸವದ ತೊದಳ್ನುಡಿದು ಬೀಱಿದಂ ಬಿಱುನಗೆಯಂ         ೪೭

ದರಹಾಸಲತೆಯ ಬೀಜೋ
ತ್ಕರಮೆನೆ ದರಹಾಸಲಕ್ಷ್ಮಿ ತಾಳ್ದಿದ ಮುಕ್ತಾ
ಭರಣಮೆನೆ ನಗೆಗಳೊಗೆದಿರೆ
ಸುರತರುವಿನ ಸಸಿ ಮುಗುಳ್ತುದೆನಿಸಿದನೆನಸುಂ   ೪೮

ರಕ್ಕೆವಣಿ ಪುಲಿಯುಗುರ್ ಪಸು
ರ್ವೊಕ್ಕುಳಿ ಪೊಂಗೆಜ್ಜೆ ಕಡಗಮುಡೆವಣಿ ಮಾಂಗಾಯ್
ಮೊಕ್ಕಳಗಾಡಿಗೆ ಜಡೆ ಸೊಡ
ರ್ವಕ್ಕಿನ ಬೊಟ್ಟೆಂಬ ಬಾಳವಚ್ಚದಿನೆಸೆದಂ       ೪೯

ಚ || ತನಗಧಿನಾಥನೆಂಬ ಪದಪಿಂದೆರ್ದೆಯೊಳ್ ಮಹಿಕಾಂತೆ ನೆಟ್ಟನೀ
ತನನಿರಿಸಿಟ್ಟಳೆಂಬಿನೆಗಮಾತ್ಮತನುಪ್ರತಿಬಿಂಬಡಂಬರಂ
ವಿನಿಹಿತರತ್ನಕುಟ್ಟಿಮದೊಳೊಪ್ಪೆ ತಳರ್ನಡೆದಾಡಿ ಚೆನ್ನಚೆ
ನ್ನನೆ ನಡೆತರ್ಪ ದಾದಿಯರ್ಗೆ ಮಾಡಿದನಾತನತಿ ಪ್ರಮೋದಮಂ      ೫೦