ಜಗದ ರಂಗಕೆ ಇರುಳ ಕರಿಯ ತೆರೆ ಬಿದ್ದಾಗ
ಕಿರುನಗೆಯ ತಾರೆಗಳ ತಂಬೆಳಕು ಹರಿದಾಗ
ಗಾಳಿ ಜೋಗುಳ ಹಾಡಿ
ಜಗಕೆ ಶಾಂತಿಯನೂಡಿ
ಮೌನವನು ತೊಟ್ಟಿಲಲಿ ತೂಗಿದಾಗ
ದೂರದರಿಲುಗಳಿಂದ
ಕಡಲಿನಾಳಗಳಿಂದ
ಯಾವ ಭಾವವೊ ಬಂದು ತಲೆಯ ಬಳಿ ನಿಂದು
‘ರೂಪು ಕೊಡು’ ಎಂದೆನ್ನ ಎಚ್ಚರಿಪುದು.

ಜಗವೆಲ್ಲ ಮುಸುಕೆಳೆದು ಮಲಗಿ ನಿದ್ರಿಸುವಾಗ
ಕನಸುಗಳ ಉಪವನದಿ ಸಂಚರಿಸುವಾಗ
ಹಸುಳೆ ಕಂದನ ಕಿವಿಗೆ
ಅಮರ ಗಾಯನ ಮೊಳಗೆ
ಅದ ಕೇಳಿ ತಾಯ್ಮೊಲೆಯ ಹಸುಳೆ ತೊರೆದಾಗ
ಕಾಣದಿಹ ಕಡೆಯಿಂದ
ಬೇರೆ ಲೋಕಗಳಿಂದ
ಯಾವ ಭಾವವೊ ಬಂದು ಕಿವಿಯ ಬಳಿಯಲಿ ನಿಂದು
‘ರೂಪು ಕೊಡು ಎಂದಲ್ಲಿ ಪಿಸುಗುಡುವುದು.

ಬಾನ ಬಯಲಿನ ಒಳಗೆ ತುಂಬು ಚಂದಿರ ನಿಂದು
ಹಾಲ್ ಬೆಳಕಿನಲಿ ಜಗದ ನೆನೆಸಿದಂದು
ಆ ತಣಿಲ ಶಾಂತಿಯಲಿ
ಒಂದಿರುಳ ಹಕ್ಕಿಯುಲಿ
ತುಂಬು ಮೌನವನೆಲ್ಲ ಕಲಕಿದಂದು
ತುಂಬು ಚಂದಿರನಿಂದ
ಹರಿದುಬಹ ಹೊನಲಿಂದ
ಯಾವ ಭಾವವೊ ಬಂದು ತಲೆಯ ಒಳಗಡೆ ನಿಂದು
‘ರೂಪು ಕೊಡು’ ಎಂದೆನ್ನ ಪೀಡಿಸುವುದು.

ಈ ರೀತಿ ಒಮ್ಮೊಮ್ಮೆ ಇರುಳ ಮೌನಗಳಲ್ಲಿ
ನಿದ್ರಾ ಸಮುದ್ರದಲಿ ಜಗ ಮುಳುಗಿದಲ್ಲಿ
ನೀರವದ ಲೋಕದಲಿ
ದಿವ್ಯತಮ ಶಾಂತಿಯಲಿ
ಸೃಷ್ಟಿಯೇ ತಪಗೈಯಲನುವಾಗುವಲ್ಲಿ
ನೂರಾರು ಕಡೆಯಿಂದ
ಕಾಣದಾಳಗಳಿಂದ
ಯಾವ ಭಾವವೊ ಬಂದು ಸುತ್ತಲೂ ನಿಂದು
‘ರೂಪು ಕೊಡು’ ಎಂದೆನ್ನ ಪೀಡಿಸುವುದು.