ಕಾದಲೋಹಗಳಿಂದ ಅಥವಾ ಕೆಲವು ಘನಪದಾರ್ಥಗಳಿಂದ ಉತ್ಸರ್ಜಿತಗೊಳ್ಳುವ, ಬರಿಗಣ್ಣಿಗೆ ಕಾಣದ ವಿದ್ಯುತ್ ಕಣಗಳು ಇಂದಿನ ನಾಗರಿಕ ಜೀವನದ ಸಂಪರ್ಕ,  ನೌಕಾಚಾಲನೆ, ಕೈಗಾರಿಕೆ ಮತ್ತು ಇನ್ನೂ ಅನೇಕಾನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿವೆ. ಇಂತಹ ವಿದ್ಯುತ್ ಕಣಗಳ ಇವೇ ಎಲೆಕ್ಟ್ರಾನ್‌ಗಳು ನಿಯಂತ್ರಣದಿಂದಾಗಿ ಇಲೆಕ್ಟ್ರಾನಿಕ್ಸ್ ಎಂಬ ಹೊಸ ವಿಜ್ಞಾನ ಶಾಖೆಯೇ ಉಂಟಾಯಿತು.


ಹೀಗೆ ವಿಶೇಷ ನಳಿಗೆಯೊಳಗಿನ ಒಂದು ವಾಹಕದಿಂದ (ಇಲೆಕ್ಟ್ರಾನ್ ನಳಿಗೆ) ಅಥವಾ ವಿಶೇಷ ಬಗೆಯ ಘನ ಪದಾರ್ಥಗಳಿಂದ ಹೊರಬೀಳುವ ಇಲೆಕ್ಟ್ರಾನ್‌ಗಳ ನಿಯಂತ್ರಣವಾಗುವಂತೆ ರಚಿಸಿದ ಉಪಕರಣಗಳ ವಿಜ್ಞಾನಕ್ಕೆ ‘ಇಲೆಕ್ಟ್ರಾನಿಕ್ಸ್’ ಎಂದು ಕರೆಯಲಾಯಿತು. ಇಂತಹ ಉಪಕರಣಗಳಲ್ಲಿ ಪ್ರಥಮವಾಗಿ ಬಳಕೆ ಬಂದುದು ಡಯೋಡ್ ವಾಕ್ಯೂಮ್ ನಳಿಗೆ, ಆಮೇಲೆ ಟ್ರಯೋಡ್ ವಾಕ್ಯೂಮ್ ನಳಿಗೆ. ಇದರಿಂದಾಗಿ ಇಲೆಕ್ಟ್ರಾನಿಕ್ಸ್ ವಿಜ್ಞಾನ ಮತ್ತು ತಾಂತ್ರಗಳು ಅತ್ಯಂತ ಸಂಕೀರ್ಣವಾಗಿ ಬೆಳೆದುವು.