ನೇಕಾರಿಕೆ ಇತಿಹಾಸ

ಮನುಕುಲದ ಸಾಂಸ್ಕೃತಿಕ ಪರಂಪರೆಯ ವಿಕಾಸವನ್ನು ಏಕರೂಪದ ಸಾರ್ವತ್ರಿಕ ಸಿದ್ಧಾಂತಗಳ ಮೂಲಕ ವಿವರಿಸುವುದು ಇಂದಿಗೂ ಕಷ್ಟಸಾಧ್ಯದ ಮಾತಾಗಿದೆ. ಏಕೆಂದರೆ ಯುರೋಪಿನ ಮಧ್ಯಯುಗದ ಇತಿಹಾಸದ ಕಾಲವನ್ನು ಭಾರತಕ್ಕೆ ಅನ್ವಯಿಸಿ ವಿವರಿಸುವಾಗ ಇತಿಹಾಸದ ಎಳೆ ಎಲ್ಲಿಯೊ ತಪ್ಪಿಬಿಡುತ್ತದೆ. ಇದರಿಂದ ವಿಶ್ವದ ನಾಗರಿಕತೆಯ ವಿಕಾಸವನ್ನು ಒಂದೇ ದಾರದಲ್ಲಿ ಪೋಣಿಸುವದು ಇಂದಿಗೂ ಸಾಧ್ಯವಾಗಿಲ್ಲ. ಆದ್ದರಿಂದ ಇತಿಹಾಸದ ಪುನರ್ ರಚನೆ ಹಾಗೂ ನಿರ್ವಚನ ಕಾಲದ ಅಗತ್ಯವಾಗಿವೆ. ಚರಿತ್ರೆ ಹಾಗೂ ಇತಿಹಾಸ ಈ ಪದಗಳ ನಡುವೆ ಕೂದಲೆಳೆ ಸೀಳಿ ಅರ್ಥ ಹೊಮ್ಮಿಸುವ ಯತ್ನ ನಡೆದರೂ ಜಾಗತಿಕ ಇತಿಹಾಸದ ವಿವರಣೆಯ ಮೆಟ್ಟಲುಗಳು ಇಂದಿಗೂ ಸರಳವಾಗಿಲ್ಲ. Macro ವಿಶ್ಲೇಷಣೆಗೆ Micro ಅಂಶಗಳು ನಲುಗಿ ಹೋಗುತ್ತವೆ. ಮಾರ್ಗ ಪರಂಪರೆಗೆ ಒತ್ತು ಕೊಟ್ಟಾಗ ದೇಶೀ ಪರಂಪರೆ ಗೌಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆಯ ಸಮಾಜೊ-ಆರ್ಥಿಕ ಸ್ಥಿತಿಗತಿ ಅವಲೋಕಿಸಬೇಕಾಗಿದೆ.

ಉತ್ಪಾದನೆ ಹಾಗೂ ಉಪಭೋಗದ ನೇರ ಸರಳ ಸಂಬಂಧದ ಕೊಂಡಿ ಇಂದು ಕಳಚಿ ಬಿದ್ದಿದೆ.  ಮನುಷ್ಯ ತಾನು ಉತ್ಪಾದಿಸಿದ್ದನ್ನು ತಾನೇ ಉಪಭೋಗಿಸುವ ಹಂತ ದಾಟಿ, ಯಾರೋ ಉತ್ಪಾದಿಸಿದ ವಸ್ತುಗಳನ್ನು ತಾನು ಉಪಭೋಗಿಸುವ ಹಾಗು ತಾನು ಯಾರಿಗಾಗಿಯೊ ವಿಶಾಲ ಮಾರುಕಟ್ಟೆಗಾಗಿ ಉತ್ಪಾದಿಸುವ ಸಂದರ್ಭದಲ್ಲಿ ಬದುಕುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಮಾನವನ ಸಮಾಜೊ-ಆರ್ಥಿಕ ಸಂಬಂಧಗಳು ಹೊಸ ತಿರುವು ಪಡೆದುಕೊಳ್ಳುತ್ತವೆ. ಈ ಉತ್ಪಾದನ ಸ್ವರೂಪದ ಬದಲಾವಣೆಯ  ಹಿನ್ನೆಲೆಯಲ್ಲಿ ಬಟ್ಟೆಯ ಹುಟ್ಟು, ವಿಕಾಸ ಹಾಗೂ ಬಳಕೆಗಳ ಅಧ್ಯಯನ ಅಗತ್ಯ ಇದೆ.

ಅಲೆಮಾರಿಯಾಗಿದ್ದ ಮಾನವ ಸ್ಥಿರವಾಗಿ ಒಂದು ನೆಲೆಯಲ್ಲಿ ವಾಸಿಸಲು ಪ್ರಾರಂಭಿಸಿದ ಹಂತವನ್ನು ಕೃಷಿಯುಗದ ನಾಂದಿ ಎಂದು ಐತಿಹಾಸಿಕವಾಗಿ ನಂಬಲಾಗಿದೆ. ಪ್ರಾಚೀನ ಕಾಲದಲ್ಲಿ ನೈಸರ್ಗಿಕ ಗುಹೆ, ಹೊದರು ಪೊದರುಗಳಲ್ಲಿ ವಾಸಿಸುತ್ತಿದ್ದ ಮಾನವ ಅವುಗಳನ್ನು ತೊರೆದು ತಾನೇ ನಿರ್ಮಾಣ ಮಾಡಿದ ಗುಡಿಸಲು (ಆಶ್ರಯ) ಗಳಲ್ಲಿ ವಾಸಿಸಲು ಪ್ರಾರಂಭಿಸಿದ. ಆಗ ಆತ ರೂಪಿಸಿಕೊಂಡ ತಂತ್ರಜ್ಞಾನದ ಕಾಲದಿಂದ ಈಗಿನ ಕಾಂಕ್ರೆಟ್‌ ಕಾಡಿನಲ್ಲಿ ಜೀವಿಸುವ ಮಾನವನ ಸಂಕೀರ್ಣ ಬದುಕಿನತ್ತ ನೋಟ ಹರಿಸಿದಾಗ ಬದುಕಿನ ಹೆಜ್ಜೆಗಳು ಸರಳರೇಖಾತ್ಮಕವಾಗಿಲ್ಲ. ಅಲ್ಲದೆ ಕಳೆದ ಎರಡು ಶತಮಾನಗಳಿಂದ ಬದುಕಿನ ಬದಲಾವಣೆ ತೀವ್ರ ವೇಗ ಪಡೆದು ಕೊಂಡಿದೆ.

ಮರದ ತೊಗಟೆ, ಎಲೆ ಹಾಗೂ ತಾನು ಬೇಟೆಯಾಡಿದ ಪ್ರಾಣಿಗಳ ಚರ್ಮದಿಂದ ದೇಹ ರಕ್ಷಿಸಿಕೊಂಡ ಮಾನವ ಕ್ರಮೇಣ ಅವುಗಳಿಗೆ ಸೌಂದರ್ಯದ ಕಲ್ಪನೆ ಲೇಪಿಸಿರಬಹುದು. ನಗ್ನನಾಗಿದ್ದ ಪ್ರಾಚೀನ ಮಾನವನಿಗೆ ತನ್ನ ಗುಪ್ತಾಂಗಗಳ ಹಾಗೂ ಮಾನದ ಬಗ್ಗೆ ಅರಿವು ಬಂದ ಮೇಲೆ, ಅವುಗಳ ರಕ್ಷಣೆಗಾಗಿ ಉಡುಪು ತೊಡುವ ಕಲೆ ರೂಪಿಸಿಕೊಂಡಿರಬಹುದು. ಆದರೆ ಇಂತಹ ನಂಬಿಕೆಗಳನ್ನು ಇಂದು ನಂಬುವುದೇ ಕಷ್ಟ. ಏಕೆಂದರೆ ಮನುಕುಲ ಈಗ ಉಡುಪುಗಳ ವ್ಯಸನಿಯಾಗಿದೆ. ದೇವರು ಮನುಷ್ಯನನ್ನು ಸೃಷ್ಟಿಸಿದರೆ ಸುಂದರ ಮನುಷ್ಯನನ್ನು ಉಡುಪುಗಳು ಸೃಷ್ಟಿಸುತ್ತವೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

‘ಆಂಗ್ಲ ಭಾಷೆಯ ‘cloth’ ಎಂಬ ಶಬ್ದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಅರಿವೆ, ಬಟ್ಟೆ, ವಸ್ತ್ರ, ಕಪ್ಪಡ ಮುಂತಾದ ಶಬ್ದ ಬಳಕೆಯಾಗುತ್ತಿದೆ. Cloth ಶಬ್ದ ಜರ್ಮನ್‌ ಭಾಷೆಗಳ ಬಳಗದಿಂದ ಉತ್ಪತ್ತಿಯಾಗಿದೆ ಎಂದು ತಜ್ಞರ ಅಭಿಮತ.  ಆದರೆ ಖಚಿತವಾಗಿ ಯಾವ ವಿಶಿಷ್ಟ ಭಾಷೆಯಿಂದ ಈ ಪದ ನಿಷ್ಪತ್ತಿಯಾಗಿದೆ ಎಂಬುದು ಇಂದಿಗೂ ರಹಸ್ಯ. ‘ಅರಿವೆ’ ಎಂದರೆ ಉಣ್ಣೆ, ಹತ್ತಿ, ಚರ್ಮ, ರೇಷ್ಮೆ ಅಂದರೆ ಪ್ರಾಣಿ ಹಾಗೂ ಸಸ್ಯಜನ್ಯ ಎಳೆಗಳಿಂದ ನಿರ್ಮಿತ ವಸ್ತು ಎಂದು ಹೇಳಬಹುದು. ಇತ್ತೀಚೆಗೆ ರಾಸಾಯನಿಕ ವಸ್ತುಗಳ ಎಳೆಗಳಿಂದಲೂ ಅರಿವೆ ಸಿದ್ಧವಾಗುತ್ತಿದೆ.

‘ಕರ್ಪಟ’ ಎಂಬ ಸಂಸ್ಕೃತ ಮೂಲ ಶಬ್ದದಿಂದ ಕಪಡಾ, ಕಪ್ಪಡ, ಕಾಪಡ ಎಂಬ ಶಬ್ದಗಳು ದೇವನಾಗರಿ ಭಾಷೆಯಲ್ಲಿ ಅಂಬೆಗಾಲಿಟ್ಟು ಬಂದಿವೆ ಎಂದು ಹೇಳಲಾಗುತ್ತಿದೆ. ಕರ್ಪಟ ಶಬ್ದವೆ ಕನ್ನಡದಲ್ಲಿ ಕಪ್ಪಡಿಯಾಗಿ ಬಳಕೆಯಾಗಿದೆ ಎಂದು ತಜ್ಞರ ಅಭಿಮತ. ಕರ್ಪಟ ಎಂದರೆ ಹರಕು ಅಥವಾ ಚಿಂದಿ ಬಟ್ಟೆ ಎಂಬ ಅರ್ಥವೂ ಇದೆ. ಕಪ್ಪಡಿ ಸಂಗಮ ಎಂದು ಹೇಳುವಾಗ ಚಿಂದಿಬಟ್ಟೆ ಧರಿಸುವ ಅವಧೂತರ ಅನುಭಾವಿಗಳು ಗುಂಪು ಅಲ್ಲಿ ಇತ್ತು ಎಂದು ಊಹಿಸಬಹುದೇನೊ! ದೇವರಿಗೆ ಹೊಲಿಸುವ ಗಲಿಪು ಅಂದರೆ ತುಂಡು ಬಟ್ಟೆಗಳನ್ನು ಒಂದಾಗಿ ಹೊಲಿಯುವ ಕ್ರಿಯೆಯನ್ನೂ ನೆನಪಿಸಿಕೊಳ್ಳಬಹುದು; ಚಿಂದಿ ಬಟ್ಟೆಗಳನ್ನು ಒಂದಾಗಿ ಹೊಲಿಯುವ ಕೌದಿಯನ್ನೂ ಸ್ಮರಿಸಿಕೊಳ್ಳಬಹುದು. ಸಂಸ್ಕೃತದ ‘ಚೇರ್’ ಶಬ್ದ ಕನ್ನಡದಲ್ಲಿ ಸೀರೆಯಾಗಿ ಬಳಕೆಗೆ ಬಂದಿದೆ ಎಂದು ಹೇಳಲಾಗುತ್ತದೆ. ಸೀರೆ ಮಹಿಳೆ ಮಾತ್ರ ಉಡುವ ವಸ್ತ್ರವಾಗಿದೆ. ಸೀರೆ ಶಬ್ದ ಸಾಡಿ, ಸ್ಯಾರಿಯಾಗಿ ಆಂಗ್ಲಭಾಷೆಗೆ ವಲಸೆ ಹೋಗಿದೆ. ಸೀತೆಯ ಸೆರಗಿನ ವಿವರಣೆ ದ್ರೌಪದಿ ವಸ್ತ್ರಾಪಹರನ ದಾಖಲೆ, ಸೀರೆ ಬಳಕೆಯ ಪ್ರಾಚೀನತೆಯನ್ನು ಸೂಚಿಸುತ್ತವೆ. ವೇದಗಳಲ್ಲಿ ನೇಕಾರಿಕೆ ಹಾಗೂ ಇದರ ಸಲಕರಣೆಗಳ ವಿವರಣೆ ಇದೆ. ಹಳೆಯ ಶಿಲಾಯುಗದಲ್ಲಿ ಚರ್ಮದಿಂದ ಉಡುಗೆ ತಯಾರಿಸುವ ಕಲೆ ಉತ್ತರ ಯುರೋಪಿನಲ್ಲಿ ಪ್ರಾರಂಭವಾಯಿತೆಂದು ತಜ್ಞರ ಅಭಿಪ್ರಾಯವಾಗಿದೆ. ಬಟ್ಟೆ ಉತ್ಪಾದನೆ ಹಾಗೂ ಉಡುಪು ತಯಾರಿಸುವ ಕಲೆ ತೀರ ಇತ್ತೀಚಿನದೆ. ಲೋಹದ ಸೂಜಿ ಬಳಕೆಯಲ್ಲಿ ಬರುವ ಮೊದಲು ಎಲುವುಗಳನ್ನು ಕೊಂಡಿ ಅಥವಾ ವಂಕಿ ಆಕಾರದಲ್ಲಿ ರೂಪಿಸಿ ಸೂಜಿಯನ್ನಾಗಿ ಬಳಸಿದ ಪಳಿಯುಳಿಕೆಗಳಿವೆ. ಲೋಹಯುಗದ ಪ್ರಾರಂಭದೊಂದಿಗೆ ಮನುಕುಲದ ಇತಿಹಾಸವೇ ಬದಲಾಯಿತು. ೧೬ನೇ ಶತಮಾನದಲ್ಲಿ ಇಂಗ್ಲಂಡ್‌ ದೇಶದಲ್ಲಿ ಲೋಹದ ಸೂಜಿ ಬಳಕೆಯಾದ ಮೇಲೆ ಉಡುಪುಗಳ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ಕಾಣಿಸಿಕೊಂಡವು. ೧೭ನೇ ಶತಮಾನದ ನಂತರ ಉಡುಪುಗಳ ವಿನ್ಯಾಸದಲ್ಲಿ ಉಂಟಾದ ಬದಲಾವಣೆ ಇಡೀ ವಿಶ್ವವನ್ನೇ ವ್ಯಾಪಿಸಿದಂತೆ ಕಾಣುತ್ತದೆ. ಹೊಲಿಗೆ ಯಂತ್ರ ಉಡುಪುಗಳ ವಿನ್ಯಾಸದಲ್ಲಿ ನಿಜವಾದ ಕ್ರಾಂತಿ ತಂದಿತು. ಸೀರೆ ಹಾಗೂ ಧೋತರ ಅಖಂಡವಾಗಿರುವುದರಿಂದ ಇವುಗಳ ನೇಯ್ಗೆ ಹಾಗೂ ವಿನ್ಯಾಸದ ವಿಷಯಗಳಲ್ಲಿ ಮಂದಗತಿಯ ಬದಲಾವಣೆ ಕಾಣಬಹುದು.

ಭಾರತದಲ್ಲಿ ನೇಕಾರಿಕೆಯ ಕಲೆ ಅತ್ಯಂತ ಪ್ರಾಚೀನವಾದುದು ಎಂಬುದಕ್ಕೆ ಹರಪ್ಪ ಮಹಂಜೋದಾರೊದಲ್ಲಿ ದೊರೆತ ಅವಶೇಷಗಳೇ ಸಾಕ್ಷಿಯಾಗಿವೆ. ಈಜಿಪ್ತದ ಮಮ್ಮಿಗಳ ಸಿಂಗಾರಕ್ಕೆ ಭಾರತದ ಬಟ್ಟೆಗಳು ಬಳಕೆಯಾದ ದಾಖಲೆಗಳಿವೆ. ರೇಷ್ಮೆ ನೇಯ್ಗೆಯ ಕಲೆ ಚೀನದಿಂದ ಭಾರತಕ್ಕೆ ಬಂದ ದಂತಕತೆಗಳಿವೆ. ಪ್ರಾಚೀನ ಭಾರತದ ಕೈಮಗ್ಗದ ಉದ್ದಿಮೆಯ ಬಗ್ಗೆ ಪಾಹಿಯಾನ, ಹುಯೇನ್‌ತ್ಸಾಂಗ ಮುಂತಾದವರು ತಮ್ಮ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ೧೮೧೮ರಲ್ಲಿ ಪ್ರಥಮ ಹತ್ತಿ ಗಿರಣಿ ಭಾರತದಲ್ಲಿ ಪ್ರಾರಂಭವಾಯಿತು.

ಕೃಷಿಯಂತೆ ನೇಕಾರಿಕೆಯ ಅಖಿಲ ಭಾರತ ಮಟ್ಟದ ವೃತ್ತಿಯಾಗಿದೆ. ಇವೆರಡೂ ವಿಶ್ವವ್ಯಾಪಿಯಾದ ವೃತ್ತಿಗಳೆಂದು ಹೇಳಬಹುದು. ಮೇಟಿ ಹಾಗೂ ರಾಟಿಯ ಬಗ್ಗೆ ಭಾವನಾತ್ಮಕ ಹೇಳಿಕೆಗಳುಂಟು. ಮೇಟಿಯಿಂದ ಅನ್ನ, ರಾಟಿಯಿಂದ ವಸ್ತ್ರ, ಮೇಟಿ ನಂಬಿದ ಕೃಷಿಕ ಮಳೆಗಾಳಿ ಬಿಸಿಲುಗಳಿಗೆ ತನ್ನನ್ನು ಒಡ್ಡಿಕೊಂಡರೆ, ರಾಟಿಯವನ ಕೆಲಸ ನೆರಳಲ್ಲಿ. ಆದರೆ ಎರಡೂ ವೃತ್ತಿ ಅವಲಂಬಿಸಿದವರು ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂಬುದು ಅಷ್ಟೇ ಸತ್ಯ.

ಭಾರತದಲ್ಲಿ ವೃತ್ತಿಗೂ ಜಾತಿಗೂ ನಿಕಟ ಸಂಬಂಧವಿದೆ. ಅನೇಕ ಜಾತಿಗಳ ಹೆಸರು ಅವು ಅನುಸರಿಸುವ ವೃತ್ತಿಯಿಂದಲೆ ರೂಪಗೊಂಡಿವೆ. ಒಂದು ಸಮೂಹದ ವೃತ್ತಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದು ಅದು ಒಳಬಾಂಧವ್ಯದ ಸಮೂಹವಾಗುತ್ತದೆ. ಅದೇ ಜಾತಿಯಾಗಿ ರೂಪುಗೊಂಡಿದೆ. ನೆಸ್‌ಫೀಲ್ಡ್‌ರಂತಹ ಶಾಸ್ತ್ರಜ್ಞರು ವೃತ್ತಿಯ ಹಿನ್ನೆಲೆಯಲ್ಲಿ ಜಾತಿಯ ಉಗಮವನ್ನು ಹುಡುಕುವ ಯತ್ನ ಮಾಡಿದ್ದಾರೆ.  ಆದರೆ ಒಂದು ಗುಂಪು ಅನುಸರಿಸುವ ವೃತ್ತಿಯಿಂದಲೆ ಜಾತಿಯಂತಹ ಸಂಕೀರ್ಣ ವ್ಯವಸ್ಥೆ ಭಾರತದಲ್ಲಿ ರೂಪುಗೊಂಡಿದೆ ಎಮಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ.

ಕರ್ನಾಟಕದಲ್ಲಿ ನೇಯ್ಗೆ ವೃತ್ತಿಯಲ್ಲಿ ತೊಡಗಿದವರಿಗೆ ನೇಕಾರ, ಜಾಡ, ಸಾಳಿ(ಲೆ) ಮುಂತಾದ ಹೆಸರಿನಿಂದ ಕರೆಯುತ್ತಾರೆ. ದೇವಾಂಗ ಸಮುದಾಯ ಈ ವೃತ್ತಿಯಲ್ಲಿ ಪ್ರಮುಖವಾಗಿ ತನ್ನನ್ನು ತೊಡಗಿಸಿಕೊಂಡಿದೆ. ಸಾಂಪ್ರದಾಯಕ ಆನುವಂಶಿಕ ವೃತ್ತಿಯಲ್ಲಿ ಬದಲಾವಣೆಯಾದಮತೆ ನೇಯ್ಗೆಯ ವೃತ್ತಿ ಹಾಗೂ ಸೀರೆಯ ವ್ಯಾಪಾರ ಯಾವುದೇ ಒಂದು ಜಾತಿ ಗುಂಪಿನ ಸ್ವಾಮ್ಯದಲ್ಲಿ ಉಳಿದಿಲ್ಲ. ಬಹುತೇಕ ಎಲ್ಲ ಜಾತಿಗಳು ಈ ವೃತ್ತಿಯಲ್ಲಿ ಪ್ರವೇಶ ಪಡೆದಿವೆ. ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡ ಪ್ರಮುಖ ಸಾಂಪ್ರದಾಯಿಕ ಜಾತಿ ಗುಂಪುಗಳೆಂದರೆ ದೇವಾಂಗ, ಪಟ್ಟಸಾಲಿ, ಸ್ವಕುಳ ಸಾಳಿ, ಪದ್ಮಶಾಲಿ, ಕುರುವಿನಶೆಟ್ಟಿ, ತೊಗಟವೀರ, ಹಟಗಾರ ಮುಂತಾದವುಗಳು. ಇತ್ತೀಚೆಗೆ ಲಿಂಗಾಯತ, ಪಟ್ಟೆಗಾರ, ಮುಸ್ಲಿಂ, ಹರಿಜನರು ಕೂಡ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಾಹ್ಮಣರು ಇಲ್ಲಿ ಪ್ರವೇಶ ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ದೇವಾಂಗದವರು ದೇವಲ ಮಹರ್ಷಿ ತಮ್ಮ ಕುಲದ ಮೂಲ ಪುರುಷನೆಂದು ಗುರುತಿಸಿಕೊಳ್ಳುತ್ತಾರೆ. ದೇವರು ಹಾಗೂ ಮಾನವರ ಮಾನ ಮುಚ್ಚಲು ವಸ್ತ್ರ ನೀಡಿದವನೆ ದೇವಲ ಮಹರ್ಷಿ ಎಂಬ ಪುರಾಣ ಕತೆಯಿದೆ. ೧೧ನೇ ಶತಮಾನದ ಜೇಡರ ದಾಸಿಮಯ್ಯನೊಂದಿಗೆ ತಮ್ಮ ಮೂಲ ಗುರುತಿಸಿಕೊಳ್ಳುವ ನೇಕಾರರು ಇದ್ದಾರೆ. ಪಟ್ಟಸಾಲಿಯವರಿಗೆ ಸಾಲೇಶ್ವರ, ಪದ್ಮಶಾಲಿಯವರಿಗೆ ಮಾರ್ಕಂಡೇಶ್ವರ, ಸ್ವಕುಳಸಾಳಿಯವರಿಗೆ ಜಿಹ್ವೇಶ್ವರ  (ದತ್ತಾತ್ರೇಯ), ಕುರುಹಿನಶೆಟ್ಟಿಯವರಿಗೆ ನೀಲಕಂಠೇಶ್ವರ ಆರಾಧ್ಯದೈವರಾಗಿದ್ದಾರೆ. ಈ ಎಲ್ಲ ಜಾತಿ ಗುಂಪುಗಳು ಒಳಬಾಂಧವ್ಯ ನೀತಿ ಅನುಸರಿಸುತ್ತವೆ. ಇವುಗಳಲ್ಲಿಯೆ ಕೆಲವು ಉಪಜಾತಿಗಳಿವೆ. ಅಲ್ಲದೆ ಕರಿ-ಬಿಳಿ, ಹಿರೇ-ಚಿಕ್ಕ, ಅರಿಸಿನ ಪತ್ತಲ-ಬಿಳಿ ಪತ್ತಲ ಎಂಬ ವಿಂಗಡನೆಗಳಿವೆ. ಉಪಜಾತಿಗಳಲ್ಲಿಯೂ ಶ್ರೇಣೀಕೃತ ವಿಂಗಡಣೆಯಾಗಿ ಒಳಬಾಂಧವ್ಯ ಅನುಸರಿಸಲಾಗುತ್ತದೆ. ಇವರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳು ಇದ್ದಾರೆ. ಸಾಮಾನ್ಯವಾಗಿ ಸೀರೆ ಕಪ್ಪು-ಕರಿ ಬಟ್ಟೆಗಳ ಪಟ್ಟಿಯಲ್ಲಿ ಬರುತ್ತದೆ. ಕಪ್ಪು-ಕರಿ ಬಟ್ಟೆ ನೇಯುವ ನೇಕಾರರು ಕರಿಜಾಡರಾಗಿ, ಪುರುಷರ ಬಟ್ಟೆ ನೇಯುವ ನೇಕಾರರು ಬಿಳಿ ಜಾಡರೆಂದು ಗುರುತಿಸಿಕೊಂಡಿದ್ದಾರೆ. ಕರಿಜಾಡರಿಗಿಂತ ಬಿಳಿಜಾಡರು ಶ್ರೇಷ್ಠ ಎಂಬ ನಂಬಿಕೆ ಇದೆ. ಬಹುಶಃ ಪುರುಷ ಪ್ರಣೀತ ಮೌಲ್ಯಗಳು ಇದಕ್ಕೆ ಕಾರಣವಾಗಿರಬಹುದು. ಒಟ್ಟಿಗೆ ನೇಕಾರರನ್ನು ದ್ರಾವಿಡ ಮೂಲರೆಂದು ಹೇಳಬಹುದು. ಏಕೆಂದರೆ ಹಿಂದೂ ತ್ರಿವಳಿ ದೇವರುಗಳಲ್ಲಿ ಒಬ್ಬನಾದ ಶಿವ ಹಾಗೂ ಆತನ ಗಣದ ದೇವರುಗಳನ್ನೇ ಇವರು ಪೂಜಿಸುತ್ತಾರೆ. ಭಾರತದ ಎಲ್ಲ ಜಾತಿಗಳಂತೆ ನೇಕಾರಿಕೆಯಲ್ಲಿ ತೊಡಗಿದ ಜಾತಿಗಳು ಸಂಸ್ಕೃತೀಕರಣಕ್ಕೆ ಪಕ್ಕಾಗಿವೆ. ನೇಪಾಳದ ದೊರೆ ಮನೆತನದವರು ವರ್ಷದಲ್ಲಿ ಒಂದು ಬಾರಿ (ದಸರಾ ಹಬ್ಬದಲ್ಲಿ) ಸಾಂಪ್ರದಾಯಕವಾಗಿ ನೇಯುತ್ತಾರೆ. ಆದ್ದರಿಂದ ಅವರೂ ಒಂದು ಕಾಲಕ್ಕೆ ನೇಕಾರರು ಆಗಿದ್ದರು ಎಂಬ ಅಂಶವನ್ನು ನೇಯ್ಗೆ ಜಾತಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮಲೇಶಿಯಾದಲ್ಲಿ ದೇವಾಂಗ ಸಮಾಜ ಇದೆಯಂತೆ. ಕರ್ನಾಟಕದಲ್ಲಿ ನೇಕಾರ ಜಾತಿ ಗುಂಪುಗಳು ಲಿಂಗಾಯತೀಕರಣಗೊಂಡಿವೆ. ಇಲ್ಲಿಯ ನೇಕಾರ ಜಾತಿ ಗುಂಪುಗಳು ಸಂಘಟನೆ ಹೊಂದಿ ತಮ್ಮವೇ ಆದ ಮಠ ಹಾಗೂ ಇತರ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿವೆ. ಉದಾಹರಣೆಯಾಗಿ ಹಂಪೆಯ ಹೇಮಕೂಟ ಮಠ. ವಿಜಯನಗರ ಅರಸರ ಇತಿಹಾಸ ಹೊಂದಿದ ಈ ಮಠ ಈಗ ದೇವಾಂಗ ಸಮಾಜದ ಮಠವಾಗಿಯೇ ಗುರುತಿಸಲ್ಪಡುತ್ತದೆ. ದೇವಲ ಮಹರ್ಷಿ, ಸಾಲೇಶ್ವರ, ಜೀಹ್ವೇಶ್ವರ ಮುಂತಾದ ದೇವರುಗಳ ಬಗೆಗೆ ಸಾಮಾನ್ಯವಾಗಿರುವ ದಂತಕತೆ ಎಂದರೆ ಮಾನ ಮುಚ್ಚಲು ಮನುಕುಲಕ್ಕೆ ಮೊದಲು ವಸ್ತ್ರ ನೀಡಿದವರೆ ಇವರು ಎಂಬ ನಂಬಿಕೆ.

ನೇಕಾರ: ಒಂದು ಟಿಪ್ಪಣಿ

ದೇವಾಂಗನ ಏಳು ಅವತಾರಗಳು

ನೈಮಿಷಾರಣ್ಯದಲ್ಲಿ ತಪೋಧನರಾದ ಶೌನಕ ಮೊದಲಾದ ಮುನಿಪುಂಗವರು ಬಹುಕಾಲ ನಡೆದ ದೀರ್ಘಸತ್ರ ಯಾಗ  ಮಾಡುತ್ತಿದ್ದರು. ಇವರನ್ನು ಕಾಣ ಬಯಸಿ ವ್ಯಾಸ ಶಿಷ್ಯ, ಮಹಾತಪಸ್ವಿ ಜ್ಞಾನಿ ಸೂತ ಪುರಾಣಿಕ ಅಲ್ಲಿಗೆ ಬಂದನು. ಋಷಿಗಳು ಸ್ವಾಗತಿಸಿ, ಸತ್ಕರಿಸಿ, ಸೂತ್ರ, ವಸ್ತ್ರಗಳ ಕರ್ತೃವೇ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿಸಬೇಕೆಂದು ಕೇಳಿದರು. ಸೂತ ಪುರಾಣಿಕ ಸಂತೋಷದಿಂದ ಷಣ್ಮುಖನಿಗೆ ಈಶ್ವರ ತಿಳಿಸಿದ ದೇವಾಂಗನ ಪುಣ್ಯಕತೆಯನ್ನು ಹೇಳಿದನು.

ದೇವಾಂಗ ಪರಬ್ರಹ್ಮ ಪ್ರಪಂಚವನ್ನು ಸೃಷ್ಟಿಸಬೇಕೆಂದು ಆಶಿಸಿ ಪರಶಿವೆ ಆದಿಶಕ್ತಿ ಯನ್ನು ಹುಟ್ಟಿಸಿದನು. ಆದಿಶಕ್ತಿಯ ರಜೋಗುಣದಿಂದ ಬ್ರಹ್ಮ, ಸತ್ವಗುಣದಿಂದ ವಿಷ್ಣು. ತಮೋಗುಣದಿಂದ ರುದ್ರ ಜನಿಸಿದರು.

ಬ್ರಹ್ಮನಿಂದ ಸೃಷ್ಟಿಯಾದ ದೇವಮಾನವರೆಲ್ಲರೂ ಬೆತ್ತಲೆಯಲ್ಲಿದ್ದರು. ಅವರು ಎಲೆಗಳು, ಮರದ ತೊಗಟೆಗಳನ್ನು ಮೈಗೆ ಸುತ್ತಿಕೊಂಡರು. ಈ ದುರವಸ್ಥೆಯನ್ನು ನೋಡಿದ ನಾರದ ಬ್ರಹ್ಮನನ್ನು ಕೇಳಿಕೊಂಡು ದೇವತೆಗಳ ಸಮೇತ ಕೈಲಾಸಪತಿ ಬಳಿಗೆ ಬಂದರು. ನೀಲಕಂಠ ಇವರು ಬಂದ ವಿಷಯವನ್ನರಿತು. ಉಗ್ರ ಧ್ಯಾನದಲ್ಲಿ ತನ್ಮಯನಾದಾಗ, ಶಿವನ ಫಾಲನೇತ್ರದಿಂದ ಜ್ಯೋತಿ ಹುಟ್ಟಿ ಪುರುಷ ರೂಪ ತಾಳಿತು. ಜಟಾಧಾರಿ, ದಂಡಾಜಿನ ಕಮಂಡಲು ಧರಿಸಿ, ಮಹಾ ತೇಜಸ್ವಿ, ದರ್ಭಪಾಣಿ, ನಿರ್ಮಲ ಜ್ಞಾನಿ, ಮೇಧಾವಿ, ಜಿತೇಂದ್ರಿಯಿ, ಯಜ್ಞೋಪವೀತಧಾರಿ, ಸತ್ಯವಾದಿ, ವ್ರತವಾದಿ, ಕುಶಲಿ, ಕೀರ್ತಿಭೂಷಣನಾದ ಇವನಿಗೆ ಪರಮೇಶ್ವರ ದೇವಲನೆಂದು ಹೆಸರಿಟ್ಟನು. ಶಿವನನ್ನು ದೇವಲ ಪರಿಪರಿಯಾಗಿ ಸ್ತುತಿಸಿ “ನನ್ನನ್ನೇಕೆ ನಿರ್ಮಿಸಿದೆ, ನನ್ನ ಜನ್ಮದಿಂದ ಲಾಭವೇನು. ನನ್ನ ಕಾರ್ಯವೇನು?” ಎಂದು ಬಿನ್ನವಿಸಿದನು. “ಲೋಕೋಪಕಾರಕ್ಕಾಗಿ ನಿನ್ನನ್ನು ನಿರ್ಮಿಸಿರುವೆ, ೬ ಜನ್ಮ ತಾಳಿ ಕೀರ್ತಿ ಗಳಿಸಿ ೭ನೆಯ ಜನ್ಮದಲ್ಲಿ ನನ್ನಲ್ಲಿ ಮೋಕ್ಷ ಹೊಂದುವಿ. ನನ್ನಿಂದ ವೇದಗಳು ಹುಟ್ಟುವಾಗಲೇ ಒಡಹುಟ್ಟಿದ ತಂತುಗಳು ವಿಷ್ಣುವಿನ ಹೊಕ್ಕುಳಲ್ಲಿವೆ. ನೀನು ವಿಷ್ಣುವಿಂದ ಅವನ್ನು ಪಡೆದು ಕುಶಲತೆಯಿಂದ ನೇಯ್ದು ಸಕಲರಿಗೂ ಕೊಟ್ಟು ಅವರ ಮಾನ, ಮರ್ಯಾದೆಗಳನ್ನು ಕಾಪಾಡು, ವಸ್ತ್ರಗಳನ್ನು ದೇವತೆಗಳಿಗೆ ಕೊಟ್ಟು ಅವರ ಅಂಗಗಳನ್ನು ಅಲಂಕರಿಸಿ ದೇವಾಂಗನೆಂಬ ಹೆಸರು ಪಡೆ. ಭರತ ಖಂಡದ ಸಗರ ದೇಶ ರಾಜಧಾನಿಯಾದ ಅಮೋದ ಪಟ್ಟಣದಲ್ಲಿ ರಾಜನಾಗಿ ನಿಂತು ರಾಜ್ಯ ಪರಿಪಾಲಿಸಿ ಪ್ರಪಂಚದಲ್ಲಿ ಯಶಸ್ವಿಯಾಗು. ನಿನ್ನ ವಂಶದವರು ದಾನಿಗಳು, ಸತ್ಯ ಸಂಪನ್ನರು. ಪರೋಪಕಾರಿಗಳು, ಸದಾಚಾರಿ ದೇವ ಬ್ರಾಹ್ಮಣ ವಿಶ್ವಾಸಿಗಳಾಗಿರುವರು” ಎಂದನು. ದೇವಲ ಪಾರ್ವತಿಯನ್ನು ಪ್ರಾರ್ಥಿಸಿದಾಗ, ಸಮಯ ಬಿದ್ದಾಗ ಸ್ಮರಿಸಿದ ಕೂಡಲೇ ಸಹಾಯಕ್ಕೆ ಬರುವ ವಚನವಿತ್ತಳು.

ಚೌಡೇಶ್ವರಿ ವರಪ್ರಸಾದ: ಮಹಾ ತೇಜಸ್ವಿ ದೇವಲ ಕ್ಷೀರ ಸಾಗರಕ್ಕೆ ಹೋಗಿ ಸುವರ್ಣಾಶ್ರಮಕ್ಕೆ ಬಂದು, ವಿಷ್ಣುವನ್ನು ಸ್ತುತಿಸಿ ನೇಮದಿಂದ ಮಾಡಿದ ತಪಸ್ಸಿಗೆ ಮೆಚ್ಚಿದ ನಾರಾಯಣ ಕಾಣಿಸಿಕೊಂಡು, ಏನಾಗಬೇಕೆಂದು ಕೇಳಿದನು. ಆಗ, ವಸ್ತ್ರಗಳನ್ನು ನಿರ್ಮಿಸಲು ನಿನ್ನ ನಾಭಿಕಮಲದಲ್ಲಿರುವ ತಂತುಗಳು ಬೇಕೆಂದನು. ಪುರುಷೋತ್ತಮ ತಂತುಗಳನ್ನು ಕೊಟ್ಟು, “ನಿನ್ನ ಕೆಲಸದಲ್ಲಿ ಮಾಯಾವಿ ದೈತ್ಯರು ವಂಚಿಸುವರು. ಜಾಗರೂಕನಾಗಿದ್ದು ಜಯಿಸು” ಎಂದು ತನ್ನಲ್ಲಿದ ಒಂದು ಚಕ್ರವನ್ನೂ ಕೊಟ್ಟನು.

ದೇವಲ ಜಂಬೂದ್ವೀಪಕ್ಕೆ ಬಂದು ಉಪ್ಪು ಸಮುದ್ರದಲ್ಲಿ ಮನೋಹರವಾದ ಕೃತ್ರಿಮಾಶ್ರಮವನ್ನು ಕಂಡು ಒಳಹೊಕ್ಕನು. ಅಲ್ಲಿದ್ದ ಕಪಟ ಋಷಿ, ದೇವಲ ಯಾರು, ಏಕೆ ಬಂದಿರುವೆ ಎಂದು ವಿಚಾರಿಸಿಕೊಂಡನು. ತಾನು ಶಿವನ ಮಾನಸ ಪುತ್ರ, ಹೆಸರು ದೇವಲ, ವಿಷ್ಣುವಿಂದ ತಂತುಗಳನ್ನು ತಂದಿರುವೆ ಎಂದನು. ಆಶ್ರಮದಲ್ಲಿ ರಾತ್ರಿ ತಂಗಿದ್ದು ಬೆಳಿಗ್ಗೆ ಹೋಗಬಹುದೆಂದಾಗ ದೇವಲ ಅಲ್ಲಿಯೇ ಉಳಿದನು.

ನಡುರಾತ್ರಿಯಲ್ಲಿ ಕಪಟ ಮುನಿಯ ಶಿಷ್ಯರು ದೇವಲನನ್ನು ಕೊಲ್ಲಲು ಹವಣಿಸಿದಾಗ ದೇವಲ ವಿಷ್ಣು ಕೊಟ್ಟಿದ್ದ ಚಕ್ರವನ್ನು ಅವರ ಮೇಲೆ ಬಿಟ್ಟನು. ಆ ಚಕ್ರ ದೈತ್ಯ ಸೇನೆಯನ್ನು ನಾಸಮಾಡತೊಡಗಿತು. ದೈತ್ಯರು ದಿಕ್ಕಾಪಾಲಾದರು. ಆದರೆ, ದೈತ್ಯರಲ್ಲಿ ಬಲಶಾಲಿಗಳಾದ ವಜ್ರಮುಷ್ಠಿ, ಧೂಮ್ರವಕ್ರ, ಧೂಮ್ರಾಸ್ಯ, ಚಿತ್ರಸೇನ, ಪಂಚಸೇನರೆಂಬ ಐವರು ಬಾಣಗಳ ಮಳೆ ಸುರಿಸಿದಾಗ, ಈ ಪಂಚ ದೈತ್ಯರು ಹಿಂದೆಂದೋ ವಿಷ್ಣುವಿಂದ ಪಡೆದಿದ್ದ ವರದ ಫಲವಾಗಿ ಈ ಚಕ್ರ ಅಸಮರ್ಥವಾದಾಗ ತಡೆಯಲಾರದೆ ಲೋಕ ಮಾತೆ ಪಾರ್ವತಿ ದೇವಿಯನ್ನು ಕಾಪಾಡೆಂದು ಸ್ತುತಿಸಿದಾಗ ಪ್ರಸನ್ನಳಾಗಿ ತಾನು ಕೊಟ್ಟಿದ್ದ ವರದಂತೆ, ಚಂಡಿಕಾಂಬೆ, ಮಹಾಬಲೆ, ಚೌಡೇಶ್ವರಿ ರೂಪ ತಾಳಿ ರಾಕ್ಷಸರನ್ನು ಶೂಲಾಯುಧದಿಂದ ಕೊಂದಳು. ಐವರು ರಾಕ್ಷಸರ ೫ ಬಣ್ಣಗಳ ರಕ್ತಗಳಲ್ಲಿ ತಾನು ತಂದಿದ್ದ ತಂತುಗಳನ್ನು ಅದ್ದಿ ದೇವಲ ಪಂಚ ವರ್ಣಗಳನ್ನು ತಯಾರಿಸಿದನು. ಜನರು ತಮ್ಮ ರಕ್ತವನ್ನು ಮೈಮೇಲೆ ಧರಿಸುವಂತೆ ಶಿವನಿಂದ ಈ ಐವರು ವರ ಪಡೆದಿದ್ದು ಕೈಗೂಡಿತು. ಚೂಡಾ ಸಂಬಂಧದ ಪ್ರಭಾಜಾಲಗಳಿಂದ ದೈತ್ಯರನ್ನು ದಮನಗೊಳಿಸಿದ್ದರಿಮದ ತ್ರಿಭುವನೇಶ್ವರಿ, ಚಂಡಿಕಾಂಬೆಗೆ ಚೌಡೇಶ್ವರಿ, (ಚೂಡೇಶ್ವರೀ) ಎಂದು ಹೆಸರಾಯಿತು.

ವಸ್ತ್ರ ನಿರ್ಮಾಣ: ಅರಸನಾದ ದೇವಲನು ಬಟ್ಟೆಗಳನ್ನು ನೇಯಲು ಸಂಕಲ್ಪಿಸಿದನು. ಅದಕ್ಕೋಸ್ಕರ ಮೇರುಗಿರಿಯಿಂದ ನೇಯ್ಗೆ ಸಾಮಗ್ರಿಗಳನ್ನು ತಂದನು. ಬರುವಾಗ ದಾರಿಯಲ್ಲಿ ವಾಮದೇವ ಮುನಿಯ ಕೋರಿಕೆಯಂತೆ ಕುಂಡಿಕನೆಂಬ ರಾಕ್ಷಸನನ್ನು ಕೊಂದನು. ವಿಶ್ವಕರ್ಮನ ಮಗ, ಕುಶಲಿಯಾದ ಮಯ ವಜ್ರದ ಕುಂಟೆ, ರತ್ನ ಖಚಿತ ಹಲಗೆ, ಸ್ಯೂತಿ, ಮರಕತ ಲಾಳಿ, ಗಣಿಕೆ, ವಿಚಿತ್ರ ರಾಟೆ, ಉಕ್ಕಿನ ಚೂರಿ ಮುಂತಾದ ಸಾಮಗ್ರಿಗಳನ್ನು ತಯಾರಿಸಿಕೊಟ್ಟನು. ದಾರಿಯಲ್ಲಿ ದೇವಲನ ಬಳಿಯಿದ್ದ ಹತ್ತಿ ಬೀಜಗಳು ಕೆಳಗೆ ಬೀಳಲು ಅವನ್ನು ಒಂದು ಹುಂಜ ನುಂಗಿತು. ಬೀಜಗಳನ್ನು’ ಹಿಂದಿರುಗಿಸಿದರೆ ನೇಯ್ಗೆಯ ಅಗಲಕ್ಕೆ ಹುಂಜವೆಂದು ಹೆಸರಿಡುವನೆಂದನು. ದೇವಾಂಗ, ಹತ್ತಿ, ಬೀಜಗಳನ್ನು ಬಿತ್ತಿದಾಗ ಶಿವನ ಕೃಪೆಯಿಂದ ಬೆಳೆದ ಗಿಡಗಳಲ್ಲಿ  ಬಿಟ್ಟ ಹತ್ತಿಕಾಯಿಗಳಿಂದ ಹತ್ತಿಯನ್ನು ಬಿಡಿಸಿ, ವಿಂಗಡಿಸಿ, ನೂಲನ್ನು ತಯಾರಿಸಿ ನೇಯ್ದ ಬಟ್ಟೆ ಅಕ್ಷಯವಾಗುವಂತಹ ಕಂಕಣವನ್ನು ಚೌಡೇಶ್ವರಿಯಿಂದ ವರವಾಗಿ ಪಡೆದು, ಶುಭ ಮುಹೂರ್ತದಲ್ಲಿ ವಸ್ತ್ರಗಳನ್ನು ನೇಯಲು ಆರಂಭಿಸಿದನು.

ವಸ್ತ್ರ ಪ್ರದಾನ: ಚಿತ್ರ ವಿಚಿತ್ರವಾದ ಬಣ್ಣಬಣ್ಣಗಳ ವಸ್ತ್ರಗಳನ್ನು ದೇವಾಂಗ ನೇಯ್ದು, ವಿಷ್ಣುವಿಗೆ ರಮ್ಯ ಪೀತಾಂಬರ, ಲಕ್ಷ್ಮಿಗೆ ಶುಭ್ರಾಂಬರ, ಭೂದೇವಿಗೆ ರಕ್ತಾಂಬರ, ಅಲ್ಲಿದ್ದ ಸಮಸ್ತರಿಗೂ ಅವರಿಗೆ ಬೇಕಾದ ವಸ್ತ್ರಗಳನ್ನೂ ಕೊಟ್ಟು ಸಂತಸಗೊಳಿಸಿದನು. ಆಮೇಲೆ ದೇವಾಂಗ ಸತ್ಯ ಲೋಕಕ್ಕೆ ಹೋಗಿ ಬ್ರಹ್ಮನಿಗೆ ಕೆಂಪು, ದುಕೂಲ, ಸರಸ್ವತಿಗೆ ಧವಳಾಂಬರ, ಸಾವಿತ್ರಿಗೆ ಹಳದಿ ವಸ್ತ್ರ, ಗಾಯತ್ರಿಗೆ ರಕ್ತ ವಸ್ತ್ರಗಳನ್ನೂ ಕೊಟ್ಟನು. ವಿಷ್ಣುವಿನ ಹೊಕ್ಕುಳಲ್ಲಿರುವ ಮಾನಿ ಅಭಿಮಾನಿ ಎಂಬೀರ್ವರು ಸ್ತ್ರೀಯರು ಭೂಲೋಕದಲ್ಲಿ ಹತ್ತಿಯ ಗಿಡಗಳಾಗಿ ಹುಟ್ಟಿ ಅಧಿಕ ಹತ್ತಿ ಬೆಳೆ ನೀಡುವರೆಂದು ಬ್ರಹ್ಮನಿಂದ ಅರಿತನು. ಆಮೇಲೆ, ಮೇರು,  ಸಹ್ಯಾದ್ರಿ, ವಿಂಧ್ಯ, ಪರ್ವತಗಳಲ್ಲೂ, ಸ್ವರ್ಗದಲ್ಲೂ ಸಕಲರಿಗೂ, ಮಯನಿಗೂ ನವಗ್ರಹ ದೇವತೆಗಳಿಗೂ ಉಚಿತ ವಸ್ತ್ರಗಳನ್ನೂ ಕೊಟ್ಟನು. ಪಾತಾಳ ಲೋಕಕ್ಕೆ ತೆರಳಿ, ವಾಸುಕಿ, ತಕ್ಷಕ, ಚಿತ್ರಸೇನರಿಗೂ ಆದಿಶೇಷನಿಗೂ ನಾಗಗಳಿಗೂ ವಸ್ತ್ರಗಳನ್ನಿತ್ತನು. ಇದರಿಂದ ಸಂತುಷ್ಟನಾದ ಆದಿಶೇಷ ನಿಂದ ಅವನ ಮಗಳು ಚಂದ್ರರೇಖೆಯನ್ನು ದೇವಾಂಗ ಸ್ವೀಕರಿಸಿದನು. ಭೂಲೋಕ ದಲ್ಲಿ ರಾಜ ಮಹಾರಾಜರಿಗೂ ಪ್ರಜೆಗಳಿಗೂ, ಎಲ್ಲರಿಗೂ ವಸ್ತ್ರಗಳನಿತ್ತನು. ಈ ರೀತಿ ಮೂರು ಲೋಕಗಳಲ್ಲೂ ಎಲ್ಲರಿಗು ವಸ್ತ್ರಗಳನ್ನು ಕೊಟ್ಟು ಹೆಸರಾದನು.

ಶಿವನನ್ನು ಕಾಣಲು ಕೈಲಾಸವನ್ನು ಹೊಕ್ಕು ಮಹಾದೇವನನ್ನು ಸ್ತುತಿಸಿ, ಬಟ್ಟೆ ನೇಯ್ದು ಉಳಿದ ದಾರಗಳನ್ನು ಏನು ಮಾಡಬೇಕೆಂದು ಕೇಳಿದಾಗ ವೇದಮಾತೆಯಾದ ಗಾಯತ್ರಿಯನ್ನು ಪ್ರಣವದಿಂದ ಸಮಗೊಳಿಸಿ ಉಪವೀತವನ್ನೂ ಮಂಗಳ ಸೂತ್ರವನ್ನೂ ತಯಾರಿಸಲು ಪರಮಾತ್ಮ ಹೇಳಿದನು. ಅದರಂತೆ ಯಜ್ಞೋಪವೀತ ತಯಾರಿಸಿ, ಒಂದು ಸೂತ್ರ ಬ್ರಹ್ಮಚಾರಿಗೆ, ಎರಡು ಸೂತ್ರ ಮದುವೆಯಾದವನಿಗೆ ಕೊಟ್ಟನು. ಬ್ರಹ್ಮ, ವಿಷ್ಣು, ಶಿವ, ಋಷಿಗಳೇ ಮುಂತಾದವರೆಲ್ಲರಿಗು ಗಾಯತ್ರಿ ರೂಪದ ಯಜ್ಞೋಪವೀತ ಕೊಟ್ಟು, ಬ್ರಾಹ್ಮಣ ಶ್ರೇಷ್ಠರಿಗಿಂತಲೂ ದೇವಾಂಗ ಎಂದಿಗೂ ಉತ್ತಮ ಎನಿಸಿಕೊಂಡನು.  ಶೀವ, ಪಾರ್ವತಿ, ಗಜಾಸ್ಯರಿಗೂ ವಸ್ತ್ರಗಳನ್ನು ಕೊಟ್ಟನು. ದೇವಾಂಗನಿಗೆ ಮಹದೇವ ಪರಶು ಆಯುಧವನ್ನೂ ಶತ್ರು ನಾಶಕ್ಕೆ ನಂದಿ ಧ್ವಜವನ್ನೂ ದಯಪಾಲಿಸಿದನು. ಶಿವನ ಅಪ್ಪಣೆಯಂತೆ ಸೂರ್ಯ ತನ್ನ ತಂಗ ಇ ದೇವದತ್ತೆಯನ್ನು ಕೊಟ್ಟು ವೈಭವದಿಂದ ಮದುವೆ ಮಾಡಿದನು.

ಕೈಲಾಸದಿಂದ ಆಮೋದ ಪಟ್ಟಣಕ್ಕೆ ಬರುವ ದಾರಿಯಲ್ಲಿ, ದೇವಲೋಕದ ಅಪ್ಸರ ಕನ್ಯೆ ವಿಮೋಹಿನಿ ರಂಭೆ ಇವನ ರೂಪು ಲಾವಣ್ಯಗಳಿಗೆ ಬೆರಗಾಗಿ ತನ್ನಲ್ಲಿ ಸುರತ ಕ್ರೀಡೆ ಅನುಭವಿಸುವಂತೆ ಬೇಡಿದಳು. ಅವಳ ಕೋರಿಕೆಯನ್ನು ತಿರಸ್ಕರಿಸಿದ ದೇವಾಂಗನಿಗೆ, “ನೀನೂ ನಿನ್ನ ವಂಶಜರೂ ೫,೦೦೦ ವರುಷಗಳು ಶೂದ್ರತನ ಹೊಂದುವಿರಿ. ಆಮೇಲೆ ಬ್ರಹ್ಮನ ವರವಾಗುವುದೆಂದು ಶಾಪ ಕೊಟ್ಟಳು.”

ದೇವದತ್ತೆಯೊಡನೆ ದೇವಾಂಗ ರಾಜರ್ಷಿ ಅನೇಕ ವರುಷಗಳು ಸುಭಿಕ್ಷದಿಂದ ರಾಜ್ಯಪಾಲನೆ ಮಾಡಿದನು. ದೇವದತ್ತೆಯ ಹೊಟ್ಟೆಯಲ್ಲಿ ದಿವ್ಯಾಂಗ, ವಿಮಲಾಂಗ, ಧವಳಾಂಗ ಎಂಬ ಮೂವರು ಮಕ್ಕಳೂ, ಚಂದ್ರರೇಖೆಯಲ್ಲಿ ಸುಧರ್ಮನೆಂಬ ಮಗನೂ ಜನಿಸಿದರು. ದಂಡೆತ್ತಿ ಬಂದ ಕರೂಶ ರಾಜ ಶೂರಸೇನನನ್ನು ಕೊಂದು ತನ್ನ ಮಗ ಸುಧರ್ಮನನ್ನು ಆ ದೇಶಕ್ಕೆ ರಾಜನಾಗಿ ಪಟ್ಟ ಕಟ್ಟಿದನು.

ಲೋಕದಲ್ಲಿ ಎಲ್ಲರಿಗೂ ಬಟ್ಟೆಗಳನ್ನು ದೇವಾಂಗ ಕೊಟ್ಟರೂ ತಮಗಿಲ್ಲವೆಂದು ಅಸೂಯೆಯಿಂದ ದೇವತೆಗಳನ್ನು ಕೊಲ್ಲಬೇಕೆಂದು ವ್ಯಾಘ್ರವಕ್ತ್ರ ದೈತ್ಯರೊಂದಿಗೆ ಮೇಲೆ ಬಿದ್ದನು. ದೇವತೆಗಳು ನಿಸ್ಸಹಾಯಕರಾಗಿ ಶಿವನನ್ನು ಪ್ರಾರ್ಥಿಸಿದ್ದರಿಂದ ದೇವಾಂಗನನ್ನು ಯುದ್ಧಕ್ಕೆ ನೇಮಿಸಿದನು. ವ್ಯಾಘ್ರವಕ್ತ್ರನನ್ನು ಕೊಂದನು. ಆಗ ದೇವಾಂಗ ರಾಜನ ಮೇಲೆ ಯುದ್ಧ ಮಾಡುತ್ತ, ಹೇಮಕೂಟ ಶೃಂಗವನ್ನು ಮೇಲೆಸೆದರೂ ಏನೂ ಆಗಲಿಲ್ಲ. ಮಾಯೆಯಿಂದ ಎಲ್ಲರನ್ನೂ ಪೀಡಿಸಿದನು. ನಂದಿ ಧ್ವಜವನ್ನು ದೈತ್ಯರಲ್ಲಿ ಹಾಕಿದಾಗ ಗೂಳಿಗಳು ದೈತ್ಯರನ್ನು ಸದೆ ಬಡಿದುವು. ವಜ್ರದಂಷ್ಟ್ರನ ಪ್ರೇರಣೆಯಂತೆ ವಿದ್ಯುತ್ಕೇಶ ತಾನು ಇಂದ್ರನ ದೂತನೆಂದು ಮೋಸಮಾಡಿ ನಂದಿ ಧ್ವಜವನ್ನು ಅಪಹರಿಸಿ ತಂದನು. ಇದನ್ನು ಪ್ರಯೋಗಿಸಿ ದೇವಾಂಗನನ್ನು ವೀರ ಮಾಹೇಂದ್ರ ಪಟ್ಟಣಕ್ಕೆ ಕರೆತಂದು ತನ್ನ ಮಗಳು ಪದ್ಮಿನಿಯನ್ನು ಕೊಟ್ಟು ಮದುವೆ ಮಾಡಿದನು. ಅವಳಿಂದ ಶಾಲ, ಹಲ, ಬಲ, ಮಕ್ಕಳಾದರು. ಇವರಿಗೆ ನೇಯ್ಗೆ ಕಲಿಸಿ ರಾಕ್ಷಸರಿಗೆ ಬಟ್ಟೆಗಳನ್ನು ಕೊಡಿಸಿದನು. ನಂದಿ ಧ್ವಜವನ್ನು ತೆಗೆದುಕೊಂಡು ದೇವಾಂಗ ಹಿಂದಿರುಗಿದನು.

ದೇವಾಂಗ ರಾಜ ಒಂದು ದಿನ ಶಿವನ ದರ್ಶನ ಪಡೆದಾಗ, ನಂದಿ ಧ್ವಜವನ್ನು ಅಸುರರ ಪಾಲು ಮಾಡಿ ದೇವತೆಗಳನ್ನು ಬಾಧೆ ಪಡಿಸಿದ್ದರಿಂದ, ನೀನು ವಿದ್ಯಾಧರ, ಪುಷ್ಪದಂತ, ಬೇತಾಳ ವರರುಚಿ,  ಚಿತ್ರ ಯೋಗಿ, ದೇವಶಾಲಿ, ದೇವದಾಸ ಎಂಬ ಏಳು ಅವತಾರಗಳಲ್ಲಿ ಭೂಲೋಕದಲ್ಲಿ ಹುಟ್ಟೆಂದು ದೇವಾಂಗನಿಗೆ ಶಂಕರ ಶಪಿಸಿದನು. ಶಾಪಗ್ರಸ್ತರನಾದ ದೇವಾಂಗ ಅಮೋದ ಪುರಕ್ಕೆ ಬಂದನು. ದೇವಾಂಗ ರಾಜನ ದೇಹ ಲಿಂಗವಾಗಿ, ರಾಮಲಿಂಗೇಶ್ವರವೆಂದು ಹೆಸರಾಯಿತು. ದೇವಾಂಗ ಪುತ್ರ ದಿವ್ಯಾಂಗ ರಾಮಲಿಂಗೇಶ್ವರನನ್ನು ಪೂಜಿಸುತ್ತ ರಾಜ್ಯ ಪಾಲಿಸುತ್ತಿದ್ದನು. ದೇವಾಂಗ ಜನಾಂಗದವರೆಲ್ಲರ ಭಕ್ತಿ ಪಾತ್ರ, ಪೂಜನೀಯ ಕುಲದೇವತೆ ಈ ರಾಮಲಿಂಗ.

ಮೂಲ ಪುರುಷ ದೇವಾಂಗನನ್ನು ಕುರಿತು ಒಂದು ಪೌರಾಣಿಕ ಕಥೆ

ನೇಕಾರಿಕೆ ಒಂದು ವೃತ್ತಿ. ವೃತ್ತಿ ಗುಂಪುಗಳೇ ಭಾರತದಲ್ಲಿ ಜಾತಿಯಾಗಿರುವದು ಇಲ್ಲಿಯ ವೈಶಿಷ್ಠತೆ. ಭಾರತದ ಜಾತಿ ಗುಂಪುಗಳು ಮೇಲ್ಮುಖ ಚಲನೆ ಹಾಗೂ ಸಮಾಂತರ ಸಂಘಟನೆಯ ಗುಣ ಹೊಂದಿ ರೂಪಾಂತರವಾಗತೊಡಗಿವೆ. ನೇಕಾರಿಕೆ ವೃತ್ತಿಯಲ್ಲಿ ದೇವಾಂಗ ಸಹೋದ್ಯೋಗಿ ಜಾತಿ ಗುಂಪುಗಳು ಸಾಕಷ್ಟಿವೆ. ನೂಲುವವರಿಂದ ಹಿಡಿದು ನೇಯ್ಯುವವರವರೆಗಿನ ವೃತ್ತಿ ಸಮೂಹಗಳು ನೇಕಾರ ಜಾತಿಯಲ್ಲಿಯೆ ಒಳಪಂಗಡ ರೂಪಿಸಿಕೊಂಡಿವೆ. ಇವುಗಳ ಸಮಾಜಶಾಸ್ತ್ರೀಯ ವಿಶ್ಲೇಷಣೆಗೆ ಒಂದು ಸಣ್ಣ ಟಿಪ್ಪಣಿ ಕೊಡಲಾಗಿದೆ.

ಅಖಿಲ ಕರ್ನಾಟಕ ದೇವಾಮಗ ಸಮ್ಮೇಳನದ ಸ್ಮರಣ ಸಂಚಿಕೆ (೧೯೭೨) ಯಲ್ಲಿ ರ. ಪುಟ್ಟರಾಜರವರು ಬರೆದ ‘ದೇವಾಂಗನ ಏಳು ಅವತಾರ’ ಪುರಾಣ ಕತೆಯ ಮೊದಲ ಭಾಗವನ್ನು ಏನೂ ಬದಲಾವಣೆ ಮಾಡಲಾರದೆ ಮೇಲೆ ಕೊಡಲಾಗಿದೆ. ಸ್ವಕುಳಸಾಳಿ ಜಾತಿಯ ದೇವರದ ಜಿಹ್ವೇಶ್ವರನಿಗೂ ಇದೇ ರೀತಿಯ ಪುರಾಣ ಕತೆಯಿದೆ. ಒಂದು ಬದಲಾವಣೆ ಎಂದರೆ ದೇವಾಂಗ ಶಿವನ ಕಣ್ಣಿನಿಂದ ಜನಿಸಿದರೆದ, ಜಿಹ್ವೇಶ್ವರ ಶಿವನ ನಾಲಿಗೆಯಿಂದ ಜನಿಸಿದ್ದಾನೆ.

ಪುರಾಣಗಳು ಆಧುನಿಕರ ಅವಜ್ಞೆಗೆ ಒಳಗಾದರೂ, ಇವು ‘ಸಂಕೀರ್ಣವಾದ ಸಾಂಸ್ಕೃತಿಕ ವಾಸ್ತವಗಳಾಗಿವೆ’. ಭಾರತದ ಬಹುತೇಕ ಜಾತಿ ಗುಂಪುಗಳು ತಮ್ಮ ಮೂಲದ ಬಗ್ಗೆ ಪುರಾಣ ಕತೆಗಳನ್ನು ಸೃಷ್ಟಿಸಿಕೊಂಡಿವೆ. ಬ್ರಾಹ್ಮಣೇತರ ಜಾತಿಗಳು ತಮ್ಮ ಇತಿಹಾಸವನ್ನು ಪುನರ್ ಸೃಷ್ಟಿಸುವ ಮೂಲಕ ವೈದಿಕರ ಚಿಪ್ಪಿನೊಳಗೆ ಸೇರುವ ಯತ್ನ ಮಾಡುತ್ತಲೇ ತಮ್ಮ ಸಾಮಾಜಿಕ ಅಂತಸ್ತು ಹೆಚ್ಚಿಸಿಕೊಳ್ಳುವ ಕ್ರಿಯೆಗೂ ಕೈ ಹಾಕಿವೆ. ಇದರಿಂದ ಜಾತಿ ಗುಂಪಿನಲ್ಲಿ ದ್ವಂದ್ವ ಪ್ರಾರಂಭವಾಗುತ್ತವೆ. ಶ್ರೇಷ್ಠತೆಯ ಕಿರೀಟ ಧರಿಸುವ ಮಹತ್ವಾಕಾಂಕ್ಷೆ ಒಂದು ಕಡೆಗೆ, ಸಂವಿಧಾನದತ್ತ ಹಿಂದುಳಿದವರಿಗಿರುವ ಸೌಲಭ್ಯ ಪಡೆಯುವ ಆಸೆ ಮತ್ತೊಂದು ಕಡೆಗೆ. ಇದಕ್ಕಾಗಿ ಜಾತಿ ಸಂಘಟನೆ ಹೊಂದುವದು ಅನಿವಾರ್ಯವಾಗುತ್ತದೆ. ಈ ಸಂಘಟನೆ ಪ್ರಭುತ್ವ ಪಡೆಯಲು ಪ್ರಚೋದನೆ ನೀಡುತ್ತದೆ. ಪ್ರಬಲ ಜಾತಿ ಇಲ್ಲಿ ಮೇಲುಗೈ ಸಾಧಿಸಿ ಬಿಡುತ್ತದೆ. ಪ್ರಭುತ್ವ ಹಾಗೂ ಜಾತಿಯ ನಡುವೆ ಅನೈತಿಕ ಸಂಬಂಧ ನಡೆಯುತ್ತವೆ.

ನೇಕಾರ ಜಾತಿಯಂತಹ ಹಿಂದುಳಿದ ಗುಂಪುಗಳು ಸಂಸ್ಕೃತೀಕರಣಗೊಳ್ಳಲು ತವಕಿಸುತ್ತಿವೆ. ಇದು ಈ ಜಾತಿ ಗುಂಪುಗಳಿಗೆ ಶಾಪವಾಗಬಹುದು. ಶ್ರೀಮಂತ ನೇಕಾರರು ಜಾತಿಯ ಶ್ರೇಣಿಯಲ್ಲಿ ಮೇಲೆ ಏರುವ ತವಕ ತೋರಿಸಿದರೆ ಬಡ ನೇಕಾರ ಸರಕಾರಿ ಸೌಲಭ್ಯ ಪಡೆಯಲು ತವಕಿಸಬಹುದು. ಇದರಿಂದ ಒಂದು ಜಾತಿ ಗುಂಪಿನಲ್ಲಿ Centrifugal ಹಾಗೂ Centri Petal ಶಕ್ತಿಗಳು ಕಾರ್ಯ ನಿರ್ವಹಿಸುತ್ತವೆ.