ಇಲಕಲ್ಲ ಸೀರೆ ಭವಿಷ್ಯ

ಜವಳಿಕ್ಷೇತ್ರ ಇಂದು ಒಂದು ಉದ್ಯಮವಾಗಿ ಅಂತರರಾಷ್ಟ್ರೀಯ ಜಾಲ ಹೊಂದಿದೆ. ಸಮೂಹ ಸಂಪರ್ಕ ಮಾಧ್ಯಮಗಳ ಪ್ರಭಾವ, ಕ್ಷಣಕ್ಷಣಕ್ಕೂ ಬದಲಾಗುವ, ಫ್ಯಾಶನ್‌, ವೃತ್ತಿಯಲ್ಲಿ ಆಧುನಿಕತೆ, ಕಂಪ್ಯೂಟರನಿಂದ ಬಟ್ಟೆ ವಿನ್ಯಾಸ ಹಾಗೂ ಬಣ್ಣಗಳ ಹೊಂದಾಣಿಕೆ ಮಾಡುವ ಸಂದರ್ಭ ಮುಂತಾದವುಗಳು ಜವಳಿ ಕ್ಷೇತ್ರದಲ್ಲಿ ಮಿಂಚಿನ ವೇಗದ ಬದಲಾವಣೆ ತರತೊಡಗಿವೆ. ಇಂದು  ಬಟ್ಟೆಗಳನ್ನು ಕೊಂಡು ಹೊಲಿಸುವುದಕ್ಕಿಂತ, ಮಾರುಕಟ್ಟೆಯಲ್ಲಿ ಸಿದ್ಧ ಉಡುಪುಗಳೇ ಗ್ರಾಹಕರನ್ನು ತಣಿಸುವ ಆಕರ್ಷಿಸುವ ಗುಣ ಪಡೆದುಕೊಂಡಿವೆ. ‘ನೈಟಿ’ ‘ಚೂಡಿದಾರ’ ಸಾರ್ವತ್ರೀಕರಣ ಹೊಂದ ತೊಡಗಿವೆ. ಶಾಪುರ ಪತ್ತಲ, ಸಿಂಥೆಟಿಕ್‌ ಸೀರೆ ಜನಪ್ರಿಯವಾಗತೊಡಗಿವೆ. ಕೊಂಕುಳ ತಿರುವಿದ ಕುಬಸ, ಇಲಕಲ್ಲ ಸೀರೆ ಉಡುವವರ ಸಂಖ್ಯೆ ಕಡಿಮೆಯಾಗತೊಡಗಿದೆ. ಅರವತ್ತು ದಾಟಿದ ವೃದ್ಧ ಮುದುಕಿ ನಿಧನ ಹೊಂದಿದರೆ ಇಲಕಲ್ಲ ಸೀರಿ ಒಬ್ಬ ಗಿರಾಕಿಯನ್ನು ಕಳೆದುಕೊಂಡಂತೆ. ಎಲ್ಲ ಕ್ಷೇತ್ರಗಳಲ್ಲಿ ದೇಸಿ ಪರಂಪರೆ ಕ್ಷೀಣಿಸುತ್ತಿರುವಂತೆ ಉಡುಗೆಗಳ ಕ್ಷೇತ್ರದಲ್ಲಿಯು ದೇಸಿ ಸಂಕೇತವಾದ ಕೈಮಗ್ಗಗಳ ಉತ್ಪಾದನೆ ಹಲವು ಸಮಸ್ಯೆಗಳನ್ನು ಎದುರಿಸತೊಡಗಿವೆ. ಈಗ ನಮ್ಮ  ಮುಂದೆ ಇರುವ ಪ್ರಶ್ನೆ ಇಡೀ ಜವಳಿ ಉದ್ಯಮದ ಸಮಸ್ಯೆಯಲ್ಲ, ಇಲಕಲ್ಲ ಸೀರೆ ಹಾಗೂ ಅದನ್ನು ಉತ್ಪಾದಿಸುವ ನೇಕಾರನ ಭವಿಷ್ಯ ಏನು ಎಂಬುದು ಮಾತ್ರ.

ಇಲಕಲ್ಲ ಕೈಮಗ್ಗ ಸೀರೆಯ ಭವಿಷ್ಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದೆ. ನೇಕಾರ ಹಾಗೂ ಉದ್ದಿಮೆದಾರರು ಆಶಾವಾದಿಗಳಾಗಿಯೇ ಇದ್ದಾರೆ. ಆದರೆ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಇತರ ಸೋದರ ಸಂಸ್ಥೆಗಳ ಸಿಬ್ಬಂದಿ ಈ ಉದ್ಯಮದ ಭವಿಷ್ಯದ ಬಗ್ಗೆ ನಿರಾಶಾವಾದಿಗಳಾಗಿದ್ದಾರೆ. ಬಹುಶಃ ಖಾಸಗಿ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಸೋಲು ಗೆಲುವುಗಳ ಕಾರಣಗಳೆ ಇಲ್ಲಿ ಅನ್ವಯವಾಗಬಹುದು.  ಖಾಸಗಿ ಉದ್ದಿಮೆದಾರನ ಆತಂಕಗಳೆಂದರೆ ನೇಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು, ಗುಣಮಟ್ಟದ ಸಮಸ್ಯೆ, ಸರಕಾರ ದಿಢೀರ ಘೋಷಿಸುವ ಜವಳಿನೀತಿ ಮುಂತಾದವುಗಳಾಗಿವೆ. ಆಧುನಿಕ ಲಮಹಿಳೆಯು ಕೈಮಗ್ಗದ ಇಲಕಲ್ಲ ಸೀರೆಯತ್ತ ಆಕರ್ಷಿತಳಾಗುವಂತೆ ಮಾರ್ಪಾಡು ತರಬೇಕಾಗಿದೆ.

ಇಲಕಲ್ಲಿನಲ್ಲಿ ಸುಮಾರು ಎಂಟು ನೇಕಾರಿ ಸಹಕಾರಿ ಸಂಘಗಳಿವೆ. ನೇಕಾರ ಉಪಜಾತಿಗಳ ಪಡಿನೆಳಲಾಗಿ ಇವು ಹುಟ್ಟಿಕೊಂಡಿವೆ. ಸಾಮೂಹಿಕ ಜವಾಬ್ದಾರಿ, ಸಾಮೂಹಿಕ ಪಾಲ್ಗೊಳ್ಳುವಿಕೆ, ಲಾಭಾಂಶದ ಸಮಾನ ವಿತರಣೆ ಹಾಗೂ ಸದಸ್ಯರ ಹಿತರಕ್ಷಣೆ ಸಹಕರಿ ಸಂಘಗಳ ಹಲವು ಉದ್ದೇಶಗಳಲ್ಲಿ ಕೆಲವಾಗಿದೆ. ಭಾರತದಲ್ಲಿ ಸಹಕಾರಿ ಆಂದೋಲನ ಸೋತಿರುವಂತೆ ಇಲ್ಲಿಯೂ ಸೋತಿದೆ. ಆದರೂ ಕೆಲವು ಹೊರತಾದ ಉದಾಹರಣಗಳಿವೆ. ಇಲಕಲ್ಲಿನ ದೊಡ್ಡ ಪ್ರಮಾಣದ ನೇಕಾರ ಸಂಘ ಇದ್ದುದರಲ್ಲಿಯೇ ಉತ್ತಮವಾಗಿ  ಕಾರ್ಯ ನಿರ್ವಹಿಸುತ್ತಿದೆ. ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದ ಶಾಖಾಂಬರಿ ಸಹಕಾರಿ ಸಂಘ ಇತ್ತೀಚೆಗೆ ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಂಡು ಯಶಸ್ಸಿನ ಮೆಟ್ಟಿಲೇರಿದೆ. ತಮಿಳುನಾಡಿನ ಚೆನ್ನಿಮಲೈ ಕೈಮಗ್ಗ ಸಹಕಾರಿ ಸಮಘ, ವಿಧಾನಸೌಧ ನಾಚಿಸುವ ಭವ್ಯ ಕಟ್ಟಡ ಹೊಂದಿದೆಯಂತೆ.

ನೇಕಾರನನ್ನು ದುಸ್ಥಿತಿಯಿಂದ ಸುಸ್ಥಿತಿಗೆ ತರಲು ಯತ್ನಿಸುವ ಸಂಸ್ಥೆ ಕೈಮಗ್ಗ ಅಭಿವೃದ್ಧಿ ನಿಗಮವಾಗಿದೆ. ಇಲಕಲ್ಲದಲ್ಲಿ ಇದರ ಯೋಜನಾ ಕಚೇರಿ ಇದೆ. ಇದರ ಪ್ರಧಾನ ಆಡಳಿತ ಕಚೇರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಇತ್ತೀಚೆಗೆ ವರ್ಗಾಯಿಸಲ್ಪಟ್ಟಿದೆ. ಬಹುಶಃ ಕೈಮಗ್ಗದ ಉದ್ದಿಮೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಇರುವದು ಇದಕ್ಕೆ ಕಾರಣವಿರಬಹುದು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ತನ್ನದೇ ಆದ ಹಲವು ಆದರ್ಶ ಉದ್ದೇಶಗಳನ್ನು ಹೊಂದಿದೆ. ಒಂದು ತೆರನಾದ ‘ಜೀತ’ ಪದ್ಧತಿ ನೇಕಾರಿಕೆಯಲ್ಲಿ ಬೆಳೆದು ಇದು ‘ಧಣಿ’ ಸಂಸ್ಕೃತಿಗೆ ಹುಟ್ಟು ಹಾಕಿದೆ. ಆದ್ದರಿಂದ ಇದರ ಮೂಲ ಉದ್ದೇಶ ಖಾಸಗಿ ಶ್ರೀಮಂತ ವ್ಯಕ್ತಿಗಳ ಕುಯುಕ್ತಿಯಿಂದ ಬಡ ನೇಕಾರನನ್ನು ಬಿಡುಗಡೆಗೊಳಿಸುವುದಾಗಿದೆ. ನೇಕಾರನ ಜೀವನಮಟ್ಟ ಸುಧಾರಣೆ, ಹೊಸ ವಿನ್ಯಾಸದ ರಚನೆಗೆ ಪ್ರೋತ್ಸಾಹ, ರಿಯಾಯಿತಿ ದರದಲ್ಲಿ ಮಗ್ಗದ ಸಲಕರಣೆ ನೀಡುವುದು, ಕಡಿಮೆ ಬಡ್ಡಿ ಹಾಗೂ ದೀರ್ಘ ಕಂತುಗಳಲ್ಲಿ ನೇಕಾರನಿಗೆ ಮನೆ ಕಟ್ಟಿಕೊಳ್ಳಲು ಸಹಾಯ, ಹೆರಿಗೆ ಭತ್ತೆ, ಆರೋಗ್ಯ  ಬುತ್ತಿ ಯೋಜನೆ, ವರ್ಕ್‌ಷೆಡ್ಡು ಕಟ್ಟಿಸಿಕೊಳ್ಳಲು ಅನುದಾನ, ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುವುದು ಹೀಗೆ ಹತ್ತು ಹಲವು ಉದ್ದೇಶಗಳನ್ನು ಹೊಂದಿದೆ. ಇಲಕಲ್ಲಿನ ಉತ್ಪಾದನೆ ಶಾಖೆ ಇಲಕಲ್ಲ, ಅಮೀನಗಡ, ಕಮತಗಿ, ಗುಳೇದಗುಡ್ಡ, ಬಾದಾಮಿ, ಕಂಕಣಕೊಪ್ಪ, ಕೆರೂರು, ಬೀಳಗಿ, ನಾಗರಾಳ, ಗಿರಿಸಾಗರ, ಹವೇಲಿ, ನಿಡಗುಂದಿ, ವಂದಾಲ, ಗೊಳಸಂಗಿ, ಬೇನಾಳ, ಮುದ್ದೇಬಿಹಾಳ, ಕೋಡಿಹಾಳ, ದೋಟಿಹಾಳ, ಬಸರಕೋಡ, ನಾಲತ್ವಾಡ, ಮುಂತಾದ ಸ್ಥಳಗಳಲ್ಲಿ ಉಪಕೇಂದ್ರಗಳನ್ನು ಹೊಂದಿದೆ.

ಕೈಮಗ್ಗ ನಿಗಮ ಅರ್ಹ ನೇಕಾರರನ್ನು ಆಯ್ಕೆ ಮಾಡಿ ರಾಜ್ಯ ಹಣಕಾಸು ಸಂಸ್ಥೆ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಿಂದ ನೇಕಾರನಿಗೆ ಸಾಲ ಒದಗಿಸಲು ನೆರವಾಗುತ್ತದೆ. ಆ ಸಾಲಕ್ಕೆ ನಿಗಮ ಜಾಮೀನು ನೀಡುತ್ತದೆ. ತನ್ಮೂಲಕ ನೇಕಾರ ನಿಗಮದ ಸದಸ್ಯನಾದಂತೆ. ನಿಗಮ ಕೇವಲ ಇಲಕಲ್ಲ ಸೀರೆಗಳಲ್ಲದೆ, ಹಲವು ಭಿನ್ನ ಕೈಮಗ್ಗದ ಬಟ್ಟೆಗಳನ್ನು ಉತ್ಪಾದಿಸುತ್ತದೆ. ಜನತಾ ಸೀರೆ, ಧೋತರ ಇದರ ಪ್ರಮುಖ ಉತ್ಪಾದನೆಗಳಾಗಿವೆ. ಪಾಲಿಸ್ಟರ್ ಸೀರೆ, ಅಂಗಿ ಬಟ್ಟೆ, ಗಾದಿ-ಮೇಲ ಹೊದಿಕೆ, ಟವೆಲ್‌, ಗದ್ವಾಲ್‌ ಸೀರೆ, ಬೆಂಗಾಲ ಸೀರೆ ಮುಂತಾದವುಗಳನ್ನು ಉತ್ಪಾದಿಸುತ್ತವೆ. ಇಲ್ಲಿ ಉತ್ಪಾದನೆ ವಿಭಾಗ ಇರುವಂತೆ ಮಾರಾಟದ ವಿಭಾಗವೂ ಇದೆ. ಉತ್ಪಾದನ ವೆಚ್ಚ ಹಾಗೂ ಇತರ ಬಾಬುಗಳ ಲೆಕ್ಕಹಾಕಿ ಮಾರಾಟ ದರ ನಿಗದಿ ಮಾಡುತ್ತಾರೆ. ಆದರೂ ಕೈಮಗ್ಗದ ಬಟ್ಟೆ ಒಮ್ಮೆಮ್ಮೆ ಉಳ್ಳವರ ಲಕ್ಜರಿ ಆಗುತ್ತದೆ. ಇಲ್ಲಿ ಲಾಭಗಳಿಕೆಗಿಂತ ನೇಕಾರನಿಗೆ ಒದಗಿಸುವ ಸೇವೆ ಸೌಕರ್ಯ ಮುಖ್ಯ ಎಂಬುದು ನಿಗಮದ ಅಂಬೋಣವಾಗಿದೆ. ಆದರೆ ಒಂದು ಕಾಲಕ್ಕೆ ೧೦೦೯ ಸದಸ್ಯ ನೇಕಾರರಿದ್ದ ಇಲಕಲ್ಲ ಉಪಶಾಖೆಯಲ್ಲಿ ಕೇವಲ ೧೦೫ ಸದಸ್ಯರು ಉಳಿದಿದ್ದಾರೆ ಎಂದರೆ ನಿಗಮದ ಕಾರ್ಯಾಚರಣೆ ಊಹಿಸಬಹುದು.

ನಿಗಮ ನೇಕಾರನಿಗೆ ಕುಣಿಮಗ್ಗ ಒದಗಿಸುವ ಸಾಧ್ಯತೆಗಳು ಕಡಿಮೆ. ಫ್ರೇಮ್‌ ಲೂಮ, ಲಾಳಿ, ತಟ್ಟು,  ಚರಕ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ನಲವತ್ತು ಜೋಡಿ ಧೋತರ ಅಥವಾ ಅರವತ್ತು ಸೀರೆಗಳಿಗಾಗುವ ಕಚ್ಚಾ ಮಾಲನ್ನು, ನೇಕಾರನಿಗೆ ಸಿದ್ಧ ಬೀಮ್‌ (ಹೊಕ್ಕು ನೂಲ ಸಹಿತ) ಒದಗಿಸುತ್ತದೆ. ಸೀರೆಯ ಉದ್ದ, ಅಗಲ ಹಾಗೂ ವಿನ್ಯಾಸಗಳ ಆಧಾರದ ಮೇಲೆ ಮಜೂರಿ ಕೊಡಲಾಗುತ್ತದೆ. ಒಬ್ಬ ನೇಕಾರ ದಿನಕ್ಕೆ ರೂ. ೫೦ ರಿಂದ ರೂ. ೮೦ರ ವರೆಗೆ ಮಜೂರಿ ಪಡೆಯುವ ಸಾಧ್ಯತೆ ಇದೆ.

ಇಲಕಲ್ಲ ನೇಕಾರ ಖಾಸಗಿ ಧಣಿ, ಸಹಕಾರಿ ಸಂಘ ಹಾಗೂ ನಿಗಮ ಮೂರೂ ಘಟಕಗಳನ್ನು ಅವಲಂಬಿಸಿದ್ದಾನೆ. ಲಾಭ ಹಾಗೂ ಅನುಕೂಲತೆ ಹೆಚ್ಚು ಇರುವಲ್ಲಿ ನೇಕಾರ ಸಂಬಂಧ ಇಟ್ಟುಕೊಂಡಿದ್ದಾನೆ.  ಇದರಿಂದಾಗಿ ಖಾಸಗಿ ಉದ್ದಿಮೆದಾರರಿಗೆ, ನಿಗಮಕ್ಕೆ ಹಾಗೂ ಸಹಕಾರಿ ಸಂಘಗಳಿಗೆ ನೇಕಾರನನ್ನು ತಮ್ಮ ನಿಯಂತ್ರಣದಲ್ಲಿಟ್ಟು ಕೊಳ್ಳುವುದು ಪ್ರಯಾಸದ ಕೆಲಸವಾಗಿದೆ. ಖಾಸಗಿ ಉದ್ದಿಮೆದಾರ ಹೇಳುವಂತೆ ‘ನಿಗಮ’ಕ್ಕೆ ಲಾಭ ಮುಖ್ಯ ಅಲ್ಲ. ಸರಕಾರದ ರಿಯಾಯಿತಿ ಸೌಲಭ್ಯ ಅದಕ್ಕೆ ಇದೆ. ಇದರಿಂದ ಗುಣಮಟ್ಟ ಉಳಿಸಿಕೊಳ್ಳಲು ಸಾಧ್ಯ ಇಲ್ಲ. ಖಾಸಗಿ ಉದ್ದಿಮೆದಾರರ ನೋವು ಎಂದರೆ ಗುಣಮಟ್ಟ ಉಳಿಸಿಕೊಂಡರೆ ಮಾತ್ರ ಅವರಿಗೆ ಮಾರುಕಟ್ಟೆ ಇದೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗುಣಮಟ್ಟ ಉಳಿಸಿಕೊಂಡು ಉದ್ದಿಮೆ ಮುಂದುವರಿಸುವುದು ಕಠಿಣವಾಗಿದೆ ಎಂದು ಹೇಳುತ್ತಾರೆ.

ವಿದ್ಯುತ್‌ ಮಗ್ಗಗಳು ಬಂದ ಮೇಲೆ ಸೀರೆ ಮಾರುಕಟ್ಟೆ ಸ್ಥಿರತೆ ಕಾಯ್ದುಕೊಂಡಿದೆ. ಸೀರೆಯ ದರದಲ್ಲಿ ಮೊದಲಿನಂತೆ ತೇಜಿಮಂದಿ ಮಾಡುವ ಸಾಧ್ಯತೆ ಕಡಿಮೆ. ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಇಲಕಲ್ಲ ಕೈಮಗ್ಗದ ಸೀರೆಗೆ ಭವಿಷ್ಯ ಇದೆ. ನೂಲಿನ, ರೇಷ್ಮೆಯ ಮಾರುಕಟ್ಟೆಯ ದರ ಏರಿಳಿತ ಉದ್ದಿಮೆದಾರನನ್ನು ಅಷ್ಟೊಂದು ಪೀಡಿಸಿದಂತೆ ಕಾಣುವುದಿಲ್ಲ. ಏಕೆಂದರೆ ಇತ್ತೀಚಿನ ರೇಷ್ಮೆಯ ಆಮದು ನೀತಿಯ ಬಗ್ಗೆಯೂ ನೇಕಾರ, ವ್ಯಾಪಾರಸ್ಥ ತಲೆ ಕೆಡಿಸಿಕೊಂಡಂಥೆ ಕಾಣುವುದಿಲ್ಲ.  ಏಕೆಂದರೆ ಎಳ್ಳಿನಂತೆ ಎಣ್ಣೆ ದರ ನಿಗದಿಯಾಗುತ್ತದೆ ಎಂದು ಅವರ ಅಂಬೋಣ. ನೂಲು ಹಾಗೂ ಬಾಂಬರ, ಚಮಕ ಹಾಗೂ ರೇಷ್ಮೆಗಳನ್ನು ಗುರುತಿಸುವಲ್ಲಿ ಸಾಮಾನ್ಯ ಗ್ರಾಹಕ ಮೋಸ ಹೋಗುವ ಸಾಧ್ಯತೆ ಹೆಚ್ಚು ಇದೆ.

ಇಲಕಲ್ಲ ಸೀರೆಗೆ ವಿಶೇಷ ಮಾರುಕಟ್ಟೆ ಇರುವುದೇ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ. ಮೂಗುತಿ, ಕುಂಕುಮ ಬಳೆ ಮುಂತಾದವುಗಳು ಮುತ್ತೈದೆಯ ಸಂಕೇತವಾದಂತೆ ಇಲಕಲ್ಲ ಸೀರೆ ಉಡುವುದು ಕೆಲವರಿಗೆ ಇಂದಿಗೂ ಒಂದು ಪರಂಪರೆಯಾಗಿದೆ. ಆದರೆ ಇದು ಉಳ್ಳವರ ಫ್ಯಾಶನ್‌ ಮಾತ್ರವಾಗಿ ಉಳಿಯತೊಡಗಿದೆ.  ಗಿರಣೆ ಸೀರೆ ಜೊತೆ, ಕೈಮಗ್ಗದ ಸೀರೆಗಳು ಪೈಪೋಟಿ ನಡೆಸುವುದು ಕಠಿಣವಾಗಿದೆ. ಮಾರುಕಟ್ಟೆಯ ಏರಿಳಿತ, ಬರ, ಸರಕಾರದ ಧೋರಣೆ, ಯುದ್ಧ ನೇಕಾರನಿಗೆ ಒಮ್ಮೆಮ್ಮೆ ಬಲವಾದ ಪೆಟ್ಟು ಕೊಟ್ಟಿವೆ. ಆದ್ದರಿಂದ ಕೈಮಗ್ಗದ ಉದ್ದಿಮೆಯನ್ನು ‘ರಕ್ಷಿತ ಉದ್ದಿಮೆ’ ಎಂದು ಸರಕಾರ ಘೋಷಿಸಬೇಕೆಂದು ನೇಕಾರರ ಬೇಡಿಕೆಯಾಗಿದೆ. ಜಾಗತೀಕರಣದ ಬುಲ್‌ಡೋಜರ್ ಗೆ ಕೈಮಗ್ಗದ ಉದ್ದಿಮೆ ನಲಗುವ ಸಾಧ್ಯತೆ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಇಲಕಲ್ಲಿನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನಕ್ಕೆ ಈ ಉದ್ದಿಮೆ ಜೀವನ ನಿರ್ವಹಣೆಯ ಮಾರ್ಗವಾಗಿದೆ. ಸುಮಾರು ಐದುಸಾವಿರ ಕೈಮಗ್ಗಗಳು ಇಲ್ಲಿವೆ. ಪ್ರತಿವರ್ಷ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಸೀರೆಗಳು ಉತ್ಪಾದನೆಯಾಗುತ್ತವೆ. ಇಲ್ಲಿಯ ಕೈಮಗ್ಗದ ಉದ್ದಿಮೆ ಹಲವು ಏರಿಳಿತಗಳನ್ನು ಕಂಡಿದೆ.  ಭೀಕರ ಬರಗಾಲ ಬಿದ್ದಾಗ ಈ ಉದ್ಯಮ ಕುಸಿತ ಕಂಡಿದೆ. ಜಾಗತಿಕ ಯುದ್ಧಗಳ ಕಾಲದಲ್ಲಿ ಆಮದು ನಿಷೇಧ ಇದ್ದುದರಿಂದ ಇಲಕಲ್ಲ ಸೀರೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತಂತೆ. ರೇಷ್ಮೆಯ ಬೆಲೆ ಹೆಚ್ಚಿ, ಸೀರೆಗಳ ಬೇಡಿಕೆ ಕುಸಿದಾಗ ಉದ್ದಿಮೆದಾರರು ಚಮಕಾ ಬಳಸಲು ಪ್ರಾರಂಭಿಸಿದರು. ಒಟ್ಟಿಗೆ ಇಲಕಲ್ಲ ಕೈಮಗ್ಗದ ಉದ್ದಿಮೆ ಹಲವು ಒತ್ತಡಗಳಿಗೆ ಸಿಕ್ಕು ಸೊರಗತೊಡಗಿದೆ.

ಇಲಕಲ್ಲ ಸೀರೆ ಇಂದಿಗೂ ಜನಪ್ರಿಯವಾಗಿ ಉಳಿಯಲು ಕಾರಣಗಳನ್ನು ಹುಡುಕುವದು ಕಠಿಣ. ಗಿರಣಿ ಸೀರೆಗಳ ವಿನ್ಯಾಸ ಹಾಗೂ ಬಣ್ಣಗಳಲ್ಲಿ ತೀವ್ರ ಬದಲಾವಣೆಯಾದರೂ ಇಲಕಲ್ಲ ಸೀರೆ ತನ್ನತನವನ್ನು ಉಳಿಸಿಕೊಂಡಿದೆ. ಇಲ್ಲಿಯ ನೇಕಾರ ಹೇಳುವಂತೆ ಫ್ಯಾಶನ್‌ಗಳ ಪುನರಾವರ್ತನೆಗಳಲ್ಲಿ ಇಲಕಲ್ಲ ಸೀರೆ ತನ್ನ ಅಸ್ತಿತ್ವವನ್ನು ಸಾಬೀತು ಮಾಡುತ್ತಲೇ ಬಂದಿದೆ. ಗಗನಸಖಿಯರು ಇಲಕಲ್ಲ ಸೀರೆ ಉಡಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದರೆ ಇದರ ಆಕರ್ಷಣೆ ಊಹಿಸಬಹುದು. ಸೀಋಎಯ ವಿನ್ಯಾಸ ಹಾಗೂ ಉಡುವ ರೀತಿಯಲ್ಲಿ ಬದಲಾವಣೆ ಆಗುತ್ತಿರಬಹುದು. ಆದರೆ ಸೀರೆ ಉಡುವುದನ್ನೇ ಜನ ಬಿಟ್ಟರೆ ಬಡನೇಕಾರ ಬದುಕುವದು ಕಠಿಣ. ಆಧುನಿಕತೆ ಹಾಗೂ ಅಭಿರುಚಿಗಳ ಬದಲಾವಣೆಗಳ ನಡುವೆ ನಿಕಟ ಸಂಬಂಧ ಇದೆ. ಆದರೂ ವಿವಾಹ, ಪವಿತ್ರ ಧಾರ್ಮಿಕ ಸಮಾರಂಭಗಳಲ್ಲಿ ಇಲಕಲ್ಲ ಸೀರೆ ಅಗತ್ಯವಾಗಿದೆ. ಜನರ ಮನದಾಳದಲ್ಲಿ ಈ ನಂಬಿಕೆ ಜೀವಂತವಾಗಿರುವವರೆಗೆ ಇಲಕಲ್ಲ ಸೀರೆ ಇದ್ದೇ ಇರುತ್ತದೆ.

ಭಾರತದಲ್ಲಿ ಗೃಹ ಕೈಗಾರಿಕೆ ಹಾಗೂ ಚಿಕ್ಕ ಉದ್ದಿಮೆಗಳಲ್ಲಿ ಕೆಲವು ಈಗಾಗಲೇ ಗೋರಿ ಸೇರಿವೆ. ಇನ್ನು ಕೆಲವು ಕ್ರಮೇಣ ಕ್ಷಯಿಸುತ್ತ ಅದೇ ದಾರಿಯಲ್ಲಿ ಸಾಗಹತ್ತಿವೆ. ಇಲಕಲ್ಲ ಸೀರೆಯನ್ನು ಎರಡನೇ ಗುಂಪಿಗೆ ಸೇರಿಸಬಹುದು. ಇದಕ್ಕೆ ಕಾಯಕಲ್ಪ ಕೊಡುವುದು ಇಂದಿನ ಅಗತ್ಯವಾಗಿದೆ. ಈ ಕ್ಷೇತ್ರ ಎದುರಿಸುವ ಸಮಸ್ಯೆಗಳು ಎಂದರೆ ಉದ್ದಿಮೆಗೆ ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಉಂಟಾಗುವ ಏರುಪೇರು, ನೂಲು, ಚಮಕಾ, ರೇಷ್ಮೆ, ಬಣ್ಣ ಹಾಗೂ ಇತರ ವಸ್ತುಗಳ ಪೂರೈಕೆಯಲ್ಲಿ ಸರಕಾರ ಒಮ್ಮೆಲೇ ಬದಲಾವಣೆ ತರುವುದು. ಅರ್ಧ ದೇಹವನ್ನು ಕುಣಿಯಲ್ಲಿ ಇಳಿಬಿಟ್ಟ ನೇಕಾರನ ಮೇಲೆ ಇದು ನೇರ ಪರಿಣಾಮ ಉಂಟುಮಾಡುತ್ತದೆ. ಸೀರೆಯ ಉತ್ಪಾದನ ವೆಚ್ಚ ಹೆಚ್ಚಿದಂತೆ ಮಾರಾಟ ಕಡಿಮೆಯಾಗುತ್ತದೆ. ನೇಕಾರ ಉಪವಾಸ ಬೀಳುತ್ತಾನೆ. ಮಧ್ಯವರ್ತಿ ಹೇಗೋ ಸುಧಾರಿಸಿಕೊಳ್ಳಬಹುದು. ಬಂಡವಾಳದ ಕೊರತೆ ಈ ಉದ್ಯಮದ ಇನ್ನೊಂದು ಸಮಸ್ಯೆಯಾಗಿದೆ. ಸಹಕಾರಿ ಸಂಘಗಳು ಕ್ಷೀಣಿಸುತ್ತಿರುವುದೇ ಬಂಡವಾಳದ ಕೊರತೆ ಹಾಗೂ ಪ್ರಾಮಾಣಿಕತೆಯ ಅಭಾವದಿಂದ. ಜೊತೆಗೆ ಸಂಕೀರ್ಣ ಕಾನೂನುಗಳು ಆಡಳಿತಾತ್ಮಕ ತೊಂದರೆ ನೀಡುತ್ತವೆ. ಕಾನೂನುಗಳನ್ನು ಸರಳೀಕರಿಸಿ ಅವುಗಳಿಗೆ ಮಾನವೀಕರಣದ ಸ್ಪರ್ಶ ನೀಡಬೇಕಾಗಿದೆ. ಇಲಕಲ್ಲ ಸೀರೆಗಳಿಗೆ ಸುವ್ಯವಸ್ಥಿತ ಮಾರುಕಟ್ಟೆಯ ಅವಶ್ಯಕತೆ ಇದೆ. ಹತ್ತಿಪ್ಪತ್ತು ಸೀರೆಗಳಿಂದ ನೂರಾರು ಸೀರೆಗಳನ್ನು ಸನಗುಗಳಲ್ಲಿ ಅಚ್ಚುಕಟ್ಟಾಗಿ ಕಟ್ಟಿ ವಿವಿಧ ಪ್ರದೇಶಗಳಿಗೆ ಇವುಗಳನ್ನು ರವಾನಿಸುವುದೆ ಕಷ್ಟದ ಕೆಲಸ. ವ್ಯಾಪಾರಸ್ಥರು ಮೊದಲು ತಮ್ಮ ಸೀರೆಗಳನ್ನು ರವಾನಿಸಿ ಎರಡು ಮೂರು ತಿಂಗಳ ನಂತರ ಹಣ ವಸೂಲಿಗೆ ಹೋಗುತ್ತಾರೆ. ಅನಿರೀಕ್ಷಿತ ಲಾಭ ಹಾನಿ ಮಾರುಕಟ್ಟೆಯ ಅನಿಶ್ಚಿತತೆ ಹಣ ವಸೂಲಿಯ ಮೇಲೆ ಪ್ರಭಾವ ಬೀರುತ್ತವೆ. ಜೊತೆಗೆ ಆತಂಕಕಾರಿ ಸ್ಪರ್ಧೆಯೂ ಇದೆ. ಆದ್ದರಿಂದ ಸಮತೋಲಿಕ ಮಾರುಕಟ್ಟೆಯ ಅಗತ್ಯ ಇದೆ. ನೇಕಾರನ ಅಜ್ಞಾನ, ನಿರಕ್ಷರತೆ,  ಸಂಘಟನೆಯ ಕೊರತೆ, ದುರಭ್ಯಾಸ, ಅನಾರೋಗ್ಯ, ಗುಣಮಟ್ಟದ ಅಭಾವ ಮುಂತಾದವುಗಳು ಈ ಉದ್ದಿಮೆಗೆ ತೊಂದರೆ ಉಂಟು ಮಾಡುತ್ತಿವೆ. ಒಮ್ಮೆ ಗಳಿಗೆ ಹಾಕಿದ ಸೀರೆಯನ್ನು ವ್ಯಾಪಾರಸ್ಥ ಪೂರ್ಣ ಬಿಚ್ಚಿ ತೋರಿಸಲಾರ. ಆದ್ದರಿಂದ ಪ್ಯಾಕಿಂಗ್‌ ವ್ಯವಸ್ಥೆಯಲ್ಲಿ ಸೂಕ್ತ ಮಾರ್ಪಾಡು ತರಬೇಕಾಗಿದೆ.

ಭಾರತದ ನೇಕಾರಿಕೆಯ ಇತಿಹಾಸದಲ್ಲಿ ಢಾಕಾದ ಮಸ್ಲಿನ್‌ ಬಟ್ಟೆ ಐತಿಹಾಸಿಕ ಖ್ಯಾತಿ ಪಡೆದಿದೆ. ಔರಂಗಜೇಬನ ಮಗಳು ಹದಿನೆಂಟು ಪದರಿನ ಸೀರೆ ಉಟ್ಟರೂ ಸೀರೆ ಪಾರದರ್ಶಕವಾಗಿದ್ದ ಚರಿತ್ರೆ ಇದೆ. ನೇಕಾರನ ಸೃಜನಶೀಲತೆ ಹಾಗೂ ಕಲೆ ಸಾಯದಂತೆ ನೋಡಿಕೊಳ್ಳುವುದು ಸಮಾಜದ, ಸರಕಾರದ ಹೊಣೆಯಾಗಿದೆ. ಸಂಗೀತ, ಶಿಲ್ಪ, ನೃತ್ಯ ವಿವಿಧ ಭಾಷೆಗಳ ಅಕಾಡೆಮಿ ಹಾಗೂ ಇತರ ಸಂಸ್ಥೆಗಳಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಈ ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ. ಆದರೆ ನೇಕಾರನನ್ನು ಗುರುತಿಸುವ ಯಾವ ಸಂಸ್ಥೆಗಳೂ ಇಲ್ಲ. ಕೊನೆಗೆ ಸರಕಾರ ಸ್ವಾತಂತ್ಯ್ರೋತ್ಸವ, ಗಣ ರಾಜ್ಯೋತ್ಸವ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಪ್ರಶಸ್ತಿ ನೀಡುವಾಗ ನೇಕಾರರನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.