ತಲೆಯ ತಪ್ಪಲೆಯಲ್ಲಿ
ವಿಚಾರಗಳ ಕುದಿತ
ಎದೆಯ ಗೂಡೊಳಗೆನಿತೊ
ಮುರಿದ ಗಡಿಯಾರಗಳ ತುಡಿತ
ಹಗಲು ಇರುಳು.
ಹಾಸುಗಂಬಿಯ ಮೇಲೆ
ನೂರು ರೈಲಿನ ಉರುಳು,
ಇನಿತೆ ಸ್ಪಂದನ ; ಮತ್ತೆ
ಮೌನ ಮೌನ !

ಹಗಲೊ ರಾತ್ರಿಯೊ ಏನೊ ಎಲ್ಲವೂ ಇವನ
ಬಾಳ ತಿವಿಯುತ ಮುಂದೆ ಸಾಗಿರುವುವು.
ಬೆಂಕಿ ಬಾಯನು ತೆರೆದು ನಗುವ ಮೂಡಲ ಬಾನು
ನೂರು ತೂತಿನ ಛತ್ರಿ ಬಿಚ್ಚುವಿರುಳಿನ ಬಾನು
ನಿಡುಸುಯ್ಲಿನೊಲು ನಡೆವ ಗಾಳಿಗಳ ಹೊನಲು-
ಎಲ್ಲವೂ ಇವನನ್ನು ಅರೆಯುತಿಹವು.

ಸಿನಿಮ-ಹೋಟೆಲ್-ಸರ್ಕಸ್ಸು-ಆ ದೊಂಬರಾಟ
ಇಸ್ಪೀಟು-ಸಿಗರೇಟು-ಹಾವಾಡಿಗನ ಮಾಟ
ಕಾವ್ಯಪಾರಾಯಣ-ಭಾಷಣ-ಹರಿಕತೆಯ ಸವಿಯೂಟ,
ಓ ಎಷ್ಟೊಂದು – ನೋವ ಮರೆಯಲು ಮಾನವನು
ಮಾಡಿರುವ ಹೂಟ !

ಮುರುಕು ಜೋಪಡಿಯೊಳಗೆ
ಮಳೆಯ ನೀರಿಳಿವಂತೆ
ಇಳಿಯುತಿವೆ ತಲೆಯೊಳಗೆ ನೂರು ಚಿಂತೆ ;
ಒಳಗೆಲ್ಲ ಕೆಸರು, ಬರಿ ಕೆಸರು ; ಅದರೊಳಗು
ಮೊಳೆಯುತಿವೆ ಆಸೆಗಳು ಹಸುರಿನಂತೆ !

ಆದರೂ, ಆದರೂ, ನಿರಾಸೆಯಲಿ ಮುಳುಗಿ
ನೋಯನಿವನು,
ಕೋಪದಲಿ ದೈವವನು ಶಪಿಸನಿವನು ;
ಬೆಳಕ ಮುಡಿಯಲಿ ಹೊತ್ತು ನಿಂತ ಲಾಂದ್ರದ ಹಾಗೆ
ನಿಂತಿರುವನು.
ಸುತ್ತ ಅನ್ಯಾಯಗಳ ಸಂತೆ ಸಾಗಿರಲಾಗಿ
ವಿಲಯ ಮೌನದೊಳಿವನು ದಿಟ್ಟಿಸುವನು !