ಉಗುಳುವುದಕ್ಕಾಗಿಯೇ ತಿನ್ನುವ ಹಣ್ಣು ಎನ್ನುವ ಆರೋಪ ಈ ಹಣ್ಣಿಗೆ. ಆದರೂ ನೇರಳೆ ಬಣ್ಣದ ಮಾಂಸಲ ಮಾಂಸಲವಾಗಿರುವ ಈ ಹಣ್ಣನ್ನು ಕಂಡರೆ ಯಾರಿಗೆ ಬಾಯಲ್ಲಿ ನೀರು ಬರದು ಹೇಳಿ?
ನಾಲಿಗೆಯನ್ನು ಉದ್ದಕ್ಕೆ ಚಾಚಿ, ಕಣ್ಣುಗಳನ್ನು ಕೆಳಕ್ಕೆ ಕೀಲಿಸಿ, ಅಡ್ಡ ಬರುವ ಮೂಗನ್ನು ಓರೆ ಮಾಡಿಕೊಳ್ಳುತ್ತಾ ಆದರೂ ಕಾಣದಿದ್ದರೆ ಮುಖವನ್ನೇ ಅತ್ತಿತ್ತ ಆಡಿಸುತ್ತಾ ನೇರಳೆಯಾಗಿರುವ ನಾಲಿಗೆಯನ್ನು ನೋಡಿಕೊಳ್ಳದ ಮಕ್ಕಳು ಹಳ್ಳಿಯಲ್ಲಿ ಒಬ್ಬನೂ ಇರಲಿಕ್ಕಿಲ್ಲ.
ನೇರಳೆಹಣ್ಣಿನ ರುಚಿಯೇ ಅಂತಹುದು. ಅತಿಯಾಗಿ ತಿಂದು ಗಂಟಲು ನೋವು ಬರಿಸಿಕೊಂಡದ್ದೂ ಉಂಟು. ಹಾಗೆ ವರ್ಷಕ್ಕೊಮ್ಮೆ ಸಿಗುವ ಹಣ್ಣನ್ನು ತಿನ್ನದೇ ಬಿಡಲು ಆದೀತೆ?
ನೇರಲಗುಡ್ಡದಲ್ಲಿ ಮಾರಿಗೊಂದರಂತೆ ಮರ. ಯಾರೂ ನೆಟ್ಟಿದ್ದಲ್ಲ ಬಿಡಿ. ಗೊಂಚಲು ಗೊಂಚಲಾಗಿ ಮರದ ತುಂಬಾ ಎಲೆಯೇ ಕಾಣದೆ ತೇರಿನಂತೆ ನಿಂತ ಹಣ್ಣುಗಳು. ಹಕ್ಕಿಗಳೊಂದಿಗೆ ನಮ್ಮದೂ ಪೈಪೋಟಿ.
ಚಿಕ್ಕ ಚಿಕ್ಕ ಹಣ್ಣುಗಳು, ದಪ್ಪ ದಪ್ಪ ಹಣ್ಣುಗಳು, ಉದ್ದನೆಯ, ಗಿಡ್ಡನೆಯ ಹೀಗೆ ಎಷ್ಟೊಂದು ವಿಧಗಳು. ಆದರೆ ಎಲ್ಲದರಲ್ಲೂ ಬೀಜವೇ ಅಡ್ಡ.
ಆದರೆ ಇದನ್ನು ಶಿವಮೊಗ್ಗ ಜಿಲ್ಲೆಯ ನಿದಿಗೆಯ ಚಂದ್ರಪ್ಪನವರು ಒಪ್ಪುವುದಿಲ್ಲ. “ನಮ್ಮ ಮನೆಯ ನೇರಳೆ ಹಣ್ಣಿನಲ್ಲಿ ಬೀಜವೇ ಇಲ್ಲ” ಎನ್ನುತ್ತಾರೆ.
ನಾಲ್ಕಾಳೆತ್ತರ ಬೆಳೆದ ಮರ ಥೇಟ್ ಕಾಡಿನ ನೇರಳೆಮರದಂತೆ ಇದೆ. ಆಂಧ್ರದಿಂದ ಬಂದಿದ್ದಂತೆ. ಇದು ಬೀಜರಹಿತ ಹಣ್ಣು ಬಿಡುವುದು ಮೊದಲಿಗೆ ಗೊತ್ತೇ ಆಗಿರಲಿಲ್ಲ. ಕೆಲಸಕ್ಕೆ ಬಂದ ಆಳುಗಳೆಲ್ಲಾ ಬಿಟ್ಟಿದ್ದ ಹಣ್ಣನ್ನೆಲ್ಲಾ ಗುಳುಂ ಗುಳುಂ ಎಂದು ಖಾಲಿ ಮಾಡಿಬಿಡುತ್ತಿದ್ದರು. ಆದರೆ ಹತ್ತಿರದಲ್ಲಿ ಒಮ್ಮೆಯೂ ಬೀಜ ಬಿದ್ದಿದ್ದು ಕಾಣುತ್ತಿರಲಿಲ್ಲ. ಆಗಲೇ ಚಂದ್ರಪ್ಪನವರಿಗೆ ಸಂಶಯ ಬಂತು. ಮರದಲ್ಲಿ ಉಳಿದ ಕಾಯಿಯನ್ನೆ ತಿಂದು ನೋಡಿದರು. ಬೀಜವೇ ಸಿಗಲಿಲ್ಲ. ನಾಲಿಗೆ ನೇರಳೆಯಾದ ಆಳುಗಳೂ ಅದನ್ನೇ ಹೇಳಿದ್ದು. “ನೂರು ತಿಂದರೂ ಒಂದರಲ್ಲೂ ಬೀಜವಿರಲಿಲ್ಲ ಸ್ವಾಮಿ” ತಕ್ಷಣ ಮರಕ್ಕೆ ಸೀರೆ ಉಡಿಸಿಯೇಬಿಟ್ಟರು ಯಾರೂ ಕೈಹಾಕಿ ಹಣ್ಣು ಕೊಯ್ಯದಿರಲಿ ಎಂದು.
ಇದು ಬೀಜರಹಿತ ಆಗಿದ್ದು ಹೇಗೆ ಎಂಬುದು ಗೊತ್ತಿಲ್ಲ. ಯಾರಾದರೂ ಮಾಡಿದ್ದರೇ? ಪ್ರಕೃತಿಯಲ್ಲೇ ಆಗಿತ್ತೇ? ಯಾವುದಕ್ಕೂ ಇವರಲ್ಲಿ, ಇವರು ವಿಚಾರಿಸಿದ ತಜ್ಞರಲ್ಲಿ ಯಾರಲ್ಲೂ ಇದರ ಉತ್ತರ ಇದರ ಬೀಜದಷ್ಟೇ ಅಗೋಚರ.
ಇದರ ಸಿಪ್ಪೆ ನೇರಳೆ. ಒಳಗೆ ಪೂರ್ತಿ ನೇರಳೆಯಲ್ಲ. ಬಿಳಿ ಇದೆ. ದೊಡ್ಡಗಾತ್ರದ ಹಣ್ಣಾಗುತ್ತದೆ. ತುಂಬಾ ಸಿಹಿ. ಎಷ್ಟು ತಿಂದರೂ ಬೇಸರ, ಬಾಯಿನೋವು ಬರುವುದಿಲ್ಲ. ಚಂದ್ರಪ್ಪನವರು ಸ್ಯಾಂಪಲ್ ಮಾತ್ರ ನೀಡುವ ಕಾರಣ ಬೇಸರವಾಗುತ್ತದೆ.
ಚಂದ್ಪಪ್ಪನವರು ತೋಟಗಾರಿಕಾ ಇಲಾಖೆಯಲ್ಲಿಯೇ ಕೆಲಸ ಮಾಡಿ ನಿವೃತ್ತರಾದವರು. ಇಂತಹ ಅಪರೂಪದ ಗಿಡವನ್ನು ಕಸಿ ಮಾಡದೇ ಬಿಡುತ್ತಾರೆಯೆ?
ಈಗಾಗಲೇ ನೂರಾರು ಗಿಡಗಳನ್ನು ಕಸಿ ಮಾಡಿ ಮಾರಾಟ ಮಾಡಿದ್ದಾರೆ. ಬೇಸಿಗೆಯಲ್ಲಿ ಹೋದರೆ ಸಸಿಯೊಂದಿಗೆ ಹಣ್ಣಿನ ರುಚಿಯನ್ನೂ ನೋಡಬಹುದು. ಅವರ ಶ್ರೀ ಅನ್ನಪೂರ್ಣ ನರ್ಸರಿಯ ವಿಶೇಷತೆಯೂ ಇದೇ ಆಗಿದೆ.
ನೆನಪಿಡಿ, ನೇರಳೆಹಣ್ಣು ತಿಂದಾದ ಮೇಲೆ ಗಿಡ ಮಾಡಲು ಬೀಜ ಬೇಕೆಂದು ಮಾತ್ರ ಕೇಳಿಬಿಡಬೇಡಿ!!
Leave A Comment