ಭಕ್ತಿ ಪದಗಳು

೩೫. ಮೀನದ ಭಕ್ತಿ ಪದ

ಅಲ್ಲಮನ ಅನುಗ್ರಹದಿ ಜಲ್ಮ ಪಾವನಾ
ಜಲದೊಳು ಜಾಲಹಾಕಿ ತಗದಾರ ಮೀನವನಾ
ಬ್ಯಾಟಿಗಾರನು ತನ್ನ ಮಗಳಿಗೆ ಹೇಳಿದನಾ
ಒಳ ಹಿತ್ತಲದೊಳು ಹೋಗಿ ತೊಳಿಯ ಮೀನವನಾ
ಪ್ಯಾಟ್ಯಾಗ ಹೋಗಿ ಮೀನದ ಸಾಮಾನು ತರುವೆ ನಾ
ಮುಂಗಾರಿ ಮುಳೆ ಏರಿ ಹೊಡೆದೀತ ಖಡ್ ಖಡನಾ
ಹೊಳಿ ಹಳ್ಳ ಏಕಾಗಿ ಮೀನ ಸೇರ‍್ಯಾವ ಸಮುದ್ರನಾ
ವಸಧಿಯೊಳು ಶಿಶುನಾಳದೀಶನ ಕವನಾ
ಹಸನಾಗಿ ಹೇಳುವೆ ಕೇಳರಿ ಜನಾ ||

೩೬. ಅವರಾದಿ ಫಲಾರೇಶ್ವರ ಸ್ವಾಮಿಯ ಪದಾ

ಫಲಾರ ಶಿವಯೋಗಿ ತಾ ಹುಟ್ಟಿ ಬರತೇನಂದವರಾ
ಇನ್ನು ಯಾಕ ಬರಲಿಲ್ಲ ಸ್ವಾಮಿ ಬರತೇನಂದವರಾ
ಅಸೂಟಿ ಗ್ರಾಮದಲ್ಲಿ ಸ್ವಾಮಿ ಜನ್ಮ ಎತ್ತಿದವರಾ
ಅಡವಿಯಲ್ಲಿ ಆಕಳ ಕಾಯಕೊಂತ ಅನುಷ್ಠಾನ ಮಾಡಿದವರಾ
ಜಾಲ್ಯಾಳ ದೇಸಾಯರು ಬಂದು ಸ್ವಾಮೀನ ಕರಕೊಂಡು ಹೋದವರಾ
ಜಾಲ್ಯಾಳದಿಂದ ಕಂಬಿ ಅಯ್ಯನವರ ಕೂಡ ಶ್ರೀಶೈಲಕ ಹೋದವರಾ
ದಾರಿಯಲ್ಲಿ ದಂಪತಿಗಳು ಕೂಡಿಕೊಂಡು ಹಂಪಿಗೆ ಹೋದವರಾ
ಹಂಪಿ ಚಕ್ರತೀರ್ಥದಲ್ಲಿ ಲೀಲಾ ತೋರಿದವರಾ
ಹಂಪಿಲಿಂದ ದಂಪತಿಗಳು ಕೂಡಿಕೊಂಡು ಶ್ರೀ ಶೈಲಕ ಹೋದವರಾ
ಆರು ಬೆಟ್ಟ ಮೂರು ಕೊಳ್ಳ ಹತ್ತಿ ಇಳಿದವರಾ
ಪಾತಾಳಗಂಗಿಯಲ್ಲಿ ಸ್ವಾಮಿ ಸ್ನಾನ ಮಾಡಿದವರಾ
ಸ್ನಾನಮಾಡಿ ಮಲ್ಲಯ್ಯನ ಧ್ಯಾನಾ ಮಾಡಿದವರಾ
ಮಲ್ಲಯ್ಯನ ಹತ್ತಿರ ಹತ್ತಿಗಿಡಕ ಅನುಷ್ಠಾನ ಮಾಡಿದವರಾ
ಶ್ರೀಶೈಲದಿಂದ ಕೊಣ್ಣೂರ ಶಿವಪ್ಪಯ್ಯನ ಮಠಕ್ಕೆ ಬಂದವರಾ
ಕೊಣ್ಣೂರ ಮುಂದ ಕಂಬಳಿಯ ಹಾಸಿ ಹೊಳಿಯ ದಾಟಿದವರಾ
ಹೊಸಕೇರಿ ಬಸಪ್ಪ ಭಕ್ತನ ತೋಟಕ್ಕೆ ಹೋದವರಾ
ಸುಣ್ಣದ ಭಟ್ಯಾಗ ಅಡಗಿಸ್ವಾಮಿ ಲೀಲಾ ತೋರಿದವರಾ
ಲೀಲಾ ತೋರಿದವರಾ ಸ್ವಾಮಿ ಕಾಕಮ್ಮಗ ಹೋದವರಾ
ಕಾಕಮ್ಮನಿಂದ ಅರಳಿಕಟ್ಟಿ ಗುಡ್ಡದಲ್ಲಿ ಅನುಷ್ಠಾನ ಮಾಡಿದವರಾ
ನರಗುಂದ ಬಾಬಾ ಸಾಹೇಬನ ಮಹಾರೋಗ ಕಳೆದವರಾ
ಸಾಲಾಪುರ ಗ್ರಾಮಕ್ಕೆ ಸ್ವಾಮಿ ನೀರು ಕೊಟ್ಟವರಾ
ತೊರಗಲ್ಲ ರಾಣಿ ಭಕ್ತಿಗೆ ಮೆಚ್ಚಿ ಆಶೀರ್ವಾದ ಮಾಡಿದವರಾ
ತೊರಗಲ್ಲ ವಾಡೇದಾಗ ಇದ್ದ ರಾಕ್ಷಸನ ಅಳಿದವರಾ
ಅವುರಾದಿ ಮಠದಲ್ಲಿ ಸ್ವಾಮಿ ಅನುಷ್ಠಾನ ಮಾಡಿದವರಾ
ಅನುಷ್ಠಾನ ಮಾಡಿ ಸ್ವಾಮಿ ಅಲ್ಲಿ ಲಿಂಗೈಕ್ಯ ಆದವರಾ

೩೭. ಹರಳಯ್ಯನ ಭಕ್ತಿ ಪದಾ

ಮಾದೇವರ ಸಣ್ಣ ಮಗನ ಕತಿಯ ಕೇಳರಿ ಒಂದಾ
ಹರಳಯ್ಯನ ಮಗನ ಮದವಿ ಪಸಂದಾ
ಹರಳಯ್ಯ ಶಿವಶರಣ ಮಾದರವನಿದ್ದಾ
ಬಸವಣ್ಣನವರ ಮ್ಯಾಲೆ ಬಾಳ ಭಕ್ತಿಯಿಟ್ಟಿದ್ದಾ
ತನ್ನ ಹೆಂಡತಿ ತೊಡಿಯಾನ ತೊಗಲ ಕೊಯ್ದಿದ್ದಾ
ಬಸವಣ್ಣನವರಿಗೆ ಮೆಟ್ಟಲಾಕ ಪಾದರಾಕ್ಷಿ ಮಾಡಿದ್ದಾ
ಮೂರುವರ್ಷ ಬ್ರಾಹ್ಮಣರ ಮನಿಗೆ ಹೋಗಿದ್ದಾ
ಮೆಟ್ಟಿಲಾಕ ಈ ಜೋಡು ನನಗ ಕೊಡು ಅಂದಾ
ಕೊಡುದಿಲ್ಲಾ ಅಂದರ ಸೆಟಗೊಂಡ ಹೊಂಟಾ
ನಡು ನಡುತ ದಾರಿಯಲ್ಲಿ ರೋಗಗಳು ಬಂದಾ
ಹರಳಯ್ಯನ ಬಾನಿಯಲ್ಲಿ ಜಳಕ ಮಾಡಿದ್ದಾ
ಅಲ್ಲಿಗೆ ಅವನ ಪಾಪ ಪರಿಹಾರಾತಂದಾ ||


ಪೌರಾಣಿಕ ಪದಗಳು

೩೮. ಐವರು ಪಾಂಡವರ ಪದಾ

ಐವರು ಪಾಂಡವರು ಆರ‍್ಯಾಣ ಬ್ಯಾಟಿಗೆ ಹೋಗ್ಯಾರೋ
ಹುಲಿ ಕರಡಿ ಹೊಡಿದು ಸಂಜೀಕ ಮನಿಗೆ ಬಂದಾರೋ
ಕುಂತಿ ದೇವಿ ಮಂಚದಮ್ಯಾಲೆ ಮಲಗಿಕೊಂಡಾಳೋ
ಅರ್ಜುನ ಕೇಳತಾನೋ ತಾಯವ್ವಾ ಚಿಂತಿ ಬಂದದ ಏನ
ನೂರಾರು ಮಂದಿ ಅವರು ಮಣ್ಣಿನ ಆನೆಯ ಮಾಡಿ
ಊರ ತುಂಬ ಮೆರೆಸಿ ಬಡವರಿಗೆ ಭಾಗ್ಯೇವ ಕೊಟ್ಟಾರೋ

೩೯. ಪಗಡಿಯ ಮಹತ್ವ

ಬಲ್ಲವರಾಡಬೇಕು ಈ ಪಗಡಿ | ತನುಮನದೊಳಗಾಡುವ ಪಗಡಿ
ಆರಿಸಿ ತಗೋಬೇಕರಿ ಆರಕವಡಿ | ತನುಮನದೊಳಗಾಡುವ ಪಗಡಿ
ಹಾಸಂಗಿ ಹಾಸಬೇಕು ಸೋಸಿ ನೋಡಿ | ತನುಮನದೊಳಗಾಡುವ ಪಗಡಿ
ಪಾಂಡವರು ಸೋತಂತ ಈ ಪಗಡಿ | ತನುಮನದೊಳಗಾಡುವ ಪಗಡಿ
ಕೌರವರು ಗೆದ್ದಂತ ಈ ಪಗಡಿ | ತನುಮನದೊಳಗಾಡುವ ಪಗಡಿ
ದ್ರೌಪದಿ ಮಾನಹೀನವಾದ ಈ ಪಗಡಿ | ತನು ಮನದೊಳಗಾಡುವ ಪಗಡಿ
ಶಕುನಿಯ ಮೋಸದ ಈ ಪಗಡಿ | ತನು ಮನದೊಳಗಾಡುವ ಪಗಡಿ

೪೦. ಜೂಜಾಟದ ಪ್ರಭಾವ

ಪಾಂಡವರು ಕೌರವರು ಪಗಡಿ ಜೂಜನಾಡ್ಯಾರೋ
ಜೂಜನಾಡ್ಯಾರೋ ಆಗ ಪಾಂಡವರು ಸೋತಾರೋ
ದುಷ್ಟ ಕೌರವರು ಪಾಂಡವರ ವನಕ ಕಳಿಸಿದರೋ
ವನಕ ಕಳಿಸಿದರೋ ದ್ರೌಪದಿ ಹಿಡಿದು ತರಿಸಿದರೋ
ದುಷ್ಟ ದುಶ್ಯಾಸನ ದ್ರೌಪದಿ ಸೀರಿ ಸೆಳೆದಾನ
ಸೀರಿ ಸೆಳೆದಾನ ದ್ರೌಪದಿ ಮಾನ ಕಳದಾನ
ಆಗ ದ್ರೌಪದಿ ಅಣ್ಣನ ನೆನಸಿ ಅಳತಾಳ
ನೆನಸಿ ಅಳತಾಳ ಮಾನ ಉಳಸ ಅಂತಾಳ
ಕೃಷ್ಣ ಪರಮಾತ್ಮ ಅಲ್ಲಿಗೆ ಬಂದು ನಿಂತಾನ
ಬಂದು ನಿಂತಾನ ತಂಗಿಯ ಮಾನಾ ಕಾಯ್ದಾನ
೪೧. ಪಾಂಡವರ ವನವಾಸ

ಅಟ್ಟನ ಆರ‍್ಯಾಣದಾಗ ಇಟ್ಟಂಗಿ ಒಲಿಯನ ಹೂಡ್ಯಾರ
ಅಟ್ಟುಂಡು ಹೋಗ್ಯಾದ ಪಾಂಡವರು ವನವಾಸ ಸೋಸ್ಯಾರ
ಕೊಂತೆವ್ವ ಕೊಡ ಹೊತ್ತಾಳ ಭೀಮ ಭಿಕ್ಷವ ಬೇಡ್ಯಾನ

೪೨. ದ್ರೌಪದಿ ಪದ

ಪಂಚ ಪಾಂಡವರು ಐದು ಮಂದಿ ಅಣ್ಣ ತಮ್ಮsರs
ಪಗಡಿ ಆಡ್ಯಾರೋ ದ್ರೌಪದಿ ಸೋತ ಬಂದಾರೋ
ದುಶ್ಯಾಸನ ಬಂದಾನೋ ದ್ರೌಪದಿ ಸೀರಿ ಸೆಳೆದಾನೋ
ಕೃಷ್ಣ ಬಂದಾನೋ ತಂಗಿಯ ಮಾನ ಕಾಯ್ದಾನೋ

೪೩. ಭೀಮನ ಪದ

ಪಾಂಡವರೊಳಗ ಭೀಮ ಬಹಾದ್ದೂರನೋ
ಕೌರವರ ನಾಶ ಮಾಡಿದನೋ ||
ದುಶ್ಶೀಲನ ಹೊಟ್ಟೀಯ ಬಗಿದಾನೋ
ದ್ರೌಪದಿಗೆ ಹೆರಳ ಹಾಕಿದನೋ ||

೪೪. ಬಾಲ ರಾಮನಾಟ

ಅಂಗಳದೊಳಗ ರಾಮ ಆಡುವಾಗ ನೋಡಿದ ಚಂದ್ರಾಮನ
ಓಡುತ ಬಂದನು ತಾಯಿಯ ಹತ್ತಿರ ಕೈಮಾಡಿ ತೋರಿದನ
ಅದು ನನಗ ಆಟಕ ಬೇಕಂತ ಹಟವ ಮಾಡಿದನ
ರಾಮಗ ಸಮಾಧಾನ ಮಾಡ್ಯಾರ ಬಹುಜನಾ |
ಆಗ ಅವರ ಮನಿಯಾನ ದಾಸಿ ಹುಡಿಕ್ಯಾಳ ಯಕ್ತಿಯನs
ಒಳಗ ಹೋಗಿ ಕನ್ನಡಿ ತಂದು ಹಿಡಿದಾಳ ಮುಂದಿನ್ನಾ
ಪ್ರತಿಬಿಂಬ ನೋಡಿ ಬಾಲರಾಮ ಅಳುವುದ ಬಿಟ್ಟಾನ
ತೆಕ್ಕಿಹಾಯ್ದು ಹೇಳತಾನೋ ಆಟಕ್ಕ ನಡಿs ನೀನ ||

೪೫. ರಾಮಾಯಣದ ಪ್ರಸಂಗ

ರಾಮಾ ಲಕ್ಷ್ಮಣ ಜೋಡಿಲಿಬ್ಬರು ಅಣ್ಣತಮ್ಮsರs
ವನವಾಸಕ ಹೋದಾರ ಸೀತಾನ ಕಳದ ಬಂದಾರ
ರಾವಣ ಬಂದಾನ ಸೀತಾನ ಕದ್ದ ಒಯ್ದಾನ
ಹನುಮಂತ ಹೋದಾನ ಲಂಕಾಸುಟ್ಟ ಬಂದಾನ


ಐತಿಹಾಸಿಕ ಪದಗಳು

೪೬. ಟೀಪೂ ಸುಲ್ತಾನನ ಪದಾ

ಮುಸ್ಲೀಮರ ಟೀಪೂ ಬಹಾದ್ದೂರನೋ
ಬ್ರಿಟೀಶರನ್ನು ಸಂಹಾರ ಮಾಡಿದನೋ
ಕರ್ನಾಟಕ ಹುಲಿಯ ಅನಿಸಿದನೋ
ಉಕ್ಕಿನ ಅಂಗಿಯ ಧರಿಸಿದನೋ

೪೭. ಸಂಗೊಳ್ಳಿ ರಾಯಣ್ಣನ ಪದಾ

ಹುಲಿಯ ಹುಟ್ಟಿತ್ತೋ ಕಿತ್ತೂರ ನಾಡಾಗ
ಬಂಟ ರಾಯಣ್ಣ ಸಂಗೊಳ್ಳಿವೊಳಗ
ಕೆಂಪು ಮಸಡಿ ಜನ ನಡಿಸ್ಯಾರೋ ಹಿಕಮತ್
ಕುಲಕರ್ಣಿ ಮೇಲೆ ಸಿಟ್ಟಾದೋ ರಾಯಣ್ಣಾ ||

೪೮. ನರಗುಂದ ಬಾಬಾಸಾಹೇಬನ ಪದಾ

ನರಗುಂದ ಪೇಠಾ ಅದರೊಳು ಶ್ರೇಷ್ಠಾ ಬಾಬಾ ಸಾಹೇಬರಾ
ಬಾಬಾ ಸಾಹೇಬರಾ ಅವರು ಜಾತಿಲೆ ಬ್ರಾಹ್ಮಣರಾ
ಎಲ್ಲಾ ಹಿರೇತನಾ ಮಾಡತಿದ್ದ ಅವ ನಕೋಜಿ ಕಾರಕೂನಾ
ನಕೋಜಿ ಕಾರಕೂನಾ ಅವನು ಬನಿಯಾ ಬಾಪುವನಾ
ಮದ್ದಿನ ಕೋಣಿಗೆ ಎಣ್ಣಿಯ ಸುರುವಿ ಮಾಡಿದ ಮೋಸವನಾ
ಮಾಡಿದ ಮೋಸವನಾ ಬಾಬಾಸಾಬನ ಅಡವಿಗೆ ಅಟ್ಟಿದನಾ
ಬತ್ತಲಗುದುರಿ ಹತ್ತಿ ಬಾಬಾಸಾಹೇಬ ಇಳಿದಾನೋ ಗುಡ್ಡವನಾ
ಇಳಿದಾನೋ ಗುಡ್ಡವನಾ ಸಾಹೇಬ ಸೇರ‍್ಯಾನೋ ಗುಡ್ಡವನಾ
ಇಳಿದಾನೋ ಗುಡ್ಡವನಾ ಸಾಹೇಬ ಸೇರ‍್ಯಾನೋ ಅಡವಿಯನಾ
ಹೆಂಡತಿ ತಾಯಿ ಮಾತಾಡತಾರ ಹೆಂಗ ಮಾಡೂನಿನ್ನಾ
ಹೆಂಗ ಮಾಡೂನಿನ್ನಾ ರಾಮಾಚಾರಿ ಕರಿಸ್ಯಾರೋ ಬೇಗನಾ
ರಾಮಾಚಾರಿ ಕರಕೊಂಡ ಸಂಗಳತನಾ ಬಂದಾರ ಬೆಳತಾನಾ
ಬಂದಾರ ಬೆಳೆತನಾ ಅಲ್ಲಿ ಮುಣಗ್ಯಾರ ಹೊಳಿಯನ್ನಾ

೪೯. ಚಳುವಳಿ ಪದಾ

 

ಚಳುವಳಿ ಎಬಿಸಿದರೋ ಮಹಾತ್ಮಾಗಾಂಧಿ ನೆಹರು ಪಂಡಿತರೋ
ಚಳುವಳಿ ಎಬಿಸಿ ಜೈಯೆಂದು ಜೆಂಡಾ ನಿಲ್ಲಿಸಿದರೋ
ದೇಶಕ ಸ್ವಾತಂತ್ರ್ಯಕೊಡಿಸಿದರೋ ಗಾಂಧಿ ನೆಹರು ಪಂಡಿತರೋ

೫೦. ರಾಮದುರ್ಗ ದುರಂತದ ಪದಾ

ಬಂದದೈವಾ ಚಂದದಿಂದ ಕೇಳರಿ ಚಿತ್ತಿಟ್ಟಾ
ದೇಶದ ಮ್ಯಾಲಾ ರಾಮದುರ್ಗ ದುರಂತಾತಿರಿ ಕೆಟ್ಟಾ
ಚಿತ್ರ ಬನದ ಸಂಸ್ಥಾನಕ ಬಡದೀತ ಬಿಕ್ಕಾಟ್ಟಾ
ಕೂಳ ಕಾಣದ ಗೋಳ್ಯಾಡತಾವರಿ ಬಡಜನ ಥೇಟಾ
ಅಂತದರೊಳಗ ಮಾಮ್ಲೇದಾರ ಆಣೇವರಿ ಮಾಡಿಟ್ಟಾ
ಸುದ್ದಿ ಹೋತರಿ ಸುರೇಬಾನ ಅವುರಾದಿ ಮಟಾ
ಎಲಿಗಾರ ಬಸಪ್ಪನವರು ಕೇಳ್ಯಾರ ಕಿವಿಗೊಟ್ಟಾ
ಗಾಂಧಿ ಚಿತ್ರ ತೇರಿನ ಬೈಲಾಗ ಜೆಂಡ ನಡಿಸ್ಯಾರ ನೀಟಾ
ಕಟ್ನೂರ ಗೌಡನು ಆಗ್ಯಾನೋ ಬಹುಸಿಟ್ಟಾ
ಹತ್ತಿಕಟಗಿ ಕುಟ್ರ್ಯಾಗ ಮಾಡ್ಯಾನೋ ಮೆಟ್ಟಾ
ಹುಡಕ್ಯಾಡಿದ್ರ ಸಿಗಲಿಲ್ಲರಿ ಅಂವಾ ಲಪೂಟಾ
ಎಷ್ಟು ಮಂದಿ ಪೋಲೀಸರು ಆಗ್ಯಾರಿ ನಷ್ಟಾ
ಮೊದಲ ಜೇಲಿನ ಮನಿಸುಟ್ಟು ಮಾಡ್ಯಾರಿ ರೌಸಾ
ಗೋಲಿ ಬಾರ ಮಾಡ್ಯಾನೋ ರಾಜಾ ಕರುಣಿಲ್ಲಾ ಎಳ್ಳಷ್ಟಾ
ಕೂಡಿದ ಜನಾ ಓಡಿ ಹೋತರಿ ನಿಲ್ಲಲಿಲ್ಲ ಎಳ್ಳಷ್ಟಾ
ಏಳು ಮಂದಿನ ಗಲ್ಲಿನ ಪಾಸೇಕ ಇಟ್ಟಾ
ಎಲಿಗಾರ ಬಸಪ್ಪ ತೋರಿದ ಹಿಡಿದಾರಿ ನೀಟಾ
ಜಗದೊಳು ಜೈಕಾರ ಸಾಗಲಿ ಅಂತಾನೋ ಬಂಟಾ ||

೫೧. ತಂದೆ ಮಾತ್ಮಗ ವಂದನೆ ಮಾಡಿ

ತಂದೆ ಮಾತ್ಮಗ ವಂದನೆ ಮಾಡುತ ನಡಿಬೇಕು ಬಾಂಧವರಾ
ಜಗತ್ತಿನಲ್ಲಿ ಇಲ್ಲರಿ ಯಾರ‍್ಯಾರ ಮಹಾತ್ಮಾಗಾಂಧಿಯಂತವರಾ
ದಿಲ್ಲಿಯೊಳಗ ಪಂಡಿತರೆಲ್ಲರೂ ಕೂಡ್ಯಾರ ಕುಷಿಯಾಲಾ
ಕೂಡ್ಯಾರ ಕುಷಿಯಾಲಾ ಮಾತ್ಮರ ಮ್ಯಾಲವರ ಹಂಬಲಾ
ಆದಿನ ವ್ಯಾಳೆ ಚಲೋದಿಲ್ಲ ಸಾಂಬ ಮುನಿದಾನವರ ಮ್ಯಾಲಾ
ಖೊಟ್ಟಿ ಗೋಡ್ಸೆಯೊಬ್ಬ ಹುಟ್ಟಿ ಮಾತ್ಮರಿಗೆ ಆಗಿದಾನ ಮೂಲಾ
ಅವನಿಗೆ ಕರುಣವ ಬರಲಿಲ್ಲಾ ಮಾತ್ಮರಿಗೆ ಒಗಿದಾನ ಪಿಸ್ತೂಲಾ
ತಂದೆ ಮಾತ್ಮಗ ವಂದನೆ ಮಾಡೂತ ನಡಿಬೇಕು ಬಾಂಧವರಾ

೫೨. ಮಹಾತ್ಮಾಗಾಂಧಿ ಪದಾ

ಮಹಾತ್ಮಾಗಾಂಧಿ ಹೊಂಟಾರವರು ಪ್ರಾರ್ಥನಾ ಮಂದಿರಕ
ಪ್ರಾರ್ಥನಾ ಮಂದಿರಕ ಮೊಮ್ಮಕ್ಕಳಿದ್ದಾರ ಎಡಬಲಕ
ಗೋಡ್ಸೆ ನಾಥುರಾಂ ಬಂದ ಆ ದಿನ ಸಭಾಕ
ಆದಿನ ಸಭಾಕ ಮಾತ್ಮರ ಮೋಸಗೊಳಿಸುದಕ
ಏಳುಬಾರಿನ ಪಿಸ್ತೂಲಿತ್ತರಿ ಗೋಡ್ಸೇನಂತೇಕ
ಗೋಡ್ಸೇನಂತೇಕ ಮಾತ್ಮಗ ಹೊಡದಾನೋ ದಿಡಕ
ದೇವರ ಧ್ಯಾನಾ ಮಾಡೂತ ಮಾತ್ಮರು ಬಿದ್ದಾರ ಹಿಂದಕ
ಬಿದ್ದಾರ ಹಿಂದಕ ಸುದ್ದಿ ಕಳಿಸ್ಯಾರ ಇಂಗ್ಲಂಡಕ
ಇಪ್ಪತ್ತೇಳು ಮಂದಿ ಪೋಲೀಸ ಪಾರ್ಟಿ ಇತ್ತರಿ ಕಾವಲಕ
ಇತ್ತರಿ ಕಾವಲಕ ಗೋಡ್ಸ್ಯಾನ ಹಿಡಿದಾರ ಆ ಕ್ಷಣಕ
ಗಂಧದ ಕಟಗಿ ಕೂಡಸ್ಯಾರ ಅವರು ಲೆಕ್ಕವಿಲ್ಲರಿ ಅದಕ
ಲೆಕ್ಕವಿಲ್ಲರಿ ಅದಕ ಮಾತ್ಮರ ಕಿಚ್ಚ ಕೊಡುವುದಕ
ಲಾಲಬಹಾದ್ದೂರ ಶಾಸ್ತ್ರಿ ಮುರಾರ್ಜಿ ದೇಸಾಯಿ ಬಂದಾರಾಕ್ಷಣಕ
ಬಂದಾರಾಕ್ಷಣಕ ಮಾತ್ಮಗ ಕಿಚ್ಚು ಕೊಡುವುದಕ
* * *
ಮಹಾತ್ಮಾಗಾಂಧಿ ಹೊಂಟಾರವರು ಪ್ರಾರ್ಥನಾಮಂದಿರಕ
ಪ್ರಾರ್ಥನಾಮಂದಿರಕ ಮೊಮ್ಮಕ್ಕಳು ಕುಂತಾರ ಎಡಬಲಕ
ಮೂರು ಬಾರಿನ ಪಿಸ್ತೂಲಿತ್ತು ಗೋಡ್ಸ್ಯಾನಂತೇಕ
ಗೋಡ್ಸ್ಯಾನಂತೇಕ ಒಗಿದಾನ ಮಾತ್ಮರ ದೇಹಕ್ಕ
ಹರನ ಧ್ಯಾನವ ಮಾಡೂತ ಅವರು ಬಿದ್ದಾರು ನೆಲಕ
ಬಿದ್ದಾರು ನೆಲಕ ಸುದ್ದಿ ಹತ್ತಿತೋ ಇಂಗ್ಲಂಡಕ
ಗಂಧದ ಕಟ್ಟಿಗಿ ತರಸ್ಯಾರವರು ಅಳತಿಲ್ಲದ ಲೆಕ್ಕ
ಅಳತಿಲ್ಲದ ಲೆಕ್ಕ ಯಮುನಾ ನದಿಯ ಹಂತ್ಯಾಕ ||

೫೩. ನೆಹರೂರ ಪದಾ

ನೆಹರೂ ಇದ್ದ ದೊಡ್ಡ ಸಾಹುಕಾರಾ
ಭಾರತಕ್ಕೆ ಇತ್ತೋ ಅಧಿಕಾರಾ
ಇಂಗ್ಲಂಡದಾಗ ಸಾಲಿಯ ಕಲಿತಿದ್ದ
ರಾಜನ ಮಗನ ಗೆಳತೆನ ಮಾಡಿದ್ದ
ನೋಟನು ಸುಟ್ಟು ಚಹಾನು ಮಾಡಿದ್ದ
ಅದನ್ನು ಕುಡಿದು ಹೌಹಾರಿದ್ದ ||

೫೪. ಚಳುವಳಿ ಮಾಡಿದ ನೆಹರು

ಕೋಟ್ಯಾನುಕೋಟಿ ಸಾಹುಕಾರನಿದ್ದ ನೆಹರು ಒಬ್ಬಾವಾ
ರೈತರ ಸಲುವಾಗಿ  ಸೋಸಿದ ಜೇಲಂವಾ
ಜೇಲ ಸೋಸಿ ಮೂಲ ತಿಳಿದು ಬಂದಾನ ತಿರುಗಿ
ಬಂದಾನ ತಿರುಗಿ ಚಳುವಳಿ ನಡಿಸ್ಯಾನ ಹೆಚ್ಚಾಗಿ
ನೆಹರು ಗಾಂಧಿ ಹಿಂದೂ ಮಂದಿ ಚಳುವಳಿ ಮಾಡಿದರ
ಚಳುವಳಿ ಮಾಡಿದರ ದೇಶದ ಬಂಧನ ಬಿಡಿಸಿದರ
ಅಗಸ್ಟ ತಿಂಗಳ ತಾರೀಖ ಹದಿನೈದು ಆರುತಾಸಿಗೆ
ಆರ ತಾಸಿಗೆ ರಾಜ್ಯವ ಕೊಟ್ಟಾರ ಇವರಿಗೆ
ಹೋಗುವಾಗ ಹಿಂದೂಸ್ತಾನ ನೋಡ್ಯಾರೋ ತಿರುಗಿ
ನೋಡ್ಯಾರೋ ತಿರುಗಿ ನೀರ ತಂದಾರೋ ಕಣ್ಣಿಗಿ ||

೫೫. ಇಂದಿರಾ ಗಾಂಧಿಯವರ ಪದಾ

ಶಕ್ತಿದೇವಿ ಬಂದಾಳ ಭೂಲೋಕಕ
ಶ್ರೀಮತಿ ಇಂದಿರಾಗಾಂಧಿ ಅವತಾರಕ
ಬಡವರ ಬಂಧನ ಬಿಡಿಸುದಕ ಭಾರತಕ
ಬಂದು ನಿಂತಾಳ್ರಿ ಮಂತ್ರಿ ಪದಕ
ಇಪ್ಪತ್ತು ಅಂಶದ ಕಾರ್ಯಕ್ರಮಕ
ತಪ್ಪದೇ ಜನಾ ಒಪ್ಪಲೇಬೇಕ
ಒಂದು ಎರಡು ಮಕ್ಕಳು ಸಾಕ
ಮೂರು ಮಕ್ಕಳಾದರೂ ಸಾಕ
ಕುಟುಂಬ ಯೋಜನೆ ವಿಸ್ತಾರಕ ಭಾರತಕ
ಬಂದು ನಿಂತಾಳರಿ ಮಂತ್ರಿ ಪದಕ ||
೫೬. ಕಟ್ಟಿ ಚೆನ್ನನ ಪದ

ಕಟ್ಟಿ ಚೆನ್ನಪ್ಪಣ್ಣನ ಪ್ರಭುಳೆ ಎಷ್ಟಂತ ಹೇಳಲಿ ನಾನು
ಶ್ರೇಷ್ಟನಾಗಿ ಹುಟ್ಟಿದನಪ್ಪ ಮರ್ತ್ಯದೊಳಗ
ದುಷ್ಟ ದುರ್ಯೋಧನಕ್ಕಿಂತ ಕೋಪಾ ಮನದಾಗ
ನಾಲ್ಕು ಮಂದಿ ಅಣ್ಣತಮ್ಮರೊಳಗ ಪ್ರೀತಿ ಬಾಳೋ ಚೆನ್ಯಾನ ಮ್ಯಾಲಾ
ಏನು ಪುಂಡ ಹುಟ್ಟಿದನಪ್ಪ ನಮ್ಮ ಮನಿಯಾಗ
ಪಂಚ ಪಾಂಡವರೊಳಗ ಭೀಮಸೈನ ಹುಟ್ಟಿ ಬಂದಾಂಗ
ಸಣ್ಣವನಿರುವಾಗ ಚೆನ್ಯಾಗ ಹೆಣ್ಣ ತಗದಾರೋ
ನೆಂಟಸ್ಥಾನ ಮಾಡಿದರಪ್ಪಾ ತೋರಣಗಟ್ಯಾಗ
ಕಟ್ಟು ಎತ್ತು ಕಯ್ಯಾಗ ಹಿಡಿದು ಮೇಲೆ ಜಿನಾ ಸಬರಾಹಾಕಿ
ಹತ್ತಿ ಹೊಡದಂಗ ಆತರಿ ಎತ್ತಿನಗಾಡ್ಯಾಗ
ತೋರಣಗಟ್ಟಿ ಊರವೊಳಗ ಎತ್ತ ಎಳಿಯವಲ್ದೋ ಚನ್ಯಾ
ಹತ್ತಿ ಹೊಡದಾನ ಎತ್ತಿನ ನಡು ಊರವೊಳಗ
ಅವನ ರಟ್ಟಿ ಕಿತ್ತು ಎಳದ ಒಗದಾರ ಎತ್ತಿನ ಕಾಲಾಗ
ತೋರಣಗಟ್ಟಿ ತುರುಮಂದ್ಯಾಗ ಸಾರಿ ಹೇಳತಾನೋ ಚನ್ಯಾ
ಊರ ಜ್ವಾಕಿ ಇಡಿರೆಪ್ಪ ಇಂದಿನ ರಾತ್ರ್ಯಾಗ
ಚಂಡಿನರ ಕಡೂತೇನಿ ಬೆಂಕಿನರ ಹಚ್ಚತೇನಿ
ಗಂಡಸಿದ್ರ ಬಂದ ಹಿಡಿರೋ ಪುಂಡ ಚನ್ಯಾನ್ನ
ದಾಲಪಟ್ಟಿ ಆಡೂದರೊಳಗ ಬಾಳ ಚಮತಾ
ಅಂವಾ ಜಿಗದ ಕಡತಾ ಕೊಡತಿದ್ನೋ ವೈರಿ ಇದ್ದವಗಾ
ಕಾಸ ಬೀಗರ ಮನಿವೊಳಗ ಕೈಯ ತೊಳಿಯಲಿಲ್ಲೋ ಚನ್ಯಾ
ಕರ್ಣನ ಬಾಣ ಬಿಟ್ಟಂಗಾತೋ ಅಭಿಮನ್ಯುನಾಗ
ಅಂವಾ ಬಿಲ್ಲು ಬಾಣಾ ಹೊಡದಂಗಾತೋ ಜೈದ್ರತಗಾಗ
ಸಣ್ಣನವನಿರುವಾಗ ಚನ್ಯಾನ ಬಣ್ಣಾ ಮೈಯ ಬಣ್ಣಾ
ಚೊಕ್ಕ ಚಿನ್ನ ಕುರೇದ ಬೆಳ್ಳಿ ಇದ್ದಾಂಗ
ಇವನ್ನ ಯಾವ ತಾಯಿ ಹಡದಾಳಪ್ಪಾ ಕನ್ನಡನಾಡಾಗ ||

೫೭. ನರಗುಂದ ಸತ್ಯಾಗ್ರಹದ ಪದಾ

ಎಷ್ಟಂತ ಹೇಳಲಿ ಕಷ್ಟದಿ ಬರತಾವರಿ ಕಣ್ಣೀರಾ
ಸೃಷ್ಟಿವೊಳಗ ಎಲ್ಲಾರು ಹುಟ್ಟಿ ಬಂದವರಾ
ನಿಂತ ನರಗುಂದದೊಳಗ ಸತ್ಯಾಗ್ರಹ ಮಾಡಿದವರಾ
ನಿತ್ಯದಿ ಕೂಡ್ಯಾರ್ರಿ ತಪ್ಪದೆ ಮೂರು ತಿಂಗಳ ದಿನಾ
ಮೂವತ್ತು ಮೂರು ಹಳ್ಳಿ ಜನಾ ಕೂಡಿದ ಜನಾ
ಹೊಟ್ಟಿಗೆ ಅನ್ನವಿಲ್ಲದೆ ನಡಸ್ಯಾರೋ ಸತ್ಯಾಗ್ರಹನಾ
ಸರತಿ ಬಂತರಿ ಸೋಮವಾರ ದಿನಾ ಕೂಡ್ಯಾರೋ ಚಿಕ್ಕನರಗುಂದ ಜನಾ
ಮಾಡತಿದ್ನೋ ವೀರಣ್ಣಾ ಶಿವನಧ್ಯಾನಾ
ಕಛೇರಿ ಸುತ್ತಲು ತಿರುಗತಿತ್ರಿ ಕೂಡಿದ ಜನಾ
ಹೇಸಿಮಾರಿ ಪೌಜ್ದಾರಗ ಏಸುಬ್ಯಾರೆ ಬೇಡಿಕೊಂಡರು
ನಾಶ ಮಾಡಾಕ್ಹತ್ಯಾನಪ್ಪಾ ಕೂಡಿದ ಜನರನ್ನಾ
ಹೇಸಿ ಪೌಜ್ದಾರ ಗುಂಡ ಹಾಕ್ಯಾನ ವೀರಣ್ಣಗಿನ್ನಾ
ಗುಂಡತಾಕಿ ನೆಲಕ ಬಿದ್ದಾ ಮಂದ್ಯಾಗ ಹೊರಳಾಡಿ ಹೇಳತಾನೋ
ಒಂದ ಮಾತ ನಡಿಸಿರೆಪ್ಪಾ ನಮ್ಮ ಹಿಂದುಸ್ತಾನಾ
ಈ ಕಂದನ ಮ್ಯಾಲೆ ಇರಲೋ ನಿಮ್ಮ ಕರುಣಾ
ಓಡಿಬಂದ ಮಾರಿನೋಡಿ ಹೊರಳಾಡಿ ಅಳತಾನೋ ಗೂಳಣ್ಣಾ
ಅಗಲಿ ಹೊಂಟೋ ತಮ್ಮಾ ಇರೋ ನೀನಾ
ಏನು ಹೇಳಲಿ ಮನಿಯಾಗ ನಿನ್ನ ವರಣಾ
ಸಿಟ್ಟಿಗೆದ್ದ ಗೂಳಣ್ಣಾ ಮೆಟ್ಟಿ ಸೀಳ್ಯಾನ ಪೌಜ್ದಾರನಾ
ತಟ್ಟನಂತ ಹೋಗಲಿಲ್ರಿ ಪೌಜ್ದಾರ ಪ್ರಾಣಾ
ಕೆಡವಿ ಗಂಟಲ ಕಡಿದಾನೋ ಗೂಳಣ್ಣಾ
ಹತ್ತು ಊರಾರು ಕೂಡಿಕೊಂಡು ಮುತ್ತಿಗೆ ಹಾಕ್ಯಾರ ಕಛೇರಿ ಸುತ್ತಾ
ಎತ್ತ ಓಡಲಾಕ ಬರಲಿಲ್ರಿ ಪೋಲೀಸ ಜನಾ
ಎಂಥಾ ಜಲ್ಮವ ಕಳಕೊಂಡಾನ ಪೌಜ್ದಾರಿನ್ನಾ
ಕಛೇರಿ ಸುಟ್ಟ ಕಾಗದ ಪತ್ರಾ ಆಗಿ ಹೋಗ್ಯಾವ ಲುಕ್ಸಾನಾ
ಉಳಿದ ಪೋಲೀಸರು ಬಿಟ್ಟೋಡಿ ಹೋದಾರಿನ್ನಾ
ಚೊಣ್ಣಾ ಕಳದಿಟ್ಟು ಮಾಡತಾರೋ ಶರಣಾ
ಹುಚ್ಚ ರೈತರಿಗೆ ತಿಳಿಯಲಿಲ್ರಿ ಈ ಗುಣಾಕ
ಹೊತ್ತ ಏರೂದರೊಳಗ ಬಂತ್ರಿ ಮಿಲ್ಟ್ರಿ ಜನಾ
ಲಾಟಿ ತಿರುವಾಕ ಹತ್ಯಾರೋ ಪ್ಯಾಟ್ಯಾಗಿನ್ನಾ
ಕೋಟಿ ವಿದ್ಯೆ ಕಲಿತರೇನು ಮೇಟಿ ತೆಳಗ ತಿಳಿಯೋ ತಮ್ಮಾ
ಲಾಟಿ ತಿರುವುದೋ ಬಂದ ಇಡಿರೋ ಕಲಿತ ಜನಾ
ಕೋರ್ಟಿಗೆ ಹಾಕಂತ ಕೇಳತಾನೋ ರೈತ ಇನ್ನಾ ||
ಎಷ್ಟಂತ ಹೇಳಲಿ ಕಷ್ಟದಿ ಬರತಾವರಿ ಕಣ್ಣೀರ
ಸೃಷ್ಟಿವೊಳಗ ಎಲ್ಲಾರು ಹುಟ್ಟಿ ಬಂದವರಾ
ನಿಂತ ನರಗುಂದದೊಳಗ ಸತ್ಯಾಗ್ರಹ ಮಾಡಿದವರಾ ||
* * *