. ಬಿಸಮಿಲ್ಲಾದ ಮಹತ್ವದ ಪದಾ

ಬರಿ ಬಲ್ಲವರು ದೈವೆಲ್ಲಾ ಕುಂತ ಸಂತ | ಶ್ರೀಮಂತ ಕೂಡಿರಿ ಸಾಕ್ಷಾಂತ
ಮುಚ್ಚಿ ಇಡೂದಿಲ್ಲಾ ಬಿಚ್ಚಿ ಏಕಂತ | ತಿಳಿಪಡಿಸುವೆ ಮಾಡಿ ಸುನುಮಂತ || ಪಲ್ಲವಿ ||

ಏರು || ವಲ್ಲತಬ್ರಹ್ಮ ನಬಿಸಾಹೇಬ ಶರಣರನಾ
ಅಷ್ಟು ಶರಣರೊಳಗ ಶ್ರೇಷ್ಟಾ | ಹೀಂಗ ಪದವಿ ಕೊಟ್ಟಾ
ಆ ಜಗದೀಶ ಜಗಭರಿತ ಸೃಷ್ಟಿಕರ್ತನು
ತನ್ನಿಂದಾ ತಗದ ಜ್ಯೋತಿ ನಬಿಸಾಹೇಬಗ ಮಾಡಿದನು
ಅವರಿಂದ ಚಂದ್ರ ಸೂರ್ಯ ಪ್ರಕಾಶ ಈ ಭೂಮಂಡಲನು
ಮಾಡ್ಯಾನ ಅರ್ಷ ಹರುಷಾಗಿ ತಾಂ ಮಹಕಲ್ಮಾ ಎಲ್ಲಾ ಸೊಂತಾ
ಅವನ ಮಹಿಮೆ ವರ್ಣಿಸಲಿ ಎಷ್ಟಂತಾ || ೧ ||

ಇ|| ಮಿತ್ರ ಮಂಡಳಿ ಸಂಗತಿಲೆ ಸೊಂತ
ನಬಿಸಾಹೇಬರು ಮಸೂತ್ಯಾಗ ಕುಂತ
ಓದಿ ಬಿಸಮಿಲ್ಲಾ ತಿಳಿಪಡಿಸುವರೋ ನಕ್ಕೊಂತಾ
ಏರು || ಕೇಳಿ ತಲೆದೂಗುವರೋ ಜನರೆಲ್ಲಾ ಹೌದಂತಾ
ಅಂತಾ ವ್ಯಾಳೇಕ ಅಲ್ಲಿಗೆ ಬಂದಾಳ | ಯಹೂದಿ ಮಗಳ
ನಿಂತ ಕೇಳ್ಯಾಳ ಹೆಣ್ಣ ಬಾಲಿ | ಸುಂದರ ಕೋಮಲಿ |
ಖರೇ ಪೈಗಂಬರ ಇದ್ದಾರ ಅಂತ ಬಿಸಮಿಲ್ಲಾ
ಒಳೇ ಪ್ರೀತಿಲೆ ಓದಿಕೊಂತಾ ಹೊಂಟಾಳಲ್ಲಾ
ನಡುತಾಳ ನಡುಗಿ ನುಡುತಾಳ ಬಾಯಿಲೆ ಬಿಸಮಿಲ್ಲಾ
ಮುಟ್ಯಾಳ ಮನಿಗೆ ವಯ್ಯಾರಿ ರೂಪಾಂತ ರೂಪಸುಂದರಿ
ತನ್ನ ಮನಸಿಗೆ ತಾ ಆಗಿ ಶಾಂತ || ೨ ||

ಇ|| ಹೀಂಗ ವ್ಯಸನ ಆಕಿಗೆ ತಗೊಂತ
ಹಗಲಿ ಇರುಳು ನುಡಿವಳೋ ಕುಂತ ನಿಂತ
ಶಬ್ದಾ ಬಾಯಿಲೆ ಬಿಸಮಿಲ್ಲಾ ಅಂತ | ಸಂಪೂರ್ಣ ತಾಯಿಗೆ ಕೇಳಿ ಬಂತ
ಏರು|| ತಾಯಿ ಗಾಬರ‍್ಯಾಗಿ ಅಂತಾಳ ಮಗಳಿಗೆ
ಕೇಳವ್ವಾ ನನ್ನ ಮಾತ ತಿಳಿಸುವೆ ನಾ ತುರ್ತ
ಕೇಳಿದರ ನಿನ್ನ ತಂದಿ ಕೊಂದ ಹಾಕ್ಯಾನ ಕೇಳ ಮೋಹನಾ
ಬಿಟ್ಟ ಬಿಡು ಓದುದು ಬಿಸಮಿಲ್ಲಾ ಇದು ಕೆಟ್ಟ ವ್ಯಸನಾ
ಬಂದ ಅಷ್ಟರೊಳಗ ತಂದಿ ಕೇಳಿ ಸಿಟ್ಟೀಲೆ ಬೇಮಾನಾ
ಹಿರ್ದ ಹತಿಯಾರ ಒಳಗ ಹ್ವಾದಾ ಎಳದ | ಮಗಳಿನ ಕೈಯ ಹಿಡಿದಾ
ಎತ್ಯಾನ ಕೈಮ್ಯಾಗ ಕೊಲ್ಲಬೇಕಂತಾ || ೩ ||

ಇ|| ತಾಯಿ ಮಮತಾ ಹೆಚ್ಚಾಗಿ ದೃಷ್ಟಾಂತ
ಕಂಡ ಹಿಡಿದಾಳ ಕೈಯ ಹೊಡಿಬೇಡಿರಂತ
ನಮಗ ಇರು ಮಗಳು ಒಬ್ಬಾಕಿ ಅಂತ
ಬೇಡಿಕೊಂಡಾಳ ಸೆರಗೊಡ್ಡಿ ಅತಗೊಂತ
ತಿಳಿಸಿ ಮಗಳಿಗೆ ಬಿಸಮಿಲ್ಲಾ ಓದುದು ಬಿಡಿಸುವೆ ಅಂತ | ಒಯ್ದಾಳ ಪರಬಾರಿ
ಕೇಳ ಎನ್ನ ಸುಂದರಿ | ಇನ್ನಾರ ಬಿಟ್ಟು ಬಿಡು ಓದಬೇಡ ಬಿಸಮಿಲ್ಲಾ
ತಾಯಿಗೆ ಮಗಳು ಇದರಂತೆ ನುಡಿತಾಳಲ್ಲಾ
ಎಂದಿಗೆ ಬಿಸಮಿಲ್ಲಾ ಓದುದು ಬಿಡಲಿಕ್ಕಿಲ್ಲಾ
ಹೋದರ ಹೋಗಲಿ ನನ್ನ ಜಲ್ಮಾ ಓದುವೆ ನಬಿಸಾಹೇಬರ ಕಲ್ಮಾ
ಕೇಳ ತಾಯಿ ನಿನಗ ತಿಳಿಸಲಿ ಎಷ್ಟಂತ || ೪ ||

ಇ|| ತಿಳಿಸಿ ಬ್ಯಾಸೊತ್ತ ತಾಯಿ ತಾ ಸೊಂತ
ಗಂಡಗ ತಿಳಿಸ್ಯಾಳ ಕೇಳೂದಿಲ್ಲಂತ
ರಂಬಿಸಿ ತಿಳಿಸಿದೆ ಓದ ಬೇಡಂತ | ಕೇಳಲಿಲ್ಲಾ ಕಡಿಗೆ ಇಟ್ಟಾಳ ಪಂತ
ಏರು || ಗಂಡಾ ಹೆಂಡ್ತಿ ಕೂಡಿ ಕುಂತ ಮಸಲತ ಮಾಡಿ
ತಗದಾರ ಹೀಂಗ ಕಲ್ಪನಾ ಹೊಡಿಬೇಕಂತ ಪ್ರಾಣಾ
ವಜ್ರದ ಉಂಗುರ ಕೊಟ್ಟಾರ ಕರದ ಮಗಳಿಗೆ ಆಕ್ಷಣಾ
ತಾಕೀತ ಕೊಟ್ಟಾನ ಉಂಗುರ ಕಳದರ ಹೊಡದೇನ ಪ್ರಾಣಾ
ಕೇಳಿ ಬಿಸಮಿಲ್ಲಾ ಅಂತ ಉಂಗುರ ತಗೊಂಡಾಳ ಮೋಹನಾ
ಇಟ್ಟಾಳ ಕೈಯಾಗ ನಕ್ಕೂಂತ ಬಾಲಿಯ ಮನಸಾಗಿ ಶಾಂತ
ಏನ ತಾಯಿ ತಂದಿ ಪ್ರೀತಿ ನನ್ನ ಮ್ಯಾಲಂತ || ೫ ||

ಇ|| ರಾತ್ರಿ ವ್ಯಾಳೇಕ ಬಾಲಿಗೆ ನಿದ್ರಿಬಂತ
ಮಲಕೊಂಡಾಳ ಎದ್ದ ತಂದಿ ಸೊಂತ
ಮೆಲ್ಲಕ ಬಂದ ಉಂಗುರಾ ತಗದಾನ ನಕ್ಕೂಂತಾ
ಹೊಂಟಾನ ಆಗಿಂದ ಆಗ ಕುಣಕೊಂತಾ
ಏರು || ಹೋಗಿ ಉಂಗುರಾ ನಗತಾ ಒಗದಾನ ಸಮುದ್ರದಲ್ಲೇ
ನುಂಗಿತು ಉಂಗುರ ಒಂದ ಮೀನಾ ಹೊಂಟಾನ ಬೇಮಾನಾ
ತನ್ನ ಕುಲ ಬಾಂಧವರಿಗೆ ಔತಣಾ ಹೇಳೂತ ನಡದಾ
ಮನಿಯಾಗ ಮಗಳ ಎಚ್ಚರಾಗಿ ನೋಡ್ಯಾಳ ಎದ್ದಾ
ಅಂಗಿ ಕಿಸೇದಾಗ ಮುಂಗೈಹಾಕಿ ಉಂಗುರ ನೋಡ್ಯಾಳ ಖುದ್ದಾ
ಇದ್ದಿಲ್ಲಾ ಉಂಗುರಾ ಆಗ್ಯಾಳ ಗಾಬರಿ | ಅಂತಾಳ ಬಂತ ನನಗ ಬಿರಿ
ದುಃಖಿಸಿ ನೆನಸ್ಯಾಳ ನಬಿಸಾಹೇಬರಿಗೆ ಅತಗೊಂತ || ೬ ||

ಇ|| ತಂದಿ ಕೇಳಿದರ ಏನ ಹೇಳಲೆಂತ
ಕಳಿದೀನಿ ಉಂಗುರಾ ಶಿರಾ ಹೊಡುತಾನಂತ
ದುಃಖ ಉಕ್ಕೂದು ಆಕೀಗೆ ಕುಂತ ನಿಂತ
ಇನ್ನ ಪಾರಮಾಡಬೇಕ ನೀನೇ ಭಗವಂತಾ
ಏರು || ಖುದ್ದ ಯಹೂದಿ ಹ್ವಾದಾ
ಪ್ಯಾಟ್ಯಾಗ ಬರುವಾಗ ಕಂಡ ಮೀನಾ
ಮಾರುವಲ್ಲೆ ಹೋಗಿದ್ದಾನ ಅಲ್ಲೆ ಕೊಟ್ಟ ಕಿಮ್ಮತ್ತ ಮೀನಾ
ತಗೊಂಡು ಮನಿಗೆ ಬಂದಾನು ತನ್ನ ಮಗಳಿನ ಕೈಯಾಗ ಕೊಟ್ಟ ಮೀನಾ
ಅಂತಾನು ತಡಮಾಡದೆ ಅಡಗಿ ಮಾಡವ್ವಾ ಕೇಳ ನೋಡೂನು
ಬರತಾರ ಊಟಕ ಜನರೆಲ್ಲಾ ಕೇಳಿ ಓದ್ಯಾಳ ಬಿಸಮಿಲ್ಲಾ
ಮೀನಾ ತಗೊಂಡಾಳ ಅಡಗಿ ಮಾಡತೇನಂತಾ || ೭ ||

ಇ|| ಮೀನಾ ಕೊಯ್ದಾಳ ಬಿಸಮಿಲ್ಲಾ ಅಂತಾ
ಕಣ್ಣೀಗೆ ಬಿತ್ತ ಉಂಗುರಾ ತಗೊಂಡಾಳ ನಕ್ಕೊಂತಾ
ಆಕಿ ಭಾವಕ ಮೆಚ್ಯಾನ ಭಗವಂತಾ
ಗುರ್ತು ಹಿಡದಾಳು ಉಂಗುರಾ ನನ್ನದು ಹೌದಂತಾ
ಏರು|| ಅಂಗಿ ಕಿಸೇದಾಗ ಉಂಗುರ ಹಾಕ್ಯಾಳ ಬ್ಯಾಗ
ಮಾಡ್ಯಾಳ ಅಡಗಿ ಪಸಂದಾ | ಕರಿಲಿಕ್ಕೆ ಹೋಗಿದ್ದಾ
ಬಂದಾನ ತುದಿ ಮನಿಗೆ ಸಂಗತಿಲೆ ಕರಕೊಂಡ ಬ್ಯಾಗ
ಮಾಡಿದ್ದ ಅಡಗಿ ಎಡಿ ಇಟ್ಟಾನ ಅವರ ಮುಂದ ಆಗ
ಕುಂತ ದೈವೆಲ್ಲಾ ಊಟಾ ಮಾಡ್ಯಾರ ಮನಬಲ್ಲಾಂಗ
ಎಲ್ಲಾರ ಊಟ ಆದಿಂದ ಅಂತಾನ ಯಹೂದಿ ಕೈಮುಗದ
ನನ್ನ ಮಗಳ ಬಿಸಮಿಲ್ಲಾ ಓದತಾಳಂತಾ || ೮ ||

ಇ|| ಕೇಳ್ಯಾನ ಇದರ ಶಿಕ್ಷಾ ಏನ ಕೊಡಬೇಕಂತಾ
ಅಂತಾರ ಎಲ್ಲಾರು ಆಕೀನ ಕೊಲ್ಲಬೇಕಂತಾ
ಕರೆತಂದು ಮಗಳಿಗೆ ಸಭಾದಲ್ಲಿ ನಿಂತ
ಬೇಡ್ಯಾನ ಕೊಟ್ಟಿದ್ದ ಉಂಗುರ ತಾ ಅಂತಾ
ಏರು || ಆ ಬಾಲಿ ಬಿಸಮಿಲ್ಲಾ ಓದಿ ಉಂಗುರಾ ತಗದ
ಕೊಟ್ಟಾಳ ಆಗ್ಯಾರ ಗಾಬರಿ | ಅಂತಾಳ ಸುಂದರಿ
ಕಳೆದ ಉಂಗುರಾ ನನಗ ಸಿಕ್ಕೀತು ದಯಾಕರುಣದಿಂದ
ಆ ಜಗಭರಿತನ ಪೈಗಂಬರ ನಬಿಸಾಹೇಬರಿಂದ
ಉದ್ದಾರ ಆತ ಜಲ್ಮಾ ಓದುವೆ ಕಲ್ಮಾ ಮನದಿಂದ
ಇಲ್ಲಂದರ ಹೊಡುತಿದ್ದಿ ಪ್ರಾಣಾ ಇಲ್ಲದೆ ನಿನಗ ಅಂತಃಕರಣಾ
ಕೇಳಿ ದೈವೆಲ್ಲಾ ಮನಸಿಗೆ ಹೀಂಗ ಬಂತ || ೯ ||

ಇ|| ತಿಳಿದಾರ ಖರೇ ಪೈಗಂಬರ ಧರ್ಮ ಹೌದಂತ
ಅಲ್ಲ ತಮ್ಮ ಧರ್ಮ ಏನ ಸುಡಬೇಕಂತ
ಓದಿ ಕಲ್ಮಾ ಮುಸಲ್ಮಾನ ಆಗೂನಂತ
ಹೊಂಟಾರು ಎಲ್ಲಾರು ಧೀನ್ ಧೀನಂತ
ಏರು || ಸಂಗತೀಲೆ ಕರಕೊಂಡ ಆ ಬಾಲಿ ಮುಟ್ಯಾಳ ಕ್ಷಣದಲ್ಲಿ
ಭೆಟ್ಟಿ ಶರಣರಿಗೆ ಆಗಿ ತಿಳಿಸ್ಯಾಳ ಹರುಷಾಗಿ
ಬಂದ ಮಂದಿಗೆ ಕಲ್ಮಾ ಓದಸ್ಯಾರ ಪೈಗಂಬರಾ
ಬಾಗಲಕೋಟಿ ಪ್ಯಾಟ್ಯಾಗ ಮಲ್ಲೆಕಲ್ಲ ಪೀರ ಜಾಹಿರಾ
ತಗೀಬೇಕ ಧರತಿ ಹೊಸಾ ಸರ್ತಿಗೆ ಹೀಂಗ ಶಾಹೀರಾ
ಅಂತಾರ ಹುಸೇನಮಿಯ್ಯಾ ಸಾರಿ | ಕೇಳೋ ಶಾಹಿರಾ ಚಂಡಕ ನರಿ
ಗುಂಡ ಒಗದೇನ ನನಗೂಡ ಇಡಬ್ಯಾಡ ಪಂತ || ೧೦ ||

* * *

ಕಲಿಮಾ ಮಹತ್ವ ಹೇಳುವ ಪದಾ

ಕುಂತೀರಿ ಶ್ರೀಮಂತ ಬುದ್ಧಿವಂತ ಅನೇಕ | ಅಂತೇನಿ ಒಂದ ಪ್ರಸಂಗ
ಕೇಳಿ ದೈವಾ ಆದೀರಿ ದಂಗ ನುಡಿ ಕಡಿತನಾ
ಅಡಿಪ್ರಾಸ ಹೀಂಗ ಬರಲಿ ಬಹುಕಡಕ ||
ಏರು || ಬಲ್ಲವನೆ ಬಲ್ಲಾ | ಎಲ್ಲಾ ಶಾಸ್ತರ ಕುಶಲಾ
ಅರಿಯದಂವಗ ಏನ ದಾಂವಕಿ ಹುಡುಕಿ ತಗದೇನಿ ಸಂದಾ
ಸಭಾದಲ್ಲಿ ಮಿಕ್ಕಿ ಹೊಡದ ಹೂಕಿ | ಹಾಡುವೆ ದುಂದಾ
ಮಂಡ ಹುಡುಗರು ದಿಟ್ಟಿ | ವೆಂಕಟಪ್ಯಾಟಿ ಗಂಡ ಮೆಟ್ಟಿ
ತಿಳಿ ವಾಳಿ ಗೈಯಾಳಿ ಶಾಹೀರಾ ಕೇಳೋ ಕವಿ ಹರಕ || ೧ ||

ಅರಸ ಒಬ್ಬ ಪಟ್ಟ ಆಳುವಾ ಸರಸ | ಹರುಷಾಗಿ ತನ್ನ ಮನಕ
ಆತನ ಹೊಟ್ಟೀಲಿ ಪುತ್ರೊಂದ | ಪ್ರೇಮಾನಂದ
ನೇತ್ರ ಪವಿತ್ರ ಚಿತ್ರ | ಗೊಂಬಿ ಹಾಂಗ ಇದ್ದು ನಾಜುಕ
ಏರು || ಇತ್ತ ಚಿಕ್ಕ ವಯಸ್ಸು ಮನಸ ಆಗಿ ಹರುಷ
ತನ್ನ ಮಗನ ರೂಪ ಕಂಡ ಅರಸ ಪ್ರೀತಿ ಮಾಡುವನು
ಮನದಲ್ಲಿ ಹುಟಸಾಲಿ ಕಲಿಲಿಕ್ಕೆ ಕಳಿಸಿದನು
ಇದ್ದಾನ ಒಬ್ಬ ಶಮರಂತ | ಆತನ ಊರಾಗ ಮಹಾಪಂಡಿತ ಕಲಿಸುನಾ
ಮನ ಸಂತೋಷಾಗಿ ಅಭ್ಯಾಸ ಪ್ರೀತೀಲೆ ದಿನದಿನಕ  || ೨ ||

ಕಲ್ತಾನ ಸರೂ ಸಾಹಿತ್ಯ ವಿದ್ಯೆ ಅರಸನ ಬಾಲಕ
ಈಸಾಯಿ ಆತನ ಧರ್ಮಾ | ಬಿಟ್ಟ ಹೀಂಗ ಓದುವಾ ಕಲ್ಮಾ
ಪ್ರೇಮ ಸೇವಕನಾಗಿ ನೆನಸುವಾಗ ನಬಿಸಾಹೇಬರನ ಕಡಿತನಕ
ಏರು || ಒಂದಾನೊಂದು ದಿವಸ ಖಾಸ ಆಗಿ ರಾಜಹಂಸ
ಹೊಂಟಾನ ಸಾಲಿಗೆ ದಾರಿಯಲಿ ಹೀಂಗ ನಡುತಿದ್ದಾ ನಡಗಿ
ಆ ದಾರ‍್ಯಾಗ ಅನೇಕ ಮಂದಿ ತಮ್ಮ ಶಿರಬಾಗಿ
ತಿಳಿಸ್ಯಾರ ಮಿತ್ರಗ ಹೀಂಗ ಸರಪೊಂದು ಈ ದಾರ‍್ಯಾಗ
ಇರುವುದು ಖರೇ ಹೋಗಬೇಡ ಕಡದ ನೀ ಸತ್ತಿ ಹಕನಾಕ || ೩ ||

ಯಾರಮಾತ ಆ ಮಿತ್ರ ಕೇಳದೆ ಹೊಂಟಾನ ಆ ಕ್ಷಣಕ
ವೀರಶೂರ ಪುಂಡಾತ್ಮನು | ಖುದ್ದ ಸರಪ ಕಂಡ ನಿಂತಾನು
ಕಲ್ಮಾ ಓದಿ ಕಲ್ಲ ಅರಸ ತಗೊಂಡಾನ ಕೈಯಾಗ ಆ ಕ್ಷಣಕ
ಏರು || ಪರತ ನೋಡಿ ಎದ್ದಾ ಖುದ್ದಾ ಕಲ್ಲಿಲೆ ಒಗದಾ
ಆ ಸರಪ ಸತ್ತ ಬಿತ್ತ ಆಗಿತ್ತ ತುಣಕ
ಓದಿ ಕಲ್ಮಾ ಸರಪ ಹೊಡದ ಸುದ್ದಿ ಅರಸನ ತನಕ
ಮುಟ್ಟಿದ ಕ್ಷಣಕ ಮೂರ್ಖ | ಮನದಲ್ಲಿ ಮಾಡಿ ತರ್ಕ
ಕರೆಸಿ ತಿಳಿಸ್ಯಾನ ರೈತರ ಜನಕ ಸೋಸಿ ತನ್ನ ಮನಕ || ೪ ||

ತುರ್ತ ತಡಮಾಡದೆ ಹೂಡಿ ತಯಾರ ಮಾಡಬೇಕ
ದುಷ್ಟ ಎನ್ನ ಪುತ್ರಗ ಬ್ಯಾಗ ಹಿಡಿತಂದ ಆ ಹುಡಿಯೊಳಗ
ಕೂಡ್ರಿಸಿ ಒಯ್ದು ನಡು ಸಮುದ್ರದಲ್ಲೆ ಸಾಯಿ ಹೊಡಿಬೇಕ
ಏರು || ತಯ್ಯಾರ ಮಾಡಿ ಹುಡಿ ಓಡಿ ಅವನ ಕಡಿ
ಹೋಗಿ ಪುತ್ರಗ ಹಿಡಿತಂದ ಕುಂಡರಸ್ಯಾರ ಹುಡಿವೊಳಗ
ಒಳ್ಳೆ ತಯಾರ ಮಾಡಿ ಬಿಟ್ಟಾರ ಹುಡಿ ಸಮುದ್ರದೊಳಗ
ಅತ್ತ ಇತ್ತ ಹೋದಾಡಿಕೊಂತ | ಹೋಗಿ ನಡು ಸಮುದ್ರಕ ನಿಂತ
ಡಬ್ಬ ಆತ ಪುತ್ರ ಉಳದಾನ ಒಬ್ಬ ಕೇಳರಿ ಜನಲೋಕ || ೫ ||

ಬಂದ ತನ್ನ ತಂದಿಯ ಮುಂದ ಅಂತಾನ ಬಾಲಕ
ಕೇಳ ಖರೇ ಎನ್ನ ಪರಮಾತ್ಮ ಇದ್ದಲ್ಲೆ ಉಳಿತ ಎನ್ನ ಜಲ್ಮಾ
ಓದೋ ಕಲ್ಮಾ ಇನ್ನ ಸುಡೋ ನನ್ನ ಧರ್ಮಾ ಜಲ್ಮಾ ಇರುತನಕ
ಏರು || ಸಿಟ್ಟ ಆಗಿ ಮನಕ ಮೂರ್ಖ ಕರೆಸಿ ಜನಕ
ತಿಳಿಸ್ಯಾನ ಅರಸ ನಿಷ್ಟುರ ಬಂದ ರೈತರ ಮುಂದ
ಎನ್ನ ಪುತ್ರಗ ಭಯಂಕರ ಗುಡ್ಡ ಇದ್ದಲ್ಲೆ ಒಯ್ದ
ನುಗಸಬೇಕರಿ ಮ್ಯಾಲಿಂದ | ಸತ್ತ ಸುದ್ದಿ ತಿಳಿಸರಿ ಬಂದ
ಕೇಳಿ ಕೈ ಪುತ್ರನ ಹಿಡಕೊಂಡ ನಡದಾರ ಎಲ್ಲಾರು ಮೆಲ್ಲಮೆಲ್ಲಕ || ೬ ||

ಯಾರಿಗೆ ತಿಳಿಯದು ಇದು ಸಾಂಬನ ಕೌತುಕ
ನೂರಾರು ಜನಾ ಸಂಗತಿಲೆ ಹೋಗಿ ನಿಂತಾರ ಗುಡ್ಡದ ಮ್ಯಾಲೆ
ಕರ್ಮಗೇಡಿ ಕರುಣಯಿಲ್ಲದ ಪ್ರಾಣ ನಿಂತಾರ ಹೊಡಿಯುದಕ
ಏರು || ಪುತ್ರಗ ಬಂತ ನಗಿ ಬಾಗಿ ಅಂತಾನ ಕೂಗಿ ಯಾರಿಲ್ಲ ದಿಕ್ಕ
ಇಲ್ಲೆ ನನಗ ಸಂಬನ ಹೊರ್ತ | ಇಟ್ಟಾನ ತಂದಿ
ಪಂತ ಪ್ರಾಣ ಹೊಡಿಯಬೇಕಂತ | ಉಳಿಸಿದರ ಉಳಸ ಎನ್ನ ಜಲ್ಮಾ
ಸಾಕ್ಷಾಂತ ನೀ ಹರಿಬ್ರಹ್ಮಾ | ದುರ್ಜನಾ ದುಷ್ಟರು
ಶ್ರೇಷ್ಟಾಗಿ ಸಂಗತೀಲೆ ನಿಂತಾರ ಕೊಲ್ಲುದಕ || ೭ ||

ಬಿಟ್ಟೀತ ಬಿರುಗಾಳಿ ಕೆಂದ ಹಾರತಿತ್ತ ಆ ಕ್ಷಣಕ
ಕಂಡ ಜನಾ ಗಾಬಾಗಿ ಮಿಕ್ಕಿ ಒಬ್ಬರಿಗೊಬ್ಬರು ಹಾಕ್ಯಾರ ತೆಕ್ಕಿ
ತ್ರಾಣಗೆಟ್ಟ ಗಾಳೀಲೆ ಕಾಲ ನಿಂದ್ರುವಲ್ಲ ನೆಲಕ
ಏರು || ಎಲ್ಲಾರಿಗೆ ನಡಗ ಹುಟ್ಟಿ | ಭೆಟ್ಟಿ ಇಲ್ಲದೆ ಉಸಲಗಟ್ಟಿ
ಹದ್ದ ಹಾರಿದಾಂಗ ಹಾರಿ ಮ್ಯಾಲಿಂದ ಬಿದ್ದೋ ಸತ್ತ ನೆಲಕ
ಏನ ಹೇಳಲಿ ಯಾರ‍್ಯಾರ ಉಳಿಯಲಿಲ್ಲ ಸಿಲ್ಕ.
ಉಳದಾನ ಒಬ್ಬ ಅರಸನ ಪುತ್ರ | ಬಿಟ್ಟ ಗುಡ್ಡ ಹೊಂಟಾನ ವತ್ತರ
ಕರುಣೇಶ್ವರನ ಕರುಣದಿಂದ ಮುಟ್ಯಾನ ಮನಿತನಕ || ೮ ||

ಕಂಡ ಅರಸನ ಕಂದಗ ಮಂದಿ ಅನೇಕ
ಅಂತಾರ ಹೀಂಗ ಹುಟ್ಟಿ ಪ್ರೇಮಾ | ಖರೇವಂತು ಈತನ ಧರ್ಮಾ
ತಿಳಿದ ಅಳದ ಕೋಪ ಓದ್ಯಾರ ಕಲ್ಮಾ ಬೇಶಕ್
ಏರು || ಕಂಡ ಅರಸ ನಾಚಿಕೈಯ ಚಾಚಿ | ತುಟಿಯ ಕಚ್ಚಿ
ಸಿಟ್ಟಾಗಿ ತೆಗ್ಗ ಕಡಸ್ಯಾನ ಹಮ್ಮ ಚೌಕ ನಾಲ್ವತ್ತ ಗಜಾ
ಮಿತಿಮೀರಿ ಕಟಗಿ ತರಿಸಿ ಬೆಂಕಿ ಹಚ್ಯಾನ ಸೇಜಾ
ತನ್ನ ಧರ್ಮಾ ಬಿಟ್ಟ ನಡದವಗ | ನುಗುಸಿಕೊಡುರೊ ಬೆಂಕಿಯವೊಳಗ
ಸುಟ್ಟಾನ ಅನೇಕ ಮಂದಿಗೆ ಸಿಟ್ಟ ಆಗಿ ತನ್ನ ಮನಕೆ || ೯ ||

ಮತ್ತ ತದ್ರೂಪ ಕಣ್ಣಿಗೆ ಕಂಡಿದ್ದಾಕ್ಷಣಕ
ಅಂತಾನ ಕೇಳವ್ವಾ ಕೆಡತಿ | ಮುಸಲ್ಮಾನಿ ಬಿಟ್ಟ ಬಿಡ ನಡತಿ
ಕೇಳಿ ಪತಿವ್ರತಾ ಕೊಟ್ಟಾಳ | ಪುತ್ತರಾ ಬಾಳೊದು ಯಾತಕ
ಏರು || ಅವಳ ಸಣ್ಣಕೂಸ ಅರಸ ಹಿಡಿದ ಖಾಸ
ನುಗಸ್ಯಾನ ಕರುಣಯಿಲ್ಲದೆ ಆ ಬೆಂಕಿಯವೊಳಗ
ಮತ್ತೊಂದ ಮಲಿಯ ಕೂಸಯಿತ್ತ ಆಕಿ ಬಗಲಾಗ
ಬೇಜರಬ ಮುಂದಕ ಹಸ್ತ ಚಾಚಿ ಅರಸ |
ಕೂಸಿನ ಕಸ್ತ ಒಗದಾನ ಬೆಂಕ್ಯಾಗ | ಇದು ಕಂಡ ತಾಯಿಗೆ ಬಂದಿತ್ತ ದುಃಖ || ೧೦ ||

ಇ|| ಬಂತ ಸಪ್ಪಳಾ ಹೀಂಗ ಅಂತ ಆ ವ್ಯಾಳೇಕ
ಆ ಬೆಂಕಿಯೊಳಗಿಂದ ಕಂದ | ನುಡದ ತಾಯಿಗೆ ಪಡಿ ಆನಂದಾ
ಚಿಂತಿ ಮಾಡಬ್ಯಾಡ ಪಡಿ ಸಂತೋಷ ನೀ ನನ್ನ ದುಸಕ
ಏರು || ಅರಸ ಬೆಂಕಿವೊಳಗ ನನಗ ಒಗದ ಕ್ಷಣಕ ಆಗೈತಿ ಸ್ವರಗ
ಏನು ಹೇಳಲಿ ಕುಂತೇನಿ ತೂಗುವ ಮಂಚದ ಮ್ಯಾಲೆ
ರಂಭೇರ ನಾಗಕನ್ಯೇರ ತೂಗುತಾರ ತಮ್ಮ ಹಸ್ತೀಲೆ
ಅಷ್ಟರೊಳಗೆ ಏಕಾಏಕಿ ಬೆಂಕಿ ಕೆಂಡ ಹಾರ‍್ಯಾವ ಮಿಕ್ಕಿ
ಸುಟ್ಟ ನಷ್ಟ ರಾಜ ಪ್ರಜಾ ಸತ್ತ ಹಕನಾಕ || ೧೧ ||

ಪ್ಯಾಟಿ ಪಟ್ಟಣಾ ಬಾಗಲಕೋಟಿ ಜಾಹೀರ ಮರ್ತೇಕ
ಮ್ಯಾಗಿನ ಓಣಿಗೆ ಹೊಸ ಪ್ಯಾಟಿ ಕೂಡಿ
ಸಾಲಿಗೆ ಸಾಲಾ ಹಚ್ಯಾರ ಅಂಗಡಿ
ಗಂಡಮೆಟ್ಟ ಅದು ಪುಂಡ ಇರುವುದು ಕೇಳರಿ ಜನಲೋಕ
ಏರು || ಸಿಕ್ಕಿ ಶಾಹೀರಾ ಬಂದ ಇಂದ ತೀರಿ ಹೋಗಲಿ ನಂದು ನಿಂದು
ಸಿಟ್ಟಿಗೆ ಬಂದರ ಕಸ್ತ ಕಳಿಸುವೆ ಮಾನ ನಾನಾ
ಮಡ್ಡಿ ಮ್ಯಾಲೆ ಇರತಾರ ಪೀರ ಮಲ್ಲೇಕಲ್ಲ ಹುಸೇನಾ
ಹುಸೇನ ಮಿಯಾನ ನುಡಿ ಕಟ ಬಂದಾ | ಕೇಳಿವೈರಿ ಆಗಿ ಸುಂದಾ
ಕುಂತಾನ ಕುಂತಲ್ಲೆ ಉಸರ ಹಾಕುತ್ತ ತಪ್ಪಿ ತನ್ನ ದಿಕ್ಕ || ೧೨ ||

* * *

. ನಮಾಜಿನ ಮಹತಿ ಹೇಳುವ ಪದಾ

ಚಿತ್ತಯಿಟ್ಟ ಕೇಳರಿ ದೈವಾ | ಮುಕ್ತಿ ಮಾರ್ಗದನುಭವಾ
ಭಕ್ತವಂತರಿಗೆ ದೇವಾ ಅನುಕೂಲಾ
ಏರು || ನಡೆದರ ಏಕನಿಷ್ಠಿ | ಇರುವುದು ಸಾಂಬನ ದೃಷ್ಟಿ
ಮರ್ತ್ಯದೊಳಗ ಹುಟ್ಟಿ | ಒಂದು ದಿನ ಸಾಯೂದು ಘಟ್ಟಿ
ಸಾಂಬಶಿವಾ ಸದ್ಗುರುವಿನ ಸಂಗತಿ | ಇಂದ ಮಾರಿ ತೋರಿಸೂವದೈತಿ
ಒಯ್ಯಬೇಕ ಕಟ್ಟಿಗೊಂಡ ಬುತ್ತಿ ಹಿಂಬಾಲಾ || ೧ ||

ಇ|| ತಿಳಿದಿಲ್ಲೋ ಸಾಂಬನ ಆಟ | ನಾನಾ ಪರಿ ತಂದ ಸಂಕಟಾ
ನೋಡುವನೋ ಮನುಷ್ಯಾರ ನಿಷ್ಠಾ ಹಗಲೆಲ್ಲಾ
ಏರು || ಎಷ್ಟು ಕಷ್ಟ ಬಂದರೂ ಸಹಿತಾ | ಕುಂದ್ರಬಾರದು ಸಾಂಬನ ಮರತಾ
ಇಡಬೇಕು ಏಕಚಿತ್ತಾ | ನಮಾಜು ಮಾಡಿ ಐದು ಹೊತ್ತಾ
ಭಕ್ತಿಗೆ ಮೆಚ್ಚಿ ಪೂರ್ಣಾ | ಮಾಡುವ ಅಂತಃ ಕರಣಾ
ಹೇಳುವೆ ಒಂದು ಉದಾಹರಣ ಇನ್ನು ಮ್ಯಾಲಾ || ೨ ||

ಇ|| ಒಂದು ಊರಾಗ ಸತಿಪತಿ ಇದ್ದರು || ಗಂಡನದು ಬೋಳ್ಯಾಸ್ಥಿತಿ ಇದ್ದಿತಲ್ಲಾ
ಏರು || ಬಡತನ ಮನಿಯಾಗ ಭಕ್ತಿಯಿಟ್ಟ ಸಾಂಬನ ಮ್ಯಾಗ
ಐದ ಹೊತ್ತ ತಪ್ಪದಾಂಗ ನಮಾಜ ಮಾಡಿ ನೆನಸುವ ಶಿವಗ
ಮನಿಯೊಳಗ ಇತ್ತು ಕಠಿಣಾ | ಮಕ್ಕಳು ಇದ್ದವು ಸಣ್ಣ ಸಣ್ಣಾ
ಸತಿಯಿದ್ದಾಳಾ ಬೆಂಕಿ ಹೆಣ್ಣಾ ಮಹಾಜಾಲಾ || ೩ ||

ತಿನ್ನುವಳು ಗಂಡನ ಜೀವಾ | ಇವಂಗಾರ ಬರವಲ್ದು ಸಾವಾ
ಬಡದೈತಿ ನಮಾಜಿನ ದೆವ್ವಾ ಫಲವಿಲ್ಲಾ
ಏರು || ಕೂಲಿಗೆ ಹೋಗವಲ್ಲಿ ನಮಾಜಂತು ಬಿಡವಲ್ಲಿ
ಮಸೂತಿ ಹಿಡಿದ ಹಗಲು ರಾತ್ರಿ ಶಿವನೆ ಶಿವನೆ ಅಂತಿದಿ ಖಾಲಿ
ನಿನಗಿಲ್ಲ ಸಂಸಾರ ಚಿಂತಿ ಬಡದೈತಿ ನಮಾಜ ಭ್ರಾಂತಿ
ಸಂಜೀಕ ಏನ ತಿಂತಿ ಅಟಗೋಲಾ || ೪ ||

ಇ|| ಮರುದಿನ ಹರಿಯಾಗ ಎದ್ದಾ | ನಮಾಜ ಮಾಡಿ ಸಾಂಬಗ ನೆನದಾ
ಕೂಲಿಯವರ ಸಂಗತಿಲೆ ನಡೆದ ಹಿಂಬಾಲಾ
ಏರು || ಹೀಂಗ ಇತ್ತು ಅಲ್ಲಿಯ ನಿಯಾಮಾ | ಕೂಲಿಯವರು ಆದಿಂದ ಜಮಾ
ಮನಸಿಗೆ ಬಂದದ್ದು ಇಸಮಾ | ಕರಕೊಂಡು ಹೋಗುವರು ಸುಮ್ಮಾ
ಬಂದಾರ ಊರ ಕಮತರು | ಆರಿಸಿಕೊಂಡು ನಡೆದಾರು
ಬಡ ಪ್ರಾಣಿಗೆ ಬಡವಗ ಯಾರು ಕೇಳಲಿಲ್ಲ || ೫ ||

ಇ|| ಕುಂತಾನ ಉದಾಸವಾಗಿ ಹ್ಯಾಂಗ ಹೋಗಲಿ ಮನೆಗೆ
ಏನು ಹೇಳಲಿ ಹೆಣತಿಗೆ ಕಾಡುಕಾಲಾ
ಏರು || ಮನಸಿಗೆ ಅನಿಸಿತೋ ಕೆಟ್ಟಾ | ನೀರಾಗಿ ಅಲ್ಲಿಂದಾ ಹೊಂಟಾ
ಸಾಂಬಗ ಮ್ಯಾಲೆ ಭರವಸೆ ಇಟ್ಟಾ | ಊರ ಹೊರಗ ಹೋದಾನು ನೀಟಾ
ಕುಂತಾನು ಹೋಗಿ ಅಡಿವ್ಯಾಗ | ಸಂಜೀತನ ಶಿವನ ಸರಣ್ಯಾಗ
ಇಷ್ಟ ಆದ್ರು ನಮಾಜಿನ ಗುಂಗು ಬಿಡವಲ್ಲಾ || ೬ ||

ಇ|| ಸಂಜೀಕ ಬಂದಾ ಮನಿಗೆ | ಅಂಜೂತ ತನ್ನ ಹೆಣತಿಗೆ
ಸತಿ ಎಂದಳು ಎಲ್ಲಿ ಐತಿ ನಿನ್ನ ಕೂಲಿ ಮೊದಲಾ
ಏರು || ಅಂತಾನ ಹಿಡಿದೀನ ಕೆಲಸ | ಎಂಟ ದಿನ ಕರಾರಾ
ಮಾಡ್ಯಾರ ಸಾವಕಾರ | ತೆರಿತು ನಮ್ಮ ಹಣೆಬಾರಾ
ಇನ್ನೆಲ್ಲಿ ದುಡಕಿ ಚಿಂತಿ | ಹ್ವಾರೆ ಬಹಳ ಐತಿ
ಹತ್ತುವದು ವರುಷಾನ ಗತಿ ಬ್ಯಾರಿ ಕಾಲಾ || ೭ ||

ಇ|| ಕಿರಿ ಕಿರಿ ತಾಳಲಾರದಕ ಮಾಡಿ ಹೇಳ್ಯಾನ ಹಿಂತಾ ಮಲಕ
ಸತಿ ವಟಗುಡಲಾಕ ಹತ್ಯಾಳಲ್ಲಾ ||
ಏರು || ಜರಾ ನಿಮಗಿಲ್ಲರಿ ಬುದ್ದಿ | ಮರತ ಕುಂತಿ ಮನಿಯಾನ ಸುದ್ದಿ
ನಿನ್ನೆಯಿಂದ ಉಪವಾಸ ಬಿದ್ದಿ | ಕೂಲಿ ಮಾಡೂದು ಬಿಟ್ಟು ಬಂದಿ
ಅಂತಾನ ಕೇಳ ಸುಂದರಾ | ಜುಲಿಮಿಲಿಂದ ಕೂಲಿ ಕೇಳಿದರ
ನಾಳಿಗೆ ಬ್ಯಾಡಗೀಡ ಅಂದಾರು ಭಾರಿ ಅಮಲಾ || ೮ ||

ಕಡಾಕಟ್ಟಿ ಮಾಡಿ ಏನರಾ | ನಡಸಬೇಕು ಇದು ಒಂದು ವಾರ
ತಂದ ಕೊಡತೇನಿ ಪಗಾರ ಸುಳ್ಳಲ್ಲಾ ||
ಏರು || ದಿನಂಪ್ರತಿ ಹೋಗಿ ಅಡಿವ್ಯಾಗ | ಕುಂತ ಶಿವನ ಸ್ಮರಣಿಯೊಳಗ
ಎಂಟು ದಿನ ಹೋದಾವು ಹೀಂಗ ನಿಂದರಕೀಲೆ ನೀರ ಕುಡದಾಂಗ
ಮುದ್ದತ್ತುಯಿಟ್ಟ ದಿನದ್ದು | ಹೇಳಿದ್ದು ಹೆಣತಿಮುಂದಾ
ಬರಿಕೈಲೆ ಬಂದಾ ಮನಿಗೆ ನಿರವಾಯಿಲ್ಲಾ || ೯ ||

ಇ|| ಬರಿಕೈಲಿ ಬಂದದ್ದು ನೋಡಿ ಸತಿ ಆದಾಳೋ ಬೆಂಕಿ ಕಿಡಿ
ತಗದಾನ ಮತ್ತ ಹುಡಿಕ್ಯಾಡಿ ಒಂದ ಅಕಲಾ
ಏರು || ಸಾವಕಾರ ಊರಾಗ ಇಲ್ಲಾ | ನಾಳಿಗೆ ಬರತಾನಲ್ಲಾ
ಹೊಲದ ಸಣ್ಣ ಸಣ್ಣ ಚೀಲಾ | ತರತೇನಿ ಸಾಮಾನ ಎಲ್ಲಾ ||
ಮರುದಿನ ಬೆಳಗಾದಿಂದ ಚೀಲಾ ಕೊಟ್ಟಳೊ ಹೊಲದ
ತಗೊಂಡ ಸಾಂಬಗ ನೆನದಾ ಹೈ ಅಲ್ಲಾ || ೧೦ ||

ಕುಂತಾನ ಹೋಗಿ ಅಡಿವ್ಯಾಗ | ಕಳಕಳಿ ಹುಟ್ಟಿತೋ ಶಿವಗ
ಕಳಿಸಿದಾ ಜಿಬರಾಯಿಲಗ ತತ್ಕಾಲಾ
ಏರು || ಜಿಬರಾಯಿಲಗ ಆದೀತೋ ಹುಕುಮಾ | ಸಂಗತೀಲೆ ಒಯ್ಯಬೇಕ ರಕಮಾ
ಸವಿಯದಾಂಗ ಏಳೇಳು ಜಲ್ಮಾ | ನನ್ನ ಭಕ್ತ ಬಿಡತಾನಶ್ರಮಾ
ಜಿಬರಾಯಿಲ ಆದ ತಯಾರಾ | ಮುದುಕನ ರೂಪಾ ತೊಟ್ಟು
ಬಡವನ ಮನಿಗೆ ಹೊಂಟಾ ತಡಾಯಿಲ್ಲಾ || ೧೧ ||

ಮನಿಯೊಳಗ ಇದ್ದಾಳೋ ಬಾಲಿ | ಮುಂದ ಇಟ್ಟ ರೋಖಡಿ ಥೈಲಿ |
ತಗೋ ನಿನ್ನ ಗಂಡನ ಕೂಲಿ ಕಳಿಸ್ಯಾನಲ್ಲಾ
ಏರು || ಕೊಟ್ಟ ರಖಮಾ ಜಿಬರೀಲ ಹೋದಾ | ಮನಶಾಂತಿ ಆದೀತು ಹೆಣತೀದಾ
ಗೊತ್ತಿಲ್ಲ ಗಂಡಗ ಈ ಬೇಧ | ಚಿಂತ್ಯಾಗ ಅಡಿವ್ಯಾಗ ಕುಳತಿದ್ದಾ
ಈಗ ನನಗ ಬಂದೈತಿ ಬಿರಿ | ಹೆಣತಿಗೆ ಹ್ಯಾಂಗ ತೋರಸಲಿ ಮಾರಿ
ಇಂದ ನನಗ ಹರುತಾಳ ಕೋರಿ ಬಿಡೂದಿಲ್ಲ || ೧೨ ||

ಇ|| ಮತ್ತೊಂದು ಮಸಲತ್ತು ಹುಡುಕಿ | ತಗದಾನೋ ಹಾಕಿ ಹಂಚಿಕಿ
ಸುಳ್ಳಹೇಳಿ ಬಂತೋ ಬೇಸರಕಿ ಕಡೇ ಮಜಲಾ
ಏರು || ಅಂತಾನ ತೂ ಹೈ ಅಲ್ಲಾ | ತುಂಬಿದಾನಾ ಖಾಲಿ ಚೀಲಾ
ಕಲ್ಲುಮಣ್ಣು ಉಸುಕೀನ ಮಳಲಾ | ಹೊತಗೊಂಡು ಬಂದಾ ಮನಿಗೆ
ಸತಿಯಳು ನಿಂತಿದ್ಲೊ ಬಾಗಿಲಿಗೆ | ಎದಿವೊಡಿತೋ ನೋಡಾಣ ಆಕಿಗೆ
ಗಂಡಗ ಮನದಾಗ ಬಿತ್ತೋ ಭುಗಿಲಾ || ೧೩ ||

ಕಂಡ ಗಂಡಗ ಅಂದ್ಲೊ ಸುಂದರಾ | ಜಳಕಕ್ಕ ಇಟ್ಟೀನಿ ನೀರಾ
ಅಡಿಗಿ ಮಾಡೇನಿ ತಯಾರಾ ನಡಿಯಿರಿ ಮೊದಲಾ |
ಏರು | ಗಂಡಗ ಬಿದ್ದೀತೋ ಗುಮ್ಮಾ | ಚಮತ್ಕಾರ ತಿಳಿವಲ್ಲದಂದಾ
ಇಷ್ಟೆಯೆಲ್ಲಾ ಬಂತೋ ಎಲ್ಲಿಂದಾ | ಸತಿ ಅಂದ್ಲೊ ಕೂಲಿ ನಿಮ್ಮದಾ
ಕೊಟ್ಟ ಹೋದ ಒಬ್ಬ ಮುದುಕಾ | ಲೆಕ್ಕಯಿಲ್ಲದ ರೂಪಾಯಿ ರೊಕ್ಕಾ
ಗಂಡ ತಿಳಿದ ಶಿವನ ಕೌತುಕಯಿದು ಎಲ್ಲಾ || ೧೪ ||

ಖೊಟ್ಟಿ ಜಾತಿ ಕೆಟ್ಟ ಹೆಂಗಸು | ತಂದ ಹಾಕಿದರ ಗಂಡ ಅನ್ನುವರು
ಇಲ್ಲಂದರ ಕಳಿತಾರ ಅಬರು ಬಿಡೂದಿಲ್ಲಾ |
ಏರು || ಗಂಡಗ ಅಂತಾಳೊ ಕುಂತಾ | ಇದು ಏನು ತಂದೀರಿ ಮತ್ತಾ
ಗಂಡ ಅಂತಾನ ಧೋಡಾ ಬಹುತಾ | ಉಳಿದಿದ್ದು ತಂದೇನಿ ಹೊತ್ತಾ
ಸುರಿವ್ಯಾನ ಅಂದ ಬಿಸಮಿಲ್ಲಾ | ಉಸಗ ಹೋಗಿ ರತ್ನದ ಹರಳಾ
ಮುತ್ತು ಮಾಣಿಕ ಮನಿ ತುಂಬಯೆಲ್ಲಾ || ೧೫ ||

ಇ|| ಗಂಡಗ ಅಂತಾಳೋ ನಾರಿ | ಅದಾಯೆಂತಾ ಸಾಹುಕಾರ ಭಾರಿ
ನನಗ ಜರಾ ತೋರಸರಿ ಮಾರಿ ನೋಡಿಲ್ಲಾ |
ಏರು || ಗಂಡ ಅಂದಾ ಕೇಳ ಕಮಲಾ | ಅಂವಾ ಹೀಂಗ ಕಾಣೂದಿಲ್ಲಾ
ಒಡದ ಹೇಳ್ಯಾನ ಎಲ್ಲಾ | ಹೀಂಗೈತಿ ನಮಾಜಿನ ಫಲಾ
ಸತಿಯಳು ಅಲ್ಲಿಂದಾ ಹಿಡಿದಾಳ ಗಂಡನ ಪಾದಕ ಬಿದ್ದಾ
ಇಟ್ಟಾಳೋ ನಮಾಜಿನ ಬಿರದಾ ಬಿಟ್ಟ ಕಬೂಲಾ || ೧೬ ||

ಇ|| ಕಷ್ಟ ಬಿಟ್ಟು ನಿಷ್ಠಾ ಹಿಡಿ | ಭಕ್ತಿ ಮಾಡಿ ಮುಕ್ತಿ ಪಡಿ
ಸತ್ತಿಂದ ಸಿಗೂದಿಲ್ಲಾ ಹಿಂದಾಗಡಿ
ಏರು || ಬಾಗಲಕೋಟಿ ಜಾಗ | ಇರುವುದು ದಕ್ಷಿಣ ಭಾಗ
ಪೀರ ದಸ್ತಗೀರನ ದರಗಾ | ಜಾಗಾ ನೋಡಿ ಹೂಡಿದಾರೋ ಪಾಗಾ
ಕೇಸು ಪೀರ ಮತಿ ಕೊಟ್ಟ ಕರದಾ
ನಾಗೂ-ಗೌಸೂನ ಕವಿಗಳ ಹಿರದಾ || ೧೭ ||

* * *

ಹಜ್ ಯಾತ್ರೆಯ ಪದಾ

ಬಯ್ಯಾನ ಕೇಳರಿ ಇಟ್ಟಧ್ಯಾನಾ | ಅರಸ ಅಬ್ರಾಹಮ್ದು ವರುಣಾ
ಏರು | ಹ್ಯಾಂವ ಮಾಡಿ ಸುಳ್ಳ ಸಾವಿಗೆ ಗುರಿಯಾದ | ಭವಿ ಮನಸ್ಯಾನ ಕವಿ
ನಡುದಿಲ್ಲಾ ಖಾಲಿ ಕಲ್ಪನಾ | ಹಜ್ ಮಾಡೂದಕ | ನಮಸಿ ಮಕ್ಕೇಕ
ಅಲ್ಲಿ ಹೋಗುದ್ಯಾಕ | ನನ್ನ ದೇಶದಾಗ ಇನ್ನೊಂದ ಕಟ್ಟಿಸಿ ಹಜ್ಜ ಮಾಡಿಸಬೇಕ ಮಕ್ಕೇಕ
ಮರಸಿ ಅಂತ ಪಂಥ ಹಾಕಿ | ಸ್ವಂತ ಕಟ್ಟಿಸಿದಾನ ಪಾಯಾ ಪ್ರಮಾಣಾ || ೧ ||

ಇ|| ಮಕ್ಕೇದ ತೋಡಿ | ತಯಾರ ಮಾಡಿ ಅಂತಾನ ಸರೂಜನಾ
ಏರು || ಹುಕುಮದಾರ ಹೀಂಗ ಹುಕುಂ ಮಾಡಿದಾನ | ಬರ್ರೀ ಹಜ್ಜ ಇಲ್ಲಿ ಮಾಡ್ರಿ
ಮಕ್ಕೇದು ಬಿಡ್ರಿ ಪಯಣಾ | ಅಂವಾಯೆಷ್ಟು ಹೇಳಿದರು | ಕೇಳವಲ್ಲರು ಯಾರು
ಮಕ್ಕೇಕ ನಡೆವರು | ಸಿಟ್ಟೀಲೆ ಕರಕರ ತಿಂತಾನ ಹಲ್ಲಾ | ಕೆಡವಿ ಬಿಡಬೇಕ ಮಕ್ಕೇದ ಇಮಲಾ
ಖೊಟ್ಟಿ ಅಬ್ರಾಹಮ್‌ನ ಹೊಟ್ಟಿವೊಳಗ ಹುಟ್ಟೀತ ದುರ್ಗುಣಾ || ೨ ||

ಮನಗಂಡ ದಂಡ ಕರಕೊಂಡ ನಡದಾನ ಪುಂಡ ಪೈಲ್ವಾನ
ಏರು || ಆನಿವಂಟಿ ಸವಾರಿ ಕುದುರಿ ಮ್ಯಾಗ ಬಂದಾರ | ಮಕ್ಕೇದ ಮಂದಿ ಅಂಜಿ |
ಊರ ಬಿಟ್ಟಾರ ಆಕ್ಷಣಾ | ಗುಡದಾಗ ಹೋಗಿ ಕುಂತಾರ ಅಡಗಿ ನೆನಸುತ್ತ ಶಿವನಿಗೆ
ಅಬ್ರಾಹಮ್ ಅರಸ ಅಂದಾ ಅನುಮಾನಯಾಕ | ಕೆಡುವರಿ ಈ ಮಕ್ಕೇದ ಕಾಬೇಕ
ಆನಿಗೆ ಹಚ್ಚಿ ತಮಾಮ | ಕೆಡವಬೇಕೆಂದ ಬೇಮಾನಾ || ೩ ||

ಸಜ್ಜಾದ ಆನಿ ಒಂದ ಹೆಜ್ಜಿ ಮುಂದ ಇಡವಲ್ದು ಆ ದಿನಾ
ಏರು || ಅರಸ ತರಿಸಿದ ಸ್ವತಹ ಕುಂಡರೂದು ಆನಿ ಇತ್ತ
ಮಹಾಮೂದಿ ಅನ್ನೂದು ಬಾರಿ ಸೈತಾನ | ಆ ಆನಿ ಆದಿನಾ | ಕೊಡವಲ್ದು ಬೆನ್ನಾ
ಬಹು ಮಾಡ್ಯಾರ ಯತನಾ | ಕುಂತಾನ ಮತ್ತೊಂದು ಆನಿಗೆ ತರಿಸಿ
ಅಂತಾನ ಕಾಬೇಕ ನಾ ಪುರಮಾಸಿ | ಕೆಡವಿಬಿಡತೇನಿ ನೆಲಸ ಸಮಾ ಹತ್ತದಾಂಗ ಖೂನಾ || ೪ ||

ಶಿವಸಾಂಬ ಮನಸಿಗೆ ತಂದಾ ಕಾಬಾ ಮಾಡೂದು ರಕ್ಷಣಾ
ಏರು || ಕಳಿವಿ ಕೊಟ್ಟ ಸಾವಿರಗಟ್ಟಿಲಿ ಮಿಗಿಲಾ
ಅಬಾಬಿಲ ಪಕ್ಷಿಗೆ ಹುಕುಮ ಕೊಟ್ಟ ಭಗವಾನಾ
ಒಂದೊಂದರ ಹತ್ತರ ಹಳ್ಳ ಇದ್ದವು ಮೂರ ಮೂರಾ |
ಚನ್ನಂಗಿ ಪ್ರಕಾರ ಒಂದ ಬಾಯಾಗ ಎರಡುಕಾಲಾಗ |
ಎರಡಾ ಒಗುತ್ತಿದು ಒಗದಾಂಗ ಒಂದೂಕ ಗುಂಡಾ
ನೆತ್ತಿಗೆ ಒಡದು ಬೆನ್ನಲ್ಲೇ ಪಾರಾಗಿ ಹೋಗುವ ಪ್ರಾಣಾ || ೫ ||

ಇದರಂತೆ ಅಬ್ರಾಹಮ್ನ ದಂಡ ಸತ್ತಿತ ಹತ್ತಲಿಲ್ಲ ಒಂದಕ್ಷಣಾ
ಏರು || ನೋಡಿ ಅರಸಾ ಓಡಿ ಹ್ವಾದಾ ಕಾಬಾ ಬಿಟ್ಟ
ಹೋಗಿ ಮನಿಮಂದಿಗೆ ಹೇಳತಾನ ಆದ ಲಕ್ಷಣಾ
ಇನ್ನೇನ ಹೇಳಲಿ ಆದೀತ ಮಹಾಕೋದಂಡಾತ ನಿಕಾಲಿ
ಜೀವಾನಂದು ಉಳಿದಿದ್ದು ಹೆಚ್ಚಿಂದಾ | ಮಾರಿ ನೋಡತಿದ್ದಿಲ್ಲ ನೀವು ನಂದಾ
ಅಷ್ಟರಲ್ಲಿ ಒಂದ ಬಂತ ಅಬಾಬಿಲ್ಲ ಅವನ ಮನಿತನಾ || ೬ ||

ಗಾಬಾಗಿ ಅರಸ ಮಂದಿಗೆ ಅಂದಾ ಇದರಂತೆ ವರಣಾ
ಏರು || ಹಳ್ಳ ಒಗೀತ ಅರಸಗ ಅಬಾಬಿಲ್ಲ
ನೆತ್ತಿಗೆ ಬಡದು ಸತ್ತಾನ | ಅಬ್ರಾಹಮ್ ಮಾಡಿ ದುರ್ಗುಣಾ
ಬಾಗಲಕೋಟಿ ನಾಕು ಬಾಜಾರ ಪ್ಯಾಟಿ | ನಡು ಊರಾಗ ಪೀರನ ಕಟ್ಟಿ
ದಸ್ತಗೀರ ಹಸ್ತ ಇಟ್ಟ ನಮ್ಮ ತೆಲಿಮ್ಯಾಗ | ಕೇಸುಪೀರ ಮತಿ ಕೊಟ್ಟಾರು ನಮಗ
ನಾಗೂ – ಗೌಸು ವೈರಿ ಮುಕಳಾಗ ಬಡದಾರ ಕೆಬ್ಬಣಾ || ೭ ||

* * *

. ಕುರಾನದ ಮಹತಿ ಹೇಳುವ ಪದಾ

ಜಗಭರಿತ ಸೃಷ್ಟಿಕರತಾ ತಾನೇ ಭಗವಂತಾ
ಸರೂ ಜೀಂವಾ ಸಲುವಾಂವಾ ಸಂಬಾ ಕೈಲಾಸನಾಥ | ತಿಳಿದಿಲ್ಲ ಅಂತಾ
ಶಾಸ್ತರದ ಸರಿಯಾಗಿ ನಡಿಬೇಕ ಶಿರಬಾಗಿ | ಹಮ್ಮ ಮಾಡದೆ ಸುಮ್ಮನಿರಬೇಕ
ಬ್ರಹ್ಮ ಬರದ ಬರಿಗಿ | ಸೃಷ್ಟಿನೇಮ ಅದರುಷ್ಟ ಬರದದ್ದು ಕಷ್ಟ ತಪ್ಪದು ಯಾರಿಗಿ
ಚ್ಯಾಲ | ನಯಿ ಬಯ್ಯಾನ ಕೇಳರಿ ಧ್ಯಾನಿತ್ತ ಇಟ್ಟ ಸರೂಜನರಾ
ತಪ್ಪ ಆದರ ಮಾಫ ಮಾಡರಿ ಕೋಪಿಸದೆ ಬಲ್ಲವರಾ
ನೆನಪ ಮುತ್ತ ಪೋಣಿಸಿದಂತೆ ಎಣಿಸಬೇಕ ಅಕ್ಷರಾ
ತರಕ ಇಟ್ಟಾ ಶಾಯೀರಾ ಕವಿ ಮಾಡ ಹಿಂತಾ || ೧ ||

ಇ|| ಮೌಲಾನಾರುಮ ಅನ್ನಾವರು ಇದ್ದಾರಾ ಪ್ರಖ್ಯಾತಾ
ತಪ್ಪದೆ ಐದುಹೊತ್ತು ನಮಾಜ ಮಾಡುರ ಮತ್ತಾ | ವಿದೈವಂತಾ
ಏರು || ಪರಮಾತ್ಮ ಅವರಿಗೆ ಬಂದಂತೆ ಮನಸಿಗೆ
ಮಸ್ತ ಧನ ದೌಲತ್ತ ಕೊಟ್ಟಿದ್ದಾ ಗೊತ್ತು ಇದು ಎಲ್ಲಾರಿಗೆ
ದಂಡ ತಂಡಿಗೆ ತಂಡ ಇಟ್ಟ ಮನಗಂಡ ಕಾಲಾಳ ಮಂದಿಗೆ
ಅರಸನ ಗತಿ ಸರಸ ಇದ್ರ ಸರಸ ಸದಾ ಸಂಪತ್ತಿಕ
ನಾಡಿನೊಳು ಈಡ ಇದ್ದಿಲ್ಲಾ ಮೂಡು ಮುಣುಗುತನಕ
ಎಷ್ಟೋ ಮಂದಿ ಪಂಡಿತರು ಇರತಿದ್ದರು ಖಿದಮತಕ
ಸುಳ್ಳ ಅಂದಿ ಖಾಯೀರ ಮಾತ ಸಿದ್ಧಾಂತಾ || ೨ ||

ಇ|| ಒಂದ ದಿನಾ ಕುರಾನ ಷರೀಪ ಓದತಿದ್ರೋ ಕುಂತಾ
ಬಂತ ಒಂದ ಹಿಂತಾ ಆಯತಾ ಬರೆದಿದ್ದ ಲಿಖಿತಾ | ಹಾಕಿ ಗಣತಾ
ಏರು || ಆಯತದ ಅರ್ಧಾ ಕೊಡತೇನಿ ಇಜ್ಜತಾ
ಮನಾ ಬಂದಾರ ಪುನಾ ಆತಗ ಗನಾ ಇಡತೇನಿ ಜಿಲ್ಲತ್ತಾ
ಈ ಮಾತ ಮೌಲಾನಾರುಮ ಇವರ ಮನಕ ಬೀಳಲಿಲ್ಲ ಪಸಂದಾ
ಮುಂದ ಕೇಳರಿ ಒಂದದಿನಾ ದಂಡ ತಗೊಂಡ ಸಂಗತೀಲೆ
ಬ್ಯಾಟಿ ಆಡುಕ ಹೊಂಟಿದಾರ ಕಟ್ಟಿ ನಡಾ ಅರತೀಲೆ
ಬೆದರಿ ಬಂದ ಚಿಗರಿ ಕುದುರಿ ಮುಂದ ಹಾವುತಲ್ಲೆ
ಕುಂತಿದಾರ ಕುದುರಿಮ್ಯಾಲೆ ಮೌಲಾನ ಸೈಂತಾ || ೩ ||

ರವುಸಿಲಿಂದ ಚಿಗರಿ ಹಿಂದ ಕುದುರಿ ಜಿಗಿಸುತಾ
ಹೆಚ್ಚಿದಾರ ಇಚ್ಛಾ ಆಗಿ ಮನದಾಗ ಪುರತಾ ಹಿಡಿಬೇಕಂತಾ
ಏರು || ಆ ಚಿಗರಿ ಚಾಲಾಕ ಜಿಗುತಿತ್ತ ಅಲಕ | ಮೂರ ಮಳದಾಗ ಫರಕ
ಆಗಿ ಹೊತ್ತ ಚೀನ ದೇಶಕ | ಗಪ್ಪ ಆದೀತ ಐಕ ಮೌಲಾನ ಹೈಪ ಆದಾರ ಮನಕ
ಕುದುರಿ ನಿಲ್ಲಿಸಿ ತಿರುಗಿ ನೋಡ್ಯಾರ ಒಬ್ಬರು ಇದ್ದಿಲ್ಲ ಕಾಲಾಳು
ಚಿಂತಿವೊಳಗ ಹೊತ್ತ ಮುಳುಗಿ ಕತ್ತಲಾಗಿ ಬಿತ್ತ ಕಾಳಾ
ಕುದುರಿ ಕಟ್ಟಿ ಮಲಗಿದಾರ ನಿದ್ದಿಯಲ್ಲಿಂದ ಬಂತ ಗೋಳಾ
ನೆಪ್ಪ ಆತ ಗಪ್ಪನೆ ಆಗ ಕುರಾನದಾನ ಮಾತಾ || ೪ ||

ಇ|| ಚೀನಾ ದೇಶದಾಗ ಗನಾ ತುಡುಗಾ ತಾ ಆಗಿದ್ದ ಶಮರಂತಾ
ತಿರಗತಿದ್ದಾ ಆ ಕುದುರಿ ಸವಾರಾ ಹಿಡಿಬೇಕಂತಾ ತುಡಗಗ ತುರತಾ
ಏರು || ಸವಾರಾ ಆದಿನಾ ತಿರುಗುತಾ ವನಾವನಾ | ನೆದರ ಹಚ್ಚಿದ ಕುದುರಿ ಕಟ್ಟಿ
ಬೆದರ ಮಲಗಿದ ಮೌಲಾನ | ಹಿಡದ ಮುಸುಕಿ ಬಿಗದ ವೈದಾನ ತುಡುಗ ತಿಳಿದ
ಬೇಮಾನಾ | ತಂದ ಅರಸನ ಮುಂದ ಅಂದಾ ಕೊಂದಾನಿಂವಾ ಬಹುಜನಕ
ಸಕ್ತ ಹುಕುಮ ಕೊಟ್ಟಾ ಅರಸ ಪಕ್ಕಾ ವಿಚಾರ ಮಾಡುದಕ
ಕಡಸಿ ಕೈಕಾಲ ಒಗಸಿದಾನ ಅಗಸಿ ಹೊರಗ ಮೈದಾನಕ
ಕೂಳ ನೀರ ಇಲ್ಲದೆ ತಾನೆ ಹೋಗಲಿ ಸತ್ತಾ || ೫ ||

ಮೌಲಾನಾರುಮ ಮನದಾಗ ಅಂದ್ರ ಖುದಾವಂದನಾ ಮಹಿಮಾ
ಅಗಾಧ ಇದು ನಿನ್ನ ಕುಜರತಾ ಹೌದ ಅನಂತಾ
ಏರು || ಮನಿವಾರು ಬಿಡಿಸಿ ದೌಲತ್ತಕ ಅಗಲಿಸಿ | ಫಂದ ಮಾಡಿ ಇಲ್ಲೇ ತಂದ
ನನಗ ಒಗದಿ ಕೈಕಾಲ ಕಡಿಸಿ | ದಾಹಾ ತಾಳದೆ ದೇಹಾ ನಿನ್ನ ಜೀಂವಾ ಆಗೂದು ಕಸಿವಿಸಿ
ಇಷ್ಟು ಕಷ್ಟ ಬಂದರೂ ತಾ | ನಿಷ್ಟೇವಂತ ಮವಲಾನು ಕೂಳು ನೀರಿನ ಧ್ಯಾನಾ
ಇಲ್ಲದ ಬಿದ್ದಲ್ಲೇ ಕುರಾನ ಒಂದೇ ಸವನೆ | ಸಾಂಬ ಶಿವನ ವಂದಿಸಿ ಮಾಡುರು ಪಠನಾ
ಅಲ್ಲಿ ಮಂದಿ ಕಂಡಿಲ್ಲ ಅಂತಾರ ಓದಾಂವ ಇವರಂತಾ || ೬ ||

ಹೀಂಗ ಪಂಡಿತಗ ಯಾಳೇ ಬರಬಾರದ ಹಿಂತಾ
ಉಣಿಸುದಕ ಅರಸನ ಹುಕುಮಾ ಇತ್ತರಿ ಸಕ್ತಾ ಕೊಡಬಾರದಂತಾ
ಏರು || ಆ ಚೀನ ಅರಸಗ ಮಗಳಿದ್ಲ ಮನ್ಯಾಗ ಲಗ್ನ ಇಲ್ಲದ ಸುದ್ದೇಳಿದ್ದಾಳ
ಮಗ್ನ ವಿದ್ಯೇದಾಗ | ಕುರಾನು ಕಲಿಸು ಉಮೇದ ಹುಟ್ಟಿ ಅರಸ ತನ್ನ ಮನದಾಗ
ಕಲಿಸೂಕ ಹುಡುಕಂತಾರ ಕುಶಲವಂತ ಉಸ್ತಾದಗ | ಯಾರು ಸಿಗಲಿಲ್ಲ ಊರ ಮಂದಿ
ಬಂದ  ಅಂತಾರ ಅರಸಗ | ಕಡಸಿ ಕೈಕಾಲ ಒಗಸಿದಂತಾ ಮನಶ್ಯಾ ಹುಶ್ಯಾರ ಇದರೊಳಗೆ
ಕರಸಿಕೊಂಡಾ ಪೌರುಷ ಕೇಳಿ ಅರಸ ಆಗಿ ಚಕಿತಾ || ೭ ||

ಇ|| ಅರಸನ ಮಗಳಿಗೆ ಮವಲಾನಾ ಮನಾ ಇಟ್ಟ ಶಾಂತಾ
ಕಲಿಸುವಾಗ ಕುರಾನೇ ಷರೀಪ ಬಂದೀತ ಮತ್ತಾ ಅದೇ ಆಯತಾ
ಏರು || ಆ ಲಿಖಿತ ಬರುಣಾ ನೋಡಿ ನಕ್ಕ ಮವಲಾನಾ |
ಸರಸ ಅರಸನ ಮಗಳು ಕೇಳತಾಳ ನಗುಹಂತಾ ಕಾರಣಾ
ಒಡದ ಹೇಳ್ಯಾರ ಮೊದಲಿನಿಂದ ಒದಗಿದಂತಾ ಪುರಾಣ
ಕೇಳಿ ತಂದಿಗೆ ತಿಳಿಸಿದಾಳ ಮನಸಿನ್ಯಾಂದ ಕುಷಿಲಿಂದಾ
ಇವರಕ್ಕಿಂತಾ ಹೆಚ್ಚಿನ ವರಾ ಸಿಗಲಾರದು ನನಗೆಂದಾ
ಇವರಗೂಡ ಮದುವಿ ನಂದಾ ಮಾಡರಿ ನಿಶ್ಚಿಂತಾ || ೮ ||

ತಂದಿಕೇಳಿ ಸಂಭ್ರಮ ಮದವಿ ಮಾಡ್ಯಾನ ನಕ್ಕೊಂತಾ
ಶಿವನ ಕೃಪಾದಿಂದ ಮೌಲಾನಾ ಆದ್ರ ಸಾಬಿತಾ ಕೈಕಾಲ ಚಿಗತಾ
ಶಿವನಾಟ ಶಿವನ ಹೊರ್ತ ಅನ್ಯರಿಗೆ ಇಲ್ಲ ಗೊತ್ತಾ
ಮುಂಚಿನಕಿನಾ ಹೆಚ್ಚು ಕಡಮಿ ಮಸ್ತ ಕೊಟ್ಟಾನ ದೌಲತ್ತಾ
ಸತಿ ಸಹಿತ ಬಂದ್ರ ಮೌಲಾನಾ | ತಮ್ಮ ದೇಶಕ ಪರತಾ
ಸುತ್ತ ನಾಡಿಗೆ ಗೊತ್ತ ಐತಿ ಶಿಸ್ತಾದ ಬಾಗಲಕೋಟಿ
ದಸ್ತಗೀರ ಕೇಸುಪೀರ ಗೌಸು-ನಾಗೂನ ಹೊಸದಾಟಿ
ಯಮಕ ಬಿಟ್ಟ ಸುಮಕ ಹಾಡ ಕೆಣಕದೆ ಸಿಗಸ್ಯಾನ ಪೀಟಿ
ಡಂಬಿ ತಗದ ಹ್ವಾದಗೀದಿ ಹಾಡಬೇಕ ನಿಂತಾ || ೯ ||

* * *