ಅಬುಶ್ಯಾಮಾನ ಪದಾ

ಕೇಳರಿ ದೈವಾ ಚಂದಾ ಧ್ಯಾನಕ ತಂದಾ
ಇಟ್ಟ ಕೇಳರಿ ಖ್ಯಾಲಾ ಮಾಡಬ್ಯಾಡರಿ ಗುಲ್ಲಾ ತಗದೇನಿ ಶಾಸ್ತ್ರಸಂದ
ಏರು || ಕರಕೊಂಡ ಉಮರ ಅಬುಶ್ಯಾಮಾಗ | ಸ್ಮರಣಿ ಮಾಡ್ಯಾರೋ ಆಗ
ಕಾಬೇದೊಳಗ ತಿರುಗಿ ಬರುವಾಗ | ದಾರಿವೊಳಗ ಇಬ್ಲೀಸ ಮಾಡಿಮೋಸ
ಅವರ ಮನಸ ಒಡಿಸ್ಯಾನ ಅಬುಶ್ಯಾಮಾಗ || ೧ ||

ಇಳು || ಬಾಯಿಲೆ ಹೀಂಗಂದಾ ಶರಣಾರಮುಂದಾ
ದಣಿವಿನ ಸಲುವಾಗಿ ಅಗಸುದ್ದೆ ತಂದೇನಿ ಈಗ | ಕೆರೆ ಅಂತ ತಿಳಿಲಿಲ್ಲ ಬೇಧಾ
ಏರು || ಕುಡದ ಅಬುಶ್ಯಾಮಾಗ ಆದೀತ ಅಮಲಾ
ಕರಕೊಂಡ ನಡದಾನ ತನ್ನ ಹಿಂಬಾಲಾ | ಹೆಣ್ಣು ಒಂದು ಅಸಲಾ
ಇತ್ತ ಭಿನ್ನ ಮೌಲಾ | ಆಕಿ ಸಂಗ ಮಾಡಿ ಹೀಂಗ ಬಾಳ ರಂಗ
ಹಾರಸ್ಯಾರ ಬಂದ ಒದಗೀತೋ ಕೆಡಗಾಲಾ || ೨ ||

ಇಳು || ಅಬುಶ್ಯಾಮಾ ಅಲ್ಲಿಂದ ಮನಿಗೆ ಬಂದಾ | ನಿಂತಿತ ಆಕೀಗೆ ಅಮಲಾ
ಒಂಬತ್ತು ತಿಂಗಳ ಮ್ಯಾಲಾ | ದಿನಾ ತುಂಬಿ ಹಡದಾಳ ಕಂದಾ
ಏರು || ಎತಗೊಂಡ ಕೂಸಿಗೆ ತನ್ನ ಬಗಲಾಗ
ಕುಶಿಲಿಂದ ಆಕಿ ಹೊಂಟಾಳೋ ಆಗ | ಇಬ್ಲೀಸ ಬ್ಯಾಗ
ಕರಕೊಂಡ ಸಂಗ | ತಂದಾನ ಬಂದಾನ ಅಂದಾನ
ಉಮ್ಮರ ಮೊಮ್ಮಗ ನಡಿರೆಂದಾ || ೩ ||

ಇಳು || ಬಿತ್ತ ಉಮರಗೆ ಅಗಾಧ ಪರಿಪರಿಲಿಂದ ಆದಂತಾ
ಮಜಕೂರ ತಿಳಿಸಿ ಹೇಳ್ಯಾನ ಪೂರಾ | ವಿಚಾರ ಮಾಡಿರೆಂದಾ
ಏರು || ಮಿತ್ರಮಂಡಳಿ ಕೂಡಿತ ಜನಾ | ಕರಸ್ಯಾರ ಉಮ್ಮರ ಅಬುಶ್ಯಾಮಾನ
ಕಟಗೀಲೆ ನಿನ್ನಾ | ನೂರ ಸರತೆಯಿನ್ನಾ | ಹೊಡಿಬೇಕ ಬೈಸಕಾರ
ಶಾಸ್ತ್ರಕ್ಕ ಹೊಡಿ ತಪ್ಪು ಆಗೈತಿ ನಂದಾ || ೪ ||

ಕಟಗೀಲೆ ಎಣಿಸಿ ಒಂದೊಂದು ಬೆನ್ನಮ್ಯಾಲೆ ಹೊಡದಾ
ತೊಂಬತ್ತ ಕಟಗಿನಾ | ಹೊಡದಾಗ ಸೀಳೀತೋ ಬೆನ್ನಾ |
ಪ್ರಾಣ ಹೋತೊ ಅಬುಶ್ಯಾಮಾಂದಾ
ಏರು || ಮುಸಲ್ಮಾನಿ ಧರ್ಮಾ ಬಿಟ್ಟು ಅಬುಶ್ಯಾಮಾ ಮಾಡಿದ ಕರ್ಮಾ
ಸುಡತಾನ ಬ್ರಹ್ಮಾ ಇದರಾಂಗ ತಮ್ಮಾ | ಹಿಡುತಾನ ಹೊಡುತಾನ
ಸುಡತಾನ ಬೆಂಕ್ಯಾಗ | ಸುಳ್ಳಲ್ಲೋ ಶಾಸ್ತ್ರದ ಬೇಧಾ || ೫ ||

ಹತ್ತಕಟಗಿ ಉಳಿದಿದ್ದವು ಮುಂದಾ | ಗೋರಿಮ್ಯಾಲೆ ಹೊಡದಾ
ಗರುವು ಎಂಬುದು ಬಿಟ್ಟಾ | ಹಿಡಿಯಿರಿ ಮಾರ್ಗ ನೀಟಾ
ಹುಕುಮ ಹೀಂಗ ಐತಿ ಸಾಂಬಂದಾ
ಏರು || ಶ್ರೇಷ್ಟ ಬಾಗಲಕೋಟಿ ಶ್ಯಾರಾ | ಹಳೇ ಪ್ಯಾಟಿವೊಳಗ
ಅದಾನೊ ಕೇಸು ಪೀರಾ | ದಯಾಯಿಟ್ಟ ಪೂರಾ ಅವನ ಆಧಾರಾ
ಪ್ರಾಸ ಅಡಿ ಹೀಂಗ | ನೋಡಿ ಹುಡಿಕ್ಯಾಡಿ | ತರಬೇಕ ನಾಗು-ಗೌಸುನ ಮುಂದಾ || ೬ ||

* * *

. ಗರ್ವ ಮರೆದು ನರಕದ ಸ್ವಾದೀನವಾದ ಶಬ್ದಾದ ಅರಸನ ಪದಾ

ಶ್ರೀ ಸುಂದ್ರ ಸಭಾ ದೇವಿಂದ್ರ | ಸೂರ್ಯ ಚಂದ್ರನ ಸರಿಯೇಕಂದ್ರ
ಏನ ಬಂದ ಕೂಡಿರಿ ಅತಿ ಪ್ರೀತಿಯಿಂದ ಸರೂ ಸಂಪೂರ್ಣಾಗಿ ||
ಶಬ್ದಾದ ಹುಟ್ಟಿದ ಜಲ್ಮಾ | ಇದು ಒಂದು ತಿಳಿಸುವೆ ಕಲ್ಮಾ
ಕೇಳರಿ ಇಟ್ಟ ಖ್ಯಾಲಾ | ಕುಂತವರು ಬುದ್ಧಿವಂತರು
ಕೇಳಿ ಹೌದ ಅನಬೇಕ ಶಾಸ್ತರ | ಓದ ಬರಿ ಬಲ್ಲವರು
ಬರುತಿತ್ತ ಹಡಗೊಂದು | ತೇಲಿ ನೀರಿನ ಮ್ಯಾಲೆ | ಏನ ಹೇಳಲಿ ಸಮುದ್ರದಲ್ಲಿ
ಒಡದ ಹಡಗ ಏಕಾಯೇಕಿ ಸಿಡದ ಹಲಗಿ ಮ್ಯಾಲೆ
ಕುಂತಾಳ ಒಬ್ಬ ಹೆಣ್ಣ ಬಾಲಿ
ಉಳದ ಜನಾ ಒಡದ ಹಡಗ | ಬಿದ್ದು ಸತ್ತಾರ ಮುಳುಗಿ || ೧ ||

ಆ ಹಲಗಿ ನೀರಿನ ಮ್ಯಾಲೆ ತೇಲಿ | ಹೋಗು ವ್ಯಾಳೇಕ ಆ ಕ್ಷಣದಲ್ಲಿ
ಕರುಣೀಶ್ವರನ ಕರುಣದಿಂದ ಹೆಣ್ಣ ಬಾಲಿ | ಹಡದಾಳ ಚನ್ನಾಗಿ
ಏರು || ಕಮಲ ಪುತ್ರ ಹುಟ್ಟಿತೋ ಅಂದ | ನೇತ್ರ ಆತನ ಸುದ್ದ
ಆ ಕೂಸು ಅದೆ ಶಬ್ದಾದ | ಜನಾ ಕೇಳರಿ | ಮಿತಿಮೀರಿ
ಕುಂತೀರಿ ಚೌಕಾಸಿ ಮನಕ ಮಾಡಿ ತಿಳದ ನೋಡರಿ
ಶಿವನ ಅಪ್ಪಣಿ ಇಜರಾಯಿಲಗ ಆತ ಹೀಂಗ
ತಡಮಾಡದೆ ಹೋಗಿ ಈ ಕ್ಷಣಕ | ತೇಲಿ ಹೋಗುವ ಹಲಗಿಮ್ಯಾಲೆ
ಹಡದ ಹೆಣ್ಣ ಬಾಲಿಯ ಜಲ್ಮಾ | ನೀ ತಗಿಯಬೇಕ
ತಡಮಾಡದೆ ತಗದಾರ ಜಲ್ಮಾ | ಮರಮರಗಿ  || ೨ ||

ಕೂಸ ಆಡತಿತ್ತ ಕೈ ಚೆಲ್ಲಿ | ಆ ದಿವಸ ಸಮುದ್ರದಲ್ಲಿ
ನೀರಿನ ಮ್ಯಾಲೆ ಹಲಗಿ | ಹೋಗತಿತ್ತ ಹೀಂಗ ತೇಲಿ | ಸಾಂಬನ ಕರುಣಾಗಿ
ಏರು || ಕಂಡ ಆಗ ಸರೂ ಆಗಿ ದಂಗ | ಹಿಡದಾರ ಆಗಿಂದ ಆಗ
ಕೂಸಿನ ಎತ್ತಿ ಬಗಲಾಗ | ಒಳೇ ಪ್ರೀತೀಲೆ |
ಹಲಗಿಯ ಮ್ಯಾಲೆ ಮರಣ ಹೊಂದ್ಯಾಳ ಹಡದ ತಾಯಿ
ಅಂತ ತಮ್ಮ ಹಸ್ತೀಲೆ ತಗದ ಹೆಣಾ | ಅಲ್ಲೇ ಮಾಡಿ ಮಣ್ಣಾ
ಕರುಣದಿಂದ ಓದ್ಯಾರ ತರುಣ ಬಾಲಕರಾ
ತಮ್ಮ ಪೈಕಿ ಒಬ್ಬ ಶ್ರೀಮಂತ | ಇದ್ದಂತಾ ಮಿತ್ರಗ ಕೊಟ್ಟಾರ ಆ ಕಂದನಾ
ಕಂಡ ಕೂಸೀನಾ ಅಪ್ಪಿಕೊಂಡಾನ ಹರುಷಾಗಿ || ೩ ||

ಇ|| ಏನ ಕೂಡಿಸಿ ಕೊಟ್ಟಾ ಭಗವಾನಾ | ನನ್ನ ಹೊಟ್ಟೀಲೆ ಇದ್ದಿಲ್ಲಾ ಸಂತಾನಾ
ಅಂತ ಪ್ರೀತಿಲಿಂದ ಕೂಸಿಗೆ ನೋಡುವಾ | ಜ್ವಾಪಾನ ತನ್ನ ಮನದಲ್ಲಿ ಹಿಗ್ಗಿ ||
ಏರು || ವಯಾ ವರ್ಷ ಏಳೆಂಟ | ಇದ್ದಾಗ ಚಲ್ಲಾಟ
ತಮ್ಮ ಗೆಳೆಯರೊಳಗೆ ಶ್ರೇಷ್ಟ | ಆಗಿ ಅವನು | ಆ ಹುಡುಗನು
ಕೂಡಿ ಹುಡುಗರ ಸಂಗಡ ಹರುಷಾಗಿ ಆಡುತ್ತಿದ್ದನು
ಅಷ್ಟರೊಳಗ ದಂಡ ಅರಸಂದು ಬಂತ ಅಲ್ಲೆ
ಕಂಡ ಹುಡುಗರು ಓಡಿ ಹೋಗ್ಯಾರಲ್ಲಾ | ದಿಟ್ಟ ಮಹಾದೊರಿಷ್ಟ
ದಿಬ್ಬಯೇರಿ | ನೋಡುತ್ತ | ಕುಂತ ನಿಂತಾನಲ್ಲಾ
ದಂಡ ಮನಗಂಡ ಮುಂದ ಹೋಗೂದು ಸಾಗಿ || ೪ ||

ಆಮಂದಿ ಪೈಕಿ ಒಬ್ಬಾವಗ | ಸಣ್ಣ ಚೀಲದೊರಿತ ದಾರ‍್ಯಾಗ
ಕಣ್ಣಿಗೆ ಹಚ್ಚುದು ಸುರಮಾ ಇತ್ತ ಅದರೊಳಗ ನೋಡ್ಯಾನ ತಿರಮುರಗಿ
ಏರು || ಹಿಂದ ಉಳದ ಮಂದಿಗೆ ಎಲ್ಲಾ | ಹಿಡದ ಕೈಯಾಗ ಚೀಲಾ
ತೋರಿಸಿ ತಿಳಿಸ್ಯಾನ ಖುಲ್ಲಾ | ಈ ಕ್ಷಣದಲ್ಲಿ | ದಾರಿಯಲ್ಲಿ
ಸಿಕ್ಕಷ್ಟಿರುವುದು ಸುರಮಾ | ಕಣ್ಣಿಗೆ ಹಚ್ಚಿ ನೋಡರಿ ಪ್ರೀತೀಲೆ
ಅಂಜಿ ಜೀವಕ ಮಂದಿ ಅಂತಾರ ಅವನಿಗೆ
ನಂಬಬಾರದು ಈ ಸಿಕ್ಕೀದ ಬದಕ | ಒಳಿತಲ್ಲಾ ಮೊದಲಿಗೆ
ನಮ್ಮ ಕಣ್ಣಿಗೆ ಹಚ್ಚುದು ಯಾರಿಗಾದರ ಹಚ್ಚಿ ನೋಡಬೇಕ
ಹೀಂಗ ಅಂತ ಕಲ್ಪನಾ ತಗದಾರ ತಲಿದೂಗಿ || ೫ ||

ಇನ್ನ ಯಾರಿಗೆ ಹಚ್ಚಬೇಕಂತ ನೋಡ್ಯಾರ ಸುತ್ತಮುತ್ತ ನಿಂತ
ಒಬ್ಬ ಹುಡುಗ ದಿಬ್ಬದ ಮ್ಯಾಲೆ | ನಿಂತಿದಾ ಒಳೆ ಕುಣಕೊಂತಾ
ಕಂಡ ಕರದಾರ ಕೂಗಿ
ಏರು || ಥೈ ಥೈ ಕುಣಕೊಂತಾ ಬಂದ ನಿಂತಾ
ಅವರಂತೀಲೆ ಸೊಂತಾ | ಭೆಟ್ಯಾಗಿ ಕೇಳ್ಯಾನ ನಗುತಾ
ತುರ್ತ ಹೇಳರಿ | ತುಸು ತಿಳಿಸರಿ ಕೇಳುವೆಗೊಟ್ಟ ನನಗ
ಏನ ಕಾರಣ ಕರದಿರಿ | ಅಂತಾರ ಎಲ್ಲಾರು ಬಾ ತಮ್ಮಾ ಮುಂದಕ್ಕ
ಹಚ್ಚಿಕೋ ಸೂಕ್ಷಮಾ ಈ ಸುರಮಾ
ಕೇಳಿ ತೆರೆದ ಕಣ್ಣಾ ನಿಂತಾನ ಅಂತಾನ ಹಚ್ಚಿರಿ ಆದರ ನಿಮ್ಮ ಪ್ರೇಮಾ
ಹಚ್ಚಿದಾರ ಕಣ್ಣಿಗೆ ಸುರಮಾ ಮನಸಾಗಿ || ೬ ||

ಏನ ಹೇಳಲಿ ಹಚ್ಚಿದ ಕ್ಷಣಿಕ | ಭೂಮಿವೊಳಗ ಇದ್ದಂತಾ ಬದಕ
ಒಳೇ ನಿಚ್ಚಳಾಗಿ ಕಂಡ ಬಂತ ಕೇಳರಿ ಜನಲೋಕ
ಕುಂತಾನ ಮನಹಿಗ್ಗಿ ಅಂತಾನ ಅಯ್ಯೋ ಭಗವಾನಾ
ಕಳದಿಟ್ಟಾರ ನನ್ನ ಕಣ್ಣಾ | ನಾ ಮಾಡಲಿ ಇನ್ನೇನಾ
ಅಂತ ಮೆಲ್ಲಕ ಬಿದ್ದ ನೆಲಕ | ಅಂತಾರ ನಮ್ಮ ಅರಸರಲ್ಲೆ
ಹೋಗಿ ಹೇಳುವೆ ಬೇಶಕ್ | ಹೌಹಾರಿ ಗಾಬಾಗಿ
ದಿಕ್ಕಿಲ್ಲದಾಂಗ ಜನಾ | ಮಿಕ್ಕಿ ಓಡ್ಯಾರ ಏನ ಹೇಳಲಿ
ಗತ್ತ ಮಾಡಿ ಅತ್ತ ಇತ್ತ ನೋಡಿ | ಕುಂತ ಚೀಲಾ ತಗೊಂಡ ತನ್ನ ಹಸ್ತೀಲೆ
ಸಲುಹಿದಂತಾ ತನ್ನ ತಂದಿಗೆ ತಿಳಿಸ್ಯಾನ ಹೋಗಿ || ೭ ||

ಇಷ್ಟ ಮಾತ ಕೇಳಿ ಖುಷಿಯಾದಾ ಪುತ್ರನ ಮುಂದ ಹೀಂಗ ಅಂದಾ
ಸಿಕ್ಕಿದಲ್ಲೇ ಬದುಕ ತಕ್ಕೊಂಡ ಬಾ ವ್ರತದಿಂದ | ನೋಡುವೆ ಹರುಷಾಗಿ
ಏರು || ಆರತಾಸ ರಾತ್ರಿ ಅಮಲಾ ಆದಿತ್ಯ ಹೊಂಟಾನಲ್ಲಾ
ಹಚ್ಚಿ ಸುರಮಾ ಕಣ್ಣಿಗೆ ಮೊದಲಾ | ಊರ ಹೊರಗ ಹೋಗು ದಾರ‍್ಯಾಗ
ಭೂಮಿವೊಳಗ ಇದ್ದಂತಾ ಬದಕ | ಕಂಡ ಬಂತರಿ ಪುತ್ರಗ
ಕಂಡ ಗುದ್ದಲಿ ಹಚ್ಚಿ ಹಡ್ಡಿ ಭೂಮಿ | ಬದಕ ತಗಸಿ ಹೇರಸ್ಯಾನ
ಕತ್ತಿಮ್ಯಾಲಾ | ಮುತ್ತು ಮಾಣಿಕ ಹೊನ್ನ ವಜ್ರ ಬೆಳ್ಳಿ ಮುತ್ತು
ಬಂಗಾರ ಕಂಡ ದಂಗ ಆಗ್ಯಾರಲ್ಲಾ | ತಡಮಾಡದೆ
ಮುಟ್ಯಾರ ಮನಿಗೆ ಪುನಾ ಹೋಗಿ ||೮||

ಲೆಕ್ಕಿಲ್ಲದೆ ಮನಿಯಾಗ ಬದುಕ | ಒತ್ತಟ್ಟೆ ಇತ್ತ
ಇಟ್ಟಾರ ಹೇಳಲಿ ಏನ ಹೊಳುತಿತ್ತ ತುಂಬ ಬೆಳಕ ಚಂದ್ರನ ಸರಿಯಾಗಿ
ಏರು || ಇದರಂತೆ ಎಷ್ಟೋ ದಿನಾ ತಂದ ಕೂಡಿಸ್ಯಾನ ಹಣಾ
ಕಂಡ ಊರಾನ ಎಲ್ಲಾ ಜನಾ ಆಗಿ ಗೆಳೆಯರು ಕೂಡಿ ನಡುವುವರು
ಕೂಡಿ ಮಸಲತ ಮಾಡಿ ಊರ ಸರದಾರನಿಗೆ ಕೊಂದರು
ಈ ಸುದ್ದಿ ಸುದ್ದಾಗಿ ಮುಟ್ಟೀತ ಸದರಿಗೆ
ಸಿದ್ದಾಗಿ ಫೌಜುದಾರ ಕಟ್ಟಿ ನಡಾ ಹೊಂಟಾನ ಕಂಡಾನ
ಪುಂಡ ಶಬ್ದಾದನು ಹಿಡದ ಕೈಯಾಗ ಹತಿಯಾರ ಜೋಡಾ
ಜಿಗದ ಫೌಜದಾರಗ ಕಡದಾ ಸಿಟ್ಟಾಗಿ || ೯ ||

ಧೋಡೆ ದಿವಸ ಆದ ನಂತರಾ | ಏನ ಹೇಳಲಿ ಶಿವನ ತಂತರಾ
ಅಲ್ಲೆ ಅರಸ ಮರಣ ಹೊಂದಿದ ಕೇಳಿ ಬಹಾದ್ದೂರಾ
ಹೊಂಟಾನ ಲಗುಬಿಗಿ ||
ಹೋಗಿ ಪಟ್ಟ ಕಂಡ ಕಣಗಂಡ | ಸ್ವಾದೀನ ಮಾಡಿಕೊಂಡ
ಎಲ್ಲಾ ಅರಸರ ಆಗಿ ಗಂಡ | ಪುಂಡಾತ್ಮನು | ಶಬ್ದಾದನು
ಆದ ಸರಿ ಶ್ರೇಷ್ಟಾಗಿ ಸೃಷ್ಟಿವೊಳಗ ಆಳಹತ್ತಿದನು
ಬಂತ ಗರು ಆಗ ಶಬ್ದಾದ ಮಂದಿಗೆ ಅಂತಾನ ನನಗ ಭಜಿಸಬೇಕ
ಶಿವನಂತ ಸ್ಮರಿಸಿರಿ | ನೋಡಿರಿ | ನಡಿಯಿರಿ | ತಿಳಿಸುವೆ ತಿಳಿಯಿರಿ
ಒಮ್ಮೆ ಮನಕ ಕೇಳಿ ಕೈ ಮುಗದಾರ ಜನಾ ತಲಿಬಾಗಿ || ೧೦ ||

ಸುದ್ದಿಕೇಳಿ ಪಂಡಿತರೆಲ್ಲಾ ಬಂದ ತಿಳಿಸ್ಯಾರ ಅರಸಗ ಮೊದಲಾ
ಬಿಡೋ ಪಂತ ಶಿವಗ ನೆನಸಂತ ತಿಳಿಸ್ಯಾರ ಖುಲ್ಲಾ ನಿಷ್ಟೀಲೆ ಸರಿಯಾಗಿ
ಏರು || ಕಂಡಿ ಸ್ವರಗ ತಿಳಿ.  ನೀನು ಮನಕ | ಇಲ್ಲಂದರ ಬೇಶಕ್
ಸುಟ್ಟ ಹ್ವಾದಿಯೋ ನರಕಕ | ಸಿಟ್ಟಾದನು ಶಬ್ದಾದನು
ಅಂತಾನ ಶಿವನಿಗೆ | ಸತ್ತರ ಬಾಗಿ ತಲಿ ನಡಿಲಾರೆನು
ಯಾತಕ ಶಿವನಿಗೆ ನೆನಸಲಿ ಸ್ವರಗದ ಸಲುವಾಗಿ
ಸ್ವರಗ ಈ ಭೂಮಿಮ್ಯಾಗ ಮಾಡುವೆ ತಯ್ಯಾರ ಅಂತ ಪಣಾತೊಟ್ಟ
ತಯಾರ ಮಾಡ್ಯಾನ | ಸೊರ್ಗಾ ಆಗ | ಪ್ರೀತೀಲೆ ಅರಸ ತನ್ನ ಹಿತ ಸಲುವಾಗಿ || ೧೧ ||

ಇ|| ಆ ಸೊರ್ಗಾ ನೋಡಬೇಕಂತ | ಹೊಂಟಾನ ಕುದುರಿ ಮ್ಯಾಲೆ ಕುಂತ
ಸುತ್ತಿ ಜರಕಾಟಿ ಮಂದೀಲ | ಕುಣಿಸುವಾ ಕುದುರಿ ಸ್ವಂತಾ
ಅಲ್ಲೆ ಇಟ್ಟಾನ ಹೋಗಿ | ಶಿವನ ಅಪ್ಪಣಿ ಇಜರಾಯಿಲಗ
ಆದ ಕ್ಷಣಕ ಬಂದ ಬ್ಯಾಗ | ಜೀಂವಾ ತಗದಾರ ತುರ್ತ ಆಗ
ಸತ್ತ ಬಿದ್ದನು ಶಬ್ದಾದನು | ಮಾಡಿ ಸ್ವರಗ ಕಾಣದೆ
ಹೋಗಿ ನರಕಕ ಹೊಂದಿದನು | ಐಕಾತ ಸ್ವರಗ ಆಗ
ಇದ್ದ ಜನಾ ಸತ್ತ ನಷ್ಟದು ಯಾರ‍್ಯಾರ ಉಳಿಯಲಿಲ್ಲಾ ||
ಯಾರಿಗೆ ತಿಳಿಯದು ಸಾಂಬನ ಕೌತುಕ | ಕೇಳಿರಿ ಕುಂತೀರಿ ದೈದವರೆಲ್ಲಾ
ಮತ್ತೊಂದು ಮಾಡುವೆ ಸವ್ವಾಲ ಶಾಸ್ತರ ಸರಿಯಾಗಿ || ೧೨ ||

ಸೊರ್ಗಾ ಐಕ್ಯಾದ ಮಜಕೂರ ನೀ ಕೇಳೋ ಕೊಳರ ಶಾಹೀರಾ
ಅ ಸೊರ್ಗಾ ಪುರುಷ ಒಬ್ಬ ಕಂಡಾನ ಹೇಳ ಅವನ ಹೆಸರ
ನೀ ಕೇಳೋ ಕಸಬಸಗಿ ಹೇಳೋ ನೋಡೂನು ಶಾಣೇತನಾ
ಬಿರದ ಹಚ್ಚೇನಿ ಅಂತ ಪಣಾ | ಇಟ್ಟ ಹಾಡಿದೋ ಹೈವಾನಾ
ತಿಳಿದ ಹೋಗಲಿ ಸಭಾದಲ್ಲಿ | ಸಾವುತನಕ ಇದು ಒಂದ ಸವ್ವಾಲಾ
ಬಾಕಿ ನಿನ್ನ ಮ್ಯಾಲೆಯಿರಲಿ | ಶಾರ ಬಾಗಲಕೋಟಿ ಪ್ಯಾಟ್ಯಾಗ ಮಲೇಕಲ್ಲಾ
ನೆನೆದಾರ ಶಿಸ್ತಾಗಿ ಮಡ್ಡಿಮ್ಯಾಲಾ | ಅಂತಾರ ಹುಸೇನಮಿಯಾ ಪುಂಡಾಗಿ
ವೈರಿಗೆ ಕಂಡಲ್ಲೆ ಒದ್ದಾರ ಚಂಡಿನಮ್ಯಾಲೆ
ವಾದ ಅಲ್ಲಾಂತ ವಾದ ಹಾಕಿದರ ಕಿತ್ತೇನ ನಾಲಿಗಿ || ೧೩ ||

* * *

. ಶಬ್ದಾದ ಅರಸನ ಭೂಮಿಮ್ಯಾಲಿನ ಸ್ವರ್ಗಾ

ಎಷ್ಟಂತ ಹೇಳಲಿ ತಿದ್ದಿ ಶಬ್ದಾದ ಅರಸನ ಬುದ್ಧಿ
ಜಿದ್ದ ಹಾಕಿ ಹಚಗೊಂಡ ಮುಕಳಿಗೆ ಬೂದಿ | ತನ್ನ ದುರ್ಗುಣಕ್ಕಾಗಿ
ಶ್ರೇಷ್ಟ ಶರಣರಾ | ಅನಿಸಿದಾರ ಪೈಗಂಬರಾ
ಹರುಷದಿಂದ ಹೋಗಿ ಅರಸ ಶಬ್ದಾದಗ ಮಾಡತಾರ ಉಪದೇಶಾ
ಅಷ್ಟ ಐಶಿರಿ ಕೊಟ್ಟಾ ಸಿಂಹಾಸನ ಸೃಷ್ಟಿಕರ್ತಾ ಆ ಜಗದೀಶಾ
ಗುರುತ ಹಿಡಿ ಈ ಶರತ ಆತನ ಹೊರತು ಸಿಗೂದಿಲ್ಲ ಕೈಲಾಸಾ
ನಿಷ್ಠಾ ಹಿಡಿ ಮುಕ್ತಿ ಪಡಿ ಸಾಕ್ಷಾತ್ ಭಗವಂತಾ
ಆತನ ಹೊರತು ಬಾಕಿದು ಎಲ್ಲ ವ್ಯರ್ಥ
ಅವನಿಂದ ಕಂಡಿ ಸ್ವರ್ಗ | ಅವನ ಹೆಸರ ಇಲ್ಲಂದರ ನರಕದ ಬೆಂಕಿಯೊಳಗ
ನುಗಿಸುವರೋ ಅಲ್ಲಿ ಜಗ್ಗಿ || ೧ ||

ಗರು ಅಂಬು ಗುಣಾ ಬಲುಕೆಟ್ಟಾ | ಶಬ್ದಾದಗ ಬಂದಿತ ಸಿಟ್ಟಾ
ಶರಣರಿಗೆ ಅಂತಾನ ಯಾತಕ ಇಷ್ಟಾ ಬೆಳಸುದು ಶಿವನಿಗೆ
ಸ್ವರ್ಗದ ಸುಖದ ಸಲುವಾಗಿ ಭಜಿಸಬೇಕ ನಾವು ಅವನಿಗೆ
ಹಂತಾ ಸ್ವರ್ಗಾ ನಾ ಸ್ವಂತಾ ಮಾಡತೀನಿ |  ಅಂತಾ ಪಂತಾ ಹಾಕಿ ಪಣಾ ತೊಟ್ಟಾ
ಪತ್ರದಿಂದಲೆ ಪತ್ರ ಬರೆದಾ ತನ್ನ ಮಂತ್ರಿಗಳ ಕೈಯ್ಯಾಗ ಕೊಟ್ಟಾ
ಕರೆಸಬೇಕ ಎಲ್ಲಾ ಅರಸಮಂದಿಗೆ | ಸಹಕರಿಸಿ ಮಾಡಿರಿ ಲೂಟಾ
ಹುಕುಂ ಕೇಳಿ ಏಕದಮ್ಮಾ
ಹಿಂಡಿಗೆ ಹಿಂಡ ಪುಂಡ ಅರಸರ ಗಂಡ ಶಬ್ದಾದ ಸಾರ್ವಭೌಮಾ
ಕೂಡಿದ ಅರಸರಿಗೆಲ್ಲಾ ತಿಳಿಸಿದಾನ ತನ್ನ ಮನದ ಲೀಲಾ |
ಸ್ವರ್ಗ ಕಟ್ಟಿರಿ ಭೂಮಿ ಮ್ಯಾಲೆ ಅದು ನನ್ನ ಸಲುವಾಗಿ || ೨ ||

ನಾಡಾಗ ಹಬ್ಬಿತ ಅರಸನ ಸುದ್ದಿ | ಕಾಡಾಗಿರು ಕೌಶಲ್ಯೆ ಮಂದಿ
ತೋರಿಸಬೇಕರಿ ನಿಮ್ಮಲ್ಲಿ ಬುದ್ದಿ | ಬರಬೇಕ ಸದರಿಗೆ
ಕಟ್ಟುದಕ ಕೈಲಾಸ | ಹುಡುಕತಾರ ಜಾಗಾಖಾಸಾ
ಸಿಕ್ಕಿತಲ್ಲೆ ಒಂದ ಮಿಕ್ಕಿದ ಜಾಗಾಯಿತ್ತ
ಸ್ವಂತ ಪಾಯಾ ತಾ ನಿಂತ ಕಟಸಿದಾರ ಬಂದೋಬಸ್ತ ನಾಲ್ವತ್ ಗಜದಾ |
ಬಂಗಾರ ಇಟ್ಟಂಗಿ ಸಂಗಮವರಿ ಕಲ್ಲಿನ ಫರಸಿ ಬಹು ಚಂದಾ
ಶಾರಾಗಿರಿ ನಡದೀತ  ಬಾರಿ ಸರಸ ಮುನ್ನೂರ ವರುಷ ತನಕ ದುರಸ್ತ ಆತ ಬರೋಬರಿ
ಗಿಡಗಳು ಹಚ್ಯಾರ ಹಡ್ಡಿ ಬೆಳ್ಳಿ ಬಂಗಾರದ ಕಡ್ಡಿ ಮುತ್ತು ಮಾಣಿಕ ತಪ್ಪಲ
ಕೆಚ್ಚಿದ್ದಾ ಝಾಡಿ | ಯಾಕೂತದ ಟೊಂಗಿ || ೩ ||

ಹೊನ್ನ ಚಿನ್ನ ದೇಶದ ಮ್ಯಾಲೆ | ತೀರಿಹೋತ ಖಜಾನಿ ಖಾಲಿ
ಸುಲಕೊಂಡ ತರಲಿಕ್ಕೆ ಬಹಳ ಜರಬಿಲೆ | ಕಳಿಸಿದ ತನ್ನ ಮನುಷ್ಯರಿಗೆ
ಹುಕುಮ ಕೊಟ್ಟಿದ್ದಾ ಹೀಂಗ | ರೈತರ ಮನಿಯಾಗ
ಹೊಕ್ಕ ನೋಡಬೇಕ ಇಕ್ಕಿದ ಜಾಗಾ ಹೆಂಡರ ಮಕ್ಕಳ ಕೊರಳಾಗ
ಕಾಸಿದ ಬಂಗಾರ ಕಸಗೊಂಡ ಬಿಡಬೇಕ |
ಒಂದ ಊರಾಗ ಒಬ್ಬ ಬಡವಿ | ಮುದುಕಿ ಇತ್ತ ಕೊರಳಾಗ ಹಳೆಯ ತಾಳಿ
ಬಂದ ಕಸಗೊಳಲಿಕ್ಕೆ ಮುದುಕಿ ನಿಂತ ಬಿಡತಾಳ ದೈನಾಸ
ಇದರ ಹೊರತ ಇಲ್ಲ ಏನೇನ | ತಿರಕೊಂಡ ತಿನ್ನಾಕಿ ನಾನು
ಹೇಳಿಕೊಂಡರ ಕೇಳಲಿಲ್ಲ ಮುದುಕಿ ಅನ್ನುದು | ಕಸಗೊಂಡಾರ ಜಗ್ಗಿ || ೪ ||

ಮುದುಕಿ ಸಾಂಬನ ಸದರಿಗೆ ಅರಜ ಮಾಡ್ಯಾಳ ಶಿರಬಾಗಿ
ಮರ್ತ ಕುಂತಿ ಅನಾಥ ಬಡಮಂದಿಗೆ | ನಡದೈತಿ ಇಲ್ಲೆ ಸುಲಿಗಿ
ಹಿಂತಾ ಗುರುವಿಷ್ಟಗ ತುರತಾ | ಮಾಡಬೇಕ
ಪೊಡವಿಯ ಪಾಲಕ ಆ ಬಡವಿಯ ವಿನಂತಿ ಮಾಡಿದಾಗ ಆಗ ಮಂಜೂರಾ
ಕಳುವಿಕೊಟ್ಟ ಯಮದೂತ ಇಜರಾಯಿಲ ಆಗಿ ನಡದಾನ ತಯ್ಯಾರಾ
ಹೋಗಿ ನಿಂತಾ ಶಬ್ದಾದನ ಸ್ವರ್ಗದ ಬಾಕಲ ಹೊಸ್ತಿಲ ಹತ್ತರಾ
ಆ ದಿನಾ ಶಬ್ದಾದನ ಮನಾ |
ಹೋಗಿ ನೋಡಬೇಕ ಸ್ವರ್ಗಾನಂದು ಹ್ಯಾಂಗ ಆಗೈತಿ ರಚನಾ
ನೋಡುದಕ ಸ್ವರ್ಗಾ ಹಾರಿ ಕುಂತಾನ ಕುದುರಿ
ಕರಕೊಂಡ ಸಂಗತಿಲೇನೆ ತನ್ನ ಐನೂರು ಮಂದಿಗೆ || ೫ ||

ಸ್ವರ್ಗ ನೋಡುದು ಅಕ್ಕರತಿ ಬಾಳ ಇತ್ತ ಅವನ ಪ್ರೀತಿ
ಹೋಗಿ ನಿಂತ ತನ್ನ ಸ್ವರ್ಗದ ಬಾಗಿಲ ಹತ್ತೀಲೆ | ಒಬ್ಬ ಕಂಡ ಕಣ್ಣೀಗೆ
ಶಬ್ದಾದ ಕೇಳತಾನು | ಯಾರ ಇಲ್ಲೆ ನಿಂತಾವ ನೀನು
ಅಂದ ಇಜರಾಯಿಲ ಬಂದೇನಿ ನಾನು ಸಾಂಬನ ಕಡೆಯಿಂದ ಯಮದೂತಾ
ಜಾವದೊಳಗ ನಿನ್ನ ಜೀವಾ ತಗೋತೀನಿ ನನಗಂತಾರ ವಲಕಲಮವೂತಾ
ಶಬ್ದಾದ ಅಂತಾನ ಸ್ವರ್ಗದ ಐಸಿರಿ ನೋಡತೇನಿ ಹಿಡಿ ಸನಮಂತಾ
ಕಟಿಸಿದಿನಿ | ನೋಡಿಲ್ಲರಿ | ನೋಡಿ ಸಾಯಬೇಕಂತಾ
ಶಬ್ದಾದ ಕುದುರಿ ಇಳುತಿದ್ದಾ ಹಾತೊರಿ
ಒಂದ ಕಾಲೂರಿ ಕಾಬದಾ ಒಂದ ಸ್ವರ್ಗದ ಹೊಸಲಿಮ್ಯಾಗ
ಜೀವ ತಗದಾ ಯಮದೂತಾ | ಅಷ್ಟರೊಳಗ ಕಾಣಲಿಲ್ಲ ಕಡಿಗಿ || ೬ ||

ನನ್ನ ಸ್ವರ್ಗ ನನ್ನ ಸ್ವರ್ಗ ಅಂತ ಶಬ್ದಾದ ಹ್ವಾದಾನ ಸತ್ತಾ
ನರಕದಾಗ ಒಗದಾರ ಆತನ ಹೊತ್ತಾ | ಅವನು ಕಟ್ಟಿಸಿದ ಸ್ವರ್ಗಾ
ಸಾಂಬನ ಕಡೆಯಿಂದ ಬಂದ ಫರಿಸ್ತಾ ಒತ್ಯಾನ ಇಳಿದೀತ ಪಾತಾಳಕ
ಶಬ್ದಾದನ ಕೂಡ ಇದ್ದ ಮಂದಿ ಸತ್ತ ಹ್ವಾದಾವೊ ನರಕಕ
ಬಾಗಲಕೋಟ್ಯಾಗ ಲಚಮನಸಿಂಗ ಮಾಡಿದ ಕವಿಗಳು ಬಲು ತೊಡಕ |
ಗುರು ದಸ್ತಗೀರ ಕೇಸುಪೀರಾ
ಹಸ್ತ ತೆಲಿಮ್ಯಾಲೆ ಇಟ್ಟ ಕೊಟ್ಟಾರೋ ಮಸ್ತ ಬುದ್ಧಿ ಭರಪೂರಾ
ನಾಗು-ಗೌಸೂನ ಕೂಡ ತೆಕ್ಕಿ | ಹಾಕಬ್ಯಾಡೋ ಹಿರದೇನ ಹಿಕ್ಕಿ
ಸಿಗಬಾರದ ಬಂದಕ್ಯಾರಾ ನೀ ಇಲ್ಲೇ ಸಿಕ್ಕಿ ಹೋಗಿನ್ನ ಪಾರಾಗಿ || ೭ ||

* * *

. ಸತ್ತಾಗ ಅಳಬಾರದೆನ್ನುವ ತತ್ವದ ಪದಾ

ಶಾಸ್ತರ ಸಿದ್ದಾಂತ ಮಾಡಿ ನಾ ಪಂತ | ಹಾಡುವೆ ನಿಂತ ಕುಶಿಯಾಲಾ
ಮೇಸ್ತ್ರಿ ಜನ ಕುಂತ ಕೇಳ್ರಿ ಬಿಟ್ಟ ಪಂತ | ಶರಣರ ತಂತ್ರ ಬಲ್ಲವರಿಲ್ಲ
ಚ್ಯಾಲ || ಒಬ್ಬ ಶರಣನು ಒಬ್ಬಾಕಿ ಸ್ತ್ರೀ ಕೋಮಲಾ
ಲಗ್ನವಾಗರೆಂದು ತರಬಿದಳು ಬಿದ್ದು ಕಾಲಾ
ಹೇಳಿ ಆಕಿಗೆ ಉತ್ತರ ಕೊಟ್ಟನು ವತ್ತರ ನನ್ನ ಹತ್ತಿರ
ನಿನ್ನ ವಾಲ್ಮಲ ನಡಿಸುವಂತ ಸಂಪೂರ್ಣ ಪಂತ
ಇದ್ದರ ಸ್ವಂತ ಮಾಡಬೇಕ ಈ ಛಲಾ
ಇಲ್ಲದಿದ್ದರ ಹೋಗ ಮನಿಗೆ ಕಾಲಬಿದ್ದರೇನ ಫಲಾ
ಉದ್ದರಿ ಮಾತಿಲ್ಲ ಬಿಲ್‌ಕುಲ್ಲಾ
ಇ|| ಯತಿಯ ಮಾತಿಗೆ ಕೊಟ್ಟಾಳ ಸವಾಲಾ
ಕ್ಷಿತಿಯೊಳು ಪತಿಹೊರ್ತ ಸತಿಗೆ ಗತಿ ಇಲ್ಲಾ
ಪತಿಯ ಸಕಲಕ್ಕು ಕರ್ತ ಸುಳ್ಳಲ್ಲಾ
ಅಂತಾರಾಣಿ ಅನ್ನಲು ಉದ್ದಾಣಿ | ತೆಗೆದುಕೊಂಡು ಆಣಿ ಅಂತಾಳಲ್ಲಾ || ೧ ||

ಕಾಂತಿ ನಿನ್ನ ಹೊಟ್ಟಿ | ಮಕ್ಕಳು ಹುಟ್ಟಿ | ಸತ್ತರ ಮನಮುಟ್ಟಿ ಒಡಿಬ್ಯಾಡ ಜಲ್ಲಾ
ಹೀಗೆ ಆ ಶರಣಾ | ಹೇಳಿ ತಾ ಲಗ್ನ | ಆದಾನು ಧುರಿಣಾ ತತ್ಕಾಲಾ
ಇತ್ತ ಆ ರಾಣಿ ಆಗಿ ಗರ್ಭಿಣಿ ಹಡದಾಳು ಸುಖಜಾಣಿ ಖುಷಿಯಾಲಾ
ಚ್ಯಾಲಿ || ಬೀಬಿಯು ಅಮವಾಸಿಯ ದಿವಸ ಅವಳಿ ಜವಳಿ
ಎರಡು ಮಕ್ಕಳು ಹಡೆಯಲು ಊರೆಲ್ಲ ಬಿದ್ದಿತು ಬೆಳದಿಂಗಳ
ಮಕ್ಕಳ ವರ್ಣ ಸೂರ್ಯನ ಕಿರಣ ರತ್ನದಾಭರಣ ಹಾಕ್ಯಾರಲ್ಲಾ
ಹಸರಂಗಿ ಮಕಮಲ್ಲನಂಗಿ ಕೋಟುಬೂಟ ಜಂಗಿ ತೊಡಿಸ್ಯಾರಸಲಾ
ಚಿಕ್ಕಮಕ್ಕಳಿಗೆ ಹಾಲುಸಕ್ಕರಿ ಕುಡಿಸ್ಯಾಳಕ್ಕರದಿ ತಾಯಿಯು ಹಗಲೆಲ್ಲಾ
ಇ|| ಮೂರು ವರುಷದ ಮಕ್ಕಳಾದ ಮೇಲ | ಬಾರಿ ಶೆಟರೋಗ ಬಂದು ತತ್ಕಾಲಾ
ಹಾರಿ ಹೋದಾರೋ ಪ್ರಾಣ ಉಳಿಲಿಲ್ಲಾ | ಗಂಡನ ವಚನ ನಡಿಸುವ ಕಾರಣ
ಹೆಂಡತಿ ಕಣ್ಣೀರನಾ ಸುರಿಸಲಿಲ್ಲಾ | ಪಂತರು ಅಲ್ಮಪ್ರಭುವಿನ ಕಲ್ಮಾ
ಓದಿಸಿ ಅವರ ಜಲ್ಮಾ | ಮಾಡ್ಯಾರ ಸಫಲಾ || ೨ ||

ಮತ್ತು ಆರಾಣಿ ಆಗಿ ಗರ್ಭಿಣಿ | ಹಡಿದಳು ಸುಖಜಾಣ ಕುಸಿಯಾಲಾ
ಸತ್ತವರಿಗಿಂತ ಆ ಚೆಲ್ವರತ್ಯಂತ ಮಕ್ಕಳು ಶಾಂತ ಹುಟ್ಯಾರಲ್ಲಾ
ಚ್ಯಾಲಿ | ಮತ್ತು ಆ ಮಕ್ಕಳಿಗೆ ಹನ್ನೆರಡು ವರ್ಷದ ಮೃತ್ಯುಕಾಲಾ
ಒದಗಲು ಸತ್ತಾರು ಉಳಿಯಲಿಲ್ಲಾ ||
ಮಕ್ಕಳಿಬ್ಬರನಾ ಮಾಡಿ ದಫನ | ಧರ್ಮದಾನ ಕೊಟ್ಟಾರೋ ಮದಲಾ
ಇಷ್ಟಾದರೂ ಆ ಸತಿ ಜೋರು ತಾ ಕಣ್ಣೀರು ಸುರಿಸಲಿಲ್ಲಾ
ಪತಿಯ ಆಜ್ಞೆಯ ಮೀರದೆ ಆ ನಾರಿ ಸತತ ಸೌಖ್ಯದಿ
ಪತಿಯ ಮೇಲೆ ಇಟ್ಟಾಳ ಖ್ಯಾಲಾ ||
ಇ|| ಸತ್ಯ ಶರಣನು ಮಧ್ಯರಾತ್ರಿ ಶಾಲಾ | ನಿತ್ಯಗೋರಿಗೆ ಹೋಗಿ ಕರಿಯಲಾ
ಸತ್ತಮಕ್ಕಳು ಹೊರಗೆ ಬಂದಾಗಳಲಾ | ಸ್ವರ್ಗದ ಮಜಕೂರಾ
ಹೇಳಿ ನಾಲ್ವರ ಗೋರ‍್ಯಾಗ ಹೊಕ್ಕಿದ್ದಾರ ದರಸಲಾ || ೩ ||

ಗರಗರ ಹಿಂದಕ್ಕೆ ತಿರಗಿದ ತಾ ಆಕ್ಷಣಕೆ | ಮಲಗುವ ಮಂಚಕ್ಕೆ ಕುಶಿಯಾಲಾ
ಭೋಗದ ರಾಣಿ ಆಗಿ ಗರ್ಭಿಣಿ | ಹಡದಾಳು ಸುಖಜಾಣಿ ಕುಶಿಯಾಲಾ
ಸತ್ತವರಿಗಿಂತ ಚಲುವರತ್ಯಂತ ಮಕ್ಕಳು ಹುಟ್ಯಾರಲ್ಲಾ
ಚ್ಯಾಲಿ || ಮತ್ತು ಆ ಮಕ್ಕಳಿಗೆ ಆರನೆ ವರ್ಷ ಮೃತ್ಯುಕಾಲಾ
ಒದಗಲು ಸತ್ತಾರು ಉಳಿಯಲಿಲ್ಲಾ | ಎರಡು ಗೋರಿಗೆ ಪೀರಾ
ಬಂಗಾರ ಲಾಜೆವರ | ಮಾಡಿಸಿದ ಸರದಾರ | ಗೋರಿಗಳ ಮೇಲಾ
ಸುತ್ತು ಸಂಪು ನೆರಳೊಳು ತಂಪು | ಮನಸಿಗೆ ಇಂಪು ಬಹಳ ವಿಶಾಲಾ
ಬಂದೋಬಸ್ತ ಜಲಾ ಮರ ಶಿಸ್ತ | ಬಡಸಿದ ಸಂತ ವಿಸ್ತರದಿ ತೋಲಾ
ಇ|| ಬುದ್ಧಿವಂತ ಶರಣಾ ನಿತ್ಯಕಾಲಾ | ನಿತ್ಯಗೋರಿಗೆ ಹೋಗಿ ಕುಶಿಯಾಲಾ
ಸತ್ತ ಮಕ್ಕಳ ಹೊರಗೆ ಬಂದ ಘಳಿಲಾ | ಆರುಮಂದಿ ಶಾಂತ
ಆಗಿ ತಾವು ಸ್ವಂತ ಸ್ವರ್ಗದ ವೃತ್ತಾಂತ ಹೇಳುವರಲ್ಲಾ
ಈ ರೀತಿ ದರಾ | ಸ್ವರ್ಗದ ಕಾರಬಾರ | ಹೇಳಿ ಹೋಗುತ್ತಿದ್ದರ ದರಸಲಾ || ೪ ||

ಒಂದಾನೊಂದ ದಿವಸ ಆ ಶರಣ ಖಾಸ | ಅಮವಾಸ ದಿವಸ ಹೋಗುವ ಕಾಲಾ
ಸುಂದರಿ ಎಚ್ಚರ ಆಗಿ ಭರರರಾ | ಗಂಡನ್ಹಿಂದ ಸರರಾ ಹೋದಾಳಲ್ಲಾ
ಚ್ಯಾಲಿ || ಗೋರಿಯ ಹತ್ತಿರ ಹೋದಾನ ಶರಣಲೋಲಾ
ಯಾರ‍್ಯಾರು ಇದ್ದಿಲ್ಲಾ ಆಗಿತ್ತು ಕಾರ್ಗತ್ತಲಾ
ನಿಂತು ಅವಳು ಕರೆದು ಬಾಯಲಿ | ಬಂದ್ರೋ ಭರದಲಿ ತತ್ಕಾಲಾ
ಸೂರ್ಯ ಚಂದ್ರನಂತ ಸುಂದ್ರ ಮಕ್ಕಳ ಹಂದ್ರದಲಿ ಬಂದು ನಿಂದ್ರಲಾ
ಕಾರ್ಗತ್ತಲಾ ಹೋಗಿ ಸುತ್ತಲಾ | ಗ್ಯಾಸ ಕಂದೀಲ ಹಚ್ಚಿದಾಂಗ ಜ್ವಾಲಾ
ಇ || ಹೊಟ್ಟಿಯಲಿ ಹುಟ್ಟಿದ ಮಕ್ಕಳ ಮುಖಕಮಲಾ
ಸ್ಪಷ್ಟ ಕಾಣಲು ಬೀಬಿ ತತ್ಕಾಲಾ | ಕಷ್ಟ ತೋರಿ ಅತ್ತಾಳೋ ಸುಶೀಲಾ
ತಂದಿ ಮಕ್ಕಳಾ | ಮಾತಾಡಿ ನಿವ್ವಳಾ |
ಹೋದರು ಗೋರಿಯೊಳು ಕುಶಿಯಾಲಾ
ನೊಂದು ಆ ನಾರಿ ಬಂದಾಳ ಖಬರ‍್ಹಾರಿ | ಮನಗ್ಯಾಳ ಸುಂದರಿ ಹಾಸಿಗಿ ಮೇಲಾ ||

ಮರುದಿನ ಯೋಗಿ ಗೋರಿಗೆ ಹೋಗಿ | ಕರಿಯಲೊಂದು ಗಳಗಿ ಆದಮೇಲಾ
ದುಃಖಲಿಂದ ತಾಯಿ ಅತ್ತಸಂದ | ಹೇಳ್ಯಾರು ಪಸಂದ ಉಳಿಯಲಿಲ್ಲಾ
ಚ್ಯಾಲ || ನಾಳಿಗೆ ಬರಬೇಡರಿ ರಾತ್ರಿಕಾಲಾ | ಇಂದಿಗೆ ನಮ್ಮ ನಿಮ್ಮ ರಿಣಾ
ಆಯ್ತೋ ಪೈಸಲಾ | ನಿನ್ನೆ ನಮ್ಮವ್ವ ಖಾಸ | ತಾಯಿ ಕಂಡ ದುಃಖ
ಮಾಡ್ಯಾಳ ಪಕ್ಕಾ ಬಂದು ಹಿಂಬಾಲಾ | ಅದರಿಂದ ನಮಗಿಂದು
ಅಪ್ಪಣಿ ಮುಂದಿಲ್ಲರಿ ಬಿಲ್‌ಕುಲ್ಲಾ | ಎಂದಾ ಸುತರು
ತಂದಿಗೆ ಹೇಳಿದ ಲೀಲಾ | ಹೊಂದಿಸಿ ಮಾಡಿದ ಮೆಣಸಗಿ ಪಾಟೀಲಾ
ಅಂದು ಕಾಣಲು ಬುಧರ ಹಾಕ್ಯಾರ ಮೇಲಾ
ರುದ್ರಗೌಡರ ಮುದ್ರಿ ಅಕ್ಷರ | ಅಬ್ದುಲ್ ಹಕ್ ಸಾಹೇಬರ
ನೋಡಿ ಮಿಡಲಾ ಭದ್ರ ಮೋಹರ ಮಾಡಿಸಿ ಕೊಟ್ಟಾರ
ತಮ್ಮ ಹೆಸರ ಹಾಕಿಸಿ ಮಿಡಲಾ || ೬ ||

* * *

೧೦ನಮರೂದ ಅರಸನ ಗರ್ವಭಂಗದ ಪದಾ

ಸರೂ ಜೀವಕ ಮರೆವಿನ ಮಾತ | ಅರು ಅಂಬುದು ಗುರುವಿನ ಕೀಲಿ
ಗರು ಕೆಲಸಕ್ಕೆ ಬರೂದಿಲ್ಲ ಗುದ್ದಾಡಿ ಖಾಲಿ | ಹೋಗೂದು ಮುನ್ನ ಕೂಡಿ
ಏರು || ತಿಳಿದ ಗರು ಅಳದಾಂವ ಜಾಣಾ | ಮರೆವಿನಲ್ಲಿ ಬಿದ್ದಾಂವಾ ಕ್ವಾಣಾ
ನೇಮ ಇಟ್ಟ ಶಿವನಾಮ ಸ್ಮರಿಸಿದರೆ ಪ್ರೇಮಾ | ಅವರ ಮ್ಯಾಲೆ ಭಗವಂತಾ
ಮಾಯ ಮಾಡು ಶಿವರಾಯ | ಸ್ವರ್ಗದಾಗ ಭಯ ಇಲ್ಲದಾಂಗ ಕಿಂಚಿತ್ತಾ
ಮೂರ್ಖ ಗುರುವಿನಲ್ಲಿ ಗರ್ಕ ಆದರ ಮುಂದ ನರಕ ಆಗೂದು ಖಚಿತಾ
ಹರ ರೀತೀಲಿ ಆತನ ಲೀಲಿ | ಕಾಪಾಡಿ ವರಗಳ ಬೇಡಿ | ಮುಕ್ತಿ ಪಡಿ
ಆಗಬ್ಯಾಡ ಪ್ಯಾಲಿ | ಉದ್ದ ಬಲಿಸಿದಾನ ಬ್ರಹ್ಮಾಂಡ | ಜಿದ್ದ ಹಾಕಿ ಆತನಗೂಡಾ
ಸತ್ತ ಹ್ವಾದಾ ನಮರೂದ ನಮದೇನ ಪಾಡಫಲಾ ಇಲ್ಲಾ ಜಗಳಾಡಿ || ೧ ||

ನಮರೂದ ಅಂಬೂ ಅರಸಾ | ಇದ್ದಾನ ನಾಡಿಗೆ ಸರಸಾ
ಇಬ್ರಾಹಿಮ ಮಾಡತಾರ ಹೋಗಿ ಉಪದೇಶ ಪರಿಪರಿಲಿಂದ ತೀಡಿ
ಏರು || ಬಿಟ್ಟು ಬಿಡು ಮೂರ್ತಿ ಪೂಜೇ | ಇಷ್ಟಾ ಇಟ್ಟು ಮಾಡೋ ನಮಾಜಿ
ಸಾಂಬನೂಳಸ ನೀರ ಅಂಬು ನಿರಾಕಾರ ತುಂಬಿ ತುಳಕತಾನ ಜಗಜೆಟ್ಟಿ
ಅಲ್ಲಾನ ಹೊರ್ತು ಇನ್ನೆಲ್ಲಿ ದೇವರು ಕಲ್ಲಿಗೆ ಮೆಚ್ಚಿದಿ ಉಪರಾಟಿ
ಕೊಟ್ಟ ದೇವರು ಕಟಗೊಂಡು ಹೋಗುವಾಗ ಬಾಕಿ ದೇವರು ಬಡಿತಾವ ಗಂಟಿ
ಗರುವಿಷ್ಟಗ ಇದು ತಿಳಿದಿತ್ತ ಹ್ಯಾಂಗ | ಅಂದ ಸಿಟ್ಟಿಗೆ ಬಂದ ನಮರೂದ
ಕೊಂದ ಬಿಡುವೆ ನಿಮ್ಮ ಅಲ್ಲಾಗ | ಗರುವಿಲಿಂದ ಹೊಡದಾನ ಹೂಕಿ
ಕೈಲಾಸಕ ಹಚ್ಚುವೆ ಬೆಂಕಿ | ಗೆದ್ದು ಬರುವೆ ಇದ್ದಲ್ಲಿ ಸಾಂಬನ ಹುಡುಕಿ
ಬಲ್ಲಾಂಗ ಮಾತಾಡಿ ಕಲ್ಪನಾ ಮಾಡತಾನ ಮನದಾಗ ಕೈಲಾಸಕ ಹೋಗಬೇಕ
ಹ್ಯಾಂಗ ಮಸಲತ ಕೊಟ್ಟ ಇಬಲೀಸ ಬಂದ ಆತಗ
ಇಲ್ಲದ ಒಂದ ಹುಡಕ್ಯಾಡಿ || ೨ ||

ಗೀದ ಅಂಬು ನಾಲ್ಕು ಪಕ್ಷಿ | ಸಾಕಬೇಕ ಬಲ್ಲಾಂಗ ಪಕ್ಷಿ
ವತ್ರದಿಂದಲಿ ಎತ್ತ ಆಗತಾವ ಉತ್ತರ ದೇಶದ ಒಂಟಿಸರಿ
ಮೂರದಿವಸ ಕೂಳ ನೀರ ಹಾಕಬ್ಯಾಡ ಚ್ಯಾಂವ ಚ್ಯಾಂವ ಅಂತಿರಬೇಕ ಒದರಿ
ಬಾತ ಸುನೋ ಸಾಬೀತ ಕರೂ ತಾಬೂತ ಬೈಠನೇಕು ತಯಾರಿ
ತಾಬೂತಕ ತಳದಾಗ ಕಟ್ಟಬೇಕ ಅವು ನಾಲ್ಕು ಪಕ್ಷಿ ನಾಲ್ಕು ಬಾಜೂಕ
ಸಮತೂಕ ಒಂದೊಂದ ಮಾಂಸದ ತುಕಡಿ ಕಟ್ಟ ತಾಬೂತ ಮೇಲಗಡಿ
ಕಾಣುವಾಂಗ ಪಕ್ಷಿಗೆ ಅಜಮಾಸ ನೋಡಿ ಹೀಂಗ ನಾಲ್ಕು ಕಡಿ || ೩ ||

ಅನ್ನ ಇಲ್ಲದ ಪಕ್ಷಿ ಹಸ್ತಾ ಕಂಡ ಖಂಡ ತಿನಬೇಕಂತಾ
ಹಾರಿದಾಂಗ ಏರೂದು ನಿನ್ನ ತಾಬೂತಾ | ನೀಟ ಆಕಾಶ ಕಡಿ
ಹೇಳಿದಂತೆ ಮಾಡಿ ಸಾಹಿತಾ | ನಮರೂದ ಅರಸ ಮ್ಯಾಗ ಕುಂತಾ
ಹೌನಿಸಗೊಂಡ ಹ್ವಾದಾವ ಖಂಡಕ | ಪಕ್ಷಿ ತಾಬೂತ ಎದ್ದೀತ ಮ್ಯಾಗ
ಮೂರುದಿವಸ ಮೂರ ರಾತರಿ ಆದಿಂದ ಹಣಿಕಿ ನೋಡ್ಯಾನ ತೆಳಗ
ಗುಡ್ಡ ಗಂವಾರ ಒಂದೇ ಸಮನಾಗಿ | ಭೂಮಿ ಕಾಣೂದು ಬಟ್ಟಲದಾಂಗ
ಮತ್ತ ಎರಡು ದಿವಸ ಆದಿಂದ ಪೂರಾ ಹಣಿಕಿ ನೋಡ್ಯಾನ
ಭೂಮಿ ಅಡಗಿ ಕಂಡೀತ ನೀರ ನಿರಂಜನ
ಆಗ ಅರಸ ಮನಸಿ ತಿಳಿದಾ ಕೈಲಾಸಕ ಮುಟ್ಟೀನಿ ಬಂದಾ
ಅನುಮಾನ ಇಲ್ಲದೆ ಬಾಣ ಹೊಡದಾ ಕಸುವೀಲೆ ಕುಣದಾಡಿ || ೪ ||

ಸ್ವರ್ಗದ ಶಿವದೂತರು ಹೋಗಿ ಅರಜ ಮಾಡ್ಯಾರ ಶಿರಬಾಗಿ
ಉಚ್ಚ ನೀಚ ಸಲುವಾಂವ ಒಂದೇ ಸವನಾಗಿ ಅಂದ ತಾಬಡತೂಡಿ
ಬಾರು ಬಾನಕ್ಕ ಹಿಡಕೊಂಡ ಗಟ್ಟಿ ಮೀನದ ಬೆನ್ನಾಗ ಚುಚ್ಚಿ
ತಿರುಗಿ ಒಗಿಬೇಕ ಹುಕುಮಿನ ಪ್ರಕಾರ ಒಗುವಾಗ ದೂತರು ಪುರಮಾಸಿ
ವತ್ರದಿಂದಲೆ ಹತ್ರ ಮೀನದ ನೇತ್ರದೊಳಗ ಮುಣಗೀಸಿ
ತಾಬೂತದೊಳಗ ಬಂದ ಬಿತ್ತ ನಮ್ರೂದ ಎತ್ತಿನೋಡತಾನ ಅಡ್ರಾಸಿ
ನೇತ್ರಾಮುಣಗಿತ್ತ ಪೂರಾ ಭಂಡ ನಮ್ರಾದ ಕಂಡ ಬಾನಾ
ಆನಂದ ಆದ ಭಯಂಕರ ತಿಳಿದ ಸಾಂಬ ಹ್ವಾದಾನು ಸತ್ತ
ಬಾನತುಂಬಾ ಮುಳಗೈತಿ ರಕ್ತಾ | ಸಂತೋಷದಿಂದ ಇಳಿಸ್ಯಾನ
ತನ್ನ ತಾಬೂತ ಭೂಮಂಡಲ ಕಡಿ || ೫ ||

ಇಬ್ರಾಹಿಮ ಶರಣರಿಗೆ ಕರೆಸಿ | ಹೇಳತಾನ ತನ್ನ ಉಪದೇಶಿ
ಸತ್ತಾ ಇನ್ನಾ ಅಲ್ಲಾಗ ಫಲಾ ಏನ ನೆನಸಿ ನನ್ನ ಪಂತಾ ಹಿಡಿ
ಇಬ್ರಾಹಿಮ ಶರಣರು ನಕ್ಕು ಅಂತಾರ ಎಲೆ ಶತಮೂರ್ಖ
ಸಾಂಬನ ಕಾಣೂದು ಎಂದಿಗೆ ಆಗದು ನಿನಗೇನಠಾಂವಿಕಿ ಮುನ್ನಹೂಡಿ
ಮಳ್ಳ ಶಾಹೀರನಾಂಗ ಸುಳ್ಳ ಬೊಗಳಬ್ಯಾಡ | ಕಳ್ಳ ನಿಂತಕ್ಯಾಸ ಲಬ್ಬಿ ಹೊಡಿ
ಹೆಚ್ಚಿನ ಮಾತಿಗೆ ಹುಚ್ಚಾಗಿ | ನಮರೂದ ಕಚ್ಚೂತ ನಿಂತಾನ ತನ್ನ ದೌಡಿ
ಶರಣರಿಗೆ ಅಂತಾನ ಬೇಗ ಕರಸಬೇಕ ನಿನ್ನ ಸರಸ ಅಲ್ಲಾಸ ದಂಡ
ನನ್ನ ಎದುರಿಗೆ ಇಬ್ರಾಹೀಮ ಶರಣರು ನಮಾಜು ಮಾಡಿ ಬೇಡ್ಯಾರವರು
ಕಳಿಸಬೇಕ ನೊರಜಿನ ದಂಡಿಗೆ ತೀವರಾ ಬಲ ತಾಬಡ ತೂಡಿ || ೬ ||

ಶಿವಸಾಂಬ ಹುಕುಮ ಕೊಟ್ಟಾ ನೊರಜಿನ ದಂಡ ನಡದಿತ್ತ ಸಗಟಾ
ಎಲ್ಲಾಕು ಹಿಂದ ಬಂತ ಒಂದು ಕುಡ್ಡ ಕುಂಟ ಸಾಂಬಗ ಕೈ ಜೋಡಿ
ಏರು || ಪರಮಾತ್ಮ ಪಾಲಿಸೋ ಅರಜಾ ತಿನ್ನುವೆ ನಾ ನಮರೂದನ ಮಾಗಜಾ
ಸಜ್ಜಾಗಿ ನಿಂತ ನೊರಜಿನ ದಂಡಾ | ಮೋಡ ಬಂದಂಗಾತು ಕವಗೊಂಡಾ
ಒಬ್ಬೊಬ್ಬ ಮನುಷ್ಯಾಗ ಒಂದೊಂದ ನೊರಜಾ | ತಲಿಯಾನ ಮಿದಡ ಕಡಕೊಂಡಾ
ತಿಂದಾವ ದಂಡೆಲ್ಲಾ | ಅಳದಾವ ನಮರೂದ ಓಡಿದಾನ ಉಳಕೊಂಡಾ
ಮನಿಯಾಗ ಕುಂತ ಹೇಳತಿದ್ದಾ ಮಾತಾ | ಅಷ್ಟರೊಳಗ ಕುಂಟ ನೊರಜಾ
ಬಂತ ಆತಗ ಹುಡುಕೂತಾ | ಹಿಡಿಹಿಡಿ ಅನ್ನೊದರೊಳಗ ಹೊಕ್ಕಿತ ಮೂಗಿನ್ಯಾಗ
ಮಿದಡ ಕಡದ ಹೊಡದೀತ ಆ ನಮರೂದಗ ಪರಿಪರಿಲಿಂದ ಕಾಡಿ || ೭ ||

ನಮರೂದನ ಮರಣದ ಕತಿ | ಹೇಳಿದರ ಬಹಳ ಐತಿ
ಇಲ್ಲೀಗೆ ಬಿಟ್ಟೇನಿ ಮಾಡಿ ಮುಕ್ತಿ | ಕಿತಾಬದಾಗ ನೋಡಿ
ಏರು || ಬಾಗಲಕೋಟಿ ಶಾರ | ದೇಶಕ ಜಾಹೀರಾ | ಗುರು ದಸ್ತಗೀರ ಪೀರಾ
ಕೊಟ್ಟಾರ ಸರೂ ಮಾತಿನ್ಯಾಗ ಸಂಪೂರಣಾ | ಕೇಸುಪೀರನ ಹಸ್ತ ತೆಲಿಮ್ಯಾಗ
ಮಸ್ತಕೊಟ್ಟ ಬುದ್ಧಿಗ್ಯಾನ ನಾಗೂ-ಗೌಸು ಹೀಂಗ ಕವಿ ಮಾಡತಾರ
ರವಿ ರವಿಗೆ ಹಚ್ಚಿದಾಂಗ ಕುಂದನಾ | ಅಕ್ಷರಾ ಸುಳಿ | ಜಡದಾಂಗ ಕುಳಿ
ಹಡಕ ಶಾಹೀರಾ ಮಿಡಕ ಮನದಾಗ ಕುಡಿಗೆ ಕುಂತಾಂಗ ಕೋಳಿ
ಹೇಳೋದಕ ನಮ್ಮದಾಟಿ ಬರಬೇಕೋ ಇನ್ನೊಮ್ಮೆ ಹುಟ್ಟಿ
ಹೊರಸೇವಿ ತಲಿಮ್ಯಾಲೆ ಹೆಂಡಿಪುಟ್ಟಿ ಜರಾ ದಮ್ಮ ಹಿಡಿ || ೮ ||

* * *