೧೧. ದಜ್ಯಾಲನ ಮರಣದ ಪದಾ

ಕಡೀ ಮಜಲಾ ಕೂಡಿರಿ ಜನಾ | ಚಿತ್ತಿಟ್ಟ ಕೇಳರಿ ಬಯಾನಾ
ಹಾದಿ ಮಾಡುವೆ ಸಭಾ ರಚನಾ | ಮುಂದೆ ಆಗುವೆ ಖೂನಾ
ಏರು || ಶಾಸ್ತರ ಸಿದ್ದಾಂತ ಬರದ ಇಟ್ಟಾರ ಲಿಖಿತಾ
ತಿಳಿಸುವೆ ನಾನು ಶಿರಬಾಗಿ ಈ ಸಭೆದೊಳಗ ಬಂದ ಕೂಗಿ
ಸಣ್ಣ ದೊಡ್ಡ ಸರೂ ಮಂದಿಗೆ | ನಾ ಮಾಡುವೆ ಶರಣಾ
ನಿಮಗ ಒಂದ ತಿಳಿಸತೇನಿ ಖೂನಾ | ಬಿಡಬ್ಯಾಡ್ರಿ ಇಮಾನಾ || ೧ ||

ದಜ್ಯಾಲ ಅಂಬಾವಾ ಹೀನಾ | ಇರತಾನ ವಂಚರಗಣ್ಣಾ
ಬರತಾನ ಮರ್ತ್ಯೇಕ ಬೇಮಾನಾ | ಕೆಡಸೂಕ ನಮ್ಮ ನಿಮ್ಮನಾ
ಏರು || ನಾನೇ ಶಿವಾ ಸಾಕ್ಷಾತ್ ನಾನೇ ಅದೇನಿ ಜಗಭರಿತಾ
ಅಂತಾನ ಅಂವಾ ಹಗಲೆಲ್ಲಾ | ನನ್ನ ಹೊರ್ತು ಮತ್ತು ಯಾರೂ ಇಲ್ಲಾ
ಮೈ ಖುದಾವೋ ಖಾದರ ಅಲ್ಲಾ | ಮಾಡಿ ಚಂದ್ರಾಮ ತಾನಾ
ಇಲ್ಲದೊಂದು ಚಾಲಾಕಿ ತೋರಸೋಣಾ | ಮರುಳಾಗುವರೋ ಜನಾ || ೨ ||

ನೆಪ್ಪ ಹಿಡಿರಿ ಮರಿಬ್ಯಾಡ್ರಿ ಪುನಾಃ ಕುಂಡರೂದು ಕತ್ತಿ ವಾಹನಾ
ಹನ್ನೆರಡು ಮೈಲು ಒಂದೇ ಸವನಾ | ಆ ಕತ್ತಿ ಬೆನ್ನಾ
ಏರು || ಜೀನ ಹಾಕುವಾ ಭರ್ಜೇರಾ ತರದಾ | ಎಡಗಾಲಿರತೈತಿ ಬಿಳಿದಾ
ಹೋಗಿ ನಿಂತಾರ ಸಮುದ್ರದಾಗ | ನೀರ ಬರೂದಿಲ್ಲ ಮೊಳಕಾಲ ಮ್ಯಾಗ
ಬ್ರಹ್ಮಲಿಖಿತ ಕತ್ತಿ ಹಣಿಮ್ಯಾಗ | ಕೆಟ್ಟ ಸೈತಾನಾ
ಯಾತರದು ಇಲ್ಲದೆ ಗುಮಾನಾ | ಒದರೂದು ಒಂದೇ ಸವನಾ || ೩ ||

ಬಲುಮಂದಿ ಹತ್ತುವರು ಬೆನ್ನಾ | ತಿಳಿಲಾರದು ಆತನ ಗುಣಾ
ನೀನೇ ಕಾಯುವನೋ ನಮ್ಮನಾ | ಸತ್ತೇ ಭಗವಾನಾ
ಏರು || ಎಡಕ ಒಂದ ಬಲಕ ಒಂದ | ಗುಡ್ಡ ಬರತಾವ ಆತನ ಹಿಂದ
ಬಲಗಡಿ ಗುಡ್ಡ ಬಹು ಅನಲಾ | ಬಲು ಚೈನ ಇರುವುದು ರಂಗಮ್ಹಾಲಾ
ಅಲ್ಲಿ ತೋರಸ್ಯಾನ ಸ್ವೊರಗದ ಲೀಲಾ | ನಾ ಹೇಳಿದ ವಚನಾ
ಪಾಲಿಸಿದವರಿಗೆ ರಸ್ತಾ ನಾ | ಇಡತೇನಿ ಸಂಪೂರಣಾ || ೪ ||

ಎಡಗಡಿ ಗುಡ್ಡಾ | ನರಕದ ಖೂನಾ | ಬೆಂಕಿಯದು ಅಳತಿಲ್ಲಾ ಏನಾ
ಹಾಂವ ಚೋಳ ವಿಷ ಹಾಕಿ ಸಾಮಾನಾ | ತುಂಬೀದ ಸಾಮಾನಾ
ಏರು || ನನ್ನ ಮಾತ ಯಾರು ಕೇಳುವರಿಲ್ಲಾ | ಮಾಡೇನಿ ನರ್ಕದ ಪಾಲಾ
ಕೈಕಾಲ ಕಟ್ಟಿ ಆತಗ | ಒಗೂತೇನಿ ಇದೇ ಬೆಂಕ್ಯಾಗ
ಬಲು ಮಂದಿ ಅಂಜಿ ಆವಾಗ | ಅಂವಗ ಮಾಡ್ಯಾರ ಶರಣಾ
ಹೌದಂತಾರ ಸತ್ಯೆ ಭಗವಾನಾ | ನಿರವಾ ಇಲ್ಲದಿನ್ನಾ || ೫ ||

ಸುತ್ತಂತಾ ತಾಯಿ ತಂದಿನಾ | ಅಜ್ಜಿ ಮುತ್ಯಾಮರಿ ಮಕ್ಕಳನಾ
ಸಾಕ್ಷಾತ್ ದಜ್ಯಾಲ ತೋರಿಸೂಣಾ | ಬಿಟ್ಟಾರ ಇಮಾನಾ
ಏರು || ಖಾತ್ರಿ ಮಾಡಿ ಸರೂ ಮಂದಿಗೆ | ವಿದ್ಯಾವಂತ ಬುದ್ದಿವುಳ್ಳವರಿಗೆ
ಬಡದೀತ ಆವಾಗ ಭ್ರಾಂತಿ | ತಿರುಗುವರು ಅವನ ಬೆನ್ನ ಹತ್ತಿ
ಖರೇ ಹೌದ ಇಂವಾ ಜಗಪತಿ | ಸಂಶೆ ಇಲ್ಲ ಏನಾ
ಮುರದಾನ ದೊಡ್ಡ ದೊಡ್ಡ ದೇವಸ್ಥಾನ ಭೂಮಂಡಲವನಾ || ೬ ||

ತಿರುಗಾಡಿ ಸರೂ ಎಲ್ಲಾ ಭವನಾ | ಮಾಡಿಕೊಂಡ ತನ್ನ ಸ್ವಾಧೀನಾ
ಬಾಕಿ ಮುಂದ ಒಂದ ಉಳೀತ ಇನ್ನಾ | ಮಕ್ಕಾ ಮದೀನಾ
ಏರು || ಅಲ್ಲಿಗೆ ಹೋಗಿ ಮಾಡ್ಯಾನ ಮೆಟ್ಟಾ | ನಡಿಸಿದಾನ ತನ್ನ ಕಾಡಾಟಾ
ಬಲುಮಂದಿಗೆ ಕೊಟ್ಟಾನು ಈಜ್ಯಾ | ಇಮಾಮೆ ಮೆಹದಿ ಸರತಾಜಾ
ಅವರು ಮಾಡ್ಯಾರ ಶಿವನ ಕಡಿ ಅರಜಾ | ಬಂದಾನ ದುಷ್ಮಾನಾ
ಕಾಯಬೇಕ ಮಾನಾಭಿಮಾನಾ | ಪ್ರಶಂಸಾಗಿ ನೀನಾ ||೭||

ಮಾದೇವಗ ಹುಟ್ಟಿತ್ತ ಕರುಣಾ | ಕಬೂಲ ಮಾಡಿ ಅವರ ವಂದನಾ
ಹುಟಸ್ಯಾನ ಈಸಾ ಶರಣರನಾ | ದಜ್ಯಾಲನ ಮರಣಾ
ಶರಣ ಕಿತ್ತ ಹೊಡದಾರ ಕೋಲಾ | ತಲಿವೊಡಿದು ಆದೀತು ಟಿಸಿಲಾ
ದಜ್ಯಾಲಗ ಮಾಡ್ಯಾರ ನಷ್ಟಾ | ದೂರ ಆತ ಬಂದ ಅರಿಷ್ಟಾ
ಬಾಗಲಕೋಟಿ ಗಂಡಮೆಟ್ಟಾ | ಗುರು ದಸ್ತಗೀರನ ವಚನಾ
ಕೇಸುಪೀರ ಆದಾರ ಪ್ರಶಂಸಾ | ನಾಗೂ-ಗೌಸೂನಾ || ೮ ||

* * *

೧೨. ಬಾವಾನಿಗೆ ದಾನಾ ಮಾಡಿದ ಪದಾ

ಮಿಕ್ಕಿ ಸಭಾ ಲಕ್ಕ ಕೂಡಿರಿ ನಿಮ್ಮ ತಕ್ಕ ತಿಳಿಸುವೆ ನಾ
ಏರು || ಚಿಕ್ಕ ಬಾಲಕಯಿದ್ದು ಕಲ್ಪಣಾ | ತಗದ ಹೇಳುವೆ ಶಾಸ್ತರ ಧುರೀಣಾ
ಕುಂತ ದೈವಕ ನಾ ಮಾಡಿ ಕರುಣಾ | ಒಬ್ಬ ಅರಸನು
ಮಹಾ ಮೂರ್ಖನು ಗರ್ವಿಷ್ಟನು | ಇಟ್ಟ ಅಹಂಕಾರ ಸಿಟ್ಟ ಆಳುನಾ
ಅನುಭಾವಾ ತಿಳಿಪಡಿಸುವೆ ಸರೂದೈವಕ ಮಾಡಿ ರಚನಾ || ೧ ||

ದುಷ್ಟ ಅರಸ ಕೆಟ್ಟಮನಸ ಹುಟ್ಟಿ ಎಂದು ಮಾಡಿಲ್ಲಾ ದಾನಾ
ಏರು || ಎಂಥ ಪಾಪಿಷ್ಟ ಪುಣ್ಯದ ಮಾರ್ಗ
ಬಿಟ್ಟ ಕರ್ಮದ ಹಾದಿ ಹಿಡಿದಾನ ಹೀಂಗ
ಡಂಗೂರ ಹೊಡಸ್ಯಾನ ತನ್ನ ಊರೊಳಗ | ಯಾರಾದರ ಇಲ್ಲೆ ಬಂದರ
ಬಹು ಎಚ್ಚರಾ | ಆಗಿ ಮನಸ ಮಾಡಿದರ ದಾನಾ | ಆಕ್ಷಣಾ
ಕಡದ ಕೈಯ ಊರ ಹೊರಗ ಹಾಕುವೆ ನಿಮ್ಮನ್ನಾ || ೨ ||

ವರ್ತಮಾನ ಕೇಳಿ ತುರ್ತ ಗಾಬಾಗ್ಯಾರ ಎಲ್ಲಾ ಜನಾ
ಏರು || ಒಬ್ಬ ಸನ್ಯಾಸಿ ಒಳ್ಳೆ ಹಸು ಆಗಿ
ಅಸನ ಊರಾಗ ಮನಿಮನಿಗೆ ಹೋಗಿ
ಭಿಕ್ಷಾ ಬೇಡತಾನ ಊರೆಲ್ಲಾ ತಿರುಗಿ | ಯಾರೊಬ್ಬರು ಅನ್ನಾದರು ಕೊಡವಲ್ಲರು
ಅಂಜಿ ಅರಸಗ ಮಾಡಲಿಲ್ಲ ದಾನಾ ಊರ ಜನಾ
ಹಸ್ತ ಸನ್ಯಾಸಿ ಬಾಯಿಕಿಸ್ತ ನಿಂತಾನ ಆಕ್ಷಣಾ || ೩ ||

ಇ|| ಏನ ಹೇಳಲಿ ನೆರೆದ ಸಭಾದಲ್ಲಿ ಸೃಷ್ಟಿಕರ್ತನ ಕರುಣಾ
ಏರು || ಕಷ್ಟ ತಾಳದೆ ಬಾವಾ ಮತ್ತ ಮುಂದಕ ಹೋಗಿ ನಿಂತ ಅಂತಾನ
ಬಾಗಿಲ ಹಿಡಿದ ಆಕ್ಷಣಕ ಹಸ್ತೇನಿ ಉಣಿಸುವಂತ ರೊಟ್ಟಿ ತುಣಕಾ ||
ಆ ವೈಯಾರಿ | ಕೇಳಿ ಬೆದರಿ | ನಾನಾ ಪರಿ
ಕೇಳ ನಮ್ಮ ಅರಸ ನಾನು ಕೊಟ್ಟರ ದಾನಾ | ನನ್ನ ಪ್ರಾಣಾ
ಉಳಿಯಲಿಕ್ಕಿಲ್ಲ | ತುಸು ಇಲ್ಲ ಆತಗ ಕರುಣಾ || ೪ ||

ಆಹಾದೇವಾ ಅಂತಬಾವಾ ಬಿದ್ದ ನೆಲಕ ಇಲ್ಲದಾಂಗ ತ್ರಾಣಾ
ಏರು || ಬಾಲಿ ಬಾವನ ನೋಡದೆ ಮರಗ | ಅಂತಕರಣ ಹುಟ್ಟಿ ಮನದೊಳಗ
ಓಡಿ ಹೋಗ್ಯಾಳ ಅಡಗಿ ಮನಿಯೊಳಗ | ಅವಸರಲೆ ಬಹು ಪ್ರೀತೀಲೆ
ತನ್ನ ಹಸ್ತೀಲೆ ತಂದಾಳ ಓಡಿ ದೈರ್ಯ ಮನಮುಟ್ಟಿ
ಎರಡು ರೊಟ್ಟಿ ಕರದು ಕೊಟ್ಟಾಳ | ಬಾವಾ ಆನಂದ ಆಗ್ಯಾನ ಆದಿನಾ || ೫ ||

ಈ ಸುದ್ದಿ ಮುಟ್ಟಿತ ಅರಸಗ ಭ್ಯಾಗ | ಕರಿಕಳಿಸ್ಯಾನ ಆಕಿನಾ
ಏರು || ಕರಸಿ ಬಾಲಿಯ ಕೈ ಕಡದಾನ ಆಗ | ಅರಸಗ ಆಗಿ ಸಿಟ್ಟ ಮನದೊಳಗ
ಇಡಲಿಲ್ಲ ಆಕಿಗೆ ಹಾಕ್ಯಾನ ಊರಹೊರಗ | ದುಃಖ ಮಾಡೂತ
ಹೀಂಗ ನೆನಸುತ್ತ ಶಿವನ ಹೊರ್ತ | ಯಾರಿಲ್ಲಾಂತ ತಿಳಿದ ತನ್ನಕ
ಚಿಕ್ಕ ಬಾಲಕ ಇತ್ತ ಬಗಲಾಗ | ಹೋಗಿ ಸೇರ‍್ಯಾಳ ಅಡವಿ ಆರ‍್ಯಾಣಾ || ೬ ||

ನೀತಿವಂತ ಬೀತಿಗೆಟ್ಟ ಅತಗೊಂತ ತಿರುಗುವಳೋ ಮೋಹನಾ
ಏರು || ಕೆಟ್ಟ ಮಹಾ ಮದ್ಯಾನ ಬಿಸಲಾ ನೀರಡಿಸಿ ಒಣಗಿತ್ತ ಗಂಟಲಾ
ಕೂಸ ಅಳತಿತ್ತ ಅಳತಿದ್ದಿಲ್ಲಾ | ಮನಮೋಹಿತ
ನೋಡಿ ರಂಬಿಸೂತ | ನೀರ ಹುಡುಕೂತ
ಹೊಂಟಾಳ ಹೋಗಿ ಕಂಡಾಳ ಚದುರಿ ಮಿರಿಮೀರಿ
ಹರುತಿತ್ತ ಹಳ್ಳದಾಗ ನೀರು ಒಂದೇ ಸವನಾ || ೭ ||

ಹರುಷಾಗಿ ಓಡಿಹೋಗಿ ನೀರ ಕುಡಿಲಿಕ್ಕೆ ಬಾಗಿದ್ದಕ್ಷಣಾ ||
ಏರು || ಬಗಲಾಗ ಇದ್ದಂತಾ ಕೂಸು ಜಾರಿ ಬಿತ್ತು
ಹಿಡಿಬೇಕಂತ ಅನ್ನುದರೊಳಗ ಮುಳಗಿತ್ತು
ಅಳತಾಳ ಹಳ್ಳದ ದಂಡಿಮ್ಯಾಲೆ ಕುಂತು
ಶಿವಶಂಕರಾ ಅಯ್ಯೋ ಹರಹರಾ ಏನ ಹಣಿಬಾರಾ
ಬರದಿ ಬ್ರಹ್ಮಾ | ನಾ ಮಾಡಿದ್ದೆ ಧರ್ಮಾ
ಸುಮ್ಮಾ ಸುಮ್ಮಾ ಕರಮ ಒದಗಿತ್ತ ಬಂದ ಎಂಥ ಹಸ್ತಗುಣಾ || ೮ ||

ಜಗದೊಳಗ ಇನ್ನ ಹ್ಯಾಂಗ ಈಗ ಬಿಟ್ಟ ಇರಲಿ ಮಗನ್ನಾ
ಏರು || ಶಿವನ ಅಪ್ಪಣಿಲಿಂದ ಯಮದೂತರು
ನರಜನ್ಮ ಅವತಾರ ತೊಟ್ಟ ಇಬ್ಬರು
ಬಂದ ನಿಂತ ಇದರಿಗೆ ಕೇಳುವರು
ಇಷ್ಟಯಾತಕ ಮಾಡತಿ ದುಃಖಾ | ಬಿದ್ದ ನೆಲಕ
ಕೇಳಿ ಕೊಟ್ಟಾಳ ಉತ್ತರಾ | ನನ್ನ ಕೂಸ ರಾಜಹಂಸಾ
ಮುಳುಗಿ ಸತ್ತಾನ ನೀರಿನೊಳಗ ಹೇಳಲಿ ಏನಾ || ೯ ||

ಇಷ್ಟ ಮಾತ ಯಮದೂತ ಹೇಳಿ ತುರ್ತ ಮುಳುಗಿ ಆಕ್ಷಣಾ
ಏರು || ತಂದಾಕೂಸಿಗೆ ಜೀಂವದರಿಸಿ ಮ್ಯಾಲೆ
ಕೊಟ್ಟಾನ ಸುಂದರಿ ಹಸ್ತದಲ್ಲೆ | ಅಪ್ಪಿಕೊಂಡಾಳ ತಾಯಿ ಪ್ರೀತೀಲೆ
ಮತ್ತೊಬ್ಬನು ಯಮದೂತನು ಹಸ್ತವನ್ನು ಹಚ್ಚಿದ ಕೂಡಲೆ
ಹಸ್ತ ನೆಟ್ಟಗಾಯಿತು ತಿಳಿದು ಬಂತು
ಆಗ ನಾರಿಗೆ ಬ್ಯಾಗ ಆತ ಸಮಾಧಾನಾ || ೧೦ ||

ತಿಳಿದಿಲ್ಲಾ ನಿಮ್ಮ ಕುಶಲಾ | ತುಸು ತಿಳಿಸಬೇಕರಿ ನನ್ನಾ
ಏರು || ದಾನಾ ಮಾಡಿದಿ ರೊಟ್ಟಿ ಬಾವಾಗ ಎರಡು
ದುಷ್ಟ ಅರಸಾ ಕಡದಾ ಕೈ ನಿನ್ನ ತಿಳಿದ ನೋಡು
ಕಷ್ಟ ಸೋಸಿದ್ದಿ ಝಲ್ಲಾ ಬಿಟ್ಟು ಬಿಡು
ಪಡದಿ ಆನಂದಾ ಪುಣ್ಯಯಲಿಂದಾ ಕೇಳವ್ವಯಿಂದಾ ||
ಬಂದೇವಿ ಇಬ್ಬರು ಪುಣ್ಯೆ ಮಾಡಿದ್ದಕ ನೀ ಕೇಳ ರಮಣಿ
ಉಳಿಸಬೇಕಾತ ರೊಟ್ಟಿ ದಾನಾ ಮಾಡಿದ ಕಾರಣಾ || ೧೧ ||

ಬಲ್ಲಾಂವಾ ಅನುಭಾವಾ ಕೇಳಿ ತಲಿ ತೂಗುವಾ ಜಾಣಾ
ಏರು || ಪ್ಯಾಟಿ ಪಟ್ಟಣಾ ಬಾಗಲಕೋಟಿ | ಶ್ರೇಷ್ಟವಾದಂತ ವೆಂಕಟಪ್ಯಾಟಿ
ಕಳಿಸುವೆ ಶಾಹಿರನ ಕುಂಡಿ ಸುಟ್ಟಿ
ದುಡಕಿದರ ಕೇಳೋ ಗಂವಾರಾ ಬಹು ಎಚ್ಚರಾ
ಸಂಪೂರ್ಣಾ ಮಡ್ಡಿ ಪೀರಾನ ದಯಾ | ಹುಸೇನಮಿಯಾ
ಅಂತಾರ ನಿಂತಕವಿ ಮಾಡಿ ಬಹುರಚನಾ || ೧೨ ||

* * *

೧೩. ಕಾಬಾ ಕೆಡುವಲು ಹೋಗಿ ಮಣ್ಣು ಮುಕ್ಕಿದ ಅರಸ

ಮಾಡಿ ದೈವಕ ವಿನಂತಿ | ಶಾಹೀರಗ ತಿಳಿಸುವೆ ನಡತಿ
ಶಬ್ದಾದ ಅರಸಗ ಎಷ್ಟು ಬೆಳಸಿ ಹಾಡತಿ ಕೈಮಾಡಿ ತಲೆತೂಗಿ
ಏರು|| ಎಂತೆಂಥವರು ಇಟ್ಟ ಪಂಥ ಮುಕ್ಯಾರ ಮಣ್ಣಾ ನಾ ಶ್ರೇಷ್ಟಾಂತಾ
ಅಬ್ರಾಹಂ ಅರಸ ಯೆಮನ ಪಟ್ಟಣದ ಪಟ್ಟ ಆಳತಿದ್ದಾ ಇಟ್ಟ ಗರು |
ಹಾಜಿಮಂದಿ ಮಕ್ಕಾ ಮದೀನಾ | ಕಾಬೇದುಲ್ಲಾಕ ಹೋಗುವರು
ಸುತ್ತ ದೇಶದ ಜನರೆಲ್ಲಾ ಅಲ್ಲಿಗೆ ಬಂದ ಸಿರಿಯವರು ಮಿಕ್ಕಿಜನಾ
ಸಂಪೂರ್ಣಾ ದಾನ ಮನ ಬಲ್ಲಾಂಗ ಮಾಡುವರೋ ನಮಾಜ ಆದಕ್ಷಣಾ
ಕಂಡ ಅಬ್ರಾಹಂ ಅರಸ ಇಟ್ಟ ತನ್ನ ಮನದಲ್ಲೆ ಕುನಸ
ಇದರಕ್ಕಿಂತ ಒಳ್ಳೆಮಿಕ್ಕಿ ಕಾಬೇದುಲ್ಲಾ ಭಾಗ ಮಾಡುವೆ ಸೊಚ್ಚಾಗಿ || ೧ ||

ಇದರಂತೆ ಪಣಾತೊಟ್ಟ ಥರಾಹಾಕಿ ಗ್ವಾಡಿಕಟ್ಟಿ
ಕಾಬಾ ತಯ್ಯಾರ ಮಾಡ್ಯಾನ ಮನಕಟ್ಟಿ ಏನ ಶ್ರೀಂಗಾರ ಆಗಿ
ಏರು || ಅದರ ನಡುವೆ ಮೆಂಬರ ಒಂದ ಸಂಗಮರಮರ ಕಲ್ಲಿಂದ
ತಯಾರ ಮಾಡಿಸಿ ಹೋಗಿ ಬರುವ ಮಂದಿಗೆ ತೋರಿಸಿ ಅಂತಿದ್ದಾ
ನೋಡಿರಿ ಕಾಬಾ ತಯ್ಯಾರ ಮಾಡೇನಿ ಅದರಕ್ಕಿಂತಾ ಒಳೇ ಹೆಚ್ಚಿಂದಾ
ಆ ಕಾಬೇಕ ಹೋಗದೆ ಯಾತ್ರಾ ಮಾಡಬೇಕರಿ ಇಲ್ಲಗೆ ಬಂದಾ
ರಂಬಿಸಿ ಕರಕರಸಿ ದುಷ್ಟ ಅರಸ ಕಷ್ಟ ಪಡದಾ
ಬ್ಯಾಸೊತ್ತ ತಿಳಿತಿಳಿಸಿ ಯಾರೊಬ್ಬರು ನನ್ನ ಮಾತ ಕಡಿಗೆ ಕೇಳಲಿಲ್ಲಾ ಅಂತಾ
ಅರಸ ಮನಿಯಾಗ ವಿಚಾರ ಮಾಡುವಾ ಕುಂತ ಮನದಲ್ಲೆ ಸಿಟ್ಟಾಗಿ || ೨ ||

ಸೊಗಸಿಲ್ಲ ಎನ್ನ ಮನಸ ತಡಮಾಡದೆ ಹೋಗಿ ಖಾಸ
ಕೆಡುವೆ ಕಾಬೇಕ ಮಾಡಿ ಬರುವೆ ನಾಶ ಈ ನೆಲಸಮನಾಗಿ
ಏರು || ಅಷ್ಟರಲ್ಲಿ ಪುರುಷ ಒಬ್ಬ ಬಂದಾ ಅರಬಸ್ತಾನ ಪಟ್ಟಣಲಿಂದಾ
ಅಬ್ರಾಹಂ ಅರಸ ಮಾಡಿದ | ಕಾಬೇದ ಖಾದಿಮ ಆಗಿ ಇದ್ದಾನು
ಆದಿನ ಅರಸಗ ಗೊತ್ತಿಲ್ಲದಾಂಗ ರಾತ್ರಿ ಮಸಲತ್ ಮಾಡಿದನು
ಕಾಬೇದೊಳಗ ಇದ್ದಂತಾ ಬದಕಾ | ತಗೊಂಡ ಓಡಿ ಹೋದನು
ಬೆಳಗಾಯಿತು ಹೊತ್ತು ಏರಿತು | ಬಂದ ಅರಸ ನೋಡ್ಯಾನು
ಖಾದೀಮ ಕಾಣದಾಂಗ ಆಯಿತು | ಇದ್ದಂತ ಬದುಕ ಎಲ್ಲಾ
ಕಟ್ಟಿ ಬೈದಾನಲ್ಲಾ ಸಿಟ್ಟಾಗಿ ಅರಸ ಹಲ್ಲ ತಿಂತಾನಲ್ಲಾ | ಅವನ ಕೊಲ್ಲುವದಕ್ಕಾಗಿ || ೩ ||

ಕರಿಸಿ ತನ್ನ ಸೈನ್ಯಮುಂದ ತಿಳಿಸುವಾ ಮನಸ್ಸಿನಿಂದ
ಹೋಗಿ ಕಾಬಾ ಕೆಡವಿ ಬರೂನ ಇಂದು ಅಂತಾನ ಸಿಟ್ಟಾಗಿ
ಏರು || ತಯ್ಯಾರ ಮಾಡರಿ ದಂಡ | ಶಮರಂತವರಿಗೆ ಕಂಡ ಕಂಡ
ಕರಕೊಂಡ ನಡಿಯಿರಿ | ಕೆಡವಿ ಕಾಬೇಕ | ಬರೂನು ಮನದಲ್ಲಿ ಚೈನಯಿಲ್ಲಾ ||
ಕೇಳಿ ತಯ್ಯಾರ ಮಾಡಾನ ದಂಡ | ಕುದುರಿ ಒಂಟಿ ಆನಿಗೆ ಜೂಲಾ
ಕಟ್ಟಶ್ಯಾನ ಅಂಬಾರಿ ಮಿತಿಮೀರಿ ದಂಡ ಏನ ಹೇಳಲಿ ಲೆಕ್ಕ ಇದ್ದಿಲ್ಲಾ
ಹೊಂಟಾರ ಮಹಾಮುಡದಾರ | ಹೋಗೂವ ದಾರ‍್ಯಾಗ
ಅರಬಸ್ತಾನ ಮಂದಿ ಕಂಡರ | ಕೊಲ್ಲುತಿದ್ದಾ ಕರಣ ಇಲ್ಲದಾಂಗ
ಹರುಷಾಗಿ ಮನಬಲ್ಲಾಂಗ  ಇದರಂತೆ ಕಡಕೊಂತ
ಮುಟ್ಯಾನ ಒಂದು ಕ್ಷಣದಾಗ ಬೈದುಲ್ಲಾಕ ಹೋಗಿ || ೪ ||

ಕಂಡ ಅರಸನ ದಂಡ ದರಬಾರ ಅಲ್ಲೆ ಇದ್ದಂತಾ ಜನರಾ
ಓಡಿ ಹೋಗಿ ಸೇರ‍್ಯಾರ ಗುಡ್ಡ ಗಂವಾರಾ ಎಲ್ಲಾರು ಗಾಬಾಗಿ
ಗಿಡಗಂಟಿಗೆ ಮಂದಿ ಮಿಕ್ಕಿ ಕುಂತ ಕೊಂಡಾರೊ ಹಣಹಣಕಿ
ಆನಿ ಒಂಟಿ ಕುದುರಿಯ ಮ್ಯಾಲೆ ಕುಂತ ಜನರೆಲ್ಲಾ ಇಳಿದಾರು
ಕಾಬೇದುಲ್ಲಾ ಸ್ವತಃ ಕೈಲಿಂದ ಕೆಡುವಬೇಕಂತ ಹೋದಾರು
ಹೋಗಿ ಸಮೀಪ ಅಂಜಿಕಿ ಹುಟ್ಟಿ ಹಿಂದಕ ತಿರುಗಿ ಬಂದಾರು
ಮತ್ತು ಪುನಾಃ ಅರಸನ ಜನಾ ಹತ್ಯಾರ ಆನಿ ಒಂಟಿ ಕುದುರಿ
ಮ್ಯಾಲೆ ಆಕ್ಷಣಾ ಅಬ್ರಾಹಂ ಅರಸ ಮೊದಲಾ
ಮಹಮೂದ ಅಂಬುವ ಆನಿಯ ಮ್ಯಾಲಾ ಹತ್ತಬೇಕಂತ ಹೋಗ್ಯಾನ
ಹತ್ತಗೊಡಲಿಲ್ಲಾ ನಿಂತಾನ ಹೈಪಾಗಿ  || ೫ ||

ಆ ಆನಿಗೆ ಹಿಂದಕ ಒತ್ತಿ ಮತ್ತೊಂದು ಆನಿಯಮ್ಯಾಲೆ ಹತ್ತಿ
ಕುಂತಾನ ತಲಿಮ್ಯಾಲೆ ಜರಕಾಟಿ ಮಂದೀಲ ಸುತ್ತಿ ತಾ ಮನದಲ್ಲಿ ಹಿಗ್ಗಿ
ಏರು || ಏಕಂದರ ದಂಡ ಪುಂಡ ಕುಂತು ಹೊಂಟಾರ ಮನಗಂಡು
ಅಷ್ಟರೊಳಗ ಆ ಸೃಷ್ಟಿಕರ್ತನ ಕೃಪಾದಿಂದ ಅಬಾಬಿಲ ಒಂದಾ
ಹಾರಾಡಿಕೊಂತ ಪಕ್ಷಿಕಾಲಾಗ ಹಿಡಕೊಂಡು
ಸಣ್ಣ ಸಣ್ಣ ಹಳ್ಳ ಮ್ಯಾಲಿಂದ ಒಗದರ ಟುಬಾಕಿ ಒಗತಾ
ಒಗದಾಂಗ ಆಗೂದು ಕೇಳರಿ ಗೋಳ ಹಳ್ಳ ಒಂದೊಂದ
ಬಂದ ಮ್ಯಾಲಿಂದಾ ಬಿದ್ದಕ್ಷಣಾ ನೆಟ್ಟ ಹೊಟ್ಯಾಗ ಪಾರ ಆಗೂದು
ಮುಕಳಿಯಲಿಂದಾ | ಒಬ್ಬೊಬ್ಬರ ಹಾರಿತ್ತ ಪ್ರಾಣಾ ದಂಡೆಲ್ಲಾ ಸರೂ ಸಂಪೂರಣಾ
ಗೊತ್ತ ಆತ ನೋಡಿ ಅರಸ ಅಂತಾನ ಬೇಮಾನಾ ಮೈ ಥರ ಥರ ನಡುಗಿ || ೬ ||

ಆನಿ ಒಂಟಿ ಕುದುರಿ ಎಲ್ಲಾ ಸತ್ತ ಹ್ವಾದಾವು ಉಳಿಯಲಿಲ್ಲಾ
ಉಳದ ಅರಸ ಓಡಿಹ್ವಾದಾ ಜೀವದ ಕಬರಿಲ್ಲಾ ತಾ ಉಳುವ ಸಲುವಾಗಿ
ಏರು || ಅಬಾಬಿಲ ಒಂದೇ ಸವನಾ | ಬಿಡಲಿಲ್ಲಾ ಹತ್ತಿತ್ತ ಅವನ ಬೆನ್ನಾ
ಅರಸ ಮನಿಯಾಗ ಕುಂತ ಮಂದೀಗೆ ದಂಡ ನಷ್ಟ ಆಗಿದ್ದ
ಮಜಕೂರ ತಿಳಿಸುವಷ್ಟರಲ್ಲಿ ಅಬಾಬಿಲ ಹಾರತಿತ್ತ ಅರಸನ ಇದರಾ
ಕಂಡ ಅರಸ ಮಂದಿಗೆ ತೋರಸತಾನ ಇದ ಪಕ್ಷಿಯ ಪ್ರಕಾರಾ
ಇತ್ತೊ ಎಲ್ಲಾ ದಂಡಿನ ಮ್ಯಾಲಾ ಹಾರಿಕೊಂತ ಹಳ್ಳ ಒಗದ
ದಂಡ ಮಾಡ್ಯಾರ ಮಣ್ಣಿನ ಪಾಲಾ ಏನ ಹೇಳಲಿ ಮಣ್ಣಿನ ಗೋಳ
ಅಂತ ಹೇಳು ತನಕ ಒಂದ ಹಳ್ಳ ಬಿತ್ತರಿ ಹೊಟ್ಟಿಯ ಮ್ಯಾಲೆ
ಹೊರಗಬಿದ್ದಾ ಸತ್ತಾನ ಮರಮರಗಿ || ೭ ||

ಕಾಬೇದುಲ್ಲಾ ಮುರಿಬೇಕಂತಾ ದುಷ್ಟ ಅರಸಾ ಇಟ್ಟಿದ್ದಾ ಪಂತಾ
ಮುಕ್ಕಿ ಮಣ್ಣಾ ನರಕಗ ಹ್ವಾದಾ ಹೋಯ್ಕೊಂತಾ ತನ್ನ ಕರ್ಮಕ್ಕಾಗಿ
ಏರು || ಉಳೀತ ಕಾಬಾ ಕೆಡಲಿಲ್ಲ ಕಡಿಗೆ | ಶಿವನ ದಯಾದಿಂದ ಇನ್ನೂವರಿಗೆ
ಸುತ್ತ ದೇಶದ ಜನಾ ಕೂಡುತಾರ ಇನ್ನೂವರೆಗೆ ದರವರ್ಷಕ
ಯಾತ್ರಾ ಮಾಡಿ ಹಾಜಿ ಆಗಿ ಬರತಾರ ನಡದೈತಿ ಇನ್ನೂತನಕ
ಮಹಾಪಂಡಿತರು ಕೂಡಿರಿ ಕೇಳಿ ಅಲ್ಮತರಾಜಾದಿ ನೋಡಬೇಕ
ಸಂಪೂರ್ಣಾ ತಿಳಿಸಿನಿ ನಾ ಜಾಹೀರ ಮರತೇಕ ಬಾಗಲಕೋಟಿ ಪ್ಯಾಟಿ ಪಟ್ಟಣಾ
ಪೀರಮಲ್ಲೇಕಲ್ಲನ ಗಂಧ ಏರಸುವೆ ಪ್ರೀತಿಯಲಿಂದ
ವೈರಿ ಇದ್ದಾಂವಾ ಹುಸೇನಮಿಯ್ಯಾನ ಮುಂದ ಬಂದು ನಿಂತಾನ ಡೊಗ್ಗಿ || ೮ ||

* * *

೧೪ಜಿಬರಾಯಿಲ್ ಇಸರಾಫಿಲ್ ಮಾಡಿದ ಪವಾಡ

ಕುಂತಿರು ಸಭಾ ಬಂದ ಖುಷಿಯಾಲಾ
ಅಂತೇನಿ ನಾನು ನಿಮ್ಮ ಸಣ್ಣ ಬಾಲಾ || ಪಲ್ಲವಿ ||
ಏರು || ನನ್ನ ಕಡಿ ಆದರ ತಪ್ಪಾ | ದೈವಾ ನೀವು ಮಾಡರಿ ಮಾಫಾ
ಬಿಟ್ಟ ಮನದಾನ ನಿಮ್ಮ ಕೋಪ
ಅಜ್ಞಾನಿ ಇದ್ದೀನಿ ಸುಜ್ಞಾನಿ ದೈವದ ಮುಂದ
ಇದು ಒಂದ ಪಸಂದ ತಗದೇನಿ ಬಯ್ಯಾನಾ ಬಹು ಅಸಲಾ || ೧ ||

ಜಿಬರೀಲ ಇಸ್ರಾಪೀಲ ಶಾಮಿಲಾ | ಸಾಂಬಗ ಕೇಳತಾರೋ ಸಾನುಕೂಲಾ
ಏರು || ಬೆಂಕಿಲಿಂದ ಹುಟ್ಟಿಸಿದಿ ನಮಗ | ಮಣ್ಣೀಲೆ ಹುಟ್ಟಿಸಿದಿ ಮಾನವಂಗ
ಬಹಳ ಪ್ರೀತಿ ನೀ ಅವರ ಮ್ಯಾಗ
ಚ್ಯಾಲ || ಹುಚ್ಚಾಗಿ ಇಚ್ಚಾಗಿ ಹೆಚ್ಚಿಗೆ ಏನ ನಮಕ್ಕಿಂತಾ
ಅತ್ಯಂತಾ ಭಗವಂತಾ ಕಾರಣ ಇದು ನಮಗ ತಿಳೂದಿಲ್ಲಾ || ೨ ||

ಇ|| ಹಗಲಿರುಳು ನಾವು ನಿನಗೆ ಇಟ್ಟ ಖ್ಯಾಲಾ
ಇರತೇವಿ ತಾಬೇದಾಗ ಸದಾಕಾಲಾ
ಏರು || ಮಹದೇವ ಕೊಟ್ಟಾನ ಉತ್ತರಾ | ಭೂಮಿಮ್ಯಾಗ ಹೋಗರಿ ಒತ್ತರಾ
ಆಗ ಕಂಡ ಬಂದಾವ ನೇತ್ರಾ
ಚ್ಯಾಲ || ಮಾನವರು ಎಂತವರು ಇರತಾರ | ಅನ್ನೂದು ನಿಮಗೈತಿ ಗುಮ್ಮಾ
ಆತ ಹುಕುಮಾ ಹೊಂಟಾರ ಜಿಬ್ರಾಯಿಲ ಇಸರಾಫೀಲ್ || ೩ ||

ಒಂದ ಊರ ಕಂಡು ಇಬ್ಬರು ಅಗಲ್ಯಾರಲ್ಲಾ |
ಇಳದಾನ ಮಸೂತಿವೊಳಗ ಇಸರಾಫಿಲಾ ||
ಏರು || ವೈದ್ಯಗಾರ ಆಗಿ ಜಿಬರಾಯಿಲರು ಪ್ಯಾಟಿವೊಳಗ ಹೋಗಿ ಕುಂತಾರು
ಸಾವು ಜಲ್ಮಾ ಉಳಿಸುವೆ ನಾನು
ಚ್ಯಾಲಿ || ಬೇಕಾದ್ದ ಔಷಧ ಪಸಂದ ಬಿದ್ದರ | ಒಯ್ಯರಿ ಖಾತ್ರಿ ಮಾಡಿಕೊಳ್ಳಿರಿ
ಇಸರಾಫಿಲ್ ಮಸೂತಿವೊಳಗ ತಗದಾನ ಅಕಲಾ || ೪ ||

ಇ|| ಹೊಟ್ಟಿ ಕಡತ ಎದ್ದೈತಂತ ಗಾಲಮೇಲಾ
ಉರುಳಾಡಿ ಮಸೂತಿವೊಳಗ ಮಾಡಿ ಗದ್ದಲಾ
ಏರು|| ಕೂಡೀತ ಊರಾನ ಮಂದಿ | ಹಾಕತಾರ ತಂದ ಅಗಸುದ್ದಿ
ಮತ್ತಷ್ಟು ಸತ್ತಾಂಗ ಅಗದಿ ಮಾಡತಾನ ನೋಡತಾನ ಬಿಡತಾನ
ಕಣ್ಣ ಪಿಳಿ ಪಿಳಿ | ಹಾಕಿ ಗಾಳಿ ಜನಾಕೇಳಿ
ಕರತಂದಾರ ವೈದ್ಯಗಾರಗ ತತ್ಕಾಲಾ || ೫ ||

ಅಂತಾನ ವೈದ್ಯಗಾರ ಆದ ಜಿಬರಾಯಿಲಾ
ಸಾವೂತಾನಾ ಈ ಮನುಷ್ಯಾ ಉಳಿಯೂದಿಲ್ಲಾ
ಏರು || ಇದಕ ಒಂದ ಉಪಾಯ ಐತಿ | ಮಾಡಿದರ ಜೀವ ಉಳಿತೈತಿ
ಸಿಗುವುದು ಕಠಿಣ ಐತಿ | ಶ್ರೀಮಂತ ಅತ್ಯಂತ ಗುಣವಂತ
ಆದ ತನ್ನ ಮಗನ ಕೋದಾ ತಾನಾ ಶಾಂತ ಮನಾ
ಕಾಳಜ ದಿಲ್ ರಗತಾ ಇವು ಎಲ್ಲಾ || ೬ ||

ಇ|| ಇರಬೇಕ ಐದು ವರ್ಷದ ಸಣ್ಣ ಬಾಲಾ
ಮುಗಸಿರಬೇಕ ಅವನು ಕಲಮಾ ಎಲ್ಲಾ
ಏರು || ಕೇಳಿಕ್ಯಾರ ಈ ಸುದ್ದಿ ಅಷ್ಟು ಮಂದಿ ಕುಂತಾರ ಸ್ತಬ್ದ
ಅಂದ ಒಬ್ಬ ಅಸಹಾಬ ಎದ್ದ
ಚ್ಯಾಲ || ಬರತೇನಿ ತರತೇನಿ ಕೊಡತೇನಿ ಅನುಮಾನ ಯಾಕ
ಸದ್ಯಕ ಮನಪಾಕ ಹೇಳತಾನ ಮಡದಿಗೆ ಇದು ಎಲ್ಲಾ || ೭ ||

ಇ|| ಖುಷಿಲಿಂದ ಪತಿವ್ರತಾ ಆದಾಳ ಕಬೂಲಾ
ಸಾಲಿಗೆ ಹೋಗಿದಾನು ಸಣ್ಣಬಾಲಾ
ಏರು || ಕೊಯ್ತೇನಿ ನಾ ನಿನ್ನ ಕುತಗಿ ಕೇಳಿ ಮಗಾ ತನ್ನ ಶಿರಬಾಗಿ
ಚ್ಯಾಲ || ಅಂತಾನ ನಗತಾನ ಜ್ವಾಪಾನಾ ಅಸ್ಥಿರ ಘಟಕ
ಮಾಡೂದು ಯಾಕ ಈ ಕ್ಷಣಕ ಅನುಮಾನ ಮಾಡಬ್ಯಾಡರಿ ಬಿಲ್‌ಕುಲ್ಲಾ || ೮ ||

ಇ|| ಕಣ್ಣಮುಚ್ಚಿ ಮಲಗಿದ್ದನು ಸಣ್ಣಬಾಲಾ
ಕೋದಾನ ತಂದಿ ಅಂದ ಬಿಸಮಿಲ್ಲಾ
ಏರು || ಕಾಳಜ ಮತ್ತು ದಿಲ್ ರಕ್ತಾ ಕೊಟ್ಟ ವೈದ್ಯಗಾರಗ
ತುರತಾ ಮುಸಾಫಿರಾ ಎದ್ದು ಕುಂತಾ ಹರುಷಾಗಿ ಮನಸಿಗೆ
ಎಲ್ಲಾರಿಗೆ ಹೇಳಿ ಹೋದರು ಇಬ್ಬರು ದೂತರು
ಮಾನವರು ಭಕ್ತಿ ಇರುವದು ಬಹು ತೋಲಾ || ೯ ||

ಇ|| ಸಾಂಬನ ಮುಂದ ಹೋಗಿ ತಪಶೀಲಾ | ಹೇಳತಾರೋ ದೂತರು ಇದು ಎಲ್ಲಾ
ಏರು || ಮಹಾದೇವ ಅಂತಾನ ಮತ್ತಾ | ಭೂಮಿಮ್ಯಾಗ ಹೋಗರಿ ಪರತಾ
ಹುಡುಗನಿಗೆ ಮಾಡರಿ ಜೀವಂತಾ | ದೂತರು ಇಬ್ಬರು ಬಂದಾರ
ಫಕೀರರಾಗಿ ಅದೇಮನಿ ಬಾಗಿಲಿಗೆ | ಉಣಿಸಂತಾ ಮಡಿದರೋ ಸವ್ವಾಲಾ || ೧೦ ||

ಮೂರು ದಿವಸ ಆಯಿತು ಇಂದಿಗೆ ರಾತರಿ ಹಗಲಾ
ಉಪವಾಸ ಅದೇವಿ ನಾವು ಉಂಡಿಲ್ಲಾ
ಏರು || ಸಾವುಕಾರನ ಮಗನ ಹೆಣಕ | ಹೊರಗ ತಂದಿದ್ದರು ಎರಿಯಲಾಕ
ಇನ್ನ ಮ್ಯಾಗ ಮಣ್ಣ ಮಾಡೂದಕ
ಚ್ಯಾಲ || ಸಾವುಕಾರ ಇಬ್ಬರು ಫಕೀರಗಳಿಗೆ ಅಂದಾ | ಪಸಂದಾ
ಆನಂದಾ ಉಣಿಸಂತ ಮಡದಿಗೆ ಹೇಳ್ಯಾನಲ್ಲಾ || ೧೧ ||

ಪತಿವ್ರತಾ ಬಾವಾಗಳಿಗೆ ತಡಾಯಿಲ್ಲಾ
ಕುಂಡರಿಸಿ ಮುಂದ ತಂದ ಇಟ್ಟಾಳಗಲಾ
ಏರು || ಫಕೀರಗಳು ಕೇಳತಾರ ಆಗ ಮಕ್ಕಳು ಏಸು ಅದಾವ ನಿಮಗ
ಪತಿವ್ರತಿ ಅಂದಾಳ ಹೀಂಗ | ಇರೂದೊಂದ ನನ್ನ ಕಂದಾ
ಕೋದಿಂದ ಕಾಳಜರಕ್ತಾ ಬೇಕಂತ ನನ್ನ ಕಾಂತಾ
ಓದು ಕೊಟ್ಟಾನ ಮಸೂತಿಯೊಳಗ ಸುಳ್ಳಲ್ಲಾ || ೧೨ ||

ಮಕ್ಕಳಿಲ್ಲದ ಮನಿವೊಳಗ ಬಿಲ್‌ಕುಲ್ಲಾ
ಫಕೀರರು ನಾವು ಇಬ್ಬರೂ ಉಣ್ಣೂದಿಲ್ಲಾ
ಏರು|| ಸತಿ ಅಂದ್ಲು ಮಾಡಲಿ ಹ್ಯಾಂಗ | ಫಕೀರ ಅಂದ್ರೋ ಕರಿ ನಿನ್ನ
ಮಗನ ಹೆಸರಗೊಂಡ ಒದರ‍್ಯಾಳ ಆಗ |
ಚ್ಯಾಲ || ತೊಳಿಯತಿದ್ದ ಹೆಣಾ ಎದ್ದ ಪಸಂದಾ | ಎಲ್ಲಾರ ಹುಜರಾ
ಹುಶಿಯಾರಾ ಫಕೀರರಾ ಕರಕೊಂಡ ಉಂಡ ಹ್ವಾದಾರೋ ಕುಶಿಯಾಲಾ || ೧೩ ||

ಇ|| ಬಾಗಲಕೋಟಿ ಊರಾ | ಮಹಾಸೇಲಾ
ದಸ್ತಗೀರ ಕೇಸೂಪೀರ ಪ್ರಭೂಲಾ
ಏರು || ಮ್ಯಾಗಿನ ಓಣಿಗೆ ಮರತಬಿಟ್ಟಿ | ಬೆಳಸತೀದಿ ವೆಂಕಟಪ್ಯಾಟಿ
ಹೆಸರ ಹೆಳತಿ ಯಾರಿಗೆ ಹುಟ್ಟಿ
ಚ್ಯಾಲ || ಕುಂತವರು ನಿಂತವರು ಉಗಳ್ಯಾರ ನಿನ್ನ ಮಾರಿಮ್ಯಾಗ
ಪಡದಾಗ ಬಿಡದಂಗ ಕಿತ್ತಾರೋ ನಾಗೂ-ಗೌಸು ನಿನ್ನ ಹಲ್ಲಾ || ೧೪ ||

* * *

೧೫. ಪುಣ್ಯದ ಫಲಾ

ದೈವಕ ಮಾಡುವೆ ಶರಣಾ | ಇರಬೇಕ ನಿಮ್ಮ ಕರುಣಾ
ಮಾಡಿ ಹೇಳುವೆ ವರಣಾ ಒಂದ ಬಯ್ಯಾನಾ ||
ಏರು || ಗ್ನಾನವಂತರು ಮಹಾ ಪಂಡಿತರು | ಕೂಡಿ ಕುಂತೀರಿ ಸರುವಾ
ಧ್ಯಾನಿಟ್ಟ ಕೇಳಿರಿ ನಾ ಹೇಳುವೆ ನುಡಿ ಜೋಡಿಸುವೆ ಕರವಾ
ಅಲ್ಪ ಬುದ್ಧಿಲಿಂದ ಅಂತೇನಿ ಸ್ವಲ್ಪಾ | ಎಣಿಸಬಾರದು ನೀವು ನನ್ನ ತಪ್ಪಾ
ಇದ್ದಷ್ಟು ಬುದ್ದಿಲಿಂದ ಮಾಡಿಸಿ ಬಯಾನ | ತಿಳಿಸುವೆ ನಿಮ್ಮ ಮುಂದೆ ಮಾಡಿ ರಚನಾ || ೧ ||

ಮೆಹಬೂಬರ ವಂಶದಾಂವಾ | ಇದ್ದ ಫಕೀರ ಬಾವಾ
ಭಿಕ್ಷಾ ಬೇಡುವ ಅಂವಾ | ಮಾಡಿ ಯೋಚನಾ
ಏರು || ಆ ದೇಶದಾಗ ಒಬ್ಬಾಂವಾ ಅರಸ ಇದ್ದಾನೋ ಶ್ರೀಮಂತಾ
ಭೂಮಿ ಸೀಮಿ ಧನ ದ್ರವ್ಯ ಬಾಳ ಅಂವಗಿತ್ತರಿ ಸಂಪತ್ತಾ
ಅವನ ಮನಿಗೆ ಹೋಗಿ ಬೇಡೂನು ಭಿಕ್ಷಾ | ಅವನ ಮನಸ ಮಾಡುವೆ ಪರೀಕ್ಷಾ
ಬಾವಾ ಮನದಾಗ ಅಂದಾ | ಸವಾಲ ಮಾಡಬೇಕೋ ಒಂದಾ
ಏನ ಕೊಡತಾನೋ ತಂದಾ | ನನಗವನಾ || ೨ ||

ಒಂದ ಗಡಗಿ ತಗೊಂಡ ಒಡಕಿ ಕಿನ್ನುರಿ ಕಾಯಿ ಮಾಡಿದಾ | ಖಡಕ
ಹರಕ ಹಗ್ಗಾ ಜೋಡಿಸಿ ಅದಕ ತಂತಿ ನೂತನಾ |
ಏರು || ಕಿನ್ನೂರಿ ಕಾಯಿ ಒಳ ಸಂಪನುಡಿಸತಿದ್ದಾ ಕಲ್ಮಾ ಓದುವ ಶಬ್ದಾ
ಕಲ್ಮಾ ಓದುವ ನಾದದ ಒಳಗ ಆಗಿದ್ದಾ ಆನಂದಾ
ಸಂಗತೀಲೆ ತಗೊಂಡ ತನ್ನ ಕಿನ್ನುರಿ | ದಾರಿ ಹಿಡಿದ ಬಂದಾಗ ಬಿರಿಬಿರಿ
ಅರಸನ ಮನಿಗೆ ಹೋಗಿ | ಸವಾಲಾ ಮಾಡಿದಾ ಯೋಗಿ
ದಾನಾ ಮಾಡೂತ ಕೂಗಿ | ಕರದಾನಲ್ಲಾ || ೩ ||

ಬಾವಾನ ಸವಾಲ ಕೇಳಿ ಮನದಾಗ ಹರುಷ ತಾಳಿ
ಅರಸ ನೋಡಿದ ಹೊರಳಿ ನಿಂತ ಬಾವಾನ್ನ ||
ಏರು || ಬಿಕ್ಷಾ ಬೇಡಲಿಕ್ಕೆ ಬಂದಾರ ಸ್ವಾಮಿ || ಕೊಡಬೇಕ ಇವರ ತಕ್ಕ
ಮುತ್ತು ರತ್ನಗಳ ತಬಕ ತುಂಬಿಕೊಂಡು ಬಂದಾನ ಕೊಡುವುದಕ
ಬಾವಾ ಅಂತಾನ ಬಲ್ಲೇನೊ ನಾನು | ಇದನ್ನ ತಗೊಂಡು ನಾ ಮಾಡಲಿ ಏನು |
ಅರಸ ಗಾಬಾಗಿ ಆಗ ಕೈಮುಗಿದು ಅಂತಾನ ಹೀಂಗ |
ಮತ್ತೇನು ಬೇಕರಿ ನಿಮಗ ಕೊಡುವೆನು ನಾ || ೪ ||

ನಾನು ಸಂತೋಷದಿಂದ ಕೊಟ್ಟೇನಿ ಇಂದ | ಒಲ್ಲೇನಂತ
ನೀವು ಸಂಶಯ ತಂದ ಕಾರಣೇನಾ |
ಏರು | ಕೇಳೋ ಅರಸ ಇದು ಯಾಕ ಬೇಕೋ ನೀ ಮಾಡುವ ಧರ್ಮಾ
ನಿನ ದಾನಕ ಬೆಂಕಿ ಹಚ್ಚಿ ಸುಡೋ ಛೀ ಹೋಗೊ ನೀಚ ಧರ್ಮಾ
ಭೂಮಿ ಮ್ಯಾಲೆ ಹುಟ್ಟಿ ಏನ ಮಾಡಬೇಕೋ | ದಾನಾ ಮಾಡುಕ ಮನಸಿರಬೇಕೋ ಪಾಕ
ಸ್ವತಾ ದುಡದು ತಂದದ್ದು ನೀನಾ | ನನಗ ಕೊಡಬೇಕೋ ದಾನಾ
ಹೀಗಂತ ಬೈದು ಅವನ್ನಾ | ಹ್ವಾದಾನೊ ಅವನಾ || ೫ ||

ಅರಸ ಆಗ್ಯಾನೊ ಸುಂದಾ | ತಿರುಗಿ ಮನಿಯೊಳಗೆ ಬಂದಾ
ಹೇಳ್ಯಾನ ಮಗಳಿನ ಮುಂದಾ | ಮಾಡಿ ವ್ಯಸನಾ
ಏರು || ಸಾಕ್ಷಾತ್ ಬಾವಾ ಭಿಕ್ಷಾ ಬೇಡಲಿಕ್ಕೆ ಬಂದ ನಿಂತಿದ್ದಾ ಹೊರಗ
ಮುತ್ತು ರತ್ನಗಳು ತಬಕ ತುಂಬಿ ಕೊಡಲಾಕ ಹ್ವಾದೆ ಅಂವಗ
ಒಲ್ಲೆ ಅಂತಾ ಅಂವಾ ಹಿಂದಕ್ಕ ಬಿಟ್ಟಾ | ಬಲ್ಲಾಂಗ ಬೈದು ಮಾಡಿದಾ ಸಿಟ್ಟಾ
ಸ್ವತಾ ನೀನು ದುಡದದ್ದು ತಂದಾ | ಕೊಡಬೇಕಂತ ಹೀಂಗ ಅಂದಾ
ನಾನು ಇದಕ ಮುಂದ ಮಾಡಲೇನಂದಾ || ೬ ||

ತಂದಿಗೆ ಅಂತಾಳ ಮಗಳು | ನನ್ನ ಮಾತು ಮನಸಿಟ್ಟು ಕೇಳು
ಬಾವಾನ ಮಾತು ಅಲ್ಲರಿ ಸುಳ್ಳು | ಸತ್ಯ ವಚನಾ
ಏರು || ಅರಸ ಅಂಬುವಂತಾ ಶಬ್ದಾ ಬಿಟ್ಟು | ಬಡವನ ವೇಷಾ ತೊಟ್ಟು
ತಡಮಾಡದೆ ನೀವು ದುಡಿಲಾಗ ಹೋಗರಿ | ಮನದ ಸಂಶಯ ಬಿಟ್ಟು
ಮಗಳ ಮಾತಿಗೆ ಒಪ್ಪಿದಾ ಅರಸಾ | ಬಡವನಂತೆ ತೊಟ್ಟಾನ ವೇಷಾ
ತಯಾರಾಗಿ ಹೊಂಟಾನ ಅರಸಾ | ಹೊತ್ತ ಮುಳಗಿ ಹಚ್ಚೀತ ದೀಪಾ
ಮನದೊಳಗೆ ಸಂಕಲ್ಪಾ | ಇತ್ತ ಏನೇನಾ || ೭ ||

ಅಲ್ಲೇ ಒಬ್ಬಾ ಕಂಬಾರ ಇದ್ದಾ | ಘನ್ನ ಹೊಡೂದು ಕೇಳಿದ ಶಬ್ದಾ
ಹೋಗಿ ನಿಂತಾನೋ ಖುದ್ದಾ | ಕೇಳಿ ಅವನ್ನಾ
ಏರು || ಬಾಳ ಬಡವ ನಾ ಬಂದೇನಿ | ದಯಮಾಡಿ ಹಚ್ಚೀರಿ ದಗದಕ್ಕ
ದುಡದಷ್ಟು ಪಗಾರ ಕೊಡಬೇಕೋ | ನನಗ ಬಾಳೈತಿ ನಾಜೂಕ
ಕಂಬಾರ ಕೇಳತಾನ ಆ ಬಡವನ್ನಾ | ನಿನಗ ಹಚ್ಚತೀನಿ ಹೊಡಿಲಾಕ ಘನ್ನಾ
ಘನ್ನಾ ಹೊಡೆದರ ನೀನು ಆಣಿ ರೊಕ್ಕ ಕೊಡತೇನಿ ನಾನು |
ಇದಕ್ಕಿಂತ ಹೆಚ್ಚಿಂದೇನು ಕೊಡುದುಲ್ಲಾ ನಾನು || ೮ ||

ಕಂಬಾರನ ಮಾತಿಗೆ ಖಬೂಲಾ | ಆಗಿ ಅಂವಾ ನಿಂತಾನಲ್ಲಾ
ದೊಡ್ಡ ಸುತಗಿ ಕೊಟ್ಟಾನೋ ತೋಲಾ | ಇತ್ತ ವಜನಾ
ಏರು || ಎತ್ತೆತ್ತಿ ಘನ್ನಾ ಹೊಡುವಾಗ ಮೈಯೆಲ್ಲಾ ಆತರಿ ನೀರ ನೀರಾ
ಕೈತುಂಬ ಗುಳ್ಳಿ ಎದ್ದು ಒಡದಾವೋ ಆಗಿತ್ತು ನೆತ್ತರಾ |
ಕಂಬಾರಾ ಗಾಬಾದಾ ನೆತ್ತರ ನೋಡಿ | ಆಣಿ ರೊಕ್ಕ ಕೊಟ್ಟ ಲಗುಮಾಡಿ
ರೊಕ್ಕಾ ತಗೊಂಡು ಬಂದಾನ ಅರಸಾ | ರಾತ್ರಿ ಆತೋ ಮೂರು ತಾಸಾ |
ಮಗಳ ಕೈಯಾಗ ಹಣಾ | ಕೊಟ್ಟಾ ತಾನಾ || ೯ ||

ತೊಗೊಂಡಾಳೋ ಕೈಯಾಗ ರೊಕ್ಕಾ | ಖುಷಿ ಆಗ್ಯಾಳ ತನ್ನ ಮನಕ
ಅಂತಾಳ ಇವು ತಗದಿಡಬೇಕೋ ಮಾಡಿ ಜ್ವಾಪಾನಾ
ಏರು || ನಾಳೆ ಮುಂಜಾಲೆ ಕರಕೊಂಡ ಬರಬೇಕ ಬಾವಾನ್ನ ಹುಡಿಕ್ಯಾಡಿ
ದಣದ ಬಂದಿರಿ ಮಲಗ ಹೋಗರಿ ಲಗೂ ಊಟಾ ಮಾಡಿ
ಮಲಗಿದರ ಅಂವಗ ಬಿಡಲಿಲ್ಲ ಚಿತ್ತ ನಿದ್ದಿ ಹತ್ತಲಿಲ್ಲರಿ ಬೆಳತನಕ
ಮುಂಜಾಲೆದ್ದು ಹ್ವಾದಾನೋ ಅರಸಾ | ಮನದಾಗ ಬಾವಾನ ಧ್ಯಾನಾ
ಕರತಂದು ಮಾಡಿ ತಪವಾ ಕೊಟ್ಟಾನೋ ದಾನಾ || ೧೦ ||

ಆಣಿ ರೊಕ್ಕಾ ಕೈಯಾಗ ಹಿಡದಾ | ದಾನಾ ಕೊಡೂದು ಅಂತಾನ ಹೌದಾ
ಮಾಡಿ ಅಂವಗ ಆಶೀರ್ವಾದಾ | ಹೊಂಟಾ ಆ ದಿನಾ ||
ಏರು || ದಾನಾ ತೊಗೊಂಡ ಬಾವಾ ಖುಷಿಯಾಗಿ | ದಾಳಿಂಬ್ರ ಹಣ್ಣಾ ತಂದಾ
ಅದೇ ಹಣ್ಣು ತಂದು | ಅಂಗಳದಾಗ ತೆಗ್ಗ ತಗದ ಹುಗದಾ
ನೀರ ಹಾಕತಿದ್ದ ಅಂವಾ ದರದಿವಸಾ | ಹಣ್ಣ ಗಿಡಾಹುಟ್ಟೈತಿ ಒಳೇ ಸರಸಾ
ಗಿಡದ ತುಂಬ ತಪ್ಪಲ ಚಿಗಿತ | ಹೂಕಾಯಿ ಬಿಟ್ಟಾವೋ ಮಸ್ತಾ
ಹಣ್ಣ ಆಗ್ಯಾವೋ ಮುತ್ತಿನ ಜೋತಾ ಬಹು ರಚನಾ || ೧೧ ||

ಹಣ್ಣು ನೋಡಿ ಬಾವಾ ಅಂದಾ | ಕಣ್ಣಿಗೆ ಕಾಣತಾವೊ ಚಂದಾ
ಹರಕೊಂಡಾನ ಆಗ ಒಂದಾ | ಹಣ್ಣ ನವೀನಾ |
ಏರು || ಹಣ್ಣ ಕೈಲೆ ತಿಕ್ಕಿ ತಿಕ್ಕಿ ನೋಡತಾನ | ಉದರತಾವೊ ಹೊನ್ನಾ
ಪುಣ್ಯೇದ ಫಲ ಇದರಂತೆ ಬೆಳುತೈತಿ | ಇಟ್ಟ ಕೇಳರಿ ಧ್ಯಾನಾ
ದಾನಧರ್ಮದಲ್ಲೆ ಇರಬೇಕ ಮನಸಾ | ಭೂಮಿ ಮ್ಯಾಕೆ ಇದು ಹೆಚ್ಚಿನ ಜನನಾ
ಇದರಂತೆ ಇರಬೇಕ ನೀತಿ | ಬಾಗಲಕೋಟೆ ಊರ ಭರ್ತಿ
ಮಡ್ಡಿಪೀರಾನಲ್ಲೆ ಮುಕ್ತಿ ಪಡಿರಿನ್ನಾ || ೧೨ ||

* * *

೧೬. ಮುತ್ತಿನ ಜಡಿ ದಾನ ಮಾಡಿದ ಪದಾ

ಶಾಸ್ತ್ರದಿಂದ ಹುಡುಕಿ ತಗದೇನಿ ಸಂದ
ಓಣಿಗೆ ಒಬ್ಬರ ಆಗ್ಯಾರ ಶಾಹೀರ | ಉಸ್ತಾದಾಗಿ ಕುಂತಾರ ಹುಲ್ಲ ಕೊಯ್ಯುವರ
ನಡಕಟ್ಟಿ ಬರತಾನ ಎಟ್ಟಿ ಹಾಡೂಕ ಸಿಟ್ಟೀಲೆ ಮೂರ್ಖ ಅಕ್ಷರ ಒಂಟ
ತಂದ ತೊಂಟ ಬಂಟ ಅನಸುಕ ಶಾಹೀರಿ ಮಾಡೂದು ಮಾರಿ ಅಲ್ಲದು
ದಾರಿ ಸಿಗದಕ ಮೂಲಾಗಿ ಇಂವಾ ಬಂದಾ ಮಾನಾ ಪಾನಾದಸಿಂದಾ || ೧ ||

ಹೆಣ್ಣು ಒಂದಾ ರೂಪ ಪೂರ್ಣಮಿ ಚಂದ್ರಾ
ಖಾಜಿ ಹೊಟ್ಟೀಲೆ ಹುಟ್ಯಾಳ ಬಾಲಿ | ಭಕ್ತಿವಂತಳು ಅನಸ್ಯಾಳ ಜಗದಲ್ಲಿ
ದರ ದಿನಾ ಶಿವನ ಧ್ಯಾನಾ ಮಾಡುವಳು ಗ್ಯಾನವಂತಳು
ಇಟ್ಟ ಚಿತ್ತ ಐದ ಹೊತ್ತ ನಮಾಜ ತುರತಾ
ಮಾಡುವಳು ಅನುಮಾನವಿಲ್ಲದೆ ದಾನಾ ದರದಿನ ಕೊಡುವಳು
ನಿರಮಳ ಮನದಿಂದ ಸಂಶಯವು ಇಲ್ಲನಾ || ೨ ||

ಮುತ್ತಚಂದ ಪೋಣಿಸಿ ಕೂದಲಲೊಂದೊಂದಾ |
ಜಡಿಯ ವಿಸ್ತಾರಾ ಮುತ್ತಿನಬಾರಾ | ಹೇಳತೇನ ಕೇಳಬೇಕ ಹಿರಿಯರಾ
ಆಕಿಚಳಕ ಎಳಕ ಹರೆಯ ಬೆಳಕು ಬಿದ್ದಾಂಗ
ಆ ತರುಣಿ ಮುಖಾ ಹೊರಳಿ ಪುಷ್ಪಾ ಅರಳಿ ಬಂದಾಂಗ
ಅಕ್ಕರತಿ ಬಾಳಾ ಪ್ರೀತಿ ಸಾಂಬನ ಭಕ್ತಿ ಅತಿ ಮ್ಯಾಗ |
ಕೇಳಿ ವಾರ್ತೆ ಒಬ್ಬ ಬಂದಾ ದಾನದದಸಿಂದಾ || ೩ ||

ಹೆಸರಾ ನಿಮ್ಮದಾ ಕೇಳಿ ಬಂದೀನಿ ದೂರದಿಂದಾ
ತಾಯವ್ವಾ ದಾನಾ ಕೊಡಬೇಕ ಇಂದಾ | ಕೊಟ್ಟಿದ್ದಾರ ಸ್ವಾಮಿ ನಿಮಗ ಭಗವಾನಾ
ಶಿವಾ ಬಲ್ಲಾ | ಏನೇನು ಇಲ್ಲಾ | ಮನ್ಯಾಗ ಎಲ್ಲಾ ತೀರಿತು |
ಏನು ಕೊಡಲಿ ಅಂತಾಳ ಬಾಲಿ | ಮನಸಿನಲಿ ಈ ಹೊತ್ತು
ಮುತ್ತಿಂದು ಜಡಿ ಕೊಯಿದು ಕೊಟ್ಟಾಳ  ತಂದು ಈ ಹೊತ್ತು
ಮನಸಾಗಿ ಆನಂದಾ ಹೊಂಟಾನೋ ಅಲ್ಲಿಂದಾ || ೪ ||

ಪ್ಯಾಟ್ಯಾಗ ಬಂದಾ ಜಡಿ ಮಾರುದಕ ತಂದಾ
ಖಾಜಿಯ ಮಗಳಾ | ನನಗಾಗಿ ಮರುಳಾ | ಜಡಿಯ ಮುತ್ತಿಂದು ಕೊಟ್ಟಾಳ ಕೆಚ್ಚಿದ ಹರಳಾ
ಊರೆಲ್ಲಾ | ಆದೀತ ಗುಲ್ಲಾ | ಖಾಜಿ ಎಲ್ಲಾ ಕೇಳ್ಯಾನು
ಆಗಿ ಸಿಟ್ಟ ಮನಿಗೆ ಹೊಂಟಾಂವಾ ಮುಕ್ಕಟ ಬಂದಾನು
ಹತಿಯಾರ ಹಿಡಿದ ಶಿರಾ ಮಾಡುವೆ ಪಾರ್ ಅಂತಾನು
ತಲಿಯ ಹೊಡಿಯಬೇಕೆಂದಾ ವಿಚಾರ ಆದಿಂದಾ || ೫ ||

ಕರುಣ ಬಂದು ಸಾಂಬಾ ದೂತರಿಗೆ ಅಂದಾ | ಕೆಚ್ಚಿದ ಹರಳಾ
ಜಡಿ ಬಂದ ನಿವಳಾ ವಜ್ರ ಮುತ್ತಿಂದು ಜೋತ ಥಳ ಥಳಾ
ಸ್ವರ್ಗದಿಂದ ದೂತ ಬಂದ ಜಡಿ ತಂದಾ ಆ ಕ್ಷಣಾ
ತೆಲಿಮ್ಯಾಗ ಇಟ್ಟಾರ ಬ್ಯಾಗ ಬೆಳಕ ಆಗ ಬಿತ್ತಣ್ಣಾ
ಸಿರಬಾಗಿ ಹೊಂಟಾರ ತಿರುಗಿ ಸಂತೋಷಾಗಿ ಆ ದಿನಾ
ಜಗದೊಳಗ ಹುಟ್ಟಿಂದಾ ಭಕ್ತಿ ಪಡಿಯಬೇಕೆಂದಾ || ೬ ||

ಮನಿಯಾಗ ಹೋದಾ ಖಾಜಿ ಮಗಳಿಗೆ ಕರದಾ
ಜಡಿಯ ಮುತ್ತಿಂದಾ | ಐತೇನ ನಿಂದಾ | ಖರೇ ಮಾತ ಹೇಳಬೇಕ ನನ್ನ ಮುಂದಾ
ಸಾಂಬನ ಹುಕುಮು ನನಗಿತ್ತು ಶಂಕರ ಭವಸಾಗರ ಸಹಕಾರ ನನ್ನನು
ಜಗಜ್ಯೋತಿ ಜಡಿ ಐತಿ ತೆಲಿಗೆ ಭಕ್ತಿ ಪಡೆವೆನು
ನೋಡ್ಯಾನ ಬೆನ್ನಿಂದಾ ಬಿದ್ದ ಬವಳಿಕಿ ಬಂದಾ || ೭ ||

ನೆನದಾ ಸಾಂಬಗ ನೆನೆದಾ ಸ್ಮರಣಿ ಮಾಡಿ ಆತಂದಾ
ಇಟ್ಟ ಏಕಭಾವಾ | ಮಾಡಿದರ ಸೇವಾ | ಒಲಿತಾನ ನಮಗ ಮಹಾದೇವಾ
ಮಾಡಿ ತಗಲ ಆಗಿರಿ ನೀವು ಬಾಗಲಕೋಟ್ಯಾಗ
ದಸ್ತಗೀರ ಕೇಸುಪೀರ ಮತಿ ಕೊಟ್ಟಿದ್ದಾರ ನಮಗ
ನಾಗೂ-ಗೌಸು ಅಂತಾರ ಸೋಸು ಅಷ್ಟಾರ ತುಸುಮನದಾಗ
ಲಾಲ ಡೋಂಗ್ರಿಯ ಮುಂದ ಆಟ ನಡುದಿಲ್ಲ ನಿಂದಾ || || ೮ ||

* * *