ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಮೊಹರಂ ಹೆಜ್ಜೆ ಪದಗಳು

ಕರ್ಬಲಾ ಪದಗಳು

. ಕರ್ಬಲಾ ರಣರಂಗ
ಕರ್ಬಲದೊಳು ರಣಗಂಬೊಳಿ ಮಾಡ್ಯಾರ ಪಯಣಾ
ತೋಮ ಕಡ ಕಡ ತೀಮ ಕಡ ಕಡ ಹಾರ‍್ಯಾವ ಬಾಣಾ |
ಆನಿ ಕುದುರಿ ಒಂಟಿಯಮ್ಯಾಗ ಏರ‍್ಯಾವ ಬಾಣಾ
ತೋಮ ಕಡ ಕಡ ತೀಮ ಕಡ ಕಡ ಹಾರ‍್ಯಾವ ಬಾಣಾ ||

* * *

ಬಾ ಬಾ ನಡಿ ನೋಡೂಣಲಾವಿಯ ಪ್ರೇಮದಿ ಬಲುಹಸನಾ
ಜಗದೊಳು ಮೇಲೆ ಕರ್ಬಲ ವತನಾ
ಹೆಸರಾದರಿಮಾಮಾ ಹಸೇನ ಹುಸೇನಾ
ಬಾ ಬಾ ನಡಿ ನೋಡೂಣಲಾವಿಯ ಪ್ರೇಮದಿ ಬಲು ಹಸನಾ

. ಅಲಿ ಅಕಬರನು ಲಡಾಯಿ ಮಾಡಿದ ಪದಾ

ಚಿತ್ತದಿಂದ ಪೇಳುವೆ ನಾ ಧ್ಯಾನಿಸಿ ಕೇಳರಿ ಜನಾ
ಅಲಿ ಅಕಬರ ಬಾಲ ಸಣ್ಣವನಾ ಪೂರ್ಣ ಹುಣ್ಣಮಿ ಚಂದಿರವನಾ
ಪ್ರೀತಿ ಪಾಲಕ ಮೋಹನವನಾ ಹರುಷದಿಂದ ಕೇಳ್ಯಾನವನಾ
ಅಪ್ಪಣಿ ಕೊಡೋ ತಂದೆ ನೀನಾ ಬೇಗ ಬರುವೆ ಮಾಡಿ ಕಥನಾ
ಅಪ್ಪಣೆಯನ್ನು ಪಡೆದು ಶರಣಾ ಹೋಗಿ ಮಾಡ್ಯಾರ ಘೋರ ಕದನಾ
ಹೇಳಲೇನಾ ಸೂರಿಯನ್ನಾ ಸಂಹಾರ ಮಾಡಿದ ಯಜೀದರನ್ನಾ
ಸಂಹಾರ ಮಾಡಿ ಯಜೀದರನ್ನಾ ಮೋಸ ಮಾಡಿದ ಶುಮರಲೈನಾ
ಬೇಗ ಬಿಟ್ಟಾರ ಮ್ಯಾಲೆ ಬಾಣಾ ಅಲ್ಲಾರೇ ಎಂದವರು ಬಿಟ್ಟಾರ ಪ್ರಾಣಾ
ಏರಿ ಅವರು ಸ್ವರ್ಗದ ಪಯಣಾ ಮೌಲಾನ ಹುಲಗೂರ ಮುಗಸಿ ಕವನಾ
ಖಾದರಿ ಸೇವಾ ಮಾಡುವೆ ನಾ ಭಕ್ತಿಯಲಿಂದ ಕೇಳರಿ ಜನಾ
ಚಿತ್ತದಿಂದ ಪೇಳುವೆನಾ ಧ್ಯಾನಿಸಿ ಕೇಳರಿ ಜನಾ

. ಕಾಸೀಮನು ಮಾಡಿದ ಲಡಾಯಿ

ಕಾಸೀಮ ಸಾಹೇಬರ ಸಂದ ಹೇಳತೇನಿ ಕೇಳರಿ ದೈವೆಲ್ಲಾ
ಕೇಳರಿ ದೈವೆಲ್ಲಾ ಕಾಸೀಮ ಹಠಾ ಬಿಡಲಿಲ್ಲಾ
ತಾಯಿಗೆ ಹೇಳತಾನ ಸಣ್ಣ ಕಾಸೀಮ ಹುಟ್ಟಿ ಬಂದ ಮೇಲಾ
ಹುಟ್ಟಿ ಬಂದ ಮೇಲಾ ಹೋಗತೇನಿ ರಣದ ಮೇಲಾ
ತಾಯಿ ಹೇಳತಾಳೋ ಸಣ್ಣ ಕಾಸೀಮಗ ನೀನು ಹೋದ ಮೇಲಾ
ನೀನು ಹೋದಮೇಲಾ ನನ್ನ ಜ್ವಾಕಿ ಮಾಡಾವರಿಲ್ಲಾ
ಇಷ್ಟು ಕೇಳಿ ಕಾಸೀಮ ಬೀಳತಾನೋ ತನ್ನ ತಾಯಿ ಕಾಲಾ
ತನ್ನ ತಾಯಿ ಕಾಲಾ ಕದನ ಮಾಡಿ ಬರುವೆನಲ್ಲಾ
ಕಾಸೀಮ ಕುದುರಿ ತಯಾರ ಮಡಿ ಹತ್ತಿ ಬಿಟ್ಟಾನಲ್ಲಾ
ಹತ್ತಿ ಬಿಟ್ಟನಲ್ಲಾ ಕುದುರಿ ಹೋತೋ ರಣದ ಮೇಲಾ
ವೈರಿ ಯಜೀದರ ದಂಡು ಬಂದಿತೋ ಅದೇ ರಣದ ಮೇಲಾ
ಅದೇ ರಣದ ಮೇಲಾ ಕಾಸೀಮನ ದಾರಿ ನೋಡ್ಯಾರಲ್ಲಾ
ಸಣ್ಣ ಕಾಸೀಮ ಕತ್ತಿ ಹಿಡಿದು ಕದನ ಮಾಡ್ಯಾನಲ್ಲಾ
ಕದನ ಮಾಡ್ಯಾನಲ್ಲಾ ವೈರಿಯ ರುಂಡ ಹೋತೋ ಮ್ಯಾಲಾ
ಕಾಸೀಮನ ಕುದುರಿ ರಣದೊಳು ಬೆದರಿ ಹಿಂದಕ ತಿರುಗಿತಲ್ಲಾ
ಹಿಂದಕ ತಿರುಗಿತಲ್ಲಾ ಹೊರಳಿ ಮನಿಗೆ ಬಂದಿತಲ್ಲಾ
ತಾಯಿಗೆ ಹೇಳತಾನೋ ಸಣ್ಣ ಕಾಸೀಮ ನೀರ ಕೊಡವ್ವಾ ಮೊದಲಾ
ನೀರ ಕೊಡವ್ವ ಮೊದಲಾ ನನಗ ಆರೈತಿ ಗಂಟಲಾ
ಮಗನ ದನಿ ಕೇಳಿ ತಾಯಿ  ಹೊಟ್ಯಾಗ ಆತೋ ಗಾಲಮೇಲಾ
ಆತೋ ಗಾಲಮೇಲಾ ಕಾಸೀಮಗ ನೀರ ಸಿಗಲಿಲ್ಲೋ
ಕಾಸೀಮ ಕುದುರಿ ಹತ್ತಿ ಬಿಟ್ಟಾನೋ ಅದೇ ರಣದ ಮೇಲಾ
ಅದೇ ರಣದ ಮೇಲಾ ಶುಮರನ ದಂಡು ಬಂದಿತಲ್ಲಾ
ಸಣ್ಣ ಕಾಸೀಮನ ಸುತ್ತ ಹಾಕಿ ನಡುವೆ ಮಾಡ್ಯಾರಲ್ಲಾ
ನಡುವೆ ಮಾಡ್ಯಾರಲ್ಲಾ ಕಡದಾರ ಕುದುರಿಯ ಕಾಲಾ
ಸಣ್ಣ ಕಾಸೀಮನ ರಟ್ಟಿ ಹಿಡಿದು ಜಗ್ಗಿ ಒಗದಾರಲ್ಲಾ
ಜಗ್ಗಿ ಒಗದಾರಲ್ಲಾ ಕಾಸೀಮನ ಕೊಂದ ಬಿಟ್ಟಾರಲ್ಲಾ
ಸಣ್ಣ ಕಾಸೀಮನ ಒಯ್ದು ಹಾಕತಾರೋ ಡೋಲಿಯ ಮೇಲಾ
ಡೋಲಿಯ ಮೇಲಾ ಅಲ್ಲಿಗೆ ಬಂದಾರೋ ಹುಸೇನಲಿ ಮೌಲಾ
ಹದಿನೆಂಟು ಮಂದಿ ಕೂಡಿಕೊಂಡು ಡೋಲಿ ನೆಗಿವ್ಯಾರೋ ಮೇಲಾ
ಡೋಲಿ ನೆಗಿವ್ಯಾರೋ ಮೇಲಾ ಹೊಡದಂಗಾತೋ ಸಿಡಿಲಾ ||

. ಕಾಸೀಮ ಧೂಲಾನ ಪದಾ

ಕಾಸೀಮ ಸಾಹೇಬರು ಕದನ ಸಾರೂತ ಬಂದಾರ್ರಿ ಪಾಜೇಕ
ನಾವು ಹೋಗ್ತೇವಿ ಕರ್ಬಲಕ ಹಾಂ ಹಾಂ ಅಲಾವಿನಾಡುದಕ
ಕೈಯಲ್ಲಿ ಕಂಕಣ ಮೈಯಲ್ಲಿ ಅರಿಷಿಣ ಗಂಧ ಕಸ್ತೂರಿ ತಿಲಕ
ಎಲಿ ಅಡಕಿ ತುಂಬಿ ಇಟ್ಟಾರ್ರಿ ತಬಕ ಹಾಂ ಹಾಂ ಲಗ್ನದ ಸಂಭ್ರಮಕ
ಚದುರ ಕಾಸೀಮರ ಕುದುರಿ ಗಾಡಿಗಳು ಹೊಂಟು ನಿಂತಾವ್ರಿ ರಣಕ
ಕಾಗಿ ಹಿಂಡು ಹಾರಿ ಬಂದೈತ್ರಿ ಎಡಕ ಈ ದಿನ ಚಲೋ ದಿಲ್ರಿ ಕೆಡಕ
ಹಾಂ ಹಾಂ ತಿರುಗರಿ ಹಿಂದಕ ||

ಶಲ್ಯೇವ ಹಿಡದಾಳ ಎಲ್ಲೆಲ್ಲಿ ಬಿಡವಳ್ಳ ಮಲ್ಲಿಗ್ಹೂವಿನ ತೂಕ
ನನ ಬಿಟ್ಟು ಹೋಗ್ತೀರಿ ಕರ್ಬಲಕ ಹಾಂ ಹಾಂ ಬರುವುದು ಎಷ್ಟ ದಿನಕ
ಕಾಂತಿ ಕೇಳು ನೀನು ಚಿಂತಿ ಮಾಡಬ್ಯಾಡ ಸಂತೋಷ ಇರಬೇಕ
ಇಂಥ ಪಂಥವ ಗೆಲಿಸುದಕ ನಾವು ಹೋಗ್ತೇವಿ ಕರ್ಬಲಕ
ಹಾಂ ಹಾಂ ಕಾಳಗ ಮಾಡುದಕ ||

ಯುದ್ಧದೊಳು ಮಡದ ಸುದ್ದಿಯ ಕೇಳ್ಯಾಳ್ರಿ ಬೆಸ್ತ್ಯಾರುದಯಕ
ಹಾಗರ ಬಿದ್ದು ಹೊರಳಾಡತಾಳ್ರಿನೆಲಕ ಹಾಂ ಹಾಂ ಸುಡಲೆನ್ನ ದೈವಕ
ಕಟ್ಟಿದ ಕರಿಮಣಿ ಚಟ್ಟನೆ ಹರಿದಾಳೊ ಸುಟ್ಟು ಹೋಗಲೀ ಕ್ಷಣಕ
ಹಸರ ಬಳಿ ತಗದ ಹಾಕ್ಯಾಳ ಗಿಡಕ ಹಾಂ ಹಾಂ ಸುಡಲೆನ್ನದೈವಕ

. ಕಾಸೀಮನ ರೂಪದ ಪದಾ

ಕಂದ ಕಾಸೀಮನೋ ಇಂದಿಗೆ ಎರವಾದನೋ
ಇಂದಿಗೆ ಎರವಾದನೋ ಹುಣ್ಣಿಮಿ ಚಂದ್ರಾಮನೋ
ಅವನ ಬಣ್ಣ ಲಿಂಬಿ ಹಣ್ಣ ತಿದ್ದಿ ತೀಡಿದ ಕಾಮನೋ
ತಿದ್ದಿ ತೀಡಿದ ಕಾಮನೋ ಹುಣ್ಣಿಮಿ ಚಂದ್ರಾಮನೋ
ಅವನ ಕಣ್ಣ ಕವಳಿ ಹಣ್ಣ ಮೂಗು ಸಂಪಗಿ ತೆನಿಯನ
ಮೂಗು ಸಂಪಿಗೆ ತೆನಿಯನ ತುಟಿಯು ಹವಳದ ಕುಡಿಯನ

. ಕಾಸೀಮನ ಮದುವೆ ಮತ್ತು ಲಢಾಯಿ

ಸವಾರಿ ಹೊರಟಿತೋ ಮದುಮಗನ ದುಃಖ ಮಾಡತಾರೋ ಸರ್ವಜನಾ
ಹದಿನಾರು ವರ್ಷದ ವೀರಕಾಸೀಮನಾ ಮದುವ್ಯಾಗಿ ಕಳಿದಿಲ್ರಿ ಮೂರು ದಿನಾ
ಕೈಯ್ಯಾಂದು ಬಿಚ್ಚಿಲ್ಲಾ  ಕಂಕಣಾ ಅರಿಷಿಣ ಮದರಂಗಿ ಇತ್ತು ಮಕನಾ
ಏನು ಹೇಳಲಿ ಲಗ್ನದ ಸಡಗರನಾ ದಂಡು ಕೊಡತೇನ್ರಿ ಗಣ ಗಣಾ
ದಂಡು ಮಾಡ್ಯಾರ ತಯ್ಯಾರನಾ ಆನಿಗೆ ಮಾಡ್ಯಾರ ಸಿಂಗಾರನಾ
ಮುಂದ ನಡಸ್ಯಾರೋ ಹಸಿರು ನಿಶಾನಾ ಹೊಡಸ್ಯಾರೋ ಡಂಕದ ನಗಾರಿನಾ
ಕರ್ಬಲಕ ಇಳಿದೈತೋ ಎಲ್ಲಾ ಜನಾ ನೀರು ಇಲ್ಲದ ಆರ‍್ಯಾಣನಾ
ಕಾಳಗಕ ಹೋಗಬ್ಯಾಡ ಕಾಸೀಮ ನೀನಾ ಚಿಂತಿ ಮಾಡಬ್ಯಾಡ ತಾಯವ್ವ ನೀನಾ
ವೈರಿಗೂಡ ಮಾಡತೇನಿ ಕಾಳಗನಾ ನೆತ್ತರು ಹರಿಸಿದ ಕರ್ಬಲನಾ
ಸುತ್ತು ಕಡೆ ಬಿದ್ದಾವೋ ಹೆಣಾ ನರಗುಂದ ಮೌಲಾಗ ನಮ್ಮ ಶರಣಾ

. ಕಾಸೀಮನ ಕುರಿತು ಚುಟುಕು ಪದಗಳು :

ಕಾಸೀಮ ಶರಣ ಸಣ್ಣ ಬಾಲಕನಾ
ಮೈಯಲ್ಲಿ ಅರಿಷಿಣ ತೊಟ್ಟಾರ ಕಂಕಣಾ
ಕರ್ಬಲಕ ಹೊರಟಾರೋ ಕಾಸೀಮ ಶರಣಾ
ಬ್ಯಾಡಂತ ಹೇಳತಾಳೋ ಬಾನು ಬೀಬಿಯನಾ
ತಾಯಿ ಮಾತು ಮೀರಿ ಹತ್ಯಾರ ಕುದುರಿಯನಾ
* * *
ಕಾಸೀಮನ ಕುದುರಿ ರಣದೊಳು ಮೀರಿ ಕಾಲುಕೆದರಿ ನಿಂತಿತಲ್ಲಾ
ಕಾಲು ಕೆದರಿ ನಿಂತಿತಲ್ಲಾ | ರಕ್ತದೊಳಗ ಮುಳಗ್ಯಾವ ಕಾಲಾ
* * *
ದುರುಳರು ಕರಿಸ್ಯಾರೋ ಕರ್ಬಲ ರಣಕ ಸರಸುಳ್ಳ ಶರಣರನಾ
ಸತ್ಯದಿ ಭಜಿಸುವೆ ನಿತ್ಯದಿ ನೇಮಾ ಕಾಸೀಮ ಶರಣರನಾ
ಕಡಿಚಂದ್ರ ಅಸ್ಗರ ಕಲ್ಲು ಮುಳ್ಳು ತುಳಿದು ಆದೆವಪ್ಪಾ ಅಭಿಮಾನಾ
* * *

. ಅಸ್ಗರ ಅಲಿ ಪದಾ

ಕುಂತ ಕೇಳರಿ ಧ್ಯಾಸಾ | ಅಲಿ ಅಸ್ಗರ ವನವಾಸಾ
ಅಸ್ಗರ ಕೂಸಾ ‘ಪಾನಿಸೆ ಪ್ಯಾಸಾ’ ಯಜೀದ ಮಾಡಿದ ಮೋಸಾ
ಆ ಹಾ ಹಾ ಮರವಾನ ಬಾಣ ಬಿಟ್ಟ ಸರಸಾ
ತಲ್ಲಣಿಸುತ ಮನಸಾ ಅಸ್ಗರ ಪ್ರಾಣಬಿಟ್ಟ ಪ್ಯಾಸಾ
ಬಾನವ್ವನ ಧ್ಯಾಸಾ ಉಡಿಯೊಳು ಕೂಸಾ ಹೊಂಟಾಳುಪವಾಸಾ
ಆ ಹಾ ಹಾ ಮಗನೆ ತಂದೆಲ್ಲೋ ವನವಾಸಾ
ಯಾರಿಗೆ ಕೊಂಡುಕೊಡಲಿ ಮಿಠಾಯಿ ಬೆಂಡು ಬೆತ್ತಾಸಾ
ಆ ಹಾ ಹಾ ಕುಂತ ಕೇಳರಿ ಧ್ಯಾಸಾ ಅಲಿ ಅಸ್ಗರ ವನವಾಸಾ

. ಅಸ್ಗರ ಅಲಿ ತಾಯಿಯ ಪದಾ

ಕುಂತ ಕೇಳರಿ ಪಂಡಿತ ಜನಾ ನಿಂತು ಹೇಳುವೆ ಒಂದೇ ಕ್ಷಣಾ
ಶಾಂತಿಲಿಂದ ಕೇಳರಿ ಪೂರ್ಣಾ ಕುಂತ ಜನಾ ಹೇಳುವೆ ಶರಣರ ಬಯಾನಾ
ಅಸ್ಗರ ಅಂವಾ ಸಣ್ಣಬಾಲಾ ಅಂವಗ ತಂದ ಕೊಡಲಿಲ್ಲೊ ನೀರಾ
ಗಂಟಲಾರಿ ಬಳಲುತ ಅಂವಾ ಹತ್ತುದಿನಾ ಇಲ್ಲಿಗೆ ಮುಗಿದಾವೋ ಸಂಪೂರ್ಣಾ
ಚಿಂತಿಲಿಂದ ಅವರ ತಾಯಿಯನಾ ಕುಂತ ನೆನದಾಳೋ ದೇವರನಾ
ನನ್ನ ಕಂದ ಅಸ್ಗರ ಅಲಿಯನಾ ನೀರ ಇಲ್ಲದೆ ಹೋದೀತ ಪ್ರಾಣಾ
ಸಾಕು ಮಾಡೋ ಶರಣರ ವರಣಾ ಜ್ವಾಕಿಲಿಂದ ಪಾರಾಗೋ ನೀನಾ
ಕಳ್ಳತನ ಬಿಟ್ಟು ಮಾಡೋ ದೇವರು ಧ್ಯಾನಾ
ಸುತ್ತ ದೇಶಕನಾ ಹಂಪಿಹೊಳಿ ಇರುವುದು ವಾಹಿನಾ

೧೦. ಬಾನೂ ಬೀಬಿ ಅಳಲಿನ ಪದಾ

ಬಾನೂ ಬೀಬಿ ಅಡವಿ ಆರಾಣ್ಯದೊಳು ಹಡದಾಳಲ್ಲಾ
ಕೊಳೆಯ ತೊಳೆಯಲಾಕ ಮುಕ್ಕನೀರ ಇಲ್ಲಾ
ಶಿವನ ನೆನೆ ನೆನೆದು ಅಳತಾಳಲ್ಲಾ |
ಅಯ್ಯೋ ಮಗನೆ ಒಂದು ದಿನ ಕಣ್ಣೀಲೆ ಪ್ರೀತಿ ನೋಡಲಿಲ್ಲಾ
ಹಸರಂಗಿ ಹಾಲ್ಗಡಗ ಹಾಕಲಿಲ್ಲಾ ಮನಸಾರೆ ನೋಡಿ ನಲಿಯಲಿಲ್ಲಾ
ಶಿವನ ನೆನೆ ನೆನೆದು ಅಳತಾಳಲ್ಲಾ |
ಬಾನೂ ಬೀಬಿ ಗಿಡಕ ತೊಟ್ಟಿಲವನ್ನು ಕಟ್ಯಾಳಲ್ಲಾ
ತೊಟ್ಟಿಲದೊಳು ಕೂಸಿನ್ನ ಹಾಕ್ಯಾಳಲ್ಲಾ ಜೋಗುಳ ಹಾಡುತ ಅಳತಾಳಲ್ಲಾ
ಶಿವನ ನೆನೆ ನೆನೆದು ಅಳತಾಳಲ್ಲಾ |
ಅಯ್ಯೋ ಮಗನೆ ಬಂಧು ಬಳಗ ನಿನಗಿನ್ನು ಯಾರು ಇಲ್ಲಾ
ತಂದಿಯ ಗುರುತು ಮೊದಲಿಗೆ ನಿನಗ ಇಲ್ಲಾ
ಶಿವನ ನೆನೆ ನೆನೆದು ಅಳತಾಳಲ್ಲಾ |
ಬಾನೂ ಬೀಬಿ ಧರಣಿ ಮೇಲೆ ತಾನು ಕುಳಿತಾಳಲ್ಲಾ
ಸಾಂಬನ ನೆನಸೂತ ಅಳತಾಳಲ್ಲಾ ಗಂಭೀರ ಮಕ್ಕಳು ಮಡಿದಾರಲ್ಲಾ
ಶಿವನ ನೆನೆನೆನೆದು ಅಳತಾಲ್ಲಾ |
೧೧. ಹುಸೇನರ ಪದಾ
ಸ್ವಾಮಿ ಹೊರಟಾರೋ ಶರಣಾ ಅವರಿಗೆ ಮೂಲಾತೋ ಕರ್ಬಲದರಣಾ
ನೂರಾರು ಬಂಡಿಯ ಮೇಲೆ ಬಾಣಾ ಹೌಹಾರಿ ಕುಂತಾನೊ ಹುಸನೈನಾ
ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ ಯಜೀದರ ಹಾದಿಗೆ ಹಚ್ಚಿತೋ ನಿಶಾನಾ
ತಾಯಿ ಕರುಳು ಎಂಬುದು ಬಲು ಹೆಚ್ಚು ಕುಂತು ಸೋಸ್ಯಾಳೋ ಭೂಮಿಯ ಮಣ್ಣಾ
ಶಿಶಿನಾಳ ಎಂಬುದು ಜಾಹೀರಾ ಶರೀಫ ಸಾಹೇಬ ಮಾಡ್ಯಾನೋ ಕವಿ ಚಾತೂರಾ
* * *
ಕಲಹ ಕದನಕ್ಕೆ ಹೋಗಿಲ್ಲೊ ಹಸೇನ ಹುಸೇನಾ
ವಿಚಾರ ಮಾಡಾಕ ಹೋಗಿದ್ರೋ ಇಮಾಮ ಹುಸೇನಾ
ಇಮಾಮ ಹುಸೇನಾ ಕರ್ಬಲಾದೊಳಗೆ
ವಿಚಾರ ಮಾಡುವಲ್ಲಿ ಆತವರ ಮರಣಾ
* * *
ಗಣವೀರ ಶಾ ಹುಸೇನಾ | ರಣ ಮಧ್ಯ ಕೊಟ್ಟಾರೋ ಪ್ರಾಣಾ
ಮನದಲ್ಲಿ ತನ್ನ ಪಿತನಾ | ನೆನಸುತ್ತ ಸತ್ತ ಶರಣಾ
ರಣ ಹೇಡಿ ಕ್ರೂರ ಯಜೀದನಾ | ಬಾಣ ತಾಕಿ ಮುಚ್ಯಾವ ಕಣ್ಣಾ

೧೨. ಶುಮರನ ಪದಾ

ಶುಮರ ಹೈವಾನಾ ಕರುಣವಿಲ್ಲದೆ ತಾನಾ | ಮೋಸ ಮಾಡಿದ ಜಾಣಾ
ಕುಲಹೀನಾ ಮೋಸ ಮಾಡಿದ ಜಾಣಾ | ಖಾದರಿ ಹುಲಗೂರ ದಯಾಪೂರ್ಣಾ

೧೩. ಜಯನಬಿಯ ರೋಧನ

ಕುಂತ ಕೇಳರಿ ಕಾಸ ಚಿತ್ತಿಟ್ಟ ಜಯನಬಿ ಅಳತಾಳೋ ನೋಡಿ
ಅಳವೂತ ಮಗನ ಕರೆಯುತ ದಳದಳ ಕಣ್ಣೀರ ಸುರಿಸೂತ
ರಾಜಹಂಸ ಮಗ ಮಡಿದ ಸುದ್ದಿ ಸೂರ‍್ಯ ಚಂದ್ರರಿಗೂ ತಿಳಿಯಿತೋ ಬುದ್ದಿ
ಜೈನಬಿ ಮಾಡ್ಯಾಳೋ ಸಾಹಸ ಅಂಗಿ ಕುಂಚಗಿ ಹೊಲಿಸಿದ್ದಳೋ ಬಾರಿ
ಬೆಳ್ಳಿ ಬಂಗಾರ ಮಸ್ತ ಮಾಡಿದ್ದಳೋ ಮನಸಾರಿ
ಯಾರಿಗಿಡಲೊ ಕೂಸ ರಾಜಹಂಸ ಯಜೀದ ಮಾಡಿದನೋ ಮೋಸ

೧೪. ಮುಹ್ಮದ ಹನೀಫರು ಲಡಾಯಿ ಮಾಡಿದ ಪದಗಳು

ಮುಹ್ಮದ ಹನೀಪ ಮೌಲಾಲಿ ಬಾಲಾ | ವಿಪರೀತ ಲಡಾಯಿ ಮಾಡಿದರಲ್ಲಾ
ಯಜೀದರ ಜನರೆಲ್ಲಾ ಕೂಡ್ಯಾರಲ್ಲಾ | ಕರ್ಬಲ ತುಂಬೈತಲ್ಲಾ | ಲಷ್ಕರಿನಳತಿಲ್ಲಾ
ಮುಹ್ಮದ ಹನೀಪ ಹೇಳಿ ಹೊಕ್ಕಾರಲ್ಲಾ | ಬಿಸಮಿಲ್ಲಾ ದಂಡಿನ ಮೇಲಾ
ಹರಿಸೂತ ರಕ್ತದ ಕಾವಲಾ | ನೆತ್ತರಕಳತಿಲ್ಲಾ ಕುದುರಿ ಈಸಿತಲ್ಲಾ
ಯಜೀದರ ರುಂಡ ಚಂಡಗಳೆಲ್ಲಾ | ತೂರ‍್ಯಾರಲ್ಲಾ ಗಗನದ ಮೇಲಾ
* * *
ಮೌಲಾಲಿ ಮಗ ಮುಹ್ಮದ ಹನೀಪ | ಕುದುರಿನೇರಿ ಹೋಗಿ ಹೊಕ್ಕಾರೊ ರಣದೊಳು
ರಣದೊಳು ಹೊಕ್ಕ ಮಹ್ಮದ ಹನೀಪ | ಯಜೀದನ ದಂಡ ಸಂಹಾರ ಮಾಡಿದ
* * *
ಮಹ್ಮದ ಹನೀಪ ಸಾಹೇಬದೊರಿ | ಗಮಕೀಲೆ ಗರಜಿಸಿದ ಕುದುರಿ
ದಮೇಶದೊಳಗ  ಮೋಸ ಮಾಡಿದಾರೋ ಯಜೀದರೋ
* * *