. ಮುನ್ನೂರಾರವತ್ತು ಹೆಂಡರ ಗಂಡನ ಹೆಸರು

ಅತ್ತ ಇತ್ತ ಸುಳ್ಳ ಕಳಿಬ್ಯಾಡೋ ಹೊತ್ತಾ
ಮಾಡಿ ವ್ಯರ್ಥಾ ಕವಿ ತಿಳಿಯದೆ ಅರ್ಥಾ || ಪಲ್ಲವಿ ||

ಏರು|| ನಗತ ನಗತ ಬೆದಿ ಗೊತ್ತಿಲ್ಲದ ಹಾದಿ
ಒರಸುವೆ ಮುಕಳಿಗ ಬೂದಿ ತೆರುಹಾಂಗ ನಿನಗೂದಿ
ತಗೋ ಇನ್ನ ಚಡತಿ | ಮಾಡತೇನಿ ಜಡತಿ | ಬಿಟ್ಟ ಪಡಾ ಓಡತಿ
ಕೊಟ್ಟರ ಬರಿ | ನಗುನಗುತಾ ಮೋಜು ಮಾಡೂನೋ ನಿಂತಾ
ಸುತ್ತ ಮುತ್ತ ಕುಂತಿರಿ ಕೇಳರಿ ಬುದ್ದಿವಂತಾ || ೧ ||

ಇಡೋ ಚಿತ್ತಾ ಕವಿ ಮಾಡಿ ಹಾಡುವೆ ಸೊಂತಾ
ಇಲ್ಲಂತ ಹೇಳಿದರ ಮಾರೂಂಗಾ ಸರಪೆ ಜೂತಾ
ಏರು| ನಿಂತ ಹೊಯ್ಕಾಂಡಿ ಬಂದ ಸಿಕ್ಕೊಂಡಿ | ಕೇಳೋ ತಮ್ಮಾ ಸುಖಾ ಏನ ಉಂಡಿ
ಬಿಡಿಸುವೆ ನಿನ ತಿಂಡಿ | ಇಡೂದಿಲ್ಲ ಮುಚ್ಚಿ | ಹೇಳತೇನಿ ಬಿಚ್ಚಿ
ಬಾಯಾಗ ಉಚ್ಚಿ | ಹೊಯ್ಯುವೆನು ನಿಂತಾ | ಕೇಳೋ ಮಾತಾ
ಎನಗೂಡ ಇಟ್ಟರ ಪಂತಾ | ಒದುವೆ ನಿಂತಾ | ಸಿಡೂಹಾಂಗ ಮುಕಳ್ಯಾಗಿನ ಜಂತಾ || ೨ ||

ಕುಂತಿ ಬೆರೆತಾ ತಗೋ ಕಡತಾ ಮ್ಯಾಲೆ ಕಡತಾ |
ಬಾರೋ ಕಲತಾ | ಆಗಿ ಗುರುವಿನ ತೊತ್ತಾ |
ಏರು| ಬಲ್ಲವಗ ಏನ ಬಿರಿ ಶಾಯಿರಿ ಮಾಡುವುದು |
ನಿನ್ನಂತ ಬುದ್ದಿಗೇಡಿಗೆ ಹ್ಯಾಂಗ ತಿಳಿಯುವುದು |
ಅಂದಲ್ಲೋ ನೀ ಹೋಗಿ ಮನಿಮನಿ ತಿರುಗತಿಯೋ ಸ್ವಾನಿ
ಚೈನ ಇಲ್ಲದಾಂಗ ಕೇಳಿಕೊಂತ ಮಂದಿ ಕೈಕಾಲ ಹಿಡಕೊಂತಾ
ತಿರಗತಿ ಸೊಂತಾ ಸಲಾಮ ಖುದಾಕು ಕೈಸೆ ಮಿಲತಾ || ೩ ||

ಎಷ್ಟಂತ ಹಾಡಿ ಲೌಡಿ ಕುಣಿಕೊಂತಾ | ರಕ್ತ ಬಂದೀತ ಹ್ವಾದಿ ಅತಗೊಂತಾ |
ಏರು| ಬೈದಾಡೂದು ನಿಮಗ ಸೆಂವಿ ಕಂಡೈತಿ | ಭಂಡತನಕ ನಾ ನಿಮಗಂಡ
ನಿಮದೇನ ನಡುತೈತಿ ಇನ್ನಾರ ತಿಳಿಯೋ | ಕೋಪಯೆಲ್ಲ ಅಳಿಯೋ
ಹಿಡಿಕಸಬರಗಿ ಪುಟ್ಟಿ | ಹೊತ್ತ ಆಗಿ ಇಬ್ಬರು ಜತ್ತಾ
ನಡಿಬೇಕೋ ಶಿಸ್ತಾ | ನೋಡೋ ಕೈಯಾಗಿನ ಬೆತ್ತಾ || ೪ ||

ಹಿಡಿಯೋ ಗುರ್ತಾ ನಿಮಗ ಬಂದೈತಿ ಹೊತ್ತಾ
ನುಡಿಸಿ ನುಡತಾ | ಕೊಡುವೆ ಎಣಿಸಿ ರೂಪಾಯಿ ಹತ್ತಾ |
ಏರು | ಮುಪ್ಪಿನ ಕಾಲಕ ಸರಿ | ಬಂತ ನಿನಗ ಚಾಕರಿ | ಮುನಸಿಪಾಲಿಟಿಗೆ ಹೋಗಿ
ಕೊಡಬೇಕ ಹಾಜರಿ ಹಿಡಿನೆಪ್ಪಾ ಇನ್ನಾ | ಒಪ್ಪುದು ಸ್ವಾನಾ ತಪ್ಪದೆ ನೀನಾ
ಹೋಗಿ ದರದಿವಸ ಬ್ಯಾಸತ್ತ ಕೋಳೋ ಮಾಡಿದರ ಹರಕತಾ
ಕುಂತರ ಮರತಾ ಸಿಗಲಿಕಿಲ್ಲೊ ರೂಪಾಯಿ ಹತ್ತಾ || ೫ ||

ಇಡರಿ ಚಿತ್ತಾ ತಿಳಿಸುವೆ ಮಾತೊಂದಾ ಮುತ್ತಾ | ಉತ್ತರ ತುರ್ತಾ ಕೊಡುವೆ ಈಗ ಪರ್ತಾ
ಏರು | ಮೂನ್ನಾರಾರವತ್ತು ಸ್ತ್ರೀಯರು ಅಂದರೆ ನರಗಳು | ಗಂಡ ಅಂಬುವಂತ ಆತ್ಮದಲ್ಲಿ
ಜೀವಾ ಕೇಳೋ | ಬಾಲಗಕೋಟಿ ಮೋಜಿನ ಪ್ಯಾಟಿ | ನೆನೆದಾರ ಘಟ್ಟಿ
ಪೀರ ಮಲ್ಲೇಕಲ್ಲ ಇಟ್ಟಾರೋ ಹಸ್ತಾ | ಹುಸೇನಮಿಯ್ಯಾನ ತಲಿಮ್ಯಾಲೆ ಶಿಸ್ತಾ
ನೋಡಿ ಸೊಂತಾ ಕೇಳಿ ನಿಂತಾನ ವೈರಿ ಬೆರೆತಾ || ೬ ||

* * *

. ಮೂನ್ನೂರಾರವತ್ತು ಹೆಂಡರ ಗಂಡನ ಹೆಸರೇನು?

ಮುಂಚೆ ಮೊದಲಿಗೆ ನಾನು | ನಮಿಸುವೆ ಸ್ವಾಮಿ ಶಂಕರನಾ
ಏರು|| ಅಷ್ಟ ಜೀವರಾಶಿಗೆ ಹುಟ್ಟಿಸಿ ಕಳುಹಿ | ಪರಿಪರಿಯಿಂದ ಅವರಿಗೆ ಸಲುಹಿ
ಜೋಕೆ ಮಾಡ ಎನ್ನ ಜತನಾ | ಮರೆಯದೆ ಭಜಿಸುವೆ ನಾನಾ || ೧ ||

ನೆನೆಸುವೆ ಮನವಿಟ್ಟು ಹಸನಾ | ಸುತ್ತ ದೇಶಕ್ಕ ಮಕ್ಕಾ ಮದೀನಾ
ಏರು|| ಅಲ್ಲೆ ಇರತಾರೋ ನಬಿಸಾಬ ಶರಣಾ | ಮೌಲಾ ಖಾತೂನ ಜನ್ನತನಾ
ಹಸನೈನ ಹುಸನೈನಗ ಶರಣಾ | ತುಸು ಇಡರಿ ಇತ್ತ ಕರುಣಾ ಕುಂತಿರು ದೈವಕ್ಕ ಶರಣಾ || ೨ ||

ಈ ಮಾನವ ಜಲ್ಮಕ ಹುಟ್ಟಿ ಬಂದು | ನೀವು ನಡಿಸರಿ ಹುಕುಮ ಸಾಂಬಂಧ
ಏರು|| ನಿತ್ಯ ಕೊಡಬೇಕ ದಾನಾ | ಭಕ್ತೀಲೆ ಇಟ್ಟು ಮಾನಾ
ನಿತ್ಯ ಐದು ಹೊತ್ತಿನಾ | ನಮಾಜ ಮಾಡುವರೊ ದಿನಾ || ೩ ||

ನಮಾಜ ಮಾಡಿದಂವಗ ಸ್ವರ್ಗದಾಗ ಹಾಕುವರೋ
ಏರು|| ಬೇನಮಾಜಿಗೆ ನರಕದಾಗ ದೂಡುವರೋ | ದುಡ್ಡು ದುಗಲ ಕಾಂಚಾಣಾ
ಖರ್ಚು ಹತ್ತುದಿಲ್ಲಾ ಏನೇನಾ | ತುಸು ಮಾತಿನ ಕಲ್ಪನಾ || ೪ ||

ಶಾಹೀರಗ ಕೇಳತೇನಿ ನಾನಾ | ಮುನ್ನೂರಾರವತ್ತು ಹೆಂಡಿರಗಂಡು ಒಬ್ಬ ಇರತಾನೋ
ಜಗತ್ತಿನೊಳಗ ಪುಂಡಾ ಹೇಳ ಅವನ ಹೆಸರೇನಾ | ತಿಳಿತೈತಿ ನಿನ್ನ ಶಾಣೇತನಾ || ೫ ||

ಇ|| ಗುರು ನಮ್ಮ ದಸ್ತಗೀರಗ ಶರಣಾ ಕೇಸುಪೀರ ಕುಸಿಯಿಂದಾ ಶರಣಾ
ಏರು|| ಬಾಗಲಕೋಟ್ಯಾಗ ಇರತಾರೋ | ನಾಗೂ-ಗೌಸು ಮಾಡಿ ರಿವಾಯಿತ
ಹೇಳತಾರೋ ಚಂದದಿಂದ ಮಾಡುವೆ ದೈವಕ್ಕ ಶರಣಾ || ೬ ||

* * *

. ನೆಲಕ್ಕೆ ಹತ್ತದ ಗಿಡದ ತಪಶೀಲೇನು?

ಪೃಥ್ವಿಪಾಲಕ ಸಂಬಗ ಶರಣಾ | ಮಾಡುವೆ ಮೊದಲಿಗೆ ನಾ
ಇರಿಬಿ ಎಂಬತ್ತು ಕೋಟಿಗೆ ದಾತಾ ಅವನೇ ಭಗವಂತಾ
ಯಾರಿಲ್ಲಾ ಅವನ ಹೊರತಾ | ಮಾಡಾಂವಾ ನೋಡಾಂವಾ ಕೊಡಾಂವಾ
ಮುಕ್ತಿ ಸ್ವಾದೀನಾ ಇಟ್ಟು ನಡಿಯಬೇಕ ಇಮಾನಾ | ಆತನ ಪಾದಕ ಶರಣಾ || ೧ ||

ಸುತ್ತ ದೇಶಕ ಮಕ್ಕಾ ಮದೀನಾ ಆಗೇತರಿ ಬಹಳ ವಾಹಿನಾ
ಏರು|| ನಬಿಸಾಬ ಶರಣಾ ಬೀಬಿ ಕಾತೂನಾ | ಮೌಲಾನ ರತನಾ
ಹಸನ ಹುಸೇನಾ ಇವರ ಮನಕಂದನಾ
ಅವರಿಗೆ ವಂದಿಸುವೆ ನಾನಾ ಆತನ ಪಾದಕ್ಕ ನನ್ನ ಶರಣಾ || ೨ ||

ಒಂದ ಗಿಡಾ ಕಂಡೇನಿ ಅದರ ಬುಡಾ ನೆಲಕ್ಕ ಹತ್ತುದಿಲ್ಲೇನಾ
ಏರು|| ಇಪ್ಪತ್ತೊಂದ ಟೊಂಗಿ ಅದಕ್ಕ ಹಣ್ಣು ಇದ್ದವು ಹದಿನಾಲ್ಕು
ಒಂದ ಹಣ್ಣ ತಿಂದರ ಮೂಕ ಒಂಬತ್ತ ತಿಂಗಳ ತನಕ
ಹೇಳೂತನಕ ಮುಂದಕ್ಕ ಬಿಡೂದಿಲ್ಲಾ ಗಿಡಕ ಬಿಡುತೇನಾ
ಮುದ್ದತ್ ತಗೊಳು ಸಾವೂತನಾ || ೩ ||

ಹೋಗಿ ಕೇಳೋ ನಿಮ್ಮ ಗುರುವಿನಾ ಮಾಡುವೆ ಮೊದಲಿಗೆ ನಾ
ಒಳೆ ಬಂದ ಸಿಕ್ಕಿದೀ ಶಾಹೀರಾ ನಿನಗ ಹಾಕೇನಿ ಗಂಟಲಗಾಣಾ
ಏರು|| ಒಂದು ಕೊಡ ನೀರ ಅದಕ | ಹಣಿಸಲಿಲ್ಲೊ ಆ ಗಿಡಕ
ಹೇಡಿ ಸರ್ಪ ಅದಕ ತೊಡಕ ಹಾಕಿತೋ ಆ ಗಿಡಕ
ಶಾಹೀರಾ ಗಂಭೀರಾ | ಹುಶಿಯಾರಾ ಆಗಬೇಕೋ ನೀನಾ
ಉಸರ ಹಾಕಬ್ಯಾಡೋ ಸ್ವಾನಾ | ಬಂದ ಹೊಲಸ ಪಂಡಿತ ಕೋಣಾ || ೪ ||

ಸುತ್ತ ದೇಶಕ ಬಾಗಲಕೋಟಿ ಆಗೇತರಿ ಬಹಳ ವಾಯಿನಾ
ಏರು|| ಪೀರ ದಸ್ತಗೀರನ ದಯಾ ಇರೂತನಕ
ಸಭೆದಲ್ಲಿ ಹಾಡುವೆ ಖಡಕ ಲಕ್ಷಣಸಿಂಗನ ಕವಿ ಬಲೇ ಖಡಕ
ಶಾಹೀರ ನಿಂದರೊ ಎಡಕ ಬಹಾದ್ದೂರ ಗಂಭೀರಾ
ಹುಶಿಯಾರಾ ಆಗಬೇಕೋ ನೀ ಇನ್ನ ಹೋಗಿ ಸಾಲಿ ಕಲಿಯೊ
ಗುರುವಿನ ನಾಮವೇ ಮೊದಲಿಗೇನಾ || ೫ ||

* * *

೧೦. ಯಾರು ಆದ್ರೋ ಆಕಿ ಲಗ್ಗಣಾ ನೋಡಿ ಹೇಳೋ ಶಾಹೀರಾ

ಬಂದ ಕೂಡಿರಿ ಜನಾ | ಮಾಡುವೆ ಈಗ ಶರಣಾ
ತಪ್ಪಾದ್ರ ನನ್ನ ನುಡಿನಾ | ಮಾಪ ಮಾಡ್ರಿ ಇನ್ನಾ ||
ಏರು|| ನಾನೇ ಶಾಹೀರನೆಂದು ನೀನಾ || ಸಾರಿ ಹೇಳಬ್ಯಾಡೋ ಇನ್ನಾ
ಘೋರ ತರುವನು ಬಗವಾನಾ | ಹೋಗುವಾಗ ನಮಗಿನ್ನಾ
ಗರುವು ಬಿಟ್ಟು ನಡಿಯೋ ನೀ ಇನ್ನಾ
ದಿನ ನಿತ್ಯ ಸ್ಮರಿಸೋ ಸಾಂಬನ್ನಾ | ಮನದೊಳಿನ್ನಾ
ಅಂದರೆ ಸಿಗುವುದು ಮೋಕ್ಷನಾ | ನೆನಸು ಅಲ್ಲಾನ್ನಾ || ೧ ||

ಮುಂದ ಕೇಳ್ರಿ ನಾನಾ | ಹೇಳುವೆ ಆದಂತ ಸೂಚನಾ |
ನಾಲ್ಕು ಮಂದಿ ಒಳ್ಳೆಗೆಳೆತನಾ | ಕಳಿತಿದ್ರೊ ಕೂಡಿ ಕಾಲವನಾ |
ಏರು|| ಒಂದನೆಯವರು ಬಡಿಗಾರವನಾ | ಎರಡನೆಯವನು ಚಿಂಪಿಗಾರವನಾ
ಮೂರನೆಯವನು ಪತ್ತಾರವನಾ | ನಾಲ್ಕನೆಯವರು ಮುಸಲ್ಮಾನಾ
ಒಂದು ದಿವಸ ಮಾಡಿ ಅವರು ಹವಣಾ | ಮಾಡಲಿಕ್ಕೆ ಹೋಗಾಣಾ ಸಂಚಾರನಾ
ಅಡವಿ ಆರ‍್ಯಾಣಾ ಹೋಗಿ ನಿಂತ್ರೊ ಅವರು ಕಾನನಾ
ಮುಂದ ಕಾಣಲಿಲ್ಲೊ ಏನೇನಾ || ೨ ||

ಎಂತಾ ಹೊತ್ತು ತಂದಿಯೋ ನೀನಾ | ಕಾಯಬೇಕೋ ಭಗವಾನಾ
ಸ್ಮರಿಸುತ ಕುಂತಾರೋ ಸಾಂಬನಾ | ಹಮ್ ಕ್ಯಾ ಕರನಾ
ಏರು|| ಕುಂತು ಮಾಡ್ಯಾರೊ ಯೋಚನಾ | ಮೂರು ತಾಸು ಒಬ್ಬೊಬ್ಬರನಾ
ಇದರಂತೆ ಸರತಿನಾ | ಕಾಯಬೇಕೋ ಸಾಮಾನಾ
ಪಾಳೆ ಪ್ರಕಾರನಾ | ಅದರಂತೆ ಇನ್ನಾ
ಮುಟ್ಟುವುದು ನಮ್ಮ ಪಾಳಿನಾ | ಒಂದೇ ಸವನಾ || ೩ ||

ಬಡಿಗೇರಾವಾ ಮಾಡಿಟ್ಟಾನಾ | ದೊಡ್ಡದೊಂದು ಗೊಂಬಿಯನಾ
ಗೆಳಿಯಾಗ ಹೇಳ್ಯಾನೋ ಸೂಚನಾ | ಏಳು ನೀ ಮಲಗುವೆ ನಾನಾ
ಏರು|| ಎದ್ದು ಕುಂತು ಚಿಂಪಿಗ್ಯಾ ಇನ್ನಾ | ಸುತ್ತ ಮುತ್ತ ನೋಡ್ಯಾನೋ ತಾನಾ
ದೊಡ್ಡಗೊಂಬಿ ಕಂಡಿತಾಕ್ಷಣಾ | ಕಣ್ಣೀಗೆ ಸಂಪೂರಣಾ
ಈ ಗೊಂಬಿ ಯಾಂವ ಮಾಡ್ಯಾನಾ | ಏನ ಚಂದ ಕಾಣುವುದು ಇದರ ವರಣಾ
ಏನು ಮಾಡಲಿ ನಾನಾ ಹೊಲಿದು ಹಾಕುವೆ ಬಟ್ಟೆಯನಾ ಎಲ್ಲಾ ತರತರನಾ || ೪ ||

ತನ್ನ ವ್ಯಾಳೆ ಮುಗಿಯಿತು ಇನ್ನಾ | ಎಬಿಸ್ಯಾನೊ ಪತ್ತಾರವನಾ
ಮಲಗಿಕೊಳ್ಳುವೆ ನಾನಾ | ಕಾಯಪ್ಪಾ ನೀನಾ ||
ಏರು|| ಎದ್ದು ಪತ್ತಾರ ನೋಡುತಾನಾ | ಚಿತ್ತಾರದ ಗೊಂಬಿಯನಾ
ಯಾವ ಇಲ್ಲಿ ಮಾಡಿ ಇಟ್ಟಾನಾ | ತೀರದು ಇದರ ವರಣಾ
ನಡುವಿಗೆ ಮಾಡಿ ವಡ್ಯಾಣಾ | ಬಾಜೂ ಬಂಧಿ ಕೈಗೆ ಇಟ್ಟಾನಾ
ಕೊರಳಾಗ ಇನ್ನಾ ಹಾಕಿ ಬಿಟ್ಟಾನಾ ಸ್ವಾಮಾನ ಎಲ್ಲಾ ತರತರನಾ || ೫ ||

ಎಬಸ್ಯಾನೊ ಸಾಹೇಬನಾ | ಬಂತು ನಿನ್ನ ಸರತಿ ಇನ್ನಾ
ಕಾಯಬೇಕೋ ನೀನು ಜಾಣಾ | ಮಲಗುವೆ ನಾನಾ
ಏರು|| ಎದ್ದು ಕುಂತು ನೋಡತಾನಾ | ಏನಿದು ಭಗವಾನಾ
ತಿಳಿಯಲಾರದು ನನಗ ಇನ್ನಾ | ಮಾಡಲಿ ಇನ್ನೇನಾ
ಸುಂದರವಾದ ಗೊಂಬಿಯನಾ | ಕಣ್ಣಿಲೆ ಕಂಡೆನಾ ನಿನ್ನಾ
ಅಬ್ ಮೈಕ್ಯಾಕರನಾ | ಸಾಂಬ ಶಿವನಾ
ಸ್ಮರಿಸುತ ಕುಂತ ಸುಮ್ಮನಾ | ಕೊಡು ಜೀವವನ್ನಾ || ೬ ||

ಭಕ್ತಿಲಿಂದ ಸಾಹೇಬನಾ | ನೆನಸೂತ ಅಲ್ಲಾನಾ
ಪಡೆದುಕೊಂಡಾನೊ ವರವನ್ನಾ | ಗೊಂಬಿ ಜಲ್ಮಕ ಇನ್ನಾ
ಏರು | ಗೊಂಬಿ ಜೀವತುಂಬಿ ನಿಂತಿತೋ ಇನ್ನಾ | ಏನು ಹೇಳಲಿ ಸುಂದರ ಹೆಣ್ಣಾ
ಕಾಣುವುದು ಕಣ್ಣಿಗೆ ಬಣ್ಣಾ | ಗಜ ನಿಂಬಿಯ ಹಣ್ಣಾ
ನಡಸಣ್ಣ ನೋಡ ನಡಗೀನಾ | ತುಟಿ ತೊಳಪ ಗಲ್ಲ ಹೊಳಪನ್ನಾ
ನವಲಿನ ವರಣಾ | ಕಾಣ್ವಳೊ ಆಕಿ ಯೌವ್ವನಾ |
ನಿಂತು ನೋಡ್ಯಾರ ಎಲ್ಲಾರು ತಾವಣ್ಣಾ || ೭ ||

ಬಡಿಗೇರಾವ ಅಂತಾನಾ | ನಾನೇ ಮಾಡಿದ್ದೆ ಈ ಗೊಂಬಿಯನಾ
ಮದುವೆ ಆಗುವೆ ನಾನಾ | ಬಿಡೂದಿಲ್ಲ ಈಕಿಯನ್ನಾ ||
ಏರು|| ಚಿಂಪಿಗಾರ ಅಂತಾನಾ | ತರತಹದ ಅರಬಿಯನ್ನಾ
ಹೊಲದ ತೊಡಸೇನಿ ನಾನಾ | ಮದುವೆ ಆಗುವೆ ಇನ್ನಾ
ಪತ್ತಾರವಾ ಹಿಂದ ಅಂತಾನಾ | ತರತರದ ಎಲ್ಲ ಸ್ವಾಮಾನಾ
ಮಾಡಿಇಟ್ಟಾವ ನಾನಾ | ಮದುವೆ ಆಗುವೆ ಇನ್ನಾ | ಬಿಡೂದಿಲ್ಲ ಆಕಿಯನಾ || ೮ ||

ಸಾಹೇಬ ಅಂತಾನಾ | ಹಂಗ ಇಟ್ಟಿದ್ರಿ ಗೊಂಬಿಯನಾ
ವರವು ಪಡಕೊಂಡು ಅಲ್ಲಾನಾ | ಜೀವ ತುಂಬಿಸಿನಿ ನಾನಾ
ಏರು|| ಮೈ ಶಾದಿ ಕರೆ ಇನ್ನಾ | ಆಗುವೆ ನಾನು ಲಗ್ಗನಾ
ಬಿಡೂದಿಲ್ಲಾ ಈಕಿಯನ್ನಾ | ತಡ ಮಾಡಲಾರೆ ನಾನಾ
ಅಂದು ನಿಂತಾನಾ | ಯಾರು ಆದ್ರೋ ಆಕಿ ಲಗ್ಗಣಾ
ನೋಡಿ ಹೇಳೋ ಶಾಹೀರ ನೀನು ಇನ್ನಾ | ಇದರ ಹವಣಾ
ಸೋಸಿ ತಗದಾಗ ಬಂಗಾರನಾ | ಕಸರಿಲ್ಲೋ ಏನಾ || ೯ ||

ನೋಡೋ ಹಿರೇ ವಡ್ಡಟ್ಟಿನಾ | ಪಗಡಿ ಬಾಜಾರನಾ
ಚಿಕ್ಕ ಮಸೂತಿಗೆ ಶರಣಾ | ಹೋಗಿ ಬೇಡಿಕೊಳ್ಳೋ ನೀನಾ || || ೧೦ ||

* * *

೧೧. ಮೂರು ಮಂದಿಯೊಳಗ ಲಗ್ನ ಆದಾಂವ ಯಾರು?

ಪಂಡಿತರು ಕೂಡಿರಿನ್ನಾ ಶರಣ ಮಾಡುವೆ ನಾ
ಏರು| ಒಂದು ಮಹತ್ವವನಾ ಹೇಳುವೆ ನಾನಾ | ಚಿತ್ತಿಟ್ಟ ಕೇಳರಿ ನೀವಾ ಸರ್ವಜನಾ
ಒಂದ ಊರಾಗ ಒಬ್ಬ ಸಾಹುಕಾರನ ಮಕ್ಕಳಿದ್ದರೊ ನಾಲ್ಕು ಜನಾ
ಒಂದು ಹೆಣ್ಣು ಮೂರು ಗಂಡು ಅಕ್ಕನದು ಆಗಿತ್ತೊ ಲಗ್ಗನಾ
ಹಿರೇ ಅಕ್ಕ ಹಡೆದಿದ್ದಳಾಕೆ ಒಂದು ಹೆಣ್ಣನಾ | ಇವರು ಹೋದ್ರೋ ಆ ಕ್ಷಣಾ
ನನಗ ನಿನಗ ಅಂತ ಮೂವರು ಒಡದಾಡುತ ಇನ್ನಾ ನಿಂತರೋ ಆ ದಿನಾ
ನಿಮಗ ಈ ಹೆಣ್ಣು ಕೊಡುವುದಿಲ್ಲರಿ ನಾನಾ | ವಿದ್ಯೆಬುದ್ದಿ ಕಲಿತವಗ ನಾನಾ
ಕೊಡತೇನಿ ಈ ಹೆಣ್ಣಾ | ಕಲಿಯಲಿಕ್ಕೆ ಹೋದಾರೋ ವಿದ್ಯೆವನಾ || ೧ ||

ಇ|| ಹೋಗಿ ಸೇರಿದರೊಂದು ದೊಡ್ಡ ಪಟ್ಟಣನಾ
ಏರು|| ಹಿರೇ ಅಣ್ಣಾ ಆದಿನಾ ಹೋದಾ ಮಣಿಗಾರ ಪ್ಯಾಟಿಗೆ ತಾನಾ
ಮಣಿಗಾರ ಇಟ್ಟಿದ್ದ ಒಂದ ಕನ್ನಡಿನಾ ಕೇಳಿದ ಕನ್ನಡಿಯನಾ
ಕೇಳಿದರ ಬೆಲಿನಾ ಸಾವಿರ ರೂಪಾಯಿ ಹೇಳಿದನಾ
ಮಾಡಿದಾ ಚೌಕಾಸಿ ಹೇಳಿದ ಪುರಮಾಸಿ | ಈ ಜಗತ್ತು ಕಾಣುವುದಿನ್ನಾ
ಚ್ಯಾಲಿ || ಸಾವಿರ ರೂಪಾಯಿ ಕೊಟ್ಟ ತಗೊಂಡ ಒಂದ ಕನ್ನಡಿಯನಾ
ಇಟಗೊಂಡ ಸ್ವಾದೀನಾ | ನಡುವಿನವಾ ಹೋಗಿ ಹೊಕ್ಕ ಕಂಬಳಿ ಬಜಾರನಾ
ಬೆಲೆ ಕೇಳಿದ ತಾನಾ | ಕಂಬಳಿಯ ಬೆಲೆಯನ್ನಾ
ಐದನೂರು ರೂಪಾಯಿನಾ ಇಷ್ಟ್ಯಾಕೋ ಇದಕಇನ್ನಾ
ಇದು ಏನು ಮಾಡೂದ ಇನ್ನಾ | ಮ್ಯಾಲೆ ಕುಂತು ಗಮನಾ |
ಅಂದರ ತಿರುಗೂದು ಪೃಥ್ವಿಯನಾ || ೨ ||

ಐದುನೂರು ರೂಪಾಯಿ ಕೊಟ್ಟುಕೊಂಡ ಕಂಬಳಿಯನಾ
ಏರು|| ಚಿಕ್ಕ ತಮ್ಮ ಒಂದಿನಾ | ಹೋದಾನ ಹುಲ್ಲಿನ ಬಾಜಾರ ತಾನಾ
ಹುಲ್ಲ ಹೊತ್ತ ಬಂದಾಳೊಬ್ಬ ಮುದುಕಿ ತಾನಾ | ಹುಲ್ಲಿನ ಬೆಲೆಯ ಕೇಳಿದ ಅವನಾ
ಸಾವಿರ ವರಗಳ ಹೇಳಿದಳಿನ್ನಾ ಮಾಡಿದ ತಕರಾರಾ
ಅಂದಾನೋ ಬಾಹದ್ದೂರಾ | ಇದಕ್ಯಾಕ ಸಾವಿರ ವರವನ್ನಾ
ಚ್ಯಾಲಿ || ಅಂದಾಳ ನಾರಿ | ಸತ್ತವರ ಮ್ಯಾಲೆ ಎಳೆದರ ಇದನ್ನಾ
ಏಳುವರೋ ತತ್‌ಕ್ಷಣಾ | ಸಾವಿರ ವರಗಳ ಕೊಟ್ಟು ತಗೊಂಡ ಕಡ್ಡಿಯನಾ
ನೀವು ಕೇಳರಿ ಈ ಕ್ಷಣಾ | ಕೊಂಡಾರೋ ಹುಲ್ಲನ್ನಾ
ಮೂವರು ಕೂಡಿದರಿನ್ನಾ | ಹಿರೇ ಅಣ್ಣ ಅಂದ ಆ ದಿನಾ
ಅಕ್ಕನೂರಿಗೆ ಹೋಗೂನು ಇನ್ನಾ | ಕಬೂಲಾಗಿ ಕುಂತಾರೋ ಆ ದಿನಾ || ೩ ||

ಕನ್ನಡಿ ಇಟ್ಟು ನೋಡಿದಾನೋ ಆ ಕ್ಷಣಾ
ಏರು|| ನೋಡೂದರೊಳಗ ಅವನಾ | ಸತ್ತಿತೋ ಹೆಣ್ಣಾ
ಹಿರೇ ಅಣ್ಣ ಹೇಳತಾನೋ ಹೋಗಿ ಫಲವೇನಾ
ನಡುವಿನವಾ ತಂದೇನಿ ಕಂಬಳಿನ | ಗಮನ ಅಂದರ ಹಾರುವುದಿನ್ನಾ
ಚಿಕ್ಕಾಂವಾ ಅಂತಾನ ಜೀವಾಳದ ಕಡ್ಡಿಯನಾ | ತಂದೇನಿ ನಾನು ಈ ದಿನಾ
ಚ್ಯಾಲಿ|| ಕಂಬಳಿ ಗದ್ದಗಿ ಮಾಡಿ ಕುಂತ್ರೋ ಮೂವರು ಅಂದ್ರೋ ಗಮನಾ
ಒಯ್ದು ಇಳಿಸಿತು ಅಲ್ಲಿಗಿನ್ನಾ | ಚಿಕ್ಕ ತಮ್ಮ ಜೀವಾಳಕಡ್ಡಿ ಎಳಿದ ಆ ಕ್ಷಣಾ
ಎದ್ದು ಕುಂತಿತೋ ಹೆಣ್ಣಾ | ಮೂರು ಮಂದಿ ವಿದ್ಯೆದೊಳಗ
ಲಗ್ನ ಆದ ಯಾಂವ ಬ್ಯಾಗಾ | ಕೇಳತೇನಿ ನಾನು ನಿಮಗಾ
ಹೇಳಬೇಕು ನೀನು ಬ್ಯಾಗ | ಹೇಳದಿದ್ರ ಗುರು ನಮಗ ಅಲ್ಲೋ ನಿನಾ || ೪ ||

ದೇಶದೊಳು ಜಾಹಿರಾ | ಕಣವಿಯ ವಾಹಿನಾ
ಏರು|| ಕ್ಷಣ ಕ್ಷಣಕೆ ನೆನಸುವೆ ಗುರುವಿನ್ನಾ
ವಾದ ಹಾಕಿ ಗೂದಿಹಾದು ನಿಮ್ಮಾಂಗ ಸತ್ತಾರೋ ಎಷ್ಟೋ ಜನಾ
ಬೇಧ ತಿಳಿದು ಶೋಧಮಾಡಿ ಕವಿಯ ಮಾಡಬೇಕೋ ನೀನಾ
ಚ್ಯಾಲ|| ನಿನ್ನ ಕವಿಯ ಕಲ್ತ ಶಿಷ್ಯ ಈಗ ಆಗ್ಯಾನೋ ಸ್ವಾನಾ
ಅವನಿಗಿಲ್ಲೇಳೋ ಗ್ನಾನಾ | ಹನುಮಗರಡಿ ಹುಡುಗರ ಗೂಡ
ವಾದ ಮಾಡಿ ನೀನಾ | ಕುಂತ್ಯೋ ಮಂಗ್ಯಾನಂಗ ನೀನಾ
ಏರು|| ನಮ್ಮ ಜೋಡಿ ನೀ ಏನ ಹಾಡಿ | ಎದ್ದು ಹೋಗೋ ಸಿರಿಗೇಡಿ
ಗುದ್ದಿ ಮುರಿದೇನಿ ದವಡಿ | ಎದ್ದು ಹೋಗೋ ಬಿದ್ದಾಡಿ
ಶಾಹೀರಗ ಹಾಕೇನಿ ಮುತ್ತಿನ ಹಾರವನಾ || ೫ ||

* * *