. ಸಿಂಧೂರ ಲಕ್ಷ್ಮಣನ ಪದಾ
ಹತ್ತು ದೈವದ ಮುಂದ ಗೊತ್ತ ಇರುವದು ಸಂದ
ಮುತ್ತು ಸುರಿದಾಂಗ ಚಂದ ಮಾಡಿ ಅಸಲಾ || ಪಲ್ಲವಿ ||

ಇ|| ಸಿಂಧೂರ ಲಕ್ಷಣನು ಜಾತಿಲೆ ಬೇಡರವನು ಲಿಂಬಿಹಣ್ಣಿನ ವರಣಾ
ರೂಪ ಡೌಲ ಚಲ್ವಿಕಿ ಚಂದ್ರರೂಪ ಒಳೆ ಸುಂದರ ಬರೆದು ಇಟ್ಟಾನೋ ಬ್ರಹ್ಮಾ
ಏರು || ಶಿವನ ಮಹಿಮಾ ಶಿವನಿಗೆ ಠಾವಿಕಿ ಹತ್ತುದಿಲ್ರಿ ನೇಮಾ
ಜತ್ತಿಯ ಮಾರಾಜ ಇಬ್ಬರು ಕೂಡಿ ದಾಲಪಟ್ಟಿ ಆಡತಿದ್ರೂ ಸರಿಜೋಡಿ
ಮುಂದಕ ಹನ್ನೊಂದು ಮಾರು ಹಿಂಬರಕಿಲೆ ಐದಾರು ಜಿಗಿತಿದ್ದಾ ಬಹಳ ಜೋರ || ೧ ||

ಇ|| ಹುಟ್ಟೀತೋ ಕದನದ ಮಾರಿ ದರೂಡಿ ಮಾಡಿದ ಮೀರಿ
ಅಂವಗ ಆದಾನೋ ವೈರಿ ಧನಿ ಮೊದಲಾ ಅಳಿಯಾನ ಹೆಸರು ನರಿಸ್ಯಾ
ಗೋಪಾಳ ಕರಿಯ ಬಸ್ಯಾ ನಾಲ್ವರು ಅಳಿಯರು ಖಾಸ ಇದ್ದಾರಲ್ಲಾ
ಏರು || ಹೊಲಿಯನ ಕೂಡಿಸಿ ಆರು ಮಂದಿಗೆ ತಗದಾರೋ ವಾರಂಟಾ
ಸರ್ವರು ಕೂಡಿ ದರೂಡಿ ಮಾಡಿದ ಕಲಮಾ ಹದಿನೆಂಟಾ
ಹಿಡಿದು ತಂದಾರೋ ಆರು ಮಂದಿನಾ ಅಥಣಿ ಜೇಲಿಗೆ ಹಾಕ್ಯಾರೋ ಅವರನ್ನಾ
ಹದಿನಾಲ್ಕು ವರ್ಷ ಶಿಕ್ಷಾ ಒಂದನೆ ದರೂಡಿ ಕೇಸು ಕೊಟ್ಟಾರು ಅವರಿಗೆ ಸರಸಾ ಬಿಡಲಿಲ್ಲಾ || ೨ ||

ಇ|| ಬೆಳಗಾಂವಿ ಜೇಲಿನೊಳಗ ಹಾಕ್ಯಾರೋ ಅವರಿಗೆ ಆಗ ಏಳು ವರ್ಷ ಶಿಕ್ಷಾ |
ಮತ್ತ ಕೊಟ್ಟಾರಲ್ಲಾ | ಅಂತಾನೋ ಮನದಾಗ ಮಾಡಬೇಕೋ ಇನ್ಹ್ಯಾಂಗ
ಜೇಲ ಮುರಿದು ಹೊರಗ ಬರಬೇಕಂದಾನಲ್ಲಾ ||
ಏರು || ಮಾಡಿ ಪಿತೂರಿ ಮುರದಾರೋ ಜೇಲಾ ಹೊರಗ ಬಂದಾರಲ್ಲಾ
ಪೋಲೀಸ ಜನರು ಹತ್ಯಾರೋ ಬೆನ್ನು ಹಿಂಬಾಲ ಬಿಡಲಿಲ್ಲಾ
ತೊಗಲ ಕವಣೀಲೆ ಗುರಿಹೊಡಿ ಅಳಿಯಾ ಮಾಂವಾ ಒಗಿತಿದ್ರೋ ಜೋಡಿ
ಮುಧೋಳಕ ಬಂದಾರಲ್ಲ | ಧನಿಗೆ ಅಂತಾರ ಮೊದಲಾ | ನಿನ್ನಶಿರಾ ಬಿಡೂದಿಲ್ಲಂದಾರಲ್ಲಾ || ೩ ||

ಇ|| ಮುಧೋಳ ಸರಕಾರ ಪೋಲೀಸ ಜನರಾ | ಹತ್ಯಾರೋ ಕುದುರಿ |
ಸವಾರಿ ಹಿಂಬಾಲಾ ಸಿಗಲಾರದೆ ಹ್ವಾದಾರೋ ಓಡಿ ಅಳಿಯಾ ಮಾಂವಾ ಸರ್ವರು ಕೂಡಿ
ಹ್ವಾದಾರೋ ಗುಡ್ಡದ ಕಡಿ ಸಿಗಲಿಲ್ಲಾ | ದರೂಡಿ ಬದಕ ದಾನಧರ್ಮ ಮಾಡ್ಯಾರೋ
ಬಡಜನರಿಗೆಲ್ಲಾ ಜಮಖಂಡಿ ಇನ್ಸ್‌ಪೆಕ್ಟರ ಇದ್ದಾ ಒಳೆ ಗಟ್ಟಿ ಧೈರ್ಯದಲ್ಲಿ  ಮಿಗಿಲಾ
ದರೂಡಿ ಜಗಾದಲ್ಲಿ ಪಂಚನಾಮಿ ಮಾಡೂತ ನಿಂತಾನೋ ಭಯಾವಿಲ್ಲಾ ಏನಾ
ಲಕ್ಷಮ್ಯಾನ ಪಿತೂರ ಮಾಡ್ಯಾನೋ ಗೋಲಿಬಾರಾ || ೪ ||

ಇ|| ತೊಡಿಯೊಳು ಬಡದೀತೋ ಪೂರಾ | ಜಿಗಿದಾನಲ್ಲಾ ತೆಕ್ಕಿಬಿದ್ದಾನ ಗಡಾ
ಇನ್ಸ್‌ಸ್ಪೆಕ್ಟರ ಬಾಳ ಪುಂಡಾ ಏನ ಹೇಳಲಿ ಅವನ ಭಂಡಾ ಬಿಡಲಿಲ್ಲಾ
ಕೊಯ್ಯತಿದ್ದ ಲಕ್ಷಣನ ಶಿರಾ | ಅಳಿಯಾಗ ಒದರಿದ ಪೂರಾ
ನರಸ್ಯಾ ಬಂದಾ ಕೇಳಿ ಸ್ವರಾ ತತ್‌ಕಾಲಾ ||
ಏರು || ಮಾಡಿದ ಮೋಸಾ ಕೋದಾನೋ ನರಸ್ಯಾ ಇನ್ಸ್‌ಪೆಕ್ಟರ್‌ನ ಶಿರಾ
ಮುಧೋಳದ ಅಗಸಿಗೆ ಕಟ್ಯಾರೋ | ಆಗ ಇಬ್ಬರು ಹೋಗಿ ಶಿರಾ
ಇಂಗ್ರೇಜಿ ಸರಕಾರಕ ಹತ್ತಿತೋ ಬೆಂಕಿ | ಕೊಂದ ತರಬೇಕ ಇವರನ ಹುಡುಕಿ ತತ್ಕಾಲಾ
ಅಲ್ಲಲ್ಲಿಗೆ ಪೋಲಿಸರಾ ಊರಿಗೆ ಐದಾರಾ | ಸಂಗತಿಗೆ ಗೋಲಿಬಾರ ಇದ್ದಾವಲ್ಲಾ || ೫ ||

ಬಿಜಾಪುರ ಜಿಲ್ಲಾದೊಳಗ ಹ್ವಾದಾರೋ ಸರ್ವರಾಗ |
ಹೆರಕಲ್ಲ ಊರಾಗ ಹ್ವಾದಾರಲ್ಲಾ ||
ತುಮ್ಮರಮಟ್ಟಿ ಗುಡ್ಡದೊಳು ಗಟ್ಟಿ ಲಕ್ಷ್ಮಣ ಇದ್ದಾನಲ್ಲಾ
ಜಾತಿಲೆ ಕುರುಬರ ಹತ್ತು ಹನ್ನೆರಡು ವರ್ಷದ ಬೋರಾ
ರಾಯಾ ಅವನ ಹೆಸರು ಕೂಡ್ಯಾನಲ್ಲಾ | ಮೆರ್ಬಾನ ಪೋಲೀಸ ಸಾಯೇಬಾ
ಬಾದ್ದೂರಾ ಸುದ್ದಿಕೇಳಿ ಮೊದಲಾ | ಅಲ್ಲಿಗೆ ಪೋಲಿಸರಾ ಹಾಕ್ಯಾರೋ ಸುತ್ತಗೇರಾ
ನರಸ್ಯಾಗ ಇಟ್ಟ ನೆದರಾ ಮಾಡ್ಯಾರೋ ಪೈರಾ
ಮುಂಗೈಗೆ ಬಡದೀತೋ ಪೂರಾ ಓಡ್ಯಾರಲ್ಲಾ || ೬ ||

ಇ|| ಅಲ್ಲಿಂದ ಹ್ವಾದಾರೋ ಓಡಿ ಲಕ್ಷಣ ಮಾಂವಾ ಸರ್ವರು ಕೂಡಿ
ತುಮ್ಮರಮಟ್ಟಿ ಊರ ಕಡೆ ಬಂದಾರಲ್ಲಾ | ಅಲ್ಲಿಯ ಊರಗೌಡ
ಕಜ್ಜೂರ ಹಣ್ಣ ತರಸ್ಯಾನೋ ಗಡಾ | ಎರಡು ಮೂರು ಅಂಡಗಿ ತಿನ್ನಾಕ ಸಾಲಲಿಲ್ಲಾ
ಏರು || ಎಡಹಳ್ಳಿ ಊರಾಗ ಗುಜ್ಜರ ಸಾವಕಾರ ಇದ್ದ ಬಾಳಮೇಲಾ
ಅಲ್ಲಿಗೆ ಹೋಗಿ ದರೂಡಿ ಮಾಡ್ಯಾನ ಲಕ್ಷ್ಮಣನ ಜನರೆಲ್ಲಾ
ಎರಡು ಮೂರು ತಾಸು ಇರೂತ ಹೊತ್ತು ದರೂಡಿ ಮಾಡಿ ಲಕ್ಷ್ಮಣ ನಿಂತ ಭಯವಿಲ್ಲಾ
ಪೋಲೀಸ ಸಾಹೇಬರ ಸಿಟ್ಟವಗ ಭರಪೂರ ಬೆನ್ಹತ್ತಿ ತಿರಿವ್ಯಾರ ಅವಗ ಸಿಗಲಿಲ್ಲಾ || ೭ ||

ಇ|| ಮೊಗಲಾವಿ ಊರೊಳಗ ಹ್ವಾದಾರೋ ಸರ್ವರಾಗ ಚೈನಿಲ್ಲಾ ಮನದಾಗ ಸವಡಿಲ್ಲಾ
ಪೋಲೀಸ ಸಾಹೇಬರ ತಪಾಸು ಮಾಡ್ಯಾರಾಗ ಶಾಪೂರ ಎಂಬುದು ಊರಾ ಕೇಳ್ಯಾರಲ್ಲಾ
ಏರು || ಬಾವಾನ ವೇಷ ಸಿಪಾಯಿ ಖಾಸ ಹಾಕಿ ಹ್ವಾದಾರಲ್ಲಾ
ತಪಾಸು ಮಾಡಿ ಬಂದಾನೋ ಓಡಿ ಹೇಳ್ಯಾನೋ ತತ್ಕಾಲಾ
ಪೋಲೀಸ ಸಾಹೇಬ ಮೋಟಾರ ಹತ್ತಿ ಅಲ್ಲಿಗೆ ಬಂದು ಮಾಡ್ಯಾನ ಯುಕ್ತಿ
ಪೋಲೀಸ ಜನರಾ ಮನಿಸುತ್ತ ಹಾಕಿ ಗೇರಾ ಮಾಡ್ಯಾರೋ ಅವರಿಗೆ ಪೈರಾ ಜನರೆಲ್ಲಾ || ೮ ||

ಇ|| ಬಸ್ಯಾ ಎಂಬುವ ಸೂರಾ ಪೋಲೀಸರ ಮ್ಯಾಲೆ ಪೈರಾ
ಮಾಡ್ಯಾನೋ ಎರಡು ಬಾರೆ ಬಿಡಲಿಲ್ಲಾ | ಶೂರ ಮನ್ನಾ ಸಾಹೇಬರಾ
ಬಸ್ಯಾಗ ಇಟ್ಟ ನೆದರಾ | ಮಾಡ್ಯಾರೋ ಒಬ್ಬಗ ಪೈರಾ ಸತ್ತ ಬಿದ್ದಾನಲ್ಲಾ
ಏರು || ಪೋಲೀಸ ಜನರಾ ಗೋಲಿಯಬಾರಾ | ಅಳತೇನು ಇದ್ದಿಲ್ಲಾ
ಅದರಾಗ ತಪ್ಪಿಸಿ ಹ್ವಾದಾನೋ ಓಡಿ ಲಕ್ಷ್ಮಣ ಸಿಗಲಿಲ್ಲಾ
ಪೋಲೀಸ ಜನರಾ ಹತ್ಯಾರೋ ಬೆನ್ನಾ |  ಒಂಬತ್ತು ದಿವಸ ಹೊಟ್ಟಿಗಿಲ್ರಿ ಅಸನಾ
ತಿನಕೊಂತ ಗಿಡದ ತಪ್ಪಲಾ ಇಲ್ಲಿಗೆ ಬಂದಾರಲ್ಲಾ | ಹೊಟ್ಟಿಗೆ ಅನ್ನವಿಲ್ಲಾ ಶಿವಾಬಲ್ಲಾ ||೯||

ಇ|| ಹ್ವಾದಾರೋ ಐವರು ಕೂಡಿ ಮಾಡ್ಯಾರ ಹುಲ್ಯಾಳ ದರೂಡಿ |
ತಗ್ಗಿಯ ಗುಡ್ಡದ ಕಡಿ ಬಂದಾರಲ್ಲಾ | ಅಲ್ಲಿಯ ಜನರ ನಂಬಿಗಿ ಬಹಳ ಪೂರಾ |
ಯಮನ್ಯಾ ಎಂಬ ವಾಲಿಕಾರ ಯಿದ್ದಾನಲ್ಲಾ
ಏರು || ನಾಯಿಕ ವಾಲಿಕಾರ ಇಬ್ಬರು ಕೂಡಿ ಬ್ಯಾಟಿ ಕೊಯ್ದಾರಲ್ಲಾ
ಸೋಮವಾರ ದಿವಸ ಅಮಾಸಿ ಅಡಗಿ ಮಾಡಿಸಿ ಊಟಕ್ಕ ಹೇಳ್ಯಾರಲ್ಲಾ
ಬಂದ ಊಟಕ್ಕ ಕುಂತಾರಲ್ಲಾ ಆರೇಳು ತಾಸು ರಾತ್ರಿ ಅಮಲಾ | ಮೊದಲಿಗೆ
ವಾಲಿಕಾರ ಮಾಡ್ಯಾನೋ ಗೋಲಿಬಾರಾ | ಕಾಲಿಗೆ ಬಡದೀತೋ ಪೂರಾ ಓಡ್ಯಾನಲ್ಲಾ || ೧೦ ||

ಇ|| ಬಿಜಾಪುರ ಪೋಲಿಸರಾ ಬೀಳಗಿಯಲ್ಲಿ ಇರುವರಾ
ಇನ್ಸ್‌ಪೆಕ್ಟರ್ ಫೌಜದಾರ ಬಂದಾರಲ್ಲ | ಗುಪ್ರೀಲೆ ಫೌಜದಾರ ಪೋಲಿಸರಾ
ಲಕ್ಷಣ ಅಂತಾ ಹಚ್ಚಿ ನೆದರಾ | ಮಾಡ್ಯಾರೋ ಒಬ್ಬಗ ಪೈರಾ ಸತ್ತಾನಲ್ಲಾ
ಮಂಗಳವಾರ ದಿನಾ ತಂದಾರೋ ಹೆಣಾ | ಬೀಳಗಿಯ ಊರಾ
ಹಸನ ಡೋಂಗ್ರಿ ದರಗಾದ ಉರಸಿಗೆ ಕೂಡತಿದ್ರೋ ಬಹುಜನಾ
ಸುತ್ತಿಲೆ ಹತ್ತು ಹರದಾರಿ ಜನಾ | ಬಂದು ನೋಡ್ಯಾರೋ ಲಕ್ಷ್ಮಣ ಹೆಣಾ
ಮುಂಬೈಗೆ ಮಾಡ್ಯಾರೋ ತಾರಾ | ಲಕ್ಷ್ಮಣನ ಕೊಂದೇವರಿ ಪೂರಾ
ಪೋಲೀಸ ಸಾಹೇಬರ ನೋಡ್ಯಾರಲ್ಲಾ || ೧೧ ||

ಲಕ್ಷ್ಮಣನ ಪೋಟೋ ತಗದಾರೋ ಪೆಂಟಾರ | ಸುಣಗದ ಕುಲಕರ್ಣಿ ಪೂರಾ
ಅಲ್ಲಿಯ ಡಾಕ್ಟರ ಮಾಡ್ಯಾರೋ ವಿಚಾರಾ | ಇನ್‌ಸ್ಪೆಕ್ಟರ ನಿಂತು ಇದರ ಕೋದಾರಲ್ಲಾ
ಏರು || ಗೋಲಿಯ ಬಾರಾ ಮೈಯಲ್ಲಿ ಪೂರಾ | ಬಡದದ್ದು ಅಳತಿಲ್ಲಾ
ಗೋಲಿಯ ಚೂರಾ ತಗದು ಡಾಕ್ಟರಾ ಮಣ್ಣು ಮಾಡ್ಯಾರಲ್ಲಾ
ನೋಡಿದ ಜನರು ಮರಗುವರೋ ಮರಮರ | ಎಷ್ಟಂತ ಹೇಳಲಿ ದುಃಖಸಾಗರ
ಸೋಮವಾರ ದಿವಸ ತಾರೀಖ ಪಂಚವೀಸ | ಏಳನೇ ತಿಂಗಳು ಖಾಸ ಇತ್ತಲ್ಲಾ || ೧೨ ||

ವಾಲಿಕಾರನ ಫಜೂತಿ ಇನ್ನು ಮುಂದೆ ಆಗೂದೈತಿ
ಅಳಿಯಾಗ ಸಿಟ್ಟು ತುಂಬೇತಿ ಬಿಡೂದಿಲ್ಲಾ | ಅಳಿಯಾ ಅದಾನ ಸೂರಾ
ಸಿಕ್ಕರ ವಾಲಿಕಾರ ಮಾಡುವ ಚೂರ ಚೂರ ಬಿಡೂದಿಲ್ಲಾ
ಏರು || ಸಂದ ಬಾಳ ಐತಿ ಮುಂದ ಉಳದೈತಿ ಕೇಳರಿ ದೈವೆಲ್ಲಾ
ಇಂಗ್ರೇಜಿ ಸರಕಾರ ಕೈಯಾಗ ಯಾರೂ ಪಾರಾಗುವರಿಲ್ಲಾ
ಸಿಗಲಿದ್ದರೆ ಪಿತೂರಿ ಮಾಡಿ ಹಿಡಿದು ಮಾಡುವರೊ | ತರವಲ್ಲ ಕೆಟ್ಟಕಾರಬಾರಾ
ತಪ್ಪಾದರೆ ನಂದು ಮಾಪ ಮಾಡರಿ ಇಂದ ಹತ್ತು ದೈವಕ ಬಂದ ನಿರ್ವಾಯಿಲ್ಲಾ || ೧೩ ||

ಇ|| ಕೆರವೂರ ದೇಶಕ್ಕ ಶಾರಾ ಇರುವುದು ಕಡಕ | ಕವಿ ಒಳ್ಳೆ ನಾಜೂಕ ಮಾಡುವರಲ್ಲಾ
ಚಿಣಗಿ ಪೀರನ ಬೆಳಕ ಸಾರುವುದು ಲೋಕಕ್ಕೆ | ಕೇಳರಿ ಇನ್ನು ತನಕ ಭೂಮಿ ಮೇಲಾ
ಏರು || ಹಿರೇಲಾಲು ವೈರಿಗೆ ಹೇಳ್ಯಾರೋ ವಾದ ತರವಲ್ಲಾ
ಕವಿ ಮಾಡುವುದು ಪ್ರಾಸ ಕೂಡಿಸೂದು ನಿನಗ ಬರೂದಿಲ್ಲಾ
ರಾಜಹೈದರನ ಹಾಡಿಕಿ ನೋಡಿವೈರಿ ನಿಂತಾನೋ ಕರಗಳ ಜೋಡಿ
ಹೊಸಪ್ಯಾಟಿ ಹುಡುಗರ ಕಲ್ಗಿ ಮ್ಯಾಳದವರ ವೈರಿಗೆ ತೋಡಿ ಪೂರಾಕೊಡುವರಲ್ಲಾ || ೧೪ ||

* * *

. ನೆಹರೂರ ಮರಣದ ಪದಾ

ನೆಹರು ಸರಕಾರಕ ಬಂದು ಒದಗಿತು ಮರಣಾ
ಮುಳುಗಿ ಹೋದೀತು ನಮ್ಮ ಹಿಂದುಸ್ತಾನದ ರತನಾ || ಪಲ್ಲವಿ ||

ಏರು || ಪಾಲನೆ ಮಾಡಿದ್ರೊ ಗಾಂಧಿ ಮಾತ್ಮನ ವಚನಾ |
ಹೂಡ್ಯಾರ ಸತ್ಯಾಗ್ರವನಾ ನಿತ್ಯಧರಿಸ್ಯಾರ ಸತ್ಯ ಸ್ವಾತಂತ್ರ್ಯವನಾ |
ದೂಡಿ ಕಳಿಸ್ಯಾರೋ ಹಿಡಿದು ಇಂಗ್ರೇಜರನಾ || ೧ ||

ಇಳು || ಬಡವರ ಮ್ಯಾಲೆ ಬಾಳ ಅಂತಃಕರಣಾ
ಕೈಯ ಹಿಡಿದಿದ್ರೋ ರಾಷ್ಟ್ರದ ರೈತರನಾ
ಏರು | ಸಾಲಿ ಕಲಿಯುವ ಸಣ್ಣ ಸಣ್ಣ ಮಕ್ಕಳನಾ |
ಬೋರ್ಡಿಂಗ ಊಟದ ಸೌಕರ್ಯವನಾ
ಗೌರ್ನಮೆಂಟದಿಂದ ಉಡುಗರಿ ಚೊಣ್ಣಾ |
ಪಾಪಿ ಪುಸ್ತಕ ಮಾಡತಿದ್ರೋ ದಾನಾ  || ೨ ||

ಇಳು || ಮನಸಿನ್ಯಾಗ ಬಾಳ ಇತ್ತೊ ಕಲ್ಪನಾ
ಮುಂದ ತರಬೇಕಂತ ನಮ್ಮ ಹಿಂದುಸ್ತಾನಾ
ಏರು || ಕೃಷ್ಣಾ ಮಲಪ್ರಭಾ ತುಂಗಭದ್ರಾ ನದಿಯನಾ |
ನೀರಿನ ನೆಲಿಯೋಜನಾ ಮೂರು ನದಿ ನೀರು ಕೂಡಿಸಿ
ಬಿಡಕಾವಲಿನಾ ಹಿಂದುಸ್ತಾನಕೆಲ್ಲಾ ತುಂಬಾ ನೀರಾವರಿನಾ || ೩ ||

ಇ|| ಕೈಮೀರಿ ಹೋತೋ ನೆಹರು ಕಲ್ಪನಾ |
ಹಾರ್ಟ ಎಂಬ ರೋಗ ಪಂಡಿತರಿಗೆ ಪೂರ್ಣಾ
ಏರು || ಅರವತ್ತು ಮಂದಿ ಕೂಡ್ಯಾರ ಡಾಕ್ಟರ ಜನಾ |
ಕೊಟ್ಟಾರ ಇಂಜೆಕ್ಷೆನ್ನಾ ಮಾಡ್ಯಾರ ಬಾಳ ಉಪಚರಣಾ |
ಉಳಿಯಲಿಲ್ಲೊ ಪಂಡಿತ ನೆಹರು ಬಿಟ್ಟಾರ ಪ್ರಾಣಾ || ೪ ||

ಇ|| ತಾರೀಖ ಇಪ್ಪತ್ತೇಳು ತಿಂಗಳೈದನೇ ದಿನಾ |
ದೇಶ ಪಂಡಿತರು ಹೊಂದಿದಾರೊ ಮರಣಾ
ಏರು || ನಾಲ್ಕು ದಿಕ್ಕಿಗೆ ಸುದ್ದಿ ಕಳಿಸ್ಯಾರ ಪರ ಊರವರಿಗೆ ಕರುಣಾ
ಹತ್ತು ಮಿನೀಟಿಗೆ ಬಂದು ಮುಟ್ಟಿತೋ ಪೋನಾ | ವ್ಯಾಪಾರುದ್ರಿ ಬಂದ
ಮಾಡ್ಯಾರೋ ಹಳ್ಳಿ ಶಾರದ ಜನಾ | ಬೋರ‍್ಯಾಡಿ ಅಳತಾರ ಸುರಿಸಿ ಕಣ್ಣೀರನಾ || ೫ ||

ಇ|| ಅತ್ತಹ್ವಾದಾವರಿ ಎಷ್ಟೋ ಮಂದಿ ಕಣ್ಣಾ
ಭಾರತ ದೇಶಕ ಹರಿದು ಬಿದ್ದಿತು ಗಗನಾ
ಏರು || ಸೊಲ್ಲಾಪುರದಾಗ ಒಬ್ಬ ಶ್ರೀಮಂತ ಸಾವುಕಾರನಾ |
ಕೊಟ್ಟಾರ ತಮ್ಮ ಕಣ್ಣಾ ನೆಹರೂರ ಸಲುವಾಗಿ ಆತೋ ಕೋಲಾಹಲನಾ
ಇಂದಿರಾಗಾಂಧಿಯವರ ದುಃಖ ಹೇಳಲೇನಾ || ೬ ||

ಇ|| ಬಂದ ಕೂಡ್ಯಾರೋ ಪರರಾಷ್ಟ್ರದ ಜನಾ
ಸಿಂಗಾರ ಮಾಡ್ಯಾರ ಹೂವಿನ ಪಲ್ಲಕ್ಕಿನಾ
ಏರು || ನೆಹರೂನ ಮೊಮ್ಮಗ ಸಂಜೀವರ ಕರುಣಾ |
ಹಿಡಿಸ್ಯಾರ ಬೆಂಕಿಯನಾ ಯಮನಾನದಿ ದಂಡಿಮ್ಯಾಲೆ ಮಾಡ್ಯಾರೊ ದಹನಾ |
ಮೂವತ್ತೈದು ಲಕ್ಷ ಕೂಡಿತ್ತ ಜನಾ || ೭ ||

ಇ|| ತಾರೀಝ ಇಪ್ಪತ್ತೆಂಟು ತಿಂಗಳೈದನೆ ದಿನಾ |
ಹತ್ತೊಂಬತ್ತ ನೂರಾ ಅರವತ್ನಾಲನೇ ದಿನಾ
ಏರು || ಶುಭಮುಹೂರ್ತ ಗುರುವಾರ ದಿನಾ |
ಹೊಂದಿದಾರೋ ಸ್ವರ್ಗವನಾ ಪರರಾಷ್ಟ್ರದ ಎಷ್ಟೋ ಮಂತ್ರಿವರನಾ |
ಸುರಸ್ಯಾರೋ ಕಣ್ಣಿರನಾ  || ೮ ||

ಇ|| ಮುಗಿದಿಲ್ಲರಿ ನೆಹರೂರ ಕಥನಾ |
ಸಂದ ಮುಗಿಸೇನಿ ಸುರಿಸಿ ಕಣ್ಣೀರನಾ
ಏರು || ಹಿಂದುಸ್ತಾನದಾಗ ಚಂದ ಮಂದಿರಸ್ತಾನಾ |
ಕೊಣ್ಣೂರ ಕೂನಾ ದೇಶಭಕ್ತರು ಮಾಡಿದ ಕವನಾ |
ನಿತ್ಯ ಮಾಡೂರೋ ನೆಹರೂರ ಪ್ರಾರ್ಥನಾ || ೯ ||

* * *

ದೊಡ್ಡಮೇಟಿ ಅಂದಾನಪ್ಪನವರ ಪದಾ

ರೋಣ ತಾಲೂಕ ರತ್ನವೊಂದ ಜಕ್ಕಲಿ ಗ್ರಾಮದ ಜ್ಯೋತಿವೊಂದ
ದೊಡ್ಡ ಮೇಟಿ ಹೆಸರಿಂದ ಕಳಕೊಂಡ ಜೊತೆಯಿಂದ
ದಾರಿಯ ತೋರುವರ‍್ಯಾರು ಇನ್ನೂ ಮುಂದಾ || ಪಲ್ಲವಿ ||

ಇ|| ಊರಿಗೆ ವತನದಾರ ದೊಡ್ಡಮೇಟಿ ಮನೆತನದವರಾ
ಅಚ್ಚುಮೆಚ್ಚಿನ ಮುದುಕರವರೋ ಅಂದಾನಪ್ಪವನರೋ
ಏ|| ದೊಡ್ಡಮೇಟಿ ಮನೆತನದವರೋ ವೀರ ಒಕ್ಕಲಿಗರೋ || ೧ ||

ಇ|| ರಡ್ಡಿಯ ಕುಲದವರೋ ಊರಿಗೆ ಆದಾರೋ
ಜ್ಞಾನಪ್ಪನೆಂಬ ಹೆಸರಿನವರೋ ಶ್ರೀಮಂತರೋ
ಏರು || ಸುರಕೋಡ ಪುರದವರೋ ಅರಹುಣಿಸಿ ಮನೆತನದವರೋ || ೨ ||

ಇ|| ಬಸಮ್ಮನೆಂಬವರೋ ಸುಮಂಗಲ ಸದ್ಗುಣಿಯರೋ
ಏರು || ಜ್ಞಾನಪ್ಪನವರ ಸಹಧರ್ಮಿಣಿಯಾದರೋ
ಜ್ಞಾನದಂಪತಿಗಳ ಉದರದಿ ಜನಿಸಿದರೋ || ೩ ||

ಇ|| ಶಿವನಾಗಪ್ಪ ಅಂದಾನಪ್ಪನವರ ಅಕ್ಕರದಿ ಅಣ್ಣ ತಮ್ಮರೋ
ಸಕ್ಕರಿಹಾಲು ಬೆರಸಿದಂಗ ರಾಜಪುತ್ರರೋ ವಿಧಿ ಜಾಲಕ ಜಾರಿದರೋ
ಏರು | ನಮ್ಮ ಜ್ಞಾನಪ್ಪನವರ ಚೊಕ್ಕ ಒಕ್ಕಲಿಗರ ಮರಣವ ಗೈದರ
ಹಸುಮಕ್ಕಳ ಶಿಶುಮೋರೆ ನೋಡಿ ಬಾಳಿದರ ಬಸಮ್ಮನವರ || ೪ ||

ಇ|| ಮರಣ ಮಾಯದೊಳು ಸಿಲುಕಿದ ಶಿವನಾಗಪ್ಪನವರು
ತಂದೆಯ ಕೂಡಿದರೋ ಜೀವನ ಪಥ ಮುಗಿಸಿದರೋ
ತಮ್ಮನ ಮರೆತರೋ ಶಿವನಲ್ಲಿ ಸೇರಿದರೊ || ೫ ||

ಇ|| ಕೋಟ್ಯಾದೀಶ ವೀರರಾ ದೊಡ್ಡಮೇಟಿ ಅಂದಾನಪ್ಪನವರಾ
ಅಣ್ಣನ ಕಳಕೊಂಡರಾ ದುಃಖದಿ ಮುಳುಗಿದರಾ
ಏರು || ತಾಯಿಗಿಯಾದರ ಏಕೈಕ ಕುವರಾ || ೬ ||

ಇ|| ಸಾಲಿಯ ಕಲಿತರಾ ಸುರಕೋಡ ಪುರದೊಳವರಾ
ಕೋಟಿ ವಿದ್ಯೆಯಲಿ ಮೇಟಿ ವಿದ್ಯೆ ಮೇಲೆಂದರಿತರೋ
ಏರು|| ನೇಗಿಲಯೋಗಿ ಆದರೋ ಭೂಮಿಸೇವೆ ಮಾಡಿದರೋ || ೭ ||

ಇ|| ರಾಷ್ಟ್ರದ ಪಿತರವರ ಗಾಂಧಿಯ ಮಹಾತ್ಮರ
ಬೋಧೆಯ ಪಡೆದರಾ ಅನುಯಾಯಿ ಆದರಾ
ಏರು|| ದೇಶದ ಹಿತದವರಾ ಶಿಷ್ಯತ್ವ ಪಡೆದವರಾ || ೮ ||

ಇ|| ಪರದಾಸ್ಯದ ಪಕ್ಕದಲ್ಲಿ ಪವಡಿಸಿದ ಭಾರತಾಂಬೆ
ಪರದಾಸ್ಯೆ ಪರಿಹರಿಸಲು ಪಣವ ತೊಟ್ಟಾರೋ
ಏರು || ನಮ್ಮ ವೀರ ದೊಡ್ಡಮೇಟಿಯವರೋ ಅಂದಾನಪ್ಪನವರೋ || ೯ ||

ಇ|| ಖಾದೀಯ ತೊಟ್ಟಾರು ಖಾದೀಯ ಉಟ್ಟಾರು
ಕಾಂಗ್ರೆಸ್ಸಿನ ಹಾದಿಯ ಹಿಡಿದಾರ ದೊಡ್ಡಮೇಟಿಯವರ
ಏರು|| ದೇಶಕ್ಕಾಗಿ ದೇಹಕ ಸವೆಸಿದರೋ || ೧೦ ||

ಇ|| ಚಳುವಳಿ ಮಾಡಿದರ ಹಾವಳಿ ಎಬಿಸಿದರ
ಬ್ರಿಟೀಶರಗೂಡ ಬಡಿದಾಡಿದರ ಸೆರೆಮನೆಗ್ಹೋದರ
ಏರು || ಸ್ವರಾಜ್ಯ ಗಳಿಸಿದರ ನಮ್ಮ ವೀರರೂ || ೧೧ ||

ಗಾಂಧೀಯ ತತ್ವದಂತೆ ಬಡವರಿಗೆ ದಾನದಂತೆ
ಸ್ವಂತ ಭೂಮಿ ಹಂಚಿದರ ದೊಡ್ಡಮೇಟಿಯವರ
ಏರು|| ಅವರೇ ನಮ್ಮ ದೇಶ ಭಕ್ತರ ಅಂದಾನಪ್ಪರವರ || ೧೨ ||

ಇ|| ಹಳ್ಳಿಗೆ ಭಾಗ್ಯದಾತರ ಬಡವರ ಅನ್ನದಾತರ
ಅಂದಾನಪ್ಪನವರ ನಮ್ಮಹೆತ್ತ ತಂದೆಯವರ
ಏರು|| ಕರ್ನಾಟಕದ ಹುಲಿ ಎನಿಸಿದರ ದೊಡ್ಡಮೇಟಿವೀರರಾ || ೧೩ ||

ಇ|| ಹಳ್ಳಿಯ ಸೇವಕರ ಅಹಿಂಸಾ ಪಾಲಕರ
ನಮ್ಮ ನಾಯಕರ ದೊಡ್ಡಮೇಟಿ ವೀರರಾ
ಏರು || ಸತ್ಯ ಸೇವಕರಾ ನಿಸ್ವಾರ್ಥ ಭಕ್ತರಾ || ೧೪ ||

ಇ|| ಕಾಯ್ದೆ ಭಂಗ ಚಳುವಳ್ಯಾಗ ಹಿಡಿದ ವ್ಯಾಳೇದಾಗ
ಹೆತ್ತತಾಯಿ ಬಸಮ್ಮನಾಗ ಹಲುಬಿದಳೋ ಮನಿಯಾಗ
ಏರು|| ತಿರುಗಿ ಮುಖವ ತೋರೋ ಕಂದ ನೀನು ಬೇಗ || ೧೫ ||

ಇ|| ವತ್ತರದಿ ಪತ್ರ ಬರದಾರೋ ಬಸಮ್ಮನವರ
ಚಂದಿರ ಬೆಳಕನು ಬೀರೋ ಕಂದ ಮಾರುತನೆ ಬಾರೋ
ಏರು || ಕಂದ ಮುಖವ ತೋರೋ ತಾಯಿ ಮಡಿಲು ಮರುಗುತಿದೆ ಬಾರೋ || ೧೬ ||

ಇ|| ಪತ್ತರ ನೋಡಿದಾರೋ ಉತ್ತರ ಬರಿದಾರೋ
ಊರಿನ ಜನರೋ ನಿನ್ನಯ ಕುವರರೋ
ಏರು || ಒಂದೇ ತಾಯಿ ಮಕ್ಕಳೋ ತಾಯಿಗೆ ತಿಳಿಸಿದರೋ || ೧೭ ||

ಇ|| ಹತ್ತರದಿ ಗಾಂಧಿಯವರೋ ಪತ್ತರ ನೋಡಿದಾರೋ
ಮುಗ್ಧ ಮುದುಕರೋ ಬುದ್ಧಿಯ ಹೇಳಿದಾರೋ
ಏರು || ತಾಯಿ ಕರುಳು ಊರಿಗೆ ಹೋಗೆಂದಾರೋ || ೧೮ ||

ಇ|| ಮೇಟಿಯ ವೀರರಾ ಕೋಟ್ಯಾಧೀಶ ವೀರರಾ
ನಿನಗ್ಯಾಕೋ ಧೀರಾ ಇಂಥ ದುರ್ದರಾ
ಏರು || ನಿನ್ನ ತಾಯಿಯ ನೆಚ್ಚಿನ ಕುವರಾ || ೧೯ ||

ಇ|| ದೊಡ್ಡ ಮೇಟಿ ಕೇಳಿದರ ಕಂಠತುಂಬಿ ತಂದಾರೋ
ದೇಶದ ಜನರೋ ನನ್ನ ಅಣ್ಣ ತಮ್ಮರೋ
ಏರು || ನಾವೆಲ್ಲ ಒಂದೇ ತಾಯಿ ಮಕ್ಕಳು ಎಂದರೋ || ೨೦ ||

ಇ|| ಮಹಾತ್ಮಾ ಗಾಂಧಿಯವರೋ ವೀರನ್ನ ನೋಡಿದರೋ
ನುಡಿಯನಾಲಿಸಿದರೋ ಅಪ್ಪಿ ಮುದ್ದಾಡಿದರೋ
ಏರು || ರಾಜ್ಯ ತಾಂತ್ರಿಕ ನೆನಸಿದರೋ ರಾಜ್ಯವನ್ನಾಳಿದರೋ || ೨೧ ||
ಇ|| ಮೈಸೂರು ರಾಜ್ಯದ ಮಂತ್ರಿಯಾದರೋ
ಕೆಚ್ಚದೆ ವೀರರೋ ದೊಡ್ಡಮೇಟಿ ಕುವರರೋ
ಏರು || ದೇಶದ ಹಿತಕ ದೇಹದ ಸವೆಸಿದರ ||೨೨||

ಇ|| ದೇಹ ದುರ್ಬಲ ಅರಿತ ಮುದುಕ ರೋಣ ತಾಲೂಕ ಮೀಟಿಂಗಕ
ಸಂಸ್ಥೆ ಕಾಂಗ್ರೆಸ್ಸಿಗೆ ಸೇವೆ ಸಲ್ಲಿಸುದಕ
ಏರು || ತರುಣರನ ಹುಡುಕುದಕ ಹೊಂಟಾರೋ ಮುದಕಾ ||೨೩||

ಇ|| ವಿಷಗಳಿಗೆ  ಒದಗೀತ ಹುಬ್ಬಳ್ಳಿಯ ಸನೇಕ
ಕಾರ ಅಪಘಾತ ಸಂಜೆಯ ಸಮಯಕ
ಧಾರವಾಡ ಜಿಲ್ಲೆಯೊಳಗ ಹುಬ್ಬಳ್ಳಿ ಶಾರದಾಗ ||೨೪||

ಇ|| ಕೆ.ಎಂ.ಸಿ ಎಂಬುದು ದೊಡ್ಡ ದವಾಖಾನೆಯೊಳಗ
ಔಷದೋಪಚಾರ ಡಾಕ್ಟರ ಸಮೂಹದೊಳಗ
ಏರು | ಮೈಸೂರ ರಾಜ್ಯದ ಹಿತಕ ಕರ್ನಾಟಕ ಎಂದು ಕರೆಯಾಕ || ೨೫ ||

ಇ|| ಹಗಲಿರುಳು ಹೆಣಗಿದ ಮುದುಕ ಪ್ರಜರ ಹಿತಕ
ಜೀವ ತೆತ್ತರೋ ದೇಶದ ಹಿತಕ
ಏರು | ಫೆಬ್ರುವರಿ ಇಪ್ಪತ್ತೊಂದ ಸೋಮವಾರ ಅಂದ || ೨೬ ||

ಇ|| ರತ್ನ ಒಡೆಯಿತು ಹೊತ್ತು ಮುಳುಗಿತು
ದೊಡ್ಡಮೇಟಿ ಎಂಬ ಜ್ಯೋತಿ ಹುಬ್ಬಳ್ಳಿಯಲ್ಲಿ ನಂದೀತ
ತಾರು ಪೋನು ತಿಳಿಸೀತ ಜಗವೆಲ್ಲ ಹಬ್ಬೀತ || ೨೭ ||

ಇ|| ಹಳ್ಳಿ ಹಳ್ಳಿಯೊಳು ಕತ್ತಲಾಯಿತೋ ರೋಣ ತಾಲೂಕಿನ ಸಿರಿ ಮುಳುಗಿತೋ
ಚಿಕ್ಕ ಮಕ್ಕಳು ಅತ್ತರವರೋ ಅಜ್ಜ ನಮ್ಮನ್ನಗಲಿದರೋ
ಏರು | ದೇಶದ ಜನರೊಳಗೊಬ್ಬ ಮಯಸಾಗರಾ || ೨೮ ||

ಇ|| ಎಷ್ಟೊಂದು ಹೇಳಿದರು ತೀರದು ಅವರ ವರ್ಣನಾ
ಮುತ್ತಣನೆಂಬ ಕುವರಾ ಪದವ ಮಾಡಿ ಹೇಳಿದರಾ
ದರಗಾದೋಣಿ ಹುಡುಗೂರಾ ಹಾಡಿ ಸೇವೆ ಮಾಡುವರೋ || ೨೯ ||

* * *

ಭಾರತ ಭಾಗ್ಯವು ಹೆಚ್ಚು ಮುಂದಾಗಲಿ
ಭಾರತದಾಗ ಮೊಹರಮದ ಹಬ್ಬಾ ಬಂತು || ಪಲ್ಲವಿ ||

ಏರು|| ಸ್ವರಾಜ್ಯದೊಳು ಹಿಂದು-ಮುಸ್ಲೀಮರೊಂದಾಗಿ | ಆಡಿದಲಾವಿ ಬಂತು
ಜಿನ್ನಾ ಗಾಂಧಿವಾದವು ಬೆಳೆದುನಿಂತು | ಹಿಂದು ಪಾಕಿಸ್ತಾನ ಇಬ್ಬಾಗವಾಯ್ತು || ೧ ||

ಇ|| ಕಂಟ್ರೋಲ ಬರಬಂದು ಹೊಟ್ಟೆಗಿಲ್ಲದಂಗಾತು | ಕಳ್ಳ ಸಂತ್ಯಾಗ ಬಿತ್ತು
ಏರು || ಒಳ್ಳೊಳ್ಳೆಯವರು ಲಂಚಕಾದಾರೋ ತುತ್ತು
ಇಷ್ಟಾದ ಮೇಲೆ ನಮಗೆ ವಿಪತ್ತು ಬಂತು || ೨ ||

ಇ|| ಹಿಂದು-ಮುಸ್ಲೀಮರೊಂದಾಗಬೇಕೆಂದು | ಗಾಂಧಿ ಮಾಡಿದ ಮಸಲತ್ತು
ಏರು || ಹಿಂದು ಮಹಾಸಭೆಗೆ ವಾಕರಕಿ ಆತು
ಹೀಂಗಾಗಿ ಗಾಂಧಿ ಆದ್ರೋ ಮರಣಕ ತುತ್ತು || ೩ ||

ಇ|| ಕಾಲ ಬದಲಾಯಿತು ಕಾಯ್ದೆ ಬದಲಾದವು | ಹಾಲು ನೀರಾದಂಗಾತು
ಏರು || ಟೆನೆನ್ಸಿಯ್ಯಾಕ್ಟು ಹೊಲ ಸಾಗುವಳಿಗೆ ಕುತ್ತು
ಹೊಲದೊಡೆಯರು ಹೊಯ್ಕೊಳ್ಳು ಹೊತ್ತು ಬಂತು || ೪ ||

ಇ || ಕನ್ನಡ ಪ್ರಾಂತ ನಿರ್ಮಾಣ ಮಾಡುವಂತ | ಕಾಲ ತಾನಾಗಿ ಬಂತು
ಏರು || ಭಾರತ ಸರಕಾರ ಭಾರವನು ಹೊತ್ತುದೆಂತು
ಭಾರತದಾಗ ಮೊಹರಮ್‌ದ ಹಬ್ಬಾ ಬಂತು || ೫ ||

ಇ|| ಇನ್ನು ಮೇಲಾದರು ಕನ್ನಡ ಪ್ರಾಂತಕ್ಕೆ | ನಿರ್ಮಾಣ ಮಾಡುವ ಸಂಪತ್ತು
ಏರು || ಭಾರತ ಸರಕಾರ ಭಾರವನು ಹೊತ್ತುದೆಂತು
ಕನ್ನಡ ರಾಜ್ಯಗೈಯಲಿ ನಿಜ ಸಂಪತ್ತು || ೬ ||

ಇ|| ಇಂದು ಕನ್ನಡ ನಾಡು ಒಂದಾಗಿ ಮೆರೆಯಲಿ | ಹರಿಯಲಿ ನಾಡ ಕುತ್ತು
ಏರು || ಕನ್ನಡ ರಾಜ್ಯ ಒಂದಾದ ದಿನ ಸಂಪತ್ತು
ಬಯಸಲಿ ಸರಕಾರ ಸಹಕಾರ ವಿಪತ್ತು || ೭ ||

ಇ|| ನಾಡ ಗಂಡಾಂತರ ನೋಡಿ ನಡಿಯಲಿ ಜನರು |
ಸ್ನೇಹ ಮಂತ್ರಿಗೆ ಪರಿಷತ್ತು ಅವರಾಡಳಿತಕ್ಕೆ ತಕ್ಕ ಬೆಂಬಲವನಿತ್ತು |
ಮುಂದವರಿಗೆ ಕೊಡಬೇಕ್ರಿ ನಿಜ ಸವಲತ್ತು || ೮ ||

ಇ|| ಅನ್ನ ಅನ್ನ ಬಟ್ಟೆ ಬಟ್ಟೆ ಎಂದು ಬಡಕೊಳ್ಳುವ | ಕಣ್ಣಿಗೆ ಕಾಣುವ ವಿಪತ್ತು
ನಮ್ಮನಾಡನು ಬಿಟ್ಟು ಹೋಗದಿರಲಿ ದೌಲತ್ತು
ಬರುವುದಕ್ಕೆ ಬೆಳಸಬೇಕರಿ ನಾಡ ಸಂಪತ್ತು || ೯ ||

ಇ|| ಮದ್ಯ ಕುಡಿಯೂದು ಬಿಟ್ಟು ಹೊಲದ ಕರಕಿಯ ನಟ್ಟು | ಇಡಬೇಕ್ರಿ ಮನಸುಗೊಟ್ಟು
ಏರು || ಟ್ಯಾಕ್ಟರ ಹೊಡೆದು ಹೊಲವ ಹಸನವ ಮಾಡಿಟ್ಟು
ಬೆಳೆಯಬೇಕರಿ ಭಾರತ ಜನ ಪಣ ತೊಟ್ಟು || ೧೦ ||

ಇ|| ಭಾರತ ಭಾಗ್ಯವು ಹೆಚ್ಚು ಮುಂದಾಗಲಿ | ಕೊರತೆ ಕಂಟ್ರೋಲ ನೀಗಲಿ
ನೀರಾವರಿ ಭೂಮಿ ಬೆಳೆದು ನಿಲ್ಲಲಿ | ಸ್ವರಾಜ್ಯದ ಧ್ವಜವೆಲ್ಲ ಕಡಿದೇಳಲಿ || ೧೧ ||

ಭಾರತದೇಳ್ಗೆಗೆ ಕಾರಣವಾದಂತ ಪಂಚವಾರ್ಷಿಕ ಯೋಜನೆ
ಏರು || ನೆಹರು ಮಂತ್ರಿಮಾಡಿದ ನವ ಘಟನೆ |
ಸ್ವರಾಜ್ಯದ ಪ್ರಗತಿಗೆ ನಿಜಸಾಧನೆ || ೧೨ ||

ಇ|| ನಲವಡಿ ಗ್ರಾಮದಿ ನವನಾಗರಿಕರೆ ಕೂಡಿ ಅಲಾವಿನಾಡಿ
ಏರು || ಹಿಂದು-ಮುಸಲ್ಮಾನರು ಒಂದುಗೂಡಿ |
ಧೀನ್ ಧೀನಂತ ನಲಿದು ಅಲಾವಿನಾಡಿ || ೧೩ ||

* * *

. ಬಿಡರಿ ಪರದೇಶಿಯನಾ ಆಗ್ರಿ ಸುದ್ದ ಹಿಂದುಸ್ತಾನಾ

ಕೇಳರಿ ಮೊಹರಂದ ಕಥೆಯ ವಿಸ್ತಾರಾ
ಕೋಳಿ-ಕುರಿಯ ಕುಡಿಯುತೀರಿ ನೆತ್ತರಾ
ಏರು|| ಜ್ಞಾನಿ ಪೈಗಂಬರ ಆಡಿದ ಗಂಭೀರಾ
ತಿಳಿದು  ನಡಿಯಬೇಕ್ರಿ ಸತ್ಯ ಶಾಸ್ತ್ರ ವಿಚಾರಾ
ನಡಿದಾರು ಶರಣರು ಹಿಡಿದು ಸತ್ಯವನಾ || ೧ ||

ಬಡಿದುಕೊಳ್ಳಬ್ಯಾಡರಿ ನಿಮ್ಮ ಪಾರತಂತ್ರವನಾ
ಏರು || ಬಿಡರಿ ಪರದೇಶಿಯನಾ ಆಗ್ರಿ ಸುದ್ದಿ ಹಿಂದುಸ್ತಾನಾ
ಬಡಿದಂತ ಬೂತ ನಮಗೆ ಪರರ ಬಂಧನಾ || ೨ ||

ಇ|| ಚಾ ಪರದೇಶದಿಂದ ಬಂದಂತ ಪಾನಾ
ಏರು || ಕುಡಿದು ಕಳೆದುಕೊಳ್ಳಬ್ಯಾಡರಿ ನಿಮ್ಮ ಗಂಡಸ್ತಾನಾ
ಚೌ ಕುಡಿದು ರಕ್ತಹೀನಾ ನಮ್ಮ ಹಿಂದು-ಮುಸಲ್ಮಾನಾ
ಮನಿಬಿಟ್ಟು ಹೊರಗ ಮಲಗತಾರೋ ಅಪಮಾನಾ || ೩ ||

ಇ || ಪರದೇಶದಿಂದ ಬಂದ ಕಾಜೀನ ಸ್ವಾಮಾನಾ
ಏರು || ತರಬ್ಯಾಡರಿ ಸೋಪು ಪೌಡರು ಯಸಲೈನ ಸನ್‌ಲಾಯಿಟನಾ
ಬಿಡರಿ ಪರದೇಶಿಯನ್ನಾ ಆಗ್ರಿ ಸುದ್ದ ಹಿಂದುಸ್ತಾನಾ
ಇಲ್ಲೇನ್ರಿ ನಿಮಗೆ ದೇಶದ ಅಭಿಮಾನಾ || ೪ ||

ಇ|| ಉಡುಪಿ ಬ್ರಾಹ್ಮಣರೆಂಬ ತುಡುಗರನೋಡಸರಿ
ಏರು || ಹರಕು ಲುಂಗಿ ರಗಟಿಗೆ ಎಣ್ಣಿ ಉಗ್ಗಿ ಸುಡಿರಿ
ಪಾನಪಟ್ಟಿ ಸಿಗರೇಟು ಸೇದುವವನ ಮುಕಳಾಗ ಗೂಟಾ
ಹಿಡಿದು ಜಡಿದು ನಡು ಊರಾಗ ನಿಲ್ಲಸರಿ || ೫ ||

ಇ|| ಕೊಡಬೇಕರಿ ನಾವು ನಮ್ಮ ದೇಶಕ್ಕಾಗಿ ಪ್ರಾಣಾ
ಏರು || ಬಿಡಬೇಕರಿ ಹೆಂಡತಿ ಮಕ್ಕಳಿಗೆ ತಿಲತರ್ಪಣಾ
ಜವಾಹಿರ ಸುಭಾಸರನ ಗಾಂಧಿ ಮಹಾತ್ಮರ ವಚನಾ
ಪಾಲಿಸಿ ಪಡೆಯಿರಿ ಸ್ವಾತಂತ್ರ್ಯಾವನಾ || ೬ ||

ಇ|| ಅಡ್ಡಗೂಳಿ ಬಂದು ನಮ್ಮ ಹೊಲವ ಮೆಯ್ಯೂದನ
ಏರು || ಕುಡ್ದರಾಗಿ ನೋಡಬ್ಯಾಡ್ರಿ ಎಂಥ ದಿನಮಾನಾ
ತೊಡ್ಡ ಬಡದ ಹೋರಿಯಂತೆ ಮಡ್ಡತನ ಬಿಟ್ಟು ನಿಂತು
ಸೊಡ್ಡು ಹೊಡದು ಉಳಸರಿ ನಮ್ಮ ಭಾರತ ಮಾನಾ || ೭ ||

ಇ|| ಹಗಲಚಿಕ್ಕಿ ಮುಗಲಬಾಣಾ ಪರದೇಶಿ ಬಳೆಗಳನಾ
ಏರು || ತಗದು ಒಡಿದು ಹಾಕರಿ ನೀವು ಮಾತೃಭಗಿನಿ ಜನಾ
ಕಿವಿ ಮ್ಯಾಲ ಕ್ರಾಪ್ ತಿರುವಿ ಬಿಟ್ಟು ನೀವು ಗಂಡಸರ ಪರಧಿ
ತಿರಗಬ್ಯಾಡ್ರಿ ತಿಗರಿಯಂಗ ತಿರುವರಿ ರಾಟಿಯನಾ || ೮ ||

ಇ|| ನಲವಡಿ ಕವಿಕಥನಾ ಹುಣ್ಣಿಮಿ ಚಂದ್ರವನಾ
ಏರು || ಬೆಳಕು ಬಿದ್ದಾಂಗ ಹರೆಯದವಳೋ ಮುದುಕನ್ನ
ಅಪ್ಪಿದಾಗ ಅವನಿಗೆ ಆಗುವುದು ಆನಂದ್ಹಾಂಗ
ಆನಂದ ಕಡಲ ಉಕ್ಕಿದಾಗ ಸವಿ ಸಪ್ಪನಾ || ೯ ||

* * *

. ಟೀಪೂ ಸುಲ್ತಾನ

ಸರಸವುಳ್ಳ ಶ್ರೀ ರಾಮಚಂದ್ರ | ಸಭಾ ಬಂದು ಕೂಡಿರಿ ಇಂದ್ರ
ಹೇಳತೀನಿ ಬೇಧ ಏಕಂದ್ರಾ | ಮಾಡಿ ಖುಲ್ಲಾ ||
ಏರು || ಅಂತೇನಿ ಪರಸಂಗ ಒಂದಾ | ಕೇಳರಿ ಧ್ಯಾನಕ ತಂದಾ
ಅಂಗೈ ನೆರಳಿನೊಳು ಇನ್ನಾ | ಸಲುವುತ್ತ ದೈವ ನನ್ನಾ
ಮಾಡಬೇಕು ನೀವು ಇನ್ನ ಮಾಪಾ | ನನ್ನ ಕಡೆ ಇದ್ದರ ತಪ್ಪಾ
ಬಿಟ್ಟು ಮನದನ ಕೋಪಾ | ನಾ ನಿಮ್ಮ ಬಾಲಾ || ೧ ||

ಸೃಷ್ಟಿವೊಳಗ ನರಸುಳ್ಳಾತ | ಯುದ್ಧದೊಳಗ ರಣಶೂರಯೀತ
ಟೀಪು ಸುಲ್ತಾನ ಮಾತ | ಇಡರಿ ಖ್ಯಾಲಾ
ಏರು || ಬ್ರಾಹ್ಮಣನ ಮನಿವೊಳಗ | ಚಾಕರಿಯಿದ್ದ ಟೀಪು ಆಗ
ಸಣ್ಣವನು ಇರೂತನಾ | ಕಾವುತಿದ್ದ ಆಕಳು ದನಾ
ನಿತ್ಯ ನೇಮ ಹೋಗುವನು ಹೊಲಕ | ಬಿಟ್ಟು ದನಾ ಗಿಡದ ಬುಡಕ
ಮಲಗುವನು ಬೇಶಕ್ಕ | ಯಾರ ಭಯಾಯಿಲ್ಲಾ || ೨ ||

ನಿದ್ರೆಯಲ್ಲಿ ಮಲಿಗ್ಯಾನೋ ಸಾಪಾ | ಬಂತು ಏಳು ಪದ್ಮದ ಸರ್ಪಾ
ನೆರಳು ಆಗ ಹಿಡಿದೀತಪ್ಪಾ | ಮಾರಿ ಮ್ಯಾಲಾ
ಏರು || ಬ್ರಾಹ್ಮಣರ ಮನಿಲಿಂದಾ | ತಿರುಗೂತ ಹೊಲಕ ಬಂದಾ
ಕಂಡ ಕಣ್ಣೀಲೆ ಸರ್ಪಒಂದಾ | ಹಿಡಿದಂತಾ ನೆರಳಾ ಅಂದಾ
ಖುಷಿಯಾಗಿ ಮನಸಿನ ಒಳಗ | ಎಬಿಸ್ಯಾನ ಅಂವ ಆಳಮಗ್ಗ
ಕರಕೊಂಡ ಬಂದ ಮನಿಗೆ | ತಡಾಯಿಲ್ಲಾ || ೩ ||

ಬ್ರಾಹ್ಮಣ ಅಂಗಡಿಲಿಂದಾ | ಪೂಚ ಜರದ ಪೋಷಾಕ ತಂದಾ
ಇಟ್ಟನೊ ಅವರ ಮುಂದ | ಖುಷಿಯಾಲಾ |
ಏರು | ಸ್ವಚ್ಚ ಪನ್ನೀರಿನಿಂದಾ | ಇಟ್ಟ ಟೀಪೂವಿಗೆ ಎರದಾ
ಭೂಷಣ ಸರ್ವಾಂಗದೊಳು | ವಾಸನಿ ಅರಬಿಗಳ ತೊಡಸಿ
ಸರತಾಜ ಸಿರಪೇಚ್ಯಾಗ | ಇಟ್ಟಾರೊ ತಲಿಮ್ಯಾಗ
ಹೇಳತಾನ ಪೂರ್ಣೈ ಆಗ | ನೋಡಿ ರಮಲಾ || ೪ ||

ಗ್ನಾನವಂತ ಪೂರ್ಣೈ ಆಗ | ಹೇಳತಾರ ಟೀಪೂಗ
ರಾಜಕಿ ಬರುವದು ನಿನಗ | ಸುಳ್ಳಲ್ಲಾ |
ಏರು || ಯಾವ ಜಾಗೆ ಕೊಡತೀರಿ ಅಂತಾ | ಪೂರ್ಣೈ ಹಿಡಿದ ಶರತಾ
ಸರ್ವ ಸೇನೆಗಳ ಮ್ಯಾಗ | ಪ್ರದಾನಿ ಪೂರ್ಣೈ ಆಗ
ಮಾಡಿದರು ವಚನವ ಕೊಟ್ಟಾ | ಮನದಾನ ಸಂಶಯವ ಬಿಟ್ಟಾ
ಟೀಪು ಸುಲ್ತಾನನ ಪಟ್ಟಾ | ಆದೀತಲ್ಲಾ || ೫ ||

ಪಟ್ಟಕ ಪ್ರಧಾನಿ ಸುಖಾ | ಇಟ್ಟಾ ಪೂರ್ಣೈಗ ಜರಬಾ
ಕಾಟಿಕ ಇವನಂತಾ ಕುರುಬಾ | ಏನು ಬಲ್ಲಾ |
ಏರು ||  ವಜ್ರ ಪಾಶಾಣದಂತಾ  ಕುದುರಿ | ಹಾಕಿ ಜೂಲ ಜರತಾರಿ
ಕುದುರಿ ಕೊಳ್ಳಾಗ ಸುಬಾ | ಡಾಗ ಪುಟ್ಟೀಕ ಕುಬ್ಬಾ
ಎರದ ಟೀಪೂನ ಸವಾರಿ | ಕುಂತಾರ ಕುದುರಿಹಾರಿ
ಹೊಂಟಾರೋ ತಿರುವೂತ ಸೇರಿ | ಭಯಾವಿಲ್ಲಾ || ೬ ||

ಎಡವತಿತ್ತೋ ಕುದರಿಯೆಲ್ಲಾ | ದ್ರವ್ಯವುಂಡು ಇರುವುದಲ್ಲಾ
ಎತ್ತಿ ಒಗಿಯುವರು ತಮ್ಮ ಕೈಲೆ | ಅವರ ಮ್ಯಾಲೆ |
ಏರು || ಇದರಂತೆ ಭೂಮಿಮ್ಯಾಗ | ದ್ರವ್ಯ ಸಿಗುವದು ಆಗ
ಶಿವನ ಕಡಿಲಿಂದ  ಗರ್ದಿ ಇತ್ತು ತನಗೆ ದೊರೆತ ಗಾದಿ
ಸುತ್ತ ರಾಜರಗಂಡಾ ಅನಸೀದ ಪ್ರಚಂಡಾ
ಟಿಪ್ಪು ಸುಲ್ತಾನ ಮುಖಂಡಾ ಅನಿಸ್ಯಾನಲ್ಲಾ || ೭ ||

ಪೂರ್ಣೈಯನ ಮೋಹದ ಕನ್ನಿ | ರೂಪವುಳ್ಳ ದೇವಗನ್ನಿ
ಪತಿವ್ರತ ಧರ್ಮಪೂರ್ಣೆ | ಇದ್ದಾಳಲ್ಲಾ ||
ಏರು || ಗೆಳತೇರು ಕರಕೊಂಡು ಸಂಗ | ನದಿಗೆ ಹೋದಾಳೋ ಬ್ಯಾಗ
ಕೊರಳು ಶಂಕಿನಂತೆ ಹೆರಳ ರಾಘುಟ್ಟಿ ಚೌರಿ
ಕಾಮಸೈಸದಾತ ಮದನಿಗೆ ಮದನ ಮೋಹಿತಾ
ಒಬ್ಬ ಸಿಪಾಯಿ ನಿಂತಿದ್ದಾತಾ ಖಬರಿಲ್ಲಾ || ೮ ||

ಕಳವುಳ್ಳರೂಪಗ ಜಾರಿ | ಬಿದ್ದು ಕಾಮ ಆದೀತು ಸೂರಿ
ಸರ್ವ ಮಾತು ಹೋದೀತು ತೀರಿ | ಬಿಡಲಿಲ್ಲಾ |
ಏರು || ಬಂದಾಳೊ ದುಃಖದೊಳಗ ಅಂದಾ | ತಂದಿ ಕೇಳೋ ಈಗ
ಯಾರಿಗೆ ಹೇಳಲಿ ಮಾರಿ ತೋರಿಸದಂತೆ ಆತ
ಕೇಳಿ ಹೀಂಗ ಮಗಳ ಮಾತ | ಕೋಪ ತಡಿಯದಾತ
ಮಂಡಲದಾಗ ಮನಹೋತು | ಅಂತಾನಲ್ಲಾ || ೯ ||

ಬಿಚಗತ್ತಿ ಹಿಡಿದು ಕೈಯಾಗ | ಪ್ರಧಾನಿ ಹೊಂಟನೊ ಆಗ
ಬಂದು ದರಬಾರದೊಳಗ | ಅಂದಾನಲ್ಲಾ
ಏರು || ಮಾಡರಿಯಿನ್ನಾ ಸಾಪಾ | ಅರಸರು ನೋಡಿ ತಪ್ಪಾ
ಸರಿಯಬಾರದಂತಾ ಮಾಯಾ | ಹರಿಯನಾತನಿಗೆ ಕೊಟ್ಟು
ಸಿಪಾಯಿಗೆ ವರ್ದಿ | ಇನ್ನು ಉಸಾಪ ನಡದೀತು ಗರ್ದಿ
ಅಂದ ಸಿಪಾಯಿ | ತಪ್ಪಿತು ಹಾದಿ | ತಿಳಿಯಲಿಲ್ಲಾ || ೧೦ ||

ಅರಸ ಅಂದಾಕೇಳು  ಪ್ರಧಾನಿ | ಅಟ್ಟಾದ ಅಡಗಿ ಕೆಟ್ಟಿತು ಅದನಾ
ಕೊಟ್ಟವಗ ಮಾಡೋ ಲಗ್ಗನಾ ತಿಳಿಯಾಕಿಲ್ಲಾ ||
ಏರು || ಇಟ್ಟ ಮನದಾಗ ಕಪಟಾ | ಬಂದಾನು ಲಾಗು ಪೇಟಾ
ಕುಲಗೇಡಿ ಬ್ಯಾಹ್ಮಣ ತಾನು ಕುಲಾಚಾರ ಬಿಟ್ಟಾನವನು
ಪೂರ್ಣೈಯಾಗ ಮಾಡಿ ಫಿತೂರಾ | ಬಲಾಯತಗೆ ಬರದ ಪತ್ತರಾ
ಸೋಜರ ದಂಡ ವತ್ತರಾ ತರಸಾನಲ್ಲಾ || ೧೧ ||

ಮೇಣಿದೊಳಗೆ ಸೋಜೇರಾ ಸೈನಾ ತುಂಬಿ ತುಂಬಿ ಬಂದಿತರಣಾ
ಪೂರ್ಣೈಯನಾ ಕಪಟತನ ತಿಳಿಯಲಿಲ್ಲಾ ||
ಏರು || ತಂದು ತಂದು ಇಳಿಸ್ಯಾನಾಗ | ಸರ್ವಸೈನಾ ವಾಡೇದವೊಳಗ
ತನ್ನ ಸರ್ವಸೈನಕ ಆಗ | ಪೂರ್ಣೈಯಾ ಹೇಳ್ಯಾನೋ ಹೀಂಗ
ರಪು ಎತ್ತಿಗೋಸ್ಯಾದೋರು ತೀರಿಸುವಾಗ
ಅಡ್ಯಾದೋರು ಜನಾ ಬಿಟ್ಟು ಹೋಗರಿ ದೂರ ಅಂದಾನಲ್ಲಾ || ೧೨ ||

ಸರ್ವದಂಡ  ಹೋದೀತು ಹೊಂಟಾ | ಪೂರ್ಣೈಯಾ ಹುಕುಮ ಕೊಟ್ಟಾ
ಸುರಂಗೇರಾನಾ ಬೈಲಿಗೆ ಬಿಟ್ಟಾ | ತಡಾಯಿಲ್ಲಾ
ಏರು || ಮದ್ದುಗುಂಡು ಹಾರ‍್ಯಾವದುಂದಾ | ಟೀಪು ಕೇಳಿ ಆಗ ಬಂದಾ
ಶಾರ ಮದ್ರಶಾಕ ಅನಿಸಿ | ಧೀರ ಆ ಸುಲ್ತಾನನು
ಡಾಲು ಕತ್ತಿ ಕೈಯವೊಳಗ | ಗುಂಡುಗಳು ಸುಲ್ತಾನಗ ಬಡದು
ಪ್ರಾಣ ಹೋದೀತು ಆಗ | ತಿಳಿಯಲಿಲ್ಲಾ || ೧೩ ||

ಗಂಜ್ಯಾಮದೊಳಗ ಮಾಡ್ಯಾರೊ ಮಣ್ಣಾ | ಟೀಪು ಸುಲ್ತಾನಗ ದಫನಾ
ಹಿಡಿದು ಕಡದ ಪೂರ್ಣೈಯಗ ಬಿಡಲಿಲ್ಲಾ
ಏರು || ಪರಂಗೇರ ಜೆಂಡೆ ಆಗ ನಡಸ್ಯಾರ ಕಿಲ್ಲೇದಮ್ಯಾಗ
ಬರದ ಪ್ರಾರಬ್ದದೊಳಗ | ಬರಿಯದು ತಪ್ಪೀತುಹ್ಯಾಂಗ
ತೋಡಿಪದಾ ಹೀಂಗ ಮಾಡಿ ಹಾಡುವೆ ದೈವದೊಳಗ
ಹೊಡದ ನಿನ್ನ ಮಾರಿಮ್ಯಾಗ ಮುರದ ಹಲ್ಲಾ || ೧೪ ||

ಹರಕುಬುದ್ದಿ ಹಾದರಗಿತ್ತಿ | ಅನಿಸಿದಾಗ ನೀನು ಪರಿವ್ರತೆ
ಎಲ್ಲಿ ಹೋದರ ನಿನ್ನ ಫಜೀತಿ ಮಾಡೇನಲ್ಲಾ ||
ಏರು || ನನಗ ನಿನಗ ಬಿಟ್ಟೀತ ಹ್ಯಾಗ | ತಿಳಿ ನಿನ್ನ ಮನಸಿನ ಒಳಗ
ಎರಿ  ಹೊಲಕ ಬಿರಿ ಬಿಟ್ಟಂತೆ | ಕದನಗಿತ್ತಿ ಕಾಳಿ ನೀನು
ಗುರು ನಮ್ಮ ದಸ್ತಗೀರಾ ಕರುಣುಳ್ಳ ಕೇಸೂಪೀರಾ
ನಾಗೂ ಗೌಸು ಗೆಳೆಯರಂತಾರಲ್ಲಾ || ೧೫ ||

* * *