. ಹಾತಿಮ ಅರಸನ ಪದಾ

 

ಬಯ್ಯಾನೊಂದು ಕೇಳರಿ ಠೀಕ | ಬರುವಾಂಗ ಶಾಣ್ಯಾರ ಮನಕ
ತಿಳಿಸುವೆ ಸರೂಜನಕ ಮಾಡಿ ಖುಲ್ಲಾ || ಪಲ್ಲವಿ ||

ಏರು || ಬಯ್ಯಾನ ಗರ್ದಿ ಹೇಳುವೆ ವರ್ದಿ ಕೇಳರಿ ಹಿರಿಯರಾ
ಹಾತಿಮ ಅರಸು ಜಗತ್ಯೇಕ ಸರಸು ಆಗ್ಯಾನೋ ಜಾಹೀರಾ
ಪುಣ್ಯವಂತ ಮಹಾ ಪರಉಪಕಾರಿ ಪೃಥ್ವಿವೊಳಗ ಇಲ್ರಿ ಅವನ ಸರಿ
ಅತಿಥಿ ಅಭ್ಯಾಗತ ಜನಕ ನಿತ್ಯನೇಮ ಅವರಿಗೆ ತಕ್ಕ
ಬಹುಮಾನ ಕೊಡುವನೋ ಲೆಕ್ಕ ಗುಣಶೀಲಾ || ೧ ||

ಮುನಾರ ಸ್ವಾಮಿಯ ಸಲುವಾಗಿ ಮಹಾಘೋರ ಅಡವಿಯ ತಿರುಗಿ
ವಸಂತ ಶೆಕಿ ಉರಿಬ್ಯಾಸಗಿ ಕೆಟ್ಟ ಬಿಸಲಾ ||
ಏರು || ಆರ‍್ಯಾಣದೊಳು ಅರಸನಗೋಳು ಕೇಳುವರ‍್ಯಾರಿಲ್ಲಾ
ಮಟ ಮಟ ಮಧ್ಯಾಣ ಮೀರಿತು ಠಾಣಾ ಸುಡತಾವ ಬರಿಗಾಲಾ
ನೀರಡಿಸುತ ಒಂದ ನಾಯಿ ಅಡವಿಯೊಳಗದು ಬಿಡುವುದು ಬಾಯಿ
ನಾಲಿಗಿ ಚಾಚಿತು ಗೇಣುದ್ದ ಕೂಗಿಲ್ಲರಿ ಕಾಗಿ ಹದ್ದಾ
ಹಾತಿಮನ ಎದುರಿಗೆ ಬರುವುದು ಎದಿಮ್ಯಾಲಾ || ೨ ||

ಇ || ಹಾತಿಮನು ಕಣ್ಣಿಲೆ ಕಂಡಾ ನಾಯಿ ಸಂಗಡ ಕರಕೊಂಡಾ
ಹುಡುಕುವನು ಭಾವಿಯ ಹೊಂಡಾ ಸಿಗಲಿಲ್ಲಾ ||
ಏರು || ತಪಾಸು ಮಾಡಿ ಭಾವಿಯ ನೋಡಿ ಹೋದಾನೋ ಏಕದಮ್ಮಾ
ಜಗ್ಗಲಿಕ್ಕೆ ಕೊಡ ಹಗ್ಗವು ಇಲ್ಲಾ ಬಗ್ಗಿ ಒಗಿದಾನೋ ಬಾವ್ಯಾಗ ಕಲ್ಲಾ
ನೀರಿದ್ದವರಿ ಬಾಳ ದೂರ ನಿಂತಗೊಂಡ ಹಾಕುವಾ ಉಸರಾ
ಎಂಥಾ ಇಂವಾ ಪರ ಉಪಕಾರಿ ಬೆಲೆ ಇಲ್ಲಾ || ೩ ||

ಇ || ಹಂಚಿಕಿ ಮಾಡುವ ಹಾತಿಮಾ ಹೌಹಾರಿ ನಿಂತಾನೋ ಸುಮ್ಮಾ
ತಲೆಯಿಂದ ತಗಿದಾನೋ ತನ್ನ ರುಮಾಲಾ
ಏರು || ರುಮಾಲ ಹರಿಸಿ ಬಾವ್ಯಾಗ ತೋಸಿ ಎಳೆದಾನೋ ಮೇಲಕ್ಕೆ
ಬರುವ ನಾಯಿ ಅದರ ಬಾಯಿಯವೊಳಗ ಹಿಂಡುವಾ
ಹೀಗೆ ನಾಯಿಗೆ ಕುಡಿಸಿದಾ ನೀರಾ | ಹೋಗಿ ಕೂತ ಒಂದು ಗಿಡದ್ಹತ್ತರಾ
ನೆರಳತ್ತು ಬಹಳ ಸಂಪಾ ನಾಯಿಗಾದೀತು ಬಹಳ ತಂಪಾ
ಹಾತಿಮನ ಉಪಕಾರ ನೆನಪ ಹಗಲೆಲ್ಲಾ || ೪ ||

ಇ || ಗಿಡಾ ಬಾಳ ಸಂಪಾಗಿತ್ತು ನಾಯಿ ಅಲ್ಲಿಗೆ ಬಂದೀತು
ಹಾತಿಮಾನ ಹತ್ತಿರ ಕುಂತಿತು ತೊಡಿಮ್ಯಾಲಾ ||
ಏರು || ನಾಯಿಗೆ ನೋಡಿ ಪ್ರೀತಿಯ ಮಾಡಿ ಹಾತೀಮ ಹೇಳುವಾ
ಜಾತಿ ನಾಯಿ ಇದು ಪ್ರೀತೀಲೆ ಇರುವದು ಮಾಡಿ ಬಹಳ ಜೀವಾ
ಏನಚಂದ ಇದು ನಾಯಿಯ ಕುಲಾ | ಕೈಯಾಡಿಸಿದನೋ ತಲೆಯಮೇಲಾ
ಕೈಯಿಗೆ ತಾಕಿತು ಒಂದು ಮಳಿ ದಂಗಾದೀರಿ ದೈವಾ ಕೇಳಿ
ಇತ್ತೊ ನಡು ನೆತ್ತಿಯ ಸುಳಿ ಸುಳ್ಳಲ್ಲಾ || ೫ ||

ಇ || ಕಸುವು ಮಾಡಿ ಮಳಿ ಕಿತ್ತಿಟ್ಟಾ | ಮುಸುಕಿತೋ ಮಾಯದ ಪೆಟ್ಟಾ
ಮನುಷ್ಯ ಆದಾನೋ ಉತ್ಕೃಷ್ಟ ತತ್ಕಾಲಾ ||
ಏರು || ನಾಯಿಯು ಹೋಗಿ ಮನುಷ್ಯನಾದಾನೋ ಹಾತಿಮನೆದುರಿಗೆ
ಸಾಗರಬಿದ್ದು ಪಾದಕ ಮುದ್ದು ಕೊಡತಾನ ಅವರಿಗೆ
ನನ್ನ ಜನ್ಮ ಮಾಡಿದಿ ಉದ್ದಾರ | ತೀರಲಾರದು ನಿಮ್ಮ ಉಪಕಾರಾ || ೬ ||

ಇ || ನನ್ನ ಮೈಯಾನ ಚರ್ಮವ ಸುಲಿಸಿ ನಿಮ್ಮ ಕಾಲಿಗೆ ಮಚ್ಚಿಯ ಹೊಲಿಸಿ
ಕೊಟ್ಟರ ತೀರುವುದಿಲ್ಲಾ ಉಪಕಾರಾ ||
ಏರು || ಪಾರಸ ಪಟ್ಟಣದವ ನಾನು | ದೊಡ್ಡ ಸಾವಕಾರನ ಮಗನು
ಕೇಳು ನಾನು ಹೇಳುವುದನ್ನು ಇನ್ನ ಮೇಲಾ
ಇ || ನನ್ನ ಹೆಂಡತಿ ಹಾದರಗಿತ್ತಿ ಇರುವಳು ಬಂಗಾಲಿ
ಪರ ಪುರುಷರಿಗೆ ಕೊಡುವಳು ಭೋಗ ಪ್ರೀತಿ ಅದರ ಮೇಲಾ
ಸೇರಲಾರದೆ ಆ ಗಯ್ಯಾಳಿ ಜಡಿದು ಬಿಟ್ಟಾಳೊಂದು ತಲಿಯಾಗ ಮಳಿ
ಆ ಕ್ಷಣಾ ಆದೆನು ಶ್ವಾನಾ | ಮನಿಬಿಟ್ಟು ಹೋದೆನು ಹೊರಗ
ಹೊಟ್ಟೆಗಿಲ್ಲದೆ ಅಸನಾ ಹಗಲೆಲ್ಲಾ || ೭ ||

ಇ || ತಿರುಗಿದೆ ಓಣಿ ಹಿಡಿದು ಓಣ್ಯಾನ್ನ ನಾಯಿ ಕಡಿದು
ಹೊರಗ ಹಾಕ್ಯಾರೋ ಬಡಗೀಲೆ ಹೊಡೆದು ಜನರೆಲ್ಲಾ
ಏರು || ಹೇಳುವುದನ್ನು ಕೇಳಿಕೊಂಡು ಮನಿಗೆ ಹೊಂಟಾರಲ್ಲಾ
ಅವನ ಹೆಂಡತಿ ಗೆಣಿಯನ ಸಂಗತಿಲೆ ಮಲಗಿದ್ಲೋ ಗರದೀಲೆ
ಇ || ವಂಚನೆ ಇಲ್ಲದೆ ಮಂಚದ ಮ್ಯಾಲೆ ನಿದ್ರಿಯೊಳಗ ಎಚ್ಚರವಿಲ್ಲಾ
ಕಳವಳಿಸಿ ನಿಂತಾನೋ ಮಿತ್ರಾ ಮಳೆಯಿತ್ತೊ ಹಾತಿಮನ ಹತ್ರಾ
ತಲಿಮ್ಯಾಲೆ ಜಡಿದಾನೋ ವತ್ರಾ ಬಿಡಲಿಲ್ಲಾ || ೮ ||

ಇ || ಹೆಣ್ಣುನಾಯಿ ಆದೀತು ಆಗ ಮನಿಬಿಟ್ಟು ಹೋದೀತು ಹೊರಗ
ಗಂಡು ನಾಯಿ ಆ ಓಣ್ಯಾಗ ಹಿಂಬಾಲಾ ||
ಏರು || ತಾನೆ ಕಂಡಿತು ಮಾಯದ ಮಾತಿದು ಎಂದಿಗೆ ಬಿಡಲಿಲ್ಲಾ
ಹೆಣ್ಣು ನಾಯಿಗೆ ಬೆಳಸೋ ನೀನಾ ಗಂಡು ನಾಯಿಗಳ ಹತ್ತಿಸಿನಿ ಬೆನ್ನಾ
ಕವಲೂರೊಳು ಹೂವಿನ ಮಗ್ಗಿ ಚಿಕ್ಕಮಸೂತಿಗೆ ಹೋಗಿ
ಮಾಲಿಹಾಕೋ ಮಲ್ಲಿಗೆ ಗೊಂಚಲಾ || ೯ ||

* * *

. ಚಂದ್ರಾವತಿ ಮದುವೆ ಪದಾ

ಕುಂತ ಜನಕ ನಾ ನಿಂತ ಹೇಳತೇನಿ ಕುಂತಕೇಳರಿ ಜನಾ
ರಾಜರ ಮಂತ್ರಿ ಚರಿತ್ರ ಹೇಳತೇನಿ ಕೇಳರಿ ಸಂಪೂರಣಾ
ಉತ್ತರ ದಿಕ್ಕಿನೊಳಗ ಒಂದು ಇತ್ತೋ ರಾಜಸ್ಥಾನಾ
ಏರು || ಅಲ್ಲಿ ಅರಸನ ಹೊಟ್ಟೀಲೆ ಒಬ್ಬ ಇದ್ದ ಬಾಲಕನಾ
ಪ್ರಾಯದಲ್ಲಿ ಇದ್ದಾನಂವಾ ಒಳ್ಳೆಯವನಾ
ಅವನ ಹಣಿಮ್ಯಾಲೆ ಇತ್ತೋ ಕೇಳರಿ ಚಂದ್ರರೇಖವನಾ
ಅವನ ಬಣ್ಣಾ ಲಿಂಬಿ ಹಣ್ಣಾ ಹೊಳಿದಾಂಗೋ ರತನಾ || ೧ ||

ಇ || ಒಂದು ದಿನ ಅರಸ ತಗಸ್ಯಾನೋ ಮಗನ ಪೋಟೋನಾ
ಮಂತ್ರಿಯ ಕರೆದು ಹೇಳತಾನೋ ಮಾಡೂನು ಲಗ್ಗನಾ
ನಮ್ಮಸರಿ ಇದ್ದವರ ಕೂಡ ಮಾಡೋಣ ಬೀಗತಾನಾ
ಏರು || ಇಷ್ಟು ಹೇಳಿ ಅರಸ ಕೊಟ್ಟಾನೋ ತನ್ನ ಮಗನ ಪೋಟೋನ್ನಾ
ಕುದುರಿಯ ಹತ್ತಿ ಮಂತ್ರಿ ಹೋದಾನೋ ನೋಡಾಕ ಕನ್ಯೆವನಾ
ಚಂದ್ರಾವತಿ ಎಂಬುವದೊಂದು ಇತ್ತೊ ಪಟ್ಟಣಾ
ಅಲ್ಲಿ ಅರಸನ ಮಗಳು ಇದ್ದಾಳೋ ವಿದ್ಯಾದಲ್ಲಿ ನಿಪುಣಾ || ೨ ||

ಇ || ಅಲ್ಲಿಗೆ ಹೋಗಿ ಮಂತ್ರಿ ಕೇಳತಾನೋ ಚಂದ್ರಾವತಿ ಅರಸನ್ನಾ
ಉತ್ತರದರಸನ ಕೂಡ ನೀನು ಮಾಡೋ ಬೀಗತನಾ
ಇಷ್ಟು ಕೇಳಿ ಅರಸ ಅನ್ನತಾನ ಅವನ ಗುರುತೇನಾ
ಏರು || ಇಷ್ಟು ಕೇಳಿ ಮಂತ್ರಿ ತಗದ ಕೊಟ್ಟಾ ಉತ್ತರದರಸನ ಪೋಟೋನಾ
ಪೋಟೋ ನೋಡಿ ಅರಸ ಕರಿಯತಾನಾ ತನ್ನ ಮಗಳನ್ನಾ
ಯಾತಕ ಕರದಿಯಂತ ಬಂದ ಕೇಳತಾಳೋ ಚಂದ್ರಾವತಿ ತಾನಾ
ಆಗಿಂದಾಗ ಕೈಯಾಗ ಕೊಟ್ಟಾನ ಉತ್ತರದರಸನ ಪೋಟೋನಾ || ೩ ||

ಇ || ನಿನ್ನ ಮನಸಿಗೆ ಬಂದರ ನೋಡವ್ವಾ ಮಾಡತೇನಿ ಬೀಗತನಾ
ವಿದ್ಯಾವತಿ ಗುರುತ ಹಿಡದಾಳೋ ಚಂದ್ರರೇಖವನಾ
ಇಂವಗಾರ ಮಾಲಿ ಹಾಕಲಿಕ್ಕೆ ಒಪ್ಪಿಗೆ ಅದೇನೋ ನಾನಾ
ಏರು || ಚಂದ್ರಾವತಿ ಬಣ್ಣಾ ನೋಡಿ ಮಂತ್ರಿ ಮುಚ್ಯಾನೋ ಕಣ್ಣಾ
ಆಗಿಂದಾಗ ಮಂತ್ರಿ ಹಾಕತಾನೋ ಒಂದ ಅಕಲವನಾ
ತನ್ನ ಮಗನಿಗೆ ಮಾಡಬೇಕಂತಾನ ಈ ಹೆಣ್ಣಾ
ಆಗಿಂದಾಗ ಲಗ್ನ ನೇಮಿಸ್ಯಾನೋ ಹನ್ನೆರಡನೇ ತಾರೀಖಿನದಿನಾ || ೪ ||

ಇ || ಪರ್ತ ಪೋಟೋ ತಕ್ಕೊಂಡು ಚಂದ್ರಾವತಿ ಕೊಟ್ಟಾಳೋ ಪೋಟೋನ್ನಾ
ಪೋಟೋ ತಕ್ಕೊಂಡು ಮಂತ್ರಿ ಹೋದಾನೋ ತನ್ನ ರಾಜ್ಯಕ ತಾನಾ
ಉತ್ತರದರಸಗ ಹೇಳತಾನೋ ಕನ್ಯಾದ ಸುದ್ದಿಯನಾ
ಏರು || ಚಂದ್ರಾವತಿ ಪಟ್ಟಣದೊಳಗ ನೋಡೇನೊಂದ ಕನ್ಯವನಾ
ವಿದ್ಯಾ ಬುದ್ಧಿಯಲ್ಲಿ ಆದಾಳೋ ಒಳ್ಳೆ ನಿಪುಣ್ಣಾ
ನಮ್ಮ ಅರಸಗ ಸರಿಯಾಗುದಿಲ್ಲಾ ಕಪ್ಪು ಐತಿ ಆಕಿ ಬಣ್ಣಾ
ಇಷ್ಟು ಕೇಳಿ ಉತ್ತರದರಸ ಸುಮ್ಮನೇ ಆದಾನಾ || ೫ ||

ಇ || ಪೋಟೋ ಕೊಟ್ಟು ಮಂತ್ರಿ ಹೋದಾನೋ ತನ್ನ ಮನಿಗೆ ತಾನಾ
ತನ್ನ ಮಡದಿಗೆ ಹೇಳತಾನೋ ಕನ್ಯಾದ ಸುದ್ದಿಯನಾ
ಚಂದ್ರಾವತಿ ಪಟ್ಟಣದೊಳಗ ನೋಡೋನೊಂದು ಕನ್ಯೆವನಾ
ಏರು || ನನ್ನ ಮಗನ ಲಗ್ನ ಮಾಡಬೇಕಂತ ನೇಮಿಸೇನಿ ಹನ್ನೆರಡನೇ ತಾರೀಖಿನ ದಿನಾ
ಲಗ್ನದ ಸುದ್ದಿ ಊರ ಮುಂದ ಹೇಳಬ್ಯಾಡ ನೀನಾ
ಲಗ್ಗನ ನೇಮಿಸಿದ ಮೂರು ದಿನಕ್ಕ ಕನಸ ಕಂಡಾಳೋ ಚಂದ್ರಾವತಿನಾ
ತಿರುಕನ ಮಗನ ಕೂಡ ಆದಂಗಾತೋ ಆಕಿಯ ಲಗ್ಗನಾ || ೬ ||

ಇ || ಎದ್ದು ಕುಂತು ಆಕಿ ತಂದಿಯ ಕರದು ಹೇಳತಾಳೋ ಯಾಕಂತ ಬಂದಾನಾ
ಈಗಿನ ಕ್ಷಣದೊಳಗಾ ಐತೇ ಮೋಸತಾನಾ
ತಿರುಕನಾಗಲಿ ಹರಕನಾಗಲಿ ಹಾಕುವೆ ಮಾಲಿಯನಾ
ಏರು || ನಾನು ಹೇಳಿದಂತೆ ಲಗ್ಗನ ಪತ್ತರ ಕಳಸಪ್ಪಾ ನೀನಾ |
ನನ್ನ ಮಗಳು ಮನಸಿಗೆ ಬಂದವರಿಗೆ ಹಾಕ್ತಾಳಂತ ಮಾಲಿಯನಾ
ಇದರಂತೆ ಲಗ್ಗನ ಪತ್ತರ ಕಳಿಸ್ಯಾನೋ ಅರಸನಾ
ಎಲ್ಲಾ ಜನರು ಬರಬೇಕಂತಾ ಹನ್ನೆರಡನೆಯ ತಾರೀಖಿನ ದಿನಾ || ೭ ||

ಇ || ಹಂದರ ಹಾಕಿ ಬಲ್ಲಾಂಗ ಇಟ್ಟಾನೋ ಸಾಲ ಕುರ್ಚೇವನಾ
ಮಂತ್ರಿಮಗನ ಕರಕೊಂಡು ಬಂದು ಕುಂತಿದ್ದಾ ನಡು ಹಂದರದಾಗವನಾ
ಎಲ್ಲಾ ಜನರು ಬಂದು ಕೂಡಿದ್ರೋ ಲಗ್ನದ ದಿನಾ
ಏರು || ಮಂತ್ರಿ ಮಾಡಿದ್ದ ಕಂತ್ರಿತನ ತಿಳಿದಿದ್ದ ಉತ್ತರ ದರಸನ ಮಗನ್ನಾ
ಮುಂದ ಬಿಟ್ಟ ಅಂವಾ ಹಿಂದ ಹತ್ಯಾನೋ ತನ್ನ ಕುದರಿಯನಾ
ಚಂದ್ರಾವತಿ ಪಟ್ಟಣಕ ಬಂದು ಇಳದಾನೋ ಕುದರಿಯನಾ
ಊರ ಹೊರಗ ಬಂಗ್ಲೇದಾಗ ಇಳದ ಕುಂತಿದ್ದನಾ || ೮ ||

ಇ || ಚಂದ್ರಾವತಿ ಒಳಗಿಂದ ಬಂದಾಳೋ ಹಿಡಕೊಂಡ ಮಾಲಿಯನಾ
ಕುಂತ ಜನರಿಗೆ ಕೈಯ ಮುಗಿದು ಇಳಿದಾಳೋ ಕಟ್ಟಿಯನಾ
ಸಾಲ ಹಿಡಿದು ನೊಡಕೊಂಡ ಹೊಂಟಾಳೋ ಚಂದ್ರರೇಖವನಾ
ಏರು || ನನಗ ಹಾಕತಾಳೋ ನಿನಗ ಹಾಕತಾಳೋ ಅಂತಾರೋ ಕುಂತೀರೋ ಜನಾ
ಮಂತ್ರಿಗುರುತು ಹಿಡಿದು ಸನಿಯಾಕ ಬಂದು ನಿಂತಾಳೋ ಸುಮ್ಮನಾ
ಬೀಗತಾನ ಮಾಡಲಿಕ್ಕೆ ಬಂದವನು ಹೌದೇನು ಅಲ್ಲೋ ನೀನಾ
ಎಲ್ಲಿ ಐತಿ ತಗದ ಕೊಡಪ್ಪಾ ನೀ ತಂದ ಪೋಟೋನ್ನಾ || ೯ ||

ಇ || ಇಷ್ಟು ಕೇಳಿ ಮಂತ್ರಿ ಮಾಡಿದಾ ತಳಿಯಾಕ ಮಾರಿಯನಾ
ಮಂತ್ರಿ ಮಗನ್ನಾ ದಾಟಿ ಹೋದಾಳೋ ನೊಡಕೊಂತ ರೇಖವನಾ
ಹಂದರ ಕಡೆ ಸಿಡಿದು ಹೋಗಿ ನಿಂತಿದ್ದ ಕರದಾಳೋ ತಂದಿಯನಾ
ಏರು || ಯಾಕ ಕರದೀಯಂತ ಬಂದ ಕೇಳತಾನೋ ತನ್ನ ಮಗಳನ್ನಾ
ಊರವೊಳಗ ಯಾರ‍್ಯಾರ ಇದ್ದಾರ ಕರಸಪ್ಪಾ ನೀನಾ
ಇಷ್ಟು ಕೇಳಿ ಅರಸ ಬಿಟ್ಟಾನೋ ನಾಲ್ಕಾರು ಮಂದಿಯನಾ
ಊರ ಸುತ್ತಹಾಕಿ ಬರೂದರೊಳಗ ನೋಡ್ಯಾರ ಬಂಗ್ಲೇದಾಗವನಾ || ೧೦ ||

ಇ || ಯಾವೂರವನು ಇಲ್ಯಾಕ ಕುಂತಿದ್ದೀ ನಮ್ಮರಸ ಕರಿತಾನಾ
ಇಷ್ಟು ಕೇಳಿ ಬಾಲಕ ಅಂತಾನ ನನ್ನಕಡೆ ಕೆಲಸೇನಾ
ಮಾತ ಮತಾಡಕೊಂತ ಇಳಿದು ಬಂದು ಹತ್ಯಾನೋ ತನ್ನ ಕುದರಿಯನಾ
ಏರು || ಅವರ ಇದರಿಂದ ಬಲಕ ಬಂದಾನೋ ಹಂದರ ಲಗತಿಗವನಾ
ದೂರ ಇರೂತಲೆ ಗುರುತ ಹಿಡಿದಾಳೋ ಚಂದ್ರರೇಖವನಾ
ನನ್ನ ಪುರುಷ ಇಲ್ಲೇ ಬಂದಾನಂತ ಹಿಡದಾಳ ಮಾಲಿಯನಾ
ಹಂದರ ಲಗತಿಗೆ ಬಂದ ಇಳೂದರೊಳಗ ಹಾಕ್ಯಾಳೋ ಮಾಲಿಯನಾ || ೧೧ ||

ಇ || ಮತ್ತ ಮಾಲಿಹಾಕಿ ಪಾದಕ ಎರಗಿ ಹಳತಾಳೋ ತಾನಾ
ನನ್ನ ಪರೀಕ್ಷೆ ಮಾಡಬೇಕಂತ ಕುಂತಿದ್ದೀ ಏನೋ ದಿನಾ ||
ಕಂಡವರಿಗೆ ಹಾಕಲಿಕ್ಕೆ ಅಲ್ಲ ಅರಸನ ಮಗಳು ಅಲ್ಲೋ ನಾನಾ
ಏರು || ಇಷ್ಟು ಕೇಳಿ ಕುಂತ ಜನರೆಲ್ಲಾ ಚಪ್ಪಾಳೆ ಹಾಕ್ಯಾರಾದಿನಾ
ಆಗಿಂದಾಗ್ಗೆ ಅರಸ ತರಿಸ್ಯಾನೋ ಒಳಗಿಂದ ಸಿಂಹಾಸನಾ
ಅಳಿಯನ ಕರದು ಕುಂಡರಿಸ್ಯಾನೋ ಸಿಂಹಾಸನದ ಮ್ಯಾಲೆ ಅವನಾ
ಆರತಿ ಮಾಡಿ ಎಡಕ ಕುಂತಾಳೋ ಚಂದ್ರಾವತಿ ತಾನಾ || ೧೨ ||

ಇ || ತನ್ನ ತಂದಿನ್ನ ಕರಿದು ಹೇಳತಾಳೋ ಊಟ ಮಾಡಿಸೋ ಜನಾ
ಇಷ್ಟು ಕೇಳಿ ಮಂತ್ರಿ ಎದ್ದಾನೋ ಕರಕೊಂಡ ತನ್ನ ಮಗನ್ನಾ
ಮಂತ್ರಿ ಮಾಡಿದ ಕಂತ್ರಿತನ ನಡಿಲಿಲ್ಲೊ ಲಗ್ನದ ದಿನಾ
ಏರು || ಆನಿ ಒಂಟಿ ನೌತ್ತ ನಗಾರಿ ತರಿಸ್ಯಾನೋ ಮೇಣೆವನಾ
ಅಳಿಯ ಮಗಳನ್ನಾ ಕುಂಡರಿಸಿ ಕಳಿಸ್ಯಾನೋ ಉತ್ತರ ದೇಶಕ್ಕವರನಾ
ತಮ್ಮ ರಾಜ್ಯೇಶ ಹೋಗಿ ಎಬ್ಬಿಸ್ಯಾನೋ ಆದಿನ ಗದ್ಲವನಾ
ರಾಜ್ಯವಾಡೇದ ಸನಿಯಾಕ ಹೋದಾಗ ಗುರುತ ಹಿಡದಾನೋ ಮಗನ್ನಾ || ೧೩ ||

ಇ || ನನ್ನ ಬಿಟ್ಟು ನೀ ಲಗ್ನ ಮಾಡಿಕೊಂಡ ಬಂದಿ ನನ್ನ ಮಗ ಅಲ್ಲೋ ನೀನಾ
ಇಷ್ಟು ಕೇಳಿ ಚಂದ್ರಾವತಿ ಅಂತಾಳೋ ತಪ್ಪಿಲ್ರಿ ಅವರದೇನಾ
ಬೀಗತಾನ ಮಾಡಲಿಕ್ಕೆ ಯಾರನ್ನ ಕಳಿಸಿದ್ರಿ ತಿಳಕೊಳ್ಳರಿ ಇನ್ನಾ
ಏರು || ಇಷ್ಟು ಕೇಳಿ ಅರಸ ಕರಿಸ್ಯಾನೋ ದಾಸಿಯ ಮಡದಿಯನಾ
ಸೊಸಿಯ ಇಳಿಸಿಕೊಂಡು ಹೋದಾರೊ ಅರಮನಿ ತಾನಾ || ೧೪ ||

ಬರದು ಪತ್ತರ ತಂದ ಕೊಟ್ಟಾನೋ ಅರಸನ ಕೈಯಾಗ ಅವನಾ
ಮಂತ್ರಿ ಮಾಡಿದ ಕಂತ್ರಿತನ ತಿಳಿದೀರಿ ಕುಂತೀರು ಜನಾ
ಏರು || ಪತ್ತರ ನೋಡಿ ಅರಸ ಕರಿಸ್ಯಾನೋ ಮತ್ತ ಮಂತ್ರಿಯನಾ
ಯಾತಕ ಕರದೀಯಂತ ಬಂದ ಕೇಳತಾನೋ ತನ್ನ ಅರಸನ್ನಾ
ಈಗಿಂದೀಗ ಊರ ಬಿಡದಿದ್ರ ಕೊಡತೇನಿ ಫಾಸಿಯನಾ
ಆಗಿಂದಾಗ ಮಂತ್ರಿ ಒಪ್ಪಿಸ್ಯಾನೋ ಕಾಗದ ಪತ್ರವನಾ || ೧೫ ||

ಇ || ಕಾಗದ ಪತ್ರ ಒಪ್ಪಿಸಿ ಮಂತ್ರಿ ಹೋದಾನೋ ತನ್ನ ಮನಿಗೆ ತಾನಾ
ತನ್ನ ಮಡದಿಗೆ ಹೇಳತಾನೋ ಅರಸನ ಸುದ್ದಿಯನಾ
ಆಗಿಂದಾಗ ಕಟಗೊಂಡ ಎದ್ದಾನೋ ತನ್ನ ಗುಡಿಚಾಪೀನಾ
ಏರು || ಮಾಹಿತಿ ಇದ್ದರ ಮಾಡಿ ಹೇಳರಿ ಇಂಥ ಪದವನಾ
ಹಾಳಿ ಹಿಡಿದ ಓದಬ್ಯಾಡ್ರಿ ನಿಮ್ಮ ಹಳೇ ಪುರಾಣಾ
ಐದನೆ ವಾರ್ಡಿನ ಹುಡುಗರು ಪದಾಮಾಡಿ ಹೇಳ್ಯಾರೋ ಇದನಾ
ಅವರ ಮ್ಯಾಲ ಮಾರುತಿ ದಯವು ಐತಿ ಪೂರಾ ಇನ್ನಾ || ೧೬ ||

* * *

. ಅರಸನ ಸತ್ತ ಮಗಳನ್ನು ಮದುವೆಯಾದ ಫಕೀರ

ಎಷ್ಟಂತ ಹೇಳಲಿ ಸ್ವಾಮಿ ಸೃಷ್ಟಿಕರ್ತನ ಮಹಿಮೆ
ನಿಷ್ಠವಂತರಿಗೆ ನೇಮ ಇಷ್ಟಾರ್ಥ ಮಾಡುವ ಅನುಕೂಲಾ
ಏರು || ನಿಷ್ಠೀಲೆ ನಡೆದರ ಆ ಶಂಭುಶಂಕರ
ಬೇಕಾದ್ದು ಹಾಜರ ಮಾಡುವ ಭಿನ್ನ ಘೋರ
ಬಲಕ ಪಟ್ಟಣದ ಅರಸೊಬ್ಬ ಇರತಿದ್ದ ಸರಸ
ಆತಗ ಖಾಸ ಮಗಳು ರೂಪ ಬಂಗಾರದ ವರಣಾ
ಇನ್ನೂ ಹರೆಯದ ಜುಳಕ ಬಿದ್ದಾಂಗ ಸೂರ್ಯನ ಕಿರಣಾ
ಮೈಬಣ್ಣ ಲಿಂಬಿಹಣ್ಣ ಮುಚ್ಚತಾವ ಕಣ್ಣಾ
ಜಾತಿ ಪದ್ಮಿನಿ ನಸುಗೆಂಪು ನಾಸಿಕ ಸರಳ ಫಕೀರ ಒಬ್ಬ ಆಗಿದ್ದ ಮರುಳ
ಇಬ್ರಾಹಿಂ ಆದಂ ತರಳ | ಕೂಳ ನೀರಿನ ಇದ್ದಕ್ಯಾಲಾ || ೧ ||

ಇ || ಅರಸಂದು ಹೀಂಗಿತ್ತು ನೇಮ ಮನಸ್ಸಿನಿಂದ ಮಾಡುವ ಧರ್ಮಾ
ಯಾರಿಗೇನು ಬೇಡಿದ್ದ ಸುಮ್ಮಕೊಡತಿದ್ದ | ಇಲ್ಲ ಅನ್ನಲಿಲ್ಲಾ
ಏರು || ಕೇಳಿ ಮಜಕೂರ ಬಂದಾನ ಫಕೀರ
ಕೂಡಿತ್ತ ದರಬಾರ ಹೋಗಿ ನಿಂತಾನ ಹುಜರಾ
ಅರಸ ಕೇಳತಾನ ಕೇಳಿ ಫಕೀರಗ ಬೇಡ ಸಂಶೆ ಇಡಬ್ಯಾಡ
ಮನಸಿನ್ಯಾಗ ನೋಡು ತಿಳಿದು ಸಂಪೂರಣಾ
ನಿಂತಾನ ಫಕೀರ ಅಂತಾನ ಸವಾಲು ಹೇಳತಾನ ಮನಸಿನ್ಯಾಗ ಧೋರಣಾ
ನಿಮ್ಮ ಪ್ರೀತಿಯ ಮಗಳ ಕೊಟ್ಟು ಕೀರ್ತಿ ಪಡೆಯಿರಿ | ಅರ್ತಿಲೆ ಆಗುವೆ ಲಗ್ಗನಾ
ಅರಸ ಪರದಾನಿಗೆ ಅಂದಾ ಇವನ ಸವಾಲಾ ಅತೀ ಹೆಚ್ಚಿನದಾ
ಏನಾರ ಮಾಡಿ ಒಂದ ಅಕಲಾ | ಕಳವರಿ ಒಂದ ಹಾಕಿ ಜಾಲಾ || ೨ ||

ಫಕೀರ ಮಂದೀದು ಕೋಪ ತಾಳಲಾರದೆ ಸಂತಾಪ
ಇಲ್ಲಂದರ ಕೊಡತಾನ ಸ್ರಾಪ ಇದು ಒಳ್ಳೆ ಬಂದು ಬಿತ್ತ ತಗಲಾ
ಏರು || ಏನಾರ ಚಾಲಾಕಿ ಮಾಡಿ ಬಿಡರಿ ಹೊರಗೆ ಹಾಕಿ
ಪರದಾನಿ ಹಂಚಿಕಿ ಒಂದ ತಗದಾನ ಹುಡುಕಿ
ಕರದ ಫಕೀರಗ ಅಂತಾನ ಹೀಂಗ
ತಿಳಿ ಅರಸನ್ಹಂತೇಲಿ ಐತಿ ಒಂದ ಬೆಲೆ ಇಲ್ಲದ ರತನಾ
ಸರತ ಪರತ ಇಂಥಾ ರತನಾ ತಂದಂವಗ ಮಾಡಿಕೊಡುವೆ ಲಗ್ಗನಾ
ಹುಡಿಕಿ ತೊಗೊಂಡ ಬಾ ಇಲ್ಲಂದರ ನೀ ಹೋಗಬೇಕ ಸುಮ್ಮನಾ
ಫಕೀರ ಹೊಂಟ ಅದೇ ಕ್ಷಣದಲ್ಲಿ ರತ್ನಗಳು ದೊರಿತಾವು ಎಲ್ಲಿ
ಸಿಗತಾವ ಸಮುದ್ರದೊಳಗ ಹೋಗಿ ಕುಂತಾನ ಸಮುದ್ರದ ಮ್ಯಾಲಾ || ೩ ||

ಇ || ದಿನಾ ಆದಾವು ಎರಡು ವರ್ಷ ಮನದಾಗ ಆಗಿ ಉಪವಾಸಾ
ಬಿಡತಾನ ಬಹಳ ಸಾಹಸಾ ರತನದ ಹರಳು ದೊರಿಯಲಿಲ್ಲಾ
ಏರು || ಆಗ ತಿಳಿದ ಮನಸ್ಸಿಗೆ ಈ ನೀರೆಲ್ಲ ನುಂಗಿ ಬಿಟ್ಟರೆ ಭೂಮಿಗೆ
ಸಿಗತಾವು ತಾವಾಗಿ ನಿಷ್ಟುರ ಮನದಾಗ ಗಟ್ಟಿ ಯೋಚಿಸಿ
ಶೂರ ಫಕೀರ ಶಂಕರನ ನೆನೆದು ತಾ ನೀರು ಉಗುಳತಾನ ನಿಂತ
ಹೀಂಗ ಬೇಗ ಬೆಳಗ ಒಂದೇ ಸವನ ಬ್ಯಾಸರಿಲ್ಲ ದಿನಾ ಆದಾವು ನಾಲ್ವತ್ತ
ಇವನ ಕಷ್ಟ ನೋಡಿ ಆ ಸೃಷ್ಟಿಕರ್ತಗ ಹುಟ್ಟಿತು ಮಾಯಾ ಮಮತಾ
ಹುಕುಂ ಕೊಟ್ಟ ಖಾಜಾಕಿಜರಗ ತುರ್ತು ಹೋಗಿ ಆ ಫಕೀರಗ
ರತ್ನದ ಹರಳು ಮನಬಲ್ಲಾಂಗ ಕೊಟ್ಟು ಬಿಡಿಸರಿ ಮನಸಿನ ಜಲ್ಲಾ || ೪ ||

ಇ || ಖಾಜಾಕಿಜರ ಶರಣ ಅಂತಾರ ಎಲೋ ದಿವಾನಾ
ನುಂಗಿದರ ಸಾವೂತನಾ ಒಂದ ಹನಿ ಕಡಿಮಿ ಆಗುದಿಲ್ಲಾ ||
ಏರು || ಹಿಡಿದ ಶರಣರ ಚರಣಾ ಹೆಂಗ ಮಾಡಲಿ ಇನ್ನಾ
ಹೋಗು ಮುಚ್ಚ ನೀ ನಿನ್ನ ಕಣ್ಣ ತೆರೆದು ನೋಡು ರತನಾ
ಕಂಡ ರತನದ ಡೀಗ ಅದರಾನು ಪಕ್ತ ತಗೊಂಡ ನಾಲ್ವತ್ತು ರತನಾ
ಒಂದಾನ ಬಲಕ ಪಟ್ಟಣದ ಕೂಡಿ ಪರದಾನಿಗೆ
ನೋಡ ರತನಾ ತಗೋ ಮಾಡು ಮದವಿ ಈ ಕ್ಷಣಕ
ಪರದಾನಿಗೆ ಅಂತಾನ ಬಾವಾ ಬಿಡೂದಿಲ್ಲ ಹೋಗಲಿ ಜೀವಾ
ಹೆಂಗ ಮೆಚ್ಯಾನ ಶಿವಾ ಕೊಟ್ಟ ವಚನ ತಪ್ಪಿದ ಮ್ಯಾಲಾ || ೫ ||

ಇ || ಪರದಾನಿ ಸಿಟ್ಟಿಗೆ ಬಂದಾ ಬಡಗಿ ತಗೊಂಡು ಬಲ್ಲಂಗ ಬಡದ
ಕವಳ ಹತ್ತಿ ಫಕೀರ ಬಿದ್ದ ಮಾಡಿ ಬಿಟ್ಟಾರ ಅಡವಿ ಪಾಲಾ
ಏರು || ಅರಸನ ಬಾಲಕಿ ಮೋಹದ ಲಡಕಿ
ಬಂದ ಕೆಟ್ಟ ಕಸಾರಕಿ ಸತ್ತಾಳೋ ಏಕಾಏಕಿ
ಹೆಣಕ ಪೆಟ್ಟಿಗೆಯೋಳಗ ಹಾಕಿ ಮಣ್ಣ ಮಾಡಿದಾರೋ
ಅಗ ಸಣ್ಣ ದೊಡ್ಡ ಮಂದಿ ಕೂಡಿ
ಅಡಿವ್ಯಾಗ ಬಿದ್ದ ಫಕೀರ ಹುಶಾರಾಗಿ ಎದ್ದ ಬರತಿದ್ದ ಓಡಿ
ತಂಡ ತಂಡ ಜನ ಹಿಂಡ ಹಿಂಡ ಬರುದ ಕಂಡ ಕೇಳತಾನ ನೋಡಿ
ಊರ ಅರಸನ ಮಗಳು ಏಕಾಏಕಿ ತೀರಿಕೊಂಡಳು
ಅತ್ತ ಫಕೀರ ಎಬಸ್ತಾನ ಗೋಳು ಸಾರ್ಥಕ ಆಗಲಿಲ್ಲ ಸಫಲಾ || ೬ ||

ಇ || ಅಳತಾನೋ ಮಿತಿಮೀರಿ ಮತ್ತೊಮ್ಮೆ ನೋಡಲಿಲ್ಲ ಮಾರಿ
ರಾತ್ರಿ ಹೋಗಿ ಹಡ್ಯಾನೋಗೋರಿ | ಹೆಣಾ ಹೊತಗೊಂಡ ಹೆಗಲಮ್ಯಾಲಾ
ಏರು || ಒಂದ ಗಿಡಕ ಕುಂದರಿಸಿ ಹಾಡಿ ಅಳತಾನ ಸೋಸಿ
ಎಲ್ಲಿಹೋದಿ ರಾಜಹಂಸಿ | ನಾ ಆದ್ಯೋ ಪರದೇಶಿ
ಉರಿಯ ಬೆಳಕ ಮಾಡಿ ಮಾರಿ ನೋಡತಾನ
ಬೆಳಕ ಕಂಡ ಆ ಕ್ಷಣಕ ಬಂದ್ರು ಅಲ್ಲಿತನಕ
ಕಾರವಾನ ಜನರು ಕೇಳತಾರ ವಿಚಾರ ಮಾಡತಾರ
ಫಕ್ಕೀರಗಂತಾರ ಹೇಳ ನೀ ಯಾರು
ಬಡ್ಡಿ ಹಿಡದ ಅಲ್ಲಿತನ ಸರುವ ಎಲ್ಲ ಒಡದ ಹೇಳ್ಯಾನೋ ಎಲ್ಲಾ ಮಜಕೂರಾ
ಅದರೊಳಗಿದ್ದ ಹಕೀಮಾ | ಬಿಸಮಿಲ್ಲಾದ ಕೇಳರಿ ಮಹಿಮಾ
ಕಟಪಟ ಮಾಡಿ ತುಂಬಶಾನ ಜಲ್ಮಾ | ಎದ್ದು ಕುಂತಾಳೋ ಅರಸನ ಕಮಲಾ || ೭ ||

ಇ || ಕಾರವಾನ ಜನರೆಲ್ಲಾ ಕೂಡಿ ಸನಮಂತ ಹೇಳಿ ಸರ್ವ ಎಲ್ಲಾ ತೀಡಿ
ಇಬ್ಬರಿಗೆ ಮದುವೆ ಮಾಡಿ ಸತಿಪತಿ ಸೇರಿ ಬಂದ ಅಮಲಾ
ಏರು || ನಡೆದೀತ ಸಂಸಾರ | ಹಡದಾಳೋ ಪುತ್ತರಾ
ವಯಾ ವರ್ಷ ಐದಾರ ಅಂತಾನ ಫಕೀರ
ಸಾಲಿಗೆ ಹಾಕಿ ಮಗನಿಗೆ ವಿದ್ಯೆ ಕಲಿಸಬೇಕ
ಒಂದ ಊರಿಗೆ ಮುಂಜಾಲೆ ತಂದ | ಸಂಜೀಗೆ ಮನಿಗೆ ಒಯ್ಯತ್ತಿದ್ದ
ಒಂದ ದಿವಸ ಊರ ಆಳುವ ಅರಸ | ಸಾಲಿ ಪರೀಕ್ಷೆ ನೋಡಲಿಕ್ಕೆ ಬಂದ
ಆ ಕುಂತ ಹುಡುಗನ ಮ್ಯಾಲೆ ಬಿತ್ತ | ನಜರ ಅರಸಂದು ದಿಟ್ಟಿಸಿ ನೋಡಿದ
ಹುಡಗಂದು ನೋಡಿ ಚಲುವಿಕಿ ಐತಿ | ನನ್ನ ಮಗಳ ಹೋಲಿಕಿ
ಮಾಸ್ತರಗ ಹೇಳಿ ತಿಳುವಳಿಕೆ ಮನಿಗೆ ವೈದ ಅರಸ ಬಿಡಲಿಲ್ಲಾ || ೮ ||

ಇ || ಕಂಡ ಅರಸನ ಸತಿ ನೋಡತಾಳ ಕೂಸಿನ ಮಾರಿ
ತದ್ರೂಪ ನನ್ನ ಮಗಳ ಗತಿ ತುಸು ತಟಕ ಪರಕ ಇದ್ದಿಲ್ಲ
ಏರು ಕೂಡಿ ಬೀಗ ಬಿಜ್ಜರ ಮಾಡ್ಯಾರ ವಿಚಾರ
ಹೇಳಪ್ಪಾ ಕುಮಾರ ನಿಮ್ಮ ತಾಯಿ ತಂದಿ ಹೆಸರಾ
ಇಡಲಿಲ್ಲ ಮಚ್ಚಿ ಹೇಳತಾನ ಬಿಚ್ಚಿ
ಕೂಸ ಅದೇನಿ ನಾ ಖಾಸ ಆದಮರ ದೇಶ ಹೆಸರ ತಂದಿದಾ
ಪ್ರೀತಿ ಮಾತ ಇಸೂಪ ಇಬ್ರಾಹಿಂ ನಾಮಕರಣ ಐತರಿ ನಂದಾ
ಅರಸನ ಸತಿ ಕೇಳಿ ಎಲ್ಲಾ ಹರೀಕತಿ ಆದ್ರೋ ಆನಂದಾ
ಹುಡುಗನ ಮುಂದ ಕುಂಡರಿಸಿ ಸಡಗರದಿ ಪೋಷಾಕ ತೊಡಸಿ
ಪಂಚಾಮೃತ ಪಕವಾನ್ ಉಣಿಸಿ ಮೊಮ್ಮಗನ ಮ್ಯಾಲೆ ಹಂಬಲಾ || ೯ ||

ಇ || ಫಕೀರ ಬಂದಾ ಆ ಮಾಸ್ತರಗ ಕೇಳತಾನ ಎಲ್ಲಿ ಹೋದ ಹುಡುಗ
ಅರಸ ವೈದ ಕಳಸಂದ ನಿಮಗ ಹೋದ ಫಕೀರ ಅರಸನ ಮಹಲ
ಏರು || ಅರಸಂದ ನೀ ಕೇಳು ತಡಿಯದೆ ಒಡೆದು ಹೇಳು
ಸತ್ತಂತ ನನ ಮಗಳು ನಿನಗ್ಹ್ಯಾಂಗ ದೊರೆತಳು | ಫಕೀರ ಅಂತಾನ ಸಾಂಬನ ಕಾರಣದಿ
ಮೇಣೆ ಕಳಿಸಿ ತನ್ನ ಮಗಳಿಗೆ ಅರಸ ಮೋಹನದಿಂದ ಕರೆತಂದ
ತಾಯಿ ತಂದಿ ಮಗಳ ಮೊಮ್ಮಗ ಅಳಿಯಾ ಒಳ್ಳೆ ನಿವ್ವಳಾ ಪ್ರೀತಿ ಹೆಚ್ಚಿಂದಾ
ಮೊಮ್ಮಗ ಪಟ್ಟದ ಮ್ಯಾಗ ಕುಂಡರಿಸಿ ಮುತ್ಯಾ ಸಾಂಬಗ ನೆನೆದ
ಬಾಗಲಕೋಟಿ ಶಾರ ಗುರು ನಮ್ಮ ದಸ್ತಗೀರ
ಕರುಣ ಲಯಾ ಕೇಸುಪೀರ ಪೀರ ನಾಗೂ ಗೌಸು ನ ಕವಿಗಳು ಮಿಗಿಲಾ || ೧೦ ||

* * *