. ಎರಡು ಮೀನಿನ ಪದಾ

ಶಿವನ ಸೊರಣಿ ಮಾಡುತಲಿದ್ದವು ಕೇಳರಿ ಬಯಾನಾ
ಹೆಣ್ಣು ಗಂಡು ಎರಡು ಜೋಡಿನ ಮೀನಾ
ನಿತ್ಯವು ಮಾಡ್ತಾವೊ ಶಿವನ ಧ್ಯಾನಾ | ಭಕ್ತಿ ಇರಲಿ ಪೂರಣಾ || ೧ ||

ಹೆಣ್ಣು ಮೀನ ತನ್ನ ಗಂಡಗ ಹೇಳತಾದೋ ಎಂಥ ಹುಚ್ಚ ನೀನಾ
ಇಂಥ ನದಿ ಎಲ್ಲಿ ತಂದ್ಯೊ ಸುಮ್ಮನಾ
ಯಾವ ಕೊಲ್ಲತಾನೊ ಏನೋ ನಮ್ಮನಾ | ಬಿಡೋ ಶಿವನ ಧ್ಯಾನಾ || ೨ ||

ಅಷ್ಟರೊಳಗ ಒಬ್ಬ ಬ್ಯಾಟಿಗಾರ ಹೊಳಿಮ್ಯಾಲೆ ಹೊಂಟಾನಾ
ಬಲಿಬಿಚ್ಚಿ ಹೊಳಿಯಾಗ ಅಂವಾ ಒಗದಾನಾ
ಹಿಡಿಯಬೇಕೆಂದು ಅವನು ಎರಡು ಮೀನಾ | ಅವೇ ಸಿಕ್ಕಾವ್ರಿ ರತನಾ || ೩ ||

ಮೀನಿನ ಗಂಟು ಕಟಗೊಂಡು ತಲಿಮ್ಯಾಲೆ ಹೊತ್ತಾನಾ
ತನ್ನಮನಿ ದಾರಿಯ ಹಿಡಿದಾನಾ
ಮನದಲ್ಲಿ ಕುಶಿಯ ಆಗ್ಯಾನಾ | ಅಂವಾ ಹಿರಿಹಿರಿ ಹಿಗ್ಯಾನಾ || ೪ ||

ಮೀನಿನ ಗಂಟು ಮನಿಗೆ ಒಯ್ದು ಹೆಣ್ತಿಗೆ ಹೇಳತಾನಾ
ಬಾಳ ಚೊಕ್ಕ ಮೀನಾ ತಂದೇನಿ ನಾನಾ
ಮಾರಿದರ ಸಿಗತಾವ ಎನಗ ಹೊನ್ನಾ | ಏನಂತಿದಿ ನೀನಾ || ೫ ||

ಬ್ಯಾಟಿಗಾರನ ಹೆಣತಿ ಗಂಡಗ ಹೇಳ್ತಾಳೋ ದಿನದಿನ ಮಾರೋಣಾ
ಪ್ರಿಯ ಮನೆಯೊಳಗಿಲ್ಲೊ ದೈವಾನಾ
ಬೀಗರಿಗೆ ಬಿನ್ನಾಯಿ ಹೇಳೋಣಾ | ಅಡಗಿಯ ಮಾಡೋಣಾ || ೬ ||

ಬ್ಯಾಟಿಗಾರನ ಹೆಣತಿ ಗಂಡಗ ಹೇಳತಾಳೋ ಅಂಗಡಿಗೆ ಹೋಗೋ ನೀನಾ
ಹೆಚ್ಚ ಮಸಾಲಿ ತೊಂಬಾರೋ ಸುಗುಣಾ
ಬರೂತಾನಾ ಮೀನ ಕೊಯ್ತೇನಿ ನಾನಾ | ಲಗೂನ ಹೋಗ ನೀನಾ || ೭ ||

ಮೀನಿನ ಗಂಟಬಿಚ್ಚಿ ನೋಡತಾಳ ಬಾಳ ಚೊಕ್ಕ ಮೀನಾ
ಕೈಯಲ್ಲಿ ಹಿಡದಾಳ ಈಳಗಿನಾ
ಬಾಳಮಾಡಿ ಅಳತಿತ್ತೊಹೆಣ್ಣ ಮೀನಾ | ನಮಗ ಒದಗಿ ಬಂತೋ ಮರಣಾ || ೮ ||

ಹೆಣ್ಣುಮೀನ ತನ್ನ ಗಂಡಗ ಹೇಳತಾದೋ ಚಾವೋ ಜವಕ ಸುಗುಣಾ
ನಿತ್ಯ ಮಾಡ್ತಿದ್ದೇವಿ ಶಿವನಧ್ಯಾನಾ
ಶಿವನ ಧ್ಯಾನಾ ಮಾಡಿ ಫಲವೇನಾ | ಶಿವನ ಬಾಯಲಿ ಮಣ್ಣಾ || ೯ ||

ಗಂಡುಮೀನ ತನ್ನ ಹೆಣತಿಗೆ ಹೇಳ್ತಾದ ಹಿಡಿ ಹಿಡಿ ಸಮಾಧಾನಾ
ಒಬ್ಬರ ಕೈಯಲ್ಲಿ ಸಿಕ್ಕೇವಿ ಇನ್ನಾ
ಕೋಲ್ಲಾವನಕ್ಕಿಂತ ಉಳಸಾಂವಾ ಮೇಲನಾ | ನೆನೆ ನಿನ್ನ ಗುರುದೀನಾ || ೧೦ ||

ಅಷ್ಟರೊಳಗ ಮೂಡಲಮಾರಿ ಮಿಂಚನ್ಹುಟ್ಟಿತ್ತಾ
ಗದ್ದರಿಸಿ ಗಡಗಡನಂದಿತ್ತಾ | ತಡದ ಮಳಿ ಹೊಡೆದಿತ್ತ ಒಂದೇ ಸವನಾ
ಕೈಯಾನ ಮೀನು ಪಾರು ಆಗ್ಯಾವ್ರಿ ಇನ್ನಾ || ೧೧ ||

ನಾಲವಾರ ಊರು ದೇಶಕ್ಕೆ ಭರಣಾ | ತುಂಬ ತುಳಕತದೋ ಸಂಪೂರಣಾ
ಕಾಕಿಗುರುವು ಹೇಳಿದನು ಈ ವಚನಾ
ಹೀಂಗ ಸುದ್ದ ಬಾಯಲಿ ಸುರದಂಗ ರತನಾ || ೧೨ ||

* * *

. ಶೇಖ ಫರೀದನ ಭಕ್ತಿ ಪದಾ

ಮನಸಿಟ್ಟ ಕೇಳರಿ ನೀವು | ದೈವ ಕೂಡಿದ ಚಂದ
ಜಳ ಜಳ ತೊಳದ ಮನದ ಹೇಳತೇನಿ ಕೇಳರಿ ನೀವು
ಐತಿದು ಮಜಕೂರ | ಬಿಟ್ಟ ಮಾಡೇನಿ ಬಹು ಗೋರಾ
ತಪ್ಪಿದರ ತಿದ್ದಿಹೇಳುವೆ | ಬುದ್ದಿವಂತರ ಮುಂದ || ೧ ||

ಶರಣರೊಳಗ ಶೇಖ ಪರೀದನ ಎಂಬುವನೊಬ್ಬನಿದ್ದ
ಸಾಂಬನ್ನ ನೋಡುವದೈತಿ ಬಹು ಮನಸಿನಿಂದ ||
ಏರು || ತಾಯಿಯ ಒಳಿಗೋಗಿ ಹೇಳತಾನ ಶಿರಬಾಗಿ ಗಟ್ಟಿಪಾದ ಹಿಡಿದ
ಅಪ್ಪಣಿ ಕೇಳತಾನ ತಾಯಿನ ಸಾಂಬನ್ನ ನೋಡುವದೈತಿ
ಬಹಳ ನಂದ ಮನಸ || ೨ ||

ಹಡದವ್ವ ಬಿಡದೆ ಹೇಳತಾಳ | ತನ್ನ ಮಗನ ಮುಂದ
ಜೀವಮಾಯದಿಂದ ಸಾಂಬನ್ನ | ನೋಡಿ ಹ್ಯಾಂಗ ಚಂದ
ಏರು || ಜಗದೊಳಗೆ ಹುಟ್ಟಿದ ಮ್ಯಾಲೆ ಶಿವ ಯಾರಿಗೆ ಕಾಣುವದಿಲ್ಲ
ಹೇಳತಾಳ ಖುಲ್ಲಾ | ಮಗನ ತುಟಿ ಹಿಡಿದು ಗಲ್ಲಾ ||
ಸಿಟ್ಟಿ ಮಾಡಿ ಶೇಖ ಫರೀದಗ ಹೇಳತಾಳ ಬೈದ || ೩ ||

ಹಡದವ್ವನ ಮಾತು ಕೇಳಿದ | ಸಿಟ್ಟೀಲೆ ನೋಡಿದಾ
ಹೋಗುವ ಕಾಲಕ್ಕೆ ನುಡಿಯಬ್ಯಾಡವ್ವ ಕೆಟ್ಟ ಶಬ್ದ
ಏರು || ತಾಯಿಯ ಕಕಲಾತಿ | ಕಟ್ಯಾಳ ರೊಟ್ಟಿ ಬುತ್ತಿ
ಮಗನದಶಿಂದ | ಹೋಗಿ ಬಾರೋ ಕಂದ |
ಸಾಂಬನ್ನ ನೋಡುವ ಅಬ್ಬರ ಐತಿ ಬಹಳನಿಂದ || ೪ ||

ಸಾಂಬನ್ನ ನೋಡುವದಕ್ಕಾಗಿ | ಶೇಖ ಫರೀದ ನಡಿದಾ
ಅಡಿವ್ಯಾಗ ಗಿಡಾ ಕಂಡನೋ ದೊಡ್ಡದಿತ್ತೊ ಒಂದಾ
ಏರು || ಗಿಡದ ಬುಡಕ ನೋಡ್ಯಾನೊ ಹಮ್ಮ ಚೌಕ ದೊಡ್ಡದು
ಭಾವಿಯಿತ್ತೊ ಒಂದ | ಅಳತಿ ನೂರ ಮೊಳಾ ಉದ್ದಾ
ಕಾಲು ಮ್ಯಾಲಕ್ಕ ಮಾಡಿ ಗಿಡಕ ತೂಗ ಬಿದ್ದಾ || ೫ ||

ಹನ್ನೆರಡು ವರುಷ ಉಪವಾಸ ಗಿಡಕ ತೂಗಬಿದ್ದ
ಮೈಯಾನ ಮಾಂಸ ತಿಂದಾವೋ ಹದ್ದು ಕಾಗಿ ಹರಿದಾ
ಏರು || ನವನಾರ ಸಂದಿಗೆ ಸಂದ | ಹದ್ದು ಕಾಗಿ ತಿಂದಾವೋ
ಎಲ್ಲ ಮಾಂಸ ಹರಿದಾ | ಉಳಿಯಲಿಲ್ಲಾ ಆಕಾರಾ
ನಿಂತಿತೋ ಎಲುಬಿನ ಹಂದರಾ | ಉಳಿಯಲಿಲ್ಲಾ ಗಂಧಾ || ೬ ||

ಭಾವಕ್ಕ ಮೆಚ್ಚಿ ಸಾಂಬನು ಯೋಗಿಯಾಗಿ ಬಂದಾ
ನಾನೇ ಸಾಂಬನೆಂದ ಶೇಖ ಫರೀದನ ಮುಂದಾ
ಏರು || ತನಗ ತಿಳಿಯದೆ ಹೇಳತಾನ ಸಾಂಬಗ ಚಂದ
ಮಾಡತಿದಿ ಜವಾಬಾ | ಛೀ ತಗಿ ನೀನು ಅಲ್ಲ ಸಾಂಬಾ
ಬಹಳ ಮಾತನ್ನ ಹೇಳಬ್ಯಾಡೋ ಸುಳ್ಳ ನನ್ನ ಮುಂದಾ || ೭ ||

ನೀನೆ ಸಾಂಬನಾದರೆ ಸಕ್ಕರಿ | ಮಾಡೊ ಬಾಯಿಯ ತುಂಬಾ
ಮೊದಲಿನಂಗ ಇರಲಿ ನನ್ನದು ದೇಹ ಬಹಳ ಚಂದಾ
ಏರು || ಶೇಖ ಫರೀದ ಹೇಳಿದ ಮಾತು | ಸಾಂಬಾ ಮಾಡಿದ ಸಿದ್ದಾಂತಾ
ನಿಜರೂಪ ಹೊಂದಿ ಮುಂದೆ ನಿಂತು ಕರೇ ಮಾಡಿ ತೋರಿಸ್ಯಾನ ಭಗವಂತಾ
ತೋರಿಸಿ ಶೇಖ ಫರೀದಗ ಮಾಯವಾಗಿ ನಡಿದಾ || ೮ ||

ಆಗಿಂದಾಗ್ಗೆ ಆಯಿತೋ ಸಕ್ಕರಿ ಆ ಬಾಯಿಯ ತುಂಬಾ
ಶೇಖ ಫರೀದನ ದೇಹ ಆತೋ ಬಹಳ ಚಂದಾ
ಏರು || ಶೇಖ ಫರೀದ ಪ್ರತ್ಯಕ್ಷ ಸಾಂಬಾ ಬೆಟ್ಟಿಯಾಗಿ ನುಡಿದಾ
ಆಗಲೀಗ ಗಟ್ಟಿ ಮತಿನಿಂದಾ ಕಣ್ಮುಚ್ಚಿ ನೋಡುವೆ ನಾನು ಇಂದಾ
ವರವ ಕೊಟ್ಟಾನೊ ಸಾಂಬಾ | ಮಾಯವಾಗಿ ನಡಿದಾ || ೯ ||

ಅನುಮಾನ ಯಾತಕ ಆಗಿ ಹೋಗಲಿ ನಮ್ಮ ನಿಮ್ಮಿಂದಾ
ಕರಕೊಂಡ ಬಾ ಹೋಗೋ ನೀನು ನಿಮ್ಮ ಗುರುವರನಾ
ಏರು || ದೇಶಕ್ಕ ವಾಹಿನಾ | ಹೃಯಿಲಗೋಳ ಠಿಕಾಣಾ
ವಸ್ತಾದಿ ಇರತಾನ ಕುಬೇರ | ಕವಿ ಹುಟ್ಟತಾವೊ ಒಳ್ಳೆ ಹಸನಾ
ಪದಾ ಮಾಡಿ ಹೇಳತಾನ ಆಗುವಂಗ ಸಭಾ ರಚನಾ || ೧೦ ||

* * *

. ಮಗನನ್ನು ಕೊಂದು ಬಾವಾನಿಗೆ ಉಣಿಸಿದ ಭಕ್ತಿಪದಾ

ಚಂದ್ರದಂತ ಏನ ಸುಂದ್ರ ಸಭಾ ಕುಂತೀರಿ ಸಂಪನ್ನಾ
ಮಿಕ್ಕಿ ಸಭೇದಾಗ ಸಿಕ್ಕಿ ಶಾಹೀರಾ | ಆಗಿ ಹೋಗಲಿ ಚೌಕಾಸಿ
ಚೊಕ್ಕ ಕವಿ ಒಳೆ ಲಕ್ಕ ಮನಸಿನ ತಕ್ಕ ಮಾಡೇನಿ ಪುರಮಾಸಿ
ಹವಣಿಸಿ ಬಂದಂವಗ ಮೂಗಿನ್ಯಾಗ ಕವಡಿ ಪೋಣಿಸಿ
ಕಳಿಸಿನಿ ಇಡಸಿ ಬಿಲಾವರ ಬಳಿ ಎಚ್ಚರಕಿರಲಿ ನಿನ್ನಾ || ೧ ||

ಜೈಕುಮನೆಂಬ ಅರಸ ಮಹಾ ಸರಸ ಇದ್ದಾ ಭಕ್ತಿವಾನಾ
ಏರು || ಬಂದ ಬಡಜನಕ ಕಂಡ ಅರಬಿ ಅಂಚಡಿ ಕೊಡುವನೊ
ದಿನಕದಿನಾ ಮಾಡಿ ದಾನಾ ಪುಣ್ಯೆ ಪಡಕೊಳ್ಳುವನೋ
ಮನಸ ನೊಯಿಸದಾಂಗ ಬೇಡಿದಷ್ಟು ಕೊಟ್ಟು ಕಳಿಸುವನೊ
ಇದ್ದಾ ಧೈರಿಷ್ಟಾ ಅರಸಾ ಮಹಾ ಪುಣ್ಯೆವಾನಾ || ೨ ||

ಇ || ಲಕ್ಷ ಇಟ್ಟ ಕೇಳರಿ ಭಿಕ್ಷಾಪತಿ ಒಂದಾನವೊಂದಿನಾ
ಏರು || ಹಿಡಿದ ಕೈಯಾಗ ಜಪಮಣಿ ಕೊರಳಲ್ಲಿ ರುದ್ರಾಕ್ಷಿ ಅಷ್ಟಗಂಧಾ
ಹಚ್ಚಿ ತನ್ನ ಜೈಕುಂಬ ಅರಸನ ಮನಿಮುಂದಾ ನಿಂತಾನ ಬಂದಾ
ಅರಸ ಕಂಡ ಮನಗಂಡ ಮುತ್ತು ಮಾಣಿಕ ಹೊನ್ನ ತುಂಬಿ ತಂದಾ
ಅಂತಾರ ಹಿಡಿಯಿರಿ ಸ್ವಾಮಿ ನಿಮಗ ಕೊಡುವೆ ದಾನಾ || ೩ ||

ಬಾವಾ ದ್ರಿಷ್ಟೀಲೆ ನೋಡಿ ಅಂದಾ ಆಗಿನ ಕ್ಷಣಾ
ಏರು || ಮುತ್ತು ಮಾಣಿಕ ಹೊನ್ನ ಬಂಗಾರ ನಿಂದು ನಾಯೇನ ಮಾಡಲಿ
ಸನ್ಯಾಸಿಗೆ ಯಾತಕ ಬೇಕಿದು ಬಾಳೇಬದುಕ ಏನ ಸುಡಲಿ
ಕೇಳಿ ಸುದ್ದಿ ಬಂದಿನಿ ಮಹಾಭಕ್ತಿವಂತ ನೀ ಜಗದಲಿ
ಖರೇ ಇದ್ದರ ಕೈಯ ಮುಟ್ಟಿ ಕೊಡೋ ವಚನಾ || ೪ ||

ಇ || ಆದರೆ ಬಿಕ್ಕಟ್ಟ ಸವಾಲು ನಂದು ತಿಳಿಸುವೆ ನಿನ್ನಾ
ಏರು || ಅರಸ ಕೇಳಿ ಮನಸ ಹರುಷದಿಂದ ಕೊಟ್ಟಾನ ವಚನಾ
ದ್ರುಷ್ಟ ಆ ಸನ್ಯಾಸಿ ಅರಸಗ ಅಂತಾನ ನಿನ್ನ ಕಂದನಾ
ಕೋದ ಅಡಗಿ ಮಾಡಿ ನೀಡಬೇಕ ತಂದ ನೀ ನನ್ನಾ
ತಲಿಕುಟ್ಟಿ ಶಿರಾ ಚಟ್ನಿ ಮಾಡಿ ಹಂಚ ಸವನಾ || ೫ ||

ಆಗ ಹೌದು ಅಂದೇನ ನಿನ್ನ ಮಹಾಭಕ್ತಿ ವಾನಾ
ಏರು || ಮನಸಿನೊಳಗ ಮಿಡಕಿ ಅರಸ ಸನ್ಯಾಸಿಗೆ ಅಂತಾನೋ
ನನ್ನ ಹೊಟ್ಟೀಲೆ ಹುಟ್ಟಿದ ಆ ಪುತ್ರ ಒಬ್ಬನೆ ಇರುವನೋ
ಅಂವುಗ ಅಳದ ಬಳಿಕ ರಾಜಧಾನಿ ಯಾರು ಆಳುವನೋ
ಮತ್ತು ಬೇಕಾದ್ದ ಬೇಡೋ ಬಾವಾ ಕೊಡುವೆ ನಿನ್ನಾ || ೬ ||

ಇಷ್ಟು ಕೇಳಿ ಬಾವಾ ಅರಸಗ ಅಂದಾ ದ್ರುಷ್ಟ ನೀನಾ
ಏರು || ವಚನ ಭ್ರಷ್ಟ ಆದಿ ಅಂತ ದಾರಿ ಹಿಡದಾನ ಮೆಲ್ಲಕ
ಕೇಳಿ ಅರಸ ದಿಕ್ಕ ತಪ್ಪಿ ಹೋಗಿ ಬಿದ್ದಾನ ಪಾದಕ ||
ನಿಂತ ಇದರಿಗೆ ಬಾವಾಗ ಅಂತಾನ ನಾ ನಿನ್ನ ವಚನಕ
ಎಂದಿಗೆ ಬ್ರಷ್ಟ ಆಗೂದಿಲ್ಲ ನಿಮಗ ಕೊಟ್ಟ ವಚನಾ || ೭ ||

ಪುನಾ ರಂಬಿಸಿ ಕರಕೊಂಡ ಹ್ವಾದಾ ಮನಿತನಾ
ಏರು || ಸರೂ ವೃತ್ತಾಂತ ಮಡದಿ ಮುಂದ ತಿಳಿಸ್ಯಾನ ಹೌಹಾರಿ
ಕೇಳಿ ಸತಿಯಳು ಕುಂತಾಳ ಮನದಲ್ಲಿ ಆಗಿ ಗಾಬರಿ
ಅಂತಾಳ ಕೊಟ್ಟ ವಚನಕ ಬೃಷ್ಟ ಆಗಬಾರದರಿ
ಬ್ರಹ್ಮಾ ಅದರುಷ್ಟ ಬರದಿದ್ದ ತಪ್ಪುದಿಲ್ಲ ಕಂದನಾ || ೮ ||

ಕರದ ಕಂದನ ಕೆಡವಿ ಕೊಯ್ದಾರ ಕೇಳರಿ ಜನಾ
ಏರು || ಮಿಕ್ಕಿ ಆಗಿ ಲಕ್ಕ ಮಾಡ್ಯಾರ ಕೊಟ್ಟ ವಚನದ ಪ್ರಕಾರ
ಕುಟ್ಟಿ ಶಿರಾ ಚಟ್ನಿ ಮಾಡ್ಯಾರ ಹಾಡಿ ಪದಾ ಒಳೇ ಗಂಭೀರಾ
ನೆಂಬಿ ಎಡಿ ತುಂಬಿ ಬಾವಾನ ಮುಂದ ಒಯ್ದು ಇಟ್ಟಾರ
ಕಂಡ ಬಾವಾ ಅಂದಾ ಮಾಡರಿ ನಾಲ್ಕು ಎಡಿ ಸವನಾ || ೯ ||

ಕೂಡಿ ಸಂಗತಿಲೆ ಮಾಡೂನು ಊಟಾ ಒಂದ ಸವನಾ
ಏರು || ನಿನ್ನ ಮಗನ ಹೆಸರಗೊಂಡ ಕರಿಯಬೇಕ ಈ ಕ್ಷಣಕ
ಇಷ್ಟ ಮಾತ ಕೇಳಿ ತಾಯಿ ತಂದಿಗೆ ಬಂದಿತ್ತ ದುಃಖ
ನಿರವಾ ಇಲ್ಲದೆ ಅರುವಹಾರಿ ಕರದಾರ ಆ ವಾಳ್ಯೇಕ ||
ಬಂದ ನಿಂತಾನ ನಕ್ಕೊಂತ ಪುತ್ರ ಚಂದ್ರ ಚಿನ್ನಾ || ೧೦ ||

ಕಂಡ ತಾಯಿ ತಂದಿ ಶಾಂತ ಆಗ್ಯಾರ ಸಂಪೂರಣಾ
ಏರು || ಕೂಡಿ ನಾಲ್ವರು ಬ್ಯಾಗ ಪ್ರೀತೀಲೆ ಆಗ ಮಾಡ್ಯಾರ ಭೋಜನಾ
ಬಾವಾ ಅರಸಗ ಕೊಟ್ಟ ಆಶೀರ್ವಾದ ಹೊಂಟ ಹ್ವಾದಾ ಆಕ್ಷಣಾ
ಭಕ್ತೀಲೆ ನಡುವವಂಗ ಸಂಬನ ಇರುವದು ಅಂತಃಕರುಣಾ
ಕುಂತ ನಿಂತ ಮಾಡುವೆ ಶರಣಾ || ೧೧ ||

ಬಾಗಲಕೋಟ್ಯಾಗ ನೆನದಾರ ಮಲ್ಲೇಕಲ್ಲ ಹುಸೇನಾ
ಕಷ್ಟ ಬಿಟ್ಟಾ ಇಂದಾ ತಂದ ನನ್ನ ಮೈಯ ತುಂಬಿ ಹಚ್ಯಾನ ಕ್ಯಾಮಣ್ಣಾ
ಮತ್ತಷ್ಟು ಜಿಗೂತೇನಿ ಜಗದಾಗ ಆಗಿ ಪುಂಡ ಪೈಲವಾನಾ
ಅಂತಾರ ಹುಸೇನಮಿಯ್ಯಾ ಕುಡಿದಾಂಗ ಕುಡೆವಿತಿ ಕುಸ್ತಿಖಣಾ
ಸತ್ತಿ ಒತ್ತಿ ಬಡದರ ಮುಕಳ್ಯಾಗ ಬಾಳಿಹಣ್ಣಾ || ೧೨ ||

* * *