. ಅಣ್ಣ ತಂಗಿಯ ಪದಾ

ಕಲಿವಿಕದ ಕತಿಯ ಕೇಳರಿ ಕುಂತಿರು ಜನಾ
ಕೈಮುಗಿದು ತಿಳಿಸುವೆ ಬಡವನ ಸಾರಾಂಶನಾ || ಪಲ್ಲವಿ ||

ಏರು|| ಇಬ್ಬರು ಮಕ್ಕಳನಾ ಮಾಡ್ಯಾರ ಜ್ವಾಪಾನಾ
ತಿರಕೊಂಡ ತಂದ ಅವರಿಗೆ ಹಾಕುವರೋ ಅನ್ನಾ
ಮಕ್ಕಳಿಗೆ ಉಣಿಸಿ ಉಳಿದಷ್ಟು ಮಾಡುರೋ ಭೋಜನಾ
ಉಳಿಯದಿದ್ದರ ಕಾಲಹರಣ ಹಾಕುವರೋ ನಿತ್ಯದಿನಾ || ೧ ||

ಇ|| ಮಗಳ ಮ್ಯಾಲೆ ಪ್ರೇಮಾ ತಾಯಿ ಜ್ವಾಪಾನಾ
ಬಂಗಾರ ಬೇಡಿದಷ್ಟು ಮಗಳಿಗೆ ಬಲ್ಲಿದ ಸಾವುಕಾರ ಜನಾ
ಏರು || ಚಲುವಿಕೆ ನೋಡಿ ಮಗಳಿಗೆ ಹಾಕ್ಯಾರೋ ದಾಗೀನಾ
ಬಳಿ ವಂಕಿ ರುಳ್ಳಿ ಸರಗಿ ಕಾಲೊಳು ಪೈಜಣಾ
ಕೊರಳೊಳು ದಾಗಿನಾ ಚಂದ್ರಹಾರ ಕಂಠಿಯನಾ
ಬಂಗಾರ ಪಟ್ಟಿ ರೇಶಿಮಿ ದಟ್ಟಿ ಮೂಗಿನ್ಯಾಗ ನತ್ತವನಾ || ೨ ||

ಬೇಡಿದ ದಾಗೀನ ಹಾಕಿ ಮಾಡಿಕೊಂಡಾರೋ ಲಗ್ಗನಾ
ಪ್ರೀತಿಯಿಂದ ಇಟ್ಟಾರೋ ಸೊಸಿಗೆ ಮಾಡಿ ಬಹಳ ಪ್ರೇಮಾ
ಏರು || ತೌರುಮನಿ ವ್ಯಸನಾ ಮರತಾಳ ಸುಂದರಿನಾ
ಪಂಚಮಿ ಬಂದೀತು ಹೆಣ್ಣುಮಕ್ಕಳ ಚಲ್ಲಾಟನಾ
ತಾಯಿ ತಂದಿ ಮಗಳಿಗೆ ನೆನಿಸಿ ಮಾಡುರೋ ದುಃಖವನಾ
ಕರಕೊಂಡ ಬರಬೇಕೋ ಹೋಗಿ ನೀ ನಿಮ್ಮ ತಂಗಿಯನಾ || ೩ ||

ಇ|| ಎತ್ತಿಗೆ ಸಬರವನಾ ಬಿಗಿದನಾಕ್ಷಣಾ
ತಂಗಿ ಕರಿಲಾಕ ಹೊಂಟಾನು ಆಗಿ ಸಿಂಗಾರನಾ
ಏರು || ಗೆಳತ್ಯಾರ ಕೂಡ ಕುಂತಾಳೋ ಬಾಲಿ ಆಡುದಕ ಆಟವನಾ
ಅಣ್ಣ ಬಂದದ್ದು ನೋಡಿ ಬಿಟ್ಟ ಹೊಂಟಾಳ ಗೆಳತ್ಯಾರನಾ
ಹಾಂಹಾಂ ಕಾಲಿಗೆ ನೀರವನಾ ಕೊಟ್ಟಾಳಾಕ್ಷಣಾ
ಅಣ್ಣನ ಕೊರಳಿಗೆ ತೆಕ್ಕಿಹಾದು ಅಳತಾಳೊ ಒಂದೇ ಸವನಾ || ೪ ||

ಇ|| ಪಂಚಾಮೃತದಡಗಿ ಮಾಡ್ಯಾಳೋ ಉಣಿಸುದಕ ಅಣ್ಣನಾ
ಬಿಸನೀರಿಟ್ಟು ಜಳಕ ಮಾಡಿಸ್ಯಾಳೋ ಭರದಿಂದ ಆಕ್ಷಣಾ
ಏರು || ಅಮೃತಡಗಿಯನಾ ಉಣಿಸ್ಯಾಳೋ ಮಾಡಿ ಪ್ರೇಮಾ
ಉಂಡು ಕುಂತು ಮಾವನ ಕೇಳ್ಯಾನೋ ಕಳಸರಿ ನಮ್ಮ ತಂಗಿಯನಾ
ಕಳಿಸುದಕ ಎರಿದಾರೊ ಸೊಸಿಗೆ ಇಡಸ್ಯಾರೋ ದಾಗಿನಾ
ಜರದ ಮಡಿ ಉಡಿಸ್ಯಾರೊ ಸೊಸಿಗೆ ಮಾಡಿ ಬಾಳ ಪ್ರೇಮಾ || ೫ ||

ಇ|| ಕರಕೊಂಡ ತಂಗಿಯನ ಹಿಡಿದಾನೋ ಹಾದಿಯನಾ
ಹಕ್ಕಿಪಕ್ಕಿ ಸುಳುವು ಇದ್ದಿಲ್ಲಾ ಹಳ್ಳಿತ್ತೊ ಇಂಜೆನ್ನಾ
ಏರು|| ಹಿಂದ ಮುಂದ ಮಂದೀಯ ನೋಡಿ ಇಳಿಸ್ಯಾನೋ ತಂಗಿಯನಾ
ಮೈಮ್ಯಾಲಿನ ದಾಗೀನ ಬಿಚ್ಚಂತ ಹಿಡಿದಾನೋ ರಟ್ಟಿಯನಾ
ಬಿಚ್ಯಾನೋ ದಾಗೀನಾ ಕೆಡವಿ ತಂಗಿಯನಾ
ಕೈಕಾಲಕಟ್ಟಿ ಒಗಿದಾನೊ ಕೊಲ್ಲುದಕ ತಂಗಿಯನಾ || ೬ ||

ಇ|| ಕೊಲ್ಲುದಕ ತೆಕ್ಕಿ ಹಾದ ನೆಗವಿನ ಕಲ್ಲವನಾ
ಸರ್ಪಕಚ್ಚಿ ಬಿದ್ದ ಬಳಲತಾನೋ ಒಂದೇ ಸವನಾ
ಏರು || ನೋಡಿ ಅಣ್ಣನಾ ನೆನಸೂಳೋ ಸಾಂಬನ್ನಾ
ಕೈಕಾಲ ಬಿಚ್ಚಿಕೊಂಡ ಎದ್ದ ತೆಕ್ಕಿ ಹಾದಾಳೋ ಅಣ್ಣನ್ನಾ
ಅಣ್ಣನ ತುಟಿಗಲ್ಲ ಹಿಡಿದು ಅಳತಾಳೋ ಒಂದೇ ಸವನಾ
ತಾಯಿ ಮುಂದ ಏನಂತ ಹೇಳಲಿ ಅಣ್ಣನ ವರ್ತಮಾನಾ || ೭ ||

ಇ|| ಅಣ್ಣನ ಪ್ರಾಣಾ ಉಳಿಸೋ ಭಗವಾನಾ
ಮೈಮ್ಯಾಲಿನ ದಾಗೀನಾ ಮಾಡುವೆ ದಾನಾ
ಏರು || ಗಿಡಕ ಹಗ್ಗಹಾಕಿ ನಿಂತಾಳೋ ಕೊಡುವುದಕ ಪ್ರಾಣಾ
ಸಾಕ್ಷಾತ್ ಇಳಿದಾನೋ ನೋಡಿ ತಪ್ಪಿಸಿ ರೂಪವನಾ
ಅಣ್ಣನ ಪ್ರಾಣಾ ಉಳಿಸೋ ನೀ ಭಗವಾನಾ
ಮೈಮ್ಯಾಲಿನ ದಾಗಿನಾ ಮಾಡುವೆ ನಾ ದಾನಾ || ೮ ||

ಇ|| ಬಾಲಿ ಭಕ್ತಿಗೆ ಮೆಚ್ಚಿ ಒಲಿದಾನೋ ಶಂಕರನಾ
ಮಾಯಾಗಿ ಹ್ವಾದಾನೋ ಕೂಡಿಸಿ ಅಣ್ಣ ತಂಗಿಯನಾ
ಏರು || ಸೈಯ್ಯದ ಪೀರನ ಕೂನಾ ಹಿಂದ ಶಾಹೀರ ಜನಾ
ಜರದ ಗಲ್ಲೀಪ ಹೊಚ್ಚಿ ಮಾಡುರೋ ಸೇವೆಯನಾ ||೯||

ಕಲಿವಿಕದ ಕತಿಯ ಕೇಳರಿ ಕುಂತಿರು ಜನಾ
ಕೈಮುಗಿದು ತಿಳಿಸುವೆ ಬಡವನ ಸಾರಾಂಶವನಾ ||

* * *

ಗಂಡನಿಗೆ ಮೋಸ ಮಾಡಿದ ಹೆಣ್ಣಿನ ಪದಾ

ಕೂಡಿರಿ ಜನಾ ಹೇಳುವೆ ನಾನು ಒಂದು ಬಯ್ಯಾನಾ
ಗಂಡನ ಮ್ಯಾಲೆ ಕಪಟವ ಮಾಡಿದ ಹೆಣ್ಣಿನ ಚರಿತ್ರವನಾ || ಪಲ್ಲವಿ ||

ಏರು || ಹಾಂ ಹಾಂ ಒಂದು ಊರೊಳಗೆ ಇದ್ದರು ಗಂಡ ಹೆಂಡಿರು
ಪ್ರೀತಿಲೆ ಬಾಳ್ವೆ ಮಾಡುತಿದ್ದರು ಬಾಳ ಹಸನಾ
ಗಂಡನ ಮನಸು ಹೈನದ ಮೇಲೆ ಆತೋ ಸಂಪೂರಣಾ || ೧ ||

ಇ|| ಸಾವಿರ ರೂಪಾಯಿ ಕೊಟ್ಟು ತಂದಾನೋ ಒಂದು ಎಮ್ಮಿಯನಾ
ಮಡದಿಗೆ ಹೇಳತಾನೋ ಹೈನ ಮಾಡೋ ನೀನಾ
ಏರು || ಹಾಂ ಹಾಂ ಹುರುಪುಲಿಂದ ಮಾಡೋ ಹೈನವನಾ
ಹುಲ್ಲು ತರುತೇನಿ ಎಮ್ಮಿಗೆ ಸಾಲುಹಂಗ ನಾನಾ
ಮಡದಿ ಹೇಳತಾಳ ಗಂಡನಿಗೆ ಕೇಳರಿ ಸಂಪೂರಣಾ || ೨ ||

ಇಳು || ಕಾಗಿ ಕಾಟ ಹೆಚ್ಚಾಗ್ಯಾವ ಎರೆಹೊಲದಾಗ ಇನ್ನಾ
ಲಗು ಮನಿಗೆ ಬರಬ್ಯಾಡರಿ ನೀವಿನ್ನಾ
ಏರು || ಗಂಡನ ಹೊಲಕ ಕಳಿಸಿ ಹಿಂಡ್ಯಾಳೋ ಮನಸಿನ ತಕ್ಕ ಎಮ್ಮೀನ
ಶಿಸ್ತಾಗಿ ಕೂತಾಳೋ ಸಮನೆಲಕ ಬಾಲಿನ
ಹಾಲುಬಸ್ತ ಹಣಿದಾಳೋ ಆಗುವಂಗ ಮನಕಿನ್ನಾ || ೩ ||

ಇ|| ಗಂಡ ಹೊಲದಿಂದ ಬಂದ ಹೇಳತಾಳೋ ಅವನ ಮುಂದಿನ್ನಾ
ಎಂಥ ಎಮ್ಮಿ ತಂದು ಕೊಟ್ಟೀರಿ ನೀವಿನ್ನಾ
ಏರು || ಶೆರಿ ಮುಕ್ಕ ಹಿಂಡವಲ್ಲದು ಎಮ್ಮಿ ಲಕ್ಷಣದ ಗೆರಿಬಾಳ ಚಲೋದಿಲ್ರಿ ಏನಾ
ಸುಮಾರು ಇದ್ದಮ್ಯಾಲೆ ತರೂನಂತ ಇನ್ನೊಂದನ್ನಾ
ದಿನಂ ಪ್ರತಿ ಊಟ ಮಾಡಿ ಆದಳು ತಿಗರಿಯ ಸಮಾನಾ || ೪ ||

ಇ|| ತಿಂದು ತಿರುಗಾಕ ಹತ್ಯಾಳಪ್ಪ ಕ್ವಾಣನ ಸಮಾನ
ಗಂಡ ಮನದೊಳು ಮಾಡತಾನೋ ಬಹಳ ಆಲೋಚನಾ
ಏರು || ದ್ಯಾಸಕ್ಕ ಬಂತ್ರಿ ಆಕ್ಷಣಾ ಹೋಗಿ ಬಿದ್ದ ಸಾದುರ ಪಾದದ ಮ್ಯಾಲಿನ್ನಾ
ಆದದ್ದು ಹೇಳತಾನೋ ಮನಿಯ ವರ್ತಮಾನಾ
ಸೋದ ಮಾಡಿ ಸಾಧು ಒಂದು ಯಂತ್ರ ತಯ್ಯಾರ ಮಾಡ್ಯಾನ || ೫ ||

ಇ|| ಭೂತಕಾಳಿ ಯಂತ್ರವನಾ ಮಾಡಿಕೊಟ್ಟಾನಾ
ಹೋಗಿಕಟ್ಟೋ ನೆಲವಿನ ಕಾಲಿನ ಮ್ಯಾಲೆ ಇದನ್ನಾ
ಏರು || ತಡಮಾಡದೆ ಹೋಗಿ ನೆಲವಿನ ಕಾಲಿನ ಮ್ಯಾಲೆ ಕಟ್ಯಾನ
ಹಾಲ ಸ್ವಾರಿ ಇತ್ತರಿ ನೆಲವಿನ ಮ್ಯಾಲಿನ್ನಾ
ಹಾಲಿನ ಮ್ಯಾಲ ಅವಲಂಬನಾಗಿ ಹೋಗ್ಯಾನ ಹೋಲಕಿನ್ನಾ || ೬ ||

ಇ|| ಮಂದಿಯ ಸುಳುವು ಕಾಣಲಾರದೆ ಕೈ ಹಾಕ್ಯಾಳ ಸ್ವಾರಿಗೆ ಬಾಲಿಗೆ ನಾ
ಭೂತಕಾಳಿಯಂತ್ರದ ಶಕ್ತಿ ಕೈ ಹಿಡಕೊಂಡು ಬಿಟ್ಟೀತು ಆಕೀನಾ
ಏರು || ಜೋತು ಬಿದ್ದಾಳೋ ತೋಳ ಬಾವಲಿಯ ಸಮಾನಾ
ಒಂದು ಎಮ್ಮಿಕರ ಬಾಳ ಬೆರಕಿತ್ತು ಅರಬಿ ತಿನ್ನೂದು ಕಲಿತಿತ್ತರಿ ತಾನಾ
ಹರಕೊಂಡು ಬಂದು ಕಟ್ಟಿಯ ಮೇಲೆ ನಿಂತಿತ್ರಿ ಸಂಪೂರಣಾ || ೭ ||

ಇ|| ಉಟ್ಟ ಸೀರಿಯ ತಿಂದು ಬಿಟ್ಟಿತು ಆಕ್ಷಣಾ
ಶೆರಿಬಟ್ಟಿ ಇಲ್ಲದಂಗಾತ್ರಿ ನಾರಿಯ ಮೈಮ್ಯಾಗಿನ್ನಾ
ಏರು || ಹೊರಗಿದ್ದ ಒಬ್ಬ ದಾಸಪ್ಪ ಭಿಕ್ಷೆಗೆ ಒಂದಾನ
ಗೋವಿಂದ ಗೋವಿಂದ ಅಂತ ಆಕಿಯ ಮನಿಗೆ ಬಂದಾನ
ಬಾಲಿಯನೋಡಿ ಅಯ್ಯೋ ಭಗವಾನಾ ಅಮ್ಮನವರದು ಸಿಗವಲ್ಲದು ನನಗ ಕೂನಾ || ೮ ||

ಇ|| ದಾಸಯ್ಯನ ಮಾರಿ ನೋಡಿ ಬಾಲಿ ಕರಿಯತಾಳ ಆಕ್ಷಣಾ
ಬಿಡಿಸ ಬರ್ರಿ ಬಲಿಯಾಗ ಬಿದ್ದೇನಿ ನಾನಾ
ಏರು || ಹೊರಗ ಬಂದು ಕೊಡತೇನಿ ಗೋಪಾಳ ಪುಟ್ಟಿ ತುಂಬ ಜೋಳವನಾ
ಅಬರು ಉಳಿಯುದಿಲ್ಲ ನಂದು ಬಿಡಿಸಬಾರೋ ದಾಸಯ್ಯಾ ಇನ್ನಾ
ದಾಸಯ್ಯ ಆಸೇಕ ಬಿದ್ದು ಎಮ್ಮಿ ಕರಾ ಹೊಡದಾಕ್ಷಣಾ || ೯ ||

ಇ|| ಸುಮ್ಮನೆ ಹೋಗಬಾರದೇನ್ರಿ ಜಂಬಮಾಡಿ ಬಿಡಸಾಕ ಹೋಗ್ಯಾನಾ
ಭೂತಿಕಾಳಿ ಯಂತ್ರದ ಶಕ್ತಿ ಕೈಹಿಡಕೊಂಡು ಬಿಟ್ಟಿತ್ರಿ ಆಕ್ಷಣಾ
ಏರು || ಜೋತುಬಿದ್ದ ಅಮ್ಮನವರ ಬಗಲಾಗ ತತ್‌ಕ್ಷಣಾ
ಹೊಲದಿಂದ ಗಂಡ ಬಂದು ನಿಂತು ನೋಡ್ಯಾನ
ನೀಟಾದ ಬ್ಯಾಕೋಲ ಕೈಯೊಳಗ್ಹಿಡಿದು ದಾಸಯ್ಯನ ಬೆನ್ನಮ್ಯಾಲೆ ಬಡದಾನ || ೧೦ ||

ಇ|| ದಾಸಯ್ಯಂದು ಬೆನ್ನು ಬಾತು ಎಳೆದು ಹಾಕತಾನ ಉಸರನ್ನಾ
ಆಗ ದಾಸಯ್ಯ ಬೇಡಿಕೊಳ್ಳತಾನ ಬಡಿಯಬ್ಯಾಡರಿ ನನ್ನಾ
ಏರು || ಬೆನ್ನು ಬಾತು ಹೋಯಿತ್ರಿ ಈ ಅಮ್ಮನವರ ಕಾಲಾಗ ಆಕ್ಷಣಾ
ಎದ್ದ ವ್ಯಾಳೆ ಬಾಳ ಸುಮಾರ ಐತೆ ಬುದ್ದಿಯಿಲ್ಲದೆ ಕೆಟ್ಟೆ ನಾನಾ
ಭಿಕ್ಷೆಕ ಬರುದಿಲ್ಲಪ್ಪ ನಿಮ್ಮ ಓಣ್ಯಾಗ ನಾ ಸಾವುತನಾ || ೧೧ ||

ಇ|| ಬಾಲಿ ಹೇಳತಾಳೋ ಗಂಡನಿಗೆ ಕೇಳೋ ಭಗವಾನಾ
ಹಾಂಹಾಂ ಇಷ್ಟ ಸಾಕು ಸಾಕಾಗಿ ಹೋಯಿತ್ರಿ ನನಗಿನ್ನಾ
ಏರು || ಉಂಡು ಮಾಡೂದಿಲ್ಲಾ ಇಂಥ ಬಾಳ್ವೆವನಾ
ಗಂಡನ ಮನದೊಳಗ ಕರುಣ ಬಂತ್ರಿ ಬಿಚ್ಯಾನ ಯಂತ್ರವನಾ
ಸಾಷ್ಟಾಂಗ ಹಾಕ್ಯಾಳೋ ಗಂಡನ ಪಾದದ ಮೇಲೆ ಆಕ್ಷಣಾ || ೧೨||

ಇ|| ಅಲ್ಲಿಯಲಿಂದ ಬಾಳ್ವೆ ಮಾಡುವರೋ ಬಾಳ ಹಸನಾ
ತಿನಸಮಾರಿ ಹೆಂಡರ ಕೈಯಾಗ ಕೊಡಬ್ಯಾಡರಿ ಹಿರೇತನಾ
ಏರು || ಆದಂತ ಕಥನ ಕೈಯ ಮುಗಿದು ಹೇಳೇನಿ ನಾನಾ
ತಪ್ಪು ಅಕ್ಷರ ಬಂದರ ಕ್ಷಮಾ ಮಾಡರಿ ನನ್ನಾ
ಕಲಿಗಿಗೆ ಇಡಸತೇನಿ ಬಿಲಾವರ ಬಳಿಯನಾ || ೧೩ ||

ಇ|| ತುರಾಯಿ ಹಚ್ಚಿ ಮೆರೆಯತೇನಿ ನಾನಾ
ಕೇಳ ನೀ ನಿಂತಕೊಂಡು ಹೈವಾನಾ
ಏರು || ಹಾಂಹಾಂ ಮೋಜ ಮಾರನ ಬಸರಿ ಇರುವುದು ಬಾಳ ಹಸನಾ
ಚಿಕ್ಕಮಸೂತಿ ಹುಸೇನ ಪೀರರ ದಯಾ ನಮ್ಮಮ್ಯಾಲೆ ಪೂರ್ಣಾ
ಫಕರು – ನಬಿಯನ ಕವಿ ಬಹಳ ಹಸನಾ  || ೧೪ ||

* * *

. ಅತ್ತಿ ಸೊಸಿ ಕಥನಾ

ಪೃಥಿವಿಯೊಳಗ ಪಾಪವು ಹೆಚ್ಚಾತ್ರಿ ಜನಾ
ಬಿಚ್ಚಿ ಹೇಳುವೆ ನಾ ಸೊಸಿ ಅತ್ತಿ  ಕವನಾ
ಸೋಸಿ ನೋಡರಿ ಇದು ಶಾಣ್ಯಾರು ಸಂಪೂರಣಾ
ಶಿಸ್ತಿಲಿಂದ ಮಸ್ತ ಮಾಡೇನಿ ಅತ್ತಿ ಸೊಸಿ ಕದನಾ
ಸೊಸಿ ಕುಂತು ಅತ್ತಿ ಕೊಲ್ಲಿಸು ಕತಿ ಹೇಳುವೆ ನಾನಾ || ೧ ||

ಇ|| ಅತ್ತಿ ನಿತ್ಯೆ ಮಾಡುವಳೋ ಸೊಸಿಗೆ ಜ್ವಾಪಾನಾ
ಅತ್ತಿ ಅಂದ್ರ ಸೊಸಿ ಅಗದಿ ಸೇರತಿದ್ದಿಲ್ಲೊ ಪೂರಣಾ
ಏರು ||  ಹೊರಗಿನ ಮಂದಿ ಮ್ಯಾಗ ಇತ್ತೊ ಆಕಿ ಯಸನಾ
ಸುದ್ದಿಕೇಳಿ ಸದ್ದೇಕ ಹಿಡಿಸಬೇಕಂತಾಳ ಅತ್ತಿಯನಾ
ಬಂದ ಮಾಡಿ ಸಂದಕ್ಹಾಕಿ ಕೊಲ್ಲಿಸಬೇಕತ್ತೆವನಾ || ೨ ||

ಬಾಂವಕಿ ಕಾಡತಾವ್ರಿ ಏನ ಹೇಳಲಿ ಒಂದೇ ಸವನಾ |
ಗಂಡನ ಮುಂದ ಬಂದು ಹೇಳ್ಯಾಳೋ ಮೋಹನಾ |
ಏರು || ನಿಮ್ಮ ತಾಯಿ ಹೊಟ್ಯಾಗಿನ ಕರಳಕಾಜವನಾ
ಇಂದು ತಂದುಕೊಟ್ಟರ ನನಗ ಆಗೂದು ಸಮಾಧಾನಾ
ಗರಜಿಲಿಂದ ಗರ್ಭಿಣಿ ಆಗೇನ್ರಿ ನಾನಾ || ೩ ||

ಮಳ್ಳ ಮನಶಾ ಕಳ್ಳ ಹಿಡಿಲಿಲ್ಲಾ ಹಡದ ತಾಯವ್ವನಾ
ಹೇಸಿರಂಡಿ ಹೆಂಡತಿ ಮಾತು ಕೇಳ್ಯಾನೋ ಸ್ವಾನಾ
ಏರು || ಹಡದ ತಾಯಿಗೆ ಅಂತಾನರಿ ನಡಿಯವ್ವಾ ನೀನಾ
ನೋಡಲಾಕ ಹೋಗೂಣು ಉಳವಿ ಗೋಕರಣಾ |
ಮಾಡಿದ ಪಾಪಾ ಎಲ್ಲಾ ಹೋಗಿ ಬರತೈತಿ ಪುಣ್ಯವನಾ || ೪ ||

ಮುಪ್ಪಿನ ಮುದುಕಿ ಜಪ್ಪನೆದ್ದು ಕಟ್ಟಿದಾಳ ಬುತ್ತಿಯನಾ
ಎತ್ತಿನ ಮ್ಯಾಲೆ ಬುತ್ತಿಯ ಹೇರಿ ಹತ್ತಿಸಿದ ತಾಯಿಯನ್ನಾ
ಏರು || ಹಾದಿಬಿಟ್ಟು ಅಡವಿಗೆ ಹೊಡೆದಾನ ಎತ್ತನ್ನಾ
ಹಡೆದ ತಾಯಿ ಅಂತಾಳರಿ ತಪ್ಪಿದೆಪ್ಪ ಹಾದಿಯನಾ
ಎತ್ತಿನ ಮ್ಯಾಗ ಕುಂತ ನೀನು ನೋಡಪ್ಪ ದಾರಿಯನಾ || ೫ ||

ಇಲ್ಲೆ ಐತಿ ಇಲ್ಲೆ ಬಾರವ್ವಾ ಗೋಕರಣ ದಾರಿಯನಾ
ಮುಂದ ಬಂದ ಕೂಡೇತಿ ಇರವ್ವಾ ನೀ ಸುಮ್ಮನಾ
ನಡು ಹಾದಿಗೆ ಗಡಾ ಹೋಗಿ ಇಳಿಸಿದ ತಾಯವ್ವನಾ
ತಂದ ಮಾದ್ಲಿ ಬುತ್ತಿಗಂಟ ಬಿಚ್ಚವ್ವಾ ನೀನಾ ||
ಉಂಡ ಮನಗಂಡು ತೋರಸತೇನಿ ಉಳವಿ ಗೋಕರಣಾ || ೬ ||

ಕಟ್ಟು ಕಟ್ಟವ್ವಾ ಬುತ್ತಿಯನಾ ಈಗ ಸುಮ್ಮನಾ
ತಾಯಿ ಕಂಡು ಮಗಾ ಆಗ ಅಂತಾನೋ ಬೇಮಾನಾ
ಏರು || ಹೊತ್ತ ಆಗೇತಿ ಮತ್ತ ತಿನ್ನುವಿಯಂತ ಕಟ್ಟವ್ವಾ  ಬುತ್ತಿಯನಾ
ಕೈಯೊಳಗಿನ ರೊಟ್ಟಿ ಕಸಗೊಂಡ ಆಗ ಬೇಮಾನಾ
ಕರುಣ ಬರಲಿಲ್ಲರಿ ಅವಗ ಕಲ್ಲಿನಂತಾ ಜಲುಮಾ || ೭ ||

ಕೈಯಾಗ ಹಿಡಿದಾನಾ ಬಿಚ್ಚಿಗತ್ತಿಯನಾ
ನೋಡದೆ ತಾಯಿಯ ಎದಿಮ್ಯಾಲೆ ಕುಂತಾನ ಬೇಮಾನಾ
ಏರು || ಹಡದ ತಾಯಿ ಗಾಬಾಗಿ ಅಂತಾಳೋ ಯಾಕೋ ನನ್ನ ಮಗನಾ
ಇದು ಏನಪ್ಪಾ ನಿನ್ನಾ ಉಳವಿ ಗೋಕರಣಾ ||
ಹಂತಾದು ಏನು ನಿನಗ ಮಾಡೇನಿ ನಾನಾ || ೮ ||

ಹೆಂಡತಿ ಮಾತು ಕೇಳಿ ಕೊಲ್ಲಬ್ಯಾಡಪ್ಪಾ ನೀನಾ
ಆಕಿಯನ್ನ ಬಿಟ್ಟರೆ ಮತ್ತೊಂದು ಮಾಡತೇನಿ ಲಗ್ಗನಾ
ಏರು || ತಡಾ ಮಾಡದೆ ಗಡಾಹೋಗಿ ಕೋದಾನ ಗೋಣಾ
ತನ್ನ ತಾಯಿ ಹೊಟ್ಯಾಗಿನ ಕರಳ ಕಾಜವನಾ
ಎತ್ತಿನ ಮ್ಯಾಲೆ ಹೇರಿಕೊಂಡು ಹಿಡಿದಾನ ದಾರಿಯಾನಾ || ೯ ||

ಮುನಿಯೊಳಗ ಮಾಡ್ಯಾಳ್ರಿ ಹೇಣತಿ ಯೋಚನಾ
ಗಂಡನ್ನ ಹಿಡಿಸುದಕ ತಗದಾಳ ಯುಕ್ತಿಯನಾ
ಬಬ್ಬಾಟ ಮಾಡಿ ಬೈಲಿಗೆ ತರಬೇಕ ಆತನ್ನಾ
ಹಿಡಕೊಂಡ ಹೋಗಿ ಕೊಡತಾರ ಅವಗ ಗಲ್ಲು ಫಾಸೇದ ಹುಕುಮಾ
ಗರದಿಲಿಂದ ಒಬ್ಬಾಕಿ ಇರಬೇಕರಿ ನಾನಾ || ೧೦ ||

ಪಂಚರು ನೋಡ್ಯಾರ ಗಂಟ ಬಿಚ್ಚಿ ಕಟ್ಟಿದ ಕಾಜವನಾ
ಸಿಟ್ಟು ಹತ್ತಿ ಕಂಬಕಕಟ್ಟಿ ಬಡಿತಾರ ಆತನ್ನಾ
ಕಟ್ಟಿ ಬಡಿದಾಗ ಶ್ರೇಷ್ಟ ತಾಯಿಗೆ ಹುಟ್ಟಿತೋ ಕರುಣಾ
ಕರುಳುಗಳು ಹೊರಳಾಡಿ ಅಂತಾವೊ ಬಡಿಬ್ಯಾಡ್ರಿ ಮಗನ್ನಾ
ಖಾಸ ಸೋಸಿ ಮಾಡಿ ಕೊಲ್ಲಿಸ್ಯಾಳರಿ ನನ್ನಾ || ೧೧ ||

ಸೊಸಿಗೆ ಕರಿಸ್ಯಾರಿ ಆಗ ಕಛೇರಿಗಿನ್ನಾ
ಸುಬೇದಾರ ತಗೊಂತಾನೊ ಆಕಿ ಜವಾಬನಾ
ಏರು || ಅಂತ ಮುಂದಕ ಕರದಾರ್ರಿ ಆಗ ಆತನ್ನಾ
ಗಂಟ ತಗೊಂಡು ಹೊಂಟ ಹೋಗೋ ಬಿಟ್ಟೇವಿ ನಿನ್ನಾ
ತಟ್ಟನ ಹೋಗಿ ಕೊಟ್ಟು ಬಾರೋ ನಿಮ್ಮ ತಾಯಿಗೆ ಮಣ್ಣಾ || ೧೨ ||

ಮಣ್ಣು ಕೊಡುವಾಗ ಕಣ್ಣೀರು ತನ್ನಿಂದ ತಾನಾ
ಯಾಕ ಕೊಂದೆನೊ ಸ್ವಾಮಿ ನನ್ನ ತಾಯವ್ವನಾ
ಏರು || ಇಳಿದಾನ್ರಿ ಬೆತ್ತ ತಗೊಂಡು ಭಗವಾನಾ
ಬಡದು ಎಬ್ಬಿಸಿದಾನ್ರಿ ಮುದುಕಿ ಆಕ್ಷಣಾ
ಆವಾಗ ಕೊಡಿಸ್ಯಾನ್ರಿ ತಾಯಿ ಮಗನ್ನಾ || ೧೩ ||

ಮಗಾ ಕುಂತು ನೋಡ್ಯಾನ್ರಿ ತಾಯಿ ಮುಖವನ್ನಾ
ಹಡದ ತಾಯಿಗೆ ಕರೆದುಕೊಂಡು ಬಂದಾನ ಸುಮ್ಮನಾ
ಏರು || ಸೊಸಿಗೆ ಬಡದಾರೊ ಆಗ ಸುಣ್ಣ ಕ್ಯಾಮಿಯನಾ
ಕತ್ತಿಮ್ಯಾಲ ಹತ್ತಿಸಿ ಮೆರಸ್ಯಾರ ಆಕಿಯನಾ
ಆತ ನೋಡ್ರಿ ಇಲ್ಲಿಗೆ ಅತ್ತಿ ಸೊಸಿ ಕಥನಾ || ೧೪ ||

ಹ್ಯಾಂಗ ಐತಿ ಮಂಗರಂಡಿಯರ ಕವನಾ
ಅಕ್ಷರ ಸರಿಯಾಗಿ ಬರಲಿ ಒಂದೇ ಸವನಾ
ತೊರಗಲ್ಲ ಇರುವದು ಗುರುವಿನ ಸ್ಥಾನಾ
ನರಗುಂದ ಊರಾಗ ಮಕ್ತುಂ ಬಾವಾ ಶರಣಾ
ಏರು || ದಯ ನಮ್ಮ ಮ್ಯಾಗ ಇರುವದು ಸಂಪೂರಣಾ
ಉಸ್ತಾದ ರಾಜೇಸಾಬ ಮಾಡಿದ ಕಥನಾ
ಶಿರಬಾಗಿ ನಾ ಮಾಡುವೆ ನಿಮಗೆ ಶರಣಾ
ಇಷ್ಟಕ ಮುಗಿದಿತ್ರಿ ಅತ್ತಿ ಸೊಸಿ ಕವನಾ || ೧೫ ||

* * *

. ಮುಂಗ್ಲಿಮರಿ ಪದಾ

ಕೇಳರಿ ಬಯಾನಾ ಸ್ವಲ್ಪ ಇಟ್ಟು ಧ್ಯಾನಾ
ಗುರು ಹಿರಿಯರು ಸಣ್ಣ ದೊಡ್ಡವರಾ ಮಾಡುವೇನ್ರಿ ಶರಣಾ
ಇರಲಿ ನಿಮ್ಮ ದಯಾ ಅಂತಃ ಕರುಣಾ | ತಿಳಿಸ್ತೇನಿ
ಮುಂಗ್ಲೀಯ ಬಯ್ಯಾನಾ | ಆದಂತ ಬಯ್ಯಾನಾ || ೧ ||

ದ್ವಾರ‍್ನಳ್ಳಿ ಊರಾಗಿನ್ನ ಸತಿಪತಿ ಗೌರತನಾ
ಇದ್ದಾರ ಗಂಡ ಹೆಂಡತಿ ಬಾಳ ಪ್ರೀತಿಲಿಂದಿನ್ನಾ
ಅಗಲಿ ಇರತಿದ್ದಿಲ್ರಿ ಒಂದು ಚಣಾ
ಅವರಿಗಿದ್ದಿದಿಲ್ರಿ ಸಂತಾನಾ | ಇತ್ತೋ ಬಾಳ ವ್ಯಸನಾ || ೨ ||

ಕಿಡಿಗೇಡಿ ಭಗವಾನಾ ಇಷ್ಟ ಬರೆದಿದ್ದನೇನಾ
ದೇವರು ಮ್ಯಾಲಾ ಹಾಕಲಿಲ್ಲಾ ತೂರಿನಂತಾಳ ಮಣ್ಣಾ
ಅವನಲ್ಲಿ ಇಲ್ಲಾ ಅಂತಃಕರುಣಾ
ಬಂಜೆ ಎಂದು ಕರಿತಾರೋ ಸರ್ವಜನಾ | ಇದಕೆ ಮಾಡಲೇನಾ || ೩ ||

ಮಾತಾ ಕೇಳೇ ಹೆಣ್ಣಾ | ಚಿಂತೆ ಮಾಡಬೇಡ ನೀನಾ
ವಾರೀಸ ಸಾಬೀಕ ಬರದ ಲಿಖಿತ ತಪ್ಪುದಿಲ್ಲೊ ಯಾರಾದರೇನಾ
ದೇವರಿಟ್ಟಂಗ ಇರಬೇಕು ಸುಮ್ಮನಾ
ಮಾಡಬೇಕು ಕಾಲ ಹರಣಾ || ೪ ||

ಬ್ಯಾಡರ ಸಿದ್ದಣ್ಣಾ ಮುಂಗ್ಲಿ ಮರಿ ತಂದಾನಾ
ನೋಡಿದ ಚಣಕೆ ಆಗ್ಯಾನ ಸಿದ್ದಣ್ಣ ಕೊಡೋ ಮುಂಗ್ಲಿಮರೀನಾ
ಮುಂಗ್ಲಿಮರಿ ತೊಗೋತೀನಿ ನಾನಾ
ಮೂರು ರೂಪಾಯಿ ಕೊಟ್ಟ ಅದೇ ಚಣಾ | ತೊಗೊಂಡು ನಡದಾನಾ || ೫ ||

ಮನಿಗೆ ಬಂದಾನಾ ಅಂತಾನೋ ಮಡದಿಗೆನಾ
ಮಕ್ಕಳಿಲ್ಲಂತ ಹಲಬೂತ ತಂದೇನಿ ಮುಂಗ್ಲಿ ಮರೀನಾ
ಇದಕ ತಿಳಿ ನಿನ್ನ ಹೊಟ್ಟಿ ಮಗನಾ |
ನಮಗ್ಯಾರ‍್ಯಾನಾ ಹೇಳೆ ನೀನಾ | ನೋಡಿಕೊಳ್ಳೆ ನೀ ದಿನಾ ದಿನಾ || ೬ ||

ಮನಿಗೆ ಬಂದಾನಾ ಅಂತಾನೋ ಮಡದಿಗೆನಾ
ಮಕ್ಕಳಿಲ್ಲಂತ ಹಲಬೂತ ತಂದೇನಿ ಮುಂಗ್ಲಿಮರೀನಾ
ಇದಕ ತಿಳಿ ನಿನ್ನ ಹೊಟ್ಟಿ ಮಗನಾ |
ನಮಗ್ಯಾರ‍್ಯಾನಾ ಹೇಳೆ ನೀನಾ | ನೋಡಿಕೊಳ್ಳೆ ನೀ ದಿನಾ ದಿನಾ || ೬ ||

ಮುಂಗ್ಲಿಯ ಕಾಲ್ಗುಣ ಇತ್ತೊ ಸುಭಲಕ್ಷಣಾ
ಅವರಿಗೆ ಸಂತಾನ ಕೊಟ್ಟಾನೋ ಭಗವಾನಾ
ಹುಟ್ಟಿತೋ ಒಂದು ರತನಾ | ಮುಂಗ್ಲಿಕೂಸಿಗೆ ಒಂದೇ ಸವನಾ
ಮಾಡ್ಯಾರೋ ಜೋಪಾನಾ | ತಿಳಿಕೋರಿ ನೀವು ಇದರ ವರ್ತಮಾನಾ || ೭ ||

ಅಣ್ಣತಮ್ಮರು ಇಬ್ಬರು ಕೂಡಿ ಆಡ್ತಾರೋ ಸಂಜಿತಾನಾ
ಮುಂಗ್ಲಿ ಕೂಸಿಗೆ ನೋಡಿ ಇನ್ನಾ ಕುಸಿ ಆಗ್ಯಾಳೋ ತಾನಾ
ಹೋಯಿತು ಆಕೀಗೆ ಈಗ ಬಂಜಿತಾನಾ
ಉಗುರು ಕಣ್ಣಾಗಾಕೀಗೆ ಉಲ್ಲಾಸ ಆಗ್ಯಾದಣ್ಣಾ | ತಿಳಿರಿ ಮುಂದಿನದಿನ್ನಾ || ೮ ||

ಬಾಲಿಗಂಡ ಒಂದಿನಾ ಹೊರಿಯಾಕ ಹೋಗ್ಯಾನಾ
ಮನಿಯಾಗ ನೀರ ಮುಕ್ಕ ಇಲ್ಲೊ ಜರ ಕೊಡ ತೊಗೊಂಡಾಳತಾನಾ
ತೊಟ್ಟಿಲದಾಗೆ ಮಲಗಿಸ್ಯಾಳ ಕೂಸೀನಾ
ಮುಂಗ್ಲಿಗೆ ಹೇಳತಾಳೋ ತಮ್ಮ ಮಲಗ್ಯಾನಾ | ಮಾಡೋ ಸಮಾಧಾನಾ || ೯ ||

ತೊಟ್ಟಿಲ ಮ್ಯಾಲಿನ ಸರ್ಪಾ ಬಂತೋ ಸನನಾನಾ
ಹಗ್ಗನೆ ಹಿಡಿದು ತೆಳಿಯಾಕೆ ಇಳಿದು ಕಚ್ಚಬೇಕೋ ಕೂಸಿನಾ
ಅಷ್ಟರದಾಗೆ ಮುಂಗಲಿಯ ದೃಷ್ಟಿನಾ
ಸರ್ಪಕಟ್ಟಿ ತಮ್ಮ ಸಾಯಿತಾನಾ | ಇದಕೆ ಮಾಡಲೇನಾ || ೧೦ ||

ನೆಟ್ಟಕ್ಕೆ ಏರಿಯಿನ್ನಾ ಹಾರಿತೋ ಹೌಸಾಣಾ
ಸರ್ಪನಾ ಹಿಡಿದು ಜಗ್ಗಿ ಜೋಲಿ ಹೊಡಿದು ಬಿದ್ದಿತೋ ಕುಸ್ತಿನಾ
ತುಣಕ ತುಣಕ ಮಾಡಿತೋ ಸರ್ಪಿನಾ
ಬಾಯಿಯಲ್ಲಿ ರಕ್ತರವ ಮಂಡಲಾಗ್ಯಾದಣ್ಣಾ | ಐತೋ ಗುಲಾಬಿ ಬಣ್ಣಾ || ೧೧ ||

ಇಷ್ಟ ಆಗತಾನಾ ತಾಯಿ ಬಂದಾಳ ಇನ್ನಾ
ತಾಯಿನ ನೋಡಿ ಮುಂಗ್ಲಿ ಓಡಿ ಹೋಯ್ತಣ್ಣಾ
ಬಿದ್ದ ಪಾದಕ ಹೊರಳಿ ನೇತ್ರದಿಂದ ಬಾಯಿ ಕೆಂಪ ವರಣಾ
ಘಾತ ಮಾಡಿತೋ ಮುಂಡೇಮಗನಾ | ಕೊಲ್ಲೀದೊ ಕೂಸಿನಾ || ೧೨ ||

ಎಷ್ಟ ಪರಿಲಿಂದ ಉಂಡಿದ್ದೋ ಬೇಮಾನಾ
ಇಷ್ಟ ಹೇಳಿ ನಾರಿ ಸಿಟ್ಟೀಗೆ ಏರಿ ಕಣ್ಣಾ ಕೆಂಪವರಣಾ
ತುಂಬಿದ ಕೊಡ ಮುಂಗ್ಲಿಯ ಮೈಮ್ಯಾಲಣ್ಣಾ
ಒಗದಕೇಸಿ ನಿಂತಾಳ ಅದೇ ಚಣಕಿನ್ನಾ | ಹೋಯಿತೋ ಮಂಗ್ಲಿಯ ಪ್ರಾಣಾ || ೧೩ ||

ಒಡಕೊಂಡ ಮಾರಿ ಅಳವುತ ಹೋಗ್ಯಾಳಣ್ಣಾ
ಚೀರುತ ಹೊಡಕೊಂಡ ಮನಿಯ ತಾನಾ
ಅಡರಾಸಿ ಹೋಗಿ ತೊಟ್ಟಿಲ ತಾನಾ
ಕಾಲಬಡದು ಆಡತಿತ್ತೋ ರೌರತನಾ | ನೋಡಿದ್ದಾಳೋ ಆಕಿ ತನ್ನ ಚಿನ್ನಾ || ೧೪ ||

ತಿರುಗಿ ನೋಡತಾಳ ಸರಪಿನ ದೃಷ್ಟಿನಾ
ಹಾಯ್ ಹಾಯ್ ಮಗನೆ ಕೊಲ್ಲಿದೆ ನಿನ್ನ ನಾ
ನಾನೆಂತ ಬೇಮಾನಾ ಮುಂಗ್ಲಿಗೆ ತೊಡಿಮ್ಯಾಲ ಹಾಕೋಣಾ
ದುಕ್ಕಮಾಡಿ ಅಳತಾಳೋ ಒಂದೆ ಸವನಾ | ಎಲ್ಲಿ ದೊರತೀದೊ ಮಗನಾ || ೧೫ ||

ನಿನ್ನ ಪಾಪ ನಾನಾ ಎಲ್ಲಿ ತೊಳಕಲ್ಲೋ ಮಗನಾ
ನಿನ್ನಗೂಡ ನನ್ನಿಟ್ರ ಮಣ್ಣ ತಪ್ಪುದಿಲ್ಲೊ ನಿನ್ನ ಋಣಾ
ರಿಣಗೇಡಿ ಆದೇನೋ ಕಡಿತಾನಾ
ತಪ್ಪ ಮಾಡದಕೀಗ ತಕ್ಕ ಸಿಗ್ಸೆಯೇನಾ | ಆದ್ರೂ ಈಗಾದ್ರು ಮಾಡಿದ್ರ ಬಂತೇನಾ || ೧೬ ||

ದಂಡೋತಿ ಸಿಂಗ್ನಾಳ ಅಗಸಿ ಮುಂದ ಕಾಗೀಣಾ
ಕಾಲೀನ ಪ್ಯಾಟಿ ಮುತ್ತಿನ ಕ್ವಾಟಿ ಇತ್ತೊ ಬಂಗಾರದೊರಣಾ
ಅಲ್ಲಿ ನಮ್ಮ ಗುರುವಿನ ಠಿಕಾಣಾ | ಸಾಧು ಸಂತರ ಕೆಂಗಾವಿನಾ
ವಾರಿಗಿ ಹುಡುಗರು ಅಲಾಯಿ ಆಡೋಣಾ || ೧೭ ||

* * *

ಸೋಮರಾಯ ಭೀಮರಾಯನ ಪದಾ

ಶರಣು ಮಾಡುವೆ ಸರ್ವರಿಗೆಲ್ಲಾ ಇದ್ದೇನಿ ಸಣ್ಣಬಾಲಾ
ಕತಿ ಒಂದು ಹೇಳತೇನಿ ಗೆಳತನ ತೋಲಾ
ಒಂದೇ ಗ್ರಾಮದಲ್ಲಿ ಇದ್ದರು ಇಬ್ಬರು ಜೋಡಿನ ಗೆಳೆಯಾರು
ಬಂದಿತ್ತೋ ಉಮರ ಗೆಳೆತನ ತೋಲಾ
ಸೋಮರಾಯ ಭೀಮರಾಯ ಎಂಬುವರಿದ್ದಾರಲ್ಲಾ | ಒಂದೇ ಬೈಟಾಕಿ ಮ್ಯಾಲಾ
ಹಾ ಹಾ ಇರತಿದ್ದರೋ ಯಾವತ್ತು ಕಾಲಾ || ೧ ||

ಒಬ್ಬರಮನಿ ಒಬ್ಬರಿಗೆ ಗುರುತಿಲ್ಲಾ ಎಂದು ನೋಡಿಲ್ಲಾ
ನಾಗರಪಂಚಮಿ ದಿವಸ ಇಬ್ಬರು ಕುಶಿಯಾಲಾ
ಹೋಗಿದ್ದಾರೊ ಹನುಮಂತದೇವರ ನಮಸ್ಕಾರ ಮಾಡಿ ದೇವರಿಗೆ
ಕಟ್ಟಿಮ್ಯಾಲಾ ಸದರಿಗೆ ಕುಂತಾರಲ್ಲಾ ||
ನಾರೆರೆಲ್ಲಾ ನಾಗಯ್ಯಗ ಹಾಲು ಎರಿವುದು ತೋಲಾ
ಒಬ್ಬರಕಿನ್ನ ಒಬ್ಬರು ಅಸಲಾ ಹಾ ಹಾ ಹೊಂಟಾರೋ ಸಾಲಿಗೆ ಸಾಲಾ || ೨ ||

ಭೀಮರಾಯನ ಮಡದಿ ಅದರಾಗ ಇದ್ದಾಳಲ್ಲಾ ರೂಪದಲ್ಲಿ ಅಸಲಾ
ಸೋಮರಾಯಗ ಇದರ ಬೇದ ಗುರುತಿಲ್ಲಾ
ಆಕಿಗೆ ನೋಡಿ ಆಗಿದ್ದಾನೊ ಮರುಳಾ ಕಣ್ಣಿಗೆ ಬಂತ್ರಿ ಬಹುಳಾ
ಬಿದ್ದಾ ಹ್ವಾದಾ ಜೀವಕಾಳಾ ಅರುವಿಲ್ಲಾ
ಸೋಮರಾಯನ ನೋಡಿ ತಂದು ಕೊಟ್ಟಾನ ಹಾಲಾ
ಭೀಮರಾಯ ಕೇಳತಾನಲ್ಲಾ ಹಾ ಹಾ ಸ್ವಲ್ಪರುವಾದ ಮ್ಯಾಲಾ || ೩ ||

ನಾರಿಗೆ ತೋರಸ್ಯಾನ ಕೈ ಇಷ್ಟರ ಮ್ಯಾಲಾ ನೋಡೋ ಮಿತ್ರ ಲಾಲಾ
ಆ ಹೆಣ್ಣಿನ ಮ್ಯಾಲಾ ಎನ್ನ ಹಂಬಲಾ
ಆಕಿಗೆ ನನಗ ವಸ್ಯಾ ಮಾಡಿಸೋ ಸಿದ್ದಾಂತ ಇರತೇನಿ ವರಸ್ಯಾಂತ
ಸಾಯತೇನಿ ವ್ಯರ್ಥ ಉಳಿಯೋದಿಲ್ಲಾ |
ಭೀಮರಾಯ ಕೇಳಿ ರಂಗ ಆದಾನೋ ತೋಲಾ
ಎರಡು ಕಡಿಗಿದು ಮುಸ್ಕೀಲಾ  ಹಾ ಹಾ ಯಾಕೆ ತಂದಿಟ್ಟ ಕೇವಾಲಾ || ೪ ||

ಪತಿವ್ರತಾ ಹಾನಿಯಾದರೂ ಪರವಾಯಿಲ್ಲಾ ದೋಸ್ತಿ ಕಡಿಯುವದಲ್ಲಾ
ಇವನ ಮನಸ್ಸು ಮುರಿದರೆ ಪಾಪಕ್ಕೆ ಮೂಲಾ
ನಗು ನಗುತಾ ಹೇಳತಾನೋ ಮಿತ್ರಗಾ | ಇವತ್ತ ರಾತ್ರಿ ನಿನಗಾ
ಆಕಿನ ಭೆಟ್ಟಿ ಮಾಡಿಸೋ ದಿನಾ ಒದಗಿದಲ್ಲಾ
ಸೋಮರಾಯ ಕೇಳಿ ಹಿಗ್ಗ ಆದಾನೋ ತೋಲಾ
ಇಷ್ಟು ಎಲ್ಲಾ ಆದ ಮ್ಯಾಲಾ | ಹಾ ಹಾ ಮನಿಗವರು ಬಂದಾರಲ್ಲಾ || ೫ ||

ರಾತ್ರಿ ಆಗಿತ್ತೋ ಹತ್ತು ಬಡಿಯುವ ಹಮಲಾ | ಮಂದಿ ಮಲಗ್ಯಾರ ಜುಮಲಾ
ಭೀಮರಾಯ ಹೋದನು ಮಡದಿ ಮಹಲಿನ ಮ್ಯಾಲಾ
ಪುರುಷ ಬರುವ ದಾರಿ ನೋಡುತ ಕುಂತಾಳಾ ಮನಸಿಟ್ಟು ದಯಾಳಾ
ಪತಿವ್ರತಾ ಶಿವಕೂಲಾ ಪುಣ್ಯ ಸೇಲಾ
ಚಿಂತಿವೊಳಗ ಗಂಡಗ ನೋಡಿದಾಳಲ್ಲಾ
ಅಡರಾಸಿ ಕೇಳತಾಳಲ್ಲಾ | ಹಾ ಹಾ ಯಾಕ ಬಾಡ್ಯಾವ್ರಿಗಲ್ಲಾ || ೬ ||

ಎನ್ನದೊಂದ ಮಾತಕೇಳ ಮೊದಲಾ ಆಗತೇನಿ ಕಬೂಲಾ
ಹಾರಿಹೋಗಿ ಹಿಡದಾಳ್ರಿ ಗಂಡನ ಕಾಲಾ
ಪರಿಪರಿಲಿಂದ ಹೇಳ್ರಿ ಆ ರಾಜ ಹೇಳೋ ನಮಗ ಮಹಾರಾಜಾ
ಅದೊ ನಿಮ್ಮದು ಲ್ಯಾಜಾ ನಮಗ ತೋಲಾ
ಮೀರಂಗಿಲ್ರಿ ನಿಮ್ಮ ವಚನಾ ಮೊದಲಾ
ಭೀಮರಾಯ ಹೇಳತಾನಲ್ಲಾ | ಹಾ ಹಾ ಮನಸಿನ ಹಾಲತ್ತು ಜಮಲಾ || ೭ ||

ಎನ್ನ ದೋಸ್ತ ಒಬ್ಬ ಅದಾನೆ ಅಸಲಾ ಇದೇ ಊರ ಮ್ಯಾಲಾ
ನಿನ್ನ ಮ್ಯಾಲೆ ಮಾಡಿದ್ದಾನೆ ಹಂಬಾಲಾ
ನನ್ನ ಸಂಗಡ ಹೆಂಗ ನಡಿತಿ ಅದರಕಿನ್ನಾ ತೋಲ ಜಾಸ್ತಿ ಮಾಡೆ
ಅವನಿಗೆ ಮನಸ್ಯಾಂತಿ ಬಾಗಿಲ್ಲಾ
ನಾರಿ ಕೇಳಿ ಜೀಂವಾ ಅಂದಿತೋ ಜಲ್ಲಾ
ಎನ್ನ ಪ್ರೇಮದ ನಲ್ಲಾ | ಹಾ ಹಾ ಹಿಂದು ಹೇಳೋಣಿದ್ದಿದಿಲ್ಲಾ || ೮ ||

ಬಹಳ ರಂಜಿಲಿ ರಾಜಿ ಆದಳಲ್ಲಾ ಬಾಗಿದ್ದಿದಿಲ್ಲಾ
ಸೋಮರಾಯನ ಕರದೊಯ್ದಾನ ತಡ ಮಾಡಲಿಲ್ಲಾ
ಆವಾಗ ಮಡದಿ ಮೊಕಾಬಿಲಿಗಿ ಖಾತ್ರಿ ಕೊಟ್ಟಾ ಮನಸಿಗಿ
ತಿರುಗಿ ವಾಪಸ ಟಾಣ್ಯದ ಮ್ಯಾಲಾ
ಸೋಮರಾಯ ನೋಡಿ ಹಿಗ್ಗ ಆದನೋ ತೋಲಾ
ಆದ ಬಾಳ ಕುಶಿಯಾಲಾ | ಹಾ ಹಾ | ಕುಂತ ಪಲ್ಲಂಗ ಮ್ಯಾಲಾ || ೯ ||

ದೋಸ್ತಿ ತಲವಾರ ಒಂದಿತ್ತೊ ಅಸಲಾ ಕಣ್ಣಿಗೆ ಬಿದ್ದಿತಲ್ಲಾ
ಅದನೋಡಿ ಹಿಡಕೊಂಡ ನಷ್ಟ ಕುಶಿಯಾಲಾ
ತಲವಾರ ಮೇಲೆ ಬರೆದಿತ್ತೊ ಗೆಳೆಯನ ಹೆಸರು ಓದಿಕೊಂಡಾ ತಸ್ವೀರ
ಆಗಿ ಕುಂತಾ ಬೇಕಾರಾ ಹವುಲಾ ಜೋಲಾ
ತಲ್ವಾರಲಿಂದ ಇಳಿಸಿಕೊಂಡಾನ ಕುತ್ತಗಿ ಮ್ಯಾಲಾ
ಶಿರಸ್ ಕಡಿಯಾಗಿತಲ್ಲಾ | ಹಾ ಹಾ ಕಣಮುಟ್ಟ ನೋಡ್ಯಾಳಲ್ಲಾ || ೧೦ ||

ನಾ ಇದ್ದು ಸಾರ್ಥಕೇನು ಆಗಲಿಲ್ಲಾ ಮರ್ತೈದ ಮ್ಯಾಲಾ
ಆಕಿ ಒಬ್ಬಾಕಿ ಹೊಡಕೊಂಡಾಳ ತಡಾ ಮಾಡಲಿಲ್ಲಾ
ಆವಾಗ ಎರಡು ಹೆಣಗಳನ್ನು ಒಂದು ತಾಸುಗಳಿಗಿನ್ನಾ
ಅಲ್ಲಿ ಬಂದು ಯಾರು ಕೇಳೋಣಿಲ್ಲಾ
ಅಷ್ಟರೊಳಗೆ ಭೀಮರಾಯ ಬಂದಾನಲ್ಲಾ
ಹೊಳಿದಾರಿ ಸಪ್ಪಳಿಲ್ಲಾ | ಹಾ ಹಾ ಮೈಮಾ ತಿಳಿಯಲಿಲ್ಲಾ || ೧೧ ||

ತಟ್ಟಿ ಮುರಿದು ನೋಡಿ ಕಂಡನಲ್ಲಾ ಹಾಲತ್ ಜುಮಲಾ
ಎರಡು ಹೆಣಾ ನೋಡಿ ಹೌಸಾನಾ ಹಾರಿತಲ್ಲಾ
ಆವಾಗ ಹಿಡಕೊಂಡ ತಲವಾರು ಆಗಿ ಕುಂತಾ ಬೇಕಾರಾ
ಏನು ಹೇಳಲಿ ವಿಸ್ತಾರಾ ಹವುಲಾ ಜೋಲಾ
ಆಗ ಬಂದು ನಿಂತಾ ಸಾಕ್ಷಾತ್ ಕೇವಾಲಾ
ಹೇಳತಾನಾ ಮಾಡಿ ಜುಮಲಾ | ಹಾ ಹಾ ವ್ಯರ್ಥ ಇದ್ದೀರಲ್ಲಾ || ೧೨ ||

ಇಬ್ಬರಿಗೆ ಜೀಂವಕಾಳಾ ತುಂಬಿ ಕೇವಾಲಾ ಮಾಯವಾದನಲ್ಲಾ
ಅವರು ಮೂವರು ಕೊರಳಿಗೆ ಬಿದ್ದು ಅಳತಾರಲ್ಲಾ
ಇದ್ದರಿರಬೇಕು ಇಂಥ ಗೆಳೆಯರು ಇಲ್ಲದಿದ್ದರೆ ಬೇಕಾರಾ
ಈಗಿನ ಗೆಳೆಯಾರು ಮತಲಬಿ ಇರುವುದೊ ತೋಲಾ
ಮ್ಯಾಲೆ ಮಾತಾಡುತ ತುಳಿವರು ಕಾಲಾ
ದೋಸ್ತಿ ಇದ್ದರೇನು ಫಲಾ | ಹಾ ಹಾ ಹಾವಿಗೆ ಇದ್ದಾಂಗ ಇಸಾಹಲ್ಲಾ || ೧೩ ||

ದಂಡೋತಿ ಊರು ಎಂಬುದು ಸೇಲಾ | ಮರ್ತ್ಯೆದ ಮೇಲಾ
ಅಲ್ಲಿ ಹಾನ ಗುರುಮುನಿ ಕೇವಾಲಾ
ಎಕ್ಕಳ್ಳಿ ಮಠದಾಗ ಇರತಾನ್ರಿ ಶಿಷ್ಯರಿಗೆ ಹೇಳತಾನ್ರಿ ಆ ವಸ್ತುಕ
ತಿಳಿಸ್ಯಾನ್ರಿ ಮಾಡಿ ಖುಲ್ಲಾ
ಅರ್ಜುಣಪ್ಪ ಎಂಬುವಾ ಸಣ್ಣ ಬಾಲಾ
ರಿವಾಯಿತು ಮಾಡ್ಯಾನಲ್ಲಾ | ಹಾ ಹಾ ಕಾಲಗೆಜ್ಜಿಯ ಮ್ಯಾಲಾ || ೧೪ ||

* * *

. ಅತ್ತಿ ಸೊಸಿ ಮಗನ ಪದಾ

ಸಭಾ ಮಾಡಿ ಕುಂತಿರಿ ಸರ್ವರು ಎಲ್ಲಾ
ಕರಮುಗಿದು ಹೇಳತೇನಿ ನಾ ಸಣ್ಣಬಾಲಾ | ಮಾಡಬೇಡರಿ ಗುಲ್ಲಾ
ಕಲಿವಿಕದ ವರ್ತಮಾನಾ ಹೇಳತೇನಿ ಕುಲ್ಲಾ || ೧ ||

ಒಂದು ಗ್ರಾಮದ ಸುದ್ದಿ ಹೇಳುವೆನಲ್ಲಾ
ಅತ್ತಿ ಸೊಸಿ ಮಗ ಮೂವರ ಮ್ಯಾಲಾ | ಹೇಳತೇನಿ ಕುಲ್ಲಾ
ಹೊಸದಾಗಿ ಸೊಸಿ ನಡಿಲಾಕ ಬಂದಳಲ್ಲಾ || ೨ ||

ಅತ್ತಿಯ ಪ್ರೇಮ ಬಹಳ ಸೊಸಿಯ ಮ್ಯಾಲಾ
ಗಂಡ-ಹೆಂಡತಿ ಉಂಡು ಮಂಚದ ಮ್ಯಾಲಾ | ಮಲಗಿದಳಲ್ಲಾ
ಗಂಡಗ ಹೇಳತಾಳೋ ಒಂದು ಒಂದು ಅಕಲಾ || ೩ ||

ನಿಮ್ಮವ್ವ ನಮಗಂದರ ಸೇರುವುದಿಲ್ಲಾ
ನಿತ್ಯ ಮಾರುತ್ತಾಳೋ ಮನಿಯಾನಾ ಮಾಲಾ | ಹಾಳು ಮಾಡುತ್ತಾಳಲ್ಲಾ
ಕೇಳಿದರ ಹೊಡಿಲಾಕ ಬರತಾಳ ಮೈಮ್ಯಾಲಾ || ೪ ||

ಬೇಮಾನಾ ಮಾಡತಾಳ್ರಿ ಅತ್ತಿಯ ಮ್ಯಾಲಾ
ಅತ್ತಿ ಇದ್ದರ ನಮ್ಮ ಜೀವಕ ಮೂಲಾ | ಸೊಸಿ ಅಂತಾಳಲ್ಲಾ
ಏನಾರ ಪರಿಯ ಮಾಡಿ ಹೊಡಿಸಬೇಕಲ್ಲಾ  || ೫ ||

ನಿಮ್ಮವ್ವ ಇದ್ದರ ನಾ ಇರೂದಿಲ್ಲಾ
ತವರು ಮನಿಯ ಮ್ಯಾಲಾ ಬಹಳ ಹಂಬಲಾ | ಸೊಸಿದು ಇದ್ದೀತಲ್ಲಾ
ಅತ್ತಿ ಇದ್ದರ ನಮ್ಮದೇನೂ ನಡೆಯೋದಿಲ್ಲಾ || ೬ ||

ಮಗ ಮುಂಜಾನೆದ್ದು ಹೊಲಕ ಹೋಗ್ಯಾನಲ್ಲಾ
ಗಂಡ ಬರುವುದರೊಳಗೆ ಅತ್ತಿ ಎದಿಮ್ಯಾಲಾ | ಕುಂತಿದ್ದಾಳಲ್ಲಾ
ಬಾಯಿತುಂಬ ಕುಸುಬಿ ತುಂಬಿದಾಳಲ್ಲಾ || ೭ ||

ತಾಯಿ ಪ್ರೇಮಾ ಬಾಳ ಮಗನ ಮ್ಯಾಲಾ ||
ಅತ್ತಿ ಬಿದ್ದಾಳೋ ಸೊಸಿ ಕಾಲಿನ ಮ್ಯಾಲಾ | ಹೇಳತಾಳಲ್ಲಾ
ಅಂತದ್ದೇನು ಮಾಡೇನಿ ಬರಲಿ ಎನ್ನ ಬಾಲಾ || ೮ ||

ಅಷ್ಟರೊಳಗೆ ಮಗ ಬಂದಿದ್ದಾನಲ್ಲಾ
ಗಂಡನ ಪ್ರೇಮ ಬಹಳ ಹೆಂಡತಿಯ ಮೇಲಾ | ಕರೆದಿದ್ದಾಳಲ್ಲಾ
ಇಷ್ಟೊಂದು ಸಿಟ್ಯಾಕೋ ನೀ ನನ್ನ ಮ್ಯಾಲಾ || ೯ ||

ಲಗುಮಾಡಿ ಹೆಣತಿಯು ಬಂದಿದ್ದಾಳಲ್ಲಾ
ಗಂಡನ ಮುಂದೆ ನಿಂತು ಹೇಳತಾಳೋ ಕುಲ್ಲಾ | ನಿಮ್ಮವ್ವಾ ಎಲ್ಲಾ
ಕುಸುಬಿ ತಿಂದು ಹಾಳು ಮಾಡಿದಳಲ್ಲಾ || ೧೦ ||

ಇಷ್ಟ ಕೇಳಿ ಸಿಟ್ಟು ಬಂತೋ ತಾಯಿಯ ಮೇಲಾ
ಹೆಣತಿ ಮಾತು ಗಂಡ ಕೇಳಿದನಲ್ಲಾ | ಕೇಳಿ ಅಂತಾನಲ್ಲಾ
ಕೋಪ ಬಂತೋ ಬಹಳ ತಾಯಿಯ ಮ್ಯಾಲಾ || ೧೧ ||

ಮಗನಿಗೆ ಕರಿತಾಳೋ ಬಾರೋ ಎನ್ನ ಬಾಲಾ
ಅಂತಾದ್ದೇನು ಮಾಡೇನಿ ನಾ ನಿನ್ನ ಮ್ಯಾಲಾ | ಸಿಟ್ಯಾಕೋ ತೋಲಾ
ನಾ ಸತ್ತಮ್ಯಾಲ ನೀನು ನೆನಸಿದಿ ಬಾಲಾ || ೧೨ ||

ಇಷ್ಟು ಕೇಳಿ ಸಿಟ್ಟುಬಂತು ತಾಯಿಯ ಮೇಲಾ
ನಾಲ್ಕು ಕಟ್ಟಿದಾನೋ ಬಿಗಿದು ಕೈಕಾಲಾ | ಹೊತ್ತ ತಲಿಯಮ್ಯಾಲಾ
ಹೊತಗೊಂಡ ನಡದಾನ ಸಂವರಾತ್ರಿ ಹಮಲಾ || ೧೩ ||

ಹೋಗಿ ಭಾಂವಿ ಮ್ಯಾಲೆ ನಿಂತು ಒಗಿದಾನಲ್ಲಾ ||
ಮನಿಗೆ ಹೋಗಿ ಹೇಳತಾನೋ ಹೆಣತಿಗೆ ಖುಲ್ಲಾ | ಕೇಳಿ ಅಂತಾಳಲ್ಲಾ
ಪೀಡಾ ಹೋಯ್ತು ನಮ್ಮ ಇಬ್ಬರ ಮ್ಯಾಲಾ || ೧೪ ||

ಮುದುಕಿ ಭಕ್ತಿಗೆ ಮೆಚ್ಚಿ ಶಿವಾ ಬಂದಾನಲ್ಲಾ
ಮುದುಕಿಗೆ ಹಿಡದಾನೋ ಅಂತರದಿ ಮ್ಯಾಲಾ | ಕೇಳತಾನಲ್ಲಾ ||
ಏನು ಬೇಡತಿ ಬೇಡವ್ವಾ ಕೊಡುವೆ ತತ್ಕಾಲಾ || ೧೫ ||

ತಾಯಿ ಪ್ರೇಮ ಬಹಳ ಮಗನ ಮೇಲಾ |
ನನ್ನ ಮಗ ಇದ್ದಾನ್ರಿ ಸಣ್ಣ ಬಾಲಾ | ಅವನ ಮ್ಯಾಲೆ ಕ್ಯಾಲಾ
ಬಡತಾನ ಬಾಳಾದ್ರಿ ನಾ ಹೇಳೂದಿಲ್ಲಾ || ೧೬ ||

ಮುದುಕಿ ಹೊಟ್ಯಾಗಿನ ಮಾತು ಶಿವಾ ತಿಳಿದಾನಲ್ಲಾ
ಹೊನ್ನಿನ ಕೊಡ ಹೊರಸಿ ಹೆಗಲಮ್ಯಾಲಾ | ಮನಿಗೆ ಹೋದಳಲ್ಲಾ
ಮಗನಿಗೆ ಕರಿತಾಳೋ ಬಾರೋ ಎನ್ನ ಬಾಲಾ || ೧೭ ||

ಲಗು ಮಾಡಿ ಸೊಸಿಯು ಬಂದಿದಾಳಲ್ಲಾ |
ಹೊನ್ನಿನ ಕೊಡನೋಡಿ ಹೆಗಲಮ್ಯಾಲಾ | ಇಳಿಸಿದಾಳಲ್ಲಾ
ಎಲ್ಲಿಂದ ತಂದೆವ್ವ ಪ್ರೇಮ ನಮ್ಮ ಮ್ಯಾಲಾ || ೧೮ ||

ಅತ್ತಿಗೆ ಸಿಟ್ಟು ಬಂತೋ ಸೊಸಿಯ ಮ್ಯಾಲಾ
ಸೊಸಿಗೆ ಹೇಳತಾಳೋ ಒಂದು ಒಂದು ಅಕಲಾ | ನನಗೇಳಲಿಲ್ಲಾ
ಇದ್ದಷ್ಟು ತಂದೇನಿ ನೀ ಬರಲಿಲ್ಲಾ || ೧೯ ||

ಹೆಣತಿ ಹೇಳತಾಳೋ ಗಂಡಗ ಅಕಲಾ
ನಾಲ್ಕು ಕಟ್ಟು ನನ್ನ ಬಿಗಿದು ಕೈ ಕಾಲಾ || ಹೊತ್ತುತೆಲಿ ಮ್ಯಾಲಾ
ಬಾವಿ ಮ್ಯಾಲೆ ನಿಂತು ಜಿಗಿದು ಒಗದಾನಲ್ಲಾ || ೨೦ ||

ಮೂರು ಸಲ ಮುಳಮುಳುಗಿ ಎದ್ದಿದಾಳಲ್ಲಾ
ಗಂಡನಿಂತು ಹೇಳತಾನೋ ಬಾಂವಿ ದಂಡಿಮ್ಯಾಲಾ | ಬಿಡಬ್ಯಾಡೆ ಸಡಿಲಾ
ಹೊತಗೊಂಡು ಬಾರೆ ನೀ ಕೋಸಿಸ್ ಮ್ಯಾಲಾ || ೨೧ ||

ಬೇಮಾನಾ ಮಾಡತಾರೋ ಅತ್ತಿ ಮೇಲಾ
ಸೊಸಿಗೆ ಒಂದಿತ್ರಿ ಒದಗಿ ಕೆಡುಗಾಲಾ | ಕೇಳರಿ ದೈವೆಲ್ಲಾ
ತನ್ನ ಕರ್ಮಕ್ಕೆ ತಾನು ಸರಿಬಿದ್ದಳಲ್ಲಾ || ೨೨ ||

ಕಲಿವಿಕದ ವರ್ತಮಾನಾ ತಿಳಿಸಿನಿ
ಇವತ್ತು ನಾಳೆ ಪ್ರೇಮ ಹೆಂಡರ ಮ್ಯಾಲೆ | ಮಾಡತಾರೋ ಕ್ಯಾಲಾ
ಬೇಮಾನಾ ಮಾಡತಾರೋ ತಾಯಿ ತಂದಿಯ ಮ್ಯಾಲಾ || ೨೩ ||

ಮಾಲಗತ್ತಿ ಊರದೊ ದೇಶಕ್ಕೆ ಮಿಗಿಲಾ
ಬೀಬಿ ಫಾತಿಮಾ ನೆನದಾಳೋ ನಡು ಊರಾಗೆಲ್ಲಾ | ಮತಿ ಕೊಟ್ಟಾಳಲ್ಲಾ
ರಿವಾಯಿತು ಮಾಡ್ಯಾರೋ ಸತಿಪತಿ ಮ್ಯಾಲಾ || || ೨೪ ||

* * *

. ಸೇರಿಗೆ ಸವ್ವಾಸೇರು

ಶಾಸ್ತರ ವಿಸ್ತರ ತುಸು ತಿಳಿಸುವೆ ಜನಕೆ
ಗುಲ್ಲಾ ಮಾಡದೆ ಜರಾ | ಕೇಳರಿ ಮಜಕೂರಾ
ಒಂದ ಊರಾಗ ಒಬ್ಬ ಇದ್ದ ಸಾಹುಕಾರಾ | ಆತಗಿದ್ದರಪ್ಪ ಇಬ್ಬರು ಹೆಂಡರಾ
ಪೈಲಾದಾಕಿ ಇದ್ದಾಳ ಬೆರಕಿ ಮಂತರ ತಂತರಕ || ೧ ||

ಮಕ್ಕಳಿಲ್ಲದೆ ರೊಕ್ಕಾ ಇದ್ದೇನು ಸುಡಬೇಕ | ಹಡೀಲಿಲ್ಲ ಮುಂಚಿನಾಕಿ
ಮತ್ತೊಂದು ಆದಾನ ಉಡಕಿ | ಇಟ್ಟ ಆಕಿ ಮ್ಯಾಲ ಸಾಂಬ ಹರಕೆ
ಗಂಡಸುಮಗ ಹುಟ್ಯಾನ ರಾಜಹಂಸಿ |
ಪ್ರೀತಿ ಮಮತೆ ಮಾಡುವ ಪತಿ ಆಕಿ ಮ್ಯಾಲ ಲಕ್ಕ || ೨ ||

ಮೊದಲಿನ ಹೆಂಡತಿ ಮನದಾಗ ಮುರುತಿದ್ದಳು ಚಿಟಕ
ಹೆಂಡರಿಗೆ ತಾಕೀತ ಕೊಟ್ಟಾ ಗಂಡ ಹೋದಾ ವ್ಯಾಪಾರಕ
ಮೊದಲಿನ ಹೆಂಡತಿ ಮನಿಯಾಗ ಅರ್ಬಾಟಾ ನಡಿಸ್ಯಾಳ ತನ್ನ ಬಂಗಾಲಿ ಆಟಾ
ರಂಬಿ ಉಬ್ಬಿ ಬಟ್ಟಲ ತುಂಬಿ ತಗೊಂಡಾಳ ಉದಕ || ೩ ||

ಮಂತ್ರಿಸಿ ಸಿಂಬಡಿಸ್ಯಾಳ ತಾಯಿ ಮಗ್ಗ ತಟಕ
ನೀರಬಿದ್ದ ಬರೋಬರಿ | ಆಕಳ ಆಗ್ಯಾಳ ನಾರಿ ಮಗಾ ಆಗಿ ನಿಂತ ಸಣ್ಣ ಹೋರಿ
ಡುರಕಿ ಹೊಡಿಯತಾನ ತನ್ನ ಕಾಲಕೆದರಿ
ಅಲ್ಲೆ ಇದ್ದ ಕಟಗನ ಕರೆದು ಕೊಟ್ಟಾಳ ತಾಬೇಕ || ೪ ||

ಸಾವುಕಾರ ವ್ಯಾಪಾರ ಮಾಡಿಕೊಂಡ ತಿರುಗಿ ಬಂದ ಆ ಕ್ಷಣಕ
ನೋಡತಾನ ಮನಿಯಾಗ  ಹೋಗಿ ಮೋಹದ ಸತಿ ಸುತರಿಗೆ
ಕಾಣಲಿಲ್ಲ ಇಬ್ಬರು ಕಣ್ಣಿಗೆ | ಒಬ್ಬಾಕಿ ಕುಂತಿದ್ಲು ಮೊದಲಿನ ಗೂಗಿ
ಕಂಡ ಗಂಡ ಕೇಳತಾನ ಉಂಡು ಮಾರಿ ಬಾಡಿ ಮುಖ || ೫ ||

ಯಾವಲ್ಲೆ ಹೋಗ್ಯಾಳ ನನ್ನ ಸತಿ ಸುತ ಹಿತಚಿಂತಕ
ತಗದ ಹೇಳ್ಯಾಳ ಹಂಚಿಕಿ ಬಂದೀತ ಕೆಟ್ಟ ಕಸಾರಕಿ
ಉಳದಾಳ ಅಂತ ಬಹಳ ಮಾಡಿದ್ದೇ ಜ್ವಾಕಿ
ಮಗನು ನೋಡಿ ಹೋದಾನ ಓಡಿ ನೋಡಲಾರದಕ || ೬ ||

ನೆನಸಿ ನೆನಸಿ ಅಳತಾನ ಸೋಸಿ ಸಾವುಕಾರ ನಸೀಬಕ
ಅಯ್ಯೋ ನನ್ನ ಮೋಹದ ಮಡದಿ ಬಿಟ್ಟ ನನಗ ಯಾವಲ್ಲಿ ಹೋದಿ
ಮುದ್ದು ಮಗನಿಗೆ ಯಾವ ಕಡಿಹಾದಿ ತೋರಿಸಿ ನನಗ ವನವಾಸ ತಂದಿ
ದುಃಖಸುಖ ಇಟ್ಟಿದಿ ನನಗ ತಪ್ಪದು ಸಾವು ತನಕ || ೭ ||

ಬಂದೀತ ಬಕರೀದ ಹಬ್ಬ ಮುಂದ ತುಸು ದಿನಕ
ಗಂಡಗ ಅಂತಾಳ ಕುಂತ, ಕುಂದರಬಾಡ್ರಿ ಮೈಮರೆತ
ಸತ್ತವರಗೂಡ ಯಾರೂ ಹೋಗುದುಲ್ಲಾ ಸತ್ತಾ
ಇದ್ದವರ ಜಲ್ಮಕ ಇರಬೇಕು ಸ್ವಸ್ಥಾ | ಇಂದ ಚಂದ ಆಕಳ ತಂದು ಕುರಬಾನಿ ಕೊಡಬೇಕ || ೮ ||

ಕಟಗಗ ಕೊಟ್ಟಿದ್ದ ಆಕಳ ತಂದಾಳಾ ಕ್ಷಣಕ
ಕಂಡ ಗಂಡನ ಮಾರಿ ಒದರೀತ ಚಿಟ್ಟನೆ ಚೀರಿ
ಪತಿ ಅಂದಾ ಇದಕ ಸಾಕುನು ನಾರಿ | ಮತ್ತೊಂದು ತಂದು ಕೊಡುನು ಬ್ಯಾರಿ
ಮಮತೆ ಪ್ರೀತಿ ಬಹಳ ಬರತೈತಿ ನೋಡೂನು ಇದಕ || ೯ ||

ಸದ್ಯಕ್ಕ ಇದ್ದದ್ದು ಬಿಟ್ಟು ಗುದ್ದ್ಯಾಡುದು ಯಾಕ
ಹಿಡಿಲಿಲ್ಲಾ ಹೆಣತಿ ಖೂನಾ ಕೆಡವಿ ಕೋದಾನ ಗೋಣಾ
ಆ ಬೋಳೆ ಗಂಡಗ ಆ ರಕ್ತ ನೋಡೋಣ ಬವಳಿಕೆ ಬಂದ ಮುಚ್ಯಾನ ಕಣ್ಣಾ
ಅಂತಾಳ ಸವತಿ ಆತ ನಿಶ್ಚಿಂತಿ ನನ್ನ ಮನತಕ್ಕ || ೧೦ ||

ಸವತಿಗೆ ಕೊಂದ ರಂಡಿ ಇರಲಿಲ್ಲ ಸುಮ್ಮಕ
ಜನಾ ಬಹಳ ಸಾಲೂದಿಲ್ಲಾ ಹೋರಿಗೆ ಹಿಡತಂದಾಳಲ್ಲಾ
ಕಟಗಗ ಅಂತಾಳ ತಿಂದೈತಿ ಕಾಳಾ ಅದರಕ್ಕಿಂತ ಇದು ಇದ್ದೀತು ನಿವ್ವಳಾ
ಬಾರಿ ಹೋರಿ ತಂದೀಯ ಮಾರಿ ನೋಡಿದ ಬಳಿಕ || ೧೧ ||

ಕಸುವಿಲೆ ಕೊಸರಿ ಬಂದು ಬಿದ್ದೀತ ತಂದಿ ಪಾದಕ
ಕಂಡ ಆ ಹೊಯ್ಮಾಲಿ ಮಲತಾಯಿ ಮಾಡತಾಳ ನಕಲಿ
ತಂದಿ ಅಂದಾನೊ ಇದು ಅರ ಇರಲಿ ಮುಂದಿನ ಹಬ್ಬಕ ಕೊಯ್ಯುನು ನಾರಿ
ತಂದಿ ಅಂದ ಕಟಗನ ಕರೆದು ತಿರುಗಿ ಒಯ್ಯ ಹಿಂದಕ || ೧೨ ||

ಕಂಡ ಕಟಗನ ಮಗಳು ಮಾಡತಾಳ ದುಃಖ
ಆಕಳ ಹೊದೀತ ತೀರಿ | ಇದು ಒಂದು ಉಳಿದೀತ ಹೋರಿ
ತಂದೆಗಂದಾಳು ನೀವೇನು ತಿಳಿದಿರಿ ಅದು ಹೋರಿ ಅಲ್ಲಾ ಮಗಾಹಾಸ ಸೌಕಾರನ
ತಂದಿ ಮಂದಿ ಮುಂದ ಸುದ್ದಿ ಹೇಳಿದ ಬಳಿಕ || ೧೩ ||

ಬಂದಾವ ಆ ಹೋರಿ ತಂದಿ ಆ ಕಟಗನ ಮನಿತನಕ
ಹಡದವ್ವ ಮಾಡ ಸಾಹಸಾ | ಉಡಸೂವೆ ಸೀರಿ ಕುಬಸಾ
ಕಟಗಗ ಅಂದಾಳ ನನಮಾತಾ | ತುಸಾ ಕೇಳರಿ ನಂದು ಇತ್ತ ಮನಸಾ |
ಈಗ ಬ್ಯಾಗ ನನಗ ಅಂವಗ ಲಗ್ನ ಮಾಡಬೇಕ || ೧೪ ||

ಕೊಟ್ಟಾನ ಸಾವುಕಾರ ವಚನ ಘಟ್ಟ ತಿಳಿಮನಕ
ನಿನ್ನ ಮ್ಯಾಲೆ ಎರಡನೆ ಇಲ್ಲಾ ಅನ್ನುನಾ ಕಟಗನ ಅಬಲಾ
ತೊಗೊಂಡಾಳ ಕೈಯಾಗ ನೀರಿನ ಬಟ್ಟಲಾ ಮಂತ್ರಿಸಿ ಉಗ್ಯಾಳ ಹೋರಿಯ ಮ್ಯಾಲಾ
ಕಂದ ಚಂದ ನಿಂತಾನ ಇಂದ ಮನುಷ್ಯಾಗಿ ಲಕ್ಕ || ೧೫ ||

ವಚನದ ಸರಿಯಾಗಿ ಮದುವಿ ಆತ ಖಡಕ
ಮನಿಮಗಳು ಬಂದಾಳು ಸೊಸಿ ನಡದೀತ ಗುಸುಮುಸಿ
ಸೊಸಿ ಒಗದಾಳ ನೀರ ಮಂತ್ರಿಸಿ ಅತ್ತಿ ಚಿಗರಿ ಆಗ್ಯಾಳ ಪರದೇಶಿ
ಸೇರಿಗೆ ಸವ್ವಾಸೇರ ಆದರ ಮುರಿತೈತಿ ಸೊಕ್ಕಾ || ೧೬ ||

ಬಾಗಲಕೊಟ್ಯಾಗ ಗುರು ದಸ್ತಗೀರನ ಬೆಳಕ
ಕರುಣುಳ್ಳ ಕೇಸುಪೀರ ಮಸ್ತ ಬುದ್ದಿಕೊಟ್ಟಾನ ಧೀರಾ
ದೇಶದ ಮ್ಯಾಗ ನಾಗೂಗೌಸನ ಹೆಸರಾ ಡಂಕಾ ಹೊಡುತೈತಿ ಇಲ್ಲದಾಂಗ ಕಸರಾ
ತಮ್ಮಾ ದಮ್ಮಾ ಬಿಟ್ಟ ಬಿಡ ಹಮ್ಮಾ ಬರುದಿಲ್ಲ ಕೆಲಸಕ || ೧೭ ||
* * *