. ಕಲ್ಲ ನೀರ ಮ್ಯಾಲೆ ನಾಯಿ ಮುಗಿಲ ಮ್ಯಾಲೆ

ಪಂಥ ತೀರಿಸಲಾಕ ಎಂಥ ರಿವಾಯಿತ
ಹಾಡಿ ಕುಂತಲ್ಲೇ ಸುಗಡಿ || ಪಲ್ಲವಿ ||

ಅರ್ಥವಿಲ್ಲದೆ ಎತ್ತ ಬೋಗಳತಿದಿ | ಒದ್ದ ಮುರದೇನ ದವಡಿ
ಹೇಳತೇನಿ ತಗೋ ನಿನ್ನ ತೋಡಿ
ಇ|| ಅಲ್ಲ ಅಂದರ ನಿನಗ ಗುಲ್ಲ ಕೊಡತೇನಿ | ಕೇಳೆಲೆ ದೆವಗೇಡಿ
ಸಣ್ಣ ಹುಡುಗರೊಳು ಬಣ್ಣದ ಮಾತ್ಹೇಳಿ | ಹೊಂಟಲ್ಲೇ ಅಡ್ಡನಾಡಿ
ಏರು|| ದನಾ ಕಾವುವಲ್ಲೇ ದಿಮಾಕ ಮಾಡತೀರಿ | ಬಲ್ಲಾಂಗ ಒದರ‍್ಯಾಡಿ
ಕತ್ತಿಯಂಗ ಎತ್ತ ಮಸಡಿ ಮಾಡಿ
ಇ|| ಹಾಡ್ತೇನಿ ಸುಗಡಿ ನಿಂತ ನಿಮ್ಮನ್ನು ನೋಡಿ | ಹ್ವಾದಿ ಓಡಿಗೀಡಿ
ಏರು|| ಮೊನ್ನೆ ಮೊನ್ನೆ ಒಂದು ಹೊಳಿಯಾಗ ಹೋಗಿತು
ಕಲ್ಲ ಒಂದ ತೇಲಿ | ಬದರಿತ್ತ ನಾಯಿ ತೆರೆದಿತ್ತ ಬಾಯಿ
ಆಕಾಶಕ ನೋಡಿ | ಜನಗಾಬಾತ ಅದನ ನೊಡಿ
ಇ|| ಇಲ್ಲ ನೀರ ಮ್ಯಾಲೆ | ನಾಯಿ ಮುಗಿಲ ಮ್ಯಾಲೆ
ಓಡಿತ್ತ ಹಂಗ ಓಡಿ
ಏರು|| ಹೆಣದಂಗ ಬಾಯಿ ತಕ್ಕೊಂಡ ಕುಂತಿದಿ
ನೊಣಾ|| ಹೊಕ್ಕಾವ ಖೋಡಿ
ಒಗಟ ಬಡಿಯದಿದ್ದರ ಬಿಡೂದಿಲ್ಲಾ ತಮ್ಮಾ
ಕುಬಸ ಬಳಿ ಹಿಡಿ | ಕೈಯೊಳ್ಳು ಇಟಗೊಳ್ಳು ರಿಣಗೇಡಿ
ಇ|| ಸಿಗಬಾರದ ಸಿಕ್ಕಿ ಸೆರಿ ಬಡುವುತೇನಿ |
ಇನ್ನೊಂದ ಹಾಡಿಗೀಡಿ
ನಾಗನೂರ ಶಾರ ದೇಶಕ್ಕ ಜಾಹೀರಾ | ಐತೇ ನಾಲ್ಕು ಕಡಿ
ಮುಸಲ್ಮಾನ ಓಣಿಯ ಹುಡುಗರು ಹೇಳ್ಯಾರೋ
ತಗದ ನಿನ್ನ ರಾಡಿ ||

* * *

. ಗಿಡದ ಹೆಸರು ಹೇಳಬೇಕೋ

ಸಲಾಂ ಬಂದೀತ್ರಿ ದೈವಕ ನಂದಾ
ಸಲಾಂ ತಗೋ ಬೇಕರಿ ಬಡವಂದಾ
ಪ್ರಾಂತದೊಳು ಗಿಡ ಕಂಡೇನಂದಾ
ಗಿಡದ ಬಡ್ಡಿ ಇದ್ದಾವರಿ ಹದಿನೈದಾ
ಒಂದೊಂದ ಬಡ್ಡಿಗೆ ಹನ್ನೆರಡು ಟಿಸಿಲಾ
ಟಿಸಿಲಿಗೆ ಹನ್ನೆರಡು ಎಲಿ ಅಸಲಾ
ಅಸಲಿಗೆ ಹನ್ನೆರಡು ಕಾಯಿ ಮಿಗಿಲಾ
ಒಂದೊಂದು ಕಾಯಿ ಇದ್ದಾವರಿ ಭೂಮಿ ಅಗಲಾ
ಒಂದೊಂದ ಕಾಯಿಗೆ ಹನ್ನೆರಡು ಹಣ್ಣಾ
ಹಣ್ಣಿಗೆ ಐವತ್ತಾರು ತರದ ಬಿಣ್ಣಾ
ಹಣ್ಣಿಗೆ ಬಿದ್ದಾಗ ಸೂರ್ಯನ ಕಿರಣಾ
ಅದನ್ನೋಡಿ ಮೆಚ್ಯಾನೋ ಭಗವಾನಾ
ಒಂದೊಂದ ಗಿಡಕ ಒಬ್ಬ ಮನಸ್ಯಾನಿದ್ದಾ
ಅಳತಿ ತೆಂಗಿನ ಮರದುದ್ದಾ
ದಿನಾಂಪ್ರತಿ ನೀರ ಹಣಿಸತಿದ್ದಾ
ಗಿಡಗಳ ಜೋಪಾನ ಮಾಡತಿದ್ದಾ
ಗಿಡದ ಹೆಸರು ಹೇಳಬೇಕರಿ ಒಡದಾ
ನಿಮಗ ಸಾಯೂತನಾ ಬಿಡದಾ
ಬಾಗಲಕೋಟೆ ದೇಶಕ ಕವಿ ಮಿಗಿಲಾ
ನಾಗೂ-ಗೌಸು ಹೇಳ್ಯಾರ್ರಿ ಹೊಸ ಖ್ಯಾಲಾ ||

* * *

. ಕೂಸು ಎಲ್ಲಿ ಹೋತೊ
ಬುದ್ದಿವಂತ ಬಲ್ಲವರಾ | ಕುಂತ ಕೇಳರಿ ಹಿರಿಯರಾ
ಅನಂದ ಮನಾಯಿಟ್ಟು ಧ್ಯಾನ ಕೇಳರಿ ಪೂರಾ
ತಿಳಿಯಿರಿ ಮಜಕೂರಾ || ಪಲ್ಲವಿ ||

ಇ|| ಅರಬಸ್ತಾನ ದೇಶದಲ್ಲಿ ಇರುವದು ಬಾರಿ ಸಮುದ್ದರಾ
ಹಡಗದೊಳು ಜನಾ ಕುಂತಿದ್ರೋ ಘನಾ
ಹೇರಿ ಸ್ವಾಮಾನ | ಹಡಗ ಸಾಗಿತ್ತೊ ಆಡಂಬರಾ ||
ಇ|| ಹಡಗ ಹೋದೀತೋ ಬಹು ದೂರಾ ಎತ್ತ ನೋಡಲು ನೀರಾ
ನೀರಿನ ಸುಳಿ ಇದ್ದಿತ್ರಿ ಚಕ್ರಾ | ಗುಡ್ಡದ ಹತ್ತಿರಾ
ಹಡಗ ಮುಳಗಿತ್ತೊ ಎಳೆದು ನೀರಾ
ಇ|| ಜನರು ಕೂಡಿ ಹರಕಿ ಬೇಡಿ ಅಂದ್ರೋ ಹರ ಹರಾ
ಏರು|| ನಮಗ ನೀನು ಮಾಡೋ ಪಾರಾ
ಬರೆದಿದ್ದ ಹಣೆಬಾರಾ | ಸರಿಯಾಗಿ ಶ್ರೀಹರಾ
ಇ|| ನಡಿಯಲಿಲ್ಲೊ ಬಂದೀತು ಕಷ್ಟಾ ತಿರುಗಿ ಪೂರಾ
ಏರು|| ಒಬ್ಬ ಬಾಲಿ ಬಂದು ಹಲಗಿಯ ಮೇಲೆ ಕುಂತಿದ್ದಳೋ ತೀವ್ರಾ
ಹೋಯಿತೋ ಹಲಗಿ ನೀರಿನಲ್ಲಿ | ಕೇಳರಿ ಹಿರಿಯರಾ
ಆಕಿ ಇದ್ದಾಳೋ ತುಂಬ ಬಸರಾ
ಇ|| ಹಡದಾಳೋ ಗಂಡು ಪುತ್ತರಾ | ಆಕಿಗಿದ್ದಿಲ್ರಿ ಎಚ್ಚರಾ
ಏರು|| ತನ್ನ ಮಗನ ಮಾರಿ ನೋಡ್ಯಾಳೋ ನಾರಿ
ಆಗಿ ಎಚ್ಚರಾ | ಕಂದ ಆಗಿದ್ದ ಚಂದಿರಾ
ಇ|| ಬರೆದಿದ್ದರೋ ಹಣೆಯಲ್ಲಿ ಶನಿ ಹತ್ತಿತೋ ಭಲಾ
ತಪ್ಪಿ ಶಿವನ ಕರುಣಾ ಬಂದೀತೋ ಮರಣಾ ಪೂರ್ಣಾ
ಏರು|| ತಾಯಿ ಹೆಣಾ ಹುಗಿದವರಾ | ಧ್ಯಾಸ ಮಾಡಿ ಹೇಳೋ ಉತ್ತರಾ
ಕೂಸೆಲ್ಲಿ ಹೋತೋ ಹೇಳೋ ನಿಂ ಮಾಡಿ ಚಮತ್ಕಾರಾ
ಏರು|| ಆಗಬ್ಯಾಡೋ ಸುಮಾರಾ ಹಂಪಿನಾಗೇನಹಳ್ಳಿ
ಹೂವಿನಬಳ್ಳಿ ಬಂದಿತ್ರಿ ಹೆಸರಾ
ಇ|| ಕಾಲೇಪೀರನಲ್ಲಿ ನೀ ಹೋಗೋ ಪ್ಯಾಲಿ
ಸಿಗುವುದು ಉತ್ತರಾ | ಬರೆದಿದ್ದ ಮುಸ್ತಪಾ ಶಾಹೀರಾ ||

* * *

. ಜೀವ ಒಬ್ಬನದು ದೇಹ ಮತ್ತೊಬ್ಬನದು

ಕುಂತ ಕೇಳರಿ ದೈವೆಲ್ಲಾ ಮಡಬ್ಯಾಡ್ರಿ ಕಲಲಲಾ
ತಗದೇನಿ ಒಂದು ನಕಲಾ ಮಾಡಿ ಅಸಲಾ || ಪಲ್ಲವಿ ||

ಏರು|| ಒಬ್ಬ ಪುರುಷ ಬ್ಯಾಸಿಗಿ ಬಿದ್ದ ಬೆಳಗ ಗಂಟಲ ಒಣಗಿ
ಇದ್ದ ಒಂದ ಊರಿಗೆ ಹೋಗಿ ನೀರಡಿಸಿ ಮನೆ ಮನೆ ತಿರುಗಿ
ಆಗ ಇತ್ತೊ ರಾತರಿ ಕಾಲಾ ಎಲ್ಲೆಲ್ಲಿ  ಸಿಗಲಿಲ್ಲೊ ಜಲಾ
ಮುದುಕಿ ಒಬ್ಬಾಕಿ ನೂಲುತ್ತಿದ್ದಳಲ್ಲಾ ಮತ್ಯಾರಿಲ್ಲಾ || ೧ ||

ಇ|| ಬ್ಯಾಸೊತ್ತ ಆ ಪುರುಷನು ಧರ್ಮಸಾಲ್ಯಾಗ ಮಲಗಿದನು
ಜೀವ ಹೋತರಿ ಹುಡಕಲಿಕ್ಕೆ ತಾನು ತತ್ಕಾಲಾ
ಏರು|| ಮುದುಕಿ ಕೈ ಬಿಂದಗಿಯಲ್ಲಿ ನೀರು ಕುಡಿವ ಸಮಯದಲ್ಲಿ
ನೂಲುದಾಯ್ತು ಆಕ್ಷಣದಲ್ಲಿ ಹಂಜಿಪುಟ್ಟಿ ಮುಚ್ಚಿ ಅಬಲಿ
ಮಲಗಿಕೊಂಡಾಳು ಮಧ್ಯರಾತರಿ ಆ ಜೀವ ಬಿಂದಗ್ಯಾಗ ಅಂತರಿ
ಬಂಗಲೆ ಬಿಡುವೆ ಜೀವ ಹೋತರಿ ಉಳಿಯಲಿಲ್ಲಾ || ೨ ||

ಇ|| ಮರುದಿವಸ ಸರಕಾರದವರು ಪರದೇಶಿ ಹೆಣ ಎಂದು
ಅವರು ದಹನ ಮಾಡಿಬಿಟ್ಟಾರೋ ಬಿಡಲಿಲ್ಲಾss
ಏರು|| ಅದೇ ದಿವಸ ಆ ಊರಾಗ ಸತ್ತಾನೊಬ್ಬ ಸಾಹುಕಾರಾ
ಬಂಧು ಬಳಗ ಕೂಡಿತೋ ಪೂರಾ | ಸುರಸತಿದ್ರೋ ಕಣ್ಣೀರಾ
ಮುಂಜಾಲೆ ಮುದುಕಿ ಎದ್ದು ಬಿಂದಗಿ ಬಾಯಿ ತಗೆದು
ಹಂಜಿಪುಟ್ಟಿ ಒತ್ತಟ್ಟಿಗೊಗೆದು ಕುಂತಾಳಲ್ಲೊ || ೩ ||

ಇ|| ಬಿಂದಿಗಿ ಬಾಯಿ ತೆರದಾಕ್ಷಣ ಒಳಗ ಸಿಕ್ಕ ಜೀವಾ
ಧರ್ಮಶಾಲೆಗೆ ಹೋಗಿತೋ ಗಡಣಾ ದಿಂಬಾ ಇಲ್ಲಾ
ಏರು|| ಸಾಹುಕಾರನ ಮನೆಯಲ್ಲಿ ಅಳುದನ್ನು ಕೇಳುತಲೆ
ಅಲ್ಲಿ ಹೋಗಿ ಆ ಕ್ಷಣದಲ್ಲಿ ಸೇರಿತವನ ದೇಹದಲ್ಲಿ
ಬದುಕಿದ ಆಗ ಸಾವುಕಾರಾ ಮಾತಾಡಿದ ಬದಲಿಯ ಸ್ವರಾ
ಗಂಡನಂತ ಹೆಂಡತಿ ತೀವ್ರಾ ಹಿಡದಾಳಾ ಕಾಲಾ || ೪ ||

ಇ|| ಒಳಗ ಜೀವ ಹೇಳತೈತಿ ನೀನಲ್ಲ ನನ್ನ ಸತಿ
ಹಿಂತ ಊರಾಗ ನನ್ನ ಹೆಂಡತಿ ಇರುವಳಲ್ಲಾ
ಏರು| ಕರಿಸ್ಯಾರೋ ದೈವೆಲ್ಲಾ ಕೂಡಿ ಹೆಂಡತಿ ಬಂದಾಳೋ ಓಡಿ
ಅಳತಾಳೋ ದೇಹ ನೋಡಿ ದೈವದಾಗ ಹೊರಳಾಡಿ
ಹೇಳಬೇಕೋ ಇದರ ಮೂಲಾ ತಿಳಿಯದಿದ್ರಾ ಬೀಳೋ ಕಾಲಾ
ಸುಳ್ಳ ಕಿಸಿಯಬ್ಯಾಡೋ ಹಲ್ಲಾ ಕಂಗಾಲಾ || ೫ ||

ಇ|| ರುದ್ರಗೌಡ ಮುದ್ರಿಯಕೀಲಾ ಭದ್ರ ಪಂಡಿತ ಬಲ್ಲವ ಬಲ್ಲಾ
ನಿದ್ರಿ ಕಣ್ಣಿಗೆ ಬರುವುದಿಲ್ಲಾ ಬಿಲ್‌ಕುಲ್ಲಾ
ಏರು| ಭದ್ರಜನಾ ಕುಡಿದಾಂಗ ಹಾಲಾ ತಿಂದಾಂಗ ಕೊಬ್ಬರಿಬೆಲ್ಲಾ
ಛಿದ್ರ ಶಬ್ದ ಎಳ್ಳಷ್ಟು ಇಲ್ಲಾ ಅದ್ರಿ ಮೇಲೆ ಬಿಟ್ಟಾಂಗ ರೈಲಾ || ೬ ||

* * *

. ಬ್ರಾಹ್ಮಣ ಸತ್ತ ದೋಷ ಯಾರಿಗೆ ಬಂತೋ?

ಏನ ಚಂದ ಕೂಡಿರಿ ದೈವಾ ಕೇಳಿರಿ ಸವಾಲಾ
ಗಪ್ ಚುಪ್ ಕುಂತ ಕೇಳರಿ ಮಾಡಬಾರದು ಗುಲ್ಲಾ
ಏರು| ಬಗದಾದ ಎಂಬುವ ಶಹರಾ ದೇಶಕ್ಕ ಜಾಹಿರಾ
ಭಕ್ತನೊಬ್ಬ ಅದಾನ ಕೊಡತಿದ್ದಾ ಅನ್ನಾ
ಅವನ ಹಂತೇಲಿ ಬ್ರಾಹ್ಮಣ ಭಿಕ್ಷೆ ಬೇಡ್ಮಾನಲ್ಲಾ || ೧ ||

ಭಿಕ್ಷೆದ ಸುದ್ದಿಕೇಳಿ ಕುಶಿ ಆದಾನಲ್ಲಾ
ನಮ್ಮಲ್ಲೆ ಊಟ ಮಾಡಲಿಕ್ಕೆ ಏನೂ ಅಡ್ಡಿ ಇಲ್ಲಾ |
ಏರು | ಬ್ರಾಹ್ಮಣ ಕೇಳಿದಾಕ್ಷಣ ಮಾಡಲಿಕ್ಕೆ ಹೋದಾನು ಸ್ನಾನಾ
ಸತಿಗೆ ಹೇಳುತಾನ ಅಡಗಿ ಮಾಡು ವತ್ತರ
ಗೌವಳಗಿತ್ತಿ ಮೊಸರ ಮಾರತಿದ್ಲೊ ಹೊತ್ತು ತಲಿಯಮೇಲಾ || ೨ ||

ಇ|| ಗೌವಳಗಿತ್ತಿ ಮೊಸರ ತಗೊಂಡು ಬರುತ್ತಿದ್ದಳಲ್ಲಾ
ತಲಿಯ ಮೇಲೆ ಹೊತ್ತ ಗಡಗಿಯದು ಬಾಯಿ ಮುಚ್ಚಿದಿಲ್ಲಾ
ಏರು| ಗರುಡೊಂದು ಹಾರಿತು ಮೇಲಾ ಸರ್ಪ ಕಚ್ಚಿ ಬಾಯೊಳು
ಒಯ್ಯುತಿತ್ತು ತಿನ್ನುದಕ ಸರ್ಪ ತನ್ನ ಜೀವದ ಸಂಕಟಕ
ವಿಷವ ಕಾರೀತು ಗಡಿಗ್ಯಾಗ ಬಂದು ಬಿದ್ದಿತಲ್ಲಾ || ೩ ||

ಮೊಸರ ತಗೊಂಡ ಬಾಲಿ ಎರಡು ಭಯವಿಲ್ಲಾ
ಬ್ರಾಹ್ಮಣ ಜಳಕವ ಮಾಡಿ ಕುಂತ ಎಡಿಯ ಮೇಲಾ
ಏರು| ಮಾಡಿದಂತ ಪಕ್ವಾನ್ನ ಪಂಚಾಮೃತ ಅಡಗಿ
ಹಾಲು ಮೊಸರು ಮೇಲಾ ನೀಡ್ಯಾಳ ಉಳಿಸಲಿಲ್ಲಾ
ಜರಾ ಉಂಡಾಕ್ಷಣ ಬ್ರಾಹ್ಮಣ ಹೊಟ್ಟಾಗ ಬಿದ್ದಿತು ಕಲಭಲಾ || ೪ ||

ಇ|| ಹಾವಿನ ವಿಷವು ಅವನಿಗೆ ಜೇರ ಮಾಡಿತಲ್ಲಾ
ನೋಡು ನೋಡುದುರೊಳಗ ಅವನ ಜನ್ಮ ಉಳಿಯಲಿಲ್ಲಾ
ಏರು| ಬ್ರಾಹ್ಮಣ ಸತ್ತ ದೋಷ ಯಾರಿಗೆ ಬಂತೋ ತ್ರಾಸ
ಸುಳ್ಳ ಹಿಂತ ಪಂಟ ಹೇಳಿ ಹೋಗಬ್ಯಾಡ ಹೊಂಟ
ಓಡಿ ಹೋದರ ಹೇಡಿ ಬೆನ್ನ ಬಿಡೂದಿಲ್ಲಾ || ೫ ||

ಇ|| ನಿಮ್ಮಂತ ಹುಲ್ಲ ಕವಿಗಳು ಬಂದು ಬಂದು ಹೋಗ್ಯಾರಲ್ಲಾ
ವೈರಿಯ ತಲಿಯಮ್ಯಾಲಾ ಕಸಬರಗಿಯ ಹುಲ್ಲಾ
ಏರು| ಬಾಗಲ್‌ಕೋಟಿ ರಂಗಲಾಲಾ ಮಹ್ಮದ ಗೌಸು ವೈರಿಗೆ ಮಿಗಿಲಾ
ನಾಲ್ಕು ಮಂದಿಗೆ ತೋಲಾ ಸಭೆಯೊಳಗ ಇವರ ಕೈ ಮೇಲಾ
ವೈರಿಯ ತಲಿಯಮ್ಯಾಲಾ ಕಸಬರಗಿಯ ಹುಲ್ಲಾ || ೬ ||

* * *

. ಆರು ಸ್ಥಲ ಆರು ಚಕ್ರ ಆರು ಪ್ರಮಾಣ

ಕೂಡಿರಿ ದೈವಾ ಬಂದ ಹೇಳುವೆ ಚಂದದಿಂದಾ
ಅನುಭವ ತಗದೇನಿ ಒಂದ ಹೇಳಬೇಕೋ ನೀನಾ
ತೂಕ ಹಚ್ಚಿದಾಂಗ ಚಿಂತಾಲಾ || ಪಲ್ಲವಿ ||

ಇ|| ಧ್ಯಾನಮಾಡೋ ಸಾಂಬನಾ ಮುಕ್ತಿಕೊಡುವ ನಿನಗವನಾ
ಏರು|| ನೀಚಗುಣವನ್ನು ಬಿಡು ನೀನಾ ಪೇಳುವೆ ನಿಮಗೆ ನಾನಾ
ಆಧಾರ ಮೂಲ ಹೇಳಬೇಕ ಸೀದಾ ಹೇಳದಿದ್ದರ ಆದಿ ಅಪಮಾನಾ || ೧ ||

ಇ|| ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆರು ಗುಣಾ
ಕಳೆದು ಉಳಿದಿದ್ದು ಹೇಳೋ ನೀನಾ ಕೇಳುವೆ ನಾನಾ
ಏರು|| ಅಹಂಕಾರ ಬಿಡೋ ನೀನಾ ಭಜಿಸು ಸಾಂಬನಾ
ಎಷ್ಟು ಇಟ್ಟರಿ ಒಣಡೌಲಾ ಮಾಡಿರಿ ಮೇಲಾ ನಿಮಗಿಲ್ಲೋ ಒಂದರ ಹ್ಯಾಂವಾ
ಹೇಳಬ್ಯಾಡೋ ನೀವಾ ಸಬಾದೊಳಗ ಹಲ್ಲುಕಿಸ್ತಾ || ೨ ||

ಇ|| ಆರು ಸ್ಥಲ ಆರು ಚಕ್ರ ಆರು ಪ್ರಮಾಣ ಆರು ಲಿಂಗ ಇದರರ್ಥ ಮಾಡೋ ನೀನಾ
ಸಭಾದೊಳು ನಿಂತ ಸರ್ವ ಸಭಾಕ ತಿಳುವ ಹಾಂಗ
ಏರು|| ಆರುಸ್ಥಲದ ವರ್ಣದೊಳು ಮೂಲಸ್ಥಾನ ಯಾವುದು ಹೇಳೋ
ಯಾವ ಸ್ಥಲಕ ಯವ ಚಕ್ರ ಯಾವ ಪ್ರಮಾಣ ಯಾವ ಲಿಂಗ
ಸಭಾದೊಳು ಬಂದ ಇಟ್ಟದಿ ಬಡಿವಾರ ಶೋಧನ ಮಾಡೋ ನೀನಾ || ೩ ||

ಇ|| ಹಮ್ಮಿಗಾಗಿ ಬ್ರಹ್ಮಕೆಟ್ಟಾ ಅದರಂತೆ ದೇಹ ನಷ್ಟಾ
ತಿಳಕೊಳ್ಳು ಧ್ಯಾಸ ಇಟ್ಟು ಪರಿಪೂರ್ಣವಾಗಿ
ನಿಂದ್ಯಾ ಆಡಬಾರದೋ ಮನುಷ್ಯ ಜಲುಮಾ ||
ಏರು| ಶಾಣ್ಯಾನಾಗಿ ಸಬ್ಬಾದೊಳು ಬಂದು ಹೇಳಬೇಕೋ ಉತ್ತರ ತಂದು
ಹಾಕೇನಿ ನಿಮಗೆ ತೋಡಿ | ಹಾರ‍್ಯಾಡಬ್ಯಾಡ ಕೋಡಿ
ಉತ್ತರಕೊಟ್ಟು ಹೋಗೋ ಲೌಡಿ ಹಾಡು ಸಭೆಮಾಡಿ ಗುಲ್ಲಾ || ೪ ||

ಇ|| ಧರೆಯೊಳು ಬಾಗಲಕೋಟಿ ಇರುವುದು ಮೋಜಿನ ಪ್ಯಾಟಿ
ಹುಡುಗರು ಹೇಳಿದ ದಾಟಿ ಹೊಡದಾಂಗ ಸಿಡಿಲಾ
ಏರು|| ವೈರಿ ಕುಂತಾನೋ ಹೌಹಾರಿ ಹಿರೇ ಮಸೂತಿವೊಳಗಾ
ಕೇಸುಪೀರ ದಸ್ತಗೀರನ ದಯಾ ನಮ್ಮ ಮ್ಯಾಲೆ ಸಂಪೂರ್ಣಾ
ಕೇಳೋ ವೈರಿ ಹಾಡೋ ನೀ ತೋಡಿ
ಹಾಡದಿದ್ದರ ನೀ ಆಗುವೆ ಹುಚ್ಚಪ್ಯಾಲಿ || ೫ ||

* * *