ದಶಕಗಳ ಹಿಂದಿನ ಮಾತು. ಗಣಕೀಕರಣಗೊಳ್ಳದ ಅಥವಾ ಅದರ ಗಾಳಿಯೂ ಸುಳಿಯದ ಒಂದು ಸಂಸ್ಥೆಯನ್ನು ಊಹಿಸಿಕೊಳ್ಳಿ. ಸಂಸ್ಥೆಯ ವ್ಯವಹಾರಗಳನ್ನು ದಪ್ಪ ಖಾತೆ ಕಿರ್ದಿಗಳಲ್ಲಿ, ಮಾನವ ಸಂಪನ್ಮೂಲ ಹಾಜರಿ ಪುಸ್ತಕಗಳಲ್ಲಿ, ಮಾರಾಟ ವಹಿವಾಟುಗಳನ್ನು ಕೈಬರಹದ ರಸೀದಿ ಪುಸ್ತಕಗಳಲ್ಲಿ ಮತ್ತು ಉದ್ಯೋಗಿಗಳೇ ಕಡತಗಳನ್ನು ಒಂದು ವಿಭಾಗದಿಂದ ಮತ್ತೊಂದಕ್ಕೆ, ಒಂದು ಮೇಜಿಂದ ಇನ್ನೊಂದಕ್ಕೆ ಸಾಗಿಸುತ್ತಿದ್ದರು.

ಈಗ ಈ ಸಂಸ್ಥೆಯ ಒಂದೊಂದೇ ವಿಭಾಗಗಳನ್ನು ಗಣಕೀಕರಣ ಮಾಡೋಣ, ಅಂದರೆ ಮಾನವ ಸಂಪನ್ಮೂಲ, ಲೆಕ್ಕಚಾರ, ಯಾದಿ, ಮಾರಾಟ ವಿಭಾಗ ಮುಂತಾದವುಗಳಲ್ಲಿ ಪ್ರತ್ಯೇಕವಾಗಿ ಗಣಕಗಳನ್ನು ಅಳವಡಿಸೋಣ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆಯ- ವ್ಯಯ ವಿವರವನ್ನು ಲೆಕ್ಕದ ತಂತ್ರಾಂಶ ಕೋಶವು ವಸ್ತುಗಳ ಯಾದಿ ಮತ್ತು ಆಸ್ತಿಯ ವಿವರಗಳನ್ನು ನೇರವಾಗಿ ಪಡೆಯದೇ ಕಾಯ್ದಿರಿಸುತ್ತದೆ, ಮಾನವ ಸಂಪನ್ಮೂಲ ತಂತ್ರಾಂಶ ಕೋಶವು ವ್ಯವಹಾರಿಕ ಅವಶ್ಯಕತೆಗಳ ಅಥವಾ ಯೋಜನೆಯ ನೇರ ವಿವರಗಳಿಲ್ಲದೆ ಕಾಯ್ದಿರಿಸುತ್ತದೆ.

ಇಲ್ಲಿ ಸಂಸ್ಥೆಯು ಸಂಪೂರ್ಣವಾಗಿ ಪರಸ್ಪರ ಯಾಂತ್ರಿಕ ಸಂಬಂಧ ಹೊಂದಿರದ ಕಾರಣ ಉದ್ಯೋಗಿಗಳೇ ಮಾಹಿತಿ ವಿನಿಮಯ ಮಾಡುತ್ತ, ಎಲ್ಲ ವಿವರಗಳನ್ನು ತಮ್ಮ ಅನುಭವದ ಆಧಾರದ ಮೇಲೆ ಒಗ್ಗೂಡಿಸಬೇಕಾಗುತ್ತದೆ. ಈ ರೀತಿಯಿಂದ ಸಂಸ್ಥೆಯಲ್ಲಿ ಎಷ್ಟೊ ಬಾರಿ ಕಡತಗಳೊಂದಿಗೆ ಮಾಹಿತಿಗಳು ಕಳೆದು ಹೋಗುವ ಸಂದರ್ಭ ಮತ್ತು ಗೌಪ್ಯತೆ ಕಾಪಾಡುವಲ್ಲಿ ವಿಫಲವಾಗುವ ಜೊತಗೆ ವ್ಯವಹಾರವು ಮಂದಗತಿಯಲ್ಲಿ ಸಾಗುವ ಕಾರಣ ಕಾರ್ಯನಿರ್ವಹಣೆಯ ಸಮಯವನ್ನು ನಿಯಂತ್ರಿಸಲು ಕಷ್ಟಕರವಾಗಿರುತ್ತಿತು.

ಉದ್ಯಮ ಸಂಪನ್ಮೂಲ ಯೋಜನೆ(ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್-ಇ.ಆರ್.ಪಿ.)

ಒಂದು ಉದ್ಯಮಮಟ್ಟದ ಎಲ್ಲ ತಂತ್ರಾಂಶ ಕೋಶಗಳನ್ನು ಸಂಯೋಜಿಸುವ ಮತ್ತು ಈ ಮೇಲಿನ ನ್ಯೂನತೆಗಳ ಸರಿಪಡಿಸುವ ಒಂದು ಪರಿಕಲ್ಪನೆ. ಈ ಪರಿಕಲ್ಪನೆಯ ಅಧಾರಿತ ಒಂದು ಇ.ಆರ್.ಪಿ. ವ್ಯವಸ್ಥೆಯ ವಿವಿಧ ಕೋಶಗಳು ಒಂದೇ ಅಥವಾ ಅನೇಕ ಮಾರಾಟ ಸಂಸ್ಥೆಯದ್ದಾಗಿದ್ದರೂ ಕೂಡ, ಸಂಸ್ಥೆಯ ಸಂಪೂರ್ಣ ತಂತ್ರಾಂಶ ಅವಶ್ಯಕತೆಗಳನ್ನು ಪೂರೈಸಬಲ್ಲದ್ದಾಗಿರುತ್ತದೆ. ಎಲ್ಲ ಕೋಶಗಳು ಒಂದೇ ದತ್ತಾಂಶವನ್ನು ಹೊಂದುವ ರಚನೆಯಲ್ಲಿ ಈ ಪರಿಕಲ್ಪನೆ ಆಧರಿಸಿದೆ. ವಿವಿಧ ಕೋಶಗಳು ತನ್ನ ತಯಾರಿಕೆಯ ಸಂಸ್ಥೆಗೆ ಅವಲಂಬಿತವಾಗಿ ಕೆಲವೊಮ್ಮೆ ಹಲವು ವೇದಿಕೆಯ ಮತ್ತು ತಂತ್ರಜ್ಞಾನದ ಆಧಾರಿತವಾಗಿದ್ದರೂ, ಒಂದು ಉದ್ಯಮದ ತಂತ್ರಾಂಶ ಅವಶ್ಯಕತೆಯನ್ನು ಸಂಪೂರ್ಣವಾಗಿ ಪೂರೈಸಬಲ್ಲವು.

ಇ.ಆರ್.ಪಿ. ಎಂಬುದು ಎಂ.ಆರ್.ಪಿ (ವಸ್ತುಗಳ ಬೇಡಿಕೆಯ ಯೋಜನೆ-Materials Requirements Planning) ಯ ವಿಸ್ತರಣೆಯಾಗಿದ್ದು, ಇದು ತಯಾರಿಕೆ ಉದ್ದಿಮೆಯಿಂದ ರೂಪುಗೊಂಡಿರುತ್ತದೆ. ಇಂದು ಇದು ಯಾವುದೇ ತರಹದ ಮತ್ತು ಗಾತ್ರದ ಸಂಸ್ಥೆಯ ವ್ಯಾಪಾರ ವಹಿವಾಟಿನ ಸಮಸ್ಯೆಗಳಿಗೆ ಪರಿಹಾರವೆಂದು ಪರಿಗಣಿಸಲ್ಪಟ್ಟಿದೆ.

ಇ.ಆರ್.ಪಿ.ಯ ಕೆಲವು ಗುಣವಿಶೇಷಗಳು ಕೆಳಕಂಡಂತಿವೆ:

  • ವಿವಿಧ ಕಾರ್ಯಶೀಲ ವಿಭಾಗಗಳನ್ನು ಸಮನ್ವಯಗೊಳಿಸುತ್ತ, ಸರಿಯಾದ ಸಂಪರ್ಕ, ಉತ್ಪಾದನೆ ಮತ್ತು ಸಾಮರ್ಥ್ಯವನ್ನು ಕಾಯ್ದುಕೊಳ್ಳುತ್ತದೆ. ಸರಕು ವಹಿವಾಟುಗಳ ಸಂಬಂಧಿತ ಆರ್ಥಿಕ ದಾಖಲೆಗಳು ಅದರಲ್ಲಿಯೇ ಅಂತರ್ಗತವಾಗಿ ಸಿದ್ಧಗೊಳ್ಳುತ್ತವೆ. ಆದಾಗ್ಯೂ ಖರೀದಿ ಕ್ರಮಕ್ಕೆ ಅನುಮತಿ, ಸಂಸ್ಥೆಯ ಹಲವು ಹಂತಗಳಲ್ಲಿನ ಅನುಮೋದನೆಯ ಪರಿಮಿತಿ ಮುಂತಾದುವುಗಳು ಗ್ರಾಹಕೀಯಗೊಳಿಸಿದ ವ್ಯವಹಾರ ಮತ್ತು ವಹಿವಾಟಿನ ಅಂಗವಾಗಿದ್ದು, ಇ.ಆರ್.ಪಿ.ಯ ‘ಕಾರ್ಯಚಲನೆ’ (Workflow) ನಿರ್ವಹಿಸುತ್ತದೆ. ‘ಕಾರ್ಯಚಲನೆ’ ವಿವಿಧ ತಾಂತ್ರಿಕತೆಗಳ ಮೇಲೆ ರಚನೆಗೊಳ್ಳಬಹುದಾದ ಕಾರ್ಯ ಅಥವಾ ಚಟುವಟಿಕೆಗಳ ವಿವೇಚನಾಯುಕ್ತ ಹರಿವು. ಆದಾಗ್ಯೂ ಹಲವು ಕಾರ್ಯಚಲನೆಗಳು ಒಂದೇ ಮಾದರಿಯನ್ನಾಧರಿಸಿ ರಚನೆಗೊಂಡಿದ್ದು, ಇತರೆ ಇ.ಆರ್.ಪಿ.ಯ ಕಾರ್ಯಚಲನೆಯೊಂದಿಗೆ ಹೊಂದಾಣಿಕೆಯಿಂದ ವ್ಯವಹರಿಸುತ್ತದೆ.
  •  ಖರೀದಿ ಕ್ರಮದ ವಿವರ, ಯಥಾರ್ಥದಲ್ಲಿ ಪೂರೈಕೆಯಾದ ಸರಕು ಮತ್ತು ನಂತರ ಪಡೆದ ಧಾರಣೆಪಟ್ಟಿ, ಈ ಮೂರರ ಹೊಂದಾಣಿಕೆ, ಸರಕು ಮತ್ತು ಹಣಕಾಸಿನಡಿಯಲ್ಲಿ ಅತ್ಯಮೂಲ್ಯವಾಗಿದ್ದು ಇ.ಆರ್.ಪಿ.ಯು ತಂತಾನೆ ಮಾಡಬಲ್ಲದು. ಇ.ಆರ್.ಪಿ.ಯು ಖರೀದಿಯ ಆದೇಶದಿಂದ ಹಣ ಸಂದಾಯದವರೆಗಿನ ವ್ಯವಹಾರದವರೆಗೆ ಪ್ರತಿಯೊಂದು ಮಾಹಿತಿಯನ್ನು ಒಂದು ವ್ಯವಹಾರಿಕ ಕೊಂಡಿಯಾಗಿ ರಚಿತವಾದ ಕಾರಣ, ಇದರ ನಡುವಿನ ಯಾವುದೇ ವಹಿವಾಟಿನ ವಿವರವನ್ನು ಯಾವುದೇ ಸಮಯದಲ್ಲಿ ಪಡೆಯಬಹುದಾಗಿರುತ್ತದೆ.
  • ಇ.ಆರ್.ಪಿ. ವ್ಯವಸ್ಥೆಯು ಎಲ್ಲ ಮಾಹಿತಿಯನ್ನು ಒಂದು ಕಡೆ ಕೇಂದ್ರೀಕರಿಸುತ್ತದೆ. ಇದರಿಂದಾಗಿ ಬದಲಾವಣೆಗಳ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಬರುವುದಿಲ್ಲ. ಮಾತ್ರವಲ್ಲದೆ, ತುಂಬ ಮಹತ್ವದ ಅಂಶಗಳು ಕಳೆದು ಹೋಗುವ ಸಂಭವವನ್ನು ತಪ್ಪಿಸುತ್ತದೆ. ಹೀಗೆ ಎಲ್ಲ ವಹಿವಾಟು ಮತ್ತು ದಾಖಲೆಗಳ ತರ್ಕಬದ್ಧ ಸಂಬಂಧವನ್ನು ಸುಲಭವಾಗಿ ಕಲ್ಪಿಸುವಲ್ಲಿ ಅನುವು ಮಾಡಿಕೊಡುತ್ತದೆ.
  • ಹಣಕಾಸು, ವೈಯಕ್ತಿಕ ವಿವರ, ವಹಿವಾಟಿನ ನಿಯಂತ್ರಣ ಹಾಗೂ ಕಾರ್ಯಭಾರದ ವಿಂಗಡಣೆಯಂತಹ ಬಹುಮುಖ್ಯ ಮಾಹಿತಿಗಳ ಕಾಯ್ದಿರಿಸುವಿಕೆ ಇ.ಆರ್.ಪಿ. ವ್ಯವಸ್ಥೆಯ ಅತ್ಯವಶ್ಯಕ ಅಂಶ. ಪ್ರತಿಯೊಬ್ಬರ ಪಾತ್ರ, ಕರ್ತವ್ಯದ ವ್ಯಾಪ್ತಿ, ಹಣಕಾಸಿನ ಅಂಗೀಕರಣದಲ್ಲಿ ಪರಿಮಿತಿ, ಸಂಬಂಧಿತ ಮಾಹಿತಿಯ ಮತ್ತು ವಹಿವಾಟಿನ ನಿಯಂತ್ರಣವನ್ನು ಇ.ಆರ್.ಪಿ. ವ್ಯವಸ್ಥೆ ಹೊಂದಿರಬೇಕು. ಹಾಗೆಯೇ ಒಂದು ವ್ಯವಸ್ಥೆಯಿಂದ ಮತ್ತೊಂದಕ್ಕೆ ದತ್ತಾಂಶವು ಸಂಚರಿಸುವ ಸಂದರ್ಭದಲ್ಲಿ  ಮಾಹಿತಿಯು ಸೊರಿಕೆಯಾಗದೆ ಸುರಕ್ಷಿತವಾಗಿರಬೇಕು.

ಇ.ಆರ್.ಪಿ. ವ್ಯವಸ್ಥೆಯು ಮಾದರಿಯಲ್ಲಿ ಮಾರಾಟ, ವಿತರಣೆ, ಸಾಗಾಣಿಕೆ, ದಾಖಲೆಪಟ್ಟಿ, ಮಾನವ ಸಂಪನ್ಮೂಲ, ಕಾರ್ಯಯೋಜನೆ, ಲೆಕ್ಕಪತ್ರ ಮತ್ತು ನಿಯಂತ್ರಣದಂತಹ ಕೋಶಗಳನ್ನು ಹೊಂದಿರುತ್ತದೆ. ಪರಸ್ಪರ ಸಂಬಂಧ ಹೊಂದಿರುವ ಕೋಶಗಳಿಂದ, ಅಂದರೆ ಮಾರಾಟ, ವಿತರಣೆ, ಪ್ರಚಾರ, ಪೂರೈಕೆ, ತಯಾರಿಕೆ, ಯಾದಿಯ ಉಸ್ತುವಾರಿ, ಹಣಕಾಸು, ಮಾನವ ಸಂಪನ್ಮೂಲ, ಯೋಜನೆಯ ರಚನೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಿಕೆ ವಿಧಾನಗಳಂತವುಗಳನ್ನು ಕೇಂದ್ರೀಕೃತವಾಗಿ ವ್ಯವಹಾರಕ್ಕೆ ಅನುಗುಣವಾಗಿ ನಿರ್ವಹಿಸಬಹುದು.

ಈ ರೀತಿಯ ವಿಭಿನ್ನ ಕೋಶಗಳ ಬಳಕೆಯಿಂದ ಆರ್ಥಿಕ ಮತ್ತು ಲೆಕ್ಕ ಪತ್ರಗಳ ದಾಖಲೆಗಳ ಕೋಶ, ಒಂದು ಸಂಸ್ಥೆಯಿಂದ ಪಡೆದು ಮತ್ತು ಮಾನವ ಸಂಪನ್ಮೂಲದ ಕೋಶವು ಇನ್ನೊಂದು ಸಂಸ್ಥೆಯದ್ದಾಗಿರಬಹುದು. ಒಮ್ಮೊಮ್ಮೆ ಕೆಲವು ಕೋಶಗಳನ್ನು ಮೂರನೆಯ ಸಂಸ್ಥೆಯಿಂದ ಗುತ್ತಿಗೆ ರೂಪದಲ್ಲಿ ಕಾರ್ಯಪ್ರವರ್ತನೆಗೊಳಿಸಬಹುದು. ಈ ಮಾದರಿಯಲ್ಲಿ ಒಂದರ ಬದಲು ಮತ್ತೊಂದು ಕೋಶವನ್ನು ಸುಲಭವಾಗಿ ಬಳಸಲು ವಿಫುಲ ಅವಕಾಶ ಒದಗುತ್ತದೆ. ಅಂದರೆ ಒಂದೇ ಸಂಸ್ಥೆಯಿಂದ ಎಲ್ಲ ಕೋಶಗಳನ್ನು ಕೊಂಡುಕೊಳ್ಳುವ ನಿರ್ಬಂಧವಿರುವುದಿಲ್ಲ. ಅಲ್ಲದೆ, ಇದು ಹಂತ- ಹಂತವಾಗಿ ಕಾರ್ಯರೂಪಕ್ಕೆ ತರುವ ಅವಕಾಶವನ್ನು ಕಲ್ಪಿಸುತ್ತದೆ. ಹಾಗಾಗಿ ಇ.ಆರ್.ಪಿ. ವ್ಯವಸ್ಥೆಯು ಹೊಸ ಅವಶ್ಯಕತೆಗಳನ್ನು ಪೂರೈಕೆ ಮಾಡುವ ಸಾಮರ್ಥ್ಯ ತನ್ನದರಲ್ಲೆ ಹೊಂದಿರಬೇಕು ಹಾಗೂ ಮತ್ತೊಂದು ವ್ಯವಸ್ಥೆಯೊಂದಿಗೆ ಅಡಚಣೆಗಳಿಲ್ಲದೆ ಹೊಂದಿಕೊಳ್ಳುವ ವಿಶೇಷ ಗುಣವನ್ನು ಹೊಂದಿರಬೇಕಾಗುತ್ತದೆ.

ಇ.ಆರ್.ಪಿ. ತಯಾರಿಕೆ ಸಂಸ್ಥೆಗಳು ಅತ್ಯುತ್ತಮ ವ್ಯಾಪಾರಿ ಕಾರ್ಯವಿಧಾನ ಮತ್ತು ಗುಣಮಟ್ಟ ಕಾರ್ಯತಂತ್ರಗಳನ್ನಾಧರಿಸಿದ ವ್ಯವಸ್ಥೆಯನ್ನು ರೂಪಿಸಿರುತ್ತವೆ. ಆದರೂ ಬಹಳಷ್ಟು ಸಂಸ್ಥೆಗಳ ವ್ಯವಹಾರ ಮತ್ತು ಕಾರ್ಯವೈಖರಿ ಭಿನ್ನವಾಗಿರುವ ಕಾರಣ ಇ.ಆರ್.ಪಿ. ವ್ಯವಸ್ಥೆಯನ್ನು ಹೆಚ್ಚು ಬದಲಾಯಿಸದೆ ಅಳವಡಿಸಲು ಶ್ರಮಿಸಬೇಕಾಗುತ್ತದೆ ಮತ್ತು ಹಾಗೆಯೇ ಮುಂದೆ ಸುಲಭವಾಗಿ ಮೇಲ್ಮಟ್ಟಕ್ಕೇರಿಸುವ ಅಥವಾ ನವೀಕರಿಸಲು ಅನುಕೂಲವಾಗುವಂತೆ ಮಾಡಬೇಕಾಗುತ್ತದೆ.

ಯಾವುದೇ ವ್ಯವಸ್ಥೆಯನ್ನು ರಚಿಸಿ ಕಾರ್ಯರೂಪಕ್ಕೆ ತರುವ ಮೊದಲು ಅದರ ವಿಶ್ಲೇಷಣೆ ಬಹಳ ಮುಖ್ಯ. ವಿಶ್ಲೇಷಣೆಯು ವಿನ್ಯಾಸದ ದೃಷ್ಟಿಕೋನದಿಂದ, ಇಂದು ರೂಢಿಯಲ್ಲಿರುವ ವ್ಯಾಪಾರ ಪ್ರಕ್ರಿಯೆ, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವಿಕೆ, ದತ್ತಾಂಶ ವರ್ಗಾವಣೆ ಮತ್ತು ಕಾರ್ಯರೂಪಕ್ಕೆ ತರುವ ಪಥದ ಸಮಯಗಳಂತಹ ಅಂಶಗಳನ್ಮ್ನಒಳಗೊಂಡಿರಬೇಕು. ತಾಂತ್ರಿಕ ಅಡ್ಡಿ ಹಾಗೂ ವ್ಯವಸ್ಥೆಯ ವೆಚ್ಚಕಿಂತ ಯೋಜನೆಯ ಅಪಯಶಸ್ಸು ತಪ್ಪು ಅಥವಾ ಕಡಿಮೆ ಗುಣಮಟ್ಟದ ವಿಶ್ಲೇಷಣೆಯಿಂದ ಹೆಚ್ಚು ಸಂಭವಿಸುತ್ತದೆ. ಹಾಗಾಗಿ ಸಲಹೆ, ವಿಶ್ಲೇಷಣೆ, ತಂತ್ರಜ್ಞಾನ ಅಳವಡಿಸಿ ಇ.ಆರ್.ಪಿ.ಯನ್ನು ಕಾರ್ಯರೂಪಕ್ಕೆ ತರುವುದು ನಂತರ ಅವುಗಳ ದಿನನಿತ್ಯ ನಿಗಾ ಮತ್ತು ವ್ಯವಸ್ಥಿತಗೊಳುಸುವಿಕೆ, ಮಾಹಿತಿ ತಂತ್ರಜ್ಞಾನದ ಬಹುಮುಖ್ಯ ಸೇವೆಗಳಾಗಿರುತ್ತವೆ.

ಇಂದು ಇ.ಆರ್.ಪಿ ಮಾರುಕಟ್ಟೆಯಲ್ಲಿ ಎಸ್.ಎ.ಪಿ., ಅರೇಕಲ್, ಮತ್ತು ಸೇಜ್ ಸಂಸ್ಥೆಗಳು ಮೂಂಚೂಣಿಯಲ್ಲಿವೆ ಮತ್ತು ಇವುಗಳ ಅತ್ಯಾಧುನಿಕ ವ್ಯವಸ್ಥೆಗಳಲ್ಲಿ ಅನುಕ್ರಮವಾಗಿ ‘ಎಸ್.ಎ. ಪಿ. ಇ.ಸಿ.ಸಿ’ (SAP ECC), ‘ಅರೇಕಲ್ ಇ-ಬಿಸಿನೆಸ್ ಸೂಟ್’ (Oracle e-business suite) ಮತ್ತು ‘ಎಸ್.ಎ.ಜಿ.ಇ. ಇ.ಆರ್.ಪಿ. ಎಕ್ಸ್ಪಿ’ಗಳಾಗಿವೆ (SAGE ERP X3).

ಇ.ಆರ್.ಪಿ.ಯಿಂದ ಸಂಪೂರ್ಣ ಯಾಂತ್ರಿಕತೆ ಅಪೇಕ್ಷಿಸುವ ಸಂಸ್ಥೆಗಳು, ಪೂರೈಕೆದಾರರ ವ್ಯವಸ್ಥೆಗಳಿಂದ ಹಿಡಿದು ಬ್ಯಾಂಕಿನ ಮತ್ತು ಗ್ರಾಹಕರ ವ್ಯವಸ್ಥೆಗಳವರೆಗೆ ನೇರ ಸಂಪರ್ಕ ಹೊಂದಬೇಕಾಗುತ್ತದೆ. ಈ ಸಂಪರ್ಕಜಾಲದಿಂದ ಮಾಹಿತಿ ಮತ್ತು ದತ್ತಾಂಶವನ್ನು ಸಂಕೀರ್ಣಗೊಳಿಸಲಾಗುತ್ತದೆ. ಹಾಗೆಯೇ ಈ ಜಾಲವನ್ನು ಸದಾ ಕಾರ್ಯೋನ್ಮುಖವಾಗಿರುವಂತೆ ಮಾಡುವುದು ಕಠಿಣ ಕೆಲಸ. ಇಂತಹ ಸಮಸ್ಯೆಗಳಿಗೆ ‘ಉದ್ಯಮ  ವ್ಯವಸ್ಥೆಗಳ ಸಮನ್ವಯ’ (ಇ.ಎ.ಐ. – Enterprise Application Integration) ರಚನೆಯು ಸಹಾಯಕ್ಕೆ ಬರುತ್ತದೆ. ಈ ರಚನೆಯ ವ್ಯವಸ್ಥೆಗಳು ವಿವಿಧ ತಾಂತ್ರಿಕತೆಗಳ ಮಧ್ಯ ಸಂಪರ್ಕ ಕಲ್ಪಿಸುವ ಮಧ್ಯವರ್ತಿಯಾಗಿ ಕೆಲಸ ಮಾಡಿ, ಕಾರ್ಯಚಲನೆ ಮತ್ತು ದತ್ತಾಂಶಗಳನ್ನು ಅರ್ಥಪೂರ್ಣವಾಗಿ ವಿನಿಮಯ ಮಾಡಿಕೊಳ್ಳಲು ಅನುವು ಮಾಡುತ್ತದೆ.

ಸಾಮಾನ್ಯವಾಗಿ ಈ ರೀತಿ ತಾಂತ್ರಿಕತೆಗಳ ಮಧ್ಯ ಸಂಪರ್ಕ ಕಲ್ಪಿಸುವುದು ಕಷ್ಟಸಾಧ್ಯವೆನಿಸುತ್ತದೆ. ಏಕೆಂದರೆ ವ್ಯವಸ್ಥೆಗಳು ಮತ್ತು ದತ್ತಾಂಶ ವಿವಿಧ ಹಾದಿಯ ವಿಭಿನ್ನ ಚೌಕಟ್ಟಿನ ಮೂಲಕ ವಿವಿಧ ಭಾಷೆಗಳಲ್ಲಿ ರೂಪುಗೊಂಡು ವಿವಿಧ ಆಕಾರದಲ್ಲಿ ರೂಪುಗೊಂಡಿರುತ್ತವೆ. ಸಣ್ಣ ಉದಾಹರಣೆಗೆ, ಒಂದು ವ್ಯವಸ್ಥೆ ದಿನಾಂಕವನ್ನು ದಿನ/ತಿಂಗಳು/ವರ್ಷ ರೂಪದಲ್ಲಿ ಸೂಚಿಸಿದರೆ, ಮತ್ತೊಂದು ವ್ಯವಸ್ಥೆ ತಿಂಗಳು/ದಿನ/ವರ್ಷ ರೂಪದಲ್ಲಿ ಸೂಚಿಸಬಹುದು. ಹೀಗಾಗಿ ಇ.ಎ.ಐ. ಈ ಅಂಕಿ- ಅಂಶಗಳನ್ನು ಅರ್ಥೈಸಿ, ಸರಿಯಾದ ಹಾದಿಯಲ್ಲಿ ಮತ್ತು ತಲುಪಬೇಕಾದ ವ್ಯವಸ್ಥೆಯ ಗುಣಮಾದರಿಯಲ್ಲಿ ಬದಲಾಯಿಸುವ ಕಠಿಣ ಕಾರ್ಯ ಮಾಡುತ್ತದೆ.

ಇ.ಎ.ಐ. ಇಂದು ಬಳಕೆಯಲ್ಲಿರುವ ಕಾರ್ಯವೈಖರಿಗೆ ಹೆಚ್ಚು ಅನುಕೂಲತೆಯನ್ನುಂಟು ಮಾಡಿಕೊಡುವುದು ಉದ್ದೇಶ. ಇದು ಸಮರ್ಪಕವಾಗಿ ಬಳಕೆಯಾಗದಿದ್ದರೆ ಇಂದು ಲಭ್ಯವಿರುವ ಸಂಕೀರ್ಣತೆಗೆ ಹೊಸ ತೊಂದರೆಯಾಗಿ ಸೇರ್ಪಡೆಯಾಗುತ್ತದೆ. ಇ.ಆರ್.ಪಿ. ತಯಾರಿಕೆಯ ಸಂಸ್ಥೆಗಳು ಇ.ಆರ್.ಪಿ. ವ್ಯವಸ್ಥೆಯೊಂದಿಗಿಯೇ ಒಗ್ಗೂಡಿಸಿದ ಅಥವಾ ಸ್ವತಂತ್ರವಾದ ಇ.ಎ.ಐ. ವ್ಯವಸ್ಥೆಯನ್ನು ದೊರಕಿಸಿಕೊಟ್ಟಿರುತ್ತಾರೆ. ಇ.ಎ.ಐ. ವ್ಯವಸ್ಥೆಗಳಲ್ಲಿ ‘ಟಿ.ಸಿಬಿ.ಸಿ.ಒ.’ (TIBCO), ‘ಮೈಕ್ರೋಸಾಫ್ಟ್ ಬಿಜ್ ಟಾಕ್ ಸರ್ವರ್'(Microsoft Biz Talk server) ಮತ್ತು ‘ಅರೇಕಲ್ ಬಿ.ಪಿ.ಇ.ಎಲ್ ಪ್ರೊಸೆಸ್ ಮ್ಯಾನೆಜರ್'(Oracle BPEL process manager) ಮುಂಚೂಣಿಯಲ್ಲಿವೆ.

ಇ.ಆರ್.ಪಿ ಮತ್ತು ವ್ಯವಹಾರ ಸಂಸ್ಥೆಯ ಒಂದು ಚಿತ್ರಣ

ಈ ಮೇಲಿನ ವಿಷಯಗಳನ್ನಾಧರಿಸಿ, ಉದಾಹರಣೆಯಾಗಿ ಒಂದು ಕರಿಸೆಲ್ಲರ್ ಸಂಸ್ಥೆಗೆ ಸಂಪೂರ್ಣವಾಗಿ ಇ.ಆರ್.ಪಿ ಯನ್ನು ಅಳವಡಿಸಿದ ನಂತರ ಅದರ ಕಾರ್ಯವೈಖರಿಯನ್ನು ವಿಶ್ಲೇಷಿಸೋಣ. ಈ ರಿಸೆಲ್ಲರ್ ಕಾರ್ಯ ಹಲವು ಸಣ್ಣ ಸಂಸ್ಥೆಗಳಿಂದ ಬಿಡಿ ಭಾಗಗಳನ್ನು ಕೊಂಡು ಸಂಯೋಜಿಸಿ ತನ್ನ ಗ್ರಾಹಕರಿಗೆ ಮಾರಾಟ ಮಾಡುವುದು. ಹಾಗಾಗಿ ಈ ಸಂಸ್ಥೆಯ ಮಾರಾಟಗಾರರಿಂದ ಗ್ರಾಹಕರವರೆಗೆ ಗಣಕೀಕೃತಗೊಂಡು ಇ.ಅರ್.ಪಿ ವ್ಯವಸ್ಥೆಯಿಂದ ಸಂಪೂರ್ಣ ಯಾಂತ್ರಿಕರಣವಾಗಿರುವಂತೆ ಕಲ್ಪಿಸಿಕೊಳ್ಳೋಣ.

ಗ್ರಾಹಕರ ಬೇಡಿಕೆ ಮತ್ತು ಯಾದಿ ಅನುಸರವಾಗಿ ಇ.ಆರ್.ಪಿ.ಯಲ್ಲಿ ಖರೀದಿ ಆದೇಶ ರೂಪಿಸಲಾಗುತ್ತದೆ. ಆದೇಶದ ಅನುಮೋದನೆ ಇ.ಆರ್.ಪಿ.ಯ ‘ಕಾರ್ಯಾಚಲನೆ’ಯಲ್ಲಿ ನಿರ್ವಾಹಣೆಯಾದ ನಂತರ ತನ್ನ ಬಿಡಿ ಭಾಗದ ಮಾರಾಟ ಸಂಸ್ಥೆಗೆ ಇ.ಎ.ಐ. ಮೂಲಕ ರವಾನಿಸುತ್ತದೆ. ಬಿಡಿಭಾಗಗಳು ರಿಸೆಲ್ಲರ್ ಸಂಸ್ಥೆಗೆ ತಲುಪಿದ ಬಳಿಕ ಬಿಡಿಭಾಗ ಪಾವತಿಯ ವಿವರಪಟ್ಟಿ ಮತ್ತು ಖರೀದಿಪಟ್ಟಿ ರೂಪಿಸಲಾಗುತ್ತದೆ. ಹಲವು ಸಂಸ್ಥೆಗಳಿಂದ ಖರೀದಿಪಟ್ಟಿ ಹಲವು ಹಂತಗಳಲ್ಲಿ ನೇರವಾಗಿ ಆಗಮಿಸುವುದಾದರೂ, ಇದನ್ನು ಸುಲಭಗೊಳಿಸಬೇಕೆಂದರೆ, ಒಂದು ಮೂರನೆಯ ಸಂಸ್ಥೆಯು ತನ್ನ ಅಂತರ್ಜಾಲದಲ್ಲಿ ಈ ಹಲವು ಸಣ್ಣ ಸಂಸ್ಥೆಗಳಿಂದ ಖರೀದಿ ವಿವರವನ್ನು ಪಡೆದುಕೊಂಡು ರಿಸೆಲ್ಲರ್ ನ ಇ.ಆರ್.ಪಿ. ವ್ಯವಸ್ಥೆಯ ಮಾದರಿಯ ಅನುಗುಣವಾಗಿ ಖರೀದಿಪಟ್ಟಿ ಸಂಯೋಜಿಸಿ ರವಾನಿಸಲಾಗುತ್ತದೆ.

ಬಿಡಿ ಭಾಗ ಮಾರಾಟಗಾರರ ವಿಳಾಸ ಮತ್ತು ಬ್ಯಾಂಕಿನ ವಿವರಗಳು ರಿಸೆಲ್ಲರ್ ನ ಇ.ಆರ್.ಪಿ. ಯಲ್ಲಿ ಲಭ್ಯವಿರುತ್ತದೆ. ಈ ವಿವರಗಳನ್ನಾಧರಿಸಿ ಖರೀದಿ ಆದೇಶ, ತಲುಪಿದ ವಿವರ ಹಾಗು ಖರೀದಿಪಟ್ಟಿಯನ್ನು ಊರ್ಜಿತಗೊಳಿಸಲಾಗುತ್ತದೆ. ಇ.ಆರ್.ಪಿ.ಯ ‘ಕಾರ್ಯಾಚಲನೆ’ ನೆರವಿನಿಂದ ಹಣ ಪಾವತಿಸುವ ಅನುಮೋದನೆ ಪಡೆದು ಯಾಂತ್ರಿಕವಾಗಿ ಮಾರಾಟಗಾರರ ಬ್ಯಾಂಕಿನ ಖಾತೆಗೆ ಹಣ ಪಾವತಿಸಲು ಇ.ಎ.ಐ. ಮೂಲಕ ಆದೇಶಿಸುತ್ತದೆ. ಇದೆ ರೀತಿಯಲ್ಲಿ ರಿಸೆಲ್ಲರ್-ನ ಗ್ರಾಹಕರ ಆದೇಶದ ಮೇರೆಗೆ ಸಾಮಗ್ರಿ ಮತ್ತು ದರಪಟ್ಟಿಯನ್ನು ರವಾನಿಸಿದ ಬಳಿಕ, ತನ್ನ ಬ್ಯಾಂಕಿನ ಖಾತೆಗೆ ಯಾಂತ್ರಿಕವಾಗಿ ಗ್ರಾಹಕರಿಂದ ಹಣ ಪಾವತಿಯಾಗಲು ಇ.ಆರ್.ಪಿ. ಮತ್ತು ಇ.ಎ.ಐ. ನೆರವಾಗುತ್ತದೆ.

ಈ ಎಲ್ಲ ವಹಿವಾಟಿನ ವಿವರವು ಆಯಾ ಕೋಶಗಳ ಅನುಷಂಗಿತ ಖಾತೆಗಳಲ್ಲಿ ಲಭ್ಯವಿರುತ್ತವೆ. ಹಾಗಾಗಿ ಈ ರಿಸೆಲ್ಲರ್ ಸಂಸ್ಥೆಯು ನೇರವಾಗಿ ಸಿಗುವ ಮಾರಾಟಗಾರರ/ಗ್ರಾಹಕರ ವಿವರಗಳು, ಯಾದಿಯ ಸ್ಥಿತಿಗತಿ, ಆರ್ಥಿಕ ತಖ್ತೆಯ ವಿವರ ಹಾಗೂ ವೇಗದ ವಹಿವಾಟಿನ ಪ್ರಯೋಜನದಿಂದ, ತನ್ನ ವ್ಯವಹಾರಿಕ ಮತ್ತು ಏಳಿಗೆಯನುಸಾರ ಯಾವುದೇ ಸಮಯದಲ್ಲಿ ನಿರ್ಣಯ ತಗೆದುಕೊಳ್ಳಲು ಇ.ಆರ್.ಪಿ. ಯಿಂದ ಸಹಕಾರಿಯಾಗುತ್ತದೆ.