ಸಂಗೀತ, ಸಾಹಿತ್ಯ, ಚಿತ್ರ, ಶಿಲ್ಪ ಮತ್ತು ನಾಟ್ಯ-ಮುಂತಾದ ಲಲಿತ ಕಲೆಗಳ ಕುರಿತು ಲೇಖನ, ವಿಮರ್ಶೆ, ಪರಾಮರ್ಶೆ ಮಾಡುತ್ತ ವಿದ್ವತ್‌ ಲೋಕದಲ್ಲಿ ಅಪಾರ ಹೆಸರು ಸಂಪಾದಿಸಿರುವ ಶ್ರೀ ಇ.ಆರ್. ಸೇತೂರಾಮ್‌ ಅವರು ಕರ್ನಾಟಕ ಕಂಡ ಅಪೂರ್ವ ‘ಕಲಾ ಪರಿಚಾರಕ’ಕರು. ನಂಜನಗೂಡಿನಲ್ಲಿ ೧೯೧೮ರಲ್ಲಿ ಕಲಾಭಿಮಾನಿಗಳ ಕುಟುಂಬದಲ್ಲಿ ಜನಿಸಿದ ಶ್ರೀ ಇ. ಆರ್. ಸೇತೂರಾಂ ಅವರು ಮೈಸೂರು ಮಹಾರಾಜ ಕಾಲೇಜಿನ ಪದವೀಧರರು. ಸ್ವಾತಂತ್ಯ್ರ ಸಂಗ್ರಾಮದಲ್ಲೂ ಭಾಗಿ. ಪ್ರಾಯದಲ್ಲೇ ಟಿ.ಪಿ. ಕೈಲಾಸಂರ ಗರಡಿಯಲ್ಲಿ ಪಳಗಿ, ಅಭಿನಯ-ನಿರ್ದೇಶನಗಳಲ್ಲಿ ಬೆಳಗಿದರು. ಮುಂಬಯಿಯ ಹೆಸರಾಂತ ಪ್ರಕಟಣ ಸಂಸ್ಥೆಯ ಸಂಪಾದಕರಾಗಿ, ‘ಪ್ರಜಾವಾಣಿ’ಯ ಸುದ್ದಿಸಂಪಾದಕರಾಗಿ, ‘ಸುಧಾ’ ಪತ್ರಿಕೆಯ ಮೊದಲ ಸಂಪಾದಕರಾಗಿ; ನಿವೃತ್ತಿಯ ನಂತರ ‘ಮಾರ್ಚ್ ಆಫ್‌ ಕರ್ನಾಟಕ’ದ ಸಲಹಾ ಸಂಪಾದಕರಾಗಿ, ಕನ್ನಡ-ಇಂಗ್ಲೀಷ್‌ ಪತ್ರಿಕೋದ್ಯಮ ದಿಗ್ಗಜರಾಗಿದ್ದಾರೆ. ಬಿ.ಬಿ.ಸಿ.ಯ ಎರಡು ಸಾಕ್ಷ್ಯ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸಂಗೀತ, ನೃತ್ಯ, ಶಿಲ್ಪ, ಚಿತ್ರಕಲೆಗಳ ಕಲಾವಿದರ ನಿಕಟ ಸಂಪರ್ಕ ಹೊಂದಿ, ಅವುಗಳನ್ನು ಕುರಿತು ಹಲವಾರು ಮೌಲಿಕ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸಂಗೀತಗಾರರ ಸಂಘಟನೆಗೂ ಶ್ರಮಿಸಿದ್ದಾರೆ. ಈ ಹಿರಿಯ ಕಲಾಭಿಮಾನಿ, ಸಹೃದಯ ವಿಮರ್ಶಕ ಸಂಗೀತಜ್ಞರಿಗೆ ಬೆಂಗಳೂರು ಗಾಯನ ಸಮಾಜ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಿಕೋದ್ಯೋಗಿಗಳ ಸಂಘಗಳಿಂದ ಸನ್ಮಾನವೂ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ‘ಕರ್ನಾಟಕ ಕಲಾ ತಿಲಕ’ (೧೯೯೦-೯೧ರ) ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.