ನಾವು ಬೆಂಗಳೂರಿನಂತರಹ ಮಹಾನಗರಗಳಲ್ಲಿ ಹತ್ತಾರು ಮೆಗಾಮೇಳ-ಪ್ರದರ್ಶನಗಳನ್ನು ಕಂಡಿದ್ದೇವೆ. ಮಾವು, ಹಲಸು, ದ್ರಾಕ್ಷಿ, ಸೀರೆ, ಕಾರು, ಹೀಗೆ ಯಾವುದೇ ವಿಷಯದಲ್ಲಾದರೂ ಮೇಳ ಮಾಡುವ ಮಟ್ಟಿಗೆ ಆ ಕ್ಷೇತ್ರವು ಆಸಕ್ತ ಗ್ರಾಹಕರನ್ನು ಮತ್ತು ಸರಬರಾಜುದಾರರನ್ನು ಸೆಳೆಯುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಕಾರಗಳನ್ನು ಆಧುನಿಕ ತಂತ್ರಜ್ಞಾನ ಮಾಧ್ಯಮಗಳ ಮೂಲಕ ಪೋಷಿಸುವ ಮತ್ತು ಸಂರಕ್ಷಿಸುವ ಪರಿಕಲ್ಪನೆಯ ಮೂಸೆಯಲ್ಲಿ ಅರಳಿದ್ದೇ ಪಾರದರ್ಶಕ ಇ-ಆಡಳಿತ ವ್ಯವಸ್ಥೆ. ಕಣಜ ಜ್ಞಾನಕೋಶದ ಮೂಲಕ ಕನ್ನಡ ಭಾಷೆಯಲ್ಲಿ ಜ್ಞಾನವಿಸ್ತಾರದ ಹೊಸ ಸಾಧ್ಯತೆಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹಲವು ತಂತ್ರಜ್ಞರು/ಸಂಸ್ಥೆಗಳು ತಂತಮ್ಮ ನೆಲೆಗಳಲ್ಲಿ ಶ್ರಮಿಸುತ್ತಿದ್ದಾರೆ.
ಕನ್ನಡ ಭಾಷೆಗೆ ಸಂಬಂಧಿಸಿದಂತೆ ಬಿಡಿ ಬಿಡಿಯಾಗಿ ಹಲವು ಪ್ರಮುಖ ತಂತ್ರಜ್ಞಾನ ಅಭಿವೃದ್ಧಿ ಕೆಲಸಗಳು ಮತ್ತು ಹಲವು ಶಾಶ್ವತನೆಲೆಯ ಅಭಿವೃದ್ಧಿ ಕಾರ್ಯಗಳಾಗಿವೆ. ಇವುಗಳಲ್ಲಿ ಹಲವು ಎಲ್ಲರಿಗೂ ತಿಳಿಯುವಷ್ಟು ವ್ಯಾಪಕವಾಗಿ ಪ್ರಚಾರವನ್ನು ಪಡೆದಿಲ್ಲ. ಆದುದರಿಂದ ಕನ್ನಡ ಭಾಷೆಯಲ್ಲಿ ಕೆಲವು ವಿಷಯಕ್ಷೇತ್ರಗಳಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿ ಕಾರ್ಯಯೋಜನೆಗಳ ಮರುಕಳಿಕೆಯಿಂದ ಕನ್ನಡ ಭಾಷೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎನ್ನಬಹುದಾಗಿದೆ.
ಹಲವು ಯೋಜನೆಗಳನ್ನು ಅಭಿವೃಧ್ಧಿ ಪಡಿಸಬಲ್ಲ ಸಾಮರ್ಥ್ಯವುಳ್ಳ ತಂತ್ರಜ್ಞರು ಮಾಹಿತಿಯ ಕೊರತೆಯಿಂದಾಗಿ ಈಗಾಗಲೇ ಅಭಿವೃದ್ಧಿ ಆಗಿರುವ ತಂತ್ರಾಂಶಗಳ ಮೇಲೆ ಮತ್ತೆ ತಮ್ಮ ಶ್ರಮ ಹಾಕುವುದು ಇಂತಹ ಸಮಸ್ಯೆಗಳಲ್ಲೊಂದು. ಈ ಎಲ್ಲ ಸಮಸ್ಯಾ ಸ್ವರೂಪದ ಪ್ರಕ್ರಿಯೆಗಳಿಗೆ ಪರಿಹಾರವಾಗಿ ಕಣಜ ತಂಡ ಯೋಜಿಸಿದ್ದು ಇ- ಕನ್ನಡದ ಅಭಿವೃದ್ಧಿ ಕಾರ್ಯಗಳ ಪರಿಚಯ ಮಾಡಿಕೊಡುವ ಸಂಘಟನಾತ್ಮಕ ಕಾರ್ಯವನ್ನು.
ಇಜ್ಞಾನ ಡಾಟ್ ಕಾಂ ಮೂಲಕ ಸರಳಗನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಪರಿಚಯ ಮಾಡಿಕೊಡುವ, ಕಣಜ ಸಂಪಾದಕರಾದ ಶ್ರೀ ಟಿ.ಜಿ.ಶ್ರೀನಿಧಿ ಮತ್ತು ತಂಡದವರು ಸಂಘಟನಾ ಕಾರ್ಯದ ಜವಾಬ್ದಾರಿ ಹೊತ್ತು ಸಂಘಟನಾ ಕಾರ್ಯವನ್ನು ಮುನ್ನಡೆಸಿದ್ದಾರೆ. ಪ್ರಾತಿನಿಧಿಕವಾಗಿ ಕೇವಲ ಒಂದು ಕರೆಗೆ ಮತ್ತು ಒಂದು ಇ-ಮೇಲಿಗೆ ಸ್ಪಂದಿಸಿ ಬರಬಲ್ಲ ತಂತ್ರಜ್ಞರನ್ನಷ್ಟೇ ಒಗ್ಗೂಡಿಸಿ ಪ್ರಾತಿನಿಧಿಕ ಪ್ರಯತ್ನ ಆರಂಭ ಮಾಡುವ ನಮ್ಮ ಆಶಯಕ್ಕೆ ನೀರೆರೆದದ್ದು ನಿರೀಕ್ಷೆಗೂ ಮೀರಿ ಬಂದ ಸ್ಪಂದನೆ.
ಭಾರತದ ಎಲ್ಲ ಭಾಷೆಗಳಲ್ಲಿಯೂ ಬಹುಮಾಧ್ಯಮ ನೆಲೆಯಲ್ಲಿ ಜ್ಞಾನವಿಸ್ತಾರದ ಕಾರ್ಯ ಮಾಡುತ್ತಿರುವ ಭಾರತವಾಣಿ ಪೋರ್ಟಲ್, ಸಮುದಾಯದ ನೆರವಿನಿಂದ ನಡೆಯುವ ವಿಕಿಪೀಡಿಯಾ, ಐತಿಹಾಸಿಕ, ಪಾರಂಪರಿಕ ಸ್ಥಳಗಳ ಬಗ್ಗೆ ತಿಳಿವಳಿಕೆ ನೀಡುವ ಬಾದಾಮಿ ಆನ್-ಲೈನ್, ಕನ್ನಡ ಪದಬಂಧ, ಅಕ್ಷರ ಸುಡೊಕು, ಜಸ್ಟ್ ಕನ್ನಡದಂತಹ ಜನಪ್ರಿಯ ಕೀಬೋರ್ಡ್, ಕನ್ನಡ ನುಡಿ ಸಿದ್ದಪಡಿಸಿದ ಕನ್ನಡ ಗಣಕ ಪರಿಷತ್ತು, ಸಂಚಯ ಮತ್ತು ಸಂಚಿಯಂತಹ ಕ್ರಿಯಾಶೀಲ ತಂತ್ರಜ್ಞ ತಂಡಗಳು, ವನ್ಯ ಜೀವಿಗಳ ಕುರಿತೇ ಪ್ರತಿ ತಿಂಗಳೂ ಹೊರತರುವ ಕಾನನ ಆನ್-ಲೈನ್ ಮಾಸಿಕ, ಸಂಸ್ಕೃತಿ ಪರಿಚಯ ಮಾಡಿಕೊಡುವ ಸಾಮಾಜಿಕ ಜಾಲತಾಣ ಮತ್ತು ಬ್ಲಾಗ್ ತಾಣವಾದ ಸಲ್ಲಾಪ ಡಾಟ್ ಕಾಂ, ಅಂಗೈಯಲ್ಲಿ ಪುಸ್ತಕ ಒದಗಿಸುವ ಕೈ ಬುಕ್ಸ್, ಕನ್ನಡವನ್ನು ಕಲಿಸಿಕೊಡುವ ಕನ್ನಡ ಗೊತ್ತಿಲ್ಲ ಡಾಟ್ ಕಾಂ, ಅಂಧರಿಗಾಗಿ ಪಠ್ಯವನ್ನು ಧ್ವನಿ ಸಂಸ್ಕರಿಸಿ ಒದಗಿಸುವ ಉತ್ಸಾಹಿ ಕನ್ನಡ ಪುಸ್ತಕ ಸಂಸ್ಥೆ, ಕಲಾವಿದರ ಮತ್ತು ಆಯೋಜಕರ ನಡುವೆ ಸಂಪರ್ಕ ಸೇತುವಾಗಿರುವ ಕಲಾಸ್ಟೇಜ್ ಎಂಬ ವೆಬ್ಸೈಟ್ ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ತೊಡಗಿದ್ದ ಮುವ್ವತ್ತಾರಕ್ಕೂ ಹೆಚ್ಚು ತಂಢಗಳು ತಮ್ಮ ಮಳಿಗೆಗಳನ್ನು ತೆರೆದು ಆಸಕ್ತರಿಗೆ ವಿವರಣೆ ನೀಡಿದ್ದು, ಈ ಕಾರ್ಯಕ್ರಮದ ಆಶಯಕ್ಕೆ ಪೂರಕವಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನಿರ್ದೇಶಕರಾದ ಶ್ರೀ ಕೆ.ಎ.ದಯಾನಂದ ಅವರು ಇಂತಹ ಕಾರ್ಯಕ್ರಮಗಳ ಅಗತ್ಯವನ್ನು ಹೇಳುತ್ತ ತಂತ್ರಜ್ಞಾನ ಬದುಕನ್ನು ಸುಲಭವಾಗಿಸುತ್ತದೆ ಮತ್ತು ಆಡಳಿತವನ್ನು ಪಾರದರ್ಶಕವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ದೈನಿಕದ ಸಂಪಾದಕರಾದ ಶ್ರೀ ರವಿ ಹೆಗಡೆ ಅವರು ಭಾಗವಹಿಸಿ ಶ್ರೀ ಟಿ.ಜಿ.ಶ್ರೀನಿಧಿ ಅವರು ಬರೆದಿರುವ ಕನ್ನಡ ತಂತ್ರಜ್ಞಾನ ನೆನ್ನೆ-ಇಂದು ನಾಳೆ ಕಿರು ಪರಿಚಯ ಹೊತ್ತಗೆಯನ್ನು ಬಿಡುಗಡೆ ಮಾಡಿದರು. ಇದನ್ನು ಉಚಿತವಾಗಿ ವಿತರಿಸಲಾಯಿತು ಮತ್ತು ಕಣಜ ಡಿಜಿಟಲ್ ಲೈಬ್ರರಿ ಮೂಲಕವೂ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಯಿತು.
ಇ-ಕನ್ನಡ ಸಂವಾದದಲ್ಲಿ ಭಾಗವಹಿಸಿದ್ದ ಐಬಿಎಂ ಸಂಸ್ಥೆಯ ಶ್ರೀ ಉದಯಶಂಕರ ಪುರಾಣಿಕ ಅವರು ತಂತ್ರಜ್ಞಾನ ಕ್ಷೇತ್ರದ ಅಗತ್ಯತೆ ಮತ್ತು ಸಾಧನೆಗಳ ಬಗ್ಗೆ ಮಾತನಾಡಿ ಕನ್ನಡ ಮತ್ತು ತಂತ್ರಜ್ಞಾನದ ಏಕೀಕರಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ದಟ್ಸ್ ಕನ್ನಡ ಡಾಟ್ ಕಾಂನ ಶ್ರೀ ಎಸ್.ಕೆ.ಶಾಮಸುಂದರ್ ಅವರು ಬಳಕೆಯ ದೃಷ್ಟಿಯಿಂದ ಸಾಧ್ಯತೆ ಮತ್ತು ಸವಾಲುಗಳ ಬಗ್ಗೆ ಮಾತನಾಡಿದರು.
ನಿಯತಕಾಲಿಕವಾಗಿ ಸಂವಹನಕ್ಕಾಗಿ ಇಂತಹ ಏಕೀಕೃತ ವೇದಿಕೆಯನ್ನು ರೂಪಿಸಿ, ಕನ್ನಡ ತಂತ್ರಜ್ಞಾನದ ಸಮಗ್ರ ಅಭಿವೃದ್ಧಿಗೆ ಪೂರಕ ಸಹಕಾರ ಮತ್ತು ಪ್ರೋತ್ಸಾಹವನ್ನು ಮುಂದುವರೆಸಬೇಕೆಂದ ಸದಾಶಯದೊಂದಿಗೆ ಇ-ಕನ್ನಡ ಸಂವಾದ ಮತ್ತು ಪ್ರದರ್ಶನ ಕಾರ್ಯಕ್ರಮ ಸಂಪನ್ನವಾಯಿತು.