ನಮ್ಮ ಪೂರ್ವಿಕರು, ತಮ್ಮ ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಬಳಸುತ್ತಿದ್ದುದನ್ನು ಕೇಳಿದ್ದೇವೆ. ಈಗಿನ ಕಂಪ್ಯೂಟರ್ ಯುಗದಲ್ಲಿ, ಇ- ಪಾರಿವಾಳವೊಂದನ್ನು ಬಳಸಿ, ಆಫ್ರಿಕಾ ದೇಶವೊಂದರ ಗ್ರಾಮೀಣ ಪ್ರದೇಶದ ರೋಗಿಗಳಿಗೆ ವೈದಕೀಯ ನೆರವು ನೀಡುವ ಯೋಜನೆಯೊಂದು ಚಾಲ್ತಿಯಲ್ಲಿದೆ.

ಸಹಾರಾ ಮರುಭೂಮಿಯ ಆಫ್ರಿಕಾ ಉಪಖಂಡದಲ್ಲಿರುವ ಬಹಳಷ್ಟು ಹಳ್ಳಿಗಳಲ್ಲಿ ಅನೇಕ ಜನರಿಗೆ ಹೆಚ್ಐವಿ, ಏಡ್ಸ್, ಶ್ವಾಸಕೋಶದ ಸೋಂಕು, ಟಿ.ಬಿ ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳಿವೆ. ಆದರೆ, ಅಂತಹ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಸಿಬ್ಬಂದಿ ತೆರಳಲು ಅನೇಕ ಹಳ್ಳಿಗಳಿಗೆ ಇಂದಿಗೂ ಕನಿಷ್ಠ ಸಾರಿಗೆ ಸೌಲಭ್ಯ ಕೂಡ ಇಲ್ಲದ ಸ್ಥಿತಿ ಅಲ್ಲಿದೆ. ವಾಹನಗಳು ಸಂಚರಿಸಲಾಗದಷ್ಟು ಅಲ್ಲಿನ ರಸ್ತೆಗಳು ಕೆಟ್ಟಿವೆ.

ಆದ್ದರಿಂದ ವೈದ್ಯರು ಮತ್ತು ಸಿಬ್ಬಂದಿ ನೆಡೆದುಕೊಂಡೇ ಹೋಗುತ್ತಾರೆ. ಆದರೆ, ಪ್ರಯೋಗಾಲಯಗಳಿಲ್ಲದೆ, ಹೆಚ್ಐವಿ, ಏಡ್ಸ್, ಟಿ.ಬಿ ಮೊದಲಾದ ಕಾಯಿಲೆಗಳಿಗೆ ವೈದ್ಯರು ಚಿಕಿತ್ಸೆ ನೀಡುವುದು ಹೇಗೆ ಸಾಧ್ಯ? ರೋಗಿಯ ಕಫ, ರಕ್ತ ಮೊದಲಾದವುಗಳ ಮಾದರಿಗಳನ್ನು ಸಂಗ್ರಹಿಸಿ, ನಗರದಲ್ಲಿರುವ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ತ್ವರಿತವಾಗಿ ಕಳುಹಿಸುವುದು ಒಂದು ಪ್ರಮುಖ ಸಮಸ್ಯೆ. ಆ ಪ್ರಯೋಗಾಲಯಗಳಲ್ಲಿ ಸಿದ್ಧವಾಗುವ ವರದಿಗಳನ್ನು ಸಂಗ್ರಹಿಸಿ, ಹಳ್ಳಿಗಳಲ್ಲಿರುವ ವೈದ್ಯರಿಗೆ ತ್ವರಿತವಾಗಿ ತಲುಪಿಸುವುದು ಮತ್ತೊಂದು ಪ್ರಮುಖ ಸಮಸ್ಯೆ.

ಈ ಸಮಸ್ಯೆಗಳನ್ನು ಪರಿಹರಿಸಲು, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಪ್ರಯೋಗಾಲಯ ಇಲಾಖೆ ಅಂತರ್ಜಾಲ (ಇಂಟರ್ನೆಟ್) ಮೊದಲಾದ ಮಾಧ್ಯಮಗಳ ಮೂಲಕ ನೆರವು ಕೋರಿತು. ಆಗ, ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿರುವ ಮಾಹಿತಿ ತಂತ್ರಜ್ಞಾನ ತಜ್ಞರು ದಕ್ಷಿಣ ಆಫ್ರಿಕಾದ ವೈದ್ಯಕೀಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಉಚಿತವಾಗಿ ನೆರವು ನೀಡಲು ಮುಂದಾದರು. ಹೀಗೆ, ಇ- ಪಾರಿವಾಳ ಯೋಜನೆ ಪ್ರಾರಂಭವಾಯಿತು (ಆಫ್ರಿಕಾದ ಜುಲು ಭಾಷೆಯಲ್ಲಿ ‘ಇ-ಜುಬಾ’ ಎಂದರೆ ಇ-ಪಾರಿವಾಳ ಎಂದರ್ಥ).

ಈ ದೇಶದಲ್ಲಿ ಕೂಡಾ ಅನೇಕ ಹಳ್ಳಿಗಳಲ್ಲಿ, ಸರಿಯಾದ ರಸ್ತೆಗಳು ಇಲ್ಲದಿದ್ದರೂ, ಮೊಬೈಲ್ ಫೋನ್ಗಳು ಬಳಕೆಯಲ್ಲಿವೆ. ಆದ್ದರಿಂದ ಮೊಬೈಲ್ ಫೋನ್ ಸೌಲಭ್ಯವನ್ನು ಇ-ಪಾರಿವಾಳ ಯೋಜನೆಯಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ನಂತರ, ಚಾಲಕರಹಿತ ಯುದ್ಧ ವಿಮಾನಗಳ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ಅಂತರಾಷ್ಟ್ರೀಯ ಸಂಸ್ಥೆ ‘ಡೆನೆಲ್ ಡೈನಾಮಿಕ್ಸ್’ ಯನ್ನು ಸಂಪರ್ಕಿಸಲಾಯಿತು. ಇ- ಪಾರಿವಾಳ ಯೋಜನೆಗೆ ಅಗತ್ಯವಾದ, ಸುಮಾರು 40 ಕಿ.ಮೀ ದೂರದವರೆಗೆ ಹಾರಬಲ್ಲ ಮಿನಿ- ಚಾಲಕರಹಿತ ವಿಮಾನವೊಂದನ್ನು ತಯಾರಿಸಿಕೊಡಲು ಈ ಸಂಸ್ಥೆ ಒಪ್ಪಿಕೊಂಡಿತು.

ಈ ವಿಮಾನದ ಹಾರಾಟದಲ್ಲಿ, ಜಿ.ಪಿ.ಎಸ್ (Global Positioning System) ತಂತ್ರಜ್ಞಾನ, ಮೈಕ್ರೋ-ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಂ (MEMS) ತಂತ್ರಜ್ಞಾನವನ್ನು ಬಳಸಲಾಯಿತು. ಕಡಿಮೆ ತೂಕದ ಮತ್ತು ಅಧಿಕ ಶಕ್ತಿಯ ಬ್ಯಾಟರಿಗಳನ್ನು ತಯಾರಿಸಲು ಅತ್ಯಾಧುನಿಕ ಲಿಥಿಯಂ ಪಾಲಿಮರ್ ತಂತ್ರಜ್ಞಾನವನ್ನು ಬಳಸಲಾಗಿದೆ. ವಿಮಾನದಲ್ಲಿರುವ ವಿದ್ಯುತ್ ಮೋಟಾರುಗಳಲ್ಲಿ ಬ್ರಷ್-ರಹಿತ ವ್ಯವಸ್ಥೆಯನ್ನು ಬಳಸಲಾಗಿದೆ.

ವಿಮಾನ ನಿಲ್ದಾಣ ಅಥವಾ ಹೆಲಿಪ್ಯಾಡ್ ಮೊದಲಾದವುಗಳ ಅಗತ್ಯವಿಲ್ಲದೆ, ಸಮತಟ್ಟಾದ ಬಯಲು ಪ್ರದೇಶದಿಂದ ಈ ಮಿನಿ- ಚಾಲಕರಹಿತ ವಿಮಾನವನ್ನು ಹಾರಿಬಿಡಬಹುದಾಗಿದೆ ಮತ್ತು ಇಳಿಸಬಹುದಾಗಿದೆ. ಒಮ್ಮೆ ಅಂತಹ ಬಯಲು ಪ್ರದೇಶ ದೊರೆಯದಿದ್ದರೆ, ಸೂಕ್ತ ತರಬೇತಿಯನ್ನು ಹೊಂದಿರುವ ವ್ಯಕ್ತಿಯೊಬ್ಬ ತನ್ನ ಕೈಗಳನ್ನು ಬಳಸಿ ಕೂಡ ಈ ವಿಮಾನವನ್ನು ಹಾರಿಬಿಡಬಹುದಾಗಿದೆ ಮತ್ತು ಆರ್ ಸಿ ಸಿ ಕಟ್ಟಡವೊಂದರ ಮೇಲೆ ಕೂಡಾ ಇಳಿಸಬಹುದಾಗಿದೆ.

ಈ ವಿಮಾನದಲ್ಲಿ ಒಂದು ಬಾರಿಗೆ, ಪ್ರಯೋಗಾಲಯಕ್ಕೆ ಕಳಿಸಬೇಕಾದ ರಕ್ತ, ಕಫ, ಮೂತ್ರ ಮುಂತಾದ ಮಾದರಿಗಳ 12 ಡಬ್ಬಿಗಳನ್ನು, ವ್ಯಾಕ್ಸಿನ್, ಜೀವರಕ್ಷಕ ಚೌಷಧಗಳು ಅಥವಾ ಎರಡು ರಕ್ತದ ಬಾಟಲಿಗಳು ಮತ್ತು ಒಟ್ಟು 500 ಗ್ರಾಂ. ತೂಕದ ವಸ್ತುಗಳನ್ನು ಸುಮಾರು 40 ಕಿ.ಮೀ ದೂರದವರೆಗೆ ಸಾಗಿಸಬಹುದಾಗಿದೆ. ವಿಮಾನದಲ್ಲಿರುವ ಲಿಥಿಯಂ ಪಾಲಿಮರ್ ಬ್ಯಾಟರಿಗಳು, ವಿಮಾನದ ಹಾರಾಟದಲ್ಲಿ ಬಳಸಲಾಗುವ ವಿದ್ಯುತ್ ಮೋಟಾರುಗಳಿಗೆ ಅಗತ್ಯವಾದ ವಿದ್ಯುತ್ ಒದಗಿಸುತ್ತವೆ.

ದೂರ ನಿಯಂತ್ರಣ ತಂತ್ರಜ್ಞಾನ, ಡಿಜಿಟಲ್ ನಕ್ಷೆ ಮತ್ತು ಲ್ಯಾಪ್ಟಾಪ್ ಕಂಪ್ಯೂಟರ್ ಹಾಗೂ ತಂತ್ರಾಂಶಗಳನ್ನು ಬಳಸಿ ಈ ವಿಮಾನದ ಹಾರಾಟವನ್ನು ನಿಯಂತ್ರಿಸಬಹುದಾಗಿದೆ. ಈ ವಿಮಾನ ಎಷ್ಟು ದೂರದಲ್ಲಿ ಮತ್ತು ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಅಲ್ಲಿ ಗಾಳಿ ಎಷ್ಟು ವೇಗವಾಗಿ ಬೀಸುತ್ತಿದೆ, ಹೀಗೆ ಅನೇಕ ಮಾಹಿತಿಯನ್ನು ಉಪಗ್ರಹ ಸಂಪರ್ಕದ ಮೂಲಕ ಪಡೆದು, ಲ್ಯಾಪ್ಟಾಪ್ ಕಂಪ್ಯೂಟರಿನಲ್ಲಿ ನೋಡಬಹುದಾಗಿದೆ.

ಒಮ್ಮೆ ಈ ವಿಮಾನ ಹಾರುವಾಗ, ವಾತಾವರಣದಲ್ಲಾದ ಬದಲಾವಣೆಯಿಂದಾಗಿ, ಗಾಳಿಯ ವೇಗವು ಗಂಟೆಗೆ 25 ಕಿ.ಮೀ.ಗೂ ಹೆಚ್ಚು ಅಧಿಕವಾಯಿತು. ಆದರೆ ಈ ವಿಮಾನ ಮಾತ್ರ ತನ್ನ ಪ್ರಯಾಣ ಮುಂದುವರಿಸಿ, ನಿರೀಕ್ಷಿತ ಗುರಿಯನ್ನು ಸರಿಯಾಗಿ ತಲುಪಿ, ಎಲ್ಲರನ್ನೂ ಚಕಿತಗೊಳಿಸಿತ್ತು.

ನಂತರದ ದಿನಗಳಲ್ಲಿ, ಸುಮಾರು 800 ಗ್ರಾಂ. ತೂಕದ ವಸ್ತುಗಳನ್ನು, 100 ಕಿ.ಮೀ. ದೂರದವರೆಗೆ ಸಾಗಿಸಬಲ್ಲ ಮೈಕ್ರೋ ಚಾಲಕರಹಿತ ವಿಮಾನವೊಂದನ್ನು ಮತ್ತೊಂದು ಅಂತರಾಷ್ಟೀಯ ಸಂಸ್ಥೆಯು ತಯಾರಿಸಿ, ಇ- ಪಾರಿವಾಳ ಯೋಜನೆಗೆ ನೀಡಿದೆ.

ಅನೇಕ ಪ್ರಯೋಗಾರ್ಥ ಹಾರಾಟಗಳನ್ನು ನಡೆಸಿ, ಅವು ಯಶಸ್ವಿಯಾದಾಗ, ಈ ಚಾಲಕರಹಿತ ವಿಮಾನದಿಂದ ಹಳ್ಳಿಗಳಿಂದ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿ, ನಗರದಲ್ಲಿರುವ ಪ್ರಯೋಗಾಲಯಕ್ಕೆ ತ್ವರಿತವಾಗಿ ಕಳುಹಿಸಲು ಸಾಧ್ಯವೆಂದಾಯಿತು. ಆದರೆ, ಪ್ರಯೋಗಾಲಯದಿಂದ ಸಿದ್ಧವಾದ ತಪಾಸಣಾ ವರದಿಗಳನ್ನು ಹಳ್ಳಿಗಳಿಗೆ ತ್ವರಿತವಾಗಿ ತಲುಪಿಸುವ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿತ್ತು.

ಹಳ್ಳಿಗಳಲ್ಲಿ ಮೊಬೈಲ್ ಫೋನ್ ಸೌಲಭ್ಯವಿರುವುದರಿಂದ, ಮೊಬೈಲ್ ಫೋನಿನಲ್ಲಿ ಬಳಸುವ ಸಿಮ್ ಕಾರ್ಡ್ ಬಳಸಿ ಮುದ್ರಕ (ಪ್ರಿಂಟರ್) ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಹಾಗಾಗಿ ಇದೀಗ, ಪ್ರಯೋಗಾಲಯದಲ್ಲಿ ವರದಿ ಸಿದ್ಧವಾದಾಗ, ಅಲ್ಲಿರುವ ಮೊಬೈಲ್ ಫೋನ್ ಬಳಸಿ, ಎಸ್ಎಂಎಸ್ ಸಂದೇಶದ ಮೂಲಕ ಈ ವರದಿಯ ವಿವರಗಳನ್ನು ಕಳುಹಿಸಲಾಗುತ್ತದೆ. ಈ ಎಸ್ಎಂಎಸ್ ಸಂದೇಶ ದೊರೆತಾಕ್ಷಣ, ವೈದ್ಯರ ಬಳಿ ಇರುವ ಪ್ರಿಂಟರ್ ಈ ವಿವರಗಳನ್ನು ಮುದ್ರಿಸಲು ಪ್ರಾರಂಭಿಸುತ್ತದೆ. ಎಲ್ಲಿಗೆ ಬೇಕಾದರೂ ಸುಲಭವಾಗಿ ತಗೆದುಕೊಂಡು ಹೋಗಬಹುದಾದ ಈ ಪುಟ್ಟ ಪ್ರಿಂಟರಿಗೆ, ವಿದ್ಯುತ್ ಸೌಲಭ್ಯವಿಲ್ಲದ ಕಡೆಗಳಲ್ಲಿ, ಸೌರಶಕ್ತಿಯನ್ನು ಬಳಸಿ ವಿದ್ಯುತ್ ನೀಡಬಹುದಾದ ವ್ಯವಸ್ಥೆಯನ್ನು ಕೂಡಾ ನೀಡಲಾಗಿದೆ.

ಹಲವು ಸಾಮಾಜಿಕ- ಆರ್ಥಿಕ ಸಮಸ್ಯೆಗಳ ಜೊತೆಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಹಳ್ಳಿಗಳ ರೋಗಿಗಳು ಮತ್ತು ಅವರ ಚಿಕಿತ್ಸೆಗೆ ಮುಂದಾಗಿರುವ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಇ- ಪಾರಿವಾಳ ಹೊಸ ಭರವಸೆಯಾಗಿದೆ. ರೋಗಿಗಳ ಪಾಲಿಗಂತೂ ಇದು ಕಮರಿದ್ದ ಬದುಕಿನ ಆಸೆಯನ್ನು ಮತ್ತೆ ಚಿಗುರಿಸುತ್ತಿದೆ. ಅಲ್ಲಿನ ರಾಷ್ಟ್ರೀಯ ಪ್ರಯೋಗಾಲಯ ಇಲಾಖೆಯ ಅಧಿಕಾರಿಗಳಿಗೆ ಇ- ಪಾರಿವಾಳ ಹೆಮ್ಮೆಯ ವಿಷಯವಾಗಿದೆ.

* ಮಾಹಿತಿ ಕೃಪೆ: ದಕ್ಷಿಣ ಆಫ್ರಿಕಾ ಮೆಡಿಕಲ್ ಜರ್ನಲ್