ಮದನ ಮೋಹನ ರಾಜ, ಕುಸಲಮತಿ ಮಂತ್ರಿ. ವಳ್ಳೀ ಜೋಸ್ತಿಂದ ತಿರುಗಾಡತಿದ್ರೂ. ಯೆಲ್ ಹೋಗೂದಿದ್ರೂವ ಸಂತಿಗೇ ಹೋಗೂದು, ಅಲ್ಯೇನಾಗಿತ್ತು ಕೇಳಿದ್ರೆ, ಸಮುದ್ರದಲ್ಲಿ ಈ ಸಾಡ್ಲಿಕ್ ಹೋಗತಿದ್ರು, ಬೆಳಿಗ್ಗೇ ಎದ್ದು ಸಮುದ್ರ ಸ್ನಾನಕ್ಕೆ ಹೋದವರು ಹನ್ನೆರಡು ಗಮಟೆಗೆ ಮನೆಗೆ ಬರುತ್ತಿದ್ದರು. ಹೀಗೆ ಮಾಡುತ್ತ ಕಾಲ ಕಳೆತಿರುವಾಗ ನಿರೊಳಗೆ ಮೀಸಾಡುತ್ತಿರುವಾಗ ತೆಲುತ್ತ ತೇಲುತ್ತ ಒಂದು ದೊನ್ನೆ ಸಿಕ್ಕಿತು. ಕುಸಲಮಂತ್ರಿ, ಮಂತ್ರಿಯ ಮಗ ಹೀಗೆ ಕೇಳಿದ, ಅಂದರೆ ” ದೊನ್ನೆ ನನಗೆ ಬೇಕು” ಅಂತ. ಅರಸು ಮಗ ದೊನ್ನೆಯೊಳಗೆ ಇದ್ದ ವಸ್ತು ತನಗೆ ಬೇಕು ಅಂತ ಹೇಳಿದ. ಅವರಿಬ್ಬರಲ್ಲಿ ಗರ್ಪಣೆಯಾಗಿ ವಾದಕ್ಕೆ ಸುರುವಾಯಿತು. “ನಂದು”  “ನಂದು” ಅಂದು ವಾದಮಾಡುತ್ತ ಇದ್ದರು.

ದೊನ್ನೆಯನ್ನು ಹಿಡಿದು ತಂದು, ದೊನ್ನೆವಳಗಿದ್ದದ್ದು ಯಾವದು ಅಂತ ಶೀಗಿದು ನೋಡುವಾಗ, ಒಂದು ಚಿನ್ನದ ಕುದಲು ಸಿಕ್ಕಿತು. ಆ ಕಾಣುವಲ್ಲಿ ಅದನ್ನು ಬಂಗಾರದ ಕುದಲು ಹುಡುಗಿಯದು. ಅಂತ ಸೋದಿಸುತ್ತಿರುವಾಗ, ಅವರಿಗೆ ಒಂದು ಜ್ಞಾಪಕ ಹೊಳೆಯಿತು. ಅಂದರೆ,ಅಜ್ಜಿ ಮುದುಕಿಗೆ ಒಬ್ಬ ಮಗ ಇದ್ದ. ಅವನನ್ನು ಕೇಳಿದರು. ” ” ಈ ಚಿನ್ನದ ಕುದಲು ಯಾರದು?” ಅಂತ ಕೇಳಿದರೆ ಅವ ” ತಾಯಿಗೆ ಗೂತ್ತಿದೆ” ಅಂದ. ಅವನ ತಾಯಿಯ ಮನೆಗೆ ಹೋಗಿ ಕೇಳಿದರು ಇಬ್ಬರೂ. ಆವಾಗ ಅಜ್ಜಿ ಹೇಳಿದಳು. ಯೇನಂತಂದಿದ್ದರೆ ” ಈ ಪುರ್ವ ದಿಕ್ಕಿಗೆ ಒಂದು ಹುಡುಗಿ ಹಡಗಿನ ಮೇಲೆ ಹೋಗುವಾಗ ಸಮುದ್ರದಲ್ಲಿ ಸ್ನನ ಮಾಡುವಾಗ ವಂದ ಕೂದಲು ಕಿತ್ತು ಬಂತು. ನೀರೊಳಗೆ ಮುಳಗಿ ಹೋಗತದೆ ಅಂದಿ, ದೊನ್ನಿವಳಗೆ ಹಾಕಿದಳು. ತೇಲಬಿಟ್ಟಳು.” ಹೇಳೀ ಅಜ್ಜಿ ಮುದ್ಕಿ ಹೇಳಿತು. ” ಚಿನ್ನದ ಕೂದಲ ಚೆಲುವೆ ಹೇಳಿ ಅದ್ರೆ ಹೆಸರು, ಪರಾಶರರಾಜನೆಂಬ ಹೆಸರಿನ ರಾಜನ ಮಗಳು”.

“ಸಮುದ್ರದ ದಡದ ಮೇಲೆ ಒಮದು ದೊಡ್ಡ ರಾಜಧಾನಿವುಂಟು. ಆ ರಾಜನ ಹೆಸರು ಪರಾಸರ, ತಂಗಳೇಶ್ವರ ರಾಜ್ಯದ ಹೆಸರು. ಆ ರಾಜ್ಯದ ರಾಜನ ಮಗಳು” ಎಂದು ಕೇಳಿದರು. ಅಜ್ಜಿ ” ಮೊಮ್ಮಗನ ಕೇಳುತ್ತೇನೆ” ಅಂತು. ಅಜ್ಜಿ ಮುದುಕಿ ಮೊಮ್ಮಗನು ತಾನು ತರುತ್ತೇನೆ ಎಂದು ಅವರಿಗೆ ಹೇಳಿದನು. “ತಂದು ಕೊಟ್ಟರೆ ನಿಮಗೆ ಬೇಕಾದಷ್ಟು ದ್ರವ್ಯವನ್ನು ಕೊಡುತ್ತೇವೆ” ಅಂತ ಕುಸಲಮತಿ ಮಂತ್ರಿ, ಮದನಮೋಹನ ರಾಜನ ಮಗ ಹೇಳಿದರು.

ಅದನ್ನು ತರುವದಕ್ಕಾಗಿ ಮುದುಕಿಯ ಮೊಮ್ಮಗ ” ವಂಬತ್ತು ದಿನದೊಳಗಾಗಿ ಚಿನ್ನದ ಕೂದಲ ಚೆಲುವಿಯನ್ನು ತಂದು ಮುಡ್ಡಿಸುತ್ತೇನೆ” ಎಂದು ಹೇಳಿ ಸಮುದ್ರವನ್ನು ಮೀಸಿ ಆಚೆ ದಿಡವನ್ನು ಸೇರುವದಕ್ಕಾಗಿ ಹೊರಟ.ಒಂದು ದಿವಸದಲ್ಲಿ ಬೆಳಗಾಗುತ್ತ ಬಂದರೂ ದಿಡ ಸೇರಲಿಲ್ಲ. ಮರುದಿವಸ ಸೂರ್ಯ ಪಶ್ಚಿಮದಲ್ಲಿ ಕಂತುವ ಸಮಯಕ್ಕೆ ಒಂದು ಮೀನ ಅವನನ್ನು ನುಂಗಲು ಬಂತು. ಮೀನು ನುಂಗಲು ಬಂದ ಕೂಡಲೇ ಅವನ ಹತ್ತಿರ ದೊಡ್ಡದಾದ ಕಬ್ಬಿನದ ಹಾರೆ ಇತ್ತು. ಅದರಿಂದ ಹೊಡೆದು ಸತ್ತ ಮೀನನ್ನು ತನ್ನ ಉಡಿಯದರಕೆ ಸಿಕ್ಕಿಸಿಕೊಂಡು ಯೋಚಿಸುತ್ತಿರುವಾಗ ಆ ದಿಡ ಮೇಲೆ ನಾಲ್ಕು ಮಂದಿ ಪ್ರಾಯಪ್ರಬುದ್ದರಾದ ಹುಡುಗರು ತಮ್ಮ ತಮ್ಮಷ್ಟಕ್ಕೆ ಮಾತಾಡುತ್ತ ಕುತುಕೊಂಡಿದ್ದರು. ಮೀನನ್ನು ಸುಡುವದಕ್ಕೆ ಬೆಂಕಿಯ ಸುಳುವನ್ನು, ಯೆಲ್ಲಿ ಹೊಗೆ ಹರಿತ್ತದೆಂತ ಹಾಗೆಯೇ ನೋಡಿದ.

ನಾಲ್ಕು ಮಂದಿ ಹುಡುಗರು ಇವನೆದುರಿಗೆ ಬಂದರು. ” ಯಾಕೆ ನೀನು ಆ ಕಡೆ ಈ ಕಡೆ ನೋಡುತ್ತಿರುವೆಯಲ್ಲ ?” ಎಂದು ಕೇಳಿದರು. ಸತ್ತು ಬಿದ್ದ ಮೀನನ್ನು ಮೇಲೆ ತೆಗೆದಿಟ್ಟಿದ್ದನು. ಇದೆಲ್ಲಿಯ ಮೀನು? ಯೆಲ್ಲಿಂದ ತಂದೆ? ಎಂದು ಈ ನಾಲ್ಕು ಮಂದಿ ಹುಡುಗರು ಕೇಳಿದರು. ” ನಾನು ಸಮುದ್ರದಿಂದ ಆಚೆ ದಿಡದಿಂದ ಈಸುತ್ತ ಈಚೆ ದಿಡಕ್ಕೆ ಬರುವಾಗ ಮೀನು ನನ್ನನ್ನು ನುಂಗಲು ಪ್ರಯತ್ನ ಮಾಡುತ್ತಿರುವಾಗ ಹೊಡೆದುಕೊಂಡು, ಬೇಯಿಸಿಕೊಂಡು ತಿನ್ನಲು ಬೆಂಕಿಯನ್ನು ಹುಡುಕುತ್ತ ಇದ್ದೇನೆ.”

ಆವಾಗ ಒಂದು ಹುಡುಗ ಮರವನ್ನು ಏರಿ ನೋಡಿದ ವಂದು ಕಡೆಗೆ ಬೆಂಕಿಯ ಹೊಗೆ ನೇರವಾಗಿ ಆಕಾಶಕ್ಕೆ ಹೋಗುತ್ತಿತ್ತು. ಅವನು ಕೆಳಗಿಳಿದು ಅಜ್ಜಿ ಮುದುಕಿ ಮೊಮ್ಮಗನ ಹತ್ತಿರ ಆವಾಗ ಅವ ಇಂತಲ್ಲಿ ಹೊಗೆ ಹಾಯುತ್ತದೆ ಎಂದು ಹೇಳಿದ.ಅಜ್ಜಿ ಮುದ್ಕಿ ಮೊಮ್ಮಗ ಮತ್ತೊಂದು ಹುಡುಗನನ್ನು ಕರೆದು ನೀನು ಹೋಗಿ ಬೆಂಕಿ ತೆಗೆದುಕೊಂಡು ಬರಬೇಕು ಎಂತ ಹೇಳಿದ ಹೋದವ, ಅವಾಗ ಎಷ್ಟೋ ಹೊತ್ತಿನ ವರೆಗೆ ಬರಲೇ ಇಲ್ಲ.

(ಅವನು ಬರಲಿಲ್ಲ ಯಾಕೆ ಎಂದು ನೋಡಲು ಮತ್ತೊಬ್ಬ ಹುಡುಗ ಹೋದ.ಅವನು ಹಿಂತಿರುಗಿ ಬರಲಿಲ್ಲ.ಇದೆ ರೀತಿಯಾಗಿ ನಾಲ್ಕು ಮಂದಿ ಹುಡುಗರು ಹೋಗಿ ತಿರುಗಿ ಬರಲೇ ಇಲ್ಲ.)

ರಾಕ್ಷಸಿಯ ಮನೆಯ ಬೆಂಕಿಯನ್ನು ತರಲು ಹೋದ ನಾಲ್ಕು ಜನರನ್ನು ವಬ್ಬೊಬ್ಬರನ್ನು ತನ್ನ ಶಂಟದ ಕೂದ್ಲ ಮಂತ್ರದಿಂದ ಕಟ್ಟಿ ಅಲ್ಲೇ ಉಳಿಯುವಂತೆ ಮಾಡುತ್ತದೆ. ಹೀಗೆ ನಾಲ್ಕು ಜನರನ್ನು ಇದೇ ರೀತಿ ಮಂತ್ರದಿಂದ ಅಲ್ಲೇ ಉಳಿಸಿಕೊಂಡಳು. ಆವಾಗ ರಕ್ಷಸಿ “ಅಯ್ಯೋ” ಎಂದು ಕೂಗುತ್ತ ಅಜ್ಜಿ ಮುದ್ಕಿ ಮೊಮ್ಮಗ ಇದ್ದ  ಮೀನು ಇದ್ದ ಸ್ಥಳಕ್ಕೆ ರಾಕ್ಷಸಿ ಬಂದಳು.ಆ ಹೊತ್ತಿನಲ್ಲಿ ಇತನು ಅಜ್ಜಿ ಮೊಮ್ಮಗ ಹುಡುಗರು ಇನ್ನೂ ಬರುವದಿಲ್ಲ. ಇವರು ಯೇನು ಮಾಡುವದು ಎಂದು ಮೀನನ್ನು ತಿನ್ನಲು ಸಿದ್ದರಾಗಿ ನಂತಿರುವ ಸಮಯದಲ್ಲಿ ಕೂಗುತ್ತ ಬಂದೇ ಬಿಟ್ಟಳು. ರಾಕ್ಷಸಿಯನ್ನು ಕಂಡ ಅಜ್ ಮುದ್ಕಿ ಮೊಮ್ಮಗನ ತನ್ನ ಕಯ್ಯಲ್ಲಿದ್ದ ಹಾರಿಯಿಂದ ಹೊಡೆಯಲು ಪ್ರಯುಕ್ತನಾದ. ಆವಾಗ ಈ ರೀತಿ ಕೇಳಿದ ನೀನು ಚಿನ್ನದ ಕೂದಲುಳ್ಳ ಹುಡುಗಿಯನ್ನು ಇಟ್ಟುಕೊಂಡಿದ್ದಿ ಎಂದ.ನಾನು ನಮ್ಮಜ್ಜಿ ಹೇಳಿದ ಜ್ಯೋತಿಶಿನ ಮೇಲೆ ತಿಳಿಕೆಂಡಿದೆ. ಅಂದ.

ಆವಾಗ ರಾಕ್ಷಸಿ ಚಿನ್ನದ ಕೂದಲು ಹುಡುಗಿ ಹಾಗೆ ಸಿಕ್ಕುವ ಹಾಂಗಿಲ್ಲ.. ಎಂದು ಹೇಳಿದಳು. ರಾಕ್ಷಸಿಯೊಡನೆ ಕಾಳಗಕ್ಕೆ ಸಿದ್ದನಾಗಿ ಹೊಡೆದಾಡಿ ಹೊಡೆದಾಡಿ ರಾಕ್ಷಸಿ ಹಣ್ಣಾದಳು. ನನ್ನ ಮನೆಯ ಹಿತ್ತಲಲ್ಲಿ ಒಂದು ಹೂವಿನ ತೋಟವಿದೆ. ಅಲ್ಲಿ ಆ ಹುಡುಗಿ ಇರುವಳು. ಗುಡಿಯಲ್ಲಿ ಆ ಹುಡುಗಿಯನ್ನು ಇಟ್ಟಿದ್ದೇನೆ ಎಂದು ಹೇಳಿ ಪ್ರಾಣ ಬಿಟ್ಟಳು.

ಆವಾಗ ಅವಳನ್ನು ಸೋದಿಸುತ್ತ ಈ ಅಜ್ಜಿ ಮೊಮ್ಮಗ ಬಹುದೂರ ಸಾಗಿದ. ಆ ಮನೆಗೆ ಮುಟ್ಟಿದನು.ಮುಟ್ಟಿದಾಗ ರಾಕ್ಷಸಿ ಜೀವ ಬಿಡುವ ಸಂದರ್ಭದಲ್ಲಿ ಹೇಳಿದ ಮಾತಿನಂತೆ ಅಲ್ಲಿಗೆ ಹೋಗಿ ನೋಡಿದ. ನೋಡುವಾಗ ಚಿನ್ನದ ಕೂದಲ ಚೆಲುವಿ ಹುಡುಗಿ ತೋಟದೊಳ್ಗೆ ಇಟ್ಟ ಶಿಬಿರವಿತ್ತು. ಅದರಲ್ಲಿ ಕುಳಿತು ದೇವರ ಧ್ಯಾನವನ್ನು ಮಾಡುತ್ತ ಕುಳಿತಿದ್ದಳು. ಆ ಹುಡುಗಿಯ ಹತ್ತಿರ ನಾನು ರಾಕ್ಷಸಿಯನ್ನು ಕೊಂದಿದ್ದೇನೆ. ಅಂಜಬೇಡ, ನಿನಗೆ ಯೋಗ್ಯನಿರುವವನಿಗೆ ಮದುವೆ ಮಾಡಿಸುತ್ತೇನೆ ನೀನು ನನ್ನ ಸಂಗಡ ಬರಬೇಕು ಅಂತ ಹೇಳಿದನು. ಆ ಹುಡುಗಿ ನಾನು ನೀನು ಕೇಳಿದಂತೆ ಬರುವೆ ಎಂದು ಒಪ್ಪಿಕೊಂಡಳು.

ಹುಡುಗಿಯನ್ನು ಕರೆದುಕೊಂಡು ರಾಕ್ಷಸಿಯ ಮನೆಗೆ ಹೋದನು. ಮೂರ್ಛಯಿಂದ ಬಿದ್ದಿರುವ ತಮ್ಮಂದಿರನ್ನು ಈ ರಾಕ್ಷಸಿ ಮಂತ್ರದಿಂದ ಮಲಗಿಸಿದ ಅವರನ್ನು ಹುಡುಗಿ ಎಬ್ಬಿಸಿದಳು. ಎಬ್ಬಿಸಿ ತೋಟದಲ್ಲಿ ಹೋಗಿ ಈ ಬಂಗಾರದ ಕೂದಲ ಹುಡುಗಿ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಅಜ್ಜಿ ಮೊಮ್ಮಗನ ಸಂಗಡ ಬಂತು.

ಆವಾಗ ಅಜ್ಜಿ ಮುದುಕಿ ಮಗ ಯೋಚಿಸಿದ. ಇವರೆಲ್ಲರನ್ನು ದಡಕ್ಕೆ ಸೇರಿಸಬೇಕಲ್ಲ. ತನ್ನ ಸಾಮರ್ಥ್ಯದಿಂದ ಒಂದು ದಿವ್ಯವಾದ ರಥವನ್ನು ತಯಾರಿಸಿ ರಥದ ಮೇಲೆ ಅವರನ್ನು ಕುಳ್ಳಿಸಿ ತನ್ನ ಬಾಹುಬಲದಿಂದ ಎಲ್ಲರನ್ನು ಹುಡುಗಿಯನ್ನು ಅಷ್ಟೂ ಜನರನ್ನು ತೋಳ ರೆಕ್ಕೆಯಲ್ಲಿ ಹಿಡಿದು ರಥದಲ್ಲಿ ಕುಳ್ಳಿಸಿದನು ಈಚೆ ಬರಲಿಕ್ಕೆ ಅಜ್ಜಿ ಮನೆಗೆ ಹೋಗಿ ಮುಟ್ಟಲಿ ಎಂದು ಹೇಳಿದನು. ಆ ರಥವು ಹಾರಿ ಬಂದು ಅಜ್ಜಿ ಮನೆಯಲ್ಲಿ ಸೇರಿತು. ಮನೆಯೆಲ್ಲಾ ಶೃಂಗರಿಸಿ ಎಲ್ಲೂರು ಸೇರಿ ದಡಕ್ಕೆ ಬಂದರು. ಇನ್ನು ಮದುವೆಯನ್ನು ಮಾಡಬೇಕಾಯಿತು ಎಂದು ಮದನಮೋಹನನಿಗೆ ಮದುವೆ ಮಾಡಿ ಊಟ ಮುಗಿಸಿದರು.ಆ ದಿವಸ ಅಲ್ಲೆ ಉಳಿದು ಮರುದಿವಸ ಮನೆಗೆ ಬಂದು ಸೇರಿದರು.ಕೊಟ್ಟ ಮಾತಿನಂತೆ ಮದನಮೋಹನ ಅಲ್ಲಿ ಮೊಮ್ಮಗನಿಗೆ ದ್ರವ್ಯ ಕೊಟ್ಟನು. ನಾಲ್ಕೂ ಜನ ಹುಡುಗರು ತಂತಮ್ಮ ಮನೆಗೆ ಸೇರಿದರು.ಅಜ್ಜಿ ಮುದುಕಿಯ ಮೊಮ್ಮಗ ತನ್ನ ಮನೆಗೆ ಸೇರಿದನು. ಸುಖದಿಂದ ಉಳಿದರು.

ಹೇಳಿದವರು :

ಶ್ರೀ ಧಾಕೂ ಮಾರು ಪಟಗಾರ
ಮೊಸಳೆ ಸಾಲು ಹೇಳಿಸಿ ಬರೆದುಕೊಂಡಿದ್ದು ನನ್ನ ಭಾವ ಶ್ರೀ ಗಜಾನನ ಪಂಡಿತರ ಮನೆಯಲ್ಲಿ
ದಿ. ೧೭ . ೪. ೨೦೦೧ ರಂದು.