ಪುಸ್ತಕಗಳ ಓದು ಅತ್ಯಂತ ಜನಪ್ರಿಯ ಹವ್ಯಾಸ. ಆದರೆ ಎಲ್ಲ ಉತ್ತಮ ಪುಸ್ತಕಗಳು ಎಲ್ಲರಿಗೂ ಸಿಗುವುದಿಲ್ಲ. ವಿದೇಶದಲ್ಲೆಲ್ಲೋ ಪ್ರಕಟವಾದ ಪುಸ್ತಕ ನಮ್ಮವರೆಗೆ ತಲುಪದೇ ಹೋಗಬಹುದು. ನಮ್ಮ ದೇಶದಲ್ಲೇ ಪ್ರಕಟವಾದ ಪುಸ್ತಕದ ಪ್ರತಿಗಳು ನಮ್ಮಲ್ಲಿಗೆ ತಲುಪುವ ಮುನ್ನವೇ ಖರ್ಚಾಗಿಬಿಡಬಹುದು; ಅಥವಾ ಇನ್ನಾವುದೋ ಅದ್ಭುತ ಪುಸ್ತಕದ ಪ್ರತಿಗಳು ಮುಗಿದು ವರ್ಷಗಳೇ ಕಳೆದಿರಬಹುದು.

ಈ ಸಮಸ್ಯೆಗೆ ಗಣಕ ತಜ್ಞರು ಕಂಡುಹಿಡಿದಿರುವ ಪರಿಹಾರವೇ ಇ-ಪುಸ್ತಕಗಳು. ವಿದ್ಯುನ್ಮಾನ ರೂಪದಲ್ಲಿರುವ ಇವುಗಳನ್ನು ಗಣಕಗಳಲ್ಲೋ ಮೊಬೈಲ್ ದೂರವಾಣಿಗಳಲ್ಲೋ ಇ-ಬುಕ್ ರೀಡರ್‌ಗಳನ್ನು ಬಳಸಿಯೋ ಓದಿಕೊಳ್ಳಬಹುದು. ವಿದ್ಯುನ್ಮಾನ ರೂಪದಲ್ಲಿರುವುದರಿಂದ ಪ್ರತಿಗಳು ಮುಗಿಯುವ ಪ್ರಶ್ನೆಯೇ ಇಲ್ಲ; ಬೇಕಾದ ಪುಸ್ತಕವನ್ನು ಬೇಕಾದ ಕ್ಷಣದಲ್ಲೇ ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಂಡುಬಿಡಬಹುದು.

ಇ-ಪುಸ್ತಕಗಳನ್ನು ಶೇಖರಿಸಿಡುವುದು ಕೂಡ ಬಹಳ ಸುಲಭ. ಒಂದು ಕಪಾಟಿನಲ್ಲಿ ಇಡಬಹುದಾದ ಪುಸ್ತಕಗಳಿಗಿಂತ ಹೆಚ್ಚು ಮಾಹಿತಿಯನ್ನು ಪುಟ್ಟದೊಂದು ಮೆಮೊರಿ ಕಾರ್ಡಿನಲ್ಲಿ ಉಳಿಸಿಡುವುದು ಸಾಧ್ಯ.

ಜಾಲಲೋಕದಲ್ಲಿ ಸಾಕಷ್ಟು ಸಂಖ್ಯೆಯ ಇ-ಪುಸ್ತಕಗಳು ಉಚಿತವಾಗಿಯೇ ಲಭ್ಯವಿವೆ. ಇಂತಹ ನೂರಾರು-ಸಾವಿರಾರು ಇ-ಪುಸ್ತಕಗಳನ್ನು ಒಟ್ಟುಗೂಡಿಸಿ ಡಿಜಿಟಲ್ ಗ್ರಂಥಾಲಯಗಳನ್ನೂ ರೂಪಿಸಲಾಗಿದೆ.

ಉದಾಹರಣೆಗೆ ಹೇಳುವುದಾದರೆ ಪ್ರಾಜೆಕ್ಟ್ ಗುಟೆನ್‌ಬರ್ಗ್ ಎಂಬ ತಾಣದಲ್ಲಿ (www.gutenberg.org) ಹತ್ತಾರು ಸಾವಿರ ಇ-ಪುಸ್ತಕಗಳು ಉಚಿತವಾಗಿ ಲಭ್ಯವಿವೆ. ಸರ್ ಐಸಾಕ್ ನ್ಯೂಟನ್ ಕೃತಿಗಳು, ಲಿಯೊನಾರ್ಡೋ ಡ ವಿಂಚಿಯ ವಿಶ್ವವಿಖ್ಯಾತ ನೋಟ್‌ಬುಕ್‌ಗಳು – ಎಲ್ಲವೂ ಇಲ್ಲಿವೆ. ಹಾಗೆಯೇ ಇಂಟರ್‌ನೆಟ್ ಆರ್ಕೈವ್‌ನ ಓಪನ್ ಲೈಬ್ರರಿ ತಾಣದಲ್ಲೂ (www.openlibrary.org) ಲಕ್ಷಾಂತರ ಇ-ಪುಸ್ತಕಗಳಿವೆ. ನಮ್ಮ ದೇಶದ ತಂತ್ರಜ್ಞರೇ ರೂಪಿಸಿರುವ ‘ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ’ (www.dli.gov.in) ಕೂಡ ಅನೇಕ ಅಮೂಲ್ಯ ಪುಸ್ತಕಗಳಿರುವ ತಾಣ. ಇಲ್ಲಿ ಹಲವಾರು ಕನ್ನಡ ಪುಸ್ತಕಗಳೂ ಇವೆ.

ಹಾಗೆಂದ ಮಾತ್ರಕ್ಕೆ ಎಲ್ಲ ಇ-ಪುಸ್ತಕಗಳೂ ಉಚಿತವಲ್ಲ. ಹಲವು ಇ-ಪುಸ್ತಕಗಳನ್ನು ಹಣಕೊಟ್ಟು ಖರೀದಿಸಬೇಕು. ಬೇಕಾದ ಪುಸ್ತಕ ಬೇಕೆಂದ ತಕ್ಷಣ ಸಿಗುವುದರಿಂದ ಈ ಆಯ್ಕೆಯೂ ಬಹಳ ಜನಪ್ರಿಯವಾಗಿದೆ. ೨೦೧೦ರ ಕೊನೆಯ ವೇಳೆಗೆ ಅಮೆಜಾನ್ ಡಾಟ್ ಕಾಮ್ ಅಂತರಜಾಲ ಪುಸ್ತಕ ಮಳಿಗೆಯಲ್ಲಿ ಮುದ್ರಿತ ಪುಸ್ತಕಗಳಿಗಿಂತ ಹೆಚ್ಚು ಸಂಖ್ಯೆಯ ಇ-ಪುಸ್ತಕಗಳು ಮಾರಾಟವಾಗುತ್ತಿದ್ದವಂತೆ.

ಬುಕ್ ರೀಡರ್

ಇ-ಪುಸ್ತಕಗಳನ್ನು ಓದಲೆಂದೇ ರೂಪಿಸಲಾಗಿರುವ ವಿಶಿಷ್ಟ ಉಪಕರಣಗಳಿಗೆ ಇ-ಬುಕ್ ರೀಡರ್‌ಗಳೆಂದು ಹೆಸರು.

ಸುಲಭ ಓದಿಗೆ ಪೂರಕವಾದ ಗಾತ್ರ, ಕಡಿಮೆ ತೂಕ, ಒಮ್ಮೆ ಚಾರ್ಜ್ ಮಾಡಿದರೆ ತುಂಬ ಹೊತ್ತು ಬಳಸಬಹುದಾದ ಬ್ಯಾಟರಿ – ಇವು ಇ-ಬುಕ್ ರೀಡರ್ ವೈಶಿಷ್ಟ್ಯಗಳು.

ಗಣಕ, ಮೊಬೈಲ್ ದೂರವಾಣಿ ಮುಂತಾದ ಉಪಕರಣಗಳ ಪರದೆ ಬೆಳಕನ್ನು ಹೊರಸೂಸುವುದರಿಂದ ಅವು ಬಿಸಿಲಿನಲ್ಲಿ ಸ್ಪಷ್ಟವಾಗಿ ಕಾಣುವುದಿಲ್ಲ. ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯವೇ. ಆದರೆ ಬಹುತೇಕ ಇ-ಬುಕ್ ರೀಡರ್‌ಗಳು ಇಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನವನ್ನು ಬಳಸುತ್ತವೆ. ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಓದುವಿಕೆ ಕಣ್ಣಿಗೆ ಶ್ರಮವೆನಿಸುವುದಿಲ್ಲ. ಅಷ್ಟೇ ಅಲ್ಲ, ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಸ್ಪಷ್ಟವಾಗಿ ಓದುವುದು ಸಾಧ್ಯ.

ಇ-ಬುಕ್ ರೀಡರ್ ಬಳಸಿ ಪುಸ್ತಕಗಳನ್ನು ಓದುವಾಗ ಅಕ್ಷರಗಳ ಗಾತ್ರವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು; ಸಾವಿರಾರು ಪುಸ್ತಕಗಳನ್ನು ಶೇಖರಿಸಿಟ್ಟುಕೊಳ್ಳುವ ಅನುಕೂಲ ಕೂಡ ಇರುತ್ತದೆ. ಬಹುತೇಕ ಇ-ಬುಕ್ ರೀಡರ್‌ಗಳಲ್ಲಿ ಹಾಡು ಕೇಳುವ, ಆಟವಾಡುವ ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವ ಸೌಲಭ್ಯಗಳೂ ಇರುತ್ತವೆ.

ಅಮೆಜಾನ್ ಕಿಂಡ್ಲ್, ಬಾರ್ನ್ಸ್ ಆಂಡ್ ನೋಬಲ್‌ನ ‘ನೂಕ್’, ಸೋನಿ ರೀಡರ್ – ಇವೆಲ್ಲ ಮಾರುಕಟ್ಟೆಯಲ್ಲಿ ಹೆಸರುಮಾಡಿರುವ ಕೆಲ ಇ-ಬುಕ್ ರೀಡರ್‌ಗಳು. ಹಲವು ಭಾರತೀಯ ಸಂಸ್ಥೆಗಳೂ ಇ-ಬುಕ್ ರೀಡರ್‌ಗಳನ್ನು ನಿರ್ಮಿಸಿವೆ. ಇನ್ಫಿಬೀಮ್ ಡಾಟ್ ಕಾಮ್‌ನ ‘ಪೈ’ ಇದಕ್ಕೊಂದು ಉದಾಹರಣೆ. ಇದು ಭಾರತೀಯ ಸಂಸ್ಥೆಯೊಂದು ನಿರ್ಮಿಸಿದ ಮೊತ್ತಮೊದಲ ಇ-ಬುಕ್ ರೀಡರ್ ಕೂಡ ಹೌದು. ಇದರಲ್ಲಿ ಭಾರತೀಯ ಭಾಷೆಗಳ ಪಠ್ಯವನ್ನೂ ಓದುವುದು ಸಾಧ್ಯ.

ಬುಕ್ ವಿಧಗಳು

ಯಾವುದೇ ತಂತ್ರಾಂಶದಲ್ಲಿ ತೆರೆದುಕೊಳ್ಳುವ ಸರಳ ಪಠ್ಯರೂಪದ (.txt) ಕಡತಗಳಿಂದ ಪ್ರಾರಂಭಿಸಿ ನಿರ್ದಿಷ್ಟ ತಂತ್ರಾಂಶಗಳಲ್ಲಿ ಮಾತ್ರವೇ ತೆರೆದುಕೊಳ್ಳುವ ಕಡತಗಳವರೆಗೆ ಇ-ಬುಕ್‌ಗಳಲ್ಲಿ ಅನೇಕ ಬಗೆ. ವ್ಯಾಪಕವಾಗಿ ಬಳಕೆಯಾಗುವ ಪಿಡಿಎಫ್ ರೂಪದಲ್ಲೂ ಅನೇಕ ಇಬುಕ್‌ಗಳು ಲಭ್ಯವಿವೆ. ಅಂತರರಾಷ್ಟ್ರೀಯ ಡಿಜಿಟಲ್ ಪ್ರಕಾಶನ ವೇದಿಕೆಯವರು ರೂಪಿಸಿರುವ ಮುಕ್ತ ಮಾನಕವನ್ನು ಬಳಸುವ ಇ-ಪುಸ್ತಕಗಳು .epub ಕಡತಗಳ ರೂಪದಲ್ಲಿರುತ್ತವೆ. ಈಚಿನ ಬಹುತೇಕ ಇ-ಬುಕ್ ರೀಡರ್‌ಗಳಲ್ಲಿ ಈ ರೂಪದ ಕಡತಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಅಮೆಜಾನ್ ಕಿಂಡ್ಲ್‌ಗಾಗಿ ರೂಪಿಸಲಾದ ಇ-ಪುಸ್ತಕಗಳು .azw ಎಂದು ಕೊನೆಗೊಳ್ಳುವ ಹೆಸರಿನ ಕಡತಗಳಲ್ಲಿರುತ್ತವೆ. ಕಿಂಡ್ಲ್ ಇ-ಪುಸ್ತಕಗಳನ್ನು ಓದಲು ಅನುವುಮಾಡಿಕೊಡುವ ತಂತ್ರಾಂಶ ಬಳಸಿಕೊಂಡು ಕಿಂಡ್ಲ್ ಉಪಕರಣ ಇಲ್ಲದವರೂ ಈ ಕಡತಗಳನ್ನು ಕೊಳ್ಳುವುದು, ಓದುವುದು ಸಾಧ್ಯ.

ಎಲ್ಲೆಲ್ಲೂ ಬುಕ್

ಇ-ಪುಸ್ತಕಗಳನ್ನು ಓದಲು ಇ-ಬುಕ್ ರೀಡರ್ ಉಪಕರಣಗಳೇ ಬೇಕು ಎಂದೇನೂ ಇಲ್ಲ. ಈಗಾಗಲೇ ಹೇಳಿದಂತೆ ಗಣಕಗಳು ಹಾಗೂ ಮೊಬೈಲ್ ದೂರವಾಣಿಗಳಲ್ಲೂ ಇ-ಪುಸ್ತಕಗಳನ್ನು ಓದುವುದು ಸಾಧ್ಯ. ಈ ಉದ್ದೇಶಕ್ಕೆ ಬಳಸಲಾಗುವ ತಂತ್ರಾಂಶಗಳನ್ನೂ ಇ-ಬುಕ್ ರೀಡರ್‌ಗಳೆಂದೇ ಕರೆಯುತ್ತಾರೆ. ವಿಂಡೋಸ್, ಐಓಎಸ್, ಬ್ಲ್ಯಾಕ್‌ಬೆರಿ, ಆಂಡ್ರಾಯ್ಡ್ ಮುಂತಾದ ಅನೇಕ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಅನೇಕ ಇ-ಬುಕ್ ರೀಡರ್ ತಂತ್ರಾಂಶಗಳು ಲಭ್ಯವಿವೆ. ಹಾಗೆ ನೋಡಿದರೆ ಪಿಡಿಎಫ್ ಕಡತಗಳನ್ನು ತೆರೆಯಲು ಬಳಸುವ ತಂತ್ರಾಂಶವನ್ನೂ ಇ-ಬುಕ್ ರೀಡರ್ ಎಂದೇ ಕರೆಯಬಹುದು.

ನಮ್ಮ ಜಾಲತಾಣದಲ್ಲಿ ಅಥವಾ ಬ್ಲಾಗುಗಳಲ್ಲಿ ತೀರಾ ದೊಡ್ಡ ಲೇಖನ / ಮಾಹಿತಿಯ ಸಂಗ್ರಹವನ್ನು ಪ್ರಕಟಿಸುವ ಸಂದರ್ಭದಲ್ಲಿ ಅವನ್ನು ಮಾರುದ್ದದ ಬರೆಹಗಳನ್ನಾಗಿಸುವ ಬದಲು ಇ-ಬುಕ್ ರೂಪಕ್ಕೆ ತರಬಹುದು. ಇಸ್ಸೂ ಡಾಟ್ ಕಾಮ್‌ನಂತಹ (www.issuu.com) ಯಾವುದೇ ತಾಣದ ಸೇವೆ ಬಳಸಿ ನಮ್ಮ ಲೇಖನದ ಕಡತವನ್ನು ಸುಲಭವಾಗಿ ಇ-ಬುಕ್ ರೂಪಕ್ಕೆ ಪರಿವರ್ತಿಸಬಹುದು. ಕಂಪ್ಯೂಟರ್ ಪರದೆಯ ಮೇಲೆ ಓದುವಾಗಲೂ ಪುಸ್ತಕದಂತೆಯೇ ಕಾಣುವುದು ಇಂತಹ ಇ-ಬುಕ್‌ಗಳ ವೈಶಿಷ್ಟ್ಯ. ವಿದ್ಯುನ್ಮಾನ ಪತ್ರಿಕೆಗಳ ಪ್ರಕಟಣೆಯಲ್ಲೂ ಈ ಪರಿಕಲ್ಪನೆ ಸಹಕಾರಿಯಾಗಬಲ್ಲದು. ಇಜ್ಞಾನ ಡಾಟ್ ಕಾಮ್ ತಾಣದಲ್ಲಿ (www.ejnana.com) ಪ್ರಕಟವಾಗುತ್ತಿರುವ ವಿದ್ಯುನ್ಮಾನ ಪತ್ರಿಕೆಯ ಸಂಚಿಕೆಗಳು ಇದಕ್ಕೊಂದು ಉದಾಹರಣೆ.

ಬೇರೆಲ್ಲ ಗಣಕಗಳಿಗಿಂತ ಪುಟ್ಟ ಗಾತ್ರದ, ಕಡಿಮೆ ತೂಕದ ನೆಟ್‌ಬುಕ್‌ಗಳಲ್ಲಿ ಇ-ಪುಸ್ತಕಗಳನ್ನು ಓದುವುದು ಸುಲಭ. ಅವಕ್ಕಿಂತ ಸರಳ ವಿನ್ಯಾಸ ಹೊಂದಿರುವ ಟ್ಯಾಬ್ಲೆಟ್ ಗಣಕಗಳಲ್ಲಿ ಇ-ಪುಸ್ತಕಗಳನ್ನು ಓದುವ ಹವ್ಯಾಸವೂ ಸಾಕಷ್ಟು ಜನಪ್ರಿಯವಾಗಿದೆ.