ಈಗೀಗ ಮನೆತುಂಬ ನಿಟ್ಟುಸಿರು ಕಂಬನಿ ;
ಕೋಣೆ ಕೋಣೆಯ ತುಂಬ ಮುಸುಕೆಳೆದ ಮೌನ.
ಎಂದೋ ಒಂದು ದಿನ ಹಬ್ಬದಲಿ
ಬಾಗಿಲಿಗೆ ಸಿಂಗರಿಸಿದ್ದ ಚಿಗುರೆಲೆಯ ತೋರಣ,
ಈಗ ತರಗೆಲೆಯಾಗಿ ರಪರಪನೆ ಬಡಿದಾಡುತಿದೆ
ಗಾಳಿಯ ಕಾರಣ.
ಹೊಸಿಲ ಹಣೆಯಲಿ ಮಾಸಿ ಕರೆಯಾದ ಕುಂಕುಮ
ಬಾಗಿಲೆಡೆ ಮಾಸಿ ಚದುರಿರುವ ರಂಗೋಲಿ
ಜಡಿ ಮಳೆಯ ಬಡಿತಕ್ಕೆ ಗುರುತಳಿದ ದಾರಿ.

ತುಟಿಯ ಬಾಗಿಲ ಹಿಂದೆ ಅಗುಳಿಯ ಜಡಿದು ಕಾದಿದೆ ನೋವು,
ನೆಲಮಾಳಿಗೆಯ ತಳದಲ್ಲಿ ಕುಲುಮೆಗಳ ನಿಟ್ಟುಸಿರು,
ಬುಸುಗುಟ್ಟುವಂತೆ ಹಾವು.

ಪಿಸುಮಾತು : ಮರಳುಗಾಡಿನ ನಡುವೆ ಒಂಟೆಗಳ ಹೆಜ್ಜೆ.
ಬಿರುಬಿಸಿಲಲ್ಲಿ ಎಲ್ಲೋ ಹಸುರ ಕೈಬೀಸಿ ಕರೆವ ಓಯಸಿಸ್ಸಿನ ಕನಸು
ಕನಸು… ಕನಸು… ಕ… ನ… ಸು…