ಹೊಳೆದಂಡೆಗೂ ನಮ್ಮ  ಹಳ್ಳಿ ಬದುಕಿಗೂ  ಒಂದು  ಗಾಢ ಸಂಬಂಧವಿದೆ. ಬೇಸಿಗೆಯ ರಜಾ ದಿನಗಳಲ್ಲಿ  ಮಲೆನಾಡಿನ ಮಕ್ಕಳೆಲ್ಲ ಒಂದರ್ಥದಲ್ಲಿ ಜಲಚರ ಜೀವಿಗಳು! ಬಾಲ್ಯದ ತುಂಬ ಉರಿ ಬಿಸಿಲಲ್ಲಿ  ನೀರಿನಾಟದ ಖುಷಿಯ ಕ್ಷಣಗಳಿಗೆ ಮೀಸಲು. ಮಾವಿನ ಎಲೆಯಲ್ಲಿ  ಹಲ್ಲು  ಉಜ್ಜುವದು, ಸೀಗೆಯಲ್ಲಿ ಮೈ ತಿಕ್ಕಿಕೊಳ್ಳುತ್ತ  ಈಜುತ್ತ  ಮೈ ಮರೆಯುವದು ಕಾಲಯೋಗ. ಹುಳಿಮಾವಿನಕಾಯಿ, ಹೊಳೆದಾಸವಾಳದ ಹಣ್ಣು, ಮುರುಗಲು ಹಣ್ಣು, ಸಂಪಿಗೆ ಹಣ್ಣು, ಸಳ್ಳೆ ಹಣ್ಣು ತಿನ್ನುತ್ತ ನಡೆಯುವ ನೀರಾಟದಲ್ಲಿ  ನಿಸರ್ಗ ಕಲಿಕೆ. ಹಿರಿಯರ ಕಣ್ಗಾವಲಲ್ಲಿ  ಈಜು  ತರಬೇತಿ! ಬಂಡೆಯ ಮೇಲೇರಿ ನೀರಿಗೆ ದುಮ್ಮಿಕ್ಕಿ ಮುಳುಗುವ ಸಾಹಸ. ಹಳ್ಳ ಕೊಳ್ಳಗಳ ಬದುಕಿಗೆ ಅಲ್ಲಿ  ದೊಡ್ಡ ಪಾಠ.

ನಿತ್ಯ ಶಾಲೆಗೆ ಹೋಗುವಾಗ, ಪಕ್ಕದ ಗುಡ್ಡ ಏರುವಾಗ, ತೋಟ ಸುತ್ತುವಾಗೆಲ್ಲ ನಡುವೆ ಹಳ್ಳ ದಾಟಬೇಕು. ಕಾಲು ಸಂಕದಲ್ಲಿ ಕೆಳಗಡೆ ನೋಡಿದರೆ ಪ್ರಪಾತ, ನಡೆಯಲು ಸರ್ಕಸ್ ಮಾಡಬೇಕು. ಭಯ ಪಟ್ಟರೆ ಬದುಕಿಲ್ಲ, ನೀರಿಗೆ ಬಿದ್ದರೆ ಈಜು ಬಲ್ಲವರಿಗೆ ಮಾತ್ರ ಏಳುವ ಧೈರ್ಯ!  ೨-೩ನೇ ತರಗತಿ ಓದುವ ಕಾಲಕ್ಕೆ  ಮಕ್ಕಳೆಲ್ಲ ಈಜಿನಲ್ಲಿ  ಪಾಸು. ತೇಲುವದು, ಮುಳುಗುತ್ತ ಈಜುವದು, ಎತ್ತರದಿಂದ ಜಿಗಿದು ಗೆಲ್ಲುವ ಆಟ ಜೀವನ ಪಾಠ. ಮಳೆಗಾಲದ  ಪ್ರವಾಹದ ಅಬ್ಬರ, ಹಳ್ಳಕೊಳ್ಳಗಳ ಜತೆಗೆ ನಿತ್ಯ ಒಡನಾಡುವವರಿಗೆಲ್ಲ ಈ ವಿದ್ಯೆ ಬೇಕು. ಇನ್ನು ಕರಾವಳಿಯ ಮಕ್ಕಳಾದರೆ ಆಳ ನದಿಗಳಲ್ಲಿ  ನೀರಿನ ಭಯ ಮರೆಯಬೇಕು! ದೋಣಿ ನಡೆಸಲು ಕಲಿಯಬೇಕು! ನೀರಿಗೆ ಹೆದರುವವರು ಊರಲ್ಲಿ  ಬದುಕಲು ಸಾಧ್ಯವಿಲ್ಲದ ಸ್ಥಿತಿ.

ಮರ್ಸೆ ಎಂಬ ಊರಿಗೆ ಕೆಲವು ವರ್ಷಗಳ ಹಿಂದೆ ಹೊರಟಿದ್ದೆ. ಅಘನಾಶಿನಿ ನದಿ ದಂಡೆಯ ಊರಿಗೆ ಹೋಗಲು ೩೦೦ ಅಡಿ ವಿಸ್ತಾರಕ್ಕೆ ಹರಿಯುವ ನದಿಯನ್ನು  ಆಚೀಚೆ ಓಲಾಡುವ ಪಾತಿ ದೋಣಿಯಲ್ಲಿ ದಾಟಬೇಕು. ನದಿ ದಂಡೆಯ ಸನಿಹದಲ್ಲಿ ಯಾರ  ವಸತಿಯೂ ಇಲ್ಲ. ಅಲ್ಲಿ ನದಿ ದಾಟುವ ಅನುಕೂಲಕ್ಕೆ ಒಂದು ದೋಣಿಯೇನೋ ಇತ್ತು. ಊರಿನ ಜನರೆಲ್ಲ ದೋಣಿ ನಡೆಸುವ ಪರಿಣಿತರಾದ್ದರಿಂದ ಆ ದೋಣಿ ದಾಟಿದವರ ಸಂಗಡವೇ ಒಂದೊಂದು ದಡದಲ್ಲಿ  ತೇಲುತ್ತಿತ್ತು. ಈಚೆ ದಡದಲ್ಲಿದ್ದವರು ಆಚೆ ದಡದ ದೋಣಿ  ಪಡೆಯುವದು ಸುಲಭವಲ್ಲ, ೧-೨ ಕಿಲೋ ಮೀಟರ್ ದೂರದ ಮನೆಯ ಯಾರಾದರೂ ಬಂದು ಈಚೆ ದಂಡೆಗೆ ದೋಣಿ ತರಬೇಕು! ಅಲ್ಲಿನ ರಸ್ತೆಯಂಚಿನ ಅಂಗಡಿಯಲ್ಲಿ  ಯಾವತ್ತೂ  ಗರ್ನಾಲ್ ಸಿಗುತ್ತಿತ್ತು. ಹೊಳೆ ದಂಡೆಗೆ ಹೋಗಿ ಗರ್ನಾಲ್ ಸಿಡಿಸಿದರೆ ಸಪ್ಪಳ ಮರ್ಸೆ ಹಳ್ಳಿಗೆ ಕೇಳುತ್ತದೆ. ಸಪ್ಪಳ ಕೇಳಿದವರು ಹೊಳೆ ದಂಡೆಯಲ್ಲಿ ಯಾರೋ ದೋಣಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು  ದೋಣಿ ದಡಕ್ಕೆ ತಂದು ನೆರವಾಗುತ್ತಿದ್ದರು. ಶಾಲೆಗೆ ಹೋಗುವ ಮಕ್ಕಳು, ಮಹಿಳೆಯರೆಲ್ಲ  ಅಲ್ಲಿ ದೋಣಿ ನಡೆಸುವ ಪರಿಣಿತರು. ಈ ಊರಿನ ಶಾಲೆಗೆ ಒಮ್ಮೆ  ಹೊಸ ಮೇಷ್ಟ್ರು ಬಂದಿದ್ದರು, ನೀರು ಕಂಡರೆ ಇವರಿಗೆ ಸದಾ ಭಯ. ಶಾಲೆ ಮುಗಿಸಿ ಮನೆಗೆ ಹೊರಟರೆ ದೋಣಿ ನಡೆಸಲಾಗದ ಮೇಷ್ಟ್ರು ಒಮ್ಮೊಮ್ಮೆ ರಾತ್ರಿವರೆಗೂ ದಂಡೆಯಲ್ಲಿ ಕಾಯುತ್ತ ಕುಳಿತ ಪ್ರಸಂಗಗಳಿವೆ ! ಕಟ್ಟಕಡೆಗೆ ಕಾಡುಕಷ್ಟ ಮೇಷ್ಟ್ರಿಗೂ ಪಾಠ ಹೇಳಿತು, ಮುಂದಿನ  ಎರಡು ಮೂರು ತಿಂಗಳಲ್ಲಿ ಅವರು ಸ್ವತಃ ದೋಣಿ ಬಿಡಲು ಕಲಿತರು.

ನಮ್ಮ ಹಳ್ಳಿಗಳಲ್ಲಿ ಮಕ್ಕಳ ಜತೆಗೆ ಮಾತಾಡುವಾಗ ಹಿರಿಯರು ಈಜು ಬರುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿ ಕೇಳುತ್ತಿದ್ದರು. ಯಾವ ಮಕ್ಕಳಿಗೆ ಈಜು ಬರುವದಿಲ್ಲವೋ ಅವರ ಮನೆಯ ಸನಿಹದಲ್ಲಿ ಹಳ್ಳ, ಹೊಳೆಗಳಿಲ್ಲವೆಂದು ಅರ್ಥೈಸಬಹುದಿತ್ತು. ಅಂತಹ ಮಕ್ಕಳು ಈಜು ಕಲಿಯುವದನ್ನೇ ನೆಪಮಾಡಿಕೊಂಡು ರಜಾ ದಿನಗಳಲ್ಲಿ  ಹೊಳೆದಂಡೆ ಹತ್ತಿರವಿರುವ ನೆಂಟರ ಮನೆಗೆ ಹೋಗುತ್ತಿದ್ದರು. ಹತ್ತಾರು ಮಕ್ಕಳ ತಂಡ ಕಟ್ಟಿಕೊಂಡು  ನೀರಿನ ಭಯ ಮರೆತು ಈಜು ಕಲಿಯುತ್ತಿದ್ದರು. ಆ ಕಾಲಕ್ಕೆ ಈಜುವುದರಿಂದ ವ್ಯಾಯಾಮವಾಗುತ್ತದೆ ಎಂಬುದಕ್ಕಿಂತ ಬದುಕಿಗೆ ಅನಿವಾರ್ಯ ವಿದ್ಯೆ ಅದೆಂಬ ತಿಳುವಳಿಕೆಯಿತ್ತು. ಉರಿಬಿಸಿಲಲ್ಲಿ ಒಳ್ಳೆಯ ಆಟವಾಗಿತ್ತು.

ಈಗ ಹಳ್ಳಿ ಮಕ್ಕಳ ಬಾಲ್ಯವನ್ನೊಮ್ಮೆ ಕಣ್ತೆರೆದು ನೋಡಿ, ಪ್ರತಿ ಊರಲ್ಲಿ ಈಜುಬಾರದ  ಪಂಡಿತರ ಸಂತತಿ ಬೆಳೆಯುತ್ತಿದೆ. ಹುಟ್ಟಿದ ಒಂದು ಮಗುವಿಗೆ  ವಿದ್ಯೆ ಕಲಿಸುವಲ್ಲಿ  ಅಪಾರ ಗಮನ ನೀಡುವ ಪಾಲಕರು ಅವರ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದಾರೆ.  ಹಳ್ಳದ ನೀರಿನಲ್ಲಿ ಈಜು ಕಲಿಸಲು  ಯಾರಿಗೂ ಆಸಕ್ತಿಯಿಲ್ಲ. ವಹಿರಿಯರ ಸಂರಕ್ಷಿತ ವಲಯದಲ್ಲಿ ಬಾಲ್ಯದ ದಿನಗಳು  ಕಳೆಯುತ್ತಿವೆ. ನೀರು ಎಂದರೆ ಅಪಾಯ, ಹಳ್ಳದ ನೀರಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ಬಂದೀತು, ಕಾಯಿಲೆ ಬಂದೀತೆಂಬ ಭಯ ಮಕ್ಕಳಲ್ಲಿ ಮೂಡುತ್ತಿದೆ. ನಾವು ಚಿಕ್ಕವರಾಗಿದ್ದಾಗ ನದಿ, ನದಿದಂಡೆ ನಮಗೆ ತೋರಿಸಿದ ಪ್ರೀತಿಯನ್ನು ಈಗಿನ ಮಕ್ಕಳು ಕಳಕೊಂಡಿದ್ದಾರೆ. ಪುಟ್ಟ ಮಿದುಳಲ್ಲಿ ಏನೆಲ್ಲ ವಿದ್ಯೆ  ತುಂಬಿದ ನಾವು  ನೆರೆಯ ನದಿಯಲ್ಲಿ ಬದುಕುವ ವಿದ್ಯೆ  ಹೇಳುತ್ತಿಲ್ಲ!. ಕೆಲವು ಮಕ್ಕಳಂತೂ ನದಿ ಈಜಿನ ನೈಸರ್ಗಿಕ ಅವಕಾಶ ಮರೆತು  ನಗರದ ಈಜು ಕೊಳಗಳಲ್ಲಿ  ದುಬಾರಿ ವಿದ್ಯೆ  ಹುಡುಕುತ್ತಿದ್ದಾರೆ.