ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾತಜ್ಞರ, ತಂತ್ರಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಡಾ. ಎಚ್.ಡಿ. ಪ್ರಶಾಂತ್ ಅವರು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮ್ಮ ವಿಶಿಷ್ಟ ಯೋಜನೆಯ ಕಾರ್ಯಗಳಿಂದ ಉತ್ತಮ ಸಾಧನೆ ನಡೆಸಿದ್ದಾರೆ. ‘ಶಾಲಾ ಬಿಸಿಯೂಟ’ ಕುರಿತ ಅವರ ಕಿರುಹೊತ್ತಿಗೆ ಈಗಾಗಲೇ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಗಮನ ಸೆಳೆದಿದೆ. ‘ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ’ ಎನ್ನುವ ಈ ಯೋಜನೆಯ ಫಲಶ್ರುತಿ ಕರ್ನಾಟಕದ ಪ್ರಾಥಮಿಕ ಶಿಕ್ಷಣದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವವಾದದ್ದು. ಸಾಕ್ಷರತೆ, ಮಕ್ಕಳ ಶಿಕ್ಷಣ ಮತ್ತು ಬದಲಾಗುತ್ತಿರುವ ಪೋಷಕರ ಮನಸ್ಸು, ಶಾಲೆಯಲ್ಲಿರುವ ಪೀಠೋಪಕರಣಗಳು, ಬಿಸಿಯೂಟ ಇಂತಹ ವಿಷಯಗಳು ಅನೇಕ ವೇದಿಕೆಗಳಲ್ಲಿ ಚರ್ಚೆಯಾಗಿವೆ. ಆದರೆ ಸಮಸ್ಯೆಗಳು ದೊಡ್ಡ ಪ್ರಮಾಣದಲ್ಲಿ ಪರಿಹಾರ ಕಂಡಿಲ್ಲ. ಸಾಕ್ಷರತೆಯ ಕುರಿತು ಚರ್ಚಿಸುವಾಗ ಡಾ. ಎಚ್.ಡಿ. ಪ್ರಶಾಂತ್ ಗ್ರಾಮ ಪಂಚಾಯತಿಗಳ ಸಾಕ್ಷರತೆ ಪ್ರಮಾಣದ ಏರುಪೇರನ್ನು ಗುರುತಿಸುವುದು ಮುಖ್ಯವಾದುದು. ಈ ಕ್ಷೇತ್ರದ ಸಮಸ್ಯೆಗಳಷ್ಟೇ ಗುರುತಿಸಿದೆ ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ. ಶಾಲೆಗಳು ಎಲ್ಲರಿಗೂ ದೊರೆತಿವೆಯೇ ಎಂಬ ಪ್ರಶ್ನೆ ನಾವು ಜರೂರಾಗಿ ಎದುರಿಸಬೇಕಾದದ್ದು. ಶಾಲೆಗಳ ಮೂಲ ಸೌಲಭ್ಯಗಳ ಕುರಿತು ಅಧ್ಯಯನವು ಹೆಚ್ಚು ಸೂಕ್ಷ್ಮವಾಗಿ ಅಧ್ಯಯನಶೀಲವಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಲಿಂಗಾಧಾರಿತ ಪಕ್ಷಪಾತಗಳನ್ನು ಪರಿಹರಿಸಿಕೊಳ್ಳುವುದು ಬೋಧಕ ಸೌಲಭ್ಯವನ್ನು ಕೊಡುವುದಷ್ಟೇ ಮುಖ್ಯ ಎನ್ನುವ ವಾದವನ್ನು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಶಾಲಾ ಬಿಸಿಯೂಟ ಕುರಿತು ತುಂಬ ತಲಸ್ಪರ್ಶಿಯಾದ ಅಧ್ಯಯನ ಮಾಡಿರುವ ಡಾ. ಪ್ರಶಾಂತ್ ಅವರು ಅದರ ಎಲ್ಲ ಆಯಾಮಗಳನ್ನು ಜೊತೆಯಾಗಿಯೇ ನಿರ್ವಹಿಸಿದ್ದಾರೆ. ಅವರು ಕೊಟ್ಟಿರುವ ಸಲಹೆಗಳು ತುಂಬ ಮನನೀಯವಾಗಿವೆ. ಸ್ಥಳೀಯ ಮಟ್ಟದಲ್ಲಿ ಶಿಕ್ಷಣದ ಆಡಳಿತ ವಿಸ್ತರಣೆಗಳ ಸವಾಲನ್ನು ಚರ್ಚಿಸುವ ಭಾಗ ಇಡೀ ಯೋಜನೆಯಲ್ಲಿ ಅತ್ಯಂತ ವಿಶಿಷ್ಟವಾದದ್ದು. ನಮ್ಮ ಸಾರ್ವಜನಿಕ ಶಿಕ್ಷಣದ ನೀತಿ ನಿರೂಪಣೆಯಲ್ಲಿ ಸ್ಥಳೀಯ ಮಟ್ಟದ ಸಂಗತಿಗಳಣ್ನು ಪರಿಗಣನೆಗೆ ತೆಗೆದು ಕೊಂಡಿಲ್ಲ. ಸರಕಾರದ ನೀತಿ ನಿರೂಪಣೆಗಳು ಕೇವಲ ಅಂಕಿಸಂಖ್ಯೆಗಳ ಶೇಕಡಾವಾರಿನಲ್ಲಿ, ಸರಾಸರಿಗಳ ಮೋಡಿಯಲ್ಲಿ, ಕೋಷ್ಟಕಗಳ ಗ್ರಾಫ್‌ಗಳ ಮಾಯಾಜಾಲದಲ್ಲಿ ತುಂಬಿಕೊಂಡಿರುತ್ತವೆ. ಈ ಮಾಯಾಜಾಲದಿಂದ ಹೊರಗೆ ಬಾರದೆ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬದಲಾವಣೆ ಸಾಧ್ಯವಾಗುವುದಿಲ್ಲ. ಸಂಖ್ಯಾಶಾಸ್ತ್ರಕ್ಕೆ ನಮ್ಮ ಸರಕಾರ ಕೊಟ್ಟಿರುವ ಅತಿಯಾದ ಪ್ರಾಶಸ್ತ್ಯ ನಮ್ಮ ಅಭಿವೃದ್ಧಿಗೆ ಅನೇಕ ಬಾರಿ ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕದ ಕೊನೆಯ ಅಧ್ಯಾಯವು ಉತ್ತಮ ಬೆಳವಣಿಗೆ, ಅಸಮಾಧಾನಗಳನ್ನು ಕೊನೆಗೊಳಿಸುವ ಒಳ್ಳೆಯ ಉದಾಹರಣೆ. ಈಶಾನ್ಯ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಘೋಷಣೆಯಿಂದ ಹೊರಬಂದು ನಮ್ಮ ಪ್ರಾಥಮಿಕ ಶಿಕ್ಷಣದ ಸಮಸ್ಯೆಗಳನ್ನು ಇಂತಹ ಯೋಜನೆಗಳ ಮೂಲಕ ಅರ್ಥ ಮಾಡಿಕೊಂಡರೆ ಮಾತ್ರ ಶಿಕ್ಷಣದಲ್ಲಿ ನಿಜವಾದ ಸುಧಾರಣೆ ಸಾಧ್ಯ. ಇಂತಹ ಉಪಯುಕ್ತ ಯೋಜನೆಯನ್ನು ನಿರ್ವಹಿಸಿ ಬರಹದ ರೂಪದಲ್ಲಿ ಒದಗಿಸಿದ ಡಾ. ಎಚ್.ಡಿ. ಪ್ರಶಾಂತ್ ಅವರಿಗೆ ಅಭಿನಂದನೆಗಳು.

ಬಿ.ಎ. ವಿವೇಕ ರೈ
ಕುಲಪತಿ