ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಪ್ರತಿಯೊಬ್ಬರಿಗೂ ಪ್ರಾಥಮಿಕ ಶಿಕ್ಷಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ೮೩ನೇ ತಿದ್ದುಪಡಿಯನ್ನು ೧೯೯೭ರ ಜುಲೈನಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಈ ಪ್ರಯತ್ನ ಕೇವಲ ಆರಂಭವೆ ಹೊರತು ಕೊನೆಯಲ್ಲ. ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಆಶಯ ಹೊಂದಿದ ಕಾನೂನುಗಳಿಂದ ಸುಮಾರು ಅರ್ಧ ಶತಮಾನ ಉಪೇಕ್ಷೆಗೆ ಒಳಗಾಗಿದೆ. ಪ್ರಾಥಮಿಕ ಶಿಕ್ಷಣ ಗುಣಾತ್ಮಕವಾಗಿ ಎಲ್ಲರಿಗೂ ದೊರೆಯಬೇಕಾದರೆ ಅಗಾಧವಾದ ಪ್ರಯತ್ನ ಅಗತ್ಯ. ಈ ಪ್ರಯತ್ನ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಆದರೂ ಸರ್ಕಾರಗಳು ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ವಿಶೇಷವಾದ ಜವಾಬ್ದಾರಿಯನ್ನು ಮತ್ತು ಕಾರ್ಯಕ್ರಮಗಳನ್ನು ಹೊಂದಿರಬೇಕಾಗುತ್ತದೆ. ಅಲ್ಲದೆ ವಿರೋಧ ಪಕ್ಷಗಳು, ಸಾಮಾಜಿಕ ಚಳುವಳಿಗಳು ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನವಾದ ಬಗ್ಗೆ ಸರ್ಕಾರದ ಔದಾಸಿನ್ಯತೆಯನ್ನು ಆಗಾಗ್ಗೆ ತುಂಬುವಂತಿರಬೇಕು. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ಗುಣಾತ್ಮಕವಾಗಿ ಜಾತಿಗೊಳ್ಳಬೇಕಾದರೆ ಶಿಕ್ಷಕರು, ಜನಪ್ರತಿನಿಧಿಗಳು, ಪೋಷಕರು ಮತ್ತು ಸಮಾಜದ ಇತರ ಸದಸ್ಯರು ಮತ್ತು ಸಂಘ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ತೊಡಗಿಸಿಕೊಳ್ಳುವುದು ಕೂಡ ಅವಶ್ಯಕವಾಗಿದೆ. ಶಿಕ್ಷಕರು ಶಾಲೆಯ ಕೊಠಡಿಗಳಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ಬರುವಂತೆ ತಿಳಿಸದೆ ಇರುವುದು ಅಥವಾ ಪೋಷಕರು ಕ್ಷುಲ್ಲಕ ಕಾರಣಗಳಿಗೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಅಥವಾ ಬಾಲಕಾರ್ಮಿಕರನ್ನು ಶೋಷಿಸುವುದು ಇತ್ಯಾದಿ ಅಂಶಗಳು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಹಕ್ಕನ್ನು ಧಿಕ್ಕರಿಸುತ್ತವೆ. ಹೀಗಾಗಿ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ಸಕಾರಾತ್ಮಕವಾಗಿ ಎತ್ತಿ ಹಿಡಿಯುವುದು ಸಾಮಾಜಿಕ ಜವಾಬ್ದಾರಿ. ಇದರಿಂದ ಯಾರೊಬ್ಬರೂ ಹೊರತಾಗುವಂತಿಲ್ಲ.

.. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಅವಶ್ಯವೆ?

ಈ ಪ್ರಶ್ನೆ ಹುಟ್ಟಿ ಸುಮಾರು ದಶಕಗಳೆ ಕಳೆದಿವೆ ಮತ್ತು ಈ ಪ್ರಶ್ನೆಯನ್ನು ಕುರಿತು ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಸಂವಿಧಾನದ ೪೫ನೆಯ ನಿರ್ದೇಶಕ ತತ್ವದನ್ವಯ ಎಲ್ಲಾ ರಾಜ್ಯಗಳು ೦೬-೧೪ ವರ್ಷದ ಎಲ್ಲಾ ಮಕ್ಕಳಿಗೆ ಉಚಿತ, ಕಡ್ಡಾಯ ಸರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕು, ಎಂಬುದಕ್ಕೆ ಬದಲಾಗಿ ಪ್ರಾಥಮಿಕ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಎಂದು ಇಂದು ಪರ್ಯಾಲೋಚಿಸಲಾಗಿದೆ. ಆದರೆ ಎಲ್ಲಾ ನಾಗರಿಕರು ಸುಶಿಕ್ಷಿತರಾಗುವ ಅವಶ್ಯಕತೆ ಇಲ್ಲ ಎಂಬ ಭಾವನೆ ಕೆಲವರಲ್ಲಿ ಬಹಳ ವಿಸ್ತಾರವಾಗಿದೆ. ಅಲ್ಲದೆ ಪ್ರಾಥಮಿಕ ಶಿಕ್ಷಣ ನೀಡುವುದು ಸಾಮಾಜಿಕ ಜವಾಬ್ದಾರಿ ಏಕೆ? ಇನ್ನೂ ಕೆಲವು ಶಿಕ್ಷಕರು ಕೂಡ ತಳವರ್ಗ ಜಾತಿಯ ಮಕ್ಕಳಿಗೆ ಶಿಕ್ಷಣ ಅನವ್ಯಶಕ ಎಂಬ ದೃಷ್ಟಿಕೋನವನ್ನು ಹೊಂದಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ವಾಸ್ತವಿಕವಾಗಿ ಈ ದೃಷ್ಟಿಕೋನವು ಕೆಲವು ಮಕ್ಕಳಿಗೆ ಶಾಲೆಯು ಅನವಶ್ಯಕ ಆಗಿದೆ. ಏಕೆಂದರೆ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಕೆಲವು ಸಲ ಅನುಪಯುಕ್ತವೆನಿಸುತ್ತಿವೆ. ಆಸಕ್ತಿಯ ವಿಷಯವೆಂದರೆ, ಶಿಕ್ಷಣದ ಬಗ್ಗೆ ತಳವರ್ಗ ಜಾತಿಯ ಪೋಷಕರಲ್ಲಿ ಉತ್ತಮ ಮನೋಭಾವನೆ ಇರುವುದನ್ನು ನಾವು ಸಹ ಗುರುತಿಸಿದ್ದೇವೆ. ಆದರೆ ಮೇಲುವರ್ಗ ಜಾತಿಯ ಪೋಷಕರಲ್ಲಿ ಮಕ್ಕಳಿಗೆ ಉತ್ತಮವೆನಿಸಿದ ಶಿಕ್ಷಣ ನೀಡಬೇಕು ಎಂಬ ಹಂಬಲ ಇರುವುದು ತಿಳಿಯುತ್ತದೆ. ಇದು ಏನೇ ಇದ್ದರೂ ಶಿಕ್ಷಣದ ಮೌಲ್ಯವನ್ನು ಕುರಿತ ಚರ್ಚೆಯು ಮೇಲಿನ ರೀತಿಯಲ್ಲಿ ಸರಿ ತಪ್ಪುಗಳನ್ನು ಬಿಡದೆ ಕಾಡುತ್ತಿದೆ (ಹೆಚ್ಚಿನ ವಿವರಣೆಗೆ ನೋಡಿ ಅಧ್ಯಾಯ-೪)

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಪರವಾಗಿರುವ ಎಲ್ಲರಿಗೂ ಈ ಸಾಮಾಜಿಕ ಗುರಿ ಯಾವಾಗಲೂ ಎಷ್ಟು ಪ್ರಮುಖವಾದದ್ದು ಎಂಬುದರ ಬಗೆಗೆ ಸಂಪೂರ್ಣವಾದ ಅರಿವು ಇಲ್ಲ. ಉದಾಹರಣೆಗೆ ಸರ್ಕಾರಗಳ ಯೋಜನಾಕಾರರು ಮತ್ತು ವ್ಯಾಪಾರಿ ಗುಂಪುಗಳು, ಆಗಾಗ ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ ಎಂಬುದನ್ನು ಪ್ರತಿಪಾದಿಸುತ್ತವೆ. ಇದು ಸತ್ಯ, ಆದರೆ ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆ ಮಾನವ ಬಂಡವಾಳವನ್ನು ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನದಾಗಿದೆ. ಇಂತಹ ಅಸಂಬಂಧ ಕ್ಷೀಣಿತ ದೃಷ್ಟಿಕೋನಗಳು ಮತ್ತು ತರ್ಕಗಳು ಬಹುಶಃ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಸಂಘಟಿತ ಮತ್ತು ಗುರಿ ಕಾಣದೆ ಇರಲು ಕೆಲವು ಕಾರಣಗಳನ್ನು ನೀಡಲು ಸರ್ಕಾರಗಳಿಗೆ ಸಹಕಾರಿಯಾಗಿವೆ. ಪ್ರಾಥಮಿಕ ಶಿಕ್ಷಣವು ಮಾನವ ಬಂಡವಾಳವನ್ನು ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನದು ಎಂಬುದನ್ನು ಎಂಟು ಪ್ರಮುಖ ಅಂಶಗಳಿಂದ ಪ್ರತಿಪಾದಿಸಬಹುದು.

. ಮೂಲಭೂತ ಹಕ್ಕು

ಈಗಾಗಲೇ ನಮಗೆ ತಿಳಿದಿರುವಂತೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಅತ್ಯಮತ ಪ್ರಮುಖವಾದದ್ದು. ಉದಾಹರಣೆಗೆ ವ್ಯಕ್ತಿಯೊಬ್ಬ ವೈಯಕ್ತಿಕ ಸಂಪತ್ತನ್ನು ಹೊಂದಿರುವ ಹಾಗೆ, ಇತರ ಸಂವಿಧಾನದ ಹಕ್ಕುಗಳು ಎಲ್ಲರಿಗೂ ಶಿಕ್ಷಣ ನೀಡುವ ಹಕ್ಕನ್ನು ಒಳಗು ಮಾಡಿಕೊಳ್ಳಬೇಕು ಎಂಬ ಅಂಶವನ್ನು ೧೯೯೩ ಫೆಬ್ರವರಿಯಲ್ಲಿ ಸುಪ್ರಿಂಕೋರ್ಟ್ ಎತ್ತಿಹಿಡಿಯಿತು. ಪ್ರಾಥಮಿಕ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಎಂಬುದನ್ನು ೮೩ ನೆಯ ಸಂವಿಧಾನ ತಿದ್ದುಪಡಿಯಲ್ಲಿ ವಿಶೇಷವಾದ ಮಾನ್ಯತೆ ನೀಡಿ ಪರಿಗಣಿಸಲಾಗಿದೆ. ಇದಕ್ಕೆ ಪ್ರತಿಪಾದಿಸಿರುವ ಸಂವಿಧಾನ ತಿದ್ದುಪಡಿಯ ವಾದವೆಂದರೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಒಂದು ಪ್ರಮುಖ ಮತ್ತು ಅವಶ್ಯಕವಾದ ಸಾಮಾಜಿಕ ಗುರಿಯಾಗಿ ಪರಿಗಣಿಸುವುದು.

. ಸಾರ್ವತ್ರಿಕ ಬೇಡಿಕೆ

ಬಡತನದಲ್ಲಿ ಇರುವ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ವಿರೋಧವಾದ ಅಭಿಪ್ರಾಯವನ್ನು ಶಿಕ್ಷಣಕ್ಕೆ ಅಗಾಧವಾದ ಪ್ರಮಾಣದಲ್ಲಿ ಬೇಡಿಕೆ ಇದೆ ಎಂಬುದನ್ನು ‘ಪ್ರೋಬ್’ ಸಮೀಕ್ಷೆ ತಿಳಿಸುತ್ತದೆ. ನಮ್ಮ ಅಧ್ಯಯನದಲ್ಲಿಯೂ ಕೂಡ ಪೋಷಕರು ಇದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಂದು ಅವಶ್ಯಕವೆ ಎಂಬ ಪ್ರಶ್ನೆಗೆ ಶೇಕಡ ೯೨.೩೬ ರಷ್ಟು ಪೋಷಕರು ಅವಶ್ಯಕ ಎಂದು ಹೇಳಿದ್ದರೆ, ಶೇಕಡ ೩.೨೪ ರಷ್ಟು ಪೋಷಕರು ಯಾವುದೇ ಉತ್ತರವನ್ನು ನೀಡಲಿಲ್ಲ. ಶೇಕಡ ೪.೪೦ರಷ್ಟು ಪೋಷಕರು ನಿಖರವಾದ ಉತ್ತರವನ್ನು ನೀಡುವಲ್ಲಿ ವಿಫಲರಾಗಿದ್ದಾರೆ (ನೋಡಿ: ಅಧ್ಯಾಯ-೪) ಕೆಲವರು ನಮಗೆ ಇರುವ ಆದಾಯದಿಂದ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ತೋರಿಸಿದ್ದಾರೆ. ಹೀಗಾಗಿ ಶಿಕ್ಷಣಕ್ಕೆ ಇರುವ ಬೇಡಿಕೆ ಸಾರ್ವತ್ರಿಕವಾಗಿಲ್ಲ, ಆದರೆ ಇದು ವಿಶಾಲವಾಗಿದೆ ಮತ್ತು ಶರವೇಗದಲ್ಲಿ ಬೆಳೆಯುತ್ತಿದೆ. ಈಗಾಗಲೇ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಹಿನ್ನಡೆ ಉಂಟಾಗಿರುವುದು ಸಾರ್ವತ್ರಿಕ ಹೆಬ್ಬಯಕೆಯನ್ನು ಧಿಕ್ಕರಿಸಿದಂತೆ.

. ಮಾನವ ಬಂಡವಾಳ

ಆರ್ಥಿಕ ಸಬಲೀಕರಣಕ್ಕೆ ಶಿಕ್ಷಣ ಅತ್ಯಂತ ಪ್ರಮುಖವಾದ ಅಂಶ ಎಂಬ ವಿಷಯವನ್ನು ಇತ್ತೀಚಿನ ಅಧ್ಯಯನಗಳು ಎತ್ತಿಹಿಡಿದಿವೆ. ದೂರದೃಷ್ಟಿಯಿಂದ ಈ ಅಂಶವು ಬಡತನದಲ್ಲಿ ಇರುವ ಪೋಷಕರಿಗೆ ಹೆಚ್ಚು ಮಹತ್ವದಾಗಿದೆ. ಹಾಗಾಗಿ ಇತರ ಆರ್ಥಿಕ ಅಭಿವೃದ್ಧಿಗಿಂತ, ಮಕ್ಕಳ ಶಿಕ್ಷಣವು ವಿಶೇಷವಾಗಿ ಗಂಡು ಮಕ್ಕಳ ಶಿಕ್ಷಣವು ಪ್ರಮುಖವಾಗಿ ಉತ್ತಮ ವೃತ್ತಿಗಳನ್ನು ಮತ್ತು ಹೆಚ್ಚಿನ ಆದಾಯವನ್ನು ನೀಡುವ ಅವಕಾಶವನ್ನು ಕಲ್ಪಿಸುತ್ತದೆ ಎಂದು ಭಾವಿಸಿರುವವರ ಸಂಖ್ಯೆ ಕಡಿಮೆ ಏನು ಇಲ್ಲ (ನೋಡಿ: ಅಧ್ಯಾಯ-೪) ಬೌದ್ಧಿಕ ಶಿಕ್ಷಣದ ಈ ಭೌತಿಕ ದೃಷ್ಟಿಯನ್ನು ಕೆಲವು ಅಧ್ಯಯನಕಾರರು ಕಡೆಗಣಿಸುತ್ತಾರೆ. ಆದರೆ ಆರ್ಥಿಕವಾಗಿ ಬಹಳ ಹಿಂದುಳಿದಿರುವ ಪೋಷಕರ ಆರ್ಥಿಕ ರಕ್ಷಣೆಯ ಮನೋಭಾವನೆಯನ್ನು ಕಡೆಗಣಿಸಲು ಯಾವುದೇ ಕಾರಣವಿಲ್ಲ. ಹಾಗೆಯೇ ಆರ್ಥಿಕ ಸ್ವಾವಲಂಬನೆಯೂ ಕೂಡ ನಿರಾಕರಣೆ ಮಾಡುವ ಅಂಶವಲ್ಲ.

. ಕಲಿನಲಿ

ಕಲಿಕೆಗೆ ಪೂರಕವಾದ ಪರಿಸರವಿರುವ ಮಕ್ಕಳು ಶಾಲಾ ವ್ಯವಸ್ಥೆಯಲ್ಲಿ ಸ್ನೇಹಿತರು, ಆಟ ಹಾಗೂ ಓದಿನ ಮೂಲಕ ವಿಶಿಷ್ಟ ಅನುಭವಗಳನ್ನು ಪಡೆಯುತ್ತಾರೆ. ನಮ್ಮ ಅಧ್ಯಯನದಲ್ಲಿ ಮಕ್ಕಳಿಗೆ ಏಕೆ ನೀವು ಓದುವುದನ್ನು ಮುಂದುವರಿಸುತ್ತಿದ್ದೀರಿ ಎಂಬ ಪ್ರಶ್ನೆ ಕೇಳಿದಾಗ, ಅವರ ಉತ್ತರ ದೂರದೃಷ್ಟಿಗೆ ವಿರುದ್ಧವಾಗಿ ಭವಿಷ್ಯದ ಅನುಕೂಲಗಳಿಗಿಂತ ತಾತ್ಕಾಲಿಕವಾದ ತೃಪ್ತಿ (ಶಾಲೆಯಲ್ಲಿನ ಆಟ ಪಾಠ, ಸ್ನೇಹಿತರು ಇತ್ಯಾದಿ) ಬಹಳ ಇಷ್ಟ ಎಂದು ಉತ್ತರಿಸುತ್ತಾರೆ. ಅನೇಕ ವರ್ಷಗಳ ನಂತರ ವಿಶೇಷ ಅನುಭವವಿಲ್ಲದ ಇಂತಹ ಅವಕಾಶಗಳಿಂದ ವಂಚಿತರಾದ ಉದಾಹರಣೆಗಳಿವೆ. ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಮನೆ ಕೆಲಸಕ್ಕೆ ನಿರ್ದೇಶಿದಾಗ, ಅವರು ಆಗಾಗ್ಗೆ ತಮ್ಮ ಶಾಲೆಯ ದಿನಗಳನ್ನು ಕಾತುರದಿಂದ ಮೆಲುಕು ಹಾಕುತ್ತಿರುತ್ತಾರೆ. ಅಲ್ಲದೇ ಕೆಲವು ಸಂದರ್ಭದಲ್ಲಿ ಶಾಲೆಯ ಪರಿಸರವೂ ಉಲ್ಲಾಸ ಭರಿತ ಕಲಿಕೆಗೆ ತಾತ್ಕಾಲಿಕ ಅವಕಾಶವನ್ನು ಮಾಡಿಕೊಡುವುದಿಲ್ಲ, ಇದು ಅನೇಕ ಮಕ್ಕಳ ಮನೋವ್ಯಾಧಿಗೂ ಕಾರಣವಾಗಿದೆ. ಹೀಗಾಗಿ ಕೇವಲ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಹಕ್ಕು ಎನ್ನುವುದಕ್ಕಿಂತ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕು ಎನ್ನುವ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಆಟ ಪಾಠ, ಸಂತೋಷದಿಂದ ಕಲಿ-ನಲಿ ಶಿಕ್ಷಣ ಪಡೆಯಬೇಕಾದ ಮಕ್ಕಳಿಗೆ ಶಾಲೆಯಲ್ಲಿ ಬೇಸರ ಅಪಮಾನ ಶಿಕ್ಷೆ ಪ್ರತಿದಿನ ಕಾರ್ಯಕ್ರಮದಂತಿದ್ದರೆ ಮಕ್ಕಳ ಮನಸ್ಸನ್ನು ಹಿಸುಕಿದಂತೆ ಆಗುತ್ತದೆ.

. ನಡವಳಿಕೆ

ಶಿಕ್ಷಣ ಮತ್ತು ನಡವಳಿಕೆಗಳ ನಡುವಿನ ಸಂಬಂಧ ಆರ್ಥಿಕ ಬೆಳವಣಿಗೆ ಮತ್ತು ಕಲಿ-ನಲಿಗಿಂತ ಮಹತ್ವದ್ದು. ಇದಕ್ಕೆ ಅನೇಕ ಉದಾಹರಣೆಗಳಿವೆ. ಶಿಕ್ಷಣವು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮಟ್ಟಿಗೆ ಸಹಕಾರಿಯಾಗಿದೆ ಮತ್ತು ಮಕ್ಕಳನ್ನು ರೋಗಾಣುಗಳಿಂದ ದೂರವಿರಿಸುತ್ತದೆ. ಈ ಕಾರಣದಿಂದಲೇ ಭಾರತದ ಪ್ರಥಮ ಸಾಕ್ಷರತೆ ಸಾಧಿಸಿರುವ ಕೇರಳ ರಾಜ್ಯದಲ್ಲಿ ಶಿಶುಮರಣ ದರವು ಹುಟ್ಟುವ ಒಂದು ಸಾವಿರ ಮಕ್ಕಳಲ್ಲಿ ಕೇವಲ ೧೪ ಮಾತ್ರ. ಇದನ್ನು ಮಧ್ಯಪ್ರದೇಶದ ಶಿಶುಮರಣ ದರದ (ಸಾವಿರಕ್ಕೆ ೯೭) ಜೊತೆ ಹೋಲಿಸಿ ನೋಡಿದರೆ ಬಹಳ ಕಡಿಮೆ. ಶಿಕ್ಷಣವು ವೈಯಕ್ತಿಕ ನಡವಳಿಕೆಯನ್ನು ವೃದ್ಧಿಸುತ್ತದೆ. ಸಾಮಾನ್ಯವಾಗಿ ಅನಕ್ಷರಸ್ಥನೊಬ್ಬ ಕಡಿಮೆ ಮಟ್ಟ ಸ್ವಾಭಿಮಾನ ಮತ್ತು ಸಾಮಾಜಿಕ ಸ್ಥಾನವನ್ನು ಹೊಂದಿರುತ್ತಾನೆ. ಇದೇ ಮನೋಭಾವನೆಯು ಶಾಲೆ ಬಿಟ್ಟ ಮಕ್ಕಳ ಬಗ್ಗೆಯು ಇದೆ. ಶಾಲೆ ಬಿಟ್ಟ ಮಕ್ಕಳಲ್ಲಿ ಕೆಲವರು ಮುಂದಿನ ದಿನಗಳಲ್ಲಿ ದುಡಿಯುವ ಬಾಲಕಾರ್ಮಿಕರಾಗಿ ದೈಹಿಕ ಶೋಷಣೆಗೆ ಒಳಗಾಗುತ್ತಾರೆ. ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳು ಸಾಮಾನ್ಯವಾಗಿ ಮಕ್ಕಳ/ಜನರ ಚಟುವಟಿಕೆಯ ಸಮಷ್ಟಿಯನ್ನು ಮೌಲ್ಯೀಕರಿಸಿ ಇಮ್ಮಡಿಗೊಳಿಸುತ್ತವೆ. ಉದಾಹರಣೆಗೆ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಹೊಸ ಹೊಸ ಅವಕಾಶಗಳ ಬಗ್ಗೆ, ಶೋಷಣೆ ಮತ್ತು ಕಿರುಕುಳಗಳಿಂದ ರಕ್ಷಣೆ ಪಡೆಯುವ ಬಗ್ಗೆ, ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವ ವಿಧಾನದ ಬಗ್ಗೆ, ಸರ್ಕಾರಗಳಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಮತ್ತು ಸ್ಥಳೀಯ ರಾಜಕೀಯದಲ್ಲಿ ಭಾಗವಹಿಸುವ ಅವಕಾಶಗಳು, ಹೀಗೆ ಇನ್ನೂ ಮುಂತಾದ ಅನೇಕ ವಿಷಯಗಳನ್ನು ಶಿಕ್ಷಣದಿಂದ ಪಡೆದುಕೊಳ್ಳಬಹುದು. ಹೀಗೆ ದೊರಕುವ ಮಾಹಿತಿಯು ಜನರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನಡವಳಿಕೆಯನ್ನು ಬಹುಶಃ ಬದಲಾಯಿಸಿ ಬಿಡಬಹುದು.

. ಸಾಮಾಜಿಕ ಪ್ರಗತಿ

ಶಿಕ್ಷಣದ ಮೌಲ್ಯಗಳು ಹಾಗೂ ಉಪಯೋಗಗಳು ಶಿಕ್ಷಣ ಪಡೆದ ವ್ಯಕ್ತಿಗೆ ಮಾತ್ರ ಸಿಗದೆ, ಸಮಾಜದಲ್ಲಿ ಇತರರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತರೆ, ಅವನ/ಅವಳ ಸಾಮರ್ಥ್ಯವು ಅನೇಕ ಸಂದರ್ಭಗಳಲ್ಲಿ ಸಮುದಾಯ ಮಟ್ಟದ ಮತ್ತು ಕೌಟುಂಬಿಕ ಮಟ್ಟದ ಪ್ರಗತಿಗೂ ಕಾರಣೀಭೂತವಾಗುತ್ತದೆ. ಇದೇ ರೀತಿ ಅಕ್ಷರಸ್ಥ ತಾಯಿಯೊಬ್ಬರು ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚು ಉತ್ಸುಕಳಾಗುತ್ತಾಳೆ. ಈ ರೀತಿಯ ಶಿಕ್ಷಣದ ಅನುಕೂಲಗಳು ತಲೆ ತಲಾಂತರ ನಡುವೆ ಸಂಯೋಜಕ ಅಂಶವಾಗಿ ಕೆಲಸ ಮಾಡುತ್ತದೆ. ವಿಸ್ತೃತವಾಗಿ ಶೈಕ್ಷಣಿಕ ಪರಿಸರದಿಂದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದು ಹೇಗೆಂದರೆ ಮುಕ್ತ ಚರ್ಚೆ ಹಾಗೂ ಸಾರ್ವತ್ರಿಕ ಕ್ರಿಯೆಯ ಮೂಲಕ ಸಾಂಕ್ರಾಮಿಕ ರೋಗಗಳು, ಪರಿಸರ ಮಾಲಿನ್ಯ, ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾದ ತಿಳುವಳಿಕೆಯನ್ನು ನೀಡಬಹುದು. ಪ್ರಜಾಪ್ರಭುತ್ವ ಮಾದರಿಯು ವಿಶಾಲವಾಗಿ ವಿಸ್ತೃತವಾದ ಪ್ರಮಾಣದಲ್ಲಿ ನಡೆಯಬೇಕಾದರೆ ವಿಶಾಲ ಮಾಹಿತಿಯ ಹಂಚಿಕೆ ಮತ್ತು ವಿತರಣೆಯು ಇಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ವಿವಿಧ ದೃಷ್ಟಿಕೋನಗಳನ್ನು ಜನರಲ್ಲಿ ಮೂಡಿಸಲು ಇದು ಪ್ರಮುಖ ಮಾಧ್ಯಮವಾಗಿದೆ.

. ರಾಜಕೀಯ ಭಾಗವಹಿಸುವಿಕೆ

ಸಮಾಜದಲ್ಲಿ ಪ್ರತಿ ಒಬ್ಬ ನಾಗರಿಕರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಇರುವುದರಿಂದಲೆ ವಾಸ್ತವಿಕ ಪ್ರಜಾಪ್ರಭುತ್ವವು ಇನ್ನೂ ಮರೀಚಿಕೆಯಾಗಿದೆ. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಆರ್ಥಿಕ ಅಸ್ಥಿರತೆ, ಸಾಮಾಜಿಕ ರಕ್ಷಣೆ ಇಲ್ಲದೇ ಇರುವುದು, ಸಂಘಟನೆಯ ಕೊರತೆ ಇತ್ಯಾದಿ. ಹೀಗೆ ಸಕ್ರೀಯ ರಾಜಕೀಯ ಭಾಗವಹಿಸುವಿಕೆಗೆ ಇರುವ ಕೊರತೆಗಳನ್ನು ತುಂಬುವ ಸಾಮರ್ಥ್ಯವನ್ನು ಶಿಕ್ಷಣ ಹೊಂದಿದೆ. ಇದು ಮತದಾನದಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೇಳಿಕೆಗಳನ್ನು ನೀಡುವ ಮೂಲಕ ಅಥವಾ ಪ್ರತಿಭಟನೆಯನ್ನು ಸಂಘಟಿಸುವ ಮೂಲಕ ಸಾರ್ವಜನಿಕ ಚರ್ಚೆಯ ಪ್ರಕ್ರಿಯೆಗಳಿಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೆ ಸಾಮಾಜಿಕ ಅಭಿವೃದ್ಧಿ ಮತ್ತು ಸುಧಾರಣೆಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ವಿಶದಗೊಳಿಸುತ್ತದೆ. ಯಾವುದೇ ಸಮಾಜದ ಆರ್ಥಿಕ ಸುಧಾರಣೆಗಳು ಎಲ್ಲರಿಗೂ ಸಂಬಂಧ ಪಟ್ಟಿರುತ್ತವೆ. ವಾಸ್ತವವಾಗಿ ಒಂದು ವರ್ಗದ ಚಿಕ್ಕ ಗುಂಪು ಮಾತ್ರ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ. ಇತ್ತೀಚಿನ ಅನೇಕ ಸಮೀಕ್ಷೆಗಳು ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಬಹುಸಂಖ್ಯಾತರಿಗೆ ಆರ್ಥಿಕ ಸುಧಾರಣೆಗಳು ಉಂಟಾಗುತ್ತಿರುವುದು ತಿಳಿದಿಲ್ಲ. ಜನರಿಗೆ ಈ ವಿಷಯದ ಬಗ್ಗೆ ಸ್ವಲ್ಪಮಟ್ಟಿನ ಜ್ಞಾನವಿದ್ದರೂ, ಸುಧಾರಣೆಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ, ಸುಧಾರಣೆಗಳು ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಎಚ್ಚರವಿರುವುದು ಅಗತ್ಯವಾಗಿದೆ. ಇದೇ ರೀತಿ uniform circle code, ಕೃಷಿ ಬೀಜದ ವಿಧಾನಗಳು, ಅಣುಬಾಂಬ್, ಮೂಲಭೂತವಾದ, ಭಯೋತ್ಪಾದನೆ, ಲಿಂಗ ಅಸಮನಾತೆ, ಮಹಿಳಾ ಮೀಸಲಾತಿ, ಉದಾರೀಕರಣ ಮತ್ತು ಖಾಸಗೀಕರಣ ಮುಂತಾದ ಚರ್ಚೆಗಳ ಬಗ್ಗೆ ಇದನ್ನೇ ಹೇಳಬಹುದು. ಹೀಗಾಗಿ ಪ್ರತಿಯೊಂದು ಸಮಾಜದಲ್ಲಿ ಜನರನ್ನು ಎಚ್ಚರಿಸಿ ತಿಳಿವಳಿಕೆ ನೀಡುವ ಮೂಲಕ ಜನರು ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಶಿಕ್ಷಣ ಪೂರಕವಾಗಿದೆ.

. ಸಾಮಾಜಿಕ ನ್ಯಾಯ

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಅಗತ್ಯವಾಗಿದೆ. ಶೈಕ್ಷಣಿಕ ಅಸಮಾನತೆಗೆ ಭಾರತದಲ್ಲಿ ವಿಶಾಲ ಮತ್ತು ವಿಸ್ತೃತವಾದ ಚರಿತ್ರೆ ಇದೆ. ಇಲ್ಲಿ ವರ್ಗ ಜಾತಿ ಮತ್ತು ಲಿಂಗಾಧಾರಿತ ಸಾಮಾಜಿಕ ದೈವೀಕರಣವನ್ನು ಕಾಣಬಹುದು. ಇದೇ ಸ್ಥಿತಿ ಈಗಲೂ ಅನ್ವಯಿಸುವ ರೀತಿಯಲ್ಲಿ ಮುಂದುವರೆದಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದ ಸಾಮಾಜಿಕ ಗುಂಪುಗಳಿಗೆ ಹೆಚ್ಚಿನ ಪ್ರಮಾಣದ ಉತ್ತಮ ಶೈಕ್ಷಣಿಕ ಅವಕಾಶಗಳು ಇವೆ. ಈ ಗುಣಲಕ್ಷಣವು ಅವರ ಸೌಲಭ್ಯಗಳನ್ನು ಮತ್ತು ಸಾಮರ್ಥ್ಯವನ್ನು ಮತ್ತೇ ಕ್ರೂಢೀಕರಿಸುತ್ತದೆ. ಹೀಗಾಗಿ ಶೈಕ್ಷಣಿಕ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆಗಳ ನಡುವಿನ ಸಂಬಂಧವು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವುದರಿಂದ ಆತ್ಮರಕ್ಷಣೆಗೆ ಸಾಕ್ಷರತೆ ಮತ್ತು ಶಿಕ್ಷಣವು ಪ್ರಮುಖವಾದ ಮಾಧ್ಯಮವಾಗಿದೆ. ಆಧುನಿಕ ಸಮಾಜದಲ್ಲಿ ನಿರಕ್ಷರಿಗಳಾದರೆ ಅಧಿಕಾರ ರಹಿತರಾಗಿರಬೇಕಾದ ಸಾಧ್ಯತೆಗಳು ಹೆಚ್ಚಾಗಿದೆ. ಅನಕ್ಷರತೆಯು ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬ ಮನೋಭಾವನೆ ನಾವು ಅಧ್ಯಯನ ನಡೆಸಿದ ಗ್ರಾಮಗಳ ಜನರಲ್ಲಿ ಮೇಲುನೋಟಕ್ಕೆ ಕಂಡುಬರುತ್ತದೆ (ನೋಡಿ: ಅಧ್ಯಾಯನ-೪)

ಮೇಲಿನ ಎಲ್ಲಾ ಚರ್ಚೆಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷವಾದ ಆದ್ಯತೆಯನ್ನು ನೀಡದೆ ಇದ್ದರೆ, ಉಪಯೋಗವಾಗುವುದು ನಿರುಪಯುಕ್ತವಾಗಿ ಬೀಡುವ ಸಾಧ್ಯತೆ ಹೆಚ್ಚು. ಏಕೆಂದರೆ ಒಂದು ಪಠ್ಯಕ್ರಮವು ವಿಶಾಲವಾದ ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯವನ್ನು ಲಿಂಗ ಅಸಮಾನತೆಯ ನಡುವೆ ವಿಸ್ತೃತ ಸಂಬಂಧ ಹೊಂದಿರಬೇಕು ಹಾಗೂ ಸಮಾನತೆಯನ್ನು ಸಾಧಿಸುವಂತಿರಬೇಕು. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಅನಕ್ಷರತೆಯು ಅವರನ್ನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅಧಿಕಾರ ರಹಿತತೆಯನ್ನು ಅಧಿಕಗೊಳಿಸುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಉತ್ತಮ ಅವಕಾಶಗಳನ್ನು ನೀಡುವುದು ಲಿಂಗ ಸಮಾನತೆಯನ್ನು ಸಾಧಿಸಲು ಇಟ್ಟ ಅಗತ್ಯ ಹೆಜ್ಜೆಯಾಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಬೇಕು ಎಂಬುದಕ್ಕೆ ನೀಡಬಹುದಾದ ಮತ್ತೊಂದು ವಾದ. ಈ ವಾದವು ಸ್ವಲ್ಪ ಹೆಚ್ಚು ಕಡಿಮೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಅಂತರ್‌ಗತವಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ಅಧ್ಯಯನದಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರತ್ಯೇಕವಾಗಿ ನೋಡಿಲ್ಲ. ಆದರೆ ಲಿಂಗ ಸಂಬಂಧಿ ಅಂಶವು ನಮ್ಮ ಅಧ್ಯಯನದ ಪ್ರತಿ ಹಂತದಲ್ಲಿ ಹಾದುಹೋಗುತ್ತದೆ.

ಹೀಗಾಗಿ ಶಿಕ್ಷಣವು ಎಲ್ಲಾ ಸಾಮಾಜಿಕ ರೋಗಗಳಿಗೂ ಔಷಧಿ ಎಂದು ನಾವು ಭಾವಿಸಬಹುದು. ಆದರೆ ನಮ್ಮಲ್ಲಿ ಅದು ಹಾಗಿಲ್ಲ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ತನ್ನದೇ ಆದ ಮಹತ್ವ ಹೊಂದಿದೆ. ಇತರ ಮೂಲಭೂತ ಹಕ್ಕುಗಳಿಗಿಂತ ಭಿನ್ನವಾದ ಮಹತ್ವವನ್ನು ಶಿಕ್ಷಣ ಪಡೆದಿದೆ. ಅಲ್ಲದೇ, ಒಂದು ಮೂಲಭುತ ಹಕ್ಕಿಗೆ ಮತ್ತೊಂದು ಮೂಲಭೂತ ಹಕ್ಕನ್ನು ಮುಖಾಮುಖಿ ಮಾಡುವ ಅಗತ್ಯವಿಲ್ಲ. ಪ್ರಾಥಮಿಕ ಶಿಕ್ಷಣದಿಂದಲೇ ಎಲ್ಲಾ ದೊರೆಯುವುದರಿಂದ ಅಜ್ಞಾನವು ಸ್ವಾಭಾವಿಕವಾಗಿ ಮೂಲಭೂತ ಹಕ್ಕುಗಳ ನಡುವಿನ ಜ್ಞಾನವನ್ನು ಉಡುಗೊರೆಯಾಗಿ ನೀಡುತ್ತದೆ. ವಿಶಾಲವಾದ ವ್ಯಕ್ತಿ ವಿಕಾಸಕ್ಕೆ, ವೈಯಕ್ತಿಕ ಹಕ್ಕು ಮತ್ತು ಸಾಮಾಜಿಕ ಗುರಿಗಳನ್ನು ಸಾಧಿಸಲು ಶಿಕ್ಷಣವು ಸಂಯೋಜಕ ಅಂಶವಾಗಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿ ಸಾಮಾಜಿಕ ಅಸಮಾನತೆಯ ಆಯಾಮಗಳನ್ನು ಮೌಲ್ಯೀಕರಿಸಲು ಶಿಕ್ಷಣ ಮತ್ತು ಅದರ ಕ್ರಿಯೆಗಳ ನಡುವಿನ ಪೂರಕ ಸಂಬಂಧ ಅಗತ್ಯವಾಗಿದೆ.