ಪ್ರಸ್ತುತ ಅಧ್ಯಾಯದಲ್ಲಿ ಸಾಕ್ಷರತೆಯಲ್ಲಿ ಇರುವ ಪ್ರಾದೇಶಿಕ ಸಾಮಾಜಿಕ ಅಸಮಾನತೆಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಅಧ್ಯಾಯವನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿದೆ. ಭಾಗ-೧ ರಲ್ಲಿ ಶಾಲೆ ಶಿಕ್ಷಣ ಸಾಕ್ಷರತೆ ಇವುಗಳಿಗೆ ಇರುವ ವ್ಯತ್ಯಾಸ ಮತ್ತು ಅಂತರ್ ಸಂಬಂಧ, ಸಾಕ್ಷರತೆ ಮತ್ತು ಅಭಿವೃದ್ಧಿಯ ನಡುವಿನ ಸಂಬಂಧವನ್ನು ವಿವಿಧ ನೆಲೆಗಳಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣ ಸಾಕ್ಷರತೆಯ ಪ್ರಗತಿ ಮತ್ತು ಅಸಮಾನತೆಯನ್ನು ಗುರುತಿಸಲಾಗಿದೆ. ನಿರ್ದಿಷ್ಟವಾಗಿ ಕರ್ನಾಟಕದ ಸಾಕ್ಷರತಾ ಪರಿಸರದಲ್ಲಿನ ಪ್ರಗತಿ ಮತ್ತು ಭಿನ್ನತೆಯನ್ನು ವಿಭಾಗ, ಉತ್ತರ ದಕ್ಷಿಣ ಪ್ರದೇಶವಾರು ಹಾಗೂ ಪೂರ್ವ ಪಶ್ಚಿಮ ಪ್ರದೇಶವಾರು ವಿಶ್ಲೇಷಿಸಲಾಗಿದೆ. ಭಾಗ-೨ ರಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಪಂಚಾಯತಿಗಳ ಸಾಕ್ಷರತಾ ಪರಿಸರದಲ್ಲಿನ ಭಿನ್ನತೆ ಹಾಗೂ ಅಸಮಾನತೆಯನ್ನು ಕುರಿತ ಚರ್ಚೆ ಇದೆ. ಹೀಗೆ ಮಾಡುವಾಗ ಅಧ್ಯಯನಕ್ಕೆ ಒಳಪಡಿಸಿದ ಗ್ರಾಮಗಳ ಸಾಕ್ಷರತೆ ಆಯಾಯ ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಎಷ್ಟು ಅಂಶಗಳಲ್ಲಿ ಮುಂದಿದೆ ಅಥವಾ ಹಿಂದಿದೆ ಎಂಬುದನ್ನು ಗುರುತಿಸಲಾಗಿದೆ.

[1]

ಭಾಗ

. ಶಾಲೆ ಶಿಕ್ಷಣ ಸಾಕ್ಷರತೆ

ಶಾಲಯು ಶಿಕ್ಷಣವನ್ನು ಪಡೆದುಕೊಳ್ಳುವ ಒಂದು ಮಾಧ್ಯಮ ಮಾತ್ರವಲ್ಲ, ಶಾಲೆ ಮತ್ತು ಶಿಕ್ಷಣ ಇವೆರಡು ನಿಕಟ ಅಂತರ್ ಸಂಬಂಧ ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ನಿಗದಿತ ವರ್ಷಗಳಲ್ಲಿ ಶಾಲೆಗೆ ಹೋಗುವುದು ಶಿಕ್ಷಣ ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಲಾಗುತ್ತದೆ (ಸಂವಿಧಾನದ ೪೫ನೇ ನಿರ್ದೇಶಕ ತತ್ವದ ಪ್ರಕಾರ ಎಂಟು ವರ್ಷಗಳು). ನಾವು ಇದೇ ಸಂಪ್ರದಾಯವನ್ನು ಪಾಲಿಸುತ್ತೇವೆ. ಆದರೆ ನಾವು ಶಿಕ್ಷಣವೆಂದರೆ ಶಾಲೆಗೆ ಹೋಗುವುದು ಎಂದು ಅರ್ಥೈಸಿಕೊಳ್ಳಬಾರದು, ಶಿಕ್ಷಣವು ಶಾಲೆಗಿಂತ ಬಹಳ ವಿಶಾಲವಾದ ಅರ್ಥವನ್ನು ಹೊಂದಿದೆ ಎಂಬುದನ್ನು ಮರೆಯಬಾರದು. ರವೀಂದ್ರನಾಥ ಠಾಗೂರ್ ಅವರು ಹೇಳಿರುವಂತೆ ‘ಶಾಲೆಯ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಇವು ಒಂದು ಮತ್ತೊಂದನ್ನು ಯಾವಾಗಲೂ ಪ್ರತಿಬಿಂಬಿಸುತ್ತಿರುತ್ತವೆ. ಈ ಪ್ರಕ್ರಿಯೆಯಿಂದ ಕೆಲವು ಕುಶಲತೆಗಳು ಹೊರಬರುತ್ತಿರುತ್ತವೆ. ಇಂತಹ ಕೆಲವು ಮಟ್ಟದ ಬೌದ್ಧಿಕ ಕುಶಲತೆಯನ್ನು ಪಡೆದುಕೊಳ್ಳುವುದಕ್ಕೆ ಆಧುನಿಕ ಸಮಾಜದ ಮತ್ತು ಆರ್ಥಿಕ ವ್ಯವಸ್ಥೆಯು ಹೆಚ್ಚಿನ ಮಹತ್ವ ನೀಡುತ್ತಿದೆ.

ಈ ರೀತಿಯ ಕುಶಲತೆಯಲ್ಲಿ ಸಾಕ್ಷರತೆಯು ಒಂದು ಆರ್ಥಿಕ ಬೆಳವಣಿಗೆಯ ಸಂಶೋಧನೆಯಲ್ಲಿ, ಸಾಕ್ಷರತೆ ಮತ್ತು ಶಿಕ್ಷಣ ಈ ಎರಡು ಪರಿಕಲ್ಪನೆಗಳನ್ನು ಸ್ವಲ್ಪ ಮಟ್ಟಿಗೆ ಅದಲು ಬದಲಾಗಿ ಬಳಸುವ ಪ್ರವೃತ್ತಿ ಇದೆ. ಏಕೆಂದರೆ ಸಾಕ್ಷರತೆಯ ದರವನ್ನು ಅಂಕಿ ಸಂಖ್ಯೆಯ ಸೂಚ್ಯಂಕಗಳ ಮೂಲಕ ಅಳೆದು ಶಿಕ್ಷಣದ ಮಟ್ಟವನ್ನು ತಿಳಿಯಲು ಸಹಕಾರಿಯಾಗಿದೆ. ಶೈಕ್ಷಣಿಕ ಸಾಧನೆಯಲ್ಲಿ ಸಾಕ್ಷರತೆಯು ಅಪರಿಮಿತವಾದ ಪ್ರಾಮುಖ್ಯತೆ ಹೊಂದಿದೆ. ಆದರೆ ಈ ವಾದವು ಸಾಕ್ಷರತೆ ಮತ್ತು ಶಿಕ್ಷಣದ ನಡುವಿನ ದ್ವಂದ್ವವನ್ನು ಹೋಗಲಾಡಿಸದು. ಹೀಗಾಗಿ ಶೈಕ್ಷಣಿಕ ಪಾಲಿಸಿಗಳು ಒಟ್ಟು ಸಾಕ್ಷರತೆಯನ್ನು ಸಾಧಿಸಲು ಮಿತಿಗೊಳ್ಳದೆ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರಿಗೂ ಶಿಕ್ಷಣ ಎಂಬುದರ ಅರ್ಥ ಬಹಳ ವಿಶಾಲವಾಗಿದೆ. ಜೊತೆಗೆ ಬಹಳ ಬೇಡಿಕೆ ಇರುವ ಸಾಮಾಜಿಕ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನದಲ್ಲಿ ಸಾಕ್ಷರತೆ ಮತ್ತು ಶಿಕ್ಷಣ ಎಂಬ ಎರಡು ಪದಗಳನ್ನು ಬೇರೆ ಬೇರೆ ಎಂದು ಪರಿಭಾವಿಸಿಕೊಳ್ಳಲಾಗಿಲ್ಲ.

.. ಸಾಕ್ಷರತೆ ಅಭಿವೃದ್ಧಿ

ಸಾಕ್ಷರತೆ ಮತ್ತು ಅಭಿವೃದ್ಧಿಯ ನಡುವಿನ ಸಂಬಂಧವನ್ನು ವಿವಿಧ ನೆಲೆಗಳಲ್ಲಿ ಚರ್ಚಿಸಲು ಸಾಧ್ಯ. ಸಾಕ್ಷರತೆಯು ಮಾನವ ಬಂಡವಾಳವನ್ನು ಅಭಿವೃದ್ಧಿ ಪಡಿಸುವ ಸಾಧನ. ಸಾಕ್ಷರತೆಯು ಜನರನ್ನು ಸುಶಿಕ್ಷತರನ್ನಾಗಿಸುವ ಮೂಲಕ ಅವರ ಉತ್ಪಾದನಾ ಕ್ಷಮತೆಯನ್ನು, ಕುಶಲತೆಯನ್ನು ಉತ್ತಮವಾಗಿ ರೂಪಿಸುತ್ತದೆ. ಇದರಿಂದ ಅವರ ಆರ್ಥಿಕ ದುಡಿಮೆ ಹೆಚ್ಚಾಗುತ್ತದೆ. ಸಾಕ್ಷರತೆಯು ಆಧುನೀಕರಣ ಕೈಗಾರಿಕೀಕರಣ ಪ್ರಕ್ರಿಯೆಗಳ ಸಾಮಾಜೀಕರಣವನ್ನು ಹೇಳಿಕೊಡುವ ಒಂದು ಪ್ರಮುಖ ಸಾಧನವೆಂದೂ ಹೇಳಲಾಗುತ್ತಿದೆ. ಇವೆಲ್ಲವೂ ಒಂದು ದೃಷ್ಟಿಯಿಂದ ಸರಿಯಾದ ವಿಚಾರಗಳೇ ಆಗಿವೆ. ಆದರೆ ಇದು ಸಾಕ್ಷರತೆಯ ಒಂದು ಮುಖ ಮಾತ್ರವಾಗಿದೆ ಎಂಬುದನ್ನು ಅಮರ್ತ್ಯಸೇನ್ ವಿಶದವಾಗಿ ವಿಶ್ಲೇಷಿಸುತ್ತಾರೆ. ಸೇನ್ ಅವರ ಪ್ರಕಾರ ಸಾಕ್ಷರತೆಯು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಅದರ ಸಾಧ್ಯವೂ ಹೌದು. ಹೀಗಾಗಿ ಸಾಕ್ಷರತೆಯು ತನ್ನಷ್ಟಕ್ಕೇ ತಾನೇ ಮಹತ್ವವಾದುದಾಗಿದೆ.

ಕೇವಲ ಶ್ರಮಶಕ್ತಿಯ ಕಾರ್ಯಕ್ಷಮತೆಯನ್ನು, ಕುಶಲತೆಯನ್ನು ಸಾಕ್ಷರತೆ ಉತ್ತಮ ಪಡಿಸುತ್ತದೆ ಎಂಬ ಕಾರಣಕ್ಕೆ ಮಾತ್ರ ಅದು ಮಹತ್ವದ್ದಾಗಬೇಕಾಗಿಲ್ಲ. ಅದಕ್ಕೆ ಉಪಕರಣವಾದಿ (ಇನ್‌ಸ್ಟ್ರಮೆಂಟಲ್) ಮಹತ್ವವೂ ಇದೆ ಮತ್ತು ಅಂತಸ್ಥವಾದಿ ಅಥವಾ ನೈಜವಾದ (ಇಂಟ್ರೆನ್ಸಿಕ್) ಮಹತ್ವವೂ ಇದೆ ಇದು ಸಾಕ್ಷರತೆಯ ಒಂದು ಪ್ರಮುಖ ಗುಣವೂ ಹೌದು, ಒಂದು ಶಕ್ತಿಯೂ ಹೌದು, ಎಂದು ಅಮರ್ತ್ಯಸೇನ್ ವಾದಿಸುತ್ತಾರೆ (ಚಂದ್ರಶೇಖರ್ ಟಿ.ಆರ್.೧೯೯೯:೨೦೦೦;೨೦೦೨) ಅವರ ಪ್ರಕಾರ ಸಾಕ್ಷರತೆ ಇಲ್ಲದಿರುವುದು ಧಾರಣಶಕ್ತಿಯ ದುಸ್ಥಿತಿಯ ಸೂಚಿಯಾಗಿದೆ. ಹೀಗಾಗಿ ಅಕ್ಷರ ಜ್ಞಾನ ಇಲ್ಲದಿರುವ ಸ್ಥಿತಿಯು ಬಡತನವೆಂದು ನಿರ್ವಚಿಸಿದ್ದಾರೆ. ಅಕ್ಷರಸ್ಥರ ಸಂಖ್ಯೆ ಹಾಗೂ ಪ್ರಮಾಣ ಯಾವ ಪ್ರದೇಶದಲ್ಲಿ ಕಡಿಮೆ ಇರುತ್ತದೊ ಅಥವಾ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿರುತ್ತದೊ ಅಲ್ಲಿ ಮನುಷ್ಯನಿಗೆ ಬದುಕುವ ಅವಕಾಶಗಳು ಸಹ ಕಡಿಮೆ ಇರುತ್ತವೆ. ಅಲ್ಲದೆ ಅಲ್ಲಿ ಬಡತನವು ತೀವ್ರವಾಗಿರುತ್ತದೆ ಎಂದು ಹೇಳಬಹುದು. ಸಾಕ್ಷರತೆಯು ಜನರಿಗೆ ಸ್ವಾತಂತ್ರ್ಯವನ್ನು, ಬದುಕುವ ಅವಕಾಶಗಳನ್ನು ಒದಗಿಸುವ ಒಂದು ಗುಣವಾಗಿದೆ. ಹೀಗಾಗಿ ಸಾಕ್ಷರತೆ ಎಂದರೆ ಸ್ವಾತಂತ್ರ್ಯವೆಂದೂ ಸಾಕ್ಷರತೆಯೆಂದರೆ ಅಭಿವೃದ್ಧಿಯೆಂದು ಪರಿಭಾವಿಸಬಹುದಾಗಿದೆ.

ಅಮರ್ತ್ಯಸೇನ್ ಅವರು ‘ಸಾಕ್ಷರತೆಯೇ ಅಭಿವೃದ್ಧಿ’ ಎಂದು ಹೇಳುತ್ತಾರೆ. ಧಾರಣಶಕ್ತಿಯನ್ನು ಒದಗಿಸುವ ಗುಣ ಶಕ್ತಿ ಸಾಕ್ಷರತೆಗೆ ಇದೆ. ‘ಧಾರಣಶಕ್ತಿಯೆಂದರೆ ಬದುಕುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಅಗತ್ಯವಾದ ‘ಸಾಮರ್ಥ್ಯ’ ಹಾಗೂ ಸಮಾಜದಲ್ಲಿನ ಅವಕಾಶಗಳನ್ನು ಅಥವಾ ಹರಿದು ಬರುವ ಅವಕಾಶಗಳಲ್ಲಿ ತನಗೆ ಅಥವಾ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ‘ಚಂದ್ರಶೇಖರ್ ಟಿ.ಆರ್. ೨೦೦೦) ಈ ಧಾರಣಶಕ್ತಿಯು ಇಲ್ಲದಿರುವ ಸ್ಥಿತಿಯನ್ನೇ ಅಮರ್ತ್ಯಸೇನ್ ‘ಬಡತನ’ ಎಂದು ಕರೆದಿದ್ದಾರೆ. ಸಾಕ್ಷರತೆಗೆ ಧಾರಣಶಕ್ತಿಯನ್ನು ಸಂವರ್ಧಿಸುವ ಶಕ್ತಿಯಿದೆ. ಅದಕ್ಕೆ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಲ್ಲ ‘ಸಾಮರ್ಥ್ಯ’ವನ್ನು ಒದಗಿಸುವ ಶಕ್ತಿಯಿದೆ.

ಮೆಹಬೂಬ್-ಉಲ್-ಹಕ್ ಅವರು ಯುಎನ್‌ಡಿಪಿಗೆ ಸಿದ್ಧಮಾಡಿಕೊಟ್ಟಿರುವ ‘ಮಾನವ ಅಭಿವೃದ್ಧಿ ವರದಿ’ (ಎಚ್.ಡಿ.ಆರ್)ಗಳಲ್ಲಿ ಅಭಿವೃದ್ಧಿಯನ್ನು ಅಳೆಯಲು ‘ಆರೋಗ್ಯ ಸಾಕ್ಷರತೆ-ವರಮಾನ’ ಮೂರನ್ನೂ ಒಳಗೊಂಡ ಒಂದು ಸಂಯುಕ್ತ ಸೂಚ್ಯಂಕವನ್ನು ಬಳಸಿದ್ದಾರೆ. ಆ ಸೂಚಿಯನ್ನು ‘ಮಾನವ ಅಭಿವೃದ್ಧಿ ಸೂಚ್ಯಂಕ’ (ಎಚ್.ಡಿ.ಐ) ಎಂದು ಕರೆಯಲಾಗಿದೆ. ಈ ಸೂಚ್ಯಂಕದಲ್ಲಿ ಆರೋಗ್ಯಕ್ಕೆ ಮೊದಲನೆಯ ಸ್ಥಾನವನ್ನು, ಸಾಕ್ಷರತೆಗೆ ಎರಡನೆಯ ಸ್ಥಾನವನ್ನು ಮತ್ತು ವರಮಾನಕ್ಕೆ ಮೂರನೆಯ ಸ್ಥಾನವನ್ನು ನೀಡಲಾಗಿದೆ. ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಸಾಕ್ಷರತೆಯನ್ನು ಅಭಿವೃದ್ಧಿಯ ಸಾಧನವೆಂದೂ ಅಭಿವೃದ್ಧಿಯ ‘ಸಾಧ್ಯ’ವೂ ಎಂದೂ ಪರಿಗಣಿಸುತ್ತದೆ.

ಸಾಕ್ಷರತೆಯು ಸಮಾಜವೊಂದರ ಸ್ಥಿತಿ-ಗತಿಯನ್ನು ಅಭಿವ್ಯಕ್ತಪಡಿಸುವ ಒಂದು ಸೂಚಿಯಾಗಿದೆ. ಇದನ್ನು ಸಾಮಾಜಿಕ ಚೌಕಟ್ಟನಿಂದ ಪ್ರತ್ಯೇಕಿಸಿ ನೋಡುವುದು ಅಥವಾ ಪರಿಭಾವಿಸುವುದು ಸಾಧ್ಯವಿಲ್ಲ. ಸಾಕ್ಷರತೆ ಶಿಕ್ಷಣ ಎಂಬ ಸಂಗತಿಗಳೆಲ್ಲ ಮೌಲ್ಯ ನಿರಪೇಕ್ಷವಾದ ಸಂಗತಿಗಳೇನಲ್ಲ. ಆದ್ದರಿಂದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಸಾಕ್ಷರತೆ ಬಗ್ಗೆ ಒಂದು ನಿರ್ದಿಷ್ಟವಾದ ನಿಲುವು ತಳೆಯುವುದು ತುಂಬಾ ಅವಶ್ಯಕ. ಸಾಕ್ಷರತೆ ಯಾರಿಗೆ ಸಿಗಬೇಕು? ಯಾರಿಗೆ ಸಿಗಬಾರದು? ಯಾರಿಗೆ ಎಷ್ಟು ದೊರೆಯಬೇಕು? ಈ ಸಂಗತಿಗಳನ್ನೆಲ್ಲಾ ಸಾಮಾಜಿಕ ವ್ಯವಸ್ಥೆ ನಿರ್ಧರಿಸುತ್ತಿರುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದ ಸಂದರ್ಭದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಭೇದ ಜಾತಿಭೇದ ವರ್ಗಭೇದಗಳು ತೀವ್ರವಾಗಿರುವುದನ್ನು ನೋಡಬಹುದು. ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗಿಂತ ಕಡಿಮೆ ಇದ್ದರೆ ಅದು ಕೇವಲ ಜೈವಿಕ ಸ್ವರೂಪದ ಫಲವಲ್ಲ, ಅದು ಸಮಾಜವೂ ಕಟ್ಟಿಕೊಟ್ಟಿರುವ ಒಂದು ಆರ್ಡರ್, ಪರಿಶಿಷ್ಟ ಜನರ ಸಾಕ್ಷರತಾ ಪ್ರಮಾಣವು ಪರಿಶಿಷ್ಟೇತರ ಜನರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದು ಸಾಮಾಜಿಕ ವ್ಯವಸ್ಥೆಯಿಂದ ನಿಷ್ಟನ್ನವಾದ ಒಂದು ಪರಿಣಾಮವಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಸಿದ್ಧಿ ಸಾಧನೆಗಳನ್ನು ವೈಫಲ್ಯಗಳನ್ನು ವ್ಯಕ್ತಿಗತ ನೆಲೆಯಲ್ಲಿ ಅಥವಾ ಜೈವಿಕ ನೈಸರ್ಗಿಕ ಪ್ರಾಕೃತಿಕ ನೆಲೆಯಲ್ಲಿ ಪರಿಭಾವಿಸುವುದು ಸಾಧ್ಯವಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಯು ರೂಪಿಸಿದ ಒಂದು ಸಂಗತಿಯಾಗಿದೆ (ಚಂದ್ರಶೇಖರ್ ಟಿ.ಆರ್. ೨೦೦೦).

ಪ್ರಸ್ತುತ ಅಧ್ಯಾಯನದಲ್ಲಿ ಕರ್ನಾಟಕದ ಸಾಕ್ಷರತೆಯ ಪರಿಸರವನ್ನು ವಿಶಾಲ ಅರ್ಥದಲ್ಲಿ ಗುರುತಿಸಲು ಪ್ರಯತ್ನಿಸಿದರೂ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಗ್ರಾಮಪಂಚಾಯತಿಗಳು ಹಾಗೂ ಗ್ರಾಮಗಳು ಇರುವ ಜಿಲ್ಲೆ, ತಾಲ್ಲೂಕಿನ ಸಾಕ್ಷರತೆ ಪರಿಸರದ ಸಂಗತಿಗಳನ್ನು, ಲಿಂಗ ಸಂಬಂಧಿ ನೆಲೆಗಳನ್ನು ಹಾಗೂ ಸಾಮಾಜಿಕ ಸ್ವರೂಪವನ್ನು ಗುರುತಿಸಲು ಪ್ರಯತ್ನಿಸಲಾಗಿದೆ.

.. ಸತತ ಪ್ರಗತಿ ಮತ್ತು ಅಸಮಾನತೆ

ಭಾರತವು ತನ್ನ ಜಿ.ಎನ್.ಪಿ.ಯಲ್ಲಿ ಶೇಕಡ ೩.೮ ಭಾಗವನ್ನು ಶಿಕ್ಷಣದ ಮೇಲೆ ವೆಚ್ಚ ಮಾಡುತ್ತಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೩೪.೬೨ಕ್ಕಿಂತ ಹೆಚ್ಚಿನ ಜನರು ಅನಕ್ಷರಸ್ಥರಾಗಿದ್ದಾರೆ. ನೆರೆಯ ಚೀನಾವು ತನ್ನ ಜಿ.ಎನ್.ಪಿಯಲ್ಲಿ ಶೇಕಡ ೨.೬ರಷ್ಟು ಭಾಗವನ್ನು ಮಾತ್ರ ಶಿಕ್ಷಣದ ಮೇಲೆ ವೆಚ್ಚ ಮಾಡುತ್ತಿದೆ. ಆದರೆ ಅಲ್ಲಿ ಶೇಕಡ ೧೮.೦೦ ರಷ್ಟು ಜನ ಮಾತ್ರ ಅನಕ್ಷರಸ್ಥರಾಗಿದ್ದಾರೆ. ಪ್ರಪಂಚದ ಅನಕ್ಷರಸ್ಥರಲ್ಲಿ ಮೂರನೆಯ ಒಂದು ಭಾಗದಷ್ಟು ಮಂದಿ ಭಾರತದಲ್ಲಿದ್ದಾರೆ.

ಭಾರತದ ಸಾಕ್ಷರತಾ ದರವು ೧೯೫೧ರಲ್ಲಿ ಶೇಕಡ ೧೬.೭ ರಷ್ಟು ಇತ್ತು. ೨೦೦೨ರಲ್ಲಿ ಶೇಕಡ ೬೫.೩೮ಕ್ಕೆ ತಲುಪಿತು. ಇದೇ ಅವಧಿಯಲ್ಲಿ ಮಹಿಳಾ ಸಾಕ್ಷರತೆಯು ಶೇಕಡ ೭.೯ ರಿಂದ ೫೪.೧೬ಕ್ಕೆ ಏರಿತು. ೧೯೫೧ರ ನಂತರ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯಲ್ಲಿ ಗಣನೀಯ ಪ್ರಗತಿ ಇದೆ. ಪ್ರಾಥಮಿಕ ಶಾಲೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಸಾಮಾನ್ಯ ಶಿಕ್ಷಣದ ಕಾಲೇಜುಗಳ ಸಂಖ್ಯೆ ೧೮ ಪಟ್ಟು ಮತ್ತು ವಿಶ್ವವಿದ್ಯಾನಿಲಯಗಳ ಸಂಖ್ಯೆ ೧೦ ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಶಾಲಾ ದಾಖಲಾತಿಯು ೬ ಪಟ್ಟು ಹೆಚ್ಚಾಗಿದೆ. ೧೯೫೦-೫೧ ಮತ್ತು ೧೯೯೬-೯೭ರ ನಡುವೆ ಒಟ್ಟಾರೆ ನೋಂದಣಿ ಅನುಪಾತವು ಪ್ರಾಥಮಿಕ ಹಂತದಲ್ಲಿ (೧ ರಿಂದ ೭ನೇ ತರಗತಿ) ೩೨.೧ ರಿಂದ ೮೦.೭ಕ್ಕೆ ಏರಿಕೆಯಾಗಿದೆ. ಇದು ಬಾಲಕಿಯರ ಸಂಬಂಧಪಟ್ಟಂತೆ ೧೭.೭ ರಿಂದ ೭೧.೮ಕ್ಕೆ ಏರಿದೆ. ಮಧ್ಯದಲ್ಲಿ ಶಾಲೆ ಬಿಡುವವರ ಪ್ರಮಾಣವು ಪ್ರಾಥಮಿಕ ಹಂತದಲ್ಲಿ ೧೯೬೦-೬೧ರಲ್ಲಿ ಶೇಕಡ ೭೮.೩ ಇದ್ದದು, ೧೯೯೫-೯೬ರಲ್ಲಿ ಶೇಕಡ ೫೨.೭ಕ್ಕೆ ಇಳಿದಿದೆ. ೧೯೫೦-೫೧ರಲ್ಲಿ ೭.೫ ಲಕ್ಷವಿದ್ದು ಅಧ್ಯಾಪಕರ ಸಂಖ್ಯೆ, ೧೯೯೬-೯೭ರಲ್ಲಿ ೪೫ ಲಕ್ಷಗಳಿಗೆ ಹೆಚ್ಚಳಗೊಂಡು ಆರು ಪಟ್ಟು ಹೆಚ್ಚಳವನ್ನು ಕಂಡಿದೆ. ಇದೇ ಅವಧಿಯಲ್ಲಿ ಮಹಿಳಾ ಅಧ್ಯಾಪಕಿಯರ ಸಂಖ್ಯೆ ೧ ಲಕ್ಷದಿಂದ ೧೫.೫ ಲಕ್ಷಗಳನ್ನು ತಲುಪಿದೆ (ಗೋವಿಂದ ಆರ್. ೨೦೦೩; ಬ್ರೀಜ್ ಕೊಠಾರಿ, ೨೦೦೩).

ಕೋಷ್ಟಕ .೧ – ೨೦೦೧ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ ರಾಜ್ಯವಾರು (%)

ಕ್ರ.ಸ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಮಹಿಳೆಯರು

ಪುರುಷರು

ಒಟ್ಟು

ಭಾರತ

೫೪.೧೬

೭೫.೮೫

೬೫.೩೮

೦೧ ಜಮ್ಮು ಮತ್ತು ಕಾಶ್ಮೀರ

೪೧.೮೨

೬೫.೭೫

೫೪.೪೬

೦೨ ಹಿಮಾಚಲ ಪ್ರದೇಶ

೬೮.೦೮

೮೬.೦೨

೭೭.೧೩

೦೩ ಪಂಜಾಬ್

೬೩.೫೫

೭೫.೬೩

೬೯.೯೫

೦೪ ಚಂಡಿಘಡ

೭೬.೬೫

೮೫.೬೫

೮೧.೭೬

೦೫ ಉತ್ತರಾಂಚಲ

೬೦.೨೬

೮೪.೦೧

೭೨.೨೮

೦೬ ಹರಿಯಾಣ

೫೬.೩೧

೭೯.೨೫

೬೮.೫೯

೦೭ ದೆಹಲಿ

೭೫.೦೦

೮೭.೩೭

೮೧.೮೨

೦೮ ರಾಜಸ್ಥಾನ

೪೪.೩೪

೭೬.೪೬

೬೧.೦೩

೦೯ ಉತ್ತರ ಪ್ರದೇಶ

೪೨.೯೮

೭೦.೨೩

೫೭.೩೬

೧೦ ಬಿಹಾರ

೩೩.೫೭

೬೦.೨೩

೪೭.೫೩

೧೧ ಸಿಕ್ಕಿಂ

೬೧.೪೧

೭೬.೭೩

೬೯.೬೮

೧೨ ಅರುಣಾಚಲ ಪ್ರದೇಶ

೪೪.೨೪

೬೪.೦೭

೫೪.೭೪

೧೩ ನಾಗಲ್ಯಾಂಡ್

೬೧.೯೫

೭೧.೭೭

೬೭.೧೧

೧೪ ಮಣಿಪುರ

೫೯.೭೦

೭೭.೮೭

೬೮.೮೭

೧೫ ಮಿಜೋರಾಮ್

೮೬.೧೩

೯೦.೬೯

೮೮.೪೯

೧೬ ತ್ರಿಪುರ

೬೫.೪೧

೮೧.೪೭

೭೩.೬೬

೧೭ ಮೇಗಾಲಯ

೬೦.೪೧

೬೬.೧೪

೬೩.೩೧

೧೮ ಅಸ್ಸಾಂ

೫೦.೦೩

೭೧.೯೩

೬೪.೨೮

೧೯ ಪಶ್ಚಿಮ ಬಂಗಾಳ

೬೦.೨೨

೭೭.೫೮

೬೯.೨೨

೨೦ ಜಾರ್ಖಂಡ

೩೯.೩೮

೬೭.೯೪

೫೪.೧೩

೨೧ ಒರಿಸ್ಸಾ

೫೬.೯೭

೭೫.೯೫

೬೩.೬೧

೨೨ ಚತ್ತಿಸ್‌ಘಡ

೫೨.೪೦

೭೭.೮೬

೬೫.೧೮

೨೩ ಮಧ್ಯಪ್ರದೇಶ

೫೦.೨೮

೭೬.೮೦

೬೪.೧೧

೨೪ ಗುಜರಾತ್

೫೮.೬೦

೮೦.೫೦

೬೯.೯೭

೨೫ ಡಿಯೂ ಮತ್ತು ಡಾಮನ್

೭೦.೩೭

೮೮.೪೦

೮೧.೦೯

೨೬ ದಾದ್ರ ಮತ್ತು ನಾಗರಹವೇಲಿ

೪೨.೯೯

೭೩.೩೨

೬೦.೦೩

೨೭ ಮಹಾರಾಷ್ಟ್ರ

೬೭.೯೯

೮೬.೨೭

೭೭.೨೭

೨೮ ಆಂಧ್ರಪ್ರದೇಶ

೫೧.೧೭

೭೦.೮೫

೬೧.೧೧

೨೯ ಕರ್ನಾಟಕ

೫೭.೪೫

೭೬.೨೯

೬೭.೦೪

೩೦ ಗೋವ

೭೫.೫೧

೮೮.೮೮

೮೨.೩೨

೩೧ ಲಕ್ಷದ್ವೀಪ

೮೧.೫೬

೯೩.೧೫

೮೭.೫೨

೩೨ ಕೇರಳ

೮೭.೫೬

೯೪.೨೦

೯೦.೯೨

೩೩ ತಮಿಳುನಾಡು

೬೪.೫೫

೮೨.೩೩

೭೩.೪೭

೩೪ ಪಾಂಡಿಚೇರಿ

೭೪.೧೩

೮೮.೮೯

೮೧.೪೯

೩೫ ಅಂಡಮಾನ್ ಮತ್ತು ನಿಕೋಬರ್ ದ್ವೀಪ

೭೫.೨೯

೮೬.೦೭

೮೧.೧೮

ಮೂಲ: ಸೆನ್ಸಸ್ ೨೦೦೧.

ಪ್ರಾಥಮಿಕ ಶಿಕ್ಷಣದ ಸರಾಸರಿ ಸಾಧನೆಯು ಭಾರತದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು ಬಹಳ ಶ್ರೇಣೀಕೃತವಾಗಿದೆ. ಉದಾಹರಣೆಗೆ ಕೇರಳ ರಾಜ್ಯದ ನಗರ ಪ್ರದೇಶಗಳ ಸಾಕ್ಷರತೆಯು ಸಾರ್ವತ್ರಿಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮಟ್ಟದ ಶೈಕ್ಷಣಿಕ ಸಾಧನೆ ಕಂಡುಬರುತ್ತದೆ. ಬಿಮಾರು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆಯರಲ್ಲಿ ಅತ್ಯಂತ ಕಡಿಮೆ ಮಟ್ಟದ ಸಾಧನೆಯನ್ನು ಕಾಣಬಹುದು.

ಸಾಮಾನ್ಯವಾಗಿ ಸಾಕ್ಷರತೆಯ ಪ್ರಮಾಣವು ಪ್ರದೇಶ, ವರ್ಗ, ಜಾತಿ ಮತ್ತು ಲಿಂಗಾಧಾರಿತ ಪರಿಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಭಾರತದ ಸಾಕ್ಷರತೆಯ ಭೂಪಟವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ದಕ್ಷಿಣ ಪಶ್ಚಿಮ ಭಾಗದಲ್ಲಿ ಸಾಕ್ಷರತೆಯು ಉತ್ತರ ಪೂರ್ವ ಭಾಗಕ್ಕಿಂತ ಬಹಳ ಹೆಚ್ಚಿನ ಪ್ರಮಾಣದ ಸಾಧನೆಯನ್ನು ಮಾಡಿರುವುದು ಕಂಡು ಬರುತ್ತದೆ (ಹೆಚ್ಚಿನ ವಿವರಗಳಿಗೆ ನೋಡಿ. ಕೋಷ್ಟಕ ೩.೧) ಸಾಕ್ಷರತೆಯಲ್ಲಿ ಬಹಳ ಮುಂದಿರುವ ರಾಜ್ಯವಾದ ಕೇರಳದಲ್ಲಿ ಅನಕ್ಷರತೆಯನ್ನು ವಾಸ್ತವವಾಗಿ ತೊಡೆದು ಹಾಕಲಾಗಿದೆ. ಆದರೆ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಬಹಳ ಕಡಿಮೆ ಶೈಕ್ಷಣಿಕ ಸಾಧನೆ ಮಾಡಿರುವುದು ತಿಳಿಯುತ್ತದೆ. ಈ ನಾಲ್ಕು ರಾಜ್ಯಗಳಲ್ಲಿ ೭೨ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಪ್ರೋಬ್ ತಂಡವು ೦೬-೧೪ ವಯೋಮಾನದ ಹೆಚ್ಚಿನ ಮಕ್ಕಳು ಅನಕ್ಷರಸ್ಥರಾಗಿರುವುದು ಅಚ್ಚರಿಯನ್ನು ಉಂಟು ಮಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ (ಪ್ರೋಬ್:೧೯೯೯).

ಒಂದೇ ಪ್ರದೇಶದ ಒಳಗೆ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಮಟ್ಟದಲ್ಲಿದೆ. ಅಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಮರಲ್ಲಿ ಸಾಕ್ಷರತೆಯ ಪ್ರಮಾಣವು ಬಹುಮಟ್ಟಿಗೆ ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ಅತ್ಯಮತ ಕಡಿಮೆ ಮಟ್ಟದಲ್ಲಿದೆ. ಅವಕಾಶ ವಂಚಿತ ಸಮುದಾಯಗಳು ಮತ್ತು ಕಡಿಮೆ ಆದಾಯವಿರುವ ಕುಟುಂಬದ ಮಕ್ಕಳು ಶಾಲೆಗೆ ಹೋಗಲು ಅನಾಸಕ್ತಿ ತೋರಿಸುತ್ತಾರೆ ಎಂದು ಪ್ರೋಬ್ ತಂಡವು ಗುರುತಿಸಿದೆ.

ಶೈಕ್ಷಣಿಕ ಪರಿಸರದಲ್ಲಿ ಕಂಡುಬರುವ ಮತ್ತೊಂದು ಆಸಕ್ತಿಯುತ ಮಾದರಿ ಎಂದರೆ, ಎಲ್ಲಾ ಪ್ರದೇಶಗಳಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಪುರುಷರ ಸಾಕ್ಷರತೆಯು ಪ್ರಮಾಣಕ್ಕಿಂತ ಬಹಳ ಕಡಿಮೆ ಇರುವುದು (ಹೆಚ್ಚಿನ ವಿವರಗಳಿಗೆ ನೋಡಿ ರೇಖಾ ಚಿತ್ರ ಸಂಖ್ಯೆ ೧ ರಿಂದ ೭) ಹೀಗಾಗಿ ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರ ಸಾಕ್ಷರತೆಯ ಪ್ರಮಾಣದಲ್ಲಿ ಬಹಳ ಅಂತರ ಹೊಂದಿರುವ ರಾಷ್ಟ್ರಗಳಲ್ಲಿ ಭಾರತವು ಒಂದು. ೧೯೯೮ರ ಮಾನವ ಅಭಿವೃದ್ಧಿ ವರದಿ ಪ್ರಕಾರ, ಮಹಿಳಾ ಮತ್ತು ಪುರುಷರ ಸಾಕ್ಷರತೆಯನ್ನು ಭಾರತಕ್ಕಿಂತ ಹೆಚ್ಚಿನ ಅಂತರವನ್ನು ಹೊಂದಿರುವ ಐದು ರಾಷ್ಟ್ರಗಳು ಎಂದರೆ ಭೂತಾನ್, ಸಿರಿಯಾ, ಟೋಗೊ, ಮಾಲ್‌ವಿಯಾ ಮತ್ತು ಮೂಜಾಂಬಿಯ. ಆಸಕ್ತಿಯ ವಿಷಯವೆಂದರೆ ರಾಜಸ್ಥಾನ ಒಂದೇ ಈ ಎಲ್ಲಾ ರಾಷ್ಟ್ರಗಳ ಜನಸಂಖ್ಯೆಯನ್ನು ಹೊಂದಿದೆ ಹಾಗೂ ರಾಜಸ್ಥಾನದಲ್ಲಿ ಇರುವಷ್ಟು ಮಹಿಳೆ ಪುರುಷರ ಸಾಕ್ಷರತೆಯ ಅಂತರವು ಪ್ರಪಂಚದ ಯಾವುದೇ ರಾಷ್ಟ್ರವು ಹೊಂದಿಲ್ಲ. ಪ್ರೋಬ್ ಅಧ್ಯಯನ ನಡೆಸಿರುವ ರಾಜ್ಯಗಳಿಗೆ ರಾಜಸ್ಥಾನವನ್ನು ಹೋಲಿಸಿದರೆ ರಾಜಾಸ್ಥಾನದ ಸಾಕ್ಷರತೆ ಸ್ವಲ್ಪ ಉತ್ತಮವಾಗಿದೆ.

.. ನಿರುತ್ಸಾಹದಾಯಕ ಪ್ರಯತ್ನಗಳು

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ನಿರುತ್ಸಾಹದಾಯಕ ಪ್ರಯತ್ನಗಳು ಬಹುಮಟ್ಟಿಗೆ ಸರ್ಕಾರಗಳ ನಿರ್ಲಕ್ಷತೆಯನ್ನು ಪ್ರತಿಬಿಂಬಿಸುತ್ತದೆ. ಇದು ತನ್ನದೇ ರೂಪವನ್ನು ಹೊಂದಿದೆ. ಉದಾಹರಣೆಗೆ ಶೈಕ್ಷಣಿಕ ಸೌಲಭ್ಯಗಳ ಪೂರ್ವಸಿದ್ಧತೆ ಮತ್ತು ಹಂಚಿಕೆ, ಶಾಲಾ ವ್ಯವಸ್ಥೆಗೆ ಸಾಕಾಗದ ಮೇಲು ವಿಚಾರಣೆ, ವಂಚಿತ ಸಮುದಾಯ ಮತ್ತು ಪ್ರದೇಶಗಳ ಬಗ್ಗೆ ಉಪೇಕ್ಷೆ, ಹೀಗೆ ಇನ್ನೂ ಅನೇಕ ಅಂಶಗಳು ಎದ್ದು ಕಾಣುತ್ತವೆ. ಇತ್ತೀಚಿನ ವರ್ಷಗಳಲ್ಲಿ ಶಾಲಾ ವ್ಯವಸ್ಥೆಯ ಸೌಲಭ್ಯಗಳ ಕೊರತೆ ತುಂಬುವ ಉದ್ದೇಶದಿಂದ ಅನೇಕ ಮಹತ್ವದ ಹೆಜ್ಜೆಗಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಕೈಗೊಂಡಿದೆ. ಅವೆಂದರೆ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮ; ಅನೌಪಚಾರಿಕ ಶಿಕ್ಷಣ ಡಿ.ಪಿ.ಇ.ಪಿ; ಕಪ್ಪು ಹಲಗೆ ಕಾರ್ಯಕ್ರಮ; ಸರ್ವಶಿಕ್ಷಾ ಅಭಿಯಾನ; ಮಕ್ಕಳಿಗೆ ಪೋಷಕರಿಗೆ ಬೆಂಬಲ ಮತ್ತು ಪ್ರೋತ್ಸಾಹಕ ಕಾರ್ಯಕ್ರಮಗಳು; ಸಮುದಾಯದತ್ತ ಶಾಲೆ: ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ; ಇತ್ಯಾದಿ. ಈ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳು ಹೆಚ್ಚುವರಿ ಮತ್ತು ಅಡಾಕ್ ಸ್ವರೂಪವನ್ನು ಹೊಂದಿವೆ. ಆದರೆ ಶಾಲಾ ಪರಿಸರದ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಹತ್ವದ ಪ್ರಗತಿ ಮಾತ್ರ ಇಲ್ಲವಾಗಿದೆ (ನೋಡಿ. ಅಧ್ಯಾಯ-೫) ಇದಕ್ಕಿಂತ ಪ್ರಮುಖವಾಗಿ ಪ್ರಾಥಮಿಕ ಶಿಕ್ಷಣವು ಇತ್ತೀಚೆಗೆ ಪ್ರಮುಖ ರಾಜಕೀಯ ಉದ್ದೇಶಕ್ಕೆ ಸಂಬಂಧಿಸಿದ ವಿಷಯ ಆಗಿರುವ ಸೂಚನೆ ಕಾಣುತ್ತಿದೆ.

ಭಾರತದಲ್ಲಿ ಪ್ರಾಥಮಿಕ ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳಿಗೆ ಸೇರಿದ ಜವಾಬ್ದಾರಿ. ಆಚರಣೆಯಲ್ಲಿ ಪ್ರಮುಖ ಪಾತ್ರವನ್ನು ರಾಜ್ಯ ಸರ್ಕಾರಗಳು ವಹಿಸಿದರೂ, ವಾಸ್ತವಿಕವಾಗಿ ಸ್ಥಳೀಯ, ಅಧಿಕಾರಶಾಹಿಗಳದೇ ಆಡಳಿತದ ಕಾರುಬಾರು. ಈ ಕಾರಣದಿಂದಲೇ ಶಾಲಾ ವ್ಯವಸ್ಥೆಯ ಗುಣಮಟ್ಟವು ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ, ತಾಲ್ಲೂಕಿನಿಂದ ತಾಲ್ಲೂಕಿಗೆ ವ್ಯತ್ಯಾಸಗೊಳ್ಳುತ್ತದೆ. ಕೆಲವು ರಾಜ್ಯಗಳು ಅಧಿಕಾರಶಾಹಿಗಳ ಮತ್ತು ಸ್ಥಳೀಯ ಸಂಸ್ಥೆಗಳ ಆಸಕ್ತಿಯಿಂದ ಉತ್ತಮ ಫಲಿತಾಂಶದೊಂದಿಗೆ ಹೊರಬಂದಿವೆ. ಇದಕ್ಕೆ ಪ್ರಮುಖ ಉದಾಹರಣೆ ಕೇರಳ. ಇದಕ್ಕೆ ಅಲ್ಲಿನ ಆಡಳಿತ ಮತ್ತು ಸಾರ್ವಜನಿಕರು ಬಹಳ ಆಸಕ್ತಿಯಿಂದ ಐತಿಹಾಸಿಕವಾಗಿ ಶಿಕ್ಷಣದ ಪ್ರಗತಿಗೆ ಶ್ರಮಿಸಿರುವುದನ್ನು ಕಾಣುತ್ತೇವೆ. ಇದೇ ರೀತಿಯಲ್ಲಿ ತಮಿಳುನಾಡು ಮತ್ತು ಹಿಮಾಚಲ ಪ್ರದೇಶಗಳು ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಬಹಳ ವೇಗದ ಪ್ರಗತಿಯನ್ನು ಮಾಡಿರುವ ಸೂಚನೆಗಳು ಇವೆ. ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಬಿಹಾರ್, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿದೆ. ಇದಕ್ಕೆ ಆ ರಾಜ್ಯಗಳಲ್ಲಿ ಅಧಿಕಾರಿಗಳ ಔದಾಸೀನ್ಯತೆ ರಾಜಕೀಯ ಇಚ್ಫಾಶಕ್ತಿಯ ಕೊರತೆ, ಸ್ಥಳೀಯರ ಸ್ಥಿತಿ ಸ್ಥಾಪಕತೆ ಪ್ರಮುಖ ಕಾರಣವಾಗಿದೆ ಎಂದು ಪ್ರೋಬ್ ತಂಡ ಗುರುತಿಸಿದೆ. ಹೀಗೆ ಶೈಕ್ಷಣಿಕ ಯೋಜನೆಗಳ ನಿರ್ವಹಣೆ, ಆಚರಣೆ ಮತ್ತು ಸಾಧನೆಯಲ್ಲಿ ರಾಜ್ಯದಿಂದ ರಾಜ್ಯ, ಪ್ರದೇಶದಿಂದ ಪ್ರದೇಶಕ್ಕೆ, ಅನೇಕ ಅಂಶಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದು. ಈ ಹಿನ್ನೆಲೆಯಲ್ಲಿ ನಾಲ್ಕು ಗ್ರಾಮ ಪಂಚಾಯತಿಯ ಒಟ್ಟಾರೆ ಸಾಕ್ಷರತಾ ಪರಿಸರವನ್ನು ರಾಜ್ಯದ, ಜಿಲ್ಲೆಯ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಯ ಜೊತೆಗೆ ಹೋಲಿಸಿ ಗುರುತಿಸುವುದು ಈ ಅಧ್ಯಾಯನದ ಮೂಲ ಆಶಯ.

.. ಕರ್ನಾಟಕದಲ್ಲಿ ಪ್ರಗತಿ ಮತ್ತು ಅಸಮಾನತೆ

ಕರ್ನಾಟಕವು ರಾಷ್ಟ್ರದ ಶೈಕ್ಷಣಿಕ ಪರಿಸರದಲ್ಲಿ ಬಿಹಾರದಷ್ಟು ಹಿಂದುಳಿಯದೆ, ಕೇರಳದಷ್ಟು ಅಭಿವೃದ್ಧಿ ಸಾಧಿಸದೆ ಇದ್ದರೂ ತನ್ನದೆ ಪ್ರಾತಿನಿಧ್ಯವನ್ನು ಪಡೆದಿದೆ. ಈ ದೃಷ್ಟಿಯಿಂದ ಕರ್ನಾಟಕವು ಸಾಕ್ಷರತೆಯಲ್ಲಿ ಮಧ್ಯಮಗತಿ ರಾಜ್ಯವಾಗಿದೆ (ಚಂದ್ರಶೇಖರ್ ಟಿ.ಆರ್. ೨೦೦೩). ೨೦೦೧ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು ೩೦೭೭೪೯೮೮ ಜನ ಅಕ್ಷರಸ್ಥರಾಗಿದ್ದಾರೆ. ಇದರಲ್ಲಿ ೧೭೮೧೭೬೮೨ ಜನ ಪುರುಷರು ಮತ್ತು ೧೨೯೫೭೩೦೬ ಜನ ಮಹಿಳೆಯರು. ಇದೇ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಇರುವ ಒಟ್ಟು ಅನಕ್ಷರಸ್ಥರ ಸಂಖ್ಯೆ ೧೫೧೩೨೮೦೦೨. ಇದರಲ್ಲಿ ೫೫೩೭೧೬೨ ಜನ ಪುರುಷರು ಮತ್ತು ೯೫೯೫೬೪೦ ಜನ ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ ೬೭.೦೪ ರಷ್ಟಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಖಡ ೫೭.೪೫ ರಷ್ಟಿದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೭೬.೨೯ ರಷ್ಟಿದೆ. ಒಟ್ಟು ಸಾಕ್ಷರತಾ ಪ್ರಮಾಣವು ರಾಜ್ಯದ ಎಲ್ಲಾ ಪ್ರದೇಶ ಮತ್ತು ವಿಭಾಗಗಳಲ್ಲಿ ಸಮಾನವಾಗಿರುವುದಿಲ್ಲ. ಏಣಿಶ್ರೇಣಿ ಮತ್ತು ಲಿಂಗತಾರತಮ್ಯಗಳು ವ್ಯಾಪಕವಾಗಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಸಾಕ್ಷರತೆಯನ್ನು ಇಡಿಯಾಗಿ ನೋಡಿದರೆ ಅದರ ವಾಸ್ತವಿಕ ಸ್ವರೂಪವನ್ನು ಕಾಣಲು ಸಾಧ್ಯವಿಲ್ಲ. ಯಾವುದೇ ಸಾಮಾಜಿಕ ವ್ಯವಸ್ಥೆ ಅಖಂಡವಾದುದಲ್ಲ. ವರ್ಗ, ಜಾತಿ, ಧರ್ಮ, ಪ್ರಾಂತ್ಯ ಅಥವಾ ಪ್ರದೇಶ ಮುಂತಾದ ಛಿದ್ರ ವಿಚ್ಫಿದ್ರಗಳು ಎಲ್ಲಾ ಸಮಾಜದಲ್ಲಿ ಕ್ರಿಯಾಶೀಲವಾಗಿವೆ. ಅದರಲ್ಲಿಯೂ ನಮ್ಮ ಸಮಾಜದಲ್ಲಿ ಇಂತಹ ಛಿದ್ರ, ವಿಚ್ಫಿದ್ರಗಳು ಸ್ವಲ್ಪಮಟ್ಟಿಗೆ ಹೆಚ್ಚಾಗಿಯೆ ಇವೆ. ಹೀಗಾಗಿ ಒಟ್ಟು ಸಾಕ್ಷರತಾ ಪ್ರಮಾಣವನ್ನು ಬಿಡಿಸಿದ ಅದರ ಪ್ರಾದೇಶಿಕ ಸ್ವರೂಪವನ್ನು ಮತ್ತು ಲಿಂಗಸಂಬಂಧಿ ಸ್ವರೂಪವನ್ನು ಅನಾವರಣ ಮಾಡಬೇಕಾಗಿದೆ. ಇಲ್ಲಿ ವಿಭಾಗ ಮತ್ತು ಪ್ರದೇಶಗಳ ಸಾಕ್ಷರತಾ ಪನದ ವಿವರಗಳನ್ನು ಲಿಂಗವಾರು ಜಿಲ್ಲೆವಾರು, ವಿಭಾಗವಾರು ಮತ್ತು ಪ್ರದೇಶವಾರು ವಿವರಿಸಲಾಗಿದೆ.

.. ಸಾಕ್ಷರತೆಯಲ್ಲಿ ವಿಭಾಗಪ್ರದೇಶವಾರು ಭಿನ್ನತೆ

ಕರ್ನಾಟಕದ ೨೦೦೧ರ ಜನಸಂಖ್ಯೆ, ಅಕ್ಷರಸ್ಥರ ಸಂಖ್ಯೆ, ಅನಕ್ಷರಸ್ಥರ ಸಂಖ್ಯೆಯನ್ನು ವಿಭಾಗ ಮತ್ತು ಪ್ರದೇಶವಾರು ಚರ್ಚಿಸಲಾಗಿದೆ. ಬೆಂಗಳೂರು ವಿಭಾಗವು ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೩೪.೯೭ರಷ್ಟು ಪಾಲನ್ನು, ಅಕ್ಷರಸ್ಥರಲ್ಲಿ ಶೇಕಡ ೩೮.೫೬ರಷ್ಟು ಪಾಲನ್ನು ಮತ್ತು ಅನಕ್ಷರಸ್ಥರಲ್ಲಿ ಶೇಕಡ ೨೯.೧೪ ಹೊಂದಿದೆ. ಈ ವಿಭಾಗವು ಮೇಲಿನ ಮೂರು ಅಂಶಗಳಲ್ಲಿ ಇತರ ಮೂರು ಕಂದಾಯ ವಿಭಾಗಗಳಿಗಿಂತ ಸ್ವಲ್ಪ ಹೆಚ್ಚಿನ ಪಾಲನ್ನು ಪಡೆದಿರುವ ವಿಭಾಗವಾಗಿದೆ. ಸಾಕ್ಷರತೆಯಲ್ಲಿ ಕೂಡ ಬೆಂಗಳೂರು ವಿಭಾಗವು ಇತರ ಮೂರು ಕಂದಾಯ ವಿಭಾಗಗಳಿಗಿಂತ ಹೆಚ್ಚಿನ ಸಾಧನೆಯನ್ನು ತೋರಿದೆ. ಈ ವಿಭಾಗದ ಒಟ್ಟು ಸಾಕ್ಷರತೆ ಶೇಕಡ ೭೨.೯೧ರಷ್ಟಿದ್ದರೆ, ಪುರುಷರ ಸಾಕ್ಷರತೆ ಶೇಕಡ ೮೦.೫೬ರಷ್ಟು ಮತ್ತು ಮಹಿಳಾ ಸಾಕ್ಷರತೆ ೬೪.೭೮ರಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬೆಳಗಾವಿ ಕಂದಾಯ ವಿಭಾಗವು ಶೇಕಡ ೨೪.೭೨ರಷ್ಟು ಪಾಲು ಪಡೆದಿದೆ. ಇದು ಜನಸಂಖ್ಯೆ ಹೆಚ್ಚಿನ ಪಾಲು ಪಡೆದ ಎರಡನೆಯ ವಿಭಾಗವಾಗಿದ್ದರೆ, ಮೈಸೂರು ವಿಭಾಗವು ಜನಸಂಖ್ಯೆಯಲ್ಲಿ ಶೇಕಡ ೨೨.೩೧ರಷ್ಟು ಪಾಲು ಪಡೆದು ಮೂರನೆಯ ಸ್ಥಾನದಲ್ಲಿದೆ. ರಾಜ್ಯದ ಜನಸಂಖ್ಯೆಯಲ್ಲಿ ನಾಲ್ಕನೆಯ ಸ್ಥಾನ ಪಡೆದಿರುವ ಗುಲಬರ್ಗಾ ವಿಭಾಗವು ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೧೮.೦೦ರಷ್ಟು ಪಾಲು ಪಡೆದಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗಗಳು ಜನಸಂಖ್ಯೆ ಹೊಂದಿರುವ ಪಾಲಿಗಿಂತ ಸ್ವಲ್ಪ ಹೆಚ್ಚಿನ ಪಾಲನ್ನು ಸಾಕ್ಷರತೆಯಲ್ಲಿ ಪಡೆದುಕೊಂಡಿವೆ. ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ ಮೈಸೂರು ವಿಭಾಗವು ಶೇಕಡ ೨೧.೨೦ರಷ್ಟು ಪಾಲು ಪಡೆದು ಕೊನೆ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ ಹೆಚ್ಚಿನ ಪಾಲು ಹೊಂದಿರುವ (ಶೇಕಡ ೨೯.೧೪) ವಿಭಾಗವೆಂದರೆ ಬೆಂಗಳೂರು (ನೋಡಿ: ಕೋಷ್ಟಕ ೩.೨ ಮತ್ತು ೩.೩.)

ಇದನ್ನು ಉತ್ತರ ಕರ್ನಾಟಕ ಪ್ರದೇಶ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಾಗಿ ವಿಭಾಗಿಸಿ ಕೂಡ ನೋಡಬಹುದು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಪ್ರದೇಶದ ಪಾಲು ಶೇಕಡ ೪೨.೭೦ರಷ್ಟಿದ್ದರೆ, ದಕ್ಷಿಣ ಕರ್ನಾಟಕ ಪ್ರದೇಶದ ಪಾಲು ಶೇಕಡ ೫೭.೩೦ ರಷ್ಟಿದೆ. ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಶೇಕಡ ೩೭.೯೨ ರಷ್ಟು ಪಾಲನ್ನು ಉತ್ತರ ಕರ್ನಾಟಕ ಪ್ರದೇಶ ಪಡೆದಿದ್ದರೆ, ದಕ್ಷಿಣ ಕರ್ನಾಟಕ ಪ್ರದೇಶವು ಶೇಕಡ ೬೨.೦೮ ರಷ್ಟು ಪಾಲು ಪಡೆದಿದೆ. ಸಾಕ್ಷರತೆಯನ್ನು ಲಿಂಗ ಸಂಬಂಧಿ ಆಯಾಮ ದೃಷ್ಟಿಯಿಂದಲೂ ನೋಡಬಹುದು. ರಾಜ್ಯದಲ್ಲಿ ಇರುವ ಒಟ್ಟು ಪುರುಷ ಅಕ್ಷರಸ್ಥರಲ್ಲಿ ಉತ್ತರ ಕರ್ನಾಟಕ ಪ್ರದೇಶದ ಪಾಲು ಶೇಕಡ ೩೭.೫೯ರಷ್ಟಿದ್ದರೆ, ದಕ್ಷಿಣ ಕರ್ನಾಟಕದ ಪ್ರದೇಶವು ಶೇಕಡ ೬೦.೪೧ರಷ್ಟು ಪಾಲು ಪಡೆದಿದೆ. ರಾಜ್ಯದಲ್ಲಿ ಇರುವ ಒಟ್ಟು ಮಹಿಳಾ ಅಕ್ಷರಸ್ಥರಲ್ಲಿ ಉತ್ತರ ಕರ್ನಾಟಕ ಪ್ರದೇಶವು ಶೇಕಡ ೩೫.೬೩ರಷ್ಟು ಪಾಲು ಪಡೆದಿದ್ದರೆ, ದಕ್ಷಿಣ ಕರ್ನಾಟಕ ಪ್ರದೇಶವು ಶೇಕಡ ೬೪.೩೭ರಷ್ಟು ಪಾಲು ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಇರುವ ಒಟ್ಟು ಅನಕ್ಷರಸ್ಥರಲ್ಲಿ ಉತ್ತರ ಕರ್ನಾಟಕ ಪ್ರದೇಶದ ಪಾಲು ಶೇಕಡ ೪೯.೬೭ರಷ್ಟಿದ್ದರೆ, ದಕ್ಷಿಣ ಕರ್ನಾಟಕ ಪ್ರದೇಶದ ಪಾಲು ೫೦.೩೩ ರಷ್ಟಿದೆ. ರಾಜ್ಯದಲ್ಲಿ ಇರುವ ಒಟ್ಟು ಪುರುಷ ಅನಕ್ಷರಸ್ಥರಲ್ಲಿ ಉತ್ತರ ಕರ್ನಾಟಕ ಪ್ರದೇಶವು ಶೇಕಡ ೪೯.೯೫ರಷ್ಟು ಪಾಲು ಪಡೆದಿದ್ದರೆ ದಕ್ಷಿಣ ಕರ್ನಾಟಕ ಪ್ರದೇಶವು ಶೇಕಡ ೫೧.೦೫ರಷ್ಟು ಪಾಲು ಪಡೆದಿದೆ. ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಒಟ್ಟು ಮಹಿಳಾ ಅನಕ್ಷರಸ್ಥರಲ್ಲಿ ಉತ್ತರ ಕರ್ನಾಟಕ ಪ್ರದೇಶವು ಶೇಕಡ ೫೦.೦೯ರಷ್ಟು ಪಾಲು ಪಡೆದಿದ್ದರೆ; ದಕ್ಷಿಣ ಕರ್ನಾಟಕ ಪ್ರದೇಶವು ಶೇಕಡ ೪೯.೯೧ರಷ್ಟು ಪಾಲು ಪಡೆದಿದೆ (ನೋಡಿ: ಕೋಷ್ಟಕ ೩.೨)

ಕೋಷ್ಟಕ .೨ – ರಾಜ್ಯ, ಪ್ರದೇಶ-ವಿಭಾಗವಾರು ಜನಸಂಖ್ಯೆ ಪಾಲು, ಅಕ್ಷರಸ್ಥರ ಪಾಲು ಮತ್ತು ಅನಕ್ಷರಸ್ಥರ ಪಾಲು

ಕ್ರ.ಸ

ವಿಭಾಗ / ಪ್ರದೇಶ / ರಾಜ್ಯ

ರಾಜ್ಯದ ಜನಸಂಖ್ಯೆಯಲ್ಲಿ ಪಾಲು

ಒಟ್ಟು

ಪುರುಷರು

ಮಹಿಳೆಯರು

ಒಟ್ಟು

ಪುರುಷರು

ಮಹಿಳೆಯರು

೦೧ ಬೆಂಗಳೂರು ವಿಭಾಗ

೩೪.೯೭

೩೮.೫೬

೩೭.೯೧

೩೯.೪೫

೨೯.೧೪

೨೪.೪೪

೨೮.೯೬

೦೨ ಬೆಳಗಾವಿ ವಿಭಾಗ

೨೪.೭೨

೨೩.೮೧

೨೪.೪೭

೨೨.೯೧

೨೫.೬೨

೨೪.೪೬

೨೬.೨೯

೦೩ ಗುಲಬರ್ಗಾ ವಿಭಾಗ

೧೮.೦೦

೧೪.೧೧

೧೫.೧೨

೧೨.೭೨

೨೪.೦೪

೨೪.೫೦

೨೩.೮೦

೦೪ ಮೈಸೂರು ವಿಭಾಗ

೨೨.೩೧

೨೩.೫೨

೨೨.೫೦

೨೪.೯೨

೨೧.೨೦

೨೧.೬೦

೨೦.೯೫

೦೫ ಉತ್ತರ ಕರ್ನಾಟಕ

೪೨.೭೦

೩೭.೯೨

೩೭.೫೯

೩೫.೬೩

೪೯.೬೭

೪೯.೯೫

೫೦.೦೯

೦೬ ದಕ್ಷಿಣ ಕರ್ನಾಟಕ

೫೭.೩೦

೬೨.೦೮

೬೦.೪೧

೬೪.೩೭

೫೦.೩೩

೫೧.೦೫

೪೯.೯೧

೦೭ ಕರ್ನಾಟಕ ರಾಜ್ಯ

೧೦೦

೧೦೦

೧೦೦

೧೦೦

೧೦೦

೧೦೦

೧೦೦

ಮೂಲ: ಸೆನ್ಸಸ್ ೨೦೦೧ ಮತ್ತು ಅಭಿವೃದ್ಧಿ ಅಧ್ಯಯನ ೨೦೦೩.

 


[1] ೨೦೦೧ನೆಯ ಜನಗಣತಿಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಾಕ್ಷರತೆ ಪ್ರಮಾಣದ ಅಂಕಿ ಸಂಖ್ಯೆಗಳು ಈ ಅಧ್ಯಯನ ಪೂರ್ಣವಾಗಿ ಮುಗಿದ ನಂತರ ದೊರೆತ ಕಾರಣಇದನ್ನು ಪ್ರಸ್ತುತ ಅಧ್ಯಾಯದಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗಿಲ್ಲ. ಆದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಿಲ್ಲಾವರಾ (೧೯೯೧-೨೦೦೧), ಸಾಕ್ಷರತೆ ಪ್ರಮಾಣವನ್ನು ಮೂರನೇ ಅಧ್ಯಾಯದ ಕೊನೆಯಲ್ಲಿ ನೀಡಲಾಗಿದೆ. ಓದುಗರು ಓದುವಾಗ ಅದನ್ನು ಗಮನಿಸಿದರೆ ಹೆಚ್ಚಿನ ಒಳನೋಟಗಳು ಸಿಗುತ್ತವೆ.