ಬೂದಿಹಾಳ ಎಸ್.ಕೆ. ಯರೇಹಂಚಿನಾಳ, ಕಬ್ಬರಗಿ ಮತ್ತು ಕೃಷ್ಣನಗರ ಗ್ರಾಮ ಪಂಚಾಯತಿಗಳಲ್ಲಿ ಇರುವ ಶಾಲೆಗಳಲ್ಲಿ ದಲಿತರ ಮಕ್ಕಳಿಗೆ ಪ್ರತ್ಯೇಕವಾದ ಆಸನವಾಗಲಿ, ಜಾತಿ ಆಧಾರಿತ ತಾರತಮ್ಯವಾಗಲಿ ಕಂಡುಬರಲಿಲ್ಲ. ಎಲ್ಲಾ ಜನ ಸಮುದಾಯಗಳಿಗೆ ಸೇರಿದ ಮಕ್ಕಳು ಒಟ್ಟಿಗೆ ಕುಳಿತು, ಕಲಿಯುವ ಮತ್ತು ಒಟ್ಟಿಗೆ ಕುಳಿತು ಒಂದೇ ಬಗೆಯ ಆಹಾರವನ್ನು ಹಂಚಿಕೊಂಡು ಊಟ ಮಾಡುವಲ್ಲಿ ತಲ್ಲೀನವಾಗಿರುವುದನ್ನು ನಾವು ಗಮನಿಸಿದೆವು. ಆದರೆ, ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ತೊರಮರಿ, ತಾರಿವಾಳ, ನಿಡಸನೂರು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಜನರನ್ನು ಸಮಾನವಾಗಿ ನೋಡುತ್ತಿಲ್ಲ. ಈ ಸಮುದಾಯಕ್ಕೆ ಸೇರಿದ ಮಕ್ಕಳು ಇತರ ಜಾತಿಯ ಮಕ್ಕಳ ಜೊತೆಗೆ ಸರಾಗವಾಗಿ ಬೆರೆಯುವುದಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳು ಮೊದಲು ಶಾಲೆಯಲ್ಲಿ ಯಾವುದೇ ಪಾತ್ರೆಗಳನ್ನು ಮುಟ್ಟುತ್ತಿರಲಿಲ್ಲ. ಆದರೆ ಶಾಲಾ ಬಿಸಿಯೂಟ ಪ್ರಾರಂಭವಾದ ದಿನದಿಂದ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೂ ಪರಿಶಿಷ್ಟ ಜಾತಿಯ ಮಕ್ಕಳು ಅಂಜಿಕೊಳ್ಳುತ್ತಾರೆ ಎಂದು ಮೇಲೆ ತಿಳಿಸಿದ ಮೂರು ಶಾಲೆಯ ಶಿಕ್ಷಕರು ಹೇಳುತ್ತಾರೆ. ಅಧ್ಯಯನದ ಮಾದರಿ ಆಯ್ಕೆಯಲ್ಲಿ ಬೇರೆ ಬೇರೆ ಜಾತಿ ವರ್ಗಗಳಿಗೆ ಸೇರಿದ ಪೋಷಕರನ್ನು ನಾವು ಸಂದರ್ಶಿಸಿದಾಗಲೂ ಕೂಡ ಬಹಳಷ್ಟು ಪೋಷಕರು ಅನೇಕ ಕಾರಣ ನೀಡಿ ಬಿಸಿಯೂಟ ವ್ಯವಸ್ಥೆಯನ್ನು ಸ್ವಾಗತಿಸುತ್ತಾರೆ. ಬೆರಳೆಣಿಕೆಯ ಪೋಷಕರು ಮಾತ್ರ ಅವರ ಮಕ್ಕಳು ಇತರ ಜಾತಿಗೆ ಸೇರಿದ ಮಕ್ಕಳ ಜೊತೆಗೆ ಆಹಾರ ಹಂಚಿಕೊಳ್ಳುವುದನ್ನು ವಿರೋಧಿಸುತ್ತಾರೆ.

ಮುಖ್ಯ ಶಿಕ್ಷಕರು

ಹೌದು

ಇಲ್ಲ

೦೧ ನಿಮ್ಮ ಶಾಲೆಯಲ್ಲಿ ಮೇಲುಜಾತಿಗೆ ಸೇರಿದ ಪೋಷಕರು ಅಥವಾ ಮಕ್ಕಳು ಎಲ್ಲಾ ಜಾತಿಗಳ  ಮಕ್ಕಳ ಜೊತೆ ಪ್ರಕರಣ ಇದೆಯೇ?

–        

೨೦
(%೧೦೦)

೦೨ ಪೋಷಕರು ಶಾಲೆಯಲ್ಲಿ ನಿಮ್ಮ ಮಕ್ಕಳು ಕೆಳ ಜಾತಿ ಮಕ್ಕಳ ಜೊತೆ ಊಟ ಮಾಡುವುದಕ್ಕೆ ವಿರೋಧವಿದೆಯೇ?

೦೪
(%೦.೯೪)

೨೬೭
(%೬೨.೯೭)

೦೩ ದಲಿತ ಪೋಷಕರು ನಿಮ್ಮ ಮಕ್ಕಳು ಶಾಲೆಯಲ್ಲಿ ಊಟ ಮಾಡುವಾಗ ಜಾತಿ ಆಧಾರಿತವಾಗಿ ತಾರತಮ್ಯಕ್ಕೆ ಒಳಗಾಗಿದ್ದಾರೆಯೇ?

೧೫೩
(%೧೦೦)

ಮೂಲ: ಕ್ಷೇತ್ರ ಕಾರ್ಯದ ಮಾಹಿತಿ

ಮೇಲಿನ ಎಲ್ಲಾ ಪ್ರತಿಕ್ರಿಯೆಗಳು ಹೇಗೆ ಇದ್ದರೂ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಅಧ್ಯಯನಗಳ ಹಿಡಿತಕ್ಕೆ ಸಿಗದೆ ನುಣುಚಿಕೊಳ್ಳಬಹುದಾದ ಜಾತಿಯ ಆಧಾರಿತ ಮತ್ತು ಸಾಮಾಜಿಕ ಪಕ್ಷಪಾತಗಳು ಇರುವುದನ್ನು ತಳ್ಳಿಹಾಕುವಂತಿಲ್ಲ. ಶಾಲಾ ಬಿಸಿಯೂಟದ ಮೇಲೆ ಬಹಿರಂಗವಾದ ವಿರೋಧಗಳು ಬಹಳ ಅಪರೂಪ. ಹೀಗಿದ್ದರೂ ಕೂಡ ಬಿಸಿಯೂಟದಲ್ಲಿ ಇರುವ ಸಣ್ಣ-ಪುಟ್ಟ ತೊಡಕುಗಳನ್ನು ಕಾರಣ ಮಾಡಿ ವಿರೋಧಿಸುವಾಗ ಬೇರೆ ಬೇರೆ ಹಿತಾಸಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತವೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಇರುವ ಅನಿಶ್ಚಿತತೆಯನ್ನು ಮೇಲು ಜಾತಿಗೆ ಸೇರಿದ ಪೋಷಕರು ವಿರೋಧಿಸುವುದು ಕೂಡ ಬಹಳ ಅಪರೂಪ. ಆದರೆ ಮೇಲು ಜಾತಿಗೆ ಸೇರಿದ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಶಾಲೆಗೆ ಬರುವಾಗ ಮಧ್ಯಾಹ್ನದ ಊಟಕ್ಕೆ ಮನೆಗೆ ಬಾ ಅಥವಾ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ. ಈ ಅಭಿಪ್ರಾಯಗಳು ಜಾತಿ ಆಧಾರಿತ ಪೂರ್ವಗ್ರಹಗಳಿಂದ ಕೂಡಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಜಾತಿ ಆಧಾರಿತ ಪೂರ್ವಗ್ರಹಗಳಿಂದ ಕೂಡಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಜಾತಿ ಆಧಾರದಿಂದ ಕೂಡಿದ ಅಂಶಗಳು ಅನೇಕ ಘಟನೆಗಳಲ್ಲಿ ಪ್ರಮುಖ ವಿಷಯವಾಗಿ ಪಾತ್ರವಹಿಸುತ್ತದೆ ಎಂದು ಹೇಳಬಹುದು.

ಕರ್ನಾಟಕ ರಾಜ್ಯದಲ್ಲಿ ಶಾಲಾ ಬಿಸಿಯೂಟಕ್ಕೆ ಅಡಿಗೆಯವರಾಗಿ ನೇಮಕವಾಗಿರುವವರು ಹೆಚ್ಚಿನವರು ದಲಿತರು ಎಂದು ಸರಕಾರಿ ದಾಖಲಾತಿಗಳಿಂದ ತಿಳಿಯುತ್ತದೆ. ಅಲ್ಲದೆ ಇದಕ್ಕೆ ವಿಶಾಲವಾದ ಅರ್ಥದಲ್ಲಿ ಸಾಮಾಜಿಕ ಒಪ್ಪಿಗೆಯೂ ದೊರೆತಿದೆ. ಆದರೆ ದಲಿತರನ್ನು ಅಡಿಗೆಯವರಾಗಿ ಶಾಲೆಗಳಿಗೆ ನೇಮಿಸಿಕೊಳ್ಳುವಾಗ ಮೇಲುಜಾತಿಯವರಿಂದ ಪ್ರತಿರೋಧಗಳು ಕಂಡುಬಂದಿವೆ. ಜುಲೈ ೨೦೦೩ರಲ್ಲಿ ಕರ್ನಾಟಕದ ಪ್ರದೇಶದಲ್ಲಿ ಜಾರಿಗೆ ಬಂದ ಸಂದರ್ಭಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಾತಿ ಆಧಾರದ ಪೂರ್ವಾಚಾರಗಳು ಬೆಳಕಿಗೆ ಬಂದಿವೆ. ತುಮಕೂರು ಜಿಲ್ಲೆಯ ಚಿಕ್ಕತುರುವೇಕೆರೆ ಶಾಲೆಯಲ್ಲಿ ಮೇಲು ಜಾತಿಗೆ ಸೇರಿದ ಮಕ್ಕಳು ದಲಿತರು ತಯಾರಿಸಿದ ಊಟ ಮಾಡಿದ್ದರಿಂದ ಕೆಲವು ಮಕ್ಕಳಿಗೆ ಜಾತಿ ಪೂರ್ವಾಚಾರದಲ್ಲಿ ಶುದ್ಧತೆ ಶಾಸ್ತ್ರವಿಧಿಗಳಿಗೆ ಒಳಪಡಿಸಿದ ಘಟನೆಯೂ ನಡೆದಿದೆ. ದಲಿತ ಮಹಿಳೆಯರನ್ನು ಶಾಲೆಯಲ್ಲಿ ಅಡುಗೆ ಮಾಡಲು ನೇಮಕಮಾಡಿದ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ವಿರೋಧಿಸಿದ್ದಿದೆ. ಕೆಲವು ಸಂದರ್ಭಗಳಲ್ಲಿ ಮಕ್ಕಳು ಶಾಲೆಗೆ ಹೋಗದಂತೆ ತಡೆದಿರುವ, ಶಾಲೆಯಿಂದ ಬಿಡಿಸಿರುವ ಘಟನೆಗಳು ನಡೆದಿವೆ (ಪ್ರಜಾವಾಣಿ, ೨೦೦೩)

ನಮ್ಮ ಅಧ್ಯಯನ ಸಂದರ್ಭದಲ್ಲಿ ದಲಿತ ಮಹಿಳೆಯರನ್ನು ಅಡಿಗೆಯವರಾಗಿ ನೇಮಕ ಮಾಡಿಕೊಳ್ಳುವಾಗ ವಿರೋಧಗಳು ಬಹಿರಂಗವಾಗಿ ನಡೆದಿರುವ ಘಟನೆಗಳು ಕಂಡುಬಂದಿಲ್ಲ. ಆದರೆ, ಶಾಲೆಗೆ ನೇಮಕ ಮಾಡಿಕೊಂಡಿರುವ ಮಹಿಳೆಯರು ಬಹುಮಟ್ಟಿಗೆ ದಲಿತರು. ಆದರೆ ಅವರಲ್ಲಿ ಬಹುತೇಕ ಜನರು ಅಸ್ಪೃಶ್ಯ ಜಾತಿಗೆ ಸೇರಿದವರಲ್ಲ. ಅಂದರೆ ಅಸ್ಪೃಶ್ಯತೆ ಯನ್ನು ಅನುಭವಿಸದೆ ಇರುವ ದಲಿತ ಜನಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದರಲ್ಲಿಯೂ ಪರಿಶಿಷ್ಟ ಪಂಗಡದವರಿಗೆ ಸ್ವಲ್ಪ ಮಟ್ಟಿನ ಹೆಚ್ಚಿನ ಆದ್ಯತೆ ದೊರೆತಿದೆ. ಇದರಿಂದ ಸ್ಪಷ್ಟವಾಗುವ ಅಂಶ, ಈಗಲೂ ಸಹ ಗ್ರಾಮಗಳಲ್ಲಿ ಅಸ್ಪೃಶ್ಯತೆಯ ಬಗ್ಗೆ ಪೂರ್ವಾಚಾರ ಮನೋಭಾವನೆ ಗಟ್ಟಿಯಾಗಿ ಇರುವುದು. ಒಂದು ವೇಳೆ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಜಾತಿಗೆ ಸೇರಿದವರನ್ನು ಅಡಿಗೆಯವರಾಗಿ ನೇಮಿಸಿದರೂ ಅವರಿಗೆ ಶಾಲಾ ಅಡಿಗೆಯಲ್ಲಿ ಪ್ರಮುಖ ಕೆಲಸವನ್ನು ಮಾಡುವ ಅವಕಾಶ ಕಲ್ಪಿಸಿಲ್ಲ. ಅಡುಗೆಗೆ ಪೂರಕವಾದ ಕೆಲಸಗಳಾದ ನೀರು ತರುವುದು, ಪಾತ್ರೆ ತೊಳೆಯುವುದು, ಆಹಾರ ಪದಾರ್ಥಗಳ ಸ್ವಚ್ಛತೆ ಮತ್ತು ಫ್ಲೋರ್‌ಮಿಲ್‌ಗೆ ಗೋಹುವುದು ಇತ್ಯಾದಿ ಅಡಿಗೆ ಮನೆಯ ಹೊರಗಿನ ಶ್ರಮದಾಯಕ ಕೆಲಸಗಳಿಗೆ ನಿಯೋಜಿಸಲಾಗಿದೆ. ನಾವು ಅಧ್ಯಯನ ಮಾಡಿದ ಶಾಲೆಗಳಲ್ಲಿ ಇರುವ ಒಟ್ಟು ಅಡಿಗೆ ಕೆಲಸದವರಲ್ಲಿ ೫ ಜನ ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರು. ಇದರಲ್ಲಿ ಮುಖ್ಯ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿರುವವರು ಕೇವಲ ಒಬ್ಬರು ಮಾತ್ರ. ಅದು ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿ ವ್ಯಾಪ್ತಿಯ ಬೆನಕನದೋಣಿ ಗ್ರಾಮದ ಶಾಲೆಯಲ್ಲಿ. ಇವರು ಪ್ರಮುಖ ಅಡುಗೆಯವರಾಗಿ ಆಯ್ಕೆಯಾಗಿರುವುದು ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಮಾದರ) ಸೇರಿದ ಜನರು ಹೆಚ್ಚಾಗಿ ಇರುವುದರಿಂದಲೇ. ಪ್ರಮುಖ ಅಡಿಗೆಯ ಸಂಬಂಧಿಯು ಗ್ರಾಮ ಪಂಚಾಯತಿಯ ಸದಸ್ಯರಾಗಿರುವ ಕಾರಣಕ್ಕಾಗಿ ಆಯ್ಕೆಯಾಗಿದ್ದಾರೆಯೇ, ಇವರ ಗಂಡ ಎನ್.ಇ.ಕೆ.ಆರ್.ಟಿ.ಸಿಯಲ್ಲಿ ಡ್ರೈವರಾಗಿರುವ ಕಾರಣದಿಂದಾಗಿಯೇ ಅಥವಾ ಇವರು ಎಸ್.ಎಸ್.ಎಲ್.ಸಿ. ಪಾಸಾಗಿರುವುದಕ್ಕಾಗಿಯೇ, ಎಂಬುದರ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಆದರೆ ಇಲ್ಲಿ ಒಂದು ಅಂಶ ಸ್ಪಷ್ಟವಾಗುತ್ತಿದೆ. ಅದೇನೆಂದರೆ ಬೆನಕನದೋಣಿಯ ಮುಖ್ಯ ಅಡುಗೆಯವರ ಆಯ್ಕೆಯಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳು ತಮ್ಮದೇ ಪ್ರಭಾವವನ್ನು ಬೀರಿರುವುದರಲ್ಲಿ ಸಂಶಯವಿಲ್ಲ.

ಬೂದಿಹಾಳ ಎಸ್.ಕೆ. ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಮೂವರು ಅಡಿಗೆಯವರು ಇದ್ದಾರೆ. ಇವರಲ್ಲಿ ಪ್ರಮುಖ ಅಡುಗೆಯವರು ಪಾಕನಾಕ ರೆಡ್ಡಿ ಲಿಂಗಾಯತ ಜಾತಿಗೆ ಸೇರಿದವರು. ಅಡಿಗೆ ಸಹಾಯಕ-೧ ಕುರುಬ ಜಾತಿಗೆ ಸೇರಿದವರು. ಅಡಿಗೆ ಸಹಾಯಕುರ -೨ ಮಾದರ ಜಾತಿಗೆ ಸೇರಿದವರು. ಮುಖ್ಯ ಅಡಿಗೆಯವರು ಸರಿಯಾಗಿ ಅಡಿಗೆ ಕೆಲಸಕ್ಕೆ ಬರುವುದಿಲ್ಲ. ಇದಕ್ಕೆ ಅವರು ಅನಾರೋಗ್ಯ ಕಾರಣ ನೀಡುತ್ತಾರೆ. ಆದರೂ ನಾವು ತಿಂಗಳ ಸಂಬಳವನ್ನು ತಪ್ಪದೆ ಅವರಿಗೆ ನೀಡಬೇಕು ಎಂದು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಹೇಳುತ್ತಾರೆ. ಇದಕ್ಕೆ ಕಾರಣ ಅವರು ಗ್ರಾಮ ಪಂಚಾಯತಿ ಸದಸ್ಯರ ಸೊಸೆ, ಅವರು ಈ ಭಾಗದಲ್ಲಿ ಎಲ್ಲಾ ರೀತಿಯಿಂದಲೂ ಪ್ರಬಲವಾಗಿದ್ದಾರೆ. ಇವರಿಗೆ ಸುಮಾರು ೨೫ ಎಕರೆಗೂ ಹೆಚ್ಚಿನ ಭೂಮಿ ಇದೆ. ಇವರ ಕುಟುಂಬವು ಈ ಗ್ರಾಮ ಪಂಚಾಯತಿಯಲ್ಲಿ ರಾಜಕೀಯವಾಗಿ ಪ್ರಬಲವಾಗಿದ್ದಾರೆ. ಹೀಗಾಗಿ ಅವರ ಮೇಲೆ ಒತ್ತಡ ಹಾಕಿ ಕೆಲಸಕ್ಕೆ ಸರಿಯಾಗಿ ಬರುವಂತೆ ಹೇಳುವುದು ಬಹಳ ಕಷ್ಟ ಎಂದು ಶಾಲಾ ಮುಖ್ಯಗುರುಗಳು ಹೇಳುತ್ತಾರೆ. ಮುಖ್ಯ ಅಡಿಗೆಯವರ ಕೆಲಸವೂ ಸೇರಿದಂತೆ ಬಹುತೇಕ ಎಲ್ಲಾ ಕೆಲಸಗಳನ್ನು ಉಳಿದ ಇನ್ನಿಬ್ಬರು ಮಾಡುತ್ತಿದ್ದಾರೆ. ಮೊದಲೇ ತಿಳಿಸಿದಂತೆ ಇದರಲ್ಲಿ ಒಬ್ಬರು ಮಾದರ ಜಾತಿಗೆ ಸೇರಿದವರು. ಇವರು ಅಡಿಗೆಗೆ ಸಹಾಯಕವಾದ ಕೆಲಸಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳನ್ ಮಾಡಲು ಗ್ರಾಮಸ್ಥರು ಬಿಡುತ್ತಿಲ್ಲ. ಹೀಗಾಗಿ ಅವರು ಆಹಾರ ಪದಾರ್ಥಗಳ ಸ್ವಚ್ಛತೆ, ಫೋರ್‌ಮಿಲ್‌ಗೆ ಹೋಗುವುದು ಹೊರತುಪಡಿಸಿ, ಅಡಿಗೆಯ ಪಾತ್ರೆಗಳನ್ನು ಅಡುಗೆಯ ಸಂದರ್ಭದಲ್ಲಿ ಮತ್ತು ಪಾತ್ರೆಗಳನ್ನು ತೊಳೆದ ನಂತರ ಮುಟ್ಟುವ ಹಾಗಿಲ್ಲ. ಇದರಿಂದಾಗಿ ಎರಡನೆಯ ಅಡುಗೆ ಸಹಾಯಕರೆ ಎಲ್ಲಾಅಡಿಗೆ ಕೆಲಸಗಳನ್ನು ಮಾಡುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಈ ಮೇಲಿನ ವಿವರಣೆಯಿಂದ ಸ್ಪಷ್ಟವಾಗುವ ಅಂಶವೆಂದರೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ಸ್ಥಳೀಯರು, ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡದಿರುವುದರ ಜೊತೆಗೆ, ತಮ್ಮ ತಮ್ಮ ಜಾತಿಯ ಪ್ರಬಾವ ಬಳಸಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅಡಿಗೆ ಕೆಲಸದಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತಿರುವುದನ್ನು ತಡೆಯುತ್ತಿದ್ದಾರೆ.

ಈ ಅಂಶವನ್ನು ಹೆಚ್ಚು ಗಟ್ಟಿಗೊಳಿಸುವ ಇನ್ನೂ ಎರಡು ಘಟನೆಯನ್ನು ನಮ್ಮ ಅಧ್ಯಯನ ಗುರುತಿಸಿದೆ. ಒಂದು ಶಿದ್ನೇಕೊಪ್ಪ ಶಾಲೆಗೆ ಒಬ್ಬ ವಿದ್ಯಾವಂತ (ಎಸ್.ಎಸ್.ಎಲ್.ಸಿ. ತೇರ್ಗಡೆಯಾದ) ಮಹಿಳೆಯು ಮುಖ್ಯ ಅಡುಗೆಯವರ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರು ಪರಿಶಿಷ್ಟ ಜಾತಿಯಲ್ಲಿ ಮಾದರ ಸಮುದಾಯಕ್ಕೆ ಸೇರಿದವರು. ಮೊದಲ ಹಂತದಲ್ಲಿ ಇವರಿಗೆ ಮುಖ್ಯ ಅಡುಗೆಯವರ ಕೆಲಸ ನೀಡಬಹುದು ಎಂದು ಮುಖ್ಯ ಗುರುಗಳು ಪ್ರಸ್ತಾವನೆಯನ್ನು ಮಂಡಿಸಿದರು. ಆದರೆ ಎಸ್.ಡಿ.ಎಂ.ಸಿ. ಸಮಿತಿ ಸಭೆಯಲ್ಲಿ ಬಹಳಷ್ಟು ಸದಸ್ಯರು ಇದನ್ನು ವಿರೋಧಿಸಿದ್ದಾರೆ. ವಿರೋಧಕ್ಕೆ ನೀಡಿದ ಕಾರಣವನ್ನು ಒಬ್ಬ ಶಿಕ್ಷಕರು ಅನೌಪಚಾರಿಕವಾಗಿ ಚರ್ಚಿಸುವಾಗ ವಿವರಿಸಿದ್ದು ಹೀಗೆ: ‘ಆಕೆಯು ಪರಿಶಿಷ್ಟ ಜಾತಿಗೆ ಸೇರಿದವವಳು, ಅದರಲ್ಲಿಯೂ ಮಾದರ ಜಾತಿಗೆ ಸೇರಿದವಳು. ಆಕೆಯು ಶಾಲೆಯಲ್ಲಿ ಮಾಡಿದ ಊಟವನ್ನು ನಮ್ಮ ಮಕ್ಕಳು ಊಟ ಮಾಡುವುದು ಹೇಗೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ರೂಪಿಸಿದರು’. ಅಲ್ಲದೆ ಹಿಂದುಳಿದವರಿಗೆ ನೀಡಬೇಕು ಎಂಬ ಸರಕಾರದ ಮಾರ್ಗಸೂಚಿ ಬಳಸಿ ಹಿಂದುಳಿದ ಬಾರ್‌ಕೇರ್ ಸಮುದಾಯದವರಿಗೆ ಈ ಕೆಲಸವನ್ನು ನೀಡಬೇಕು ಎಂದು ನಿರ್ಧಾರವನ್ನು ತೆಗೆದುಕೊಂಡರು. ಬಾರ್ ಕೇರ್ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದವರು. ಆದರೆ ಇವರು ಅಸ್ಪೃಶ್ಯತೆಯನ್ನು ಅನುಭವಿಸಿದ ಸಮುದಾಯವಲ್ಲ. ಇದು ವಿಶೇಷವಾಗಿ ಬಿಸಿಯೂಟ ಅಡಿಗೆಗೆ ಅಸ್ಪೃಶ್ಯರನ್ನು ನೇಮಕ ಮಾಡುವಾಗ ಉಂಟಾದ ವಿರೋಧಗಳಿಗೆ ಅನೇಕ ಗ್ರಾಮಗಳಲ್ಲಿ ಅಸ್ಪೃಶ್ಯರನ್ನು ಕೆಳಮಟ್ಟದಲ್ಲಿ ನೋಡುವ ಮನೋಭಾವನೆ ಅನಿರ್ಬಂಧಿತವಾಗಿರುವುದು ಕಾರಣವಾಗಿದೆ. ಈ ಬಗೆಯ ಜಾತಿ ಆಧಾರಿತ ತಾರತಮ್ಯಗಳು ಮತ್ತು ಅಸಮಾನತೆಗಳು ಕೇವಲ ನಾವು ಅಧ್ಯಯನ ನಡೆಸಿದ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಸಮಾಜದಲ್ಲಿ ಅನೂಚಾನವಾಗಿ ನಡೆದು ಬಂದಿರುವ ಪ್ರಕ್ರಿಯೆಯಾಗಿದೆ. ಇದರಿಂದ ಈಗಲಾದರೂ ಹೊರಬರದೆ ಹೋದರೆ, ಬಿಸಿಯೂಟದ ಸಾಮಾಜೀಕರಣ ಉದ್ದೇಶ ಸೋಲುವುದರಲ್ಲಿ ಸಂಶಯವಿಲ್ಲ. ಈ ಕುರಿತು ಹೆಚ್ಚು ನಿರ್ದಿಷ್ಟವಾದ ಅಧ್ಯಯನಗಳನ್ನು ನಾವು ಎದುರು ನೋಡಬೇಕಾಗಿದೆ.

ಆದರೆ ಈ ಎಲ್ಲಾ ಮಹತ್ವದ ಸಂಗತಿಗಳಿಂದ ಬಿಯೂಟ ಕಾರ್ಯಕ್ರಮವು ಹೊಂದಿರುವ ಸಾಮಾನ್ಯ ಸಾಮಾಜೀಕರಣದ ಮೌಲ್ಯವನ್ನು ಕುಂದಿಸಲಾರದು. ಉದಾಹರಣೆಗೆ, ಸೇಬಿನಕಟ್ಟೆ ಗ್ರಾಮಕ್ಕೆ ಸೇರಿದ ‘ಮಾನಪ್ಪ ಭಜಂತ್ರಿಯವರ ಪ್ರಕಾರ ಬಿಸಿಯೂಟ ಶಾಲೆಯಲ್ಲಿ ಪ್ರಾರಂಭವಾದಾಗ ಬೇರೆ ಬೇರೆ ಜಾತಿಯವರನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿತ್ತು. ಇತ್ತೀಚೆಗೆ ಎಲ್ಲಾ ಜಾತಿಯ ಮಕ್ಕಳು ಒಟ್ಟಿಗೆ ಬಿಸಿಯೂಟವನ್ನು ಸೇವಿಸುತ್ತಿದ್ದಾರೆ ಎಂದು ಹೇಳುತ್ತಾರೆ.’ ಈ ತಿಳುವಳಿಕೆಗಳ ಹಿನ್ನೆಲೆಯಲ್ಲಿಯೇ ಮೇಲುಜಾತಿಗೆ ಸೇರಿದ ಕೆಲವು ಸಂಪ್ರದಾಯವಾದಿಗಳು ಉದ್ದೇಶಪೂರ್ವಕವಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಇಂತಹ ವಿರೋಧಗಳಿಂದ ಹೊರಬರಬೇಕಾದ ಅವಶ್ಯಕತೆ ಇದೆ. ಹಾಗೂ ಇದು ಹೆಚ್ಚು ಮೌಲ್ಯಯುತವಾದುದು. ಕಾಲಾಂತರದಲ್ಲಿ ಜಾತಿ ಆಧಾರಿತ ಅಡ್ಡಿ ಆತಂಕಗಳು ಅಥವಾ ರೂಢಿಗಳು ಅತ್ಯಂತ ವೇಗವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದಿದ್ದರೆ ಸಾಂಪ್ರದಾಯಿಕ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇರುವ, ಮೂಲಭೂತ ಸಂಪ್ರದಾಯವಾದಿಗಳಿಗೆ ಹೆಚ್ಚು ಅವಕಾಶ ನೀಡಿದಂತೆ ಆಗುತ್ತದೆ. ಈ ಎಲ್ಲಾ ಚರ್ಚೆಯು ಕೇವಲ ಜಾತಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಧರ್ಮಗಳಿಗೂ ಕೂಡ ಅನ್ವಯಿಸುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಕೋಮುಬಾವನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಧರ್ಮ, ಜಾತಿಗೆ ಸೇರಿದ ಮಕ್ಕಳು ಒಟ್ಟಿಗೆ ಕಲಿಯುವ ಮತ್ತು ಒಂದೇ ಬಗೆಯ ಆಹಾರವನ್ನು ಹಂಚಿಕೊಂಡು ಊಟ ಮಾಡುವ ಮೌಲ್ಯವನ್ನು ಬೋಧಿಸುವುದು ಅತ್ಯಂತ ಮಹತ್ವದ್ದಾಗಿದೆ.

೬.೮. ಬಿಸಿಯೂಟ-ಲಿಂಗ ಸಮಾನತೆ

ಶಾಲಾ ಬಿಸಿಯೂಟವು ಒಂದು ಕಡೆ ಜಾತಿ ಪೂರ್ವಾಚಾರಗಳನ್ನು ಕಡಿಮೆಗೊಳಿಸಲು ಸಹಾಯಕವಾಗುವುದರ ಜೊತೆಗೆ ಲಿಂಗ ಸಮಾನತೆಯ ಬೆಳವಣಿಗೆಗೂ ತನ್ನತೇ ಆದ ಕೊಡುಗೆಯನ್ನು ನೀಡುತ್ತಿದೆ. ಈ ಕಾರ್ಯಕ್ರಮ ಜಾರಿಗೆ ಬಂದ ನಂತರ ಶಾಲಾ ಹಾಜರಾತಿಯಲ್ಲಿ ಅದರಲ್ಲಿಯೂ ಹೆಣ್ಣುಮಕ್ಕಳ ಹಾಜರಾತಿಯಲ್ಲಿ ಉಂಟಾಗಿರುವ ಹೆಚ್ಚಳದ ಮೂಲಕ ಪ್ರಾಥಮಿಕ ಶಿಕ್ಷಣದಲ್ಲಿ ಇರುವ ಲಿಂಗ ಅಸಮಾನತೆಯನ್ನು ಕಡಿಮೆಗೊಳಿಸಲು ಇದು ಸಹಕಾರಿಯಾಗಿದೆ ಎಂಬುದನ್ನು ಈಗಾಗಲೇ ನಡೆದಿರುವ ಅಧ್ಯಯನಗಳು ಗುರುತಿಸಿವೆ. (ಜೀನ್ ಡ್ರೀಜ್, ೨೦೦೩, ಡ್ರೀಜ್ ಮತ್ತು ಗೋಯಲ್, ೨೦೦೩, ಸೀತಿ, ೨೦೦೩). ಅನೇಕ ಸ್ಥಿರವಾದ ಆಧಾರಗಳು ಸೂಚಿಸುವುದೇನೆಂದರೆ, ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳಿಂದ ಹೆಣ್ಣುಮಕ್ಕಳ ಶಿಕ್ಷಣವು ಗಂಡು ಮಕ್ಕಳ ಶಿಕ್ಷಣಕ್ಕಿಂತಲೂ ಹೆಚ್ಚು ಪ್ರಗತಿದಾಯಕವಾಗಿದೆ. ಪ್ರೋಬ್ ಅಧ್ಯಯನ ಗುರುತಿಸುವಂತೆ ‘ಪೋಷಕರು ಸಾಮಾನ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧಿಸುವುದಿಲ್ಲ. ಆದರೆ ಅವರಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡುವುದಕ್ಕೆ ಒಲವಿಲ್ಲ. ಇಂತಹ ಸ್ಥಿತಿ ಇರುವಲ್ಲಿ ಶಾಲಾ ಬಿಸಿಯೂಟವು ಪೋಷಕರ ಶಾಲಾ ವೆಚ್ಚವನ್ನು ಕಡಿಮೆಗೊಳಿಸುವ ಮೂಲಕ ಲಿಂಗ ಸಮಾನತೆಯಲ್ಲಿ ಬಹಳ ದೊಡ್ಡ ವ್ಯತ್ಯಾಸವನ್ನು ಹುಟ್ಟಿಹಾಕಿದೆ’ (ಪ್ರೋಬ್, ೧೯೯೯).

ಕಲಿಕೆಯಲ್ಲಿ ಲಿಂಗ ಸಮಾನತೆಯಪರಿಸರ

ಕಲಿಕೆಯಲ್ಲಿ ಲಿಂಗ ಸಮಾನತೆಯಪರಿಸರ

ಕೋಷ್ಟಕ ೬.೪ – ಪ್ರಾಥಮಿಕ ಶಿಕ್ಷಣದ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳ ಬಗ್ಗೆ ವಿವಿಧ ಜಾತಿ, ವರ್ಗಗಳ ಜನರ ಅಭಿಪ್ರಾಯ

 

ವಿವರ

ಉತ್ತಮ

ಸಾಧಾರಣ

ಸರಿಯಾಗುಇಲ್ಲ

ಒಟ್ಟು

ಎಸ್.ಸಿ

ಎಸ್.ಟಿ.

ಇತರ

ಎಸ್.ಸಿ

ಎಸ್.ಟಿ.

ಇತರ

ಎಸ್.ಸಿ

ಎಸ್.ಟಿ.

ಇತರ

ಎಸ್.ಸಿ

ಎಸ್.ಟಿ.

ಇತರ

ಶಾಲಾ ಬಿಸಿಯೂಟ

೮೯

೩೮

೨೪೧

೧೭

೩೦

೯೮

೫೫

೨೭೧

ಉಚಿತ ಪುಸ್ತಕ

೮೬

೩೪

೨೦೬

೨೧

೪೮

೧೭

೯೮

೫೫

೨೭೧

ಉಚಿತ ಸಮವಸ್ತ್ರ

೮೧

೨೮

೧೯೧

೧೭

೨೩

೬೧

೧೯

೯೮

೫೫

೨೭೧

ಪ್ರೋತ್ಸಾಹ ಧನ

೬೮

೨೬

೧೭೪

೧೫

೧೫

೪೮

೧೫

೧೪

೪೯

೯೮

೫೫

೨೭೧

ಪ್ರಾಥಮಿಕ ಶಿಕ್ಷಣದ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳ ಬಗ್ಗೆ ಜನರ ಒಟ್ಟು ಅಭಿಪ್ರಾಯ (ಶೇಕಡಾವಾರು)

ವಿವರ

ಉತ್ತಮ

ಸಾಧಾರಣ

ಸರಿಯಾಗುಇಲ್ಲ

ಒಟ್ಟು

ಶಾಲಾ ಬಿಸಿಯೂಟ

೩೬೮
(%೮೬.೭೮)

೫೧
(%೧೨.೦೨)

೦೫
(%೧.೭೫)

೪೨೪
(%೧೦೦)

ಉಚಿತ ಪುಸ್ತಕ

೩೨೬
(%೭೬.೮೮)

೭೬
(%೧೭.೯೨)

೨೨
(%೫.೧೮)

೪೨೪
(%೧೦೦)

ಉಚಿತ ಸಮವಸ್ತ್ರ

೩೦೦
(%೭೦.೭೫)

೧೦೧
(%೨೩.೮೨)

೨೩
(%೫.೪೨)

೪೨೪
(%೧೦೦)

ಪ್ರೋತ್ಸಾಹ ಧನ

೨೬೮
(%೬೩.೨೦)

೭೮
(%೧೮.೩೯)

೭೮
(%೧೮.೩೯)

೪೨೪
(%೧೦೦)

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಗ್ರಾಮೀಣ ಪ್ರದೇಶಗಳಲ್ಲಿ ಬಡಕುಟುಂಬಗಳ ಮಹಿಳೆಯರಿಗೆ ಉದ್ಯೋಗ ಅವಕಾಶವನ್ನು ಒದಗಿಸುವ ಮೂಲಕ ಶಾಲಾ ಬಿಸಿಯೂಟವು ಮತ್ತೊಂದು ರೀತಿಯಲ್ಲಿ ಲಿಂಗ ಸಮಾನತೆಯನ್ನು ಹುಟ್ಟುಹಾಕುವಲ್ಲಿ ಸಹಕಾರಿಯಾಗಿದೆ. ಸಿ.ಇ.ಎಸ್. ಅಧ್ಯಯನ ತಂಡವು ಸಮೀಕ್ಷೆ ನಡೆಸಿದ ಶೇಕಡ ೬೮ರಷ್ಟು ಶಾಲೆಗಳಲ್ಲಿ ಅಡುಗೆಯವರು ಮಹಿಳೆಯರು. ಇವರು ಬಹುಮಟ್ಟಿಗೆ ಸೌಲಭ್ಯವಂಚಿತ ಹಿನ್ನೆಲೆಯಿಂದ ಬಂದವರು. ಇದು ಅಚ್ಚರಿಯ ವಿಷಯವಲ್ಲ. ಕೆಲವು ಶಾಲೆಗಳಲ್ಲಿ ಕೆಲಸ ಹೆಚ್ಚಾಗಿದ್ದು, ಸಂಬಳ ಬಹಳ ಕಡಿಮೆ ಇದೆ. ಜೊತೆಗೆ ಬಿಸಿಯೂಟ ಕಾರ್ಯಕ್ರಮದ ಮಾರ್ಗಸೂಚಿಯ ಪ್ರಕಾರ ರಾಜ್ಯಗಳು ಅಡಿಗೆಯವರನ್ನು ನೇಮಕ ಮಾಡಿಕೊಳ್ಳುವಾಗ ಅವಕಾಶ ವಂಚಿತ ಸಮುದಾಯದಿಂದ ಬಂದವರಿಗೆ ಆದ್ಯತೆ ನೀಡಬೇಕೆಂದು ಕೇಂದ್ರ ಸರಕಾರ ಸೂಚಿಸಿದೆ. ಕರ್ನಾಟಕದಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಯನ್ನು ಈಗಾಗಲೇ ನೀಡಲಾಗಿದೆ (ಕರ್ನಾಟಕ ಸರ್ಕಾರ, ೨೦೦೨). ಸಿ.ಇ.ಎಸ್. ಅಧ್ಯಯನ ನಡೆಸಿದ ಶಾಲೆಗಳಲ್ಲಿ ಅಡಿಗೆ ಮಾಡುವವರು ಎಲ್ಲರೂ ಮಹಿಳೆಯರು. ಇದರಲ್ಲಿ ಶೇಕಡ ೫೦ ರಷ್ಟು ದಲಿತ ಮಹಿಳೆಯರು, ಶೇಕಡ ೨೫ರಷ್ಟು ವಿಧವೆಯರಾಗಿರುವ ಮಹಿಳೆಯರು ಇದ್ದಾರೆ (ಜೀನ್ ಡ್ರೀಜ್ ಮತ್ತು ಗೋಯಲ್, ೨೦೦೩).

ನಾವು ಅಧ್ಯಯನ ನಡೆಸಿದ ೨೦ ಶಾಲೆಗಳಲ್ಲಿ ಒಟ್ಟು ೫೧ ಜನ ಅಡಿಗೆ ಕೆಲಸದವರು ಇದ್ದಾರೆ. ಇವರುಗಳಲ್ಲಿ ಎಲ್ಲರೂ ಮಹಿಳೆಯರು. ಇದರಲ್ಲಿ ೧೫ ಜನರು ಕುರುಬ ಜನಸಮುದಾಯಕ್ಕೆ, ೧೦ ಜನ ಲಿಂಗಾಯತ ಜನಸಮುದಾಯದ ವಿವಿಧ ಒಳಪಂಡಗಳಿಗೆ (ಪಾಕನಕ ರೆಡ್ಡಿ, ಪಂಚಮಸಾಲಿ, ಬಣಜಿಗ, ಜಂಗಮ ಇತ್ಯಾದಿ) ಸೇರಿದ್ದಾರೆ. ೧೨ ಜನ ಪರಿಶಿಷ್ಟ ಪಂಗಡದ ವಿವಿಧ ಜನಸಮುದಾಯಕ್ಕೆ (ವಾಲ್ಮೀಕಿ, ನಾಯಕ, ಬೇಡ, ಓಲೆಕಾರ, ಇತ್ಯಾದಿ) ಸೇರಿದವರಾಗಿದ್ದಾರೆ. ೬ ಜನ ಪರಿಶಿಷ್ಟಜಾತಿ ಜನಸಮುದಾಯಕ್ಕೆ (ಮಾದರ್, ಚಲವಾದಿ, ಬೇಗಾರ್, ಇತ್ಯಾದಿ) ಸೇರಿದವರು. ಉಳಿದ ೮ ಜನರಲ್ಲಿ ಇಬ್ಬರು ಮುಸ್ಲಿಂ ಜನಸಮುದ್ಯಾಕ್ಕೆ, ಮೂವರು ಉಪ್ಪಾರ ಜನಸಮುದಾಯಕ್ಕೆ, ಇಬ್ಬರು ಬಾರ್‌ಕೇರ್ ಜನಸಮುದಾಯಕ್ಕೆ ಮತ್ತು ಒಬ್ಬರು ಗಾಣಿಗ ಜನಸಮುದಾಯಕ್ಕೇ ಸೇರಿದವರಾಗಿದ್ದಾರೆ. ಇವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಇಬ್ಬರು ಮುಖ್ಯ ಅಡುಗೆ ಕೆಲಸದವರು, ಕೃಷಿಭೂಮಿ ಹೊಂದಿದ್ದಾರೆ. ಒಂದು ಕುಟುಂಬವು ೨೫ ಎಕರೆ ಕೃಷಿ ಭೂಮಿಯನ್ನು, ಮತ್ತೊಂದು ಕುಟುಂಬವು ೧೨ ಎಕರೆ ಕೃಷಿ ಭೂಮಿಯನ್ನು ಹೊಂದಿವೆ. ಇದೇ ಜನಸಮುದಾಯಕ್ಕೆ ಸೇರಿದ ೪ ಜನ ಮಹಿಳೆಯ ಕುಟುಂಬಗಳು ೫ ಎಕರೆಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿವೆ. ಕುರುಬ ಜನಸಮುದಾಯಕ್ಕೆ ಸೇರಿದ ೬ ಕುಟುಂಬಗಳು ೫ ಎಕರೆಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿವೆ. ಉಪ್ಪಾರ ಜನಸಮುದಾಯಕ್ಕೆ ಸೇರಿದ ಎಲ್ಲಾ ೩ ಕುಟುಂಬಗಳು ೪ ರಿಂದ ೫ ಎಕರೆಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿವೆ. ಕುರುಬ ಜನಸಮುದಾಯಕ್ಕೆ ಸೇರಿದ ೬ ಕುಟುಂಬಗಳು ೫ ಎಕರೆಗಿಂತಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿವೆ. ಉಪ್ಪಾರ ಜನಸಮುದಾಯಕ್ಕೆ ಸೇರಿದ ಎಲ್ಲಾ ೩ ಕುಟುಂಬಗಳು ೪ ರಿಂದ ೫ ಎಕರೆ ಕೃಷಿ ಭೂಮಿಯನ್ನು ಹೊಂದಿವೆ. ಬಾರ್‌ಕೇರ್ ಜನಸಮುದಾಯಕ್ಕೆ ಸೇರಿದ ಎರಡು ಕುಟುಂಬದಲ್ಲಿ ಒಂದು ಕುಟುಂಬವು ೬ ಎಕರೆ ಕೃಷಿ ಭೂಮಿಯನ್ನು ಹೊಂದಿದೆ. ಈ ಕುಟುಂಬಗಳನ್ನು ಹೊರತು ಪಡಿಸಿದರೆ, ಬೇರೆ ಎಲ್ಲ ಅಡಿಗೆಯವರ ಕುಟುಂಬಗಳು ೨ ಎಕರೆ ಮತ್ತು ಅದಕ್ಕಿಂತಲೂ ಕಡಿಮೆ ಕೃಷಿ ಭೂಮಿಯನ್ನು ಹೊಂದಿವೆ. ವಿಶೇಷವೆಂದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ೧೨ ಕುಟುಂಬಗಳಲ್ಲಿ ೪ ಕುಟುಂಬಗಳಿಗೆ ಮಾತ್ರ ಕೃಷಿ ಭೂಮಿ ಇದೆ. ಉಳಿದ ೮ ಕುಟುಂಬಗಳಿಗೆ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಎಲ್ಲಾ ೫ ಅಡಿಗೆಯವರ ಕುಟುಂಬಗಳು ಯಾವುದೇ ರೀತಿ ಕೃಷಿ ಭೂಮಿ ಹೊಂದಿಲ್ಲ. ಇಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಒಂದು ಮೇಲುಜಾತಿಗೆ ಸೇರಿದ ಅಡಿಗೆಯವರ ಕುಟುಂಬಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿ ಹೊಂದಿರುವುದು. ಎರಡು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ, ಹಾಗೂ ಇತರ ಕೆಲವು ಹಿಂದುಳಿದ ಜಾತಿಗಳಿಗೆ ಸೇರಿದ ಅಡಿಗೆಯವರ ಕುಟುಂಬಗಳು ಅತ್ಯಂತ ಕಡಿಮೆ ಪ್ರಮಾಣದ ಕೃಷಿ ಭೂಮಿ ಹೊಂದಿರುವುದು. ಎರಡನೆಯ ಅಂಶಕ್ಕೆ ಸೇರಿದ ಕುಟುಂಬಗಳು ಹಾಗೂ ಭೂರಹಿತ ಕುಟುಂಬಗಳು ಕೃಷಿ ಕೂಲಿ ಹಾಗೂ ಇತರ ಕೂಲಿಯನ್ನು ಜೀವನಕ್ಕಾಗಿ ಆಶ್ರಯಿಸಿವೆ. ಇಂತಹ ಕುಟುಂಬಗಳ ಸದಸ್ಯರು ಹೆಚ್ಚಿನ ಮಳೆಯಾಗದೇ ಕೂಲಿ ಅಥವಾ ಕೃಷಿ ಕೂಲಿ ಸ್ಥಳೀಯವಾಗಿ ದೊರಕದೆ ಹೋದರೆ, ರತ್ನಗಿರಿ, ಗೋವಾ, ಕಾರವಾರ, ಮಂಗಳೂರು, ಮುಂಬೈ, ಮಡಿಕೇರಿ, ಹಾಸನ ಮುಂತಾದ ಸ್ಥಳಗಳಿಗೆ ದುಡಿಯಲು ಹೋಗುತ್ತಾರೆ. ಅದರಲ್ಲೂಯು ೨೦೦೧, ೨೦೦೨ ಮತ್ತು ೨೦೦೩ರ ನಿರಂತರ ಬರ ಈ ಭಾಗದ ಭೂರಹಿತ ಕುಟುಂಬಗಳನ್ನು ಮತ್ತು ಕೃಷಿ ಕಾರ್ಮಿಕರನ್ನು ಬಸವಳಿಯುವಂತೆ ಮಾಡಿದೆ. ಈ ಮೇಲಿನ ವಿವರಣೆಯಿಂದ ಸ್ಪಷ್ಟವಾಗುವ ಅಂಶವೆಂದರೆ, ನಾವು ಅಧ್ಯಯನ ನಡೆಸಿದ ಗ್ರಾಮಗಳ ಗ್ರಾಮಸ್ಥರಿಗೆ ದುಡಿಯಲು ಇರುವುದು ಪ್ರಮುಖವಾಗಿ ಎರಡೇ ಅವಕಾಶಗಳು. ಒಂದು ಕೃಷಿ ಮತ್ತು ಕೃಷಿ ಕೂಲಿಗಳಗಾಗಿ ದುಡಿಯುವುದು. ಮತ್ತೊಂದು ಇತರ ಸಣ್ಣ ಪುಟ್ಟ ಕೂಲಿ ಮಾಡುವುದು. ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ದುಡಿಯುವ ಅವಕಾಶಗಳು ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ನಮಗೆ ನೋಡಲು ಸಿಗುವುದಿಲ್ಲ.

ನಾವು ಅಧ್ಯಯನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಅಡುಗೆ ಕೆಲಸಗಳಿಗೆ ನೇಮಕವಾಗಿರುವು ಒಟ್ಟು ೫೧ ಮಹಿಳೆಯರಲ್ಲಿ (೧೭) ಶೇಕಡ ೩೩.೩ ರಷ್ಟು ಮಹಿಳೆಯರು ವಿಧವೆಯರು. ಇವರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆರು ಮಹಿಳೆಯರು, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಸಂಖ್ಯೆ ಮೂರು ಮತ್ತು ಇತರ ಜಾತಿಗಳಿಗೆ ಸೇರಿದ ಮಹಿಳೆಯರ ಸಂಖ್ಯೆ ಎಂಟು. ಇದಲ್ಲದೆ ವಿಚ್ಛೇದನ ಪಡೆಯದೆ ಗಂಡಂದಿರಿಂದ ದೂರವಾಗಿರುವ ಮಹಿಳೆಯರ ಸಂಖ್ಯೆ ಒಟ್ಟು ಎಂಟು. ಇವರಲ್ಲಿ ವಿವಿದ ಜಾತಿಗೆ ಸೇರಿದ ಮಹಿಳೆಯರ ಸಂಖ್ಯೆ ನಾಲ್ಕು. ಈ ಎಲ್ಲಾ ವಿವರಣೆಯಿಂದ ನಮಗೆ ಅಡಿಗೆ ಕೆಲಸದವರ ವೈವಾಹಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ತಿಳಿಯುತ್ತದೆ.

ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಡಿಗೆಯವರ ಆರ್ಥಿಕ ಸ್ಥಿತಿಯನ್ನು ಕುರಿತು ಅವರುಗಳ ಜೊತೆ ಚರ್ಚೆ ನಡೆಸಿದೆವು. ಆ ಸಂದರ್ಭದಲ್ಲಿ ನೀವು ಬಿಸಿಯೂಟದ ಕೆಲಸಕ್ಕೆ ಸೇರಿದನಂತರ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಿಯೇ ಎಂಬ ಪ್ರಶ್ನೆಗೆ ಸುಧಾರಣೆಯಾಗಿದೆ ಎಂದು ಶೇಕಡ ೮೪.೩೧ರಷ್ಟು ಮಹಿಳೆಯರು (ಸಂಖ್ಯೆ ೪೩) ಹೇಳಿದ್ದಾರೆ. ಯಾವುದೇ ಸುಧಾರಣೆಯಾಗಿಲ್ಲ ಎಂದು ಶೇಕಡ ೧೫.೬೮ರಷ್ಟು ಮಹಿಳೆಯರು (ಸಂಖ್ಯೆ ಕೇವಲ ೮) ಹೇಳಿದ್ದಾರೆ. ಹೀಗೆ ಹೇಳಿದ ಎಲ್ಲಾ ಮಹಿಳೆಯರು ಮೇಲುಜಾತಿಗೆ (ಲಿಂಗಾಯತ) ಸೇರಿದವರಾಗಿದ್ದಾರೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದ ಬಹುತೇಕ ಮಹಿಳೆಯ ತಳಜಾತಿಗೆ ಮತ್ತು ತಳವರ್ಗಕ್ಕೆ ಸೇರಿದವರು. ಆ ಮಹಿಳೆಯರ ಮಾತುಗಳಲ್ಲೇ ಹೇಳುವುದಾದರೆ, ಈ ಕೆಲಸ ನಮಗೆ ದೊರೆತ ನಂತರ ತಿಂಗಳಿಗೆ ಅಷ್ಟು ಇಷ್ಟು ಸಂಬಳ ಅಂತ ಬರುತ್ತಾಯಿದೆ. ಶಾಲೆ ನಡೆಯುವ ದಿನಗಳಲ್ಲಿ ನಾವು ಶಾಲೆಯಲ್ಲಿಯೇ ಊಟ ಮಾಡುತ್ತೇವೆ. ಈ ಸಂಬಳ ಬರುವುದಕ್ಕೆ ಮೊದಲು ಚಿಕ್ಕಪುಟ್ಟ ಖರ್ಚುಗಳಿಗೆ ನಮ್ಮ ಗಂಡಂದಿರ ಮುಂದೆ ಕೈ ಚಾಚಬೇಕಾಗಿತ್ತು. ಹಾಗೆ ನೋಡಿದರೆ ನಮ್ಮ ಪರಿಸ್ಥಿತಿ ಈಗ (ಅಡಿಗೆ ಕೆಲಸ ದೊರೆತ ನಂತರ) ನಿಜವಾಗಲೂ ಬದಲಾಗಿದೆ ಎಂದು ಹೇಳುತ್ತಾರೆ. ಆದರೆ ಇವರೆಲ್ಲರಲ್ಲಿ ಒಂದು ಕೊರಗಿದೆ. ಅದೇನೆಂದರೆ ಸಂಬಳ ಸಾಕಾಗುವುದಿಲ್ಲ. ಸಂಬಳವನ್ನು ಸ್ವಲ್ಪ ಹೆಚ್ಚಿಸಬೇಕು ಎಂಬುದು. ಇದೇನೇ ಇದ್ದರೂ, ಈ ಕಾಯ೪ಕ್ರಮ ಜಾರಿಗೆ ಬಂದ ನಂತರ, ಕುಟುಂಬದಲ್ಲಿ ಯಾವುದೇ ಆದಾಯದ ಮೂಲಗಳಿಲ್ಲದ ಮತ್ತು ಕುಟುಂಬದಿಂದ ಯಾವುದೇ ಬೆಂಬಲವಿಲ್ಲದ ಅಸಹಾಯಕ ಮಹಿಳೆಯರಿಗೆ ಈ ಕೆಲಸ ಒಂದು ರೀತಿಯಲ್ಲಿ ಆದಾಯದ ಮೂಲವಾಗಿದ್ದರೆ, ಮತ್ತೊಂದು ರೀತಿಯಲ್ಲಿ ಸಾಮಾಜಿಕ ರಕ್ಷಣೆಯಂತಿದೆ. ನಿರ್ದಿಷ್ಟವಾಗಿ ಗಂಡಂದಿರಿಂದ ದೂರ ಇರುವ ಮತ್ತು ವಿಧವೆಯರಾದ ಮಹಿಳೆಯರಿಗೆ ಬಿಸಿಯೂಟದ ಕೆಲಸಬೆಂಬಲವಾಗಿದೆ. ಇದು ಎಷ್ಟು ಜನರಿಗೆ ಎಂಬುದು ಬೇರೆ ಪ್ರಶ್ನೆ. ಆದರೆ ಪ್ರತಿ ಗ್ರಾಮದಲ್ಲಿ ಬೆರಳೆಣಿಕೆಯ ಮಹಿಳೆಯರಿಗೆ ಸಹಕಾರಿಯಾಗಿರುವುದು ವಾಸ್ತವ. ನಿರ್ದಿಷ್ಟವಾಗಿ ಬಿಸಿಯೂಟ ಅಡುಗೆಯವರ ಆರ್ಥಿಕ ಸ್ಥಿತಿ, ಕುಟುಂಬಗಳ ಒಳಗೆ ಮತ್ತು ಹೊರಗೆ ಅವರ ಸ್ಥಾನ ಸುಧಾರಿಸಿದೆ ಎಂಬುದನ್ನು ಹೇಳಲಾಗದಿದ್ದರೂ ಇದು ಲಿಂಗಸಮಾನತೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಸ್ಪಷ್ಟವಾಗಿ ಹೇಳಬಹುದು.

ಶಾಲಾ ಬಿಸಿಯೂಟದಿಂದ ಉಂಟಾಗಿರುವ ಮತ್ತೊಂದು ಪೂರಕ ಪರಿಣಾಮವೆಂದರೆ, ಕೃಷಿ ಕೂಲಿಗಳಾಗಿ ಅಥವಾ ಕೂಲಿಗಳಾಗಿ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರನ್ನ ಸ್ವಲ್ಪ ಮಟ್ಟಿಗೆ ಬಂಧ ಮುಕ್ತಿಗೊಲಿಸಿದೆ. ಈ ವಿಷಯ ಯಾವುದೇ ಆರ್ಥಿಕ ಸ್ಥಿತಿ ಅಥವಾ ಜನ ಸಮುದಾಯಕ್ಕೆ ಸೇರಿದ್ದಲ್ಲ. ಏಕೆಂದರೆ ನಾವು ಅಧ್ಯಯನ ನಡೆಸಿದ ಎಲ್ಲಾ ಹಳ್ಳಿಗಳಲ್ಲಿ ಪ್ರಮುಖ ವೃತ್ತಿ ಕೃಷಿ ಮತ್ತು ಕೃಷಿ ಕೂಲಿ. ದುಡಿಮೆಯ ಉದ್ದೇಶದಿಂದ ಬಹುತೇಕ ಮಹಿಳೆಯರು ಪ್ರತಿದಿನ ಹೊರಗೆ ಹೋಗುತ್ತಾರೆ. ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರು ದುಡಿಯಲು ಮನೆಯಿಂದ ಹೊರಗೆ ಹೋಗುತ್ತಾರೆ. ಮಹಿಳೆಯರು ಮಧ್ಯಾಹ್ನ ಅಥವಾ ಸಂಜೆ ಕೂಲಿಯಿಂದ ಅಥವಾ ದುಡಿಮೆಯಿಂದ ಬೇಗ ಬಂದು ಶಾಲೆಯಿಂದ ಬರುವ ಮಕ್ಕಳಿಗೆ ಆಹಾರ ತಯಾರಿಸುವ ಕೆಲಸ ಮಾಡಬೇಕಾಗಿತ್ತು. ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊರೆಯಲು ಪ್ರಾರಂಭಿಸಿದ ನಂತರ, ತಾಯಂದಿರು ಮಕ್ಕಳಿಗೆ ಮಧ್ಯಾಹ್ನ ಮನೆಯಲ್ಲಿ ಆಹಾರವನ್ನು ನೀಡಿ ಪೋಷಿಸಬೇಕಾದ ಕೆಲಸದಿಂದ ಸ್ವಲ್ಪ ಮುಕ್ತಿಯನ್ನು ಹೊಂದಿದ್ದಾರೆ. ಈ ಗುಣಲಕ್ಷಣವು ವಿಶೇಷವಾಗಿ ವಿಧವೆಯರಾಗಿ ಮನೆಯಲ್ಲಿ ಯಾವುದೇ ಬೆಂಬಲವಿಲ್ಲದೆ, ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚು ಸಹಕಾರಿಯಾಗಿದೆ. ಯರೇಹಂಚಿನಾಳ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಫಕೀರವ್ವ ಚಲವಾದಿ ಎಂಬ ಮಹಿಳೆಯ ಪ್ರಕಾರ ‘ನಮ್ಮ ಮನೆಯಲ್ಲಿ ನಾನು ಮತ್ತು ನಮ್ಮ ಯಜಮಾನರು ಕೂಲಿ ಬೇರೆಯವರ ಹೊಲಕ್ಕೆ ದುಡಿಯಲು ಹೊರಗೆ ಹೋಗುತೇವೆ. ಹೀಗಾಗಿ ಮಧ್ಯಾಹ್ನ ಮನೆಗೆ ಬಂದು ಶಾಲೆಗ ಹೋಗುವ ಮಕ್ಕಲನ್ನು ನೋಡಿಕೊಳ್ಳಲು ಸಮಯವಿಲ್ಲ, ಮಕ್ಕಲನ್ನು ನೋಡಿಕೊಳ್ಳಲು ಯಾರಾದರೂ ಒಬ್ಬರು ಬಂದು ಹೋಗಬೇಕಾಗಿತ್ತು ಅಥವಾ ದುಡಿಮೆಯಿಂದ ಸಂಜೆ ಬೇಗನೆ ಬರಬೇಕಾಗಿತ್ತು. ಆದರೆ ಬಿಸಿಯೂಟ ಶಾಲೆಯಲ್ಲಿ ಪ್ರಾರಂಭವಾದ ನಂತರ ಮಕ್ಕಲು ಶಾಲೆಯಿಂದ ಹಸಿದು ಬರುತ್ತಾರೆ ಎಂಬು ಆತಂಕ ಇಲ್ಲವಾಗಿದೆ ಮತ್ತು ಮಧ್ಯದಲ್ಲಿ ಬಂದು ಮಕ್ಕಳಿಗೆ ಅಡಿಗೆಯನ್ನು ಬೇಗನೆ ಮಾಡುವ ಆತಂಕವಿಲ್ಲ’ ಎಂದು ವಿವರಿಸುತ್ತಾರೆ. ಹೀಗೆ ಬಿಸಿಯೂಟದಿಂದ ಅನೇಕ ಕೊಡುಗೆಗಳೂ ಇದ್ದರೂ ನಮ್ಮ ಹಿಡಿತಕ್ಕೆ ಸಿಗದೆ ಅನೇಕ ಬಗೆಯ ಅಸಮಾನತೆಯ ಆಚರಣೆಗಳು ಇವೆ. ಈ ಕುರಿತು ಹೆಚ್ಚು ಅಧ್ಯಯನಗಳ ಮತ್ತು ಸಾರ್ವಜನಿಕ ಚರ್ಚೆಯ ಅವಶ್ಯಕತೆ ಇದೆ.

೬.೯. ಬಿಸಿಯೂಟಕ್ಕೆ ಇರುವ ಕೆಲವು ಟೀಕೆಗಳು

ಶಾಲಾ ಬಿಸಿಯೂಟವು ಕೆಲವು ದೋಷಗಳಿಂದಾಗಿ ನಿಂದನೆಗೆ ಒಳಗಾಗಿದೆ. ಇದರ ಬಗ್ಗೆ ಇರುವ ಕೆಲವು ನಿಂದನೆಗಳನ್ನು ಸರಳವಾಗಿ ತಳ್ಳಿಬಾಕಬಹುದು. ಅವುಗಳಲ್ಲಿ ಪ್ರಮುಖವಾಗಿ ಮೇಲುಜಾತಿಗೆ ಸೇರಿದ ಕೆಲವು ಪೋಷಕರು ಬಿಸಿಯೂಟ ಕಾರ್ಯಕ್ರಮದಿಂದ ಅನೂಚಾನವಾಗಿ ಇರುವ ಸಾಂಪ್ರದಾಯಿಕ ಏಣಿಶ್ರೇಣಿಗೆ ಅಪಾಯವಿದೆ ಎಂದು ಭಾವಿಸಿ ಉಪಾಯದಿಂದ ವಿರೋಧಿಸುತ್ತಿದ್ದಾರೆ. ಅದೇನೆ ಇದ್ದರೂ ಕೆಲವು ಗಂಭೀರವಾದ ಆರೋಪಗಳು ಈ ಕಾರ್ಯಕ್ರಮದ ಮೇಲೆ ಇದೆ.

ಬಿಸಿಯೂಟ ಕಾರ್ಯಕ್ರಮದ ಮೇಲೆ ಸಾಮಾನ್ಯವಾಗಿರುವ ಆರೋಪವೆಂದರೆ, ಈ ಊಟವು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿ. ಏಕೆಂದರೆ ಆಹಾರವನ್ನು ಆರೋಗ್ಯಕರ ಪರಿಸರದಲ್ಲಿ ತಯಾರಿಸದೆ ಇರುವುದು. ಈ ವಾದವನ್ನು ಅಷ್ಟು ಸರಳವಾಗಿ ತಳ್ಳಿಹಾಕಲಾಗುವುದಿಲ್ಲ. ಈ ಸಮಸ್ಯೆಗೆ ಇರುವ ಅತ್ಯಂತ ಸೂಕ್ಷ್ಮವಾದ ಅಂಶಗಳು ನಮ್ಮ ಗಮನಕ್ಕೆ ಬಂದಿವೆ. ಬಿಸಿಯೂಟ ಸೇವಿಸಿದ ಮಕ್ಕಳು ಆಗಾಗ್ಗೆ ಆರೋಗ್ಯದ ಅಸಮತೋಲನಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಸಿ.ಇ.ಎಸ್. ಅಧ್ಯಯನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಶೇಕಡ ೫ ರಿಂದ ೧೦ ರಷ್ಟು ಪೋಷಕರು ಹೇಳುವಂತೆ ಒಂದು ಶೈಕ್ಷಣಿಕ ವರ್ಷಧಲ್ಲಿ ಕನಿಷ್ಠ ಒಂದು ಬಾರಿಯಾದರೂ ಮಕ್ಕಳಿಗೆ ಬಿಸಿಯೂಟ ಸೇವಿಸಿ ಅಸ್ಪಸ್ಥತೆ ಉಂಟಾಗಿದೆ. ಇದು ಕೆಲವು ಸಂದರ್ಭಗಳಲ್ಲಿ ನೀಡುವ ಆಹಾರವನ್ನು ಸಹ ಅವಲಂಬಿಸಿದೆ. ಉದಾಹರಣೆಗೆ ರಾಜಸ್ಥಾನದಲ್ಲಿ ಕೆಲವು ಬಗೆಯ ಕಾಳುಗಳನ್ನು ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಯಲ್ಲಿ ನೀಡಲಾಗುತ್ತಿದೆ. ಮೂಲ ಸೌಲಭ್ಯಗಳ ತೊಡಕುಗಳಿಂದ ಸರಿಯಾದ ಪ್ರಮಾಣದಲ್ಲಿ ಕಾಳುಗಳನ್ನು ಬೇಯಿಸದೆ ಇರುವುದು ಮಕ್ಕಳ ಅಸ್ವಸ್ಥತೆಗೆ ಕಾರಣವಾಗಬಹುದು. ನಾವು ಅಧ್ಯಯನ ನಡೆಸಿದ ಗ್ರಾಮಗಳಲ್ಲಿ ಶಾಲೆ ಬಿಸಿಯೂಟ ಸೇವಿಸಿ ಮಕ್ಕಳಲ್ಲಿ ಅಸ್ವಸ್ಥತೆ ಉಂಟಾಗಿರುವ ಪ್ರಕಾರಗಳು ಶಾಲಾ ದಾಖಲೆಯಲ್ಲಾಗಲಿ ಮತ್ತು ಗ್ರಾಮಸ್ಥರಿಂದಾಗಲಿ ತಿಳಿಯಲಾಗಲಿಲ್ಲ. ಆದರೆ ಬೇರೆ ಶಾಲೆ ಅಥವಾ ಗ್ರಾಮಗಳಲ್ಲಿ ಇಂತಹ ತೊಂದರೆಗಳು ಕಂಡುಬರಲು ಬಿಸಿಯೂಟ ಯೋಜನೆಗೆ ನೀಡುವ ಆಹಾರ ಧಾನ್ಯಗಳ ಗುಣಮಟ್ಟ ಕಳಪೆಯಾಗಿರುವುದು ಪ್ರಮುಖ ಕಾರಣ ಎಂದು ಶಿಕ್ಷಕರು ಮತ್ತು ಕೆಲವು ಗ್ರಾಮಸ್ತರು ಹೇಳುತ್ತಾರೆ.

ಬಿಸಿಯೂಟದ ಗುಣಾತ್ಮಕ ಅಂಶವೆಂದರೆ, ಶೇಕಡ ೯೫ರಷ್ಟು ಮಕ್ಕಳಿಗೆ ಇದುವರೆಗೆ ಯಾವುದೇ ತೊಂದರೆ ಉಂಟಾಗದಿರುವುದು ಅಸ್ವಸ್ಥತೆ ಅನುಭವಿಸಿದ ಶೇಕಡ ೫ ರಷ್ಟು ಮಕ್ಕಳ ಸ್ಥಿತಿ ತುಂಬಾ ಗಂಭೀರವಾಗಿರಲಿಲ್ಲ ಎಂದು ಸಿ.ಇ.ಎಸ್. ಅಧ್ಯಯನದಿಂದ ತಿಳಿದು ಬಂದಿದೆ. ಸ್ವಲ್ಪ ಹೆಚ್ಚುಕಡಿಮೆ ಇದೇ ಬಗೆಯ ಪರಿಸ್ಥಿತಿಯನ್ನು ಕರ್ನಾಟಕದಲ್ಲಿಯೂ ನಾವು ಗುರುತಿಸಬಹುದು. ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥವಾದ ಘಟನೆಗಳು ಬಹಳ ಮಟ್ಟಿಗೆ ಕಂಡುಬಂದಿರುವುದು ಬಿಸಿಯೂಟ ಕಾರ್ಯಕ್ರಮದ ಪ್ರಾರಂಭದ ಹಂತದಲ್ಲಿಯೇ ಹೆಚ್ಚು. ನಂತರದಲ್ಲಿ ಆಹಾರದ ತಯಾರಿಕೆ ಮತ್ತು ವಿತರಣೆಗೆ ಕೆಲವು ಗುಣಾತ್ಮಕ ರಕ್ಷಣೋಪಾಯಗಳನ್ನು ಬಳಕೆ ಮಾಡಲು ಆದ್ಯತೆ ನೀಡಲು ಪ್ರಾರಂಭಿಸಿದ ನಂತರ ಮಕ್ಕಳ ಅಸ್ವಸ್ಥತೆ ಘಟನೆಗಳಿಗೆ ಮಕ್ಕಳಲ್ಲಿ ಉಂಟಾಗುವ ಅಜೀರ್ಣತೆ ಪ್ರಮುಖವಾಗಿದೆ. ಇದಕ್ಕೆ ಬಹಳ ಹೆಚ್ಚಿನ ಪ್ರಮಾಣದ ಆಹಾರವನ್ನು ಮಕ್ಕಳಿಗೆ ನೀಡುವುದಕ್ಕೆ ಬದಲಿಯಾಗಿ ಉತ್ತಮ ಗುಣಮಟ್ಟದ, ಬಗೆ ಬಗೆಯ ಆಹಾರ ನೀಡುವುದರಿಂದ ಕೆಲವು ಮಕ್ಕಳ ಹಸಿವನ್ನು ಕಡಿಮೆ ಮಾಡಬಹುದು. ಹೀಗಾಗಿ ಶಾಲಾ ಬಿಸಿಯೂಟವನ್ನು ನಿಲ್ಲಿಸುವುದಕ್ಕೆ ಬದಲಿಯಾಗಿ ಈ ಕಾರ್ಯಕ್ರಮದಲ್ಲಿ ಕೆಲವು ಗುಣಾತ್ಮಕ ಅಂಶಗಳನ್ನು ಅಳವಡಿಸುವ ಕಾರ್ಯಕ್ಕೆ ತಕ್ಷಣವೇ ಸಂಬಂಧ ಪಟ್ಟವರು ಕ್ರಮವಹಿಸಬೇಕಾಗಿದೆ.

ಶಾಲಾ ಬಿಸಿಯೂಟದ ವಿರೋಧಕ್ಕೆ ಇರುವ ಮತ್ತೊಂದು ಸಾಮಾನ್ಯವಾದವೆಂದರೆ ಇದು ತರಗತಿಗಳಲ್ಲಿ ಬೋಧನಾ ಪ್ರಕ್ರಿಯೆಗೆ ತೊಡಕನ್ನು ಉಂಟುಮಾಡಿದೆ ಎಂಬುದು. ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ಶಿಕ್ಷಕರು ತಮ್ಮ ಅಮೂಲ್ಯವಾದ ಸಮಯವನ್ನು ಬೋಧನೆಯ ಬದಲಿಗೆ ಅಡಿಗೆ ತಯಾರಿಕೆಯಲ್ಲಿ ವ್ಯಯಿಸುತ್ತಿದ್ದಾರೆ ಎಂಬುದಾಗಿದೆ. ನಾವು ಅಧ್ಯಯನ ನಡೆಸಿದ ಎಲ್ಲಾ ಶಾಲೆಗಳಲ್ಲಿ ಮುಖ್ಯ ಅಡಿಗೆಯವರು ಮತ್ತು ಅಡಿಗೆ ಸಹಾಯಕರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಅಲ್ಲೇದ ಯಾವುದೇ ಶಾಲೆಗಳಲ್ಲಿ ಶಿಕ್ಷಕರು ಮುಖ್ಯ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದ ಘಟನೆ ನಮಗೆ ತಿಳಿದು ಬರಲಿಲ್ಲ. ಆದರೆ ಶಿಕ್ಷಕರು ಅನೇಕ ಸಂದರ್ಭಗಳಲ್ಲಿ ಸಾಕಷ್ಟು ಸಮಯವನ್ನು ಬಿಸಿಯೂಟ ಕಾರ್ಯಕ್ರಮದ ಸಂಘಟನೆಗೆ ಮತ್ತು ಮೇಲುಸ್ತುವಾರಿ ನೋಡಲು ಕಳೆಯುತ್ತಿರುವುದು ಗಮನಕ್ಕೆ ಬಂದಿತು. ಬಿಸಿಯೂಟದ ಸಂಘಟನೆಯು ತರಗತಿಯಲ್ಲಿ ಬೋಧನಾ ಪ್ರಕ್ರಿಯೆಗೆ ತೊಡಕನ್ನು ಉಂಟುಮಾಡಿರುವುದು. ಇದಕ್ಕೆ ಬೇಕಾಗುವ ಮೂಲ ಸೌಲಭ್ಯಗಳ ಕೊರತೆ ಇದ್ದಾಗ ಮಾತ್ರ. ಉದಾಹರಣೆಗೆ ಶಾಲೆಯಲ್ಲಿ ಅಡಿಗೆ ತಯಾರಿಸಲು ಪ್ರತ್ಯೇಕ ಅಡಿಗೆ ಮನೆ ಇಲ್ಲದೆ, ಮಕ್ಕಳು ಕಲಿಕೆಯಲ್ಲಿ ತೊಡಗಿರುವ ಕೊಠಡಿಯ ಪಕ್ಕದಲ್ಲಿ ಅಥವಾ ಅದಕ್ಕೆ ಬಹಳ ಹತ್ತಿರದಲ್ಲಿ ಅಡಿಗೆ ತಯಾರಿಸುವಾಗ ಕಲಿಕೆ ಮತ್ತು ಬೋಧನೆಗೆ ತೊಂದರೆಯಾಗುವುದು ಸಹಜ. ಇದು ಅಚ್ಚರಿ ಪಡಬೇಕಾದ ಸಂಗತಿಯೂ ಅಲ್ಲ. ಇಂತಹ ಶಾಲೆಯಲ್ಲಿ ಶಿಕ್ಷಕರು ಅಡಿಗೆ ತಯಾರಿಸುವ ದೃಶ್ಯಗಳು ಮತ್ತು ಬಿಸಿ ಅಡಿಗೆಯ ವಾಸನೆಯು ಮಕ್ಕಳ ಗಮನವನ್ನು ಬೇರೆ ಕಡೆಗೆ ತಿರುಗಿಸುವುದರಿಂದ ವಾಸ್ತವದಲ್ಲಿ ಬೋಧನೆಗೆ ತೊಂದರೆಯಾಗುತ್ತದೆ. ಇದೇ ರೀತಿಯಲ್ಲಿ ಮುಖ್ಯ ಅಡಿಗೆಯವರಿಗೆ ಸಹಾಯಕರು ಇಲ್ಲದೆ ಇರುವ ಶಾಲೆಗಳಲ್ಲಿ ನೀರು ತರಲು, ತರಕಾರಿಗಳನ್ನು ಕತ್ತರಿಸಲು, ಆಹಾರ ಧಾನ್ಯ ಶುಚಿಗೊಳಿಸಲು ಇತ್ಯಾದಿ ಕೆಲಸಗಳಿಗೆ ಮಕ್ಕಳನ್ನು ಬಳಸುವ ಸಾಧ್ಯತೆ ಇದೆ.

ಇದೇನೇ ಇದ್ದರೂ ಶಾಲಾ ಬಿಸಿಯೂಟವು ಮಧ್ಯಾಹ್ನ ಶಾಲಾ ತರಗತಿಗಳು ಶಾಲೆಯಲ್ಲಿ ಬೆಳಗಿನ ರೂಪ ಪಡೆಯುವ ದೃಷ್ಟಿಯಂದ ನಕಾರಾತ್ಮಕ ಅಂಶಗಳಿಂದಲೂ ಸಕಾರಾತ್ಮಕ ಅಂಶಗಳನ್ನು ಹೆಚ್ಚಾಗಿ ಹೊಂದಿದೆ. ಮಧ್ಯಾಹ್ನ ಊಟದ ಬಿಡುವಿನ ನಂತರ ಶಾಲೆಯು ಹಾಜರಾತಿಯಲ್ಲಿ ಬೆಳಗಿನ ರೂಪವನ್ನು ಪಡೆಯುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಕ್ಕಳು ಮಧ್ಯಾಹ್ನ ಊಟಕ್ಕಾಗಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ, ಅದರಲ್ಲಿಯೂ ಶಾಲೆಯಿಂದ ಸ್ವಲ್ಪ ದೂರದಲ್ಲಿ ಮನೆ ಇರುವ ಹೆಚ್ಚಿನ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಶಾಲೆಗೆ ಮರಳಿ ಬರುತ್ತಿರಲಿಲ್ಲ. ನಾವು ಅಧ್ಯಯನದ ಸಂದರ್ಭದಲ್ಲಿ ಸಂದರ್ಶನ ನಡೆಸಿದ ಎಲ್ಲಾ ಶಿಕ್ಷಕರು ಬಹುಮಟ್ಟಿಗೆ, ಶಾಲಾ ಬಿಸಿಯೂಟ ಜಾರಿಗೆ ಬಂದ ನಂತರ, ಮಧ್ಯಾಹ್ನ ಶಾಲಾ ಹಾಜರಾತಿಯು ಬಹಳ ಮಟ್ಟಿಗೆ ಬೆಳಗಿನ ಹಾಜರಾತಿಗೆ ಸರಿ ಸಮವಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನು ನಾವು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಗಮನಿಸಿದೆವು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಶಾಲಾ ಬಿಸಿಯೂಟ ಕಾರ್ಯಕ್ರಮ ಕೆಲವು ನೂನ್ಯತೆಗಳನ್ನು ಹೊಂದಿದ್ದರೂ ಕೂಡ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಲು ಇದು ಪ್ರಮುಖ ಆಧಾರವಾಗಲಾರದು. ಇದಕ್ಕೆ ಬದಲಿಯಾಗಿ ಸೂಚಿಸಬಹುದಾದ ಅಂಶವೆಂದರೆ, ಈ ಕಾರ್ಯಕ್ರಮಕ್ಕೆ ಬೇಕಾಗುವ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು. ಬಿಸಿಯೂಟ ಕಾರ್ಯಕ್ರಮದ ಆಚರಣೆಗೆ ಬೇಕಾಗುವ ಎಲ್ಲಾ ಮೂಲ ಸೌಲಭ್ಯಗಳು ದೊರೆತ ಪಕ್ಷದಲ್ಲಿ, ತರಗತಿಯ ಒಳಗೆ ಬೋಧನಾ ಚಟುವಟಿಕೆಗಳು ಸುಲಭವಾಗಿ, ಆಹಾರ ತಯಾರಿಕಾ ಪ್ರಕ್ರಿಯೆಗೆ ನೀಡಿದ ದೃಷ್ಟಿ ತನಗೆ ತಾನೆ ಕಡಿಮೆಯಾಗುತ್ತದೆ.