ಭಾಗIII

೬.೧೦ ಬಿಸಿಯೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂಲ ಸೌಲಭ್ಯಗಳು

ನಾವು ಅಧ್ಯಯನ ನಡೆಸಿದ ಗ್ರಾಮಗಳಲ್ಲಿ ಬಿಸಿಯೂಟ ಕಾರ್ಯಕ್ರಮ ಹೆಚ್ಚು ಸುಗಮವಾಗಲು ಬೇಕಾದ ಮೂಲ ಸೌಲಭ್ಯಗಳ ಗಂಭೀರ ಸಮಸ್ಯೆ ಮತ್ತು ಕೊರತೆಗಳಿಗೆ ಸಂಬಂಧಿಸಿದ ಬೇರೆ ಬೇರೆ ವಿಷಯಗಳು ತೊಡಕಾಗಿವೆ. ಇಂತಹ ಪ್ರಮುಖ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಮುಂದೆ ಚರ್ಚಿಸಲಾಗಿದೆ.

೬.೧೦.೧. ಅಡುಗೆ ಮನೆ

ಸಿ.ಇ.ಎಸ್. ಅಧ್ಯಯನ ನಡೆಸಿದ ಮೂರು ರಾಜ್ಯಗಳಲ್ಲಿ ಬಹಳಷ್ಟು ಪ್ರಮಾಣದ ಶಾಲೆಗಳಲ್ಲಿ ವ್ಯವಸ್ಥಿತವಾದ ಅಡುಗೆ ಮನೆ ಸೌಲಭ್ಯಗಳು ಇಲ್ಲವಾಗಿದೆ. ಆಹಾರವನ್ನು ಯಾವುದೇ ಮೇಲ್ಛಾವಣಿ ಇಲ್ಲದೆ ತೆರೆದ ಸ್ಥಳದಲ್ಲಿ ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ತಾತ್ಕಾಲಿಕವಾಗಿ ನಿರ್ಮಾಣಮಾಡಿದ ಶೆಡ್‌ಗಳಿವೆ. ಇಂತಹ ಶಾಲೆಗಳಲ್ಲಿ ಮಳೆ, ಗಾಳಿ ಬಂದಾಗ ಆಹಾರವನ್ನು ಶಾಲೆಯ ಜಗುಲಿ ಅಥವಾ ತರಗತಿಗಳ ಒಳಗೆ ತಯಾರಿಸಲಾಗುತ್ತಿದೆ. ಕರ್ನಾಟಕದಲ್ಲಿ ಸಿ.ಇ.ಎಸ್. ಸಂಸ್ಥೆಯು ಅಧ್ಯಯನಕ್ಕೆ ಒಳಪಡಿಸಿದ ಶೇಕಡ ೩೧ರಷ್ಟು ಶಾಲೆಗಳಲ್ಲಿ ಒಂದು ಪ್ರತ್ಯೇಕವಾದ ಅಡುಗೆ ಮನೆ ಇರುವುದನ್ನು ಗುರುತಿಸಿದೆ (ಜೀನ್ ಡ್ರೀಜ್ ಮತ್ತು ಗೋಯಲ್, ೨೦೦೩). ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ಪ್ರತ್ಯೇಕವಾದ ಅಡುಗೆ ಮನೆಯ ನಿರ್ಮಾಣಕ್ಕೆ ಗಂಭೀರವಾದ ಪ್ರಯತ್ನಗಳು ನಡೆಯುತ್ತಿವೆ. ಆಯಾ ಜಿಲ್ಲಾ ಪಂಚಾಯತಿಗಳ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಸಿಯೂಟದ ತಯಾರಿಕೆಗಾಗಿ ಅಡುಗೆ ಕೋಣೆಗಳ ನಿರ್ಮಾಣ, ಆಡುಗೆಗೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಗ್ರಾಮ ಪಂಚಾಯತಿಗಳಿಗೆ ಯೋಜನೆ ಅನುಷ್ಠಾನಕ್ಕೆ ಮಾರ್ಗದರ್ಶನ ಮಾಡಬೇಕು. ಅಲ್ಲದೆ ಈ ಎರಡು ಸೌಲಭ್ಯಗಳನ್ನು ಶಾಲೆಗಳಿಗೆ ಸಾಧ್ಯವಾದಷ್ಟು ಬೇಗನೆ ಒದಗಿಸಬೇಕು. ಇದು ಎಲ್ಲಾ ಸಿ.ಇ.ಒ ಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಇದು ಸರ್ಕಾೞದ ಮಾರ್ಗಸೂಚಿಯಾಗಿದೆ (ಕರ್ನಾಟಕ ಸರ್ಕಾರ, ೨೦೦೨). ಆದರೆ ನಾವು ಅಧ್ಯಯನ ನಡೆಸಿದ ಒಟ್ಟು ೨೦ ಶಾಲೆಗಳಲ್ಲಿ ಬಿಸಿಯೂಟದ ತಯಾರಿಕೆಗೆ ಪ್ರತ್ಯೇಕವಾದ ಅಡುಗೆ ಮನೆ ಇರುವುದು ಕೇವಲ ಒಂಬತ್ತು ಶಾಲೆಗಳಲ್ಲಿ. ಇನ್ನೂ ೧೧ ಶಾಲೆಗಳಲ್ಲಿ ಯಾವುದೇ ಮೇಲ್ಛಾವಣಿ ಮತ್ತು ಮುಚ್ಚುಮರೆಯಿಲ್ಲದೆ ತೆರೆದ ಸ್ಥಳದಲ್ಲಿ ಬಿಸಿಯೂಟವನ್ನು ತಯಾರಿಸುತ್ತಿದ್ದ ದೃಶ್ಯವು. ನಾವು ಭೇಟಿ ನೀಡಿದ ಅಡುಗೆ ಕೋಣೆ ಇಲ್ಲದ ಶಾಲೆಗಳಲ್ಲಿ ಕಂಡುಬಂದಿದೆ. ಇದರಿಂದ ದೂಳು, ಕಸ, ಕಡ್ಡಿ, ಕೀಟಗಳು ಇತ್ಯಾದಿ ಸಣ್ಣ ಪುಟ್ಟ ಕ್ರಿಮಿಗಳು ಆಹಾರದಲ್ಲಿ ಬಹಳ ಸರಳವಾಗಿ ಸೇರಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದರಿಂದ ಮಕ್ಕಳ ಕಲಿಕಾ ಏಕಾಗ್ರತೆಯು ಬೇರೆ ಕಡೆಗೆ ಸೆಳೆಯುವ ಸಾಧ್ಯತೆ ಹೆಚ್ಚು. ಆದರಲ್ಲಿಯೂ ಆಹಾರ ತಯಾರಿಕೆಯ ಉದ್ದೇಶಕ್ಕೆ ಶಾಲೆಯ ಜಗುಲಿ ಮತ್ತು ತರಗತಿಗಳ ಕೊಠಡಿಗಳನ್ನು ಆಗಿದಾಂಗ್ಗೆ ಬಳಸಿಕೊಳ್ಳುವುದರಿಂದ ಬೋಧನೆ ಮತ್ತು ಕಲಿಕೆಗೆ ಬಹಳಷ್ಟು ತೊಂದರೆಯಾಗುತ್ತದೆ. ಇದಲ್ಲದೆ ಅಡಿಗೆ ಮನೆ ಕೊರತೆಯೂ, ಆಹಾರದ ತಯಾರಿಕೆಗೆ ಬೇಕಾಗುವ ಸಾಮಗ್ರಿ ಮತ್ತು ಆಹಾರ ಪದಾರ್ಥಗಳ ಸಂಗ್ರಹಕ್ಕೆ ಬಹಳ ತೊಂದರೆಯಾಗಿದೆ. ಪ್ರತ್ಯೇಕ ಅಡುಗೆ ಕೋಣೆಗಳು ಇರುವ ೯ ಶಾಲೆಗಳಲ್ಲಿ ಅಡುಗೆ ಕೋಣೆಗಳು ಇವೆ. ಅವುಗಳ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿಲ್ಲ. ಅಲ್ಲದೆ ಆ ಕೋಣೆಗಳು ವಿಶಾಲವಾಗಿರದೆ ಗಾಲಿ ಬೆಳಕಿನ ಕೊರತೆಯನ್ನು ಎದುರಿಸುತ್ತಿವೆ.

೬.೧೦.೨ ಸಾಮಗ್ರಿಗಳು

ಆಹಾರ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಕೊರತೆಯು ಅಧ್ಯಯನ ನಡೆಸಿದ ಎಲ್ಲಾ ಶಾಲೆಗಳಲ್ಲಿ ಇರುವುದು ಸಾಮಾನ್ಯ. ರಾಜ್ಯ ಸರ್ಕಾರವು ಅಡಿಗೆ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳುವಿಕೆಗೆ ಹಣಕಾಸಿನ ಸೌಲಭ್ಯವನ್ನು ಬಜೆಟ್‌ನಲ್ಲಿ ಒದಗಿಸಿದೆ. ಆದರೆ ಒದಗಿಸಿದ ಹಣದ ಪ್ರಮಾಣಕಡಿಮೆ. ಈ ಹಾಣವನ್ನು ಬಳಸಿ ಜಿಲ್ಲಾ ಆಡಳಿತವು ಎಲ್ಲಾ ಶಾಲೆಗಳಿಗೆ ಒಂದೇ ರೀತಿಯ ಸಾಮಗ್ರಿಗಳನ್ನು ಒದಗಿಸಿದೆ. ಇದು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇದೆ ಎಂದು ಜಿಲ್ಲಾ ಆಡಳಿತ ಸಮರ್ಥಿಸುತ್ತಿದೆ.ಆದರೆ ವಾಸ್ತವಿಕವಾಗಿ ಜಿಲ್ಲಾ ಆಡಳಿತ ಒದಗಿಸಿದ ಪಾತ್ರೆಗಳಲ್ಲಿ ಕೆಲವು ಉಪಯೋಗಕ್ಕೆ ಬಾರದವು. ಉಪಯೋಗಕ್ಕೆ ಬಂದರೆ ಅವುಗಳ ಗುಣಮಟ್ಟ ಉತ್ತಮವಾಗಿಲ್ಲ. ಅಡುಗೆಯವರು ಸರ್ಕಾರದಿಂದ ಪೂರೈಕೆಯಾಗಿರುವ ಅಡುಗೆ ಪಾತ್ರೆಗಳ ಗುಣಮಟ್ಟ ಕಳಪೆಯಾಗಿರುವುದರಿಂದ ಆಹಾರ ಬೇಯಿಸುವಾಗ ಬೆಂಕಿಯ ಕಾವಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆಹಾರ ಕೆಟ್ಟು ಹೋಗುವ (ಸೀಯುವ) ಸಾಧ್ಯತೆಗಳೆ ಹೆಚ್ಚಾಗಿವೆ ಎಂದು ಹೇಳುತ್ತಾರೆ. ನಾವು ಅಧ್ಯಯನ ನಡೆಸಿದ ಎಲ್ಲಾ ಶಾಲೆಗಳಲ್ಲಿ ಆಹಾರ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಸರ್ಕಾೞವೇ ಪೂರೈಸಿದೆ. ಆದರೆ ಭಿನ್ನಾಳ ಪ್ರಾಥಮಿಕ ಶಾಲೆಯ ಬಿಸಿಯೂಟ ತಯಾರಿಕೆಗೆ ಬೇಕಾಗುವ ಕೆಲವು ಉತ್ತಮ ಪಾತ್ರೆ ಮತ್ತು ಸಾಮಗ್ರಿಗಳನ್ನು ಗ್ರಾಮಸ್ಥರು ಕೊಡುಗೆಯಾಗಿ ನೀಡಿದ್ದಾರೆ. ಹೀಗೆ ಅಡಿಗೆ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಕೊರತೆಯನ್ನು ತುಂಬಿಕೊಡುವುದರಿಂದ ಅಡಿಗೆಯವರು ಉತ್ತಮ ಗುಣಮಟ್ಟದ ಆಹಾರ ತಯಾರಿಕೆ ಮಾಡುವಂತೆ ಹಿಡಿತವನ್ನು ಸಾಧಿಸಬಹುದು.

೬.೧೦.೩. ತಟ್ಟೆಗಳು

ನಾವು ಅಧ್ಯಯನಕ್ಕೆ ಒಳಪಡಿಸಿದ ಎಲ್ಲಾ ಶಾಲೆಗಳಲ್ಲಿ ಊಟಕ್ಕೆ ಬೇಕಾಗುವ ತಟ್ಟೆಗಳನ್ನು ಮಕ್ಕಳು ತಮ್ಮ ಮನೆಗಳಿಂದ ತರುವುದು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ತಡೆಗಟ್ಟುವುದು ಪ್ರಾಯಶಃ ಕಷ್ಟವಾಗಬಹುದು. ಕೆಲವು ಪೋಷಕರು ಮಕ್ಕಳು ಮನೆಯಿಂದ ಹೊರಗೆ ತಟ್ಟೆಯನ್ನು ತೆಗೆದುಕೊಂಡು ಹೋಗುವುದರ ಬಗ್ಗೆ ಮಸ್ಸಿಲ್ಲದಿರುವುದನ್ನು ಗಮನಿಸಿದೆವು. ಏಕೆಂದರೆ ಅವನ್ನು ಮಕ್ಕಳು ಕಳೆದುಕೊಳ್ಳುತ್ತಾರೆ ಎಂದು. ಇದು ಸ್ವಲ್ಪಮಟ್ಟಿಗೆ ಬಡತನವಿರುವ ಮಕ್ಕಳ ಪೋಷಕರಿಗೆ ಸರಿಹೋಗಬಹುದು. ಕಾರಣ ಇಂತಹ ಕುಟುಂಬಗಳಲ್ಲಿ ಹೆಚ್ಚಿನ ತಟ್ಟೆಗಳು ಇರುವ ಸಾಧ್ಯತೆ ಬಹಳ ವಿರವಾಗಿರಬಹುದು. ಈ ಅಂಶವನ್ನು ಸಮರ್ಥಿಸುವ ಎರಡು ಘಟನೆಗಳನ್ನು ನಾವು ಗಮನಿಸಿದೆವು. ಶಿದ್ನೇಕೊಪ್ಪ ಮತ್ತು ಪಾಲಥಿ ಶಾಲೆಗಳಿಗೆ ಭೇಟಿ ನೀಡಿದಾಗ ಈ ಘಟನೆಗಳು ನಡೆದವು. ಒಂದು ಮಗುವಿನ ತಾಯಿಯು ನನ್ನ ಮಗುವು ಶಾಲೆಯಲ್ಲಿ ಬಿಸಿಯೂಟಕ್ಕೆ ಎಂದು ತಂದಿದ್ದ ತಟ್ಟೆಯು ಕಳೆದು ಹೋಗಿದೆ. ಬಿಸಿಯೂಟ ಶಾಲೆಯಲ್ಲಿ ಪ್ರಾರಂಭವಾದ ಮೇಲೆ ಇದು ಎರಡನೆಯ ತಟ್ಟೆಯಾಗಿದೆ. ಎಂದು ಶಿಕ್ಷಕರ ಜೊತೆ ವಾದಿಸುತ್ತಿದ್ದುದನ್ನು ನಾವು ಗಮನಿಸಿದೆವು. ಪಾಲಥಿ ಶಾಲೆಯಲ್ಲಿ ತಾಯಿಯು ಒಬ್ಬ ಶಿಕ್ಷಕರ ಜೊತೆ ವಾದಿಸುತ್ತಿದ್ದುನ್ನು ನಾವು ಗಮನಿಸಿದೆವು. ಪಾಲಥಿ ಶಾಲೆಯಲ್ಲಿತಾಯಿಯು ಒಬ್ಬ ಶಿಕ್ಷಕಿಯ ಜೊತೆ ಈ ರೀತಿ ಚರ್ಚಿಸುತ್ತಿದ್ದಳು. ನನ್ನ ಮಗ ಶಾಲೆಯ ಊಟಕ್ಕೆ ತರುವ ತಟ್ಟೆಯನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದಾನೆ. ಇದನ್ನು ನೀವು ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಶಾಲೆಯಲ್ಲಿ ಮಕ್ಕಳಿಗೆ ಊಟ ಮಾಡುವುದಕ್ಕೆ ತಟ್ಟೆಗಳು ಇಲ್ಲದಿರುವುದು ಎಂದು ಹೇಳಲು ಬರುವುದಿಲ್ಲ. ಆದರೆ ಊಟದ ತಟ್ಟೆಗಳನ್ನು ಶಾಲೆಯಲ್ಲಿಯೇ ಪೂರೈಕೆ ಮಾಡುವುದರಿಂದ ಇಂತಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು.ಹೀಗಾಗಿ ಪ್ರತಿಯೊಂದು ಶಾಲೆಗೂ ಅಗತ್ಯವಿರುವ ತಟ್ಟೆಗಳನ್ನು ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣದ ಮೂಲಕ ಸಂಗ್ರಹಿಸುವ ಪ್ರಯತ್ನವನ್ನು ಆಯಾ ಶಾಲೆಯ ಮಟ್ಟದಲ್ಲಿ ಮಾಡಬೇಕಾಗಿದೆ.

ಬಯಲಿನಲ್ಲೇ ಆಹಾರ ತಯಾರಿಕೆ

ಬಯಲಿನಲ್ಲೇ ಆಹಾರ ತಯಾರಿಕೆ

೬.೧೦.೪. ಅಡುಗೆ ಅನಿಲ

ಬಿಸಿಯೂಟ ಯೋಜನೆಯಲ್ಲಿ ಅಡಿಗೆ ಅನಿಲ ಮತ್ತು ಉರುವಲು ಮತ್ತೊಂದು ಪ್ರಮುಖ ಅಂಶವಾಗಿದೆ. ಕರ್ನಾಟಕದಲ್ಲಿ ತಕ್ಕಮಟ್ಟಕ್ಕೆ ಅಡಿಗೆ ಎಲ್.ಪಿ.ಜಿ. ಸಿಲಿಂಡರ್ ಮತ್ತು ಅದಕ್ಕೆ ಪೂರಕವಾದ ಒಲೆಯನ್ನು ಶಾಲೆಗಳಿಗೆ ಈಗಾಗಲೇ ಪೂರೈಸಲಾಗಿದೆ. ಆದರೆ ಅಧ್ಯಯನಕ್ಕೆ ಒಳಪಡಿಸಿದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಎಲ್.ಪಿ.ಜಿ. ಬಳಸಿ ಬಿಸಿಯೂಟವನ್ನು ತಯಾರಿಸಲಾಗುತ್ತಿಲ್ಲ. ಇದು ಏಕೆ ಎಂದು ಮುಖ್ಯ ಶಿಕ್ಷಕರನ್ನು ಮತ್ತು ಇತರ ಶಿಕ್ಷಕರನ್ನು ಕೇಳಿದರೆ ಅದಕ್ಕೆ ವಿವರಣೆ ಹೀಗಿದೆ. ಎಲ್.ಪಿ.ಜಿ. ಒಂದು ಸಿಲಿಂಡರ್‌ಗೆ ೩೩೦ ರೂಪಾಯಿಗಳು. ಇದು ೧೦ ದಿನದ ಒಳಗೆ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಖಾಲಿಯಾದ ಬಳಿಕ ನಿಗದಿಪಡಿಸಿದ ಎಲ್.ಪಿ.ಜಿ. ವಿತರಕರ ಬಳಿ ಹೋಗಿ ಬದಲಾಯಿಸಿಕೊಂಡು ಬರಬೇಕು. ಅಲ್ಲದೆ ನಾವು ವಿತರಕರ ಬಳಿ ಹೋದಾಗ ಅನಿಲ ತುಂಬಿದ ಸಿಲಿಂಡರ್‌ಗಳು ಇಲ್ಲವಾದರೆ ಬಹಳ ತೊಂದರೆಯಾಗುತ್ತದೆ. ಇದಕ್ಕಾಗಿ ಮಾಡುವ ವೆಚ್ಚ, ಸಮಯ ಇತ್ಯಾದಿ ಅಂಶಗಳನ್ನು ಲೆಕ್ಕಾಚಾರ ಮಾಡಿದರೆ, ಎಲ್.ಪಿ.ಜಿ. ಬಳಕೆ ಹೆಚ್ಚು ವೆಚ್ಚದಾಯಕವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇರುವ ಮತ್ತೊಂದು ಸಮಸ್ಯೆ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಸರಿಯಾಗಿ ಇಲ್ಲದ ಗ್ರಾಮಗಳ ಶಾಲೆಗಳಿಗೆ ಎಲ್.ಪಿ.ಜಿ. ಸಿಲಿಂಡರ್‌ಗಳು ಸರಿಯಾದ ಸಮಯಕ್ಕೆ ವಿತರಣೆಯಾಗದಿರುವುದು. ನಾವು ಅಧ್ಯಯನಕ್ಕೆ ಒಳಪಡಿಸಿದ ತೊರಮರಿ, ತಾರಿವಾಳ, ಹೇಮವಾಡಗಿ ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲ. ಹೀಗಾಗಿ ಈ ಗ್ರಾಮಗಳ ಶಾಲೆಗಳಿಗೆ ಎಲ್.ಪಿ.ಜಿ. ಸಿಲಿಂಡರ್ ವಿತರಣೆ ಮಾಡುವ ವಾಹನವು ಬಹುವುದಿಲ್ಲ. ಈ ಸಿಲಿಂಡರ್‌ಗಳನ್ನು ಪಕ್ಕದ ಬೂದಿಹಾಳ ಎಸ್.ಕೆ. ಶಾಲೆಗಳಲ್ಲಿ ಅಥವಾ ಬೆನಕನದೋಣಿ ಶಾಲೆಗಳಲ್ಲಿ ಇಳಿಸಿ ಹೋಗಲಾಗುತ್ತಿದೆ. ಅಲ್ಲಿಂದ ಸಂಬಂಧ ಪಟ್ಟ ಶಾಲೆಯವರು ತೆಗೆದುಕೊಂಡು ಹೋಗಬೇಕಾಗಿದೆ. ಇದು ಶ್ರಮದಾಯಕ ಮತ್ತು ವೆಚ್ಚ ದಾಯಕವಾಗಿದೆ ಎಂಬುದು ಆ ಶಾಲೆಗಳ ಶಿಕ್ಷಕರ ಅಭಿಪ್ರಾಯ. ಈ ಎಲ್ಲಾ ಕಾರಣದಿಂದ ಸ್ಥಳೀಯವಾಗಿ ದೊರಕುವ ಕಟ್ಟಿಗೆಯು ಎಲ್.ಪಿ.ಜಿ. ಗಿಂತ ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ಗಾಡಿ ಕಟ್ಟಿಗೆಗೆ ೧೫೦ ರಿಂದ ೨೦೦ ರೂಪಾಯಿಗಳು. ಹೆಚ್ಚೆಂದರೆ ೨೫೦ ರೂ.ಗಳು ವೆಚ್ಚವಾಗುತ್ತದೆ.ಪ್ರತಿ ಶಾಲೆಗೆ ಒಂದು ತಿಂಗಳಿಗೆ ೨ ಗಾಡಿ, ಹೆಚ್ಚೆಂದರೆ ೩ ಗಾಡಿ ಕಟ್ಟಿಗೆ ಬೇಕಾಗುತ್ತದೆ. ಇದಕ್ಕೆ ತಗಲಬಹುದಾದ ವೆಚ್ಚ ೭೫೦ ರೂ.ಗಳು. ಆದರೆ ಪ್ರತಿ ಶಾಲೆಗೆ ಪ್ರತಿ ತಿಂಗಳು ಬೇಕಾಗುವ ಎಲ್.ಪಿ.ಜಿ. ಸಿಲಿಂಡರ್‌ಗಳ ಸಂಖ್ಯೆ (ಇದು ಮಕ್ಕಳ ಸಂಖ್ಯೆಯ ಮೇಲೆ ವ್ಯತ್ಯಾಸಗೊಳ್ಳುತ್ತದೆ) ಕನಿಷ್ಠ ಮೂರು. ಇದರ ವೆಚ್ಚ ೯೦೦ ರೂ.ಗಳಿಗೂ ಹೆಚ್ಚು. ಅಲ್ಲದೆ ಎಲ್.ಪಿ.ಜಿ. ಬಳಕೆಯಲ್ಲಿ ಕೆಲವು ಸಣ್ಣ ಪುಟ್ಟ ತೊಡಕುಗಳು ಇವೆ. ಹೀಗಾಗಿ ನಾವು ಅಧ್ಯಯನ ನಡೆಸಿದ ಬಹುತೇಕ ಶಾಲೆಯಲ್ಲಿ ಅಡಿಗೆ ಅನಿಲಕ್ಕೆ ಬದಲಿಯಾಗಿ ಕಟ್ಟಿಗೆಯನ್ನು ಬಳಸುತ್ತಿದ್ದಾರೆ. ಇದರಿಂದ ಯಾವುದೇ ತೊಂದರೆಗಳು ಇದುವರೆಗೆ ಉಂಟಾಗಿಲ್ಲ.

೬.೧೦.೫. ನೀರು

ಬಿಸಿಯೂಟ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಲು ನೀರು ಪ್ರಮುಖವಾದ ಅಂಶ. ಆಹಾರ ತಯಾರಿಕೆಗೆ ಶುದ್ಧವಾದ ನೀರು ಎಷ್ಟು ಪ್ರಮುಖವೋ, ಕುಡಿಯುವ ನೀರು ಕೂಡ ಅಷ್ಟೇ ಪ್ರಮುಖವಾದದ್ದು. ಆಹಾರದ ಸೇವನೆಯ ನಂತರ ಶುದ್ಧ ನೀರು ಕುಡಿಯುವುದು ಅತ್ಯಂತ ಅವಶ್ಯಕ. ಇಲ್ಲವಾದಲ್ಲಿ ಆಹಾರ ಸೇವನೆಯು ವ್ಯರ್ಥವಾಗುತ್ತದೆ. ಅಲ್ಲದೆ ಅಜೀರ್ಣತೆಯಿಂದ ವಾಂತಿ, ಭೇದಿಯಂತಹಹ ಸಣ್ಣಪುಟ್ಟ ಆರೋಗ್ಯದ ತೊಂದರೆಗಳು ಶಾಲೆಯಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಅಧ್ಯಯನಕ್ಕೆ ಒಳಪಡಿಸಿದ ಎಲ್ಲಾ ಗ್ರಾಮಗಳು ಮತ್ತು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಸಮೀಕ್ಷೆಗೆ ಒಳಪಡಿಸಿದ ಒಟ್ಟು ೨೦ ಶಾಲೆಗಳಲ್ಲಿ ಶೇಕಡ ೩೦ರಷ್ಟು (ಕೇವಲ ೬) ಶಾಲೆಗಳ ಆವರಣದಲ್ಲಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ. ಇನ್ನು ಉಳಿದ ಶೇಕಡ ೭೦ರಷ್ಟು (೧೪) ಶಾಲೆಗಳಲ್ಲಿ ಯಾವುದೇ ಬಗೆಯ ಕುಡಿಯುವ ನೀರಿನ ವ್ಯವಸ್ಥೆ ಶಾಲೆಯ ಆವರಣದಲ್ಲಿ ಇರುವುದಿಲ್ಲ. ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಇರುವ ೯ ಶಾಲೆಗಳ ಪೈಕಿ ಕೇವಲ ಎರಡು ಶಾಲೆಗಳ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ಉಳಿದ ೭ ಶಾಲೆಗಳ ಆವರಣದಲ್ಲಿ ಯಾವುದೇ ಬಗೆಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಂತಹ ಶಾಲೆಗಳಲ್ಲಿ ಬಿಸಿಯೂಟದ ಅಡುಗೆಗೆ ನೀರಿನ್ನು ಹೊರಗಿನಿಂದ ತರಲಾಗುತ್ತದೆ. ಮಕ್ಕಳು ಸಹ ತಾವು ಕುಡಿಯುವ ನೀರನ್ನು ಸಣ್ಣಪುಟ್ಟ ಬಾಟಲುಗಳಲ್ಲಿ ಮನೆಯಿಂದ ಬರುವಾಗಲೇ ತರುವುದು ಸಾಮಾನ್ಯವಾದ ದೃಶ್ಯ. ಕುಡಿಯುವ ನೀರಿನ ವ್ಯವಸ್ಥೆ ಇರುವ ಎರಡು ಶಾಲೆಗಳಲ್ಲಿ ಒಂದು ಕೈಪಂಪಿನದಾಗಿದ್ದರೆ, ಮತ್ತೊಂದು ಕಿರು ಕುಡಿಯುವ ನೀರಿನ ಯೋಜನೆಯದ್ದಾಗಿದೆ. ಕಬ್ಬರಗಿ ಗ್ರಾಮಪಂಚಾಯತಿಯ ಎರಡು ಶಾಲೆಗಳಲ್ಲಿ ಆವರಣಕ್ಕೆ ಹೊಂದಿಕೊಂಡಂತೆ ಕೈಪಂಪುಗಳಿವೆ. ಮತ್ತೆರಡು ಶಾಲೆಗಳಲ್ಲಿ ಯಾವುದೇ ಆವರಣಕ್ಕೆ ಹೊಂದಿಕೊಂಡಂತೆ ಕೈಪಂಪುಗಳಿವೆ. ಮತ್ತೆರಡು ಶಾಲೆಗಳಲ್ಲಿ ಯಾವುದೇ ಕುಡಿಯುವ ನೀರಿನ ವ್ಯವಸ್ಥೆಯಿರುವುದಿಲ್ಲ. ಕೃಷ್ಣಾನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಶಾಲೆಗಳಲ್ಲಿ ಎರಡು ಶಾಲೆಗಳು ಒಂದೇ ಆವರಣದಲ್ಲಿದೆ. ಈ ಆವರಣದಲ್ಲಿ ಕಿರು ಕುಡಿಯುವ ನೀರಿನ ಯೋಜನೆಯಲ್ಲಿ ಕಟ್ಟಿಸಿರುವ ಒಂದು ತೊಟ್ಟಿ ಇದೆ. ಇನ್ನುಳಿದ ಎರಡು ಶಾಲೆಗಳಲ್ಲಿ ಯಾವುದೇ ಬಗೆಯ ಕುಡಿಯುವ ನೀರಿನ ವ್ಯವಸ್ಥೆಯಿರುವುದಿಲ್ಲ.

ಯರೇಹಂಚಿನಾಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಕುಡಿಯುವ ನೀರಿಗೆ ಒಂದು ಪ್ರತ್ಯೇಕವಾದ ವ್ಯವಸ್ಥೆ ಇದೆ. ಆದರೆ ನೀರು ನಳಗಳಲ್ಲಿ ಬರುವುದು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ, ಅದು ಕೂಡ ವಿದ್ಯುತ್ ಸರಬರಾಜು ಸರಿಯಾಗಿ ಇದ್ದರೆ ಮಾತ್ರ ನೀರು ಬರುತ್ತದೆ (ಇದು ಕಿರು ನೀರಾವರಿ ಯೋಜನೆಯನ್ನು ಹೊಂದಿರುವ ಶಾಲೆಗಳಿಗೂ ಅನ್ವಯಿಸುತ್ತದೆ.) ಪ್ರಸ್ತುತ ಸಮಯದಲ್ಲಿ ಗ್ರಾಮೀಣ ಭಾಗಗಳಿಗೆ ಸರಬರಾಜು ಆಗುತ್ತಿರುವ ವಿದ್ಯುತ್ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಇತರ ಶಾಲೆಗಳಲ್ಲೂ ಇಂತಹ ವ್ಯವಸ್ಥೆಯೂ ಕೂಡ ಇಲ್ಲವಾಗಿದೆ. ಯರೇಹಂಚಿನಾಳ ಗ್ರಾಮದಿಂದ ಭಿನ್ನಾಳ ಗ್ರಾಮಕ್ಕೆ ಕುಡಿಯುವ ನೀರು ಕಿರು ನೀರು ಸರಬರಾಜು ಯೋಜನೆಯಲ್ಲಿ ಪೂರೈಸಲಾಗುತ್ತಿದೆ. ಇದು ಕೂಡ ವಿದ್ಯುತ್ ಇದ್ದರೆ ಮಾತ್ರ. ನೀರು ಸಾಮಾನ್ಯವಾಗಿ ಬರುವುದು ಬೆಳಿಗ್ಗೆ ಸಮಯದಲ್ಲಿ. ಆ ಸಮಯದಲ್ಲಿ ಶಾಲೆಯಲ್ಲಿ ಯಾರು ಇರುವುದಿಲ್ಲ. ಹೀಗಾಗಿ ಮುಖ್ಯ ಅಡಿಗೆಯವರ ಮನೆಯಲ್ಲಿ ನೀರನ್ನು ಶೇಖರಿಸಿ ಬಿಸಿಯೂಟದ ಅಡಿಗೆಗೆ ಬಳಸಲಾಗುತ್ತಿದೆ. ಶಿದ್ನೇಕೊಪ್ಪ ಶಾಲೆಯ ಎದುರಿಗೆ ಶಾಲೆ ಆವರಣದ ಹೊರೆಗೆ ಒಂದು ಮಿನಿ ವಾಟರ್ ಸಪ್ಲೈ ಟ್ಯಾಂಕ್ ಇದೆ. ಜೊತೆಗೆ ಒಂದು ಕೈಪಂಪು ಇದೆ. ಆದರೆ ಈ ಎರಡು ಕೊಳವೆ ಬಾವಿಗಳ ನೀರು ಕುಡಿಯಲು ಉಪಯೋಗಕ್ಕೆ ಯೋಗ್ಯವಾಗಿಲ್ಲ. ಇವುಗಳಲ್ಲಿ ಕ್ಲೋರೈಡ್ ಅಂಶ ಅಧಿಕವಾಗಿದೆ. ಇದು ಕುಡಿಯಲು ಯೋಗ್ಯವಾಗಿಲ್ಲವೆಂದು ನೀರು ತಪಾಸಣೆಯಿಂದ ತಿಳಿದು ಬಂದಿದೆ. ಶಿದ್ನೇಕೊಪ್ಪದ ಜನರು ಯಾವುದೇ ಕಾರಣದಿಂದಲೂ ಈ ಎರಡು ಕೊಳವೆ ಭಾವಿಗಳ ನೀರನ್ನು ಕುಡಿಯಲು ಅಥವಾ ಅಡಿಗೆ ಮಾಡಲು ಬಳಸುವುದಿಲ್ಲ. ಕುಡಿಯುವ ನೀರನ್ನು ಈ ಗ್ರಾಮದ ಜನರು ಸುಮಾರು ೧ ಕಿ.ಮೀ. ದೂರದಿಂದ ತರುತ್ತಾರೆ. ಬೇಸಿಗೆಯಲ್ಲಿ ಈ ಗ್ರಾಮದ ಜನರನ್ನು ಪ್ರಮುಖವಾಗಿ ಕಾಡುವ ಸಮಸ್ಯೆಯೆಂದರೆ ಕುಡಿಯುವ ನೀರಿನದು. ಇಂತಹ ಗಂಭೀರವಾದ ಸ್ಥಿತಿಯು ಶಿದ್ನೇಕೊಪ್ಪದಲ್ಲಿದೆ. ಹೀಗಾಗಿ ನಾವು ಅಧ್ಯಯನ ನಡೆಸಿದ ಶಾಲೆಗಳಿಗೆ ಗಂಭೀರವಾದ ಸ್ಥಿತಿಯು ಶಿದ್ನೇಕೊಪ್ಪದಲ್ಲಿದೆ. ಹೀಗಾಗಿ ನಾವು ಅಧ್ಯಯನ ನಡೆಸಿದ ಶಾಲೆಗಳಿಗೆ ಮಾತ್ರ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸದೆ, ಈ ಗ್ರಾಮಗಳಿಗೆ ಪ್ರತ್ಯೇಕವಾದ ಕುಡಿಯುವ ನೀರಿನ ಯೋಜನೆಯನ್ನು ತಕ್ಷಣವೇ ರೂಪಿಸುವ ಅಗತ್ಯವಿದೆ.

ಕೋಷ್ಟಕ ೬.೫ – ಗ್ರಾಮಪಂಚಾಯತಿವಾರು ಶಾಲೆಗಳಲ್ಲಿರುವ ಅಡಿಗೆ ಸಾಹಯಕರ ಸಾಮಾಜಿಕ ಸ್ಥಿತಿ (ಶೇಕಡವಾರು)

ಗ್ರಾಮ ಪಂಚಾಯತಿ ಹೆಸರು

ವಿವಾಹಿತರು

ವಿಧವೆಯರು

ಗಂಡಂದಿರಿಮದ ದೂರವಾಗಿರುವವರು

ಎಸ್.ಸಿ

ಎಸ್.ಟಿ.

ಇತರ

ಒಟ್ಟು

ಎಸ್.ಸಿ

ಎಸ್.ಟಿ.

ಇತರ

ಒಟ್ಟು

ಎಸ್.ಸಿ

ಎಸ್.ಟಿ.

ಇತರ

ಒಟ್ಟು

ಬೂದಿಹಾಳ ಎಸ್.ಕೆ.

೧೪

೨೨

ಕಬ್ಬರಗಿ

೧೨

ಯರೇಹಂಚಿನಾಳ

ಕೃಷ್ಣನಗರ

ಒಟ್ಟು

೧೨

೩೩

೫೧

೧೭

ಕೋಷ್ಟಕ ೬.೬ – ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯಗಳು (ಶೇಕಡವಾರು)

ಗ್ರಾಮ ಪಂಚಾಯತಿ

ಅಡುಗೆ ಮನೆ

ಕುಡಿಯುವ ನೀರು

ಅಡುಗೆ ಅನಿಲ

ಅಡುಗೆ ಸಹಾಯಕರು

ಸಾಮಗ್ರಿಗಳು

ಇದೆ

ಇಲ್ಲ

ಒಟ್ಟು

ಇದೆ

ಇಲ್ಲ

ಒಟ್ಟು

ಇದೆ

ಇಲ್ಲ

ಒಟ್ಟು

ಇದ್ದಾರೆ

ಬೇಕಾಗಿದ್ದಾರೆ

ಒಟ್ಟು

ಇದೆ

ಇಲ್ಲ

ಒಟ್ಟು

ಬೂದಿಹಾಳ ಎಸ್.ಕೆ.

೦೫

೦೪

೦೯

೦೨

೦೭

೦೯

೦೯

೦೯

೨೨

೦೩

೨೫

೦೯

೦೯

ಕಬ್ಬರಗಿ

೦೩

೦೧

೦೪

೦೨

೦೨

೦೪

೦೪

೦೪

೧೨

೧೨

೦೪

೦೪

ಯರೇಹಂಚಿನಾಳ

೦೩

೦೩

೦೩

೦೩

೦೩

೦೩

೦೯

೦೯

೦೩

೦೩

ಕೃಷ್ಣನಗರ

೦೧

೦೩

೦೪

೦೨

೦೨

೦೪

೦೪

೦೪

೦೮

೦೧

೦೯

೦೯

೦೪

ಒಟ್ಟು

೦೯

೧೧

೨೦

೦೬

೧೪

೨೦

೨೦

೨೦

೫೧

೦೪

೫೫

೨೦

೨೦

ಮೂಲ: ಕ್ಷೇತ್ರ ಕಾರ್ಯದ ಮಾಹಿತಿ

೬.೧೦.೬. ಅಡುಗೆ ಸಹಾಯಕರು

ಕರ್ನಾಟಕದಲ್ಲಿ ಶಾಲೆಗಳಿಗೆ ಅಗತ್ಯವಾಗಿ ಬೇಕಾಗುವ ಮುಖ್ಯ ಅಡುಗೆಯವರು ಮತ್ತು ಅಡಿಗೆ ಸಹಾಯಕರುಗಳ ನೇಮಕಕ್ಕೆ ಮಾರ್ಗಸೂಚಿ ಇದೆ (ಕರ್ನಾಟಕ ಸರ್ಕಾರ, ೨೦೦೨). ನಾವು ಅದ್ಯಯನ ನಡೆಸಿದ ಎಲ್ಲಾ ಶಾಲೆಗಳಲ್ಲಿ ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳನ್ನು ನೇಮಕ ಮಾಡಲಾಗಿದೆ. ಇವರುಗಳ ಸಂಖ್ಯೆ ಒಟ್ಟು ೫೧. ಇನ್ನೂ ನಾಲ್ಕು ಜನ ಅಡುಗೆಯವರ ಅವಶ್ಯಕತೆಯಿದೆ. ಪ್ರತಿ ಶಾಲೆಯಲ್ಲಿ ಬಿಸಿಯೂಟದ ಸಂಘಟಕರುಗಳೇ ಮುಖ್ಯ ಅಡಿಗೆಯವರಾಗಿರುತ್ತಾರೆ. ಬಿಸಿಯೂಟಕ್ಕೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿ ಮುಖ್ಯ ಅಡಿಗೆಯವರದಾಗಿರುತ್ತದೆ. ಇವರುಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಮಾರ್ಗಸೂಚಿಯಲ್ಲಿ ನಿಗದಿಪಡಿಸಲಾಗಿದೆ. (ಕರ್ನಾಠಕ ಸರ್ಕಾರ, ೨೦೦೨). ನಾವು ಅಧ್ಯಯನ ನಡೆಸಿದ ಶಾಲೆಗಳಲ್ಲಿ ಮುಖ್ಯ ಅಡುಗೆಯವರಿಗೆ ಆಹಾರ ಸಾಮಗ್ರಿಗಳನ್ನು ದಾಸ್ತಾನು ತೆಗೆದುಕೊಳ್ಳುವ ಮತ್ತು ಇದಕ್ಕೆ ಸಂಬಂಧಿಸಿದ ಲೆಕ್ಕ ಪತ್ರಗಳ ದಾಖಲಾತಿಯು ತಿಳಿದಿರುವುದಿಲ್ಲ. ಅಲ್ಲದೆ ಅವರಿಗೆ ಸ್ವಚ್ಛತೆಯಿಂದ ಆಹಾರ ತಯಾರಿಸುವುದರ ಬಗ್ಗೆ ಮತ್ತು ಅದರ ಅವಶ್ಯಕತೆ ಕುರಿತು ತಿಳಿಸಿಕೊಡಬೇಕಾಗಿದೆ. ಇದರಿಂದ ಕೇವಲ ಬಿಸಿಯೂಟ ಸಂಘಟನೆಯು ಮಾತ್ರ ಸರಳವಾಗದೆ, ಶಿಕ್ಷಕ ವರ್ಗ ಇದಕ್ಕೆ ವ್ಯಯಿಸುತ್ತಿರುವ ಸಮಯವು ಕಡಿಮೆಯಾಗುವ ಜೊತೆ ಜೊತೆಗೆ ಬೋಧನೆಗೆ ಹೆಚ್ಚಿನ ಸಮಯ ಅವಕಾಶ ದೊರಕುತ್ತದೆ. ಇದರಿಂದ ಬಿಸಿಯೂಟದ ಗುಣಮಟ್ಟವು ಕೂಡ ಹೆಚ್ಚುತ್ತದೆ.

೬.೧೦.೭. ನಿರ್ವಹಣೆ ಮತ್ತು ಮೇಲು ಉಸ್ತುವಾರಿ

ಬಿಸಿಯೂಟ ಕಾರ್ಯಕ್ರಮದ ಮೇಲು ಉಸ್ತುವಾರಿಯಲ್ಲಿ ಅಲ್ಲೊಂದು ಇಲ್ಲೊಂದು ಉತ್ತಮವಾಗಿ ಕಂಡುಬಂದರೂ ಬಹಳಷ್ಟು ಮಟ್ಟಿಗೆ ಈ ಕಾರ್ಯಕ್ರಮ ಮೇಲು ಉಸ್ತುವಾರಿ ಸಡಿಲವಾಗಿಯೇ ಇದೆ. ವಿವಿಧ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಬಹಳಷ್ಟು ಜನ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಇದೂ ಒಂದು ಎಂದು ಭಾವಿಸಿದ್ದಾರೆ. ಬಿಸಿಯೂಟ ಕಾರ್ಯಕ್ರಮದ ಮಾರ್ಗ ಸೂಚಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಆಗಾಗ ತಪಾಸಣೆ ನಡೆಸಿ ಬಿಸಿಯೂಟದ ಗುಣಟ್ಟವನ್ನು ಉತ್ತಮ ಪಡಿಸಿಲು ಶ್ರಮಿಸಬೇಕು ಎಂದು ಸೂಚಿಸಲಾಗಿದೆ (ಕರ್ನಾಟಕ ಸರ್ಕಾರ, ೨೦೦೨).

ಈ ಯೋಜನೆಗೆ ನಿಗದಿಪಡಿಸಿದ ಹಣವನ್ನು ಸರಕಾರವು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿ ಇವರ ಉಸ್ತುವಾರಿ ಮತ್ತು ಸಮನ್ವಯತೆಯಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ಆಚರಣೆಗೆ ತಂದಿದೆ. ಇವರು ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಉದಾಹರಣೆಗೆ ಆಯಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಶಾಲೆಗಳಿಗೆ ಅಡುಗೆಕೋಣೆಗಳ ನಿರ್ಮಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯತಿಗಳಿಗೆ ಮಾರ್ಗದರ್ಶನ ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಹಾರದ ಬೇಡಿಕೆ ಪಟ್ಟಿ, ಸಾದಿಲ್ವಾರು ವೆಚ್ಚ ಇತ್ಯಾದಿಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಿ ಪಡೆದುಕೊಳ್ಳಬೇಕು. ಪಡೆದುಕೊಂಡ ನಂತರ ನಿಗದಿತ ಸಮಯದೊಳಗೆ ಸೌಲಭ್ಯಗಳ ಬಳಕೆಯ ಪ್ರಮಾಣ ಪತ್ರವನ್ನು ನಿರ್ದಿಷ್ಟ ಪಡಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದಿಷ್ಟ ಸಮಯದಲ್ಲಿ ಸಲ್ಲಿಸಬೇಕು. ಇವರು ಈ ಯೋಜನೆಗೆ ಸಂಬಂಧಿಸಿದಂತೆ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು ವಿಶೇಷವಾಗಿ ಕಾರ್ಯನಿರ್ವಹಿಸಬೇಕು (ಕರ್ನಾಟಕ ಸರ್ಕಾರ, ೨೦೦೨).

ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಪಂಚಾಯತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟದಲ್ಲಿ ಬಿಸಿಯೂಟ ಆಚರಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇವರು ಶಾಲೆ ಅಥವಾ ಅಡಿಗೆ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳು ಕಂಡುಬಂದಲ್ಲಿ ತುರ್ತಾಗಿ ಪರಿಹರಿಸಬೇಕು. ವಲಯ ಸಂಪನ್ಮೂಲ ಕೇಂದ್ರಗಳ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಶಾಲಾಬಿಸಿಯೂಟಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿ ಈ ಯೋಜನೆಯ ಯಶಸ್ಸಿಗೆ ಮೊದಲ ಆದ್ಯತೆ ನೀಡಬೇಕು (ಕರ್ನಾಟಕ ಸರ್ಕಾರ, ೨೦೦೨)

ಗ್ರಾಮ ಮತ್ತು ಶಾಲೆಗಳ ಮಟ್ಟದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿ ಎಸ್.ಡಿ.ಎಂ.ಸಿ. ಯು ಅಡುಗೆ ಸಿಬ್ಬಂದಿ ಆಯ್ಕೆ, ಅಡುಗೆ ಕೋಣೆಯ ನಿರ್ಮಾಣ ಮತ್ತು ಊಟ ತಯಾರಿಕೆಯ ಮೇಲು ಉಸ್ತುವಾರಿಯಲ್ಲಿ ಭಾಗವಹಿಸಿ ಉತ್ತಮ ಗುಣಮಟ್ಟದ ಆಹಾರ ತಯಾರಿಕೆ ಮತ್ತು ತಯಾರಾದ ಆಹಾರವನ್ನು ಶಾಲೆ ಆವರಣದಲ್ಲಿಯೇ ವಿತರಣೆಯಾಗುವಂತೆ ನೋಡಿಕೊಳ್ಳುವುದು. ಇದು ಆಯಾ ಶಾಲೆಯ ಎಸ್.ಡಿ.ಎಂ.ಸಿ. ಸಮಿತಿಗಳ ಕರ್ತವ್ಯವಾಗಿರುತ್ತದೆ. ಆಯಾ ಭಾಗದ ಕಂದಾಯ ನಿರೀಕ್ಷಕರು ಮತ್ತು ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಲು ತಮ್ಮ ವ್ಯಾಪ್ತಿಯಲ್ಲಿ ಬರುವ ಅಡುಗೆ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ಸರಬರಾಜು ಆದ ಆಹಾರ ಪದಾರ್ಥಗಳು, ಅಡುಗೆ ಸಾಮಗ್ರಿಗಳ ದಾಸ್ತಾನು ಪರಿಶೀಲಿಸಿ ಅವು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಕಂದಾಯ ನಿರೀಕ್ಷಕರು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಪ್ರತಿ ತಿಂಗಳು ಅಡುಗೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅದನ್ನು ತಮ್ಮ ದಿನಚರಿಯಲ್ಲಿ ನಮೂದಿಸಿ ತಹಶೀಲ್ದಾರರಿಗೆ ಪ್ರತಿ ತಿಂಗಳು ವರದಿ ಸಲ್ಲಿಸಬೇಕು. ಈ ಎಲ್ಲಾ ಅಧಿಕಾರಿಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಡಿಗೆ ಕೇಂದ್ರಗಳನ್ನು ತಪಾಸಣೆ ನಡೆಸಿ, ನ್ಯೂನತೆ ಕಂಡುಬಂದಲ್ಲಿ ವರದಿಯನ್ನು ಮೇಲಿನ ಅಧಿಕಾರಿಗಳ ಮೂಲಕ ಸರಕಾರಕ್ಕೆ ನೀಡಬೇಕು (ಕರ್ನಾಟಕ ಸರ್ಕಾರ, ೨೦೦೨).

ನಾವು ಅಧ್ಯಯನ ನಡೆಸಿದ ಎಲ್ಲಾ ಶಾಲೆಗಳಲ್ಲಿ ವಲಯ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು ಹೆಚ್ಚೆಂದರೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಬಿಟ್ಟರೆ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿಲ್ಲ. ವಿಶೇಷವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ಆಚರಣೆಗೆ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ನಾವು ಸಮೀಕ್ಷೆ ನಡೆಸಿದ ಶಾಲೆಗಳಿಗೆ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ ಬಿಸಿಯೂಟ ಪರಿಶೀಲನೆಗಾಗಿ ಶಾಲೆಗಳಿಗೆ ಭೇಟಿ ನೀಡಿಲ್ಲ. ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು, ಶಾಲಾ ಹಾಜರಾತಿಗೆ ಹೆಚ್ಚು ಆದ್ಯತೆ ನೀಡಬೇಕು. ಬಿಸಿಯೂಟದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ದಾಖಲಾತಿಯಲ್ಲಿ ಬರೆದಿದ್ದಾರೆ. ಶಾಲೆ ಹಾಜರಾತಿ ಹೆಚ್ಚಳ, ಬಿಸಿಯೂಟದ ಗುಣಮಟ್ಟವನ್ನು ಉತ್ತಮ ಪಡಿಸುವುದು ಹೇಗೆ, ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಇರುವ ತೊಡಕುಗಳು ಯಾವುವು ಮುಂತಾದ ತೊಂದರೆಗಳ ಬಗ್ಗೆ ಸೌಜನ್ಯದಿಂದ ಶಿಕ್ಷಕರ ಜೊತೆ ಚರ್ಚಿಸಿರುವುದು ಅತ್ಯಂತ ಕಡಿಮೆ. ಇನ್ನೂ ಇವರು ಮುಖ್ಯ ಅಡುಗೆಯವರನ್ನು ಮತ್ತು ಅಡಿಗೆ ಸಹಾಯಕರನ್ನು ತಪ್ಪಿಯೂ ಕೂಡ ಮಾತನಾಡಿಸುವುದಿಲ್ಲ. ಒಟ್ಟಾರೆ ಎಲ್ಲಾ ಅಧಿಕಾರಿಗಳ ಶಾಲಾ ಭೇಟಿಯು ಕೇವಲ ಅನೌಪಚಾರಿಕ ಮತ್ತು ಸಾಂಕೇತಿಕ ಎಂದು ಪೋಷಕರು, ಶಿಕ್ಷಕರು ಮತ್ತು ಅಡಿಗೆಯವರು ಹೇಳುತ್ತಾರೆ. ಸ್ವಲ್ಪಮಟ್ಟಿಗೆ ಎಸ್.ಡಿ.ಎಂ. ಸಿ. ಸಮಿತಿಗಳ ಕಾರ್ಯಚಟುವಟಿಕೆಯನ್ನು ಹೆಚ್ಚು ಹೆಚ್ಚು ಬಲಪಡಿಸುವ ಅಗತ್ಯವಿದೆ. ಈ ಕಾರ್ಯಕ್ರಮದ ಉಸ್ತುವಾರಿ ಮತ್ತು ಸಮನ್ವಯತೆಯಲ್ಲಿ ಸಮಿತಿಯ ಸದಸ್ಯರು ಸ್ವಲಪ್ ಮಟ್ಟಿಗಾದರೂ ಕಾಳಜಿ ಹಾಗೂ ಜವಾಬ್ದಾರಿತನವನ್ನು ಹೊಂದಿರಬೇಕು. ಇಲ್ಲವಾದರೆ ಆಹಾರ ಪದಾರ್ಥಗಳ ಕಳ್ಳತನ, ಕೊರತೆ ಇತ್ಯಾದಿಗಳು ಪ್ರಬಲವಾಗುತ್ತದೆ.

ಶಾಲೆಗಳಿಗೆ ಆಹಾರ ಪದಾರ್ಥಗಳ ವಿತರಣೆಯಲ್ಲಿ ಮೊದಲು ಇದ್ದಂತಹ ಪ್ರಮಾಣದಲ್ಲಿ ಸಮಸ್ಯೆಗಳು ಈಗ ಇಲ್ಲವಾಗಿವೆ. ಈ ಯೋಜನೆಯು ಪ್ರಾರಂಭವಾದ ಮೊದಲ ಆರು ತಿಂಗಳುಗಳು, ಶಾಲೆಗಳಿಗೆ ಬಿಸಿಯೂಟಕ್ಕಾಗಿ ನೀಡುತ್ತಿದ್ದ ಸಾದಿಲ್ವಾರು ಹಣದ ತೊಂದರೆ, ಆಯಾ ಶಾಲೆಗಳ ಮುಖ್ಯ ಶಿಕ್ಷಕರನ್ನು ಬಹಳ ಕಾಡಿದೆ.ಆ ಸಮಯದಲ್ಲಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಕೆಲವು ಶಿಕ್ಷಕರುಗಳು ಅವರ ವೈಯಕ್ತಿಕ ಹಣವನ್ನು ಸಾದಿಲ್ವಾರು ವೆಚ್ಚಗಳಿಗೆ ವ್ಯಯಿಸಿದ್ದಾರೆ. ೨೦೦೨-೦೩ರ ಶೈಕ್ಷಣಿಕ ಸಾಲಿನಲ್ಲಿ ಈ ಸಮಸ್ಯೆ ಬಹಳವಾಗಿ ಶಾಲಾ ಸಿಬ್ಬಂದಿಯನ್ನು ಕಾಡಿದೆ. ಆದರೆ ೨೦೦೩ರ ಆಗಸ್ಟ್‌ನಿಂದ ಸಾದಿಲ್ವಾರು ಹಣವು ಶಾಲೆಯ ಮುಖ್ಯ ಗುರುಗಳಿಗೆ ನೇರವಾಗಿ ಬರುತ್ತಿದೆ. ಅಲ್ಲದೆ ಅಡಿಗೆಯವರಿಗೆ ಸಂಬಂಳವನ್ನು ಶಾಲೆಯ ಮೇಲು ಉಸ್ತುವಾರಿ ಸಮಿತಿ ಮತ್ತು ಮುಖ್ಯ ಶಿಕ್ಷಕರ ಮೂಲಕ ನೀಡಲು ಪ್ರಾರಂಭಿಸಿದ ನಂತರ ಅನೇಕ ತೊಡಕುಗಳು ಕಡಿಮೆಯಾಗಿವೆ.

ಲಂಚ, ಕಳ್ಳತನ, ತೂಕ, ಶಾಲಾ ಬಿಸಿಯೂಟದ ಆಚರಣೆಗೆ ಸಂಬಂಧಿಸಿದಂತೆ ಲಂಚ ನೀಡುವಿಕೆ, ತೆಗೆದುಕೊಳ್ಳುವಿಕೆಯನ್ನು ನಮ್ಮ ಅಧ್ಯಯನದಲ್ಲಿ ಗುರುತಿಸಲು ಸಾಧ್ಯವಾಗಲಿಲ್ಲ. ಆಹಾರ ಪದಾರ್ಥಗಳು ಮತ್ತು ಅಡಿಗೆ ಸಾಮಗ್ರಿಗಳು ಕಳ್ಳತನವಾಗಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಆದರೆ ಶಿಕ್ಷಕರು, ಪೋಷಕರು ಮತ್ತು ಅಡಿಗೆಯವರ ಆರೋಪವೆಂದರೆ ಶಾಲೆಗಳಿಗೆ ಪೂರೈಸುವ ಆಹಾರ ಪದಾರ್ಥಗಳ ಗುಣಮಟ್ಟ ಉತ್ತಮವಾಗಿಲ್ಲ ಎಂಬುದು. ಇಂತಹ ಅಕ್ಕಿಯಿಂದ ತಯಾರಿಸಿದ ಆಹಾರವು ಸ್ವಲ್ಪ ಮಟ್ಟಿನ ವಾಸನೆಯಿಂದ ಕೂಡಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಅವರು ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಅವರು ಆಹಾರ ಪದಾರ್ಥಗಳ ಗುಣಮಟ್ಟ ತುಂಬಾ ಉತ್ತಮವೆನಿಸದಿದ್ದರೂ ನಮಗೆ ದೊರಕುವುದನ್ನು ಪೂರೈಸುತ್ತೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಶಾಲೆಗಳಿಗೆ ಪೂರೈಸುವ ಆಹಾರ ಪದಾರ್ಥಗಳ ತೂಕ ವಾಸ್ತವ ತೂಕಕ್ಕಿಂತ ಕಡಿಮೆ ಬರುವುದು. ಕನಿಷ್ಠ ಪಕ್ಷ ೧ ಚೀಲದಲ್ಲಿ ೫ ರಿಂದ ೧೦, ೧೫ ಕೆಜಿ ಗಳವರೆಗೆ ಆಹಾರ ಪದಾರ್ಥಗಳು ಕಡಿಮೆ ಬರುತ್ತದೆ. ಆಹಾರ ಪೂರೈಕೆಯ ಗುತ್ತಿಗೆದಾರರು ಶಾಲೆಯ ಆವರಣದಲ್ಲಿ ಆಹಾರ ಪದಾರ್ಥಗಳನ್ನು ತೂಕ ಮಾಡುವುದಿಲ್ಲ. ಮೊದಲೇ ತೂಕ ಮಾಡಿ ತಂದಿರುತ್ತಾರೆ. ತೂಕ ಕಡಿಮೆ ಬರುತ್ತದೆ ಎಂದು ಅವರಿಗೆ ತಿಳಿಸಿದ್ದರೆ, ತೂಕ ಮಾಡಿ ತಂದಿದ್ದೇವೆ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ವಾಪಸ್ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ಇದನ್ನು ಒಪ್ಪಿಕೊಳ್ಳದಿದ್ದರೆ ಶಿಕ್ಷಕರು ತರಗತಿ ಬಿಟ್ಟು ತಾಲ್ಕೂಕು ಕೇಂದ್ರಗಳಿಗೆ ಹೋಗಿ ಆಹಾರ ಪದಾರ್ಥಗಳನ್ನು ತರಬೇಕಾಗುತ್ತದೆ. ಅಲ್ಲದೆ ನಮ್ಮ ಶಾಲೆಗಳಿಗೆ ಪ್ರತ್ಯೇಕವಾಗಿ ಆಹಾರ ಪದಾರ್ಥಗಳನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಪ್ರತ್ಯೇಕ ವಾಹನ ಮಾಡಿಕೊಂಡು ತರಬೇಕು. ಇದು ಹಚ್ಚು ವೆಚ್ಚದಾಯಕ. ಅಲ್ಲದೆ ಇದಕ್ಕೆ ನಮ್ಮ ಕೈಯಿಂದಲೇ ಹೆಚ್ಚಿನ ಹಣ ಭರಿಸಬೇಕಾಗುತ್ತದೆ. ಇನ್ನೂ ಮುಂತಾದ ತೊಂದರೆಗಳಿಂದ ಪೂರೈಕೆ ಮಾಡುವಾಗ ಆಹಾರದ ತೂಕ ಕಡಿಮೆ ಇದ್ದರೂ ಅವುಗಳನ್ನು ಪಡೆಯದೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಬಹುತೇಕ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರ ಅಭಿಪ್ರಾಯ. ಮುಂದುವರಿದಂತೆ ಅನೇಕ ಸಂದರ್ಭಗಳಲ್ಲಿ ಉತ್ತಮ ಗುಣಮಟ್ಟದ ಆಹಾರಗಳನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡಿ ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಾರೆ. ಇದನ್ನು ಸಾಮಾನ್ಯವಾಗಿ ಮಧ್ಯವರ್ತಿಗಳು ಮಾಡುತ್ತಾರೆ ಎಂಬ ಅಭಿಪ್ರಾಯಗಳು ಇವೆ. ಇದಕ್ಕೆ ಆಹಾರ ಪೂರೈಕೆದಾರರ ಅಭಿಪ್ರಾಯವೆಂದರೆ, ನಮಗೆ ಭಾರತದ ಆಹಾರ ನಿಗಮದಿಂದ ಸರಬರಾಜು ಆಗುವ ಆಹಾರದ ಚೀಲಗಳಲ್ಲಿ ಕೆಲವು ಒಡೆದು ಆಹಾರ ಪದಾರ್ಥಗಳು ಸೋರಿಹೋಗುತ್ತದೆ. ಹೀಗಾಗಿ ನಮಗೆ ತೂಕದಲ್ಲಿ ಕಡಿಮೆ ಬರುತ್ತದೆ. ಇದನ್ನು ಬೇರೆ ಬಗೆಯಲ್ಲಿ ಭರಿಸುತ್ತೇವೆ ಎಂದು ಸರಳವಾಗಿ ಹೇಳುತ್ತಾರೆ. ಈ ಎಲ್ಲಾ ಆರೋಪಗಳು ಆಧಾರ ರಹಿತವಾದವುಗಳು ಎಂದು ಹೇಳುತ್ತಾರೆ. ಏನೇ ಇದ್ದರೂ ಶಾಲಾ ಬಿಸಿಯೂಟವು ಆಹಾರ ಧಾನ್ಯ ವಿತರಣೆಗೆ ಹೋಲಿಸಿದರೆ ಅನೇಕ ವಿಷಯಗಳಿಂದ ಉತ್ತಮವಾಗಿದೆ. ಅಲ್ಲದೆ ಆಹಾರ ಧಾನ್ಯ ವಿತರಣೆಯ ಅವ್ಯವಸ್ಥೆಗಳಾದ ಆಹಾರ ಪೂರೈಕೆಯಲ್ಲಿ ವಿಳಂಬ, ಆಹಾರ ಧಾನ್ಯ ಪಡೆಯಲು ಮಕ್ಕಳು ಶಾಲೆಯಿಂದ ಬೇರೆ ಸ್ಥಳಕ್ಕೆ ಹೋಗುವುದು; ಶಾಲೆಗೆ ಹಾಜರಾಗದ ಮಕ್ಕಳಿಗೂ ಆಹಾರ ಧಾನ್ಯ ವಿತರಣೆ, ಕಳ್ಳಸಂತೆ, ಲಂಚಗುಳಿತನ ಮತ್ತು ಅಳತೆಯಲ್ಲಿ ಮೋಸ ಇನ್ನೂ ಮುಂತಾದ ತೊಡಕುಗಳನ್ನು ಬಿಸಿಯೂಟ ವ್ಯವಸ್ಥೆಯಲ್ಲಿ ಕಂಡು ಬರುವುದಿಲ್ಲ.

೬.೧೧. ಉಪಸಂಹಾರ

ಪ್ರಸ್ತುತ ಅಧ್ಯಯನದಲ್ಲಿ ಶಾಲಾ ಬಿಸಿಯೂಟ ಕಾರ್ಯಕ್ರಮದಿಂದ ಉಂಟಾಗಿರುವ ನಾಲ್ಕು ಪ್ರಮುಖ ಅಂಶಗಳು ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಒಂದು ಬಿಸಿಯೂಟ ಯೋಜನೆಯು ಕೆಲವು ಲೋಪದೋಷಗಳನ್ನು ಹೊಂದಿದ್ದರೂ ಇದು ಜಾರಿಗೆ ಬಂದ ನಂತರ ಶಾಲಾ ದಾಖಲಾತಿ ಹಾಜರಾತಿ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿರುವುದು ಕಾಣುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳ ಶಾಲಾ ಹಾಜರಾತಿ ಮತ್ತು ದಾಖಲಾತಿಯಲ್ಲಿ ಮೊದಲಿಗಿಂತ ಪ್ರಗತಿಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಎರಡು, ಸಮಾಜದ ಅಂಚಿನಲ್ಲಿರುವ ಮತ್ತು ಅವಕಾಶ ವಂಚಿತ ಕುಟುಂಬಗಳ ಮಕ್ಕಳ ಶಾಲಾ ಭಾಗವಹಿಸುವಿಕೆಯನ್ನು ಬಿಸಿಯೂಟ ಕಾರ್ಯಕ್ರಮ ಅಭಿವೃದ್ಧಿ ಪಡಿಸಿದೆ. ಮೂರು, ಬಿಸಿಯೂಟ ಕಾರ್ಯಕ್ರಮದಲ್ಲಿ ಬೆರತುಕೊಂಡಿರುವ ಸಾಮಾಜೀಕರಣದ ಮೌಲ್ಯ ಎಲ್ಲಾ ದೃಷ್ಟಿಯಿಂದಲೂ ಹೆಚ್ಚು ಮಹತ್ವದ್ದಾಗಿರುವುದು. ಈ ಯೋಜನೆಯನ್ನು ಕ್ರಮಬದ್ಧವಾಗಿ ಜಾರಿಗೆ ತರುವ ಮೂಲಕ ತಮ್ಮ ಸಮಾಜದಲ್ಲಿ ನೆಲೆಸಿರುವ ಜಾತಿ, ಧರ್ಮ, ವರ್ಗ ಆಧಾರಿತ ಏಣಿಶ್ರೇಣಿ ಅಂತರವನ್ನು ಕಡಿಮೆಗೊಳಿಸಬಹುದಾಗಿದೆ. ಅಲ್ಲದೆ ಸಾಮಾಜಿಕ ಸಮಾನತೆಯನ್ನು ಬೆಳೆಸುವಲ್ಲಿ ಬಿಸಿಯೂಟ ಪ್ರಮುಖ ಪಾತ್ರವಹಿಸುವುದರಲ್ಲಿ ಅನುಮಾನಗಳಿಲ್ಲ. ನಾಲ್ಕು, ಶಾಲಾ ಬಿಸಿಯೂಟ ಕಾರ್ಯಕ್ರಮ ಸಾಕ್ಷರತೆ, ಶಿಕ್ಷಣ ಕ್ಷೇತ್ರದಲ್ಲಿ ಇರುವ ಲಿಂಗತಾರತಮ್ಯ ಅಂತರವನ್ನು ಮಾತ್ರ ಕಡಿಮೆಗೊಳಿಸದೆ, ಒಟ್ಟಾರೆ ಲಿಂಗಸಮಾನತೆಯನ್ನು ಸಾಧಿಸಿಕೊಳ್ಳುವಲ್ಲಿ ಇದು ಅತ್ಯಂತ ಮಹತ್ವದ ಪರಿಣಾಮವನ್ನು ಉಂಟುಮಾಡಿದೆ. ಒಟ್ಟಾರೆ ಶಾಲಾ ಬಿಸಿಯೂಟ ಕಾರ್ಯಕ್ರಮ ಸಾಮಾಜಿಕ ಅಭಿವೃದ್ಧಿಗೆ ಮೂಲ ಅಡಿಪಾಯವಾಗಿದೆ ಎಂಬುದು ನಮ್ಮ ಅಧ್ಯಯನದ ಅನುಭವಗಳಿಂದ ಸ್ಪಷ್ಟವಾಗುತ್ತದೆ. ಇದನ್ನು ಕೇವಲ ಒಂದು ಕಾರ್ಯಕ್ರಮ ಎಂದು ಪರಿಗಣಿಸಿದರೆ ಇದರ ಮಹತ್ವ ಸೀಮಿತ ಅರ್ಥಕ್ಕೆ ಕಟ್ಟುಬೀಳುತ್ತದೆ. ಆದರೂ ಪ್ರತಿಯೊಬ್ಬರ ಆಹಾರದ ಹಕ್ಕಿನ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಶಾಲಾ ಬಿಸಿಯೂಟ ಸರ್ಕಾರದ ಪ್ರಮುಖ ಭಾಗವಾಗುವುದರ ಜೊತೆಗೆ ಇದನ್ನು ಒಂದು ಸಾಮಾಜಿಕ ಚಳುವಳಿಯಾಗಿ ರೂಪಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಾಮಾಜಿಕ ಸಮಾನತೆಯ ಕಾಳಜಿಯಿರುವ ಪ್ರತಿಯೊಬ್ಬರಿಗೂ ಬಿಸಿಯೂಟ ಮಹತ್ವದ ಸಂಗತಿಯಾಗಬೇಕಾಗಿದೆ. ಶಾಲಾ ಬಿಸಿಯೂಟವನ್ನು ಈ ದಿಕ್ಕಿನೆಡೆಗೆ ನಡೆಸುವಲ್ಲಿ ಎಲ್ಲರೂ ಚಿಂತಿಸಬೇಕಾಗಿದೆ.

೬.೧೨. ಸಲಹೆಗಳು

ಬಿಸಿಯೂಟ ಕಾರ್ಯಕ್ರಮದ ಉದ್ದೇಶಗಳು ಸಂಪೂರ್ಣ ಪ್ರಮಾಣದಲ್ಲಿ ಸಾಧಿಸಬೇಕಾದರೆ, ತಕ್ಷಣ ಕೆಲವು ಗುಣಾತ್ಮಕ ಅಂಶಗಳ ಅಳವಡಿಕೆಗೆ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅಧ್ಯಯನವು ಕಂಡುಕೊಂಡ ಕೆಲವು ಸಲಹೆಗಳನ್ನು ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ.

ಬಿಸಿಯೂಟ ಯೋಜನೆಗೆ ಹಣಕಾಸಿನ ಸೌಲಭ್ಯವನ್ನು ಹೆಚ್ಚಿಸಬೇಕು. ಇದರಿಂದ ಸ್ಥಳೀಯವಾಗಿ ಶಾಲಾ ಮಟ್ಟದಲ್ಲಿ ಬರಬಹುದಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಅನುಕೂಲವಾಗುತ್ತದೆ. ಈ ಯೋಜನೆಯ ಆಚರಣೆಗೆ ಸ್ಥಳೀಯ ಮಟ್ಟದಲ್ಲಿ ಇರುವ ನಗದು ರೂಪ ಹಣದ ವ್ಯವಹಾರಗಳನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸಬೇಕು. ಇದು ನೇರವಾಗಿ ಬಿಸಿಯೂಟದ ಗುಣಮಟ್ಟದ ಬದಲಾವಣೆಗೆ ಪರಿಣಾಮಕಾರಿಯಾಗಬಹುದು.

ಬಿಸಿಯೂಟದ ಆಚರಣೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳ ಪ್ರಗತಿಗೆ ತಕ್ಷಣವೇ ಗಮನ ನೀಡಬೇಕಾಗಿದೆ. ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಉತ್ತಮ ಗುಣಮಟ್ಟದ ಪ್ರತ್ಯೇಕ ಆಡುಗೆ ಮನೆ, ಅಡುಗೆಗೆ ಅಗತ್ಯವಾಗಿ ಬೇಕಾಗುವ ಪಾತ್ರೆ ಮತ್ತು ಪದಾರ್ಥಗಳನ್ನೂ ಪೂರೈಸಬೇಕು. ಆಹಾರ ಪದಾರ್ಥಗಳು ಮತ್ತು ಅಡಿಗೆ ಸಾಮಗ್ರಿಗಳ ದಾಸ್ತಾನಿಗೆ ಉತ್ತಮ ಸೌಲಭ್ಯ, ಕುಡಿಯಲು ಮತ್ತು ಅಡಿಗೆಗೆ ನೀರಿನ ಸೌಲಭ್ಯ ಇನ್ನೂ ಮುಂತಾದ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಶಾಲೆಗಳಿಗೆ ಪೂರೈಸುವುದರಿಂದ ತರಗತಿಯಲ್ಲಿ ಬೋಧನಾ ಚಟುವಟಿಕೆಗಳಿಗೆ ಉಂಟಾಗುವ ತೊಂದರೆಗಳು ಕಡಿಮೆಯಾಗುವ ಜೊತೆಗೆ ಆರೋಗ್ಯಕರ ಪರಿಸರವನ್ನು ಶಾಲೆಯಲ್ಲಿ ಹುಟ್ಟು ಹಾಕಬಹುದಾಗಿದೆ.

ಬಿಸಿಯೂಟದ ಗುಣಮಟ್ಟದ ಹೆಚ್ಚಳಕ್ಕೆ, ಉತ್ತಮ ನಿರ್ವಹಣೆ ಮತ್ತು ಮೇಲು ಉಸ್ತುವಾರಿಯಲ್ಲಿ ವಿವಿಧ ಇಲಾಖೆಗಳ ನಡುವೆ ಹೆಚ್ಚು ಸಮನ್ವಯತೆ ಅಗತ್ಯವಿದೆ. ಆಹಾರ ಪದಾರ್ಥಗಳನ್ನು ಪೂರೈಸುವ ಗುತ್ತಿಗೆದಾರರು ಶಾಲೆಯಲ್ಲಿ ಮುಖ್ಯ ಶಿಕ್ಷಕರ ಮುಂದೆ ಆಹಾರ ಪದಾರ್ಥಗಳನ್ನು ತೂಕ ಮಾಡುವುದು ಕಡ್ಡಾಯವಾಗಬೇಕು. ಪ್ರತಿ ತಿಂಗಳು ಶಾಲೆಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಮಾದರಿಯನ್ನು ತೆಗೆದು ಸೀಲ್ ಮಾಡಿ ಇಡಬೇಕು. ಇದರಿಂದ ಆಹಾರ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳುವಿಕೆಗೆ ಅನುಕೂಲವಾಗುತ್ತದೆ. ಶಾಲೆಗೆ ರಜೆ ಇರುವ ದಿನಗಳಲ್ಲಿ ಮುಖ್ಯ ಅಡುಗೆಯವರಿಗೆ ಮತ್ತು ಅಡುಗೆ ಸಹಾಯಕರಿಗೆ ಸ್ವಚ್ಫತೆ ನಿರ್ವಾಣೆಯ ಕುರಿತು ತರಬೇತಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಥವಾ ಸಿ.ಆರ್.ಸಿ ಮಟ್ಟದಲ್ಲಿ ನೀಡಬೇಕು. ಇದು ಬಿಸಿಯೂಟ ತಯಾರಿಕೆ ಮತ್ತು ವಿತರಣೆಯಲ್ಲಿ ಗುಣಮಟ್ಟದ ಬದಲಾವಣೆಗೆ ಸಹಕಾರಿಯಾಗುತ್ತದೆ. ಜೊತೆಗೆ ಶಾಲೆಗಳಲ್ಲಿ ಮತ್ತು ಅಡಿಗೆ ಕೇಂದ್ರಗಳಿಗೆ ಆಗಿಂದ್ದಾಂಗ್ಗೆ ಉಂಟಾಗುವ ತೊಡಕುಗಳನ್ನು ಪರಿಹರಿಸಿಕೊಳ್ಳಬಹುದು. ಉತ್ತಮ ಮೇಲು ಉಸ್ತುವಾರಿಯಿಂದ ಲಂಚ, ಸಣ್ಣ ಪ್ರಮಾಣದ ಕಳವು, ಮಧ್ಯದಲ್ಲಿ ಉಂಟಾಗುವ ಅನೇಕ ತೊಡಕುಗಳು ಮತ್ತು ಸಮಸ್ಯೆಗಳನ್ನು ಕೊನೆಗಾಣಿಸಬಹುದಾಗಿದೆ.

ಬಿಸಿಯೂಟದ ಸಾಮಾಜೀಕರಣ ಮೌಲ್ಯವನ್ನು ಬೇರೆ ಬೇರೆ ಮಾರ್ಗದಿಂದ ಹೆಚ್ಚಿಸಬೇಕು. ಶಾಲೆಗಳಲ್ಲಿ ದಲಿತರಿಗೆ ಅದರಲ್ಲಿಯೂ ಅಸ್ಪೃಶ್ಯರಿಗೆ ಮಾಡುವ ಭೇದ ಭಾವವನ್ನು ತಡೆಗಟ್ಟಲು ನಿರ್ದಿಷ್ಟವಾದ ಕಾರ್ಯಸೂಚಿಯನ್ನು ಪ್ರಕಟಿಸಿ ಆಚರಣೆಗೆ ತರಬೇಕಾಗಿದೆ. ಇದರ ಅರ್ಥ ಈಗಿಲ್ಲವೆಂದಲ್ಲ. ಇದನ್ನು ವಿಶೇಷವಾಗಿ ಅಡಿಗೆಯವರು ಮತ್ತು ಅಡಿಗೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ ರೂಪಿಸಬೇಕಾಗಿದೆ. ಊಟವನ್ನು ವಿತರಿಸುವ ಸಮಯದಲ್ಲಿ ಕೆಲವು ನಿಯಮಿತ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ. ಆದ್ಯತೆ ನೀಡಿ ಮಕ್ಕಳಿಗೆ ಉತ್ತಮ ಅಭ್ಯಾಸಗಳನ್ನು ಕಲಿಸಬೇಕಾಗಿದೆ. ಉದಾಹರಣೆಗೆ ಊಟಕ್ಕೆ ಮೊದಲು, ನಂತರ ಕೈ ಮತ್ತು ತಟ್ಟೆಯನ್ನು ನೀರಿನಿಂದ ಸ್ವಚ್ಫಗೊಳಿಸುವುದು ಇತ್ಯಾದಿ. ಅಜೀರ್ಣ ಹೆಚ್ಚಾಗಿರುವ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಪೌಷ್ಟಿಕತೆಯ ಜೊತೆಗೆ ಊಟದ ಮೊದಲು ಮತ್ತು ನಂತರ ಮಕ್ಕಳು ನೀರು ಕುಡಿಯುವುದನ್ನು ಹೇಳಿಕೊಡಬೇಕು. ಇದು ಪರೋಕ್ಷವಾಗಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ದಲಿತರನ್ನು ಅಡಿಗೆಯವರಾಗಿ ನೇಮಿಸಿದಾಗ ಉಂಟಾಗುವ ತೊಡಕುಗಳನ್ನು ವಿಶೇಷ ಆಸಕ್ತಿ ಮತ್ತು ಗಮನ ಹರಿಸಿ ಪರಿಹರಿಸಬೇಕಾಗಿದೆ. ಅದರಲ್ಲಿಯೂ ಸಂಪ್ರದಾಯ ಪಾಲಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ದಲಿತರನ್ನು ಅಡಿಗೆಗೆ ನೇಮಕ ಮಾಡಿದಾಗ ಅಸ್ತಿತ್ವಕ್ಕೆ ಬರುವ ವಿರೋಧಗಳಿಗೆ ನಿರ್ದಿಷ್ಟ ಕ್ರಮಗಳನ್ನು ಜರುಗಿಸಲು ಸಾಧ್ಯವಾಗುವ ವಿಶೇಷ ಕಾಯ್ದೆಯನ್ನು ರೂಪಿಸಬೇಕು. ಏಕೆಂದರೆ ಸಾಂಪ್ರದಾಯಿಕ ಪೂರ್ವಾಚಾರಗಳು ಮುಂದುವರಿಯದಂತೆ ತಡೆಯೊಡ್ಡಿ, ಸಾಮಾಜಿಕ ಬದಲಾವಣೆಗಳನ್ನು ಪೋಷಿಸುವ ದೃಷ್ಟಿಯಿಂದ ಇದು ಅಗತ್ಯವಾಗಿದೆ.

ಕೊನೆಯದಾಗಿ ಈ ಕಾರ್ಯಕ್ರಮದ ಜಾರಿಯಿಂದ ಆಗಿರುವ ಮತ್ತು ಆಗಬಹುದಾದ ಅನುಕೂಲಗಳನ್ನು, ಹಿಂದುಳಿದಿರುವ ಪ್ರದೇಶಗಳಲ್ಲಿ ಅದರಲ್ಲೂ ಶಾಲಾ ಹಾಜರಾತಿ ಮತ್ತು ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಭಾಗಗಳಲ್ಲಿ (ಇತರ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ) ಸ್ಥಳೀಯ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಶಾಲಾ ಬಿಸಿಯೂಟದ ಸಾರ್ವತ್ರೀಕರಣವು ಕೇವಲ ಶಾಲೆಯ ಹಾಜರಾತಿ ಮತ್ತು ಶಿಕ್ಷಣದ ದೃಷ್ಟಿಯಿಂದ ಮಹತ್ವದಲ್ಲದೇ, ಪ್ರತಿಯೊಬ್ಬರ ಆಹಾರದ ಹಕ್ಕಿನ ದೃಷ್ಟಿಯಿಂದ ಬಹಳ ಮಹತ್ವದಾಗಿದೆ.